Friday, February 13, 2009

ರೇಣುಕಾ ಚೌದರಿ ಎಂಬ ಅಗ್ನಿಪುತ್ರಿ




ಮಂಗಳೂರಿನ ಅಮ್ನೇಶಿಯ ಪಬ್ ದಾಳಿಯ ಪ್ರಕರಣದ ನಂತರ ನಡೆಯುತ್ತಿರವ ತೆರೆಮರೆಯ ರಾಜಕೀಯ ದೊಂಬಾರಟಗಳು, ಮಂಜೇಶ್ವರ ಶಾಸಕರ ಪುತ್ರಿಯ ಅಪಹರಣ, ಪ್ರೇಮಿಗಳ ವಿರುದ್ಧ ಮುತಾಲಿಕನ ಹಾರಾಟ, ಚೆಡ್ಡಿ ಸೀರೆಗಳ ಪೈಪೋಟಿ ಇವುಗಳ ಮಧ್ಯೆ ಟೀವಿ ನೋಡುವುದಕ್ಕಾಗಲಿ, ಪೇಪರ್ ಓದುವುದಕ್ಕಾಗಲಿ ಮನಸ್ಸಾಗುವುದಿಲ್ಲ. ಪುಕ್ಕಟೆ ಮನರಂಜನೆ ಎಲ್ಲಾ ಕಾಲದಲ್ಲಿಯೂ ರಂಜಿಸುವುದಿಲ್ಲ.

ಆದರೆ ’ಕರಾವಳಿ ಆಲೆ’ಯ ಸಂಪಾದಕ ಬಿ.ವಿ.ಸೀತಾರಂ ಅವರನ್ನು ಬಂದಿಸಿದ ಪರಿ ಮತ್ತು ನಡೆಸಿಕೊಂಡ ರೀತಿಯ ಬಗ್ಗೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿ ಸರಕಾರಕ್ಕೆ ಹತ್ತುಸಾವಿರ ರೂಪಾಯಿಗಳ ದಂಡ ವಿಧಿಸಿದ್ದನ್ನು ಗಮನಿಸಿದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಗೌರವ ಮೂಡುತ್ತೆ. ಮತ್ತೆಆಶಾವಾದ ಮೊಳಕೆಯೊಡೆಯುತ್ತದೆ.

ಆದರೆ ನಿನ್ನೆ ಮಂಗಳೂರು ಮಹಾನಗರಪಾಲಿಕೆ ರೇಣುಕಾ ಚೌದರಿಗೆ ನೋಟಿಸ್ ಜಾರಿ ಮಾಡಿದೆ. ’ಮಂಗಳೂರು ತಾಲೀಬರಣಗೊಳ್ಳುತ್ತಿದೆ’ ಎಂದು ಹೇಳಿದ ರೇಣುಕಳದು ಬೇಜವಾಬ್ದಾರಿ ಹೇಳಿಕೆ, ಅದಕ್ಕಾಗಿ ಅವರು ಮಂಗಳೂರಿನ ಜನತೆಯ ಕ್ಷಮೆ ಯಾಚಿಸಬೇಕು. ಇದು ಪಾಲಿಕೆಯ ಒತ್ತಾಯ. ಒಂದು ವೇಳೆ ಸಚಿವೆ ಕ್ಷಮೆ ಯಾಚಿಸದಿದ್ದರೆ ಅವರ ಮೇಲೆ ಕ್ರಿಮಿನಲ್ ಮೊಕ್ಕದ್ದಮೆ ಹೂಡುವುದಾಗಿ ಮೇಯರ್ ಗಣೇಶ್ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ. ಸಚಿವೆಗೆ ಉತ್ತರಿಸಲು ಮೂರುದಿನಗಳ ಗಡುವನ್ನವರು ನೀಡಿದ್ದಾರೆ.


ಸಚಿವರಿಗೇ ನೋಟಿಸ್ ನೀಡಲು ಮೆಯರೊಬ್ಬರಿಗೆ ಕಾನೂನಿನಲ್ಲಿ ಅವಕಾಶವಿದೆಯೋ ಇಲ್ಲವೋ ಎಂಬುದು ಕಾನೂನು ತಜ್ನರು ಚರ್ಚಿಸಬೇಕಾದ ವಿಷಯ. ಇಲ್ಲಿ ಗಮನಿಸಬೇಕಾದ ವಿಚಾರ ಅಂದರೆ ಮಂಗಳೂರು ಮಹಾನಗರಪಾಲಿಕೆ ಬಿ.ಜೆ.ಪಿ ಆಡಳಿತದಲ್ಲಿದೆ. ಹಾಗಾಗಿ ಮೇಯರ್ ಗಣೇಶ ಹೊಸಬೆಟ್ಟು ಈ ಧಾರ್ಷ್ಟ್ಯ ತೋರಿಸಿದ್ದಾರೆ. ರಾಜ್ಯದಲ್ಲೂ, ಪಾಲಿಕೆಯಲ್ಲೂ ಮೊದಲಬಾರಿ ಅಧಿಕಾರ ಗದ್ದುಗೆ ಏರಿದ ಅನನುಭವಿಗಳ ಪಡೆ!

ತಪ್ಪು ಮಾಡಿದವರು ಯಾರಿಗೇ ಸಂಬಂಧಪಟ್ಟಿರಲಿ, ಅವರ ಹಿನ್ನೆಲೆ ಏನೇ ಇರಲಿ ಅವರು ’ಹಾಗೆ’ ಮಾಡುವುದಕ್ಕೆ ಕಾರಣವಾದ ಪರಿಸರ,ಅದು ನಿರ್ಮಾಣವಾದ ಬಗೆ , ಅದನ್ನು ಪೋಷಿಸುವವರ ಪಡೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅದು ಸಂಘ ಪರಿವಾರದವರ ಬುಡಕ್ಕೇ ಬರುತ್ತದೆ. ತನ್ನ ಘೋರಿಯನ್ನು ತಾನೇ ತೋಡಿಕೊಳ್ಳಲು ಹೊರಟಿದೆ ಬಿ.ಜೆ. ಪಿ ಸರಕಾರ.


ರೇಣುಕಾ ಚೌದರಿ. ಈ ಮಹಿಳೆಯ ಹೆಸರು ನನ್ನ ನೆನಪಿನ ಕೋಶದಲ್ಲಿ ದಾಖಲಾದದ್ದು ಹಲವಾರು ವರ್ಷಗಳ ಹಿಂದೆ. ಬಹುಶಃ ಅದು ನನ್ನ ಕಾಲೇಜು ದಿನಗಳು. ಪರಿಸರ ಮತ್ತು ಕಥೆ ಕಾದಂಬರಿಗಳ ಮೂಲಕ ಪುರುಷ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುತ್ತಿದ್ದ ಕಾಲ. ಆಗ ಆಂದ್ರಪ್ರದೇಶದ ರೇಣುಕಾ ಚೌದರಿಯೆಂಬ ಮಹಿಳೆ”ನಮಗೆ ಗಂಡಸರ ಅಗತ್ಯ ಇಲ್ಲ..... ದೇಶದಾದ್ಯಂತ ವೀರ್ಯ ಬ್ಯಾಂಕ್ ಗಳನ್ನು ಸ್ಥಾಪಿಸಬೇಕು”. ಎಂಬ ಹೇಳಿಕೆ ನೀಡಿಬಿಟ್ಟರು. ಆ ಸಂದರ್ಭ ನೆನಪಿಲ್ಲ. ಆದರೆ ಈ ಹೇಳಿಕೆ ಅಂದು ನೀಡಿದವರು ಈಗಿನ ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳಕಲ್ಯಾಣ ಖಾತೆಯ ರಾಜ್ಯ ಸಚಿವರಾದ ರೇಣುಕಾಚೌದರಿ.

ಎರಡು ದಶಕಗಳ ಹಿಂದಿನ ಆ ಮಾತಿನ ಪ್ರಖರತೆ ಇಂದಿಗೂ ಮಸುಕಾಗಲಿಲ್ಲ .ಮೊನ್ನೆ ಮೊನ್ನೆ ಮಂಗಳೂರಿನ ಪಬ್ ದಾಳಿಗೆ ಸಂಬಂಧಪಟ್ಟಂತೆ ಅವರು ತೆಗೆದುಕೊಂಡ ತೀರ್ಮಾನಗಳು ಮತ್ತೊಮ್ಮೆ ಅದನ್ನು ದೃಢಪಡಿಸಿದವು. ’ನನ್ನ ವರಧಿಯ ಬಗ್ಗೆ ಅಸಮಧಾನ ತೋರಲು ಈಕೆ ಯಾರು?’ ಎಂದು ಪ್ರಶ್ನಿಸಿದ ರಾಷ್ಟ್ರೀಯ ಆಯೋಗದ ಸದಸ್ಯೆ ನಿರ್ಮಲಾ ವೆಂಕಟೇಶರಿಗೆ ಶೋಕಾಶ್ ನೋಟಿಸ್ ಜಾರಿ ಮಾಡಿದರು. ಮಾತ್ರವಲ್ಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಕಿರಣ್ ಚಡ್ಡಾರನ್ನು ಮಂಗಳೂರಿಗೆ ಕಳುಹಿಸಿ ಪ್ರತ್ಯೇಕ ವರಧಿ ತರಿಸಿಕೊಂಡರು. ’ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಪಬ್ ಪರ ಚಳುವಳಿ ನಡೆಸಬೇಕಾದೀತು’ ಎಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಮೊನ್ನೆ ಕನ್ನಡದ ಹಿರಿಯ ಪತ್ರಕರ್ತರೊಬ್ಬರೊಡನೆ ಮಾತಾಡುತ್ತಿದ್ದೆ. ಅವರು ಹೇಳಿದರು; ರೇಣುಕಾ ಸಕ್ರೀಯ ರಾಜಕಾರಣಕ್ಕೆ ಬರುವ ಮೊದಲು ಆತ್ಮರಕ್ಷಣೆಗಾಗಿ ತಮ್ಮ ಬಳಿ ಸದಾ ಪಿಸ್ತೂಲ್ ಇಟ್ಟುಕೊಂಡಿರುತ್ತಿದ್ದರಂತೆ. ಅವರ ಈ ದಾಢಸಿತನವನ್ನು ಮೆಚ್ಚಿಯೇ ತೆಲುಗು ದೇಶಂನ ಸಂಸ್ಥಾಪಕ ಎನ್ ಟಿ ರಾಮರಾವ್ ತಮ್ಮ ಪಕ್ಷಕ್ಕೆ ಅವರನ್ನು ಬರಮಾಡಿಕೊಂಡರಂತೆ
ರೇಣುಕಾ ೧೯೫೪ರ ಅಗಸ್ಟ್೧೩ರಂದು ಅಂದ್ರಪ್ರದೇಶದ ವಿಶಾಖಪಟ್ಟಣದಲ್ಲಿ ಹುಟ್ಟಿದರು. ತಮ್ಮ ೩೦ನೇ ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿದರು. ಈಗ ಅವರಿಗೆ ೫೪ ವರ್ಷ. ಅಂದರೆ ಅವರಿಗೆ ೨೪ ವರ್ಷಗಳ ಸಕ್ರಿಯ ರಾಜಕೀಯ ಅನುಭವವಿದೆ. ಅನುಭವ ಎಂತವರನ್ನೂ ಮೆತ್ತಗಾಗಿಸುತ್ತದೆ. ಆದರೆ ರೇಣುಕಾಳ ವಿಚಾರದಲ್ಲಿ ಅದು ಇನ್ನಷ್ಟು ಪ್ರಖರಗೊಂಡಿದೆ.

ಒಂದೆರಡು ವರ್ಷಗಳ ಹಿಂದೆ ಆಕೆ ಕೊಟ್ಟ ಹೇಳಿಕೆಯನ್ನೇ ನೋಡಿ, ’ಮಹಿಳೆಯರೇ ನಿಮ್ಮ ಗಂಡಂದಿರನ್ನು ನಂಬಬೇಡಿ, ಸದಾ ನಿಮ್ಮ ಬಳಿ ಕಾಂಡಮ್ ಗಳನ್ನು ಇಟ್ಟುಕೊಂಡಿರಿ’ ಈಕೆಯನ್ನು ವಿರೋಧಿಸಲು ಪುರುಷ ಪ್ರಧಾನ ಸಮಾಜಕ್ಕೆ ಇಷ್ಟು ಸಾಕಲ್ಲವೇ?

ಆಕೆ ಕರ್ನಾಟಕಕ್ಕೆ ಇನ್ನೂ ಹತ್ತಿರದವರು. ಅವರು ಸ್ನಾತಕೋತ್ತರ ಪದವಿಯನ್ನು ಪಡೆದದ್ದು ಬೆಂಗಳೂರು ವಿಶ್ವವಿದ್ಯಾಲಯದಿಂದ. ೧೯೮೪ರಲ್ಲಿ ತೆಲುಗುದೇಶಂ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದರೂ ೧೯೯೮ರಲ್ಲಿ ಪಕ್ಷ ತೊರೆದು ಕಾಂಗ್ರೇಸ್ ಸೇರಿದರು. ಎರಡು ಸಲ ರಾಜ್ಯಸಭಾ ಸದಸ್ಯರಾಗಿದ್ದರು. ಕುಪ್ಪಂ ಲೋಕಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಆಯ್ಕೆಯಾಗುತ್ತಿದ್ದಾರೆ. ದೇವೇಗೌಡರ ಕ್ಯಾಬಿನೇಟ್ ನಲ್ಲಿ[೧೯೯೭-೯೮] ಸಚಿವೆಯೂ ಆಗಿದ್ದರು.

ಹೌದು ಆಕೆ ಪ್ರಖರ ಸ್ತ್ರೀವಾದಿ. ಮಹಿಳಾಪರವಾದ ನಿಲುವುಗಳನ್ನು ತೆಗೆದುಕೊಳ್ಳುವಾಗ ಆಕೆ ಕೇವಲ ಕಾಂಗ್ರ್‍ಏಸ್ ಪಕ್ಷದ ವಕ್ತಾರಳಾಗುವುದಿಲ್ಲ ಸಮಸ್ತ ಮಹಿಳಾ ಧ್ವನಿಯಾಗುತ್ತಾಳೆ. ’ನಮ್ಮವಳು’ ಅನ್ನಿಸಿಕೊಂಡುಬಿಡುತ್ತಾಳೆ. ಅದು ಅವಳ ಹೆಚ್ಚುಗಾರಿಕೆ. ಮಹಿಳೆಯರ ಹಕ್ಕುಗಳಿಗೆ ಚ್ಯುತಿ ಬಂದಾಗಲೆಲ್ಲ ಅವಳು ಸಿಡಿದೇಳುತ್ತಾಳೆ. ಹಾಗಾಗಿ ಆಕೆ ಉಳಿದ ರಾಜಕಾರಣಿಗಳಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುತ್ತಾಳೆ. ಜಯಲಲಿತ, ಉಮಾಭಾರತಿ, ಮಾಯಾವತಿ ರೂಪಿಸುವ ರಾಜಕೀಯ ತಂತ್ರಗಾರಿಕೆಗಳು ಈಕೆಯಲ್ಲಿಲ್ಲ. ರೇಣುಕಾಳದ್ದು ಏನಿದ್ದರೂ ನೇರಾನೇರ. ಇಲ್ಲವಾದರೆ ಮುತಾಲಿಕನಂತ ಧರ್ಮಾಂಧ ಬ್ರಹ್ಮಚಾರಿಗೆ ಪ್ರೇಮಿಗಳ ದಿನಾಚರಣೆಯಂದು ಗಿಪ್ಟ್ ಕಳುಹಿಸುತ್ತೇನೆಂದು ಹೇಳಲು ಸಾಧ್ಯವಾಗುತ್ತಿತ್ತೆ? ಅದು ರೇಣುಕಾಗೆ ಮಾತ್ರ ಸಾಧ್ಯ.

ನಾಳೆ ಪ್ರೇಮಿಗಳ ದಿನಾಚರಣೆ.

ಈ ಕ್ಷಣಕ್ಕೆ ನನಗೆ ರೇಣುಕಾಚೌಧರಿ ಇಷ್ಟವಾಗುತ್ತಾಳೆ. ಮೊದಲಬಾರಿಗೆ ವಿಶ್ವಸಮುದಾಯಕ್ಕೆ ಭರವಸೆಯ ಭಾವನೆಯನ್ನು ಮೂಡಿಸುತ್ತಿರುವ ಅಮೇರಿಕದ ದೊಡ್ಡಣ್ಣ ಬರಕಾ ಒಬಮಾ ಇಷ್ಟವಾಗುತ್ತಾನೆ. ಹಾಗಾಗಿ ಅವರಿಬ್ಬರನ್ನೂ ನಾನು ಪ್ರೀತಿಸುತ್ತೇನೆ.

ನನ್ನ ಗೆಳೆಯ ಪೋನ್ ಮಾಡಿ ’ನಾಳೆ ಲಾಂಗ್ ಡ್ರೈವ್ ಹೋಗೋಣ್ವಾ’ ಎಂದು ಕೇಳಿದ್ದ. ಮುನಿಯಂತಿದ್ದ ಆತ ಇಷ್ಟು ಕೇಳಿದ್ದೇ ಹೆಚ್ಚೆಂದು ಒಪ್ಪಿಕೊಂಡಿದ್ದೆ. ಆದರೆ ಈಗ ಭಯವಾಗುತ್ತಿದೆ, ಎಲ್ಲಿಯಾದರೂ ನಮ್ಮನ್ನು ಹಿಡಿದು ಶ್ರೀರಾಮ ಸೇನೆಯವರು ಮದುವೆ ಮಾಡಿಬಿಟ್ಟರೆ...?’ಇಂತಹದೊಂದು ಸಂಬಂಧ ನಿಮ್ಮ ನಡುವಿನಲ್ಲಿದೆಯಾ?’ ಎಂದು ನನ್ನ ಗಂಡ, ಆತನ ಪತ್ನಿ ಪ್ರಶ್ನಿಸಿದರೆ....? ನಮ್ಮ ನಡುವಿನ ಅನುಬಂಧ ಏನೆಂದು ನಮಗೇ ತಿಳಿಯದಿರುವಾಗ ಅನ್ಯರಿಗೆ ಏನೆಂದು ವಿವರಿಸುವುದು?
ಹಾಗಾಗಿ ಇದ್ಯಾವ ರಗಳೆಯೂ ಬೇಡ ಎಂದುಕೊಂಡು ಕಾಳಿದಾಸನ ಮೇಘದೂತದ ಬೇಂದ್ರೆ ಅನುವಾದವನ್ನು ಓದಲೆಂದು ಕೈಗೆತ್ತಿಕೊಂಡಿದ್ದೇನೆ.
ಪ್ರೀತಿ, ಪ್ರೇಮದ ವಿಷಯಕ್ಕೆ ಬಂದಾಗ ಎಲ್ಲರೂ ಭಾವುಕರೇ; ಎಳೆಯರೇ. ಅದೊಂದು ಪ್ರಯೋಗಶಾಲೆ.

5 comments:

sunaath said...

ರೇಣುಕಾ ಚೌಧರಿ ಕೇವಲ publicityಗಾಗಿ stunt ಮಾಡುತ್ತಾಳೊ ಏನೊ ಎಂದು ಕೆಲ ಸಲ ನನಗೆ ಅನ್ನಿಸುತ್ತೆ.

ಬಾನಾಡಿ said...

ರೇಣುಕಾ ಚೌಧರಿ ಕುರಿತು ಅರಿತು ಬರೆದ ಬರಹ ಮನಮುಟ್ಟುತ್ತಿದೆ.
ಗೆಳೆಯನೊಡನೆ ಲಾಂಗ್ ಡ್ರೈವ್ ಖಂದಿತ ಹೋಗಿ. ಆಗ ನೀವು ಅವನ ಹೆಂಡತಿಗೆ ನಿಮ್ಮ ಗಂಡನಿಗೆ (ಬೇಕಾದಲ್ಲಿ)ಸಂಬಂಧದ ಕುರಿತು ವಿವರಿಸಬಹುದು.
ಇಲ್ಲವಾದರೆ ಮುತಾಲಿಕ್ ನಂಥವರು ವಿಜಯ ಪತಾಕೆ ಹಾರಿಸುತ್ತಾರೆ.
ಒಲವಿನಿಂದ
ಬಾನಡಿ

thandacool said...

e strivadi, purushavadiglu ennuva pangadagle sudda nalayak, samsthiyinda samajavannu noduva kal bandagale namma deshakke olleyadu aguttade. e vadiglindale hechige vyadiglu suruvagiruvudu. pabh daliyannu avaru ariti virodisidaralla. adu sreemantara samskrati. ade badavana hemmakkala mele aguv dwojranyada varadi ivrige tayarisi adannu sari padisalu sadyavillave?

Mediapepper said...

ರೇಣುಕಾ ಚೌಧರಿ ಅಗ್ನಿಪುತ್ರಿಯಾಗೋದು ಒಂದು ವರ್ಗದವರಿಗಾಗಿ ಮಾತ್ರವೇ...ಹೀಗೊಂದು ಜಿಜ್ಞಾಸೆ ನಮ್ಮನ್ನು ಕಾಡುತ್ತದೆ! ಶುಭವಾಗಲಿ...

ತೇಜಸ್ವಿನಿ ಹೆಗಡೆ said...

ಸುರಗಿಯವರೆ,

ನಿಮ್ಮ ಈ ಬರಹದಿಂದ ರೇಣುಕಾರವರ ಕುರಿತು ಮತ್ತಷ್ಟು ತಿಳಿದುಕೊಳ್ಳುವಂತಾಯಿತು. ಆದರೆ ನನ್ನ ಪ್ರಕಾರ ರೇಣುಕಾರಂತವರು ಒಂದು ಸಂಘಟನೆಯ ಮುಖ್ಯಸ್ಥೆಯಾಗಬಹುದೇ ವಿನಃ ದೇಶದ ಜನತೆಯ ಪ್ರತಿನಿಧಿಯಾಗಲು ಅರ್ಹಳಲ್ಲ. ಸ್ತ್ರೀ ಅಥವಾ ಪುರುಷ ಸಂವೇದನೆಯನ್ನು ಮಾತ್ರ ಎತ್ತಿ ಹಿಡಿಯುತ್ತಾ.. ಏನೇ ಆದರೂ ಆ ತನ್ನ ಸಿದ್ಧಾಂತಕ್ಕೆ ಮಾತ್ರ ಬದ್ಧ ಎಂದು ಹೇಳುವವರು ದೇಶದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವುದು ಸಲ್ಲ. ಈ ನಿಟ್ಟಿನಲ್ಲಿ ಅವರು ಮಹಿಳಾ ಮತ್ತು ಮಕ್ಕಳ ಇಲಾಖೆಯ ಮಂತ್ರಿಯಾಗಿರುವುದು ತುಂಬಾ ಖೇದನೀಯವೇ. ಸಮರ್ಥತೆ ಎನ್ನುವುದು ಆ ಕ್ಷೇತ್ರದಲ್ಲಿರಬೇಕು. ಹಾಗಿದ್ದಾಗ ಮಾತ್ರ ಒಂದು ಕ್ಷೇತ್ರ ಆ ಮಂಂತ್ರಿಯಡಿ ಬೆಳೆಯುವುದು..ಉಳಿಯುವುದು. ರೇಣುಕಾರವರ ವಜ್ರಮುಷ್ಠಿಯಲ್ಲಿ ಈ ಇಲಾಖೆ ನಲುಗಿ ಅಳಿಯದಿದ್ದರೆ ಸಾಕು!

ಇದು ನನ್ನ ವೈಯಕ್ತಿಯ ಅಭಿಪ್ರಾಯವಷ್ಟೇ. ನಾನು ಪಬ್ ಧಾಳಿಯನ್ನು ಖಂಡಿಸುತ್ತೇನೆ. ಹಾಗೆಯೇ ರೇಣುಕಾ ಅಂತಹ ಜವಾಬ್ದಾರಿ ಹುದಿಯಲ್ಲಿರುವ ವ್ಯಕ್ತಿಯ ಬೇಜವಾಬ್ದಾರಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಇಂತಹವರಿಂದಲೇ ಭಾರತ ಇನ್ನೂ ಸ್ಲಮ್‌ಡಾಗ್ ಆಗಿರುವುದೇನೋ ವಿದೇಶಿಯರ ಪಾಲಿಗೆ!!:(