Saturday, January 29, 2011

ನಿಮ್ಮ ಪ್ರೀತಿಗೆ ನನ್ನನ್ನು ಖರೀದಿಸುವ ಶಕ್ತಿಯಿದೆ!




[೨೦೦೫ರಲ್ಲಿ ’ಓ ಮನಸೇ’ ಪಾಕ್ಷಿಕದಲ್ಲಿ ನಾನೊಂದು ಫ್ರೀಸ್ಟೈಲ್ ಲೇಖನ ಬರೆದಿದ್ದೆ. ಅಂತರ್ಜಾಲದಲ್ಲಿ ’ಹರಾಜು’ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರಸ್ತುತವಾಗಬಹುದೆಂದು ಭಾವಿಸಿ ಅದನಿಲ್ಲಿ ಪೋಸ್ಟ್ ಮಾಡುತ್ತಿದ್ದೇನೆ.]

ಮೊನ್ನೆ ನಾನೊಂದು ಹೊಸ ಮೊಬೈಲ್ ಸೆಟ್ ಕೊಂಡುಕೊಂಡೆ. ತುಂಬಾ ಮುದ್ದಾಗಿದೆ. ಆ ಮಾದರಿಯ ಹ್ಯಾಂಡ್ ಸೆಟ್ಟನ್ನು ನಾನು ಯಾರದೋ ಕೈಯಲ್ಲಿ ನೋಡಿದ್ದೆ. ನನಗದು ತುಂಬಾ ಇಷ್ಟವಾಗಿತ್ತು. ಮುಂದೆಂದಾದರೂ ಸೆಟ್ ಕೊಳ್ಳಬೇಕೆನಿಸಿದಾಗ ಇಂತಹದ್ದನ್ನೇ ಕೊಳ್ಳಬೇಕೆಂದು ಮನಸ್ಸಿನಲ್ಲೇ ನಿಶ್ಚಯಿಸಿಕೊಂಡಿದ್ದೆ.

ಹಾಗೊಂದು ಸಂದರ್ಭ ಮೊನ್ನೆ ಒದಗಿ ಬಂದಿತ್ತು. ನನ್ನ ಸಂಬಂದಿಯೊಬ್ಬರ ಮೊಬೈಲ್ ಸೆಟ್ ನಿಷ್ಕ್ರೀಯಗೊಂಡಿತು. ಎಲೆಕ್ಟ್ರಾನಿಕ್ ವಸ್ತುಗಳ ಹಣೆಬರಹವೇ ಅಷ್ಟು. ಇದ್ದಕ್ಕಿದ್ದಂತೆ ಅವುಗಳ ಉಸಿರು ನಿಂತು ಬಿಡುತ್ತೆ. ಖಾಯಿಲೆ ಏನು ಎಂದು ಕಂಡು ಹಿಡಿದು ಪರ್ಸ್ ಖಾಲಿ ಮಾಡಿಕೊಳ್ಳುವುದಕ್ಕಿಂತ ಹೊಸದನ್ನು ಖರೀದಿಸುವುದೇ ಸೂಕ್ತವೆನಿಸುತ್ತದೆ. ನನ್ನ ಸಂಬಂದಿಗೆ ನನ್ನ ಸೆಟ್ ಇಷ್ಟವಾಗಿದ್ದ ಕಾರಣ ನಾನವಳಿಗೆ ಅದನ್ನು ಉಡುಗೊರೆಯಾಗಿ ಕೊಟ್ಟುಬಿಟ್ಟೆ. ನಾನು ಈ ಹಿಂದೆಯೇ ಮೋಹಗೊಂಡಿದ್ದ ಸೆಟ್ಟನ್ನು ಖರೀದಿ ಮಾಡಿದೆ.

ನಾವು ಏನನ್ನಾದರೂ ಕೊಂಡುಕೊಂಡರೆ ಅದನ್ನು ಇನ್ನೊಬ್ಬರೆದುರು ಪ್ರದರ್ಶಿಸಲೇ ಬೇಕು. ಸಾಧ್ಯವಾದರೆ ಅವರ ಹೊಟ್ಟೆಗಿಷ್ಟು ಕಿಚ್ಚು ಸುರಿಯಲೇ ಬೇಕು! ಇದು ಹ್ಯೂಮನ್ ಸೈಕಲಾಜಿ.
ನಾನು ಕೂಡಾ ಹುಲುಮಾನವಳಲ್ಲವೇ? ನಾನು ಮೋಹಗೊಂಡ ವಸ್ತು ನನ್ನ ಕೈ ಸೇರಿದುದರ ಬಗ್ಗೆ ಪುಳಕಿತಗೊಂಡು ನನ್ನ ಗೆಳೆಯನೊಬ್ಬನಿಗೆ ಪೋನ್ ಮಾಡಿದೆ. ಆದರೆ ಅವನಿಗದು ’ಎನೂ’ ಆಗಿರಲಿಲ್ಲ.
ಆದರೂ ನಾನೂ ಉತ್ಸಾಹದಿಂದಲೇ ಆ ಸೆಟ್, ಅದರಲ್ಲಿರುವ ಸವಲತ್ತುಗಳ ಬಗೆಗೆ ವಿವರಿಸುತ್ತಲೇ ಹೋದೆ...’ನಿನ್ನ ಪೋಟೋವನ್ನು ನಿನ್ನ ನಂಬರಿನೊಡನೆ ಜೋಡಿಸಿದ್ದೇನೆ. ನೀನು ಪೋನ್ ರಿಸೀವ್ ಮಾಡದಿದ್ದರೂ ಒಂದಷ್ಟು ಹೊತ್ತು ನಿನ್ನ ಪೋಟೋ ನೋಡ್ತಾ ಕಳೆದೋಗ್ತೀನಿ...’ ಎಂದೆಲ್ಲಾ ಕೀಟಲೆ ಮಾಡಿದೆ. ನನ್ನ ಬಗ್ಗೆ ಕೊಚ್ಚಿಕೊಳ್ಳುತ್ತಾ, ’ನಾನು ಯಾವಾಗಲೂ ಅತ್ಯುತ್ತಮವಾದುದನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ನಿನ್ನನ್ನು ನನ್ನ ಗೆಳೆಯನನ್ನಾಗಿ ಆಯ್ದುಕೊಂಡ ಹಾಗೆ’ ಎಂದೆ. ತಕ್ಷಣ ಆತ ”ನನ್ನನ್ನ ಎಷ್ಟಕ್ಕೆ ಪರ್ಚೇಸ್ ಮಾಡಿದ್ದೆ?” ಎಂದ.
ನಾನು ಒಂದು ಕ್ಷಣ ಅವಕ್ಕಾದೆ. ಎನೋ ಮಾತಾಡಿ ಪೋನ್ ಇಟ್ಬಿಟ್ಟೆ. ಆದರೆ ಆ ಪ್ರಶ್ನೆ ನನ್ನ ಮನಸ್ಸಿನಲ್ಲಿ ರಿಜಿಸ್ಟರ್ ಆಗಿಬಿಡ್ತು.

ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಖರೀದಿ ಮಾಡಲು ಸಾಧ್ಯವೇ?
ನಾವು ಇತಿಹಾಸದಲ್ಲಿ ಓದಿದ್ದೇವೆ; ಗುಲಾಮಗಿರಿ ಪದ್ಧತಿ ಅಸ್ತಿತ್ವದಲ್ಲಿದ್ದ ಕಾಲಘಟ್ಟದಲ್ಲಿ ಮನುಷ್ಯರನ್ನು ವಸ್ತುಗಳಂತೆ ಮಾರಾಟ ಮಾಡುವ ಮತ್ತು ಖರೀದಿಸುವ ವ್ಯವಹಾರ ನಡೆಯುತ್ತಿತ್ತು. ಖರೀದಿಸುವುದೆಂದರೆ ಒಂದನ್ನು ಕೊಟ್ಟು ಇನ್ನೊಂದನ್ನು ಪಡೆದುಕೊಳ್ಳುವುದು. ನಾನು ಹಣ ನೀಡಿ ನನ್ನ ಇಷ್ಟದ ಮೊಬೈಲ್ ಸೆಟ್ ಖರೀದಿ ಮಾಡಿದೆ. ಅದನ್ನು ನನ್ನದನ್ನಾಗಿ ಮಾಡಿಕೊಂಡೆ. ಹಾಗೆ ಏನನ್ನು ಕೊಟ್ಟು ಒಬ್ಬ ಮನುಷ್ಯನನ್ನು ನನ್ನವನನ್ನಾಗಿ/ನನ್ನವಳನ್ನಾಗಿ ಮಾಡಿಕೊಳ್ಳಬಹುದು?

ಒಂದು ವೇಳೆ ಹಾಗೆ ಖರೀದಿ ಮಾಡಲು ಸಾಧ್ಯವಾಗುವುದಾರೆ, ಖರೀದಿಗೆ ಸಿಗುವಂತಿದ್ದರೆ ಆತ ನಮಗೆ ಪ್ರೀತಿ ಪಾತ್ರನಾಗಬಲ್ಲನೇ? ದುಡ್ಡು ಬಿಸಾಕಿ ಖರೀದಿಸುವ ಯಾವುದೇ ವಸ್ತುವಿನ ಬಗ್ಗೆ ನಮಗೆ ಯಾವತ್ತಿಗೂ ಒಂದೇ ಭಾವವಿರಲು ಸಾಧ್ಯವೇ? ವಸ್ತುಗಳನ್ನಾದರೆ ಒಂದಷ್ಟು ಕಾಲ ಉಪಯೋಗಿಸಿ ನಂತರ ಬಿಸಾಕಿ ಬಿಡುತ್ತೇವೆ. ಹಾಗೆ ಜೀವಂತ ಮನುಷ್ಯರನ್ನು ಬಿಸಾಡಲು ಸಾಧ್ಯವೇ?

ಬಂದುತ್ವವನ್ನು ಬೆಸೆಯುವ ವಿವಾಹ, ಈಗ ವ್ಯವಹಾರದ ಮಟ್ಟಕ್ಕಿಳಿದಿರುವ ಈ ಸಂದರ್ಭದಲ್ಲಿ ವಧುವಿನ ಮನೆಯವರು ದುಡ್ಡು, ಬಂಗಾರ,ಕಾರು, ಬಂಗ್ಲೆ ಮುಂತಾದ ಸುಖಭೋಗದ ವಸ್ತುಗಳನ್ನು ನೀಡಿ ಒಂದು ಗಂಡನ್ನು ಖರೀದಿ ಮಾಡುತ್ತಾರೆ. ಆದರೆ ಮನಸ್ಸನ್ನು ಖರೀದಿಸಲು ಸಾಧ್ಯವೇ?

ನನ್ನ ಗೆಳೆಯ ಕೀಟಲೆಗೆ ಪ್ರತಿ ಕೀಟಲೆಯಂತೆ ಸಹಜವಾಗಿ ಕೇಳಿದ ಒಂದು ಪ್ರಶ್ನೆ ನನ್ನಲ್ಲಿ ಇಷ್ಟೆಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣವಾಯ್ತು.

ನಮ್ಮ ದೈಹಿಕ ಸಾಮರ್ಥ್ಯವನ್ನು ಖರೀದಿ ಮಾಡುವವರಿದ್ದಾರೆ. ನಮ್ಮನ್ನು ಬೌದ್ಧಿಕ ಗುಲಾಮರನ್ನಾಗಿ ಮಾಡಿಕೊಳ್ಳುವವರಿದ್ದಾರೆ. ಖರೀದಿ ಎಂಬ ಶಬ್ದದಲ್ಲೇ ವಾಣಿಜ್ಯದ ಉದ್ದೇಶವೂ ಅಡಗಿಕೊಂಡಿದೆ. ವಾಣಿಜ್ಯ ಅಂದ ಮೇಲೆ ಲಾಭ-ನಷ್ಟದ ಪ್ರಶ್ನೆ ಇದ್ದಿದ್ದೇ.

ಖರೀದಿದಾರನು ತಾನು ಖರೀದಿಸಲ್ಪಟ್ಟ ವಸ್ತುವಿನಿಂದ ಗರಿಷ್ಟ ಪ್ರಯೋಜನವನ್ನು ಪಡೆದುಕೊಳ್ಳುತ್ತಾನೆ. ಆತನಲ್ಲಿರುವುದು ಅಹಂ; ಮಾಲೀಕನ ದರ್ಪ. ಖರೀದಿಗೆ ಒಳಪಟ್ಟವನಲ್ಲಿರುವುದು ಕೀಳರಿಮೆ.
ಕೆಲವೊಮ್ಮೆ ಈ ಅಹಮಿಕೆ ಮತ್ತು ಕೀಳರಿಮೆಯ ಮನಸ್ಥಿತಿ ಒಂದೇ ವ್ಯಕ್ತಿಯಲ್ಲಿ ಇರುವ ಸಾಧ್ಯತೆ ಇದೆ. ಪ್ರೇಮಿಗಳಲ್ಲಿ ಈ ಮನಸ್ಥಿತಿ ಹೆಚ್ಚು. ಇಬ್ಬರಲ್ಲೂ ಪರಸ್ಪರ ಖರೀದಿಸಿದ ಮನಸ್ಥಿತಿ ಇರುವ ಕಾರಣದಿಂದಲೇ ಪರಸ್ಪರ ಹಕ್ಕು ಸ್ಥಾಪನೆ ಮಾಡಲು ಸದಾ ಹವಣಿಸುತ್ತಿರುತ್ತಾರೆ.
ಗಂಡ-ಹೆಂಡತಿಯರಲ್ಲೂ ಇದೇ ರೀತಿಯ ಮನಸ್ಥಿತಿ ಕೆಲಸ ಮಾಡುತ್ತಿರುತ್ತದೆ. ಆದರೆ ವರದಕ್ಷಿಣೆ ಕೊಟ್ಟು ಹುಡುಗಿಯೊಬ್ಬಳು ಗಂಡನನ್ನು ಖರೀದಿ ಮಾಡಿದ್ದರೂ ಅವಳಲ್ಲಿರುವುದು ಖರೀದಿಗೆ ಒಳಪಟ್ಟ ಕಿಳರಿಮೆಯೇ. ಸ್ವತಃ ಖರೀದಿಗೊಳಪಟ್ಟಿದ್ದರೂ ಭಾರತೀಯ ಪರಂಪರೆಯಲ್ಲಿ ಗಂಡನಲ್ಲಿರುವುದು ಖರೀದಿದಾರನ ಮನಸ್ಥಿತಿಯೇ.

ರಾಜಕಾರಣದಲ್ಲಿ ’ಕುದುರೆ ವ್ಯಾಪಾರ’ ಎಂಬ ಮಾತೊಂದು ಚಾಲ್ತಿಯಲ್ಲಿದೆ. ಆಡಳಿತ ಪಕ್ಷದವರು ಇಲ್ಲವೇ ವಿರೋಧ ಪಕ್ಷದವರು ತಮ್ಮ ಸಂಖ್ಯಾಬಲವನ್ನು ವೃದ್ದಿಸಿಕೊಳ್ಳುವುದರ ಸಲುವಾಗಿ ಎಂ.ಪಿಗಳನ್ನು ಅಥವಾ ಎಂ.ಎಲ್.ಎಗಳನ್ನು ಖರೀದಿ ಮಾಡುತ್ತಾರೆ. ಇದು ವಸ್ತುಗಳ ಖರೀದಿಗೆ ಹತ್ತಿರವಾದುದೇ.

ಪಶುಗಳಂತೆ ಖರೀದಿ ಮತ್ತು ಮಾರಾಟ ಜಾಲದಲ್ಲಿ ಆಗಾಗ ಸಿಕ್ಕಿ ಬೀಳುವವವರೆಂದರೆ ನಮ್ಮ ಹೆಣ್ಣುಮಕ್ಕಳು. ಇವರನ್ನು ವೇಶ್ಯಾವೃತ್ತಿಗೆ ಸರಬರಾಜು ಮಾಡುವ ದೊಡ್ಡ ಪಡೆಗಳೇ ಅಸ್ತಿತ್ವದಲ್ಲಿದೆ. ಅಲ್ಲದೆ ಅರಬ್ ರಾಷ್ಟ್ರಗಳಲ್ಲಿ ಬಹು ಜನಪ್ರಿಯವಾದ ಶ್ರೀಮಂತರ ಮೋಜಿನ ಕ್ರೀಡೆಯಾದ ಒಂಟೆ ಓಟಕ್ಕಾಗಿ ಭಾರತ ಮತ್ತು ಪಾಕಿಸ್ತಾನದ ಪುಟ್ಟ ಪುಟ್ಟ ಮಕ್ಕಳನ್ನು ಖರೀದಿ ಮಾಡಲಾಗುತ್ತದೆ. ಒಂಟೆಯ ಹೊಟ್ಟೆಗೆ ಕಟ್ಟಿದ ಮಕ್ಕಳು ಪ್ರಾಣ ಭಯದಿಂದ ಕಿರುಚಾಡುತ್ತಿದ್ದರೆ ಅಥವಾ ಒಂಟೆಯ ಕಾಲಕೆಳಗೆ ಬಿದ್ದು ನರಳಿ ಸತ್ತರೆ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಾರೆ. ಇಂಥ ಸ್ಯಾಡಿಸ್ಟ್ ಮನೋಭಾವ ಮನುಷ್ಯನ ಮನಸ್ಸಿನಾಳದಲ್ಲಿ ಗುಪ್ತವಾಗಿ ಅವಿತಿರುತ್ತದೆ.

ಕಳೆದ ವರ್ಷ ಅಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಸಾಕಷ್ಟು ಕೋಲಾಹಲ ಎಬ್ಬಿಸಿದ ಮಕ್ಕಳ ಮಾರಾಟ ಜಾಲ ಅದರ ವಿಕೃತ ಮುಖಗಳನ್ನು ತೆರೆದಿಟ್ಟಿತು. ವಿವಿಧ ದಂದೆಗಳಲ್ಲಿ ಅಪ್ರಾಪ್ತ ಬಾಲಕ ಬಾಲಕಿಯರನ್ನು ತೊಡಗಿಸಿಕೊಳ್ಳುವ ಸಮಾಜ ವಿರೋದಿ ಚಟುವಟಿಕೆಗಳಲ್ಲಿ ಹಲವು ಬಾರಿ ಗಣ್ಯ ವ್ಯಕ್ತಿಗಳ ಕೈವಾಡವೂ ಇರುತ್ತದೆ.

ತಾನು ಖರೀದಿಸಲ್ಪಟ್ಟಿದ್ದೇನೆ ಎಂಬುದು ಕೆಲವು ಬಾರಿ ಖರೀದಿಗೊಳಗಾದವನ ಅರಿವಿಗೇ ಬರುವುದಿಲ್ಲ. ಉದಾಹರಣೆಗೆ ಕಾರ್ಪೋರೇಟ್ ವಲಯ ತನ್ನ ನೌಕರರಿಗೆ ಆಕರ್ಷಕವಾದ ವೇತನ, ಸವಲತ್ತುಗಳನ್ನು ನೀಡಿ ದಿನಕ್ಕೆ ಕನಿಷ್ಟ ಹದಿನೆಂಟು ಗಂಟೆಗಳ ಕಾಲ ದುಡಿಸಿಕೊಳ್ಳುತ್ತದೆ.
ಇದೆಲ್ಲಕ್ಕಿಂತಲೂ ವಿಸ್ಮಯದ ಸಂಗತಿಯೆಂದರೆ ಸಾಂಸ್ಕೃತಿಕ ಲೋಕದಲ್ಲಿ ನಡೆಯುವ ಬೌದ್ಧಿಕ ಖರೀದಿ. ಮುಂದೆ ಬರೆಯಲಿರುವ ಪುಸ್ತಕಕ್ಕಾಗಿ ಲಕ್ಷಾಂತರ ಡಾಲರ್ ಹಣ ಮುಂಗಡ ಪಡೆಯುವ ಬರಹಗಾರರು ನಮ್ಮ ನಡುವಿನಲ್ಲಿಯೇ ಇದ್ದಾರೆ. ಆಧುನಿಕ ಜಗತ್ತಿನಲ್ಲಿ ಎಲ್ಲೆಲ್ಲೂ ವರ್ತಕರ ವರ್ತುಲವೇ ಕಂಡುಬರುತ್ತಿದೆ!

ನಮ್ಮ ಪುರಾಣಗಳ ಒಳಹೊಕ್ಕು ನೋಡಿದರೆ ದಾನದ ಉದಾಹರಣೆಗಳು ಬೇಕಾದಷ್ಟು ಸಿಗುತ್ತವೆ. ನ್ಯಾಸ[ಅಡವಿಡುವುದು]ದ ಸಂದರ್ಭಗಳೂ ಸಿಗುತ್ತವೆ. ಆದರೆ ಖರೀದಿ ಮತ್ತು ಮಾರಾಟದ ಉದಾಹರಣೆಗಳು ಕಡಿಮೆ. ಸೂರ್ಯವಂಶದ ದೊರೆ ರಾಜಾ ಹರಿಶ್ಚಂದ್ರನು ಸತ್ಯಕ್ಕಾಗಿ ಹೆಂಡತಿ ಮಗನನ್ನು ಮಾರಿ, ಕೊನೆಗೆ ತನ್ನನ್ನು ತಾನೇ ಹರಾಜಿಗಿಟ್ಟುಕೊಂಡದ್ದು ಲೋಕಪ್ರಸಿದ್ಧ ಕಥೆ. ಅಂಥಹ ರಾಜನನ್ನು ಖರೀದಿಸಲು ಸಾಕ್ಷಾತ್ ಯಮಧರ್ಮರಾಯನೇ ಭೂಮಿಗಿಳಿದು ಬಂದಿದ್ದ. ಇದೇ ಹರಿಶ್ಚಂದ್ರನು ತನ್ನ ಮಗ ರೋಹಿತನ ಬದಲಿಗೆ ಋಚೀಕ ಋಷಿಯ ಮಧ್ಯಮ ಪುತ್ರ ಶುನಶ್ಯೇಫನನ್ನು ವರುಣನಿಗೆ ಬಲಿ ನೀಡಲೆಂದು ಖರೀದಿಸಿದ್ದು ಇನ್ನೊಂದು ಕಥೆ. ಆದರೆ ಅದೇ ಶುನಶ್ಯೇಫನನ್ನು ವಿಶ್ವಾಮಿತ್ರ ಬಿಡುಗಡೆ ಮಾಡುತ್ತಾನೆ.

ಖರೀದಿಗೆ ಇದೆ ಎಂದಾದರೆ ಖರೀದಿಸುವವರೂ ಇರುತ್ತಾರೆ. ಪ್ರತಿಯೊಬ್ಬ ಮನುಷ್ಯನೂ ಯಾರಾದರೂ ತಮ್ಮ ಪ್ರೀತಿಯನ್ನು ನೀಡಿ ನನ್ನನ್ನು ಖರೀದಿಸಲಿ ಎಂದು ಹಂಬಲಿಸುತ್ತಾನೆ. ಆದರೆ ಅದು ಸಾಧ್ಯವಾಗುವುದಿಲ್ಲ. ಏಕೆ ಸಾಧ್ಯವಾಗುವುದಿಲ್ಲ? ಇದಕ್ಕೆ ಉತ್ತರವನ್ನು ಕಂಡುಕೊಳ್ಳಲು ಮತ್ತೆ ನಾವು ಮನಸ್ಸಿನ ವಿಶ್ಲೇಷಣೆಗೆ ಇಳಿಯಬೇಕು. ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದ ಗೆಳೆಯನಿಗೆ ತಾನು ಬಿಕರಿಯಾಗಿದ್ದೇನೆ ಎಂಬ ವಿಷಣ್ಣತೆಯಿದ್ದರೆ ನನ್ನಲ್ಲಿ ಖರೀದಿಸಿದ ಭಾವವಿರಲಿಲ್ಲ. ಅಂದರೆ ಎಲ್ಲೋ ಲಿಂಕ್ ಮಿಸ್ಸಾಗುತ್ತಲಿದೆ. ಅದು ಮನುಷ್ಯನ ವೈಯಕ್ತಿಕ ದುರಂತ; ಮನುಕುಲದ ದುರಂತ.

2 comments:

www.kumararaitha.com said...

ಆಲೋಚನೆ ಸ್ತರ ಉನ್ನತಕ್ಕೆರುವವರೆಗೂ ಇಂಥ ಲೇಖನ ಪ್ರಸ್ತುತ. ಗುಲಾಮ ಖರೀದಿ ಕುಸಂಸ್ಕೃತಿಗೂ ಐಪಿಎಲ್ ಖರೀದಿ ವಿಕೃತಿಗೂ ಅಂಥ ವ್ಯತ್ಯಾಸವೇನಿಲ್ಲ. ಗುಲಾಮರಿಗೆ ಆಯ್ಕೆ ಹಕ್ಕುಗಳಿರಲಿಲ್ಲ. ಆದರೆ ಐಪಿಎಲ್ ಹರಾಜಿನಲ್ಲಿ ಆಯ್ಕೆ ಹಕ್ಕಿದೆ. ಆದರೆ ಮನಸ್ಥಿತಿಯಲ್ಲಿಯೂ ವ್ಯತ್ಯಾಸವಿಲ್ಲ. ಖರೀದಿದಾರ/ಳು ಬೆರಳತುದಿಯಲ್ಲಿ ಕುಣಿಸಬಹುದಾದ/ಕುಣಿಯುವ ಜೀವವಿರುವ, ಸ್ವತಂತ್ರವಿಲ್ಲದ ಆಟದ ಬೊಂಬೆಗಳಿವು.

ಕೊಳ್ಳುಬಾಕ ಸಂಸ್ಕೃತಿಯೂ ಗುಲಾಮರನ್ನು ಖರೀದಿಸುವ ಮನಸ್ಥಿತಿಯ ಬದಲಾದ ಭಾಗವಷ್ಟೆ. ಮಾರುಕಟ್ಟೆಯಲ್ಲಿ ಕೆಲಸದಾಳುಗಳು ಬಿಕರಿಗೆ ದೊರೆಯುವಂತಿದ್ದರೆ ಖರೀದಿಸಲು ಕೊಂಚವೂ ಮುಜುಗರಪಡದ ಮನಸ್ಥಿತಿ ಅದು.

ಭಾರತೀಯ ಸಂದರ್ಭದಲ್ಲಿ ಮದುವೆ ಕೂಡ ಹರಾಜೇ. ಖರೀದಿಮಾಡುವ ಮನಸ್ಥಿತಿಯಲ್ಲಿಯೇ ಗಂಡು ಇಲ್ಲಿ ಹರಾಜಾಗಿರುತ್ತಾನೆ. ಇದು ಅವ್ಯಕ್ತವಾಗಿ/ವ್ಯಕ್ತವಾಗಿ ಗಂಡನ್ನು ಕಾಡುತ್ತಿರುತ್ತದೆ. ವ್ಯಂಗ್ಯ ಎಂದರೆ ಬಹುತೇಕ ಹೆಂಗಸರಿಗೆ ತಾನು ಗುಲಾಮನನ್ನು ಖರೀದಿಸಿದ್ದೇನೆ ಎಂಬ ಭಾವವಿದ್ದು ನಿಸ್ಸಾಹಯಕವಾಗಿರುವುದು. ಈ ಕಾರಣದಿಂದಲೇ ವರದಕ್ಷಿಣೆ ಹೆಸರಿನ ಕಗ್ಗೊಲೆಗಳು ನಡೆಯುವುದು. ನನ್ನ ಪ್ರಕಾರ ಇದು ಉಲ್ಟಾಪಲ್ಟಾ. ಕೊಲೆಯಾಗಬೇಕಾದವನೇ
ಕೊಲೆಗಾರನಾಗಿರುವುದು!
ಐಪಿಎಲ್ ನಂಥ ಸಂದರ್ಭದಲ್ಲಿ ಮನಸುಗಳು ಹರಾಜಾಗಿರುತ್ತವೆ. ಇದೆಲ್ಲ ಕ್ರಿಡೆಯ ಅಣಕ ಮತ್ತು ಗುಲಾಮ ವ್ಯಾಪಾರದ ನವೀಕೃತ ವಿಧಾನ

ಸುಧೇಶ್ ಶೆಟ್ಟಿ said...

ಚಿ೦ತನೆಗೆ ಹಚ್ಚಿದ ಬರಹ.... ಹಲವಾರು ನೈಜ್ಯ ಉದಾಹರಣೆಗಳೊ೦ದಿಗೆ ವಿಷಯ ಪ್ರಸ್ತುತಿ ಪಡಿಸಿದ ರೀತಿ ಇಷ್ಟ ಆಯಿತು....