Friday, July 10, 2009

ಸಲಿಂಗಕಾಮ; ತಪ್ಪು ಹುಡುಕಲು ನಾವ್ಯಾರು?





ಭಾರತೀಯ ದಂಡಸಂಹಿತೆಯ ೩೭೭ರ ಕಲಮಿನ ಪ್ರಕಾರ ಸಲಿಂಗಕಾಮ ಅಪರಾಧ. ಗಂಡಸು ಗಂಡಸಿನೊಡನೆ ಮತ್ತು ಗಂಡಸು ಹಿಜಿಡದೊಂದಿಗೆ ಹಾಗು ಹೆಂಗಸು ಹೆಂಗಸಿನೊಂದಿಗೆ,ಹಾಗು ಪ್ರಾಣಿಗಳೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದು ಶಿಕ್ಷಾರ್ಹ ಅಪರಾಧ.
ಈಗ ದೆಹಲಿ ಹೈಕೋರ್ಟ್ ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿದೆ. ಇದರ ಪ್ರಕಾರ ಪರಸ್ಪರ ಸಮ್ಮತಿ ಇರುವ ಇಬ್ಬರು ವಯಸ್ಕರು ಸಲಿಂಗಕಾಮದಲ್ಲಿ ತೊಡಗುವುದು ಕಾನೂನು ಬದ್ಧ. ಈಗ ಇದರ ಬಗ್ಗೆ ಪರ-ವಿರೋಧ ಹೇಳಿಕೆಗಳು, ಅಭಿಪ್ರಾಯಗಳು ಹರಿದು ಬರುತ್ತಿವೆ.

ನಮ್ಮ ದೇಶದ ಜನಸಂಖ್ಯೆ ನೂರುಕೋಟಿಗೂ ಹೆಚ್ಚು. ಇದರಲ್ಲಿ ಸಲಿಂಗಕಾಮಿಗಳ ಸಂಖ್ಯೆ ಇಪ್ಪತೈದು ಲಕ್ಷಗಳು ಎಂದು ಅಂದಾಜಿಸಲಾಗಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತುಕೊಂಡು ಲೈಂಗಿಕತೆಯನ್ನು ಹೊರತುಪಡಿಸಿ ಸಹಜ ಬದುಕನ್ನು ಬದುಕುತ್ತಿರುವ ಇವರನ್ನು ಬೆಟ್ಟು ಮಾಡಿ ತೋರಿಸುವುದು ಕಷ್ಟ. ನಮ್ಮ ನಡುವೆಯೇ ಇದ್ದು ನಮಗೆ ಅರಿವಿಲ್ಲದಂತೆ ಸಲಿಂಗಕಾಮಿಗಳಾಗಿ ಅವರು ಬದುಕುತ್ತಿರುತ್ತಾರೆ. ಒಬ್ಬ ವ್ಯಕ್ತಿಗೆ ತನಗೆ ವಿರುದ್ಧಲಿಂಗಿಯಲ್ಲಿ ಆಕರ್ಷಣೆಯಿಲ್ಲ ಬದಲಾಗಿ ಸ್ವಲಿಂಗಿಯಲ್ಲಿ ಅನುರಕ್ತನಾಗುತ್ತಿದ್ದೇನೆ ಎಂದು ಅನ್ನಿಸಿದರೆ ಅದರಲ್ಲಿ ಆಕೆಯ ಅಥವಾ ಆತನದೇನು ತಪ್ಪಿದೆ? ಅದು ನಿಸರ್ಗ ಮಾಡಿದ ಎಡವಟ್ಟು!

ಸಲಿಂಗಕಾಮವನ್ನು ನಮ್ಮ ಪುರಾಣವಂತೂ ಒಪ್ಪಿಕೊಂಡಿದೆ. ಬಸ್ಮಾಸುರನನ್ನು ಕೊಂದ ಮೋಹಿನಿ ವೇಷಧಾರಿಯಾದ ವಿಷ್ಣುವನ್ನು ಶಿವ ಮೋಹಿಸುತ್ತಾನೆ. ಅವಳನ್ನು ಕಾಡಿ ಕೂಡುತ್ತಾನೆ. ಅದರ ಫಲವಾಗಿ ಹುಟ್ಟಿದವನೇ ಅಯ್ಯಪ್ಪ. ಬಹಳ ಅಪರೂಪಕ್ಕೆ ಪುರುಷರಲ್ಲಿ ಗರ್ಭಕೋಶವಿದ್ದ ಉದಾಹರಣೆಗಳಿವೆ. ಇದೂ ಕೂಡಾ ನಿಸರ್ಗದ ವೈಚಿತ್ರಗಳಲ್ಲೊಂದು. ವಿಷ್ಣುವಿನಲ್ಲಿ ಹೆಣ್ತನದ ಲಕ್ಷಣಗಳು ಸ್ವಲ್ಪ ಹೆಚ್ಚೇ ಎದ್ದು ಕಾಣುತ್ತದೆ. ಹಾಗಾದರೆ ಆತನಿಗೆ ಗರ್ಭಕೋಶವಿದ್ದಿರಬಹುದೇ? ಅಲ್ಲಿಗೆ ಅಂಡಾಣು ಮತ್ತು ವೀರ್ಯಾಣುವನ್ನು ಸಂಯೋಗೊಳಿಸಿ ಇಟ್ಟವರಾರು? ಗೊತ್ತಿಲ್ಲ. ಆದರೆ ಇಬ್ಬರು ಗಂಡು ದೇವರ ಸಂಯೋಗದಿಂದ ಜನಿಸಿದ ಅಯ್ಯಪ್ಪ ಇಂದು ಆಸ್ತಿಕರಿಂದ ಆರಾಧನೆಗೊಳ್ಳುತ್ತಿದ್ದಾನೆ. ಅಂದರೆ ನಮ್ಮಲ್ಲಿ ಸಲಿಂಗಕಾಮ ಹಿಂದೆ ಇತ್ತು. ಅಥಾವ ಆ ಕಲ್ಪನೆಯಾದರೂ ಇತ್ತು.

ಅನುಕೂಲಕರ ಸಂದರ್ಭಗಳಲ್ಲಿ ಸಲಿಂಗಕಾಮವನ್ನು ಕುತೂಹಲಕ್ಕಾಗಿ ಆರಂಭಿಸಿ ಅನಂತರದಲ್ಲಿ ಅದನ್ನು ಚಟವಾಗಿ ಬೆಳೆಸಿಕೊಳ್ಳುವವರಿದ್ದಾರೆ. ಜೈಲು, ಹಾಸ್ಟೇಲ್, ಸೈನ್ಯ ಹಾಗು ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರ[ಮಠಗಳ ಹಾಗಿರುವ]ಗಳಲ್ಲಿ ಸಲಿಂಗಕಾಮದ ಆಕರ್ಷಣೆ ಹೆಚ್ಚು. ಅದಕ್ಕೆ ಪೂರಕ ವಾತಾವರಣವು ಅಲ್ಲಿರುತ್ತದೆ. ಕ್ರಮೇಣ ಇದರಿಂದ ಹೊರಬಂದು ವಿರುದ್ಧಲಿಂಗಿಯನ್ನು ಮದುವೆಯಾಗಿ ಸಹಜ ಲೈಂಗಿಕ ಬದುಕನ್ನು ಬದುಕುವವರಿದ್ದಾರೆ. ಆದರೆ ಹುಟ್ಟಿನಿಂದಲೇ ಸಲಿಂಗಕಾಮಿಯಾಗಿದ್ದರೆ? ಹಿಂದೆ ಹೇಳಿದಂತೆ ಅದು ನಿಸರ್ಗದ ವೈಚಿತ್ರ.

ಹಸಿವು, ನಿದ್ರೆ, ಮೈಥುನ ಮನುಷ್ಯನ ಮೂಲಭೂತ ಅವಶ್ಯಕತೆ; ಬೇಸಿಕ್ ಇನ್ ಸ್ಟಿಂಕ್ಟ್. ಸಲಿಂಗಕಾಮಿಗಳಿಗೆ ಮೈಥುನದ ಹಕ್ಕು ಬೇಡವೇ?. ಖಂಡಿತಾ ಬೇಕು. ಆದರೆ ಐ.ಪಿ.ಸಿ ೩೭೭ನೇ ಕಲಂ ಸಲಿಂಗಕಾಮ ಅಪರಾಧ ಎಂದು ಪರಿಗಣಿಸಿದೆ. ಹಾಗಾಗಿ ಸಲಿಂಗಿಗಳಿಗೆ ಮೈಥುನ ಸುಖವಿಲ್ಲ! ಸ್ವಲಿಂಗಿಗಳು ಕೂಡ ಮನುಷ್ಯರೇ ತಾನೆ? ಸೃಷ್ಟಿಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದನ್ನು ಬಿಟ್ಟರೆ ಆರೋಗ್ಯವಂತ ಗಂಡು-ಹೆಣ್ಣುಗಳು ಪರಸ್ಪರ ಪಡೆದುಕೊಳ್ಳುವ ಲೈಂಗಿಕ ಸುಖವನ್ನೇ ಅವರೂ ಪಡೆದುಕೊಳ್ಳುತ್ತಾರೆ. ಹಾಗಾಗಿ ವ್ಯಕ್ತಿಯ ಮೂಲಭೂತಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ದೆಹಲಿ ಉಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಹಜವೇ.

ಆದರೆ ಈ ಹಕ್ಕು ಇನ್ನೊಬ್ಬರ ಹಕ್ಕುಗಳ ಮೇಲೆ ಧಾಳಿ ನಡೆಸಿದರೆ? ಇದುವರೆಗೆ ಸಲಿಂಗಕಾಮ ಶಿಕ್ಷಾರ್ಹ ಅಪರಾಧವಾಗಿತ್ತು. ಸಮಾಜ ಸಹ ಅಂಥವರನ್ನು ದೂರ ಇಟ್ಟಿತ್ತು. ಅಸಹ್ಯದಿಂದ ಕಾಣುತ್ತಿತ್ತು. ಹಾಗಾಗಿ ಅವರು ತಮ್ಮ ಗೋಪ್ಯತೆಯನ್ನು ಕಾಪಾಡಿಕೊಳ್ಳುತ್ತಿದ್ದರು. ಬಲವಂತದ ಲೈಂಗಿಕಕ್ರಿಯೆಗೆ ಮುಂದಾಗುತ್ತಿರಲಿಲ್ಲ. ಹಾಗಾಗಿ ಅಲ್ಲೊಂದು ಇಲ್ಲೊಂದು ಪ್ರಕರಣಗಳು ದಾಖಲಾಗುತ್ತಿದ್ದವು. ಬಹಳ ಅಪರೂಪಕ್ಕೆ ಕೊಲೆಗಳು ನಡೆಯುತ್ತಿದ್ದವು. ಈಗ ಸಲಿಂಗಕಾಮ ಕಾನೂನುಬದ್ಧವಾದರೆ ಗಂಡಸರ ಮೇಲೂ ಅತ್ಯಾಚಾರಗಳಾಗುವ ಸಾಧ್ಯತೆಗಳಿವೆ. ಪ್ರತಿಷ್ಟೆಗಾಗಿ ವಿರುದ್ಧಲಿಂಗಿಯನ್ನು ಮದುವೆಯಾಗಬಹುದು.ಇದು ಅನೇಕ ಸಮಾಜೀಕ ಸಮಸ್ಯೆಗಳ ಹುಟ್ಟಿಗೆ ಕಾರಣವಾಗಬಹುದು.

ಸಲಿಂಗಕಾಮಿಗಳ ಬಗ್ಗೆ ಇರುವ ಬಹುದೊಡ್ಡ ಆಪಾದನೆ ಎಂದರೆ ಅವರು ಎಚ.ಐ.ವಿಯ ಹರಡುವಿಕೆಯ ವಾಹಕರಾಗಿದ್ದಾರೆಂಬುದು. ಅದು ಸ್ವಲ್ಪ ಮಟ್ಟಿಗೆ ನಿಜ. ಸಲಿಂಗಿಗಳಾಗಲಿ ವಿರುದ್ಧಲಿಂಗಿಗಳಾಗಲಿ ಸಂಗಾತಿಯ ಆಯ್ಕೆಯಲ್ಲಿ ವಿವೇಚನೆ ಮುಖ್ಯ. ಏಕಸಂಗಾತಿಗೆ ನಿಷ್ಟರಾಗಿರುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಸಲಿಂಗಕಾಮದ ಆಕರ್ಷಣೆಯಂತೆ ದಾಂಪತ್ಯ ಮಾಲಿನ್ಯವೂ ಈಗ ಬಹು ಸಾಮಾನ್ಯ. ಉನ್ಮತ್ತ ಯೌವನಕ್ಕೆ ವಿವೇಚನೆಯೆಂಬುದು ಮೈಲು ದೂರ.

ಇಲ್ಲೊಂದು ಮುಖ್ಯ ವಿಚಾರವನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಲೈಂಗಿಕ ಅತ್ಯಾಚಾರವನ್ನು ಸಾಬೀತು ಪಡಿಸುವುದುದು ತುಂಬಾ ಕಷ್ಟ. ಪರಸ್ಪರ ಒಪ್ಪಿಗೆಯ ಲೈಂಗಿಕ ಕ್ರಿಯೆ ನಡೆದು ಅನಂತರದಲ್ಲಿ ಅದನ್ನು ಬಲವಂತದ ರತಿಕ್ರೀಡೆ ಎಂದು ಆಪಾದಿಸಿದರೆ..?ಈಗ ಶೈನಿ ಅಹುಜ ಪ್ರಕರಣವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಆತ ಕೆಲಸದವಳೊಂದಿಗೆ ಲೈಂಗಿಕಕ್ರಿಯೆ ನಡೆಸಿದ್ದಾನೆ. ಅದನ್ನು ಆತನೇ ಒಪ್ಪಿಕೊಂಡಿದ್ದಾನೆ.ಆದರೆ ಇದು ಪರಸ್ಪರ ಒಪ್ಪಿಗೆಯಿಂದ ನಡೆದದ್ದು ಎಂಬುದು ಆತನ ವಾದ. ಇದು ನಿಜವಿರುವ ಸಾಧ್ಯತೆ ಇದೆ ಅಲ್ಲವೇ?. ಆಕೆ ಈತನನ್ನು ಬ್ಲಾಕ್ ಮೇಲ್ ಮಾಡಲು ಅವಕಾಶ ಇದೆ. ಮೆಲ್ನೋಟಕ್ಕೆ ಇಲ್ಲಿ ಅನ್ಯಾಯ ಆಗಿರೋದು ಅಹುಜ ಪತ್ನಿಗೆ. ಅಲ್ಲಿ ಆಕೆಗೆ ಗಂಡನಿಂದ ವಿಶ್ವಾಸದ್ರೋಹ ಆಗಿದೆ. ಆಕೆ ಎಲ್ಲಿ ನ್ಯಾಯ ಬೇಡಬೇಕು?.

ಐಪಿಸಿ ೩೭೭ಕ್ಕೆ ತಿದ್ದುಪಡಿ ತರುವುದಕ್ಕೆ ಮೊದಲು ಇದರ ಬಗ್ಗೆ ಕೂಲಂಕೂಷ ಚರ್ಚೆ ನಡೆಯಬೇಕು. ಇದುವರೆಗೆ ಮರೆಯಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ಬಹಿರಂಗವಾಗಿ ನಡೆಯತೊಡಗಿದರೆ ಸಭ್ಯ ಸಮಾಜ ಮುಜುಗರಪಡಬಹುದು. ಪ್ರಖ್ಯಾತ ಟೆನ್ನಿಸ್ ತಾರೆ ಮಾರ್ಟಿನಾ ನವ್ರಾಟಿಲೋನಾ ಸಲಿಂಗಕಾಮಿಯೆಂದು ಎಲ್ಲರಿಗೂ ಗೊತ್ತಿದೆ. ಅಲೆಗ್ಸಾಂಡರ್, ಸಾಕ್ರೆಟಿಸ್, ಅಸ್ಕರ್ ವೈಲ್ಡ್, ಜ್ಯೂಲಿಯ್ಸ್ ಸೀಸರ್, ಲಿಯನಾರ್ಡೊ ಡಾ ವಿಂಚಿ, ಮೈಕೆಲ್ ಏಂಜಿಲೊ...ಸಲಿಂಗಿಗಳಗಿದ್ದರು ಎಂದು ಹೇಳಲಾಗುತ್ತಿದೆ. ಈ ಅಂತೆ ಕಂತೆಗಳ ಸಂತೆಯಲ್ಲಿ ಕನ್ನಡದ ಕೆಲವು ಪತ್ರಕರ್ತರು, ಮಠಾದೀಶರು, ಗುರುಗಳು, ರಾಜಕಾರಣಿಗಳೂ ಇದ್ದಾರೆ. ಇವರೆಲ್ಲ ನಮ್ಮ ಎದುರುಗಡೆ ಬಂದಾಗ ನಮ್ಮ ಮುಖದಲ್ಲಿ ಪರಿಚಯದ, ಸಭ್ಯತೆಯ ನಗುವೊಂದು ಸುಳಿದಾಡುತ್ತದೆ.ಆ ನಗುವಿಗೆ ನಾನಾರ್ಥಗಳನ್ನು ಹುಡುಕುವಂತೆ ಆಗದಿರಲಿ. ಅವರ ಖಾಸಗಿ ಬದುಕು ಅವರದ್ದು, ನಮ್ಮ ಖಾಸಗಿ ಬದುಕು ನಮ್ಮದು. ಕೆಲವು ವಿಷಯಗಳತ್ತ ನಾವು ಔದಾಸಿನ್ಯ ಪ್ರದರ್ಶಿಸಬೇಕು. ಅದರಲ್ಲಿ ಸಲಿಂಗಕಾಮವೂ ಒಂದು.ಸಮಾಜದ ಒಳಪ್ರವಾಹದಲ್ಲೊಂದು ಕಾನೂನು ಇದೆ. ಸರಕಾರ ರೂಪಿಸುವ ಕಾನೂನಿಗಿಂತಲೂ ಇದು ಹೆಚ್ಚು ಶಕ್ತಿಶಾಲಿಯಾದುದು. ಅದು ಸಲಿಂಗಿಗಳನ್ನು ಒಪ್ಪಿಕೊಂಡರೆ, ಆದರಿಸಿದರೆ ಅದು ನಿಜವಾಗಿಯೂ ಸಲಿಂಗಿಗಳ ವಿಜಯೋತ್ಸವ.

3 comments:

sunaath said...

ಅಹೂಜಾನ ಹೆಂಡತಿಯು ಆತನ ಮೇಲೆ adultery ಖಟ್ಲೆ
ಹಾಕಬಹುದು. ಆದರೆ ಆಕೆ ಹಾಗೆ ಮಾಡೋದಿಲ್ಲ!

ಸುಧೇಶ್ ಶೆಟ್ಟಿ said...

ಈ ವಿಷಯದ ಎಲ್ಲ ಕಡೆಯೂ ಬರಹಗಳು ಬರುತ್ತಿವೆ.... ಪರವಿರೋಧ ಚರ್ಚೆಗಳು ನಡೆಯುತ್ತಿವೆ...

ಅವೆಲ್ಲವುಗಳ ನಡುವೆ ನಿಮ್ಮ ವಸ್ತುನಿಷ್ಠ ಬರಹ ತು೦ಬಾ ಇಷ್ಟವಾಯಿತು....

surya said...

"ಆದರೆ ಈ ಹಕ್ಕು ಇನ್ನೊಬ್ಬರ ಹಕ್ಕುಗಳ ಮೇಲೆ ಧಾಳಿ ನಡೆಸಿದರೆ? ಇದುವರೆಗೆ ಸಲಿಂಗಕಾಮ ಶಿಕ್ಷಾರ್ಹ ಅಪರಾಧವಾಗಿತ್ತು. ಸಮಾಜ ಸಹ ಅಂಥವರನ್ನು ದೂರ ಇಟ್ಟಿತ್ತು. ಅಸಹ್ಯದಿಂದ ಕಾಣುತ್ತಿತ್ತು. ಹಾಗಾಗಿ ಅವರು ತಮ್ಮ ಗೋಪ್ಯತೆಯನ್ನು ಕಾಪಾಡಿಕೊಳ್ಳುತ್ತಿದ್ದರು. ಬಲವಂತದ ಲೈಂಗಿಕಕ್ರಿಯೆಗೆ ಮುಂದಾಗುತ್ತಿರಲಿಲ್ಲ. ಹಾಗಾಗಿ ಅಲ್ಲೊಂದು ಇಲ್ಲೊಂದು ಪ್ರಕರಣಗಳು ದಾಖಲಾಗುತ್ತಿದ್ದವು. ಬಹಳ ಅಪರೂಪಕ್ಕೆ ಕೊಲೆಗಳು ನಡೆಯುತ್ತಿದ್ದವು. ಈಗ ಸಲಿಂಗಕಾಮ ಕಾನೂನುಬದ್ಧವಾದರೆ ಗಂಡಸರ ಮೇಲೂ ಅತ್ಯಾಚಾರಗಳಾಗುವ ಸಾಧ್ಯತೆಗಳಿವೆ. "

wah! so going by this argument, we should ban sex among men and women too, because going by the statistics that you only have given, the chances of rape are higher there! I have been following you rblog and used to like it too. did not expect such headstrong argument from you!