Wednesday, May 4, 2011

ಕಣ್ಣು ಕಿತ್ತ ಘಟನೆ; ನೋಡಿ ಪ್ರೇಮದಂದವ!




ರಘು ಎಂಬ ಪ್ರೇಮಿಯ ಕಣ್ಣು ಕಿತ್ತ ಘಟನೆ ಈಗ ನೇಪಥ್ಯಕ್ಕೆ ಸರಿದಿದೆ. ನನ್ನನ್ನು ಗಾಢವಾಗಿ ತಟ್ಟಿದ ಘಟನೆಯಿದು. ಗಾಢವಾಗಿ ತಟ್ಟಿದ್ದನ್ನು ಗದ್ಯದಲ್ಲಿ ಹಿಡಿದಿಡುವುದು ಕಷ್ಟ. ಅದು ಮೌನದಲ್ಲಿ ಮಾಗಬೇಕು. ಪದ್ಯದಲ್ಲಿ ಅರಳಬೇಕು. ಆದರೆ ಪದ್ಯ ನನಗೆ ಒಲಿಯದ ಮಾಧ್ಯಮ.

ಪಂಚೆಂದ್ರಿಯಗಳಾಚೆ ತುಡಿಯಲಾರದ್ದು ಪ್ರೀತಿಯೇ ಅಲ್ಲ ಎಂದು ಬಲವಾಗಿ ನಂಬಿರುವವಳು ನಾನು. ಲೌಕಿಕವನ್ನು ಮೀರಿ ಪ್ರೀತಿ ಇನ್ಯಾವುದಕ್ಕೋ ತುಡಿಯಬೇಕು. ಅಂಥ ಪ್ರೇಮಾನುಭೂತಿ ಎಂದೂ ಜೀವವಿರೋಧಿಯಾಗಲು ಸಾಧ್ಯವೇ ಇಲ್ಲ. ಆದರೆ ಕಣ್ಣು ಕಿತ್ತ ಪ್ರಕರಣದಲ್ಲಿ ಪ್ರೀತಿ ಆ ಹಂತವನ್ನು ಏರಲು ಪ್ರಯತ್ನಿಸಿತ್ತೇ? ಇಲ್ಲ. ಇಲ್ಲಿ ಅದು ಜೀವವಿರೋಧಿಯಾಗಿ, ಹಿಂಸ್ರಾರೂಪ ಪಡೆದಿದೆ. ಮಾನವೀಯವಾಗಿ ಸ್ಪಂದಿಸಬೇಕಾದ ಸಂಗತಿಯೊಂದು ಮನುಷ್ಯನ ಅನಾಗರಿಕ ವರ್ತನೆಗಳಿಂದ ರಕ್ತಲೇಪನಗೊಂಡಿದೆ.

ಯಾಕೆ ಹಾಗಾಯ್ತು? ಹಾಗಾದರೆ ರಘು-ಅನುಷಾ ಪರಸ್ಪರ ಪ್ರೀತಿಸಿದ್ದು ಸುಳ್ಳೆ?
ಸುಳ್ಳಲ್ಲ ಎಂಬುದು ಅವರ ನಡವಳಿಕೆಗಳಿಂದ, ಹೇಳಿಕೆಗಳಿಂದ ಗೊತ್ತಾಗುತ್ತದೆ. . ಎಲ್ಲಾ ಪ್ರೇಮಿಗಳಂತೆ ಅವರೂ ಪ್ರೀತಿಸಿದ್ದರು. ಪಂಚೇಂದ್ರಿಯಗಳ ವಶವಾದರು. ರೂಪ, ಗಂಧ, ಸ್ವಾದ, ಸ್ಪರ್ಶ, ಮಾತುಗಳು ವರ್ತಮಾನವನ್ನು ಮರೆಸಿಬಿಟ್ಟವು. ಪ್ರೇಮದಮಲಿನಲಿ ಅವರು ತೇಲಿ ಹೋದರು. ಆ ಸ್ಥಿತಿಯನ್ನು ಉಮರ್ ಖಯ್ಯಾಮ್ ಹೀಗೆ ಹೇಳುತ್ತಾನೆ;

’ಅಲ್ಲಿ ಮರದಡಿಯಲ್ಲಿ ನಲ್ಗಾವ್ಯವೊಂದಿರಲು,
ರೊಟ್ಟಿಯೊಂದಿನಿಸೊಂದು ಕುಡಿಕೆಯಲಿ ಮಧುವು,
ಮೇಣ್ ಮುಗುದೆ, ನೀನೆನ್ನ ಬಳಿ ಕುಳಿತು ಪಾಡಲಹ!
ಕಾಡಾದೊಡೇನದುವೆ ಸಗ್ಗಸುಖವೆನಗೆ.’

ಆ ಸ್ವರ್ಗಸುಖದಲ್ಲಿ ತಮ್ಮ ಮನೆತನ, ಅಂತಸ್ತು, ಗೌರವ, ಘನತೆಗಳೆಲ್ಲವನ್ನು ಮರೆತುಬಿಟ್ಟರು. ಆದರೆ ಅನುಷಳ ಮನೆಯವರು ಮರೆಯಲಿಲ್ಲ. ಯಾಕೆಂದರೆ ಅವರು ಆರ್ಥಿಕವಾಗಿ ರಘುವಿಗಿಂತ ಮೇಲ್ಮಟ್ಟದಲ್ಲಿದ್ದರು. ತಮ್ಮದೇ ಜಾತಿಯವನಾಗಿದ್ದರೂ ರಘುವನ್ನು ಅಳಿಯನೆಂದು ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಹಾಗಾಗಿ ತಮ್ಮ ಪ್ರಭಾವವನ್ನು ಬಳಸಿ ಅನುಷಾಳಿಂದ ರಘುವನ್ನು ದೂರ ಮಾಡಿದರು. ಎರಡು ವರ್ಷ ಕಡಿಮೆ ಅವಧಿಯೇನಲ್ಲ. ಒಬ್ಬ ಮನುಷ್ಯನ ಬ್ರೈನ್ ವಾಶ್ ಮಾಡಲು ಅಷ್ಟು ಅವಧಿ ಸಾಕು. ಅನುಷಾ ಹೆತ್ತವರ ಅಜ್ನಾನುವರ್ತಿಯಾದಳು. ಆಕೆ ಇನ್ನೊಂದು ಮದುವೆಗೆ ಸಿದ್ಧವಾದಳು.

ರಘುವಿನ ದುರಂತ ಕಥೆಯನ್ನು ಕೇಳಿದಾಗ ನನಗೆ ಪಕ್ಕನೆ ನೆನಪಾಗಿದ್ದು ಸಿದ್ದಲಿಂಗಯ್ಯನವರ ’ರಾಣಿಯ ಪ್ರೇಮ’ ಎಂಬ ಕವನ. ”ಕಪ್ಪು ಕಾಡಿನ ಹಾಡು” ಎಂಬ ಕವನ ಸಂಕಲನದಲ್ಲಿರುವ ಈ ಹಾಡನ್ನು ನೀವೂ ಒಮ್ಮೆ ಓದಿಬಿಡಿ;

ಉತ್ತರ ದಿಕ್ಕಿಗೆ ರಾಣಿಯೊಬ್ಬಳು
ಇದ್ದಳು ಬಲು ಹಿಗ್ಗಿ
ಎತ್ತರದಲ್ಲಿ ರಾಣಿ ಇದ್ದಳು
ಕಣ್ಣುಗಳಿಗೆ ಸುಗ್ಗಿ
ಆಳನು ಕರೆದಳು ಪಟ್ಟದ ರಾಣಿ
ಆಳು ಬಾರೊ ನನ್ನ
ಜೀತಗಾರನ ಜೊತೆಗೆ ಕರೆದಳು
ಪ್ರೀತಿ ಮಾಡೊ ನನ್ನ

ಆಳು; ಕೊಕ್ಕರೆಯೊಂದು ಮೀನ ಪ್ರೀತಿಸಿತು
ಈ ಪ್ರೇಮದ ಗುಟ್ಟೇನು
ಮಸೆದ ಕತ್ತಿಯು ಕೊರಳ ಪ್ರೀತಿಸಿತು
ಈ ಒಲವಿನ ಪರಿಯೇನು?
.........................
ಜೀತಗಾರನು ಜೀವ ಭಯದಲ್ಲಿ
ಊರ ಬಿಡುವೆನೆಂದ
ಬೇಲಿ ಮರೆಯಲ್ಲಿ ಹೆಣ ಬಿದ್ದಿತ್ತು
ನೋಡಿ ಪ್ರೇಮದಂದ.

ಇದಕ್ಕೆ ವ್ಯಾಖ್ಯಾನದ ಅವಶ್ಯಕತೆ ಇಲ್ಲವೆನಿಸುತ್ತದೆ. ವರ್ಣಸಂಕರದ, ವರ್ಗಾಂತರದ ಪ್ರೇಮ ಪ್ರಕರಣಗಳೇ ಹಾಗೆ ಅವು ಧಾರುಣ ಅಂತ್ಯವನ್ನು ಕಂಡದ್ದೇ ಹೆಚ್ಚು. ಉನ್ನತ ಕುಲದ ಹೆಣ್ಣೊಬ್ಬಳು ಕೆಳಸ್ತರದ ಇಲ್ಲವೇ ಅಂತ್ಯಜನಾದ ಗಂಡೊಬ್ಬನನ್ನ ಪ್ರೀತಿಸಿದರೆ ಅದು ದುರಂತದಲ್ಲಿ ಅಂತ್ಯಗೊಳ್ಳುವುದೇ ಹೆಚ್ಚು. ಇಲ್ಲಿ ಪ್ರಭುತ್ವ ಕೂಡಾ ಮೇಲ್ಜಾತೀಯ ಮತ್ತು ಮೇಲ್ವರ್ಗದ ಪರವಾಗಿಯೇ ನಿಲ್ಲುತ್ತದೆ. ಆದರೆ ಉನ್ನತ ಸ್ತರದ ಗಂಡೊಬ್ಬ ಕೆಳವರ್ಗದ ಸ್ತ್ರೀಯನ್ನು ಇಷ್ಟಪಟ್ಟರೆ ಅದೇನೂ ಅಪರಾಧವಾಗುವುದಿಲ್ಲ. ಆತ ತನ್ನ ಜಾತಿಯಲ್ಲಿಯೇ,ತನ್ನ ಅಂತಸ್ತಿಗನುಗುಣವಾದ ಹೆಣ್ಣೊಬ್ಬಳನ್ನು ಮದುವೆಯಾಗುತ್ತಾನೆ. ಇವಳನ್ನು ’ಇಟ್ಟುಕೊಳ್ಳುತ್ತಾನೆ’ ಅದನ್ನು ಸಮಾಜ ಒಪ್ಪಿಕೊಳ್ಳುತ್ತದೆ.

ರಘು ಪ್ರಕರಣವನ್ನೇ ನೋಡಿ; ಇಲ್ಲಿ ಹುಡುಗಿ ಮನೆಯವರು ಶ್ರೀಮಂತರು. ಜೊತೆಗೆ ರಾಜಕೀಯ ವ್ಯಕ್ತಿಗಳ ನಂಟುಳ್ಳವರು. ಹಾಗಾಗಿಯೇ ಈ ಪ್ರಕರಣವನ್ನು ಹೆಚ್ಚು ಲಂಬಿಸದಂತೆ ಮಾಧ್ಯಮಗಳ ಮೇಲೆ ಒತ್ತಡವನ್ನು ತಂದರು ಆದರೆ ಆ ವೇಳೆಗಾಗಿಯೇ ಆ ಪ್ರಕರಣ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರವನ್ನು ಪಡೆದುಕೊಂಡಿತ್ತು. ಅನಿವಾರ್ಯವಾಗಿ ಪೋಲಿಸ್ ಇಲಾಖೆ ಕಣ್ಣು ಕಿತ್ತ ಆರೋಪ ಹೊತ್ತವರನ್ನು ಬಂದಿಸಲೇ ಬೇಕಾಯ್ತು.

ಮುಂದೆ ಈ ಪ್ರಕರಣ ಯಾವ ಹಾದಿ ಹಿಡಿಯುತ್ತೋ ಗೊತ್ತಿಲ್ಲ. ಆದರೆ ರಘುವಿಗಾದ ಅನ್ಯಾಯವನ್ನು ತುಂಬಿ ಕೊಡಲು ಯಾರಿಂದಲೂ ಸಾಧ್ಯವಿಲ್ಲ. ಯಾಕೆಂದರೆ ಕಣ್ಣು ಬಹು ಮುಖ್ಯವಾದ ಅಂಗ.
ಈ ಪ್ರಕರಣದ ಹೊರ ಆವರಣದಲ್ಲಿ ನಿಂತು ನೋಡುತ್ತಿರುವ ನಾವು ಅದನ್ನು ಕಪ್ಪು ಬಿಳುಪಾಗಿ ವ್ಯಾಖ್ಯಾನಿಸಬಹುದು. ಇದನ್ನು ಎಸ್.ನಾರಾಯಣ್ ಎಂಬ ಸಿನೇಮಾ ನಿರ್ದೇಶಕ ’ನೆನಪಿದೆಯಾ ಓ ಗೆಳತಿ’ ಎಂಬ ಸಿನೇಮಾ ತೆಗೆಯುವುದರ ಮುಖಾಂತರ ಚೆನ್ನಾಗಿಯೇ ಮಾಡುವವರಿದ್ದಾರೆ!
ಆದರೆ ಅದರ ಗೋಜಲು, ಗಂಭೀರತೆಗಳೆಲ್ಲಾ ಅದರಲ್ಲಿ ನೇರವಾಗಿ ಭಾಗವಹಿಸಿದವರಿಗಷ್ಟೇ ಗೊತ್ತಾಗುವ ಸಂಗತಿ.
ಒಳಾವರಣದಲ್ಲಿರುವ ರಘುವಿನ ಗೆಳೆಯರು ಮತ್ತು ಅನುಷಾ ಬಂಧುಗಳು ಕಣ್ಣು ಕಿತ್ತ ಘಟನೆಯ ಭಾಗಿದಾರರು ಮತ್ತು ಸಾಕ್ಷಿದಾರರು. ಆದರೆ ಇದೆಲ್ಲದರ ಕೇಂದ್ರ ಬಿಂದು ಅನುಷಾ ಮತ್ತು ರಘು. ಅವರ ಆತ್ಮಸಾಕ್ಷಿಗೆ ಏನು ಅನ್ನಿಸಿದೆಯೋ ಅದು ಮಾತ್ರ ಸತ್ಯ. ಬಹುಶಃ ಎರಡು ವರ್ಷದ ಹಿಂದೆ ಪರಸ್ಪರ ಮೆಚ್ಚಿ ಮದುವೆಯಾಗಿ, ಎರಡು ತಿಂಗಳು ದಾಂಪತ್ಯ ಜೀವನ ನಡೆಸಿದ ಅವರಿಗೆ ಪ್ರೀತಿಯ ಬಗ್ಗೆ ಇದ್ದ ಭ್ರಮೆಗಳೆಲ್ಲಾ ಕಳಚಿರಬೇಕು. ಪಂಚೇಂದ್ರಿಯಗಳಾಚೆ ಅವರ ಪ್ರೇಮ ತುಡಿಯಲಿಲ್ಲ. ಒಂದು ವೇಳೆ ತುಡಿದಿದ್ದರೆ ಅದು ಪ್ರೇಮಸಾಪಲ್ಯದ ಒಳದಾರಿಗಳನ್ನು ತಾನಾಗಿಯೇ ಹುಡುಕಿಕೊಳ್ಳುತ್ತಿತ್ತು.

ಅನುಷಾ ತನ್ನ ನಿರ್ಧಾರದ ಬಗ್ಗೆ ಗಟ್ಟಿಯಾಗಿದ್ದಾಳೆ. ರಘು ಕೂಡಾ ದುರಂತ ಪ್ರೇಮಿಯಂತೆ ಕಾಣುತ್ತಿಲ್ಲ. ಮಾಧ್ಯಮವನ್ನು ಅವರು ಎದುರಿಸಿದ ರೀತಿಯಲ್ಲಿಯೇ ಅದು ವ್ಯಕ್ತವಾಗುತ್ತಿತ್ತು. ’ಒಲವೇ ಜೀವನ ಲೆಖ್ಖಾಚಾರ’ ನಿಜವಾಗಿದೆ. ಪ್ರೇಮ ಮತ್ತೆ ಸೋತಿದೆ.

6 comments:

Badarinath Palavalli said...

ಅನಾಗರಿಕ ಘಟನೆ. ಎರಡೂ ಕಡೆ ಯಾರದೇ ತಪ್ಪಿರಲಿ, ಇಂತಹ ಪರ್ಯವಸಾನವು ಅಮಾನವೀಯ.

sunaath said...

ಓದಿ ದುಃಖವಾಯಿತು.

asha said...

its very horrible incident to our civilization

chinnappa said...

ಪ್ರೇಮ ಕುರುಡು ಎಂದು ಹೇಳುತ್ತಾರಲ್ಲ, ಅದು ನಿಜವೇ ಆಯಿತು

ಮನಸು said...

ನಮ್ಮ ಅವಿವೇಕಿ ಜನರುಗಳಿಂದಾದ ಅವಘಡ ಇದು. ಪ್ರಪಂಚ ಎಷ್ಟೇ ಬದಲಾದರೂ ಎಲ್ಲೋ ಮೂಲೆಯಲ್ಲಿ ಇಲ್ಲ ಇನ್ನೂ ನಾವು ಮೂಢರಾಗೇ ಇದ್ದೀವಿ ನಮ್ಮ ಪ್ರತಿಷ್ಠೆ ಪರಾಕಾಷ್ಟೆಗಳೆ ದೊಡ್ಡದು ಎನ್ನುವವರೂ ಇದ್ದಾರೆ ಎಂದೆನಿಸುತ್ತೆ..... ಇದೊಂದು ಅಮಾನವೀಯ ಘಟನೆ.... ಇಂತಹ ಘಟನೆಗಳು ಮತ್ತೆ ಮರುಕಳಿಸದಿರಲಿ...

ಸಿಂಧು sindhu said...

"..ಪ್ರೇಮ ಮತ್ತೆ ಸೋತಿದೆ."
ದುಃಖದ ಆದರೆ ಸತ್ಯವಾದ ವಿಷಯ.

"ಮಸೆದ ಕತ್ತಿಯು ಕೊರಳ ಪ್ರೀತಿಸಿತು
ಈ ಒಲವಿನ ಪರಿಯೇನು?"

-ಪ್ರೀತಿಯಿಂದ,ಸಿಂಧು