Thursday, November 19, 2009

ಶೋಭಾ ಮಾಡಿದ ತಪ್ಪಾದರೂ ಏನು?





ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾಜಿ ಸಚಿವೆ ಶೋಭಾ ಕರಂದ್ಲಾಜೆಯವರ ರಾಜಿನಾಮೆಯನ್ನು ಕೇಂದ್ರ ವಸ್ತುವಾಗಿರುವ ’ಯಡಿಯೂರಪ್ಪ ಪ್ರಹಸನ’ದ ಹದಿನಾಲ್ಕು ದಿನಗಳ ಧಾರಾವಾಹಿಯನ್ನು ನೋಡುತ್ತಿರುವಾಗ ನನಗೆ ನೆನಪಿಗೆ ಬಂದದ್ದು,ನನ್ನ ಅಜ್ಜಿ ಬಾಲ್ಯದಲ್ಲಿ ಹೇಳುತ್ತಿದ್ದ ಬ್ರಹ್ಮ ರಾಕ್ಷಸನ ಕಥೆ. ಬಹಳ ರಂಜನಿಯವಾದ ಈ ಕಥೆಯಲ್ಲಿ ಬ್ರಹ್ಮರಾಕ್ಷಸನ ಪ್ರಾಣ ಏಳು ಸಮುದ್ರದಾಚೆಗಿರುವ ದ್ವೀಪದ ಯಾವುದೋ ಪೊಟರೆಯಲ್ಲಿರುವ ಪಕ್ಷಿಯಲ್ಲಿರುತ್ತದೆ. ಆ ಪಕ್ಷಿಯನ್ನು ಹುಡುಕಿ ಅದಕ್ಕೆ ಚಿತ್ರಹಿಂಸೆ ನೀಡಿದರೆ ಇಲ್ಲಿ ರಾಕ್ಷಸ ವಿಲಿವಿಲಿ ಒದ್ದಾಡುತ್ತಾನೆ. ಅಲ್ಲಿ ಅದರ ಕಾಲು ಮುರಿದರೆ ಇಲ್ಲಿ ರಾಕ್ಷಸನ ಕಾಲು ಮುರಿಯುತ್ತದೆ. ಅಲ್ಲಿ ಗೋಣು ಮುರಿದರೆ ಇಲ್ಲಿ ರಾಕ್ಷಸ ಸಾಯುತ್ತಾನೆ.
’ಯಡಿಯೂರಪ್ಪ ಪ್ರಹಸನ’ದಲ್ಲಿ ಪ್ರಾಣ ಪಕ್ಷಿಯನ್ನು ಹಿಂಸಿಸಲಾಗಿದೆ. ನಾಯಕ ವಿಲಿವಿಲಿ ಒದ್ದಾಡುತ್ತಿದ್ದಾನೆ.

ಶೋಭಾ ಸಿಕ್ಕ ಸಿಕ್ಕ ಮಾಧ್ಯಮಗಳಲೆಲ್ಲಾ ಪ್ರಶ್ನಿಸುತ್ತಿದ್ದಾರೆ ’ನಾನು ಮಾಡಿದ ತಪ್ಪೇನು?’

ನಾವು ಕೂಡಾ ನಮ್ಮಲ್ಲೇ ಪ್ರಶ್ನಿಸಿಕೊಳ್ಳುತ್ತೆದ್ದೇವೆ ’ಶೋಭಾ ಮಾಡಿದ ತಪ್ಪಾದರೂ ಏನು?’
ನಮ್ಮ ರಾಜ್ಯ ಸಚಿವ ಸಂಪುಟದಲ್ಲಿ ಮುವತ್ತಮೂರು ಜನ ಸಚಿವರಿದ್ದಾರೆ. ಅದರಲ್ಲಿರುವ ಏಕೈಕ ಮಹಿಳಾ ಸಚಿವೆ ಶೋಭಾ ಕರಂದ್ಲಾಜೆ. ರಾಜ್ಯದ ಮೂರು ಕೋಟಿ ಮಹಿಳೆಯರ ಪ್ರತಿನಿಧಿ. ಆದರೂ ಆಕೆಯ ರಾಜಿನಾಮೆಯ ಬಗ್ಗೆ ಒಂದೇ ಒಂದು ಮಹಿಳಾ ಧ್ವನಿಯಿಲ್ಲ ಯಾಕೆ? ಆಕೆಯ ರಾಜಿನಾಮೆ ಪಡೆಯಬಾರದು ಎಂದು ಆಕೆ ಪ್ರತಿನಿಧಿಸುತ್ತಿರುವ ಯಶವಂತಪುರದ ಒಂದಷ್ಟು ಜನ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದರು. ಅಲ್ಲಿಯೂ ಮಹಿಳೆಯರ್ಯಾರೂ ಕಾಣಿಸಲಿಲ್ಲ. ಹೋಗಲಿ ಅವರ ಊರಿನ ಜನರಾದರೂ ಪ್ರತಿಕ್ರಿಯಿಸಿದರಾ ಅದೂ ಇಲ್ಲ. ಬೆಂಗಳೂರಿನಲ್ಲಿ ’ದಕ್ಷಿಣ ಕನ್ನಡ ಗೌಡರ ಸಂಘ’ ಒಂದಿದೆ. ಅದರಲ್ಲಿರುವವರೆಲ್ಲಾ ಆಕೆಯ ಬಂಧು-ಬಾಂಧವರೇ. ಕಳೆದ ಚುನಾವಣೆಯಲ್ಲಿ ಇವರೆಲ್ಲಾ ಯಶವಂತಪುರ ತುಂಬೆಲ್ಲಾ ಓಡಾಡಿ ಆಕೆಯ ಪರವಾಗಿ ಮತ ಯಾಚಿಸಿದ್ದರು. ಕೈಲಾದ ಆರ್ಥಿಕ ಸಹಾಯವನ್ನು ನೀಡಿದ್ದರು. ಈಗ ಅವರೆಲ್ಲಾ ಆಕೆಯ ಹೆಸರೆತ್ತಲೂ ಇಷ್ಟ ಪಡುವುದಿಲ್ಲ. ಯಾಕೆ?

ಯಾಕೆಂದರೆ ಆಕೆ ಹಿಂದಿನಂತಿಲ್ಲ; ಆಕೆಗೆ ಅಹಂಕಾರ ಬಂದಿದೆ ಎಂಬುದು ಅವರೆಲ್ಲರ ಆಪಾದನೆ. ಅದನ್ನು ರೆಡ್ಡಿ ಬಣದ ಶಾಸಕರು ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ; ’ಶೋಭಾ ಸೂಪರ್ ಸಿಎಂ ತರಹ ವರ್ತಿಸುತ್ತಾರೆ’.
ಅಹಂಕಾರ ಮತ್ತು ಸ್ವಾಭಿಮಾನದ ಮಧ್ಯೆ ಬಹಳ ತೆಳುವಾದ ಗೆರೆಯಿರುತ್ತದೆ. ಮಹಿಳೆಯ ಸ್ವಾಬಿಮಾನ ಪುರುಷನ ಕಣ್ಣಿಗೆ ಅಹಂಕಾರವಾಗಿ ಕಾಣಿಸಬಹುದು. ಶೋಭಾ ಸ್ವಾಬಿಮಾನಿ. ಅದವಳ ಹುಟ್ಟುಗುಣ.
ಶೋಭಾ ರೈತಾಪಿ ಮನೆತನದಲ್ಲಿ ಹುಟ್ಟಿದ ಒಬ್ಬ ಸಾಮಾನ್ಯ ಹೆಣ್ಣುಮಗಳು. ಅವಿಭಜಿತ ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮ ಒಂದು ಸಾಧಾರಣ ಹಳ್ಳಿ. ಆದರೆ ಆಕೆ ಬೆಳೆದ ಪರಿಸರ ಸಾಮಾನ್ಯದಲ್ಲ. ಸದಾ ನಿಗೂಢತೆಯನ್ನು ಉಳಿಸಿಕೊಂಡು,ಸವಾಲುಗಳನ್ನು ಎಸೆಯುತ್ತಲಿರುವ ಮಲೆನಾಡಿನ ಬೆಟ್ಟ,ಗುಡ್ಡ, ಕಾನನ, ನೀಲ ಸಮುದ್ರ. ಇದು ಆಕೆಯಲ್ಲಿ ಹೋರಾಟದ ಮನೋಭೂಮಿಕೆಯನ್ನು ರೂಪಿಸಿತ್ತು. ಜೊತೆಗೆ ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ತಿನ ಒಡನಾಟ ಶಿಸ್ತನ್ನು ರೂಡಿಸಿತ್ತು. ಪುತ್ತೂರಿನ ಸೈಂಟ್ ಪಿಲೋಮಿನ ಕಾಲೇಜ್ ಓದಿನ ಹಸಿವನ್ನು ಹೆಚ್ಚಿಸಿತ್ತು. ಮಂಗಳೂರಿನ ಪ್ರತಿಷ್ಠಿತ ಕಾಲೇಜ್ ರೋಷನಿ ನಿಲಯದಲ್ಲಿ ಸಮಾಜ ಸೇವೆಯಲ್ಲಿ ಸ್ನಾತಕೋತರ ಪದವಿ ಪಡೆದ ಪ್ರತಿಭಾವಂತೆ ಈಕೆ. ಮುಂದೆ ಸಂಘ ಪರಿವಾರದ ಮೌಲ್ಯಗಳು ಆಕೆಯ ವ್ಯಕ್ತಿತ್ವದ ಭಾಗವಾಯ್ತು. ಸಮಾಜ ಸೇವೆ ಅವರ ಗುರಿಯಾಯ್ತು. ಆ ಸೇವಾ ಮನೋಭಾವವೇ ಸುನಾಮಿ ಸಂತ್ರಸ್ತರ ನೆರವಿಗೆ ಧಾವಿಸಿತು; ಹೆಣಗಳನ್ನು ಎತ್ತಿತು.ಸಂಘ ಪರಿವಾರ ಆಕೆಯ ನಿಷ್ಟೆಯನ್ನು ಗುರುತಿಸಿತು. ಹಾಗಾಗಿ ರಾಜಕೀಯದ ಹಿನ್ನೆಲೆಯಿಲ್ಲದಿದ್ದರೂ ಶಕ್ತ ರಾಜಕಾರಣದ ಪ್ರವೇಶ ಸುಲಲಿತವಾಯಿತು.

ತನ್ನ ಹುಟ್ಟೂರಿಗೆ ಹೊರತಾದ ಅಪರಿಚಿತ ಕ್ಷೇತ್ರ ಯಶವಂತಪುರದಿಂದ ಗೆದ್ದು ಬಂದು ಮಂತ್ರಿಯಾಗುವ ಅವಕಾಶ ಒದಗಿ ಬಂದಾಗಲೂ ಆಕೆ ಅದಕ್ಕಾಗಿ ಸಾಕಷ್ಟು ಪೂರ್ವಸಿದ್ಧತೆಯನ್ನು ಮಾಡಿಕೊಂಡಿದ್ದರು. ತನ್ನ ವಿದ್ಯಾ ಗುರುಗಳಾಗಿದ್ದ ಪ್ರಭಾಕರ ರಾವ್ ಅವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡರು. ಶೋಭಾ ಓದಿದ ಸಮಾಜ ಸೇವೆಗೆ ರಿಲೇಟ್ ಆಗುವ ’ಗ್ರಾಮೀಣಾಬಿವೃದ್ಧಿ ಮತ್ತು ವಿಲೇಜ್ ಪಂಚಾಯತ್’ ಪ್ರಭಾಕರ್ ಅವರ ಪಿ.ಎಚ್.ಡಿ ವಿಷಯವಾಗಿತ್ತು. ಸಮಾಜ ಸೇವೆಗೆ ಹೆಚ್ಚು ಅವಕಾಶಗಳಿರುವ, ನೀರ್ ಸಾಬ್ ಎಂದೇ ಪ್ರಖ್ಯಾತಿ ಗಳಿಸಿರುವ ನಜಿರ್ ಸಾಬಿ ನಿರ್ವಹಿಸಿದ ಗ್ರಾಮೀಣಬಿವೃದ್ದಿ ಮತ್ತು ಪಂಚಾಯತ್ ರಾಜ್ ಖಾತೆಯನ್ನೇ ಶೋಭಾ ಮೆಚ್ಚಿ ಆಯ್ಕೆ ಮಾಡಿಕೊಂಡಿದ್ದರು. ಎಂ.ವೈ.ಘೋರ್ಪಡೆ, ಎಂ.ಪಿ. ಪ್ರಕಾಶ್ ನಂತವರು ಕೆಲಸ ಮಾಡಿದ ಖಾತೆಯಿದು. ಕರ್ನಾಟಕಾದ್ಯಂತ ಹರಡಿಕೊಂಡಿರುವ, ಯಾರೇ ಮಂತ್ರಿಯಾದರೂ ಸದಾ ಸುದ್ದಿಯಲ್ಲಿರುವ ಖಾತೆಯಿದು. ಶೋಭಾ ಪಾದರಸದಂತೆ ಓಡಾಡುತ್ತಾ ಕೆಲಸವೂ ಮಾಡಿಕೊಂಡಿದ್ದರು. ಆದರೂ ಶೋಭಾ ಸಂಪುಟದಿಂದ ಕಿತ್ತೊಗೆಯಲ್ಪಟ್ಟರು. ಯಾಕೆ?

ಆಕೆಯ ಮೇಲೆ ಭ್ರಷ್ಟಾಚಾರದ ಆರೋಪಗಳಿಲ್ಲ, ಹಗರಣಗಳಿಲ್ಲ. ಇಲಾಖೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ದೂರುಗಳಿಲ್ಲ. ಹೈಕಮಾಂಡ್ ಆಕೆಯ ರಾಜಿನಾಮೆ ಕೇಳುವಾಗ ಅದಕ್ಕೆ ಕಾರಣಗಳನ್ನೇ ನೀಡಿಲ್ಲ.ಆದರೂ ಆಕೆಯ ರಾಜಿನಾಮೆಗಾಗಿ ಏಕಕಾಲದಲ್ಲಿ ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿ ರಂಗಮಂದಿರಗಳಲ್ಲಿ ಹದಿನೈದು ದಿನಗಳ ಪ್ರಹಸನ ನಡೆಯಿತು. ನಾಟಕದ ಫಲಶ್ರುತಿಯೆಂದರೆ ಶೋಭಾ ದುರಂತನಾಯಕಿಯಾಗಿ ಹೊರ ಹೊಮ್ಮಿದಳು.
ದುರಂತ ನಾಯಕನ ಕಲ್ಪನೆ ಗ್ರೀಕ್ ನಾಟಕಗಳ ಕೊಡುಗೆ. ಧೀರೋದ್ದಾತ ನಾಯಕನ ಎಲ್ಲಾ ಗುಣಲಕ್ಷಣಗಳಿದ್ದಾಗ್ಯೂ ಆತನ ಮಾನವಸಹಜವಾದ ದೌರ್ಬಲ್ಯವೊಂದು ಆತನನ್ನು ಪತನದಂಚಿಗೆ ತಳ್ಳಿಬಿಡುತ್ತದೆ. ದೇವತೆಗಳು ಕೂಡ ಅವನನ್ನು ಅಲ್ಲಿಂದ ಮೇಲೆತ್ತಲಾರರು. ಅಂತಹ ದೌರ್ಬಲ್ಯವೊಂದು ಶೋಭನಲ್ಲಿತ್ತೆ?

ಯಡಿಯೂರಪ್ಪ ಪ್ರಹಸನದಲ್ಲಿ ಶೋಭಾ ಮಾಧ್ಯಮವನ್ನು ಎದುರಿಸಿದ ರೀತಿಯಲ್ಲೇ ಗೊತ್ತಾಗುತ್ತದೆ; ಆಕೆ ಸ್ವಾಬಿಮಾನದ ದಿಟ್ಟ ಹೆಣ್ಣು ಮಗಳು. ಆಕೆಯಲ್ಲಿ ಆತ್ಮ ವಿಶ್ವಾಸ ತುಂಬಿ ತುಳುಕುತ್ತಿತ್ತು. ಪತ್ರಕರ್ತರ ಪ್ರಶ್ನೆಗಳಿಗೆ ಅಳುಕಿಲ್ಲದೆ ಉತ್ತರಿಸುತ್ತಿದ್ದರು. ಕಾಂಟ್ರವರ್ಸಿ ಆಗಬಹುದಾಗಿದ್ದ ಪ್ರಶ್ನೆಗಳಿಗೆ ’ನನಗೆ ಗೊತ್ತಿಲ್ಲ, ನನ್ನಲ್ಲೂ ಆ ಪ್ರಶ್ನೆ ಇದೆ, ಯಾಕೆ ಅಂತಹ ಗೊತ್ತಾಗ್ಲಿಲ್ಲ, ’ಅದು ಹಿರಿಯರ ತೀರ್ಮಾನ...’ ಎಂಬ ಜಾಣತನದ ಉತ್ತರಗಳನ್ನು ನೀಡಿ ಜಾರಿಕೊಳ್ಳುತ್ತಿದ್ದರು. ’ನನಗನ್ನಿಸುತ್ತದೆ...’ ಎಂದು ತನ್ನೊಳಗೆ ಮಾತಾಡಿಕೊಂಡಂತೆ ಮಾತು ಆರಂಭಿಸಿದರೆಂದರೆ ತನ್ನ ನಿಲುವನ್ನು ಸ್ಪಷ್ಟಪಡಿಸುವುದರೊಂದಿಗೆ ಬೇರೆಯವರಿಗೆ ತಲುಪಿಸುವ ಸಂದೇಶವೂ ಅದರಲ್ಲಿ ಅಡಕವಾಗಿದೆ ಎಂದೇ ಅರ್ಥ. ಇಂಥ ಜಾಣೆಯೆದುರು ಬಳ್ಳಾರಿ ಗಣಿ ದೊರೆಗಳ ಪರಿಶ್ರಮದಿಂದ ಸಂಸತ್ ಸದಸ್ಯೆಯಾದ ಶಾಂತಳ ಸೌಂಡ್ ಬೈಟ್ ನ್ನು ಹೋಲಿಸಿ ನೋಡಿ; ’ನಾಲಗೆ ಕುಲವನರುಹಿತು’ ಎಂದು ಇಂತಹ ಸಂದರ್ಭವನ್ನು ನೋಡಿಯೇ ಪಂಪ ಬರೆದಿರಬೇಕೆನಿಸುತ್ತದೆ.

’ಯಡಿಯೂರಪ್ಪ ಪ್ರಹಸನ’ದಲ್ಲಿ ’ಮೇಲ್ ಇಗೋ’ ಒಟ್ಟಾಗಿ ಕೆಲಸ ಮಾಡಿತ್ತೆ? ಹೌದೆಂದು ಕಾಣುತ್ತದೆ. ಅದಕ್ಕೆ ಕಾರಣವಾದದ್ದು ಆಕೆಯ ಕೆಲಸದ ವೈಖರಿ; ತನ್ನ ಖಾತೆಯ ಸಮರ್ಥ ನಿರ್ವಹಣೆ. ಸಾಮಾನ್ಯವಾಗಿ ಯಾರನ್ನೂ ಹೊಗಳದ ವಿರೋಧ ಪಕ್ಷದ ನಾಯಕ ಉಗ್ರಪ್ಪನವರು ಅವರ ಕಾರ್ಯದಕ್ಷತೆಯನ್ನು ಮುಕ್ತಕಂಠದಿಂದ ಹೊಗಳಿ ಅಕೆಗೆ ಗೃಹ ಮಂತ್ರಿಯಾಗುವ ಯೋಗ್ಯತೆ ಇದೆಯೆಂದು ಹೇಳಿದ್ದಾರೆ.ಅವರು ಪ್ರತಿಪಕ್ಷದ ನಾಯಕನಿರಬಹುದು ಆದರೂ ಕಲ್ಲಿನಲ್ಲಿ ಮೊಸರು ಹುಡುಕುವ ಉಗ್ರಪ್ಪನಂಥ ಉಗ್ರ ಮಾತುಗಾರನ ಬಾಯಿಯಿಂದ ಹೊಗಳಿಸಿಕೊಳ್ಳುವುದೆಂದರೆ ಸಾಮಾನ್ಯ ಮಾತಲ್ಲ.
ಶೋಭಾ ಮುಖ್ಯಮಂತ್ರಿ ಜೊತೆ ಹೊಂದಿದ್ದ ಆತ್ಮೀಯ ಸಂಬಂಧ ’ಎಲ್ಲಾ ಗುಣಗಳನ್ನು ಮಸಿ ನುಂಗಿಬಿಡ್ತು’ ಎಂಬ ಗಾದೆಯಂತಾಯ್ತು. ಇಲ್ಲವಾದರೆ ರೇಣುಕಾಚಾರ್ಯಾನಂತಹ ಕಚ್ಚೆ ಹರುಕ, ಕ್ಷುದ್ರ ಜಂತು ಆಕೆಯ ಮೇಲೆರಗಲು ಸಾಧ್ಯವಿತ್ತೆ? ಅವರು ಆರೋಗ್ಯಕರ ಅಂತರವನ್ನು ಕಾಯ್ದುಕೊಂಡಿದ್ದರೆ ಇಷ್ಟು ದೊಡ್ಡ ಪ್ರಹಸನವಾಗುತ್ತಿರಲಿಲ್ಲವೇನೋ...ಅದನ್ನು ಕಣ್ಣು ಕುಕ್ಕುವಂತೆ ಸಾರ್ವಜನಿಕಗೊಳಿಸಿದ್ದು ಅವರು ಮಾಡಿದ ಬಹುದೊಡ್ಡ ತಪ್ಪು. ಅವರ ಸಂಬಂಧ ಸಚಿವೆಯ ಕಾರ್ಯವೈಖರಿಯಲ್ಲಿ ಪ್ರತಿಫಲನಗೊಳ್ಳುತ್ತಿತ್ತು.ಎಲ್ಲಾ ಸಚಿವರ ಖಾತೆಗಳಲ್ಲಿ ಮೂಗು ತೂರಿಸುತ್ತಾರೆ ಎಂದು ಶಾಸಕರೊಬ್ಬರು ಆರೋಪಿಸುತ್ತಾರೆ; ಸಚಿವರಲ್ಲ. ಮುಖ್ಯಮಂತ್ರಿಗಳ ಬಳಿಗೆ ಬರುವ ಫೈಲುಗಳನ್ನೆಲ್ಲಾ ಅವರು, ’ಶೋಭಾ ಒಮ್ಮೆ ನೋಡಿ ಬಿಡಲಿ’ ಅನ್ನುತ್ತಿದ್ದರಂತೆ. ಬಹುಶಃ ಮುಖ್ಯಮಂತ್ರಿಗಳ ಕಾರ್ಯ ಬಾಹುಳ್ಯ ಅವರು ಇನ್ನೊಬ್ಬ ಆಪ್ತ ಸಚಿವರನ್ನು ಅವಲಂಭಿಸುವಂತೆ ಮಾಡಿರಬಹುದು. ತಮಗೆ ವಹಿಸಿದ ಕೆಲಸವನ್ನು ಶೋಭಾ ತುಂಬಾ ಕಟ್ಟುನಿಟ್ಟಾಗಿ ಪಾಲಿಸಿರಬಹುದು. ಇದೇ ’ಸೂಪರ್ ಸಿ.ಎಂ’ ಎಂಬ ಆಪಾದನೆಗೆ ಕಾರಣವಾಗಿರಬಹುದು.

ಇದೆಲ್ಲಾ ’ಬಹುದು’ ಸಾಮ್ರಾಜ್ಯ. ಆದರೆ ಎದ್ದು ಕಾಣುವ, ಅತೃಪ್ತರನ್ನು ಮತ್ತಷ್ಟು ಕುದಿಸುವ ಕಾರಣವೊಂದಿದೆ.ಅದು, ಇದುವರೆಗೆ ನಡೆದುಕೊಂಡು ಬಂದ ಸಂಪ್ರದಾಯದಂತೆ ಕ್ಯಾಬಿನೆಟ್ ಬ್ರಿಫಿಂಗ್ ಅನ್ನು ವಾರ್ತಾ ಸಚಿವರು ಅಥವಾ ಸಂಪುಟದ ಹಿರಿಯ, ಅನುಭವಿ ಸಚಿವರು ನಡೆಸುತ್ತಿದ್ದರು. ಆದರೆ ಅದನ್ನು ಹೊಸಬಳಾದ ಶೋಭಾಗೆ ಮುಖ್ಯಮಂತ್ರಿಗಳು ಕೊಟ್ಟರು.ಇದು ಹಲವು ಸಚಿವರಿಗೆ ಇಷ್ಟವಾಗಲಿಲ್ಲ. ಅದನ್ನು ನಯವಾಗಿ ಆಕೆ ತಿರಸ್ಕರಿಸಬಹುದಿತ್ತು ಆದರೆ ಆಕೆ ಹಾಗೆ ಮಾಡಲಿಲ್ಲ. ಶೋಭಾ ಬ್ರಹ್ಮಚಾರಿಣಿಯಾಗಿರಬಹುದು ಆದರೆ ಸನ್ಯಾಸಿಯಲ್ಲ. ಬ್ರಹ್ಮಚರ್ಯಕ್ಕೂ ಸನ್ಯಾಸತ್ವಕ್ಕೂ ಅಪಾರ ವ್ಯತ್ಯಾಸವಿದೆ. ಬ್ರಹ್ಮಚರ್ಯ, ಸಮಾಜದಲ್ಲಿದ್ದುಕೊಂಡೇ ಯಾವುದೋ ಒಂದು ಸಾಧನೆಗಾಗಿ ಸಂಕಲ್ಪ ತೊಟ್ಟು ವೈವಾಹಿಕ ಬಂಧನಗಳಿಂದ ದೂರವಿರುವುದು. ಸನ್ಯಾಸತ್ವ ಎಂದರೆ ಸಮಾಜದಿಂದ ದೂರವಾಗಿ, ಏಕಾಂತದಲ್ಲಿದ್ದು ಆತ್ಮೋನ್ನತಿಗಾಗಿ, ಸಮಾಜದ ಒಳಿತಿಗಾಗಿ ಚಿಂತನೆ ನಡೆಸುವುದು. ಈ ಅರ್ಥದಲ್ಲಿ ಶೋಭಾ ರಾಗ ದ್ವೇಷಾದಿ ಭಾವನೆಗಳನ್ನು ಮೀರಿದವರೇನಲ್ಲ!
ಒಬ್ಬ ಗಂಡಸಿಗೆ ಅವಮಾನ ಮಾಡಬೇಕಾದರೆ ಅವನನ್ನು ಕೆರಳಿಸಬೇಕಾದರೆ ಏನು ಮಾಡಬೇಕು? ಅವನಿಗೆ ಸಂಬಂಧಪಟ್ಟ ಹೆಣ್ಣೊಬ್ಬಳನ್ನು ಕೆಣಕಬೇಕು; ಅವಮಾನಿಸಬೇಕು; ಚಾರಿತ್ರ್ಯವಧೆ ಮಾಡಬೇಕು.
ಸ್ವಸಾಮರ್ಥ್ಯದಿಂದ ತನ್ನ ಕೇತ್ರದಲ್ಲಿ ಹಂತ ಹಂತವಾಗಿ ಮೇಲೆರುತ್ತಿರುವ ಮಹಿಳೆಯನ್ನು ಪ್ರಪಾತಕ್ಕೆ ದೂಡಿಬಿಡಲು ಏನು ಮಾಡಬೇಕು? ಅವಳ ಚಾರಿತ್ಯವಧೆ ಮಾಡಿದರಾಯ್ತು.
ಇಲ್ಲಿ ಎರಡೂ ಆಗಿದೆ. ಶೋಭಾಳ ಚಾರಿತ್ರ್ಯ ವಧೆಯನ್ನು ಕೇವಲ ರೆಡ್ಡಿ ಬಣದವರು ಮಾತ್ರ ಮಾಡಲಿಲ್ಲ. ಮುಖ್ಯಮಂತ್ರಿಗಳು ಅದಕ್ಕೆ ತುಪ್ಪ ಎರೆದಿದ್ದಾರೆ. ಆಕೆಯ ರಾಜಿನಾಮೆಯನ್ನು ಪಡೆದುಕೊಳ್ಳುವ ಸಂದರ್ಭ ಬಂದಾಗ ಸಾರ್ವಜನಿಕವಾಗಿ ಕಣ್ಣೀರು ಹಾಕಿ ಮುಖ್ಯಮಂತ್ರಿ ಘನತೆಗೆ ಕುಂದು ತಂದಿದ್ದಾರೆ. ತನ್ನ ದೌರ್ಬಲ್ಯವನ್ನು ಜಗಜ್ಜಾಹಿರುಗೊಳ್ಸಿದ್ದಾರೆ. ಅಷ್ಟಿದ್ದರೆ ಅವರು ಆಕೆಯನ್ನು ಸಂಪುಟದಿಂದ ಕೈ ಬಿಡಲೇಬಾರದಿತ್ತು. ಅದದ್ದಾಗಲಿ ಎಂದು ತಮ್ಮ ನಿಲುವಿಗೇ ಬದ್ಧರಾಗಿರಬೇಕಿತ್ತು.ಆತ್ಮೀಯರ ಸಲಹೆಗಳನ್ನು ಪಡೆಯಬಹುದಿತ್ತು. ಯಡಿಯೂರಪ್ಪ ಹೋರಾಟಗಾರರು ನಿಜ. ಆದರೆ ಮುಂಗೋಪಿ, ಒರಟ, ಒಡ್ಡ.ಇಂತಹ ಯಡಿಯೂರಪ್ಪನವರಿಗೆ ಯಾರಾದರೂ ಆತ್ಮೀಯರಿರಲು ಸಾಧ್ಯವೇ? ನಮ್ಮ ಕನ್ನಡದ ಎಷ್ಟು ಜನ ಪತ್ರಕರ್ತರ ಹೆಸರು ಅವರ ನೆನಪಲ್ಲಿರಬಹುದು? ಬಹುಶಃ ಅದು ಐದಾರನ್ನು ದಾಟಲಾರದು.
ಅಧಿಕಾರದಾಸೆ ಎಲ್ಲಾ ಸಂಬಂಧಗಳನ್ನು ಗೌಣವಾಗಿಸುತ್ತದೆ. ರಾಜಿನಾಮೆ ಸಂದರ್ಭದಲ್ಲಿ ಶೋಭಾ ತೋರಿದ ಸಂಯಮದಲ್ಲಿ ಒಂಚೂರಾದರೂ ಮುಖ್ಯ ಮಂತ್ರಿಗಳು ತೋರಿದ್ದರೆ ನಗುವವರ ಮುಂದೆ ಎಡವಿ ಬಿದ್ದಂತಾಗುತ್ತಿರಲಿಲ್ಲ. ಶೋಭಾ ಪತನಕ್ಕೆ ಅವರು ಆಕೆಯಲ್ಲಿ ಹೊಂದಿದ್ದ ಮೋಹವೇ ಕಾರಣ. ಸ್ವತಃ ಆಕೆಯೇ ಅದಕ್ಕೆ ಅವಕಾಶ ಕೊಟ್ಟಿದ್ದಾಳೆ. ಅವರಿಬ್ಬರ ನಡುವೆ ಯಾವ ರೀತಿಯ ಸಂಬಂಧವಿದೆಯೋ ಅದು ನಮಗೆ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳುವ ಅಗತ್ಯವೂ ನಮಗಿಲ್ಲ. ಆದರೆ ಸಾರ್ವಜನಿಕ ಬದುಕಿನಲ್ಲಿರುವವರು ತಮ್ಮ ನಡವಳಿಕೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಕನಿಷ್ಟಪಕ್ಷ ಮುಚ್ಚಿಟ್ಟುಕೊಳ್ಳುವ ಕಲೆಯಾದರೂ ಗೊತ್ತಿರಬೇಕು. ಯಾಕೆಂದರೆ ಅವರು ಹಲವು ಜನರಿಗೆ ಮಾದರಿಗಳಾಗಿರುತ್ತಾರೆ.

ಮೈಸೂರು ದಸರ ಸಂದರ್ಭದಲ್ಲಿ ಸಾರ್ವಜನಿಕರ ಕಣ್ಣಿಗೆ ರಾಚುವಂತೆ ಕಟ್ಟೌಟ್ ಗಳಲಿ ಅವರಿಬ್ಬರೇ ಯಾಕೆ ಮಿಂಚಬೇಕಿತ್ತು? ಹೋಮ ಹವನ, ಬಾಗಿನ ಸಮರ್ಪಣೆಯಂತ ಧಾರ್ಮಿಕ ಸಮಾರಂಬಗಳಲ್ಲಿ ಯಾಕೆ ಜೊತೆ ಜೊತೆಯಾಗಿ ಕಾಣಿಸಿಕೊಳ್ಳಬೇಕಾಗಿತ್ತು? ಜೋತೆಯಾಗಿ ಯಾಕೆ ವಿದೇಶ ಪ್ರವಾಸಗಳನ್ನು ಕೈಗೊಳ್ಳಬೇಕಾಗಿತ್ತು? ಮಂತ್ರಾಲಯದ ಸ್ವಾಮಿಗಳನ್ನು ರಕ್ಷಿಸಿ ತರಲು ಶೋಭಾಳೇ ಯಾಕೆ ಹೋಗಬೇಕಾಗಿತ್ತು?. ಅದೇ ಪರಿಸರದವರೂ ಕಂದಾಯ ಸಚಿವರೂ ಆದ ಕರುಣಾಕರ ರೆಡ್ಡಿ ಇರಲಿಲ್ಲವೇ?. ಇದು ಪುರುಷ ಪ್ರಧಾನವಾದ ಸಮಾಜ. ಮಹಿಳೆಯರೂ ಕೂಡ ಪುರುಷರಂತೆಯೇ ಯೋಚಿಸುತ್ತಾರೆ. ಬಿಜೆಪಿ ಪಕ್ಷ ಈ ಯೋಚನೆಯ ಒಂದು ಭಾಗ. ಅದರ ಒಳಸುಳಿಗಳೇ ಬೇರೆ. ಪ್ರದರ್ಶಕ ಗುಣಗಳೇ ಬೇರೆ. ಸಮಾಜವನ್ನು ಅಧ್ಯಯನ ಮಾಡಿದ ಶೊಭಗೆ ಈ ಸೂಕ್ಷ್ಮ ಹೊಳೆಯಲಿಲ್ಲವೇ?

ಎಂತಹ ಗಟ್ಟಿ ಮನಸ್ಸಿಗೂ ಭಾವನಾತ್ಮಕವಾದ ಆಸರೆಯೊಂದು ಬೇಕಾಗುತ್ತದೆ. ಹಿಂದಿನ ಮುಖ್ಯಮಂತ್ರಿಗಳಾದ ಅರಸು, ಬೊಮ್ಮಾಯಿ, ಗುಂಡೂರಾವ್, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ಕುಮಾರಸ್ವಾಮಿ ಇವರ ಬಗ್ಗೆ ಕೂಡಾ ಇಂತಹ ವದಂತಿಗಳಿದ್ದವು. ಆದರೆ ಅವೆಲ್ಲಾ ತೆರೆಯ ಮರೆಯ ಪ್ರಹಸನಗಳು, ಸಾರ್ವಜನಿಕರ ಕಣ್ಣಿಗೆ ರಾಚುತ್ತಿರಲಿಲ್ಲ. ಈಗ ರಾಚಿದೆ. ’ಮೆಲ್ ಇಗೋ’ ಕೆಲಸ ಮಾಡಿದೆ. ಸಮರ್ಥ ನಾಯಕಿಯಾಗುವ ಎಲ್ಲಾ ಅರ್ಹತೆಗಳಿರುವ ವಿದ್ಯಾವಂತ ಯುವ ರಾಜಕಾರಣಿ ಸಧ್ಯಕ್ಕೆ ಪುರುಷ ರಾಜಕಾರಣಕ್ಕೆ ಬಲಿಪಶುವಾಗಿದ್ದರೆ. ಕುರುಕ್ಷೇತ್ರ ಯುದ್ಧದಲ್ಲಿ ದುರ್ಯೋಧನ, ದುಶ್ಯಾಸನ, ಕರ್ಣ, ಜಯದೃಥ ಮುಂತಾದ ಅತಿರಥ-ಮಹಾರಥರೆಲ್ಲಾ ಸೇರಿ ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಕೆಡವಿಕೊಂಡು ಅಮಾನುಷವಾಗಿ ಕೊಂದಂತೆ ರೆಡ್ಡಿ ಬಳಗ ಚಕ್ರವ್ಯೂಹ ಹೆಣೆದಿದೆ. ಆದರೆ ಅದನ್ನೆಲ್ಲಾ ಕೊಡವಿಕೊಂಡು ಎದ್ದು ನಿಲ್ಲುವ ಶಕ್ತಿ ಆಕೆಯೊಳಗೇ ಇದೆ.ಅದನ್ನು ಆಕೆ ಗುರುತಿಸಿಕೊಳ್ಳಬೇಕು ಅಷ್ಟೆ.

3 comments:

sunaath said...

ತುಂಬಾ ವಿಸ್ತೃತವಾದ ವಿಶ್ಲೇಷಣೆ ಮಾಡಿದ್ದೀರಿ. ಶೋಭಾ ದಕ್ಷ ಸಚಿವೆಯಾಗಿರಬಹುದು. ಆದರೆ ಯಡಿಯೂರಪ್ಪನವರ ‘ಹುಚ್ಚು ಬೆಂಬಲ’ ಅವರನ್ನು ಹಾದಿಗೆಡಿಸಿತು ಎನ್ನುವದು ಸರಿಯಾದ ಮಾತೇ ಆಗಿದೆ. ಯಡಿಯೂರಪ್ಪನವರನ್ನು ತಿವಿಯಬೇಕಾದರೆ, ಅವರಿಗೆ ಅತಿ ಹತ್ತಿರದ ವ್ಯಕ್ತಿಗಳನ್ನೇ ತಿವಿಯಬೇಕಷ್ಟೆ? ಹೀಗಾಗಿ ಶೋಭಾ ಈ ಚದುರಂಗದಾಟದಲ್ಲಿ ಬಲಿಯಾಗಿದ್ದಾರೆ.

ಸುಮ said...

ಅತ್ಯುತ್ತಮ ವಿಶ್ಲೇಷಣೆ ಮೇಡಂ. ಹೆಣ್ಣಿಗಷ್ಟೇ ಎಲ್ಲಾ ಆದರ್ಶ,ನಿಯಮಗಳು ಅನ್ವಯಿಸುವ ನಮ್ಮ ನಾಡಿನಲ್ಲಿ ಇಂತಹ ಪ್ರಸಂಗ ನಡೆದುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಬಿಡಿ.

ಕೇಶವ ಪ್ರಸಾದ್.ಬಿ.ಕಿದೂರು said...

ವಿಶ್ಲೇಷಣೆ ಬಹಳ ಚೆನ್ನಾಗಿದೆ. ಸತ್ಯಕ್ಕೆ ಹತ್ತಿರವಾಗಿದೆ.