Saturday, July 25, 2009

’ಕಡಲ ತಡಿಯ ತಲ್ಲಣ’ ಈಗ ಮಾರುಕಟ್ಟೆಯಲ್ಲಿದೆ.




’ಕಡಲ ತಡಿಯ ತಲ್ಲಣ’ದ ಪುನರ್ ಮುದ್ರಣ ಪ್ರತಿ ಈಗ ನನ್ನ ಕೈಯಲ್ಲಿದೆ. ಚತುರೋಪಾಯಗಳಿಂದ ಪುಸ್ತಕವನ್ನು ಮುದ್ರಿಸಿಕೊಂಡಿದ್ದೇನೆ. ನಾಲ್ಕು ತಿಂಗಳ ಹಿಂದೆ ಪ್ರಕಟವಾದ ಈ ಪುಸ್ತಕವನ್ನು ಓದುಗರ ಕೈಗೆ ಕೊಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಆ ಬಗ್ಗೆ ಹಲವಾರು ಓದುಗರು, ಆತ್ಮೀಯರು ನನಗೆ ಮೇಲ್ ಮಾಡಿ, ಕಾಗದ ಬರೆದು,ಪೋನ್ ಮಾಡಿ ವಿಚಾರಿಸಿಕೊಂಡಿದ್ದಾರೆ. ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. ಅವರೆಲ್ಲರಿಗೂ ಪ್ರತ್ಯೇಕವಾಗಿ ಉತ್ತರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಮೂರು ತಿಂಗಳ ಹಿಂದೆ ಕಡಲ ತಡಿಯ ತಲ್ಲಣದ ಪ್ರಕಾಶರಿಗೆ ಮೇಲ್ ಮಾಡಿದ ಪತ್ರವನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸುತ್ತಿದ್ದೇನೆ-

ಸೃಷ್ಟಿ ಪ್ರಕಾಶನದ ಮಾಲೀಕರಾದ ನಾಗೇಶರವರಿಗೆ ’ಕಡಲ ತಡಿಯ ತಲ್ಲಣ’ದ ಸಂಪಾದಕಿಯಾದ ಉಷಾಕಟ್ಟೆಮನೆಯ ನಮಸ್ಕಾರಗಳು.
ಎಲ್ಲಾ ಸಂಪರ್ಕ ಮಾಧ್ಯಮಗಳಿಂದಲೂ ತಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಿ ವಿಫಲಳಾಗಿ ಈ ಪತ್ರವನ್ನು ಬರೆಯುತ್ತಿದ್ದೇನೆ.

ನನ್ನ ಜಿಲ್ಲೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ. ಅಲ್ಲಿ ಇತ್ತೀಚೆಗಿನ ತಿಂಗಳುಗಳಲ್ಲಿ ನಡೆಯುತ್ತಿರುವ ಘಟನೆಗಳು ನನ್ನ ಮನಸ್ಸನ್ನು ಘಾಸಿಗೊಳಿಸಿದ್ದವು. ಈ ಹಿನ್ನೆಲೆಯಲ್ಲಿ ಅಲ್ಲಿಯ ಬಹುಸಂಸ್ಕೃತಿಯ ಕುರಿತು ಪುಸ್ತಕವೊಂದನ್ನು ತರಲು ಬೆಂಗಳೂರಿನಲ್ಲಿರುವ ನಾನು ಮತ್ತು ದೆಹಲಿಯಲ್ಲಿ ವಾಸವಾಗಿರುವ ಪುರುಷೋತ್ತಮ ಬಿಳಿಮಲೆ ನಿರ್ಧರಿಸಿದೆವು. ಬಿಳಿಮಲೆಯ ಸಲಹೆಯ ಮೇರೆಗೆ ಇದನ್ನು ಪ್ರಕಟಿಸಲು ಪ್ರಕಾಶಕರಾದ ತಮ್ಮನ್ನು ನಾನು ಸಂಪರ್ಕಿಸಿದೆ. ಅಲ್ಲಿ ತನಕ ನನಗೆ ತಮ್ಮ ಪರಿಚಯವಿರಲಿಲ್ಲ.

ತಮಗೆ ಫೆಬ್ರವರಿ ೨೮ರಂದು ನಾನು ಮೂಲ ಲೇಖನಗಳನ್ನು ಒದಗಿಸಿದ್ದೆ. ಚುನಾವಣೆ ಹತ್ತಿರದಲ್ಲಿರುವ ಕಾರಣದಿಂದಾಗಿ ಬೇಗ ಪುಸ್ತಕ ತರುವುದು ನಮ್ಮ ಉದ್ದೇಶವಾಗಿತ್ತು. ನೀವು ಮತ್ತು ನಾವು ಕೂಡಿಯೇ ಮಾರ್ಚ್ ೨೪ರಂದು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಮಾಡುವುದೆಂದು ತೀರ್ಮಾನಿಸಿದೆವು.

ಆದರೆ ನೀವು ’ಕಡಲ ತಡಿಯ ತಲ್ಲಣ’ ಪುಸ್ತಕ ಪ್ರಕಟನೆಯ ಬಗ್ಗೆ ವೃತ್ತಿಪರತೆ ತೋರಲಿಲ್ಲ. ಉಢಾಪೆಯಿಂದ ನಡೆದುಕೊಂಡಿರಿ. ನಾನು ಪದೇ ಪದೇ ಪೋನ್ ಮಾಡಿದಾಗಲೂ ನೀವು ಪುಸ್ತಕ ಪ್ರಕಟನೆಯ ಕುರಿತು ಗಂಭೀರವಾಗಿ ನಡೆದುಕೊಳ್ಳಲೇ ಇಲ್ಲ. ನಿಮ್ಮ ಈ ಉದಾಸೀನ ಪ್ರವೃತ್ತಿಯನ್ನು ಮನಗಂಡು ಪುಸ್ತಕ ಬಿಡುಗಡೆಗೆ ನಿಗಧಿ ಪಡಿಸಲಾದ ದಿನಾಂಕವಾದ ಮಾರ್ಚ್ ೨೪ನ್ನು ೨೮ಕ್ಕೆ ಮುಂದೂಡಿದೆವು.

ಬಿಡುಗಡೆ ಕಾರ್ಯಕ್ರಮದ ಬಗ್ಗೆಯೂ ನೀವು ನನ್ನೊಡನೆ ಚರ್ಚಿಸಲಿಲ್ಲ. ಹಾಗಾಗಿ ನಾನು ’ಭಾರತ ಯಾತ್ರ ಕೇಂದ್ರದ’ ಸಂಚಾಲಕರಾದ ನಾಗರಾಜ ಮೂರ್ತಿಯವರನ್ನು ಸಂಪರ್ಕಿಸಿದೆ. ಅವರು ’ಸಾಹಿತಿ ಕಲಾವಿದರ ಬಳಗ’ದವರ ಸಹಕಾರದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು.

’ಕಡಲ ತಡಿಯ ತಲ್ಲಣ’ ಪುಸ್ತಕವನ್ನು ನಮ್ಮ ನಿರೀಕ್ಷೆಯಂತೆ ನೀವು ಪ್ರಕಟಿಸಲಿಲ್ಲ. ಅದರಲ್ಲಿ ಮುದ್ರಣ ದೋಷದ ಸರಮಾಲೆಯೇ ಇದೆ.ನಾನು ಮೊದಲ ಫ್ರೂಫ್ ನಲ್ಲಿ ಹಾಕಿದ ತಿದ್ದುಪಡಿಯನ್ನು ನೀವು ಸರಿಪಡಿಸಲಿಲ್ಲ. ಸೆಕೆಂಡ್ ಪ್ರೂಫ್ ನೀವು ಕೊಡಲೇ ಇಲ್ಲ. ನಾವು ಕೊಟ್ಟ ’ಪರಿವಿಡಿ’ಯ ಪ್ರಕಾರ ನೀವು ಲೇಖನಗಳನ್ನು ಅನುಕ್ರಮಗೊಳಿಸದೆ ನಿಮಗೆ ಇಷ್ಟಬಂದಂತೆ ಜೋಡಿಸಿದಿರಿ. ಅಲ್ಲದೆ ನಮ್ಮ ಗೌರವಾನ್ವಿತ ಲೇಖಕರ ಹೆಸರುಗಳನ್ನೇ ತಪ್ಪುತಪ್ಪಾಗಿ ಮುದ್ರಿಸಿದಿರಿ.. ಒಬ್ಬ ಲೇಖಕರ ಲೇಖನವನ್ನೇ ಪ್ರಕಟಿಸದೆ ಉಡಾಫೆ ತೋರಿದಿರಿ.

ಪುಸ್ತಕ ಅಚ್ಚಿಗೆ ಹೋಗುವ ಮೊದಲು ಪ್ರೆಸ್ಸ್ ನಲ್ಲಿ ಅಂತಿಮ ಪ್ರತಿಯನ್ನು ತೋರಿಸುವುದಾಗಿ ಹೇಳಿದ ನೀವು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿರಿ. ಬಿಡುಗಡೆಯ ದಿನ ಪುಸ್ತಕವನ್ನು ನನಗೆ ನೀವು ತಂದುಕೊಟ್ಟಿರಿ. ಅದರಲ್ಲಿನ ತಪ್ಪುಗಳನ್ನು ನೋಡಿ ನಾನು ದಂಗಾದೆ. ನಾನು ಈ ಬಗ್ಗೆ ಪ್ರಶ್ಣಿಸಿದಾಗ, ನೂರು ಪ್ರತಿಗಳನ್ನು ಮಾತ್ರ ಪ್ರಕಟಿಸಿದ್ದೇನೆ. ತಪ್ಪುಗಳನ್ನು ತಿದ್ದಿ ಪುನರ್ ಪ್ರಕಟಿಸುವುದಾಗಿ ಹೇಳಿದಿರಿ. ನಾನು ಉದಾರತೆಯಿಂದ ಆಗಲಿ ಎಂದೆ.

ಸಂಸ ಬಯಲು ರಂಗಮಂದಿರದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಿದ ಪ್ರೋ.ಎಸ್. ಶೆಟ್ಟರ್ ’ಈ ಪುಸ್ತಕ ಮಾರುಕಟ್ಟೆಗೆ ಬಿಡುಗಡೆಯಾಗುವುದಿಲ್ಲ. ತಪ್ಪುಗಳನ್ನು ಸರಿಪಡಿಸಿ ಪ್ರಕಟವಾದ ಮೇಲೆ ಓದುಗರಿಗೆ ದೊರೆಯುತ್ತದೆ.’ ಎಂದಿದ್ದರು. ಆದರೆ ನೀವು ಅದಾಗಲೇ ೧೦೦೦ ಪ್ರತಿಗಳನ್ನು ಮುದ್ರಿಸಿದ್ದಿರಿ. ಇದು ನಂಬಿಕೆ ದ್ರೋಹ. ಆದರೂ ನೀವದನ್ನು ಲೈಬ್ರರಿಗೆ ಕೊಟ್ಟು ನಮ್ಮ ಲೇಖಕರಿಗೆ ಮತ್ತು ಪುಸ್ತಕದಂಗಡಿಗಳಿಗೆ ತಪ್ಪಿಲ್ಲದ ಪ್ರತಿಗಳನ್ನು ಮುದ್ರಿಸಿಕೊಡುವುದಾಗಿ ಮಾತು ಕೊಟ್ಟಿರಿ. ಆದರೆ ಆಮೇಲೆ ನೀವು ನನಗೆ ಮುಖತಃ ಬೇಟಿಯಾಗಲೇ ಇಲ್ಲ. ಪೋನಿಗೂ ಸಿಗಲಿಲ್ಲ. ಮೆಸೇಜ್ ಗೂ ರಿಪ್ಲೈ ಮಾಡಲಿಲ್ಲ. ನಿಮ್ಮನ್ನು ಮುಖತಃ ಬೇಟಿಯಾಗಲು ಎಂಸಿ ಬಡಾವಣೆಯಲ್ಲಿರುವ ನಿಮ್ಮ ಮನೆಗೆ ಸತತ ನಾಲ್ಕು ದಿನ ಬಂದಿದ್ದೆ. ನೀವು ಸಿಗಲಿಲ್ಲ. ಆದರೆ ಕೆಲವು ಪುಸ್ತಕದಂಗಡಿಗಳಿಗೆ ನೀವು ಪುಸ್ತಕ ಮಾರಾಟ ಮಾಡಿದ್ದೀರೆಂದು ನನಗೆ ಗೊತ್ತಾಗಿದೆ. ಅದಕ್ಕೆ ಈ ಪತ್ರವನ್ನು ಬರೆಯುತ್ತಿದ್ದೇನೆ.

ನಾನು ನನ್ನ ೩೬ ಜನ ಗೌರವಾನ್ವಿತ ಲೇಖಕರಿಗೆ ಗೌರವ ಪ್ರತಿಗಳನ್ನು ನೀಡಬೇಕಾಗಿದೆ. ಮಾದ್ಯಮದವರಿಗೆ ಪ್ರತಿಗಳನ್ನು ನೀಡಬೇಕಾಗಿದೆ. ಪುಸ್ತಕ ಬಿಡುಗಡೆಯಾಗಿ ಇಂದಿಗೆ ಇಪ್ಪತ್ತು ದಿನಗಳು ಕಳೆದು ಹೋಗಿವೆ. ನಿಮ್ಮಿಂದ ಯಾವ ಸುದ್ದಿಯೂ ಇಲ್ಲ. ಹಾಗಾಗಿ ನಾನು ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ.
ನಾಗೇಶ್, ನೀವು ಈಗಾಲೇ ಮುದ್ರಿಸಿದ’ಕಡಲ ತಡಿಯ ತಲ್ಲಣ’ದ ೧೦೦೦ ಪ್ರತಿಗಳನ್ನು ಸರಕಾರಿ ಗ್ರಂಥಾಲಯಗಳಿಗೆ ಕೊಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಯಾವುದೇ ಪುಸ್ತಕದಂಗಡಿಗಳಿಗೆ ಸರಬರಾಜು ಮಾಡಬಾರದು. ಹಾಗೆಯೇ ಸಮ್ಮೇಳನಗಳಲ್ಲಿ, ಕಾರ್ಯಕ್ರಮಗಳಲ್ಲಿ ಮಾರಾಟಕ್ಕೆ ಇಡಬಾರದು. ಹಾಗೆ ಮಾಡಿದರೆ ಅದು ನಮ್ಮ ಗೌರವಾನ್ವಿತ ಲೇಖಕರು ಮತ್ತು ಸಂಪಾದಕರಿಗೆ ಮಾಡಿದ ಅಪಮಾನವಾಗುತ್ತದೆ. ಅದಕ್ಕೆ ಸೂಕ್ತ ಕ್ರಮವನ್ನು ನಾವು ಕೈಗೊಳ್ಳುತ್ತೇವೆ.

5 comments:

sunaath said...

ಪ್ರಕಾಶಕರ ಈ ಬೇಜವಾಬ್ದಾರಿ ವರ್ತನೆಯನ್ನು ಓದಿ ನಾನು ದಂಗುಬಡೆದು ಹೋದೆ.
ಇನ್ನಾದರೂ ಅವರು ಸುಧಾರಿಸಲಿ.

Guruprasad said...

ಇಸ್ಟೊಂದು ಅಸಡ್ಡೆ, ಬೇಜವಾಬ್ದಾರಿ ತನನ......ಇದಕ್ಕೆ ಪ್ರತಿಭಟಿಸಬೇಕು......

ಸಂದೀಪ್ ಕಾಮತ್ said...

ನೀವು ಈ ಸ್ಪಷ್ಟೀಕರಣ ಹಾಕಿದ್ದು ಒಳ್ಳೆದಾಯ್ತು .ಇಲ್ಲಾಂದ್ರೆ ಜನ ತಪ್ಪು ತಿಳ್ಕೊಳ್ಳೋ ಸಾಧ್ಯತೆಗಳಿದ್ದವು.

Unknown said...

ಇನ್ನೊಬ್ಬರನ್ನು ನೋಯಿಸುವುದರಲ್ಲಿ ಹಿಂದೆ ಮುಂದೆ ನೋಡದೆ ಮಾತು ಉಡಾಯಿಸುತ್ತಿದ್ದ ನಿಮಗೂ ಇಂಥ ಕೆಲವು ಅನುಭವಗಳಾಗುವುದು ಒಳ್ಳೆಯದೇ ಅನಿಸುತ್ತೆ!
ಅಸಡ್ಡೆ ಬೇಜವಾಬ್ದಾರಿತನ ನಿಮಗೇನು ಹೊಸದೆ?

Srushti said...

ನಿಮ್ಮ ಮೂಗಿನ ನೇರಕ್ಕೆ ನೀವು ಹೇಳಿದ್ದೀರಿ.ಶನಿವಾರ ಪ್ರೂಪ್ ಕ್ಕೊಟ್ಟು. ಸೋಮುವಾರ ಪುಸ್ತಕ ಕೇಳಿದ್ರಲ್ಲ. ನಾನು ಏನು ಮ್ಯಾಜಿಕ್ ಮಾಡಿ ಪುಸ್ತಕ ಪ್ರಿಂಟ್ ಮಾಡ್ತಿದ್ದೇನೇ.ತೆರೆ ಮರೆಯ ಸಂಕಟ ಯಾರಿಗೂ ಗೊತ್ತಾಗೊಲ್ಲ ಅಲ್ವೆ? ಪ್ರಕಾಶಕನಾದ ನನಗೆ ಪುಸ್ತಕ ಹೊರ ತರುವಲ್ಲಿ ಮಾರಟ ಮಾಡುವಲ್ಲಿ ನಮ್ಮ ಸಂಕಟ ನಿಮಗೇಲ್ಲಿ ತಿಳಿಯಬೇಕು.