Saturday, March 27, 2010

ಹಕ್ಕುಗಳ ಅಂಗಳದಲ್ಲಿ ವಿವಾಹ ಪೂರ್ವ ಲೈಂಗಿಕತೆ






ಇಬ್ಬರು ಪ್ರಾಯ ಪ್ರಬುದ್ಧರ ನಡುವಿನ ವಿವಾಹ ಪೂರ್ವ ಲೈಂಗಿಕ ಸಂಬಂಧ ಮತ್ತು ಲಿವಿಂಗ್ ಟುಗೆದರ್ [ಕೂಡಿ ಬಾಳುವಿಕೆ] ಅಪರಾಧವಲ್ಲವೆಂದು ಸುಪ್ರಿಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.

ಚಿತ್ರ ನಟಿ ಖುಷ್ಬು ತನ್ನ ಮೇಲಿರುವ ೨೨ ಕ್ರಿಮಿನಲ್ ಮೊಕದ್ದಮೆಗಳನ್ನು ವಜಾಗೊಳಿಸಬೇಕೆಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್ ಆಕೆಯ ಮೇಲಿನ ದೂರುಗಳಲ್ಲಿ ಯಾವುದೇ ಹುರುಳಿಲ್ಲ ಎಂದಿದೆ.

೨೦೦೫ರಲ್ಲಿ ತಮಿಳು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿವಾಹ ಪೂರ್ವ ಲೈಂಗಿಕ ಸಂಬಂಧ ಮತ್ತು ಕನ್ಯತ್ವದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ವಿವಾಹ ಪೂರ್ವ ಲೈಂಗಿಕ ಸಂಬಂಧ ತಪ್ಪಲ್ಲ ಎಂಬರ್ಥದಲ್ಲಿ ಮಾತಾಡಿದ್ದರು. ಅದು ಸಂಪ್ರದಾಯವಾದಿಗಳನ್ನು ಕೆರಳಿಸಿತ್ತು. ಜನಪ್ರಿಯ ನಟಿಯಾಗಿದ್ದ ಆಕೆಯ ಹೇಳಿಕೆ ಯುವ ಜನಾಂಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಎಂಬುದು ಅವರ ವಾದವಾಗಿತ್ತು. ಅದಕ್ಕಾಗಿ ಆಕೆಯ ಮೇಲೆ ತಮಿಳುನಾಡಿನಾದ್ಯಂತ ೨೨ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲಾಗಿತ್ತು. ೨೦೦೮ರಲ್ಲಿ ಮದ್ರಾಸ್ ಹೈಕೋರ್ಟ್ ಆಕೆಯ ವಿರುದ್ಧ ತೀರ್ಪು ನೀಡಿತ್ತು. ಅದನ್ನು ಖುಷ್ಬು ಸುಪ್ರಿಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.

ಇದಿಗ ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಮುರ್ತಿ ಕೆ.ಜೆ. ಬಾಲಕೃಷ್ಣನ್, ದೀಪಕ್ ವರ್ಮ, ಬಿ.ಎಸ್.ಚವಾಣ್ ಅವರನ್ನೊಳಗೊಂಡ ತ್ರೀಸದಸ್ಯ ಪೀಠವು ವಿವಾಹಪೂರ್ವ ಲೈಂಗಿಕ ಸಂಬಂಧ ಮತ್ತು ಲಿವಿಂಗ್ ಟುಗೆದರನ್ನು ಭಾರತೀಯ ಸಂವಿಧಾನದ ಕಲಂ ೨೧ರ ವ್ಯಾಪ್ತಿಯಡಿ ತಂದು ಖುಷ್ಬು ಪರವಾಗಿ ಅಭಿಪ್ರಾಯ ನೀಡಿದೆ. ಕಲಂ ೨೧ ವ್ಯಕ್ತಿಯೊಬ್ಬ ಘನತೆ, ಗೌರವಗಳಿಂದ ಸ್ವತಂತ್ರವಾಗಿ ಬದುಕುವ ಹಕ್ಕನ್ನು ನೀಡುತ್ತದೆ.ವಿವಾಹ ಪೂರ್ವ ಲೈಂಗಿಕತೆಯನ್ನು ಅಪರಾಧವೆಂದು ಪರಿಗಣಿಸುವ ಯಾವುದೇ ಕಾನೂನು ನಮ್ಮಲಿಲ್ಲ. ಅದು ಅವಳ ವೈಯಕ್ತಿಕ ಆಯ್ಕೆ. ಅದವಳ ಬದುಕಿನ ಹಕ್ಕು. ಅದು ಹೇಗೆ ಅಪರಾಧವಾಗುತ್ತದೆ? ಎಂದಿದೆ ನ್ಯಾಯಪೀಠ.

ಅದಕ್ಕವರು ಪುರಾಣದ ಸಮರ್ಥನೆಯನ್ನೂ ನೀಡುತ್ತಾರೆ. ಕೃಷ್ಣ ಮತ್ತು ರಾಧೆಯರ ಸಂಬಂಧ ಲಿವಿಂಗ್ ಟುಗೆದರ್ ಆಗಿತ್ತು ಎಂಬುದು ಅವರ ಅಭಿಪ್ರಾಯ. ಭಾರತಿಯರ ಮನಸ್ಸಿನಲ್ಲಿ ಪರಿಶುಭ್ರ ಪ್ರೇಮಕ್ಕೆ ಸಂವಾದಿಯಾಗಿ ರಾಧಾಕೃಷ್ಣರಿದ್ದಾರೆ ನಿಜ. ಆದರೆ ಅವರು ಪ್ರೇಮಿಗಳಾಗಿದ್ದರೇ ಎಂಬುದು ಚರ್ಚಾಸ್ಪದ ವಿಷಯ. ಯಾಕೆಂದರೆ ಮಹಾಭಾರತದಲ್ಲಿ ರಾಧಾಕೃಷ್ಣರ ಪ್ರಸ್ತಾಪ ಬರುವುದು ಗೋಕುಲದಲ್ಲಿ ಮಾತ್ರ. ಬಾಲಕನಾಗಿದ್ದಾಗ ಕೃಷ್ಣ ಗೋಕುಲ ನಿವಾಸಿಯಾಗಿದ್ದ. ಅಲ್ಲಿ ರಾಧೆಯಿದ್ದಳು. ಆಕೆ ಗಂಡುಳ್ಳ ಗರತಿಯಾಗಿದ್ದಳು. ಆಕೆಗೆ ಮಕ್ಕಳಿದ್ದ ಪ್ರಸ್ತಾಪವಿಲ್ಲ. ಕೃಷ್ಣ ಅಸಾಧ್ಯ ತುಂಟನಾಗಿದ್ದ. ಇಂಪಾಗಿ ಕೊಳಲು ನುಡಿಸುತ್ತಿದ್ದ. ಬಾಲಕನಾಗಿದ್ದಾಗಲೇ ಮಾವ ಕಂಸನನ್ನು ಕೊಲ್ಲಲು ಬಿಲ್ಲಹಬ್ಬದ ನೆಪದಲ್ಲಿ ಮಧುರೆಗೆ ಹೊರಟು ಹೋಗುತ್ತಾನೆ. ಮತ್ತೆಂದೂ ಆತ ಗೋಕುಲಕ್ಕೆ ಮರಳುವುದಿಲ್ಲ. ಕೊಳಲನ್ನೂ ಮುಟ್ಟುವುದಿಲ್ಲ. ಮತ್ತೆ ಅವರು ಕೂಡಿ ಬಾಳಿದ್ದು ಯಾವಾಗ?

ವಿವಾಹಪೂರ್ವ ಲೈಂಗಿಕತೆ ಅಪರಾಧವಲ್ಲ ಹಕ್ಕು ಎಂದಾದರೆ, ಹಕ್ಕು ಇದ್ದಲ್ಲಿ ಕರ್ತವ್ಯವೂ ಇರಬೇಕಲ್ಲವೇ? ಕರ್ತವ್ಯ ಎಂದರೆ ಹೊಣೆಗಾರಿಕೆ. ಜೊತೆಯಾಗಿ ಬದುಕಿದ ಆ ಜೋಡಿಗೆ ಅಪ್ಪಿತಪ್ಪಿ ಮಗುವಾದರೆ ಅದನ್ನು ಸಾಕುವ ಜವಾಬ್ದಾರಿ ಯಾರದು? ಗಂಡು ವಿಶ್ವಾಮಿತ್ರ ಹಸ್ತ ತೋರಿಸಿದರೆ ಹೆಣ್ಣು ತನಗೆ ಅನ್ಯಾಯವಾಗಿದೆಯೆಂದು ಗಂಡಿನ ಮನೆ ಮುಂದೆ ಧರಣಿ ಕೂರುತ್ತಿದ್ದಳು; ಪೋಲಿಸ್ ಸ್ಟೇಷನ್ ಮೆಟ್ಟಲೇರುತ್ತಿದ್ದಳು. ಕಾನೂನು ಅವಳ ನೆರವಿಗೆ ಬರುತ್ತಿತ್ತು. ಸಮಾಜ ಅನುಕಂಪ ತೋರುತ್ತಿತ್ತು. ಆದರೆ ಇನ್ನು ಮುಂದೆ ಲೈಂಗಿಕ ಶೋಷಿತಳೆಂಬ ಪದಕ್ಕೆ ಅರ್ಥವಿರಲಾರದು. ಹೆಣ್ಣು ಗಂಡಿನ ಭೋಗದ ವಸ್ತು ಎಂಬುದಕ್ಕೆ ಇನ್ನೂ ಹೆಚ್ಚು ಪುಷ್ಟಿ ದೊರೆಯಬಹುದು. ಒಬ್ಬಳೊಡನೆ ಚಕ್ಕಂದವಾಡುತ್ತಲೇ ಮತ್ತೊಬ್ಬಳನ್ನು ಮದುವೆಯಾಗಬಹುದು. ಅಂತೂ ಹಾದರಕ್ಕೆ ಕಾನೂನಿನ ಅನುಮತಿ ದೊರಕಿದಂತಾಗಿದೆ.

ವಿವಾಹ ಪೂರ್ವ ಲೈಂಗಿಕತೆ ಮತ್ತು ಲಿವಿಂಗ್ ಟುಗೆದರ್ ಮೆಲ್ನೋಟಕ್ಕೆ ಒಂದರಂತೆ ಕಂಡರೂ ಇವೆರಡಕ್ಕೂ ಅಪಾರ ಅಂತರವಿದೆ. ವಿವಾಹ ಪೂರ್ವ ಲೈಂಗಿಕ ಸಂಬಂಧದಲ್ಲಿ ದೈಹಿಕ ತೃಷೆಯೇ ಮುಖ್ಯವಾಗಿರುತ್ತದೆ. ಭಾವನಾತ್ಮಕ ಸಂಬಂಧಕ್ಕೆ ಎಡೆಯಿರುವುದಿಲ್ಲ. ಅಥವಾ ಗಂಡು ತನ್ನ ಮರಳು ಮಾತುಗಳಿಂದ ಭಾವುಕ ಸಂಬಂಧದೊಳಗೆ ಕೆಡವಿಕೊಳ್ಳಬಹುದು. ಹೆಣ್ಣಿನ ಅಸಹಾಯಕತೆಯನ್ನು, ಮುಗ್ಧತೆಯನ್ನು ಗಂಡು ದುರ್ಭಳಕೆ ಮಾಡಿಕೊಳ್ಳಬಹುದು. ಹಸಿ ಹಸಿಯಾಗಿ ಹೇಳುವುದಾದರೆ ಇದನ್ನೇ ’ಇಟ್ಟುಕೊಳ್ಳುವುದು’ ಎನ್ನಬಹುದು. ಆದರೆ ಲಿವಿಂಗ್ ಟುಗೆದರಿನಲ್ಲಿ ಗಂಡು ಹೆಣ್ಣು ಇಬ್ಬರು ವಿದ್ಯಾವಂತರು. ಭಾವುಕವಾಗಿ ಬಂದಿಸಲ್ಪಟ್ಟವರು.ಇವರಲ್ಲಿ ಸೆಕ್ಸ್ ಮುಖ್ಯವಲ್ಲ. ಪರಸ್ಪರ ನಂಬಿಕೆ ಮುಖ್ಯ. ಆದರೆ ಎರಡೂ ಸಂಬಂಧಗಳೂ ಮದುವೆಯೆಂಬ ಸಂಸ್ಥೆಗೆ ಬೀಳುವ ಹೊಡೆತಗಳೇ. ಕೌಟುಂಬಿಕ ಚೌಕಟ್ಟುಗಳಿಂದ ಜಾರಿ ಬಿದ್ದ ಇಟ್ಟಿಗೆಗಳೇ.

ನಿಜ. ನ್ಯಾಯ ಪೀಠ ತನ್ನ ಅಭಿಪ್ರಾಯವನ್ನಷ್ಟೇ ಹೇಳಿದೆ. ಅಂತಿಮ ತೀರ್ಪು ಕಾಯ್ದಿರಿಸಿದೆ. ನ್ಯಾಯ ಪೀಠವೇನಾದರೂ ಖುಷ್ಬು ವಿರುದ್ಧವಾಗಿ ತೀರ್ಪು ನೀಡಿದ್ದರೆ ಧಾರ್ಮಿಕ ಮೂಲಭೂತವಾದಿಗಳು ವಿಜೃಂಭಿಸುತ್ತಿದ್ದರು. ಹಾಗಾಗಲಿಲ್ಲ. ಒಳ್ಳೆಯದೇ. ಆದರೆ ಕೋರ್ಟ್ ಅಭಿಪ್ರಾಯವನ್ನೇ ಯುವ ಜನಾಂಗ ತಮ್ಮ ನಡವಳಿಕೆಗಳಿಗೆ ಗುರಾಣಿಯನ್ನಾಗಿ ಬಳಸಿಕೊಂಡರೆ? ಆ ಸಾಧ್ಯತೆ ಇದ್ದೇ ಇದೆ. ಆದರೂ ಅಷ್ಟು ಕಳವಳಪಡಬೇಕಾದ ಅವಶ್ಯಕತೆಯಿಲ್ಲ. ಮೈಯೇ ಬೇರೆ, ಮನಸ್ಸೇ ಬೇರೆ. ದೈಹಿಕ ವಾಂಛೆಗಳೇ ಮನಸ್ಸನ್ನು ದೀರ್ಘ ಕಾಲ ಆಳಲಾಗದು.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಟಿ ನೀನಾಗುಪ್ತ ಮದುವೆಯಾಗದೆ ಮಗು ಪಡೆದಾಗ ಸಮಾಜ ಬೆಚ್ಚಿ ಬಿದ್ದಿತ್ತು. ನಮ್ಮ ಯುವತಿಯರಿಗೆ ಆಕೆ ಮಾದರಿಯಾಗಿಬಿಟ್ಟರೆ ಎಂದು ಭಯ ಪಟ್ಟಿತು. ಆದರೆ ಹಾಗೇನೂ ಆಗಲಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಆ ದೈರ್ಯ ಮಾಡಿದರಷ್ಟೆ. ಭಾರತಿಯ ಸಮಾಜ ತುಂಬಾ ವಿಶಿಷ್ಟವಾದುದು. ಇಲ್ಲಿಯ ಸಂಸ್ಕೃತಿ,ನೈತಿಕ ಮೌಲ್ಯಗಳು ಜನರ ಜೀನ್ಸ್ ನಲ್ಲೇ ಪ್ರೋಗ್ರಾಮ್ ಆಗಿದೆ. ಆದರೆ ನೈತಿಕತೆಯೇ ಬೇರೆ ಕಾನೂನೇ ಬೇರೆ.

ನಮ್ಮ ಸಮಾಜ ಬದಲಾಗುತ್ತಿದೆ. ನಮ್ಮ ಸರಕಾರಗಳು, ನಮ್ಮ ನ್ಯಾಯಾಂಗ ವ್ಯವಸ್ಥೆ ಅದನ್ನು ಗುರುತಿಸಿದೆ. ಕಳೆದ ವರ್ಷ ಜುಲೈನಲ್ಲಿ ದೆಹಲಿ ಹೈಕೋರ್ಟ್, ಇಬ್ಬರು ವಯಸ್ಕರು ಪರಸ್ಪರ ಸಮ್ಮತಿಯಿಂದ ಸಲಿಂಗಕಾಮದಲ್ಲಿ ತೊಡಗುವುದು ಅಪರಾಧವಲ್ಲ ಎಂದು ತೀರ್ಪು ನೀಡಿತ್ತು. ಅದಕ್ಕೂ ಹಿಂದೆ ೨೦೦೮ರ ಅಕ್ಟೋಬರ್ ನಲ್ಲಿ ಮಹಾರಾಷ್ಟ್ರ ಸರಕಾರವು, ಶಾಸ್ತ್ರೋಕ್ತ ಅಥವಾ ಕಾನೂನು ಬದ್ಧ ವಿಧಿ ವಿಧಾನಗಳ ಹೊರತಾಗಿಯೂ ಪುರುಷ ಮತ್ತು ಮಹಿಳೆ ಸಕಾರಣಗಳಿಂದಾಗಿ ದೀರ್ಘ ಕಾಲ ಒಟ್ಟಿಗೆ ವಾಸಿಸುತ್ತಿದ್ದರೆ ಅಂತಹ ಪ್ರಕರಣಗಳಲ್ಲಿ ಅವರನ್ನು ದಂಪತಿಗಳೆಂದು ಮಾನ್ಯ ಮಾಡಬೇಕೆಂದು ಹೇಳಿತ್ತು.

ಧಾರ್ಮಿಕ ಕಟ್ಟುಪಾಡುಗಳು ಸುಸಂಸ್ಕೃತ, ಸ್ವಸ್ಥ ಸಮಾಜ ಕಟ್ಟಿಕೊಳ್ಳುವ ಕಾಲಘಟ್ಟದಲ್ಲಿ ರಚನೆಗೊಂಡಂತವು.ಅವುಗಳು ಮನುಷ್ಯ ಸರ್ವಕಾಲದಲ್ಲೂ ಹೀಗೆಯೇ ಇರಬೇಕೆಂದು ನಿರ್ದೇಶಿಸುತ್ತದೆ. ಆದರೆ ಸಮಾಜಿಕ ನಡವಳಿಕೆಗಳನ್ನು ಗಮನಿಸಿಕೊಂಡು, ಅರ್ಥೈಸಿಕೊಂಡು ಕಾನೂನನ್ನು ರೂಪಿಸಲಾಗುತ್ತದೆ. ವಿವಾಹದಿಂದ ಹೊರತಾದ ಸಂಬಂಧದಿಂದ ಹುಟ್ಟಿದ ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಾಲು ಕೊಡಬೇಕೆಂದು ಸುಪ್ರಿಂಕೋರ್ಟ್ ಈ ಹಿಂದೆ ತೀರ್ಪು ನೀಡಿದೆ. ಕಾನೂನೇ ಬೇರೆ, ನೈತಿಕತೆಯೇ ಬೇರೆ.

ಈಗ ಖುಷ್ಬು ಪ್ರಕರಣದಲ್ಲಿ ಬದಲಾಗುತ್ತಿರುವ ಸಮಾಜವನ್ನು, ಜನರ ಜೀವನ ಶೈಲಿಯನ್ನು, ಯುವ ಜನಾಂಗದ ಮನಸ್ಥಿತಿಯನ್ನು ಗಮನಿಸಿ ವಿವಾಹ ಪೂರ್ವ ಲೈಂಗಿಕತೆ ಅಪರಾಧವಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಇದು ಧಾರ್ಮಿಕ ಕಟ್ಟುಪಡುಗಳಿಗಿಂತಲೂ ಬದುಕು ಮಿಗಿಲಾದುದು ಎಂಬುದನ್ನು ದೃಢಪಡಿಸುತ್ತದೆ.

[ಮಾ.೨೬ ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹ ]

1 comments:

ಬಾಲು ಸಾಯಿಮನೆ said...

"ಭಾರತಿಯ ಸಮಾಜ ತುಂಬಾ ವಿಶಿಷ್ಟವಾದುದು. ಇಲ್ಲಿಯ ಸಂಸ್ಕೃತಿ,ನೈತಿಕ ಮೌಲ್ಯಗಳು ಜನರ ಜೀನ್ಸ್ ನಲ್ಲೇ ಪ್ರೋಗ್ರಾಮ್ ಆಗಿದೆ. ಆದರೆ ನೈತಿಕತೆಯೇ ಬೇರೆ ಕಾನೂನೇ ಬೇರೆ." ತುಂಬಾ ಇಷ್ಟವಾಯಿತು.