Saturday, October 6, 2012

ಪ್ರತೀಕ್ಷೆ

                

ಬಂದು ಬಿಡು ಗೆಳೆಯಾ...ನಾನಿಲ್ಲಿ ಒಬ್ಬಂಟಿ.
ಭಯ ಬೀಳಿಸುವ ಕಾರಿರುಳು; ಅಲ್ಲಿ ಬೆಳದಿಂಗಳ ಜೊನ್ನ ಮಳೆ. 
ಕೋಳಿ ಕೂಗುವ ಮುನ್ನ ನಾವಲ್ಲಿರಬೇಕು. 
ಸುಮ್ಮನೆ ಬಂದು ನನ್ನೆದುರು ನಿಂತುಬಿಡು.

ನಿನ್ನ ಕಿರುಬೆರಳಿನಲ್ಲಿದೆ ಗೋವರ್ಧನಗಿರಿಯನೆತ್ತುವ ಸ್ಫೂರ್ತಿ
ಅಂಗ ಭಂಗಿತಳು ನಾನು, ಬಾಳಹಾದಿಗೆ ಬೇಕೆನಗೆ ಕಿರುಬೆರಳ ಕೊಂಡಿ.


ಕಾಡು ಹಾದಿಯ ಕಳೆದು, ಬೆಟ್ಟಗುಡ್ಡವನೇರಿಳಿದು
ಕೊಂಚ ದೂರ ನಡೆದರೆ ಅಲ್ಲೊಂದು ಮಡಿಲು.
ಅಂಚಿಲ್ಲದ ನೀಲ ಬಾನಿನ ಕೆಳಗೆ, ಅಂಚಿರುವ ಕಡಲು
ರುದ್ರಪಾದೆಯ ಅಂಚು; ನಾವಲ್ಲಿ ಜೋಡಿ ಮಿಂಚು

ನಿನ್ನ ಹೆಗಲಿಗೊರಗಿ ನಾ ಕಣ್ಮುಚ್ಚಿದ ಹೊತ್ತು,ನೀ ತುಟಿ ಬಿಚ್ಚದಿರು.
ಕಾಡುವ ಕಡಲಿನ ಮುಂದೆ ಕಣ್ಣೀರ ಕಡಲಿಡಬೇಕು.
ನಾ ಬರಿದಾಗಬೇಕು, ನಿನ್ನ ಒಲವಲ್ಲಿ ಅಕ್ಷಯ ಪಾತ್ರೆ.

ನಾ ಕಣ್ತೆರೆದಾಗ, ನಿನ್ನ ಕೈಯ್ಯಲ್ಲಿ ಕಪ್ಪೆಚಿಪ್ಪಿನ ಮಾಲೆ.
ನನ್ನೆದೆಯ ಕಂಪನಕ್ಕೆ ಶರಧಿ ನಾಚಿ ಹಿಂದೋಡಬೇಕು.
ಆ ರಸಘಳಿಗೆ ಸ್ಥಾಯಿಯಾಗಿ ಕಾಲ ಸ್ತಬ್ದಗೊಳ್ಳಲಿ.

ಬಣ್ಣ ಬಣ್ಣದ ಏಡಿಗಳೆಲ್ಲಾ ಸರಸರನೆ ಮರಳೆದೆಗೆ ಇಳಿಯುವ ಹೊತ್ತು
ಮತ್ತೊಮ್ಮೆ ಮಗುತನದಲ್ಲಿ ಮರಳಮನೆ ಕಟ್ಟಬೇಕು
ಮತ್ತೆ ಮತ್ತೆ ಸೇರುವ ಹಂಬಲಕ್ಕೆ ಜಗಳದ ಆವರ್ತನ..!
ಚಿರಂತನ ಹಂಬಲವಿದು; ಚಿರಾಯುವಾಗಲಿ ಗೆಳೆಯನೇ

ನನ್ನ ಪಂಚೇಂದ್ರಿಯಗಳ ಹಸಿವು ತಣಿಯಬೇಕು
ಪಡುವಣದ ಸೂರ್ಯನಂತೆ ಬಣ್ಣದೋಕುಳಿಯಾಡಬೇಕು.
ಎಲ್ಲಾ ಬಂಧನಗಳ ಕಿತ್ತೊಗೆದು..
ಕ್ಷಣಕಾಲ ಮಿಂಚಾಗಿ ನನ್ನೊಳಗೆ ಹರಿದುಬಿಡು ಗೆಳೆಯಾ...!

2 comments:

sunaath said...
This comment has been removed by the author.
sunaath said...

ತುಂಬ, ತುಂಬ ಸುಂದರವಾದ ಕವನ ಉಷಾ. ಉತ್ತಮ ವಿಚಾರಾತ್ಮಕ ಲೇಖನಗಳನ್ನು ಕೊಡುತ್ತಿರುವ ನೀವು, ಅತ್ಯುತ್ತಮ ಕವನಗಳನ್ನೂ ಕೊಡುತ್ತಿರುವುದು ಹರ್ಷದಾಯಕ ಸಂಗತಿಯಾಗಿದೆ.