Saturday, July 23, 2011

ಅನಂತ ಸಂಪತ್ತಿನ ರಕ್ತಸಿಕ್ತ ಚರಿತ್ರೆ





ಕೇರಳದ ರಾಜಧಾನಿ ತಿರುವನಂತಪುರದಲ್ಲಿರುವ ಅನಂತಪದ್ಮನಾಭನ ಪಾದಮೂಲದಲ್ಲಿ ಸಿಕ್ಕಿದ ಬೆಲೆ ಕಟ್ಟಲಾಗದ ಅಪಾರ ಹೊನ್ನರಾಶಿಯನ್ನು ಇಡೀ ಜಗತ್ತೇ ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದೆ.
ಆದನ್ನು ಜಗತ್ತಿನೆದುರು ತೆರೆದಿಡಲು ಕಾರಣಕರ್ತರಾಗಿದ್ದ ವಕೀಲ ಸುಂದರರಾಜನ್ ಈಗ ಅನಂತಪದ್ಮನಾಭನಲ್ಲಿ ಲೀನರಾಗಿದ್ದಾರೆ.

ಯಾರೀ ಸುಂದರರಾಜನ್?

ಸಾಯುವ ಕಾಲಕ್ಕೆ ಎಪ್ಪತ್ತು ವರ್ಷವಾಗಿದ್ದ ಇವರು ಸಾಮಾನ್ಯ ವಕೀಲರಲ್ಲ. ತಿರುವಾಂಕೂರು ರಾಜವಂಶಕ್ಕೆ ಪರಂಪರಾಗತ ಕಾನೂನು ಸಲಹೆಗಾರರಾಗಿದ್ದ ಕುಟುಂಬದ ಕುಡಿಯಿವರು. ೧೯೬೪ರ ಬ್ಯಾಚಿನ ಐ.ಪಿ.ಎಸ್ ಅಧಿಕಾರಿ; ದಿ.ಇಂದಿರಾಗಾಂಧಿಯವರ ಆಪ್ತ ಅಂಗರಕ್ಷಕ ಸಿಬ್ಬಂದಿ ಪಡೆಯಲ್ಲಿದ್ದವರು. ನಿವೃತ್ತಿ ಪಡೆದ ನಂತರ ಕಾನೂನು ಅಭ್ಯಾಸವನ್ನು ಮಾಡಿ ವಕೀಲಿ ವೃತ್ತಿಯನ್ನು ಮಾಡಿಕೊಂಡಿದ್ದವರು. ಅಂದರೆ ದೇವಸ್ಥಾನದ ಎಲ್ಲಾ ವ್ಯವಹಾರಗಳನ್ನು ಹತ್ತಿರದಿಂದ ಕಂಡವರು ಮತ್ತು ತನ್ನ ಹಿರಿಯರ ಬಾಯಿಯಿಂದ ಕೇಳಿ ಬೆಳೆದವರು. ಸಂಸಾರವನ್ನು ಕಟ್ಟಿಕೊಳ್ಳದೆ ರಾಜಮನೆತನದವರೇ ಕೊಟ್ಟಿರುವ ಮನೆಯೊಂದರಲ್ಲಿ ದೇವಸ್ಥಾನದ ಸಮಿಪವೇ ವಾಸಮಾಡಿಕೊಂಡಿದ್ದಂತವರು. ಅಂತವರು ದೇವಸ್ಥಾನದ ಸಂಪತ್ತಿನ ದುರ್ವಿನಿಯೋಗವಾಗುತ್ತಿದೆ; ಅಲ್ಲಿಯ ಆಡಳಿತ ಪಾರದರ್ಶಕವಾಗಿರಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿತ್ತು. ಆದರೆ ರಾಜಮನೆತನದ ಈಗಿನ ಉತ್ತರಾದಿಕಾರಿ ತೊಂಬತ್ತರ ಹರೆಯದ ಉತ್ತರಾಡಂ ತಿರುನಾಳ್ ಮಾರ್ತಾಂಡವರ್ಮ ಅವರು ಅದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಸುಪ್ರೀಂ ಕೋರ್ಟ್ ಏಳು ಜನರ ತಜ್ನರ ಸಮಿತಿಯೊಂದನ್ನು ನೇಮಿಸಿತು.

ಸಮಿತಿಯಲ್ಲಿ ಕೇರಳ ಹೈಕೋರ್ಟ್ ನ ಇಬ್ಬರು ನಿವೃತ್ತ ನ್ಯಾಯಾದೀಶರು, ಒಬ್ಬರು ಹರಳು ತಜ್ನ, ರಾಜ್ಯ ಪ್ರಾಚ್ಯ ಇಲಾಖೆಯ ನಿರ್ದೇಶಕರು, ತಿರುವಾಂಕೂರು ರಾಜ ಮನೆತನದ ಒಬ್ಬರು ಸದಸ್ಯರು, ದೇವಸ್ಥಾನದ ಆಡಳಿತ ಮಂಡಳಿಯ ಒಬ್ಬರು ಸದಸ್ಯರು ಮತ್ತು ಕೇರಳ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಇರುತ್ತಾರೆ. ಅವರ ಉಸ್ತುವಾರಿಯಲ್ಲಿ ನೆಲಮಾಳಿಗೆಯಲ್ಲಿರುವ ಐದು ಕೋಣೆಗಳ ಬಾಗಿಲು ತೆರೆದು ಅದರಲ್ಲಿರುವ ಅಪಾರ ಸಂಪತ್ತನ್ನು ಸಮಿತಿ ಜಗತ್ತಿನೆದುರು ತೆರೆದಿಟ್ಟಿದೆ. ಆದರೆ ನಾಗಮುದ್ರಿಕೆಯಿಂದ ಬಂಧಿತವಾಗಿರುವ ಆರನೇ ಕೋಣೆಯ ಬಾಗಿಲನ್ನು ತೆರೆಯಲಾಗಿಲ್ಲ. ಒಂದು ಲಕ್ಷ ಕೋಟಿ ರೂಪಾಯಿಗಿಂತಲೂ ಅಧಿಕ ಮೌಲ್ಯದ ಬಂಗಾರವನ್ನು ಕಂಡು ಜನತೆ ದಂಗಾಗಿದೆ. ಸುಪ್ರೀಂ ಕೋರ್ಟ್ ಬಿ ಕೋಣೆಯ ಬಾಗಿಲು ತೆರೆಯುವುದನ್ನು ಮುಂದೂಡಿ ತಜ್ನರ ಮತ್ತು ರಾಜಮನೆತನದವರ ಸಲಹೆಯನ್ನು ಕೇಳಿದೆ.
ಈಗ ಇದಕ್ಕೆಲ್ಲಾ ಕಾರಣಪುರುಷನಾಗಿದ್ದ ಸುಂದರರಾಜನ್ ತೀರಿಕೊಂಡಿದ್ದಾರೆ.
ಅನಂತಪದ್ಮನಾಭನ ಸಂಪತ್ತನ್ನು ಒತ್ತಾಯಪೂರ್ವದಿಂದ ತೆಗೆದರೆ ಕೆಡುಕಾಗುತ್ತದೆ ಎಂಬ ಆಸ್ತಿಕರ ವಾದಕ್ಕೆ ಪುಷ್ಟಿ ದೊರೆತಿದೆ. ಈ ಮೊದಲೇ ಸುಪ್ರೀಂಕೋರ್ಟ್ ನೇಮಿಸಿದ್ದ ತಂಡದ ಸದಸ್ಯರೊಬ್ಬರ ತಾಯಿ ಇತ್ತೀಚೆಗೆ ತೀರಿಕೊಂಡಿದ್ದರು.ಇನ್ನೊಬ್ಬರ ಕಾಲಿಗೆ ಗಾಯವಾಗಿತ್ತು. ಹಾಗಾಗಿ ಅನಂತಪದ್ಮನಾಭನ ಮಹಿಮೆಗೆ ಇನ್ನಷ್ಟು ರೆಕ್ಕೆಪುಕ್ಕಗಳು ಹುಟ್ಟಿಕೊಂಡಿವೆ.

ಮುಂದೆ ಈ ಪ್ರಕರಣ ಯಾವ ರೀತಿಯಲ್ಲಿ ಮುಂದುವರಿಯಬಹುದು? ಗೊತ್ತಿಲ್ಲ. ಆದರೆ ಸುಂದರರಾಜನ್ ಅವರು ನ್ಯಾಯಾಲಯದಲ್ಲಿ ಹೂಡಿದ್ದು ಸಾರ್ವಜನಿಕ ಹಿತಾಸಕ್ತಿಯ ಅರ್ಜ. ಹಾಗಾಗಿ ಅದನ್ನು ಅವರ ಪರವಾಗಿ ಇನ್ಯಾರದರೂ ಮುಂದುವರಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಅದಕ್ಕೆ ಯಾರಾದರೂ ಮುಂದೆ ಬರುತ್ತಾರೆಯೇ ಎಂಬುದು ಈಗಿನ ಪ್ರಶ್ನೆ.

ಆದರೆ ಅದಕ್ಕಿಂತಲೂ ಮುಖ್ಯವಾಗಿ ಸುಂದರರಾಜನ್ ನಿಮಿತ್ತದಿಂದ ನಮ್ಮಲ್ಲಿ ಹಲವಾರು ಪ್ರಶ್ನೆಗಳು ಎದ್ದಿವೆ. ಅದರಲ್ಲೂ ಅಲ್ಲಿ ಅಷ್ಟೊಂದು ಸಂಪತ್ತು ಹೇಗೆ ಕ್ರೋಢಿಕರಣಗೊಂಡಿರಬಹುದು? ಮತ್ತು ಈಗ ಅದನ್ನು ಏನು ಮಾಡುವುದು? ಹೇಗೆ ಸುರಕ್ಷಿತವಾಗಿಡುವುದು? ಈ ಕುತೂಹಲದ ಪ್ರಶ್ನೆಗಳಿಗೆ ಇನ್ನೂ ಯಾವುದೇ ರೀತಿಯಲ್ಲಿ ಸಮಾಧಾನ ಸಿಕ್ಕಿಲ್ಲ.
ಅನಂತಪದ್ಮನಾಭ ದೇವಸ್ಥಾನ ರಾಜಾಶ್ರಯದ ದೇವಸ್ಥಾನ. ರಾಜ ಸಮೃದ್ಧನಾಗಿದ್ದನೆಂದರೆ ರಾಜ್ಯವೂ ಸುಭೀಕ್ಷವಾಗಿರುತ್ತಿತ್ತು. ಆತನ ಆದ್ಯತಾ ವಲಯಗಳಿಗೆಲ್ಲಾ ರಾಜ ಭಂಡಾರದಿಂದ ಧಾರಾಳ ಕೊಡುಗೆ ಸಿಗುತ್ತಿತ್ತು. ರಾಜ ಸಮೃದ್ಧನಾಗುವುದು ಹೇಗೆ? ಸಂಪತ್ತಿನ ಕ್ರೋಢಿಕರಣದಿಂದ. ಸಂಪತ್ತು ಕ್ರೋಢಿಕರಣವಾಗುವುದು ಹೇಗೆ? ಅದಕ್ಕೆ ಮೂರು ದಾರಿಗಳಿವೆ.ಮೊದಲನೆಯದು ವ್ಯಪಾರ ವಹಿವಾಟು. ಎರಡನೆಯದು ತೆರಿಗೆ. ಮೂರನೆಯದು ಕಾಣಿಕೆಯಿಂದ.

ಪ್ರಾಚೀನ ಕಾಲದಿಂದಲೂ ಭಾರತದ ಪಶ್ಚಿಮ ಕರಾವಳಿಯ ರಾಜರು ವಿದೇಶದೊಡನೆ ವಾಣಿಜ್ಯ ಸಂಬಂಧ ಹೊಂದಿದ್ದರು. ಇಲ್ಲಿಯ ಸಂಬಾರು ಪದಾರ್ಥಗಳಿಗೆ ಮುಖ್ಯವಾಗಿ ಕಾಳುಮೆಣಸಿಗೆ ಮದ್ಯಪ್ರಾಚ್ಯ ದೇಶಗಳಲ್ಲಿ ಬಹು ಬೇಡಿಕೆಯಿತ್ತು. ಭಾರತಕ್ಕೆ ಬ್ರಿಟೀಷ್ ರ ಆಗಮನದ ಬಹು ಹಿಂದೆಯೇ ತಿರುವಾಂಕೂರು ರಾಜರು ಗ್ರೀಸ್, ಈಜಿಪ್ಟ್, ರೋಮ್, ಡೆನ್ಮಾರ್ಕ್, ಪೋರ್ಚ್ ಗಲ್, ಫಿನ್ ಲ್ಯಂಡ್, ಪ್ರಾನ್ಸ್ ಮತ್ತು ಬ್ರಿಟನ್ ಜೊತೆ ಸಮುದ್ರ ಮಾರ್ಗವಾಗಿ ವ್ಯಾಪಾರ ಮಾಡುತ್ತಿದ್ದರು. ಕೊಲ್ಲಂ, ತಿರುವಾಂಕೂರು, ಪುರಕ್ಕಾಡು ಮತ್ತು ವಿಜನಾಂ ಅವರ ಪ್ರಮುಖ ಬಂದರುಗಳಾಗಿದ್ದವು. ಪೋರ್ಚ್ ಗಲ್ ವ್ಯಾಪಾರಿ ವಾಸ್ಕೋಡಗಾಮ ೧೪೯೮ರಲ್ಲಿ ಕೇರಳದ ಕೊಜಿಕ್ಕೋಡಿಗೆ ಬಂದಿಳಿದ. ಆಗಲೇ ಗೋವಾ ಅವರ ವಸಹಾತು ಆಗಿತ್ತು. ಸಂಬಾರು ಪದಾರ್ಥಗಳ ವ್ಯಾಪಾರದಲ್ಲಿ ಏಕಸ್ವಾಮ್ಯತೆ ಪಡೆಯುವುದು ಪೋರ್ಚ್ಗೀಸರ ಉದ್ದೇಶವಾಗಿತ್ತು. ಬ್ರಿಟೀಷ್ ಮತ್ತು ಡಚ್ಚರು ಅವರ ಪ್ರತಿಸ್ಪರ್ಧಿಗಳಾಗಿದ್ದರು. ಇಂಥ ಡಚ್ಚರನ್ನು ೧೭೪೧ರಲ್ಲಿ ತಿರುವಾಂಕೂರು ರಾಜ ಮಾರ್ತಾಂಡವರ್ಮ ಸೋಲಿಸಿದ್ದ. ಅವರ ಬಳಿ ಬಲಾಢ್ಯವಾದ ಸೈನವಿತ್ತು. ವಿದೇಶಿ ವಿನಿಮಯ ಚಿನ್ನದ ರೂಪದಲ್ಲಿ ನಡೆಯುತ್ತಿತ್ತು ಎಂಬುದು ಗಮನಾರ್ಹ.

ತಿರುವಾಂಕೂರು ರಾಜವಂಶ ಬಹು ಹಳೆಯ ಮತ್ತು ಸುದೀರ್ಘ ಕಾಲ ಕೇರಳದ ಬಹುಭಾಗವನ್ನು ಆಳಿದ ರಾಜಮನೆತನ. ಅಲ್ಲಿನ ಜನರಿಗೆ ರಾಜ ಪ್ರತ್ಯಕ್ಷ ದೈವನಾಗಿದ್ದ. ಆತನನ್ನು ಅವರು ’ಪೊನ್ನು ತಂಬುರನ್’ ಎಂದು ಕರೆಯುತ್ತಿದ್ದರು. ಹಾಗೆಂದರೆ ಚಿನ್ನದ ರಾಜ ಎಂಬುದಾಗಿತ್ತು. ಹಾಗೆ ಕರೆಯಲು ಕಾರಣವಿತ್ತು. ಅತನ ಬಳಿಯಲ್ಲಿ ಅಪಾರ ಪ್ರಮಾಣದ ಚಿನ್ನವಿತ್ತು. ಆತ ಚಿನ್ನದಲ್ಲಿ ತುಲಾಭಾರ ಮಾಡಿಸಿಕೊಂಡು ಆ ಚಿನ್ನವನ್ನು ಬ್ರಾಹ್ಮಣರಿಗೆ ದಾನ ಮಾಡುತ್ತಿದ್ದ.ಅದಕ್ಕೆ ’ತುಲಾ ಪುರುಷ ದಾನ’ವೆಂದು ಕರೆಯಲಾಗುತ್ತಿತ್ತು. ಅದಲ್ಲದೆ ರಾಜ ಪೊನ್ನ ತಂಬುರನೆಂದು ಕರೆಯಲು ಇನ್ನೊಂದು ವಿಶಿಷ್ಟ ಕಾರಣವಿತ್ತು. ಅದುವೇ ’ಪದ್ಮ ಗರ್ಭ ದಾನಂ’
ಪದ್ಮ ಗರ್ಭ ದಾನಂ ರಾಜನ ವಿಶೇಷ ಸ್ನಾನಕ್ಕೆ ಸಂಬಂಧಿಸಿದ್ದು.ತಾವರೆ ಹೂವಿನಾಕಾರ ದೊಡ್ಡ ಚಿನ್ನದ ಪಾತ್ರೆಯಲ್ಲಿ ನೀರಿನೊಂದಿಗೆ ಹಾಲು, ತುಪ್ಪ, ಚಂದನ, ಶ್ರೀಗಂಧ ಇನ್ನಿತರ ಸುಗಂಧ ದ್ರವ್ಯಗಳನ್ನು ಹಾಕಿ, ಅಂಥ ನೀರಿನಲ್ಲಿ ಬ್ರಾಹ್ಮಣರ ವೇದಘೋಷದ ನಡುವೆ ರಾಜ ಸ್ನಾನ ಮಾಡುತ್ತಾನೆ. ಹಾಗೆ ಸ್ನಾನ ಮಾಡಿ ಬಂದ ರಾಜನನ್ನು ಪ್ರಜೆಗಳು ಪೊನ್ನ ತಂಬುರನ್ ಎಂದು ಕರೆಯುತ್ತಿದ್ದರು.

ಜನಪ್ರಿಯ ರಾಜನಾಗುವುದು ಹೇಗೆ?

ಇತಿಹಾಸದಲ್ಲಿ ಉಲ್ಲೇಖಿಸಲ್ಪಟ್ಟ ಹಾಗೆ, ಕೆರೆಗಳನ್ನು ಕಟ್ಟಿಸಿದಾತ, ಅರವಟ್ಟಿಗೆಗಳನ್ನು[ದಾರಿಹೋಕರಿಗೆ ಕುಡಿಯುವ ನೀರಿನ ವ್ಯವಸ್ಥೆ] ನಿರ್ಮಿಸಿದಾತ, ಸಾಲು ಮರಗಳನ್ನು ನೆಡಿಸಿದಾತ, ಧರ್ಮಛತ್ರಗಳನ್ನು ಕಟ್ಟಿಸಿದಾತ, ದೇವಸ್ಥಾನಗಳಿಗೆ ಧಾರಾಳ ಉಂಬಳಿಗಳನ್ನು ಕೊಟ್ಟಾತ, ಪ್ರಜೆಗಳ ಮೇಲೆ ಅನಗತ್ಯ ತೆರಿಗೆಗಳನ್ನು ಹೊರಿಸದಾತ ಜನಾನುರಾಗಿ ರಾಜನೆನಿಸಿಕೊಳ್ಳುತ್ತಿದ್ದ.
ತಿರುವಾಂಕೂರು ರಾಜರು ಹಾಗಿದ್ದರೇ? ೧೭೫೦ರವರೆಗೆ ಇತಿಹಾಸ ಈ ಬಗ್ಗೆ ಏನನ್ನೂ ಹೇಳಿದಂತಿಲ್ಲ. ಆದರೆ ಅಂತರ್ಜಾಲವನ್ನು ಜಾಲಾಡಿದಾಗ ಆ ಕಾಲದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯ ಬಗ್ಗೆ ಒಂದಷ್ಟು ವಿವರಗಳು ದೊರೆತವು; 

ಪ್ರತಿಯೊಂದು ರಾಜವಂಶಕ್ಕೂ ದಂತ ಕಥೆಗಳಿರುತ್ತವೆ. ಐತಿಹ್ಯಗಳಿರುತ್ತವೆ. ಇತಿಹಾಸವಿರುತ್ತದೆ.
ತಿರುವಾಂಕೂರು ರಾಜಮನೆತನದ ಐತಿಹ್ಯ ಕ್ರಿಸ್ತ ಶಕದಿಂದಲೇ ಆರಂಭಗೊಳ್ಳುತ್ತದೆ. ಆಗ ಅವರನ್ನು ಚೇರರು ಎಂದು ಕರೆಯುತ್ತಿದ್ದರು. ಎಲ್ಲಾ ಅರಸರ ಹಾಗೆ ಅವು ಕೂಡಾ ರಾಜ್ಯ ವಿಸ್ತರಣೆಯಲ್ಲಿ ತೊಡಗಿದ್ದವು; ನೆರೆಯ ರಾಜ್ಯದವರೊಡನೆ ಯುದ್ಧ ಮಾಡುತ್ತಿದ್ದವು; ಸೋತ ರಾಜ್ಯವನ್ನು ದೋಚಿ ತಮ್ಮ ಬೊಕ್ಕಸ ತುಂಬಿಕೊಳ್ಳುತ್ತಿದ್ದವು. ರಾಜಿ ಸಂಧಾನದ ನೆಪದಲ್ಲಿ ಅನ್ಯ ರಾಜ್ಯದ ಹೆಣ್ಣುಮಕ್ಕಳನ್ನು ತಮ್ಮ ಅಂತಃಪುರ ತುಂಬಿಸಿಕೊಳ್ಳುತ್ತಿದ್ದರು. ಅಲ್ಲಿ ಕಠಿಣ ತೆರಿಗೆಯನ್ನು ವಿಧಿಸಿ ತಮ್ಮ ಭಂಡಾರ ತುಂಬಿಸಿಕೊಳ್ಳುತ್ತಿದ್ದರು ಏಳೆಂಟು ಶತಮಾನಗಳ ಕಾಲ ಆಳ್ವಿಕೆ ನಡೆಸಿದ ರಾಜಮನೆತನವೊಂದರ ಬೊಕ್ಕಸ ಸಂಪತ್ತಿನಿಂದ ತುಂಬಿ ತುಳುಕುತ್ತಿದ್ದರಲ್ಲಿ ಆಶ್ಚರ್ಯವೇನಿಲ್ಲ. ಅದೆಲ್ಲಾ ಸಾಮಾನ್ಯ. ಆದರೆ ಕ್ರಿ.ಶ.೧೭೫೦ರಲ್ಲಿ ರಾಜ ಮಾರ್ತಾಂಡವರ್ಮ ತನ್ನ ಸಮಸ್ತ ಸಂಪತ್ತೆಲ್ಲವನ್ನು ಅನಂತಪದ್ಮನಾಭನಿಗೆ ಅರ್ಪಿಸಿ ಯಾಕೆ ಪದ್ಮನಾಭ ದಾಸನಾದ? . ಅಂತಹ ವೈರಾಗ್ಯ ಉಂಟಾಗುವಂತಹ ಯಾವ ಘಟನೆ ಆತನ ಬದುಕಿನಲ್ಲಿ ಘಟಿಸಿರಬಹುದು?

ತಿರುವಾಂಕೂರು ಅರಮನೆಯ ಪುರಾತನ ದಾಖಲೆಗಳಾದ ’ಮತಿಲಾಕಂ ರೆಕಾರ್ಡ್ಸ್’ ಅನ್ನು ಉಲ್ಲೆಖಿಸಿ ಇತ್ತೀಚೆಗೆ ಇಂಗ್ಲೀಷ್ ಪತ್ರಿಕೆಯೊಂದು ಲೇಖನವೊಂದನ್ನು ಪ್ರಕಟಿಸಿತ್ತು. ಅದರಲ್ಲಿ ರಾಜ ಮಾರ್ತಾಂಡವರ್ಮ ಯಾಕೆ ಪದ್ಮನಾಭದಾಸನಾದ ಎಂಬುದರ ಬಗ್ಗೆ ಸುಳಿವುಗಳಿವೆ. ’ಮತಿಲಾಕಂ’ ಎಂದರೆ ಅರಮನೆಯ ದಾಖಲೆಗಳು ಎಂದರ್ಥ. ಮಲೆಯಾಳಂ ಕವಿ ಉಳ್ಳೂರು ಎಸ್ ಪರಮೇಶ್ವರನ್ ಅಯ್ಯರ್ ೧೯೪೧ರಲ್ಲಿ ರಾಜಮನೆತನ ಮತ್ತು ದೇವಸ್ಥಾನದ ಇತಿಹಾಸದ ದಾಖಲೆಗಳನ್ನು ಸಂಕಲಿಸಿ ದಾಖಲಿಸಿದ್ದಾರೆ. ಇದರಲ್ಲಿ ಅನಂತಪದ್ಮನಾಭನ ನೆಲಮಾಳಿಗೆಯ ಕೊಠಡಿಗಳಲ್ಲಿ ಕೂಡಿಟ್ಟ ಸಂಪತ್ತಿನ ವಿವರಗಳಿವೆ
’ಮತಿಲಾಕಂ’ನಲ್ಲಿ ದೊರಕಿದ ವಿವರಗಳನ್ನು ಓದುತ್ತಿದ್ದರೆ ರಾಜ ಮಾರ್ತಾಂಡ ಮುಂದಾಲೋಚನೆಯಿದ್ದ, ಅತ್ಯಂತ ಚಾಣಕ್ಷ್ಯ ದೊರೆ ಎಂಬುದು ಗೊತ್ತಾಗುತ್ತದೆ. ಆತ ಪದ್ಮನಾಭದಾಸನಾದ ಹಿನ್ನೆಲೆಯನ್ನು ಗಮನಿಸಿದರೆ ಅದರಲ್ಲಿ ವೈರಾಗ್ಯ ಗೋಚರಿಸುವುದಿಲ್ಲ. ಬದಲಾಗಿ ಅದು ಆತನ ಪ್ರಭುದ್ಧ ರಾಜಕೀಯ ನಡೆಯೆಂದು ಗೊತ್ತಾಗುತ್ತದೆ.

ಹದಿನೈದನೇ ಶತಮಾನದವರೆಗೆ ಪದ್ಮನಾಭಸ್ವಾಮಿಯ ಆಡಳಿತವನ್ನು ’ಎಟ್ಟರ ಯೋಗಂ’ಎನ್ನುವ ಮಂಡಳಿ ನಿರ್ವಹಿಸುತ್ತಿತ್ತು. ಇದು ಅತ್ಯಂತ ಪ್ರಭಾವಶಾಲಿಯಾದ ಬ್ರಾಹ್ಮಣರ ಕೂಟದಂತಿತ್ತು. ಒಂಬತ್ತು ಮಂದಿ ಇದರಲ್ಲಿ ಇದ್ದರೂ ಇದಕ್ಕೆ ಓಟಿನ ಅಧಿಕಾರವಿರುವುದು ಎಂಟುವರೆಯಷ್ಟೇ. ಇದರಲ್ಲಿ ಅರ್ಧ ಓಟಿನ ಅಧಿಕಾರವಿರುವುದು ಯಾರಿಗೆ ಗೊತ್ತೇ? ರಾಜನಿಗೆ. ಅಶ್ಚರ್ಯ ಪಡಬೇಕಾಗಿಲ್ಲ. ರಾಜ ಮನೆತನಕ್ಕೆ ನಿಜವಾಗಿಯೂ ಯವುದೇ ಅಧಿಕಾರವಿರಲಿಲ್ಲ. ಅವರು ನಾಮಕಾವಸ್ಥೆಯ ರಾಜರು. ಎತ್ತರಯೋಗಂನ ಉಳಿದ ಎಂಟು ಜನರಲ್ಲಿ ಏಳು ಮಂದಿ ಮಲೆಯಾಳಿ ಬ್ರಾಹ್ಮಣರಾಗಿದ್ದರೆ ಒಬ್ಬರು ನಾಯರ್ ಜಾತಿಗೆ ಸೇರಿದವರಾಗಿದ್ದರು.

’ಎಟ್ಟರ ಯೋಗಂ’ನ ಅಧಿಕಾರ ವ್ಯಾಪ್ತಿ ಕೇವಲ ದೇವಸ್ಥಾನಕ್ಕಷ್ಟೇ ಸೀಮಿತವಾಗಿರಲಿಲ್ಲ.ಬದಲಾಗಿ ಅದು ರಾಜ್ಯಾಡಳಿತಕ್ಕೂ ವ್ಯಾಪಿಸಿಕೊಂಡಿತ್ತು. ಅದು ತಿರುವಾಂಕೂರು ರಾಜ್ಯವನ್ನು ಎಂಟು ಮಂಡಲಗಳಾಗಿ ವಿಭಜಿಸಿತ್ತು. ಪ್ರತಿಯೊಂದು ಮಂಡಲಕ್ಕೂ ನಾಯರ್ ಜಾತಿಗೆ ಸೇರಿದ ವ್ಯಕ್ತಿಯನ್ನು ಮುಖ್ಯಸ್ಥನನ್ನಾಗಿ ನೇಮಿಸಲಾಗಿತ್ತು. ಈ ಎಂಟು ಮಂದಿ ರಾಜನಿಗಿಂತಲೂ ಹೆಚ್ಚು ಅಧಿಕಾರ ಹೊಂದಿದ್ದರು. ಮತ್ತು ಅತ್ಯಂತ ಕ್ರೂರ ತೆರಿಗೆ ಪದ್ದತಿಯನ್ನು ಪ್ರಜೆಗಳ ಮೇಲೆ ವಿದಿಸಿದ್ದರು. ಅದರಲ್ಲಿಯೂ ಕೆಳಜಾತೀಯ ಜನರಿಗೆ ಮದುವೆಯಾದರೆ, ಮಕ್ಕಳು ಹುಟ್ಟಿದರೆ ಕೊನೆಗೆ ಸತ್ತಾಗಲೂ ತೆರಿಗೆ ಹಾಕುತ್ತಿದ್ದರು. ನಾಡದೋಣಿ, ನೇಗಿಲು, ಎತ್ತಿನ ಗಾಡಿ, ಮುಂಡಾಸು, ಕೊಡೆ ಅಷ್ಟೇಕೆ ಮೀಸೆ ಬಿಡಬೇಕಾದರೂ ತೆರಿಗೆ ಕಟ್ಟಬೇಕಾಗಿತ್ತು.ತಾಯಂದಿರು ತಮ್ಮ ಮಕ್ಕಳಿಗೆ ಹಾಲುಣಿಸಬೇಕದರೂ ತೆರಿಗೆ ಕಟ್ಟಬೇಕಾಗಿತ್ತು. ಆ ತೆರಿಗೆಅನ್ನು ’ಮುಲಕ್ಕಾರಮ್’ ಎಂದು ಕರೆಯಲಾಗಿದೆ. ಇಂಥ ಅನಾಗರಿಕ, ಹೀನ ತೆರಿಗೆಯನ್ನು ಚೆರತ್ತಾಲಿನ ಕಪುಂತಾಲ ಮನೆತನದ ನಂಗಲಿ ಎಂಬ ಹೆಣ್ಣುಮಗಳು ಪ್ರತಿಬಟಿಸಿದ ಬಗ್ಗೆ ’ಮತಿಲಾಕಂ ರೆಕಾರ್ಡ್ಸ್’ನಲ್ಲಿ ದಾಖಲಾಗಿದೆ. ಮತ್ತೂರು ಪಣಿಕ್ಕರ್ ಮಂಡಲಾಧಿಪತಿಯಾಗಿದ್ದ ಕಾಲದಲ್ಲಿ ಆತನ ಪ್ರತಿನಿಧಿ ಬಂದು ಆ ಹಸುಕಂದನ ತಾಯಿಯಲ್ಲಿ ’ಮುಲಕ್ಕಾರಮ್’ ತೆರಿಗೆಯನ್ನು ಕೇಳಿದ್ದಾನೆ. ಆಗ ಆಕೆ ಒಳಗೆ ಹೋದವಳೇ ಎರಡೂ ಮೊಲೆಗಳನ್ನು ಕೊಯ್ದು ತಂದು ಅವನ ಕೈಗಿಟ್ಟವಳೇ ರಕ್ತಸ್ರಾವದಿಂದ ಕುಸಿದು ಬಿದ್ದು ಸಾವನ್ನಪ್ಪುತ್ತಾಳೆ.
ಇಂಥ ತೆರಿಗೆಗಳಿಂದ ಸಂಗ್ರಹವಾದ ಧನ ಕನಕಗಳು ಕೂಡಾ ಇಂದು ಪದ್ಮನಾಭಸ್ವಾಮಿಯ ಪಾದಮೂಲದಲ್ಲಿ ಸಿಗುತ್ತಿರುವ ಸಂಪತ್ತಿನ ಜೊತೆ ಸೇರಿಕೊಂಡಿವೆ. ಅದನ್ನು ಅಲ್ಲಿ ತುಂಬಿಸಿಟ್ಟವನೇ ರಾಜ ಮಾರ್ತಾಂಡವರ್ಮ. ಆತ ರಾಜ ಭಂಡಾರವನ್ನೆಲ್ಲಾ ಅಲ್ಲಿ ಯಾಕೆ ಹುದುಗಿಸಿಟ್ಟ?

೧೭೦೬ರಲ್ಲಿ ಜನಿಸಿದ ಮಾರ್ತಾಂಡವರ್ಮ ಎಟ್ಟರಯೋಗಂ ಸದಸ್ಯರ ಹೀನ ಕೃತ್ಯಗಳನ್ನು ಗಮನಿಸುತ್ತಲೇ ಬಂದಿದ್ದಾನೆ.ಈ ಹಿಂದೆ ಮಹಾರಾಜ ಆದಿತ್ಯವರ್ಮ ಅರಮನೆಯೊಂದನ್ನು ಕಟ್ಟಬೇಕೆಂದು ಆಸೆ ಪಟ್ಟಾಗ ಅದನ್ನುಎಟ್ಟಾರ ಯೋಗಂ ನಿರಾಕರಿಸಿತ್ತಲ್ಲದೆ ಅನಂತರದಲ್ಲಿ ಅವನ ಕೊಲೆಯನ್ನೂ ಮಾಡಿತ್ತು. ರಾಣಿ ಉಮ್ಮಾಯಮ್ಮನ ಐದು ಮಕ್ಕಳನ್ನು ಕೂಡಾ ಇವರೇ ಕೊಲ್ಲಿಸಿದ್ದರು. ರಾಜಮನೆತನದ ವಿರುದ್ಧ ಎಟ್ಟರಯೋಗಂ ಸದಾ ಸಂಚು, ಪಿತೂರಿಗಳನ್ನು ನಡೆಸುತ್ತಿತ್ತು. ಆ ಪಿತೂರಿನ ಒಂದು ಭಾಗವೇ ರಾಜಾ ಮರ್ತಾಂಡವರ್ಮನ ಕೊಲೆ ಸಂಚು.

ಮಾರ್ತಾಂಡವರ್ಮ ಬುದ್ಧಿವಂತನಾಗಿದ್ದ. ಮುತ್ಸದ್ದಿಯಾಗಿದ್ದ. ತಾನು ಇನ್ನೂ೧೭ ವರ್ಷದವನಾಗಿದ್ದಾಗಲೇ ಅಂದರೆ ೧೭೨೩ರಲ್ಲೇ ಇಂಗೀಷರೊಡನೆ ರಾಜಕೀಯ ಒಪ್ಪಂದ ಮಾಡಿಕೊಂಡ. ಆತನ ಸಲಹೆಯಂತೆ ತಿರುವಾಂಕೂರು ರಾಜ್ಯವನ್ನಾಳುತ್ತಿದ್ದ ರಾಜಾ ರವಿವರ್ಮ ಮಧುರೈ ರಾಜನ ಜೊತೆ ಸೌಹಾರ್ಧ ಸಂಬಂಧವಿಟ್ಟುಕೊಂಡ. ಈತ ತಮ್ಮ ಅಂಕೆಯನ್ನು ಮೀರಿ ಬೆಳೆಯುತ್ತಿದ್ದಾನೆ ಎಂಬುದನ್ನು ಮನಗಂಡ ’ಎಟ್ಟರಯೋಗಂ’ ಮಾರ್ತಾಂಡನ ಕೊಲೆ ಮಾಡಲು ನಿರ್ದರಿಸಿತು.
ತನ್ನ ಕೊಲೆಯ ಸಂಚನ್ನು ಹೇಗೋ ಅರಿತುಕೊಂಡ ಯುವಕ ಮರ್ತಾಂಡವರ್ಮ ಅರಮನೆಯಿಂದ ತಪ್ಪಿಸಿಕೊಂಡು ಹೋಗಿ ಹಲಸಿನ ಮರದ ರೆಂಬೆಗಳೆಡೆಯಲ್ಲಿ ಅಡಗಿ ಕುಳಿತು ಜೀವ ಉಳಿಸಿಕೊಂಡ. ಹಾಗೆ ದೇಶಭ್ರಷ್ಟನಾದ ಮಾರ್ತಾಂಡವರ್ಮ ನೆರೆಯ ರಾಜ್ಯಗಳ ಸಹಾಯದಿಂದ ಸೈನ್ಯ ಕಟ್ಟಿ ’ಎಟ್ಟರಯೋಗಂ’ದ ಮೇಲೆ ದಂಡೆತ್ತಿ ಬಂದ. ಎಟ್ಟರ ನಿಯೋಗದ ಎಂಟೂ ಮಂದಿಯನ್ನೂ ಕೊಂದು ಹಾಕಿ ತಾನು ರಾಜನಾದ. ಇತಿಹಾಸದ ದಾಖಲೆಗಳ ಪ್ರಕಾರ ಆತ ಪಟ್ಟವೇರಿದ್ದು ೧೭೨೯ರಲ್ಲಿ. ಆಗ ಆತನಿಗೆ ಇಪ್ಪತ್ತನಾಲ್ಕು ವರ್ಷ. ಆತ ತನ್ನ ಕಿರೀಟವನ್ನು ಪದ್ಮನಾಭನ ಪಾದಕ್ಕೊಪ್ಪಿಸಿ ಪದ್ಮನಾಭದಾಸನಾದದ್ದು ೧೭೫೦ರಲ್ಲಿ. ಇದರ ನಡುವಿನ ಇಪ್ಪತ್ತೊಂದು ವರ್ಶದಲ್ಲಿ ಆತ ಮಾಡಿದ್ದಾದರೂ ಎನು?

ಮೊತ್ತ ಮೊದಲನೆಯದಾಗಿ ಆತ ೧೭೨೪ರಲ್ಲಿ ಎಟ್ಟರ ನಿಯೋಗದ ಕಾಲಾವಧಿಯಲ್ಲಿ ಪ್ರಾರಂಭಗೊಂಡ ದೇವಸ್ಥಾನದ ಪುನರ್ ನಿರ್ಮಾಣದ ಕಾರ್ಯವನ್ನು ತ್ವರಿತ ಗತಿಯಲ್ಲಿ ಮುಗಿಸಿದ. ರಾಜ್ಯದ ಅಭಿವೃದ್ದಿಯತ್ತ ಗಮನ ಹರಿಸಿದ. ಕೃಷಿಗೆ ವಿಶೇಷ ಒತ್ತು ನೀಡಿದ ರಾಜನೀತ. ಅನೇಕ ಅಣೆಕಟ್ಟುಗಳನ್ನು ಕಟ್ಟಿ ನೀರಾವರಿಗೆ ಅನುಕೂಲ ಮಾಡಿದ. ಇದರಿಂದಾಗಿ ಭತ್ತದಲ್ಲಿ ಎರಡು ಬೆಳೆ ತೆಗೆಯುವಂತಾಯಿತು.ಅನಂತರ ಇತಿಹಾಸದಿಂದ ತಿಳಿದು ಬಂದ ಪ್ರಕಾರ ಆತ ಅನೇಕ ಯುದ್ದಗಳಲ್ಲಿ ಭಾಗಿಯಾದ ಮತ್ತು ಎಲ್ಲವುದರಲ್ಲಿ ಗೆಲ್ಲುತ್ತಾ ಹೋದ. ಅದರಲ್ಲಿ ೧೭೪೧ರಲ್ಲಿ ನಡೆದ ಡಚ್ ವಿರುದ್ದದ ಗೆಲುವು ಪ್ರಮುಖವಾದುದು. ಯುದ್ದ ಗೆದ್ದಂತೆಲ್ಲಾ ರಾಜನ ಬೊಕ್ಕಸ ತುಂಬಿ ತುಳುಕತೊಡಗಿತು. ಹಾಗೇ ಶೇಖರವಾಗುತ್ತಲೇ ಹೋಗುತ್ತಿರುವ ಬಂಗಾರವನ್ನು ಶತ್ರುಗಳಿಂದ ರಕ್ಷಿಸಿಕೊಳ್ಳುವ ಚಿಂತೆ ಕಾಡತೊಡಗಿತು. ಅದಾಗಲೇ ಮೈಸೂರಿನ ಅರಸ ಹೈದರಾಲಿ ಕೇರಳದ ಸಣ್ಣಪುಟ್ಟ ರಾಜರನ್ನು ಸೋಲಿಸಿ ಮುಂದೊತ್ತಿ ಬರುತ್ತಿದ್ದ. ಬ್ರಿಟೀಷರು ನಮ್ಮ ದೇಶದ ಸಂಪತ್ತೆಲ್ಲವನ್ನೂ ಹಡಗುಗಳಲ್ಲಿ ಹೇರಿಕೊಂಡು ತಮ್ಮ ದೇಶಕ್ಕೆ ಸಾಗಿಸುತ್ತಿದ್ದರು. ಇದನ್ನೆಲ್ಲಾ ಮನಗಂಡ ಮಾರ್ತಾಂಡವರ್ಮ ಪದ್ಮನಾಭ ದಾಸ ನಾಗುವ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆಗಳಿವೆ.
 
೧೭೫೦ ಜನವರಿ ೩ರಂದು ಮಾರ್ತಾಂಡವರ್ಮ ಪದ್ಮನಾಭದಾಸನಾದ. ಅಂದರೆ ತಿರುವಾಂಕೂರು ರಾಜ್ಯದ ರಾಜ ಸಾಕ್ಷಾತ್ ಅನಂತಪದ್ಮನಾಭ. ಆತನ ಪ್ರತಿನಿಧಿಯಾಗಿ ಮಾರ್ತಾಂಡವರ್ಮ ರಾಜ್ಯಬಾರ ನಡೆಸತೊಡಗಿದ. ಈ ಚತುರ ನಡೆ ಅವನನ್ನು ಬಹು ಎತ್ತರಕ್ಕೆ ಕೊಂಡೊಯ್ಯ್ದಿತ್ತು. ನೆರೆಯ ಯಾವ ರಾಜರೂ ತಾವಾಗಿ ಯುದ್ದಕ್ಕೆ ಅಣಿಯಾಗಲಿಲ್ಲ. ಯಾರಾದರೂ ದೇವರ ಮೇಲೆ ಯುದ್ದಕ್ಕೆ ಹೋಗುತ್ತಾರೆಯೇ? ಹಾಗೆಯೇ ದೇವರನ್ನು ಸಂಪ್ರೀತಗೊಳಿಸಲು, ಅವನ ಅನುಗ್ರಹ ಪಡೆಯಲು ನೆರೆಯ ರಾಜರೂ ಸೇರಿದಂತೆ ಪ್ರಜೆಗಳು ರಾಶಿ ರಾಶಿ ಕಾಣಿಕೆಗಳನ್ನು ತಂದು ಪದ್ಮನಾಭನ ಸನ್ನಿದಿಗೆ ಅರ್ಪಿಸತೊಡಗಿದರು. ಪದ್ಮನಾಭ ಸ್ರೀಮಂತನಾಗುತ್ತಲೇ ಹೋದ.

ನೇರವಾಗಿ ಪದ್ಮನಾಭನಿಗೆ ಬಂದ ಸಂಪತ್ತು ಮತ್ತು ರಾಜ್ಯ ಬೊಕ್ಕಸಕ್ಕೆ ಹರಿದು ಬಂದ ಸಂಪತ್ತು ಇವನ್ನೆಲ್ಲಾ ಕಾಪಾಡಿಕೊಳ್ಳುವುದು ಮಾರ್ತಾಂಡವರ್ಮನಿಗೆ ಚಿಂತೆಯಾಯಿಗಿರಬೇಕು ಅಥವಾ ಅತನ ವೈರಾಗ್ಯಕ್ಕೆ ಇನ್ಯಾವುದೋ ಬಲವಾದ ಕಾರಣ ಇದ್ದಿರಲೂಬಹುದು.ಹಾಗಾಗಿ ಅದನ್ನೆಲ್ಲಾ ಪದ್ಮನಾಭನ ಸನ್ನಿಧಿಯಲ್ಲಿರುವ ನೆಲಮಾಳಿಗೆಯಲ್ಲಿ ಕೂಡಿಟ್ಟ. ಆದರೆ ಆತನ ವ್ಯಕ್ತಿತ್ವ ಮಾಗಿದೆ ಎಂಬುದಕ್ಕೆ ಉದಾಹರಣೆಗಳು ಸಿಗುತ್ತವೆ. ೧೭೫೩ರ ಅಗಸ್ಟ್ ೧೫ರಂದು ಆತ ಡಚ್ಚರೊಡನೆ ಶಾಂತಿ ಮತ್ತು ಸೌಹಾರ್ಧದ ಒಪ್ಪಂದ ಮಾಡಿಕೊಳ್ಳುತ್ತಾನೆ. ತಾನು ಸಾಯುವ ಮೊದಲು[೧೭೫೮] ಮುಂದಿನ ರಾಜ ತನ್ನಳಿಯ ಧರ್ಮರಾಜನನ್ನು ಕರೆದು ರಾಜಮನೆತನದವರು ಎಂದೂ ಪರಸ್ಪರ  ಜಗಳವಾಡಬಾರದೆಂದು ಬುದ್ಧಿವಾದ ಹೇಳುತ್ತಾನೆ. ಮುಖ್ಯಾವಾಗಿ ರಾಜ್ಯದ ಆಧಾಯಕ್ಕಿಂತ ಖರ್ಚು ಹೆಚ್ಚಾಗಬಾರದೆಂದು ಸೂಚನೆ ನೀಡುತ್ತಾನೆ.
ಬಹುಶಃ ಅನಂತಪದ್ಮನಾಬನ ಸಂಪತ್ತಿನ ದೂಳಿನ ಕಣವೂ ತಮಗೆ ಬೇಡ ಎಂಬ ತಿರ್ಮಾನ ಇಲ್ಲಿಂದಲೇ ಆಗಿರಬೇಕು . ಈಗಲೂ ರಾಜ ಪರಿವಾರದವರು ದೇವರ ದರ್ಶನವಾದ ಮೇಲೆ ಕಾಲೊರಸಿಕೊಂಡು ಹೊರಬರುವ ಸಂಪ್ರದಾಯವಿದೆ. ಅಥವಾ ಆ ಸಂಪತ್ತು ಬಡವರ ಬೆವರು ಮತ್ತು ರಕ್ತದಿಂದ ತೊಯ್ದಿದೆ ಅದು ತಮ್ಮನ್ನು ಅಂಟಿಕೊಳ್ಳದಿರಲಿ ಎಂಬ ಪ್ರಾಯಶ್ಚಿತ ಭಾವವೂ ಕಾರಣವಾಗಿರಬಹುದೇ? ಗೊತ್ತಿಲ್ಲ.

ಅದರೆ ಸಾಮಾಜಿಕವಾಗಿ ನೋಡಿದರೆ ತಿರುವಾಂಕೂರು ಅರಸರ ಕಾಲದಲ್ಲಿ ಅನೇಕ ಸಾಮಾಜಿಕ ಅನಿಷ್ಟಗಳು ಜಾರಿಯಲ್ಲಿದ್ದವು .ಜಾತಿ ಬೇದ ಉಚ್ಛ್ರ್ಯಾಯ ಸ್ಥಿತಿಯಲ್ಲಿತ್ತು.೧೯ನೆ ಶತಮಾನದ ತನಕ ತಿರುವಾಂಕೂರು, ಕೊಚ್ಚಿನ್ ಮಲಬಾರ್ ಗಳಲ್ಲಿ ಕೆಳಜಾತೀಯ ಸ್ತ್ರೀಯರು ತೆರೆದೆದೆಯಲ್ಲಿ ಓಡಾಡಬೇಕಾಗಿತ್ತು. ಅದಕ್ಕಾಗಿ ವೈಕುಂಠಸ್ವಾಮಿ ನೇತೃತ್ವದಲ್ಲಿ ೧೮೧೮ರಲ್ಲಿ ಬಹುದೊಡ್ಡ ಚಳುವಳಿಯೇ ನಡೆಯಿತು. ಈ ಕಾಲಘಟ್ಟದಲ್ಲಿ ಅನೇಕ ಸ್ತ್ರೀಯರು ಕ್ರಿಶಿಯನ್ ಧರ್ಮಕ್ಕೆ ಮತಾಂತರಗೊಂಡರು. ಕೇರಳದ ಜಾತಿ ಮೌಡ್ಯವನ್ನು ಕಂಡ ವಿವೇಕಾನಂದರು ಈ ರಾಜ್ಯವನ್ನು ’ಜಾತಿ ಭೇದದ ಹುಚ್ಚರ ಅಶ್ರಯ ತಾಣ’ ಎಂದು ಕರೆದಿದ್ದರು. ತಮ್ಮಗೆ ’ಕುಪ್ಪಾಯಂ’ [ ಮೇಲುಡಿಗೆ] ಧರಿಸಲು ಅನುಮತಿ ನೀಡಬೇಕೆಂದು ಕೇರಳದ ಹೆಂಗಸರು ಆಗಿನ ಮದ್ರಾಸ್ ಗವರ್ನರನ್ನು ಕೇಳಿಕೊಂಡಿದ್ದರು. ಜುಲೈ೨೬ ೧೮೮೯ರಲ್ಲಿ ಈ ಕುರಿತಾಗಿ ಗವರ್ನರರು ತಿರುವಾಂಕೂರು ರಾಜರಿಗೆ ನಿರ್ದೇಶನ ನೀಡಿ ಅವರಿಗೆ ಕುಪ್ಪಾಯಂ ಧರಿಸಲು ಅಡ್ಡಿಮಾಡಬಾರು ಎಂದ ಆದೇಶ ನೀಡಿದ್ದು ದಾಖಲೆಯಲ್ಲಿದೆ.

ಹೇಳುತ್ತಾ ಹೋದರೆ ಚರಿತ್ರೆ ಮುಗಿಯುವುದೇ ಇಲ್ಲ.

ಒಳ್ಳೆಯ ಉದ್ದೇಶದಿಂದ ಅನಂತ ಪದ್ಮನಾಭನ ಸಂಪತ್ತನ್ನು ಹೊರಜಗತ್ತಿಗೆ ತೋರಿಸಲು ಕಾರಣಕರ್ತರಾಗಿದ್ದ ಸುಂದರರಾಜನ್ ಸಾವು ಆಕಸ್ಮಿಕವಲ್ಲ. ಅದು ವಯೋಸಹಜ ತೊಂದರೆಗಳಿಂದಾದ ಸಹಜ ಸಾವು. 

ಅನಂತಪದ್ಮನಾಭನ ಸಂಪತ್ತು ಯಾವ ಮೂಲದಿಂದಲೇ ಬಂದಿರಲಿ. ಅದೀಗ ಪಾರಂಪರಿಕ ಮೌಲ್ಯವುಳ್ಳದ್ದು ಅದು ಕೇವಲ ಚಿನ್ನ ಮಾತ್ರ ಅಲ್ಲ! ದೇಶದ ಸಂಪತ್ತು

9 comments:

ರಾಜೇಶ್ ನಾಯ್ಕ said...

ಮಾಹಿತಿಯುಕ್ತ ಬರಹ. ಬಹಳ ವಿಷಯಗಳನ್ನು ಸಂಗ್ರಹಿಸಿ ಬರೆದಿದ್ದೀರಿ. ಅನಂತನ ಸಂಪತ್ತಿನ ಮೂಲದ ಬಗ್ಗೆ ತಿಳಿದಂತಾಯಿತು. ಧನ್ಯವಾದಗಳು.

www.kumararaitha.com said...

ಅಪಾರ ಸಂಪತ್ತಿನ ಸುತ್ತ ನಡೆಯುವ ವಿದ್ಯಮಾನಗಳು ವಿಷಾದ ಮೂಡಿಸುತ್ತವೆ.

sunaath said...

ಕುತೂಹಲಕರ ಇತಿಹಾಸವನ್ನು ತೆರೆದಿಟ್ಟಿದ್ದೀರಿ. ಧನ್ಯವಾದಗಳು.

ತೇಜಸ್ವಿನಿ ಹೆಗಡೆ said...

very good & informative article. Thanks.

ಮನಸು said...

ಕುತೂಹಲಕಾರಿ ಮಾಹಿತಿ.. ಧನ್ಯವಾದಗಳು

ಸುಧೇಶ್ ಶೆಟ್ಟಿ said...

ಈ ಬರಹಕ್ಕೆ ಕಾಯುತ್ತಾ ಇದ್ದೆ. ತು೦ಬಾ ಚೆನ್ನಾಗಿ, ಕುತೂಹಲ ಕಾರಿಯಾಗಿದೆ... ತು೦ಬಾ ಮಾಹಿತಿ ಕಲೆ ಹಾಕಿದ್ದೀರಿ.... :)

minchulli said...

"ಮತ್ತೂರು ಪಣಿಕ್ಕರ್ ಮಂಡಲಾಧಿಪತಿಯಾಗಿದ್ದ ಕಾಲದಲ್ಲಿ ಆತನ ಪ್ರತಿನಿಧಿ ಬಂದು ಆ ಹಸುಕಂದನ ತಾಯಿಯಲ್ಲಿ ’ಮುಲಕ್ಕಾರಮ್’ ತೆರಿಗೆಯನ್ನು ಕೇಳಿದ್ದಾನೆ. ಆಗ ಆಕೆ ಒಳಗೆ ಹೋದವಳೇ ಎರಡೂ ಮೊಲೆಗಳನ್ನು ಕೊಯ್ದು ತಂದು ಅವನ ಕೈಗಿಟ್ಟವಳೇ ರಕ್ತಸ್ರಾವದಿಂದ ಕುಸಿದು ಬಿದ್ದು ಸಾವನ್ನಪ್ಪುತ್ತಾಳೆ.
ಇಂಥ ತೆರಿಗೆಗಳಿಂದ ಸಂಗ್ರಹವಾದ ಧನ ಕನಕಗಳು ಕೂಡಾ ಇಂದು ಪದ್ಮನಾಭಸ್ವಾಮಿಯ ಪಾದಮೂಲದಲ್ಲಿ ಸಿಗುತ್ತಿರುವ ಸಂಪತ್ತಿನ ಜೊತೆ ಸೇರಿಕೊಂಡಿವೆ." ಅಂದರೆ, ಅದು ಬೆವರು ಸುರಿಸಿ ಮಾಡಿದ ಸಂಪತ್ತಲ್ಲ.. ಯಾರದೋ ರಕ್ತ ಹರಿಸಿ ಮಾಡಿದ ಧನ ಕನಕ ಅಂತ ಗೊತ್ತಾದ ಮೇಲೆ ಯಾಕೋ ಈ ವರೆಗೆ ಇದ್ದ ಸುನೀತ ಭಾವ ಮರೆಯಾಗಿ ಒಂಥರಾ ಅಸಹ್ಯ ಹುಟ್ಟಿದೆ. Anyway Good info. Thanks.

Venkatesh said...

cycribilLong back I had read a story about the huge treasure hunt takes place in Rajastan Fort Area.There is some treasure hidden in the forest is protected by
adi vasis a Trible people. The story published in "Kasturi"kannada monthly.But now The treasure of Anantha padmanabha Shows the whole world that Indians are much rich people in the country along with treadition. Every one should proud of our Treasure.My solute Sri sundararajan may his soul rest in the feets of Anantha Padmanabha.

Anonymous said...

thanks for the informative article.