Monday, January 4, 2010

ಬಾಲ್ಯಕ್ಕೆ ಲಗ್ಗೆ ಇಟ್ಟ ’ರಾಮಾಚಾರಿ’





’ಈ ಎಲ್ಲ ಹಿಂಸೆಯಲು ಜೀವ ಕೇಳುವುದೊಂದೆ
ತಿರುತಿರುಗಿ ಜೀವ ಕೇಳುವದೊಂದೇ-ಒಂದೇ ಒಂದು;
ಎಲ್ಲಿಂದ ಬಂದು ಕಾಡಿತು ಈ ಅಗಮ್ಯ,
ವಾಚ್ಯಾತೀತ, ವಿಫಲ, ವಿಪರೀತ ವ್ಯಥೆ?’

ಗಂಗಾಧರ ಚಿತ್ತಾಲರ ‘ದುಃಖಗೀತ’ ಕವನದ ಸಾಲುಗಳಿವು. ಗಂಗಾಧರ ಚಿತ್ತಾಲ, ಕನ್ನಡದ ಶ್ರೇಷ್ಠ ಕಾದಂಬರಿಕಾರರಾದ ಯಶವಂತ ಚಿತ್ತಾಲರ ಅಣ್ಣ. ಇವರ ತಂದೆಯವರು ೧೯೫೫ರಲ್ಲಿ ಮನೆಯ ಹಿತ್ತಲಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಆ ಸಂದರ್ಭದಲ್ಲಿ ಬರೆದ ಕವನವಿದು.

ಸಾವೊಂದು ಗಾಢವಾಗಿ ತಟ್ಟಿದ ಸಂದರ್ಭದಲೆಲ್ಲಾ ಕಾಡುವ ಕವನವಿದು.
ಹೊಸ ವರ್ಷವನ್ನು ಸಡಗರ, ಸಂಭ್ರಮದಿಂದ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗಲೇ ನಾವೆಲ್ಲಾ ಪ್ರೀತಿ, ಅಭಿಮಾನಗಳಿಂದ ‘ಶರೀಫಜ್ಜ’ನೆಂದೇ ಕರೆಯುತ್ತಿದ್ದ ಅಶ್ವಥ್ ಅನಂತದಲ್ಲಿ ಲೀನವಾದರು. ಮರುದಿನವೇ ವಿಷ್ಣುವರ್ಧನ್ ಅವರನ್ನು ಹಿಂಬಾಲಿಸಿದರು. ಕನ್ನಡಿಗರ ಭಾವಪ್ರಪಂಚವನ್ನು ಶ್ರೀಮಂತಗೊಳಿಸಿದ ಎರಡು ಸಾಂಸ್ಕೃತಿಕ ಮನಸ್ಸುಗಳು ಒಟ್ಟೊಟ್ಟಿಗೆ ವರ್ಷದ ಕೊನೆಯಲ್ಲಿ ಕಣ್ಮರೆಯಾದವು. ಸಡಗರದ ಜಾಗದಲ್ಲಿ ವಿಷಾದ ಆವರಿಸಿಕೊಂಡಿತು.

೫೯ ಸಾಯುವ ವಯಸ್ಸು ಖಂಡಿತಾ ಅಲ್ಲ. ಆದರೂ ವಿಷ್ಣು ಇನ್ನಿಲ್ಲ.

ನಾನೇನು ವಿಷ್ಣುವರ್ಧನನ ಅಭಿಮಾನಿಯಲ್ಲ. ಆದರೆ ಸಾಹಿತ್ಯ, ಸಂಗೀತ. ನಾಟಕ, ನೃತ್ಯ, ಸಿನಿಮಾದಂತ ಕಲಾ ಮಾಧ್ಯಮಗಳಿಗೆ ಮನಸ್ಸನ್ನು ರೂಪಿಸುವ ಶಕ್ತಿ ಇದೆಯೆಂಬುದನ್ನು ಬಲ್ಲೆ. ಕನ್ನಡದ ಸಿನಿಮಾ ಜಗತ್ತಿನಲ್ಲಿ ಅನೇಕ ನಟರಿದ್ದಾರೆ; ಇದ್ದರು. ಅವರಲ್ಲಿ ಸ್ಟಾರ್ ಗಳಾಗಿ ಮೆರೆದವರು ಇಬ್ಬರೇ; ಅವರೇ ಡಾ. ರಾಜಕುಮಾರ್ ಮತ್ತು ಡಾ. ವಿಷ್ಣುವರ್ಧನ್.

ರಾಜಕುಮಾರ್ ಗಿಂತ ವಿಷ್ಣುವರ್ಧನ್ ನನ್ನ ಮನಸ್ಸಿಗೆ ಹೆಚ್ಚು ಹತ್ತಿರದವರು. ಅದಕ್ಕೆ ಕಾರಣವಿದೆ.ನಾನು ಬಾಲ್ಯವನ್ನು ಕಳೆದು ಕೌಮಾರ್ಯಕ್ಕೆ ಕಾಲಿಡುವ ಹೊತ್ತಿಗೆ ರಾಜಕುಮಾರ್ ತುಂಬಾ ಎತ್ತರದಲ್ಲಿದ್ದರು. ಎತ್ತರದಲ್ಲಿರುವವರನ್ನು ಆರಾಧಿಸಬಹುದು. ಆದರೆ ಸಮಾನ ನೆಲೆಯಲ್ಲಿ ಕಾಣಲಾಗದು. ರಾಜಕುಮಾರ್ ಹಿರಿಯಣ್ಣನಂತಿದ್ದರು, ಅಪ್ಪನಂತಿದ್ದರು, ಮಾರ್ಗದರ್ಶಕನಂತಿದ್ದರು. ಆದರೆ ಗೆಳೆಯನಲ್ಲ; ಪ್ರೇಮಿಯಲ್ಲ; ಆತ್ಮಬಂಧುವಲ್ಲ. ಆದರೆ ವಿಷ್ಣುವರ್ಧನ್ ಇದೆಲ್ಲವೂ ಆಗಬಲ್ಲವನಾಗಿದ್ದ.

‘ನಾಗರಹಾವು’ ತೆರೆಕಂಡದ್ದು ೧೯೭೨ರಲ್ಲಿ. ನವ್ಯ ಸಾಹಿತ್ಯ ಉತ್ತುಂಗದಲ್ಲಿದ್ದ ಕಾಲಘಟ್ಟ. ಯುವಕರಲ್ಲಿ ಒಂದು ರೀತಿಯ ವಿಕ್ಷಿಪ್ತತೆ ಆವರಿಸಿಕೊಂಡ ಕಾಲ. ಸಾಹಿತ್ಯ ಜಗತ್ತು ಅದನ್ನು ಗುರುತಿಸಿತ್ತು. ಶಾಂತಿನಾಥ ದೇಸಾಯಿಯವರ ‘ಮುಕ್ತಿ’ ಲಂಕೇಶರ ‘ಬಿರುಕು’[೧೯೬೭], ಗೋಪಾಲಕೃಷ್ಣ ಅಡಿಗರ ‘ವರ್ಧಮಾನ’ [೧೯೭೦] ಗಿರಿಯವರ ‘ಗತಿ-ಸ್ಥಿತಿ’[೧೯೭೧]- ಇಲ್ಲೆಲ್ಲಾ ಯುವಜನಾಂಗದ ಅಸಹನೆ, ಚಡಪಡಿಕೆ, ರೋಷ, ಪ್ರತಿಭಟನೆಯಿತ್ತು. ಯುವಕರ ನಾಡಿಮಿಡಿತವನ್ನು ಪುಟ್ಟಣ್ಣ ಕಣಗಾಲ್ ಸಿನಿಮಾದಲ್ಲಿ ಸೆರೆಹಿಡಿದರು. ‘ರಾಮಾಚಾರಿ’ ಯುವ ಮನಸ್ಸಿನ ಪ್ರತಿನಿಧಿಯಾದರು. ನವೋದಯ ಮನಸ್ಸಿನ ಕಾದಂಬರಿಕಾರ ತ.ರಾ.ಸುಗೆ ಇದು ‘ಕೇರೆಹಾವು’ ಆಗಿ ಕಂಡರೂ ರಾತ್ರಿ ಬೆಳಗಾಗುವುದರೊಳಗಾಗಿ ವಿಷ್ಣುವರ್ಧನ ಎಂಬ ‘ಆಂಗ್ರಿ ಯಂಗ್ ಮ್ಯಾನ್’ ಉದಯವಾಗಿದ್ದ.

‘ನಾಗರಹಾವು’ ನಾನು ನೋಡಿದ ನಾಲ್ಕನೆಯ ಸಿನಿಮಾ. ಅದು ಬಿಡುಗಡೆಯಾದ ನಾಲ್ಕೈದು ವರ್ಷಗಳ ನಂತರ ನಾನದನ್ನು ನೋಡಿದೆ. ಅದಕ್ಕೆ ಕಾರಣವಿದೆ. ನನ್ನೂರು ಕುಕ್ಕೆಸುಬ್ರಹ್ಮಣ್ಯ ಹತ್ತಿರದ ಒಂದು ಹಳ್ಳಿ. ಕುಕ್ಕೆಯಲ್ಲಿ ಇಂದಿಗೂ ಥಿಯೇಟರ್ ಇಲ್ಲ. ಸಿನಿಮಾ ನೋಡಬೇಕಾದರೆ ದೂರದ ಪುತ್ತೂರಿಗೆ ಹೋಗಬೇಕು. ಅದು ಆಗದ ವಿಚಾರ. ಯಾಕೆಂದರೆ ಸಿನಿಮಾ ನೋಡಬೇಕಾದರೆ ಆ ರಾತ್ರಿ ಅಲ್ಲಿ ಉಳಿಯಲೇ ಬೇಕಾಗಿತ್ತು. ಹಾಗಾಗಿ ನಾನು ಹತ್ತನೆಯ ತರಗತಿ ಕೊನೆಯವರೆಗೆ ಸಿನಿಮಾ ನೋಡಲೇ ಇಲ್ಲ.

ನಮಗೆ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಗೆ ಪುತ್ತೂರು ಸೆಂಟರ್ ಆಗಿತ್ತು. ಒಟ್ಟು ಹತ್ತು ದಿನ ಅಲ್ಲಿರಬೇಕಿತ್ತು. ಬೆಳಿಗ್ಗೆ ಪರೀಕ್ಷೆ ಬರೆದು ಸಂಜೆ ಫಸ್ಟ್ ಶೋ ಸಿನಿಮಾಕ್ಕೆ ಹೋಗುತ್ತಿದ್ದೆ .ಹತ್ತು ದಿನದಲ್ಲಿ ನಾಲ್ಕು ಸಿನೆಮಾ ನೋಡಿದ್ದೆ. ಬಂಗಾರದ ಮನುಷ್ಯ, ಮಯೂರ, ನಾಗರ ಹಾವು, ಕಿಟ್ಟುಪುಟ್ಟು. ಪುತ್ತೂರಲ್ಲಿ ಆಗ ಒಂದು ಥಿಯೇಟರ್ ಮತ್ತು ಎರಡು ಟೆಂಟ್ ಮಂದಿರಗಳಿದ್ದವು.
ನಾಗರಹಾವು ಸಿನೇಮಾ ನೋಡುವುದಕ್ಕೆ ಮೊದಲೇ ನನಗೆ ಅದರ ಹಾಡುಗಳ ಪರಿಚಯ ಆಗಿತ್ತು. ಯಾಕೆಂದರೆ ನನ್ನತ್ರ ರೇಡಿಯೋ ಇತ್ತು. ಹಾಗಾಗಿ ‘ಹಾವಿನ ದ್ವೇಷ ಹನ್ನೆರಡು ವರ್ಷ...’ ನನಗೆ ತುಂಬಾ ಇಷ್ಟದ ಹಾಡಾಗಿತ್ತು. ಅದಕ್ಕೂ ಒಂದು ಹಿನ್ನೆಲೆಯಿದೆ; ನಮ್ಮಜ್ಜನಿಗೆ ಇಬ್ಬರು ಹೆಣ್ಣುಮಕ್ಕಳು.ಅಜ್ಜ ತೀರಿಕೊಂಡ ಮೇಲೆ ಅಜ್ಜಿ ಆಸ್ತಿಯನ್ನು ಹೆಣ್ಣುಮಕ್ಕಳಿಗೆ ಪಾಲು ಮಾಡಿ ಕೊಟ್ಟರು. ಅಜ್ಜಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮಮ್ಮನಿಗೆ ಬಂತು. ‘ನೀನು ಅಜ್ಜಿಯನ್ನು ನೋಡಿಕೊಂಡು ಅಲ್ಲಿಯೇ ಶಾಲೆಗೆ ಹೋಗು’ ಎಂದು ನಮ್ಮ ಅಪ್ಪ-ಅಮ್ಮ ನನ್ನನ್ನು ಅಜ್ಜಿ ಮನೆಗೆ ಕಳುಹಿಸಿದರು. ಒಬ್ಬ ಅಡುಗೆಯವರನ್ನೂ ಗೊತ್ತು ಮಾಡಿದರು. ನಾನಾಗ ಏಳನೇ ತರಗತಿಯಲ್ಲಿದ್ದೆ.

ನಮ್ಮ ದೊಡ್ಡಮ್ಮನ ಆಸ್ತಿಯನ್ನು ಅವರ ಮಗ ನೋಡಿಕೊಳ್ಳುತ್ತಿದ್ದ. ಆಗ ಒಂದು ಘಟನೆ ನಡೆಯಿತು. ಅವರ ಇನ್ನೊಬ್ಬ ಮಗ ಪುರುಷೋತ್ತಮ ಬಿಳಿಮಲೆ, ತನಗೆ ಸೈನ್ಸ್ ನಲ್ಲಿ ಆಸಕ್ತಿಯಿಲ್ಲ, ಆರ್ಟ್ಸ್ ಓದುತ್ತೇನೆ ಎಂದು ಅಜ್ಜಿ ಊರಿಗೆ ಅಣ್ಣನ್ನಲ್ಲಿಗೆ ಬಂದ. ಅವರಿಬ್ಬರೂ ಅಜ್ಜಿ ಮನೆಯಲ್ಲಿರುವುದನ್ನು ಕೇಳಿ ನಮ್ಮೂರಿನಿಂದ ನನ್ನಣ್ಣನೂ ಬಂದ. ಮೂರು ಜನ ಅಣ್ಣ ತಮ್ಮಂದಿರೂ ಜೋತೆಯಾದರೆಂದರೆ ಕೇಳಬೇಕೆ? ನಮ್ಮ ಜಮೀನಿನ ಮೇಲೆ ಮೇಸ್ಟ್ರು ಒಬ್ಬರಿದ್ರು. ನಮ್ಮ ಗದ್ದೆಗೆ ನೀರು ಬಿಡಲು ಅವರದು ಯಾವಾಗಲೂ ತಕರಾರು. ಅವರ ಮನೆ ಸ್ವಲ್ಪ ತಗ್ಗಿನಲ್ಲಿತ್ತು. ಅವರಿಗೆ ನಾಲ್ಕು ಮಂದಿ ಹೆಣ್ಣು ಮಕ್ಕಳು. ಎಲ್ಲರೂ ನನ್ನ ಓರಗೆಯವರೇ. ನನ್ನ ಈ ಮೂವರೂ ಅಣ್ಣಂದಿರು ನಮ್ಮ ಮನೆಯ ಪಕ್ಕದಲ್ಲಿರುವ ಪೇರಲೆ ಮರವನ್ನೇರಿ ಕೋರಸ್ಸಿನಲ್ಲಿ ’ಹಾವಿನ ದ್ವೇಷ ಹನ್ನೆರಡು ವರುಷ... ನಮ್ಮ ದ್ವೇಷ ನೂರು ವರುಷ..ಮೇಸ್ಟ್ರೆ..’ ಎನ್ನುತ್ತಾ ಹಾಡಿದ್ದೇ ಹಾಡಿದ್ದು. ಆ ಹಾಡಿಗೆ ನಾನು ಜೊತೆಗೂಡಿಸಿ ’ಗಂಡು ಬೀರಿ’ ಎಂಬ ಹೆಸರು ಪಡೆದುಕೊಂಡಿದ್ದೆ. ಅದೇ ಪೇರಲೆ ಮರದಲ್ಲಿ ಮರಕೋತಿಯಾಡುತ್ತಿದ್ದೆವು. ನಾನು ಹತ್ತಾರು ಬಗೆಯಲ್ಲಿ ಸಿಳ್ಳೆ ಹೊಡೆಯಲು ಕಲಿತ್ತದ್ದೆ ಈ ಮರದಡಿಯಲ್ಲಿ.

ಈ ಮೂವರೂ ಆ ಕಾಲದಲ್ಲಿ ವಿಷ್ಣುವರ್ಧನನ ಅಭಿಮಾನಿಯಾಗಿದ್ದರು ಅಂತ ಕಾಣುತ್ತೆ. ವಿಷ್ಣು ತರಹ ಜೊಂಪೆ ಕೂದಲು ತಮ್ಮದಾಗಬೇಕೆಂದು ಆಗಾಗ ನೀರು ಹಾಕಿ ತಿದ್ದಿ ತೀಡಿ ಬಾಚಿಕೊಳ್ಳುತ್ತಿದ್ದರು. ವಿಷ್ಣುವರ್ಧನ್ ತುಂಬಾ ಬಟನ್ ಗಳಿಂದ ಕೂಡಿದ ಚಿತ್ರವಿಚಿತ್ರ ಶರ್ಟ್ ಗಳನ್ನು ಹಾಕುತ್ತಿದ್ದರು. ಗುತ್ತಿಗಾರಿನಲ್ಲಿ ಒಬ್ಬ ಒಳ್ಳೆಯ ಟೈಲರು ಇದ್ದರು. ಅವರಿಗೆ ನಾವೆಲ್ಲಾ ’ಟಿಪ್ ಟಾಪ್ ಟೈಲರ್’ ಎಂದೇ ಹೆಸರಿಟ್ಟಿದ್ದೆವು. ಇವರು ಒಂದು ಸೀರೆಯನ್ನು ಪರ್ಚೇಸ್ ಮಾಡಿ ಅದನ್ನು ಹರಿದು ಮೂರು ಲುಂಗಿಗಳನ್ನಾಗಿ ಆ ಟೈಲರ್ ನಿಂದ ಮಾಡಿಸಿಕೊಳ್ಳುತ್ತಿದ್ದರು. ಹುಡುಗಿಯರ ಸ್ಕರ್ಟ್ ಬಟ್ಟೆಯಿಂದ ಶರ್ಟ್ ಹೊಲಿಸಿಕೊಳ್ಳುತ್ತಿದ್ದರು. ಅದರ ಮೇಲೆಲ್ಲಾ ಚಿತ್ರ ವಿಚಿತ್ರ ಆಕಾರಗಳಲ್ಲಿ ಬಟನ್ ಗಳನ್ನು ಹೊಲಿಸಿಕೊಳ್ಳುತ್ತಿದ್ದರು. ಆ ಶರ್ಟ್- ಲುಂಗಿಗಳನ್ನು ಹಾಕಿಕೊಂಡು ಗುತ್ತಿಗಾರು ಪೇಟೆಗೆ ಹೊರಡುತ್ತಿದ್ದರು. ಅವರಿಗೆ ಪೇಟೆಯ ಜನ ’ತೀನ್ ಬ್ರದರ್ಸ್’ ಎಂದು ಹೆಸರಿಟ್ಟಿದ್ದರು. ನನ್ನ ಸ್ವಂತ ಅಣ್ಣನಂತೂ ನಮ್ಮ ಕಬ್ಬಿಣದ ಆಚಾರಿ ಚಂದ್ರಣ್ಣನತ್ರ ಹೇಳಿ ಎರಡು ಅಲಗಿನ ಚಾಕು ಮಾಡಿಸಿಕೊಂಡು ಅದನ್ನು ಸದಾ ತನ್ನ ಬಳಿಯೇ ಇಟ್ಟುಕೊಂಡಿರುತ್ತಿದ್ದ. ಇದು ಯುವಮನಸ್ಸಿನ ಮೇಲೆ ’ರಾಮಾಚಾರಿ’ ಮಾಡಿದ ಮೋಡಿ.

ಪುತ್ತೂರಿನಲ್ಲಿ ನಾನು ಪದವಿ ಓದುತ್ತಿದ್ದೆ. ಪ್ರೇಮದ ಬಗ್ಗೆ ಕನಸು ಕಾಣುವ ಕಾಲ.ಸುಂದರ, ವಿದ್ಯಾವಂತ, ಸುಸಂಸ್ಕೃತನಾದ ಹೀರೋ ವಿಷ್ಣುವರ್ಧನ್ ನಮ್ಮ ಕನಸುಗಳಿಗೆ ಮಾದರಿಯಾಗಿದ್ದ. ಹೊಂಬಿಸಿಲಿನ ಕನ್ನಡಕಧಾರಿ ಯುವ ವೈದ್ಯ ನಮ್ಮ ಮನಸ್ಸಿನಲ್ಲಿ ಸುಳಿದಾಡುತ್ತಿದ್ದ. ನನ್ನ ಗೆಳತಿಯೊಬ್ಬಳು ಈ ಚಿತ್ರದ ವಿಷ್ಣುವರ್ಧನನ ಪೋಸ್ಟ್ ಕಾರ್ಡ್ ಸೈಜಿನ ಸುಂದರ ಭಾವಚಿತ್ರವೊಂದನ್ನು ಕಳುಹಿಸಿಕೊಟ್ಟಿದ್ದಳು. ನಾನದನ್ನು ಬಹಳ ಕಾಲದವರೆಗೂ ಜೋಪಾನವಾಗಿ ಇಟ್ಟುಕೊಂಡಿದ್ದೆ. ಆತ ಭಾರತಿಯನ್ನು ಮದುವೆಯಾದಾಗ ನನಗೇನೂ ಅನ್ನಿಸಲಿಲ್ಲ. ಯಾಕೆಂದರೆ ಅದಾಗಲೇ ಅನಂತನಾಗ್ ನನ್ನ ಮನಸ್ಸಿನಲ್ಲಿ ಸದ್ದಿಲ್ಲದೆ ಬಂದು ಕೂತಿದ್ದ. ಆತ ಬಾಳ ಸಂಗಾತಿಯ ಕನಸಿಗೆ ಮಾದರಿಯಾಗಿದ್ದ. ಅಲ್ಲದೆ ಸಿನಿಮಾದ ಭ್ರಾಮಕ ಜಗತ್ತಿಗೂ ವಾಸ್ತವ ಬದುಕಿಗೂ ಇರುವ ಅಂತರದ ಸ್ಪಷ್ಟ ಅರಿವು ನನಗಿತ್ತು.

ನಾವು ಬೆಳೆಯುತ್ತಾ ಹೋದಂತೆ ನಮ್ಮ ಅಭಿರುಚಿಗಳೂ ಬದಲಾಗುತ್ತಾ ಹೋಗುತ್ತವೆ. ನಾಗರಹಾವನ್ನು ಮೆಚ್ಚಿದ್ದ ನಾನು, ಹೊಂಬಿಸಿಲಿಗೆ ಮನಸೋತಿದ್ದೆ. ಸುಪ್ರಭಾತವನ್ನು ಇಷ್ಟಪಟ್ಟಿದ್ದೆ. ಮಲಯ ಮಾರುತ, ಬಂಧನ, ನಿಶ್ಯಬ್ದ, ಲಾಲಿ, ಮುತ್ತಿನಹಾರಗಳು ನನ್ನಂಥ ಮಧ್ಯಮ ವರ್ಗದ ಮಹಿಳೆಯರ ಮನ ಗೆದ್ದಿದ್ದವು. ನಮ್ಮ ನೋವು ನಲಿವುಗಳಲ್ಲಿ, ಹತಾಶೆ-ಪ್ರತಿಭಟನೆಗಳಲ್ಲಿ ಆತನನ್ನು ಪಾಲುದಾರನನ್ನಾಗಿ ಕಾಣುತ್ತಿದ್ದೆವು. ಅತೀತದ ಆಕರ್ಷಣೆಯಿಂದ ’ಆಪ್ತ ಮಿತ್ರ’ವನ್ನೂ ನೋಡಿದ್ದೆ.
ಜನತೆ ರೂಪಿಸಿದ ಕಲಾವಿದನೊಬ್ಬ ಜನತೆಯ ಪ್ರತಿನಿಧಿಯಾಗಿ, ಅವರ ಸಮಸ್ಯೆಗಳಿಗೆ ಪ್ರತಿಸ್ಪಂದಿಸುವ ನಾಯಕನಾಗಿ ಕಾಣಿಸಿಕೊಂಡದ್ದು ’ಮಾತಾಡ್ ಮಾತಾಡ್ ಮಲ್ಲಿಗೆ’ ಯಲ್ಲಿ. ಅವರ ಹೆಗಲ ಮೇಲೆ ಹಸಿರು ಶಾಲು ಕಂಡು ನನಗಂತೂ ಸಂತಸವಾಗಿತ್ತು. ರಾಮಾಚಾರಿ ಯುವ ಮನಸ್ಸಿನ ಪ್ರತಿನಿಧಿಯಾಗಿದ್ದ. ಮಲ್ಲಿಗೆಯ ಹೂವಯ್ಯ ಸ್ವಾಭಿಮಾನಿ ರೈತರ ಸಂಕೇತವಾಗಿದ್ದ.ಇದು ಕಲಾವಿದನೊಬ್ಬ ಸ್ವಕೇಂದ್ರಿತ ಇಮೇಜಿನಿಂದ ಸಮೂಹದೆಡೆಗೆ ಪಯಣಿಸಿದ ಯಶೋಗಾಥೆ.

ಇಂದಿನ ಯುವಜನಾಂಗಕ್ಕೆ ಯಾರು ಮಾದರಿ ನಟರೋ ನನಗೆ ಗೊತ್ತಿಲ್ಲ. ಸಮಾಜದ ಯಾವ ಸಮಸ್ಯೆಗಳಿಗೆ ಸಿನಿಮಾ ಕನ್ನಡಿಯಾಗುತ್ತಿದೆಯೋ, ಅದು ಕೂಡ ಗೊತ್ತಾಗುತ್ತಿಲ್ಲ. ಅಡಿಗರ ’ಭೂಮಿಗೀತ’ದ ಕೊನೆಯ ಸಾಲುಗಳು ನೆನಪಾಗುತ್ತಿವೆ;

’ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ;
ದಾರಿ ಸಾಗುವುದೆಂತೊ ನೋಡಬೇಕು’


[ಜನವರಿ ೩ರಂದು ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ]

1 comments:

sunaath said...

ಸುರಗಿ,
ಚಿತ್ರಕಲಾವಿದರು ಹೇಗೆ ತರುಣ,ತರುಣಿಯರ ಮನೋಲೋಕದ ಭಾಗವಾಗುತ್ತಾರೆ ಎನ್ನುವ ತಿಳಿವು ಹಾಗು ಆ ಕಾಲಘಟ್ಟದ documentation ನಿಮ್ಮ ಈ ನೆನವರಿಕೆಯಲ್ಲಿ ಬಹಳ ಚೆನ್ನಾಗಿ ಮೂಡಿ ಬಂದಿದೆ.