Thursday, December 24, 2009

ರೇಣುಕಾಚಾರ್ಯನಿಗೆ ಪಟ್ಟಾಭೀಷೇಕ- ಮಾನವಂತರಿಗಿದು ಕಾಲವಲ್ಲ.




ಅಂತೂ ಇಂತೂ ಹೊನ್ನಾಳಿಯ ರಸಿಕ ಚಕ್ರವರ್ತಿಗೆ ಕಿರೀಟಧಾರಣೆಯಾಯಿತು.
ಬ್ಲಾಕ್ ಮೈಲ್ ರಾಜಕೀಯ ಮೆಲುಗೈ ಪಡೆಯಿತು. ನನಗೆ ತಕ್ಷಣ ನೆನಪಿಗೆ ಬಂದದ್ದು ಕುಮಾರವ್ಯಾಸನ ಸಾಲುಗಳು;
”ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ,
ಪರಿವಾರ ಹದ್ದಿನ ನೆರವಿ, ಉರಿ ಉರಿಯುತಿದೆ ದೇಶ,
ಬಡವರ ಬಿನ್ನಪವಿನ್ನಾರು ಕೇಳುವರು......’

ಉತ್ತರ ಕರ್ನಾಟಕದ ಜನ ಕಂಡು ಕೇಳರಿಯದ ನೆರೆ ಹಾವಳಿಯಿಂದ ತತ್ತರಿಸಿ, ಮತ್ತೆ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಅವರಿಗೆ ಸರಕಾರದ, ಜನಪ್ರತಿನಿಧಿಗಳ ನೆರವಿನ ಹಸ್ತವಿಲ್ಲ. ಸಂತೈಸಬೇಕಾದವರೇ, ಭರವಸೆಯ ಹಸ್ತ ಚಾಚಬೇಕಾದವರೇ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ತಮ್ಮ ಘನತೆಗೆ ತಕ್ಕುದಲ್ಲದ ರೀತಿಯಲ್ಲಿ ವರ್ತಿಸಿ ನಗೆ ಪಾಟಲಿಗೆ ಗುರಿಯಾಗುತ್ತಿದ್ದಾರೆ. ಯಡಿಯೂರಪ್ಪ ಮತ್ತವರ ಪರಿವಾರ ಕರ್ನಾಟಕದ ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ವೈಯಕ್ತಿಕ ನೆಲೆಯಲ್ಲಿ ಚಾರಿತ್ರ್ಯ ಹೀನರಾಗುತ್ತಿದ್ದಾರೆ. ಕುದುರೆಗೆ ಕಣ್ಣ ಪಟ್ಟಿ ಕಟ್ಟಿದಂತೆ ದುಡ್ಡು ಬಾಚಿಕೊಳ್ಳುವುದೇ ಎಲ್ಲರ ಗುರಿಯಾಗಿದೆ. ಇದೆಲ್ಲದರ ಪರಿಣಾಮವಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜಾಗುತ್ತಿದೆ.
’ಬಡವರ ಬಿನ್ನಪವ ಕೇಳುವವರಿಲ್ಲ’

ಇಂದು ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ ರೇಣುಕಾಚಾರ್ಯ ತಮ್ಮ ಬಳಗವನ್ನುದ್ದೇಶಿಸಿ ಮಾತನಾಡುತ್ತಾ, ತಾನು ಹನುಮಂತ ಮುಖ್ಯಮಂತ್ರಿಗಳ ನಮ್ರ ಸೇವಕ ಎಂದು ಹೇಳಿಕೊಂಡರು. ಹೆಂಡ ಕುಡಿದ ಮಂಗ ಎಂದಿದ್ದರೆ ಅವರ ವ್ಯಕ್ತಿತ್ವಕ್ಕೆ ಸರಿಯಾದ ಹೋಲಿಕೆಯಾಗುತ್ತಿತ್ತು.

ಅವರ ಮಾತುಗಳನ್ನು ದೃಶ್ಯ ಮಾಧ್ಯಮದಲ್ಲಿ ನೋಡಿದಾಗ ರಾಮಾಯಣದ ಘಟನೆಯೊಂದು ನೆನಪಿಗೆ ಬಂತು; ರಾವಣನನ್ನು ಕೊಂದು ಸೀತೆಯನ್ನು ಅಯೋಧ್ಯೆಗೆ ಕರೆ ತಂದ ಮೇಲೆ ಕೃತಜ್ನಾಪೂರ್ವಕವಾಗಿ ರಾಮನ ಅರಮನೆಯಲ್ಲಿ ಕಪಿಸೈನಕ್ಕೆ ಭೋಜನಕೂಟವನ್ನು ಏರ್ಪಡಿಸಲಾಗಿತ್ತು. ಭೂರಿಬೋಜನದಲ್ಲಿ ಉಪ್ಪಿನಕಾಯಿಯೂ ಇತ್ತು. ಒಂದು ಮರಿ ಮಂಗ ಅದನ್ನು ಅಂಗೈನಲ್ಲಿ ತೆಗೆದುಕೊಂಡು ಬೆರಳುಗಳಿಂದ ಮಡಚಿ ಒತ್ತಿ ಹಿಡಿದು ಚೀಪಲು ನೋಡಿದಾಗ ಅದರ ಗೊರಟು ಮೇಲಕ್ಕೆ ಹಾರಿತಂತೆ. ತಕ್ಷಣ ಮರಿಮಂಗ ’ನನಗಿಂತ ಎತ್ತರ ಜಿಗಿತಿಯಾ’ ಎಂದು ಊಟ ಬಿಟ್ಟು ಗೊರಟಿಗಿಂತ ಮೇಲಕ್ಕೆ ಜಿಗಿತಂತೆ. ಪಕ್ಕದಲ್ಲಿ ಕೂತ ಇನ್ನೊಂದು ಮಂಗ ಮರಿಮಂಗನ ಜಿಗಿತ ಕಂಡು, ’ನಿನಗಿಂತ ಎತ್ತರಕ್ಕೆ ನಾ ಜಿಗಿಯಬಲ್ಲೆ’ ಎನ್ನುತ್ತಾ ಮೇಲಕ್ಕೆ ಜಿಗಿಯಿತಂತೆ. ಅದನ್ನು ಕಂಡು ಇನ್ನೊಂದು, ಮಗದೊಂದು ಎನ್ನುತ್ತಾ ಊಟದ ಪಂಕ್ತಿಯಲ್ಲಿದ್ದ ಎಲ್ಲಾ ಮಂಗಗಳೂ ಲಾಗ ಹೊಡೆಯತೊಡಗಿದವಂತೆ. ಕೊನೆಗೆ ಹನುಮಂತನೂ ಇವರಲ್ಲಿ ಸೇರಿಕೊಂಡನಂತೆ.

’ಹುಟ್ಟು ಗುಣ ಘಟ್ಟ ಹತ್ತಿದರೂ ಹೋಗದು.’ ಪಾಳೆಗಾರಿಕೆ ಗುಣಗಳನ್ನು ರಕ್ತಗತವಾಗಿಸಿಕೊಂಡಿರುವ ರೆಡ್ಡಿ ಬಳಗ, ಪುರುಷ ಪ್ರಾಧಾನ್ಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಬಿಜೆಪಿ ಸರಕಾರ, ಸಿಕ್ಕಷ್ಟು ಬಾಚಿಕೊಳ್ಳೋಣ ಎನ್ನುವ ಆಸೆಬುರುಕ ಜನಪ್ರತಿನಿಧಿಗಳು- ಮಾನವಂತರಿಗಿದು ಕಾಲವಲ್ಲ.

Sunday, December 13, 2009

ರೈತರಿಗಿನ್ನು ದೇವರೇ ಗತಿ!





ಬಳ್ಳಾರಿಯ ವಿವಾದಿತ, ಉದ್ದೇಶಿತ ವಿಮಾನ ನಿಲ್ದಾಣದ ಸರ್ವೆ ಕಾರ್ಯಕ್ಕೆ ಬಂದಿದ್ದ ಸಿಬ್ಬಂದಿಯಲ್ಲಿ ಒಬ್ಬನನ್ನು ರೈತರು ತಮ್ಮ ವಶಕ್ಕೆ ತೆಗೆದುಕೊಂಡು ಒತ್ತೆಯಾಳಾಗಿ ಇಟ್ಟುಕೊಂಡಾಗ, ಕೊನೆಗೂ ರೈತರ ತಾಳ್ಮೆಯ ಕಟ್ಟೆಯೊಡೆಯಿತು; ಅವರ ಹೋರಾಟಕ್ಕೆ ಸೈದ್ಧಾಂತಿಕ ತಳಹದಿಯೊಂದು ಒದಗಿಬಿಟ್ಟಿತು, ಇನ್ನು ಪ್ರತಿಭಟನೆ ತೀವ್ರಗೊಳ್ಳುತ್ತದೆಯೆಂದು ಅಂದುಕೊಳ್ಳುತ್ತಿರುವಾಗಲೇ ಎಲ್ಲವೂ ಠುಸ್ಸಾಯಿತು.ರೈತರು ಆತನನ್ನು ಮುಕ್ತಗೊಳಿಸಿದರು.

’ನಾನು ದಾರಿ ತಪ್ಪಿದ್ದೆ. ರೈತರು ನನಗೆ ದಾರಿ ತೋರಿಸಿದರು.ಅವರೇನು ತನ್ನನ್ನು ಒತ್ತೆಯಾಳಾಗಿ ಇಟ್ಟುಕೊಂಡಿಲ್ಲ’ ಎಂದು ರೈತರೊಡನಿದ್ದಾಗ ಮಾಧ್ಯಮಕ್ಕೆ ಹೇಳಿದ್ದ ಆತ ತಿರುಗಿಬಿದ್ದು ಪೋಲಿಸ್ ಸ್ಟೇಷನ್ ನಲ್ಲಿ ರೈತ ಮುಖಂಡ ಮಲ್ಲಿಕಾರ್ಜುನ ರೆಡ್ಡಿ ವಿರುದ್ಧವೇ ಅಪಹರಣದ ಕೇಸು ದಾಖಲಿಸಿದ. ಪೋಲಿಸರು ೫೦ ಮಂದಿಯನ್ನು ಬಂದಿಸಿದರು.

ಬಳ್ಳಾರಿಯಲ್ಲಿ ಏನು ಬೇಕಾದರೂ ಆಗಬಹುದು!

ತುಂಗಭದ್ರೆಯ ನೀರುಂಡು ಹಸಿರಿನಿಂದ ಕಂಗೊಳಿಸುತ್ತಿರುವ ಚಾಗನೂರು,ಸಿರಿವಾರ ಗ್ರಾಮಗಳು ಸರಕಾರಿ ಕಡತಗಳಲ್ಲಿ ಖುಷ್ಕಿ ಜಮೀನಾಗಿ ಪರಿವರ್ತನೆಗೊಳ್ಳಬಹುದು. ಸ್ಥಳೀಯ ಜನಪ್ರತಿನಿಧಿಗಳನ್ನು ಸಾರಾಸಗಟಾಗಿ ಖರೀದಿ ಮಾಡಿ ’ರೆಸಾರ್ಟ್ ಅರೆಸ್ಟ್’ ಮಾಡಿ ಇಡಬಹುದು.

’ನಮ್ಮದು ಖುಷ್ಕಿ ಜಮೀನಲ್ಲ; ಅದು ನೀರಾವರಿ ಜಮೀನು; ಫಲವತ್ತಾದ ಕಪ್ಪು ಮಣ್ಣು; ಇಲ್ಲಿ ನಾವು ಹತ್ತಿ. ತೊಗರಿ, ಜೋಳ, ಮೆಕ್ಕೆಜೋಳ, ಮೆಣಸಿನಕಾಯಿ, ಕಡಲೆ,ತರಕಾರಿಗಳನ್ನು ಬೆಳೆದು ಸ್ವಾವಲಂಬಿಯಾಗಿ ಬದುಕುತ್ತಿದ್ದೇವೆ. ನಮ್ಮ ಅನ್ನವನ್ನು ಕಿತ್ತುಕೊಳ್ಳಬೇಡಿ. ನಮ್ಮ ಪ್ರಾಣ ಹೋದರೂ ಜಮೀನು ಬಿಟ್ಟುಕೊಡುವುದಿಲ್ಲ’ ಎಂದು ರೈತರು ಒಂದು ವರ್ಷದಿಂದ ಪ್ರತಿಭಟಿಸುತ್ತಿದ್ದಾರೆ.

ಬಳ್ಳಾರಿಜಿಲ್ಲೆಯ ಉಸ್ತುವಾರಿ ಸಚಿವರೂ, ಗಣಿದೊರೆಗಳೂ ಆದ ಜನಾರ್ಧನ ರೆಡ್ಡಿ ಮತ್ತವರ ಬಳಗ ಇದನ್ನೊಂದು ಪ್ರತಿಷ್ಟೆಯ ವಿಷಯವಾಗಿ ಪರಿಗಣಿಸಿದ್ದಾರೆ. ಅವರ ದಾಕ್ಷಿಣ್ಯದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ’ ಬಳ್ಳಾರಿ ವಿಮಾನ ನಿಲ್ದಾಣ ಮಾಡಿಯೇ ಸಿದ್ದ’ ಎನ್ನುತ್ತಿದ್ದಾರೆ.

ದೀನ-ದಲಿತರು, ನೊಂದವರು, ಅಸಹಾಯಕರೆಡೆಗೆ ಪ್ರಭುತ್ವವೇ ನಡೆದು ಬರಬೇಕು. ಆದರೆ ಆಡಳಿತ ಪಕ್ಷ ಯಾವುದು? ವಿರೋಧಪಕ್ಷ ಯಾವುದು? ಎಂಬ ಗೊಂದಲದಲ್ಲಿ ನಾವಿದ್ದೇವೆ. ನಮ್ಮ ಅನುಕಂಪ ಈಗ ಅವರಿಗೇ ಬೇಕಾಗಿದೆ!

ಇನ್ನು ಸದಾ ವಿರೋಧ ಪಕ್ಷದಂತೆ ಕೆಲಸ ಮಾಡಬೇಕಾದ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕಾರಂಗ ರಾಜಕಾರಣಿಗಳ, ಉದ್ದಿಮೆದಾರರ ಕೃಪಾಕಟಾಕ್ಷದಲ್ಲಿ ಸಮೃದ್ಧವಾಗಿ ಬೆಳೆಯುತ್ತಲಿದೆ! ರಾಜಧಾನಿಯನ್ನು ಬಿಟ್ಟರೆ ಬೇರೆಡೆ ಅವರ ಅರಿವು ವಿಸ್ತರಿಸುವುದಿಲ್ಲ. ಪತ್ರಕರ್ತರ ಆದ್ಯತೆಗಳೇ ಈಗ ಬೇರೆ. ಸಮಾಜದ ಧ್ವನಿಯಾಗಬೇಕಾಗಿದ್ದ ಸಾಹಿತಿ-ಕಲಾವಿದರು ಸ್ವಕೇಂದ್ರಿತ ಗುಂಪುಗಳನ್ನು ಕಟ್ಟಿಕೊಂಡು ಪರಸ್ಪರ ಹೊಗಳಿಕೊಳ್ಳುತ್ತಾ ಭ್ರಮಾಲೋಕದಲ್ಲಿ ಮುಳುಗಿದ್ದಾರೆ.
ಮಂಗಳವಾರ ಸಿರಿವಾರ, ಚಾಮಲಾಪುರಗಳಲ್ಲಿ ರೈತರ ಪ್ರತಿಭಟನೆ ಮುಂದುವರಿಯಿತು. ಬುಧವಾರ ಹಾಸನ, ಚಾಮರಾಜನಗರದಲ್ಲಿ ಭೂಸ್ವಾದೀನ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದರು. ಗುರುವಾರ ದಾವಣಗೆರೆ, ಚಾಮರಾಜ ನಗರಗಳಲ್ಲಿ ಪೋಲಿಸರು ಲಾಠಿ ಬೀಸಿದರು. ಅಕ್ಷರಶಃ ಅಟ್ಟಾಡಿಸಿಕೊಂಡು ರಕ್ತ ಬರುವಂತೆ ಹೊಡೆದರು. ಮಹಿಳೆಯರನ್ನೂ ಬಿಡಲಿಲ್ಲ. ಜಿಲ್ಲಾ ದಂಡಾಧಿಕಾರಿಯೆಂದು ಕರೆಯಲಾಗುವ ಜಿಲ್ಲಾಧಿಕಾರಿಯವರೇ ಸ್ವತಃ ಕೈಯಲ್ಲಿ ಲಾಠಿ ಹಿಡಿದು ರೈತರನ್ನು ನಿಯಂತ್ರಿಸುತ್ತಿದ್ದರು. ಪುಣ್ಯಕ್ಕೆ ’ಚಡ್ಡಿ’ ಹಾಕಿರಲಿಲ್ಲ ಅಷ್ಟೇ!. ಇವರು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಟಿ.ಡಿ.ಪವಾರ್ ಸೇರಿ ೪೦ ಮಂದಿ ರೈತರನ್ನು ನ್ಯಾಯಾಂಗ ಬಂದನಕ್ಕೆ ತಳ್ಳಿದರು.

ಪೋಲಿಸರು ಲಾಠಿ ಚಾರ್ಜ್ ಮಾಡಿದ್ದನ್ನು ಶನಿವಾರ ದಾವಣಗೆರೆಯಲ್ಲಿ ಕೃಷಿ ಸಚಿವ ರವೀಂದ್ರನಾಥ್ ಸಮರ್ಥಿಸಿಕೊಂಡರು. ರೈತರು ಸಂಯಮದಿಂದ ವರ್ತಿಸಬೇಕೆತ್ತಿಂದು ಹೇಳಿದರು. ಕಳೆದ ವರ್ಷ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಹೊಸದರಲ್ಲೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿ ಇಬ್ಬರನ್ನು ಬಲಿ ತೆಗೆದುಕೊಂಡಿತ್ತು.ಅದಾದ ಒಂದು ವಾರಕ್ಕೆ ಇದೇ ಸಚಿವರ ಪಕ್ಕದ ಕ್ಶೇತ್ರದ ಇಬ್ಬರು ಸಚಿವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಇದೇ ಕೃಷಿ ಸಚಿವರು ಹೇಳಿದ್ದೇನು ಗೊತ್ತೇ? ನಿನ್ನೆ ಸತ್ತವ ರೈತನಲ್ಲ. ಇವತ್ತು ರೈತ ಸತ್ತಿರುವ ಬಗ್ಗೆ ನನಗೇನೂ ಗೊತ್ತಿಲ್ಲ’. ಇವರು ನಮ್ಮ ಕೃಷಿ ಸಚಿವರು!
ನಾಡಿಗೇ ಅನ್ನ ನೀಡುವ ರೈತ ಅಷ್ಟು ನಿಕೃಷ್ಟನೇ? ಅವರೇನು ಸಮಾಜಘಾತುಕ ಶಕ್ತಿಗಳೇ? ಪೋಲಿಸರ ದೃಷ್ಟಿಯಲ್ಲಿ ಕ್ರಿಮಿನಲ್ಸ್ ಗೂ ರೈತರಿಗೂ ವ್ಯತ್ಯಾಸವೇ ಇಲ್ಲವೇ? ಗೃಹಮಂತ್ರಿಗಳೇ ಉತ್ತರಿಸಬೇಕು. ”ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಔದಾರ್ಯವಾಗಿ ಮಾತನಾಡಿ ಬೀದಿಯಲ್ಲಿ ಹೊಡೆಸ್ತಾರೆ”ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳುತ್ತಾರೆ.

ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ತಮ್ಮ ಅಧಿಕಾರದ ಹೊಸ್ತಿಲಲ್ಲಿರುವಾಗಲೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರು ನಡೆಸಿದರು. ಆ ಪರಿಸ್ಥಿತಿ ಇಂದಿಗೂ ಮುಂದುವರಿಯುತ್ತಲಿದೆ.

ರೈತರು ತಮಗಾಗುತ್ತಿರುವ ಅನ್ಯಾಯ, ದಬ್ಬಾಳಿಕೆ, ಶೋಷಣೆ, ಮಾರುಕಟ್ಟೆ ತಾರತಮ್ಯ...ಇತ್ಯಾದಿಗಳ ಬಗ್ಗೆ ಆಳುವವರ ಮುಂದೆ, ಆಧಿಕಾರಿಗಳ ಮುಂದೆ ಹೇಳಿಕೊಳ್ಳಲು ಕಾತರಿಸುತ್ತಿದ್ದಾರೆ. ಆದರೆ ಅವರಿಗೆ ಪುರುಸೊತ್ತಿಲ್ಲ. ಯಾರನ್ನಾದರೂ ಮಾತುಕತೆಗೆ ಕಳುಹಿಸುವ ವ್ಯವಧಾನವಿಲ್ಲ. ರೈತರ ಮೊರೆ ಅರಣ್ಯ ರೋಧನವಾಗುತ್ತಿದೆ.

ಉಳ್ಳವರಿಗೆ ತಮ್ಮ ಅತ್ಯುನ್ನತಿಗಾಗಿ ರೈತರ ಫಲವತ್ತಾದ ಭೂಮಿಯೇ ಬೇಕಾಗಿದೆ. ವಿಶೇಷ ಅರ್ಥಿಕ ವಲಯವನ್ನೇ ತೆಗೆದುಕೊಳ್ಳಿ; ಅಲ್ಲೆಲ್ಲಾ ವಶಪಡಿಸಿಕೊಂಡ, ವಶಪಡಿಸಿಕೊಳ್ಳುತ್ತಿರುವ ಭೂಮಿಯೆಲ್ಲವೂ ಫಲವತ್ತಾದ ಭೂಮಿಯೇ. ಯಾಕೆ ಇವರಿಗೆ ಒಣಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಆಗುವುದಿಲ್ಲವೇ? ಹೀಗೆ ಕೃಷಿ ಭೂಮಿಯೆಲ್ಲಾ ಕೈಗಾರಿಕ ವಲಯಗಳಾಗಿ, ವಸತಿನಿಲಯಗಳಾಗಿ ಬದಲಾದರೆ ಭವಿಷ್ಯದಲ್ಲಿ ಆಹಾರ ಭದ್ರತೆಯೆಂಬುದು ಬಹುದೊಡ್ಡ ಸಮಸ್ಯೆಯಾಗಿ ಕಾಡಲಿದೆ. ಇದರ ಜೊತೆಗೆ ಮೂಡುವ ಬಹು ಮುಖ್ಯ ಪ್ರಶ್ನೆ ಎಂದರೆ ನಮಗೆ ಯಾವ ರೀತಿಯ ಅಬಿವೃದ್ಧಿ ಬೇಕು? ಅಬಿವೃದ್ಧಿ ತಂದಿತ್ತ ಸಮಸ್ಯೆಗಳು ಈಗ ಕೊಪೆನ್ ಹೆಗನ್ ನಲ್ಲಿ ನಡೆಯುತ್ತಿರುವ ’ಹವಾಮಾನ ವೈಪರಿತ್ಯ ಶ್ರ‍ಂಗ ಸಭೆ’ಯಲ್ಲಿ ಚರ್ಚಿತವಾಗುತ್ತಲಿದೆ.

ಬಳ್ಳಾರಿಗೆ ಬನ್ನಿ; ಇಲ್ಲಿ ಈಗಾಗಲೇ ಎರಡು ವಿಮಾನ ನಿಲ್ದಾಣಗಳಿವೆ. ನಗರದ ಕಂಟೋನ್ಮೆಂಟ್ ಬಳಿ ಇರುವ ಐತಿಹಾಸಿಕ ವಿಮಾನ ನಿಲ್ದಾಣ. ಇದು ಎರಡನೇ ಮಹಾಯುದ್ದ ಕಾಲದಲ್ಲಿ ವಾಯುನೆಲೆಯಾಗಿ ಬಳಕೆಯಾಗಿದ್ದ ವಿಮಾನ ನಿಲ್ದಾಣ. ಇನ್ನೊಂದು ನಗರದಿಂದ ೪೦ ಕಿ.ಮೀ ದೂರದಲ್ಲಿರುವ ತೋರಣಗಲ್ಲಿರುವ ಜಿಂದಾಲ್ ಏರ್ ಪೋರ್ಟ್. ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಹಂಪೆ ಹಾಗು ಬೆಳೆಯುತ್ತಿರುವ ಕೈಗಾರಿಕೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮೂರನೆಯ ವಿಮಾನ ನಿಲ್ದಾಣಕ್ಕಾಗಿ ಸರ್ವೆ ಕಾರ್ಯ ನಡೆಸಿ ನಗರದಿಂದ ೧೨ ಕಿ.ಮೀ ದೂರದಲ್ಲಿರುವ ಪಾಪಿನಾಯಕನಹಳ್ಳಿಯನ್ನು ಸೂಕ್ತ ಪ್ರದೇಶವೆಂದು ೧೯೯೬ರಲ್ಲಿ ಎಂ.ಪಿ.ಪ್ರಕಾಶ್ ಅಧಿಕಾರವಧಿಯಲ್ಲಿ ಗುರುತಿಸಲಾಗಿತ್ತು. ಆದರೆ ಅದಕ್ಕೆ ಚಾಲನೆ ದೊರೆತಿರಲಿಲ್ಲ.

ವಿಮಾನ ನಿಲ್ದಾಣಕ್ಕೆ ಸೂಕ್ತ ಸ್ಥಳವೆಂದು ಗುರುತಿಸಲ್ಪಟ್ಟ ಪಾಪಿನಾಯಕಹಳ್ಳಿಯ ಒಣಭೂಮಿಯನ್ನು ಬಿಟ್ಟು ಚಾಗನೂರು, ಸಿರಿವಾರದ ನೀರಾವರಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಜನಾರ್ಧನ ರೆಡ್ಡಿ ಆದೇಶ ನೀಡಿದರು. ’ವಿಜಯನಗರ ಅರ್ಬನ್ ಡೆವಲಪ್ ಮೆಂಟ್ ಏರಿಯಾ’ ದೊಳಗೆ ಈ ಜಮೀನು ಬರುತ್ತದೆಯೆಂಬುದು ರೆಡ್ಡಿಗಳ ವಾದ. ಇದನ್ನು ವಿರೋಧಿಸಿ ರೈತರು ಕಳೆದ ಪೆ.೨೪ರಂದು ಶಾಂತಿಯುತ ಬೃಹತ್ ಮೆರವಣಿಗೆ ನಡೆಸಿದರು. ಆಗ ಪೋಲಿಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸುವ ಮೂಲಕ ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸಿತು. ಅದರೂ ರೈತರು ಧೃತಿಗೆಡದೆ ಪ್ರಭುತ್ವದ ವಿರುದ್ಧ ಹೊರಾಡುತ್ತಲೇ ಬರುತ್ತಿದ್ದಾರೆ. ಅವರ ಹೋರಾಟಕ್ಕೆ ನೈತಿಕ ಬೆಂಬಲ ನೀಡಲು ’ನರ್ಮದಾ ಬಚಾವೋ’ ಆಂದೋಲನದ ರೂವಾರಿ, ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ನ.೧೦ರಂದು ಚಾಗನೂರು, ಸಿರಿವಾರ ಗ್ರಾಮಕ್ಕೆ ಭೇಟಿ ನೀಡಿದ್ದರು. ರೈತರೊಡನೆ ಆಪ್ತ ಚರ್ಚೆ ನಡೆಸಿದ್ದರು.

ಈಗ ಮತ್ತೆ ರೈತರ ವಿರೋಧದ ನಡುವೆ, ಅವರನ್ನೆಲ್ಲಾ ಊರ ಹೊರಗಿಟ್ಟು, ಪೋಲಿಸ್ ಸರ್ಪಗಾವಲಿನಲ್ಲಿ ಸರಕಾರ ಸರ್ವೆ ಕಾರ್ಯ ಮುಗಿಸಿದೆ. ಚಾಮರಾಜನಗರದಲ್ಲಿ ಸ್ವತಃ ಜಿಲ್ಲಾಧಿಕಾರಿಯವರೇ ಲಾಠಿ ಹಿಡಿದು ಹಸಿರು ಶಾಲು ಹಾಕಿದ ರೈತರನ್ನು ಬೆದರಿಸುತ್ತಿದ್ದಾರೆ. ಅಧಿಕಾರ ವರ್ಗ ಎಂದೂ ರೈತ ಪರವಾಗಿರಲು ಸಾಧ್ಯವಿಲ್ಲ. ಆದರೆ ಜನಪ್ರತಿನಿಧಿಗಳು ಓಟು ಹಾಕಿದವರ ಋಣದಲ್ಲಿರಬೇಕಲ್ಲವೇ? ಪಾಪ ಅವರಿಗೆ ಮರೆವಿನ ರೋಗ!

ಮುಂದೇನು? ಈಗ ಅವರ ಬೆಂಬಲಕ್ಕೆ ಜನಪರ ಸಂಘಟನೆಗಳು ಮುಂದಾಗಬೇಕು. ನಾಡು-ನುಡಿ, ನೆಲ-ಜಲ ಸಂರಕ್ಷಣೆಗಾಗಿ ಪಣತೊಟ್ಟಿರುವ ಹಲವು ಸಂಘಟನೆಗಳು ನಮ್ಮಲ್ಲಿವೆ.ಅವು ರೈತರ ಬೆಂಬಲಕ್ಕೆ ನಿಲ್ಲಬೇಕು. ಆದರೆ ಅವೆಲ್ಲಾ ರಾಜಕೀಯ ಹಿತಾಸಕ್ತಿಗಳನ್ನು ಬಿಟ್ಟು ಬರಲು ಸಾಧ್ಯವೇ?. ’ರೈತ ಸಂಘ’ ಮತ್ತೆ ಮೈಕೊಡವಿ ನಿಲ್ಲಬೇಕು. ಒಟ್ಟಾಗಬೇಕು.

ಅಷ್ಟಕ್ಕೂ ರೆಡ್ಡಿಗಳಿಗೆ ಈ ಭೂಮಿಯೇ ಯಾಕೆ ಬೇಕು? ಸ್ಥಳಿಯರು ಹೇಳುವ ಪ್ರಕಾರ ಚಾಗುವಾರ ಮತ್ತುಸಿರಿವಾರದ ಸುತ್ತಮುತ್ತಲಿನ ಸುಮಾರು ೨೮೦ ಎಕ್ರೆ ಜಮೀನನ್ನು ರೆಡ್ಡಿಗಳು ಬೇನಾಮಿ ಹೆಸರಿನಲ್ಲಿ ಖರೀದಿ ಮಾಡಿದ್ದಾರಂತೆ. ಇಲ್ಲಿ ವಿಮಾನ ನಿಲ್ದಾಣ ಬಂದರೆ ಈ ಜಮೀನಿಗೆ ಚಿನ್ನದ ಬೆಲೆ ಬಂದು ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರಬಹುದೆಂಬುದು ಅವರ ದೂರಾಲೋಚನೆ. ಅವರ ದೂರಾಲೋಚನೆ ರೈತರ ಪಾಲಿಗೆ ದುರಾಲೋಚನೆಯಾಗಿದೆ.

ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಎಕ್ರೆಗೆ ೧೨ ಲಕ್ಷ ರೂಪಾಯಿ ಪರಿಹಾರ ಕೊಡುತ್ತೇವೆ ಎಂಬುದು ಸರಕಾರದ ಸಮರ್ಥನೆ. ಆದರೆ ದುಡ್ಡುತಗೊಂಡು ರೈತರೇನು ಮಾಡಬಲ್ಲರು? ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟ ರೈತರೆಲ್ಲಾ ಎಕ್ರೆಗೆ ಕನಿಷ್ಟ ೫೦ ಲಕ್ಷದಿಂದ ಎರಡು ಕೋಟಿ ತನಕ ಪಡೆದುಕೊಂಡಿದ್ದರು. ಅದರಲ್ಲಿ ಬಹಳಷ್ಟು ಮಂದಿ ದುಂದುವೆಚ್ಚ ಮಾಡಿ ಇರುವ ದುಡ್ಡನ್ನೆಲ್ಲಾ ಕಳೆದುಕೊಂಡು ಜೀವನೋಪಾಯಕ್ಕಾಗಿ ಸಣ್ಣಪುಟ್ಟ ಉದ್ಯೋಗ ಮಾಡಿಕೊಂಡಿದ್ದಾರೆ.

ದುಡ್ಡು ಕರಗುತ್ತದೆ. ಅದರೆ ಭೂಮಿ ಹಾಗಲ್ಲ; ಅದು ಮೂಲಧನ. ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಗೊಳ್ಳುತ್ತಲೇ ಹೋಗುತ್ತದೆ. ಅದರ ಬಡ್ಡಿಯಿಂದಲೇ ರೈತ ಜೀವನ ನಿರ್ವಹಣೆ ಮಾಡುತ್ತಾನೆ. ತನಗೆ ಅನ್ನ ನೀಡುವ ಭೂಮಾತೆಯನ್ನು ಆತ ದೇವರೆಂದು ಪೂಜಿಸುತ್ತಾನೆ; ಅದರೊಡನೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುತ್ತಾನೆ. ಮಣ್ಣು ಮಾರಿ ದುಡ್ಡು ಬಾಚಿಕೊಳ್ಳುವವರಿಗಿದು ಅರ್ಥವಾಗದ ವಿಚಾರ.

Thursday, November 19, 2009

ಶೋಭಾ ಮಾಡಿದ ತಪ್ಪಾದರೂ ಏನು?





ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾಜಿ ಸಚಿವೆ ಶೋಭಾ ಕರಂದ್ಲಾಜೆಯವರ ರಾಜಿನಾಮೆಯನ್ನು ಕೇಂದ್ರ ವಸ್ತುವಾಗಿರುವ ’ಯಡಿಯೂರಪ್ಪ ಪ್ರಹಸನ’ದ ಹದಿನಾಲ್ಕು ದಿನಗಳ ಧಾರಾವಾಹಿಯನ್ನು ನೋಡುತ್ತಿರುವಾಗ ನನಗೆ ನೆನಪಿಗೆ ಬಂದದ್ದು,ನನ್ನ ಅಜ್ಜಿ ಬಾಲ್ಯದಲ್ಲಿ ಹೇಳುತ್ತಿದ್ದ ಬ್ರಹ್ಮ ರಾಕ್ಷಸನ ಕಥೆ. ಬಹಳ ರಂಜನಿಯವಾದ ಈ ಕಥೆಯಲ್ಲಿ ಬ್ರಹ್ಮರಾಕ್ಷಸನ ಪ್ರಾಣ ಏಳು ಸಮುದ್ರದಾಚೆಗಿರುವ ದ್ವೀಪದ ಯಾವುದೋ ಪೊಟರೆಯಲ್ಲಿರುವ ಪಕ್ಷಿಯಲ್ಲಿರುತ್ತದೆ. ಆ ಪಕ್ಷಿಯನ್ನು ಹುಡುಕಿ ಅದಕ್ಕೆ ಚಿತ್ರಹಿಂಸೆ ನೀಡಿದರೆ ಇಲ್ಲಿ ರಾಕ್ಷಸ ವಿಲಿವಿಲಿ ಒದ್ದಾಡುತ್ತಾನೆ. ಅಲ್ಲಿ ಅದರ ಕಾಲು ಮುರಿದರೆ ಇಲ್ಲಿ ರಾಕ್ಷಸನ ಕಾಲು ಮುರಿಯುತ್ತದೆ. ಅಲ್ಲಿ ಗೋಣು ಮುರಿದರೆ ಇಲ್ಲಿ ರಾಕ್ಷಸ ಸಾಯುತ್ತಾನೆ.
’ಯಡಿಯೂರಪ್ಪ ಪ್ರಹಸನ’ದಲ್ಲಿ ಪ್ರಾಣ ಪಕ್ಷಿಯನ್ನು ಹಿಂಸಿಸಲಾಗಿದೆ. ನಾಯಕ ವಿಲಿವಿಲಿ ಒದ್ದಾಡುತ್ತಿದ್ದಾನೆ.

ಶೋಭಾ ಸಿಕ್ಕ ಸಿಕ್ಕ ಮಾಧ್ಯಮಗಳಲೆಲ್ಲಾ ಪ್ರಶ್ನಿಸುತ್ತಿದ್ದಾರೆ ’ನಾನು ಮಾಡಿದ ತಪ್ಪೇನು?’

ನಾವು ಕೂಡಾ ನಮ್ಮಲ್ಲೇ ಪ್ರಶ್ನಿಸಿಕೊಳ್ಳುತ್ತೆದ್ದೇವೆ ’ಶೋಭಾ ಮಾಡಿದ ತಪ್ಪಾದರೂ ಏನು?’
ನಮ್ಮ ರಾಜ್ಯ ಸಚಿವ ಸಂಪುಟದಲ್ಲಿ ಮುವತ್ತಮೂರು ಜನ ಸಚಿವರಿದ್ದಾರೆ. ಅದರಲ್ಲಿರುವ ಏಕೈಕ ಮಹಿಳಾ ಸಚಿವೆ ಶೋಭಾ ಕರಂದ್ಲಾಜೆ. ರಾಜ್ಯದ ಮೂರು ಕೋಟಿ ಮಹಿಳೆಯರ ಪ್ರತಿನಿಧಿ. ಆದರೂ ಆಕೆಯ ರಾಜಿನಾಮೆಯ ಬಗ್ಗೆ ಒಂದೇ ಒಂದು ಮಹಿಳಾ ಧ್ವನಿಯಿಲ್ಲ ಯಾಕೆ? ಆಕೆಯ ರಾಜಿನಾಮೆ ಪಡೆಯಬಾರದು ಎಂದು ಆಕೆ ಪ್ರತಿನಿಧಿಸುತ್ತಿರುವ ಯಶವಂತಪುರದ ಒಂದಷ್ಟು ಜನ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದರು. ಅಲ್ಲಿಯೂ ಮಹಿಳೆಯರ್ಯಾರೂ ಕಾಣಿಸಲಿಲ್ಲ. ಹೋಗಲಿ ಅವರ ಊರಿನ ಜನರಾದರೂ ಪ್ರತಿಕ್ರಿಯಿಸಿದರಾ ಅದೂ ಇಲ್ಲ. ಬೆಂಗಳೂರಿನಲ್ಲಿ ’ದಕ್ಷಿಣ ಕನ್ನಡ ಗೌಡರ ಸಂಘ’ ಒಂದಿದೆ. ಅದರಲ್ಲಿರುವವರೆಲ್ಲಾ ಆಕೆಯ ಬಂಧು-ಬಾಂಧವರೇ. ಕಳೆದ ಚುನಾವಣೆಯಲ್ಲಿ ಇವರೆಲ್ಲಾ ಯಶವಂತಪುರ ತುಂಬೆಲ್ಲಾ ಓಡಾಡಿ ಆಕೆಯ ಪರವಾಗಿ ಮತ ಯಾಚಿಸಿದ್ದರು. ಕೈಲಾದ ಆರ್ಥಿಕ ಸಹಾಯವನ್ನು ನೀಡಿದ್ದರು. ಈಗ ಅವರೆಲ್ಲಾ ಆಕೆಯ ಹೆಸರೆತ್ತಲೂ ಇಷ್ಟ ಪಡುವುದಿಲ್ಲ. ಯಾಕೆ?

ಯಾಕೆಂದರೆ ಆಕೆ ಹಿಂದಿನಂತಿಲ್ಲ; ಆಕೆಗೆ ಅಹಂಕಾರ ಬಂದಿದೆ ಎಂಬುದು ಅವರೆಲ್ಲರ ಆಪಾದನೆ. ಅದನ್ನು ರೆಡ್ಡಿ ಬಣದ ಶಾಸಕರು ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ; ’ಶೋಭಾ ಸೂಪರ್ ಸಿಎಂ ತರಹ ವರ್ತಿಸುತ್ತಾರೆ’.
ಅಹಂಕಾರ ಮತ್ತು ಸ್ವಾಭಿಮಾನದ ಮಧ್ಯೆ ಬಹಳ ತೆಳುವಾದ ಗೆರೆಯಿರುತ್ತದೆ. ಮಹಿಳೆಯ ಸ್ವಾಬಿಮಾನ ಪುರುಷನ ಕಣ್ಣಿಗೆ ಅಹಂಕಾರವಾಗಿ ಕಾಣಿಸಬಹುದು. ಶೋಭಾ ಸ್ವಾಬಿಮಾನಿ. ಅದವಳ ಹುಟ್ಟುಗುಣ.
ಶೋಭಾ ರೈತಾಪಿ ಮನೆತನದಲ್ಲಿ ಹುಟ್ಟಿದ ಒಬ್ಬ ಸಾಮಾನ್ಯ ಹೆಣ್ಣುಮಗಳು. ಅವಿಭಜಿತ ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮ ಒಂದು ಸಾಧಾರಣ ಹಳ್ಳಿ. ಆದರೆ ಆಕೆ ಬೆಳೆದ ಪರಿಸರ ಸಾಮಾನ್ಯದಲ್ಲ. ಸದಾ ನಿಗೂಢತೆಯನ್ನು ಉಳಿಸಿಕೊಂಡು,ಸವಾಲುಗಳನ್ನು ಎಸೆಯುತ್ತಲಿರುವ ಮಲೆನಾಡಿನ ಬೆಟ್ಟ,ಗುಡ್ಡ, ಕಾನನ, ನೀಲ ಸಮುದ್ರ. ಇದು ಆಕೆಯಲ್ಲಿ ಹೋರಾಟದ ಮನೋಭೂಮಿಕೆಯನ್ನು ರೂಪಿಸಿತ್ತು. ಜೊತೆಗೆ ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ತಿನ ಒಡನಾಟ ಶಿಸ್ತನ್ನು ರೂಡಿಸಿತ್ತು. ಪುತ್ತೂರಿನ ಸೈಂಟ್ ಪಿಲೋಮಿನ ಕಾಲೇಜ್ ಓದಿನ ಹಸಿವನ್ನು ಹೆಚ್ಚಿಸಿತ್ತು. ಮಂಗಳೂರಿನ ಪ್ರತಿಷ್ಠಿತ ಕಾಲೇಜ್ ರೋಷನಿ ನಿಲಯದಲ್ಲಿ ಸಮಾಜ ಸೇವೆಯಲ್ಲಿ ಸ್ನಾತಕೋತರ ಪದವಿ ಪಡೆದ ಪ್ರತಿಭಾವಂತೆ ಈಕೆ. ಮುಂದೆ ಸಂಘ ಪರಿವಾರದ ಮೌಲ್ಯಗಳು ಆಕೆಯ ವ್ಯಕ್ತಿತ್ವದ ಭಾಗವಾಯ್ತು. ಸಮಾಜ ಸೇವೆ ಅವರ ಗುರಿಯಾಯ್ತು. ಆ ಸೇವಾ ಮನೋಭಾವವೇ ಸುನಾಮಿ ಸಂತ್ರಸ್ತರ ನೆರವಿಗೆ ಧಾವಿಸಿತು; ಹೆಣಗಳನ್ನು ಎತ್ತಿತು.ಸಂಘ ಪರಿವಾರ ಆಕೆಯ ನಿಷ್ಟೆಯನ್ನು ಗುರುತಿಸಿತು. ಹಾಗಾಗಿ ರಾಜಕೀಯದ ಹಿನ್ನೆಲೆಯಿಲ್ಲದಿದ್ದರೂ ಶಕ್ತ ರಾಜಕಾರಣದ ಪ್ರವೇಶ ಸುಲಲಿತವಾಯಿತು.

ತನ್ನ ಹುಟ್ಟೂರಿಗೆ ಹೊರತಾದ ಅಪರಿಚಿತ ಕ್ಷೇತ್ರ ಯಶವಂತಪುರದಿಂದ ಗೆದ್ದು ಬಂದು ಮಂತ್ರಿಯಾಗುವ ಅವಕಾಶ ಒದಗಿ ಬಂದಾಗಲೂ ಆಕೆ ಅದಕ್ಕಾಗಿ ಸಾಕಷ್ಟು ಪೂರ್ವಸಿದ್ಧತೆಯನ್ನು ಮಾಡಿಕೊಂಡಿದ್ದರು. ತನ್ನ ವಿದ್ಯಾ ಗುರುಗಳಾಗಿದ್ದ ಪ್ರಭಾಕರ ರಾವ್ ಅವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡರು. ಶೋಭಾ ಓದಿದ ಸಮಾಜ ಸೇವೆಗೆ ರಿಲೇಟ್ ಆಗುವ ’ಗ್ರಾಮೀಣಾಬಿವೃದ್ಧಿ ಮತ್ತು ವಿಲೇಜ್ ಪಂಚಾಯತ್’ ಪ್ರಭಾಕರ್ ಅವರ ಪಿ.ಎಚ್.ಡಿ ವಿಷಯವಾಗಿತ್ತು. ಸಮಾಜ ಸೇವೆಗೆ ಹೆಚ್ಚು ಅವಕಾಶಗಳಿರುವ, ನೀರ್ ಸಾಬ್ ಎಂದೇ ಪ್ರಖ್ಯಾತಿ ಗಳಿಸಿರುವ ನಜಿರ್ ಸಾಬಿ ನಿರ್ವಹಿಸಿದ ಗ್ರಾಮೀಣಬಿವೃದ್ದಿ ಮತ್ತು ಪಂಚಾಯತ್ ರಾಜ್ ಖಾತೆಯನ್ನೇ ಶೋಭಾ ಮೆಚ್ಚಿ ಆಯ್ಕೆ ಮಾಡಿಕೊಂಡಿದ್ದರು. ಎಂ.ವೈ.ಘೋರ್ಪಡೆ, ಎಂ.ಪಿ. ಪ್ರಕಾಶ್ ನಂತವರು ಕೆಲಸ ಮಾಡಿದ ಖಾತೆಯಿದು. ಕರ್ನಾಟಕಾದ್ಯಂತ ಹರಡಿಕೊಂಡಿರುವ, ಯಾರೇ ಮಂತ್ರಿಯಾದರೂ ಸದಾ ಸುದ್ದಿಯಲ್ಲಿರುವ ಖಾತೆಯಿದು. ಶೋಭಾ ಪಾದರಸದಂತೆ ಓಡಾಡುತ್ತಾ ಕೆಲಸವೂ ಮಾಡಿಕೊಂಡಿದ್ದರು. ಆದರೂ ಶೋಭಾ ಸಂಪುಟದಿಂದ ಕಿತ್ತೊಗೆಯಲ್ಪಟ್ಟರು. ಯಾಕೆ?

ಆಕೆಯ ಮೇಲೆ ಭ್ರಷ್ಟಾಚಾರದ ಆರೋಪಗಳಿಲ್ಲ, ಹಗರಣಗಳಿಲ್ಲ. ಇಲಾಖೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ದೂರುಗಳಿಲ್ಲ. ಹೈಕಮಾಂಡ್ ಆಕೆಯ ರಾಜಿನಾಮೆ ಕೇಳುವಾಗ ಅದಕ್ಕೆ ಕಾರಣಗಳನ್ನೇ ನೀಡಿಲ್ಲ.ಆದರೂ ಆಕೆಯ ರಾಜಿನಾಮೆಗಾಗಿ ಏಕಕಾಲದಲ್ಲಿ ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿ ರಂಗಮಂದಿರಗಳಲ್ಲಿ ಹದಿನೈದು ದಿನಗಳ ಪ್ರಹಸನ ನಡೆಯಿತು. ನಾಟಕದ ಫಲಶ್ರುತಿಯೆಂದರೆ ಶೋಭಾ ದುರಂತನಾಯಕಿಯಾಗಿ ಹೊರ ಹೊಮ್ಮಿದಳು.
ದುರಂತ ನಾಯಕನ ಕಲ್ಪನೆ ಗ್ರೀಕ್ ನಾಟಕಗಳ ಕೊಡುಗೆ. ಧೀರೋದ್ದಾತ ನಾಯಕನ ಎಲ್ಲಾ ಗುಣಲಕ್ಷಣಗಳಿದ್ದಾಗ್ಯೂ ಆತನ ಮಾನವಸಹಜವಾದ ದೌರ್ಬಲ್ಯವೊಂದು ಆತನನ್ನು ಪತನದಂಚಿಗೆ ತಳ್ಳಿಬಿಡುತ್ತದೆ. ದೇವತೆಗಳು ಕೂಡ ಅವನನ್ನು ಅಲ್ಲಿಂದ ಮೇಲೆತ್ತಲಾರರು. ಅಂತಹ ದೌರ್ಬಲ್ಯವೊಂದು ಶೋಭನಲ್ಲಿತ್ತೆ?

ಯಡಿಯೂರಪ್ಪ ಪ್ರಹಸನದಲ್ಲಿ ಶೋಭಾ ಮಾಧ್ಯಮವನ್ನು ಎದುರಿಸಿದ ರೀತಿಯಲ್ಲೇ ಗೊತ್ತಾಗುತ್ತದೆ; ಆಕೆ ಸ್ವಾಬಿಮಾನದ ದಿಟ್ಟ ಹೆಣ್ಣು ಮಗಳು. ಆಕೆಯಲ್ಲಿ ಆತ್ಮ ವಿಶ್ವಾಸ ತುಂಬಿ ತುಳುಕುತ್ತಿತ್ತು. ಪತ್ರಕರ್ತರ ಪ್ರಶ್ನೆಗಳಿಗೆ ಅಳುಕಿಲ್ಲದೆ ಉತ್ತರಿಸುತ್ತಿದ್ದರು. ಕಾಂಟ್ರವರ್ಸಿ ಆಗಬಹುದಾಗಿದ್ದ ಪ್ರಶ್ನೆಗಳಿಗೆ ’ನನಗೆ ಗೊತ್ತಿಲ್ಲ, ನನ್ನಲ್ಲೂ ಆ ಪ್ರಶ್ನೆ ಇದೆ, ಯಾಕೆ ಅಂತಹ ಗೊತ್ತಾಗ್ಲಿಲ್ಲ, ’ಅದು ಹಿರಿಯರ ತೀರ್ಮಾನ...’ ಎಂಬ ಜಾಣತನದ ಉತ್ತರಗಳನ್ನು ನೀಡಿ ಜಾರಿಕೊಳ್ಳುತ್ತಿದ್ದರು. ’ನನಗನ್ನಿಸುತ್ತದೆ...’ ಎಂದು ತನ್ನೊಳಗೆ ಮಾತಾಡಿಕೊಂಡಂತೆ ಮಾತು ಆರಂಭಿಸಿದರೆಂದರೆ ತನ್ನ ನಿಲುವನ್ನು ಸ್ಪಷ್ಟಪಡಿಸುವುದರೊಂದಿಗೆ ಬೇರೆಯವರಿಗೆ ತಲುಪಿಸುವ ಸಂದೇಶವೂ ಅದರಲ್ಲಿ ಅಡಕವಾಗಿದೆ ಎಂದೇ ಅರ್ಥ. ಇಂಥ ಜಾಣೆಯೆದುರು ಬಳ್ಳಾರಿ ಗಣಿ ದೊರೆಗಳ ಪರಿಶ್ರಮದಿಂದ ಸಂಸತ್ ಸದಸ್ಯೆಯಾದ ಶಾಂತಳ ಸೌಂಡ್ ಬೈಟ್ ನ್ನು ಹೋಲಿಸಿ ನೋಡಿ; ’ನಾಲಗೆ ಕುಲವನರುಹಿತು’ ಎಂದು ಇಂತಹ ಸಂದರ್ಭವನ್ನು ನೋಡಿಯೇ ಪಂಪ ಬರೆದಿರಬೇಕೆನಿಸುತ್ತದೆ.

’ಯಡಿಯೂರಪ್ಪ ಪ್ರಹಸನ’ದಲ್ಲಿ ’ಮೇಲ್ ಇಗೋ’ ಒಟ್ಟಾಗಿ ಕೆಲಸ ಮಾಡಿತ್ತೆ? ಹೌದೆಂದು ಕಾಣುತ್ತದೆ. ಅದಕ್ಕೆ ಕಾರಣವಾದದ್ದು ಆಕೆಯ ಕೆಲಸದ ವೈಖರಿ; ತನ್ನ ಖಾತೆಯ ಸಮರ್ಥ ನಿರ್ವಹಣೆ. ಸಾಮಾನ್ಯವಾಗಿ ಯಾರನ್ನೂ ಹೊಗಳದ ವಿರೋಧ ಪಕ್ಷದ ನಾಯಕ ಉಗ್ರಪ್ಪನವರು ಅವರ ಕಾರ್ಯದಕ್ಷತೆಯನ್ನು ಮುಕ್ತಕಂಠದಿಂದ ಹೊಗಳಿ ಅಕೆಗೆ ಗೃಹ ಮಂತ್ರಿಯಾಗುವ ಯೋಗ್ಯತೆ ಇದೆಯೆಂದು ಹೇಳಿದ್ದಾರೆ.ಅವರು ಪ್ರತಿಪಕ್ಷದ ನಾಯಕನಿರಬಹುದು ಆದರೂ ಕಲ್ಲಿನಲ್ಲಿ ಮೊಸರು ಹುಡುಕುವ ಉಗ್ರಪ್ಪನಂಥ ಉಗ್ರ ಮಾತುಗಾರನ ಬಾಯಿಯಿಂದ ಹೊಗಳಿಸಿಕೊಳ್ಳುವುದೆಂದರೆ ಸಾಮಾನ್ಯ ಮಾತಲ್ಲ.
ಶೋಭಾ ಮುಖ್ಯಮಂತ್ರಿ ಜೊತೆ ಹೊಂದಿದ್ದ ಆತ್ಮೀಯ ಸಂಬಂಧ ’ಎಲ್ಲಾ ಗುಣಗಳನ್ನು ಮಸಿ ನುಂಗಿಬಿಡ್ತು’ ಎಂಬ ಗಾದೆಯಂತಾಯ್ತು. ಇಲ್ಲವಾದರೆ ರೇಣುಕಾಚಾರ್ಯಾನಂತಹ ಕಚ್ಚೆ ಹರುಕ, ಕ್ಷುದ್ರ ಜಂತು ಆಕೆಯ ಮೇಲೆರಗಲು ಸಾಧ್ಯವಿತ್ತೆ? ಅವರು ಆರೋಗ್ಯಕರ ಅಂತರವನ್ನು ಕಾಯ್ದುಕೊಂಡಿದ್ದರೆ ಇಷ್ಟು ದೊಡ್ಡ ಪ್ರಹಸನವಾಗುತ್ತಿರಲಿಲ್ಲವೇನೋ...ಅದನ್ನು ಕಣ್ಣು ಕುಕ್ಕುವಂತೆ ಸಾರ್ವಜನಿಕಗೊಳಿಸಿದ್ದು ಅವರು ಮಾಡಿದ ಬಹುದೊಡ್ಡ ತಪ್ಪು. ಅವರ ಸಂಬಂಧ ಸಚಿವೆಯ ಕಾರ್ಯವೈಖರಿಯಲ್ಲಿ ಪ್ರತಿಫಲನಗೊಳ್ಳುತ್ತಿತ್ತು.ಎಲ್ಲಾ ಸಚಿವರ ಖಾತೆಗಳಲ್ಲಿ ಮೂಗು ತೂರಿಸುತ್ತಾರೆ ಎಂದು ಶಾಸಕರೊಬ್ಬರು ಆರೋಪಿಸುತ್ತಾರೆ; ಸಚಿವರಲ್ಲ. ಮುಖ್ಯಮಂತ್ರಿಗಳ ಬಳಿಗೆ ಬರುವ ಫೈಲುಗಳನ್ನೆಲ್ಲಾ ಅವರು, ’ಶೋಭಾ ಒಮ್ಮೆ ನೋಡಿ ಬಿಡಲಿ’ ಅನ್ನುತ್ತಿದ್ದರಂತೆ. ಬಹುಶಃ ಮುಖ್ಯಮಂತ್ರಿಗಳ ಕಾರ್ಯ ಬಾಹುಳ್ಯ ಅವರು ಇನ್ನೊಬ್ಬ ಆಪ್ತ ಸಚಿವರನ್ನು ಅವಲಂಭಿಸುವಂತೆ ಮಾಡಿರಬಹುದು. ತಮಗೆ ವಹಿಸಿದ ಕೆಲಸವನ್ನು ಶೋಭಾ ತುಂಬಾ ಕಟ್ಟುನಿಟ್ಟಾಗಿ ಪಾಲಿಸಿರಬಹುದು. ಇದೇ ’ಸೂಪರ್ ಸಿ.ಎಂ’ ಎಂಬ ಆಪಾದನೆಗೆ ಕಾರಣವಾಗಿರಬಹುದು.

ಇದೆಲ್ಲಾ ’ಬಹುದು’ ಸಾಮ್ರಾಜ್ಯ. ಆದರೆ ಎದ್ದು ಕಾಣುವ, ಅತೃಪ್ತರನ್ನು ಮತ್ತಷ್ಟು ಕುದಿಸುವ ಕಾರಣವೊಂದಿದೆ.ಅದು, ಇದುವರೆಗೆ ನಡೆದುಕೊಂಡು ಬಂದ ಸಂಪ್ರದಾಯದಂತೆ ಕ್ಯಾಬಿನೆಟ್ ಬ್ರಿಫಿಂಗ್ ಅನ್ನು ವಾರ್ತಾ ಸಚಿವರು ಅಥವಾ ಸಂಪುಟದ ಹಿರಿಯ, ಅನುಭವಿ ಸಚಿವರು ನಡೆಸುತ್ತಿದ್ದರು. ಆದರೆ ಅದನ್ನು ಹೊಸಬಳಾದ ಶೋಭಾಗೆ ಮುಖ್ಯಮಂತ್ರಿಗಳು ಕೊಟ್ಟರು.ಇದು ಹಲವು ಸಚಿವರಿಗೆ ಇಷ್ಟವಾಗಲಿಲ್ಲ. ಅದನ್ನು ನಯವಾಗಿ ಆಕೆ ತಿರಸ್ಕರಿಸಬಹುದಿತ್ತು ಆದರೆ ಆಕೆ ಹಾಗೆ ಮಾಡಲಿಲ್ಲ. ಶೋಭಾ ಬ್ರಹ್ಮಚಾರಿಣಿಯಾಗಿರಬಹುದು ಆದರೆ ಸನ್ಯಾಸಿಯಲ್ಲ. ಬ್ರಹ್ಮಚರ್ಯಕ್ಕೂ ಸನ್ಯಾಸತ್ವಕ್ಕೂ ಅಪಾರ ವ್ಯತ್ಯಾಸವಿದೆ. ಬ್ರಹ್ಮಚರ್ಯ, ಸಮಾಜದಲ್ಲಿದ್ದುಕೊಂಡೇ ಯಾವುದೋ ಒಂದು ಸಾಧನೆಗಾಗಿ ಸಂಕಲ್ಪ ತೊಟ್ಟು ವೈವಾಹಿಕ ಬಂಧನಗಳಿಂದ ದೂರವಿರುವುದು. ಸನ್ಯಾಸತ್ವ ಎಂದರೆ ಸಮಾಜದಿಂದ ದೂರವಾಗಿ, ಏಕಾಂತದಲ್ಲಿದ್ದು ಆತ್ಮೋನ್ನತಿಗಾಗಿ, ಸಮಾಜದ ಒಳಿತಿಗಾಗಿ ಚಿಂತನೆ ನಡೆಸುವುದು. ಈ ಅರ್ಥದಲ್ಲಿ ಶೋಭಾ ರಾಗ ದ್ವೇಷಾದಿ ಭಾವನೆಗಳನ್ನು ಮೀರಿದವರೇನಲ್ಲ!
ಒಬ್ಬ ಗಂಡಸಿಗೆ ಅವಮಾನ ಮಾಡಬೇಕಾದರೆ ಅವನನ್ನು ಕೆರಳಿಸಬೇಕಾದರೆ ಏನು ಮಾಡಬೇಕು? ಅವನಿಗೆ ಸಂಬಂಧಪಟ್ಟ ಹೆಣ್ಣೊಬ್ಬಳನ್ನು ಕೆಣಕಬೇಕು; ಅವಮಾನಿಸಬೇಕು; ಚಾರಿತ್ರ್ಯವಧೆ ಮಾಡಬೇಕು.
ಸ್ವಸಾಮರ್ಥ್ಯದಿಂದ ತನ್ನ ಕೇತ್ರದಲ್ಲಿ ಹಂತ ಹಂತವಾಗಿ ಮೇಲೆರುತ್ತಿರುವ ಮಹಿಳೆಯನ್ನು ಪ್ರಪಾತಕ್ಕೆ ದೂಡಿಬಿಡಲು ಏನು ಮಾಡಬೇಕು? ಅವಳ ಚಾರಿತ್ಯವಧೆ ಮಾಡಿದರಾಯ್ತು.
ಇಲ್ಲಿ ಎರಡೂ ಆಗಿದೆ. ಶೋಭಾಳ ಚಾರಿತ್ರ್ಯ ವಧೆಯನ್ನು ಕೇವಲ ರೆಡ್ಡಿ ಬಣದವರು ಮಾತ್ರ ಮಾಡಲಿಲ್ಲ. ಮುಖ್ಯಮಂತ್ರಿಗಳು ಅದಕ್ಕೆ ತುಪ್ಪ ಎರೆದಿದ್ದಾರೆ. ಆಕೆಯ ರಾಜಿನಾಮೆಯನ್ನು ಪಡೆದುಕೊಳ್ಳುವ ಸಂದರ್ಭ ಬಂದಾಗ ಸಾರ್ವಜನಿಕವಾಗಿ ಕಣ್ಣೀರು ಹಾಕಿ ಮುಖ್ಯಮಂತ್ರಿ ಘನತೆಗೆ ಕುಂದು ತಂದಿದ್ದಾರೆ. ತನ್ನ ದೌರ್ಬಲ್ಯವನ್ನು ಜಗಜ್ಜಾಹಿರುಗೊಳ್ಸಿದ್ದಾರೆ. ಅಷ್ಟಿದ್ದರೆ ಅವರು ಆಕೆಯನ್ನು ಸಂಪುಟದಿಂದ ಕೈ ಬಿಡಲೇಬಾರದಿತ್ತು. ಅದದ್ದಾಗಲಿ ಎಂದು ತಮ್ಮ ನಿಲುವಿಗೇ ಬದ್ಧರಾಗಿರಬೇಕಿತ್ತು.ಆತ್ಮೀಯರ ಸಲಹೆಗಳನ್ನು ಪಡೆಯಬಹುದಿತ್ತು. ಯಡಿಯೂರಪ್ಪ ಹೋರಾಟಗಾರರು ನಿಜ. ಆದರೆ ಮುಂಗೋಪಿ, ಒರಟ, ಒಡ್ಡ.ಇಂತಹ ಯಡಿಯೂರಪ್ಪನವರಿಗೆ ಯಾರಾದರೂ ಆತ್ಮೀಯರಿರಲು ಸಾಧ್ಯವೇ? ನಮ್ಮ ಕನ್ನಡದ ಎಷ್ಟು ಜನ ಪತ್ರಕರ್ತರ ಹೆಸರು ಅವರ ನೆನಪಲ್ಲಿರಬಹುದು? ಬಹುಶಃ ಅದು ಐದಾರನ್ನು ದಾಟಲಾರದು.
ಅಧಿಕಾರದಾಸೆ ಎಲ್ಲಾ ಸಂಬಂಧಗಳನ್ನು ಗೌಣವಾಗಿಸುತ್ತದೆ. ರಾಜಿನಾಮೆ ಸಂದರ್ಭದಲ್ಲಿ ಶೋಭಾ ತೋರಿದ ಸಂಯಮದಲ್ಲಿ ಒಂಚೂರಾದರೂ ಮುಖ್ಯ ಮಂತ್ರಿಗಳು ತೋರಿದ್ದರೆ ನಗುವವರ ಮುಂದೆ ಎಡವಿ ಬಿದ್ದಂತಾಗುತ್ತಿರಲಿಲ್ಲ. ಶೋಭಾ ಪತನಕ್ಕೆ ಅವರು ಆಕೆಯಲ್ಲಿ ಹೊಂದಿದ್ದ ಮೋಹವೇ ಕಾರಣ. ಸ್ವತಃ ಆಕೆಯೇ ಅದಕ್ಕೆ ಅವಕಾಶ ಕೊಟ್ಟಿದ್ದಾಳೆ. ಅವರಿಬ್ಬರ ನಡುವೆ ಯಾವ ರೀತಿಯ ಸಂಬಂಧವಿದೆಯೋ ಅದು ನಮಗೆ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳುವ ಅಗತ್ಯವೂ ನಮಗಿಲ್ಲ. ಆದರೆ ಸಾರ್ವಜನಿಕ ಬದುಕಿನಲ್ಲಿರುವವರು ತಮ್ಮ ನಡವಳಿಕೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಕನಿಷ್ಟಪಕ್ಷ ಮುಚ್ಚಿಟ್ಟುಕೊಳ್ಳುವ ಕಲೆಯಾದರೂ ಗೊತ್ತಿರಬೇಕು. ಯಾಕೆಂದರೆ ಅವರು ಹಲವು ಜನರಿಗೆ ಮಾದರಿಗಳಾಗಿರುತ್ತಾರೆ.

ಮೈಸೂರು ದಸರ ಸಂದರ್ಭದಲ್ಲಿ ಸಾರ್ವಜನಿಕರ ಕಣ್ಣಿಗೆ ರಾಚುವಂತೆ ಕಟ್ಟೌಟ್ ಗಳಲಿ ಅವರಿಬ್ಬರೇ ಯಾಕೆ ಮಿಂಚಬೇಕಿತ್ತು? ಹೋಮ ಹವನ, ಬಾಗಿನ ಸಮರ್ಪಣೆಯಂತ ಧಾರ್ಮಿಕ ಸಮಾರಂಬಗಳಲ್ಲಿ ಯಾಕೆ ಜೊತೆ ಜೊತೆಯಾಗಿ ಕಾಣಿಸಿಕೊಳ್ಳಬೇಕಾಗಿತ್ತು? ಜೋತೆಯಾಗಿ ಯಾಕೆ ವಿದೇಶ ಪ್ರವಾಸಗಳನ್ನು ಕೈಗೊಳ್ಳಬೇಕಾಗಿತ್ತು? ಮಂತ್ರಾಲಯದ ಸ್ವಾಮಿಗಳನ್ನು ರಕ್ಷಿಸಿ ತರಲು ಶೋಭಾಳೇ ಯಾಕೆ ಹೋಗಬೇಕಾಗಿತ್ತು?. ಅದೇ ಪರಿಸರದವರೂ ಕಂದಾಯ ಸಚಿವರೂ ಆದ ಕರುಣಾಕರ ರೆಡ್ಡಿ ಇರಲಿಲ್ಲವೇ?. ಇದು ಪುರುಷ ಪ್ರಧಾನವಾದ ಸಮಾಜ. ಮಹಿಳೆಯರೂ ಕೂಡ ಪುರುಷರಂತೆಯೇ ಯೋಚಿಸುತ್ತಾರೆ. ಬಿಜೆಪಿ ಪಕ್ಷ ಈ ಯೋಚನೆಯ ಒಂದು ಭಾಗ. ಅದರ ಒಳಸುಳಿಗಳೇ ಬೇರೆ. ಪ್ರದರ್ಶಕ ಗುಣಗಳೇ ಬೇರೆ. ಸಮಾಜವನ್ನು ಅಧ್ಯಯನ ಮಾಡಿದ ಶೊಭಗೆ ಈ ಸೂಕ್ಷ್ಮ ಹೊಳೆಯಲಿಲ್ಲವೇ?

ಎಂತಹ ಗಟ್ಟಿ ಮನಸ್ಸಿಗೂ ಭಾವನಾತ್ಮಕವಾದ ಆಸರೆಯೊಂದು ಬೇಕಾಗುತ್ತದೆ. ಹಿಂದಿನ ಮುಖ್ಯಮಂತ್ರಿಗಳಾದ ಅರಸು, ಬೊಮ್ಮಾಯಿ, ಗುಂಡೂರಾವ್, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ಕುಮಾರಸ್ವಾಮಿ ಇವರ ಬಗ್ಗೆ ಕೂಡಾ ಇಂತಹ ವದಂತಿಗಳಿದ್ದವು. ಆದರೆ ಅವೆಲ್ಲಾ ತೆರೆಯ ಮರೆಯ ಪ್ರಹಸನಗಳು, ಸಾರ್ವಜನಿಕರ ಕಣ್ಣಿಗೆ ರಾಚುತ್ತಿರಲಿಲ್ಲ. ಈಗ ರಾಚಿದೆ. ’ಮೆಲ್ ಇಗೋ’ ಕೆಲಸ ಮಾಡಿದೆ. ಸಮರ್ಥ ನಾಯಕಿಯಾಗುವ ಎಲ್ಲಾ ಅರ್ಹತೆಗಳಿರುವ ವಿದ್ಯಾವಂತ ಯುವ ರಾಜಕಾರಣಿ ಸಧ್ಯಕ್ಕೆ ಪುರುಷ ರಾಜಕಾರಣಕ್ಕೆ ಬಲಿಪಶುವಾಗಿದ್ದರೆ. ಕುರುಕ್ಷೇತ್ರ ಯುದ್ಧದಲ್ಲಿ ದುರ್ಯೋಧನ, ದುಶ್ಯಾಸನ, ಕರ್ಣ, ಜಯದೃಥ ಮುಂತಾದ ಅತಿರಥ-ಮಹಾರಥರೆಲ್ಲಾ ಸೇರಿ ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಕೆಡವಿಕೊಂಡು ಅಮಾನುಷವಾಗಿ ಕೊಂದಂತೆ ರೆಡ್ಡಿ ಬಳಗ ಚಕ್ರವ್ಯೂಹ ಹೆಣೆದಿದೆ. ಆದರೆ ಅದನ್ನೆಲ್ಲಾ ಕೊಡವಿಕೊಂಡು ಎದ್ದು ನಿಲ್ಲುವ ಶಕ್ತಿ ಆಕೆಯೊಳಗೇ ಇದೆ.ಅದನ್ನು ಆಕೆ ಗುರುತಿಸಿಕೊಳ್ಳಬೇಕು ಅಷ್ಟೆ.

Tuesday, November 3, 2009

ಕೆಂಪಿಯ ನೆನಪಲ್ಲಿ





ಅದೊಂದು ದಿನ ಯಾಕೋ ಭರಿಸಲಾಗದಷ್ಟು ಒಂಟಿತನ ನನ್ನನ್ನು ಆವರಿಸಿಕೊಂಡಿತ್ತು. ಇಲ್ಲಿ, ಈ ಬೆಂಗಳೂರೆಂಬ ಮಾಹಿತಿ ನಗರದಲ್ಲಿ ತೀರಾ ಆತ್ಮೀಯತೆಯಿಂದ ಮನಸ್ಸಿನ ಒಳಹೊಕ್ಕು ಮಾತಾಡುವವರು ಯಾರೂ ಇರಲಿಲ್ಲ.

‘ಬೇಸರಿನ ಸಂಜೆಯಿದು...ಬೇಕೆನೆಗೆ ನಿನ್ನ ಜೊತೆ’ ಎಂದು ಗುಣುಗುಣಿಸುತ್ತಾ ಅದನ್ನೇ ಮೊಬೈಲ್ ನಲ್ಲಿ ಕೀ ಮಾಡತೊಡಗಿದೆ. ಆದರೆ ಯಾರಿಗೆ ಕಳುಹಿಸಲಿ?

ಹೀಗೆ ವರ್ತಮಾನ ಅಸಹನೀಯ ಅನ್ನಿಸಿದಾಗಲೆಲ್ಲಾ ಮನುಷ್ಯ ಬಾಲ್ಯಕ್ಕೆ ಮರಳುತ್ತಾನೆ. ಹುಟ್ಟಿದೂರನ್ನು ನೆನೆದು ಅಲ್ಲಿ ನಾನಿರುತ್ತಿದ್ದರೆ...ಆ ಒಡನಾಡಿ ಪಕ್ಕದಲ್ಲಿರುತ್ತಿದ್ದರೆ....ಎಂದು ಮನಸ್ಸು ಹಂಬಲಿಸುತ್ತದೆ.

ನನಗಿನ್ನೂ ನೆನೆಪಿದೆ; ಬಾಲ್ಯದಲ್ಲಿ ನನಗೆ ಅತ್ಯಂತ ದುಃಖವಾದಾಗ ಕೈಯಲ್ಲೊಂದು ಕತ್ತಿ ಹಿಡಿದು ತೋಟಕ್ಕೆ ಹೋಗುತ್ತಿದ್ದೆ. ಎತ್ತರವಾಗಿ ಬೆಳೆದು ನಿಂತಿರುತ್ತಿದ್ದ ಅಡಿಕೆ ಮರಗಳನ್ನು ಸುಮ್ಮನೆ ನೋಡುತ್ತಿದ್ದೆ. ಫಲ ತುಂಬಿ ತುಳುಕುತ್ತಿದ್ದ ತೆಂಗಿನ ಮರದ ಗರಿಗಳ ಮಧ್ಯೆ ಪುರುಳಿ ಹಕ್ಕಿಯ ಗೂಡನ್ನು ಹುಡುಕುತ್ತಿದ್ದೆ. ಕೊಕ್ಕೋ ಗಿಡದಲ್ಲಿ ಮಾಲೆಯಂತೆ ತೂಗಾಡುತ್ತಿದ್ದ ಕಾಯಿಗಳನ್ನು ಲೆಖ್ಖ ಹಾಕುತ್ತಿದ್ದೆ; ಬಾಳೆಯಲ್ಲೇ ಹಣ್ಣಾದ ಬಾಳೆಹಣ್ಣನ್ನು ಹುಡುಕಿ ತಿನ್ನುತ್ತಿದ್ದೆ.

ತೋಟದ ಬದಿಯಲ್ಲಿ ಝುಳು ಝಳು ನದಿ ಹರಿಯುತ್ತಿತ್ತು. ದಡದ ಬಂಡೆಯ ಮೇಲೆ ಕುಳಿತುಕೊಳ್ಳುತ್ತಿದ್ದೆ. ಕಾಲುಗಳಿಗೆ ಮೀನುಗಳು ಕಚ್ಚಿ ಕಚಗುಳಿಯಿಡುತ್ತಿದ್ದವು.ಕಲ್ಲಿನ ಅಡಿಯಲ್ಲಿ ಮೀನೊಂದು ನುಸುಳಿ ಮರೆಯಾದರೆ ಇನ್ನೊಂದು ಕಲ್ಲನ್ನೆತ್ತಿ ಆ ಕಲ್ಲಿನ ಮೇಲೆ ಹೊಡೆಯುತ್ತಿದ್ದೆ. ಕಲ್ಲಿನ ಅಡಿಯಲ್ಲಿದ್ದ ಮೀನು ಸತ್ತು ಹೋಗುತ್ತಿತ್ತು. ಈಗ ನೆನೆಸಿದರೆ ಮನಸ್ಸಿಗೆ ಒಂಥರ ಕಸಿವಿಸಿ.

ನಮ್ಮ ಮನೆಯ ಆಳು ಕರಿಯ ವಾಟೆ ಜಾತಿಯ ಬಿದಿರುಮೆಳೆಯಿಂದ ಕೊಳಲು ಮಾಡಿಕೊಡುತ್ತಿದ್ದ. ಬಂಡೆಯ ಮೇಲೆ ಕುಳಿತು ಕಣ್ಮುಚ್ಚಿ ಕೊಳಲು ನುಡಿಸುತ್ತಿದ್ದೆ. ಆಗ ನನಗೆ ನೆನಪಾಗುತ್ತಿದ್ದವನು ಯಮುನೆಯ ದಡದಲ್ಲಿ ಗೋವುಗಳ ಮಧ್ಯೆ ಕೊಳಲು ನುಡಿಸುತ್ತಿದ್ದ ಕೃಷ್ಣ. ನಂಗೆ ಕೃಷ್ಣ ಇಷ್ಟ. ಅವನ ಕಪ್ಪು ಮೈ ಬಣ್ಣ ಇಷ್ಟ. ಅವನ ಕೊಳಲ ಗಾನ ಇಷ್ಟ. ಇಂದಿಗೂ ಈ ಮೂರೂ ನನಗಿಷ್ಟ.

ಎಷ್ಟೋ ಹೊತ್ತಿನ ನಂತರ ಹೊಳೆಯ ದಡದಿಂದೆದ್ದು ನಾಣಿಲು ಮರದ ಹತ್ತಿರ ಬಂದು ಹಣ್ಣು ಕೊಯ್ದು ತಿನ್ನುತ್ತಿದ್ದೆ. ಎಲೆಯಲ್ಲಿ ಒಂದಷ್ಟು ಹಣ್ಣುಗಳನ್ನು ತಂಗಿಯರಿಗಾಗಿ ಕಟ್ಟಿಕೊಳ್ಳುತ್ತಿದ್ದೆ. ಬೇಲಿ ದಾಟಿ ತೋಟ ಹತ್ತಿ ಬಂದ ಮೇಲೆ ತಪ್ಪದೆ ಹೊಂಬಾಳೆಯನ್ನು ಆಯ್ದುಕೊಳ್ಳುತ್ತಿದ್ದೆ. ಅದು ನನ್ನ ಪ್ರೀತಿಯ ಕೆಂಪಿ ಹಸುವಿಗೆ.

ಕೆಂಪಿ ನನ್ನ ಬಾಲ್ಯದ ಒಡನಾಡಿ. ಅದು ಎಂತಹ ಹರಾಮಿ ದನ ಆಗಿತ್ತೆಂದರೆ ಊರಿನಯಾವ ಬೇಲಿಯೂ ಅದಕ್ಕೆ ಅಡ್ಡಿ ಅಲ್ಲ. ಅದನ್ನು ಮುರಿದು ಒಳನುಗ್ಗಿ ಕದ್ದು ಹುಲ್ಲು ಮೇಯುತ್ತಿತ್ತು. ನಮ್ಮೂರಿನಲ್ಲಿ ದನ-ಕರುಗಳನ್ನು ಹಟ್ಟಿಯಲ್ಲೇ ಕೂಡಿ ಹಾಕಿ ಸಾಕುವ ಪದ್ದತಿ ಇಲ್ಲ. ಬೆಳಿಗ್ಗೆ ಎದ್ದೊಡನೆ ದನಗಳ ಮುಂದೆ ಒಂದಷ್ಟು ಒಣ ಹುಲ್ಲು ಹಾಕುತ್ತಿದ್ದರು. ಆಮೇಲೆ ಹಟ್ಟಿ ಬಾಗಿಲು ತೆಗೆದು ದನಗಳನ್ನು ಬಯಲಿಗೆ ಅಟ್ಟಿ ಬಿಡುತ್ತಿದ್ದರು. ಅವು ಕಾಡಿನಲ್ಲಿ ಅಥವಾ ಗೋಮಾಳದಲ್ಲಿ ಮೇವು ಹುಡುಕಿಕೊಳ್ಳುತ್ತಿದ್ದವು. ಕೆಂಪಿಯಂತಹ ಹರಾಮಿ ದನಗಳಾದರೆ ಯಾರ‍್ಯಾರದೋ ತೋಟ ಗದ್ದೆಗಳಿಗೆ ನುಗ್ಗಿ, ಹೊಟ್ಟೆ ಬಿರಿಯೆ ತಿಂದು ಸೂರ್ಯ ಮುಳುಗುವ ಸಮಯಕ್ಕೆ ಸರಿಯಾಗಿ ಮನೆಗೆ ಹಿಂದಿರುಗುತ್ತಿದ್ದವು.

ಕೆಂಪಿ ಹಸುವಿನ ಬಗ್ಗೆ ಹೇಳುತ್ತಿದ್ದೆ ಅಲ್ವಾ..ಅದೆಂದರೆ ನನಗೆ ಅಚ್ಚುಮೆಚ್ಚು. ಅದಕ್ಕೆ ಬಹಳ ವಿಶಿಷ್ಟ ರೀತಿಯ ಕೊಂಬಿತ್ತು. ಆ ಕೊಂಬುಗಳ ಮೂಖಾಂತರ ಎಂತಹ ದಣಪೆಯನ್ನಾದರು ಅಲ್ಲಾಡಿಸಿ ತೆಗೆದು ಹೊಲ, ತೋಟಗಳಿಗೆ ನುಗ್ಗಿ ಬಿಡುತಿತ್ತು. ಇದು ಊರಿಗೇ ತಿಳಿದ ವಿಷಯ. ಅದು ದಣಪೆಗೆ ಹಾಕಿದ ಉದ್ದವಾದ ಕೋಲನ್ನು ಕೊಂಬುಗಳ ಮೂಲಕ ಸ್ವಲ್ಪ ಸ್ವಲ್ಪವಾಗಿ ಅಲ್ಲಾಡಿಸು ತೆಗೆಯುವುದೇ ಕಲಾತ್ಮಕ.

ಕೆಂಪಿ ಹಸುವಿನ ಈ ಕಲಾತ್ಮಕತೆಯೇ ಊರವರ ಕಣ್ಣು ಕೆಂಪಗೆ ಮಾಡಿ, ಅದರ ಬೆನ್ನಿನ ಮೂಳೆ ಮೂಳೆಯೂ ಪುಡಿ ಪುಡಿಯಾಗುತಿತ್ತು. ಅದರ ತೊಡೆ ಕೂಡಾ ಕಲ್ಲಿನ ಹೊಡೆತದಿಂದಾಗಿ ಒಂದೆರಡು ಕಡೆ ಉಬ್ಬಿಕೊಂಡಿತ್ತು. ಹೊಟ್ಟೆ, ಭುಜಗಳಲ್ಲಿ ಬಲವಾದ ಕೋಲಿನಿಂದ ಹೊಡೆದ ಉದ್ದನೆಯ ಗುರುತುಗಳಿದ್ದವು. ಅಲ್ಲಿ ರೋಮವಿರಲಿಲ್ಲ.

ಈ ಕೆಂಪಿಗೊಂದು ರೋಗವೂ ಇತ್ತು. ಅದು ಒಮ್ಮೊಮ್ಮೆ ಕಣ್ಣು ಮೆಟ್ರೆ ಮಾಡಿಕೊಂಡು ನೆಲದ ಮೇಲೆ ಬಿದ್ದು ಹೊರಳಾಡುತಿತ್ತು. ಬೇರೆ ದನಗಳೂ ಅಪರೂಪಕ್ಕೆ ಹೀಗೆ ಮಾಡುವುದುಂಟು. ಆಗ ದೃಷ್ಟಿಯಾಗಿದೆ ಎಂದುಕೊಂಡು (ಈ ದೃಷ್ಟಿ ತಾಗುವುದು ಕಲ್ಲುರ್ಟಿ, ಪಂಜುರ್ಲಿ ಮುಂತಾದ ಭೂತಗಳ ದೆಸೆಯಿಂದ) ಕಿವಿ ಸ್ವಲ್ಪ ಕೊಯ್ಯುತಿದ್ದರು. ರಕ್ತ ಬಾರದಿದ್ದರೆ ಸ್ವಲ್ಪ ಜಾಸ್ತಿಯೇ ಕೊಯ್ಯುತಿದ್ದರು. ಒಟ್ಟಿನಲ್ಲಿ ಸ್ವಲ್ಪ ರಕ್ತ ಬರಬೇಕು ಅಷ್ಟೇ. ಹೀಗೆ ಕೊಯ್ದು ಕೊಯ್ದು ನಮ್ಮ ಕೆಂಪಿ ಹಸುವಿನ ಕಿವಿಗಳು ಜೋರು ಮಳೆ ಗಾಳಿಗೆ ಸಿಕ್ಕ ಬಾಳೆ ಎಲೆಯ ಹಾಗೆ ಛಿದ್ರ ಛಿದ್ರವಾಗಿದ್ದವು.

ಹೀಗೆ ಮನೆಯವರಿಂದ, ಊರವರಿಂದ ಉಪೇಕ್ಷೆಗೊಳಗಾದ ಕೆಂಪಿ ಹಸು ಕರು ಬೇರ‍ೆ ಹಾಕಿರಲಿಲ್ಲ. ಇದರ ಹರಾಮಿ ಬುದ್ಧಿ ನೋಡಿ ಯಾವ ಎತ್ತು ಕೂಡ ಇದರ ಹತ್ತಿರ ಸುಳಿಯಲಿಲ್ಲವೇನೋ!. ಅಂತೂ ಈ ಬಂಜೆ ದನದ ಉಪಯೋಗ ಎಂದರೆ ಹಟ್ಟಿಗೆ ಗೊಬ್ಬರ ಅಷ್ಟೇ.

ಇಂತಹ ಕೆಂಪಿ ಹಸು ನನಗೆ ತೀರಾ ಅಚ್ಚುಮೆಚ್ಚಾದುದು ತೀರಾ ಸಹಜವಾಗಿತ್ತು. ಮನೆಯಲ್ಲಿ ಅಪ್ಪ ಸಿಕ್ಕಾಪಟ್ಟೆ ಹೊಡೆಯುತ್ತಿದ್ದರು. ನನ್ನ ಸೊಕ್ಕು, ಗರ್ವ, ಹಟಮಾರಿತನ ಎಲ್ಲರನ್ನು ಕೆರಳಿಸಿಬಿಡುತ್ತಿತ್ತು. ನಾನು ಎಷ್ಟು ಪೆಟ್ಟು ತಿನ್ನುತ್ತಿದ್ದೆನೆಂದರೆ ಅಪ್ಪನ ಬೆತ್ತದ ಛಡಿಯೇಟಿನಿಂದಾಗಿ ತೋಳು, ಬೆನ್ನು, ತೊಡೆಗಳಿಂದ ಕೆಲವೊಮ್ಮೆ ರಕ್ತ ಜಿನುಗುತಿತ್ತು. ಮಂಚದ ಕೆಳಗೆ ಅಡಗಿಕೊಂಡರೆ ಕಾಲಿನಿಂದಲೇ ಒದೆಯುತ್ತಿದ್ದರು.

ನಾನು ಅಪ್ಪ, ಅಣ್ಣ, ಅಮ್ಮ (ಅಮ್ಮ ಹೊಡೆಯುತ್ತಿದ್ದದ್ದು ತೀರ ಅಪರೂಪ. ಹೊಡೆದಾದ ಮೇಲೆ ಅವರು ಒಬ್ಬರೇ ಸೆರಗಿನಿಂದ ಕಣ್ಣೊರಿಸಿಕೊಳ್ಳುತ್ತಾ ಅಳುತ್ತಿದ್ದರು) ಪೆಟ್ಟು ತಿನ್ನುವಾಗಲೆಲ್ಲ ಹಲ್ಲು ಕಚ್ಚಿ ಅದನೆಲ್ಲ ಸಹಿಸಿಕೊಳ್ಳುತ್ತಿದ್ದೆ. ಕೊನೆಗೆ ಸೀದಾ ಹಟ್ಟಿಗೆ ಹೋಗುತ್ತಿದ್ದೆ. ಕೆಂಪಿ ಹಸುವಿನ ಕೊರಳನ್ನಪ್ಪಿ ಅಳುತ್ತಿದ್ದೆ. ಅದರ ಹತ್ತಿರ ಮಾತಾಡುತ್ತಿದ್ದೆ. ಅದರೊಡನೆ ದುಃಖ ತೋಡಿಕೊಳ್ಳುತ್ತಿದ್ದೆ.

‘ನಾನು ನೀನು ಇಬ್ಬರೂ ಒಂದೇ. ನಾವು ಯಾರಿಗೂ ಬೇಡವಾದವರು’ ಎಂದು ತುಂಬಾ ಹೊತ್ತು ಬಿಕ್ಕಳಿಸಿ ಅಳುತ್ತಿದ್ದೆ. ಅದಕ್ಕೆ ಇದೆಲ್ಲ ಅರ್ಥವಾಗುತ್ತಿತ್ತು. ಸುಮ್ಮನೆ ನನ್ನ ನೆತ್ತಿಯನ್ನು ಮೂಸಿ ನೋಡುತ್ತಾ ಮೈಕೈಗಳನ್ನು ನಾಲಗೆಯಿಂದ ಸವರುತಿತ್ತು.

ಇಂತಹ ಕೆಂಪಿ ಹಸು ಒಂದು ದಿನ ಮನೆಗೆ ಬರಲೇ ಇಲ್ಲ. ಯಾರೂ ಅದನ್ನು ಗಮನಿಸಲೇ ಇಲ್ಲ. ನಾನು ಹೇಳಿದರೂ ಯಾರೂ ಕ್ಯಾರೇ ಅನ್ನಲಿಲ್ಲ. ಮಾರನೆಯ ದಿನವು ಬರದಾಗ ಅಪ್ಪ, ಅಣ್ಣನಿಗೆ ಅದನ್ನು ಹುಡುಕಿಕೊಂಡು ಬರಲು ಅಮ್ಮ ಹೇಳಿದರು. ಅವರಿಗೋ ಗೊಬ್ಬರದ ಚಿಂತೆ. ಗದ್ದೆ ತೋಟಗಳಿಗೆ ಹಟ್ಟಿ ಗೊಬ್ಬರವನ್ನೇ ಉಪಯೋಗಿಸುತ್ತಿದ್ದರು. ರಾಸಯನಿಕ ಗೊಬ್ಬರಗಳಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತದೆಯೆಂಬುದು ನನ್ನ ಅಪ್ಪನ ಬಲವಾದ ನಂಬಿಕೆ. ಅದವರ ಪ್ರತಿಪಾದನೆ.

ನಮ್ಮ ಮನೆಯಿಂದ ಒಂದರ್ಧ ಮೈಲಿ ದೂರದಲ್ಲಿ ನಮ್ಮ ದೊಡ್ಡಪ್ಪನ ಜಮೀನಿತ್ತು. ಅಲ್ಲಿ ಅವರು ತೆಂಗಿನ ಸಸಿ ನೆಡಬೇಕೆಂದು ದೊಡ್ಡ ದೊಡ್ಡ ಗುಂಡಿ ತೋಡಿಟ್ಟಿದ್ದರು. ಆ ಗುಂಡಿಗಳಲ್ಲಿ ಆಗಾಗ ನಮಗೆ ಆಮೆಗಳು ಸಿಗುತ್ತಿದ್ದವು. ಇಂತಹ ಒಂದು ಗುಂಡಿಗೆ ನಮ್ಮ ಕೆಂಪಿ ಹೂತು ಬಿದ್ದಿತ್ತು. ಅದರ ಕಾಲುಗಳು ಗುಂಡಿಯ ಒಳಗಿದ್ದವು. ಕೈಗಳು ಗುಂಡಿಯ ಮೇಲ್ಭಾಗದಲ್ಲಿ ಚಾಚಿಕೊಂಡಿದ್ದವು. ದೊಡ್ಡ ಹೊಟ್ಟೆಯನ್ನು ಗುಂಡಿಯೊಳಗೆ ತುರುಕಿಸಿ ಬಿಟ್ಟಂತಾಗಿತ್ತು. ಸುತ್ತಲೂ ನೊಣಗಳು ಮುತ್ತಿಕೊಂಡಿದ್ದವು. ಬಾಲ ಅಲ್ಲಾಡಿಸಿ ಅವುಗಳನ್ನು ಓಡಿಸಲು ಸಾಧ್ಯವಿರಲಿಲ್ಲ. ಏಕೆಂದರೆ ಬಾಲ ಗುಂಡಿಯೊಳಗೆ ಇತ್ತು.

ಎರಡು ದಿನ ಹುಲ್ಲು, ನೀರಿಲ್ಲದೆ ಅದು ಬಸವಳಿದು ಹೋಗಿತ್ತು. ಅಪ್ಪನನ್ನು ನೋಡಿದೊಡನೆ ಅದರ ಕಣ್ಣು ಮಿಂಚಿತ್ತು. ಹಾಗೆಂದು ಅಪ್ಪನೇ ಮನೆಗೆ ಬಂದು ಹೇಳಿ ದೊಡ್ಡ ಕೊಡಪಾನವೊಂದರಲ್ಲಿ ಕಲಗಚ್ಚು ನೀರು ತೆಗೆದುಕೊಂಡು ಕರಿಯನನ್ನು ಕರೆದು ಪಿಕಾಶಿ, ಹಾರೆ, ಗುದ್ದಲಿಗಳನ್ನು ಒಟ್ಟು ಮಾಡಿಕೊಂಡು ದೊಡ್ಡಪ್ಪನ ಮಜಲಿನೆಡೆಗೆ ಹೋದರು.

ಮೊದಲಿಗೆ ಕೆಂಪಿಯ ಮೈಮೇಲೆ ಒಂದು ಕೊಡಪಾನ ತಣ್ಣೀರು ಸುರಿದರು. ಬಾಯಿಬಿಡಿಸಿ ಗೊಟ್ಟದಿಂದ (ಬಿದಿರಿನ ಕೊಳವೆ) ಕಲಗಚ್ಚು ಕುಡುಸಿದರು. ಅದಕ್ಕೆ ಸ್ವಲ್ಪ ಚೈತನ್ಯ ಬಂತು. ಇನ್ನು ಇವರು ತನ್ನನ್ನಿಲ್ಲಿಂದ ಮೇಲೆತ್ತುತ್ತಾರೆ ಎಂಬ ಭರವಸೆ ಮೂಡಿತು ಎಂಬಂತೆ ಕಿವಿಗಳನ್ನು ಅಲ್ಲಾಡಿಸಿತು. ಕಣ್ಣು ಮಿಟುಕಿಸಿತು.

ಅಷ್ಟು ಹೊತ್ತಿಗೆ ವಿಷಯ ತಿಳಿದು ಅಣ್ಣನೂ ಅಲ್ಲಿಗೆ ಬಂದ. ಊರಿನ ಕೆಲವರು ಬಂದರು. ಎಲ್ಲರೂ ಕೆಂಪಿಯ ಹರಾಮಿತನವನ್ನು ಕೊಂಡಾಡುವವರೇ! ಹಾಗಿದ್ದರೂ ಇದನ್ನು ಇಲ್ಲಿಂದ ಎತ್ತುವ ಬಗ್ಗೆಯೂ ಗಂಭೀರವಾದ ಸಲಹೆಗಳನ್ನು ನೀಡತೊಡಗಿದರು. ಕೊನೆಗೆ ಎಲ್ಲರೂ ಸೇರಿ ಗುಂಡಿಯನ್ನು ಇನ್ನಷ್ಟು ಅಗಲ ಮಾಡುವುದೆಂದು ತೀರ್ಮಾನಿಸಿ, ಹಾರೆ-ಗುದ್ದಲಿಗಳನ್ನು ಕೈಗೆತ್ತಿಕೊಂಡರು.

ಗುಂಡಿಯನ್ನು ಅಗೆದು ಅಗಲ ಮಾಡಿದ ಮೇಲೆ ಕೆಂಪಿಯ ಸೊಂಟಕ್ಕೆ ಹಗ್ಗ ಬಿಗಿದು ಆಚೆ ಈಚೆ ಜನ ನಿಂತು ಅದನ್ನು ಬಹು ಪ್ರಯಾಸದಿಂದ ಮೇಲೆತ್ತಿದರು. ಆದರೆ ಕೆಂಪಿ ಏಳಲೊಲ್ಲದು. ಬಹುಶಃ ಎರಡು ದಿನ ಅದೇ ಕಾಂಗರೂ ಸ್ಥಿತಿಯಲ್ಲಿ ಇತ್ತಲ್ಲ, ಅದಕ್ಕೆ ಕೈಕಾಲು ಜೋಮು ಹಿಡಿದಿರಬಹುದೆಂದು ಎಂದುಕೊಂಡರು ಎಲ್ಲ. ಅಲ್ಲೇ ನೆರಳಲ್ಲಿ ಕೂತು ಕೆಂಪಿಯ ಗುಣಗಾನ ಮಾಡುತ್ತಾ ಎಲೆಯಡಿಕೆ ಮೆಲ್ಲತೊಡಗಿದರು.

ಮತ್ತೆ ಪ್ರಯತ್ನಿಸಿದರೂ ಕೆಂಪಿಗೆ ಏಳಲು ಆಗಲೇ ಇಲ್ಲ. ನಮ್ಮ ನಾಟಿ ವೈದ್ಯ ಮಂಜಪ್ಪನೂ ಅಲ್ಲೇ ಇದ್ದ. ಆತ ಕೆಂಪಿಯ ಕೈಕಾಲನ್ನು ಮುಟ್ಟಿ ನೋಡಿ ಬಲಗಾಲು ಮುರಿದಿದೆ ಎಂದ. ನೋಡಿದರೆ ನಿಜವಾಗಿಯು ಅದು ಬಾತುಕೊಂಡಿತ್ತು. ಬಿದ್ದ ರಭಸಕ್ಕೆ ಮೊದಲು ಗುಂಡಿಗೆ ಕಾಲಿಟ್ಟ ಕಾಲು ಮುರಿದಿದೆ.

ಕೆಂಪಿಗೆ ನಡೆಯಲು ಆಗಲಿಲ್ಲ. ಅಲ್ಲೇ ಬಿಟ್ಟು ಹೋಗಲು ಯಾರಿಗೂ ಮನಸ್ಸಾಗಲಿಲ್ಲ. ಕೊನೆಗೆ ಭತ್ತ ಹೊಡೆಯುವ ತಡಿಯನ್ನು ತರಿಸಿ ಅದರ ಮೇಲೆ ಕೆಂಪಿಯನ್ನು ಮಲಗಿಸಿದರು. ಅಣ್ಣ, ಮಂಜಪ್ಪ, ಕರಿಯ, ಶೇಖರ ನಾಲ್ಕು ಜನ ತಡಿಯ ನಾಲ್ಕು ಮೂಲೆಗೆ ಹೆಗಲು ಕೊಟ್ಟರು.

ಮನೆಗೆ ಕೆಂಪಿಯನ್ನು ಹೊತ್ತು ತರುವಾಗ ದಾರಿಯಲ್ಲಿ ನಾಲ್ಕು ಕಡೆ ಇಳಿಸಿ ದಣಿವಾರಿಸಿಕೊಳ್ಳಬೇಕಾಯಿತು. ದಾರಿಯಲ್ಲಿ ಜನ ಅಲ್ಲಲ್ಲಿ ಹುಲ್ಲು, ನೀರು ನೀಡಿ ಕೆಂಪಿಗೆ ಉಪಚಾರ ಮಾಡಿದ್ದೇ ಮಾಡಿದ್ದು. ಕೆಂಪಿಯ ಆಟಾಟೋಪ ನೋಡಿ ‘ಲಟಾಂ ಕುದುರೆ’ ಎಂದು ಅಡ್ಡ ಹೆಸರು ಇಟ್ಟಿದ್ದ ಜನರು ಇವರ‍ೇನಾ ಎಂದು ನನಗಂತೂ ಆಶ್ಚರ್ಯ ಆಗಿತ್ತು.

ಮನೆಗೆ ಬಂದೊಡನೆ ಅಮ್ಮ ಅದನ್ನು ಕರುಗಳನ್ನು ಕಟ್ಟುವ ಕಂಚಿಲುನಲ್ಲಿ ಪ್ರತ್ಯೇಕವಾಗಿ ಇರಿಸಿದರು. ಹಟ್ಟಿಯಲ್ಲಿ ದನಗಳೊಟ್ಟಿಗೆ ಇಟ್ಟರೆ ಅದನ್ನು ಅವೆಲ್ಲಾದರು ತುಳಿದರೆ ಎಂಬ ಭಯ ಅವರಿಗೆ. ಅದಕ್ಕೆ ಹುಲ್ಲು ನೀರಿಟ್ಟು ಉಪಚರಿಸಿದ್ದೇ ಉಪಚರಿಸಿದ್ದು. ಮಂಜಪ್ಪ ದಿನಾ ಬಂದು ನಾರು ಬೇರಿನ ಔಷಧವನ್ನು ಗೊಟ್ಟದಲ್ಲಿ ಕುಡಿಸುತ್ತಿದ್ದ. ಕಾಲಿಗೆ ಔಷಧಿಯನ್ನು ಕಟು ಹಾಕುತ್ತಿದ್ದ. ಅದನ್ನು ಹಿಡಿದುಕೊಳ್ಳಲು ಅಪ್ಪ, ಅಣ್ಣ, ಅಮ್ಮ ಕರಿಯ ಹೆಣಗಾಡುತ್ತಿದ್ದರು. ನಾನು, ತಂಗಿಯರೆಲ್ಲಾ ಮೂಕ ಪ್ರೇಕ್ಷಕರು. ಅದರ ನೆತ್ತಿ ಸವರಿ ಸಾಂತ್ವಾನ ಹೇಳುತ್ತಿದ್ದೆವು.

ದಿನಾ ಸಂಜೆ ಮತ್ತು ಬೆಳಿಗ್ಗೆ ಅದರ ಕಾಲಿನ ಹತ್ತಿರ ಹೊಟ್ಟೆಯ ಅಡಿಗೆ ಹಗ್ಗ ಹಾಕಿ ಆಚೀಚೆ ಹಿಡಿದುಕೊಂಡು ಎದ್ದು ನಿಲ್ಲಿಸುತ್ತಿದ್ದೆವು. ಅದು ಕಾಲೂರಲು ಪ್ರಯತ್ನಿಸುತಿತ್ತು.

ಹೀಗೆ ಸುಮಾರು ದಿನ ಕಳೆಯಿತು. ಕೆಂಪಿ ನಿತ್ರಾಣವಾಗುತ್ತ ಹೋಯಿತು. ಮುರಿದ ಕಾಲು ಸರಿ ಹೋಗಲೇ ಇಲ್ಲ. ಅದಕ್ಕೆ ಇವರಿಂದ ಉಪಚಾರ ಮಾಡಿಸಿಕೊಂಡು ಸಾಕು ಎನಿಸಿತೇನೋ!

ಒಂದು ದಿನ ಬೆಳಿಗ್ಗೆ ಎಂದಿನಂತೆ ನಾನು ಚಾಪೆಯಿಂದ ಎದ್ದವಳೇ ಕೆಂಪಿಯನ್ನು ನೋಡಲು ಹೋದೆ. ಅದು ನೀಳವಾಗಿ ಕತ್ತು ಚಾಚಿ ಮಲಗಿತ್ತು. ಬಾಯಿಂದ ನಾಲಗೆ ತುಸುವೇ ಹೊರಗೆ ಬಂದಿತ್ತು. ಕಣ್ಣು ತೆರೆದೇ ಇತ್ತು. ಆಶ್ಚರ್ಯ ಎಂದರೆ ಅದರ ಕಣ್ಣು ಮಿನುಗುತ್ತಿರುವಂತೆ ಭಾಸವಾಗುತಿತ್ತು. ಮುಟ್ಟಿ ನೋಡಿದೆ. ಮುಖದಲ್ಲಿ ಕೂತಿದ್ದ ನೊಣಗಳೆಲ್ಲಾ ಹಾರಿ ಹೊದವು. ನನಗೆ ಗಾಬರಿಯಾಯಿತು. ಮನೆಗೆ ಓಡಿದೆ. ’ಕೆಂಪಿ ನೀಟ ಮಲಗಿದೆ. ಮುಟ್ಟಿದರೆ ಏಳ್ಲೇ ಇಲ್ಲ.’ ಎಂದು ಅಮ್ಮನಿಗೆ ಹೇಳಿದೆ.

‘ಕೆಂಪಿ ಸತ್ತುಹೋಯಿತು’ ಎನ್ನುತ್ತಾ ಅಪ್ಪ, ಹಾರೆ-ಗುದ್ದಲಿ ತೆಗೆದುಕೊಂಡರು. ಸುಮಾರು ಹೊತ್ತಿನ ನಂತರ ಅಪ್ಪ, ಅಣ್ಣ, ಕರಿಯ, ಅದರ ಹೊಟ್ಟೆಗೆ ಹಗ್ಗ ಕಟ್ಟಿ ಎಳೆದುಕೊಂಡು ಹೋದರು. ಅದನ್ನು ಗುಂಡಿಯಲ್ಲಿಟ್ಟರು. ನನ್ಗೆ ಏನನ್ನಿಸಿತೋ ಏನೋ. ನಾನು ಯಾವಾಗಲೂ ಉಪಯೋಗಿಸುತ್ತಿದ್ದ ಬಿಳಿ ಟವಲ್ಲೊಂದನ್ನು ತಂದು ಅದರ ಮೇಲೆ ಹಾಕಿಬಿಟ್ಟೆ. "ಅಮ್ಮ ನಂಗೆ ಒಂದು ರೂಪಾಯಿ ಪಾವಲಿ ಕೊಡಿ" ಎಂದೆ. ಅಮ್ಮ ಯಾಕೆ ಎಂದರು. "ಕೆಂಪಿಯ ಹಣೆಗಿಡಲು" ಎಂದೆ. ನಮ್ಮ ಅಜ್ಜಿ ಸತ್ತಾಗ ಹೀಗೆ ಮಾಡಿದ್ದನ್ನು ನಾನು ನೋಡಿದ್ದೆ. ಅಮ್ಮ ನಂಗೆ ಒಂದು ರೂಪಾಯಿ ಕೊಟ್ಟರು.

ಇಂದು, ಇಂತಹ ಈ ಬೇಸರದ ಸಂಜೆಯಲಿ ನನಗೆ ನನ್ನ ಬಾಲ್ಯದ ಯಾವ ಒಡನಾಡಿಗಳ ನೆನಪೂ ಅಷ್ಟಾಗಿ ಕಾಡದೆ ಕೆಂಪಿಯೇ ಏಕೆ ಕಾಡುತ್ತದೆ? ಕೆಂಪಿಯ ಯಾವ ಗುಣಗಳು ನನ್ನಲ್ಲಿದ್ದವು? ಅದು ಸಾಂಪ್ರದಾಯಿಕ ಹಸುವಾಗಿರದೆ ಹರಾಮಿ ದನವಾಗಿದ್ದೇ ನನ್ನ ಮೆಚ್ಚುಗೆಗೆ ಕಾರಣವಾಗಿತ್ತೆ?

ಕೈಯಲ್ಲಿದ್ದ ಮೊಬೈಲ್ ರಿಂಗುಣಿಸಿತು. ಅಮ್ಮ ಲೈನಿನಲ್ಲಿದ್ದರು. "ಈ ಸಲ ದಸರಾಕ್ಕೆ ಬರ್ತೀಯಲ್ಲಾ, ಮಕ್ಕಳನ್ನು ಕರೆದುಕೊಂಡು ಬಾ, ಕೆಂಪಿ (ಆ ಕೆಂಪಿಯಲ್ಲ) ಕರು ಹಾಕಿದೆ. ಹೆಣ್ಣು ಕರು. ಕಂದು ಬಿಳಿ ಬಣ್ಣ. ಮಂಗಳಾ ಎಂದು ಹೆಸರಿಟ್ಟಿದ್ದೇವೆ. ಮಕ್ಕಳಿಗೆ ಇಷ್ಟವಾಗುವುದು...." ಅಮ್ಮ ಹೇಳುತ್ತಲೇ ಇದ್ದರು. ನಾನು ಕೇಳಿಸಿಕೊಳ್ಳುತ್ತಲೇ ಇದ್ದೆ.


[ ’ಮಯೂರ’ದಲ್ಲಿ ಪ್ರಕಟವಾದ ಪ್ರಬಂಧ ]

Sunday, October 4, 2009

ನಿಸರ್ಗದ ವಿಸ್ಮಯ!



















ಕಳೆದ ತಿಂಗಳು ಹೆಚ್ಚು ಕಮ್ಮಿ ನಾನು ಧರ್ಮಸ್ಥಳ ಸಮೀಪದ ನನ್ನ ಜಮೀನಲ್ಲೇ ಇದ್ದೆ. ಅಡಿಕೆ, ಕೊಕ್ಕೋ, ಗೇರು, ಬಾಳೆ ಗಿಡಗಳನ್ನು ನೆಡಿಸ್ತಾ, ಗೊಬ್ಬರ ಹಾಕುವುದರಲ್ಲಿ ನಿರತಳಾಗಿದ್ದೆ.
ಮೊನ್ನೆ ಬೆಂಗಳೂರಿಗೆ ಹಿಂದಿರುಗಿದಾಗಲೂ ಮನಸ್ಸು ಜಮೀನು ಕಡೆಯೇ ಎಳೆಯುತ್ತಿತ್ತು. ಧಾರಾಕಾರ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಹೊಂಡದಲ್ಲಿ ನೀರು ನಿಂತು ಹಾಕಿದ ಗಿಡಗಳು ಕೊಳೆತು ಹೋದರೆ....? ಭಯ ಕಾಡುತ್ತಿತ್ತು. ಕಪಿಲೆ ಮುನಿದು ತನ್ನ ಬಲಿಷ್ಟ ತೋಳುಗಳನ್ನು ನನ್ನ ತೋಟಗಳೆಡೆ ಬೀಸಿದರೆ...?ತೋಟಕ್ಕೆ ಹೋಗಲು ಮನಸ್ಸು ನೆಪಗಳನ್ನು ಹುಡುಕುತ್ತಿತ್ತು.

ನೆಪ ಸಿಕ್ಕಿತ್ತು; ಅ.೨ ಗಾಂಧಿ ಜಯಂತಿ. ಗ್ರಾಮ ಸ್ವರಾಜ್ ಕನಸು ಕಂಡವರು. ಹಳ್ಳಿಗಳ ಉದ್ಧಾರದಲ್ಲೇ ದೇಶದ ಪ್ರಗತಿ ಎಂದವರು. ಅವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಅಂದುಕೊಂಡೆ. ಅ.೨ರಂದು ಮುಂಜಾನೆ ಎದ್ದು ಮನೆಯವರನ್ನೆಲ್ಲಾ ಕೂಡಿಸಿಕೊಂಡು ದೇವನಹಳ್ಳಿಯಲ್ಲಿರುವ ’ತೇಜ ಅಗ್ರೋ ಫಾರ್ಮ್’ಗೆ ಬಂದುಬಿಟ್ಟೆ.

’ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು. ಮನೆಯ ಸುತ್ತ ಹೂವ ರಾಶಿ ಹಾಸಿರಬೇಕು...’ ಎಂಬ ಹಾಡಿನ ಸಾಲುಗಳನ್ನು ಎಲ್ಲರಂತೆ ನಾನು ಕೂಡ ಮೆಚ್ಚಿಕೊಂಡಿದ್ದೆ. ಜಮೀನು ಕೊಂಡುಕೊಂಡಿದ್ದೆ. ಹೂ- ಹಣ್ಣು ಬೆಳೆಯದಿದ್ದರೆ ಹೇಗೆ?.

ನನ್ನ ಉದ್ದೇಶ, ಕನಸುಗಳನ್ನು ತೇಜ ನರ್ಸರಿಯ ಮಾಲೀಕರಾದ ರಮೇಶ್ ಅವರಿಗೆ ವಿವರಿಸಿದೆ. ಎರಡು ದಶಕಗಳಿಗಿಂತಲೂ ಹಿಂದಿನಿಂದ ಸಾವಯವ ಪದ್ದತಿಯಲ್ಲಿ ಗಿಡಗಳನ್ನು ಬೆಳೆಸಿ, ನಾಡಿನಾದ್ಯಂತ ವಿತರಿಸುತ್ತಾ, ಆಸಕ್ತರಿಗೆ ತರಬೇತಿ ಶಿಭಿರಗಳನ್ನು ಏರ್ಪಡಿಸುತ್ತಾ ಇರುವ ಪ್ರಗತಿಪರ ರೈತ ಅವರು. ರಮೇಶ್ ನನಗೆ ಮಲೆನಾಡಿಗೆ ಹೊಂದಿಕೊಳ್ಳುವ ೨೦ ರೀತಿಯ ವಿವಿಧ ಹಣ್ಣಿನ ಗಿಡಗಳನ್ನು ನೀಡಿದರು. ಅದರಲ್ಲಿ ಹಲವು ಗಿಡಗಳ ಹೆಸರನ್ನು ನಾನು ಕೇಳಿಯೇ ಇರಲಿಲ್ಲ. ಕಲಾಫಡ್ ಮಾವು, ಕಾಲಪಟ್ಟಿ ಸಪೋಟ, ಕ್ರಿಕೇಟ್ ಬಾಲ್ ಸಪೋಟ, ವಾಟರ್ ಅಪಲ್, ಬಗ್ವಾ ದಾಳಿಂಬೆ, ರೆಡ್ ಸೀತಾಫಲ... ಹೀಗೆ, ನನಗೆ ಯಾವುದನ್ನು ಕೊಂಡುಕೊಳ್ಳಲಿ ಎಂದು ಗೊಂದಲ. ರಮೇಶ್ ಸರಿಯಾದ ಮಾರ್ಗದರ್ಶನವನ್ನು ನೀಡುವುದರಲ್ಲೂ ಸಿದ್ದಹಸ್ತರು. ಎಲ್ಲಾ ಗಿಡಗಳ ಗುಣವಿಶೇಷಗಳನ್ನು ವಿವರಿಸುತ್ತಾ ನಮ್ಮ ಆಯ್ಕೆಯನ್ನು ಸುಗಮಗೊಳಿಸಿದರು.

ನಮ್ಮ ಗಾಡಿಯಲ್ಲಿ ತುಂಬುವಷ್ಟು ಗಿಡಗಳನ್ನು ಹೇರಿಕೊಂಡು, ಮುಂದಿನ ಸರ್ತಿಗಾಗಿ ಇನ್ನಷ್ಟು ಗಿಡಗಳನ್ನು ಗುರುತಿಸಿಟ್ಟುಕೊಂಡೆವು.
ಬ್ಲಾಗ್ ಬರೆದದ್ದು ಇದನ್ನೆಲ್ಲಾ ಹೇಳಲಿಕ್ಕಲ್ಲ ಮಾರಾಯ್ರೆ! ಕೃಷಿ ಯಾರಿಗೆ ಬೇಕು ಅಲ್ವಾ?. ಊರಿಂದ ಬರುವಾಗ ಚಾರ್ಮಾಡಿ ಘಾಟ್ ನಲ್ಲಿ ಬಂದೆವು, ಅದು ನನ್ನ ಇಷ್ಟದ ಹಾದಿ. ಬೆಟ್ಟವನ್ನು ಬಳಸಿ, ಬಳಸಿ ಹತ್ತುತ್ತ ಬರುವಾಗ ನೇಪಾಳ ಹಾದಿಯ ಕಣಿವೆ, ಗಿರಿ ಶೃಂಗಗಳ ನೆನಪು ಬರುತ್ತದೆ. ಜೇನುಕಲ್ಲಿನ ಬಳಸು ದಾರಿಯಲ್ಲಿ ನಿಂತು ಪ್ರಪಾತದತ್ತ ಕಣ್ಣು ಹಾಯಿಸಿದರೆ ದೇವಲೋಕದಲ್ಲಿ ನಿಂತ ಅನುಭವ. ಆದರೆ ನಿನ್ನೆ ಎಲ್ಲವೂ ಹೊಸ ಅನುಭವ; ಮಂಜು ಮುಸುಕಿದ ಹಾದಿ. ಮಧ್ಯಾಹ್ನದಲ್ಲಿಯೇ ಹೆಡ್ ಲೈಟ್ಸ್ ಹಾಕಿಯೇ ಗಾಡಿ ಓಡಿಸಬೇಕಾಗಿತ್ತು. ಬಲಗಡೆ ಮಂಜು ಮುಸುಕಿದ ಪರ್ವತ. ಎಡಗಡೆ ನಯನ ಮನೋಹರವಾದ ಜಲಪಾತಗಳು. ಕ್ಯಾಮಾರವನ್ನು ಮನೆಯಲ್ಲೇ ಬಿಟ್ಟು ಬಂದ ಬಗ್ಗೆ ನನ್ನನ್ನು ನಾನೆಂದೂ ಕ್ಷಮಿಸಿಕೊಳ್ಳಲಾರೆ. ಆದರೂ ನನ್ನ ಕ್ಯಾಮಾರ ಪೋನಿನಿಂದ ತೆಗೆದ ಕೆಲವೊಂದು ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ. ಇನ್ನೂ ಒಂದು ವಾರ ಕಾಲ ಈ ವೈಭವ ನಿಮಗೆ ಕಾಣಸಿಗಬಹುದು. ನೀವು ಹೋಗುವಿರಾದರೆ ಕ್ಯಾಮಾರ ಕೊಂಡು ಹೋಗಲು ಮರೆಯದಿರಿ.

ಏಕ ಕಾಲದಲ್ಲಿ ಜೀವನದಿಗಳು ಉತ್ತರ ಕರ್ನಾಟಕದಲ್ಲಿ ಮೃತ್ಯು ಸ್ವರೂಪಿಯಾಗಿಯೂ, ಘಟ್ಟಪ್ರದೇಶದಲ್ಲಿ ಹೃನ್ಮನ ತಣಿಸುವ ಜಲಪಾತಗಳಾಗಿಯೂ ಅವತರಿಸುವ ವಿಸ್ಮಯವೇ ನಿಸರ್ಗದ ಸೋಜಿಗ!

Wednesday, September 9, 2009

ಸ್ಕೂಟರಿಗೊಂದು ಶ್ರದ್ಧಾಂಜಲಿ






ಒಂದು ದಿವಸ ಹೀಗೆ ವಿಜಯನಗರದಿಂದ ೧೭೦ನೇ ಬಸ್ಸು ಹತ್ತಿ ಮಿನರ್ವ ಸರ್ಕಲ್ ಕಡೆ ಹೊರಟಿದ್ದೆ. ಮಾಮೂಲಿನಂತೆ ಕಿಟಕಿ ಪಕ್ಕದ ಸೀಟೇ ಹಿಡಿದಿದ್ದೆ. ಘನ ಉದ್ದೇಶವೇನೂ ಇರದೆ ಸುಮ್ಮನೆ ಕಿಟಕಿಯಿಂದ ಹೊರನೋಡುತ್ತಾ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳನ್ನು ಗಮನಿಸುತ್ತಿದ್ದೆ.

ಕಾರಣವೇ ಇಲ್ಲದೆ ನನ್ನ ದೃಷ್ಟಿ ದಾರಿಯಲ್ಲಿ ಓಡಾಡುತ್ತಿದ್ದ ದ್ವಿಚಕ್ರ ವಾಹನಗಳ ಮೇಲೆ ಬೀಳುತ್ತಿತ್ತು. ಬೈಕ್ ಎಂದರೆ ನನಗೆ ಚಿಕ್ಕಂದಿನಿಂದಲೂ ಒಂಥರಾ ಮೋಹ. ಅದರ ಶಬ್ದ, ಅದರ ಠೀವಿ, ಆ ಗಾಂಬಿರ್ಯ, ಬಿರುಸು.. ಅದರಲ್ಲೂ ಬುಲೆಟ್ ಶಬ್ದ ಕೇಳಿದರೆ ಒಂಥರ ಉದ್ವೇಗ. ಈಗ ಬಿಡಿ, ಬುಲೆಟ್ ಬಂದರೆ ಯಾವನೋ ಪೋಲಿಸ್ ಬಂದಂತಾಗುತ್ತದೆ.

ಹೀಗೆ ನನ್ನ ಕಣ್ಣುಗಳು ವಾಹನಗಳ ತಪಾಸಣೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನನಗೆ ಜ್ನಾನೋದಯವಾಯ್ತು; ಸ್ಕೂಟರ್ ಸವಾರರ ಹಿಂದಿನ ಸೀಟುಗಳೆಲ್ಲಾ ಖಾಲಿ ಖಾಲಿ. ಅಪರೂಪಕ್ಕೊಮ್ಮೆ ಭರ್ತಿಯಾದ ಸ್ಕೂಟರ್ ಕಂಡರೂ ಅದರಲ್ಲಿ ಸವಾರನಂತೆಯೇ ವಯಸ್ಸಾದ ಗಂಡಸೊಬ್ಬ ಕೂತಿರುತ್ತಿದ್ದ. ಆದರೆ ಬೈಕಿನ ಹಿಂದಿನ ಸೀಟು ಯಾವಾಗಲೂ ಭರ್ತಿ. ದೂರದಿಂದ ನೋಡಿದರೆ ಒಬ್ಬರೇ ಕೂತಿದ್ದಾರೆನೋ ಎಂಬಷ್ಟರ ಮಟ್ಟಿಗೆ ಅಂಟಿಕೊಂಡೇ ಕೂತಿರುವ ಯುವ ಜೋಡಿಗಳು. ಸ್ಕೂಟರೆಂಬ ಮಂದಗಮನೆಯೆದುರು ಬೈಕ್ ಚಿಮ್ಮುವ ಕುದುರೆ.

ಯಾವುದೋ ನಾಟಕ ನೋಡಲೆಂದು ಕಲಾಕ್ಷೇತ್ರಕ್ಕೆ ಹೊರಟಿದ್ದೆ. ಅದು ನನಗೆ ಮರೆತೇ ಹೋಯಿತು. ಸ್ಕೂಟರ್ ಅವಲೋಕನವೇ ನನಗೆ ಹೆಚ್ಚು ಇಂಟ್ರೆಸ್ಟಿಂಗ್ ಅನ್ನಿಸತೊಡಗಿತು. ಒಂದು ಘಂಟೆ ಅವಧಿಯ ನನ್ನ ಪಯಣದಲ್ಲಿ ಕನಿಷ್ಠ ಹತ್ತು ಸಿಗ್ನಲ್ ಗಳಾದರೂ ದೊರೆಯುತ್ತದೆ. ಇದು ನನ್ನ ಸ್ಕೂಟರ್ ಅವಲೋಕನಕ್ಕೆ ಹೆಚ್ಚು ಉತ್ತೇಜನ, ಪ್ರೋತ್ಸಾಹ ನೀಡಿತು.

ಹಳೆಯ ಕಾಲದ ಮುತ್ತೈದೆ ತರಹ ರಸ್ತೆಗಳಲ್ಲಿ ಸ್ಕೂಟರ್ ಓಡಾಡುತ್ತದೆ. ಇದನ್ನು ಯುವಕರು ಓಡಿಸಿದ್ದನ್ನು ನಾನು ನೋಡಿರುವುದು ಅಪರೂಪ. ಅಂಗಡಿಗಳನ್ನು ಇಟ್ಟುಕೊಂಡಿರುವ ಕೆಲವು ಮಾರ್ವಾಡಿ ಹುಡುಗರು ತಮ್ಮ ಅಪ್ಪಂದಿರ ಸ್ಕೂಟರ್ ಓಡಿಸುವುದನ್ನು ನೋಡಿದ್ದೇನೆ. ಅದು ಬಿಟ್ಟರೆ ರಿಯಲ್ ಎಸ್ಟೇಟ್ ನಡೆಸುವ ಕೆಲವು ತರುಣರು ಅಷ್ಟೇ.

ಸ್ಕೂಟರಿನಲ್ಲಿ ಕೂತು ಗೆಳೆಯನ ಸೊಂಟ ಬಳಸಿ ಪಿಸುಗುಡುತ್ತಾ ಸಾಗುವ ಸುಂದರಿಯನ್ನು ಇದುವರೆಗೂ ನಾನು ಕಂಡಿಲ್ಲ. ಸ್ಕೂಟರ್ ಏನಿದ್ದರೂ ದೇವಸ್ಥಾನಕ್ಕೆ ಹೊಗುವ ಮುತೈದೆಯರಿಗೆ, ಆಸ್ಪತ್ರೆಗೆ ಹೋಗುವ ಹೆಂಗಳೆಯರಿಗೆ, ಮಾರ್ಕೇಟಿಗೆ ಹೋಗುವ ವ್ಯಾಪಾರಿಗಳಿಗೇ ಸರಿ. ಸ್ಕೂಟರ್ ಸವಾರರ ಮೇಲೆ ನನಗೆ ಸಿಂಪತಿ ಇದೆ.

ಹೋದಲ್ಲಿ ಬಂದಲ್ಲಿ ಸ್ಕೂಟರ್ ನೋಡುವುದೇ ನನಗೊಂದು ಗೀಳಾಗಿ ಅಂಟಿಕೊಂಡಿತು. ಇದರಿಂದ ಅನೇಕ ರೀತಿಯಲ್ಲಿ ನನಗೆ ಉಪಕಾರವಾಯ್ತು. ಸ್ಕೂಟರ್ ಬಗ್ಗೆ ಅನೇಕ ಹೊಳಹುಗಳು ನನಗೆ ಸಿಕ್ಕವು. ನನ್ನ ವಿಮರ್ಶಾ ನೋಟ ತೀಕ್ಷ್ಣವಾಯಿತು. ಕೊಂಚಮಟ್ಟಿಗೆ ಗಂಡಸರ ಮನಸ್ಥಿತಿ ಅರ್ಥವಾಗತೊಡಗಿತು.

ಮನಸ್ಸು ಬಹಳ ಹಿಂದಕ್ಕೆ ಹೋಯಿತು. ನಾನು ಬೆಂಗಳೂರಿಗೆ ಬಂದ ಹೊಸತು. ಮುಗ್ಧತೆ ಇನ್ನೂ ಇತ್ತು. ಸಂಜೆ ಅಫೀಸ್ ಬಿಟ್ಟೊಡನೆ ನೇರ ಹಾಸ್ಟೇಲ್ ಗೆ ಹೋಗುತ್ತಿದ್ದೆ. ಹತ್ತಿರದ ದಾರಿ. ನಡೆದುಕೊಂಡೇ ಹೋಗುತ್ತಿದ್ದೆ. ನನಗೆ ಗೊತ್ತಿದ್ದುದು ಅದೊಂದೇ ದಾರಿ. ತಲೆ ತಗ್ಗಿಸಿ ನಡೆಯುತ್ತಿದ್ದವಳು ತಲೆ ಎತ್ತುತ್ತಿದ್ದುದು ಹಾಸ್ಟೇಲಿನಲ್ಲೇ. ಕೆಲಮಂದಿ ವಿಳಾಸ ಕೇಳುವವರು ಆಗೀಗ ಮಾತಾದಿಸುತ್ತಿದ್ದರು.

ವರ್ಕಿಂಗ್ ವಿಮೆನ್ಸ್ ಹಾಸ್ಟೇಲ್ ಇದೆಯಲ್ಲಾ, ಅದು ನಮಗೆ ಬಹಳಷ್ಟು ಪ್ರಪಂಚ ಜ್ನಾನವನ್ನು ಕಲಿಸಿಕೊಡುತ್ತದೆ. ಹೆಣ್ಣುಮಕ್ಕಳ ಮಾನಸಿಕ ಪ್ರಪಂಚವೊಂದು ಕಣ್ಣಿಗೆ ಕಂಡೂ ಕಾಣದಂತೆ ತೆರೆದುಕೊಳ್ಳುತ್ತದೆ. ವಿಷಯಾಂತರವಾಯ್ತು ಅಂದಿರಾ...? ಸಾರಿ. ಈಗ ರೋಡಿಗೆ ಬನ್ನಿ.

ನಾನು ನಡೆದುಕೊಂಡು ಹೋಗುತ್ತಿರುವಾಗ ಸ್ಕೂಟರ್ ಏನಾದರೂ ನನ್ನ ಹಿಂದಿನಿಂದ ಬಂದರೆ [ನಾನು ಫುಟ್ ಪಾತ್ ನಲ್ಲಿ ಇರುತ್ತೇನೆ. ಅದರಲ್ಲಿ ನಿಮಗೆ ಸಂಶಯ ಬೇಡ] ಅದು ನನ್ನ ಬಳಿ ಬಂದಾಗ ಸ್ಲೋ ಆಗುತ್ತಿತ್ತು. ಮುಂದೆ ಹಾದು ಹೋದ ಮೇಲೂ ಸವಾರ ಹಿಂದಿರುಗಿ ನೋಡ ನೋಡುತ್ತಲೇ ಹೋಗುತ್ತಿದ್ದ. ಆತ ನನಗೇನಾದರೂ ಪರಿಚಿತನಿರಬಹುದೇ ಎಂದು ನಾನೂ ಹಲವು ಬಾರಿ ಇಂಥವರ ಬಗ್ಗೆ ಯೋಚಿಸುತ್ತಿದ್ದುದುಂಟು.

ಇನ್ನು ಕೆಲವರು ಹತ್ತಿರ ಬರುತ್ತಿದ್ದಂತೆಯೇ ಬಾಯಲ್ಲೇನೋ ಮಣ ಮಣಗುಡಿಸುತ್ತಿದ್ದರು. ಕೆಲವರಂತೂ ತುಟಿ ಚಲನೆಯಿಲ್ಲದೆಯೇ ಹಲ್ಲು ಕಚ್ಚಿ ಗಂಟಲಿನೊಳಗಿನಿಂದಲೇ ’ಬರ್ತೀರಾ?’ ’ರೇಟ್ ಎಷ್ಟು?’ ಎನ್ನುತ್ತಿದ್ದರು. ಇದು ನಿಮಗೆ ಹೇಗೆ ಗೊತ್ತಾಯ್ತು ಎಂದು ಅನುಮಾನಿಸಬೇಡಿ ಮಾರಾಯ್ರೆ. ನಾನು ಭಾಷಾಶಾಸ್ತ್ರದ ವಿದ್ಯಾರ್ಥಿಯಾಗಿದ್ದೆ. ನಾಭಿಮೂಲದಿಂದ ತುಟಿ ಮೂಗುಗಳ ತನಕ ಯಾವ್ಯಾವ ಸ್ವರಗಳು ಎಲ್ಲೆಲ್ಲಿ ಹುಟ್ಟುತ್ತವೆ ಎಂಬುದು ನನಗೆ ಗೊತ್ತು.

ಇಂದಿಗೂ ಸ್ಕೂಟರ್ ನವರನ್ನು ಕಂಡಾಗ ನಂಗೊಂಥರಾ ಅನುಮಾನ. ಇವರೂ ಕೂಡ ಮೆಜೆಸ್ಟಿಕ್ ಸುತ್ತ ಮುತ್ತ ಸಂಜೆ ಹೊತ್ತಲ್ಲಿ ನಿಧಾನವಾಗಿ ಪುಟ್ ಪಾತ್ ಬದಿಯಲ್ಲಿ ಸವಾರಿ ಮಾಡುತ್ತಿರುವವರಾಗಿರಬಹುದೇ? [ಸಂಭಾವಿತ ಸ್ಕೂಟರ್ ಸವಾರರ ಕ್ಷಮೆ ನನ್ನ ಮೇಲಿರಲಿ] ಮತ್ತೆ ವಿಷಯಾಂತರವಾಯಿತು ಅಂತಿರಾ...? ಟ್ರಾಕ್ ಗೆ ಬಂದೆ.

ಒಂದು ಕಾಲದಲ್ಲಿ ಸ್ಕೂಟರ್ ಗೆ ಎಂಥ ರಾಜ ಮರ್ಯಾದೆ ಇತ್ತು ಅಂತೀರ! ಅಳಿಯನಿಗೆ ಮದುವೆಯಲ್ಲಿ ಸ್ಕೂಟರ್ ಕೊಡಿಸುವುದೆಂದರೆ ಮಾವನಿಗೆ ಸಡಗರ. ಮಗಳಿಗೆ ಸಂಭ್ರಮ. ತನ್ನ ಮಾವ ತನ್ನನ್ನು ಗಂಭೀರವಾಗಿ ಪರಿಗಣಿಸಿದ್ದಾನೆ ಎಂದು ಅಳಿಯನಿಗೂ ಹೆಮ್ಮೆ. ಆ ಭಾಗ್ಯ ಈಗೆಲ್ಲಿದೆ ಬಿಡಿ. ಈಗ ಯಾವ ಮಾವನಾದರೂ ಅಳಿಯನಿಗೆ ಸ್ಕೂಟರ್ ಕೊಡಿಸುತ್ತಾನೆಯೇ? ಕೊಟ್ಟರೂ ಅಳಿಯ ತಗೊಂಡಾನೆಯೇ?

’ಎರಡು ಕನಸು’ ಸಿನೇಮಾ ಎಲ್ಲರೂ ನೋಡೇ ನೋಡಿರ್ತಾರೆ. ಅದರಲ್ಲಿ ರಾಜಕುಮಾರ್ ಸ್ಕೂಟರ್ ಓಡಿಸುತ್ತಾ ಹಾಡುವ ’ಎಂದು ನಿನ್ನ ನೋಡುವೆ, ಎಂದು ನಿನ್ನ ಸೇರುವೆ’ ಹಾಡನ್ನು ಯಾರದರೂ ಸ್ಕೂಟರನ್ನು ಮರೆತು ಜ್ನಾಪಿಸಿಕೊಳ್ಳಲು ಸಾಧ್ಯವೇ? ’ಬಯಲು ದಾರಿ’ಯಲ್ಲಿ ಅನಂತನಾಗ್ ಸ್ಕೂಟರ್ ಓಡಿಸಿದಂತೆ ನೆನಪು.

ಸ್ಕೂಟರ್ ಎಂದೊಡನೆ ನೆನಪಾಗುವುದು ಲ್ಯಾಂಬ್ರೆಟಾ ವೆಸ್ಪಾ.ಈ ಹೆಸರಿನೊಡನೆ ತಳುಕು ಹಾಕಿಕೊಂಡಂತೆ ನೆನಪಾಗುವುದು ನಳಿನಿ ದೇಶಪಾಂಡೆಯ ’ಲ್ಯಾಂಬ್ರಟಾ-ವೆಸ್ಪಾ’. ಕವನ
’ಗ್ರಹಗತಿಯೋದುವ ಬ್ರಾಹ್ಮಣರೆಲ್ಲಾ ಸತ್ತೇ ಹೋಗಲಿ ವಿಪ್ಲವದಲ್ಲಿ
ಬಂಧುಬಾಂಧವರಿಷ್ಟರ ಗೊಟ್ಟಿಯ ಚಂದನ ಕಾಷ್ಠಕ್ಕೊಟ್ಟಿರಿ ಬೆಂಕಿಯ.
ಸುಟ್ಟೇ ಹೋಗಲಿ ಹಿಂದೂ ಧರ್ಮ.
ಆದುದ್ದಾಯ್ತು. ಒಳಿತೋ ಕೆಡುಕೋ ಏನೇ ಇರಲಿ, ಅಟಂಬಾಂಬಿನ ಅಣುಸಮರಕ್ಕೆ ನಾಂದಿಯಾದರೂ ನನಗೇನಿಲ್ಲ!.

ತುಂಟ ಹುಡುಗನ ಸೊಂಟಾ ಸುತ್ತಿ ಲ್ಯಾಂಬ್ರಟಾ, ವೆಸ್ಪಾ ಬೆನ್ನನ್ನು ಹತ್ತಿ ಕೀಲು ಕುದುರಿ ರಾಜಕುಮಾರಿ ಒಮ್ಮೆಯಾದರೂ ಆದೇನು! ನರಕಕ್ಕೂ ಹೋದೇನು.”
ಈ ಹುಡುಗಿಯ ಗತ್ತಿಗೆ ಕಾರಣ, ಲ್ಯಾಂಬ್ರೆಟಾ ವೆಸ್ಪಾ ಹತ್ತಿ ತುಂಟಾ ಹುಡುಗನ ಸೊಂಟ ಬಳಸಿದ್ದು. ಆ ಕಾಲಕ್ಕೆ ಅದು ಬಹು ದೊಡ್ಡ ಕ್ರಾಂತಿ. [ಈ ನಳಿನಿ ದೇಶಪಾಂಡೆ ಎಂಬ ನವೋದಯದ ಕವಿ, ನಮ್ಮ ದಿ. ಪೂರ್ಣಚಂದ್ರ ತೇಜಸ್ವಿಯವರ ಮಾನಸ ಪುತ್ರಿ.] ದಕ್ಷಿಣ ಭಾರತದ ಪ್ರಸಿದ್ಧ ನಟ ಪ್ರಕಾಶ ರೈ ಮತ್ತು ಕನ್ನಡಪ್ರಭದ ಸಂಪಾದಕರಾದ ರಂಗನಾಥ್ ಬಳಿ ಕೂಡ ಬಹು ಹಿಂದೆ ಲ್ಯಾಂಬ್ರಟಾ ವೆಸ್ಪಾ ಇತ್ತು. ಅವುಗಳಲ್ಲಿ ನಾನು ಕೂಡ ನನ್ನ ಹುಡುಗನ ಜೊತೆ ಓಡಾಡಿದ್ದೇನೆ.

ಕೇಂದ್ರ ಮಂತ್ರಿಯಾಗಿದ್ದ ರಾಜೇಶ್ ಪೈಲೆಟ್ ಗೊತ್ತಲ್ಲ? ಅವರು ಮದುವೆಯಾದಾಗ ಅವರನ್ನು ಇಂದಿರಾಗಾಂದಿ ತಮ್ಮ ಮನೆಗೆ ಭೋಜನಕ್ಕೆ ಅಹ್ವಾನಿಸಿದ್ದರಂತೆ. ಆಗ ಅವರ ಮನೆಯಲ್ಲಿ ಅಷ್ಟೆಲ್ಲಾ ಕಾರುಗಳಿದ್ದರೂ, ಅವರು ತಮ್ಮ ಪ್ರೀತಿಯ ಸ್ಕೂಟರಿನಲ್ಲಿ ಪತ್ನಿಯನ್ನು ಕುಳ್ಳಿರಿಸಿಕೊಂಡು ಪ್ರಧಾನ ಮಂತ್ರಿಗಳ ಮನೆಗೆ ಹೋಗಿದ್ದರಂತೆ. ಇದನ್ನು ಎಲ್ಲಿಯೋ ಓದಿದ ನೆನಪು.

ಅಷ್ಟೆಲ್ಲಾ ಯಾಕೆ, ಸಹರಾ ಕಂಪೆನಿ ಮುಖ್ಯಸ್ಥ ಇದ್ದಾರಲ್ಲ, ಸುಬ್ರತೋ ಬ್ಯಾನರ್ಜಿ. ಅವರು ತಮ್ಮ ಉದ್ದಿಮೆಯತ್ತ ಮೊದಲ ಹೆಜ್ಜೆಯಿಟ್ಟಾಗ ಅವರಲ್ಲಿದ್ದುದು ಕೇವಲ ಒಂದು ಟೇಬಲ್ ಮತ್ತು ಕುರ್ಚಿ, ಹಾಗೂ ಒಂದು ಲ್ಯಾಂಬ್ರೆಟಾ ವೆಸ್ಪಾ ಸ್ಕೂಟರ್. ಇಂದಿಗೂ ಅವರ ಕಂಪೆನಿಯ ಎಲ್ಲಾ ಬ್ರೋಶರ್ ಗಳಲ್ಲಿ ಇದೇ ಅಧಿಕೃತ ಚಿಹ್ನೆಗಳಾಗಿವೆ. ಮನುಷ್ಯ ಇತಿಹಾಸವನ್ನು ಮರೆಯಬಾರದಲ್ಲವೇ?

ಸಾಲ ಮಾಡಿ ಸ್ಕೂಟರ್ ತೆಗೆದುಕೊಳ್ಳುವುದೆಂದರೆ ಒಂದು ಕಾಲದಲ್ಲಿ ಹರ ಸಾಹಸವಾಗಿತ್ತು. ಅದಕ್ಕಾಗಿ ಬ್ಯಾಂಕ್ ಗಳಿಗೆ ಅಲೆದಾಡಿ ಚಪ್ಪಲಿ ಸವೆದು ಹೋಗುತ್ತಿತ್ತು. ಆದರೆ ಈಗ ಪೇಪರಿನಲ್ಲಿ ಮೋಟಾರು ಕಂಪೆನಿಗಳೇ ಜಾಹೀರಾತು ನೀಡಿ ಕಾರು-ಬೈಕ್ ಗಳನ್ನು ಕೊಡುತ್ತಾರೆ.ಈಗ ಎಲ್ಲವೂ ಸಲೀಸು.

ಒಂದು ರೀತಿಯಲ್ಲಿ ನೋಡಿದರೆ ಸ್ಕೂಟರ್ ಸವಾರನ ಪಾಡು ಎಂದರೆ ಟೋಮೆಟೋ-ರಾಗಿ ಬೆಳೆದ ರೈತನ ಪಾಡು. ಬೈಕ್- ಕಾರು ಇಟ್ಟುಕೊಂಡವರೆಂದರೆ ಕಾಫಿ,ಟೀ ತೋಟದ ಮಾಲೀಕನ ವರಸೆ. ಹೋಲಿಕೆ ಸರಿ ಇಲ್ಲ ಅಂದಿರಾ....?

ಸ್ಕೂಟರ್ ಓನರ್ ನನ್ನು ಸ್ವಲ್ಪ ಹೊತ್ತು ಮಾತಾಡಿಸಿ ನೋಡಿ; ಆತ ಟಿಪಿಕಲ್ ಇಂಡಿಯನ್ ಮೆಂಟ್ಯಾಲಿಟಿಯ ಒಬ್ಬ ಗೃಹಸ್ಥ. ನನಗೊಬ್ಬ ಗೆಳೆಯನಿದ್ದಾನೆ. ಆತನ ಹತ್ತಿರ ಒಂದು ಸ್ಕೂಟರಿದೆ. ಯಾವುದೋ ಕೆಲಸಕ್ಕಾಗಿ ನನಗೆಲ್ಲಿಗೋ ಅರ್ಜೆಂಟ್ ಹೋಗಬೇಕಾಗಿತ್ತು. ’ಸ್ವಲ್ಪ ಅಲ್ಲಿ ತನಕ ಬಿಡೋ’ ಎಂದೆ. ಆತ ಅನುಮಾನಿಸಿದ. ಕೊನೆಗೆ ಒಲ್ಲದ ಮನಸ್ಸಿನಿಂದ ಹತ್ತಿಸಿಕೊಂಡ. ಅಪ್ಪಿತಪ್ಪಿಯೂ ಮೈ ಸೋಕದಂತೆ ಜಾಗೃತೆ ವಹಿಸಿಕೊಳ್ಳುತ್ತಿದ್ದ. ನನಗೆ ರೇಗಿ ಹೋಯಿತು. ಇಳಿಯುವಾಗ ಬೇಕೆಂತಲೇ ಅವನ ಭುಜದ ಮೇಲೆ ಕೈಯಿಟ್ಟು ಇಳಿದೆ. ಮುಂದೆಂದೂ ಆತನ ಸ್ಕೂಟರ್ ಏರುವ ಪ್ರಸಂಗ ಬರಲಿಲ್ಲ.

ಹೀಗೆ ಸ್ಕೂಟರ್ ಸವಾರರ ಜೊತೆ [ಪರಿಚಿತರು ಮಾತ್ರ!] ನನ್ನ ಕುಶಲ ಸಂಭಾಷಣೆಗಳು ನಡೆಯುತ್ತಲೇ ಇರುತ್ತವೆ. ಒಂದು ದಿನ ಪರಿಚಿತರ ಜೊತೆ ಕೇಳಿದೆ,’ನಿಮ್ಮ ಪತ್ನಿ ನಿಮ್ಮ ಜೊತೆ ಸ್ಕೂಟರಿನಲ್ಲಿ ಬರುತ್ತಾರೆಯೇ?” ’ಬರ್ತಾಳಲ್ಲಾ’ ಎಂದರವರು. ಆದರೂ ನನಗೆ ಸಂಶಯ. ಯಾಕೆಂದರೆ ನಾನೆಂದೂ ಅವರು ಸಪತ್ನಿಕರಾಗಿ ಸ್ಕೂಟರ್ ಸವಾರಿ ಮಾಡಿದ್ದನ್ನು ಕಂಡೇ ಇಲ್ಲ.

ಸ್ಕೂಟರ್ ಜೊತೆ ಬೈಕ್ ಬಗ್ಗೆ ಒಂದೆರಡು ಮಾತು ಹೇಳದೆ ಹೋದರೆ ಈ ಪ್ರಬಂಧಕ್ಕೆ ನ್ಯಾಯ ಸಲ್ಲಿಸಿದಂತಾಗುವುದೇ ಇಲ್ಲ. ಯಾಕೆಂದರೆ ಉಳಿವಿಗಾಗಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಬೈಕ್ ಯಾವಗಲೋ ಸ್ಕೂಟರನ್ನು ಹಿಂದಕ್ಕೆ ಹಾಕಿದೆ. ಇದಕ್ಕೆನು ಕಾರಣ?

ಕಾರಣ ; ಯುವ ಜನಾಂಗ ಬೈಕ್ ಗೆ ಒಲಿದಿದೆ. ಅದರ ನಿಲುವು, ವಿನ್ಯಾಸ, ಗಾಂಭೀರ್ಯ ಹಾಗಿದೆ. ಅದರಲ್ಲಿ ವೈಭವ ಇದೆ. ಹಿಂದೆಯೇ ಹೇಳಿದಂತೆ ಅದು ಚಿಮ್ಮುವ ಕುದುರೆ. ನಮ್ಮ ಗಮನಕ್ಕೆ ಬಂದಂತೆ ನಮ್ಮ ಯುವ ಜನಾಂಗದ ಭಾವನೆಗಳು ಈಗೀಗ ತೀವ್ರವಾಗುತ್ತಿದೆ. ಅವರ ಪ್ರೀತಿ, ದ್ವೇಷ, ಪ್ರಣಯ, ಅಭಿವ್ಯಕ್ತಿ ಎಲ್ಲದರಲ್ಲೂ ವೇಗ ಇದೆ; ತೀವ್ರತೆ ಇದೆ. ಅದು ಸ್ಕೂಟರಿನಂತೆ ಅಥವಾ ಭಾರತೀಯ ಸಂಗೀತದಂತೆ ಮನಸ್ಸಿಗೆ ಮುದ ನೀಡುವಂತಹದ್ದಲ್ಲ. ಬೈಕ್ ನಂತೆ ಕೆರಳಿಸುವಂತಹದು.

ಬೇಕಾದರೆ ನೋಡಿ; ಮಹಿಳಾ ಕಾಲೇಜುಗಳೆದುರು ಬೈಕ್ ಗಳ ಮೆರವಣಿಗೆ ಇರುತ್ತದೆ. ಸ್ಕೂಟರ್ ನಾಪತ್ತೆ. ಒಂದು ವೇಳೆ ಯಾವನಾದರೂ ಹುಡುಗ ಆಸೆಯಿಂದ ಅಲ್ಲಿ ಸುಳಿದಾಡಿದರೂ ಯಾವ ಹುಡುಗಿಯೂ ಲಿಪ್ಟ್ ಕೇಳಲಾರಳು. ಸೀಟಿನ ವಿನ್ಯಾಸವೂ ಇದಕ್ಕೆ ಕಾರಣವಿರಬಹುದು. ಬೈಕ್ ನಲ್ಲಿ ಕುಳಿತರೆ ಏಕತೆಯ ಭಾವನೆ ಮೂಡುತ್ತದೆ. ಗೇರ್ ಚೇಂಜ್ ಮಾಡಿದಾಗಲಂತೂ ಪರಸ್ಪರ ಅಂಟಿಕೊಳ್ಳಲೇಬೇಕಾಗುತ್ತದೆ. ಕೈಗಳು ತಾನಾಗಿಯೇ ಸವಾರನ ಬೆನ್ನನ್ನೋ ಸೊಂಟವನ್ನೋ ಹಿಡಿದುಕೊಳ್ಳಲೇ ಬೇಕಾಗುತ್ತದೆ. ಹಾಗಾಗಿ ಪ್ರೇಮಿಗಳಿಗೆ ಯುವ ಜೋಡಿಗಳಿಗೆ, ಮುನ್ನುಗ್ಗುವ ಮನೋಭಾವದವರಿಗೆ ಇದು ಇಷ್ಟವಾಗುತ್ತದೆ.

ಸ್ಕೂಟರ್ ತಯಾರು ಮಾಡಿದ್ದು ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡಂತೆ. ಆದರೆ ಯಾಕೋ ಅದು ಮಹಿಳೆಯರಿಗೆ ಇಷ್ಟವಾಗಲೇ ಇಲ್ಲ. ಪುರುಷರಿಗೆ ಒಲಿಯಿತು. ಆದರೂ ಅದರ ಸೀಟಿನ ವಿನ್ಯಾಸದಿಂದಾಗಿ ಸವಾರರ ನಡುವೆ ಗೌರಯುತವಾದ ಅಂತರವಿರುತ್ತದೆ. ಅಂಟಿಕೊಳ್ಳಲು ಬಯಸುವವರಿಗೆ ಇದು ಎಂದೂ ಇಷ್ಟವಾಗುವುದಿಲ್ಲ!

ಸ್ಕೂಟರಿಗೊಂದು ಸ್ಥಿತಪ್ರಜ್ನತೆ ಇದೆ. ಹಳೆ ತಲೆಮಾರಿನ ಮನೆಯ ಯಜಮಾನನಂತೆ. ಒಂದು ಮಿತಿಯನ್ನು ಮೀರಿ ಅದು ಓಡುವುದಿಲ್ಲ. ಅಷ್ಟೇನೂ ಫೆಟ್ರ‍ೋಲ್ ಕುಡಿಯುವುದಿಲ್ಲ. ಆದರೂ ಅದು ಮ್ಯೂಸಿಯಂ ಸೇರುತ್ತಿದೆ ಅನ್ನಿಸುತ್ತಿದೆ. ಅಲ್ಲವೇ?

ಮನೆಯಲ್ಲಿ ಎರಡ್ಮೂರು ಕಾರು ಇಟ್ಟುಕೊಂಡಿದ್ದರೂ, ತಮ್ಮ ಸ್ಕೂಟರನ್ನು ಧೂಳು ಹೊಡೆದು, ಒರೆಸಿ,ಜೋಪಾನ ಮಾಡುವವರನ್ನು ನಾನು ನೋಡಿದ್ದೇನೆ. ’ಯಾಕೆ ಹೀಗೆ?’ ಅಂತ ಕೇಳಿದರೆ ’ಹೆಂಡತಿ ಹಳಬಳಾದ್ಲು ಅಂತ ದೂರ ತಳ್ಳೋಕಾಗುತ್ತಾ?’ ಅಂತಾರೆ!

ಈಗೀಗ ಅನ್ನಿಸುವುದುಂಟು, ಬೈಕಿನ ರಾಜ ಗಾಂಭೀರ್ಯಕ್ಕಿಂತ ಸ್ಕೂಟರ್ ನ ಸರಳತನವೇ ಸಾಕು ಅಂತ. ಹಾಗಾದರೆ ನಾನು ಕೂಡ ಮ್ಯೂಸಿಯಂ ಸೇರುತ್ತಿದ್ದೇನೆಯೇ? ಗೊತ್ತಿಲ್ಲ. ಇದ್ದರೂ ಇರಬಹುದು.

[ ’ಓ ಮನಸೇ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಪ್ರಬಂಧ]

Saturday, August 8, 2009

ತಿರುವಳ್ಳುವರ್ ಪ್ರತಿಮೆ-ಸಂತೆಗೆ ಮೂರು ಮೊಳ






ತಮಿಳಿನ ಸಂತ ಕವಿ ತಿರುವಳ್ಳುವರ್ ಕರ್ನಾಟಕ ರಕ್ಷಣ ವೇದಿಕೆಯವರ ಕೃಪೆಯಿಂದಾಗಿ ಪಂಚಕೋಟಿ ಕನ್ನಡಿಗರಿಗೆ ಪರಿಚಿತನಾದ. ಅದಕ್ಕಾಗಿ ಸಮಸ್ತ ಕನ್ನಡ ಹೋರಾಟಗಾರರಿಗೆ ನನ್ನ ಅಭಿನಂದನೆಗಳು. ಇದೇ ರೀತಿಯಲ್ಲಿ ತಮಿಳುನಾಡಿನಲ್ಲಿ ನಮ್ಮ ಸರ್ವಜ್ನ ಜನಸಾಮಾನ್ಯರಿಗೆ ಪರಿಚಿತನಾಗಲು ಅಲ್ಲಿಯ ತಮಿಳು ಭಾಷಾಭಿಮಾನಿಗಳು ಶ್ರಮಿಸಿದ್ದರೆ ಅವರಿಗೂ ಕೂಡ ನನ್ನ ನಮನಗಳು.

ಮುಂದೆಂದಾದರು ನಮ್ಮ ಘನ ಸರಕಾರಕ್ಕೆ ತೆಲುಗಿನ ಯೋಗಿ ಕವಿ ವೇಮನನ ಮೂರ್ತಿಯನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸ್ಥಾಪಿಸಬೇಕೆಂದು ದೈವಪ್ರೇರಣೆಯಾಗಲಿ. ರೆಡ್ಡಿಗಾರು ಪ್ರೇರಣೆಯಾದರೂ ಅಡ್ಡಿಯಿಲ್ಲ! ಆ ಮೂಲಕ ವೇಮನ ಸಮಸ್ತ ಕನ್ನಡಿಗರಿಗೂ ಪರಿಚಿತನಾಗಲಿ. ಅದಕ್ಕೂ ಕನ್ನಡ ಸಂಘಟನೆಗಳು ವೇಗವರ್ಧಕವಾಗಿ ಕೆಲಸ ಮಾಡಲಿ.

ದೇಶ- ಭಾಷೆ, ನೆಲ-ಜಲ, ಜಾತಿ-ಧರ್ಮವೆಂಬುದು ಭಾವಕೋಶಕ್ಕೆ ಸಂಬಂಧಪಟ್ಟ ಸೂಕ್ಷ್ಮ ವಿಚಾರಗಳು. ಇದಕ್ಕೆ ಪೆಟ್ಟಾದರೆ ವ್ಯಕ್ತಿ ಕೆರಳುತ್ತಾನೆ. ಭಾವವಿಕಾರಕ್ಕೆ ಒಳಗಾಗುತ್ತಾನೆ. ಆದರೆ ಲಲಿತ ಕಲೆಗಳಿಗೆ ಇವುಗಳನ್ನು ಶಮನಗೊಳಿಸುವ ಸಾಮಥ್ಯವಿದೆ. ಹಾಗಾಗಿಯೇ ಸಾಹಿತಿ-ಕಲಾವಿದರನ್ನು ಸಾಂಸ್ಕೃತಿಕ ರಾಯಭಾರಿಗಳೆಂದು ಕರೆಯುತ್ತೇವೆ. ಭಾರತ- ಪಾಕಿಸ್ತಾನದ ಅಂತಃಕಲಹ ಏನೇ ಇದ್ದರೂ ಅಲ್ಲಿಯ ಸಂಗೀತಗಾರರಿಗೆ ಇಲ್ಲಿ ಭಾರೀ ಅಭಿಮಾನಿಗಳಿದ್ದಾರೆ. ಅಲ್ಲಿಯ ಜನ ಇಲ್ಲಿಯ ಸಿನಿಮಾಗಳನ್ನು ಹುಚ್ಚೆದ್ದು ಪ್ರೀತಿಸುತ್ತಾರೆ. ಕಲೆ ಮತ್ತು ಕಲಾವಿದರಿಗೆ ದೇಶ, ಭಾಷೆ,ಧರ್ಮದ ಚೌಕಟ್ಟಿಗೆ ಒಳಪಡಿಸಬಾರದು.

ತಿರುವಳ್ಳುವರ್, ಸರ್ವಜ್ನ ಮತ್ತು ವೇಮನ ಚೌಕಟ್ಟುಗಳನ್ನು ಮೀರಿದ ಸಂತ ಕವಿಗಳು. ಮಾನವ ಮಾನವನಾಗಿ ಹೇಗೆ ಬದುಕಬೇಕೆಂಬುದನ್ನು ವಿವರವಾಗಿ ಹೇಳಿದವರು.

ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯ ಹಿಂದೆ ರಾಜಕೀಯ ಉದ್ದೇಶಗಳಿರುವುದನ್ನು ಅಲ್ಲಗೆಳೆಯಲಾಗದು. ಆದರೆ ಅದನ್ನೇ ಮುಖ್ಯವಾಗಿಟ್ಟುಕೊಂಡರೆ ಆ ಮಹಾನ್ ದಾರ್ಶನಿಕ ಕವಿಗೆ ಅವಮಾನ ಮಾಡಿದಂತೆ. ಅದು ಕನ್ನಡ ಸಾರಸ್ವತ ಲೋಕಕ್ಕೆ ಗೊತ್ತಿದೆ. ಹಾಗಾಗಿ ಅವರ್ಯಾರೂ ವಿರೋಧಿಸಲಿಲ್ಲ. ಬಹುಶಃ ಕ.ರ.ವೇ.ಕಾರ್ಯಕರ್ತರಿಗಾಗಲಿ, ವಾಟಾಳ್ ನಾಗರಾಜನಂತ ವಿಧೂಷಕನಿಗಾಗಲಿ ಇದು ಮಸ್ತಕಕ್ಕೆ ಹೋಗುವ ವಿಚಾರ ಆಲ್ಲ.

ಸಂತ ಕವಿ ತಿರುವಳ್ಳುವರ್ ಕ್ರಿಸ್ತನಿಗಿಂತ ೩೦ ವರ್ಷಗಳ ಪೂರ್ವದಲ್ಲಿಯೇ ’ತಿರುಕ್ಕುರಳ್’ನ್ನು ರಚಿಸಿದನೆಂದು ನಂಬಲಾಗಿದೆ. ಬೈಬಲ್’ ಕುರಾನ್ ನಂತರ ಅತಿ ಹೆಚ್ಚು ಭಾಷೆಗಳಿಗೆ ಅನುವಾದಗೊಂಡ ಕೃತಿಯಿದು. ಜಗತ್ತಿನ ೬೦ ಭಾಷೆಗಳಿಗೆ ಅನುವಾದಗೊಂಡಿದೆ. ಇದನ್ನು ಧರ್ಮ ಗ್ರಂಥಗಳ ಸಾಲಿಗೆ ಸೇರಿಸಲಾಗಿದೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರವರು ರಾಷ್ಟ್ರಪತಿಯಾಗಿದ್ದಾಗ ತಿರುಕ್ಕುರಳ್ ಉಕ್ತಿಗಳನ್ನು -’ಕುರುಳ್’ ಎಂಬ ಛಂದಸ್ಸಿನಲ್ಲಿ ಬರೆದ ಏಕೈಕ ಗ್ರಂಥವಿದು. ಎರಡು ಸಾಲುಗಳ ಪದ್ಯವಿದು. ಕುರುಳ್ ಎಂದರೆ ಚಿಕ್ಕದು ಎಂದು ಅರ್ಥ-ರಾಷ್ಟ್ರಪತಿ ಭವನದ ಗೋಡೆಗಳಲ್ಲಿ ಹಾಕಿಸಿದ್ದಾರಂತೆ. ಅಂಥ ಮಹಾನ್ ಕವಿಯ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಕನ್ನಡ ಸಂಘಟನೆಗಳು ರಾದ್ದಾಂತ ಮಾಡಿಕೊಂಡು ಕೋರ್ಟ್ ಮೆಟ್ಟಲೇರಿ ನ್ಯಾಯಾಲಯದಿಂದ ಬುದ್ಧಿವಾದ ಹೇಳಿಸಿಕೊಂಡದ್ದು ಸರಿಯಾಗಿಯೇ ಇದೆ.

ಕನ್ನಡ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾದ ಅಂಶಗಳಾದರೂ ಯಾವುದು? ಕಾವೇರಿ ನದಿನೀರು ಹಂಚಿಕೆಯಲ್ಲಿ ನಮಗೆ ಅನ್ಯಾಯ ಆಗಿದೆ; ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನ-ಮಾನ, ಹೊಗೆನ್ ಕಲ್ ವಿವಾದಗಳಲೆಲ್ಲ ನಮನ್ನು ಮಲತಾಯಿ ಧೋರಣೆಯಿಂದ ಕಾಣಲಾಗಿದೆ ಎಂಬುದು ತಾನೆ? ಸ್ವಾಮಿ, ಇದು ಬದುಕಿಗಾಗಿ ನಡೆಯುವ ಹೋರಾಟ. ಅವರು ಚೆನ್ನಾಗಿ ಜಾಣ್ಮೆಯಿಂದ ಹೋರಾಡುತ್ತಿದ್ದಾರೆ. ಸ್ವಾಭಿಮಾನವಿದ್ದರೆ ನಾವೂ ಹೋರಾಡಬೇಕು. ಆದರೆ ಆ ಹೋರಾಟ ಬೀದಿ ಹೋರಾಟವಾಗಬಾರದು.

ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಬಹುಮತಕ್ಕೆ ಪ್ರಾಶಸ್ತ್ಯ. ಇಲ್ಲಿ ಎಲ್ಲವನ್ನೂ ಕಿತ್ತಾಡಿಯೇ ಪಡೆದುಕೊಳ್ಳಬೇಕು. ತಮಿಳರಲ್ಲಿ ಆ ಕೆಚ್ಚಿದೆ. ಅಲ್ಲಿಯ ಐಎಸ್ ಅಧಿಕಾರಿಗಳು ಲಾಬಿ ಮಾಡುತ್ತಾರೆ.ಸಂಸದರು ಒತ್ತಡ ಹಾಕುತ್ತಾರೆ. ತಮ್ಮ ರಾಜ್ಯಕ್ಕೆ ಒಳ್ಳೊಳ್ಳೆಯ ಯೋಜನೆಗಳನ್ನು ಮಂಜೂರು ಮಾಡಿಸಿಕೊಳ್ಳುತ್ತಾರೆ. ಬಜೆಟ್ ನಲ್ಲಿ ಹೆಚ್ಚಿನ ಹಣ ಪಡೆದುಕೊಳ್ಳುತ್ತಾರೆ. ಅದನ್ನು ಕರ್ನಾಟಕದ ರಾಜಕಾರಣಿಗಳಿಗೆ ಮಾಡಲು ಸಾಧ್ಯವಿಲ್ಲವೇ? ನಮ್ಮ ಕರ್ನಾಟಕದ ಉದಾಹರಣೆಯನ್ನೇ ನೋಡಿ; ರಾಜ್ಯಗಳಿಗೆ ಬೇಕಾದ ರೈಲ್ವೆ ಬೇಡಿಕೆಗಳನ್ನು ಬಜೆಟಿಗಿಂತ ಮೂರು ತಿಂಗಳ ಮುಂಚಿತವಾಗಿ ಕೇಂದ್ರಕ್ಕೆ ಸಲ್ಲಿಸಬೇಕು. ಅದು ಪರಿಶೀಲನೆಗೆ ಒಳಪಡಲು ಅಷ್ಟು ಕಾಲಾವಕಾಶ ಬೇಕು. ಆದರೆ ನಮ್ಮ ಡಾ.ಯಡ್ಡಿಯೂರಪ್ಪ ಸರಕಾರ ತಮ್ಮ ಬೇಡಿಕೆ ಪಟ್ಟಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದು ಬಜೆಟ್ ಮಂಡನೆಯ ಒಂದು ವಾರಕ್ಕೆ ಮೊದಲು. ಸಾಮಾನ್ಯವಾಗಿ ಎಲ್ಲಾ ಸಂದರ್ಭದಲ್ಲೂ ನಮ್ಮ ಸರಕಾರದ್ದು ಹೆಬ್ಬಾವಿನ ನಡೆಯೇ. ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ. ತಮಿಳುನಾಡಿನಿಂದ ನಮಗೇನಾದರೂ ಅನ್ಯಾಯವಾಗಿದ್ದರೆ ನಮ್ಮ ರಾಜಕಾರಣಿಗಳೇ ಅದಕ್ಕೆ ನೇರ ಹೊಣೆಗಾರರು.

ಕೆಲವು ವರ್ಷಗಳ ಹಿಂದೆ ಕಾವೇರಿ ವಿವಾದ ತೀವ್ರವಾಗಿದ್ದ ಸಮಯ; ತಮಿಳುನಾಡು ಸರಕಾರ ದೆಹಲಿಯ ಪ್ರಗತಿ ಮೈದಾನಿನಲ್ಲಿ ಕಾವೇರಿಯ ಕುರಿತಂತೆ ಪ್ರದರ್ಶನವೊಂದನ್ನು ಆಯೋಜಿಸಿತ್ತು. ಅದಕ್ಕೆ ಹೋಗಿ ಬಂದ ನನ್ನ ಸಾಹಿತಿ ಮಿತ್ರನೊಬ್ಬ ’ಕಾವೇರಿ ಖಂಡಿತಾ ತಮಿಳುನಾಡಿನವಳೇ’ ಅಂದುಬಿಟ್ಟ. ಅವನು ಕಟ್ಟಾ ಕನ್ನಡಾಭಿಮಾನಿ.ನನಗೆ ಆಶ್ಚರ್ಯವಾಯಿತು. ಕಾವೇರಿಯ ಉಗಮವಾದ ತಲಕಾವೇರಿಯಿಂದ ಆರಂಭಗೊಂಡು ಅದು ಪೊಂಪುಹಾರ್ ನಲ್ಲಿ ಸಮುದ್ರ ಸೇರುವಲ್ಲಿಯವರಿಗಿನ ಕಾವೇರ್‍ಇ ತಟದ ಸಾಂಸ್ಕೃತಿಕ ವಿವರಗಳನ್ನು ಹೃದಯಂಗಮವಾಗಿ ನೃತ್ಯ, ಹಾಡು,ಕುಣಿತಗಳಲ್ಲಿ ರಾಜಧಾನಿಯ ಜನರಿಗೆ, ಮಾಧ್ಯಮದವರಿಗೆ ಅಯೋಜಕರು ತೋರಿಸಿಕೊಡುತ್ತಿದ್ದರಂತೆ.

ತಮಿಳಿನ ಮಹಾಕಾವ್ಯ ಆರಂಭವಾಗುವುದೇ ಕಾವೇರಿಯನ್ನು ಸ್ತುತಿಸುವುದರೊಂದಿಗೆ. ತಮಿಳಿನ ಮಹಾಕವಿ ಕಂಬನ್ ತನ್ನ ಕಂಬ ರಾಮಾಯಣದುದ್ದಕ್ಕೂ ಕಾವೇರಿಯನ್ನು ಮುದ್ದಿನಿಂದ ’ಪೊನ್ನಿ’ ಎಂದು ಕರೆಯುತ್ತಾನೆ. ಪೊನ್ನಿ ಎಂದರೆ ಬಂಗಾರ. ತಮಿಳರ ಬದುಕನ್ನು ಬಂಗಾರ ಮಾಡಿದವಳು ಅವಳು. ಕಾವೇರಿ ಮಾತೆ ತಮಿಳುನಾಡಿಗೆ ವಿಶೇಷ ಔದಾರ್ಯವನ್ನು ತೋರಿದ್ದಾಳೆ. ತಂಜಾವೂರಿನಲ್ಲಿ ದೊಡ್ಡ ಮರವೊಂದರ ರೆಂಬೆಗಳ ತೆರದಲ್ಲಿ ಅಸಂಖ್ಯ ನಿಸರ್ಗದತ್ತ ಕಾಲುವೆಗಳನ್ನು ನಿರ್ಮಿಸಿದ್ದಾಲೆ. ಹಾಗಾಗಿ ಈ ಊರು ಸದಾ ಭತ್ತದ ತೆನೆಗಳಿಂದ ತೊನೆದಾಡುತ್ತಿದೆ.

ಭಾರತದಲ್ಲಿ ಮೊತ್ತಮೊದಲ ಅಣೆಕಟ್ಟು ಕಟ್ಟಲಾಗಿದ್ದು ಎಲ್ಲಿ ಗೊತ್ತೆ? ಅದು ಇಲ್ಲಿಯೇ, ಅಂತ್ಯರಂಗವೆಂದು ಪ್ರಖ್ಯಾತವಾಗಿರುವ ಶ್ರೀರಂಗದಲ್ಲಿ. ಆದಿರಂಗ[ಶ್ರೀರಂಗಪಟ್ಟಣ] ಮಧ್ಯರಂಗ[ಶಿವನಸಮುದ್ರ]ಗಳು ಕರ್ನಾಟಕದಲ್ಲಿವೆ.ಸುಮಾರು ಎರಡನೇ ಶತಮಾದಲ್ಲಿ ಆಳುತ್ತಿದ್ದ ಚೋಳ ದೊರೆ ಕರಿಕಾಲ ಚೋಳ ಕಾವೇರಿ ನದಿಗೆ ಅಣೆಕಟ್ಟು ಕಟ್ಟಿದ ಧೀರ. ಈಗಲೂ ಸುಸ್ಥಿತಿಯಲ್ಲಿರುವ ಈ ಅಣೆಕಟ್ಟನ್ನು ೧೦೬೮ರಲ್ಲಿ ನಿರ್ಮಿಸಿರಬಹುದೆಂದು ತಜ್ನರು ಅಭಿಪ್ರಾಯಪಡುತ್ತಾರೆ. ಕಲ್ಲಣೈ ಎಂದು ಕರೆಯುತ್ತಿದ್ದ ಈ ಅಣೆಕಟ್ಟನ್ನು ಈಗ ಗ್ರಾಂಡ್ ಅಣೆಕಟ್ಟು ಎಂದು ಕರೆಯುತ್ತಾರೆ.

ಕಾವೇರಿ ನಮ್ಮವಳು; ಅದು ನಮ್ಮ ಜೀವನದಿ ಎಂದು ತಮಿಳರು ಭಾವಪರವಶವಾಗಲು ಕಾರಣವಿದೆ. ತಮಿಳುನಾಡಿಗೆ ಕಾವೇರಿಯನ್ನು ಬಿಟ್ಟರೆ ಬೇರೆ ನದಿಯಿಲ್ಲ. ಇರುವ ತಾಮ್ರಪರ್ಣಿ, ವೈಗೈ ನದಿಗಳು ಸಣ್ಣ ನದಿಗಳು ಅವು ಬೇಸಿಗೆಯಲ್ಲಿ ಬತ್ತಿ ಹೋಗುತ್ತವೆ.

ನಮಗೂ ಕಾವೇರಿ ಜೀವನದಿ ಎಂಬುದನ್ನು ದೇಶಕ್ಕೆ ತೋರಿಸಬೇಕಾಗಿದೆ. ಅದನ್ನು ಯಾರು ತೋರಿಸಬೇಕು? ನಿಸ್ಸಂದೇಹವಾಗಿ ರಾಜಕಾರಣಿಗಳೇ. ಆದರೆ ನಮ್ಮ ರಾಜಕಾರಣಿಗಳು ಯೋಚನೆ ಮಾಡುವ ರೀತಿಗೆ ಇಲ್ಲೊಂದು ಉದಾಹರಣೆಯಿದೆ. ರಾಜಕಾರಣಿಯೊಬ್ಬರ ಹೇಳಿಕೆಯಂತೆ ’ಕೃಷ್ಣೆ ಲಿಂಗಾಯಿತರ ನದಿಯಂತೆ, ಕಾವೇರಿ ಒಕ್ಕಲಿಗರನದಿ’ ಅದಕ್ಕೆ ಇರಬಹುದು ಒಗ್ಗಟ್ಟಿನ ಹೋರಾಟದ ಅವಶ್ಯಕತೆಯಿದ್ದಾಗಲೂ ಪರಸ್ಪರ ಮುಖ ತಿರುಗಿಸಿಕೊಂಡಿರುತ್ತಾರೆ.

ನಿಮಗೆ ನೆನಪಿರಬಹುದು. ಏಪ್ರಿಲ್- ಮೇ ತಿಂಗಳಿನಲ್ಲಿಯೂ ದೃಶ್ಯ ಮಾಧ್ಯಮಗಳಲ್ಲಿ ತುಂಬಿದ ಕೆಅರ್ ಎಸ್ ಪ್ರಸಾರವಾಗುತ್ತದೆ. ಅದು ತಮಿಳ್ ಲಾಬಿ. ನೀರಿದ್ದೂ ತಮಿಳುನಾಡಿಗೆ ನೀರು ಬಿಡುವುದಿಲ್ಲ.ನಾವೆಲ್ಲಾ ಜಗಳಗಂಟರು ಎಂದು ದೇಶದಾದ್ಯಂತ ಬಿಂಬಿಸಲಾಗುತ್ತದೆ. ನಮ್ಮದು ಬೌದ್ಧಿಕ ಹೋರಾಟವಾಗಬೇಕು ಅದನ್ನು ಸಾಹಿತಿ, ಕಲಾವಿದರು ಮಾಡಬಲ್ಲರು. ಶಕ್ತಿ ರಾಜಕಾರಣ ಅದನ್ನು ದಿಲ್ಲಿ ದೊರೆಗಳಿಗೆ ತಲುಪಿಸಬೇಕು. ಇದು ಒಂದಕ್ಕೊಂದು ಮೆಳೈಸಬೇಕು. ಈಗಾಗುತ್ತಿರುವುದು ಬೀದಿ ಜಗಳ.

ಕನ್ನಡ ಹೋರಾಟಗಾರರು ರಾಜಕಾರಣಿಗಳ ವಿರುದ್ಧ ಹೋರಾಡಬೇಕು. ರೈತರ ಪರ ನಿಲ್ಲಬೇಕು. ಆದರೆ ಅವರು ಹಾಗೆ ಮಾಡಲಾರರು. ಯಾಕೆಂದರೆ ಅವರಿಗೆ ಇವರಿಂದ ಲಾಭ ಇದೆ. ಇವರಿಗೆ ಅವರಿಂದ ಲಾಬ ಇದೆ.

Friday, July 31, 2009

ನಿಮ್ಮೊಳಗಿನ ’ಬಿಂಬ’ ಯಾರದು?





ಕಳೆದ ವಾರ ನಾನು ಬೆಂಗಳೂರಿನಲ್ಲಿ ಬೆನಕ ತಂಡದ ’ಗೋಕುಲ ನಿರ್ಗಮನ’ ನೋಡಿದೆ. ಪು.ತಿ.ನರ ಈ ಗೀತ ನಾಟಕದ ಹಿಂದಿನ ಭಾವವನ್ನು ಮನಸ್ಸು ಹಿಡಿಯಲೆತ್ನಿಸುತ್ತಿತ್ತು.

ನನ್ನಂತವರ ಮನಸ್ಸಿನಲ್ಲಿ ಯಾವಾಗಲೂ ಕೃಷ್ಣ-ರಾಧೆಯರು ಆದರ್ಶ ಪ್ರೇಮಿಗಳಾಗಿಯೇ ಮೂಡಿಬರುತ್ತಾರೆ. ಅವರ ವಿರಹ ಮತ್ತು ಮಿಲನದ ಹಂಬಲ ಮನುಕುಲದ ಹೆಣ್ಣು ಗಂಡಿನ ಸಂಬಂಧದ ನಿರಂತತೆಗೆ ಸಾಕ್ಷಿಯೆನಿಸುತ್ತದೆ.

ಸಂಸಾರದ ತಿರುಗಣೆಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಗೋಪಿಕೆಯರಿಗೆ ಕೃಷ್ಣನ ಕೊಳಲಗಾನ ಬಿಡುಗಡೆಯ ಬೆಳಕಾಗಿತ್ತು. ಅದು ಅವರು ಕಂಡುಕೊಂಡ ಸುಖದ ಒಳಹಾದಿ. ಆ ಹಾದಿ ಒಂದು ದಿನ ಶಾಶ್ವತವಾಗಿ ಮುಚ್ಚಿ ಹೋಗುತ್ತದೆ. ಆಗ ಅವರು ಅನುಭವಿಸಿದ ನೋವು, ಸಂಕಟ, ಆಕ್ರಂದನ ಪ್ರೇಕ್ಷಕರ ಎದೆಯೊಳಕ್ಕೂ ಇಳಿಯುತ್ತಿತ್ತು.

ಯಾಕೋ ಗೊತ್ತಿಲ್ಲ; ಕೃಷ್ಣ ಎಂದೊಡನೆ ನಾನು ಅಂತರ್ಮುಖಿಯಾಗುತ್ತೇನೆ. ಇಂದ್ರಿಯಗಮ್ಯವಾದುದಕ್ಕಿಂತ ಹೆಚ್ಚಿನದೇನನ್ನೋ ಈ ಹೆಸರಿನಲ್ಲಿ ಕಾಣಲೆತ್ನಿಸುತ್ತೇನೆ.

ಬಿಡುಗಡೆಯ ಹಂಬಲ ಮತ್ತು ಅನನ್ಯತೆಯ ತುಡಿತ ಪ್ರತಿ ಮನಷ್ಯನಲ್ಲೂ ಇರುತ್ತದೆ. ಬಹಳ ಕಾಲದಿಂದ ನನಗೂ ಸ್ವಲ್ಪ ಕಾಲ ಒಂಟಿಯಾಗಿ ಇರಬೇಕೆನಿಸುತ್ತಿತ್ತು. ಅಲ್ಲಿ ಟೀವಿ ಇರಬಾರದು. ಮೊಬೈಲ್ ಪೋನ್ ರಿಂಗಣಿಸಬಾರದು. ಅತಿ ಪರಿಚಿತ ಮುಖಗಳಿರಬಾರದು. ಬಾಲ್ಯಕ್ಕೆ ಮರಳಿದ ಹಾಗಿರಬೇಕು. ಹಾಗಾಗಿಯೋ ಏನೋ ನಾನು ಹೆಗ್ಗೋಡಿನಲ್ಲಿರುವ ನೀನಾಸಂನ ಸಂಸ್ಕೃತಿ ಶಿಬಿರಕ್ಕೆ ಬಂದುಬಿಟ್ಟೆ.

ನಮ್ಮ ಸುಪ್ತ ಮನಸ್ಸಿನಲ್ಲಿ ಪಡಿಮೂಡಿದ ಘಟನೆಗಳು, ಭಾವಕೋಶದಲ್ಲಿ ಸೇರಿಹೋದ ವ್ಯಕ್ತಿಗಳು, ಮಧುರ ನೆನಪುಗಳು ಕನಸಿಗೆ ಬಂದು ಕಾಡಬಹುದು; ಅಥವಾ ವರ್ತಮಾನದಲ್ಲಿ ಎದುರಿನಲ್ಲಿ ಘಟಿಸಿದಂತೆ, ಪ್ರತ್ಯಕ್ಷವಾದಂತೆ ಭಾಸವಾಗಬಹುದು. ಹೆಗ್ಗೋಡಿನಲ್ಲಿಯೂ ಹಾಗೆ ಆಯ್ತು. ಇಲ್ಲಿನ ಸಂಘಟಕರೊಬ್ಬರನ್ನು ಕಂಡಾಗ ನನಗೆ ನನ್ನ ಬಾಲ್ಯದ ಒಡನಾಡಿ ಶರಧಿಯನ್ನೇ ಕಂಡಂತಾಯ್ತು.

ಬೇಕಾದರೆ ಸ್ವಲ್ಪ ಹಿಂದಕ್ಕೆ ಹೋಗಿ ನೋಡಿ; ನಿಮಗೆ ಆತ್ಮೀಯರಾದವರ, ನಿಮ್ಮ ಮೇಲೆ ಪ್ರಭಾವ ಬೀರಿದವರ ಮುಖಗಳನ್ನು ಕಣ್ಣಮುಂದೆ ತಂದುಕೊಳ್ಳಿ. ಅವುಗಳಲ್ಲೊಂದು ಸಾಮ್ಯತೆ ಕಂಡುಬರುತ್ತದೆ. ಕೆಲವರ ಸಾನಿಧ್ಯದಲ್ಲಿ ನೀವು ತುಂಬಾ ಕಂಫರ್ಟಬಲ್ ಆಗಿ ಇರಬಲ್ಲಿರಿ. ಈ ಸುರಕ್ಷತೆಯ ಭಾವನೆ ಸುಮ್ಮನೆ ಬರುವುದಿಲ್ಲ. ನಿಮ್ಮ ಮನಸ್ಸು ಇಂದ್ರಿಯಾತೀತವಾದ ಯವುದೋ ಒಂದನ್ನು ಇಲ್ಲಿ ಅನುಭವಿಸುತ್ತಿರುತ್ತದೆ. ಆಧುನಿಕ ಪರಿಭಾಷೆಯಲ್ಲಿ ಇದನ್ನು ವೇವ್ ಲೆಂಗ್ತ್ ಅಂತ ಬೇಕಾದರೆ ಕರೆಯಬಹುದು.

ನೀನಾಸಂಗೆ ಬಂದೆ ಎಂದು ಹೇಳಿದೆನಲ್ಲಾ... ಅಲ್ಲಿ ತಂಗಿದ ಮೊದಲ ರಾತ್ರಿಯೇ ನನಗೆ ಕನಸಿನಲ್ಲಿ ಶರಧಿ ಕಾಣಿಸಿಕೊಂಡ. ಸುಮಾರು ಇಪ್ಪತ್ತು ವರ್ಷಗಳ ದೀರ್ಘ ಅವಧಿಯ ನಂತರ ಮೊತ್ತ ಮೊದಲ ಬಾರಿಗೆ ನನ್ನ ಕನಸಿನಲ್ಲಿ ಶರಧಿ ಬರುವುದೆಂದರೆ ಅದರ ಅರ್ಥ ಏನಿದ್ದೀತು? ನನ್ನ ಜಾಗೃತ ಮನಸ್ಸಿನ ಅರಿವಿಗೆ ಬಾರದಂತೆ ಸುಪ್ತ ಮನಸ್ಸಿನಲ್ಲಿ ಆತ ಮನೆ ಮಾಡಿಕೊಂಡಿದ್ದನೇ? ನನಗೇ ಅಚ್ಚರಿಯೆನಿಸತೊಡಗಿತು.

ಶರಧಿ ಕಾಣಿಸಿಕೊಂಡಿದ್ದಾದರೂ ಹೇಗೆ? ಆತ ಒಂದು ಕುರ್ಚಿಯ ಮೇಲೆ ಕುಳಿತಿದ್ದಾನೆ. ಎದುರುಗಡೆ ಸ್ಟ್ಯಾಂಡ್ ಮೇಲೆ ಒಂದು ಕ್ಯಾನ್ವಾಸಿದೆ. ಕುಂಚದಿಂದ ಅದರ ಮೇಲೆ ಎನೋ ಮೂಡಿಸುತ್ತಿದ್ದಾನೆ. ಸ್ವಲ್ಪ ಹಿಂದೆ ನಿಂತಿದ್ದ ನಾನು ಅವನನ್ನು ಹಾದು ಹೋಗುವಾಗ ಬಲಗೈಯಿಂದ ಅವನ ತಲೆಗೂದಲನ್ನು ಕೆದರಿ ಮುಂದಡಿಯಿಟ್ಟೆ. ತಟ್ಟನೆ ಅವನು ನನ್ನ ಕೈ ಹಿಡಿದೆಳೆದ. ನಾನು ಅಚ್ಚರಿಯಿಂದ ಅವನತ್ತ ನೋಡಿದೆ. ಅಷ್ಟೇ, ಎಚ್ಚರಾಯಿತು.

ನಿಜದ ಬದುಕಿನಲ್ಲಿ ಒಮ್ಮೆಯೂ ನನ್ನ ಬೆರಳನ್ನು ಕೂಡ ಸೋಕಿರದ ಆತ ನನ್ನ ಕೈ ಹಿಡಿದೆಳೆಯುವುದೆಂದರೆ.....! ಅಥವಾ ನಾನವನ ಕೂದಲನ್ನು ಕೆದರುವುದೆಂದರೆ..... ಬಹುಶಃ ನನ್ನ ಮನಸ್ಸಿನಾಳದ ಬಯಕೆ ಈ ರೀತಿ ಕನಸಿನಲ್ಲಿ ಹೊರಹೊಮ್ಮಿರಬಹುದೇ?

ನಿಜ. ನನಗೆ ತುಂಬಾ ಇಷ್ಟವಾದವರನ್ನ ನಾನು ತುಂಬಾ ಕೀಟಲೆ ಮಾಡುತ್ತೇನೆ. ಸುಮ್ಮ ಸುಮ್ಮನೆ ರೇಗಿಸಿ ಖುಷಿ ಪಡುತ್ತೇನೆ. ಒಮ್ಮೊಮ್ಮೆ ಅದು ಕ್ರೌರ್ಯ ಅನ್ನಿಸಿ ಸಂಕಟಪಡುತ್ತೇನೆ. ಆದರೆ ಅವರು ನನ್ನವರು. ಹಾಗಾಗಿ ಅಂತರಾಳದಿಂದ ಕ್ಷಮೆ ಬೇಡುತ್ತೇನೆ. ಅವರು ಕೂಡ ಮನ್ನಿಸಿಬಿಡುತ್ತಾರೆ.

ಇಂಥವರು ಬೆರಳೆಣಿಕೆಯ ಸಂಖ್ಯೆಯಲ್ಲಿ ವ್ಯಕ್ತಿಯೊಬ್ಬರ ಬದುಕಿನಲ್ಲಿರುತ್ತಾರೆ. ಅಂಥವರಲ್ಲಿ ಸಹಜವಾಗಿ ಪರಸ್ಪರ ಸಲಿಗೆಯಿರುತ್ತದೆ. ಭುಜ ಮುಟ್ಟಿ, ಕೂದಲು ಕೆದರಿ,ಕೈ ಬೆರಳುಗಳಲ್ಲಿ ಆಟವಾಡುತ್ತಾ ಮಾತಾಡಬಹುದು.

ಶರಧಿ ನನ್ನ ಕಣ್ಣೆದುರಿನಲ್ಲಿ ಚಿಕ್ಕಂದಿನಿಂದಲೂ ಇದ್ದರೂ ಆತ ಮನಸ್ಸಿಗೆ ಬಿದ್ದದ್ದು ಏಳನೇ ತರಗತಿಯಲ್ಲಿದ್ದಾಗ. ಅದು ನಾನು ಹದಿಹರೆಯಕ್ಕೆ ಕಾಲಿಡುತ್ತಿರುವ ಸಮಯ. ಆಗ ಆತನ ವಯಸ್ಸು ನನಗಿಂತ ಎರಡು ಪಟ್ಟಿಗಿಂತಲೂ ಜಾಸ್ತಿ. ಆಗಲೇ ಆತ ನೌಕರಿ ಹಿಡಿದು ಹತ್ತಾರು ವರ್ಷ ಕಳೆದಿತ್ತು. ಆತ ನನ್ನ ಕನಸುಗಳಿಗೆ ಮಾದರಿಯಾಗಿದ್ದ.

ನಾನು ಚಿಕ್ಕವಳಿದ್ದೆ. ಹಾಗಾಗಿ ಆತ ನನ್ನ ಮನಸ್ಸಿನ ಆಳಕ್ಕಿಳಿದ. ಆದರೆ ಅವನ ಅಂತರಂಗಕ್ಕೆ ನಾನು ಇಳಿಯಲೇ ಇಲ್ಲ. ಅವನ ಬಾಹ್ಯರೂಪವಷ್ಟೇ ನನ್ನ ಆರಾಧನೆಗೆ ಒಳಗಾಯಿತು. ಆ ಬಿಂಬ ಇಂದಿನ ತನಕ ನನ್ನನ್ನು ಹಿಂಬಾಲಿಸುತ್ತಲೇ ಬಂದಿದೆ.

ಯಾವುದೋ ಬಿಡುಗಡೆಯ ಭಾವಕ್ಕಾಗಿ ಅಥವಾ ಇನ್ನಾವುದನ್ನೋ ತುಂಬಿಕೊಳ್ಳುವ ಹಪಹಪಿಕೆಯಲ್ಲಿ ನಾನು ನಿನಾಸಂಗೆ ಬಂದಿದ್ದೆ. ಹೂ, ಕಾಡು, ಗಾಳಿ, ಸ್ವಚ್ಛನೀರು, ದೇಸಿಪರಿಸರ, ಸುತ್ತಲಿನ ಜನರ ಆದರಾತಿಥ್ಯ ಇವೆಲ್ಲವೂ ನನ್ನನ್ನು ಬಾಲ್ಯಕ್ಕೆ ಹಿಂದುರಿಗಿಸಿತು. ಅಲ್ಲಿ ಶರಧಿ ಇದ್ದ.

ಪ್ರತಿಯೊಬ್ಬರ ಮನಸ್ಸಿನಾಳದಲ್ಲಿಯೂ ಇಂತಹದೊಂದು ಬಿಂಬ ಇರುತ್ತದೆ. ಅದು ಸ್ಥಾಯಿಭಾವ. ಬದುಕಿನುದ್ದಕ್ಕೂ ಈ ಬಿಂಬದ ಮೇಲೆ ಬೇರೆ ಬೇರೆ ಬಿಂಬಗಳು ಸೂಪರ್ ಇಂಪೋಸ್ ಆಗುತ್ತಲೇ ಇರುತ್ತದೆ. ಹೆಚ್ಚೆಚ್ಚು ಬಿಂಬಗಳು ಆ ಮೂಲ ಬಿಂಬದ ಮೇಲೆ ಬಿದ್ದಂತೆಲ್ಲಾ ಅಲ್ಲೊಂದು ಕೊಲಾಜ್ ಸೃಷ್ಟಿಯಾಗುತ್ತದೆ. ಹಾಗಾಗಿ ಮೂಲಬಿಂಬ ಜಾಗೃತ ಮನಸ್ಸಿನಿಂದ ವಿಸ್ಮೃತಿಗೆ ಜಾರಿದಂತೆ ಭಾಸವಾದರೂ ಸುಪ್ತ ಮನಸ್ಸಿನಲ್ಲಿ ಅದೇ ಡಾಮಿನೇಟಿಂಗ್ ಆಗಿರುತ್ತದೆ.

ನಾನು ಮೆಚ್ಚಿ ಮದುವೆಯಾದ ಹುಡುಗನ ಚಹರೆ ಕೂಡ ಶರಧಿಯದೇ. ನನಗೊಬ್ಬ ಗೆಳೆಯನಿದ್ದಾನೆ. ಅವನು ಕೂಡ ಸ್ವಲ್ಪ ಮಟ್ಟಿಗೆ ಶರಧಿಯನ್ನೇ ಹೋಲುತ್ತಾನೆ. ಇಂದಿಗೂ ಶರಧಿಯನ್ನು ಹೋಲುವ ಯಾವನೇ ವ್ಯಕ್ತಿ ಕಾರಣವಿಲ್ಲದೆ ನನಗೆ ಇಷ್ಟವಾಗುತ್ತಾನೆ. ಅವನಲ್ಲಿ ನಾನು ಇಷ್ಟಪಡದಿರುವ ಕೆಲವು ಗುಣಗಳಿದ್ದಾಗ್ಯೂ ಅವನ ಬಾಹ್ಯರೂಪ ನನ್ನನ್ನು ಆಕರ್ಷಿಸುತ್ತದೆ.

ನನಗನ್ನಿಸುತ್ತೆ; ನಮ್ಮ ಹದಿಹರೆಯದ ಹುಡುಗ-ಹುಡುಗಿಯರು ಕೆಲವೊಮ್ಮೆ ಬಲವಾದ ಆಕರ್ಷಣೆಗಳೇನೂ ಇರದೆ ಪರಸ್ಪರ ಪ್ರೇಮದಲ್ಲಿ ಬೀಳುತ್ತಾರೆ. ಅದು ತಮ್ಮನ್ನೇ ಪ್ರೇಮಿಸಿಕೊಳ್ಳುವ ಕಾಲಘಟ್ಟ. ಹಾಗಾಗಿ ಪ್ರೇಮಿಯ ಗುಣ ಅಷ್ಟಾಗಿ ಮುಖ್ಯವಾಗುವುದಿಲ್ಲ. ಪ್ರೇಮಿಸಬೇಕೆಂಬ ಉತ್ಕಟ ಭಾವವೇ ಕ್ರಿಯಾಶೀಲವಾಗಿಬಿಡುತ್ತದೆ. ದೋಷಗಳು ಕೂಡಾ ಗುಣಗಳಾಗಿ ಕಾಣಿಸುತ್ತವೆ. ತಪ್ಪುಗಳನ್ನು ಒಪ್ಪಿಕೊಳ್ಳುತ್ತಲೇ ಆ ಎಳೆಯ ಮನಸ್ಸಿನಲ್ಲಿ ಪ್ರೇಮಿಯ ಬಿಂಬ ಅಚ್ಚೊತ್ತಿಬಿಡುತ್ತದೆ. ಮನಸ್ಸು ಪಕ್ವಗೊಂಡಂತೆಲ್ಲಾ ಪ್ರೇಮಿಯ ಗುಣಕ್ಕಿಂತಲೂ ದೋಷವೇ ದೊಡ್ಡದಾಗಿ ಕಾಣತೊಡಗಿದರೆ ಸಂಬಂಧ ಮುರಿದು ಬೀಳುತ್ತದೆ. ಆದರೆ ಬಿಂಬ ಮರೆಯಾಗುವುದಿಲ್ಲ.

ಮುಂದೆ ಈ ಬಿಂಬದ ಮೇಲೆ ಗಂಡನ ಬಿಂಬ ಸೂಪರ್ ಇಂಫೋಸ್ ಆಗುತ್ತದೆ. ಮತ್ತೆ ಇನ್ಯಾರ್ದೋ ಬಿಂಬ ಬೀಳುತ್ತದೆ. ಕೊಲಾಜ್ ಸೃಷ್ಟಿಯಾಗುತ್ತದೆ. ಅಂತಿಮವಾಗಿ ಬಿಂಬಗಳ ಹೋಲಿಕೆ ಪ್ರಾರಂಭವಾಗುತ್ತದೆ. ಹೊಯ್ದಾಟ ಆರಂಭವಾಗುತ್ತದೆ. ಮಾನಸಿಕ ನೆಮ್ಮದಿ ಹಾಳಗುತ್ತದೆ. ಇದು ಈಗಿನ ಬಹುತೇಕ ಭಗ್ನ ಪ್ರೇಮಿಗಳ ಸಾಮಾನ್ಯ ಸಮಸ್ಯೆ.

ಮನಶಾಸ್ತ್ರಜ್ನರ ಪ್ರಕಾರ ಹುಡುಗಿಯೊಬ್ಬಳ ಮನಸ್ಸಿನಲ್ಲಿ ಬೀಳುವ ಮೊದಲ ಬಿಂಬ ಅಪ್ಪನದು. ಹುಡುಗನಾದರೆ ಅಮ್ಮನದು. ಇದ್ದರೂ ಇರಬಹುದೇನೋ. ನನಗೆ ಹಾಗಾಗಲಿಲ್ಲ.ಯಾಕೆಂದರೆ ನನ್ನ ಮನಸ್ಸಿಗೆ ಬಿದ್ದ ಮೊದಲ ಬಿಂಬ ಅಣ್ಣನದು. ನನ್ನ ಅಣ್ಣ, ನನ್ನ ಶರಧಿ, ನನ್ನ ಗಂಡ, ನನ್ನ ಗೆಳೆಯ ಈ ನಾಲ್ವರಲ್ಲಿ ತುಂಬಾ ಸಾಮ್ಯತೆಯಿದೆ. ಇವು ನಾಲ್ಕು ನನ್ನ ಭಾವಲೋಕದ ಕಂಫರ್ಟ್ ವಲಯಗಳು.

ಪ್ರತಿಯೊಬ್ಬರಿಗೂ ಇಂತಹುದೊಂದು ಕಂಫರ್ಟ್ ವಲಯ ಬೇಕು. ಅದು ನಾವು ಬೆಂಗಾಡಿನಲ್ಲಿದ್ದರೂ ನಮ್ಮನ್ನು ಕಾಪಾಡುತ್ತದೆ. ಜೀವನ ಪ್ರೀತಿಯನ್ನು ಹುಟ್ಟಿಸುತ್ತದೆ. ಗೋಪಿಕೆಯರಿಗೆ ಕೃಷ್ಣನ ಕೊಳಲು ಇದ್ದ ಹಾಗೆ. ನನಗೆ ನನ್ನ ಶರಧಿ ಇದ್ದ ಹಾಗೆ. ನಿಮಗೆ ಯಾರಿದ್ದಾರೆ? ನಿಮ್ಮೊಳಗೆ ಇಳಿದು ನೋಡಿ!

[ ’ಓ ಮನಸೇ’ ನಿಯತಕಾಲಿಕದಲ್ಲಿ ಪ್ರಕಟವಾಗಿದ್ದ ಲೇಖನ ]

Saturday, July 25, 2009

’ಕಡಲ ತಡಿಯ ತಲ್ಲಣ’ ಈಗ ಮಾರುಕಟ್ಟೆಯಲ್ಲಿದೆ.




’ಕಡಲ ತಡಿಯ ತಲ್ಲಣ’ದ ಪುನರ್ ಮುದ್ರಣ ಪ್ರತಿ ಈಗ ನನ್ನ ಕೈಯಲ್ಲಿದೆ. ಚತುರೋಪಾಯಗಳಿಂದ ಪುಸ್ತಕವನ್ನು ಮುದ್ರಿಸಿಕೊಂಡಿದ್ದೇನೆ. ನಾಲ್ಕು ತಿಂಗಳ ಹಿಂದೆ ಪ್ರಕಟವಾದ ಈ ಪುಸ್ತಕವನ್ನು ಓದುಗರ ಕೈಗೆ ಕೊಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಆ ಬಗ್ಗೆ ಹಲವಾರು ಓದುಗರು, ಆತ್ಮೀಯರು ನನಗೆ ಮೇಲ್ ಮಾಡಿ, ಕಾಗದ ಬರೆದು,ಪೋನ್ ಮಾಡಿ ವಿಚಾರಿಸಿಕೊಂಡಿದ್ದಾರೆ. ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. ಅವರೆಲ್ಲರಿಗೂ ಪ್ರತ್ಯೇಕವಾಗಿ ಉತ್ತರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಮೂರು ತಿಂಗಳ ಹಿಂದೆ ಕಡಲ ತಡಿಯ ತಲ್ಲಣದ ಪ್ರಕಾಶರಿಗೆ ಮೇಲ್ ಮಾಡಿದ ಪತ್ರವನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸುತ್ತಿದ್ದೇನೆ-

ಸೃಷ್ಟಿ ಪ್ರಕಾಶನದ ಮಾಲೀಕರಾದ ನಾಗೇಶರವರಿಗೆ ’ಕಡಲ ತಡಿಯ ತಲ್ಲಣ’ದ ಸಂಪಾದಕಿಯಾದ ಉಷಾಕಟ್ಟೆಮನೆಯ ನಮಸ್ಕಾರಗಳು.
ಎಲ್ಲಾ ಸಂಪರ್ಕ ಮಾಧ್ಯಮಗಳಿಂದಲೂ ತಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಿ ವಿಫಲಳಾಗಿ ಈ ಪತ್ರವನ್ನು ಬರೆಯುತ್ತಿದ್ದೇನೆ.

ನನ್ನ ಜಿಲ್ಲೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ. ಅಲ್ಲಿ ಇತ್ತೀಚೆಗಿನ ತಿಂಗಳುಗಳಲ್ಲಿ ನಡೆಯುತ್ತಿರುವ ಘಟನೆಗಳು ನನ್ನ ಮನಸ್ಸನ್ನು ಘಾಸಿಗೊಳಿಸಿದ್ದವು. ಈ ಹಿನ್ನೆಲೆಯಲ್ಲಿ ಅಲ್ಲಿಯ ಬಹುಸಂಸ್ಕೃತಿಯ ಕುರಿತು ಪುಸ್ತಕವೊಂದನ್ನು ತರಲು ಬೆಂಗಳೂರಿನಲ್ಲಿರುವ ನಾನು ಮತ್ತು ದೆಹಲಿಯಲ್ಲಿ ವಾಸವಾಗಿರುವ ಪುರುಷೋತ್ತಮ ಬಿಳಿಮಲೆ ನಿರ್ಧರಿಸಿದೆವು. ಬಿಳಿಮಲೆಯ ಸಲಹೆಯ ಮೇರೆಗೆ ಇದನ್ನು ಪ್ರಕಟಿಸಲು ಪ್ರಕಾಶಕರಾದ ತಮ್ಮನ್ನು ನಾನು ಸಂಪರ್ಕಿಸಿದೆ. ಅಲ್ಲಿ ತನಕ ನನಗೆ ತಮ್ಮ ಪರಿಚಯವಿರಲಿಲ್ಲ.

ತಮಗೆ ಫೆಬ್ರವರಿ ೨೮ರಂದು ನಾನು ಮೂಲ ಲೇಖನಗಳನ್ನು ಒದಗಿಸಿದ್ದೆ. ಚುನಾವಣೆ ಹತ್ತಿರದಲ್ಲಿರುವ ಕಾರಣದಿಂದಾಗಿ ಬೇಗ ಪುಸ್ತಕ ತರುವುದು ನಮ್ಮ ಉದ್ದೇಶವಾಗಿತ್ತು. ನೀವು ಮತ್ತು ನಾವು ಕೂಡಿಯೇ ಮಾರ್ಚ್ ೨೪ರಂದು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಮಾಡುವುದೆಂದು ತೀರ್ಮಾನಿಸಿದೆವು.

ಆದರೆ ನೀವು ’ಕಡಲ ತಡಿಯ ತಲ್ಲಣ’ ಪುಸ್ತಕ ಪ್ರಕಟನೆಯ ಬಗ್ಗೆ ವೃತ್ತಿಪರತೆ ತೋರಲಿಲ್ಲ. ಉಢಾಪೆಯಿಂದ ನಡೆದುಕೊಂಡಿರಿ. ನಾನು ಪದೇ ಪದೇ ಪೋನ್ ಮಾಡಿದಾಗಲೂ ನೀವು ಪುಸ್ತಕ ಪ್ರಕಟನೆಯ ಕುರಿತು ಗಂಭೀರವಾಗಿ ನಡೆದುಕೊಳ್ಳಲೇ ಇಲ್ಲ. ನಿಮ್ಮ ಈ ಉದಾಸೀನ ಪ್ರವೃತ್ತಿಯನ್ನು ಮನಗಂಡು ಪುಸ್ತಕ ಬಿಡುಗಡೆಗೆ ನಿಗಧಿ ಪಡಿಸಲಾದ ದಿನಾಂಕವಾದ ಮಾರ್ಚ್ ೨೪ನ್ನು ೨೮ಕ್ಕೆ ಮುಂದೂಡಿದೆವು.

ಬಿಡುಗಡೆ ಕಾರ್ಯಕ್ರಮದ ಬಗ್ಗೆಯೂ ನೀವು ನನ್ನೊಡನೆ ಚರ್ಚಿಸಲಿಲ್ಲ. ಹಾಗಾಗಿ ನಾನು ’ಭಾರತ ಯಾತ್ರ ಕೇಂದ್ರದ’ ಸಂಚಾಲಕರಾದ ನಾಗರಾಜ ಮೂರ್ತಿಯವರನ್ನು ಸಂಪರ್ಕಿಸಿದೆ. ಅವರು ’ಸಾಹಿತಿ ಕಲಾವಿದರ ಬಳಗ’ದವರ ಸಹಕಾರದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು.

’ಕಡಲ ತಡಿಯ ತಲ್ಲಣ’ ಪುಸ್ತಕವನ್ನು ನಮ್ಮ ನಿರೀಕ್ಷೆಯಂತೆ ನೀವು ಪ್ರಕಟಿಸಲಿಲ್ಲ. ಅದರಲ್ಲಿ ಮುದ್ರಣ ದೋಷದ ಸರಮಾಲೆಯೇ ಇದೆ.ನಾನು ಮೊದಲ ಫ್ರೂಫ್ ನಲ್ಲಿ ಹಾಕಿದ ತಿದ್ದುಪಡಿಯನ್ನು ನೀವು ಸರಿಪಡಿಸಲಿಲ್ಲ. ಸೆಕೆಂಡ್ ಪ್ರೂಫ್ ನೀವು ಕೊಡಲೇ ಇಲ್ಲ. ನಾವು ಕೊಟ್ಟ ’ಪರಿವಿಡಿ’ಯ ಪ್ರಕಾರ ನೀವು ಲೇಖನಗಳನ್ನು ಅನುಕ್ರಮಗೊಳಿಸದೆ ನಿಮಗೆ ಇಷ್ಟಬಂದಂತೆ ಜೋಡಿಸಿದಿರಿ. ಅಲ್ಲದೆ ನಮ್ಮ ಗೌರವಾನ್ವಿತ ಲೇಖಕರ ಹೆಸರುಗಳನ್ನೇ ತಪ್ಪುತಪ್ಪಾಗಿ ಮುದ್ರಿಸಿದಿರಿ.. ಒಬ್ಬ ಲೇಖಕರ ಲೇಖನವನ್ನೇ ಪ್ರಕಟಿಸದೆ ಉಡಾಫೆ ತೋರಿದಿರಿ.

ಪುಸ್ತಕ ಅಚ್ಚಿಗೆ ಹೋಗುವ ಮೊದಲು ಪ್ರೆಸ್ಸ್ ನಲ್ಲಿ ಅಂತಿಮ ಪ್ರತಿಯನ್ನು ತೋರಿಸುವುದಾಗಿ ಹೇಳಿದ ನೀವು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿರಿ. ಬಿಡುಗಡೆಯ ದಿನ ಪುಸ್ತಕವನ್ನು ನನಗೆ ನೀವು ತಂದುಕೊಟ್ಟಿರಿ. ಅದರಲ್ಲಿನ ತಪ್ಪುಗಳನ್ನು ನೋಡಿ ನಾನು ದಂಗಾದೆ. ನಾನು ಈ ಬಗ್ಗೆ ಪ್ರಶ್ಣಿಸಿದಾಗ, ನೂರು ಪ್ರತಿಗಳನ್ನು ಮಾತ್ರ ಪ್ರಕಟಿಸಿದ್ದೇನೆ. ತಪ್ಪುಗಳನ್ನು ತಿದ್ದಿ ಪುನರ್ ಪ್ರಕಟಿಸುವುದಾಗಿ ಹೇಳಿದಿರಿ. ನಾನು ಉದಾರತೆಯಿಂದ ಆಗಲಿ ಎಂದೆ.

ಸಂಸ ಬಯಲು ರಂಗಮಂದಿರದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಿದ ಪ್ರೋ.ಎಸ್. ಶೆಟ್ಟರ್ ’ಈ ಪುಸ್ತಕ ಮಾರುಕಟ್ಟೆಗೆ ಬಿಡುಗಡೆಯಾಗುವುದಿಲ್ಲ. ತಪ್ಪುಗಳನ್ನು ಸರಿಪಡಿಸಿ ಪ್ರಕಟವಾದ ಮೇಲೆ ಓದುಗರಿಗೆ ದೊರೆಯುತ್ತದೆ.’ ಎಂದಿದ್ದರು. ಆದರೆ ನೀವು ಅದಾಗಲೇ ೧೦೦೦ ಪ್ರತಿಗಳನ್ನು ಮುದ್ರಿಸಿದ್ದಿರಿ. ಇದು ನಂಬಿಕೆ ದ್ರೋಹ. ಆದರೂ ನೀವದನ್ನು ಲೈಬ್ರರಿಗೆ ಕೊಟ್ಟು ನಮ್ಮ ಲೇಖಕರಿಗೆ ಮತ್ತು ಪುಸ್ತಕದಂಗಡಿಗಳಿಗೆ ತಪ್ಪಿಲ್ಲದ ಪ್ರತಿಗಳನ್ನು ಮುದ್ರಿಸಿಕೊಡುವುದಾಗಿ ಮಾತು ಕೊಟ್ಟಿರಿ. ಆದರೆ ಆಮೇಲೆ ನೀವು ನನಗೆ ಮುಖತಃ ಬೇಟಿಯಾಗಲೇ ಇಲ್ಲ. ಪೋನಿಗೂ ಸಿಗಲಿಲ್ಲ. ಮೆಸೇಜ್ ಗೂ ರಿಪ್ಲೈ ಮಾಡಲಿಲ್ಲ. ನಿಮ್ಮನ್ನು ಮುಖತಃ ಬೇಟಿಯಾಗಲು ಎಂಸಿ ಬಡಾವಣೆಯಲ್ಲಿರುವ ನಿಮ್ಮ ಮನೆಗೆ ಸತತ ನಾಲ್ಕು ದಿನ ಬಂದಿದ್ದೆ. ನೀವು ಸಿಗಲಿಲ್ಲ. ಆದರೆ ಕೆಲವು ಪುಸ್ತಕದಂಗಡಿಗಳಿಗೆ ನೀವು ಪುಸ್ತಕ ಮಾರಾಟ ಮಾಡಿದ್ದೀರೆಂದು ನನಗೆ ಗೊತ್ತಾಗಿದೆ. ಅದಕ್ಕೆ ಈ ಪತ್ರವನ್ನು ಬರೆಯುತ್ತಿದ್ದೇನೆ.

ನಾನು ನನ್ನ ೩೬ ಜನ ಗೌರವಾನ್ವಿತ ಲೇಖಕರಿಗೆ ಗೌರವ ಪ್ರತಿಗಳನ್ನು ನೀಡಬೇಕಾಗಿದೆ. ಮಾದ್ಯಮದವರಿಗೆ ಪ್ರತಿಗಳನ್ನು ನೀಡಬೇಕಾಗಿದೆ. ಪುಸ್ತಕ ಬಿಡುಗಡೆಯಾಗಿ ಇಂದಿಗೆ ಇಪ್ಪತ್ತು ದಿನಗಳು ಕಳೆದು ಹೋಗಿವೆ. ನಿಮ್ಮಿಂದ ಯಾವ ಸುದ್ದಿಯೂ ಇಲ್ಲ. ಹಾಗಾಗಿ ನಾನು ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ.
ನಾಗೇಶ್, ನೀವು ಈಗಾಲೇ ಮುದ್ರಿಸಿದ’ಕಡಲ ತಡಿಯ ತಲ್ಲಣ’ದ ೧೦೦೦ ಪ್ರತಿಗಳನ್ನು ಸರಕಾರಿ ಗ್ರಂಥಾಲಯಗಳಿಗೆ ಕೊಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಯಾವುದೇ ಪುಸ್ತಕದಂಗಡಿಗಳಿಗೆ ಸರಬರಾಜು ಮಾಡಬಾರದು. ಹಾಗೆಯೇ ಸಮ್ಮೇಳನಗಳಲ್ಲಿ, ಕಾರ್ಯಕ್ರಮಗಳಲ್ಲಿ ಮಾರಾಟಕ್ಕೆ ಇಡಬಾರದು. ಹಾಗೆ ಮಾಡಿದರೆ ಅದು ನಮ್ಮ ಗೌರವಾನ್ವಿತ ಲೇಖಕರು ಮತ್ತು ಸಂಪಾದಕರಿಗೆ ಮಾಡಿದ ಅಪಮಾನವಾಗುತ್ತದೆ. ಅದಕ್ಕೆ ಸೂಕ್ತ ಕ್ರಮವನ್ನು ನಾವು ಕೈಗೊಳ್ಳುತ್ತೇವೆ.

Friday, July 10, 2009

ಸಲಿಂಗಕಾಮ; ತಪ್ಪು ಹುಡುಕಲು ನಾವ್ಯಾರು?





ಭಾರತೀಯ ದಂಡಸಂಹಿತೆಯ ೩೭೭ರ ಕಲಮಿನ ಪ್ರಕಾರ ಸಲಿಂಗಕಾಮ ಅಪರಾಧ. ಗಂಡಸು ಗಂಡಸಿನೊಡನೆ ಮತ್ತು ಗಂಡಸು ಹಿಜಿಡದೊಂದಿಗೆ ಹಾಗು ಹೆಂಗಸು ಹೆಂಗಸಿನೊಂದಿಗೆ,ಹಾಗು ಪ್ರಾಣಿಗಳೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದು ಶಿಕ್ಷಾರ್ಹ ಅಪರಾಧ.
ಈಗ ದೆಹಲಿ ಹೈಕೋರ್ಟ್ ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿದೆ. ಇದರ ಪ್ರಕಾರ ಪರಸ್ಪರ ಸಮ್ಮತಿ ಇರುವ ಇಬ್ಬರು ವಯಸ್ಕರು ಸಲಿಂಗಕಾಮದಲ್ಲಿ ತೊಡಗುವುದು ಕಾನೂನು ಬದ್ಧ. ಈಗ ಇದರ ಬಗ್ಗೆ ಪರ-ವಿರೋಧ ಹೇಳಿಕೆಗಳು, ಅಭಿಪ್ರಾಯಗಳು ಹರಿದು ಬರುತ್ತಿವೆ.

ನಮ್ಮ ದೇಶದ ಜನಸಂಖ್ಯೆ ನೂರುಕೋಟಿಗೂ ಹೆಚ್ಚು. ಇದರಲ್ಲಿ ಸಲಿಂಗಕಾಮಿಗಳ ಸಂಖ್ಯೆ ಇಪ್ಪತೈದು ಲಕ್ಷಗಳು ಎಂದು ಅಂದಾಜಿಸಲಾಗಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತುಕೊಂಡು ಲೈಂಗಿಕತೆಯನ್ನು ಹೊರತುಪಡಿಸಿ ಸಹಜ ಬದುಕನ್ನು ಬದುಕುತ್ತಿರುವ ಇವರನ್ನು ಬೆಟ್ಟು ಮಾಡಿ ತೋರಿಸುವುದು ಕಷ್ಟ. ನಮ್ಮ ನಡುವೆಯೇ ಇದ್ದು ನಮಗೆ ಅರಿವಿಲ್ಲದಂತೆ ಸಲಿಂಗಕಾಮಿಗಳಾಗಿ ಅವರು ಬದುಕುತ್ತಿರುತ್ತಾರೆ. ಒಬ್ಬ ವ್ಯಕ್ತಿಗೆ ತನಗೆ ವಿರುದ್ಧಲಿಂಗಿಯಲ್ಲಿ ಆಕರ್ಷಣೆಯಿಲ್ಲ ಬದಲಾಗಿ ಸ್ವಲಿಂಗಿಯಲ್ಲಿ ಅನುರಕ್ತನಾಗುತ್ತಿದ್ದೇನೆ ಎಂದು ಅನ್ನಿಸಿದರೆ ಅದರಲ್ಲಿ ಆಕೆಯ ಅಥವಾ ಆತನದೇನು ತಪ್ಪಿದೆ? ಅದು ನಿಸರ್ಗ ಮಾಡಿದ ಎಡವಟ್ಟು!

ಸಲಿಂಗಕಾಮವನ್ನು ನಮ್ಮ ಪುರಾಣವಂತೂ ಒಪ್ಪಿಕೊಂಡಿದೆ. ಬಸ್ಮಾಸುರನನ್ನು ಕೊಂದ ಮೋಹಿನಿ ವೇಷಧಾರಿಯಾದ ವಿಷ್ಣುವನ್ನು ಶಿವ ಮೋಹಿಸುತ್ತಾನೆ. ಅವಳನ್ನು ಕಾಡಿ ಕೂಡುತ್ತಾನೆ. ಅದರ ಫಲವಾಗಿ ಹುಟ್ಟಿದವನೇ ಅಯ್ಯಪ್ಪ. ಬಹಳ ಅಪರೂಪಕ್ಕೆ ಪುರುಷರಲ್ಲಿ ಗರ್ಭಕೋಶವಿದ್ದ ಉದಾಹರಣೆಗಳಿವೆ. ಇದೂ ಕೂಡಾ ನಿಸರ್ಗದ ವೈಚಿತ್ರಗಳಲ್ಲೊಂದು. ವಿಷ್ಣುವಿನಲ್ಲಿ ಹೆಣ್ತನದ ಲಕ್ಷಣಗಳು ಸ್ವಲ್ಪ ಹೆಚ್ಚೇ ಎದ್ದು ಕಾಣುತ್ತದೆ. ಹಾಗಾದರೆ ಆತನಿಗೆ ಗರ್ಭಕೋಶವಿದ್ದಿರಬಹುದೇ? ಅಲ್ಲಿಗೆ ಅಂಡಾಣು ಮತ್ತು ವೀರ್ಯಾಣುವನ್ನು ಸಂಯೋಗೊಳಿಸಿ ಇಟ್ಟವರಾರು? ಗೊತ್ತಿಲ್ಲ. ಆದರೆ ಇಬ್ಬರು ಗಂಡು ದೇವರ ಸಂಯೋಗದಿಂದ ಜನಿಸಿದ ಅಯ್ಯಪ್ಪ ಇಂದು ಆಸ್ತಿಕರಿಂದ ಆರಾಧನೆಗೊಳ್ಳುತ್ತಿದ್ದಾನೆ. ಅಂದರೆ ನಮ್ಮಲ್ಲಿ ಸಲಿಂಗಕಾಮ ಹಿಂದೆ ಇತ್ತು. ಅಥಾವ ಆ ಕಲ್ಪನೆಯಾದರೂ ಇತ್ತು.

ಅನುಕೂಲಕರ ಸಂದರ್ಭಗಳಲ್ಲಿ ಸಲಿಂಗಕಾಮವನ್ನು ಕುತೂಹಲಕ್ಕಾಗಿ ಆರಂಭಿಸಿ ಅನಂತರದಲ್ಲಿ ಅದನ್ನು ಚಟವಾಗಿ ಬೆಳೆಸಿಕೊಳ್ಳುವವರಿದ್ದಾರೆ. ಜೈಲು, ಹಾಸ್ಟೇಲ್, ಸೈನ್ಯ ಹಾಗು ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರ[ಮಠಗಳ ಹಾಗಿರುವ]ಗಳಲ್ಲಿ ಸಲಿಂಗಕಾಮದ ಆಕರ್ಷಣೆ ಹೆಚ್ಚು. ಅದಕ್ಕೆ ಪೂರಕ ವಾತಾವರಣವು ಅಲ್ಲಿರುತ್ತದೆ. ಕ್ರಮೇಣ ಇದರಿಂದ ಹೊರಬಂದು ವಿರುದ್ಧಲಿಂಗಿಯನ್ನು ಮದುವೆಯಾಗಿ ಸಹಜ ಲೈಂಗಿಕ ಬದುಕನ್ನು ಬದುಕುವವರಿದ್ದಾರೆ. ಆದರೆ ಹುಟ್ಟಿನಿಂದಲೇ ಸಲಿಂಗಕಾಮಿಯಾಗಿದ್ದರೆ? ಹಿಂದೆ ಹೇಳಿದಂತೆ ಅದು ನಿಸರ್ಗದ ವೈಚಿತ್ರ.

ಹಸಿವು, ನಿದ್ರೆ, ಮೈಥುನ ಮನುಷ್ಯನ ಮೂಲಭೂತ ಅವಶ್ಯಕತೆ; ಬೇಸಿಕ್ ಇನ್ ಸ್ಟಿಂಕ್ಟ್. ಸಲಿಂಗಕಾಮಿಗಳಿಗೆ ಮೈಥುನದ ಹಕ್ಕು ಬೇಡವೇ?. ಖಂಡಿತಾ ಬೇಕು. ಆದರೆ ಐ.ಪಿ.ಸಿ ೩೭೭ನೇ ಕಲಂ ಸಲಿಂಗಕಾಮ ಅಪರಾಧ ಎಂದು ಪರಿಗಣಿಸಿದೆ. ಹಾಗಾಗಿ ಸಲಿಂಗಿಗಳಿಗೆ ಮೈಥುನ ಸುಖವಿಲ್ಲ! ಸ್ವಲಿಂಗಿಗಳು ಕೂಡ ಮನುಷ್ಯರೇ ತಾನೆ? ಸೃಷ್ಟಿಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದನ್ನು ಬಿಟ್ಟರೆ ಆರೋಗ್ಯವಂತ ಗಂಡು-ಹೆಣ್ಣುಗಳು ಪರಸ್ಪರ ಪಡೆದುಕೊಳ್ಳುವ ಲೈಂಗಿಕ ಸುಖವನ್ನೇ ಅವರೂ ಪಡೆದುಕೊಳ್ಳುತ್ತಾರೆ. ಹಾಗಾಗಿ ವ್ಯಕ್ತಿಯ ಮೂಲಭೂತಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ದೆಹಲಿ ಉಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಹಜವೇ.

ಆದರೆ ಈ ಹಕ್ಕು ಇನ್ನೊಬ್ಬರ ಹಕ್ಕುಗಳ ಮೇಲೆ ಧಾಳಿ ನಡೆಸಿದರೆ? ಇದುವರೆಗೆ ಸಲಿಂಗಕಾಮ ಶಿಕ್ಷಾರ್ಹ ಅಪರಾಧವಾಗಿತ್ತು. ಸಮಾಜ ಸಹ ಅಂಥವರನ್ನು ದೂರ ಇಟ್ಟಿತ್ತು. ಅಸಹ್ಯದಿಂದ ಕಾಣುತ್ತಿತ್ತು. ಹಾಗಾಗಿ ಅವರು ತಮ್ಮ ಗೋಪ್ಯತೆಯನ್ನು ಕಾಪಾಡಿಕೊಳ್ಳುತ್ತಿದ್ದರು. ಬಲವಂತದ ಲೈಂಗಿಕಕ್ರಿಯೆಗೆ ಮುಂದಾಗುತ್ತಿರಲಿಲ್ಲ. ಹಾಗಾಗಿ ಅಲ್ಲೊಂದು ಇಲ್ಲೊಂದು ಪ್ರಕರಣಗಳು ದಾಖಲಾಗುತ್ತಿದ್ದವು. ಬಹಳ ಅಪರೂಪಕ್ಕೆ ಕೊಲೆಗಳು ನಡೆಯುತ್ತಿದ್ದವು. ಈಗ ಸಲಿಂಗಕಾಮ ಕಾನೂನುಬದ್ಧವಾದರೆ ಗಂಡಸರ ಮೇಲೂ ಅತ್ಯಾಚಾರಗಳಾಗುವ ಸಾಧ್ಯತೆಗಳಿವೆ. ಪ್ರತಿಷ್ಟೆಗಾಗಿ ವಿರುದ್ಧಲಿಂಗಿಯನ್ನು ಮದುವೆಯಾಗಬಹುದು.ಇದು ಅನೇಕ ಸಮಾಜೀಕ ಸಮಸ್ಯೆಗಳ ಹುಟ್ಟಿಗೆ ಕಾರಣವಾಗಬಹುದು.

ಸಲಿಂಗಕಾಮಿಗಳ ಬಗ್ಗೆ ಇರುವ ಬಹುದೊಡ್ಡ ಆಪಾದನೆ ಎಂದರೆ ಅವರು ಎಚ.ಐ.ವಿಯ ಹರಡುವಿಕೆಯ ವಾಹಕರಾಗಿದ್ದಾರೆಂಬುದು. ಅದು ಸ್ವಲ್ಪ ಮಟ್ಟಿಗೆ ನಿಜ. ಸಲಿಂಗಿಗಳಾಗಲಿ ವಿರುದ್ಧಲಿಂಗಿಗಳಾಗಲಿ ಸಂಗಾತಿಯ ಆಯ್ಕೆಯಲ್ಲಿ ವಿವೇಚನೆ ಮುಖ್ಯ. ಏಕಸಂಗಾತಿಗೆ ನಿಷ್ಟರಾಗಿರುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಸಲಿಂಗಕಾಮದ ಆಕರ್ಷಣೆಯಂತೆ ದಾಂಪತ್ಯ ಮಾಲಿನ್ಯವೂ ಈಗ ಬಹು ಸಾಮಾನ್ಯ. ಉನ್ಮತ್ತ ಯೌವನಕ್ಕೆ ವಿವೇಚನೆಯೆಂಬುದು ಮೈಲು ದೂರ.

ಇಲ್ಲೊಂದು ಮುಖ್ಯ ವಿಚಾರವನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಲೈಂಗಿಕ ಅತ್ಯಾಚಾರವನ್ನು ಸಾಬೀತು ಪಡಿಸುವುದುದು ತುಂಬಾ ಕಷ್ಟ. ಪರಸ್ಪರ ಒಪ್ಪಿಗೆಯ ಲೈಂಗಿಕ ಕ್ರಿಯೆ ನಡೆದು ಅನಂತರದಲ್ಲಿ ಅದನ್ನು ಬಲವಂತದ ರತಿಕ್ರೀಡೆ ಎಂದು ಆಪಾದಿಸಿದರೆ..?ಈಗ ಶೈನಿ ಅಹುಜ ಪ್ರಕರಣವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಆತ ಕೆಲಸದವಳೊಂದಿಗೆ ಲೈಂಗಿಕಕ್ರಿಯೆ ನಡೆಸಿದ್ದಾನೆ. ಅದನ್ನು ಆತನೇ ಒಪ್ಪಿಕೊಂಡಿದ್ದಾನೆ.ಆದರೆ ಇದು ಪರಸ್ಪರ ಒಪ್ಪಿಗೆಯಿಂದ ನಡೆದದ್ದು ಎಂಬುದು ಆತನ ವಾದ. ಇದು ನಿಜವಿರುವ ಸಾಧ್ಯತೆ ಇದೆ ಅಲ್ಲವೇ?. ಆಕೆ ಈತನನ್ನು ಬ್ಲಾಕ್ ಮೇಲ್ ಮಾಡಲು ಅವಕಾಶ ಇದೆ. ಮೆಲ್ನೋಟಕ್ಕೆ ಇಲ್ಲಿ ಅನ್ಯಾಯ ಆಗಿರೋದು ಅಹುಜ ಪತ್ನಿಗೆ. ಅಲ್ಲಿ ಆಕೆಗೆ ಗಂಡನಿಂದ ವಿಶ್ವಾಸದ್ರೋಹ ಆಗಿದೆ. ಆಕೆ ಎಲ್ಲಿ ನ್ಯಾಯ ಬೇಡಬೇಕು?.

ಐಪಿಸಿ ೩೭೭ಕ್ಕೆ ತಿದ್ದುಪಡಿ ತರುವುದಕ್ಕೆ ಮೊದಲು ಇದರ ಬಗ್ಗೆ ಕೂಲಂಕೂಷ ಚರ್ಚೆ ನಡೆಯಬೇಕು. ಇದುವರೆಗೆ ಮರೆಯಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ಬಹಿರಂಗವಾಗಿ ನಡೆಯತೊಡಗಿದರೆ ಸಭ್ಯ ಸಮಾಜ ಮುಜುಗರಪಡಬಹುದು. ಪ್ರಖ್ಯಾತ ಟೆನ್ನಿಸ್ ತಾರೆ ಮಾರ್ಟಿನಾ ನವ್ರಾಟಿಲೋನಾ ಸಲಿಂಗಕಾಮಿಯೆಂದು ಎಲ್ಲರಿಗೂ ಗೊತ್ತಿದೆ. ಅಲೆಗ್ಸಾಂಡರ್, ಸಾಕ್ರೆಟಿಸ್, ಅಸ್ಕರ್ ವೈಲ್ಡ್, ಜ್ಯೂಲಿಯ್ಸ್ ಸೀಸರ್, ಲಿಯನಾರ್ಡೊ ಡಾ ವಿಂಚಿ, ಮೈಕೆಲ್ ಏಂಜಿಲೊ...ಸಲಿಂಗಿಗಳಗಿದ್ದರು ಎಂದು ಹೇಳಲಾಗುತ್ತಿದೆ. ಈ ಅಂತೆ ಕಂತೆಗಳ ಸಂತೆಯಲ್ಲಿ ಕನ್ನಡದ ಕೆಲವು ಪತ್ರಕರ್ತರು, ಮಠಾದೀಶರು, ಗುರುಗಳು, ರಾಜಕಾರಣಿಗಳೂ ಇದ್ದಾರೆ. ಇವರೆಲ್ಲ ನಮ್ಮ ಎದುರುಗಡೆ ಬಂದಾಗ ನಮ್ಮ ಮುಖದಲ್ಲಿ ಪರಿಚಯದ, ಸಭ್ಯತೆಯ ನಗುವೊಂದು ಸುಳಿದಾಡುತ್ತದೆ.ಆ ನಗುವಿಗೆ ನಾನಾರ್ಥಗಳನ್ನು ಹುಡುಕುವಂತೆ ಆಗದಿರಲಿ. ಅವರ ಖಾಸಗಿ ಬದುಕು ಅವರದ್ದು, ನಮ್ಮ ಖಾಸಗಿ ಬದುಕು ನಮ್ಮದು. ಕೆಲವು ವಿಷಯಗಳತ್ತ ನಾವು ಔದಾಸಿನ್ಯ ಪ್ರದರ್ಶಿಸಬೇಕು. ಅದರಲ್ಲಿ ಸಲಿಂಗಕಾಮವೂ ಒಂದು.ಸಮಾಜದ ಒಳಪ್ರವಾಹದಲ್ಲೊಂದು ಕಾನೂನು ಇದೆ. ಸರಕಾರ ರೂಪಿಸುವ ಕಾನೂನಿಗಿಂತಲೂ ಇದು ಹೆಚ್ಚು ಶಕ್ತಿಶಾಲಿಯಾದುದು. ಅದು ಸಲಿಂಗಿಗಳನ್ನು ಒಪ್ಪಿಕೊಂಡರೆ, ಆದರಿಸಿದರೆ ಅದು ನಿಜವಾಗಿಯೂ ಸಲಿಂಗಿಗಳ ವಿಜಯೋತ್ಸವ.

Thursday, June 11, 2009

....ಮಾನವೀಯ ಸ್ಪರ್ಶ ಇರಲಿ


[ಕಳೆದ ವರ್ಷ ಜೂನ್ ೧೦ರಂದು ಕಾಣೆಯಾದ ಪದ್ಮಪ್ರಿಯ ಜೂನ್ ೧೫ರಂದು ದೆಹಲಿಯಲ್ಲಿ ಹೆಣವಾಗಿ ಕಾಣಿಸಿದರು.ಆ ಸಂದರ್ಭದಲ್ಲಿ ’ಸುಧಾ’ದಲ್ಲಿ ಪ್ರಕಟವಾಗಿದ್ದ ಲೀಖನ. ಆಕೆಯ ಸಾವು ಇಂದಿಗೂ ನಿಗೂಢ]

ಉಡುಪಿ ಶಾಸಕ ಬಿ.ಜೆ.ಪಿಯ ರಘುಪತಿಭಟ್ಟರ ಪತ್ನಿ ಪದ್ಮಪ್ರಿಯ ಇತ್ತಿಚೆಗೆ ದೆಹಲಿಯಲ್ಲಿ ಆತ್ಮಹತ್ಯೆ ಮಾದಿಕೊಂಡರು.
ತಕ್ಷಣ ನನಗೆ ನೆನಪಿಗೆ ಬಂದದ್ದು ಲಕ್ಶ್ಮಿ. ಆಕೆ ಕಳೆದ ವರ್ಷ ಇದೇ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆಯ ಕೌಟುಂಬಿಕ ಬದುಕು ಕೂಡ ಚನ್ನಾಗಿರಲಿಲ್ಲ. ಇದ್ದಕ್ಕಿದ್ದಂತೆ ಒಂದು ದಿನ ಆಕೆ ತನ್ನ ದೊಡ್ಡಪ್ಪನ ಮಗನೊಡನೆ ಕಾಣೆಯಾದಳು. ಒಂದು ವಾರದ ನಂತರ ನನಗೆ ಹಿಮಾಲಯದ ಸೆರಗಿನಿಂದ ೨೪ ಪುಟಗಳ ಡೆತ್ ನೋಟ್ ಕೊರಿಯರಿನಲ್ಲಿ ಬಂತು. ತಕ್ಷಣ ಕಾರ್ಯೋನ್ಮುಖರಾಗಿ ದೆಹಲಿಯಲ್ಲಿ ಅವರಿಬ್ಬರನ್ನು ಪತ್ತೆ ಹಚ್ಚಿ ಇಲ್ಲಿಗೆ ಕರೆತರಲಾಯಿತು. ಅವರಿಬ್ಬರಿಗೂ ಸಾಂತ್ವನ ಹೇಳಿ ಬದುಕಿಗೆ ಭರವಸೆಯನ್ನು ತುಂಬಲೆತ್ನಿಸಿದೆವು. ಆಕೆಯ ಆಪೇಕ್ಷೆಯಂತೆ ಗಂಡನಿಂದ ವಿಛ್ಛೇದನ ಕೊಡಿಸಿ, ಆಕೆಗೊಂದು ನೌಕರಿ, ವಾಸಕ್ಕೆ ಸ್ವಂತ ಪ್ಲಾಟ್, ಕಾರು, ೨೦ ಲಕ್ಷ ನಗದು ನೀಡುವುದೆಂದು ತೀರ್ಮಾನಿಸಲಾಯ್ತು. ಆದರೂ ಮರುದಿನ ಬೆಳಿಗ್ಗೆ ಅವರಿಬ್ಬರೂ ಸಯನೈಡ್ ತಿಂದು ಸತ್ತು ಹೋದರು.

ಅವರಿಗೆ ಬದುಕಬೇಕೆಂಬ ಇಚ್ಚೆಯೇ ಸತ್ತು ಹೋಗಿತ್ತು. ಸಾವನ್ನು ಅವರು ಪ್ರಜ್ನಾಪೂರ್ವಕವಾಗಿ ಆಯ್ಕೆ ಮಾಡಿಕೊಂಡಿದ್ದರು.
ಆದರೆ ಮೊನ್ನೆ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪದ್ಮಪ್ರಿಯಳಿಗೆ ಬದುಕು ಬೇಕಾಗಿತ್ತು. ತುಂಬು ಜೀವನಪ್ರೀತಿ ಇಟ್ಟುಕೊಂಡ ಹೆಣ್ಣುಮಗಳು ಆಕೆ. ಆಕೆಗೆ ಇಲ್ಲಿಯ ಬದುಕು ಅಸಹನೀಯವಾಗಿತ್ತು.ಅದಕ್ಕಾಗಿ ಆಕೆ ಹೊಸ ಬದುಕನ್ನು ಕಟ್ಟಿಕೊಳ್ಳಲು ದೆಹಲಿಗೆ ಹೋಗಿದ್ದಳು. ಅದಕ್ಕಾಗಿ ಸಕಲ ಸಿದ್ದತೆಯನ್ನೂ ಮಾಡಿಕೊಂಡಿದ್ದಳು.

ಉಡುಪಿಯನ್ನು ತೊರೆದು ಹೊರಟಾಗ ಆಕೆ ಒಂದಷ್ಟು ದುಡ್ಡು ಡ್ರಾ ಮಾಡಿಕೊಂಡಿದ್ದಳು. ದೆಹಲಿಯಲ್ಲಿ ವಾಸ್ತವ್ಯದ ವ್ಯವಸ್ಥೆ, ಓಡಾಡಲು ಕಾರು, ಹೊಸ ಮೊಬ್ಯೆಲ್ ಸಿಮ್, ನೌಕರಿಯ ಪ್ರಯತ್ನ ಎಲ್ಲವನ್ನೂ ಆಕೆ ಪೂರ್ವಯೋಜನೆಯಂತೆ ಎಚ್ಚರದಿಂದ ಮಾಡಿಕೊಂಡಿದ್ದಳು. ಈ ಪ್ರಕ್ರಿಯೆಯಲ್ಲಿ ಆಕೆಯ ಕುಟುಂಬ ಸ್ನೇಹಿತ ಅತುಲ್ ಆಕೆಗೆ ನೆರವಾಗಿದ್ದಾನೆ.

ಆತ ಆಕೆಗೆ ಯಾಕೆ ನೆರವಾದ? ಆತ ಯಾರು? ಆತ ಆಕೆಯ ಗಂಡನ ಬಾಲ್ಯ ಸ್ನೇಹಿತ. ಹಾಗಾಗಿ ಆತ ಕುಟುಂಬಕ್ಕೆ ಚಿರಪರಿಚಿತ . ತನ್ನ ಸುಖ ದು;ಖಗಳನ್ನು, ಗಂಡನ ಕ್ರಷ್ಣಲೀಲೆಗಳನ್ನು ಆತನಲ್ಲಿ ಸಹಜವಾಗಿ ಆಕೆ ಹೇಳಿಕೊಂಡಿರಬಹುದು. ಅದಕ್ಕೆ ಆತ ಪೂರಕವಾಗಿ ಸ್ಪಂದಿಸಿರಬಹುದು
ಪದ್ಮಪ್ರಿಯಳ ಸಾಂಸಾರಿಕ ಬದುಕಿನಲ್ಲಿ ಬಿರುಕಿತ್ತು. ಗಂಡಹೆಂಡತಿಯರ ನಡುವೆ ಜಗಳಗಳಾಗುತ್ತಿದ್ದವು. ಹಿಂದೆ ಒಂದೆರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಮನೆ ಬಿಟ್ಟು ಹೋಗುವ ಪ್ರಯತ್ನ ಕೂಡ ಮಾಡಿದ್ದಳು. ವಿಛ್ಛೇದನವನ್ನೂ ಬಯಸಿದ್ದಳು ಎಂಬುದನ್ನು ಆಕೆಯನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

ಗೆಳೆಯನ ಮಡದಿಯ ತುಮುಲವೆಲ್ಲವನ್ನು ಅತುಲ್ ಹತ್ತಿರದಿಂದ ನೋಡಿದ್ದಾನೆ; ಗಮನಿಸಿದ್ದಾನೆ. ಹಾಗಾಗಿಯೋ ಏನೋ ಆಕೆ ಸಹಾಯ ಯಾಚಿಸಿದಾಗ ಆತ ಮಾನವೀಯ ನೆಲೆಯಲ್ಲಿ ನೆರವು ನೀಡಿರಬಹುದು.ಆಕೆ ಇಲ್ಲಿಂದ ಪಾರಾಗಿ ಹೋಗಲು ಸಹಾಯ ಮಾಡಿರಬಹುದು
ಇದೊಂದು ಊಹೆ. ಆದರೂ ಇದುವೇ ನಿಜಕ್ಕೆ ಹತ್ತಿರವಾದುದು ಅನ್ನಿಸುತ್ತಿದೆ.ಆದರೂ ಆಕೆ ಸತ್ತು ಹೋದಳು ಯಾಕೆ?

ಆಕೆಯದು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ. ಬಾಲ್ಯದಲ್ಲಿ ಆದರ್ಶಮಯ ವಾತಾವರಣ. ಇನ್ನೂ ಡಿಗ್ರಿ ಓದುತ್ತಿರುವಾಗಲೇ ಫೆನಾನ್ಶಿಯಲ್ ಕುಳ ರಘುಪತಿಭಟ್ಟರ ಜೊತೆ ಮದುವೆ .ಮದುವೆಯಾದ ಮೇಲೂ ವಿದ್ಯಾಭ್ಯಾಸ ಮುಂದುವರಿಸಿ ಡಿಗ್ರಿ ಪಡೆದಳು.ಡ್ರೈವಿಂಗ್ ಕಲಿತಳು. ಗಂಡನ ಫೈನಾನ್ಶಿಯಲ್ ಕಂಪೆನಿ ನಿಬಾಯಿಸಿದಳು. ಅತ್ತೆ-ಮಾವ, ಬಂದು-ಬಳಗ,ಆಳು-ಕಾಳು,..ಹೀಗೆ ತುಂಬು ಕುಟುಂಬದ ನಡುವೆ ಸದಾ ಚಟುವಟಿಕೆಯಿಂದ ಬಾಳಿದವಳು. ಇದ್ಯಾವುದೂ ತನಗೆ ಬೇಡ ಎಂದು ದೂರದ ದೆಹಲಿಗೆ ಹೋಗಿ ಬದುಕನ್ನು ಕಟ್ಟಿಕೊಳ್ಳಬಯಸಿದ್ದ ಸ್ವಾಭಿಮಾನಿ ಹೆಣ್ಣು ಪದ್ಮಪ್ರಿಯ. ಇಂತಹ ’ಗಟ್ಟಿಗಿತ್ತಿ’ ಹೆಣ್ಣುಮಗಳು ಹೇಗೆ ಕುಸಿದು ಹೋದಳು? ಅವಳ ದ್ರ್ರಢತೆಯನ್ನು ಯಾರು ಅಲುಗಾಡಿಸಿದರು? ಯಾವ ಕಾಣದ ಕೈ ಅವಳ ಜೀವನ ಪ್ರೀತಿಯನ್ನು ಕಸಿದುಕೊಂಡಿತು?

ಎಲ್ಲವೂ ಸರಿಯಗಿತ್ತು; ಅಕೆ ದೆಹಲಿ ತಲುಪುವತನಕ .ಆಕೆ ಬಯಸಿದ್ದ ವಿಛ್ಛೇದನ ಸಿಕ್ಕಿದ್ದರೆ ಅಲ್ಲಿ ನೆಲೆಯೂರಿ ಬೆಳೆಯುತ್ತಿದ್ದಳು.ಆದರೆ ಹಾಗಾಗಲಿಲ್ಲ. ಯಾಕೆ? ಬಹುಶ: ಆಕೆ ದೆಹಲಿಯಲ್ಲಿ ಖರಿದಿಸಿದ್ದ ವಸ್ತುಗಳ ಪ್ಯೆಕಿ ಟಿ.ವಿಯೊಂದು ಇರದಿರುತ್ತಿದ್ದರೆ ಆಕೆ ಬದುಕಿ ಉಳಿಯುತ್ತಿದ್ದಳೋ ಏನೋ!. ಆಕೆಯ ಗಟ್ಟಿ ಮನಸ್ಸನ್ನು ಆಲುಗಾಡಿಸಿದವರು ಮಾಧ್ಯಮಗಳು. ಅದರಲ್ಲೂ ಇಲೆಕ್ಟಾನಿಕ್ ಸುದ್ದಿ ಮಾಧ್ಯಮಗಳು. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ವಾತಾವರಣವನ್ನು ಮಾಧ್ಯಮಗಳು ಮತ್ತು ಪೋಲಿಸ್ ಇಲಾಖೆ ಜಂಟಿಯಾಗಿ ನಡೆಸಿದವು.

ಪದ್ಮಪ್ರಿಯ ವಾಸಿಸುತ್ತಿದ್ದ ಮನೆಯ ಬಾಗಿಲನ್ನು ಒಡೆದು ಪ್ರವೇಶಿಸಿದಾಗ ಟಿ.ವಿ ಚಾಲೂ ಆಗಿತ್ತು.ಆಕೆ ನೇಣಿನ ಕುಣಿಕೆಯಲ್ಲಿ ಚಿರನಿದ್ರೆಯಲ್ಲಿದ್ದರು. ಕನ್ನದದ ಸುದ್ದಿವಾಹಿನಿಯೊಂದು ’ಅತುಲ್ ಬಂಧನ’ ಕರ್ನಾಟಕ ಪೋಲಿಸರು ದೆಹಲಿಯಲ್ಲಿ’ ಎಂಬ ಬ್ರೆಕಿಂಗ್ ನ್ಯೂಸ್ ಪ್ರಸಾರ ಮಾಡುತ್ತಿತ್ತು.
ತನಗಾಗಿ ರಿಸ್ಕ್ ತೆಗೆದುಕೊಂಡ ಅತುಲ್ ಬಂಧನವಾಯ್ತು ಎಂದು ಆ ಜೀವ ತಲ್ಲಣಿಸಿಬಿಟ್ಟಿತೆ? ದೆಹಲಿಗೆ ಪೋಲಿಸರು ಬಂದು ತನ್ನನ್ನೂ ಬಂಧಿಸಿದರೆ? ಅಥವ ತಾನು ಅತ್ಯಂತ ಗಾಢವಾಗಿ ನಂಬಿದ ಅತುಲ್ ವಿಶ್ವಾಸಘಾತುಕನಾದನೆ? ಎಕಕಾಲಕ್ಕೆ ಹಲವಾರು ಸಂದೇಹಗಳು,ಪ್ರಶ್ನೆಗಳು ಅವಳನ್ನು ಕಾಡಿವೆ. ಜೀವ ಕುಸಿದು ಹೋಗಿದೆ. ಆ ನರಕಕ್ಕೆ ಮತ್ತೆ ಹೋಗುವುದಕ್ಕಿಂತ ಸಾವೇ ಲೇಸೆನಿಸಿದೆ

ಆಕೆ ವಾಸವಾಗಿದ್ದ ಪ್ಲಾಟ್ ನ ಬಾಗಿಲು ಒಡೆಯುವುದಕ್ಕಿಂತ ಕೆಲವೇ ಘಂಟೆಗಳ ಮೊದಲು ಆ ಪ್ಲಾಟ್ ಗೆ ಕರ್ನಾಟಕದಿಂದ ಬಂದಿದ್ದ ಮೂರು ಜನ ಪ್ರವೇಶಿಸಿದ್ದರು.ಅದು ಅಲ್ಲಿಯ ರಿಜಿಸ್ಟರ್ ನಲ್ಲಿ ದಾಖಲಾಗಿದೆ. ಅವರು ಯಾರು? ಅವರೇ ಅವಳಿಗೊಂದು ಗತಿ ಕಾಣಿಸಿದರೇ...?

ಈ ಪ್ರಕರಣವನ್ನು ಮಾಧ್ಯಮಗಳು ಅತಿ ರಂಜಿತವಾಗಿ ಲಂಬಿಸಿವೆ. ಅವರಿಬ್ಬರಿಗೂ ಅನ್ಯೆತಿಕ ಸಂಬಂಧವಿತ್ತು ಎಂದು ಬಿತ್ತರಿಸ್ಸಿದ್ದಾರೆ. ಅವರಿಬ್ಬರ ನಡುವೆ ಏನು ಸಂಬಂಧವಿತ್ತೋ ನಮಗೆ ತಿಳಿಯದು. ಆದರೆ ಪುರುಷ ಮನಸ್ಸುಗಳಿಗೆ ಅರ್ಥವಾಗದ ಕೆಲವು ವಿಚಾರಗಳಿರುತ್ತವೆ. ನೀವು ವಿವಾಹಿತರಾಗಿದ್ದರೂ ಮನಸ್ಸು ಮಾಡಿದರೆ ಒಂದು ಹುಡುಗಿಯನ್ನು ಒಲಿಸಿಕೊಳ್ಳಬಹುದು.ಮಕ್ಕಳಿಲ್ಲದ ಪರಸ್ತ್ರೀಯನ್ನೂ ಕಷ್ಟಪಟ್ಟು ತನ್ನವಳಾಗಿಸಿಕೊಳ್ಳಬಹುದು. ಆದರೆ ಒಬ್ಬಳು ತಾಯಿಯನ್ನು ಅಷ್ಟು ಸುಲಭವಾಗಿ ಹಾಸಿಗೆಯೆಡೆಗೆ ಸೆಳೆದುಕೊಳ್ಳಲಾರಿರಿ. ಹಾಗೊಂದು ವೇಳೆ ಆಕೆ ಒಲಿದು ಬಂದರೆ ಅದು ಆಕೆ ಆತನ ಮೇಲೆ ಇಟ್ಟ ಅಚಲ ನಂಬಿಕೆ ಮತ್ತು ವಿಶ್ವಾಸ .ಅದು ಅಕೆಗೆ ಗಂಡನಿಂದ ಸಿಕ್ಕಿರಲಿಕ್ಕಿಲ್ಲ.
ಇಷ್ಟಕ್ಕೂ ಗೆಳೆತನ ವೆಂಬುದು ಸಮಾನಲಿಂಗಿಗಳಲ್ಲಿ ಮಾತ್ರ ಇರಬೇಕೆ?

ಈಗ ಸಾರ್ವಜನಿಕರಿಗೆ ಹಲವು ಗೊಂದಲಗಳಿವೆ. ಅತುಲ್ ನಿಜಕ್ಕೂ ಪದ್ಮಪ್ರಿಯಳಿಗೆ ತೀರಾ ಹತ್ತಿರವಾಗಿದ್ದು ಅವಳ ಗಂಡನ ವಿರುದ್ಧವಾಗಿ ಅಕೆಗೆ ಸಹಾಯ ಮಾಡಿದ್ದರೆ ಆತ ಈಗ ಆಪಾಯದಲ್ಲಿದ್ದಾನೆ. ಈ ಸಹಾಯ ಆಕೆಯ ಪತ್ನಿಗೆ ಗೊತ್ತಿದ್ದರೆ ಸರಿ. ಇಲ್ಲವಾದರೆ ಅವರ ಸಂಸಾರದ ಚೌಕಟ್ಟು ಅಲುಗಾಡಿದಂತೆಯೇ. ಪದ್ಮಪ್ರಿಯಳ ಅಂತರಂಗ ಬಲ್ಲ ಗೆಳೆಯ ಆತ. ಹಾಗಾಗಿ ಪ್ರಕರಣದ ಕುರಿತಾಗಿ ಎದ್ದಿರುವ ಅನೇಕ ಪ್ರಶ್ನೆಗಳಿಗೆ ಅತುಲ್ ಮಾತ್ರ ಉತ್ತರ ನಿಡಬಲ್ಲ. ಖಸಾಗಿಯಿರಬೇಕಾದಂತಹ ವಿಚಾರ ಈಗ ಬೀದಿಗೆ ಬಿದ್ದಿದೆ. ಹಾಗಾಗಿ ಸತ್ಯವನ್ನು ತಿಳಿಯಬೇಕಾದ ಹಕ್ಕು ಜನತೆಗಿದೆ.
ಹಿರಿಯ ಪೋಲಿಸ್ ಅಧಿಕಾರಿ ಶಂಕರಿ ಬಿದರಿ ಈ ಪ್ರಕರಣಕ್ಕೆ ಸರಿಯಾದ ವ್ಯಖ್ಯಾನವನ್ನು ನೀಡಿದ್ದಾರೆ. ’ನನಗೆ ಕಣ್ಣಿದೆ, ಕಿವಿಯಿದೆ ಆದರೆ ಬಾಯಿ ಇಲ್ಲ.’ ಅವರ ಬಾಯಿಯನ್ನು ಕಟ್ಟಿ ಹಾಕಿದವರು ಯಾರು?

ಮಾಲೂರಿನಲ್ಲಿ ಪದ್ಮಪ್ರಿಯ ಮತ್ತು ಅತುಲ್ ಪತ್ತೆಯಾದರು ಎಂಬ ಸುದ್ದಿಯನ್ನು ಮಾಧ್ಯಮದವರಿಗೆ ನೀಡಿದವರು ಯಾರು? ಅದರಿಂದ ಅವರಿಗೇನು ಲಾಭ? ಬಿ.ಜೆ.ಪಿ ಅಧಿಕಾರಕ್ಕೆ ಬಂದು ಇನ್ನೂ ಒಂದು ತಿಂಗಳೂ ಕಳೆದಿಲ್ಲ. ಆಗಲೇ ಎರಡು ದುರದೃಷ್ಟಕರ ಘಟನೆಗಳು ನಡೆದಿವೆ. ಅದರಲ್ಲಿ ಪೋಲಿಸ್ ಇಲಾಖೆ ನೇರವಾಗಿ ಭಾಗಿಯಾಗಿದೆ. ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರಿಗೆ ಆಜ್ನೆ ಕೊಟ್ಟವರು ಯಾರು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.ಈಗ ಮಾಲೂರು ಸುದ್ಧಿ ಪ್ಲಾಂಟ್ ಮಾದಿದವರು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ.
ಬಿ.ಜೆ.ಪಿಯವರಿಗೆ ಆಡಳಿತ ನಡೆಸಲು ಬರುವುದಿಲ್ಲ’ ಎಂಬ ವಿರೋಧ ಪಕ್ಷದವರ ಹೇಳಿಕೆಯಲ್ಲಿ ಹುರುಳಿದೆ ಅನಿಸುತ್ತೆ ಅಲ್ವೆ?

ಸುದ್ಧಿವಾಹಿನಿಯ್ಂದು ಹೇಳಿಯೆಬಿಟ್ಟಿತು ಬಿ.ಜೆ.ಪಿಯವರಿಗೆ ಸರ್ಕಾರ ಮಾಡೋಕೆ ಬರೊದಿಲ್ಲ ಎಂಬೊದು ಎಲ್ಲರಿಗೂ ಗೊತ್ತಿದೆ ಇಗ ಸಂಸಾರ ಮಾಡೊಕು ಬರೊದಿಲ್ಲ ಎಂಬುದು ಗೊತ್ತಾಯ್ತು’ ಅರ್ದಘಂಟೆ ಅವಧಿಯ ಈ ಕಾರ್ಯಕ್ರಮದಲ್ಲೆಲ್ಲ ಪದ್ಮಪ್ರಿಯ ಮತ್ತು ಅಕೆಯ ಪ್ರಿಯಕರ ಎಂದೇ ಹೇಳಲಾಗುತ್ತಿತ್ತು. ಓ..ಪ್ರಿಯ..ಪ್ರಿಯಾ’ ಎಂದು ಸ್ಕ್ರೂಲಿಂಗ್ ಬರುತ್ತಿತ್ತು. ಸಾವಿನಲ್ಲೂ ಕ್ರೌರ್ಯವೇ? ಅದಕ್ಕೊಂದು ಘನತೆ ಬೇಡವೇ? ಸ್ಕ್ರೀಪ್ಟ್ ಬರೆದವರು ಮತ್ತು ನಿರೂಪಣೆ ಮಾಡಿದವರು ಹೆಣ್ಣುಮಕ್ಕಳೆಂಬುದು ಇನ್ನೊಂದು ದುರಂತ!

ಒಬ್ಬ ಛಲಗಾತಿ ಮಹಿಳೆಗೆ ಬದುಕು ಬದುಕಲಾರದಷ್ಟು ನಿಕೃಷ್ಟ ಎನಿಸಿದಾಗ,ಕರುಳಬಳ್ಳಿ ಕೂಡ ಈ ಲೋಕದ ಜೊತೆ ಬಂಧಿಸಲಾಗದು ಎನಿಸಿದಾಗ ಮಾನವೀಯ ನೆಲೆಯಲ್ಲಿ ಯುವಕನೊಬ್ಬ ಅವಳಿಗೆ ಮತ್ತೆ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದ್ದು ತಪ್ಪೆ? ಬಿ.ಜೆ.ಪಿ ಪ್ರಣಿತ ಮಾಧ್ಯಮದವರಿಗೆ ’ಆದರ್ಶ್ ಕುಟುಂಬ’ದ ಕಲ್ಪನೆಯೇ ಮುಖ್ಯ.ಆ ಮೂಲಕ ಪರಂಪರಾಗತ ಕುಟುಂಬ ಮೌಲ್ಯಗಳನ್ನು ಉಳಿಸಿಕೊಳ್ಳಬೇಕಾಗಿದೆ. ಹುತಾತ್ಮರಾಗುವುದು ಅವರಿಗೆ ಹೆಚ್ಚು ಪ್ರಿಯ.ಸಹಗಮನಕ್ಕೆ ಸತಿಯೇ ಸೂಕ್ತ!
ಪದ್ಮಪ್ರಿಯ ಪ್ರಕರಣದಲ್ಲಿ ಇಡೀ ವ್ಯವಸ್ಥೆಯೇ ಪುರುಷಸಿಂಹನಂತೆ ವರ್ತಿಸಿದೆ. ಮಾಧ್ಯಮಗಳು ಪುರುಷಪರ.ಸರಕಾರ ಪುರುಷಪರ, ಪೋಲಿಸ್ ಪುರುಷಪರ.

ಗಣ್ಯ ವ್ಯಕ್ತಿಯನ್ನು ಮದುವೆಯಾಗಿ ಸ್ವಂತಿಕೆಯನ್ನು ಉಳಿಸಿಕೊಳ್ಳುವುದು ಮತ್ತು ಹುಡುಕಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ಅದು ಗಾಜಿನ ಮನೆ. ಕಲ್ಲು ಹೊಡೆಯುವ ಜನ ಜಾಸ್ತಿ. ಸುಲಭ ಕೂಡ. ಜೋಡಿಸುವುದು ಕಷ್ಟ.
ಈಗಲೂ ಕೂಡ ಮಾಧ್ಯಮಗಳಲ್ಲಿ ಪದ್ಮಪ್ರಿಯಳ ಚಾರಿತ್ಯವಧೆ ಮುಂದುವರಿಯುತ್ತಲೇ ಇದೆ. ಜರ್ನಲಿಸಂನಿಂದ ವ್ರತ್ತಿಪರತೆ ಮತ್ತು ನೈತಿಕತೆ ದೂರವಾಗುತ್ತಿದೆ. ಮುದ್ರಣಮಾಧ್ಯಮವನ್ನು ಜಾಹಿರಾತುಗಳು ನಿರ್ದೇಶಿಸಿದರೆ ದ್ರಶ್ಯಮಾಧ್ಯಮವನ್ನು ಟಿ.ಅರ್.ಪಿ ನಿಯಂತ್ರಿಸುತ್ತದೆ
ಆರಂಭದಲ್ಲಿ ಹೇಳಿದ ಲಕ್ಸ್ಮಿ ಮತ್ತು ಪದ್ಮಪ್ರಿಯ ಗಣ್ಯವ್ಯಕ್ತಿಯರ ಪತ್ನಿಯರಾಗಿರದಿದ್ದಲ್ಲಿ ಹೀಗೆ ದುರಂತ ಕಾಣುತ್ತಿರಲ್ಲಿಲ್ಲ.

ಬದುಕಿನ ಖುಶಿ ಯಾವಗಲೂ ಆ ಕ್ಷಣದ ಸಣ್ಣ ಸಣ್ಣ ಸಂಗತಿಯಲ್ಲಿರುತ್ತದೆ.ಅದನ್ನು ತನ್ನವರೊಂದಿಗೆ ಆನುಭವಿಸಬೇಕು. ಹಿಡಿದಿಟ್ಟುಕೊಳ್ಳಬೇಕು. ಆಪ್ತರೊಂದಿಗೆ ಹಂಚಿಕೊಳ್ಳಬೇಕು. ಇದು ಗಣ್ಯರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವರ ಪತ್ನಿಯರು ಒಂಟಿಯಾಗುತ್ತಾರೆ. ಖಿನ್ನರಾಗುತ್ತಾರೆ. ಭಾವನಾತ್ಮಕ ಅಸರೆಗಾಗಿ ಹಾತೊರೆಯುತ್ತಾರೆ.ಅದನ್ನು ಅತುಲ್ ನಂತವರು ಬಳಸಿಕೊಳ್ಳುತ್ತಾರೆ. ನೌಕರಿಯಲ್ಲಿರುವವರು, ಲಲಿತಕಲೆ,ಸಾಮಾಜಿಕಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ತಮ್ಮ ಲ್ಲಿನ ಶೂನ್ಯವನ್ನು ಹೇಗಾದರೂ ತುಂಬಿಸಿಕೊಳ್ಳಬಲ್ಲರು ಆದರೆ ಗ್ರಹಿಣಿ..?

ಗಂಡಂದಿರು ತನ್ನವರಿಗಾಗಿ, ತನ್ನ ಕುಟುಂಬಕ್ಕಾಗಿ ಒಂಚೂರಾದರೂ ಸಮಯ ಮಿಸಲಿಡಲೇಬೇಕಾಗಿದೆ. ಇಲ್ಲವಾದರೆ ಮನೆ ಮನೆಯಾಗಿ ಉಳಿಯಲಾರದು. ಯಾಕೆಂದರೆ ಈಗಿನ ಮಹಿಳೆಯ ಮುಂದೆ ಆನೇಕ ಆಯ್ಕೆಗಳಿವೆ. ಆಕೆ ಎಲ್ಲವನ್ನೂ ಬಿಟ್ಟು ಎದ್ದು ನಡೆಯಬಲ್ಲಳು.
’ನನ್ನದು’ ಆ ಮೂಲಕ ಒಳಗೊಳ್ಳುವ ’ನಮ್ಮದು’ ಎಂಬ ಭಾವವೇ ಮನುಷ್ಯನನ್ನು ಈ ಲೋಕದೊಡನೆ ಬಂಧಿಸುತ್ತದೆ. ಅದು ವ್ಯಯಕ್ತಿಕ ನೆಲೆಯಲ್ಲಿ ಗ್ರಹಿಣಿಯೊಬ್ಬಳ ಬದುಕಿನಲ್ಲಿ ’ಗಂಡ ಮತ್ತು ಮಕ್ಕಳು’ ಆಗಿರುತ್ತಾರೆ. ಅಲ್ಲಿ ಎಲ್ಲವೂ ಸರಿಯಾಗಿದ್ದರೆ ’ನಮ್ಮದು’ ಎಂಬ ಭಾವ. ಇಲ್ಲವಾದರೆ.....?.

Saturday, June 6, 2009

ಗೃಹಿಣಿ ಎಂಬ ಒಬ್ಬಂಟಿ



ನಾನು ಚಿಕ್ಕವಳಿರುವಾಗ ನನ್ನೂರು ಬಾಳುಗೋಡಿನಿಂದ ಕುಕ್ಕೆಸುಬ್ರಹ್ಮಣ್ಯಕ್ಕೆ ಶಾಲೆಗೆ ಹೋಗುತ್ತಿದೆ. ಸುಮಾರು ಏಳು ಮೈಲಿಗಳ ಕಾಲುಹಾದಿ. ತುಂಬಿ ಹರಿಯುವ ನದಿಗಳು ಮತ್ತು ಹೊಳೆಗಳು ಎರಡೆರಡು. ಚಿಕ್ಕ ತೊರೆಗಳು ಮೂರು. ದಟ್ಟವಾದ ಅರಣ್ಯ.

ವಿವಿಧ ಹೂ, ಹಣ್ಣು,ಚಿಗುರುಗಳ ವನಸಿರಿ. ಆಗೀಗ ಹಂದಿ, ಮೊಲ, ಕಾಡುಕೋಳಿ, ಬರ್ಕ, ಚಣಿಲು, ಕಬ್ಬೆಕ್ಕು ಮುಂತಾದ ಪ್ರಾಣಿಗಳ ದರ್ಶನ. ವಿವಿಧ ರೀತಿಯ ಹಕ್ಕಿಗಳು. ಮಂಗಗಳದ್ದು ನಿರ್ಭಯ ರಾಜ್ಯಭಾರ.

ಆನೆಗಳ ಭಯದಲ್ಲಿ ನಮ್ಮದು ಗುಂಪುಗಳಾಗಿ ಪಯಣ. ಚೀಲದಲ್ಲಿ ಪಾಠ ಪುಸ್ತಕಗಳಿಗಿಂತ ಹೆಚ್ಚಾಗಿ ನೆಲ್ಲಿಕಾಯಿ, ಚೂರಿಕಾಯಿ, ಮೊಗ್ಗರೆಕಾಯಿ, ಹುಣುಸೆಕಾಯಿ, ಮಾವಿನಕಾಯಿ ಪೇರಲಕಾಯಿಗಳು. ಮಳೆಗಾಲದಲ್ಲಾದರೆ ಹುರಿದ ಹುಣಸೆಬೀಜ, ಸಾಂತಾಣಿ, ಕೊಬ್ಬರಿ ಬೆಲ್ಲ.

ಬೆಳಿಗ್ಗೆ ಪ್ರದೇಶ ಸಮಾಚಾರಕ್ಕೆ ಮನೆ ಬಿಡುತ್ತಿದ್ದರೆ ರಾತ್ರಿ ವಾರ್ತೆಗಳ ಸಮಯಕ್ಕೆ ಮನೆ ಸೇರುತ್ತಿದ್ದೆವು. ಇಡೀ ಹಗಲು ನಮ್ಮದು. ಸಮೃದ್ಧ ಬಾಲ್ಯ. ನದಿ, ತೋಟ, ಗದ್ದೆ, ಗುಡ್ಡ, ದನ-ಕರು, ಹಕ್ಕಿಗೂಡು, ಜೇನು ಎರಿ, ಮೀನು ಬೇಟೆ ಇವೇ ನಮ್ಮ ಕಾರ್ಯ ಕ್ಷೇತ್ರ. ಮಧ್ಯೆ ಆಗೀಗ ಓದು ಅಷ್ಟೇ. ಹಾಗೆಂದು ಪರೀಕ್ಷೆಯಲ್ಲಿ ಫೇಲಾಗುತ್ತಿರಲಿಲ್ಲ.

ಇಡೀ ಊರು ನಮ್ಮದು. ಊರಿನ ಜನ ನಮ್ಮವರು. ಪ್ರತಿಯೊಬ್ಬರಿಗೂ ನಾವು ಅಡ್ಡ ಹೆಸರಿಡುತ್ತಿದ್ದೆವು. ಆದರೂ ಅವರಿಗೆ ನಾವು ಅಚ್ಚುಮೆಚ್ಚು. ನಮ್ಮ ಕೀಟಲೆಗೆ ಅವರು ”ನಿಮ್ಮ ಅಪ್ಪನಿಗೆ ಹೇಳಿ ಬುದ್ಧಿ ಕಲಿಸುತ್ತೇವೆ” ಎಂದು ಅಬ್ಬರಿಸಿದರೂ ನಾವು ಕ್ಯಾರೆ ಅನ್ನುತ್ತಿರಲಿಲ್ಲ. ಅವರು ಹೇಳುವುದಿಲ್ಲವೆಂದು ನಮಗೆ ಗೊತ್ತಿತ್ತು. ಹೇಳಿದರೆ ಈ ಮಕ್ಕಳ ಬೆನ್ನಮೇಲೆ ನಾಗರ ಬೆತ್ತ ಅಥವಾ ಹುಣಸೆ ಬರ್ಲು ಹುಡಿಯಾಗುತ್ತೆ ಎಂಬುದು ಅವರಿಗೂ ಗೊತ್ತು.

ಆ ಊರ ಮಕ್ಕಳು ನಾವು. ಇಲ್ಲಿ ಈ ಕಾಂಕ್ರೀಟ್ ಕಾಡಿಅಲ್ಲಿ ಬಂದು ಬಿದ್ದಿದ್ದೇವೆ. ಇಲ್ಲಿಯ ಜನರ ಕ್ಷುದ್ರತೆ, ಸಣ್ಣತನ, ಬದುಕಿನ ಹೋರಾಟ; ಅದು ತಂದೊಡ್ಡುತ್ತಿರುವ ಮಾನಸಿಕ ಒತ್ತಡ, ಸಂಬಂಧಗಳ ಶಿಥಿಲತೆ, ನಶಿಸುತ್ತಿರುವ ಮಾನವೀಯ ಮೌಲ್ಯ- ಇವುಗಳನ್ನೆಲ್ಲಾ ಕಂಡು ಖಿನ್ನಳಾಗುತ್ತೇನೆ.

ನಾವೆಲ್ಲೋ ಕಳೆದುಹೋಗುತ್ತಿದ್ದೇವೆ. ಕಳೆದುಕೊಂಡದ್ದನ್ನು ಮಾತುಗಳಲ್ಲಿ, ಬರವಣಿಗೆಯಲ್ಲಿ ಕಲಾ ಮಾಧ್ಯಮಗಳಲ್ಲಿ ಪುನರ್ ಸೃಷ್ಟಿಸಲು ಪ್ರಯತ್ನಿಸುತ್ತೇವೆ. ನಾವು ಕಟ್ಟಿಕೊಳ್ಳುವ ಎಲ್ಲಾ ಸಂಬಂಧಗಳಲ್ಲಿ ಕಳೆದುಕೊಂಡದ್ದರ ಹುಡುಕಾಟವೇ ಅಂತರ್ ವಾಹಿನಿಯಾಗಿ ಹರಿಯುತ್ತಿರುತ್ತದೆ.

ಗ್ರಾಮಾಂತರ ಪ್ರದೇಶದಿಂದ ಬಂದ ಬಹಳಷ್ಟು ಜನರ ಚಡಪಡಿಕೆ ಇದು. ಅವರ ಬೇರುಗಳು ಅಲ್ಲಿ ಹರಡಿಕೊಂಡಿದೆ. ಇಲ್ಲಿ ಚಿಗುರೊಡೆಯಲು ಪ್ರಯತ್ನಿಸಿದರೂ ಆಳಕ್ಕೆ ಇಳಿಯಲಾಗದು. ಹೆಣ್ಣುಮಕ್ಕಳದಂತೂ ವಿಚಿತ್ರ ಸಮಸ್ಯೆ. ಇಲ್ಲಿಯ ಜೀವನ ಶೈಲಿ ಮನಸ್ಸನ್ನು ಇನ್ನಷ್ಟು ಸೂಕ್ಷವಾಗಿಸಿದೆ. ಹಾಗಾಗಿ ಎಲ್ಲದರತ್ತ ವಿಮರ್ಶೆಯ ನೋಟ. ಬಾಲ್ಯದ ಗೆಳೆಯ/ ಗೆಳತಿ ನಿಂತ ನೀರಾಗಿದ್ದಾರೆ ಎನಿಸುತ್ತದೆ. ಸಂವಹನ ಸಾಧ್ಯವಾಗುವುದಿಲ್ಲ. ಮನೆಗೆ ಬರುವ ಪರಿಚಿತರೆಲ್ಲ ಗಂಡನ ಸಂಬಂಧಿಕರು ಅಥವಾ ಗೆಳೆಯರೇ ಆಗಿರುತ್ತಾರೆ. ಒಂದುವೇಳೆ ತನಗೆ ಆತ್ಮೀಯರಾದ ಗೆಳೆಯರಿದ್ದರೂ ಅವರನ್ನು ಮನೆಗೆ ಆಹ್ವಾನಿಸುವಷ್ಟು ಅಥವಾ ಅವರೊಡನೆ ಹೊರಗೆ ಸುತ್ತಾಡುವಷ್ಟು ನಮ್ಮ ಸಮಾಜ ಮುಕ್ತವಾಗಿಲ್ಲ.

ಆಧುನಿಕ ವಿದ್ಯಾವಂತ ಗೃಹಿಣಿ ಒಂಟಿಯಾಗಿದ್ದಾಳೆ. ಆಕೆಗೆ ಸಂತೋಷವನ್ನು ಹಂಚಿಕೊಳ್ಳಲು ಬೇಕಾದಷ್ಟು ಜನ ಸಿಗುತ್ತಾರೆ. ಆದರೆ ದುಃಖ-ದುಮ್ಮಾನ, ಸಂದೇಹ-ಸಮಸ್ಯೆಗಳನ್ನು ಯಾರಲ್ಲಿ ತೋಡಿಕೊಳ್ಳುವುದು ಎಂದು ಗೊತ್ತಾಗುವುದೇ ಇಲ್ಲ. ಮನದಾಳವನ್ನು ಇನ್ನೊಬ್ಬರೆದುರು ತೆರೆದಿಟ್ಟರೆ ನಾಳೆ ಏನಾಗುವುದೋ ಎಂಬ ಅಳುಕು. ಹಾಗಾಗಿ ಎಲ್ಲವನ್ನು ಅಂತರಂಗದಲ್ಲೇ ಬಚ್ಚಿಟ್ಟುಕೊಳ್ಳುತ್ತಾಳೆ.

ನನ್ನನ್ನೇ ನೋಡಿ; ನನಗೊಬ್ಬ ಗೆಳೆಯನಿದ್ದಾನೆ. ಆತ್ಮೀಯ ಗೆಳೆಯನೆಂದು ಹೇಳಲಾಗದು. ಗೆಳೆತನದಲ್ಲಿ ಪರಸ್ಪರ ಭಾವ ಸ್ಪಂದನವಿರುತ್ತದೆ. ಇಲ್ಲಿ ಅದಿಲ್ಲ. ಹಾಗಿದ್ದರೆ ಆತ ಹೇಗೆ ನಿಮಗೆ ಗೆಳೆಯನಾದಾನು? ಎಂದು ಅನ್ನಿಸಬಹುದು. ಗೊತ್ತಿಲ್ಲ. ಆತ ಗೆಳೆಯನೆಂದು ಮನಸ್ಸು ಒಪ್ಪಿಕೊಂಡಿದೆ. ಬುದ್ಧಿ ತಕರಾರು ಮಾಡುತ್ತಿದೆ.

ನನ್ನ ಆತನ ಸಂಬಂಧದಲ್ಲಿ ನಾನು ಮಾತ್ರ ಮಾತಾಡುತ್ತಿರುತ್ತೇನೆ. ಮಹಿಳೆಯರು ಜಾಸ್ತಿ ಮಾತಾಡುತ್ತಿರುತ್ತಾರೆ ಎಂಬ ಆಪಾದನೆ ಇದೆ. ಅವರು ಮಾತಾಡಿ ಹಗುರವಾಗದಿದ್ದರೆ ಒಳಗಿನ ಒತ್ತಡಕ್ಕೆ ಸ್ಪೋಟಗೊಳ್ಳುವ ಅಪಾಯವಿದೆ. ಒತ್ತಡ ಹರಿಯಲೊಂದು ಚಾನಲ್ ಬೇಕು. ಮಹಿಳೆಯರ ಮಟ್ಟಿಗದು ಮಾತು ಮಾತ್ರ.

ನನ್ನ ಮಾತುಗಳಿಗೆ ನನ್ನ ಗೆಳೆಯನ ಪ್ರತಿಕ್ರಿಯೆ ಏನು ಎಂಬುದು ನನಗೆ ಗೊತ್ತಾಗುವುದಿಲ್ಲ. ಯಾಕೆಂದರೆ ನಮ್ಮ ಹೆಚ್ಚಿನ ಮಾತುಕತೆಯೆಲ್ಲಾ ನಡೆಯುವುದು ಪೋನಿನಲ್ಲಿ. ಆತ ಸುಮ್ಮನೆ ಹಾ, ಹುಂ, ಹೌದಾ, ಛೇ ಅನ್ನುತ್ತಿರುತ್ತಾನೆ.
ಬಹಳಷ್ಟು ಬಾರಿ ನನಗೆ ಅನ್ನಿಸುತ್ತದೆ; ಆತ ನನ್ನ ಪಾಲಿಗೆ ಕೇವಲ ಒಂದು ಡೈರಿ ಮಾತ್ರ. ಅಲ್ಲಿ ನನ್ನ ಮಾತುಗಳು ಮಾತ್ರ ದಾಖಲಾಗುತವೆ. ದಾಖಲಾಗುತ್ತದೆ ಎಂದು ನಂಬಿಕೊಂಡಿದ್ದೇನೆ. ಹತ್ತಾರು ವರ್ಷಗಳ ದಾಂಪತ್ಯದ ನಂತರ ಗಂಡನೊಬ್ಬ ಹೆಂಡತಿಯ ಪಾಲಿಗೆ ಮುಚ್ಚಿದ ಡೈರಿಯಾಗುವ ಸಂಭವವೇ ಹೆಚ್ಚು.

ಗಂಡಸರ ಜೀವನ ವಿಧಾನವೇ ಅಷ್ಟು. ಅಲ್ಲಿ ಯಾವುದೇ ಸ್ಥಿತ್ಯಂತರಗಳಿಲ್ಲ. ಅವರು ಯಾವುದನ್ನು ಜೀವದುಂಬಿ ಹಚ್ಚಿಕೊಳ್ಳಲಾರರು; ಹಂಚಿಕೊಳ್ಳಲಾರರು. ನಾವು ಹಾಗಲ್ಲ. ನಾವೆಲ್ಲಾ ವಸುಂಧರೆಯರು. ಒಡಲಾಳದಲ್ಲಿ ಕುದಿಯುವ ಲಾವ. ಮೇಲುಮೇಲಕ್ಕೆ ಹದವಾದ ಎರೆಮಣ್ಣು. ಉಕ್ಕುವ ಜೀವಜಲ. ಸಮೃದ್ಧ ಹಸಿರು. ಕಣ್ಣಿಗೆ ತಂಪು.

ವಸುಂಧರೆ ಎಂಬ ಶಬ್ದವನ್ನೇ ನೋಡಿ, ಅದಕ್ಕೆ ಎಷ್ಟೊಂದು ತೂಕವಿದೆ, ಸೌಂದರ್ಯವಿದೆ, ವೈಭವವಿದೆ. ವಸು ಎಂದರೆ ಬಂಗಾರ. ವಸುಂಧರೆ; ದ್ರವ್ಯವನ್ನು ಒಳಗೊಂಡಿರುವವಳು. ಆಕೆಯ ಒಡಲಲ್ಲಿ ಸಂಪತ್ತಿದೆ. ಖನಿಜವಿದೆ. ಏನಾದರೂ ’ಇದೆ’ ಅಂದರೆ ಅದನ್ನು ನೋಡುವ ಕುತೂಹಲ, ದೋಚುವ ಹಂಬಲ ಉಂಟಾಗುತ್ತದೆ. ’ಇದೆ’ ಅನ್ನುವುದು ಒಂದು ದಿನ ಇಲ್ಲವಾಗುತ್ತದೆ! ಬರಿದಾಗುತ್ತದೆ!!

ವಸುಂಧರೆಗೆ ಪರ್ಯಾಯವಾಗಿರುವ ಹಲವಾರು ಶಬ್ದಗಳಲ್ಲಿ ’ಇಳೆ’ ಎಂಬ ಶಬ್ದವೂ ಒಂದು. ವಸುಂಧರೆಯ ವೈಭವದ ಭಾರ ಇಲ್ಲಿಲ್ಲ. ಆದರೆ ಇದು ಮೈ ಮನಗಳಿಗೆ ಮುದವನ್ನು ನೀಡುತ್ತದೆ. ಇಳೆಯಲ್ಲಿ ಅರಳುವ ಪ್ರಕ್ರಿಯೆ ಇದೆ. ಇಳೆ; ಮಳೆ; ಬೆಳೆ; ಕಳೆ; ಶಬ್ದಗಳಿಗಿರುವ ಅನ್ಯೋನ್ಯ ಸಂಬಂಧವನ್ನು ಗಮನಿಸಿದರೆ ಅದು ಅಕ್ಷಯದ, ಸೃಷ್ಟಿಯ ಭಾವನೆಯನ್ನು ಮೂಡಿಸುತ್ತದೆ. ಇದು ಜೀವನ್ಮುಖಿಯಾದುದು.

ಕೋಲಾರದ ಕೆಜಿಎಫ಼್ ನೋಡಿದಾಗ ನನಗೆ ವಸುಂಧರೆ ನೆನಪಾಗುತ್ತದೆ. ಪ್ರಕೃತಿಯ ಮೇಲೆ ಪುರುಷ ದಬ್ಬಾಳಿಕೆಯ, ಆಕ್ರಮಣದ ಚಿತ್ರಣ ಸಿಗುತ್ತದೆ. ಆಧುನಿಕ ಗೃಹಿಣಿ ಕಣ್ಣೆದುರು ನಿಲ್ಲುತ್ತಾಳೆ.

ಅದೇ ಇಳೆ ಎಂದಾಗ ನನಗೆ ನನ್ನೂರು ನೆನಪಾಗುತ್ತದೆ. ಅಲ್ಲಿಯ ಸಮೃದ್ದ ಹಸಿರು, ನಿರಾಳ ಬದುಕು, ನಿಷ್ಕಲ್ಮಶ ಪ್ರೀತಿ ನೆನಪಾಗಿ ಕಾಡುತ್ತದೆ.
ಇಳೆಯಲ್ಲಿ ನನ್ನ ಬಾಲ್ಯ ಇದೆ. ವಸುಂಧರೆಯಲ್ಲಿ ವಾಸ್ತವ ಇದೆ.
ಎರಡನ್ನೂ ಸಮನ್ವಯಗೊಳಿಸುವುದು ಎಷ್ಟು ಕಷ್ಟ!

[’ಹಂಗಾಮ’ದ ವಸುಂಧರೆ ಕಾಲಂನಲ್ಲಿ ಪ್ರಕಟವಾದ ಲೇಖನ]

Thursday, May 21, 2009

ಭಾರತಿಯರ ’ಅತ್ತೆ ಮನಸ್ಸು’





೧೯೮೪ರ ಅಕ್ಟೋಬರ್ ೩೧
ಇಂದಿರಾಗಾಂಧಿಯವರ ಚಿತೆ ಉರಿಯುತ್ತಿತ್ತು.
ಭಾರತಕ್ಕೆ ಆಗಷ್ಟೇ ಟೀವಿ ಕಾಲಿಟ್ಟಿತ್ತು.
ದೂರದರ್ಶನ ನಮ್ಮ ಪ್ರಧಾನಿಯ ಅಂತಿಮಯಾತ್ರೆಯನ್ನು ನೇರಪ್ರಸಾರ ಮಾಡುತ್ತಿತ್ತು.
ಪ್ರಿಯಾಂಕ ಗಾಂಧಿ ತನ್ನ ತಮ್ಮ ರಾಹುಲ್ ಗಾಂಧಿಯ ಜೊತೆ ಚಿತೆಯ ಸಮೀಪ ನಿಂತಿದ್ದರು. ಸ್ವಲ್ಪ ದೂರದಲ್ಲಿ ವರುಣ ಗಾಂಧಿ ಒಂಟಿಯಾಗಿ ನಿಂತಿದ್ದ.
ವರುಣನಿನ್ನೂ ಪುಟ್ಟ ಬಾಲಕ. ಸಾವಿನ ಗಂಭೀರತೆ ಅರಿವಾಗುವ ವಯಸ್ಸಲ್ಲ. ಅವನ ಅಮ್ಮ ಮನೇಕಾ ಗಾಂಧಿ ಸ್ವಲ್ಪ ದೂರದಲ್ಲಿದ್ದರು. ಪ್ರಿಯಾಂಕಳಿಗೆ ಕ್ಷಣ ಏನನ್ನಿಸಿತೋ.. ಕೈಚಾಚಿ ಅವನನ್ನು ಪಕ್ಕಕ್ಕೆಳೆದುಕೊಂಡು ತನ್ನ ಮಗ್ಗುಲಲ್ಲಿಯೇ ಇರಿಸಿಕೊಂಡಳು.
ಆಗ ನಾನಿನ್ನೂ ಕಾಲೇಜು ವಿದ್ಯಾರ್ಥಿನಿ. ಆದರೆ ದೃಶ್ಯ ಅತ್ಯಂತ ಸ್ಪಷ್ಟವಾಗಿ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿತ್ತು.

ಮೊನ್ನೆ ಮೇ ೧೮. ೨೦೦೪ ಪಾರ್ಲಿಮೆಂಟ್ ಭವನ.
ಪ್ರಿಯಾಂಕಳ ತಾಯಿ ಸೋನಿಯಾಗಾಂಧಿ ತನ್ನಆತ್ಮಸಾಕ್ಷಿಗೆ ಓಗೊಟ್ಟು ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೊಂದರ ಪ್ರಧಾನಿ ಹುದ್ದೆಯನ್ನು ನಿರಾಕರಿಸಿದ ದಿನ.
ಅಂದು ಕಾಂಗೆಸ್ ಪಕ್ಷದ ಅಧ್ಯಕ್ಷರ ಕುಟುಂಬದವರಿಗಾಗಿ ಮೀಸಲಾದ ಜಾಗದಲ್ಲಿ ಪ್ರಿಯಾಂಕ ಮತ್ತು ರಾಹುಲ್ ಕುಳಿತಿದ್ದರು. ಅವರ ಮಧ್ಯದಲ್ಲಿ ಪ್ರಿಯಾಂಕ ಪತಿ ರಾಬರ್ಟ್ ವಧೆರಾ ಇದ್ದರು. ಕಾಂಗ್ರೆಸ್ ಸಂಸದರು ಪ್ರಧಾನಿ ಹುದ್ದೆ ವಹಿಸಿಕೊಳ್ಳುವಂತೆ ಸೋನಿಯಾ ಮೇಲೆ ಹೇರುತ್ತಿದ್ದ ಒತ್ತಡವನ್ನು ಅವರು ಗಮನಿಸುತ್ತಿದ್ದರು.
ಒಂದು ಭಾವುಕ ಕ್ಷಣದಲ್ಲಿ ರಾಹುಲ್ ಅಕ್ಕ ಪ್ರಿಯಾಂಕಳ ಬೆರಳುಗಳನ್ನು ತಮ್ಮ ಕೈಯಲ್ಲಿ ತೆಗೆದುಕೊಂಡರು. ಇದನ್ನು ವಧೇರಾ ಆಸಕ್ತಿಯಿಂದ ಗಮನಿಸುತ್ತಿದ್ದರು. ಮರುದಿನ ಚಿತ್ರಔಟ್ ಲುಕ್ಪತ್ರಿಕೆಯಲ್ಲಿ ಪ್ರಕಟವಾಯಿತು. ದೃಶ್ಯ ನಂಗೆ ತುಂಬಾ ಆಪ್ಯಾಯಮಾನವೆನಿಸಿತು. ಕುಟುಂಬದಲ್ಲಿ ಬಹು ಮಧುರವಾದ ಬಾಂಧವ್ಯವೊಂದು ಬೆಸೆದುಕೊಂಡಿದೆ ಎಂದು ಅನ್ನಿಸಿ ಮನಸ್ಸು ಆರ್ದ್ರಗೊಂಡಿತು. ’ ಸೋನಿಯಾಎಂಬ ತಾಯಿಯ ಬಗೆಗೆ ಹೆಮ್ಮೆ ಮೂಡಿತು.

ನಮ್ಮ ಭಾರತೀಯರ ಮನಸ್ಸೇ ಹಾಗೆ.ನಾವು ಒಬ್ಬ ವ್ಯಕ್ತಿಯನ್ನು ಒಂದು ಕುಟುಂಬದ ಹಿನ್ನೆಲೆಯಲಿಟ್ಟು ನೋಡುತ್ತೇವೆ.ನಮಗೆ ಬ್ಬ ವ್ಯಕ್ತಿಗಿಂತ ಕುಟುಂಬ ದೊಡ್ಡದು.  ತನಗಿಂತಲೂ ಹೆಚ್ಚಾಗಿ ಕುಟುಂಬಕ್ಕಾಗಿ, ಅದರ ಒಳಿತಿಗಾಗಿ ಒಬ್ಬಾತ ಶ್ರಮಿಸಿದರೆ ಅವರನ್ನು ನಾವು ಹಾಡಿ ಹೊಗಳುತ್ತೇವೆ. ಗೌರವಿಸುತ್ತೇವೆ. ಒಂದು ವೇಳೆ ಕುಟುಂಬವನ್ನು ಪಕ್ಕಕ್ಕೆ ಸರಿಸಿ ವ್ಯಕ್ತಿಗತವಾಗಿ ಬೆಳೆಯಲು ಪ್ರಯತ್ನಿಸಿದರೆ, ಸ್ವಂತಿಕೆಯನ್ನು ಮೆರೆದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಲು ಸಾಮೂಹಿಕವಾಗಿ ಪ್ರಯತ್ನಿಸುತ್ತೇವೆ.


ಸೋನಿಯ ವಿಷಯದಲ್ಲೂ ಅಷ್ಟೇ. ಆಕೆ ಇಟಲಿ ಸಂಜಾತೆಯಾಗಿರಬಹುದು. ಆದರೆ ಆಕೆ ಪ್ಪಟ ಭಾರತೀಯ ಗೃಹಿಣಿಯಾಗಿ ಬಾಳಿದಳು. ಇಂದಿರಾ ಗಾಂಧಿಯವರ ಮೆಚ್ಚಿನ ಸೊಸೆಯಾಗಿದ್ದಳು. ಅದಕ್ಕಿಂತಲೂ ಹೆಚ್ಚಾಗಿ ತನ್ನ ಅತ್ತೆಯ ಆಪ್ತ ಕಾರ್ಯದರ್ಶಿನಿಯಂತೆ ಕೆಲಸ ಮಾಡಿದರು. ಅವರು ಪ್ರತಿದಿನ ಉಡುವ ಸೀರೆಯಿಂದ ಹಿಡಿದು ಅತಿಥಿ ಸತ್ಕಾರದ ತನಕ ಎಲ್ಲಾ ಕೌಟುಂಬಿಕ ಹೊಣೆಗಾರಿಕೆಯನ್ನು ಸೋನಿಯಾರೇ ನಿಭಾಯಿಸಿದರು. ಊಟದ ಟೇಬಲ್ಲಿನಿಂದಲೇ ಹಿಂದಿಯನ್ನೂ ಕಲಿತುಕೊಂಡರು.

ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದೆ, ಭಾರತೀಯ ಸಾಂಪ್ರದಾಯಿಕ ಹೆಣ್ಣು ಮಗಳಂತೆ ಮಕ್ಕಳ್ಳನ್ನು ಸುಸಂಸ್ಕೃತರಾಗಿ ಬೆಳೆಸಿದರು. ಹಕ್ಕಿ ಮರಿಗಳಂತೆ ಜೋಪಾನ ಮಾಡಿದರು. ಹಾಗಾಗಿಯೇ ನೆಹರು ವಂಶದ ಘನತೆಯನ್ನು ಸಂರಕ್ಷಿಸಿದ ಸೋನಿಯಾರನ್ನು ದೇಶದ ಜನತೆ ತಮ್ಮವರೆಂದು ಒಪ್ಪಿಕೊಂಡಿತು. ದೇಶದ ಸೊಸೆಯೆಂದು ಗೌರವಿಸಿತು.


ಸೋನಿಯಾ ರಾಜೀವ್ ಗಾಂಧಿಯನ್ನು ಪ್ರೀತಿಸಿ ಮದುವೆಯಾದಾಗ ಅವರೊಬ್ಬ ಪೈಲಟ್ ಅಷ್ಟೇ. ಮುಂದೊಂದು ದಿನ ಆತ ಭಾರತದ ಪ್ರಧಾನಿಯಾಗಬಹುದೆಂದು ಕನಸು ಕೂಡಾ ಕಂಡವರಲ್ಲ. ಕೆಳಮಧ್ಯಮ ವರ್ಗದಲ್ಲಿ ಹುಟ್ಟಿದ ಹೆಣ್ಣು ಮಗಳು ಮಧ್ಯಮ ವರ್ಗದ ಬದುಕನ್ನೇ ಬದುಕ ಬಯಸಿದ್ದರು. ಕುಟುಂಬದ ಚೌಕಟ್ಟಿನೊಳಗೆ ಸಂತೃಪ್ತ ಗೃಹಿಣಿಯಾಗಿ ಬಾಳಬಯಸಿದ್ದರು. ಇದನ್ನವರು ತಮ್ಮರಾಜೀವ್ಕೃತಿಯಲ್ಲಿ ಹೇಳಿಕೊಂಡಿದ್ದಾರೆ.

ಆದರೆ ಆದದ್ದೇ ಬೇರೆ. ರಾಜಕೀಯದ ಚದುರಂಗದಾಟ ಅವರನ್ನು ಸಾರ್ವಜನಿಕ ವ್ಯಕ್ತಿಯನ್ನಾಗಿ ಮಾಡಿಬಿಟ್ಟಿತು. ಚುನಾವಣೆಯಲ್ಲಂತೂ ಅವರು ಪಕ್ಷದ ಸ್ಟಾರ್ ಕ್ಯಾಂಪೈನರ್. ನಿರೀಕ್ಷೆಗೂ ಮೀರಿ ಅವರು ಪಕ್ಷಕ್ಕೆ ಗೆಲುವನ್ನು ತಂದು ಕೊಟ್ಟು ಅದರ ವರ್ಚಸನ್ನು ಹೆಚ್ಚಿಸಿದರು.
ಆದರೆ ಶ್ರಮದ ಫಲವನ್ನು ಉಣ್ಣಲು ಅವರಿಗೆ ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣಕರ್ತರು ಯಾರು ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರ ? ಇಲ್ಲವೇ ಅವರಲ್ಲೇ ಹುಟ್ಟಿಕೊಂಡ ಜೀವಭಯ- ಇವೆಲ್ಲಾ ಇದ್ದರೂ ಇರಬಹುದು.
ಇದೆಲ್ಲದರ ಜೊತೆಗೆ ಭಾರತೀಯ ಮನಸ್ಸು ಕೆಲಸ ಮಾಡುವ ರೀತಿಯೂ ಕಾರಣವಾಗಿರಬಹುದು. ಇಲ್ಲಿ ಕುಟುಂಬದಲ್ಲಿ ಸೊಸೆಗೆ ಎಲ್ಲಾ ರೀತಿಯ ಸ್ಥಾನಮಾನಗಳನ್ನು ನೀಡಲಾಗುತ್ತದೆ. ಆಕೆ ಮನೆಮಗಳ ಸಮಾನ. ಆದರೆ ಕುಟುಂಬದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಅಪನಂಬಿಕೆಯ ಕರಿನೆರಳೊಂದು ಅವಳ ಮೇಲೆ ಬಿದ್ದಿರಿತ್ತದೆ. ಅವಳಿಗಿಂತ ಮನೆ ಮಗಳಿಗೆ-ಅವಳು ಮದುವೆಯಾಗಿ ಗಂಡನ ಮನೆಯಲ್ಲಿದ್ದರೂ ಹೆಚ್ಚಿನ ಅಧಿಕಾರವಿರುತ್ತದೆ.

ಅಲ್ಲದೇ ಇನ್ನೊಂದು ವಿಷಯವೂ ಗಮನಾರ್ಹ. ಹೆಣ್ಣು ಮಗಳೊಬ್ಬಳು ಗಂಡನ ಮನೆಗೆ ಬಂದಾಗ ಅದರಲ್ಲಿಯೂ ಅನ್ಯ ಜಾತಿಯ ಯುವಕನೊಬ್ಬನನ್ನು ಪ್ರೀತಿಸಿ ಮದುವೆಯಾದಾಗ ಅವಳಲ್ಲಿ ಆತಂಕವಿರುತ್ತದೆ. ಅದು ಸಹಜ. ಆಕೆ ಗಂಡನನ್ನು ಸಂಪೂರ್ಣ ಒಪ್ಪಿಕೊಂಡಿದ್ದಾಳೆ ಮತ್ತು ನಂಬಿದ್ದಾಳೆ. ಆದರೆ ಗಂಡನ ಮನೆಯವರನ್ನು ಕ್ರಮೇಣ ಒಪ್ಪಿಕೊಳ್ಳುತ್ತಾಳೆ. ನಂಬುತ್ತಾಳೆ ಎಂದು ಹೇಳಲಾಗದು. ’ಒಪ್ಪಿಕೊಳ್ಳುವುದುಮತ್ತುನಂಬುವುದುಎರಡರ ಮಧ್ಯೆ ಸೂಕ್ಷ್ಮವಾದ ಆದರೆ ಗಂಭೀರವಾದ ವ್ಯತ್ಯಾಸ ಇದೆ. ಒಪ್ಪಿಕೊಳ್ಳುವುದು ಅನಿವಾರ್ಯವಾಗಬಹುದು ಆದರೆ ನಂಬುವುದು ಆಕೆಗೇ ಬಿಟ್ಟಿದ್ದು. ಅದು ಆಕೆಯ ತೀರಾ ಅಂತರಂಗದ ವಿಷಯ. ಸೋನಿಯಾ ಭಾರತೀಯ ಪೌರತ್ವ ಸ್ವೀಕರಿಸಲು ತಡ ಮಾಡಿದ್ದಕ್ಕೆ ಇದೂ ಒಂದು ಕಾರಣವಾಗಿರಬಹುದು.
ಕಾಂಗ್ರೆಸ್ಸಿಗೆ ಆಕೆ ಅನಿವಾರ್ಯವಾಗಿದ್ದರು. ‘ಕೆರೆಗೆ ಹಾರಜನಪದ ಕಥನ ಕಾವ್ಯದಲ್ಲಿ ಊರ ಏಳ್ಗೆಗಾಗಿ ಕಿರಿ ಸೊಸೆ ಭಾಗೀರಥಿಯನ್ನು ಬಲಿ ಕೊಡುವುದಿಲ್ಲವೇ? ಕುಟುಂಬದ ಒಳಿತಿಗಾಗಿ ಗರ್ಭಿಣಿ ಸೊಸೆಯಂದಿರೇ ಬಲಿಯಾಗಬೇಕು! ಮನೆಮಗಳು ಅದಕ್ಕೆ ಮಾತ್ರ ಅರ್ಹಳಲ್ಲ!

ನಮ್ಮೆಲ್ಲರದ್ದು ಅತ್ತೆ ಮನಸ್ಸು. ಸೋನಿಯಾರ ವಿಚಾರದಲ್ಲಿ ಬಿಜೆಪಿಯ ಮನಸ್ಸಂತೂಘಟವಾಣಿ ಅತ್ತೆ ಹಾಗೆ ಕೆಲಸ ಮಾಡಿದೆ. ಹಾಗಾಗಿಯೇ ಸೋನಿಯಾ ಪ್ರಧಾನಿಯಾದರೆ ತಲೆ ಬೋಳಿಸಿ ವಿಧವೆಯ ಬಾಳು ಬಾಳುತ್ತೇನೆಂದು ಸುಷ್ಮಾ ಸ್ವರಾಜ್ ಹೇಳುತ್ತಾರೆ. ಉಮಾಭಾರತಿ ಅದಕ್ಕೆ ಪಲ್ಲವಿ ಹಾಡುತ್ತಾರೆ.
ಭಾರತೀಯರಅತ್ತೆ ಮನಸ್ಸುಸೋನಿಯಾಗೆ ಅರ್ಥವಾಗಿದೆ. ಹಾಗಾಗಿ ಆಕೆ ತ್ಯಾಗಿಯಾಗಲು ನಿರ್ಧರಿಸಿದ್ದಾರೆ. ಭಾರತೀಯರಿಗೆ ತ್ಯಾಗಕ್ಕಿಂತ ದೊಡ್ಡದಾದ ಬೇರೊಂದು ಆದರ್ಶವಿಲ್ಲ. ಅವರ ಮಗ ರಾಹುಲ್ ಗಾಂಧಿ ಹೇಳಿದಂತೆಯಾರು ಅತ್ಯುನ್ನತ ಪದವಿಗಾಗಿ ಹಗಲಿರುಳು ಶ್ರಮಿಸುತ್ತಾರೋ ಅಂತಹ ಪದವಿ ಕೈಯಳತೆಯಲ್ಲಿ ಸಿಕ್ಕಿರುವಾಗ ಅದನ್ನು ನಿರಾಕರಿಸುವುದಕ್ಕೆ ನಿಜವಾಗಿಯೂ ಗಟ್ಟಿ ಗುಂಡಿಗೆ ಬೇಕು.’

ನಿರ್ಣಾಯಕ ಘಳಿಗೆಗಳಲ್ಲೆಲ್ಲಾ ನನ್ನೊಳಗಿನ ಧ್ವನಿಯಂತೆ ನಡೆದುಕೊಳ್ಳುತ್ತಾ ಬಂದಿದ್ದೇನೆ. ಧ್ವನಿ ನನಗಿಂದು ಪ್ರಧಾನಿ ಹುದ್ದೆ ನಿರಾಕರಿಸುವಂತೆ ಹೇಳುತ್ತಿದೆಎಂದು ಮೇ ೧೮ರಂದು ಪಾರ್ಲಿಮೆಂಟ್ ಭವನದಲ್ಲಿ ಸೋನಿಯಾ ಹೇಳಿದ್ದಾರೆ. ಅದು ಭಾರತೀಯ ಫಿಲಾಸಫಿಯೂ ಹೌದು.
ಹೀಗೆ ಹೇಳುವುದರ ಮುಖಾಂತರ ಅವರು ಬಿಜೆಪಿಯನ್ನು ನಿಶ್ಯಸ್ತ್ರಗೊಳಿಸಿದ್ದಾರೆ. ಈಗ ಬಿಜೆಪಿಯ ಬತ್ತಳಿಕೆಯಲ್ಲಿ ಬಾಣಗಳೇ ಇಲ್ಲ. ಇದ್ದ ಎರಡು ಬಾಣಗಳಾದ ರಾಮಜನ್ಮಭೂಮಿ ಮತ್ತು ವಿದೇಶಿ ಮೂಲ ಗುರಿ ತಪ್ಪಿದೆ. ಚತುರ ರಾಜಕೀಯ ಮುತ್ಸದ್ಧಿಯಂತೆ ವರ್ತಿಸಿದ ಸೋನಿಯಾ ವಿರೋಧ ಪಕ್ಷಗಳ ಲೆಕ್ಕಾಚಾರಗಳನ್ನೆಲ್ಲಾ ತಲೆಕೆಳಗು ಮಾಡಿದ್ದಾರೆ. ಅವರು ಸೋತಿಲ್ಲ, ಗೆದ್ದಿದ್ದಾರೆ.

ಹೋದಲ್ಲಿ ಬಂದಲ್ಲಿ ಜತೆಜತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಸೋನಿಯಾ ಕುಟುಂಬದ ಬಗ್ಗೆ ಜನಸಾಮಾನ್ಯರಲ್ಲಿ ವಾತ್ಸಲ್ಯವಿದೆ. ಅನುಕಂಪವಿದೆ. ಅವರ ಶ್ರಮದ ಬಗ್ಗೆ ಗೌರವವಿದೆ. ಅದು ಓಟಾಗಿ ಪರಿಣಮಿಸಿದೆ. ಬಿಜೆಪಿ ಮತ್ತು ಸಂಘ ಪರಿವಾರದಅತ್ತೆತನ ಮುಂದೆ ಜನತೆಯತಾಯ್ತನಗೆದ್ದಿದೆ. ಗಂಡನ ಮನೆಯಲ್ಲಿ ಸೊಸೆ ಇಷ್ಟೆಲ್ಲಾ ಸಾಧಿಸಿದರೆ ಖಂದಿತವಾಗಿಯೂ ಆಕೆಯಲ್ಲೇನೋ ವಿಶೇಷವಿದೆ. ಅದನ್ನು ನಾವು ಕ್ಷುಲ್ಲಕವಾಗಿ ಕಾಣಬಾರದು. ಒಂದಂತೂ ಸತ್ಯ. ತಾನು ತ್ಯಾಗಿಯಾಗುವುದರ ಮುಖಾಂತರ ಆಕೆ ಮಕ್ಕಳ ರಾಜಕೀಯ ಬದುಕನ್ನು ಸುಗಮಗೊಳಿಸಿದ್ದಾಳೆ. ಅದು ಒಬ್ಬ ತಾಯಿಯಿಂದ ಮಾತ್ರ ಸಾಧ್ಯ. ಹಾಗೆಯೇ ಬಿಜೆಪಿಯ ರಾಜಕೀಯ ಭವಿಷ್ಯವನ್ನು ಸದ್ಯಕ್ಕಂತೂ ಮಂಕಾಗಿಸಿದ್ದಾರೆ. ಅದು ಒಬ್ಬ  ಮುತ್ಸದ್ಧಿಗೆ ಮಾತ್ರ ಸಾಧ್ಯ!

·       

[[೨೦೦೪ ಲೋಕಸಭಾ ಚುನಾವಣೆ ಸಂದರ್ಭದದಲ್ಲಿಹಂಗಾಮ ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನವಿದು.

ಮೇ 18 ರಂದು ಪಾರ್ಲಿಮೆಂಟ್ ನಲ್ಲಿ ನಡೆದ ವಿದ್ಯಾಮಾನವನ್ನು ನೋಡಿ ನನ್ನ ಮನದಲ್ಲಿ ಮೂಡಿದ ಭಾವವಿದು. ಹಾಗಾಗಿ ಇದನ್ನು ಯಥಾವತ್ತಾಗಿ ಉಳಿಸಿಕೊಂಡಿದ್ದೇನೆ. ವರ್ತಮಾನದಲ್ಲಿ ನಿಂತು ಯಾವ ತಿದ್ದುಪಡಿಯನ್ನೂ ಮಾಡಿಲ್ಲ. ]