Sunday, March 6, 2011

ಕಾಷ್ಠ ದೇವರಿಗೊಲಿದ ಕನ್ನೆಮನಸು



ಅಳು ಉಕ್ಕಿ ಬರುತ್ತಿತ್ತು
ಹೇಳಿಕೊಳ್ಳಲು ನೀನಾದರೂ ಇರುತ್ತಿದ್ದರೆ...?
ನೀನು ಕಿವಿಯಾಗುತ್ತಿದ್ದೆಯಾ? ಗೊತ್ತಿಲ್ಲ. ನನಗಾದರೋ ಹೇಳಲೇಬೇಕಾಗಿತ್ತು-

ಹದಿಹರೆಯವನ್ನು ಓದು ನುಂಗಿತು.
ಮದುವೆ ಮಬ್ಬಾಗಿಸಿತು ಯೌವನವನ್ನು
ಪ್ರೌಢತನದಲ್ಲಿ ಪ್ರೇಮಾನುಭೂತಿಯಾಯಿತು ; ಬದುಕು ತಲ್ಲಣಿಸಿತು
ಮೋಡಿಗಾರ ಅವನು, ಕಣ್ಣು ಕೀಳದಾದೆ
ಬದುಕಿನಾಚೆಗಿನ ಕನವರಿಕೆಗಳು;
ತಾಯಿಯಾದೆ, ಹಸ್ತ ಸಾಮುದ್ರಿಕಳಾದೆ, ತಲೆ ಮೊಟಕಿದೆ.
ಅಳುವ ಸಂಜೆಯಲಿ ಕಣ್ಣಿನಾರತಿಯ ಎತ್ತಿ ಬರಮಾಡಿಕೊಂಡೆ ಒಳಮನೆಗೆ
ಕನ್ನೆತನದಿಂದ ಎದೆಗೊರಗಿದೆ.
ಕರಸ್ಥಳದಲ್ಲಿ ಇಷ್ಟಲಿಂಗ; ಶುಕ್ರಸಂಗಮದ ಕನಸು
ಅರ್ಧದಲ್ಲಿ ಎದ್ದು ಹೊರಟ.ಶಿಖರದೆಡೆ ಕಣ್ಣು ನೆಟ್ಟಿತ್ತು.
ಮತ್ತೆ ಕನವರಿಕೆ; ಮಬ್ಬುಗತ್ತಲು
ಕಣ್ಣಿರ ಬಿಸಿಗೆ ಮೋಡ ಹೆಪ್ಪುಗಟ್ಟಿದೆ.
ಒಡಲ ತುಂಬಾ ಕನಸುಗಳ ಕಳ್ಳ ಬಸಿರು
ನಾ ಮಡಿಲಾದೆ; ನೀನು ಹೆಗಲಾಗಲಿಲ್ಲ
ಅವನು ಏಕಾಂಗವೀರ; ಇವಳು ಸಮರೋತ್ಸಾಹಿ.
ಬಸಿರನ್ನು ನೆತ್ತಿಯಲ್ಲಿ ಹೊತ್ತು ಅಷ್ಟ ಭುಜೆಯಾದಳು
ಅರೆದು, ಹುಡಿ ಹಾರಿಸಿ ಭೂಮಿಗೊರಗಿದಳು
ಬೇಡದ ಗರ್ಭಕ್ಕೆ ತಾಯಿಯಾಗುವ ಭಾಗ್ಯ!

ಎಲ್ಲಾ ವಿಪ್ಲವಗಳಾಚೆ ಹೊಸದೊಂದು ಕನಸು
ಬೆಳ್ಳಿರೇಖೆಯಂತೆ ಕುಣಿಕುಣಿದು ಇಳಿದು ಗರ್ಭದಾಳಕ್ಕೆ ಕನ್ನವಿಕ್ಕಿತು
ದ್ರಾವಿಡ ದೇವನವನು; ತಲೆಯಲಿ ಗಂಗೆ ಪಕ್ಕದಲಿ ಸತಿ
ಸುತ್ತೆಲ್ಲಾ ಗಂಧರ್ವ ಕನ್ಯೆಯರ ಲಾಸ್ಯ.
ಪದತಲದಲಿ ಕುಳಿತು ಬೊಗಸೆಯೊಡ್ಡಿ ಉಲಿದಳು
’ಕನ್ನೆಮನಸು ನನ್ನದು, ನಿನ್ನೊಳಗೆ ಐಕ್ಯಮಾಡಿಕೊ’
ಜೋಗಪ್ಪನವನು, ಕೈಗೆ ಕಪಾಲವನ್ನಿಟ್ಟು ಮಾಯವಾದ.

ಎದೆಗೆ ನಾಟಿದ ತ್ರಿಶೂಲ; ಕೈಯಲ್ಲಿ ಕಪಾಲ.
ಹಂಬಲದ ದೇವರಿಗೆ ಹೃದಯವಿಲ್ಲ!

[ ಕಾಲೇಜು ದಿನಗಳ ನಂತರ ಕವನ ಬರೆದಿರಲಿಲ್ಲ. ಮಹಿಳಾದಿನಕ್ಕೆಂದು ಬರೆಯಲು ಪ್ರಯತ್ನಿಸಿದೆ. ಇದು ಕವನವಾಗಿದೆಯೋ ಇಲ್ಲವೋ ನೀವು ಹೇಳಬೇಕು.]

8 comments:

ಶಾಂತಲಾ ಭಂಡಿ (ಸನ್ನಿಧಿ) said...

ಮೇಡಮ್,

"ನಾ ಮಡಿಲಾದೆ; ನೀನು ಹೆಗಲಾಗಲಿಲ್ಲ"
ಹೀಗೆಯೇ ತುಂಬ ಇಷ್ಟವಾದವು ಪ್ರತೀಸಾಲುಗಳೂ.

ಒಂದೊಳ್ಳೆಯ ಕವನಕ್ಕೆ ಧನ್ಯವಾದ.

ಪ್ರೀತಿಯಿಂದ,
-ಶಾಂತಲಾ ಭಂಡಿ

ತೇಜಸ್ವಿನಿ ಹೆಗಡೆ said...

ಕವಿತೆ ತುಂಬಾ ಚೆನ್ನಾಗಿದೆ. ಇಷ್ಟವಾಯಿತು.

surya said...

ಉತ್ತಮ ಕವಯಿತ್ರಿಯೊಬ್ಬರು ಕನ್ನಡ ಸಹೖದಯಿ ಓದುಗರಿಂದ ಇಷ್ಟು ದೀಘ೯ ಕಾಲ ದೂರ ಉಳಿಯಬೇಕಾಯಿತಲ್ಲ!
-ಡಿ.ಉಮಾಪತಿ

sunaath said...

ತುಂಬ ಅರ್ಥಪೂರ್ಣ ಕವನ. ಬರೆಯುವದನ್ನು ಏಕೆ ಬಿಟ್ಟಿರಿ?

ಸುಧೇಶ್ ಶೆಟ್ಟಿ said...

ತು೦ಬಾನೇ ಚ೦ದದ ಕವನ.... ನನಗ೦ತೂ ತು೦ಬಾ ಇಷ್ಟ ಆಯಿತು....

suragi \ ushakattemane said...

ತುಂಬಾ ಹಿಂಜರಿಕೆಯಿಂದಲೇ ಇದನ್ನು ಪೋಸ್ಟ್ ಮಾಡಿದ್ದೆ. ನಿಮ್ಮೆಲ್ಲರ ಅನ್ನಿಸಿಕೆ ಓದಿ ನಿಜಕ್ಕೂ ಖುಷಿಯಾಯ್ತು.ಇನ್ಮುಂದೆ ಕವನಗಳನ್ನೂ ಬರೆಯುವ ಪ್ರಯತ್ನ ಮಾಡ್ತಿನಿ ಅಂತ ನಿಮ್ಮೆಲ್ಲರನ್ನು ಹೆದರಿಸ್ತಾ ಇದ್ದೀನಿ!
ಕವಿ ಮನಸ್ಸಿನ ಶಾಂತಲಾ, ತೇಜಸ್ವಿನಿ,ಸುಧೇಶ್ ನಿಮಗೆ ತುಂಬು ಮನಸ್ಸಿನ ಕೃತಜ್ನತೆಗಳು.
ಸುನತ್, ನೀವು ಒಳ್ಳೆಯ ವಿಮರ್ಶಕರು.ನಿಮಗೂ ಈ ಕವನ ಇಷ್ಟವಾಗಿದೆಯೆಂದರೆ ಇದರಲ್ಲೆನೋ ಇರಲೇಬೇಕು.
ಉಮಾಪತಿಯವರೇ, ನಿಮ್ಮ ಹುಬ್ಬುಗಳು ಸ್ವಲ್ಪ ಜಾಸ್ತಿಯೇ ಮೇಲೇರಿದವು ಅಲ್ವಾ!
ಇದನ್ನು ಬರೆಯಲು ಕಾರಣಕರ್ತರಾದವರಿಗೂ ವಂದನೆ ಹೇಳಲೇಬೇಕಲ್ಲಾ! thanq

www.kumararaitha.com said...

ತುಂಬ ಪ್ರತಿಮೆಗಳುಳ್ಳ ಅದ್ಬುತ ಕವನ; ಇಷ್ಟು ಗಂಭೀರವಾಗಿ ಕವನ ಕಟ್ಟುವ ಕ್ರಿಯೆ ನಿಮಗೆ ಗೊತ್ತಿದೆ. ಮುಂದುವರೆಸಿ..... ಅಭಿನಂದನೆ

ಆಸು ಹೆಗ್ಡೆ said...

ಮೌನ ಕಣಿಯೆಯಲ್ಲೂ
ಕವನಗಳು ಹೊಮ್ಮುತ್ತವೆ
ಕವನಗಳು ಹೊಮ್ಮುತ್ತಲೇ
ಇದ್ದರೆ ಮನಸಾರೆ ಆಲಿಸುವೆ!