Friday, November 9, 2012

ಉಂಗುರದೊಳಗಿನ ಬ್ರಹ್ಮಾಂಡ..!



ಚಿಕ್ಕಂದಿನಿಂದ ನನಗೊಂದು ಕನಸಿತ್ತು; ನನ್ನ ಬೆರಳಿಗೊಂದು ಉಂಗುರ ಹಾಕಿಕೊಳ್ಳಬೇಕೆಂದು. ಆ ಕನಸು ಹುಟ್ಟಲು ಕಾರಣವಿದೆ.ನನ್ನ ಅಮ್ಮನ ಬಳಿ ಒಂದು ಉಂಗುರವಿತ್ತು. ನನ್ನ ಅಜ್ಜ ತಕ್ಕಮಟ್ಟಿಗೆ ಶ್ರೀಮಂತರಾದ ಕಾರಣದಿಂದ ಮಗಳಿಗೆ ಒಂದಷ್ಟು ಒಡವೆಗಳನ್ನು ಮಾಡಿಸಿಕೊಟ್ಟಿದ್ದರು. ಅವರು ದೇಶ ಪ್ರೇಮಿಯಾಗಿದ್ದರಿಂದ ರಾಷ್ಟ್ರ ಲಾಂಛನವಿದ್ದ ಒಂದು ಸುಂದರ ಉಂಗುರವನ್ನು ಅಮ್ಮನಿಗೆ ಬಳುವಳಿಯಾಗಿ ನೀಡಿದ್ದರು. ಆ ಉಂಗುರದ ಮೇಲ್ಪದರಿಗೆ ಕಡು ನೀಲಿ ಬಣ್ಣದ ಚೌಕಾಕಾರದ ಮೆಲ್ವಾಸು ಇತ್ತು., ಆ ಮೇಲ್ವಾಸಿನ ಮೇಲೆ ವಿರಾಜಮಾನವಾಗಿರುವ ಮೂರು ಮುಖದ ಸಿಂಹ. ಆ ಉಂಗುರದ ಮೇಲೆ ನನಗೆ ಹುಚ್ಚು ವ್ಯಾಮೋಹ. ಪ್ರತಿ ಸರ್ತಿ ಅಮ್ಮ ಒಡವೆಗಳನ್ನಿಟ್ಟಿರುವ ಪುಟ್ಟ ಕರಡಿಗೆಯನ್ನು ತೆಗೆದಾಗಲೆಲ್ಲಾ ನಾನದನ್ನು ಸವರಿ ಸವರಿ ನೋಡುತ್ತಿದ್ದೆ. ಅಮ್ಮ ಅದನ್ನು ನನ್ನ ಕೈಯಿಂದ ಕಿತ್ತುಕೊಂಡು ಮತ್ತೆ ಕರಡಿಗೆಯೊಳಗೆ ಭದ್ರವಾಗಿ ಇಡುತ್ತಿದ್ದರು.
ನನಗೆ ಆಗಲೂ ಹಾಗೆಯೇ.. ಚಿನ್ನದ ಮೇಲೆ ಅಂತಹ ಮೋಹವೇನೂ ಇರಲಿಲ್ಲ. ಆದರೆ ಆ ಉಂಗುರದ ಮೇಲೆ ಒಂದು ಕಣ್ಣು ಇದ್ದೇ ಇತ್ತು.ಸ್ವಲ್ಪ ದೊಡ್ಡವರದಂತೆಲ್ಲಾ ನಮ್ಮೂರು ಕಡೆ ಅಂದರೆ ದ.ಕ ಜಿಲ್ಲೆಯಲ್ಲಿ ಅಥವಾ ಎಲ್ಲಾ ಕಡೆಯೂ ಇರಬಹುದು ಚೂರು ಚೂರೇ ಚಿನ್ನ ಮಾಡಿಸಲು ಆರಂಭಿಸುತ್ತಾರೆ. ಹೆಣ್ಣು ಹುಡುಗಿ ನಾಳೆ ಮದುವೆಯಾಗುವವಳು ತಾನೇ? ಗಂಡಿನ ಕಡೆಯವರು ಹುಡುಗಿ ನೋಡುವುದಕ್ಕಿಂತ ಮೊದಲೇ ಕೇಳುವ ಪ್ರಶ್ನೆ ’ಹುಡುಗಿಗೆ ಎಷ್ಟು ಬಂಗಾರ ಕೊಡ್ತೀರಿ? ಎಷ್ಟು ವರದಕ್ಷಿಣೆ ಕೊಡ್ತೀರಿ? ಎಂಬುದೇ ಆಗಿರುತ್ತದೆ. ಹಾಗೆ ನನಗೆ ಕೂಡಾ ಕಿವಿಗೊಂದು ಚಿಕ್ಕ ಓಲೆ ಅದಕ್ಕೊಂದು ಲೋಲಾಕು ಬಂತು. ಕೊರಳಿಗೊಂದು ಚೈನ್ ಬರಬಹುದೆಂದು ಕಾಯುತ್ತಾ ಹೋದೆ. ಯಾಕೆಂದರೆ ಚೈನ್, ನಂತರ ಕೈಗಳಿಗೆ ಬಳೆ, ಕೊನೆಯದಾಗಿ ಬೆರಳಿಗುಂಗುರ ಬರುತ್ತದೆ. ಆ ಉಂಗುರ ಮಾಡಿಸುವ ಘಳಿಗೆ ಬಂದಾಗ  ನನ್ನ ಮನವನ್ನಪಹರಿಸಿದ ಉಂಗುರಕ್ಕಾಗಿ ಬೇಡಿಕೆಯಿಡಬಹುದೆಂಬುದು ನನ್ನ ಮಹದಾಸೆಯಾಗಿತ್ತು. ಆದರೆ ಆ ಶುಭ ಘಳಿಗೆ ಕೂಡಿ ಬರಲೇ ಇಲ್ಲ. ಯಾಕೆಂದರೆ.....
ಅವಿಭಕ್ತ ಕುಟುಂಭದಲ್ಲಿ ಹುಟ್ಟಿದ ನನ್ನಪ್ಪ ಶ್ರೀಮಂತರಾಗಿದ್ದರೂ ಅವರಿಗೆ ಪ್ರತ್ಯೇಕ ಅಸ್ತಿತ್ವವಿರಲಿಲ್ಲ. ಪ್ರತಿಷ್ಠ ಮನೆತನದ ಗಂಡು ಎಂಬ ಕಾರಣಕ್ಕೆ, ಮೇಲಾಗಿ ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡ ತಬ್ಬಲಿ, ಚಿಕ್ಕಮ್ಮನ ಕೈಯ್ಯಲ್ಲಿ ನಲುಗಿದ ಆತ ಸಹೃದಯಿಯಾಗಿದ್ದಾನು..ಗಂಡು ಮಕ್ಕಳಿಲ್ಲದ ತಮಗೂ ಮುಪ್ಪಿನಲ್ಲಿ ಆಸರೆಯಾಗಿದ್ದಾನು ಎಂಬ ದೂರದೃಷ್ಟಿ ಅಜ್ಜನಿಗಿತ್ತೋ ಎನೋ ಅಂತೂ ತಮ್ಮ ಮಗಳನ್ನು ವಯಸ್ಸಿನ ಅಂತರವಿದ್ದರೂ ನಮ್ಮಪ್ಪನಿಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಕುಟುಂಬದ ಆಸ್ತಿ ವಿಂಗಡಣೆಯಾದಾಗ ನಮ್ಮಪ್ಪ ಬರಿಗೈ ದಾಸ...ಹಾಗಾಗಿ ಅಪ್ಪ ನಮಗೆ ಬಂಗಾರ ಮಾಡಿಸುವ ಯೋಚನೆಯನ್ನೇ ಮಾಡಿಸಲಿಲ್ಲ. ಆದರೆ ನನಗಾ ಉಂಗುರದ ಮೋಹ ಹೋಗಲೇ ಇಲ್ಲ.
ನಾನೊಬ್ಬ ಹುಡುಗನನ್ನು ಮೆಚ್ಚಿಕೊಂಡೆ. ಆತನನ್ನು ಮದುವೆ ಮಾಡಿಕೊಳ್ಳುತ್ತೇನೆಂದು ಮನೆಯಲ್ಲಿ ಹೇಳಿದೆ. ಆತ ಅನ್ಯ ಜಾತಿಯವನಾದರೂ ಮನೆಯಲ್ಲಿ ಒಪ್ಪಿಕೊಂಡರು. ಮದುವೆಗೆ ಅಂತಹ ತಯಾರಿಯೇನೂ ನಡೆಯದೇ ಇದ್ದರೂ ನನ್ನ ಕಿವಿಗೊಂದು ಓಲೆ ಮತ್ತು ಕೊರಳಿಗೊಂದು ಸರ ಬಂತು. ಉಂಗುರದ ಸುದ್ದಿಯೇ ಇಲ್ಲ. ಮದುವೆಯಲ್ಲಿ ತನಗಿಂಥ ಒಡವೆ ಬೇಕೆಂದು ಕೇಳುವುದು ಹುಡುಗಿಯರ ಹಕ್ಕು. ಆದರೆ ನಾನು ಅವರು ಆಯ್ಕೆ ಮಾಡಿರುವ ಹುಡುಗನನ್ನು ಒಪ್ಪಿಕೊಂಡಿಲ್ಲವಲ್ಲ. ಹಾಗಾಗಿ ಹಕ್ಕಿನಿಂದ ಏನನ್ನೂ ಕೇಳುವಂತಿರಲಿಲ್ಲ. ಹಾಗಾಗಿ ಹಿಂಜರಿಯುತ್ತಲೇ ಅಮ್ಮನತ್ರ, ನನಗಾ ರಾಷ್ಟ್ರ ಲಾಂಛನದ ಉಂಗುರ ಕೊಡ್ತೀರಾ? ಎಂದು ಕೇಳಿದೆ. ಅಮ್ಮ ಒಂದೇ ಮಾತಿನಲ್ಲಿ ನಿರಾಕರಿಸಿ ಬಿಟ್ಟರು, ’ಅದು ನನ್ನಪ್ಪ ನನಗೆ ಕೊಟ್ಟಿರುವ ಉಂಗುರ. ನಿಂಗೆ ಬೇಕಾದರೆ ನಿನ್ನಪ್ಪನತ್ರ ಕೇಳು’ ನಾನು ಅಪ್ಪನತ್ರ ಕೇಳಲಿಲ್ಲ. ನನಗೆ ಉಂಗುರ ಸಿಗಲಿಲ್ಲ.
ನನಗೊಂದು ದೂರದ ಆಸೆಯಿತ್ತು; ನನ್ನನ್ನು ಮೆಚ್ಚಿದ ಹುಡುಗ ನನಗೊಂದು ಉಂಗುರ ಕೊಡಬಹುದೆಂದು. ಅದಕ್ಕಾಗಿ ನಾನು ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಎಲ್ಲಾ ಹುಡುಗಿಯರು ಕನಸು ಕಾಣುವಂತೆ ನಾನೂ ಕನಸು ಕಂಡಿದ್ದೆ. ಒಂದು ದಿನ ಆತ ನನ್ನೆದುರು ಬಂದು ನಿಲ್ಲುತ್ತಾನೆ. ಒಂದೂ ಮಾತಾಡದೆ ನನ್ನ ಮುಂದೆ ಮಂಡಿಯೂರಿ ಕುಳಿತು  ತನ್ನ ಅಂಗೈನಲ್ಲಿ ಮುಚ್ಚಿಟ್ಟುಕೊಂಡಿದ್ದ ಉಂಗುರಕ್ಕೊಮ್ಮೆ ಮುತ್ತಿಟ್ಟು ನನ್ನ ಕಣ್ಣುಗಳನ್ನೇ ನೋಡುತ್ತಾ ನನ್ನ ಎಡಗೈಯನ್ನು ಹಿಡಿದು ನನ್ನ ಉಂಗುರದ ಬೆರಳಿಗೆ ಉಂಗುರವನ್ನು ತೊಡಿಸುತ್ತಾನೆ...!
ಆದರೆ ವಾಸ್ತವದಲ್ಲಿ ಆತ ನನಗೆಂದೂ ಉಂಗುರ ತೊಡಿಸಲಿಲ್ಲ.. ಕೊಡಿಸಲೂ ಇಲ್ಲ...ಆದರೆ ನಾನವನಿಗೊಂದು ಉಂಗುರ ಮಾಡಿಸಿಕೊಟ್ಟಿದ್ದೆ. ಅವನದೇ ದುಡ್ಡಿನಲ್ಲಿ ತಾನೇ? ಎಂದು ನೀವು ಕೊಂಕು ತೆಗೆಯಬಹುದು. ಹೌದು ಸ್ವಾಮಿ, ಅವನದೇ ದುಡ್ಡಿನಲ್ಲಿ ನಾನವನಿಗೆ ಉಂಗುರ ಮಾಡಿಸಿಕೊಟ್ಟೆ. ಯಾಕೆ ಹೇಳಿ, ಆಗ ನಮ್ಮಿಬ್ಬರಿಗೂ ಮದುವೆಯಾಗಿತ್ತಲ್ಲ. ಅಂದರೆ ನಾನವನಿಗೆ ಹೆಂಡತಿಯಾಗಿದ್ದೆ. ಗಂಡ ದುಡಿದಿದ್ದನ್ನು ಖರ್ಚು ಮಾಡಲು ಪ್ರಥಮಾಧಿಕಾರ ಇರುವುದು ಪತ್ನಿಗೆ ತಾನೇ?
ನನ್ನ ಗಂಡ ಒಬ್ಬ ಪತ್ರಕರ್ತ. ಹಾಗಾಗಿ ಆತ ಆಗಾಗ ಕೆಲಸ ಬದಲಿಸುತ್ತಿದ್ದ. ನಾನು ಭವಿಷ್ಯದ ಬಗ್ಗೆ ಸದಾ ಅಸ್ಥಿರತೆಯಲ್ಲಿರುತ್ತಿದ್ದೆ. ಅದನ್ನು ಮನಗಂಡ ನನ್ನ ಆತ್ಮೀಯ ಗೆಳತಿಯೊಬ್ಬಳು, ನಿನ್ನ ಗಂಡನಿಗೆ ಬರ್ತ್ ಸ್ಟೋನಿನ ಉಂಗುರ ಹಾಕೋಕೆ ಹೇಳು. ಅದರಿಂದ ಅವರ ಅದೃಷ್ಟ ಖುಲಾಯಿಸುತ್ತದೆ ಎಂದಳು. ನಾನದನ್ನು ನನ್ನ ಗಂಡನಿಗೆ ಹೇಳಿದೆ. ಆತ ಹೇಳಿದ, ತನಗೆ ಅದರಲೆಲ್ಲಾ ನಂಬಿಗೆಯಿಲ್ಲ. ನೀನು ಬೇಕಾದರೆ ಹಾಕಿಕೋ ಎಂದು ಹೇಳಿದ್ದಲ್ಲದೆ, ನೀನೆ ತಾನೇ ಈ ಮನೆಯ ನಿಜವಾದ ಯಜಮಾನಿ ಎಂದು ಒಗ್ಗರಣೆ ಸೇರಿಸಿದ. ನಾನಾಗಲೇ ಎರಡು ಮಕ್ಕಳಾಗಿದ್ದವು. ಈ ವ್ಯಂಗ್ಯವನ್ನೆಲ್ಲಾ ಧೂಳಿಪಟ ಮಾಡುವ ಶಕ್ತಿ ನನ್ನ ಗೊಣಗಾಟದಲ್ಲಿತ್ತು.
ಛಲ ಬಿಡದ ತ್ರಿವಿಕ್ರಮನಂತೆ ನನ್ನ ಕಾಯಕವನ್ನು ಮುಂದುವರಿಸಿ ನನ್ನ ಗಂಡನ ಬರ್ತ್ ಸ್ಟೋನ್ ಹವಳ ಎಂಬುದನ್ನು ಕಂಡುಕೊಂಡು ಅದನ್ನೇ ಆತನ ಮುಂದೆ ಅರುಹಿದೆ. ಆತ  ಹಿಂದೆ ಹೇಳಿದ್ದನ್ನೇ ಮತ್ತೆ ಕಂಚಿನ ಮಂಡೆಗೆ ಬಡಿದಂತೆ ನೀ ಬೇಕಾದರೆ ಹಾಕಿಕೋ’ ಎಂದ.ನನ್ನ ಬತ್ತಳಿಕೆಯಲ್ಲಿ ಸಿದ್ಧ ಉತ್ತರವಿತ್ತು. ನನ್ನದು ಕೃತ್ತಿಕಾ ನಕ್ಷತ್ರವಲ್ವಾ,ನನ್ನ ಬರ್ತ್ ಸ್ಟೋನ್ ವಜ್ರ ಅಂತೆ ಮಾಡ್ಸಿಕೊಳ್ಲಾ ಅಂದೆ. ಆತ ಹೌಹಾರಿದ. ವಾಗ್ವಾದ ನಡೆಯಿತು. ಕೊನೆಗೆ ಉಂಗುರ ಹಾಕಿಕೊಳ್ಳಲು ಆತ ಒಪ್ಪಿಕೊಂಡ.
ನನ್ನ ತವರು ಮನೆಯವರು ಬಂಗಾರ ಮಾಡಿಸುವುದು ಪುತ್ತೂರಿನಲ್ಲಿ. ಅಲ್ಲಿನ ಕೋರ್ಟ್ ರೋಡಿನಲ್ಲಿ ಹಲವಾರು ಬಂಗಾರದ ಅಂಗಡಿಗಳಿವೆ.ಅಲ್ಲಿ ಅಣ್ಣಿ ಆಚಾರಿ ಎಂಬವರ ಅಂಗಡಿಯೊಂದಿದೆ. ನನ್ನ ಬದುಕಿನಲ್ಲಿ ನಾನು ಮಾಡಿಸುತ್ತಿರುವ ಮೊದಲ ಆಭರಣವನ್ನು ಅಲ್ಲೇ ಮಾಡಿಸೋಣವೆಂದುಕೊಂಡು ನನ್ನ ತವರಿಗೆ ಪೋನ್ ಮಾಡಿದರೆ ನನ್ನ ಅಮ್ಮಾ, ಅಷ್ಟು ದೂರ ಯಾಕೆ ಹೋಗ್ತೀಯಾ? ಇಲ್ಲೇ ಸುಳ್ಯದಲ್ಲಿ ಮುಳಿಯದವರ ಚಿನ್ನದ ಅಂಗಡಿ ಆರಂಭವಾಗಿದೆ. ಅಲ್ಲೇ ಮಾಡಿಸ ಎಂದರು. ನನಗೂ ಸರಿಯೆಂದು ಮುಕ್ಕಾಲು ಪವನಿನ ಸುಂದರವಾದ ಒಂದು ಹವಳದ ಉಂಗುರ ಮಾಡಿಸಿದೆ. ಅದಕ್ಕೆ ಅಳತೆ ತಗೊಂಡು ಹೋಗಲು ನಾನು ಪಟ್ಟ ಪಾಡು ಅದೊಂದು ದೊಡ್ಡ ಕಥೆ..ಅದನ್ನಾತ ನಿಗೂಡ ಮೌನದ, ಗಾಢ ಅಂದಕಾರದ ಒಂದು ರಾತ್ರಿಯಲ್ಲಿ ಚಾರ್ಮಡಿ ಘಾಟಿನ ತಿರುವಿನಲ್ಲಿ ಕಳೆದುಕೊಂಡದ್ದು ಇನ್ನೊಂದು ಕಥೆ. ಆಮೇಲೆ ಇನ್ನೆಂದೂ ಉಂಗುರ ಮಾಡಿಸುವ ಅಥವಾ ಖರೀದಿಸುವ ಗೋಜಿಗೆ ನಾನು ಹೋಗಲಿಲ್ಲ. ಆದರೆ ಅವನು ಸುದ್ದಿ ಚಾನಲ್ಲೊಂದರ ಮುಖ್ಯಸ್ಥನಾಗಿದ್ದಾಗ ಹಲವಾರು ಜನ ಜ್ಯೋತಿಷಿಗಳು ಅವನ ಬೆರಳುಗಳಿಗೆ ಉಂಗುರ ಹಾಕಲು ಪ್ರಯತ್ನಿಸಿದ್ದುಂಟು..ಆದರೆ ಅವನು ಮುಷ್ಟಿಯಲ್ಲಿ ಪಂಚತತ್ವವನ್ನು ಕಂಡುಕೊಂಡವನು..!
ಉಂಗುರದ ಗುಂಗಿಗೆ ಜಗತ್ತು ಮರುಳಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ನಮ್ಮ ಒಲವಿನ ಕವಿ ಕೆ.ಎಸ್.ನರಸಿಂಹಸ್ವಾಮಿಯವರ ಒಂದು ಕವನ ಸಂಕಲನದ ಹೆಸರೇ ’ಉಂಗುರ’ ಅದರಲ್ಲಿ ಹಲವಾರು ಒಲವಿನ ಕವನಗಳಿವೆ. ’ಬೇಡಿ ಬಂದವಳು’ ಸಿನೇಮಾಕ್ಕಾಗಿ ಆರ್. ಎನ್.ಜಯಗೋಪಾಲ್ ಬರೆದ ಪಿ.ಬಿ.ಶ್ರೀನಿವಾಸ್ ಮತ್ತು ಪಿ.ಸುಶೀಲ ಹಾಡಿರುವ ’ನೀರಿನಲ್ಲಿ ಅಲೆಯ ಉಂಗುರ..’ಎಲ್ಲಾ ಕಾಲದಲ್ಲೂ ರಸಿಕರು ಗುನುಗುನಿಸುವ ಹಾಡು. ಇಂಗ್ಲೀಷನಲ್ಲಿ ಅಸ್ಕರ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದ’  ಲಾರ್ಡ್ಸ್ ಅಫ್ ದಿ ರಿಂಗ್ಸ್’ ಕಥೆ ಹೇಳುವುದೂ ಉಂಗುರದ ಕಥೆಯನ್ನೇ..
ಸಂಸ್ಕೃತದಲ್ಲಿ  ಉಂಗುರದ ಬೆರಳಿಗೆ ಅನಾಮಿಕಾ ಬೆರಳು ಎಂದು ಹೇಳುತ್ತಾರೆ. ಇದಕ್ಕೆ ಇಂಗ್ಲಿಷನಲ್ಲಿ ಮಾಂತ್ರಿಕ ಬೆರಳು-ಮ್ಯಾಜಿಕ್ ಫಿಂಗರ್’ ಎಂದೂ ಕರೆಯುತ್ತಾರೆ. ಕೈಯ ಬೆರಳುಗಳು ನಮ್ಮ ಹತ್ತಿರದ ಬಂಧುಗಳ ಜೊತೆಗಿನ ಬಂಧುತ್ವವನ್ನು ಹೇಳುತ್ತದೆಯಂತೆ. ಹೆಬ್ಬೆರಳು ಹೆತ್ತವರನ್ನೂ, ತೋರು ಬೆರಳು ಅಕ್ಕ-ತಂಗಿ, ಅಣ್ಣ-ತಮ್ಮರನ್ನೂ, ಉಂಗುರ ಬೆರಳು ಬಾಳ ಸಂಗಾತಿಯನ್ನೂ, ಕಿರುಬೆರಳು ಮಕ್ಕಳನ್ನೂ ಸೂಚಿಸುತ್ತದೆಯಂತೆ. ಉಂಗುರದ ಬೆರಳು ಗ್ರೀಕ್ ದೇವರು ಅಪೋಲೋ ಜೋತೆ ಸಾಂಗತ್ಯ ಹೊಂದಿದೆ. ಆತ ನಮ್ಮ ಸೂರ್ಯನಂತೆ ಬೆಳಕಿನ ದೇವತೆ. ಈ ಬೆರಳಿನ ಗುಣ ಲಕ್ಷಣಗಳು ಕಲೆ, ಸಂಗೀತ, ಸೌಂದರ್ಯಶಾಸ್ತ್ರ, ಕೀರ್ತಿ, ಸಂಪತ್ತು ಮತ್ತು ಸಾಮರಸ್ಯದ ವಿಷಯ ನಿರ್ವಹಣೆಯೊಂದಿಗೆ ಬಂಧವನ್ನು ಹೊಂದಿದೆಯಂತೆ.. ನನಗೊಂದು ಕುತೂಹಲ..ಕೈಯ ನಾಲ್ಕನೇ ಬೆರಳಿಗೇ ಉಂಗುರದ ಬೆರಳು ಎಂದು ಯಾಕೆ ಹೇಳುತ್ತಾರೆ? ನಿಶ್ಚಿತಾರ್ಥದಲ್ಲಿ ಹುಡುಗರ ಬಲಗೈಗೆ ಮತ್ತು ಹುಡುಗಿಯ ಎಡಗೈಗೆ ಮಾತ್ರ ಯಾಕೆ ಉಂಗುರ ತೊಡಿಸುತ್ತಾರೆ?ಅದಕ್ಕೆ ಉತ್ತರ ಹುಡುಕುತ್ತಾ ಹೊರಟಾಗ ನನಗೆ ಅನೇಕ ಸ್ವಾರಸ್ಯಕರ ಸಂಗತಿಗಳು ಸಿಕ್ಕವು. ಅದು ನನ್ನನ್ನು ವೈದ್ಯಜಗತ್ತಿನೊಡನೆಯೂ ಅಧ್ಯಾತ್ಮಿಕತೆಯೊಡನೆಯೂ ಬೆಸೆಯುವ ಪ್ರಯತ್ನ ಮಾಡಿತು.
ಈ ಭೂಮಿ ಪಂಚ ತತ್ವಗಳಿಂದ ರೂಪುಗೊಂಡಿದೆ ಎಂಬುದು ಎಲ್ಲರೂ ಒಪ್ಪಿಕೊಂಡ ಮಾತು. ಹಾಗೆಯೇ ನಮ್ಮ ಭೌತಿಕ ಶರೀರ ಕೂಡಾ ಪಂಚತತ್ವಗಳಿಂದಲೇ ರಚಿತವಾಗಿದೆ. ನಮ್ಮ ಕೈ ಬೆರಳುಗಳು ಇದೇ ತತ್ವಗಳನ್ನು ಪ್ರತಿಪಾದಿಸುತ್ತವೆ. ಹೆಬ್ಬೆರಳು ಅಗ್ನಿಯನ್ನೂ, ತೋರು ಬೆರಳು ವಾಯುವನ್ನೂ, ಮಧ್ಯದ ಬೆರಳು ಆಕಾಶವನ್ನೂ, ಉಂಗುರ ಬೆರಳು ಪೃಥ್ವಿಯನ್ನೂ, ಕಿರು ಬೆರಳು ಜಲ ತತ್ವವನ್ನೂ ಪ್ರತಿನಿಧಿಸುತ್ತವೆ. ಅಂದರೆ ನಮ್ಮ ಒಂದು ಮುಷ್ಠಿಯೊಳಗೆ ಪಂಚತತ್ವಗಳ ಮರ್ಮ, ಸೃಶ್ಟಿಯ ರಹಸ್ಯವೇ ಅಡಿಗಿದೆಯೆಂದಾಯ್ತು.
ನಾವು ಪ್ರೇಮ ಬಂಧನವನ್ನು,ನಿಶ್ಚಿತಾರ್ಥವನ್ನು ಬೆರಳಿಗೆ ಉಂಗುರವನ್ನು ತೊಡಿಸುವುದರ ಮುಖಾಂತರ ತೋರ್ಪಡಿಸುತ್ತೇವೆ.ತನ್ನ ವಧು ಶಿಲ್ಪಶೆಟ್ಟಿಗೆ ಮೂರು ಕೋಟಿ ರೂಪಾಯಿ ಬೆಲೆ ಬಾಳುವ ನಿಶ್ಚಿತಾರ್ಥದ ಉಂಗುರವನ್ನು ರಾಜ್ ಕುಂದ್ರಾ ತೊಡಿಸಿದ್ದನ್ನು ಕೀಳಿದರೆ ಅದಕ್ಕಿರುವ ವೈಭವದ ಮುಖವೂ ಅನಾವರಣಗೊಳ್ಳುತ್ತದೆ.
 ಉಂಗುರದ ಆಕಾರವನ್ನು ನೋಡಿ. ಅದು ದುಂಡಗೆ ಮನಮೋಹಕವಾಗಿದೆ. ಸೊನ್ನೆಯ ಆಕಾರದಲ್ಲಿದೆ. ಭೂಮಿಯೂ ಗುಂಡಗಿದೆ. ಜಗತ್ತಿನಲ್ಲಿ ಎಲ್ಲವೂ ಸೊನ್ನೆಯ ಆಕಾರದಲ್ಲಿದೆ ಎಂದು ತತ್ವಜ್ನಾನಿಗಳು ಹೇಳುತ್ತಾರೆ. ಬೀಜ ಗಣಿತದಲ್ಲಿ ಸೊನ್ನೆಗೆ ವಿಶೇಷ ಸ್ಥಾನವಿದೆ. ಅದನ್ನು ಜಗತ್ತಿಗೆ ಕೊಟ್ಟವರು ನಾವು ಭಾರತೀಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಇಷ್ಟು ಮಾತ್ರವಲ್ಲ. ಬೆರಳುಗಳಿಗೂ ಹಾರ್ಮೋನ್ ಗಳಿಗೂ ನೇರ ಸಂಬಂಧವಿದೆಯೆಂದು ವೈದ್ಯವಿಜ್ನಾನ ಹೇಳುತ್ತದೆ. ಅದು ದೇಹದಲ್ಲಿರುವ ಟೆಸ್ಟೋಸ್ಟೇರನ್ ಪ್ರಮಾಣವನ್ನು ಸೂಚಿಸುತ್ತದೆಯಂತೆ. ಇನ್ನು ಕೆಲವರು ಹೇಳುತ್ತಾರೆ; ಈ ಬೆರಳುಗಳಿಗೆ ಹೊಂದಿಕೊಂಡಿರುವ ರಕ್ತನಾಳಗಳು ನೇರವಾಗಿ ಹೃದಯಕ್ಕೆ ಸಂಬಂಧ ಕಲ್ಪಿಸುತ್ತದೆಯೆಂದೂ ಇದರಿಂದ ಪ್ರೀತಿಯ ಭಾವನೆಗಳು ಸ್ಪುರಿಸುತ್ತವೆಯೆಂಬುದು ಅವರ ಕಲ್ಪನೆ. ರೇಖಿ ಚಿಕಿತ್ಸೆಯಲ್ಲಿ ಕೈಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ.
ಆದರೆ ನನಗನ್ನಿಸುತ್ತದೆ,ಉಂಗುರ ಎನ್ನುವುದು ಕೇವಲ ಒಂದು ಒಡವೆಯಲ್ಲ. ಸೌಂಧರ್ಯವರ್ಧಕ ಅಲ್ಲ. ಅದು ಬದ್ಧತೆಯ ಲಕ್ಷಣ. ಎರಡು ಹೃದಯಗಳ ಅಥವಾ ಒಂದು ಸಿದ್ದಾಂತದ,ಒಂದು ನಂಬಿಕೆಯೆಡೆಗಿನ ಬದ್ಧತೆಯಾಗಿರುತ್ತದೆ. ಅದು ನಮ್ಮ ಮತ್ತು ಅದರೆಡೆಗೆ ಒಂದು ಗೆರೆಯನ್ನು ಎಳೆದು ಬಿಡುತ್ತದೆ. ಅದರಲ್ಲೂ ಗಂಡಸೊಬ್ಬನ ಉಂಗುರ ಬೆರಳಿನಲ್ಲಿ ಉಂಗುರ ಕಂಡರೆ, ಹೆಣ್ಣೊಬ್ಬಳ ಕೊರಳಿನಲ್ಲಿ ಮಂಗಲಸೂತ್ರವನ್ನು ಕಂಡಾಗ ಉಂಟಾಗುವ ಭಾವನೆಯೇ ನನ್ನಲ್ಲಿ ಉಂಟಾಗುತ್ತದೆ. ಶಕುಂತಲೆ ಧರಿಸಿದ, ದುಷ್ಯಂತ ಮರೆತ ಉಂಗುರದ ಕಥೆ ಲೋಕ ಪ್ರಸಿದ್ಧ. ಲಂಕೆಯ ಅಶೋಕವನದಲ್ಲಿ ಶ್ರೀರಾಮ ದೂತ ಹನುಮಂತ ತನ್ನ ಗುರುತಿಗಾಗಿ ಸೀತೆಗೆ ರಾಮ ಕೊಟ್ಟ ಮುದ್ರೆಯುಂಗರವನ್ನು ತೋರಿಸಿದ ಪ್ರಸಂಗ ಎಲ್ಲರಿಗೂ ಗೊತ್ತಿರುವಂಥದೇ.  ಪುರಾಣದಲ್ಲಿ, ಇತಿಹಾಸದಲ್ಲಿ, ರಾಜರ ಆಳಿಕೆಯಿದ್ದ ಎಲ್ಲಾ ಕಾಲಘಟ್ಟದಲ್ಲಿ ಮುದ್ರೆಯುಂಗರಕ್ಕೆ ಎಂತಹ ಮಹತ್ವವಿತ್ತು ಎಂಬುದು ಗೊತ್ತಾಗುತ್ತದೆ. ಅದು ಸ್ವತಃ ರಾಜನನ್ನು ಪ್ರತಿನಿಧಿಸುತ್ತಿತ್ತು. ಪಟ್ಟದ ಕತ್ತಿ ಮತ್ತು ಪಟ್ಟದುಂಗುರ ರಾಜ ಚಿಹ್ನೆಗಳೇ ಆಗಿದ್ದವು.
ಇನ್ನು ಜ್ಯೋತಿಷಿಗಳ, ಮಾಟಗಾತಿಯರ, ಇನ್ಯಾವುದರದ್ದೋ ಸಾಧನೆಯಲ್ಲಿ ತೊಡಗಿರುವವರ ಬೆರಳುಗಳಲ್ಲಿ ಕಂಡು ಬರುವ ಉಂಗುರಗಳ ಬಗ್ಗೆ ನನಗೆ ಸದಾ ಕುತೂಹಲ ಇದ್ದೇ ಇದೆ. ಅವುಗಳ ಗಾತ್ರ, ಆಕಾರ, ಹರಳುಗಳ ಬಣ್ಣ ವೈವಿಧ್ಯ ಮತ್ತು ಅದನ್ನು ಧರಿಸಿರುವ ವ್ಯಕ್ತಿಯ ವಸ್ತ್ರ ವಿನ್ಯಾಸ ಇವು ಯಾವತ್ತಿಗೂ ನನಗೆ ಅಧ್ಯಯನದ ವಿಷಯಗಳೇ. ಇವರೆಲ್ಲರ ಜೊತೆ ಭೂಗತ ಜಗತ್ತಿನ ಖ್ಯಾತ ನಾಮರು, ರಿಯಲ್ ಎಸ್ಟೇಟ್ ಕುಳಗಳು ಸ್ಪರ್ಧೆಗೆ ನಿಲ್ಲಬಲ್ಲರು. ಈ ಅದೃಷ್ಟದ ಹರಳುಗಳುಳ್ಳ ಉಂಗುರದೆಡೆಗೆ ರಾಜಕಾರಣಿಗಳಿಗೂ ಸಿನೇಮಾ ಜಗತ್ತಿನ ಸೆಲೆಬ್ರಿಟಿಗಳಿಗೂ ಸೆಳೆತವಿದೆ. ಒಟ್ಟಿನಲ್ಲಿ ಈ ಉಂಗುರ ಉಂಗುರಾಕಾರವಾಗಿ ಜಗತ್ತೇಲ್ಲವನ್ನೂ ಸುತ್ತುವರಿದಿದೆ, ಬಂಧಿಸಿದೆ. ಜಗತ್ತನ್ನು ಸುತ್ತವರಿದಿದೆ ಎಂದಾಗ ನಮ್ಮ ಸೌರಮಂಡಲದಲ್ಲಿರುವ ಅತ್ಯಂತ ಸುಂದರ ಗ್ರಹ ಶನಿಯನ್ನು ಹೇಗೆ ಮರೆಯಲಾದೀತು? ಆತನ ಸುತ್ತ ಸುಮಾರು ಒಂದು ಲಕ್ಷ ಉಂಗುರಗಳಿವೆಯೆಂದು ಭೌತ ವಿಜ್ನಾನಿಗಳು ಅಂದಾಜು ಮಾಡಿದ್ದಾರೆ. ಕೆಲವೊಮ್ಮೆ ಸೃಷ್ಟಿ ವೈಚಿತ್ರ್ಯದ ಫಲವಾಗಿ ಸೂರ್ಯ, ಚಂದ್ರರಿಗೂ ಉಂಗುರ ಧರಿಸುವ ಸೌಭಾಗ್ಯ ಸಂಭವಿಸುವುದುಂಟು.
ಉಂಗುರದ ಬಗ್ಗೆ ಇಷ್ಟೆಲ್ಲಾ ಬರೆಯುವಾಗ ನನ್ನಲ್ಲಿ ಸುಖದ ಅಲೆಯೊಂದು ಮೂಡಿ ಅದು ಶರೀರವನ್ನೆಲ್ಲಾ ವ್ಯಾಪಿಸುತಾ, ಉಂಗುರ, ಉಂಗುರಕಾರವಾಗಿ ಮೇಲೆರುತ್ತಾ ಅಂತರಿಕ್ಷವನ್ನೆಲ್ಲಾ ತುಂಬುತ್ತಿದೆ. ಅದು ಆಗ ನಿರಾಕಾರವಾಗುತ್ತದೆ. ಅದರ ಕ್ಷಣಭಂಗುರತೆಯ ಅರಿವಾಗುತ್ತದೆ. ಆಗ ನನ್ನ ಮನಸ್ಸಿಗೆ ಬರುವುದು ಎ.ಕೆ ರಾಮಾನುಜನ್ ಬರೆದ ’ಅಂಗುಲ-ಹುಳುವಿನ ಪರಕಾಯ ಪ್ರವೇಶ’ ಎಂಬ ಕವನದ ಸಾಲುಗಳು. ಅದರಲ್ಲಿ ಅಂಗುಲ ಹುಳ ಕೋಗಿಲೆಯ ಹಾಡನ್ನು ಅಳೆಯುತ್ತದೆ. ಅದು ಹೇಗೆ ಅಳೆಯುತ್ತದೆ ಎಂದರೆ;
”ಅಂಗುಲ ಅಂಗುಲ ಅಂಗುಲ
ಮುಖವೊತ್ತಿ ಮೈಯೆತ್ತಿ ಹತ್ತಿ ಇಳಿದು ಹೊಳೆದು ಸುಳಿದು ಒತ್ತಿ ಎತ್ತಿ
ಉಂಗುರ ಗುಂಗುರು ಉಂಗುರದೊಳಗೇ ತೂರಿ ತೂರಿ ಅಪ್ಪಿ ತಪ್ಪಿ
ಅಂಗುಲ ಅಂಗುಲ ಅಳೆಯಿತು.”
ನಾನು ಉಂಗುರವನ್ನು ಅಳೆಯಲು ಹೋಗುವುದಿಲ್ಲ.ನನಗೆ ಪೃಥ್ವಿಯ ಜೊತೆ ಸಂಬಂಧ ಬೇಕಾಗಿದೆ. ಈಗಲೂ ನನ್ನ ಮನದ ಮೂಲೆಯಲ್ಲೊಂದು ಆಸೆ ಜೀವಂತವಾಗಿದೆ; ಯಾರಾದರೂ ನನ್ನ ಬೋಳು ಬೆರಳಿಗೊಂದು ಉಂಗುರ ತೊಡಿಸಬಾರದೇ? ಆ ಹಂಬಲದಿಂದಲೇ ನಾನು ಬರೆದೆ;
”’ಅಂದು ಘಟಿಸಿದ ಕಂಕಣ ಸೂರ್ಯನ  ಬೆಳಕಿನುಂಗರಕ್ಕಾಗಿ
ಇಂದು ಹಂಬಲಿಸುತ್ತಿದೆ ನನ್ನ ಬೋಳು ಬೆರಳು..
ಅಂದು-ಇಂದುಗಳ ಬೆಸೆಯಬಲ್ಲ ಬಂಧು..
ನೀನೆಲ್ಲಿರುವೆ ಹೇಳು?’’
ಹೀಗೊಂದು ಸಂದೇಶವನ್ನು ಪೇಸ್ ಬುಕ್ ಮುಖಾಂತರ  ಬ್ರಹ್ಮಾಂಡಕ್ಕೆ ಹರಿಯಬಿಟ್ಟಿದ್ದೇನೆ. ಇದನ್ನು ಯಾರಾದರೂ ರಿಸಿವ್ ಮಾಡಬಲ್ಲರೇ? ನನ್ನ ಕಣ್ಣಿನುಂಗರ ಅದಕ್ಕಾಗಿ ಹಂಬಲಿಸುತ್ತಿದೆ.

[ಉದಯವಾಣಿಯ  ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಪ್ರಬಂಧ ]

   

5 comments:

Shantharam V.Shetty said...
This comment has been removed by the author.
ರಾಘವೇಂದ್ರ ಜೋಶಿ said...

ಒಂದು ಆಸೆಯ ಕಲ್ಲು
ಹೊಂಡದಲ್ಲಿ ಬಿದ್ದೊಡನೆ
ತನ್ನ ಸುತ್ತ ಎಷ್ಟೊಂದು
ನಿರೀಕ್ಷೆಯ ಉಂಗುರಗಳನ್ನು
ಸೃಷ್ಟಿಸುತ್ತದೆ..

ಒಂದು ಚೆಂದದ ಬರಹ.ಇಷ್ಟವಾಗಿದೆ. :-)

Shantharam V.Shetty said...

ಈ ಉಂಗುರ ಬೆರಳು ಕರ್ತವ್ಯ ಪರತೆಯ "ಧೃಡತೆ" ಯನ್ನು ತೋರಿಸುತ್ತದೆಯಂತೆ .ಹಾಗಾಗಿ ನಿಶ್ಚಿತಾರ್ತ ಸಂದರ್ಭದಲ್ಲಿ ಈ ಬೆರಳಿಗೆ ಉಂಗುರ ತೊಡಿಸುತ್ತಾರೆ. ' ನಾನು "ನಿನ್ನನ್ನು" ಮತ್ತು "ನಿನ್ನನ್ನೆ" ಮುಂದಿನಜೀವನದಲ್ಲಿ ಧೃಡವಾಗಿ ನಂಬಿ ದಾಂಪತ್ಯದಲ್ಲಿ ಮುಂದುವರಿಯುತ್ತೇನೆ ಮಾತು-ಕೃತಿ ಯಲ್ಲಿ ತಪ್ಪಿ ನಡೆಯುವುದಿಲ್ಲ" ಅನ್ನುವುದರ ಪ್ರತೀಕ . ಪ್ರಾಣಯಾಮ ದಲ್ಲಿ ಕೂಡ ಈ ಬೆರಳು ನಿಮ್ಮ commitment ಅನ್ನು ಸಾರುತ್ತದೆ .ನಿಯಮಿತ ಜೀವನದಲ್ಲಿ ಅಹಂಕಾರವನ್ನು (ಹೆಬ್ಬೆರಳು ಅಹಂಕಾರದ ಸಂಕೇತ "ನನ್ನನ್ನು ಕೇಳೋದಕ್ಕೆ ನೀನು ಯಾರು..?" ಅನ್ನುವಾಗ ನಾವು ಹೆಬ್ಬೆರಳನ್ನು ಮೇಲಕ್ಕೇರಿಸಿ ಮೇಜು ಗುದ್ದುತೇವೆ !!)) ಬಗ್ಗಿಸಿ ಧೃಡತೆಯೊಂದಿಗೆ( ಉಂಗುರ ಬೆರಳು) ಆತ್ಮವಿಶ್ವಾಸ ದಿಂದ ಮುಂದುವರಿಯುತ್ತೇನೆ ಅನ್ನುವುದರ ಸಂಕೇತ. ಉಂಗುರ ಅನಿಯಮಿತ ಜೀವನಕ್ಕೆ , ಕಡಿವಾಣದ ಸಂಕೇತ!

Shantharam V.Shetty said...

ಉಂಗುರಕ್ಕೆ ಸಂದ ಮರ್ಯಾದೆ ಈ ಲೇಖನ

Badarinath Palavalli said...

ನೀವು ಬ್ರಹ್ಮಾಂಡಕ್ಕೆ ಹರಿಬಿಟ್ಟ ಸಂದೇಶಕ್ಕೆ ಉತ್ತರವೂ ಬೇಗ ಬರುತ್ತದೆ.

ಉಂಗುರದ ಸುತ್ತ ಹೆಣೆದ ಈ ಬರಹವು ನನ್ನನ್ನು ಪದೇ ಪದೇ ಓದಿಸಿಕೊಂಡಿತು.