Monday, February 7, 2011

ಒಂದು ಪುಸ್ತಕವನ್ನು ಅರಸುತ್ತಾ.......


.


ಈ ಬಾರಿಯ ಸಮ್ಮೇಳನ ನಮ್ಮ ಮನೆಯಂಗಳದಲ್ಲಿ ಅಂದರೆ ಬೆಂಗಳೂರಿನಲ್ಲಿ ನಡೆಯುತ್ತಿರುವಾಗ ಹೋಗದಿದ್ದರೆ ಹೇಗೆ? ಹಾಗೆಂದುಕೊಂಡು ಬಹಳ ಹಿಂದೆಯೇ ಹೋಗುವುದೆಂದು ತೀರ್ಮಾನಿಸಿಕೊಂಡಿದ್ದೆ. ಹಾಗೆ ತೀರ್ಮಾನಿಸಲು ಒಂದು ನೆಪವೂ ಇತ್ತು. ನಾನು ರಹಮತ್ ತರಿಕೆರೆಯವರ ’ಕರ್ನಾಟಕ ನಾಥ ಪಂಥ’ ಪುಸ್ತಕವನ್ನು ಹುಡುಕುತ್ತಿದ್ದೆ. ಅದಕ್ಕಾಗಿ ಕೆಲ ಸಮಯದ ಹಿಂದೆ ಅಂಕಿತಾ, ಸ್ವಪ್ನ, ನವಕರ್ನಾಟಕ ಸೇರಿದಂತೆ ಕೆಲವು ಪುಸ್ತಕ ಮಳಿಗೆಗಳಲ್ಲಿ ಹುಡುಕಾಡಿದ್ದೆ. ಸಿಕ್ಕಿರಲಿಲ್ಲ. ನವೆಂಬರಿನಲ್ಲಿ ಪ್ರತಿ ಬಾರಿ ಅರಮನೆ ಮೈದಾನದಲ್ಲಿ ನಡೆಯುವ ಪುಸ್ತಕ ಮೇಳದಲ್ಲೂ ಸಿಕ್ಕಿರಲಿಲ್ಲ.

ಪ್ರಸ್ತುತ ವರ್ಷ ರಹಮತ್ ತರಿಕೆರೆಯವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದಿದೆಯಲ್ಲ ಹಾಗಾಗಿ ಅವರ ಕೃತಿಗಳೆಲ್ಲಾ ಸಮ್ಮೆಳನದಲ್ಲಿ ದೊರಕಬಹುದೆಂಬ ನಿರೀಕ್ಷೆಯಿತ್ತು.

ಆದರೆ ಶುಕ್ರವಾರ ಟೀವಿ ಮುಂದೆ ಕುಳಿತೆ ನೋಡಿ, ಸಮ್ಮೆಳನಕ್ಕೆ ಹೋಗಬೇಕೆಂದು ಅನ್ನಿಸಲೇ ಇಲ್ಲ. ಕನ್ನಡದ ನ್ಯೂಸ್ ಚಾನಲ್ ಗಳು ಪೈಪೋಟಿಗೆ ಬಿದ್ದವರಂತೆ ಸಮ್ಮೇಳನದ ಲೈವ್ ಕವರೇಜ್ ಗಳನ್ನು ನೀಡತೊಡಗಿದವು. ಹಿಂದೆ ಒಂದೆರಡು ಸಮ್ಮೇಳನದಲ್ಲಿ ಭಾಗವಹಿಸಿದ್ದ ನನಗೆ ಗೊತ್ತಿತ್ತು. ಸಮ್ಮೇಳನದ ಎಲ್ಲಾ ಸೂಕ್ಷ ವಿವರಗಳನ್ನು ನಮಗೆ ಕಾಣಲು ಸಾಧ್ಯವಿಲ್ಲವೆಂದು. ಆದರೆ ಕ್ಯಾಮರ ಕಣ್ಣುಗಳ ವ್ಯಾಪ್ತಿ ದೊಡ್ಡದು. ಅವು ಯಾವುದೇ ವ್ಯಾಖ್ಯಾನವಿಲ್ಲದೆ ಸಮಸ್ತ ವಿವರಗಳನ್ನು ಬಹು ಸುಲಭವಾಗಿ ವಿಕ್ಷಕರಿದ್ದೆಡೆಗೇ ತಲುಪಿಸಬಲ್ಲವು.
ಇದಲ್ಲದೆ ಸಮ್ಮೇಳನದ ವರದಿಗೆಂದೇ ’ಅವಧಿ’ ಯ ಸಹಯೋಗದಲ್ಲಿ ’ನುಡಿಮನ’ ಎಂಬ ಬ್ಲಾಗ್ ಹುಟ್ಟಿಕೊಂಡಿತ್ತು. ಅದು ಸಚಿತ್ರ ವರದಿಯೊಂದಿಗೆ ಸದಾ ಅಪ್ಡೇಟ್ ಆಗುತ್ತಲಿತ್ತು. ಜನಜಂಗುಳಿಯಿಂದ ಸದಾ ದೂರವಿರಲು ಇಷ್ಟಪಡುವ ನನಗಿದು ಸಾಕಾಗಿತ್ತು.

ಹಾಗೆ ಕುಳಿತವಳನ್ನು ಮತ್ತೆ ಎಬ್ಬಿಸಿ ಸಮ್ಮೇಳನಕ್ಕೆ ದೂಡಿದ್ದು ಇದೇ ಮಾದ್ಯಮಗಳೇ!. ಅದು ಹೇಗಂತೀರಾ? ಭಾನುವಾರ ಮಧ್ಯಾಹ್ನ ’ಸಮಯ’ ಸುದ್ದಿ ಚಾನಲ್ ’ಸಮ್ಮೇಳನದ ಕಾರ್ಯಕ್ರಮಗಳಲ್ಲಿ ನೂಕುನುಗ್ಗಲು’ ’ ಪುಸ್ತಕ ಮಳಿಗೆಗಳಲ್ಲಿ ಜನ ಸಾಗರ’ ಎಂದು ಬ್ರೇಕಿಂಗ್ ನ್ಯೂಸ್ ಪ್ರಸಾರಿಸತೊಡಗಿತ್ತು. ಅದೇ ಚಾನಲ್ ಸಾಹಿತ್ಯ ಸಮ್ಮೇಳನವನ್ನು ’ಸಾಹಿತ್ಯ ಸಂತೆ’ ಎಂದು ಕರೆದಿತ್ತು. ಹಾಗಾಗಿ ಸಂತೆಗೆ ಹೋಗೋಣ, ಸಂಬ್ರಮದಲ್ಲಿ ಭಾಗಿಯಾಗೋಣ ಎಂದುಕೊಂಡು ನ್ಯಾಷನಲ್ ಕಾಲೇಜು ಮೈದಾನಕ್ಕೆ ಬಂದುಬಿಟ್ಟೆ.

ಅಬ್ಬಾ! ಅಲ್ಲಿ ನಿಜಕ್ಕೂ ಸಂತೆ ಹಾಗೂ ಜಾತ್ರೆಯ ಸಂಬ್ರಮವಿತ್ತು. ಎಲ್ಲಾ ಜಿಲ್ಲೆಗಳಿಂದ ಬಂದ ಕನ್ನಡದ ಬಂಧುಗಳು ಬ್ಯಾಡ್ಜ್ ಧರಿಸಿಕೊಂಡು ಅತ್ತಿಂದಿತ್ತ ಓಡಾಡುತ್ತಿದ್ದರು. ಬೀದಿ ಬದಿಯ ವ್ಯಾಪಾರಿಗಳು ಪುಸ್ತಕ ಮಳಿಗೆಗಳು ಮತ್ತು ಸಮ್ಮೇಳನದ ಮುಖ್ಯದ್ವಾರವಾದ ನಾಡಪ್ರಭು ಕೆಂಪೇಗೌಡ ದ್ವಾರದ ನಡುವಿನ ಸ್ವಲ್ಪ ಜಾಗದಲ್ಲೇ ವ್ಯಾಪಾರ ಶುರುವಿಟ್ಟುಕೊಂಡಿದ್ದರು.

ಸಭಾಂಗಣದಲ್ಲಿ ಖುರ್ಚಿ ಖಾಲಿಯಿರುವುದಿರಲಿ ಇಕ್ಕೆಲಗಳಲ್ಲಿ ನಿಂತು ನೋಡುವುದಕ್ಕೂ ಜಾಗವಿರಲಿಲ್ಲ. ಪರಿಚಿತ ಮುಖಗಳೇನಾದರೂ ಕಾಣಿಸುತ್ತದೆಯೇನೋ ಎಂದು ಅತ್ತಿತ್ತ ಕಣ್ಣಾಡಿಸುತ್ತಾ ಪುಸ್ತಕ ಮಳಿಗೆಯತ್ತ ಕಾಲು ಹಾಕಿದರೆ ಪ್ರವೇಶ ದ್ವಾರದಲ್ಲೇ ಒಳಗೆ ಹೆಜ್ಜೆ ಇಡಲಿಕ್ಕೂ ಆಗದಷ್ಟು ಜನಸಂದಣಿ, ಒಮ್ಮೆ ಹಿಂದಿರುಗೋಣವೆಂದುಕೊಂಡೆ. ಆದರೆ ನಾಳೆ ಭಾನುವಾರ ಇದಕ್ಕಿಂತಲೂ ಹೆಚ್ಚು ಜನದಟ್ಟಣೆ ಇರುತ್ತದೆ ಎಂದುಕೊಂಡು ಒಳನುಗ್ಗಿದೆ.

ನನಗೆ ಅಗತ್ಯವಾಗಿ ಬೇಕಾಗಿದ್ದ ರಹಮತ್ ತರಿಕೆರೆಯವರ ’ ಕರ್ನಾಟಕದಲ್ಲಿ ನಾಥಪಂಥ’ ಅವರದೇ ವಿಶ್ವವಿದ್ಯಾಲಯದ ಮಳಿಗೆಯಲ್ಲಿ ದೊರೆಯಬಹುದೆಂದು ಹಂಪೆ ವಿಶ್ವ ವಿದ್ಯಾಲಯದ ಮಳಿಗೆಗೆ ಹೋದೆ. ಅಲ್ಲಿರಲಿಲ್ಲ. ಅನಂತರ ನವಕರ್ನಾಟಕಕ್ಕೆ ಹೋದೆ. ಅಂಕಿತಕ್ಕೆ ಹೋದೆ. ಅಲ್ಲಿಂದ ಸ್ವಪ್ನಕ್ಕೆ ಬೇಟಿಯಿತ್ತೆ. ಕೊನೆಗೆ ಅಭಿನವದಲ್ಲಿ ಸಿಗಬಹುದೆಂದು ಅಲ್ಲಿಗೂ ಪಾದ ಬೆಳೆಸಿದೆ. ಅಲ್ಲಿ ಅದರ ಮಾಲೀಕ ರವಿಕುಮಾರ್ ಹೇಳಿದರು; ಅದರ ಪ್ರತಿಗಳು ಮುಗಿದಿವೆ. ಬಹುಶಃ ಪುನರ್ ಮುದ್ರಣ ಮಾಡಬೇಕಾಗುತ್ತೆ.

ಅಲ್ಲಿಗೆ ನನ್ನ ನಾಥಪಂಥದ ಬಗೆಗಿನ ಪುಸ್ತಕದ ಹುಡುಕಾಟ ನಿಲ್ಲಿಸಿ ನನಗೆ ಬೇಕಾದ ಕೆಲವು ಪುಸ್ತಕಗಳನ್ನು ಖರೀದಿಸಿದೆ. ಮಳಿಗೆಗಳಲ್ಲಿನ ಹುಡುಕಾಟ ನನಗೇನೂ ಬೇಸರ ತರಿಸಲಿಲ್ಲ. ಯಾಕೆಂದರೆ ಕೆಲವು ಮಳಿಗೆಗಳಲ್ಲಿ ಸ್ವತಃ ಲೇಖಕರೇ ಕುಳಿತು ಸಾಹಿತ್ಯಾಸಕ್ತರೊಡನೆ ಉಭಯ ಕುಶಲೋಪರಿ ನಡೆಸುವುದನ್ನು ಕಂಡೆ. ನಾಗತಿಹಳ್ಳಿ ’ಅಭಿವ್ಯಕ್ತಿ’ಮಳಿಗೆಯಲ್ಲಿ ಕುಳಿತು ಸಾಹಿತಾಸಕ್ತರಿಗೆ ಸಹಿ ಹಾಕಿ ಪುಸ್ತಕ ನೀಡುತ್ತಿದ್ದರು., ’ಎನ್ ಗುರು ಕಾಫಿ ಆಯ್ತಾ’ ಬ್ಲಾಗ್ ನಡೆಸುತ್ತಿರುವ ಬನವಾಸಿ ಬಳಗದ ಐಟಿ-ಬಿಟಿ ಹುಡುಗರು, ಛಂದ ಪ್ರಕಾಶನದ ವಸುಧೇಂದ್ರ, ಪತ್ರಿಕೆ ಪ್ರಕಾಶನದಲ್ಲಿ ಗೌರಿ ಲಂಕೇಶ್ ಅವರನ್ನೆಲ್ಲ ನೋಡಿಕೊಂಡು ಮುಂದೆ ಬರುತ್ತಿರುವಾಗ ಸಂಕ್ರಮಣ ಮಳಿಗೆಯಲ್ಲಿ ಚಂಪಾ ಕಂಡರು. ಎದುರಲ್ಲಿ ’ಕನ್ನಡ ಸಾಹಿತಿಗಳ ಮಾಹಿತಿ’ ಪುಸ್ತಕ ಇತ್ತು. ಅವರು ಮೊದಲು ತಂದ ಲೇಖಕರ ವಿಳಾಸ ಪುಸ್ತಕ ನನ್ನಲಿತ್ತು. ಅದನ್ನು ಎರವಲು ತೆಗೆದುಕೊಂಡು ಹೋದ ಯಾರೋ ಹಿಂದಿರುಗಿಸಿರಲಿಲ್ಲ. ಹಾಗಾಗಿ ಅದನ್ನು ಕೊಂಡುಕೊಳ್ಳೋಣವೆಂದು ’ಎಷ್ಟು ಸರ್ ಬೆಲೆ’ ಅಂದೆ. ೩೬೦ ಎಂದರು. ಇವ್ರು ಒಂಚೂರು ರಿಯಾಯಿತಿ ಕೊಡೊಲ್ಲ ಎಂದುಕೊಳ್ಳುತ್ತಲೇ ಪುಸ್ತಕ ಕೊಂಡೆ. ಜೋರಾಗಿ ಹೇಳಲಿಲ್ಲ. ಹೇಳಿದ್ದರೆ ಅವರ ಧಾರವಾಡದ ಗಂಡು ಭಾಷೆಯ ಚಾಟಿಯೇಟನ್ನು ಮಂತ್ರಮುಗ್ದಳಾಗಿ ನಾನು ಕೇಳಿಸ್ಕೋಬೇಕಾಗಿತ್ತು. ಆ ಭಾಷೆಯ ಬಗ್ಗೆ ನಂಗೆ ಒಂಥರಾ ಮೋಹ!

ಸಾಹಿತ್ಯ ಸಮ್ಮೇಳನಕ್ಕೆ ಐಟಿ ಬಿಟಿ ಕಡೆಯಿಂದ ಯಾವ ನೆರವು ಬರಲಿಲ್ಲ ಎಂಬುದರಿಂದ ವ್ಯಗ್ರಗೊಂಡ ಪರಿಷತ್ತಿನ ಅಧ್ಯಕ್ಷ ನಲ್ಲೂರಪ್ರಸಾದ್ ’ಸಮ್ಮೇಳನ ನಡೆಸಲು ನಾವು ಕಸ ಗುಡಿಸೋರ ಹತ್ರ ಕೈ ಚಾಚುತ್ತೇವೆಯೇ ಹೊರತು ಅವರತ್ರ ಕೈ ಚಾಚೋದಿಲ್ಲ. ಅವರು ನಮ್ಮಿಂದ ಬದುಕಬೇಕೆ ಹೊರತು ಅವರಿಂದ ನಾವಲ್ಲ.ಅವರ ಕಂಪ್ಯೂಟರ್, ಲ್ಯಾಪ್ ಟ್ಯಾಪ್ ಗಳಿಂದ ಭತ್ತ, ಬದನೆ, ಬೂದುಗುಂಬಳಕಾಯಿ ಬೆಳೆಯಕ್ಕಾಗಲ್ಲ. ಕನ್ನಡಿಗರು ಅಭಿಮಾನಿಗಳು, ಅತ್ಯುಗ್ರರು ಎಂದು ಸಮಾರೋಪ ಸಮಾರಂಭದಲ್ಲಿ ಗುಡುಗಿದಾಗ ನನಗೆ ಮಳಿಗೆಯೊಂದರಲ್ಲಿ ಕನ್ನಡದ ಕವಿಗಳ, ಸಾಹಿತಿಗಳ ಮಾತುಗಳನ್ನು ಟೀಶರ್ಟ್ ಗಳಲ್ಲಿ ಮುದ್ರಿಸಿ ಅಭಿಮಾನದಿಂದ ಮಾರುತ್ತಿದ್ದ ಒಂದಷ್ಟು ಐಟಿ-ಬಿಟಿ ಹುಡುಗರ ಚಿತ್ರ ಕಣ್ಮುಂದೆ ಬಂತು.

ಕವಿಗೋಷ್ಟಿಯಲ್ಲಿ ಭಾಗವಹಿಸಲು ಸಚಿವರ, ಶಾಸಕರ ಶಿಪಾರಸ್ಸು ಪತ್ರ ತಂದವರಿಗೆ ಆದ್ಯತೆಯನ್ನು ನೀಡಲಾಗಿದೆ. ಅದನ್ನು ವಿರೋಧಿಸಿ ಪರ್ಯಾಯ ಕವಿಗೋಷ್ಟಿ ನಡೆಸುವುದಾಗಿ ಎಲ್.ಎನ್.ಮುಕುಂದರಾಜ್ ಘೋಷಿಸಿದ್ದಾರೆ ಎಂದು ಯಾರೋ ಹೇಳಿದ್ದರು. ಅದನ್ನು ಕೇಳೋಣವೆಂದು ಅವರನ್ನು ಹುಡುಕಿಕೊಂಡು ಮಳಿಗೆ ೩೩೨ಕ್ಕೆ ಹೋದೆ. ಆದರೆ ಅಲ್ಲಿ ಮುಕುಂದರಾಜು ಸಿಗಲಿಲ್ಲ. ಆದರೆ ಆ ಸ್ಟಾಲಿನಲ್ಲಿಯೇ ಕರಿಸ್ವಾಮಿಯವರ ’ಉಕ್ಕೆಕಾಯಿ’ ಬಿಡುಗಡೆಯಾದ ಮಾಹಿತಿ ದೊರೆಯಿತು.

ಈ ಸಮ್ಮೇಳನ ಹಲವಾರು ಕಾರಣಗಳಿಗಾಗಿ ನನಗೆ ಮುಖ್ಯವೆನಿಸಿತು.
ಸಮ್ಮೇಳನದ ಅಧ್ಯಕ್ಷರಾದ ಕನ್ನಡದ ಕಟ್ಟಾಳು, ನಿಘಂಟು ತಜ್ನ ವೆಂಕಟಸುಬ್ಬಯ್ಯನವರು ಉದ್ಘಾಟನಾ ಭಾಷಣದಲ್ಲಿ, ಮುಖ್ಯಮಂತ್ರಿಗಳನ್ನು, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರೂ, ಗೃಹಸಚಿವರೂ ಆದ ಅರ್. ಅಶೋಕ್ ಮತ್ತುಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡೇ ಸರಕಾರವನ್ನು ಹಿಗ್ಗಾಮುಗಾ ಝಾಡಿಸಿ ಪ್ರತಿಭಟನೆಯ ಮುನ್ನುಡಿಯನ್ನು ಬರೆದುಬಿಟ್ಟರು. ಹಿರಿಯ ಸಂಶೋದಕ ಚಿದಾನಂದಮೂರ್ತಿಯವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಶಿಫಾರಸ್ಸು ಮಾಡಿದ ಗೌರವ ಡಾಕ್ಟರೇಟ್ ಅನ್ನು ಅವರು ಕೋಮುವಾದಿ ಎಂಬ ಕಾರಣವನ್ನು ನೀಡಿ ರಾಜ್ಯಪಾಲರು ತಡೆಹಿಡಿದದ್ದು ವೇಗವರ್ಧಕವಾಗಿ ಕೆಲಸ ಮಾಡಿತು. ಹಾಗಾಗಿ ಅದಕ್ಕೆ ಅನಂತಮೂರ್ತಿ, ಅಗ್ರಹಾರ ಕೃಷ್ಣಮೂರ್ತಿ, ಬರಗೂರು ರಾಮಚಂದ್ರಪ್ಪ, ಶಿವರುದ್ರಪ್ಪ, ಚಂಪಾ, ಎಂ. ಎಂ. ಕಲ್ಬುರ್ಗಿ, ಕೆ.ಮರುಳಸಿದ್ದಪ್ಪ, ಜಿ.ಎಸ್.ಸಿದ್ದಲಿಂಗಯ್ಯ, ಸಾ.ಶಿ.ಮರುಳಯ್ಯ ಮುಂತಾದವರು ಅಧ್ಯಾಯಗಳನ್ನು ಸೇರಿಸುತ್ತಾ ಹೋದರು. ಅದಕ್ಕೆ ಬೆನ್ನುಡಿಯನ್ನು ಬರೆದವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಲ್ಲೂರು ಪ್ರಸಾದ್; ಇದು ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂದಪಟ್ಟಿದ್ದು. ಅದರಲ್ಲಿ ಕೈಹಾಕಲು ಅವರ್ಯಾರೋ ನಂಗೊತ್ತಿಲ್ಲ. ’ಆಜ್ನೆ ಮಾಡೋ ಐಗೋಳ್ ಎಲ್ಲಾ....’ಎಂದು ರತ್ನನ ಪದ ಉದಾಹರಿಸಿ ಕನ್ನಡದ ಸುದ್ದಿಗೆ ಬಂದ್ರೆ ಸಾಹಿತ್ಯ ಪರಿಷತ್ತು ಸುಮ್ಮನಿರೊಲ್ಲ. ಎಂದು ಎಚ್ಚರಿಕೆಯ ಸಂದೇಶವನ್ನು ಗವರ್ನರಿಗೆ ರವಾನಿಸಿಬಿಟ್ಟರು. ಸಮರ್ಥ ಮುನ್ನುಡಿ ಮತ್ತು ಬೆನ್ನುಡಿಗಳೊಂದಿಗೆ ಈ ಪುಸ್ತಕ ಸಾಹಿತ್ಯಾಭಿಮಾನಿಗಳ ಕೈಗೆ ಸಿಕ್ಕಿತು.
ಇದೆಲ್ಲದರ ಫಲಶ್ರುತಿಯಾಗಿ೭೭ನೇ ಸಾಹಿತ್ಯ ಸಮ್ಮೇಳನವು ರಾಜ್ಯಪಾಲರ ವಿರುದ್ದ ಖಂಡನಾ ನಿರ್ಣಯ ಕೈಗೊಳ್ಳುವ ಮೂಲಕ ಇತಿಹಾಸ ನಿರ್ಮಿಸಿತು.

ಈ ಬರಹವನ್ನು ಪೋಸ್ಟ್ ಮಾಡುವ ಹೊತ್ತಿಗೆ ಘನತೆವೆತ್ತ ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಅವರಿಂದ ಚಿದಾನಂದ ಮೂರ್ತಿಗಳಿಗೆ ಗೌರವ ಡಾಕ್ಟರೇಟ್ ನೀಡುವುದಕ್ಕೆ ಒಪ್ಪಿಗೆಯ ಮುದ್ರೆ ದೊರಕಿದೆಯೆಂದು ಗೊತ್ತಾಗಿದೆ.
ಕಲೆ ಮತ್ತು ಸಂಸ್ಕೃತಿಯ ಮುಂದೆ ಪ್ರಭುತ್ವ ಕೂಡಾ ಒಮ್ಮೊಮ್ಮೆ ತಲೆಬಾಗುತ್ತದೆ

೯೮ ಹರೆಯದ ನವ ಯುವಕ ಜಿ. ವೆಂಕಟಸುಬ್ಬಯ್ಯನವರ ಸಮರ ಸ್ಫೂರ್ತಿಗೆ ನಿಜಕ್ಕೂ ಹ್ಯಾಟ್ಸಪ್. ಅವರು ಸದಾ ಕಾಲ ನಮಗೆಲ್ಲಾ ಸ್ಫೂರ್ತಿಯ ಚಿಲುಮೆಯಾಗಿರಲಿ ಎಂಬುದೇ ಎಲ್ಲಾ ಕನ್ನಡಿಗರ ಆಶಯ.


1 comments:

sunaath said...

ಚಂಪಾರಿಗೆ ನೀವು ಹೆದರುತ್ತೀರಾ> ಲಂಕೇಶರು ಅವರನ್ನು
‘ಗಂಡ್ಹೆಂಗ್ಸು’ ಅಂತ ಕರೆದಿದ್ದರು!