Thursday, December 29, 2011

ಪ್ರೀತಿಸಿದರೆ…ರಾಕ್ಷಸರಂತೆ ಪ್ರೀತಿಸಬೇಕು!!



ಆಧ್ಯಾತ್ಮ ಸಾಧನೆಗೆ ಸಂಬಂಧಪಟ್ಟಂತೆ ಭಾರತೀಯರು ಏರಿದ ಎತ್ತರಕ್ಕೆ ಎತ್ತರಕ್ಕೆ ಸರಿಸಾಟಿಯಿಲ್ಲ. ಅವರ ಸಾಧನೆಯ ಫಲಶ್ರುತಿಯಲ್ಲಿ ಸದಾ ಆನಂದದ ಪ್ರೇಮರಸ. ಆದರೆ ಗಂಡು-ಹೆಣ್ಣಿನ ಪ್ರೇಮಕ್ಕೆ ಸಂಬಂಧಪಟ್ಟಂತೆ ಭಾರತೀಯರ ದೃಷ್ಟಿಕೋನ ವಿಶಾಲವಾಗಿಲ್ಲ.. ನಮಗೆ ಪ್ರೇಮದ ಉತ್ಕಟತೆಯನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲವೇನೋ ಎಂಬ ಗುಮಾನಿ ಬಹಳ ಹಿಂದಿನಿಂದಲೂ ನನಗಿದೆ. ಇಲ್ಲಿ ಪ್ರೇಮವೆಂಬುದು ದಾಸ್ಯದ ಹೊದಿಕೆಯಡಿ ಅಡಗಿ ಕುಳಿತಿದೆ.

ಪ್ರೇಮದ ಉತ್ಕಟತೆ ಎಂದರೆ ಎರಡು ದೇಹಗಳು, ಎರಡು ಮನಸುಗಳು ಒಂದಾಗಿ ಕರಗಿ ಹೋಗುವುದು; ಐಕ್ಯವಾಗುವುದು; ತನ್ನತನವನ್ನು ಕಳೆದುಕೊಳ್ಳುವುದು; ಶೂನ್ಯ ಸ್ಥಿತಿಯನ್ನು ತಲುಪುವುದು. ಅಂದರೆ ವರ್ತಮಾನವನ್ನು ಸಂಪೂರ್ಣವಾಗಿ ಮರೆಯುವುದು.

ಇಂತಹ ಮರೆಯುವಿಕೆ ನಮ್ಮ ಪುರಾಣ, ಇತಿಹಾಸಗಳಲ್ಲಿ ಎಲ್ಲಿಯಾದರೂ ದಾಖಲಾಗಿದೆಯೇ? ಹಾಗೆ, ಪ್ರೇಮದ ದಾಖಲಾತಿಯೆಂದು ನಮಗೆ ಅಲ್ಲಿ ಇಲ್ಲಿ ಸಿಗುವ ಒಂದೆರಡು ಉದಾಹರಣೆಗಳು ಪ್ರೇಮದ ಗಾಢವಾದ ಅನುಭವವನ್ನು ನೀಡಬಲ್ಲಷ್ಟು ಶಕ್ತವಾದುದೇ?

ದುಶ್ಯಂತ-ಶಕುಂತಲೆಯರದ್ದು ಪ್ರೇಮ ವಿವಾಹ. ಅವರದ್ದು ಮೊದಲ ನೋಟದ ಪ್ರೇಮ ಎಂದೆಲ್ಲಾ ಬಣ್ಣಿಸುವುದುಂಟು. ಆದರೆ ಅದು ನಿಜವೇ? ನಿಜವಿದ್ದಿದ್ದರೆ ಶಕುಂತಲೆಯ ದೈಹಿಕ ಸಂಪರ್ಕ ಮಾಡಿ ಅವಳನ್ನು ದುಶ್ಯಂತ ಮರೆತುಬಿಡುತ್ತಿರಲಿಲ್ಲ. ಕಾಮ ವಿಜೃಂಭಿಸಿದ ಕ್ಷಣಗಳಲ್ಲಿ ಅವರಿಬ್ಬರು ಒಂದಾಗಿದ್ದರು. ಅನಂತರ ಪುರುಷ ಸಹಜ ಗುಣದಂತೆ ಆತ ಅವಳನ್ನು ಮರೆತುಬಿಟ್ಟಿದ್ದ.

ನಳ-ದಮಯಂತಿಯನ್ನು ಅನುರೂಪ ಜೋಡಿಯೆಂದು ಹೇಳುವುದುಂಟು. ಆದರೆ ದಮಯಂತಿಗೆ ನಳ ಮಾಡಿದ್ದೇನು? ತನ್ನ ಕಷ್ಟ ಸುಖಗಳಲ್ಲಿ ನೆರಳಿನಂತೆ ಹಿಂಬಾಲಿಸಿದ್ದ ಸತಿಯನ್ನು ದಟ್ಟಡವಿಯಲ್ಲಿ ಒಂಟಿಯಾಗಿ ಬಿಟ್ಟು ಓಡಿಹೋಗಿಬಿಟ್ಟ. ಸಾಲದೆಂಬಂತೆ, ಹೋಗುವಾಗ ಅವಳುಟ್ಟ ಸೀರೆಯಲ್ಲಿ ಅರ್ಧ ಭಾಗವನ್ನೇ ಹರಿದುಕೊಂಡು ಹೋದದ್ದು ಬೇರೆ!!. ಇಂಥವನನ್ನು ದಮಯಂತಿ ಮತ್ತೆ ಹುಡುಕಿ ಯಾಕೆ ಮರು ಮದುವೆಯಾದಳೋ!

ಯಾಕೋ. ಪ್ರೇಮದ ಉತ್ಕಟತೆಯ ಬಗ್ಗೆ ಮಾತಾಡುವಾಗಲೆಲ್ಲಾ ನನಗೆ ನಮ್ಮ ಪುರಾಣಗಳ ಸಾತ್ವಿಕ ಹಿರೋಗಳು, ಆದರ್ಶಪುರುಷರು ಕಣ್ಣ ಮುಂದೆ ಬರುವುದೇ ಇಲ್ಲ. ನಮ್ಮ ಪುರಾಣಗಳ ಕಥಾ ನಾಯಕರಿಗೆ, ಪ್ರೇಮ ಎಂಬುದು ತುಂಬಾ ಕೋಮಲವಾದುದು, ಅದು ಭಾವಕೋಶಕ್ಕೆ ಸಂಬಂಧಪಟ್ಟದ್ದು ಎಂಬ ಅರಿವೇ ಇದ್ದಂತಿರಲಿಲ್ಲ.

ಹೆಣ್ಣೆಂಬುದು ಪಣಕ್ಕಿಟ್ಟ ವಸ್ತು. ಯಾರು ಬೇಕಾದರೂ ಅದಕ್ಕೆ ಆಸೆ ಪಡಬಹುದು, ಅದನ್ನು ಗೆದ್ದು ತರುವುದೇ ನ್ಯಾಯೋಚಿತವಾದುದು ಎಂಬುದು ಪ್ರಚಲಿತದಲ್ಲಿದ್ದಂತಿತ್ತು. ನಮ್ಮ ಗಂಡಸರಿಗೆ ಪ್ರೇಮ ಮತ್ತು ಯುದ್ಧದಲ್ಲಿ ಅಂತಹ ವ್ಯತ್ಯಾಸವೇನೂ ಇದ್ದಂತಿರಲಿಲ್ಲ. ಇಲ್ಲಿ ಗೆಲುವೇ ಮುಖ್ಯ. ಅದನ್ನು ಪಡೆಯುವ ದಾರಿ ಮುಖ್ಯವಾಗಿರಲಿಲ್ಲ.

ಅದರೆ ಪ್ರೇಮದಲ್ಲಿ ಸೋಲೇ ಗೆಲುವು. ಅದನ್ನು ಚೆನ್ನಾಗಿ ಅರಿತುಕೊಂಡವರು ನಮ್ಮ ಪುರಾಣಗಳಲ್ಲಿ ರಾಕ್ಷಸರೆಂದು ಬಿಂಬಿತರಾದ ರಾವಣ, ಭಸ್ಮಾಸುರ, ಕೀಚಕ, ಶರ್ಮಿಸ್ಠೆ, ಶೂರ್ಪನಖಿ,ಹಿಡಿಂಬೆ…ಮುಂತಾದವರು. ಪ್ರೇಮಕ್ಕಾಗಿ ಪ್ರಾಣವನ್ನೇ ಕಳೆದುಕೊಂಡ ಇಂತವರ ಮುಂದೆ ರಾಮ, ದುಷ್ಯಂತರದ್ದು ಪೇಲವ ವ್ಯಕ್ತಿತ್ವವೇ.

ರಾಕ್ಷಸರೆಲ್ಲಾ ಹಾಗೆಯೇ. ಅವರು ಅತ್ಯಂತ ಮೋಹಿತರು. ಅವರು ಮೆಚ್ಚಿದವರನ್ನು ಜೀವದುಂಬಿ ಪ್ರೀತಿಸಬಲ್ಲರು. ಹಾಗೆಯೇ ಪೋಷಿಸಬಲ್ಲರು ಕೂಡಾ. ಅವರಿಗೆ ನಗರ ಸಂಸ್ಕೃತಿಯ ನಯ -ನಾಜೂಕು, ಕಪಟ-ಮೋಸಗಳು ತಿಳಿಯುತ್ತಿರಲಿಲ್ಲ. ರಾಕ್ಷಸರ ಪ್ರೇಮದ ತೀವ್ರತೆಯನ್ನು, ಆ ಉತ್ಕಟತೆಯನ್ನು ನೆನೆಸಿಕೊಂಡಾಗಲೆಲ್ಲಾ ನನಗೆ ಅಕ್ಕ ಮಹಾದೇವಿಯ ’ಅಪ್ಪಿದರೆ ಅಸ್ತಿಗಳು ನುಗ್ಗಿ ನುರಿಯಾಗಬೇಕು…ಮಚ್ಚು ಅಚ್ಚುಗವಾಗಿ ಗರಿದೊರದಂತಿರಬೇಕು’ ಎಂಬ ವಚನವೇ ನೆನಪಿಗೆ ಬರುತ್ತದೆ.. ಆ ಕ್ಷಣದ ಬದುಕನ್ನು ಅನುಭವಿಸುವಲ್ಲಿ ರಾಕ್ಷಸರೇ ಮುಂದು.

ಪುರಾಣಗಳಲ್ಲಿ ಚಿತ್ರಿತರಾದ ರಾಕ್ಷಸರೆಲ್ಲಾ ಈ ನೆಲದ ಮೂಲನಿವಾಸಿಗಳಾಗಿರಬಹುದು ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಇದ್ದರೂ ಇರಬಹುದು. ಕಾಡಿನಲ್ಲಿ ವಾಸಿಸುತ್ತಿದ್ದ ಅವರ ಮೇಲೆ ನಗರ ಸಂಸ್ಕೃತಿಯ ಜನತೆ ಆಗಾಗ ದಾಳಿ ನಡೆಸುತ್ತಿದ್ದಿರಬಹುದು. ಅದಕ್ಕಾಗಿ ರಾಕ್ಷಸರು ಕೂಡಾ ಪ್ರತಿ ದಾಳಿ ಕೈಗೊಂಡಿರಬಹುದು. ಆದರೆ ಅಕ್ಷರ ಒಡೆತನ ಹೊಂದಿದ ಪುರಾಣಗಳ ಸೃಷ್ಟಿಕರ್ತರು, ತಮ್ಮ ಕೃತಿಗಳಲ್ಲಿ ಅವರನ್ನು ರಾಕ್ಷಸರೆಂದು ಅಮಾನುಷವಾಗಿ ಚಿತ್ರಿಸಿರಬಹುದು.

ನಮ್ಮ ಪುರಾಣ ಪ್ರಪಂಚದಲ್ಲಿ ರಾವಣನಿಗಿಂತ ಮಿಗಿಲಾದ ಪ್ರತಿ ನಾಯಕರಿಲ್ಲ. ಯಾರನ್ನಾದರೂ ಅತ್ಯಂತ ಹೀನಾಯವಾಗಿ, ನಿಕೃಷ್ಟವಾಗಿ ಕಾಣಬೇಕೆಂದರೆ ’ ಅವನೊಬ್ಬ ರಾವಣ’ ಎಂದುಬಿಡುತ್ತೇವೆ. ಆದರೆ, ನೀವೇ ಹೇಳಿ; ಅಂತಹ ದುಷ್ಟಕಾರ್ಯವನ್ನು ಅವನೇನು ಮಾಡಿದ್ದಾನೆ?

ಶ್ರೀರಾಮನ ಮಡದಿಯಾದ ಸೀತೆಯನ್ನು ಅಪಹರಿಸಿದ್ದು ರಾವಣನ ಮೇಲಿರುವ ಬಹುದೊಡ್ಡ ಆರೋಪ. ಸೀತೆಯನ್ನು ದೈಹಿಕವಾಗಿ ಹೊಂದಲೇ ಬೇಕೆಂಬ ಅಭೀಪ್ಸೆಯಿಂದ ಅಪಹರಿಸಿದ್ದರೆ ಅವಳನ್ನು ಬಲತ್ಕಾರ ಮಾಡಬಹುದಿತ್ತಲ್ಲವೇ? ಯಾಕೆಂದರೆ ಅವನಿಗೆ ಆ ಇತಿಹಾಸ ಇದೆ. ಹಿಂದೆ ಕುಶಧ್ವಜನ ಪುತ್ರಿಯಾದ ವೇದವತಿಯನ್ನು ಹಾಗೂ ದೇವಲೋಕದ ನರ್ತಕಿ ರಂಭೆಯನ್ನು ಆತ ಬಲತ್ಕಾರದಿಂದ ಭೋಗಿಸಿದ್ದ. ಆತ ಮಹಾ ಪರಾಕ್ರಮಿಯಾಗಿದ್ದ; ದಶಕಂಠನಾಗಿದ್ದ,ಅಂದರೆ ಸಾಮಾನ್ಯ ಮನುಷ್ಯನಿಗಿಂತ ಬುದ್ಧಿವಂತನಾಗಿದ್ದ.-ಎಂಟೆದೆಯ ಬಂಟನಂತೆ. ತೀವ್ರ ವ್ಯಾಮೋಹಿಯಾಗಿದ್ದ.

ರಾವಣನಲ್ಲಿ ಸಾತ್ವಿಕ, ರಜೋ ಮತ್ತು ತಮೋ ಗುಣಗಳು ಮೇಳೈಸಿದ್ದವು. ಅದಕ್ಕೆ ಕಾರಣವೂ ಇತ್ತು. ಆತನ ತಂದೆ ವಿಶ್ವವಸು-ಆತನ ಇನ್ನೊಂದು ಹೆಸರು ಪುಲಸ್ತ್ಯ-ಬ್ರಹ್ಮನ ಮಾನಸ ಪುತ್ರ. ತಾಯಿ ಕೈಕಸಿ. ಆಕೆ ಸುಮಾಲಿ ಎಂಬ ರಾಕ್ಷಸನ ಮಗಳು. ಇನ್ನು ರಾವಣನ ಪಟ್ಟದರಸಿ ಮಂಡೋದರಿ ರಾಕ್ಷಸರ ಶಿಲ್ಪಿಯಾದ ಮಯನ ಮಗಳು. ಆಕೆಯ ತಾಯಿ ಹೇಮೆ ಎಂಬ ಅಪ್ಸರೆ. ಇಂತಹ ಹೈಬ್ರೀಡ್ ತಳಿಯ, ವಿಭಿನ್ನ ಹಿನ್ನೆಲೆಯ ರಾವಣ ಸಹಜವಾಗಿಯೇ ಧೀರೋದಾತ್ತ ನಾಯಕನಾಗಿದ್ದ.

ರಾವಣನಿಗೆ ಸೀತೆಯಲ್ಲಿ ನಿಜವಾದ ಪ್ರೀತಿ ಹುಟ್ಟಿರಬೇಕು. ಹಾಗಾಗಿ ಅವಳನ್ನು ಅಪಹರಿಸಿ ತಂದು ಅತ್ಯಂತ ಸುಂದರ ಉದ್ಯಾನವನವಾದ ಆಶೋಕ ವನದಲ್ಲಿರಿಸಿದ. ಅವಳಿಗೆ ಇಷ್ಟವಾಗುವ ರೀತಿಯಲ್ಲಿ ತಾನು ಬದಲಾಗಲು ಯತ್ನಿಸಿದ. ತನ್ನ ನಡೆ-ನುಡಿ, ವೇಷ-ಭೂಷಣಗಳನ್ನು ಬದಲಾಯಿಸಿಕೊಂಡ. ಈ ರೀತಿಯಲ್ಲಿ ಬದಲಾದ ರಾವಣನಿಗೆ’ ಶೃಂಗಾರ ರಾವಣ’ ವೆಂಬ ಪ್ರತ್ಯೇಕ ಅಭಿದಾನವೇ ಯಕ್ಷಗಾನ ಪ್ರಸಂಗಗಳಲ್ಲಿದೆ. ಈ ಶೃಂಗಾರ ರಾವಣ ಅಪ್ಪಟ ಪ್ರೇಮಿ. ಪ್ರೇಮಿಸುತ್ತಲೇ ಕೊನೆಗೆ ಅವಳಿಗಾಗಿ ಪ್ರಾಣವನ್ನು ಕೂಡಾ ತೆರುತ್ತಾನೆ.

ಈ ರಾಕ್ಷಸರು ಛದ್ಮವೇಷಧಾರಿಗಳು. ಮೋಹಕ್ಕೆ ಒಳಗಾದಾಗ, ಪ್ರೀತಿಗೆ ಬಿದ್ದಾಗ ತಾವು ಮೆಚ್ಚಿದವರ ಕಣ್ಮನಗಳಿಗೆ ಹಿತವಾಗುವಂತೆ ಬೇಕಾದಂಥಹ ರೂಪವನ್ನು ಹೊಂದುತ್ತಿದ್ದರು. ಶೂರ್ಪನಖಿಯ ಉದಾಹರಣೆಯೇ ಸಾಕಲ್ಲ? ಅವಳದ್ದು ಪ್ರಥಮ ನೋಟದ ಪ್ರೇಮ. ಶ್ರೀರಾಮನ ರೂಪಕ್ಕೆ ಮನಸೋತಳು. ಮದುವೆಯಾಗೆಂದು ಪೀಡಿಸಿದಳು. ಪ್ರೇಮದ ಕೋಮಲ ಭಾವನೆಗಳನ್ನು ಅರ್ಥ ಮಾಡಿಕೊಳ್ಳದ ಶ್ರೀರಾಮ ಅವಳೋಡನೆ ಕ್ರೂರವಾಗಿ ವರ್ತಿಸಿದ. ಅವಳ ಕಿವಿ ಮೂಗುಗಳನ್ನು ಕತ್ತರಿಸಿ ವಿರೂಪಗೊಳಿಸಿದ. ಹೆಣ್ತನದ ದ್ಯೋತಕವಾದ ಸ್ತನಗಳನ್ನು ಕತ್ತರಿಸಿ ಸ್ತ್ರೀತ್ವಕ್ಕೆ ಅವಮಾನ ಮಾಡಿದ ಸ್ಯಾಡಿಸ್ಟ್ ಅವನು. ಅವಮಾನಿತಳಾಗಿ, ಅಂಗಭಂಗಿತಳಾದ ಆಕೆ ತನ್ನಣ್ಣ ರಾವಣನಲ್ಲಿಗೆ ಬಂದು ರಾಮನ ಬಗ್ಗೆ ಚಾಡಿ ಹೇಳಿದಳು. ಒಬ್ಬ ಗಂಡಸನ್ನು ಕೆಣಕಬೇಕಾದರೆ, ಅವಮಾನಿಸಬೇಕಾದರೆ ಅವನ ಬಳಗಕ್ಕೆ ಸೇರಿದ ಸ್ತ್ರೀಯನ್ನು ಅಪಹರಿಸುವುದು, ಅತ್ಯಾಚಾರ ಮಾಡುವುದು, ಬೆತ್ತಲೆ ಮೆರವಣಿಗೆ ಮಾಡುವುದು ಈ ಮಣ್ಣಿನಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ರೀತಿಯಲ್ಲವೇ? ರಾವಣನೂ ಅದನ್ನೇ ಮಾಡಿದ್ದಾನೆ.

ಒಬ್ಬ ಶಿವ ಮತ್ತು ಒಬ್ಬ ಕೃಷ್ಣನ ಹೊರತಾಗಿ ಪುರಾಣದ ಯಾವ ನಾಯಕ ತಾನೆ ಸ್ತ್ರೀಯನ್ನು ಸಮಾನ ಗೌರವದಿಂದ ಕಂಡಿದ್ದಾರೆ? ರಾಮನಂತೂ ಅಲ್ಲ. ಅವನು ವಿಶ್ವಾಮಿತ್ರ ಹೇಳಿದನೆಂದು ಸ್ವಯಂವರದಲ್ಲಿ ಶೌರ್ಯ ಪ್ರದರ್ಶನ ಮಾಡಿ ಸೀತೆಯನ್ನು ಗೆದ್ದು ತಂದ. ಜೀವನದುದ್ದಕ್ಕೂ ಆ ಸುಕೋಮಲೆಯನ್ನು ಕಷ್ಟ ಕೋಟಲೆಗಳಿಗೆ ಈಡು ಮಾಡಿದ. ಕೊನೆಗೆ ಆಕೆ ಆತ್ಮಹತ್ಯೆಗೆ ಶರಣಾಗುವಷ್ಟು ಅವಮಾನಿಸಿದ. ಪಾಂಡವರು ಕೂಡಾ ಆಕಸ್ಮಿಕವಾಗಿ ದ್ರೌಪದಿಯನ್ನು ಸ್ವಯಂವರದಲ್ಲಿ ಗೆದ್ದು ತಂದವರು. ಮಾಹಾವಿಷ್ಣುವಿಗೆ ಲಕ್ಷ್ಮಿ ಸಮುದ್ರ ಮಥನದಲ್ಲಿ ಅನಾಯಸವಾಗಿ ದೊರೆತವಳು.

ಸೀತೆ, ದ್ರೌಪದಿ,ಅಹಲ್ಯೆ, ದಮಯಂತಿ ಮಂಡೋದರಿ ಸೇರಿದಂತೆ ನಮ್ಮ ಪುರಾಣದ ಯಾವ ಮಹಿಳೆಯ ಬದುಕೂ ಪ್ರೇಮಮಯ ಆಗಿರಲಿಲ್ಲ.ವಿಷಾಧದ ಎಳೆಯೊಂದು ಸದಾ ಅವರ ಬದುಕಿನಲ್ಲಿತ್ತು. ಅಂಬೆಯಂತೂ ಪುರುಷ ಸಮಾಜದಲ್ಲಿ ಪುಟ್ ಬಾಲಿನಂತೆ ಅಲ್ಲಿಂದಿಲ್ಲಿಗೆ ಒದೆಯಲ್ಪಟ್ಟವಳು. ಪ್ರತಿಭಟನೆಯ ಕುಂಡದಂತಿದ್ದರೂ ನಿಷ್ಕಾರಣವಾಗಿ ಉರಿದು ಹೋದವಳು.

ನಮ್ಮ ಪುರಾಣಗಳಲ್ಲಿ ,ಪ್ರೇಮ-ಪ್ರೀತಿಗಳನ್ನು ಹುಡುಕೋಣವೆಂದು ಹೊರಟರೆ ನಮಗೆ ಸಿಗುವುದು ಒಂದೋ, ಅನೈತಿಕ ಸಂಬಂಧಗಳು. ಇಲ್ಲವೇ, ಪುರುಷಸಿಂಹನ ಘರ್ಜನೆಗಳು. ಸ್ತೀಯರ ಕೋಮಲ ಭಾವನೆಗಳು ಎಲ್ಲೂ ದಾಖಲಾಗುವುದೇ ಇಲ್ಲ. ಹೆಣ್ಣು ಗಂಡಿಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಾಳೆ; ಒಪ್ಪಿಸಿಕೊಳ್ಳುತ್ತಾಳೆ, ಗಂಡು ಅವಳನ್ನು ಸ್ವೀಕರಿಸುತ್ತಾನೆ. ಅರ್ಪಣೆಯ ಹಂತದಲ್ಲಿ ಆಕೆ ಆತನ ಪಾದ ಮೂಲದಲ್ಲಿ ಕುಸಿಯುತ್ತಾಳೆ. ಗಂಡು ಉದಾರತೆಯಿಂದ ಆಕೆಯನ್ನು ಮೇಲೆತ್ತುತ್ತಾನೆ. ಈ ಚಿತ್ರಣವೇ ಭಾರತೀಯರ ಚಿತ್ತ ಭಿತ್ತಿಯಲ್ಲಿ ಮೂಲ ಪ್ರತಿಮೆಯಾಗಿ ಉಳಿದುಕೊಂಡು ಬಂದಿದೆ. ಎಲ್ಲೋ ಒಂದು ಕಡೆ ಭೀಮ-ಹಿಡಿಂಬೆಯಂತ ಅಪರೂಪದ ಪ್ರೇಮ ಪ್ರಕರಣ ಇದಕ್ಕೆ ಅಪವಾದವಾಗಿ ಕಾಣುತ್ತದೆ. ಪಂಚಪಾಂಡವರಲ್ಲಿ ಮೊದಲು ಮದುವೆಯಾದವನು ಈ ಭೀಮ. ತನ್ನ ಅಣ್ಣ ಕಿಮ್ಮೀರನನ್ನು ಭೀಮ ಕೊಂದರೂ ಅವನ ಶೌರ್ಯಕ್ಕೆ ಒಲಿದು ಬಂದವಳು ಹಿಡಿಂಬೆ.

ಇನ್ನು ಕೃಷ್ಣನನ್ನು ಈ ಲೋಕದ ಯಾವ ಗಂಡಸಿಗೂ ಹೋಲಿಸುವಂತಿಲ್ಲ.ಅವನೊಬ್ಬ ಪರಿಪೂರ್ಣ ಮನುಷ್ಯ. ’ನಾನು ನಿನಗೆ ಒಲಿದಿದ್ದೇನೆ’ ಎಂದು ಬಯಸಿ ಬಂದ ರುಕ್ಮಿಣಿಯನ್ನು ಹೃದಯದರಸಿಯನ್ನಾಗಿ ಮಾಡಿಕೊಂಡರೂ ಸಮಾನತೆಯ ತುಡಿತವಿದ್ದ ಅಹಂಕಾರಿ ಸತ್ಯಭಾಮೆಯನ್ನು ಪ್ರೇಮದರಸಿಯಾಗಿ ಕಂಡ. ಸತ್ಯಭಾಮೆಯ ಸಹಚರ್ಯದಲ್ಲಿಯೇ ನರಕಾಸುರನನ್ನು ಕೊಂದು ಅವನು ಸೆರೆಯಲ್ಲಿಟ್ಟಿದ್ದ ಹದಿನಾರು ಸಾವಿರ ಸ್ತ್ರೀಯರನ್ನು ಬಂಧವಿಮುಕ್ತಗೊಳಿಸಿ, ಅವರೆಲ್ಲರನ್ನೂ ತಾನೇ ಮದುವೆಯಾಗಿ ಅವರೆಲ್ಲರನ್ನೂ ಪ್ರೀತಿ ಜಲದಲ್ಲಿ ಮುಳುಗಿಸಿದ್ದ ಎನ್ನುತ್ತದೆ ಪುರಾಣ!

ರುಕ್ಮಿಣಿ-ಸತ್ಯಭಾಮೆಯರ ನಡುವೆ ಕಣ್ಣುಮುಚ್ಚಾಲೆಯಾಡುವ ಕೃಷ್ಣ ಎಳೆಯ ದಂಪತಿಗಳಿಗೆ ಮಾದರಿಯಾದರೆ ಶಿವ ಮತ್ತು ಪಾರ್ವತಿ ಪ್ರಬುದ್ಧ ದಂಪತಿಗಳಿಗೆ ಮಾದರಿಯಾಗಿ ಕಾಣುತ್ತಾರೆ. ಅವರಲ್ಲಿ ಪರಸ್ಪರ ಗೌರವ ಇದೆ; ಪ್ರೇಮ ಇದೆ. ಅದ್ಯಾವನೋ ಋಷಿ ಸ್ತ್ರೀಯರಿಗೆ ಪೂಜೆ ಸಲ್ಲಿಸುವುದಿಲ್ಲ ಎಂದಾಗ ಪಾರ್ವತಿಗೆ ತನ್ನ ಎಡಪಾರ್ಶ್ವವನ್ನೇ ಬಿಟ್ಟುಕೊಟ್ಟು ಅರ್ಧನಾರೀಶ್ವರನಾದವನು ಶಿವ.

ರಾವಣ,ಭಸ್ಮಾಸುರರಂತಹ ರಾಕ್ಷಸರನ್ನು ಹೊರತು ಪಡಿಸಿದರೆ ತೀವ್ರ ಮೋಹಿತರಾಗಿ ಬದುಕಿದವರೆಂದರೆ ಕೃಷ್ಣ ಮತ್ತು ಶಿವ ಮಾತ್ರ. ಇವರನ್ನು ಬಿಟ್ಟರೆ ನಮ್ಮ ಪುರಾಣಗಳಲ್ಲಿ ಪ್ರೇಮವೇ ಇಲ್ಲ. ಇರುವುದೆಲ್ಲಾ ಕಾಮ ಮತ್ತು ಅಹಂ ಮಾತ್ರ.

ಮೋಹವಿಲ್ಲದ ಬದುಕೊಂದು ಬದುಕೇ? ಅದರಲ್ಲೂ ಗಂಡು ಹೆಣ್ಣಿನ ಪ್ರೇಮದ ವಿಷಯಕ್ಕೆ ಬಂದಾಗ ಒಂದು ಮಿತಿಯ ಒಳಗೆ ಪೊಸೆಸಿವ್ ನೆಸ್ ಇರಲೇಬೇಕು. ನನ್ನನ್ನೇ ಉದಾಹರಣೆಯಾಗಿ ತೆಗೆದುಕೊಂಡರೂ ನನಗೆ ನನ್ನ ಗಂಡ, ನನ್ನ ಗೆಳೆಯ ನನಗೆ ಸಂಪೂರ್ಣ ಬೇಕು. ಅವರನ್ನು ಶೇಖಡವಾರು ಲೆಕ್ಕದಲ್ಲಿ ಹಂಚಿಕೊಳ್ಳುವುದು ನನಗಂತೂ ಸಾಧ್ಯವಿಲ್ಲ. ತುಂಬಾ ಸಂಕುಚಿತವಾಗಿ ಯೋಚಿಸುತ್ತಿದ್ದೇನೆಂದು ಬೇರೆಯವರಿಗನಿಸಬಹುದು. ಆದರೆ ಗಮನಿಸಿ ನೋಡಿ; ನಮ್ಮ ಖಾಸಗಿ ಪ್ರಪಂಚ ತುಂಬಾ ಚಿಕ್ಕದಾಗುತ್ತಿದೆ. ನಮ್ಮನ್ನು ನಾವೇ ನಂಬದಿರುವಂಥ ಸ್ಥಿತಿಗೆ ತಲುಪಿದ್ದೇವೆ. ಹಾಗಿರುವಾಗ ನಮ್ಮವರೆಂದು ನಾವು ಒಪ್ಪಿಕೊಂಡ ಒಂದೆರಡು ಮಂದಿಯಾದರೂ ನಮ್ಮವರಾಗಿಯೇ ಉಳಿಯಬೇಕೆಂದು ಬಯಸುವುದರಲ್ಲಿ ತಪ್ಪೇನಿದೆ?

[ ’ಓ ಮನಸೇ’ ಯಲ್ಲಿ ಪ್ರಕಟವಾದ ಲೇಖನ

9 comments:

sunaath said...

Wonderful analysis!

V.R.BHAT said...

ಭಾರತೀಯರು ಹೆಣ್ಣಿಗೆ ಕೊಟ್ಟಷ್ಟು ಉತ್ತಮ ಸ್ಥಾನಮಾನವನ್ನು ವಿದೇಶೀಯರು ಕೊಡಲಿಲ್ಲ ಎಂಬುದು ನನ್ನ ಪ್ರತಿಪಾದನೆ. ಆದರೆ ನಾವದನ್ನು ಅಪಾರ್ಥಮಾಡಿಕೊಂಡಿದ್ದೇವೆ ಅಷ್ಟೇ. ರಜಸ್ವಲೆಯಾದ ಹೆಣ್ಣಿಗೆ ಮೈಲಿಗೆಯ ಪಟ್ಟಕಟ್ಟಿ ಕೆಲಸದಿಂದ ರಜಾ ಕೊಡುತ್ತಿದ್ದುದನ್ನು ಮೂಧವಾಗಿ ಗ್ರಹಿಸಿ ಸ್ನಾನವನ್ನೂ ಮಾಡಗೊಡದೇ ಚಾಪೆ-ಚೊಂಬು ಕೊಟ್ಟು ಮೂಲೆಗೆ ತಳ್ಳಿ ಕೂರಿಸುವ ಮಟ್ಟಕ್ಕೆ ಮಧ್ಯಂತರದ ಜನ ಬೆಳೆದರು, ಅದು ನಮ್ಮ ಪೂರ್ವಜರ ತಪ್ಪಲ್ಲ. ದುಷ್ಯಂತ ಶಕುಂತಲೆಯನ್ನು ಶಾಪಗ್ರಸ್ತನಾದ ಕಾರಣ ಮರೆತನೇ ಹೊರತು ಅದು ಪೌರುಷವಲ್ಲ. ಚಕ್ರವರ್ತಿಯಾಗಿದ್ದ ನಳ ತನ್ನತನವನ್ನೇ ಕಳೆದುಕೊಂಡಾಗ ಮುಂದೇನು ? -ಎಂಬುದು ತನಗೇ ಅರಿವಿಲ್ಲದ ಹಂತದಲ್ಲಿ ನಂಬಿದ ದೈವದಲ್ಲಿ ಮೊರೆಹೋಗಿ ದಮಯಂತಿಯನ್ನು ಬಿಟ್ಟುಹೋದನೇ ಹೊರತು ಆಕೆಗೆ ಮೋಸಮಾಡಲಲ್ಲ. ಮದುವೆಗಳಲ್ಲಿ ದೇವ,ಗಾಂಧರ್ವ,ರಕ್ಕಸ, ಬ್ರಾಹ್ಮಣ ಇತ್ಯಾದಿ ಹಲವು ವೈವಿಧ್ಯಗಳನ್ನು ಕಂಡ/ಹೇಳಿದ ಭಾರತ ಯಾರಿಗೂ ಇಂಥದ್ದನ್ನೇ ಮಾಡಿ ಎಂಬ ಮಿತಿಯನ್ನು ಹೇರಲಿಲ್ಲ. ಕಾಮವನ್ನು ಹೇಗೆ ಸಮರ್ಪಕವಾಗಿ ಅನುಭವಿಸಬೇಕು ಎಂಬುದನ್ನು ಬರೆದದ್ದು ಭಾರತೀಯ ವಾತ್ಸ್ಯಾಯನನೇ ಹೊರತು ಆ ವೈಜ್ಞಾನಿಕ ಮಟ್ಟವನ್ನು ಬೇರೇ ಯಾರೂ ತಲುಪಲಿಲ್ಲ. ಅಜಂತಾ, ಎಲ್ಲೋರಾ, ಖಜುರಾಹೋ ದಂತಹ ಪ್ರದೇಶಗಳಲ್ಲಿ ಶಿಲ್ಪಿಗಳು ದೇವಾಲಯಗಳನ್ನೇ ಕಾಮಕೇಳಿಯ ಭಂಗಿಗಳನ್ನು ತಿಳಿಸುವುದಕ್ಕಾಗಿ ಬಳಸಿದರು-ಇದು ಬೇರೆಲ್ಲೂ ಕಂಡುಬರುವುದಿಲ್ಲ, ಆದರೆ ಇವತ್ತಿನ ಲಿವ್-ಇನ್ ಗತಿಯನ್ನು ಕಾಣುತ್ತಿದ್ದೇವಲ್ಲಾ: ಕೇವಲ ಎರಡು ದೇಹಗಳು ಒಂದಾಗಿ ಕರಗಿ ಮತ್ತೆ ಮಾರನೇ ದಿನವೇ ಅವೆರಡು ಇನ್ನೆರಡು ಬೇರೇ ಬೇರೆ ದೇಹಗಳೊಡನೆ ಒಂದಾಗುವ/ಕರಗಿಹೋಗುವ ಪ್ರಕ್ರಿಯೆಯ ಫಲವನ್ನು ನೆನೆದು ನಮ್ಮವರು ಪ್ರೇಮಕ್ಕೆ-ಕಾಮಕ್ಕೆ ’ದಾಂಪತ್ಯ’ ಎಂಬ ಶುದ್ಧ ಚೌಕಟ್ಟನ್ನು ನೀಡಿದರು-ಇದೊಂದು ಪವಿತ್ರ ವ್ರತ. ಇವತ್ತಿನ ದಂಪತಿಗಳಲ್ಲಿ ಎಷ್ಟು ಜನ ಅದನ್ನು ನಡೆಸುತ್ತಾರೆ ಎಂಬುದನ್ನು ಭಾರತೀಯರು ಎದೆಬಗೆದು ಕೇಳಿಕೊಳ್ಳಬೇಕಾದ ಸಮಯ ಬಹಳ ದೂರವಿಲ್ಲ! ಅಕಸ್ಮಾತ್ ನಾವೂ ವಿದೇಶೀಯರಂತೆಯೇ ಮುಕ್ತ ಮುಕ್ತ ಎಂದು ಹೊರಟಿದ್ದರೆ ಈ ದಿನಗಳಲ್ಲಿ ಭಾರತ ಅಪ್ಪ-ಅಮ್ಮ ಇಲ್ಲದ ಅನಾಥರ ಗೂಡಾಗಿ ಜನಸಂಖ್ಯೆ ಮಿತಿಮೀರಿ ಏನೇನು ಆಗುತ್ತಿತ್ತೋ ಊಹಿಸಲೂ ಸಾಧ್ಯವಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಪ್ರತೀ ಪೂಜೆ-ಪುನಸ್ಕಾರಗಳಲ್ಲೂ ಸಹಿತ ಹೆಣ್ಣಿಗೆ ಹೆಚ್ಚಿನ ಆದ್ಯತೆಯಿದೆ: ಸುವಾಸಿನೀ ಪೂಜೆ, ಕುಮಾರಿಕಾ ಪೂಜೆ ಇತ್ಯಾದಿ ಹೆಣ್ಣಿಗೇ ಮೀಸಲಾದ ಗೌರವಗಳಿವೆ. ಹಾಗಂತ ನಿಷ್ಕಲ್ಮಶ ಪ್ರೇಮಕ್ಕೆ-ತತ್ಸಂಬಂಧೀ ಕಾಮಕ್ಕೆ ಭಾರತ ಇಲ್ಲಾ ಎನ್ನಲಿಲ್ಲ, ಅದಕ್ಕೆ ವೇದವ್ಯಾಸರೇ ಉದಾಹರಣೆಯಾಗುತ್ತಾರೆ, ಕೃಷ್ಣ-ರಾಧೆ ಇದ್ದಾರೆ ಇನ್ನೂ ಅನೇಕ ದೃಷ್ಟಾಂತಗಳು ನೋಡ ಸಿಗುತ್ತವೆ. ರೀತಿಯಿಲ್ಲದ ಪ್ರೀತಿ ಕೇವಲ ದೈಹಿಕ ವ್ಯಾಮೋಹದ ಮಿತಿ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಸುಂದರ ಹುಡುಗಿಯನ್ನು ಹಲವರು ಬೆನ್ನಟ್ಟುತ್ತಾರೆ ಅದೇ ಹುಡುಗಿ ದುರ್ದೈವ ವಶಾತ್ ಕುರೂಪಿಯಾದರೆ/ ಅಂಗವಿಕಲೆಯಾದರೆ ಎಲ್ಲರೂ ಆಕೆಯನ್ನು ತೊರೆದುಹೋಗುತ್ತಾರೆ ಯಾಕೆ? ದೇಹಗಳು ಒಂದಾಗಿ ಕರಗಿ ಮತ್ತೊಂದರ ಉಗಮವಾಗುವ ಹಂತದಲ್ಲಿ ಪ್ರೇಮಿಗಳ ಪ್ರೇಮ ಪೋಲೀಸ್ ಷ್ಟೇಶನ್ ಮೆಟ್ಟಿಲು ಹತ್ತುತ್ತದೆ-ಯಾಕೆಂದರೆ ಗಂಡೆಂಬ ಗಂಡು ನಾಪತ್ತೆಯಾಗಿರುತ್ತಾನೆ! ಪ್ರೀತಿಸಿದರೆ ರಾಕ್ಷಸರಂತೇ ಪ್ರೀತಿಸಬೇಕು-ಆದರೆ ಒಬ್ಬರನ್ನೇ ಮತ್ತು ಅಜೀವಪರ್ಯಂತ ಆ ಒಬ್ಬರನ್ನೇ. ಎಲ್ಲರಿಂದಲೂ ಸಾಧ್ಯವೇ ?

ಮೌನರಾಗ said...

ಅಬ್ಬಾ...! ಓದುತ್ತ ಹೋದಂತೆ...ಯೋಚನೆಗಿಟ್ಟು ಬಿಡುತ್ತದೆ ಈ ಲೇಖನ...ಪುರಾಣದ ಎಲ್ಲಾ ವೀರರನ್ನು, ಅವರ ವೀರತ್ವ ದ ಹಿಂದೆ ಅಡಗಿರೋ ತಣ್ಣನೆಯ ಕ್ರೌರ್ಯವನ್ನು ಬಹಿರಂಗ ಪಡಿಸಿದ್ದಿರಿ... ರಾಕ್ಷಸರೊಳಗಿನ ಸುಕೋಮಲ ಪ್ರೇಮದ ಚಿತ್ರಣ ಬಹಳ ಮೆಚ್ಚುಗೆಯಾಯಿತು...

ರವಿ ಮೂರ್ನಾಡು said...

ಎರಡು ದೇಹ, ಒಂದು ಮನಸ್ಸು ಚಿಂತನೆ ವಿಭಿನ್ನ ಮಾತುಗಳು ಸ್ವಲ್ಪ ಕೆಣಕಿದವು. ಅಂದರೆ ಎರಡು ಮುಖ ಒಂದು ಸಿದ್ದಿ.ಯಾವುದೇ ಒಂದು ಕೆಲಸ ಮಾಡುವಾಗಲೂ ಸರಿ ಮತ್ತು ತಪ್ಪು ಅನ್ನುವ ಎರಡು ಮಾಧ್ಯಮ ನಮ್ಮಲ್ಲಿ ಕೆಲಸ ಮಾಡುತ್ತದೆ.ಅಲ್ಲಿ ಒಬ್ಬ ನ್ಯಾಯಾದೀಶ ನಮ್ಮೊಳಗೆ ಇದ್ದಾನೆ ಅನ್ನುವುದು ದಿಟ.ನ್ಯಾಯ-ನೀತಿ-ಧರ್ಮ ಅನ್ನುವ ಒಂದು ಮುಖ,ಅದರ ಇನ್ನೊಂದು ಮುಖ ಇದಕ್ಕೆ ವಿರುದ್ದವಾದುದು.ರಾಕ್ಷಸತ್ವ ಅಂದರೆ ಬೀಭತ್ಸ ಅಂತ ಒಪ್ಪಿಕೊಳ್ಳುವಂತಹದ್ದು.ಪ್ರೀತಿ-ಪ್ರೇಮದ ವಿಷಯದಲ್ಲಿ ಇದನ್ನು ಸ್ವಲ್ಪ ಓರೆಗೆ ಹಚ್ಚಬಹುದು.ಎರಡು ಮನಸ್ಸುಗಳು ಒಪ್ಪಿತವಾಗಿ ಮಾಡುವಂತಹದ್ದು ಅವರಿಬ್ಬರಿಗೇ ನ್ಯಾಯವಾಗಿ ನಿಲ್ಲುತ್ತದೆ. ಯಾವಾಗ ಒಂದು ಮುಖಕ್ಕೆ ಇನ್ನೊಂದು ಮುಖ ವಿರುದ್ಧವಾಗಿ ನಿಲ್ಲುತ್ತದೋ ಅವಾಗ ನೀವು ಹೇಳಿದ " ಸ್ಯಾಡಿಸ್ಟ್" ಸಂಸ್ಕಾರ ಮೈದಾಳುತ್ತದೆ. ಅದು ಗಂಡಾಗಿರಬಹುದು, ಹೆಣ್ಣಾಗಿರಬಹುದು.ಹೆಣ್ಣು ಒಂದು ಚೌಕಟ್ಟಿನೊಳಗೆ ಬಂದಿಯಾಗುತ್ತಾಳೆ,ಗಂಡು ಆ ಚೌಕಟ್ಟನ್ನು ಮೀರಿ ಮುಕ್ತವಾಗುತ್ತಾನೆ.ನೀವು ಹೇಳಿದಂತೆ ರಾಕ್ಷಸತ್ವದಂತೆ ಪ್ರೀತಿಸಬೇಕು.ಹೌದು ಪ್ರೀತಿ ಮತ್ತು ಪ್ರೇಮ ಹದ ತಪ್ಪಿದರೆ ರಾಕ್ಷಸತ್ವಕ್ಕೆ ದಾರಿ ತೋರಿಸುತ್ತದೆ.ಜಗತ್ತಿನಲ್ಲಿ ಪ್ರೀತಿ ಹೆಣ್ಣಿನ ಮೋಹದಿಂದಲೇ ಆರಂಭವಾಗುವುದು.ಅದಕ್ಕೆ ಬೇಕಾದಷ್ಟು ಘಟನೆಗಳು ದಾಖಲಾಗಿವೆ.ಅದಕ್ಕೆ ಪುಷ್ಠಿ ನೀಡುವಂತ ಇಂದಿನ ಸಾಮಾಜಿಕ ಸ್ಥಿತ್ಯಂತರಗಳೂ ನಡೆಯುತ್ತಲೂ ಇವೆ. ಪ್ರೀತಿ ಹದ ತಪ್ಪಿದಾಗ ಏನಾಗುತ್ತದೆ ಅಂದರೆ " ಕಣ್ಣಿಗೆ ಆಸೀಡ್" ಎರಚಿ ವಿರೂಪಗಳು ರಾಕ್ಷಸತ್ವಗಳು ಇಂದಿಗೂ ಜೀವಂತಗೊಳಿಸಿವೆ. ಅಂತೂ ಪ್ರೀತಿ ರಾಕ್ಷಸರನ್ನೂ ಬಿಡಲಿಲ್ಲ,ಮಾನವರನ್ನು ಬಿಡಲಿಲ್ಲ.ಅದಿಲ್ಲದಿದ್ದರೆ ಯಾವುದೂ ನಡೆಯುವುದಿಲ್ಲ ನಾವು ಇನ್ನಷ್ಟು ಪ್ರೀತಿ ಮಾಡುತ್ತೇವೆ. ಚೆನ್ನಾಗಿದೆ ಲೇಖನ.

Shreepad Hegde said...

Analysis of some of Ramayan's incidents and arguements in favour of Ravan are aleady well documented and familiar to the Yakshagana viewers, but this article is of a special emotional touch of a woman. Krishna has also has a darker side with respect to his relationship with Radhe.

ಈಶ್ವರ said...

ಉಷಕ್ಕಾ, ತುಂಬಾ ಚೆನ್ನಾಗಿದೆ ಬರಹ. ಆರ್ ವಿ ಭಟ್ರೆಂದಂತೆ ನನ್ನದೂ ಅಭಿಪ್ರಾಯವಿದೆ.

ಬ್ಲಾಗ್ ಅಂತೂ ತುಂಬಾ ಚೆನ್ನಾಗಿದೆ..

suragi \ ushakattemane said...

sandhya says:
January 25, 2012 at 10:59 am
ಶಿವ ಹಾಗು ಕೃಷ್ಣ ರ ಸಾಲಿಗೆ ಭೀಮನನ್ನೂ ಸೇರಿಸಬಹುದೇನೋ… ದ್ರೌಪದಿಯ ಬಗ್ಗೆ ಉತ್ಕ೦ಠಿತ ಪ್ರೀತಿ ಇದ್ದದ್ದು ಭೀಮನಿಗೆ, ಸಭೆಯಲ್ಲಿ ಆಕೆಗೆ ಅವಮಾನವಾದಾಗ ಸಿಡಿದವನು ಅವನು, ಅವಳಿಗಾಗಿ ಶಪಥ ಮಾಡಿದವನು ಅವನು. ಆಕೆ ಆಸೆ ಪಟ್ಟಳೆ೦ದು ಹುಡುಕಿ ಹೂ ತ೦ದು ಕೊಟ್ಟವನು, ಕೀಚಕ ಸೆರಗೆಳೆದಾಗ ಹೆ೦ಡತಿಯ ಮಾನ ಕಾದವನು. ಅದಕ್ಕೇ ಭೀಮನ ಅಮಾವಾಸ್ಯೆ ಅ೦ತ ಪೂಜೆ ಮಾಡಿ ಭೀಮನ೦ತಹ ಗ೦ಡನನ್ನೇ ಬಯಸುವುದು! ಆತನ ಶಕ್ತಿ, ಸಾಮರ್ಥ್ಯಕ್ಕಲ್ಲ, ಆಧಾರ ಕುಸಿದಾಗ ಜೊತೆ ನಿಲ್ಲುತ್ತಾನೆ ಅ೦ತ!

bharathi says:
January 25, 2012 at 11:11 am
lekhana ishtavaaythu . bharathi

ರಾಘವೇಂದ್ರ ಜೋಶಿ says:
January 25, 2012 at 12:50 pm
ಈ ನೋಟದಲ್ಲಿ ಪ್ರಾಮಾಣಿಕತೆಯಿದೆ.
ಹಾಗೆಯೇ ಮನುಷ್ಯತ್ವವಿರುವ ಪ್ರತಿಯೊಂದು
ನೋಟದಲ್ಲಿಯೂ ದೇವ-ದಾನವರ ಮಧ್ಯೆ ಶ್ರೇಷ್ಠತೆಯ
ದ್ವಂದ್ವ ಇಣುಕುತ್ತಲೇ ಇರುತ್ತದೆ.

ಚಂದ್ರ says:
January 25, 2012 at 5:03 pm
lekhana tumba chennagide.

suragi \ ushakattemane said...

Sandhya , Secunderabad says:
January 25, 2012 at 5:31 pm
Lekhana arthapoornavaagide – Ishtavaaytu.


ಚೇತನಾ ಭಟ್ says:
January 25, 2012 at 7:01 pm
ಈ ಬರಹ ತುಂಬಾ ಇಷ್ಟವಾಯ್ತು.


veena bhat says:
January 26, 2012 at 11:14 am
ನಿಮ್ಮ ಎಲ್ಲಾ ಉದಾಹರಣೆಗಳನ್ನು ತುಲನೆ ಮಾಡಿದಾಗ ಶಿವ ಪಾರ್ವತಿಯರದು ಈಗಲೂ ಪ್ರಸ್ತುತವೆನಿಸುವ ಪ್ರೇಮ ಅಂತ ನನಗನ್ನಿಸುತ್ತೆ .ಯಾಕಂದ್ರೆ ಇಲ್ಲಿ ಅಗಾಧ ಪ್ರೀತಿ ಇದೆ, ಬದ್ಧತೆ ಇದೆ ಮತ್ತು ಸ್ತ್ರೀ ಸಮಾನತೆಯೂ ಇದೆ.
ರಾಕ್ಷಸರದು ತೀವ್ರ ತರದ ಪ್ರೀತಿಯಾದರೂ ಅಲ್ಲಿ ಬದ್ಧತೆ ಇಲ್ಲ.ಕ್ಷಣಿಕ ಮತ್ತು ನಿರಂತರವಾಗಿ ಆ ಸ್ಥಿತಿಯಲ್ಲಿ ಇರುವುದು ಸಾಧ್ಯವಿಲ್ಲ.ವೇಷ ಬದಲಾಯಿಸುತ್ತ ಸಂಗಾತಿಗಳೂ ಬದಲಾಗುತ್ತಿರಬಹುದು ..::))
ಆದರೂ ಪ್ರೀತಿಯ ಪರಿಭಾಷೆ ಶಭ್ದಗಳಿಗೆ ನಿಲುಕದ್ದು ….ಷಷ್ಠಿಪೂರ್ತಿ ಮಾಡ್ಕೊಂಡು ಮಕ್ಕಳು ,ಮರಿ ಮಕ್ಕಳು ,ಮೊಮ್ಮಕ್ಕಳ ಎದುರು ನಾಚ್ಕೊಂಡು ಹಾರ ಬದಲಾಯಿಸ್ಕೋತಾರಲ್ಲ ಆ ದಂಪತಿಗಳ ಪ್ರೇಮಕ್ಕೆ ಸಾಟಿಯಿದೆಯೇ ..?
ನಿಮ್ಮ ಲೇಖನ ಪ್ರೀತಿ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡಿತು ….:):)

ಸುಧಾ ಚಿದಾನಂದಗೌಡ. says:
January 26, 2012 at 4:25 pm
ಪ್ರಾಮಾಣಿಕವಾದ ಮತ್ತು ನೈಜವಾದ ಲೇಖನ ಇದು.
ತುಂಬಾ ಮೆಚ್ಚುಗೆಯಾಯಿತು.
ಸುಧಾ ಚಿದಾನಂದಗೌಡ.

suragi \ ushakattemane said...

D.RAVIVARMA says:
January 28, 2012 at 6:48 am
ನಿಮ್ಮ ಲೇಖನ ತುಂಬಾ ಗಮ್ಬೀರವಾದಂತಹ ಪ್ರಸ್ನೆಯನ್ನು ನಮ್ಮ ಮುಂದಿಟ್ಟಿದೆ. ಅದು ನಿಜಕ್ಕೂ ಇಂದಿನ ಜ್ವಲಂತ ಸಮಸ್ಯೆಯೇನೋ ಎಂದು ನನಗನಿಸುತ್ತಿದೆ. kautilyana ಅರ್ಥಶಸ್ಥ್ರ, ಕಾಮಶಸ್ತ್ರದ ಹಾಗೆ premashashtravannu ಯಾರು ಬರೆದಿಲ್ಲ .ಅದೇ ನಮ್ಮ ದುರಂತ, ಅದು ಕಾಳಿದಾಸನ ಕಾವ್ಯದಲ್ಲಿ ಇತ್ತಾದರೂ ಅದು ನಮಗೆ ಅರ್ಥಿಸಿಕೊಲ್ಲಗಲಿಲ್ಲವೇನೋ. ನಮ್ಮ ಮುಂದಿರುವ ಬಹುದೊಡ್ಡ ಆದರ್ಶವಾದ ಪ್ರೆಮಕಥೆಗಲೆಂದ್ರೆ romeo juliet ಹಾಗೆ ನಮ್ಮ ಪುರಾಣಗಳಲ್ಲಿ , ಮಹಾಭಾರತ,ರಾಮಾಯಣ, ಹೀಗೆ ನಮ್ಮ ಗ್ರಂಥಗಳಲ್ಲಿ ಬರುವ ಅತಿಉತ್ತ್ಮ ಪ್ರೇಮಕಥೆಗಳನ್ನು ,ಅದನ್ನು,ಮೂಲೆಗುಂಪಾಗಿಸಿ, ಕಾವ್ಯಕ್ಕೆ ಮತ್ತೊಂದು ಮಗ್ಗಲನ್ನು ಎತ್ತಿಹಿಡಿದಿದ್ದಾರೆ. .ಪ್ತ್ರೀತಿಯ ಬೆನ್ನು ಹತ್ತಿ ,ಅದು ದೊರಕದೆ, ಅದರಲ್ಲಿ ಒಳಗೊಲ್ಲಲಾಗದ ಯುವಕರು ದೇವದಾಸ್ ಗಳಗುತ್ತಿದ್ದಾರೆ.ನನಗನ್ನಿಸಿ ಹಾಗೆ “ಓಶೋ” ಈ ನಿಟ್ಟಿನಲ್ಲಿ ಒಂದು ಸ್ಪಸ್ತ ಅಭಿಪ್ರಾಯ ಕೊಡಲು ಶ್ರಮಿಸಿದರೆನೋ ಅನಿಸುತ್ತೆ. ಎಲ್ಲಿ ಎಲ್ಲವು ಇದೆ,ಏನೂ ಇಲ್ಲ, ಪ್ರೀತಿಯ ನೆಪದಲ್ಲಿ ನಡೆಯುತ್ತಿರುವ,ಕೊಲೆಗಳು, ಹತಾಶೆ ಆತ್ಮಹತ್ಯೆಗಳು,. ಪ್ರೀತಿಯೇ ಬದುಕು ಎಂದು ದಾರಿತಪ್ಪಿಸುತ್ತಿರುವ ಮಾದ್ಯಮಗಳು, ಸಿನಿಮಾಗಳು. ನಾವೆಲ್ಲೋ ಏನನ್ನೋ ಕಳೆದುಕೊಂದಿದ್ದೆವೇನೋ ನನಗೆ ಗೊತ್ತಿಲ್ಲ. ನಿಮ್ಮ ಲೇಖನ ನನ್ನನತು ತುಂಬಾ ಕಾಡಿದೆ.where ವೀ ಅರೆ landing ನಮ್ಮ ಎತ್ತ ಹೆಜ್ಜೆ ಹಾಕುತ್ತಿದ್ದೇವೆ ಇಲ್ಲಿ ಕೈ ಹಿಡಿದು ನಡೆಸುವವರು ಯಾರು ………..
ರವಿ ವರ್ಮ ಹೊಸಪೇಟೆ ,.,


D.RAVI VARMA says:
January 29, 2012 at 7:05 pm
ಮೇಡಂ ನಿಮ್ಮ ಲೇಖನ ಮತ್ತೊಮ್ಮೆ ಓದಿದೆ,ಅದೇಕೋ ಮತ್ತೆ ಮತ್ತೆ ಓದಬೇಕೆನಿಸಿದ್ದರಿಂದ ಮತ್ತೆ ಮತ್ತೆ ಓದಿದೆ , ಇತ್ತೀಚಿಗೆ ಅವಧಿಯಲ್ಲಿ ಪುಟದ ಕೆಳಬಗದಲ್ಲಿ ಒಂದು ಅತಿ ಉತ್ತಮ ಹನಿಗವನ ಹಾಕುತ್ತಿದ್ದಾರೆ. ಹಾಗೆ ಕಣ್ಣಾಡಿಸಿದೆ. ಅಲ್ಲಿ ಅಮೃತ ಪ್ರೀತಂ ಅವರ ಈ ಕವನವಿತ್ತು ” ಮತ್ತೆ ನಿನ್ನ ನೆನಪಾಯಿತು ,
ಮತ್ತೆ ಅಗ್ನಿಯಂಥ ನಿನ್ನ ಚುಂಬಿಸಿದೆ ,
ಪ್ರೀತಿ ಬಟ್ಟಲಿನ ವಿಷವೇ ಆಗಿರಬಹುದು ,
ಆದರೆ,
ಆ ವಿಷದ ಮತ್ತೊಂದು ಗುಟುಕಿಗೆ ಕೈ ಚಾಚಿದೆ ”
ಪ್ರೀತಿಯ ಪರಾಕಸ್ತೆಯನ್ನು ತಮ್ಮ ಕವನದಲ್ಲಿ ಅಮೃತಾ ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಮದಿರೆ ಗಿಂತ ಶಕ್ತಿಯಾದ ಮತ್ತೆನೋಒ ಈ ಪ್ರೀತಿ ,ನನಗೆ ಗೊತ್ತಿಲ್ಲ. ಅಮೃತಾ ಅವರನ್ನೇ ಕೆಲಬೇಕಸ್ತೆ.
ರವಿ ವರ್ಮ ಹೊಸಪೇಟೆ.