Monday, February 27, 2012

ಶಿಖರ ತಲುಪುವ ಮೊದಲೇ ಕುಸಿದ ’ಶಿಖರ ಸೂರ್ಯ’




”ಶಿಖರ ಸೂರ್ಯ’’ ರಂಗಾಯಣದ ಹೊಸ ನಾಟಕ. ಇದೇ ಜನವರಿಯಲ್ಲಿ ಮೈಸೂರಿನಲ್ಲಿ ನಡೆದ ’ಬಹುರೂಪಿ ನಾಟಕೋತ್ಸವ’ದ ಉದ್ಘಾಟನೆಯಂದು ಪ್ರದರ್ಶಿತವಾದ ನಾಟಕ. ಆ ಉತ್ಸವದಲ್ಲಿ ಜ್ನಾನಪೀಠ ವಿಜೇತರ ಕೃತಿಗಳನ್ನು ಆಯ್ದುಕೊಂಡು ಅದಕ್ಕೆ ’ಜ್ನಾನ ಪೀಠ ರಂಗೋತ್ಸವ’ ಎಂದು ಶೀರ್ಷಿಕೆಯನ್ನು ನೀಡಲಾಗಿತ್ತು.
ಶಿಖರ ಸೂರ್ಯ ಚಂದ್ರಶೇಖರ ಕಂಬಾರರ ಇತ್ತೀಚೆಯ ಮತ್ತು ಅವರ ಐದನೆಯ ಕಾದಂಬರಿ. ಜನಪದ ಮಾಹಾಕಾವ್ಯದ ಗುಣಲಕ್ಷಣಗಳನ್ನು ಹೊಂದಿರುವ ಈ ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಿದವರು ರಂಗಾಯಣದವರೇ ಆದ ಎಸ್. ರಾಮನಾಥ್ ಅವರು. ನಿರ್ದೇಶನ, ರಂಗಾಯಣದ ಪ್ರಸಕ್ತ ನಿರ್ದೇಶಕರಾದ ಬಿ.ವಿ. ರಾಜಾರಂ.
ಕಂಬಾರರಿಗೆ ರಂಗಗೌರವ ಸಮರ್ಪಿಸುವ ಸಲುವಾಗ ಬೆಂಗಳೂರಿನ ಸಾಂಸ್ಕೃತಿಕ ಸಂಘಟನೆ ’ಭಾಗವತರು’ ಕಂಬಾರರ ನಾಟಕೋತ್ಸವವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿತ್ತು. ಅಲ್ಲಿ ಸ್ಪಂದನ ತಂಡದಿಂದ ಬಿ. ಜಯಶ್ರೀ ನಿರ್ದೇಶನದ ’ಕರಿಮಾಯಿ. ಪ್ರಯೋಗರಂಗ ತಂಡದಿಂದ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ ’ಶಿವರಾತ್ರಿ’ ಬೆನಕ ತಂಡದಿಂದ ಬಿ.ವಿ. ಕಾರಂತ ನಿರ್ದೇಶನದ ’ಜೋಕುಮಾರ ಸ್ವಾಮಿ’ ಮತ್ತು ರಂಗಾಯಣ ತಂಡದಿಂದ ಡಾ. ಬಿ.ವಿ.ರಾಜಾರಾಂ ನಿರ್ದೇಶನದ ’ಶಿಖರ ಸೂರ್ಯ’ ನಾಟಕಗಳು ಪ್ರದರ್ಶಿಸಲ್ಪಟ್ಟವು.
’ಶಿಖರ ಸೂರ್ಯ’ದ ಕಥೆ ಮೇಲ್ನೋಟಕ್ಕೆ ಸರಳ. ಅದು ಹೆಣ್ಣು, ಹೊನ್ನು, ಮಣ್ಣಿನ ಹಿಂದೆ ಬಿದ್ದ ಶಿಖರಸೂರ್ಯನೆಂಬ ಸಾಹಸಿಯ ದುರಂತ ಕಥೆ. ಅದು ಒಳಿತು ಕೆಡುಕುಗಳ ನಡುವಿನ ಸಂಘರ್ಷದ ಕಥೆಯೂ ಹೌದು. ಕಂಬಾರರನ್ನು ಓದಿದವರಿಗೆ ಗೊತ್ತಿದೆ. ಅವರ ಎಲ್ಲಾ ಕೃತಿಗಳಲ್ಲಿ ಒಂದು ಆದರ್ಶ ರಾಜ್ಯದ ಕಲ್ಪನೆಯಿರುತ್ತದೆ. ಅದು ಶಿವಾಪುರವೆಂಬ ಜನಪದರ ಕಲ್ಪನೆ..”ಶಿಖರ ಸೂರ್ಯ’ ನಾಟಕ ತೆರೆದುಕೊಳ್ಳುವುದೇ ಶಿವಾಪುರದಿಂದ ಮತ್ತು ’ಎಲ್ಲರೂ ಸುಖವಾಗಿದ್ದರು’ ಎಂಬ ಜನಪದದ ಆಶಯದೊಂದಿಗೆ ಇಲ್ಲಿಯೇ ಅಂತ್ಯಗೊಳ್ಳುತ್ತದೆ. ಇದರ ಮಧ್ಯೆ ನಡೆಯುವ ಹತ್ತಾರು ಘಟನೆಗಳು, ಅನಿರೀಕ್ಷಿತ ತಿರುವುಗಳು ನಾಟಕದಲ್ಲಿ ನಡೆಯುತ್ತದೆ. ಶಿವಾಪುರವೆಂಬ ಒಳಿತುನೂರಿಗೆ ವಿರುದ್ಧವಾಗಿ ಕನಕಗಿರಿಯೆಂಬ ಕೆಡುಕಿನೂರಿದೆ. ಅಲ್ಲಿ ವರ್ತಕರದೇ ಕಾರುಬಾರು.ಅಲ್ಲಿಯ ರಾಜ ವರ್ತಕರ ಕೈಗೊಂಬೆ. ರಾಣಿ ಮಂತ್ರಿಯ ತೋಳಬಂಧಿ. ಆ ರಾಣಿಗೂ ಆಂತರ್ಯದಲ್ಲಿ ಶಿವಾಪುರದ ಬೈರಾಗಿ ಶಿವಪಾದನ ಮೇಲೆ ಆಕರ್ಷಣೆ.
ಒಂದು ರೀತಿಯಲ್ಲಿ ’ಶಿಖರ ಸೂರ್ಯ’ ಚಿನ್ನಮುತ್ತನೆಂಬ ಯುವಕ ಕಲಾವಿದನಾಗಲು ಹಂಬಲಿಸಿ, ವಿಫಲನಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿ, ಶಿವಾಪುರದ ಮುಗ್ಧ ದಂಪತಿಗಳಾದ ಜಟ್ಟಿಗ ಮತ್ತು ಬೆಳ್ಳಿಯ ಆರೈಕೆಯಲ್ಲಿ ಮತ್ತೆ ಆರೋಗ್ಯಪಡೆದು, ಕೊನೆಗೆ ಆತ ಬೆಳ್ಳಿಯ ಮೇಲೆ ಆಸೆಪಟ್ಟು ಸಾಧ್ಯವಾಗದಾದಾಗ ಜಯಸೂರ್ಯನೆಂದು ಹೆಸರು ಬದಲಾಯಿಸಿಕೊಂಡು ಅಮ್ಮನ ಬೆಟ್ಟದಲ್ಲಿರುವ ಶಿವಪಾದನ ಬಳಿಬಂದು ಶಿಷ್ಯತ್ವ ಸ್ವೀಕರಿಸಿ ವಜ್ರದೇಹಿಯಾಗುತ್ತಾನೆ.ಅನಂತರದಲ್ಲಿ ಶಿವಪಾದನಿಂದ ಹೊರದೂಡಲ್ಪಟ್ಟು ಬೆಳ್ಳಿಯ ವ್ಯಾಮೋಹದಿಂದ ಜಟ್ಟಿಗನನ್ನು ಕೊಲೆಮಾಡಿ ಅವಳಿಂದ ತಿರಸ್ಕೃತನಾಗಿ ಕನಕಪುರಿಗೆ ಬಂದು ಶಿಖರಸೂರ್ಯನಾಗುತ್ತಾನೆ. ಅಲ್ಲಿ ರಾಜವೈದ್ಯನಾಗಿ ಜನಪ್ರಿಯನಾಗುತ್ತಾನೆ. ರಾಜಕುಮಾರಿಯನ್ನು ಮದುವೆಯಾಗುತ್ತಾನೆ. ಅನಂತರ ನಡೆಯುವುದೆಲ್ಲಾ ಆತನ ಮಹತ್ವಾಂಕ್ಷೆಯ ಕುತಂತ್ರಗಳೇ. ಕೊನೆಗೆ ಆತ ರಾಜ್ಯವನ್ನೂ ಪಡೆಯುತ್ತಾನೆ, ರಾಣಿಯನ್ನೂ ಕೂಡಾ. ಆದರೆ ಆತ ಆ ವೇಳೆಗೆ ವಿಷಪುರುಷನಾಗಿ ಬದಲಾಗಿದ್ದ ಕಾರಣದಿಂದ ರಾಣಿ ಸತ್ತು ಹೋಗುತ್ತಾಳೆ. ಕನಕ ಪುರಿಯಲ್ಲಿ ಎಲ್ಲೆಲ್ಲೂ ಚಿನ್ನವೇ ತಿನ್ನಲು ಧಾನ್ಯವಿಲ್ಲ. ಯಾಕೆಂದರೆ ಧಾನ್ಯವನ್ನೆಲ್ಲಾ ಶಿಖರ ಸೂರ್ಯ ಚಿನ್ನವಾಗಿ ಬದಲಾಯಿದ್ದಾನೆ. ಆತ ಮನುಷ್ಯತ್ವ ಕಳೆದುಕೊಳ್ಳುತ್ತಾ ಹೋಗುತ್ತಾನೆ.. ..ಅದರೆ ಶಿವಾಪುರದಲ್ಲಿ ಇದಕ್ಕೆ ತದ್ವಿರುದ್ಧ ಸ್ಥಿತಿ ನಿನ್ನಡಿಯೆಂಬ ಶಿವಪಾದ ವಸ್ತ್ರದಲ್ಲಿ ಮೂರು ಪಾವು ಭತ್ತ ಕಟ್ಟಿಕೊಂಡು, ಅದರಲ್ಲಿ ಆನ್ನಮಾಡಿ ತನಗೆತೃಪ್ತಿಯಾಗುವಂತೆ ಊಟ ಬಡಿಸಬಲ್ಲ ಯೋಗ್ಯ ವದುವನ್ನು ಹುಡುಕಿಕೊಂಡು ಹೊರಟು ಶಿಖರಸೂರ್ಯನ ಮಗಳನ್ನೇ ಪಡೆಯುತ್ತಾನೆ. ಆದರೆ ಶಿಖರ ಸೂರ್ಯ ಆಕೆಯನ್ನೇ ಕೊಲ್ಲಲೆಳಸುತ್ತಾನೆ..ಕೊನೆಯಲ್ಲಿ ನಿನ್ನಡಿಯಿಂದ ತಿರುಮಂತ್ರ ಹಾಕಿಸಿಕೊಂಡು ಚಿನ್ನವೆಲ್ಲಾ ಮೂಲಸ್ಥಿತಿಗೆ ಬಂದು ಆತನಿಗೆ ರಸವಿಧ್ಯೆಯನ್ನು ಹೇಳಿಕೊಟ್ಟ ನಾಗಾರ್ಜುನ ಶಾಪಕ್ಕೆ ಗುರಿಯಾಗಿ ದುರಂತವಪ್ಪುತ್ತಾನೆ.
”ಶಿಖರ ಸೂರ್ಯ’’ದ ಶಿಖರ ಯಾವುದು? ಅದು ಗೊತ್ತಾದರೆ, ನಾಟಕದ ಓಘ ಆ ಕಡೆಗೇ ಇರುತಿತ್ತು.. ಕಂಬಾರರ ಎಲ್ಲಾ ಕೃತಿಗಳ ಮೂಲದ್ರವ್ಯ ಸೆಕ್ಸ್ ಮತ್ತು ಅಧ್ಯಾತ್ಮದ ಹುಡುಕಾಟ. ಅದಕ್ಕವರು ಜಾನಪದದ ಆಕರಗಳನ್ನು ಉಪಯೋಗಿಸಿಕೊಳ್ಳುತ್ತಾರೆ. ಹಾಗೆ ಮಾಡುತ್ತಲೇ ಸಮಕಾಲೀನ ಸಮಸ್ಯೆಗಳೊಡನೆ ಮುಖಾಮುಖಿಯಾಗುವ ಪ್ರಯತ್ನ ಮಾಡುತ್ತಾರೆ. ಇಲ್ಲಿ ಕೂಡಾ ಅದೇ ಹುಡುಕಾಟ. ಮತ್ತು ಅದೇ ಆಕರ. ಹಾಗಾಗಿ ನಾಟಕದುದ್ದಕ್ಕೂ ರೂಪಕಗಳೇ ತುಂಬಿವೆ. ಇಲ್ಲಿ ಚಿನ್ನದ ಹಪಹಪಿಕೆ ಭೋಗ ಸಂಕೇತವಾಗಿ ಬರುತ್ತದೆ.
ನಿಜ, ನಾಟಕದ ಹರವು ದೊಡ್ಡದು. ಅದನ್ನೆಲ್ಲಾ ಯಥಾವತ್ತಾಗಿ ತರುವ ಭರದಲ್ಲಿ ನಾಟಕ ಸೊರಗಿದೆ. ಅದರ್ ಜೊತೆಗೆ ನಾಟಕದ ನಿರೂಪಣೆಗೆ ಐದೈದು ಮಂದಿ ಜೋಗತಿಯರು ಮತ್ತು ಇತಿಹಾಸಕಾರರ ಮೇಳವನ್ನು ಬಳಸಿಕೊಳ್ಳಲಾಗಿದೆ. ಇಲ್ಲಿ ಇತಿಹಾಸಕಾರರ ಅಗತ್ಯವೇ ಇರಲಿಲ್ಲ, ಅವರು ಮಾತಿನಲ್ಲಿ ತಡವರಿಸುತ್ತಿದ್ದರು. ಅದರಲ್ಲಿ ಏರಿಳಿತಗಳಿರಲಿಲ್ಲ.. ಅವರ ಬದಲಿಗೆ ಜೋಗತಿಯರನ್ನೇ ಬಳಸಿಕೊಳ್ಳಬಹುದಾಗಿತ್ತು. ಉಳಿದಂತೆ ಎಲ್ಲಾ ಕಲಾವಿದರು ಲೀಲಾಜಾಲವಾಗಿ ತನ್ಮಯತೆಯಿಂದ ಅಭಿನಯಿಸಿದ್ದರು. ಶಿಖರ ಸೂರ್ಯನ ಪಾತ್ರದಲ್ಲಿ ಹುಲಗಪ್ಪ ಕಟ್ಟಿಮನಿಯವರುಅದ್ಭುತವಾಗಿ ಅಭಿನಯಿಸಿದ್ದರು. ಜೊತೆಗೆ ಚಂಡಿದಾಸ, ರಾಣಿ, ಶಿವಪಾದ, ಶುಕ್ರ ಇವರೆಲ್ಲರ ಅಭಿನಯ ಎದ್ದು ಕಾಣುತ್ತಿತ್ತು. ಅರ್ಥ ಕೌಶಲ್ಯನ ಆಂಗೀಕ ಅಭಿನಯವಂತೂ ಆತನ ದುರಳತನವನ್ನೂ ನಾಚಿಸುವಷ್ಟು ಸಹಜವಾಗಿತ್ತು. ರಂಗ ಸಜ್ಜಿಕೆ ಸರಳವಾಗಿತ್ತು. ಕಾಸ್ಟ್ಯೂಮ್ ಆಕರ್ಷಕವಾಗಿತ್ತು. ಬಸವಲಿಂಗಯ್ಯ ಹಿರೇಮಠ್ ಮತ್ತು ಶ್ರೀನಿವಾಸ್ ಭಟ್ ಅವರ ಸಂಗೀತ ವಸ್ತುವಿನ ಗಾಂಬೀರ್ಯಕ್ಕೆ ಪೂರಕವಾಗಿತ್ತು. ಇನ್ನು ನಾಟಕದ ಕಥೆಯ ಬೀಳಲುಗಳು ಎಷ್ಟೊಂದು ದಟ್ಟವಾಗಿತ್ತು ಎಂದರೆ ಪ್ರೇಕ್ಷಕನ ಏಕಾಗ್ರತೆ ಸ್ವಲ್ಪ ತಪ್ಪಿದರೂ ಕಥೆಯ ಎಳೆ ತಪ್ಪಿ ಹೋಗುತ್ತಿತ್ತು. ಇದೊಂದು ಓದುವ ನಾಟಕ, ನೋಡುವ ನಾಟಕ ಅಲ್ಲವೇನೋ ಎಂಬ ಗೊಂದಲ ಉಂಟಾಗುತ್ತಿತ್ತು.
ಶಿಖರ ತಲುಪುವ ಹಂತದಲ್ಲೇ ನಾಟಕ ಕುಸಿದಿದೆ. ಅದಕ್ಕೆ ಕಾರಣವಾಗಿದ್ದು ನಾಟಕದ ಸ್ಕ್ರಿಪ್ಟ್ ಮತ್ತು ನಿರೂಪಣಾ ತಂತ್ರ. ಕಾದಂಬರಿಗೆ ನ್ಯಾಯ ಒದಗಿಸುವ ಭರದಲ್ಲಿ ಸ್ಕ್ರಿಪ್ಟ್ ಬರೆದವರು ಕಾದಂಬರಿಯ ಎಲ್ಲಾ ಘಟನೆಗಳನ್ನು ಹಾಗಾಗೇ ತರಲು ಪ್ರಯತ್ನಿಸಿದ್ದಾರೆ. ಬಹುಶಃ ನಿರ್ದೇಶಕರು ಸ್ಕ್ರಿಪ್ಟ್ ಅನ್ನು ಎಡಿಟ್ ಮಾಡಿಕೊಂಡಿದ್ದರೆ ನಾಟಕ ಇನ್ನಷ್ಟು ಹರಳುಗಟ್ಟುತ್ತಿತ್ತೇನೋ..!
ಬದುಕಿನೆಡೆಗಿನ ಬೆರಗು ಮತ್ತು ವಿಸ್ಮಯ ಪ್ರೇಕ್ಷಕರನ್ನು ಖಂಡಿತಾ ಸೆರೆ ಹಿಡಿಯುತ್ತದೆ. ಆದರೆ ಅದನ್ನು ಹೇಗೆ ಪ್ರೆಸೆಂಟ್ ಮಾಡುತ್ತೇವೆ ಎಂಬುದು ಮುಖ್ಯ. ಆಗ ಮೊದಲ ಪ್ರಯೋಗಗಳಿಗೇ ರವೀಂದ್ರ ಕಲಾಕ್ಷೇತ್ರಕ್ಕೆ ಪ್ರೇಕ್ಷಕರ ಬರ ಬರಲಾರದು. ಇಲ್ಲಿ ಇನ್ನೊಂದು ಮಾತು ಹೇಳಲೇ ಬೇಕು. ಇದು ಧಾವಂತದ ಯುಗ. ಇಲ್ಲಿ ಎಲ್ಲರಿಗೂ ಸಮಯದ ಅಭಾವ ಇಂಥ ಸ್ಥಿತಿಯಲ್ಲಿ, ಟ್ರಾಪಿಕ್ ಕಿರಿಕಿರಿಯನ್ನು ಅನುಭವಿಸುತ್ತಾ ಮೂರು ಘಂಟೆಯ ನಾಟಕವನ್ನು ನೋಡಲು ಬಹುತೇಕರಿಗೆ ತಾಳ್ಮೆಯಿರುವುದಿಲ್ಲ. ರಾತ್ರಿಯಿಡೀ ನಡೆಯುವ ಯಕ್ಷಗಾನವನ್ನೇ ಮೂರು ಘಂಟೆಗೆ ಇಳಿಸಿದವರು ನಾವು. ಇನ್ನೂ ರಂಗಾಯಣ ಸಾಮಾನ್ಯ ರಂಗ ತಂಡದಂತಲ್ಲ; ಅದೊಂದು ರೆಪರ್ಟರಿ. ಅದರ ಬಗ್ಗೆ ರಂಗಪ್ರೇಮಿಗಳಿಗೆ ಹೆಚ್ಚಿನ ನಿರೀಕ್ಷೆಯಿರುತ್ತದೆ. ಹಾಗಾಗಿ ಅದರ ಜವಾಬ್ದಾರಿ ದೊಡ್ಡದು.
[ ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹ. ]

1 comments:

sunaath said...

ನಿಮ್ಮ ನಾಟಕವಿಮರ್ಶೆಗಳು ಚೆನ್ನಾಗಿರುತ್ತವೆ. ಶಿಖರಸೂರ್ಯ ಕುಸಿದದ್ದೆಲ್ಲಿ ಎನ್ನುವದನ್ನು ಸರಿಯಾಗಿ ತೋರಿಸಿದ್ದೀರಿ.