Saturday, August 8, 2009

ತಿರುವಳ್ಳುವರ್ ಪ್ರತಿಮೆ-ಸಂತೆಗೆ ಮೂರು ಮೊಳ






ತಮಿಳಿನ ಸಂತ ಕವಿ ತಿರುವಳ್ಳುವರ್ ಕರ್ನಾಟಕ ರಕ್ಷಣ ವೇದಿಕೆಯವರ ಕೃಪೆಯಿಂದಾಗಿ ಪಂಚಕೋಟಿ ಕನ್ನಡಿಗರಿಗೆ ಪರಿಚಿತನಾದ. ಅದಕ್ಕಾಗಿ ಸಮಸ್ತ ಕನ್ನಡ ಹೋರಾಟಗಾರರಿಗೆ ನನ್ನ ಅಭಿನಂದನೆಗಳು. ಇದೇ ರೀತಿಯಲ್ಲಿ ತಮಿಳುನಾಡಿನಲ್ಲಿ ನಮ್ಮ ಸರ್ವಜ್ನ ಜನಸಾಮಾನ್ಯರಿಗೆ ಪರಿಚಿತನಾಗಲು ಅಲ್ಲಿಯ ತಮಿಳು ಭಾಷಾಭಿಮಾನಿಗಳು ಶ್ರಮಿಸಿದ್ದರೆ ಅವರಿಗೂ ಕೂಡ ನನ್ನ ನಮನಗಳು.

ಮುಂದೆಂದಾದರು ನಮ್ಮ ಘನ ಸರಕಾರಕ್ಕೆ ತೆಲುಗಿನ ಯೋಗಿ ಕವಿ ವೇಮನನ ಮೂರ್ತಿಯನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸ್ಥಾಪಿಸಬೇಕೆಂದು ದೈವಪ್ರೇರಣೆಯಾಗಲಿ. ರೆಡ್ಡಿಗಾರು ಪ್ರೇರಣೆಯಾದರೂ ಅಡ್ಡಿಯಿಲ್ಲ! ಆ ಮೂಲಕ ವೇಮನ ಸಮಸ್ತ ಕನ್ನಡಿಗರಿಗೂ ಪರಿಚಿತನಾಗಲಿ. ಅದಕ್ಕೂ ಕನ್ನಡ ಸಂಘಟನೆಗಳು ವೇಗವರ್ಧಕವಾಗಿ ಕೆಲಸ ಮಾಡಲಿ.

ದೇಶ- ಭಾಷೆ, ನೆಲ-ಜಲ, ಜಾತಿ-ಧರ್ಮವೆಂಬುದು ಭಾವಕೋಶಕ್ಕೆ ಸಂಬಂಧಪಟ್ಟ ಸೂಕ್ಷ್ಮ ವಿಚಾರಗಳು. ಇದಕ್ಕೆ ಪೆಟ್ಟಾದರೆ ವ್ಯಕ್ತಿ ಕೆರಳುತ್ತಾನೆ. ಭಾವವಿಕಾರಕ್ಕೆ ಒಳಗಾಗುತ್ತಾನೆ. ಆದರೆ ಲಲಿತ ಕಲೆಗಳಿಗೆ ಇವುಗಳನ್ನು ಶಮನಗೊಳಿಸುವ ಸಾಮಥ್ಯವಿದೆ. ಹಾಗಾಗಿಯೇ ಸಾಹಿತಿ-ಕಲಾವಿದರನ್ನು ಸಾಂಸ್ಕೃತಿಕ ರಾಯಭಾರಿಗಳೆಂದು ಕರೆಯುತ್ತೇವೆ. ಭಾರತ- ಪಾಕಿಸ್ತಾನದ ಅಂತಃಕಲಹ ಏನೇ ಇದ್ದರೂ ಅಲ್ಲಿಯ ಸಂಗೀತಗಾರರಿಗೆ ಇಲ್ಲಿ ಭಾರೀ ಅಭಿಮಾನಿಗಳಿದ್ದಾರೆ. ಅಲ್ಲಿಯ ಜನ ಇಲ್ಲಿಯ ಸಿನಿಮಾಗಳನ್ನು ಹುಚ್ಚೆದ್ದು ಪ್ರೀತಿಸುತ್ತಾರೆ. ಕಲೆ ಮತ್ತು ಕಲಾವಿದರಿಗೆ ದೇಶ, ಭಾಷೆ,ಧರ್ಮದ ಚೌಕಟ್ಟಿಗೆ ಒಳಪಡಿಸಬಾರದು.

ತಿರುವಳ್ಳುವರ್, ಸರ್ವಜ್ನ ಮತ್ತು ವೇಮನ ಚೌಕಟ್ಟುಗಳನ್ನು ಮೀರಿದ ಸಂತ ಕವಿಗಳು. ಮಾನವ ಮಾನವನಾಗಿ ಹೇಗೆ ಬದುಕಬೇಕೆಂಬುದನ್ನು ವಿವರವಾಗಿ ಹೇಳಿದವರು.

ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯ ಹಿಂದೆ ರಾಜಕೀಯ ಉದ್ದೇಶಗಳಿರುವುದನ್ನು ಅಲ್ಲಗೆಳೆಯಲಾಗದು. ಆದರೆ ಅದನ್ನೇ ಮುಖ್ಯವಾಗಿಟ್ಟುಕೊಂಡರೆ ಆ ಮಹಾನ್ ದಾರ್ಶನಿಕ ಕವಿಗೆ ಅವಮಾನ ಮಾಡಿದಂತೆ. ಅದು ಕನ್ನಡ ಸಾರಸ್ವತ ಲೋಕಕ್ಕೆ ಗೊತ್ತಿದೆ. ಹಾಗಾಗಿ ಅವರ್ಯಾರೂ ವಿರೋಧಿಸಲಿಲ್ಲ. ಬಹುಶಃ ಕ.ರ.ವೇ.ಕಾರ್ಯಕರ್ತರಿಗಾಗಲಿ, ವಾಟಾಳ್ ನಾಗರಾಜನಂತ ವಿಧೂಷಕನಿಗಾಗಲಿ ಇದು ಮಸ್ತಕಕ್ಕೆ ಹೋಗುವ ವಿಚಾರ ಆಲ್ಲ.

ಸಂತ ಕವಿ ತಿರುವಳ್ಳುವರ್ ಕ್ರಿಸ್ತನಿಗಿಂತ ೩೦ ವರ್ಷಗಳ ಪೂರ್ವದಲ್ಲಿಯೇ ’ತಿರುಕ್ಕುರಳ್’ನ್ನು ರಚಿಸಿದನೆಂದು ನಂಬಲಾಗಿದೆ. ಬೈಬಲ್’ ಕುರಾನ್ ನಂತರ ಅತಿ ಹೆಚ್ಚು ಭಾಷೆಗಳಿಗೆ ಅನುವಾದಗೊಂಡ ಕೃತಿಯಿದು. ಜಗತ್ತಿನ ೬೦ ಭಾಷೆಗಳಿಗೆ ಅನುವಾದಗೊಂಡಿದೆ. ಇದನ್ನು ಧರ್ಮ ಗ್ರಂಥಗಳ ಸಾಲಿಗೆ ಸೇರಿಸಲಾಗಿದೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರವರು ರಾಷ್ಟ್ರಪತಿಯಾಗಿದ್ದಾಗ ತಿರುಕ್ಕುರಳ್ ಉಕ್ತಿಗಳನ್ನು -’ಕುರುಳ್’ ಎಂಬ ಛಂದಸ್ಸಿನಲ್ಲಿ ಬರೆದ ಏಕೈಕ ಗ್ರಂಥವಿದು. ಎರಡು ಸಾಲುಗಳ ಪದ್ಯವಿದು. ಕುರುಳ್ ಎಂದರೆ ಚಿಕ್ಕದು ಎಂದು ಅರ್ಥ-ರಾಷ್ಟ್ರಪತಿ ಭವನದ ಗೋಡೆಗಳಲ್ಲಿ ಹಾಕಿಸಿದ್ದಾರಂತೆ. ಅಂಥ ಮಹಾನ್ ಕವಿಯ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಕನ್ನಡ ಸಂಘಟನೆಗಳು ರಾದ್ದಾಂತ ಮಾಡಿಕೊಂಡು ಕೋರ್ಟ್ ಮೆಟ್ಟಲೇರಿ ನ್ಯಾಯಾಲಯದಿಂದ ಬುದ್ಧಿವಾದ ಹೇಳಿಸಿಕೊಂಡದ್ದು ಸರಿಯಾಗಿಯೇ ಇದೆ.

ಕನ್ನಡ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾದ ಅಂಶಗಳಾದರೂ ಯಾವುದು? ಕಾವೇರಿ ನದಿನೀರು ಹಂಚಿಕೆಯಲ್ಲಿ ನಮಗೆ ಅನ್ಯಾಯ ಆಗಿದೆ; ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನ-ಮಾನ, ಹೊಗೆನ್ ಕಲ್ ವಿವಾದಗಳಲೆಲ್ಲ ನಮನ್ನು ಮಲತಾಯಿ ಧೋರಣೆಯಿಂದ ಕಾಣಲಾಗಿದೆ ಎಂಬುದು ತಾನೆ? ಸ್ವಾಮಿ, ಇದು ಬದುಕಿಗಾಗಿ ನಡೆಯುವ ಹೋರಾಟ. ಅವರು ಚೆನ್ನಾಗಿ ಜಾಣ್ಮೆಯಿಂದ ಹೋರಾಡುತ್ತಿದ್ದಾರೆ. ಸ್ವಾಭಿಮಾನವಿದ್ದರೆ ನಾವೂ ಹೋರಾಡಬೇಕು. ಆದರೆ ಆ ಹೋರಾಟ ಬೀದಿ ಹೋರಾಟವಾಗಬಾರದು.

ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಬಹುಮತಕ್ಕೆ ಪ್ರಾಶಸ್ತ್ಯ. ಇಲ್ಲಿ ಎಲ್ಲವನ್ನೂ ಕಿತ್ತಾಡಿಯೇ ಪಡೆದುಕೊಳ್ಳಬೇಕು. ತಮಿಳರಲ್ಲಿ ಆ ಕೆಚ್ಚಿದೆ. ಅಲ್ಲಿಯ ಐಎಸ್ ಅಧಿಕಾರಿಗಳು ಲಾಬಿ ಮಾಡುತ್ತಾರೆ.ಸಂಸದರು ಒತ್ತಡ ಹಾಕುತ್ತಾರೆ. ತಮ್ಮ ರಾಜ್ಯಕ್ಕೆ ಒಳ್ಳೊಳ್ಳೆಯ ಯೋಜನೆಗಳನ್ನು ಮಂಜೂರು ಮಾಡಿಸಿಕೊಳ್ಳುತ್ತಾರೆ. ಬಜೆಟ್ ನಲ್ಲಿ ಹೆಚ್ಚಿನ ಹಣ ಪಡೆದುಕೊಳ್ಳುತ್ತಾರೆ. ಅದನ್ನು ಕರ್ನಾಟಕದ ರಾಜಕಾರಣಿಗಳಿಗೆ ಮಾಡಲು ಸಾಧ್ಯವಿಲ್ಲವೇ? ನಮ್ಮ ಕರ್ನಾಟಕದ ಉದಾಹರಣೆಯನ್ನೇ ನೋಡಿ; ರಾಜ್ಯಗಳಿಗೆ ಬೇಕಾದ ರೈಲ್ವೆ ಬೇಡಿಕೆಗಳನ್ನು ಬಜೆಟಿಗಿಂತ ಮೂರು ತಿಂಗಳ ಮುಂಚಿತವಾಗಿ ಕೇಂದ್ರಕ್ಕೆ ಸಲ್ಲಿಸಬೇಕು. ಅದು ಪರಿಶೀಲನೆಗೆ ಒಳಪಡಲು ಅಷ್ಟು ಕಾಲಾವಕಾಶ ಬೇಕು. ಆದರೆ ನಮ್ಮ ಡಾ.ಯಡ್ಡಿಯೂರಪ್ಪ ಸರಕಾರ ತಮ್ಮ ಬೇಡಿಕೆ ಪಟ್ಟಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದು ಬಜೆಟ್ ಮಂಡನೆಯ ಒಂದು ವಾರಕ್ಕೆ ಮೊದಲು. ಸಾಮಾನ್ಯವಾಗಿ ಎಲ್ಲಾ ಸಂದರ್ಭದಲ್ಲೂ ನಮ್ಮ ಸರಕಾರದ್ದು ಹೆಬ್ಬಾವಿನ ನಡೆಯೇ. ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ. ತಮಿಳುನಾಡಿನಿಂದ ನಮಗೇನಾದರೂ ಅನ್ಯಾಯವಾಗಿದ್ದರೆ ನಮ್ಮ ರಾಜಕಾರಣಿಗಳೇ ಅದಕ್ಕೆ ನೇರ ಹೊಣೆಗಾರರು.

ಕೆಲವು ವರ್ಷಗಳ ಹಿಂದೆ ಕಾವೇರಿ ವಿವಾದ ತೀವ್ರವಾಗಿದ್ದ ಸಮಯ; ತಮಿಳುನಾಡು ಸರಕಾರ ದೆಹಲಿಯ ಪ್ರಗತಿ ಮೈದಾನಿನಲ್ಲಿ ಕಾವೇರಿಯ ಕುರಿತಂತೆ ಪ್ರದರ್ಶನವೊಂದನ್ನು ಆಯೋಜಿಸಿತ್ತು. ಅದಕ್ಕೆ ಹೋಗಿ ಬಂದ ನನ್ನ ಸಾಹಿತಿ ಮಿತ್ರನೊಬ್ಬ ’ಕಾವೇರಿ ಖಂಡಿತಾ ತಮಿಳುನಾಡಿನವಳೇ’ ಅಂದುಬಿಟ್ಟ. ಅವನು ಕಟ್ಟಾ ಕನ್ನಡಾಭಿಮಾನಿ.ನನಗೆ ಆಶ್ಚರ್ಯವಾಯಿತು. ಕಾವೇರಿಯ ಉಗಮವಾದ ತಲಕಾವೇರಿಯಿಂದ ಆರಂಭಗೊಂಡು ಅದು ಪೊಂಪುಹಾರ್ ನಲ್ಲಿ ಸಮುದ್ರ ಸೇರುವಲ್ಲಿಯವರಿಗಿನ ಕಾವೇರ್‍ಇ ತಟದ ಸಾಂಸ್ಕೃತಿಕ ವಿವರಗಳನ್ನು ಹೃದಯಂಗಮವಾಗಿ ನೃತ್ಯ, ಹಾಡು,ಕುಣಿತಗಳಲ್ಲಿ ರಾಜಧಾನಿಯ ಜನರಿಗೆ, ಮಾಧ್ಯಮದವರಿಗೆ ಅಯೋಜಕರು ತೋರಿಸಿಕೊಡುತ್ತಿದ್ದರಂತೆ.

ತಮಿಳಿನ ಮಹಾಕಾವ್ಯ ಆರಂಭವಾಗುವುದೇ ಕಾವೇರಿಯನ್ನು ಸ್ತುತಿಸುವುದರೊಂದಿಗೆ. ತಮಿಳಿನ ಮಹಾಕವಿ ಕಂಬನ್ ತನ್ನ ಕಂಬ ರಾಮಾಯಣದುದ್ದಕ್ಕೂ ಕಾವೇರಿಯನ್ನು ಮುದ್ದಿನಿಂದ ’ಪೊನ್ನಿ’ ಎಂದು ಕರೆಯುತ್ತಾನೆ. ಪೊನ್ನಿ ಎಂದರೆ ಬಂಗಾರ. ತಮಿಳರ ಬದುಕನ್ನು ಬಂಗಾರ ಮಾಡಿದವಳು ಅವಳು. ಕಾವೇರಿ ಮಾತೆ ತಮಿಳುನಾಡಿಗೆ ವಿಶೇಷ ಔದಾರ್ಯವನ್ನು ತೋರಿದ್ದಾಳೆ. ತಂಜಾವೂರಿನಲ್ಲಿ ದೊಡ್ಡ ಮರವೊಂದರ ರೆಂಬೆಗಳ ತೆರದಲ್ಲಿ ಅಸಂಖ್ಯ ನಿಸರ್ಗದತ್ತ ಕಾಲುವೆಗಳನ್ನು ನಿರ್ಮಿಸಿದ್ದಾಲೆ. ಹಾಗಾಗಿ ಈ ಊರು ಸದಾ ಭತ್ತದ ತೆನೆಗಳಿಂದ ತೊನೆದಾಡುತ್ತಿದೆ.

ಭಾರತದಲ್ಲಿ ಮೊತ್ತಮೊದಲ ಅಣೆಕಟ್ಟು ಕಟ್ಟಲಾಗಿದ್ದು ಎಲ್ಲಿ ಗೊತ್ತೆ? ಅದು ಇಲ್ಲಿಯೇ, ಅಂತ್ಯರಂಗವೆಂದು ಪ್ರಖ್ಯಾತವಾಗಿರುವ ಶ್ರೀರಂಗದಲ್ಲಿ. ಆದಿರಂಗ[ಶ್ರೀರಂಗಪಟ್ಟಣ] ಮಧ್ಯರಂಗ[ಶಿವನಸಮುದ್ರ]ಗಳು ಕರ್ನಾಟಕದಲ್ಲಿವೆ.ಸುಮಾರು ಎರಡನೇ ಶತಮಾದಲ್ಲಿ ಆಳುತ್ತಿದ್ದ ಚೋಳ ದೊರೆ ಕರಿಕಾಲ ಚೋಳ ಕಾವೇರಿ ನದಿಗೆ ಅಣೆಕಟ್ಟು ಕಟ್ಟಿದ ಧೀರ. ಈಗಲೂ ಸುಸ್ಥಿತಿಯಲ್ಲಿರುವ ಈ ಅಣೆಕಟ್ಟನ್ನು ೧೦೬೮ರಲ್ಲಿ ನಿರ್ಮಿಸಿರಬಹುದೆಂದು ತಜ್ನರು ಅಭಿಪ್ರಾಯಪಡುತ್ತಾರೆ. ಕಲ್ಲಣೈ ಎಂದು ಕರೆಯುತ್ತಿದ್ದ ಈ ಅಣೆಕಟ್ಟನ್ನು ಈಗ ಗ್ರಾಂಡ್ ಅಣೆಕಟ್ಟು ಎಂದು ಕರೆಯುತ್ತಾರೆ.

ಕಾವೇರಿ ನಮ್ಮವಳು; ಅದು ನಮ್ಮ ಜೀವನದಿ ಎಂದು ತಮಿಳರು ಭಾವಪರವಶವಾಗಲು ಕಾರಣವಿದೆ. ತಮಿಳುನಾಡಿಗೆ ಕಾವೇರಿಯನ್ನು ಬಿಟ್ಟರೆ ಬೇರೆ ನದಿಯಿಲ್ಲ. ಇರುವ ತಾಮ್ರಪರ್ಣಿ, ವೈಗೈ ನದಿಗಳು ಸಣ್ಣ ನದಿಗಳು ಅವು ಬೇಸಿಗೆಯಲ್ಲಿ ಬತ್ತಿ ಹೋಗುತ್ತವೆ.

ನಮಗೂ ಕಾವೇರಿ ಜೀವನದಿ ಎಂಬುದನ್ನು ದೇಶಕ್ಕೆ ತೋರಿಸಬೇಕಾಗಿದೆ. ಅದನ್ನು ಯಾರು ತೋರಿಸಬೇಕು? ನಿಸ್ಸಂದೇಹವಾಗಿ ರಾಜಕಾರಣಿಗಳೇ. ಆದರೆ ನಮ್ಮ ರಾಜಕಾರಣಿಗಳು ಯೋಚನೆ ಮಾಡುವ ರೀತಿಗೆ ಇಲ್ಲೊಂದು ಉದಾಹರಣೆಯಿದೆ. ರಾಜಕಾರಣಿಯೊಬ್ಬರ ಹೇಳಿಕೆಯಂತೆ ’ಕೃಷ್ಣೆ ಲಿಂಗಾಯಿತರ ನದಿಯಂತೆ, ಕಾವೇರಿ ಒಕ್ಕಲಿಗರನದಿ’ ಅದಕ್ಕೆ ಇರಬಹುದು ಒಗ್ಗಟ್ಟಿನ ಹೋರಾಟದ ಅವಶ್ಯಕತೆಯಿದ್ದಾಗಲೂ ಪರಸ್ಪರ ಮುಖ ತಿರುಗಿಸಿಕೊಂಡಿರುತ್ತಾರೆ.

ನಿಮಗೆ ನೆನಪಿರಬಹುದು. ಏಪ್ರಿಲ್- ಮೇ ತಿಂಗಳಿನಲ್ಲಿಯೂ ದೃಶ್ಯ ಮಾಧ್ಯಮಗಳಲ್ಲಿ ತುಂಬಿದ ಕೆಅರ್ ಎಸ್ ಪ್ರಸಾರವಾಗುತ್ತದೆ. ಅದು ತಮಿಳ್ ಲಾಬಿ. ನೀರಿದ್ದೂ ತಮಿಳುನಾಡಿಗೆ ನೀರು ಬಿಡುವುದಿಲ್ಲ.ನಾವೆಲ್ಲಾ ಜಗಳಗಂಟರು ಎಂದು ದೇಶದಾದ್ಯಂತ ಬಿಂಬಿಸಲಾಗುತ್ತದೆ. ನಮ್ಮದು ಬೌದ್ಧಿಕ ಹೋರಾಟವಾಗಬೇಕು ಅದನ್ನು ಸಾಹಿತಿ, ಕಲಾವಿದರು ಮಾಡಬಲ್ಲರು. ಶಕ್ತಿ ರಾಜಕಾರಣ ಅದನ್ನು ದಿಲ್ಲಿ ದೊರೆಗಳಿಗೆ ತಲುಪಿಸಬೇಕು. ಇದು ಒಂದಕ್ಕೊಂದು ಮೆಳೈಸಬೇಕು. ಈಗಾಗುತ್ತಿರುವುದು ಬೀದಿ ಜಗಳ.

ಕನ್ನಡ ಹೋರಾಟಗಾರರು ರಾಜಕಾರಣಿಗಳ ವಿರುದ್ಧ ಹೋರಾಡಬೇಕು. ರೈತರ ಪರ ನಿಲ್ಲಬೇಕು. ಆದರೆ ಅವರು ಹಾಗೆ ಮಾಡಲಾರರು. ಯಾಕೆಂದರೆ ಅವರಿಗೆ ಇವರಿಂದ ಲಾಭ ಇದೆ. ಇವರಿಗೆ ಅವರಿಂದ ಲಾಬ ಇದೆ.

4 comments:

ಒಬ್ಬ ಓದುಗ said...

ಸ್ವಾಮಿ, ಕನ್ನಡ ಸಂಘಟನೆಗಳು ಯಾವತ್ತೂ ತಿರುವಳ್ಳುವರ್ ನ ಅವಹೇಳನ ಮಾಡಿಲ್ಲ. ಅವರ ಬಗ್ಗೆ ಎಲ್ಲರಿಗೂ ಗೌರವ ಇದೆ. ಆದರೆ ಈವತ್ತು ತಿರುವಳ್ಳುವರ್ ಕೇವಲ ಒಬ್ಬ ದಾರ್ಶನಿಕ ಕವಿಯಾಗಿ ಮಾತ್ರ ಬೆಂಗಳೂರಿನಲ್ಲಿ ಸ್ಥಾಪನೆಯಾಗುತ್ತಿಲ್ಲ. ಅದರ ಹಿಂದೆ ರಾಜಕೀಯ ದುರುದ್ದೇಶಗಳಿವೆ ಎಂಬ ಮಾತು ನೀವೇ ಹೇಳಿದ್ದೀರಿ. ಈವತ್ತು ಅದು ಸ್ಥಾಪನೆಯಾಗುತ್ತಿರುವುದೂ ತಮಿಳು ಜನರನ್ನ ಮತಬ್ಯಾಂಕ್ ಮಾಡಿ ರಾಜಕೀಯ ಲಾಭ ಪಡೆಯುವುದಕ್ಕಾಗಿ ಮಾತ್ರ. ಪರಿಸ್ಥಿತಿ ಹೀಗಿರುವಾಗ ಅದನ್ನು ವಿರೋಧಿಸದೇ ಬೇರೇ ದಾರಿ ಏನಿದೆ?

ಈ ಪ್ರತಿಮೆ ವಿಷಯ ಜನರು ಯಾವತ್ತೋ ಮರೆತುಬಿಟ್ಟಿದ್ದರು. ತಮಿಳುನಾಡಿನ ಜೊತೆ ಇರುವ ವಿವಾದಗಳನ್ನು ಮಾತುಕತೆಗಳ ಮೂಲಕ ಪರಿಹರಿಸಿಕೊಳ್ಳುತ್ತೀವಿ ಅಂತ ಬೊಗಳೆ ಹೊಡೆಯುತ್ತಿರುವ ಯಡೆಯೂರಪ್ಪ ಅವರಿಗೆ ಪ್ರತಿಮೆ ಬಿಟ್ಟು ಬೇರೆ ಮುಖ್ಯವಾದ ವಿಷಯಗಳು ಕಣ್ಣಿಗೆ ಬೀಳಲಿಲ್ಲವಾ? ಆರೋಗ್ಯದ ಕುಂಟುನೆಪ ಹೇಳಿಕೊಂಡು ಚೆನ್ನೈ ಗೆ ಹೋಗಿ ಕರುಣಾನಿಧಿಯವರ ಕಾಲಮೇಲೆ ಬಿದ್ದು “ದಯವಿಟ್ಟು ಬೆಂಗಳೂರಿಗೆ ಬನ್ನಿ ಪ್ರತಿಮೆ ಸಮಾರಂಭದಲ್ಲಿ ಭಾಗವಹಿಸಿ” ಅಂತ ತಾವೇ ಮೇಲೆ ಬಿದ್ದು ಕೇಳಿಕೊಳ್ಳುವ ಅಗತ್ಯವೇನಿತ್ತು? ಬಿಬಿಎಂಪಿ ಚುನಾವಣೆ ಸಮಯದಲ್ಲೇ ಜ್ಞಾನೋದಯವಾಗಬೇಕಾ? ರಾಜಕಾರಣಿಗಳು ಲಾಭ ಇಲ್ಲದೆ ಯಾವ ಕೆಲಸಾನೂ ಮಾಡಲ್ಲ. ತಮ್ಮ ಸ್ವಾರ್ಥ ಸಾಧನೆಗಾಗಿ ಕನ್ನಡಿಗರ ಹಿತಾಸಕ್ತಿಗಳನ್ನು ಬಲಿಕೊಡುವ ಇವರನ್ನು ಕನ್ನಡ ಸಂಘಟನೆಗಳು ವಿರೋಧಿಸುತ್ತಿವೆ.

ನಮ್ಮಲ್ಲಿ ಸಾಹಿತ್ಯ ಕಾರ್ಯಕ್ರಮ, ಕವಿಗಳ ಬಗ್ಗೆ ಇರುವ ಶ್ರದ್ಧೆ ಎಲ್ಲರಿಗೂ ತಿಳಿದಿರುವ ವಿಷಯವೇ. ಈವತ್ತು ಕಾಳಿದಾಸನ ವಿಗ್ರಹ ಬೆಂಗಳೂರಿನಲ್ಲಿ ಇಡುತ್ತೇವೆ ಅಂದರೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. (ಆ ಸಮಾರಂಭಕ್ಕೆ ನೂರು ಜನರೂ ಸೇರುವುದಿಲ್ಲ ಬಿಡಿ). ಆದರೆ, ತಿರುವಳ್ಳುವರ್ ಪ್ರತಿಮೆಗೆ ೧ ಲಕ್ಷ ಜನರನ್ನು ಸೇರಿಸುವ, ೪೦ ಲಕ್ಷ ರೂ ಖರ್ಚು ಮಾಡುವ, ತಮಿಳಲ್ಲಿ ಆಹ್ವಾನ ಪತ್ರಿಕೆ ಮುದ್ರಿಸುವದನ್ನು ನೋಡಿದರೆ ಈ ಕಾರ್ಯಕ್ರಮದ ಹಿಂದೆ ಇರುವ (ದುರ್) ಉದ್ದೇಶ ಅರ್ಥವಾಗುತ್ತದೆ.

ನೀವು ಹೇಳಿರೋದು ನಿಜ. ಹೋರಾಟ ಜಾಣ್ಮೆಯಿಂದ ಕೂಡಿರಬೇಕು. ಬೀದಿ ಹೋರಾಟವಾಗಬಾರದು. ಆದರೆ ಜಾಣ್ಮೆಯಿಂದ ಕನ್ನಡಿಗರ ಹಿತಾಸಕ್ತಿ ಕಾಪಾಡಬೇಕಾದ ನಮ್ಮ ಘನ ಸರಕಾರ ವೇ ವೋಟ್ ಬ್ಯಾಂಕ್ ಸೃಷ್ಟಿ ಮಾಡುತ್ತಿರುವಾಗ, ಕನ್ನಡ ಹೋರಾಟಗಾರ ಬೀದಿಗಿಳಿದು ಹೋರಾಡಲೇಬೇಕಾದ ಪರಿಸ್ಥಿತಿ ಬಂದಿದೆ. ಇದು ತಮಿಳರ ವಿರುದ್ಧ ನಡೆಯುತ್ತಿರುವ ಹೋರಾಟವಲ್ಲ. ನಾವೇ ಆರಿಸಿ ಕಳಿಸಿರುವ ನಮ್ಮ ರಾಜಕಾರಣಿಗಳ ವಿರುದ್ಧವೇ ಹೋರಾಡಬೇಕಾದ ನೋವಿನ ಸಂಗತಿಯಾಗಿದೆ.

ಒಂದು ಉದಾಹರಣೆ ತಗೊಳ್ಳಿ. ನಮ್ಮ ಯಡಿಯೂರಪ್ಪನೋರು ಇನ್ನು ಮುಂದೆ ಸರಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಭಾವುಟ ಹಾರಿಸಬಾರದು ಅಂತ ಆಜ್ಞೆ ಹೊರಡಿಸಿಬಿಟ್ಟರು. ಯಾವೊಬ್ಬ ಕನ್ನಡ ಸಾಹಿತಿನಾದರೂ ಬಾಯಿ ಬಿಟ್ಟಿದ್ದರೆ ಕೇಳಿ. ಕೊನೆಗೆ ನಮ್ಮ ರಕ್ಷಣೆಗೆ ಬಂದೋರು ರಕ್ಷಣಾ ವೇದಿಕೆಯೋರು. ಆವರ ಹೋರಾಟದ ಕಾರಣದಿಂದಲೇ ಆಮೇಲೆ ಯಡಿಯೂರಪ್ಪನೋರು ಆಜ್ಞೆ ವಾಪಸ್ ತಂಡ್ರು ಅನ್ನೋದು ಈಗ ಇತಿಹಾಸ. ಈಗಹೇಳಿ. ಇಂತ ದರಿದ್ರ ಲೀಡರುಗಳಿಂದ ಕನ್ನಡದ ಹಿತಾಸಕ್ತಿ ಕಾಪಾಡಲು ಹೇಗೆ ಸಾಧ್ಯ. ಆವಾಗಾವಾಗ ಇವರು ಉದುರಿಸೋ ಅಣಿಮುತ್ತುಗಳು “ಕನ್ನಡ ವಿಷಯದಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳಲ್ಲ” ಅನ್ನೋ ಬೊಗಳೇ ಮಾತುಗಳನ್ನ ಕೇಳಿಕೊಂಡು ನಿಜವಾದ ಕನ್ನಡಿಗ ಹೇಗೆ ಸುಮ್ಮನಾಗಿರಬಲ್ಲ?

ಈಗಿನ ವಾಟಾಳ್ ನಾಗರಾಜ್ ಹಿಂದಿನ ವಾಟಾಳ್ ನಾಗರಾಜ್ ಅಲ್ಲ ಬಿಡಿ. ಯಾವಾಗ್ಲೂ ಎಲ್ಲಿ ಪ್ರಚಾರ ಸಿಗುತ್ತೋ ಅಲ್ಲಿ ಈ ವ್ಯಕ್ತಿ ಹಾಜರ್. ಆದ್ರೆ ನಾರಾಯಣ ಗೌಡರನ್ನು ಅವರಿಗೆ ದಯವಿಟ್ಟೂ ಹೋಲಿಸಬೇಡಿ. ಯಾವುದೇ ಅಧಿಕಾರ ಇಲ್ಲದಿದ್ದರೂ ಕನ್ನಡ ಹೋರಾಟಗಾರರನ್ನು ಸಂಘಟಿಸಿ ಅನೇಕ ವಿಷಯಗಳಲ್ಲಿ ಕನ್ನಡಕ್ಕೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಪ್ರಯತ್ನಿಸುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳ ತೃಣಮಾತ್ರ ಬೆಂಬಲ ಇಲ್ಲದಿದ್ದರೂ ಅವರು ಈ ಕೆಲಸ ಮಾಡುತ್ತಿದ್ದಾರೆ. ರಾಜಕಾರಣಿಗಳು ಹಾಗಿರಲಿ, ಗೋಕಾಕ್ ಚಳುವಳಿಯ ನಂತರ ಯಾವುದೇ ಸಾಹಿತಿ ಕಲಾವಿದರೂ ಕನ್ನಡ ಚಳುವಳಿಯಲ್ಲಿ ಭಾಗವಹಿಸಿಲ್ಲ ಬಿಡಿ. ಅಂತಹ ಸ್ಥಿತಿ ನಮ್ಮಲ್ಲಿದ್ದಿದ್ದರೆ ನಮಗೆ ಕರವೇ ಏತಕ್ಕೆ ಬೇಕಿರುತ್ತಿತ್ತು?

sunaath said...

ಸುರಗಿ,
ವಿಷಯ ಇಷ್ಟು ಸರಳವಾಗಿಲ್ಲ. There is more than meets the eye. ಯಾವುದೇ ಊರಿನಲ್ಲಿ ಒಂದು ಗುಂಪಿನ ಜನ ಸಾಕಷ್ಟು ಪ್ರಮಾಣದಲ್ಲಿದ್ದರೆ, ಅವರು ಅಲ್ಲಿ ತಮ್ಮಲ್ಲಿಯ ದೊಡ್ಡ ಮನುಷ್ಯನೊಬ್ಬನ ಪ್ರತಿಮೆ ಸ್ಥಾಪಿಸಬಯುಸುವುದು ಸಹಜ. ಆದರೆ, ತಮಿಳರು ಬೆಂಗಳೂರಿನಲ್ಲಿಯೇ ಕನ್ನಡಿಗರ ಮೇಲೆ ಮಾಡುತ್ತಿರುವ ದಬ್ಬಾಳಿಕೆ
ಯಾರಿಗೆ ಗೊತ್ತಿಲ್ಲ? ಅಲ್ಲದೇ, ಯಡಿಯೂರಪ್ಪ ಮಾಡುತ್ತಿರುವದು ರಾಜಕೀಯ.
ಹಾಗಂತ ನಾವು ಪ್ರತಿಮೆ ಸ್ಥಾಪನೆ ವಿರೋಧಿಸದೇ, ನಮ್ಮ ಕಾರ್ಯಗಳಿಗಾಗಿ ಜಾಣತನ ತೋರಿಸಬೇಕಷ್ಟೇ.

ಪುರುಷೋತ್ತಮ ಬಿಳಿಮಲೆ said...

Good and balanced article. Congratulations.

ಸುಧೇಶ್ ಶೆಟ್ಟಿ said...

ನೀವು ಹೇಳಿದ ವಿಚಾರಗಳಿಗೆ ಹ್ಯಾಟ್ಸ್ ಆಫ್....