Monday, April 9, 2012

ವಧಾಸ್ಥಾನದಲ್ಲಿ ವೈಯಕ್ತಿಕ ಸಂಬಂಧಗಳು



”ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧ ಸಮಾಜವನ್ನು ಸೃಷ್ಟಿಸುತ್ತದೆ; ಸಮಾಜ ನನ್ನನ್ನು ಮತ್ತು ನಿಮ್ಮನ್ನು ಬಿಟ್ಟು ಬೇರೆಯಾಗಿಲ್ಲ; ಇಬ್ಬರು ವ್ಯಕ್ತಿಗಳು ತಾವು ಪರಸ್ಪರ ಸೇರಿಕೊಂಡಿದ್ದೇವೆಂಬುದನ್ನು ಅರಿತರೆ,ಅದೇ ಸಂಬಂಧ. ಸಂಬಂಧವೆಂದರೆ ಭಯವಿಲ್ಲದ ಸಹಭಾಗಿತ್ವ ಅಥವಾ ಭಾವೈಕತೆ, ಪರಸ್ಪರ ಅರ್ಥ ಮಾಡಿಕೊಳ್ಳಲು, ನೇರವಾಗಿ ಸಂಪರ್ಕಿಸಲು ಮುಕ್ತ ವಾತಾವರಣ. ಆದರೆ ನಾವು ಸಂಬಂಧವನ್ನು ಸುಖಸಾದನವನ್ನಾಗಿ ಬಳಸಿಕೊಳ್ಳುತ್ತೇವೆ. ”. ಇದು ಪ್ರಸಿದ್ಧ ದಾರ್ಶನಿಕ ಜೆ. ಕೃಷ್ಣಮೂರ್ತಿಯವರು ಸಂಬಂಧಕ್ಕೆ ನೀಡುವ ವ್ಯಾಖ್ಯಾನ.
ಇಲ್ಲಿ ಅವರು ’ಸಂಬಂಧಗಳ ಬಳಸಿಕೊಳ್ಳುವಿಕೆ’ ಎಂಬ ಶಬ್ದವನ್ನು ಉಪಯೋಗಿಸಿದ್ದಾರೆ. ಅದರ ಬಗ್ಗೆ ನನಗೆ ಕುತೂಹಲವಿದೆ. ಸಂಬಂಧಗಳನ್ನು ಬಳಸಿಕೊಳ್ಳುವುದು ಎಂದರೆ ಏನು? ಅದರಿಂದ ಪ್ರಯೋಜನವನ್ನು ಪಡೆದುಕೊಳ್ಳುವುದೇ? ವ್ಯವಾಹರಿಕವಾದ ದೃಷ್ಟಿಕೋನದಿಂದ ನೋಡುವುದೇ?. ಅದು ನನಗೆ ಸುಖವನ್ನು ಕೊಡುವುದಿಲ್ಲ ಎಂದು ಅನ್ನಿಸಿದರೆ ಅಥವಾ ಅದು ಹಳೆಯದಾಯಿತು, ಆಕರ್ಷಣೆಯನ್ನು ಕಳೆದುಕೊಂಡಿತು ಎಂದರೆ ಅದನ್ನು ತ್ಯಜಿಸಿಬಿಡುವುದೇ?. ಸಂಬಂಧಗಳು ಅಂದರೆ ಅಷ್ಟೆನಾ…?
ನಾವು ಸಂಬಂಧಗಳನ್ನು ವ್ಯವಹಾರಿಕ ಸಂಬಂಧಗಳು. ಭಾವನಾತ್ಮಕ ಸಂಬಂಧಗಳು, ರಕ್ತ ಸಂಬಂಧಗಳು ಮಾನವೀಯ ಸಂಬಂಧಗಳು ಎಂದೆಲ್ಲಾ ವಿಂಗಡಿಸುತ್ತೇವೆ. ಈ ಎಲ್ಲಾ ಸಂಬಂಧಗಳಲ್ಲೂ ಬಳಸುವಿಕೆ ಎಂಬುದು ಅಲ್ಪ ಪ್ರಮಾಣದಲ್ಲಿ ಇದ್ದೇ ಇರುತ್ತದೆ. ಏಕೆಂದರೆ ಇಲ್ಲಿ ಪರಸ್ಪರ ಅವಲಂಬನೆ, ನಂಬಿಕೆ. ವಿಶ್ವಾಸ ಪ್ರೀತಿ ಮತ್ತು ಪ್ರಾಮಾಣಿಕತೆಯಿರುತ್ತದೆ. ಒಳ್ಳೆಯ ಬದುಕಿನ ಹಂಬಲವಿರುತ್ತದೆ. ಆ ಮೂಲಕ ಸ್ವಸ್ಥ ಸಮಾಜ ರೂಪುಗೊಳ್ಳುತ್ತದೆ. ಆದರೆ ಇಂದು ಮಾಧ್ಯಮಗಳಲ್ಲಿ ಪರಸ್ಪರ ಹೊಡೆದಾಡುತ್ತಿರುವ, ಕೆಸರೆರೆಚಿಕೊಳ್ಳುತ್ತಿರುವ ಸಂಬಂಧಗಳನ್ನು ನೋಡುತ್ತಿರುವಾಗ ಇಲ್ಲಿ ’ಬಳಸಿಕೊಳ್ಳುವಿಕೆ’ಯೇ ಪ್ರಮುಖ ಅಸ್ತ್ರವಾಗಿ ಬಳಕೆಯಾಗುತ್ತಿದೆ ಎಂದು ಅನ್ನಿಸುವುದಿಲ್ಲವೇ?
ಮೊನ್ನೆ ಭಾನುವಾರ ಕನ್ನಡದ ಸುದ್ದಿವಾಹಿನಿಗಳಲ್ಲಿ ಸೆಲೆಬ್ರಿಟಿಗಳಿಗೆ ಸಂಬಂಧಪಟ್ಟಂತೆ ಎರಡು ಕೆಸರೆರಚಾಟ ನಡೆಯಿತು. ಒಂದು ಭಾವನಾತ್ಮಕ ಸಂಬಂಧಕ್ಕೆ ಸಂಬಂಧಪಟ್ಟದಾದರೆ ಇನ್ನೊಂದು ವ್ಯವಾಹರಿಕ ಸಂಬಂಧಕ್ಕೆ ಸಂಬಂಧಿಸಿದ್ದು. ಆದರೆ ಇವೆರಡರಲ್ಲಿ ನಲುಗಿದ್ದು ಮಾನವೀಯ ಸಂಬಂಧಗಳು. ಇಲ್ಲಿನ ಚರ್ಚೆಯ ಪರಿ, ಚರ್ಚೆಗೆ ವಿನಿಯೋಗಿಸಿದ ಕಾಲಾವಧಿಯನ್ನು ಗಮನಿಸಿದರೆ ಸಂಬಂಧಗಳ ಬಳಸಿಕೊಳ್ಳುವಿಕೆಯ ವಿವಿಧ ರೂಪಗಳು ಅನಾವರಣಗೊಂಡವು.
ಚರ್ಚೆ ನಡೆಯಲಿ, ಬೇಡ ಎನ್ನುವುದಿಲ್ಲ. ಅದಕ್ಕೊಂದು ಘನತೆ, ಗಾಂಭೀರ್ಯ, ತಾರ್ಕಿಕತೆ ಬೇಡವೇ? ನ್ಯಾಯಾಧೀಶರ ಗತ್ತಿನಲ್ಲಿ ಕುಳಿತುಕೊಳ್ಳವವರು ನ್ಯಾಯದಾನ ನೀಡುವಷ್ಟು ಪ್ರಾಮಾಣಿಕರಾಗಿರಬೇಕಲ್ಲವೇ? ನೀತಿ ಪಾಠ ಹೇಳುವವರು ಸ್ವತಃ ನೀತಿವಂತರಾಗಿರಬೇಕಲ್ಲವೇ?
ಪ್ರತಿಯೊಬ್ಬರ ಬದುಕಿನಲ್ಲೂ ಹತ್ತಾರು ಧಾರಾವಾಹಿಗಳಿಗಾಗುವಷ್ಟು ಸರಕಿರುತ್ತದೆ. ಹಾಗೆಂದುಕೊಂಡು ಅವುಗಳನ್ನೆಲ್ಲಾ ಮಾರಾಟಕ್ಕಿಡಲು ಸಾಧ್ಯವೇ?
ನಮ್ಮ ಬದುಕು ಕೇವಲ ”ನನ್ನದು’ ಮಾತ್ರ ಆಗಿರುವುದಿಲ್ಲ. ಅದು ’ನಮ್ಮವರ’ ಜೊತೆ ಹಣೆಯಲ್ಪಟ್ಟಿರುತ್ತೆ. ನಾವು ಎಲ್ಲವನ್ನೂ ತೆರೆದಿಡುತ್ತಾ ಹೋದರೆ ಅವರ ಬದುಕು ಅಲ್ಲಾಡಿಬಿಡುತ್ತದೆ. ಆ ಅರಿವು ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ಬದುಕನ್ನು ತೆರೆದಿಡುವವರ ಅರಿವಿನಲ್ಲಿರಬೇಕು. ತಾವಾಗಿಯೇ ತಮ್ಮ ಬದುಕನ್ನು ಬೀದಿಗೆ ಹರಡಿ ನಿಲ್ಲುವುದರಲ್ಲಿ ಬೇರೆ ಬೇರೆ ಉದ್ದೇಶಗಳು ಅಡಗಿರಬಹುದು. ಆದರೆ ಕೆಲವೊಮ್ಮೆ ಬೇರೆಯವರು ನಮ್ಮ ಬದುಕನ್ನು ಎಳೆದು ತಂದು ವಧಾಸ್ಥಾನದಲ್ಲಿ ನಿಲ್ಲಿಸುತ್ತಾರಲ್ಲಾ, ಅದಕ್ಕೇನು ಮಾಡುವುದು?
ಪ್ರತಿಯೊಬ್ಬ ಮನುಷ್ಯನಿಗೂ ಒಂದು ವ್ಯಯಕ್ತಿಕ ಬದುಕು ಇನ್ನೊಂದು ಸಾರ್ವಜನಿಕ ಬದುಕಿರುತ್ತದೆ. ಸಾರ್ವಜನಿಕ ಬದುಕಿನಲ್ಲಿರುವ ಸೆಲೆಬ್ರಿಟಿಗಳ ಬದುಕಿನ ಬಗ್ಗೆ ಜನಸಾಮಾನ್ಯರಿಗೆ ಯಾವಾಗಲೂ ಕುತೂಹಲವಿರುತ್ತದೆ. ಅದು ಗಂಡು ಹೆಣ್ಣಿನ ಸಂಬಂಧಕ್ಕೆ ಸಂಬಂಧಪಟ್ಟಿದ್ದಾದರೆ ಅದಕ್ಕೊಂದು ಸಾಮಾಜಿಕ ಚೌಕಟ್ಟು ಇದ್ದೇ ಇರುತ್ತದೆ. ಕೆಲವು ಸಂಬಂಧಗಳು ಸಮಾಜದ ದೃಷ್ಟಿಯಲ್ಲಿ ಅನೈತಿಕ ಎನಿಸಬಹುದು. ಆದರೆ ವ್ಯಯಕ್ತಿಕವಾಗಿ ಸಹ್ಯ ಅನಿಸಬಹುದು. ಆದರೆ ಚೌಕಟ್ಟುಗಳನ್ನು ಮೀರುವ ಕನಸು ಎಲ್ಲರಲ್ಲೂ ಇದ್ದೇ ಇರುತ್ತದೆ.
ಅಂತಹದೊಂದು ಸಂಬಂಧ ಆತನಿಗೆ/ಅವಳಿಗೆ ವಾಸ್ತವದಲ್ಲಿ ದೊರಕಿದ್ದರೆ, ಅದನ್ನವರು ಜತನದಿಂದ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಅದನ್ನು ಛಿದ್ರಗೊಳಿಸುವ ಪ್ರಯತ್ನವನ್ನು ನಾವ್ಯಾಕೆ ಮಾಡಬೇಕು? ಒಂದು ವೇಳೆ ಅದು ಕಾನೂನು ವಿರೋಧಿಯಾಗಿದ್ದರೆ ಅದರಿಂದ ಬಾಧೆಗೊಳಗಾದವರು ಕಾನೂನಿನ ಚೌಕಟ್ಟಿನೊಳಗಡೆಯೇ ಪ್ರಶ್ನಿಸಲಿ. ಅವರೇ ಅದನ್ನು ನಿರ್ಲಕ್ಷಿಸಿದ್ದರೆ..ಉಪೇಕ್ಷಿಸಿದ್ದರೆ… ಬೇರೆಯವರು ಯಾಕೆ ಮೂಗು ತೂರಿಸಬೇಕು? ಒಂದು ವೇಳೆ ಅವರು ತಮ್ಮ ವೈಯಕ್ತಿಕ ಸಂಕಷ್ಟಗಳಿಂದ, ಗೋಜಲುಗಳಿಂದ ಹೊರಬರಲು ಅನ್ಯರ ಮೊರೆ ಹೋದಲ್ಲಿ ಅವರಿಗೆ ಪ್ರಾಮಾಣಿಕ ರೀತಿಯಲ್ಲಿ ಸಹಾಯ ಮಾಡಬೇಕೆ ಹೊರತು ಅದನ್ನು ಮತ್ತಷ್ಟು ಕಗ್ಗಂಟು ಮಾಡಬಾರದು.
ಜನ್ನನ ಯಶೋಧರ ಚರಿತೆಯ ಅಮೃತಮತಿಯನ್ನು ಬೀದಿಯಲ್ಲಿ ತಂದು ನಿಲ್ಲಿಸಿದ್ದು ಯಾಕೆ ಎಂಬುದು ಇಂದಿಗೂ ನನ್ನನ್ನು ಕಾಡುವ ಪ್ರಶ್ನೆ. ಅಮೃತಮತಿಯ ಗಂಡ ಯಶೋಧರ, ’ಗಂಡ’ನಾಗಿ ವರ್ತಿಸಿದ್ದನೇ? ಅದು ಅವಳಿಗೆ ತಾನೇ ಗೊತ್ತು? ನಮ್ಮ ತರ್ಕಗಳೇನಿದ್ದರೂ ಹೊರನೋಟದ್ದು. ಬೇರೆಯದೇ ಆದ ಒಳಜಗತ್ತೊಂದು ಇರುತ್ತದೆಯಲ್ಲವೇ? ಅದರ ಆಳಕ್ಕೆ ಇನ್ನೊಬ್ಬರು ಎಷ್ಟು ಇಳಿಯಲು ಸಾಧ್ಯ?
ಇಂದಿನ ಕಾಲಘಟ್ಟದಲ್ಲಿ ನಿಂತು ಯೋಚಿಸಿದರೆ ನನಗನಿಸಿದ್ದು ಇಷ್ಟು; ನಾನು ಒಬ್ಬ ಹುಡುಗನನ್ನು ಪ್ರೀತಿಸಿದ್ದರೆ, ಪ್ರೀತಿಸುತ್ತಿದ್ದರೆ ಅದು ನನಗೆ ಮತ್ತು ಅವನಿಗೆ ಸಂಬಂಧಿಸಿದ ವಿಚಾರ.. ಅದರಲ್ಲಿ ಇನ್ನೊಬ್ಬರ ’ಇಣುಕುವಿಕೆ’ಯನ್ನು ನಾನು ಸಹಿಸುವುದಿಲ್ಲ. ನಮ್ಮ ಮುನಿಸು, ನಮ್ಮ ಹಠ, ನಮ್ಮ ಸಾಂತ್ವನ, ನಮ್ಮ ಪಾಪ ನಿವೇದನೆ ಎಲ್ಲವೂ ನಮ್ಮ ಖಾಸಗಿ ಪ್ರಪಂಚಕ್ಕೆ ಸಂಬಂಧಿಸಿದ್ದು.
ಗಂಡು-ಹೆಣ್ಣಿನ ಸಂಬಂಧವೊಂದನ್ನು, ಅದು ವಿವಾಹಿತರಿರಲಿ ಅವಿವಾಹಿತರಿರಲಿ ಅದನ್ನು ಮತ್ತೆ ಮತ್ತೆ ಕೆದಕುವುದು, ಚುಚ್ಚುವುದು, ಅಲ್ಲಾಡಿಸುವುದು ಆ ವ್ಯಕ್ತಿಗಳ ಮಾನಸಿಕ ಆರೋಗ್ಯ ಮತ್ತು ಒಟ್ಟು ಸಮಾಜದ ಆರೋಗ್ಯದ ದೃಷ್ಟಿಯಿಂದಲೂ ಕ್ಷೇಮವಲ್ಲ. ನೈತಿಕತೆಗಿಂತ ಮಾನವೀಯತೆ, ಮನುಷ್ಯ ಸಂಬಂಧಗಳೇ ಮುಖ್ಯವಾಗಬೇಕು.
[ ವಿಜಯ ಕರ್ನಾಟಕದ ’ಅನುರಣನ’ ಅಂಕಣದಲ್ಲಿ ಪ್ರಕಟವಾದ ಬರಹ ]

3 comments:

ರವಿ ಮೂರ್ನಾಡು said...

ಇಂತಹ ಬರಹಗಳು ರೋಗಗ್ರಸ್ತ ಮನಸ್ಸುಗಳನ್ನು ಹೊಕ್ಕಿ ಹೊಸ ಭಾವಗಳನ್ನು ಚಿಮ್ಮಿಸುವ೦ತಾಗಲಿ .ಉತ್ತಮ ಸ್ವಚಿ೦ತಾತ್ಮಕ ಬರಹ. ಇಂತಹ ಬರಹಗಳಿಗೆ ಹೆಚ್ಚಿನ ಪ್ರಚಾರ ಸಿಗಬೇಕು. ಸಮಾಜದ ಮೂಲೆ ಮೂಲೆಗೆ ತಲುಪಬೇಕು.

ಆಸು ಹೆಗ್ಡೆ said...

ವೈಯಕ್ತಿಕ ಸಂಬಂಧಗಳನ್ನು ಖಾಸಗಿಯಾಗಿ ಕಾಪಾಡಿಕೊಂಡು ಬಂದರೆ ವಿಶೇಷ ಸಮಸ್ಯೆಗಳು ಉದ್ಭವಿಸುವುದೇ ಇಲ್ಲ.
ಸೊಂಟದ ಮಟ್ಟದವರೆಗೆ ಕೊಳಚೆಯಲ್ಲಿ ಹೂತು ಹೋಗಿರುವವನು, ಅನ್ಯರ ಪಾದದಲ್ಲಿರುವ ಕೆಸರನ್ನು ಎತ್ತಿ ಆತನ ಮುಖಕ್ಕೆ ಎರಚುವ ಕೆಟ್ಟ ಕಾಯಕದಲ್ಲಿ ತೊಡಗಿದಾಗ, ಮನುಜ ಸಹಜವಾದ ದ್ವೇಷ ಮನೋಭಾವಗಳು, ಪ್ರತೀಕಾರದ ಮನೋಭಾವಗಳು ಆತನ ಮನದೊಳಗೆ ಮನೆಮಾಡಿ, ಬೇಕು ಬೇಡಗಳ ಪರಿವೆಯೇ ಇಲ್ಲದಂತೆ ಕಾರ್ಯವೆಸಗಲು ಪೂರಕವಾಗುತ್ತವೆ. ಇವೇ ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗುತ್ತವೆ.
ಯಾವುದೇ ಸ್ನೇಹ ಸಂಬಂಧ, ನಂಬಿಕೆ ಮತ್ತು ಗೌಪ್ಯತೆಯ ಭದ್ರ ಬುನಾದಿಯ ಮೇಲೆ ನಿಂತಿರಬೇಕು. ಸ್ನೇಹಿತರಾಗಿದ್ದಾಗ ಒಟ್ಟಾಗಿ ಮಾಡಿದ ಒಳ್ಳೆಯ ಕೆಟ್ಟ ಕೆಲಸಗಳನ್ನೆಲ್ಲಾ, ಸ್ನೇಹ ಮುರಿದ ಮರುಕ್ಷಣವೇ ಪಟ್ಟಿ ಮಾಡಿ ಸಾರ್ವಜನಿಕವಾಗಿ ಬಹಿರಂಗಗೊಳಿಸುತ್ತಾ ಬರುವ, ಈ ಕೆಟ್ಟ ಚಾಳಿ ಸಮಾಜವನ್ನು ಸಾಕಷ್ಟು ಕೆಡಿಸುತ್ತಿದೆ. ಈ ಕಾರ್ಯವನ್ನು ಕೆಲವರು ನೇರವಾಗಿ ಮಾಡಿದರೆ, ಇನ್ನು ಕೆಲವರು ತಮ್ಮ ಮುಖವಾಡದಿಂದ ಹೊರಬರಲು ನಾಚಿಕೆಯಾಗಿ, ಪರರ ಮೂಲಕ ಪರೋಕ್ಷವಾಗಿ ಮಾಡಿಸುತ್ತಾ ಇದ್ದಾರೆ... ಇರುತ್ತಾರೆ!
ಇದು ಈಗ ಹೆಚ್ಚಾಗಿ ಕಂಡು ಬರುತ್ತಿರುವುದು ರಾಜಕೀಯ, ಸಿನಿಮಾ ಹಾಗೂ ಮಾಧ್ಯಮ ಲೋಕಗಳಲ್ಲಿ.

suragi \ ushakattemane said...

ಅವಧಿ ವೆಬ್ ಸೈಟಿನಲ್ಲಿ ಈ ಲೇಖನ ಪ್ರಕಟಗೊಂಡಾಗ ಅಲ್ಲಿ ವ್ಯಕ್ತವಾದ ಪ್ರತಿಕ್ರಿಯೆಗಳಿವು;

unil says:
April 18, 2012 at 12:04 pm
itteechina dinada atyuttama haagu bhalu dhairyavanta lekhaki Usha Kattemane


Manjula says:
April 18, 2012 at 12:36 pm
ತುಂಬಾ ಅರ್ಥಗರ್ಭಿತ ಲೇಖನ.. ಮನ ಮುಟ್ಟುವಂತಿದೆ! ಲೇಖಕಿಯ ಪ್ರಶ್ನೆಗಳಿಗೆ ಮತ್ತು ಅಭಿಪ್ರಾಯಗಳಿಗೆ ನನ್ನ ಸಂಪೂರ್ಣ ಸಮ್ಮತಿಯಿದೆ…

Reply
akshatha says:
April 18, 2012 at 2:59 pm
ಇಂದಿನ ಕಾಲಘಟ್ಟದಲ್ಲಿ ನಿಂತು ಯೋಚಿಸಿದರೆ ನನಗನಿಸಿದ್ದು ಇಷ್ಟು; ನಾನು ಒಬ್ಬ ಹುಡುಗನನ್ನು ಪ್ರೀತಿಸಿದ್ದರೆ, ಪ್ರೀತಿಸುತ್ತಿದ್ದರೆ ಅದು ನನಗೆ ಮತ್ತು ಅವನಿಗೆ ಸಂಬಂಧಿಸಿದ ವಿಚಾರ.. ಅದರಲ್ಲಿ ಇನ್ನೊಬ್ಬರ ’ಇಣುಕುವಿಕೆ’ಯನ್ನು ನಾನು ಸಹಿಸುವುದಿಲ್ಲ. ನಮ್ಮ ಮುನಿಸು, ನಮ್ಮ ಹಠ, ನಮ್ಮ ಸಾಂತ್ವನ, ನಮ್ಮ ಪಾಪ ನಿವೇದನೆ ಎಲ್ಲವೂ ನಮ್ಮ ಖಾಸಗಿ ಪ್ರಪಂಚಕ್ಕೆ ಸಂಬಂಧಿಸಿದ್ದು.
ಮೇಡಂ , ನಿಮ್ಮ ಈ ಮಾತು ತುಂಬಾ ಸರಿಯಾದದ್ದು , ಆದರೆ ನಾವು ಹೇಗೆ ಬೇರೆಯವರ ಇಣುಕುವಿಕೆಯನ್ನು ಸಹಿಸುವುದಿಲ್ಲವೋ ಹಾಗೆಯೇ ನಮ್ಮ ಇಣುಕುವಿಕೆಯನ್ನು ಬೇರೆಯವರು ಸಹಿಸುವುದಿಲ್ಲ ಎಂಬುದು ನೆನಪಲ್ಲಿರಬೇಕು . ಮೊನ್ನೆ t v ಯಲ್ಲಿ ಬಂದ ವ್ಯಕ್ತಿ ಮತ್ತು ಅವರಿಗೆ ಸಂಬಂದಪಟ್ಟಂತೆ ಹೇಳುವುದಾದರೆ ಇಡಿ ಜಗತ್ತಿನ ಎಲ್ಲರ ನೈತಿಕತೆಯನ್ನು ನಾನು ಪ್ರಸ್ನಿಸುತ್ತೇನೆ , ಎಲ್ಲರ ಮರ್ಯಾದೆಯನ್ನು ನಾನು ಹರಾಜಿಗಿದುತ್ತೇನೆ ನನ್ನನ್ನು ಮಾತ್ರ ಬಿಟ್ಬಿಡಿ ಅಂದ್ರೆ ಹೇಗಾಗತ್ತೆ ? ಆದರೆ ದುರ್ದೈವ ಏನೆಂದರೆ ಹೆಣ್ಣೇ ಎಲ್ಲರ ಬಾಣಕ್ಕೆ ಗುರಿಯಾಗೋದು . ಯಶೋಧರನ ಕಡೆಯಿಂದಲೂ ಜನ್ನನ ಕಣ್ಣಲ್ಲೂ ಅಮೃಥಮತಿಯದೆ ತಪ್ಪು


D.RAVI VARMA says:
April 19, 2012 at 2:00 pm
ಮೇಡಂ, ನೀವು ತುಂಬಾ ಸೂಕ್ಷ್ಮ ಮನಸಿನ, ಸಂವೇದನಾಶೀಲ ಬರಹಗಾರರು .ಹಾಗಾಗಿ ನೀವು ಮಾನವೀಯ ಸಂಬಂಧಗಳ ಬಗ್ಗೆ ಆಲೋಚಿಸುತ್ತೆರಿ, ಅದು ನಿಮ್ಮನ್ನು ಕಾಡುತ್ತದೆ ,ನಿಮ್ಮ ಚಿಂತನೆ, ಆಲೋಚನೆ, ಸಿಟ್ಟು, ಹಾಗು ಸಾಂತ್ವನ ಬರಹಕ್ಕಿಳಿಸಿ ನಿರಾಳವಗುತ್ತೀರಿ. ನನಗೆ ನಿಮ್ಮ ಲೇಖನ ಇಸ್ತವಾಯ್ತು
ರವಿವರ್ಮ ಹೊಸಪೇಟೆ .