Friday, January 16, 2009

ಗಂಡಸರು ಅವಲಂಬಿತರೇ?

ಗಂಡಸರು ಅವಲಂಬಿತರೇ?


ಈ ಪ್ರಶ್ನೆಯನ್ನು ಮಹಿಳೆಯೊಬ್ಬಳಲ್ಲಿ ಕೇಳಿ ನೋಡಿ. ಆಕೆ ತಕ್ಷಣ ಹೌದೆಂದು ಹೇಳುತ್ತಾಳೆ! ಅದಕ್ಕವಳು ಸಮರ್ಥನೆಯನ್ನೂ ನೀಡುತ್ತಾಳೆ; ಗಂಡಸು ಹೆಣ್ಣೊಬ್ಬಳಿಗೆ ಸಂಪೂರ್ಣ ಅವಲಂಬಿತ, ಯಾಕೆಂದರೆ ಆತ ಮಾನಸಿಕವಾಗಿ ದುರ್ಬಲ.

ಇದೇ ಪ್ರಶ್ನೆಯನ್ನು ಗಂಡಸಿನ ಬಳಿ ಕೇಳಿ ನೋಡಿ,”ಇಲ್ಲ ಎಂದಿಂದಿಗೂ ಇಲ್ಲ; ನಾನು ಯಾರಿಗೂ ಅದರಲ್ಲಿಯೂ ಮಹಿಳೆಯೊಬ್ಬಳಿಗೆ ಅವಲಂಬಿತನಾಗುವ ಪ್ರಶ್ನೆಯೇ ಇಲ್ಲ!” ಎಂದು ಆತ ಖಡಾಖಂಡಿತವಾಗಿ ಹೇಳಿಬಿಡುತ್ತಾನೆ.
ಯಾವುದು ಸರಿ?
ಮಹಿಳೆಯೊಬ್ಬಳು ತನ್ನ ಆಪ್ತ ವಲಯದ ಗಂಡಸಿನ ಬಳಿ ಇದೇ ಪ್ರಶ್ನೆಯನ್ನು ಕೇಳಿದರೆ ಆತ ಖಂಡಿತವಾಗಿಯೂ ಹೇಳುತ್ತಾನೆ;’ ಹೌದು ಗಂಡಸು ಹೆಣ್ಣೊಬ್ಬಳಿಗೆ ಸಂಪೂರ್ಣವಾಗಿ ಅವಲಂಬಿತ. ಹಾಗೆ ಅವನನ್ನು ಅವಲಂಬಿತನನ್ನಾಗಿ ಮಾಡುವವಳು ಆಕೆಯೇ. ಯಾಕೆಂದರೆ ಆಕೆಗೆ ಆತನ ರಕ್ಷಣೆ ಬೇಕಾಗಿದೆ.’ ಅಂದರೆ ಸ್ತ್ರೀ ಮತ್ತು ಪುರುಷ ಇಬ್ಬರೂ ಪರಸ್ಪರ ಅವಲಂಬಿತರೇ. ಆದರೆ ಯಾರು ಹೆಚ್ಚು ಅವಲಂಬಿತರು?
ಇದಕ್ಕೆ ಉತ್ತರವನ್ನು ನಿಸರ್ಗದ ವೈಚಿತ್ರ್ಯದಲ್ಲಿ ಹುಡುಕಬೇಕಾಗಿದೆ.
ಬುದ್ಧಿಸಂನಲ್ಲಿ ಬರುವ ಇನ್ ಮತ್ತು ಯಾಂಗ್ ಥಿಯರಿಯನ್ನೇ ನೋಡೋಣ. ಇಲ್ಲಿ ಇನ್ ಎಂದರೆ ಬೆಳಕು. ಯಾಂಗ್ ಎಂದರೆ ಕತ್ತಲು. ಇದು ಸ್ತ್ರಿ ಮತ್ತು ಪುರುಷ ಶಕ್ತಿಗಳ ಸಂಕೇತ. ಕತ್ತಲೆಯ ಅಸ್ತಿತ್ವ ಇದ್ದಾಗ ಮಾತ್ರ ಬೆಳಕಿಗೆ ಮಹತ್ವ ಬರುತ್ತದೆ. ಕತ್ತಲೆ ಇಲ್ಲದೆ ಬೆಳಕು ಇಲ್ಲ. ಬೆಳಕು ಇಲ್ಲದೆ ಕತ್ತಲೆ ಇಲ್ಲ.

ವೈಜ್ನಾನಿಕವಾಗಿ ಅನ್ವೇಷಿಸುತ್ತ ಹೋದರೂ, ಸೃಷ್ಟಿಯ ಮೂಲ ಅಗತ್ಯ, ದ್ರವ್ಯ[ಮ್ಯಾಟರ್] ಮತ್ತು ಚೇತನ[ಸ್ಪಿರಿಟ್]; ಅಂದರೆ ಸ್ತ್ರೀ ಮತ್ತು ಪುರುಷ ಶಕ್ತಿಗಳು. ಹೆಣ್ಣು ಮತ್ತು ಗಂಡು, ದ್ರವ್ಯ ಮತ್ತು ಚೇತನದ ಅತ್ಯಂತ ಕನಿಷ್ಠತಮ ಪ್ರಾತಿನಿಧಿಕ ರೂಪಗಳು. ಅಡಂ ಮತ್ತು ಈವ್ ಎಂದರೂ ಸರಿಯೇ. ಒಟ್ಟಿನಲ್ಲಿ ಭೂಮಿ ಮತ್ತು ಆಕಾಶದ ಸಂಗಮ. ಎಲ್ಲಾ ಮಾನವ ನಾಗರೀಕತೆಗಳಿಗೂ ಸಮಾನವಾಗಿರುವ ಆರ್ಕಿಟೈಪಲ್ ಪ್ರತೀಕ. ಮೂಲ ವಿರೋಧಗಳ ಸೃಜನಾತ್ಮಕ ಸಮನ್ವಯ.

ಆದರೆ ಭೂಮಿ ಮತ್ತು ಆಕಾಶ ಸಂಗಮಿಸುತ್ತದೆಯೇ? ಇಲ್ಲ. ಸಂಗಮದ ಭ್ರಮೆ ಇರುತ್ತದೆ. ಭೂಮಿ ಎಂಬ ವಾಸ್ತವ ಇಲ್ಲದಿದ್ದರೆ ಆಕಾಶವೆಂಬ ಅಮೂರ್ತ ಕಲ್ಪನೆಗೆ ಅಸ್ತಿತ್ವವೇ ಇಲ್ಲ. ಈ ಎರಡು ಅಪೂರ್ಣಗಳು ಪೂರ್ಣತೆಯೆಡೆಗೆ ಸಾಗುವ ಪ್ರಯತ್ನವೇ ಗಂಡು- ಹೆಣ್ಣುಗಳ ಸಮಾಗಮ.

ಮನುಷ್ಯ ಮೂಲತಃ ಒಂಟಿ. ಅದು ಅವನ ಸ್ಥಾಯಿ ಭಾವ. ಅವನ ಮನದಾಳದಲ್ಲಿ ಸದಾ ಖಾಲಿತನ, ಶೂನ್ಯ ಇದ್ದೇ ಇರುತ್ತದೆ. ಸ್ತೀ-ಪುರುಷರಿಬ್ಬರಲ್ಲೂ ಈ ಭಾವ ಇರುತ್ತದೆ. ಸ್ತೀಗೆ ಹೋಲಿಸಿದರೆ ಪುರುಷರಲ್ಲಿ ಈ ಭಾವ ಇನ್ನೂ ತೀವ್ರವಾಗಿರುತ್ತದೆ. ಅದಕ್ಕೆ ಕಾರಣಗಳೂ ಇವೆ. ಇಲ್ಲಿ ಅದು ಮುಖ್ಯವಲ್ಲ. ಆದರೂ ಸೃಷ್ಟಿಕ್ರೀಯೆಯಲ್ಲಿ ನೇರವಾಗಿ ಪಾಲ್ಗೊಳ್ಳುವ ಸ್ತ್ರೀ ಈ ಖಾಲಿತನವನ್ನು ಸೃಜನಾತ್ಮಕ ಕ್ರಿಯೆಯಲ್ಲಿ ತುಂಬಿಕೊಳ್ಳುತ್ತಾಳೆ ಎಂದಷ್ಟೇ ತಿಳಿದುಕೊಂಡರೆ ಸಾಕು.

ಹಿಂದೆಯೇ ಹೇಳಿದಂತೆ ಒಳಗಿನ ಒಂಟಿತನವನ್ನು ಮೀರುವ, ಖಾಲಿತನವನ್ನು ತುಂಬಿಸಿಕೊಳ್ಳುವ ಪ್ರಯತ್ನವೇ ಅವಲಂಬನೆ.

ಅವಲಂಬನೆ ವ್ಯಕ್ತಿಗಳ ನಡುವೆ ಸಂಬಂಧಗಳನ್ನು ಕುದುರಿಸುತ್ತದೆ. ರೇಡಿಯೋ. ಪುಸ್ತಕ, ಟೀವಿ, ಕಂಪ್ಯೂಟರ್, ಮಾತು-ಹರಟೆ, ಕಲೆ, ಸಂಸ್ಕ್ರತಿ, ಚರ್ಚೆ ಮುಂತಾದ ಆಯಾಮಗಳಲ್ಲಿ ಅಸ್ತಿತ್ವ ಪಡೆಯುತ್ತದೆ.
ವಿಸ್ತಾರವಾದ ಜಗತ್ತಿನಲ್ಲಿ ವ್ಯಕ್ತಿಯೊಬ್ಬನಿಗೆ ತನ್ನ ಐಡೆಂಟಿಟಿಯನ್ನು ಗುರುತಿಸಿಕೊಳ್ಳಲು ಅವಲಂಬನೆ ಸಹಾಯಕವಾಗುತ್ತದೆ. ಇಲ್ಲಿಗೆ ಅವಲಂಬನೆಯ ಉದ್ದೇಶ ಮುಗಿಯುತು. ಅಂದರೆ ಒಂಟಿತನವನ್ನು ಮೀರುವ ಪ್ರಯತ್ನ, ಅದರಿಂದ ಸಿಗುವ ರಕ್ಷಣೆಯ ಭಾವ[ಸೆಕ್ಯೂರ್ಡ್ ಫೀಲಿಂಗ್] ವ್ಯಕ್ತಿಗೆ ಉಂಟಾದರೆ ಸಾಕು.

ಇದೇನೋ ಸರಿ. ಆದರೆ ಇದರಿಂದ ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಯಾಕೆಂದರೆ ಇರುವ ಸ್ಥಿತಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ರೂಪಿಸಿಕೊಂಡಿರುವ ಅವಲಂಬನೆಗಳೇ ನಮ್ಮನ್ನು ಡಿಕ್ಟೇಟ್ ಮಾಡಲಾರಂಬಿಸುತ್ತವೆ.

ಗಂಡು-ಹೆಣ್ಣು ನಡುವಿನ ಸಂಬಂಧವನ್ನೇ ನೋಡಿ, ನೀವು ಗಮನಿಸಿದ್ದೀರೋ ಇಲ್ಲವೋ, ವೃದ್ಧ ದಂಪತಿಗಳಲ್ಲಿ ಯಾರದರೊಬ್ಬರು ಮೃತಪಟ್ಟರೆ ಉಳಿದವರೊಬ್ಬರು ಬಹು ಬೇಗನೆ ಅವರ ಹಾದಿ ಹಿಡಿಯುತ್ತಾರೆ. ಶಂಭಾಜೋಷಿ ದಂಪತಿಗಳು, ಕುರ್ತಕೋಟಿ ದಂಪತಿಗಳು... ಹೀಗೆ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ. ಕನ್ನಡದ ಕವಿಯೊಬ್ಬರು ತನ್ನ ಕಂಪ್ಯಾನಿಯನ್ ಬಿಟ್ಟುಹೋದಾಗ ಸಂಪೂರ್ಣವಾಗಿ ಹತಾಶರಾಗಿಬಿಟ್ಟರು. ಈಗ ಅವರ ಸೃಜನಶೀಲ ಚಟುವಟಿಕೆ ಬಹುಮಟ್ಟಿಗೆ ನಿಂತೇಹೋಗಿದೆ.
ಹೀಗೆ ಸಂಗಾತಿಯ ಅಗಲಿಕೆಯಿಂದ ಸಾಯುವವರಲ್ಲಿ ಅಥವಾ ಡಿಸ್ಟರ್ಬ್ ಆಗುವವರಲ್ಲಿ ಪುರುಷರೇ ಹೆಚ್ಚು. ಈಗ ನೋಡಿ, ಪ್ರೇಯಸಿಯನ್ನು ಕಳೆದುಕೊಂಡು ದೇವದಾಸ್ ಆಗುವವರು ಹುಡುಗರೇ ಹೊರತು ಹುಡುಗಿಯರಲ್ಲ.! ಹುಡುಗಿಯರು ಯಾವುದೋ ಕಾರಣದಿಂದಾಗಿ ಪ್ರೀತಿಸಿದವನನ್ನು ಮದುವೆಯಾಗಲು ಸಾಧ್ಯವಾಗದಿದ್ದರೆ, ಮದುವೆಯಾದವನನ್ನು ಒಪ್ಪಿಕೊಂಡುಬಿಡುತ್ತಾರೆ. ಆದರೆ ಹುಡುಗರು ಮಾತ್ರ ಅಷ್ಟು ಬೇಗ ಹಳೆಯದನ್ನು ಮರೆಯುವುದಿಲ್ಲ. ಗಂಡಸರು ಬಲು ಬೇಗನೆ ವ್ಯಸನಗಳಿಗೆ, ದುಶ್ಚಟಗಳಿಗೆ ಬಲಿಯಾಗುತ್ತಾರೆ. ಇದೂ ಅವಲಂಬನೆಯ ಒಂದು ಮುಖ.

ಅಂದರೆ ಸ್ತೀಗಿರುವ ಧಾರಣಸಾಮರ್ಥ್ಯ ಪುರುಷನಲ್ಲಿ ಇಲ್ಲ. ಒಂದು ಕಠಿಣ ಪ್ರಸಂಗವನ್ನು ಎದುರಿಸುವ ಪರಿಸ್ಥಿತಿ ಸ್ತ್ರೀಪುರುಷರಿಬ್ಬರಿಗೂ ಏಕಕಾಲದಲ್ಲಿ ಒದಗಿದಾಗ ಪುರುಷ ಬಹುಬೇಗ ಕುಸಿದುಬೀಳುತ್ತಾನೆ. ಸ್ತ್ರೀ ದೃಢವಾಗಿ ನಿಂತು ಅದನ್ನು ಎದುರಿಸುತ್ತಾಳೆ, ಎನ್ನುತ್ತಾರೆ ಓಶೋ. ಅವಳಲ್ಲಿ ಪ್ರತಿರೋಧ ಶಕ್ತಿ ವಿಪುಲವಾಗಿರುತ್ತದೆ. ವಿಜ್ನಾನ ಕೂಡ ಇದನ್ನು ದೃಢೀಕರಿಸಿದೆ.

ಗಂಡು ಮಗುವಿನ ಹುಟ್ಟಿಗೆ ಕಾರಣವಾಗುವ ವೈ ಕ್ರೋಮೋಸೋಮುಗಳು, ಹೆಣ್ಣು ಮಗುವಿನ ಜನನಕ್ಕೆ ಕಾರಣವಾಗುವ ಎಕ್ಸ್ ಕ್ರೋಮೋಸೋಮುಗಳಿಗಿಂತ ಬಲಹೀನವಾಗಿರುತ್ತವೆ. ವೈ ಕ್ರೋಮೋಸೋಮುಗಳು ಗಂಡಸರ ವೀರ್ಯಾಣುವಿನಲ್ಲೇ ಇರುತ್ತವೆ ಎಂಬುದು ಇನ್ನೊಂದು ಐರನಿ. ಆ ಕಾರಣದಿಂದಲೇ ನಿಸರ್ಗದ ಜೊತೆ ಹೆಣ್ಣು ಸರಿಜೋಡಿಯಾಗಿ ಹೋರಾಡಬಲ್ಲಳು. ಬದುಕನ್ನು ಕಟ್ಟಿಕೊಳ್ಳಬಲ್ಲಳು. ಪ್ರಕೃತಿಯ ಎದುರು ಪುರುಷ ನಿಸ್ಸಾಯಕ. ಇದೇ ಅವನ ಅವಲಂಬನೆಗೆ ಕಾರಣವೇ? ಹೇಳಲಾಗದು.

ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದ ಅಥವಾ ವಿಶೇಷ ಸಾಧನೆ ಮಾಡಿದ ಪುರುಷರ ಬಗ್ಗೆ ಹೇಳುವಾಗ ಒಂದು ಮಾತನ್ನು ಬಳಸುತ್ತಾರೆ-’ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆಯಿದ್ದಾಳೆ’. ಗಾದೆ ಮಾತಿನಂತೆ ಚಾಲ್ತಿಯಲ್ಲಿರುವ ಈ ಮಾತುಗಳನ್ನು ಗಮನಿಸಿ. ಇಲ್ಲಿರುವವಳು ತಂಗಿ, ಗೆಳತಿ, ಪ್ರೇಯಸಿ, ಟೀಚರ್, ಆಂಟಿ.. ಯಾರೇ ಆಗಿರಬಹುದು ಆದರೆ ಪತ್ನಿಯಂತೂ ಆಗಿರಲಾರಳು.
ಯಾಕೆಂದರೆ ಪತ್ನಿ ಎಂಬವಳು ವಾಸ್ತವ. ವಾಸ್ತವ ಯಾವಾಗಲೂ ಸಂಕೀರ್ಣವಾಗಿರುತ್ತದೆ.
ನಮ್ಮ ಬುದ್ಧಿಜೀವಿಗಳ ಖಾಸಗಿ ಬದುಕನ್ನು ಒಳಹೊಕ್ಕು ನೋಡಿದರೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ಅವರಿಗೆ ಸಂತಾನಾಭಿವೃದ್ಧಿಗೆ ಒಬ್ಬಳು ಹೆಂಡತಿ. ಬೌದ್ಧಿಕ ಸಾಂಗತ್ಯಕ್ಕೆ ಇನ್ನೊಬ್ಬಳು. ಸುಪ್ರಸಿದ್ದ ಬರಹಗಾರರಾದ ಜೀನ್ ಪಾಲ್ ಸಾರ್ತ್ರೆ ಮತ್ತು ಸೀಮನ್ ಡಿ ಬುವಾ ಇಂತಹ ಬೌದ್ಧಿಕ ಸಾಂಗತ್ಯಕ್ಕೆ ಉತ್ತಮ ಉದಾಹರಣೆ. ಅಷ್ಟು ದೂರ ಯಾಕೆ? ನಮ್ಮ ಕನ್ನಡದ ಹಲವು ಲೇಖಕರು, ಕವಿಗಳು ಇಬ್ಬರು ಹೆಂಡಿರ ಮುದ್ದಿನ ಗಂಡಂದಿರಾಗಿದ್ದಾರೆ.

ನಮ್ಮ ಕನ್ನಡದ ಕವನವೊಂದು ಹೀಗೆ ಹೇಳುತ್ತದೆ;
ಎದೆಯ ಮೇಲಿಹಳು ತೊಡೆಗೆ ಬಾರಹಳು, ತೊಡೆಯ ಮೇಲಿಹಳು ಎದೆಗೆ ಏರಳು’
ಇದು ಗಂಡಸಿನ ಸಮಸ್ಯೆಯ ಮೂಲ. ಎದೆ ಮತ್ತು ತೊಡೆಯ ಮೇಲೆ ಏಕಕಾಲದಲ್ಲಿ ಪ್ರತಿಷ್ಠಾಪನೆಗೊಳ್ಳುವ ಸಂಗಾತಿ ದೊರಕದಿದ್ದರೆ? ಆಗ ಅವನಿಗೆ ಅಲ್ಲೊಬ್ಬಳು ಬೇಕು; ಇಲ್ಲೊಬ್ಬಳು ಬೇಕು.
ನಮ್ಮ ಮಹಾರಾಜರುಗಳ ಅಂತಃಪುರದಲ್ಲಿ ಸಾವಿರಾರು ರಾಣಿಯರಿರುತ್ತಿದ್ದರು. ಆದರೂ ರಾಜನ ಹತ್ತಿರಕ್ಕೆ ಬರುತ್ತಿದ್ದವರು ಇಬ್ಬರೇ. ಒಬ್ಬಳು ಪಟ್ಟದರಸಿ, ಇನ್ನೊಬ್ಬಳು ಪ್ರೇಮದರಸಿ; ಕೃಷ್ಣನಿಗೆ ರಾಧಾ,ರುಕ್ಮಿಣಿಯರಿದ್ದಂತೆ. ಹೆಣ್ಣಿಗೆ ಇಂತಹ ಕಲ್ಪನೆಗಳಿಲ್ಲ. ಅವಳಿಗೆ ಅವಳು ಮಾತ್ರ ಅವಲಂಬಿತಳು.

ಹೆಣ್ಣಿನಲ್ಲಿರುವ ಶಕ್ತಿ ಎರಡು ಬಗೆಯದು. ಒಂದು, ಆಕೆಯಲ್ಲಿರುವ ಧೀಶಕ್ತಿ; ಎಲ್ಲವನ್ನೂ ಎದುರಿಸುವ , ಕಟ್ಟುವ, ನಿಸರ್ಗದ ಜೊತೆ ಸಮಬಲವಾಗಿ ಹೋರಾಡುವ ಅಂತಃಶಕ್ತಿ. ಇದನ್ನು ಪುರುಷ ಬೆರಗಿನಿಂದ ನೋಡುತ್ತಾನೆ. ಅದಕ್ಕೆ ಅವನು ತಲೆ ಬಾಗುತ್ತಾನೆ. ಆದರೆ ಪ್ರಕಟಪಡಿಸುವುದಿಲ್ಲ. ಇನ್ನೊಂದು ಆಕೆಯಲ್ಲಿರುವ ಪಾಲನೆಯ ಗುಣ. ಆಕೆ ಎಲ್ಲವನ್ನೂ ಪೊರೆಯುತ್ತಾಳೆ. ಎಲ್ಲವನ್ನೂ ರಕ್ಷಿಸುತ್ತಾಳೆ. ಈ ಎರಡೂ ಗುಣಗಳು ಒಬ್ಬ ತಾಯಿಯಲ್ಲಿರುತ್ತದೆ. ಎಲ್ಲಾ ಸಸ್ತನಿಗಳಲ್ಲಿರುತ್ತದೆ.

ಹೋರಾಟ ಮತ್ತು ಪಾಲನೆಯ ಗುಣಗಳು ಪ್ರಕೃತಿಯ ಗುಣಗಳೇ. ಹೆಣ್ಣು ಪ್ರಕೃತಿಯನ್ನು ಪ್ರತಿನಿಧಿಸುತ್ತಾಳೆ. ಭೂಮಿಯನ್ನು ಹೆಣ್ಣಿಗೆ ಹೋಲಿಸುವುದು ಇದೇ ಕಾರಣಕ್ಕೇ ಇರಬಹುದು. ಈ ಎಲ್ಲ ಗುಣಗಳೇ ಪುರುಷನನ್ನು ಸ್ತ್ರೀಯ ಅವಲಂಬಿಯನ್ನಾಗಿ ಮಾಡಿವೆ. ಮನಶಾಸ್ತ್ರ ಕೂಡ ಇದನ್ನು ಒಪ್ಪಿಕೊಂಡಿದೆ.

ಸಿಗ್ಮಂಡ್ ಪ್ರಾಯ್ಡ್ ನ ಪ್ರಕಾರ ಎಲ್ಲಾ ಗಂಡಂದಿರೂ ಹೆಂಡತಿಯಲ್ಲಿ ತಮ್ಮ ತಾಯಿಯನ್ನೇ ಹುಡುಕುತ್ತಾರೆ. ಗಂಡು ಮಗುವೊಂದು ತನ್ನ ತಾಯಿಗೆ ಹೆಚ್ಚಾಗಿ ಅಂಟಿಕೊಂಡಿದ್ದರೆ, ಹೆಣ್ಣು ಮಗು ತಂದೆಗೆ ಅಂಟಿಕೊಂಡಿರುತ್ತದೆ. ಇದು ವಿರುದ್ಧ ದ್ರುವದ ಆಕರ್ಷಣೆ.
ಗಂಡು ಬಯಸುವ ತಾಯ್ತನವನ್ನು, ಸಾಂತ್ವನವನ್ನು ನೀಡುವ ಹೆಣ್ಣು ಆತನ ಪಾಲಿಗೆ ಸದಾ ನಿಗೂಢ, ಜತೆಗೆ ಸ್ಪೂರ್ತಿಯ ಖನಿ. ಆಧುನಿಕ ಪರಿಭಾಷೆಯಲ್ಲಿ ಕಂಪ್ಯಾನಿಯನ್. ಇಂತಹ ಹೆಣ್ಣಿನ ಮುಂದೆ ಗಂಡು ಸಂಪೂರ್ಣ ಶರಣಾಗುತ್ತಾನೆ. ಶರಣಾಗತಿಯಲ್ಲಿ ಅಹಂ ನೆಲಕಚ್ಚುತ್ತದೆ. ಆದರೂ ಗಂಡಸು ಒಂದೇ ಹೆಣ್ಣಿಗೆ ನಿಷ್ಠನಾಗಿರುವುದಿಲ್ಲ. ಯಾಕೆಂದರೆ ಭೂಮಿ ಸ್ಥಾವರವಾಗಿದ್ದು ಎಲ್ಲವನ್ನೂ ಸ್ವೀಕರಿಸುತ್ತಾ ಪೊರೆಯುತ್ತಾಳೆ. ಪುರುಷ ಬೀಜಪ್ರಸಾರ ಮಾಡುತ್ತಾ ಅಲೆಮಾರಿಯಾಗುತ್ತಾನೆ. ಇದುವೇ ನಿಸರ್ಗದ ವೈಚಿತ್ರ್ಯ!
[ ಓ ಮನಸೇ ನಿಯತಕಾಲಿಕದಲ್ಲಿ ಪ್ರಕಟವಾದ ಬರಹ.]

10 comments:

hEmAsHrEe said...

ವಿಶ್ಲೇಷಣೆ ಚೆನ್ನಾಗಿದೆ. !!!

Pramod said...

ಹೆಣ್ಣು ಅನ್ನೋದು ಗ೦ಡು ಎ೦ಬ ಅಲೆಮಾರಿತನವನ್ನು ಹಿಡಿದಿಟ್ಟಿರೋ 'ಗುರುತ್ವಾಕರ್ಷಣ' ಬಲ.

ಸಂದೀಪ್ ಕಾಮತ್ said...

ಎಲ್ಲಾ ಗಂಡಸರಿಗೂ ಗೊತ್ತು ತಾವು ಎಷ್ಟು ಹೆಂಗಸರ ಮೇಲೆ ಅವಲಂಬಿತರು ಎಂದು.ಅದ್ಯಾಕೆ ನಾಚ್ಕೋತಾರೋ ಹೇಳಿಕೊಳ್ಳೋಕೆ!!
ಎಲ್ಲಾ ಈಗೋ ಪ್ರಾಬ್ಲೆಮ್ಮು!

Chamaraj Savadi said...

ತುಂಬ ಗಹನವಾದ ವಿಷಯವನ್ನು ಬರವಣಿಗೆ ಚೌಕಟ್ಟಿಗೆ ಹಿಡಿದಿಡಲು ಪ್ರಯತ್ನಿಸಿದ್ದೀರಿ ಸುರಗಿಯವರೇ.

ಆದರೆ, ಇದು ಚೌಕಟ್ಟು ದಾಟಿ ಬೆಳೆಯುವಂಥ ವಿಷಯ. ಗಂಡು ಸುಲಭವಾಗಿ ಅರ್ಥವಾಗುತ್ತಾನೆ. ಹೆಣ್ಣು ಸಂಕೀರ್ಣ. ಗಂಡಿನ ನಡೆ ಊಹಿಸಬಹುದು. ಹೆಣ್ಣಿನದು ಕಷ್ಟ. ಆದರೆ, ಗಂಡಿನ ವಂಚನೆ ಅರಿತ ಮೇಲೂ ಹೆಣ್ಣು ಅವನಿಗೆ ಏಕೆ ಅಂಟಿಕೊಂಡಿರುತ್ತಾಳೆ ಎಂಬುದು ಮಾತ್ರ ನಿಗೂಢ. ಆರ್ಥಿಕ ಭದ್ರತೆಯೇ ಇದಕ್ಕೆ ಕಾರಣ ಎಂದರೆ ಒಪ್ಪುವುದು ಕಷ್ಟ.

ಗಂಡಿಗಿಂತ ಹೆಣ್ಣಿಗೆ ಮನ್ನಣೆ ಹೆಚ್ಚು. ಕೊಂಚ ಪ್ರತಿಭೆ ಇದ್ದರೂ ಅದು ಬಲುಬೇಗ ಬೆಳಕಿಗೆ ಬರುತ್ತದೆ. ಗುರುತಿಸಲ್ಪಡುತ್ತದೆ. ಮನ್ನಣೆ ಪಡೆಯುತ್ತದೆ. ಈ ವಿಷಯದಲ್ಲಿ ಗಂಡು ದುರಾದೃಷ್ಟವಂತ.

ಹೆಣ್ಣು ತೀವ್ರತರ ಭಾವನೆಯನ್ನು ಹೊಂದಿರುತ್ತಾಳೆ. ಆದರೆ, ಅಂಥ ಭಾವನೆಯನ್ನು ಬಹಿರಂಗವಾಗಿ ವ್ಯಕ್ತಪಡಿಸುವುದು ಮಾತ್ರ ಗಂಡೇ. ಮನಸ್ಸಿನ ಮಾತನ್ನು ಹೆಣ್ಣು ಬೇಗ ಹೇಳುವುದಿಲ್ಲ. ಗಂಡು ಮನಸ್ಸಿನಲ್ಲಿ ಮಾತು ಉಳಿಸಿಕೊಳ್ಳುವುದಿಲ್ಲ. ವಂಚನೆ ವಿಷಯಕ್ಕೆ ಬಂದರೆ ಮಾತ್ರ ಇಬ್ಬರೂ ಬಹುತೇಕ ಸಮಸಮ.

ಹೇಳುತ್ತಾ ಹೋದರೆ ಇದು ಬೆಳೆಯುತ್ತಲೇ ಹೋಗುತ್ತದೆ. ಆದರೂ ಚಿತ್ರ ಅಪೂರ್ಣ. ಏನು ಮಾಡೋದು, ವಿಷಯವೇ ಹಾಗಿದೆ.

- ಚಾಮರಾಜ ಸವಡಿ

sunaath said...

ನಿಮ್ಮ ಲೇಖನ ಒಳ್ಳೆಯ ವಿಶ್ಲೇಷಣೆಯಿಂದ ಕೂಡಿದೆ.
ಆದರೂ ನನ್ನ ಹೆಂಡತಿಯ ಅಭಿಪ್ರಾಯವನ್ನು ಒಂದು ಸಲ ಕೇಳಿದ ಮೇಲೆ,ಗಂಡು ಅವಲಂಬಿತನು ಹೌದೊ ಅಲ್ಲವೊ ಎಂದು ನಿರ್ಧರಿಸುತ್ತೇನೆ.

Unknown said...

>>>> ಆದರೂ ಗಂಡಸು ಒಂದೇ ಹೆಣ್ಣಿಗೆ ನಿಷ್ಠನಾಗಿರುವುದಿಲ್ಲ. ಯಾಕೆಂದರೆ ಭೂಮಿ ಸ್ಥಾವರವಾಗಿದ್ದು ಎಲ್ಲವನ್ನೂ ಸ್ವೀಕರಿಸುತ್ತಾ ಪೊರೆಯುತ್ತಾಳೆ. ಪುರುಷ ಬೀಜಪ್ರಸಾರ ಮಾಡುತ್ತಾ ಅಲೆಮಾರಿಯಾಗುತ್ತಾನೆ. ಇದುವೇ ನಿಸರ್ಗದ ವೈಚಿತ್ರ್ಯ!

ನಿಮ್ಮ ಈ ಕೊನೆಯ ವಾಕ್ಯ, ನೀವು ಬರಹದ ಮೊದಲಿಗೆತ್ತಿಕೊಂಡ ಪ್ರಶ್ನೆಗೆ ಉತ್ತರ ನೀಡುತ್ತಿದೆ. :-)

Unknown said...

ವಸ್ತುನಿಷ್ಠ ವಿಶ್ಲೇಷಣೆ,ಹೆಣ್ಣು ಗಂಡಿನ ಪ್ರಕೃತಿಗೆ ಸಂಬಂಧಿಸಿದ ವಿಚಾರವನ್ನು ಲೇಖನದಲ್ಲಿ ಸ್ಪಷ್ಟವಾಗಿ ವಿಷದೀಕರಿಸಿದ್ದಾರೆ. ಮೂಡುವ ಎಲ್ಲ ಪ್ರಶ್ನೆಗಳಿಗೂ, ದ್ವಂದ್ವಗಳಿಗೂ ಇಲ್ಲೇ ಉತ್ತರ ಇದೆ. ವ್ಯಾಖ್ಯಾನಕ್ಕೆ ಅವಕಾಶವೇ ಇಲ್ಲ,ಲೇಖನ ಅತ್ಯತ್ತಮವಾಗಿದೆ. ಸ್ಪ್ಯಾನಿಷ್ ಕವಿ ಲೋರ್ಕಾ ನ ನಾಟಕಗಳಲ್ಲಿ ಇಂಥ ಸಂಕೀರ್ಣತೆಯನ್ನು ಅನೇಕ ರೂಪಕ (ಪ್ರತಿಮೆ)ಗಳ ಮೂಲಕ ಶೋಧಿಸುವುದನ್ನು ಕಾಣಬಹುದು.

Gnaneswara T N said...

ಗಂಡ ಸತ್ತರೆ ಹೆಂಡತಿ ಕೂಲಿ ಮಾಡಿಯಾದರೂ ಮಕ್ಕಳನ್ನು ಸಾಕುತ್ತಾಳೆ. ಹೆಂಡತಿ ಸತ್ತರೆ ಗಂಡನ ಪಾಡು ನಾಯಿ ಪಾಡಾಗುತ್ತದೆ.

Gnaneswara T N said...

ಪ್ರೀತಿಯಲ್ಲಿ ಬಿದ್ದ ಹುಡುಗಿ ಫಸ್ಟ್ ಕ್ಲಾಸಲ್ಲಿ ಪಾಸಾಗುತ್ತಾಳೆ. ಪ್ರೀತಿಯಲ್ಲಿ ಬಿದ್ದ ಹುಡುಗ ನಪಾಸಾಗುತ್ತಾನೆ.

Gnaneswara T N said...

ಮೇಲ್ನೋಟಕ್ಕೆ ಹೆಣ್ಣು ಹೆಚ್ಚು ಭಾವನಾತ್ಮಕಳೆನ್ನಿಸಿದರೂ ನಿಜದಲ್ಲಿ ಗಂಡೇ ಹೆಚ್ಚು ಭಾವನಾತ್ಮಕ.