Friday, August 5, 2011

ಡಿ ವಿ ಯವರ ಕಾಲ್ಗೆಟ್ ನಗು ಮತ್ತು ಒರಿಯೊರ್ದೊರಿ ಅಸಲ್’





ನಿನ್ನೆ ನಮ್ಮ ಮುಖ್ಯಮಂತ್ರಿಯಾಗಿ ಸದಾನಂದ ಗೌಡರು ಪದವಿ ಅಲಂಕರಿಸಿದ್ದನ್ನು ಕಣ್ತುಂಬಿಸಿಕೊಂಡ ಹೊತ್ತಿನಲ್ಲೇ ಅವರ ನಗುವನ್ನು ಶಾಶ್ವತವಾಗಿರಿಸಿಕೊಳ್ಳುವ ಹುಚ್ಚು ಆಲೋಚನೆಯೊಂದು ನನ್ನಲ್ಲಿ ಹುಟ್ಟಿಬಿಟ್ಟು ತುಳುವಿನ ಹಾಸ್ಯ ಚಲನಚಿತ್ರ ’ಒರಿಯೊರ್ದೊರಿ ಅಸಲ್’ ನೋಡಲೆಂದು ಸೀದಾ ಗೋಪಾಲನ್ ಮಾಲ್ ಗೆ ಬಂದುಬಿಟ್ಟೆ. ಮಲ್ಟಿಪ್ಲೆಕ್ಸ್ಗಳು ಬಂದುಬಿಟ್ಟ ಮೇಲೆ ನನ್ನಂತಹ ಒಬ್ಬಂಟಿ ಮಹಿಳೆಯರು ಬಯಸಿದಾಗ ಸಿನೇಮಾ ನೋಡುವುದು ಸುಲಭವಾಗಿದೆ ನೋಡಿ.

ನಿನ್ನೆನೇ ಆ ಸಿನೇಮಾ ನೋಡಲು ಎರಡು ಕಾರಣಗಳಿದ್ದವು. ಒಂದು; ಕೇವಲ ಒಂದು ವಾರದ ಮಟ್ಟಿಗೆ ಮಾತ್ರ ಆ ಸಿನೇಮಾವನ್ನು ಗೋಪಾಲನ್ ಮಲ್ಟಿಪ್ಲೆಕ್ಸ್ ನಲ್ಲಿ ಪ್ರದರ್ಶಿಸುತ್ತಿದ್ದಾರೆಂದು ನಿನ್ನೆ ತಾನೇ ನನ್ನ ಸ್ನೇಹಿತರೊಬ್ಬರು ಹೇಳಿದ್ದರು. ಎರಡನೆಯದಾಗಿ ಕರ್ನಾಟಕದ ಬಿಜೆಪಿ ರಾಜಾಕಾರಣದಲ್ಲಿರುವವರೆಲ್ಲಾ ’ಒರಿಯೊರ್ದೊರಿ ಅಸಲ್’ಗಳೇ. ತುಳುವಿನಲ್ಲಿ ಒರಿಯೊರ್ದೊರಿ ಅಸಲ್ ಗಳೆಂದೆರೆ ಒಬ್ಬರಿಗಿಂತ ಒಬ್ಬರು ಮಹಾಚಾಣಕ್ಷರು ಎಂದರ್ಥ. ಇಂತಹ ’ಅಸಲ್’ ಗಿರಾಕಿಗಳ ಮಧ್ಯೆ ಸದಾನಂದ ಗೌಡರು ತಮ್ಮ ಕಾಲ್ಗೇಟ್ ನಗುವನ್ನು ಬಹುಕಾಲ ಉಳಿಸಿಕೊಳ್ಳುವುದು ಕಷ್ಟ.

ಸದಾನಂದ ಗೌಡರು ನಮ್ಮ ತಾಲೂಕಿನವರು. ಅವರ ಮನೆತನದ ಬಗ್ಗೆ ಅಲ್ಪ-ಸ್ವಲ್ಪ ಗೊತ್ತಿದೆ. ಅವರು ರಬ್ಬರ್ ಸ್ಟಾಂಪ್ ಮುಖ್ಯಮಂತ್ರಿಯಾಗಲಾರರು. ಅವರು ಹುಬ್ಬು ಗಂಟಿಕ್ಕಿ, ತುಟಿ ಬಿಗಿ ಮಾಡುವ ಸಂದರ್ಭ ಮುಂದೆ ಖಂಡಿತಾ ಬರುತ್ತದೆ. ಆದರೆ ಮುಖ್ಯಮಂತ್ರಿಯಾಗಿ ಎಷ್ಟು ಕಾಲ ಮುಂದುವರಿಯಬಹುದು ಎಂಬುದನ್ನು ಈಗಲೇ ಹೇಳುವುದು ಕಷ್ಟ.

’ಒರಿಯೊರ್ದೊರಿ ಅಸಲ್’ ಸಿನಿಮಾಕೆ ಬಂದರೆ ಅದೊಂದು ಸಂಪೂರ್ಣ ಹಾಸ್ಯಮಯ ಚಿತ್ರ. ಇದು ಕರಾವಳಿಯ ಬಹು ಪ್ರಸಿದ್ಧವಾದ ತುಳು ನಗೆ ನಾಟಕದ ಸಿನಿಮಾ ರೂಪಾಂತರ. ಈ ನಾಟಕಕ್ಕೆ ಎರಡೂವರೆ ದಶಕದ ಇತಿಹಾಸವಿದೆ. ತುಳು ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿರುವ ವಿಜಯಕುಮಾರ್ ಕೊಡಿಯಾಲ್ ಬೈಲ್. ಇವರು ತಮ್ಮ ನಾಟಕವನ್ನು ಸಿನಿಮಾ ಮಾಡಲು ಹೊರಟಾಗ ಅವರ ಕಣ್ಣಿಗೆ ಬಿದ್ದವರು ಕನ್ನಡದ ನಿರ್ದೇಶಕ ಹೂ ಸು. ರಾಜಶೇಖರ್. ಅವರು ತುಳು ಭಾಷೆಯ ಜಾಯಮಾನಕ್ಕೆ ಚ್ಯುತಿ ಬರದ ರೀತಿಯಲ್ಲಿ ಸಿನಿಮಾವನ್ನು ನಿರ್ದೇಶಿಸಿ ಕೊಟ್ಟಿದ್ದಾರೆ.

ತುಳುವಿನಲ್ಲಿ ’ಕುಸಲ್ದರಸ’ ಎಂದರೆ ಹಾಸ್ಯ ಚಕ್ರವರ್ತಿ ಎಂದು ಹೆಸರು ಮಾಡಿರುವ ನವೀನ್ ಡಿ. ಪಡೀಲ್ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇವರು ತುಳುವಿನ ಸ್ಟಾರ್ ಕಲಾವಿದ. ಯಾರೀ ನವೀನ್ ಎಂದರೆ, ಸುವರ್ಣ ಚಾನಲ್ ನಲ್ಲಿಪ್ರತಿ ಭಾನುವಾರ ಮಧ್ಯಾಹ್ನ ’ಗೊತ್ತಾನಗ ಪೊರ್ತಾಂಡ್’ ಎಂಬ ಧಾರಾವಾಹಿ ಬರುತ್ತಿತ್ತಲ್ಲಾ, ಅದರಲ್ಲಿನ ಕುಡುಕ-ಹಾಸ್ಯ ಪಾತ್ರಧಾರಿ. ನಾಯಾಕಿಯಾಗಿ ಕನ್ನಡದ ರಮ್ಯಾ ಬಾರ್ನಾ ಅಭಿನಯಿಸಿದ್ದಾರೆ. ಆರು ಹಾಡುಗಳಿವೆ. ಎಸ್.ಪಿ ಬಾಲಸುಬ್ರಹ್ಮಣ್ಯಂ, ಉದಿತ್ ನಾರಾಯಣ್, ತುಳುವಿನವರೇ ಆದ ಗುರುಕಿರಣ್ ಹಾಡುಗಳನ್ನು ಹಾಡಿದ್ದಾರೆ. ಹಾಡೊಂದಲ್ಲಿ ಗುರುಕಿರಣ್ ಅಭಿನಯಿಸಿದ್ದಾರೆ ಕೂಡಾ. ಸಾಹಸ ಥ್ರಿಲ್ಲರ್ ಮಂಜು ಅವರದ್ದು. ತುಳುವಿನ ಪ್ರಥಮ ಡಿ.ಟಿ ಎಸ್ ಚಿತ ಎಂಬ ಹೆಗ್ಗಳಿಕೆಯೂ ಈ ಚಿತ್ರಕ್ಕಿದೆ.

ತುಳು ಸಿನೆಮಾ ಇತಿಹಾಸಕ್ಕೆ ಅಂದರೆ ಕೋಸ್ಟಲ್ ವುಡ್ ಗೆ ನಲ್ವತ್ತು ವರ್ಷಗಳ ಇತಿಹಾಸವಿದೆ. ಆದರೆ ಇಷ್ಟೊಂದು ಪ್ರಚಾರ ಮತ್ತು ಜನಪ್ರಿಯತೆಯನ್ನು ಪಡೆದುಕೊಂಡ ಚಿತ್ರ ಇನೊಂದಿಲ್ಲ. ಅದಕ್ಕೆ ತುಳುವರ ಭಾಷಾಭಿಮಾನವೇ ಕಾರಣ. ಕರಾವಳಿಯಲ್ಲಿ ಒಮ್ಮೆಲೇ ಆರು ಥಿಯೇಟರ್ ಗಳಲ್ಲಿ ದಿನಾ ಇಪ್ಪತಮೂರು ಪ್ರದರ್ಶನಗಳನ್ನು ಕಂಡು ಶತದಿನೋತ್ಸವನ್ನು ಆಚರಿಸಿಕೊಂಡಿತ್ತು. ಜಗತ್ತಿನಾದ್ಯಂತ ಹರಡಿಕೊಂಡಿರುವ ತುಳುವರಿಗಾಗಿ ಇಗ ಅದನ್ನು ಮುಂಬೈ, ದುಬೈ, ಕತಾರಾ, ಬಹರೈನ್ ಗಳಲ್ಲಿ ಬಿಡುಗಡೆಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ.

ಪೂರ್ವಗ್ರಹಗಳಿಲ್ಲದೆ ಸದಾನಂದಗೌಡರ ಕ್ಲೋಸ್ ಆಫ್ ನಗೆಯನ್ನು ಎಂಜಾಯ್ ಮಾಡಿದಂತೆ, ಕಥೆ-ಗಿಥೆಯನ್ನೆಲ್ಲಾ ಮರೆತು ಸುಮ್ಮನೆ ಕುಳಿತು ಶುದ್ಧ ಮನಸ್ಸಿನಿಂದ ಈ ಚಿತ್ರವನ್ನು ನೋಡುತ್ತಾ ಹೊಟ್ಟೆ ತುಂಬಾ ನಗಬಹುದು.

0 comments: