Thursday, January 26, 2012

’ಟ್ರೈನ್ ಟು ಪಾಕಿಸ್ತಾನ’ ದಿಂದ ’ಬುದ್ಧ ಪ್ರಬುದ್ಧ’ನಾದ ಹಾದಿ



ಸಂಸ್ಕೃತಿ- ಸಾಮರಸ್ಯದ ಘೋಷ ವಾಕ್ಯವನ್ನಿಟ್ಟುಕೊಂಡು ರಾಜ್ಯ ಸಾಂಸ್ಕೃತಿಕ ಸಂಘಟನೆ ’ಸಮುದಾಯ’ ಬೆಂಗಳೂರಿನ ರವೀಂದ್ರ ಕ್ಷೇತ್ರದಲ್ಲಿ ಜನವರಿ ೨೧ರಿಂದ ಐದು ದಿನಗಳ ಕಾಲ ರಂಗಚಟುವಟಿಗಳನ್ನು ಹಮ್ಮಿಕೊಂಡಿದೆ.
ಉದ್ಘಾಟನೆಯ ದಿನದಂದು ಪ್ರದರ್ಶಿತವಾದ ನಾಟಕ ’ಟ್ರೈನ್ ಟು ಪಾಕಿಸ್ತಾನ್’ ನಮ್ಮ ದೇಶದ ಪ್ರಖ್ಯಾತ ಬರಹಗಾರರಾದ ಖುಷ್ವಂತ್ ಸಿಂಗ್ ಅವರ ಇದೇ ಹೆಸರಿನ ಬಹು ಪ್ರಸಿದ್ಧ ಕಾದಂಬರಿಯನ್ನು ನಾಟಕ ರೂಪಕ್ಕೆ ಅಳವಡಿಸಿದವರು ಚಿದಾನಂದ ಸಾಲಿ. ರಾಯಚೂರಿನ ಸಮುದಾಯ ತಂಡಕ್ಕಾಗಿ ಇದನ್ನು ನಿರ್ದೇಶಿಸಿದವರು ತಾಯಣ್ಣ ಯರಗೇರ.
.ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂದು ಮುಸ್ಲಿಮರ ಮಾರಣ ಹೋಮದ ನಡುವೆಯೂ ಪಂಜಾಬಿನ ಮನೋ ಮಜ್ರಾ ಎಂಬ ಪುಟ್ಟ ಹಳ್ಳಿ ಭಾವೈಕತೆಯನ್ನು ಕಾಪಾಡಿಕೊಂಡು ಬರುತ್ತದೆ. ಅಲ್ಲಿನ ಸಿಖ್ ಯುವಕನೊಬ್ಬ ಮುಸ್ಲಿಂ ಯುವತಿಯೊಬ್ಬಳನ್ನು ಪ್ರೇಮಿಸುತ್ತಾನೆ. ಟ್ರೈನ್ ಗಳು ಆ ದೇಶದಿಂದ ಹಿಂದುಗಳ ಹೆಣಗಳು ಹೇರಿಕೊಂಡು ಬಂದರೆ ಇಲ್ಲಿಂದ ಮುಸ್ಲಿಂರ ಹೆಣಗಳು ರವಾನೆಯಾಗುತ್ತವೆ. ಇಂತಹ ಸಂದರ್ಭದಲ್ಲಿ ವಯ್ಯಕ್ತಿಕ ಪ್ರೇಮ ಸಾರ್ವತ್ರಿಕಗೊಳ್ಳುವ, ವಿಶ್ವಪ್ರೇಮದ ಸಂದೇಶವನ್ನು ಸಾರುವ ಈ ನಾಟಕದ ವಸ್ತು ಮತ್ತು ಆಶಯ ಎಲ್ಲಾ ಕಾಲಕ್ಕೂ ಸಲ್ಲುವಂತಾಗಿದೆ.
ಬಹುಶಃ ನಿರ್ದೇಶಕರಿಗೆ ಇದು ನಿರ್ದೇಶನದ ಮೊದಲ ಅನುಭವವಾಗಿರಬೇಕು. ಹಾಗಾಗಿ ಅವರು ಪಾತ್ರಧಾರಿಗಳ ಆಯ್ಕೆಯಿಂದ ಹಿಡಿದು ನಾಟಕದ ಆಶಯವನ್ನು ಗ್ರಹಿಸುವಲ್ಲಿಯವರಿಗೆ ಎಡವಿದ್ದಾರೆ. ಮಾತ್ರವಲ್ಲ ರಿಹರ್ಸಲ್ ನ ಕೊರತೆಯೂ ಎದ್ದು ಕಾಣುತ್ತಿತ್ತು. ರಂಗದಲ್ಲಿ ಚಲನೆಯಿರಲಿಲ್ಲ. ನಟರ ಮಾತಿನಲ್ಲಿ ಏರಿಳಿತಗಳಿರಲಿಲ್ಲ. ಸೂಕ್ತ ರಂಗ ಪರಿಕರಗಳಿಲ್ಲ, ಇದ್ದುದರ ಬಳಕೆಯಾಗಲಿಲ್ಲ, ಬೆಳಕಿನ ವಿನ್ಯಾಸದಲ್ಲಿ ಹೊಸತನವಿರಲಿಲ್ಲ. ಈ ಎಲ್ಲಾ ಕೊರತೆಗಳ ಕಾರಣವೋ ಅಥವಾ ರೂಪಾಂತರದ ದೋಷವೋ ಸಂಭಾಶಣೆಯಲ್ಲಿ ತೂಕ, ಹರಿತಗಳಿರಲಿಲ್ಲ.
ಎರಡನೆಯ ದಿನದಂದು ಪ್ರದರ್ಶಿತವಾದ ನಾಟಕ, ’ಬುದ್ಧ ಪ್ರಬುದ್ಧ’ ಧಾರವಾಡದ ಸಮುದಾಯ ತಂಡ ಅಭಿನಯಿಸಿದ ಈ ನಾಟಕವನ್ನು ನಿರ್ದೇಶಕರು ವಾಸುದೇವ ಗಂಗೇರ. ರಚನೆ ಡಾ.ಶ್ರೀಶೈಲ ಹುದ್ದಾರ.
ನಾವೆಲ್ಲಾ ಓದಿದಂತೆ, ತಿಳಿದುಕೊಂಡಂತೆ ಬುದ್ಧ ಅರಿವಿನ ಹರಿಕಾರ. ಅಂಗುಲಿಮಾಲ ಹಿಂಸೆಯ ಪ್ರತಿರೂಪ. ಈ ಎರಡು ವ್ಯಕಿತ್ವಗಳು ನಾಟಕದುದ್ದಕ್ಕೂ ಹರಡಿಕೊಂಡಿದೆ.
ಬೆಳಕಿನ ವಿನ್ಯಾಸ ,ವೇಷಭೂಷಣ,ಅಭಿನಯ ಸಂಗೀತ, ಧ್ವನಿ ಎಲ್ಲವೂ ಕೂಡಾ ಒಂದಕ್ಕೊಂದು ಪೂರಕವಾಗಿ ನಾಟಕವನ್ನು ಯಶಸ್ಸಿನೆಡೆಗೆ ಕೊಂಡೊಯ್ಯುವುದರಲ್ಲಿ ಸಹಕಾರಿಯಾಗಿತ್ತು. ನಾಟಕದಲ್ಲಿ ಹಲವು ಸಂಕೇತಗಳನ್ನು ಬಳಸಿಕೊಂಡದ್ದು ನಾಟಕದ ಅರ್ಥ ವಿಸ್ತಾರಕ್ಕೆ ಕಾರಣವಾಗಿತ್ತು.ಪೌರ್ಣಮಿಯೆಂಬುದು ಬುದ್ಧನ ಹುಟ್ಟು, ಜ್ನಾನೋದಯ ಮತ್ತು ನಿರ್ವಾಣದ ಹಂತಗಳಲ್ಲಿ ಪ್ರಮುಖ ಪಾತ್ರ ವಹಿಸಿತ್ತು.ಅದನ್ನು ಹಿಂಬದಿಯ ಪರದೆಯಲ್ಲಿ ಬೆಳಕಿನ ವಿನ್ಯಾಸದಲ್ಲಿ ಶಾಶ್ವತಗೊಳಿಸಲಾಗಿತ್ತು, ಬುದ್ಧ, ಗಾಂಧೀಜಿಯ ಅಹಿಂಸಾ ತತ್ವದ ಬಗ್ಗೆ ಮಾತಾಡುವಾಗ ಗಾಂದೀಜಿಯ ಜನಪ್ರಿಯ ಭಂಗಿಯಾಗಿದ್ದ ಎರಡೂ ಕಾಲುಗಳನ್ನು ಹಿಂಮಡಿಚಿ ಕುಳಿತುಕೊಂಡಿದ್ದ. ಗಾಂದೀಜಿಯ ’ವೈಸ್ಣೋವ ಜನತೋ….’ ಹಾಡನ್ನು ಬಳಸಿಕೊಂಡದ್ದು ಬುದ್ಧನ ತತ್ವಗಳನ್ನು ಸಾರ್ವತ್ರಿಕರಣಗೊಳಿಸುವ ಪ್ರಯತ್ನವಾಗಿತ್ತು. ಮತ್ತೊಮ್ಮೆ ಆತ ಮಾತಾಡುವ ಭಂಗಿ ಅಂಬೇಡ್ಕರ್ ಅವರನನ್ನು ನೆನಪಿಗೆ ತಂದಿತ್ತು.
ಬೋಧಿ ವೃಕ್ಷವನ್ನು ಸಂಕೇತಿಸುವ ಅರಳಿ ಎಲೆಯ ಅಡಿಯಲ್ಲಿ ನಿಂತ ಬುದ್ಧ ಮತ್ತು ಪ್ರಾಪ್ತಾ ಎಂಬ ಹೊಸ ಹೆಸರಿನೊಂದಿಗೆ ಜನರ ಆಶ್ರಯದಲ್ಲಿ ನಿಂತಂತೆ ಭಾಸವಾಗುವ, ದುಡಿಯುವ ಜನರ ಪ್ರತಿನಿಧಿಯಾಗಿ ಬಿಂಬಿಸಲ್ಪಟ್ಟ ಅಂಗುಲಿಮಾಲನೊಂದಿಗೆ ನಾಟಕ ಮುಕ್ತಾಯವಾಗುತ್ತದೆ.
ಸಾರಥಿ, ಸೈನಿಕ, ಮಂತ್ರಿ , ಹಾಸ್ಯಗಾರನಂತೆ ಕಾಣುವ ರಾಜ, ಬೌದ್ಧ ಬಿಕ್ಕುಗಳು ಸೇರಿದಂತೆ ಎಲ್ಲಾ ಪಾತ್ರ್ಧಾರಿಗಳಿಗೂ ನಾಟಕದಲ್ಲಿ ಪ್ರತ್ಯೇಕ ಅಸ್ತಿತ್ವವಿತ್ತು. ಅಭಿನಯಕ್ಕೆ ಅವಕಾಶವಿತ್ತು.’ ಎಲ್ಲಾ ಪಾತ್ರದಾರಿಗಳ ಆಂಗೀಕ ಭಾಷೆಗೆ ಒತ್ತು ನೀಡಲಾಗಿತ್ತು.
ಸಮುದಾಯದ ರಂಗಚಟುವಟಿಕೆ ಎಂದಾಕ್ಷಣ ನಮಗೆ ನೆನಪಾಗುವುದು ಬೀದಿ ನಾಟಕಗಳು. ಪ್ರತಿಭಟನೆ ಮತ್ತು ಚಳುವಳಿಗಳಿಗೆ ನಾಟಕವನ್ನು ಪ್ರಭಲ ಅಸ್ತ್ರವಾಗಿ ಬಳಸಿಕೊಂಡದ್ದು ಸಮುದಾಯದ ವಿಶೇಷತೆ. ಜನರ ಮಧ್ಯದಲ್ಲಿಂದಲೇ ಎದ್ದು ಬರುವ ಪಾತ್ರಗಳು, ಯಾವುದೇ ರಂಗಪರಿಕರಗಳಿಲ್ಲದೇ, ಸಮಯ ಸಂದರ್ಭಕ್ಕನುಗುಣವಾಗಿ ಅವರೇ ರಂಗಪರಿಕರಗಳಾಗಿಯೂ ಪರಿವರ್ತನೆಗೊಳ್ಳುವ ಪರಿ, ರಂಗಭೂಮಿಯ ಪರಿಚಯವಿಲ್ಲದವರ ಮನಸಿನೊಳಗೂ ನಾಟಕ ತಲುಪುವ ಪ್ರಯತ್ನ ಮಾಡುತ್ತದೆ.
ಭಾನುವಾರ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಪ್ರದರ್ಶಿತಗೊಂಡ ಬೀದಿ ನಾಟಕ’ಧನ್ವಂತರಿಯ ಚಿಕಿತ್ಸೆ’ .ಕುವೆಂಪುರವರ ಇದೇ ಹೆಸರಿನ ಕಥೆಯನ್ನಾಧರಿಸಿ ಡಾ.ವಿಜಯಾ ನಾಟ್ಅಕಕ್ಕೆ ರೂಪಾಂತರಿಸಿದ್ದಾರೆ.. ಇದರ ನಿರ್ಧೇಶನ ಶಶಿಧರ್ ಭಾರಿಘಾಟ್ ಅವರದು. ಬೆಂಗಳೂರಿನ ಸಮುದಾಯ ತಂಡ ಇದನ್ನು ಪ್ರದರ್ಶಿಸಿತ್ತು. ಸುಮಾರು ಆರು ದಶಕಗಳಿಗೂ ಹಿಂದೆ ಬರೆದ ಈ ಕಥೆಯಲ್ಲಿ ರೈತನ ಧಾರುಣ ನರಳಿಕೆಗೆ ದೈಹಿಕ ರೋಗ ಕಾರಣವಲ್ಲ, ಬದಲಾಗಿ ಪರಿಸರ ಮತ್ತು ವ್ಯವಸ್ಥೆಯಲ್ಲಿನ ದೋಷವೇ ಕಾರಣವೆಂದು ಹೇಳಲಾಗಿತ್ತು. ಅಂದು ಅವರು ಕಂಡುಕೊಂಡ ಸತ್ಯ ಇವತ್ತಿಗೂ ಪ್ರಸ್ತುತ. ಹಾಗಾಗಿಯೇ ಈಗ ಗಣಿ ರಾಜಕೀಯ, ಟುಜಿ ಹಗರಣ, ರೈತರ ಆತ್ಮಹತ್ಯೆ, ಮಡೆಸ್ನಾನ ಮುಂತಾದ ಸಮಸ್ಯೆಗಳ ಹಿನ್ನೆಲೆಯಲ್ಲಿಟ್ಟು ನೋಡಲಾಗಿದೆ.
ಸದಾ ಬಿಝಿಯಾಗಿರುವ, ಒತ್ತಡದಲ್ಲಿ ಬದುಕುತ್ತಿರುವ ಬೆಂಗಳೂರಿಗರು ನಾಟಕದಂಥ ಕಲಾಪ್ರಕಾರದಿಂದ ದೂರವಾಗುತ್ತಿದ್ದರೆನೋ ಎಂದು ಭಾಸವಾಗುತ್ತಿರುವ ಸಮಯದಲ್ಲೇ ಈ ಪ್ರದರ್ಶನಗಳಿಗೆ ಕಲಾಕ್ಷೇತ್ರ ತುಂಬುತ್ತಿರುದು ಆಶಾಧಾಯಕ ಬೆಳವಣಿಗೆ.
[ ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹ ]

1 comments:

sunaath said...

ಉತ್ತಮ ಮಾಹಿತಿಯ ವಿಮರ್ಶೆಯನ್ನು ನೀಡಿದ್ದೀರಿ.