Wednesday, December 12, 2012

ನಲ್ಲಮಲ ಕಾಡಿನಲ್ಲಿ...ಉಗ್ರನರಸಿಂಹ...!



ಪಾವನ ನರಸಿಂಹ

ಪ್ರಹ್ಲಾದನ ಅಪ್ಪ ಹಿರಣ್ಯಕಶಿಪನನ್ನು ನರಸಿಂಹ  ಕೊಂದ ಕತೆಯನ್ನು ನಾವೆಲ್ಲಾ ಕೇಳಿದ್ದೇವೆ. ಆದರೆ ಅಂತಹದೊಂದು ಘಟನೆ ನಡೆದಿದೆಯೆಂದು ನಂಬಲಾದ ನಿರ್ಧಿಷ್ಟ  ಜಾಗವೊಂದು ನಿಜವಾಗಿಯೂ ಈ ಭರತ ಭೂಮಿಯಲ್ಲಿದೆಯೆಂದು ನನಗೆ ಗೊತ್ತಿರಲಿಲ್ಲ. ಕಳೆದ ವಾರ ಆ ಜಾಗದಲ್ಲಿ ನಾನು ಅಲೆದಾಡಿ ಬಂದೆ.
ಅಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಲ್ಲಮಲ ಅರಣ್ಯದೊಳಗಿದೆ ಹಿರಣ್ಯಕಶಿಪನನ್ನು ನರಸಿಂಹ ಕೊಂದನೆಂದು ಆಸ್ತಿಕರು ನಂಬಿರುವ ಜಾಗ. ನಲ್ಲಮಲ ಅರಣ್ಯ ಎಂದೊಡನೆ ನಮಗೆ ನೆನಪಾಗುವುದು ಎರಡು ವಿಚಾರಗಳು ಒಂದು ಇಲ್ಲಿನ ದಟ್ಟ ಅರಣ್ಯದಲ್ಲಿ ಹರಡಿಕೊಂಡಿರುವ ನಕ್ಸಲ್ ಮತ್ತು ಮಾವೋ ಉಗ್ರಗಾಮಿಗಳು, ಇನ್ನೊಂದು, ಎರಡು ವರ್ಷಗಳ ಹಿಂದೆ ಇದೇ ಅರಣ್ಯ ಪ್ರದೇಶದಲ್ಲಿ ಆಗಿನ ಅಂಧ್ರ ಮುಖ್ಯಮಂತ್ರಿಗಳಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿ ಹೆಲಿಕಾಪ್ಟರ್ ದುರಂತದಲ್ಲಿ ಮರಣವನ್ನಪ್ಪಿದ್ದು.
ಗೋಧೂಳಿ ಲಗ್ನ..!

ನಾನೇನೂ ಉಗ್ರನರಸಿಂಹನನ್ನು ನೋಡುವುದಕ್ಕೆಂದೇ ಹೋದವಳಲ್ಲ. ನನ್ನ ಗುರಿಯಿದ್ದುದು ಕದಳಿ. ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನಲ್ಲಿ ಐಕ್ಯಗೊಂಡ ಆ ಜಾಗವನ್ನು ಬದುಕಿನಲ್ಲಿ ಒಮ್ಮೆಯಾದರೂ ಕಂಡು ಪುನೀತಳಾಗಬೇಕೆಂಬ ಮಹದಾಸೆಯನ್ನು ಹೊತ್ತು ನಾನು ಶ್ರೀಶೈಲಕ್ಕೆ ಹೋಗಿದ್ದೆ. ಚಾರಣದಲ್ಲಿ ಆಸಕ್ತಿಯಿದ್ದ ಒಂದಷ್ಟು ಮಹಿಳೆಯರು ಒಟ್ಟಾಗಿ ಸೇರಿ ಟ್ರಾವಲ್ಸ್ ಏಜನ್ಸಿಯೊಂದನ್ನು ಸಂಪರ್ಕಿಸಿ ನಾವಾಗಿ ಏರ್ಪಡಿಸಿಕೊಂಡ ಪ್ಯಾಕೇಜ್ ಟೂರಾಗಿತ್ತು ಅದು. ನಮ್ಮ ತಂಡದಲ್ಲಿ ಹಿಮಾಲಯದ ವಿವಿಧ ಜಾಗಗಳಲ್ಲಿ ಚಾರಣಗಳನ್ನು ನಡೆಸಿದ ಅನುಭವಿಗಳಿದ್ದರು. ನಮಗಾಗಿಯೇ ರುಚಿಕಟ್ಟಾದ ಅಡುಗೆಯನ್ನು ತಯಾರಿಸುವ ಪಾಕ ಪಂಡಿತರಿದ್ದರು.
ಬೆಂಗಳೂರಿನಿಂದ ೫೮೦ ಕಿ.ಮೀ ದೂರದಲ್ಲಿರುವ ಶ್ರೀಶೈಲವನ್ನು ಹದಿಮೂರು ಘಂಟೆಗಳ ಪ್ರಯಾಣದ ನಂತರ ನಾವು ತಲುಪಿದ್ದೆವು.ನಮಗೆಲ್ಲಾ ಅಕ್ಕನ ಗುಹೆಯನ್ನು ಕಾಣುವ ತವಕ; ಕದಳಿಯನ್ನು ತಲುಪುವ ಹಂಬಲ. ಆದರೆ ನಮ್ಮ ಆಸೆಗೆ ಕರ್ನೂರು ಜಿಲ್ಲಾಡಳಿತ ತಣ್ಣೀರೆರಚಿತು. ಆ ಪ್ರದೇಶದಲ್ಲಿ ನಕ್ಸಲ್ ಮತ್ತು ಮಾವೋ ಉಗ್ರಗಾಮಿ ಚಟುವಟಿಕೆಗಳು ಹೆಚ್ಚಾಗಿವೆ. ಹಾಗಾಗಿ ಸುರಕ್ಷತೆಯ ದೃಷ್ಟಿಯಿಂದ ಕದಳಿ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದರು. ಅವರ ಮಾತುಗಳಿಂದ ನಮಗೆ ನಿಜವಾಗಿಯೂ ಅಘಾತವಾಯ್ತು. ಅಲ್ಲಿಗೆ ತೆರಳಲು ಅರಣ್ಯ ಇಲಾಖೆಯ ಅನುಮತಿ ಬೇಕೆಂದು ನಮಗೆ ಗೊತ್ತಿತ್ತು. ಹಾಗಾಗಿ ನಮ್ಮ ಪ್ರವಾಸವನ್ನು ಆಯೋಜಿಸಿದವರಿಗೆ ನಾವು ಈ ಬಗ್ಗೆ ಮೊದಲೇ ಹೇಳಿದ್ದೆವು. ಅವರು ಅನುಮತಿಯನ್ನು ಪಡೆದುಕೊಂಡಿದ್ದೇವೆ ಎಂದು ನಮಗೆ ಬೆಂಗಳೂರಿನಲ್ಲೇ ತಿಳಿಸಿದ್ದರು. ಹಾಗಾಗಿ ನಾವು ನಿಶ್ಚಿಂತೆಯಾಗಿದ್ದೆವು. ಇಲ್ಲಿ ಬಂದಾಗ ಅಕ್ಕನ ಗುಹೆಗೆ ಮತ್ತು ಕದಳಿಗೆ ಹೋಗುವ ಬಗ್ಗೆ ಇರುವ ಕಟ್ಟುನಿಟ್ಟಿನ ನಿರ್ಭಂದದ ಬಗ್ಗೆ ಅರಿವಾಯ್ತು. . ಆಗ ನನಗೆ ನೆನಪಿಗೆ ಬಂದದ್ದು, ನಾವು ಬೆಂಗಳೂರಿನಿಂದ ಶ್ರೀಶೈಲ ಮಾರ್ಗವಾಗಿ ಪಯಣಿಸುತ್ತಿದ್ದಾಗ ಮಧ್ಯರಾತ್ರಿಯಲ್ಲಿ ನಮ್ಮ ವಾಹನವನ್ನು ತಡೆದು ನಿಲ್ಲಿಸಿದ ಅರಣ್ಯ ಇಲಾಖೆಯವರು ನಮ್ಮನೆಲ್ಲಾ ಎಬ್ಬಿಸಿ ಕೈಯ್ಯಲ್ಲಿ ಲಿಸ್ಟ್ ಒಂದನ್ನು ಹಿಡಿದುಕೊಂಡು ಪ್ರತಿಯೊಭ್ಭರ ಹೆಸರು ಕರೆದು ನಮ್ಮ ಐಡೆಂಟಿಟಿಯನ್ನು ಪರಿಶಿಲಿಸಿದ್ದು. ಯಾಕೆ ಹೀಗೆ ಅಂತ ಅಲ್ಲಿ ಅವರನ್ನು ಪ್ರಶ್ನಿಸಿದಾಗ ’ನೀವು ಅರಣ್ಯ ಪ್ರದೇಶವನ್ನು ಪ್ರವೇಶಿಸುತ್ತಿದ್ದೀರಿ’ ಎಂಬ ಉತ್ತರ ಬಂದಿತ್ತು. ಈಗ ಅದು ನೆನಪಿಗೆ ಬಂದು ಅಕ್ಕನ ಗುಹೆವರೆಗಾದರೂ ಹೋಗಲು ಅನುಮತಿ ನೀಡಿ ಎಂದು ಅಂಗಲಾಚಿದೆವು. ಅವರು ಜಪ್ಪಯ್ಯ ಅನ್ನಲಿಲ್ಲ.
ಪಾತಾಳ ಗಂಗೆಯಿಂದ ಹತ್ತಿ ಬರುವುದು ಕಷ್ಟ...ಕಷ್ಟ...!

ಶ್ರೀಶೈಲದಲ್ಲಿರುವುದು ಅಕ್ಕ ಮಹಾದೇವಿಯ ಆರಾಧ್ಯ ದೈವ ಶ್ರೀ ಚೆನ್ನಮಲ್ಲಿಕಾರ್ಜುನ. ಅರ್ಥಾತ್ ಶಿವ. ೧೨ ಜೋತಿರ್ಲಿಂಗಳಲ್ಲಿ ಇದು ಎರಡನೆಯದು.. ಇದು ಶಕ್ತಿಪೀಠವೂ ಹೌದು. ಅಕ್ಕಾ ಇವನನ್ನೇ ಹುಡುಕಿಕೊಂಡು ಶಿವಮೊಗ್ಗಾ ಜಿಲ್ಲೆಯ ಶಿಕಾರಿಪುರ ಸಮೀಪವಿರುವ ಉಡುತಡಿಯಿಂದ ಬಿದರ್ ಜಿಲ್ಲೆಯ ಬಸವಕಲ್ಯಾಣದ ಮಾರ್ಗವಾಗಿ ಸ್ರೀಶೈಲವನ್ನು ತಲುಪಿದ್ದಳು. ಇಪ್ಪತ್ತೊಂದನೆಯ ಶತಮಾನದಲ್ಲಿರುವ ನಮಗೆ ಅದೇನು ಮಹಾ ಎಂದು ಅನ್ನಿಸಬಹುದು. ಆದರೆ ೧೨ನೇ ಶತಮಾನದಲ್ಲಿ ಇಪ್ಪತ್ತರ ಅಸುಪಾಸಿನ ಸುಂದರ ಯುವತಿಯೊಬ್ಬಳು ಸಾವಿರಾರು ಮೈಲಿಗಳನ್ನು ಕಾಲ್ನಡಿಗೆಯಲ್ಲಿ ಅದೂ ಕೂಡಾ ದಟ್ಟವಾದ ಅರಣ್ಯಪ್ರದೇಶದಲ್ಲಿ ಕ್ರಮಿಸಿಸುವುದೆಂದರೆ ಅದು ಸಾಮಾನ್ಯವಾದ ವಿಚಾರವಲ್ಲ. ಮೆಚ್ಚಿದವನನ್ನು ಕೂಡಬೇಕೆಂಬ ಆಕೆಯ ಸಂಕಲ್ಪ ಶಕ್ತಿಯೇ ಆಕೆಯನ್ನು ಅಲ್ಲಿಯ ತನಕ ನಡೆಸಿರಬಹುದು !. ಹಾಗೆನ್ನಿಸಿದ್ದೇ ತಡ ನಾವು ಬೆಂಗಳುರಿನ ಪ್ರಭಾವಿ ವ್ಯಕ್ತಿಗಳನ್ನೆಲ್ಲಾ ಸಂಪರ್ಕಿಸಿದೆವು. ಹೇಗಾದರೂ ನಮಗೆ ಅನುಮತಿಯನ್ನು ದೊರಕಿಸಿಕೊಡಿ ಎಂದು ದುಂಬಾಲು ಬಿದ್ದೆವು. ಮಹಿಳಾಮಣಿಗಳ ಹಠ ತಾನೇ? ಅವರೂ ತಮ್ಮ ಕೈಲಾದ ಪ್ರಯತ್ನ ಮಾಡಿದರು. ಆದರೆ ಅಲ್ಲಿಯ ಜಿಲ್ಲಾಧಿಕಾರಿ, ಅರಣ್ಯಸಂರಕ್ಷಕರು ತಲೆಯಾಡಿಬಿಟ್ಟರು.
ಹೇಮರೆಡ್ಡಿ ಮಲ್ಲಮ್ಮನ ದೇವಸ್ಥಾನ

ಶ್ರೀಶೈಲ ಅಂದ್ರಪ್ರದೇಶದಲ್ಲಿ ಇದೆಯಾದರೂ ಅಲ್ಲಿಗೆ ಬರುವವರಲ್ಲಿ ಮುಕ್ಕಾಲು ಭಾಗ ಜನರು ಕರ್ನಾಟಕದವರೇ ಆದ ಕಾರಣದಿಂದಾಗಿ ಅಲ್ಲಿ ಪೂರ್ತಿ ಕನ್ನಡದ ವಾತಾವರಣವಿದೆ. ಅಲ್ಲಿರುವ ಛತ್ರಗಳೆಲ್ಲ ಕನ್ನಡಿಗರು ಕಟ್ಟಿಸಿರುವುದೇ ಆಗಿವೆ. ನಾವು ಹೋದ ದಿನ ಮಲ್ಲಿಕಾರ್ಜುನನ ಪತ್ನಿಯೂ, ಅಲ್ಲಿಯ ಶಕ್ತಿ ದೇವತೆಯೂ ಆದ ಭ್ರಮರಾಂಬಿಕೆಯ ದರ್ಶನ ಮಾಡಿ ನಾಳೆ ಹೇಗಾದರೂ ಮಾಡಿ ಅಕ್ಕನ ಗುಹೆತನಕವಾದರೂ ಹೋಗಬೇಕೆಂದು ಕನಸು ಕಾಣುತ್ತಾ ಮಲಗಿದೆವು.
ಮರುದಿನ ಬೆಳಿಗ್ಗೆ ನಾವು ಸೀದಾ ಹೋಗಿದ್ದು ಪಾತಾಳಗಂಗೆ ನೋಡಲು. ಇದೇ ಪಾತಾಳಗಂಗೆಗೆ ಹೇಮರೆಡ್ಡಿ ಮಲ್ಲಮ್ಮನ ಕಣ್ಣಿಂದ ಹರಿದ ನೀರು ಬಂದು ಸೇರುತ್ತದೆಯೆಂದು ಆಸ್ತಿಕರು ನಂಬುತ್ತಾರೆ. ಮಲ್ಲಿಕಾರ್ಜುನ ದೇವಸ್ಥಾನದಿಂದ ಸುಮಾರು ಎರಡು ಕೀ.ಮೀ ದೂರದಲ್ಲಿ ಶಿವಭಕ್ತೆ ಹೇಮರೆಡ್ಡಿ ಮಲ್ಲಮ್ಮನಿಗೆ ಆಲಯವನ್ನು ಕಟ್ಟಲಾಗಿದೆ. ಆಕೆಯ ವಿಗ್ರಹದ ಪಕ್ಕದಲ್ಲೇ ನಿರಂತರವಾಗಿ ಒಸರುವ ಜಲವಿದೆ. ಅದೇ ಮಲ್ಲಮ್ಮನ ಕಣ್ಣೀರು. ಇದನ್ನೇ  ಭಕ್ತರಿಗೆ ತೀರ್ಥವಾಗಿ ನೀಡುತ್ತಾರೆ. ಪಾತಾಳಗಂಗೆಯನ್ನು ನೋಡಲು  ಐನೂರು ಮೆಟ್ಟಲುಗಳನ್ನು ಇಳಿದು ಹೋಗಬೇಕು. ನಾವು ಬೆಂಗಳೂರಿಗರಲ್ಲವೇ ೫೦ ರೂಪಾಯಿ ಕೊಟ್ಟು ರೋಪ್ ವೇಯಲ್ಲಿ ಹೋದೆವು. ಅಲ್ಲಿ ಹರಿಯುತ್ತಾಳೆ ಕೃಷ್ಣೆ. ಇದೇ ಕೃಷ್ಣಾ ನದಿಯಲ್ಲಿ ದೋಣಿಯಲ್ಲಿ ೧೫ ಕಿ.ಮೀ ಕ್ರಮಿಸಿ,ಕಾಡನ್ನು ಪ್ರವೇಶಿಸಿ ಎರಡು ಮೈಲಿ ನಡೆದರೆ ಅಕ್ಕನ ಗುಹೆಗಳು ಸಿಗುತ್ತವೆ. ಅಲ್ಲಿ ಒಟ್ಟು ಆರು ಗುಹೆಗಳಿವೆ. ಮಧ್ಯದ ಗುಹೆಯಲ್ಲಿ ಅಕ್ಕಾ ನೆಲೆಸಿದಳೆಂದು ನಂಬಲಾಗುತ್ತದೆ. ಇಲ್ಲಿಂದ ಹನ್ನೆರಡು ಮೈಲಿ ದಟ್ಟಾರಣ್ಯದಲ್ಲಿ ನಡೆದರೆ ಕದಳಿವನ ಸಿಗುತ್ತದೆ. ಅಲ್ಲಿ ಆಕೆ ತನ್ನ ಇಷ್ಟ ದೈವನಲ್ಲಿ ಐಕ್ಯವಾದಳೆಂಬುದು ಪ್ರತಿತಿ.
ಭವನಾಶಿನಿಯಲ್ಲಿ ಸ್ನಾನದ ಮೋಜು

ನಮ್ಮ ಕದಳಿಯ ಕನವರಿಕೆ ಕುಂದಿರಲಿಲ್ಲ. ಎಷ್ಟಾದರೂ ನಾವು ಬೆಂಗಳೂರಿಗರು. ವಿಧಾನಸೌಧಕ್ಕೆ ಹತ್ತಿರದಲ್ಲಿರುವವರು. ಹಾಗಾಗಿ ಪಾತಾಳಗಂಗೆಯಲ್ಲಿರುವ ಅಂಬಿಗರಿಗೆ ಲಂಚದ ಆಮೀಷವೊಡ್ಡಿ ’ಅಕ್ಕನ ಗುಹೆಗೆ ದೋಣಿ ಬಿಡಯ್ಯಾ’ ಎಂದು ಕೇಳಿಕೊಂಡೆವು. ಅವರು ತಲೆಯಾಡಿಬಿಟ್ಟರು. ಪೆಚ್ಚು ಮುಖದಿಂದ ತಲೆಯೆತ್ತಿ ನೋಡಿದರೆ ಪಾತಾಳಗಂಗೆಗೆ ಇಳಿದು ಬರುವ ಅಸಂಖ್ಯಾತ ಮೆಟ್ಟಲುಗಳು ನಮ್ಮನ್ನು ಅಣಕಿಸಿದಂತಾಯ್ತು. ಇದನ್ನು ಹತ್ತಿದ ಅನುಭವವಾದರೂ ದಕ್ಕಲಿ ಎಂದುಕೊಂಡು ಉತ್ಸಾಹದಿಂದ ಮೆಟ್ಟಲುಗಳನ್ನು ಹತ್ತಲಾರಂಭಿಸಿದೆವು.
ಅಲ್ಲಿ ಸುತ್ತಮುತ್ತ ಇದ್ದ ಕೆಲವು ಸ್ಥಳಗಳನ್ನು ನೋಡಿಕೊಂಡು ರಾತ್ರಿ ಚೆನ್ನಮಲ್ಲಿಕಾರ್ಜುನನಿಗೆ ಸಲ್ಲಿಸುವ ಏಕಾಂತ ಸೇವೆಯಲ್ಲಿ ಮೂಲ ಲಿಂಗಕ್ಕೆ ಹಣೆ ತಾಗಿಸಿ ಆ ತಣ್ಣನೆಯ ಅವರ್ಣನೀಯ ಅನುಭವವನ್ನು ನನ್ನದಾಗಿಸಿಕೊಂಡೆ. ಅ ಘಳಿಗೆಯಲ್ಲಿ ನನ್ನ, ಚೆನ್ನಮಲ್ಲಿಕಾರ್ಜುನನ ಮತ್ತು ಅಕ್ಕಮಹಾದೇವಿಯರ ತ್ರೀವೇಣಿ ಸಂಗಮವಾಯ್ತು ಎಂದು ಮನದಲ್ಲಿ ಅಂದುಕೊಂಡು ಭಾವಪರವಶಳಾದೆ.
ಜ್ವಾಲಾ ನರಸಿಂಹನ ಸನ್ನಿಧಿಗೆ ಡೋಲಿಯಲ್ಲಿ ಪಯಣ

ಶ್ರೀಶೈಲವೆಂಬ ಶೈವಕ್ಷೇತ್ರದಿಂದ ನಾವು ಹೊರಟಿದ್ದು ಅಹೋಬಲವೆಂಬ ವಿಷ್ಣುಕ್ಷೇತ್ರಕ್ಕೆ. ದಾರಿಯ ಮಧ್ಯದಲ್ಲಿ ಎದುರಾಗುತ್ತದೆ, ಶಿವನ ವಾಹನವಾದ ಮಹಾನಂದಿ ಕ್ಷೇತ್ರ. ಅದನ್ನು ಸಂದರ್ಶಿಸಿ ಮುಂದುವರಿಯುತ್ತಿದ್ದಾಗ ನಮಗೆ ಅನಿರೀಕ್ಷಿತವಾಗಿ ಸಿಕ್ಕಿದ್ದೇ ಬೆಲ್ಲಂ ಕೇವ್ಸ್. ಮಿಲಿಯಾಂತರ ವರ್ಷಗಳ ಹಿಂದೆ ನೀರಿನ ಹರಿವು ಭೂಮಿಯಡಿಯಲ್ಲಿ ಮಣ್ಣನ್ನು ಕೊರೆಯುತ್ತಾ ಹೋದ ನಿಸರ್ಗ ನಿರ್ಮಿಸಿದ ಗುಹೆಯಿದು. ಮೂರೂವರೆ ಕಿ.ಮೀ ಉದ್ದವಿರುವ ಇದು ಭಾರತದ ಎರಡನೆಯ ಅತಿ ದೊಡ್ಡ ಮತ್ತು ಉದ್ದವಾಗಿರುವ ಗುಹೆ. ಇದರಲ್ಲಿ ಓಡಾಡಿ ಕದಳಿ ನೋಡಲಾಗದ ನಿರಾಶೆಯನ್ನು ಕಳೆದುಕೊಳ್ಳಲೆತ್ನಿಸಿದೆವು.
ನಮ್ಮ ತಂಡದಲ್ಲಿ ಹಿಮಾಲಯದ ವಿವಿಧ ಶಿಖರಗಳನ್ನು ಹತ್ತಿ ಬಂದ ಆರೇಳು ಮಹಿಳೆಯರಿದ್ದರು. ಅವರಿಗೆಲ್ಲಾ ರೆಕ್ಕೆ ಬಂದಿದ್ದು ಅಹೋಬಲಕ್ಕೆ ಬಂದಾಗ. ಇಲ್ಲಿ ವಿಸ್ತಾರವಾಗಿ ಹರಡಿಕೊಂಡು ಅಲ್ಲಲ್ಲಿ ತಲೆಯೆತ್ತಿ ನಿಂತಿರುವ ಒಟ್ಟಾಗಿ ಗರುಡಾಚಲವೆಂದು ಕರೆಯಲಾಗುವ ವೇದಾಚಲ ಮತ್ತು ಶೇಷಾಚಲ ಬೆಟ್ಟಶ್ರೇಣಿಯನ್ನು ನೋಡಿದಾಗ. ಅಲ್ಲಿ ಒಂಬತ್ತು ಕಡೆ ಉಗ್ರನರಸಿಂಹನ ವಿವಿಧ ರೂಪಗಳ ದೇವಾಲಯಗಳಿವೆ. ಅದನ್ನು ಒಟ್ಟಾಗಿ ನವ ನರಸಿಂಹರೆಂದು ಕರೆಯಲಾಗುತ್ತದೆ. ಅಲ್ಲಿಗೆ ಚಾರಣ ಮಾಡುವುದು ನಮ್ಮ ಪ್ರವಾಸದ ಎರಡನೆಯ ಉದ್ದೇಶವಾಗಿತ್ತು.
ಉಗ್ರ ಸ್ತಂಭ-ಹಿರಣ್ಯಕಶಿಪನ ಅರಮನೆಯ ಕಂಬವಂತೆ ಇದು....

ಪುರಾತನ ರತ್ನಾವತಿ ಪುರವೇ ಇಂದಿನ ಅಹೋಬಲ. ಇನ್ನೂ ಹಳ್ಳಿಯ ಸೊಗಡುತನ್ನವನ್ನು ಉಳಿಸಿಕೊಂಡಿರುವ ಪುಟ್ಟ ಊರಿದು. ಆದರೆ ಇಲ್ಲಿ ನೆಲೆಸಿರುವ ದೇವ ಸಣ್ಣವನಲ್ಲ. ಆತ ಲಕ್ಷಿನರಸಿಂಹ.  ಆತ ಉಗ್ರನರಸಿಂಹನಾಗಿ ತನ್ನ ಉಗುರುಗಳಿಂದ ಹಿರಣ್ಯಕಸಿಪನ ಹೊಟ್ಟೆಯನ್ನು ಬಗೆದು ಆತನ ಕರುಳನ್ನು   ತನ್ನ ಕೊರಳಿಗೆ ಹಾಕಿಕೊಂಡು ಅಟ್ಟಹಾಸ ಮೆರೆದಾಗ ಅವನ ಸಾಮರ್ಥ್ಯವನ್ನು ನೋಡಿ ದೇವತೆಗಳು ’ ಅಹಾ...ಓಹೋ...ಎನ್ ಬಲಂ..!’ ಎಂದು ಉದ್ಘಾರವೆತ್ತಿದರಂತೆ. ಹಾಗಾಗಿಯೇ ಈ ಪ್ರದೇಶಕ್ಕೆ ’ಅಹೋಬಲ’ ಎಂಬ ಹೆಸರು ಬಂತು ಎಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ. ಇದು ಕೆಳಗಿನ ಅಹೋಬಿಲ..ಇಲ್ಲಿಂದ ಮೂರು ಮೈಲಿ ದೂರದಲ್ಲಿದೆ. ಮೇಲಿನ ಅಹೋಬಿಲ.
ಮೇಲಿನ ಅಹೋಬಲ

ನಮ್ಮ ಚಾರಣ ಆರಂಭವಾಗಿದ್ದು ಮೇಲಿನ ಅಹೋಬಿಲದಿಂದ. ಈ ದೇವಾಲಯದ ಪಕ್ಕದಲ್ಲೇ ಹರಿಯುತ್ತಾಳೆ ಭವನಾಶಿನಿ ಎಂಬ ನದಿ. ಗಂಗೆಯ ಇನ್ನೊಂದು ರೂಪವಿದು. ಉಗ್ರನರಸಿಂಹನನ್ನು ಶಾಂತಗೊಳಿಸಲು ಇವಳು ಸ್ವರ್ಗದಿಂದ ಧರೆಗವತರಿದಳಂತೆ. ಮೇಲಿನ ಅಹೋಬಲದಿಂದ ಚಾರಣ ಆರಂಭಿಸಿದರೆ ಅದು ಕೊನೆಯಾಗುವುದು ಉಗ್ರಸ್ತಂಭದಲ್ಲಿ. ಉಗ್ರಸ್ತಂಭವೆಂದರೆ ದೂರಕ್ಕೆ ಏಕಶಿಲಾ ಸ್ತಂಭವೆಂದು ಭಾಸವಾಗುವ ಎತ್ತರದ ಕಡಿದಾದ ಬೆಟ್ಟ. ಇದು ಹಿರಣ್ಯಕಸಿಪನ ಅರಮನೆಯ ಕಂಬವೆಂಬುದು ಆಸ್ತಿಕರ ನಂಬಿಕೆ. ಇದೇ ಕಂಭವನ್ನೊಡೆದು ನರಸಿಂಹ ಅವತರಿಸಿದನಂತೆ. ಅಲ್ಲಿಂದ ನರಸಿಂಹ ಹಿರಣ್ಯಕಸಿಪನೊಡನೆ ಕುಸ್ತಿಯಾಡುತ್ತಾ ಒಂದೂವರೆ ಕಿ.ಮೀ ಕೆಳಗಡೆ ಬರುತ್ತಾನೆ. ಆ ಜಾಗವೇ ಜ್ವಾಲಾನರಸಿಂಹ ಸನ್ನಿಧಿ. ಅಲ್ಲಿ ಉಗ್ರನರಸಿಂಹ ಆ ರಾಕ್ಷಸನನ್ನು ಕೊಂದು ಅಲ್ಲಿರುವ ಪುಟ್ಟ ಕೊಳದಲ್ಲಿ ತನ್ನ ರಕ್ತಸಿಕ್ತ ಕೈಗಳನ್ನು ತೊಳೆದುಕೊಂಡನಂತೆ. ಅದುವೇ ರಕ್ತಕೊಳ. ಆ ನೀರಿಗೆ ಈಗಲೂ ರಕ್ತ ಛಾಯೆಯಿದೆ. ಭಕ್ತರು ಆ ನೀರನ್ನು ತಲೆಗೆ ಪ್ರೋಕ್ಷಣೆ ಮಾಡಿಕೊಳ್ಳುವುದಿಲ್ಲ. ಆದರೆ ಅದರ ಪಕ್ಕದಲ್ಲೇ ಉಗ್ರಸ್ತಂಭದ ಶಿಖರದೆಡೆಗಳಿಂದ ಬಿಂದು ಬಿಂದುವಾಗಿ ಬೀಳುವ ಭವನಾಶಿನಿಗೆ ತಲೆಯೊಡ್ಡಿ ಭಕ್ತರು ಪುನೀತರಾಗುತ್ತಾರೆ.
ಪ್ರಹ್ಲಾದ ಸ್ಲೇಟ್


ನಲ್ಲ ಮಲ ಅರಣ್ಯ ಪ್ರದೇಶಗಳಲ್ಲಿ ನೆಲೆ ನಿಂತಿರುವ ನವ ನರಸಿಂಹರ ಹೆಸರುಗಳು ಇಂತಿವೆ.೧.ಜ್ವಾಲಾ ನರಸಿಂಹ ೨.ಮಾಲೋವ ನರಸಿಂಹ ೩. ವರಹಾ ನರಸಿಂಹ ೪. ಕಾರಂಜ ನರಸಿಂಹ ೫. ಭಾರ್ಗವ ನರಸಿಂಹ ೬ ಯೋಗಾನಂದ ನರಸಿಂಹ ೭ ಅಹೋಬಿಲದ ಲಕ್ಷ್ನಿ ನರಸಿಂಹ ೮ ಛತ್ರವಟ ನರಸಿಂಹ ೯.ಪಾವನ ನರಸಿಂಹ. ಹಿರಣ್ಯಕಶಿಪನನ್ನು ಕೊಂದಾಗ ಪ್ರಹ್ಲಾದನಿನ್ನೂ ಬಾಲಕ. ಹಾಗಾಗಿ ಅವನನ್ನ ಸಿಂಹಾಸನಕ್ಕೆ ಯೋಗ್ಯನನ್ನಾಗಿ ರೂಪುಗೊಳಿಸುವುದು ನರಸಿಂಹನ ಜವಾಬ್ದಾರಿಯಾಗಿತ್ತು. ಹಾಗಾಗಿ ಆತನೇ ಸ್ವತಹ ವಿದ್ಯಾಭ್ಯಾಸ ಹೇಳಿಕೊಡುತ್ತಾನೆ. ಅದುವೇ ಪ್ರಹ್ಲಾದ ಗುಹೆಗಳು. ಆ ಗುಹೆಯ ಎದುರುಗಡೆ ವಿಶಾಲವಾಗಿ ಹರಡಿಕೊಂಡಿರುವ ಹಾಸು ಬಂಡೆಯಿದೆ. ಅದರಲ್ಲಿ ಸ್ಥಳಿಯರು ಸಂಸ್ಕೃತವೆಂದು ಕರೆಯುವ ಅರ್ಥವಾಗ ಲಿಪಿಯ ಕುರುಹುಗಳಿವೆ.ಸ್ಲೇಟಿನಂತೆ ಅದನ್ನು ಆಯಾತಾಕಾರದಲ್ಲಿ ವಿಭಾಜಿಸಲಾಗಿದೆ. ಇದರಲ್ಲೇ ಬಾಲಕ ಪ್ರಹ್ಲಾದ ಅಕ್ಷರಗಳನ್ನು ತಿದ್ದುತ್ತ್ದ್ದನಂತೆ. ಇಲ್ಲಿ ನಿಂತು ನೋಡಿದರೆ ಅಹೋಬಲದ ಸುಂದರ ನೋಟ ಸಿಗುತ್ತದೆ.
ಪ್ರಕ್ಲಾದ ಗುಹೆಯಿಂದ ಮೇಲಿನ ಅಹೋಬಲದ ನೋಟ

 ನವನರಸಿಂಹರಲ್ಲಿ ನನಗೆ ವಾಸ್ತವಕ್ಕೆ ತೀರಾ ಹತ್ತಿರವೆನಿಸಿದ್ದು ಪಾವನ ನರಸಿಂಹ. ಇದರಲ್ಲಿ ನರಸಿಂಹನ ಎಡತೊಡೆಯ ಮೇಲೆ ಕುಳಿತ ಲಕ್ಷ್ಮಿ, ಆಕೆ ಚುಂಚ ಲಕ್ಷ್ಮಿ. ಸ್ಥಳಿಯ ಜಾನಪದದೊಡನೆ ಬೆಸೆದುಕೊಳ್ಳುವ ಅವಳ ಕಥೆ ಪುರಾಣದೊಡನೆ ಬೆಸೆದುಕೊಂಡು ಐತಿಹ್ಯದತ್ತ ಬೆಳಕು ಚೆಲ್ಲುತ್ತದೆ. ನಲ್ಲಮಲ ಅರಣ್ಯದಲ್ಲಿ ಚುಂಚರೆಂಬ ಬೇಡ ಜಾತಿಯವರಿದ್ದಾರೆ. ಈ ಬುಡಕಟ್ಟಿನವರ ಜೀವನ ವಿಧಾನವನ್ನು ಶ್ರೀಶೈಲದಲ್ಲಿರುವ ಮ್ಯೂಸಿಯಂನಲ್ಲಿ ಕಾಣಬಹುದು. ಆ ಕುಲದಲ್ಲಿ ಸಾಕ್ಷತ್ ಲಕ್ಷ್ಮಿ ಹುಟ್ಟುತ್ತಾಳೆ.ಆಮೇಲೆ ಆಕೆ ನರಸಿಂಹನನ್ನು ಮದುವೆಯಾಗುತ್ತಾಳೆ. ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಕಾಡಿನ ಮಧ್ಯೆ  ಆಕೆ ವಾಸಿಸುತ್ತಿದ್ದಳೆನ್ನಲಾದ ಗುಹೆಯನ್ನು, ಮನೆಯನ್ನೂ ಸ್ಥಳಿಯರು ತೋರಿಸುತ್ತಾರೆ ಇಲ್ಲಿ ಉಗ್ರನರಸಿಂಹ ಸೌಮ್ಯಸ್ವರೂಪಿ. ಭಕ್ತರ ಸಕಲ ಇಷ್ಟಾರ್ಥಗಳನ್ನು ಪಾವನ ನರಸಿಂಹ ಈಡೇರಿಸುತ್ತಾನೆ ಎಂದು ಭಕ್ತರು ನಂಬುತ್ತಾರೆ. ಕೆಳಗಿನ ಅಹೋಬಿಲದಿಂದ ಕಠಿಣವಾದ ೨೩ ಮೈಲಿಗಳ ಜೀಪಿನ ಹಾದಿಯಿದೆ. ಅಥವಾ ೬ ಮೈಲಿಯ ಚಾರಣ ಹಾದಿಯಿದೆ.
ಡೋಲಿ ಹೊರುವ ಅಣ್ಣಂದಿರು

ಬೆಟ್ಟ ಹತ್ತಲು ಊರುಗೋಲುಗಳ ಸಹಾಯವಿದ್ದರೆ ಚಾರಣದ ನಡಿಗೆ ಹಗುರವಾಗುತ್ತದೆ. ಅದನ್ನು ಮೇಲಿನ ಅಹೋಬಿಲದಲ್ಲಿ ಖರೀದಿ ಮಾಡಬಹುದು. ಒಂದು ಕೋಲಿಗೆ ಕೇವಲ ಐದು ರೂಪಾಯಿ. ಎರಡು ರೂಪಾಯಿಗೆ ಬಾಡಿಗೆಗೂ ಕೊಂಡುಕೊಳ್ಳಬಹುದು. ಇದಲ್ಲದೆ ಇಲ್ಲಿಂದ ಜ್ವಾಲಾ ನರಸಿಂಹನ ತನಕ ಹೋಗಲು ಡೋಲಿಯ ವ್ಯವಸ್ಥೆಯೂ ಇದೆ. ಒಬ್ಬರನ್ನು ಇಬ್ಬರು ವ್ಯಕ್ತಿಗಳು ಹೊರುತ್ತಾರೆ. ಇದಕ್ಕೆ ಅವರು ಕೇಳುವ ಹಣ ೧೮೦೦ ರೂಪಾಯಿಗಳು. 

ಹಿರಣ್ಯಕಶಿಪುವಿನ ರಾಜ್ಯ ನಲ್ಲಮಲ ಅರಣ್ಯಪ್ರದೇಶದಲ್ಲಿತ್ತು. ಹಾಗಾಗಿ ಅವನ ಮಗ ಪ್ರಹ್ಲಾದ ಇಲ್ಲೇ ರಾಜ್ಯವಾಳಿರಬಹುದು. ಆದರೆ ಪ್ರಹ್ಲಾದನ ಮೊಮ್ಮಗ ಬಲಿಚಕ್ರವರ್ತಿ ಎಲ್ಲಿ ರಾಜ್ಯಭಾರ ಮಾಡಿದ?ಅವನು ಪ್ರಜಾರಕ್ಷಕನಾಗಿದ್ದ, ಧರ್ಮಾತ್ಮನಾಗಿದ್ದ, ಅವನ ನಾಡು ಸುಭೀಕ್ಷವಾಗಿತ್ತು. ಶ್ರೀಹರಿಯೇ ಅವನ ಬಳಿ ವಾಮನನಾಗಿ ಬಂದು ಮೂರು ಹೆಜ್ಜೆ ನೆಲವನ್ನು ಬೇಡಿದ ಎಂದು ನಮ್ಮ ಪುರಾಣಗಳು ಬಣ್ಣಿಸುತ್ತವೆ. ಆದರೆ ಅವನು ಯಾವ ಪ್ರದೇಶದಲ್ಲಿ ರಾಜ್ಯಭಾರ ಮಾಡಿರಬಹುದು ಎಂಬುದು ಸಧ್ಯ ನನ್ನನ್ನು ಕಾಡುತ್ತಿರುವ ಪ್ರಶ್ನೆ. ವಾಮನ ಅವನನ್ನು ಪಾತಾಳಕ್ಕೆ ತಳ್ಳಿದ ಎಂದು ಪುರಾಣ ಹೇಳುತ್ತದೆ. ಸಾಮಾನ್ಯವಾಗಿ ನಾವು ಪಾತಾಳಲೋಕ ಎಂದು ಗುರುತಿಸುವುದು ಕರಾವಳಿ ಸೀಮೆಗಳಾದ ತುಳುನಾಡು ಮತ್ತು ಕೇರಳವನ್ನು. ಅದು ನಾಗರಾಧನೆಯ ನಾಡೂ ಹೌದು
ರಕ್ತ ಕೊಳ
. ರಾಕ್ಷಸರು ವಾಸಿಸುತ್ತಿದ್ದುದು ದಟ್ಟಾರಣ್ಯಗಳಲ್ಲಿ. ಹಿರಣ್ಯಕಶಿಪು ರಾಜ್ಯವಾಳುತ್ತಿದ್ದು ಅಂಧ್ರದ ನಲ್ಲ ಮಲದಲ್ಲಿ. ’ನಲ್ಲ’ ಅಂದ್ರೆ ತೆಲುಗಿನಲ್ಲಿ ಕಪ್ಪು ಎಂದು ಅರ್ಥ. ಮಲ ಅಂದರೆ ಕಾಡು. ಕಪ್ಪು ಕಾಡು ಅಂದ್ರೆ ದಟ್ಟ ಅರಣ್ಯ. ಕೇರಳದಲ್ಲಿಯೂ ಜಗತ್ಪ್ರಸಿದ್ಧಿಯಾದ ನಿತ್ಯಹರಿದ್ವರ್ಣದ ’ಸೈಲೆಂಟ್ ವ್ಯಾಲಿ’ ಎಂಬ ವಿಸ್ತಾರವಾದ ದಟ್ಟಾರಣ್ಯವಿದೆ. ವಾಮನ ನಲ್ಲಮಲದಿಂದ ಮೌನ ಕಣಿವೆಗೆ ಬಲಿಯನ್ನು ತಳ್ಳಿರಬಹುದೇ? ಅನಂತರದಲ್ಲಿ ಅಲ್ಲೇಲ್ಲಾದರೂ ಬಲಿ ಚಕ್ರವರ್ತಿ ರಾಜ್ಯವಾಳಿರಬಹುದೇ? ಈ ಸಂಶಯಕ್ಕೆ ಇನ್ನೂ ಒಂದು ಸಮರ್ಥನೆಯಿದೆ. ತನ್ನ ಪ್ರಜೆಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಬಲಿ ಚಕ್ರವರ್ತಿ ತನ್ನ ಪ್ರಜೆಗಳು ಹೇಗಿದ್ದಾರೆಂದು ನೋಡುವುದಕ್ಕಾಗಿಯೇ ಮೂರು ದಿನದ ಮಟ್ಟಿಗೆ ಭೂಲೋಕಕ್ಕೆ ಬರುತ್ತಾನೆ ಎಂಬುದು ಎಲ್ಲಾ ಭಾರತೀಯರ ನಂಬುಗೆ. ಇದೇ ಬೆಳಕಿನ ಹಬ್ಬ ದೀಪಾವಳಿ. ಇದನ್ನು ಕೇರಳಿಗರು ’ಓಣಂ’ ಎಂದು ಆಚರಿಸುತ್ತಾರೆ.  ಜಾತಿ-ಮತ ಬೇಧವಿಲ್ಲದೆ ಎಲ್ಲರೂ ಈ ಹಬ್ಬವನ್ನು ನಾಡಿನಾಧ್ಯಂತ ವಿಶಿಷ್ಟವಾಗಿ ಸಂಭ್ರಮದಿಂದ ಆಚರಿಸುತ್ತಾರೆ.
ಅಶಕ್ತರಿಗೆ ಚಾರಣಿಗರ ನೆರವು.

  ಹಾಗಾಗಿಯೇ ಬಲಿಚಕ್ರವರ್ತಿ ಕೇರಳದಲ್ಲಿ ರಾಜ್ಯವಾಳಿರಬಹುದೇ ಎಂಬ ಸಂಶಯದ ಹುಳುವನ್ನು ತಲೆಗೆ ಬಿಟ್ಟುಕೊಂಡಿದ್ದೇನೆ.ನನ್ನ ಈ ಸಂಶಯವನ್ನು ಆಲಿಸಿದ ಗೆಳೆಯರೊಬ್ಬರು ಅದನ್ನು ಪುಷ್ಟಿಕರಿಸುವಂತೆ ಹೌದು ಬಲಿ ಕೇರಳದಲ್ಲಿ ಮತ್ತೆ ರಾಜ್ಯಕಟ್ಟಿ ಅದನ್ನು ನಲ್ಲಮಲದ ತನಕ ವಿಸ್ತರಿಸಿದ್ದ. ಅಲ್ಲಿ ಆತನನ್ನು ಕುತಂತ್ರದಿಂದ ಹತ್ಯೆ ಮಾಡಲಾಯ್ತು.  ಈಗ ಪ್ರಸಿದ್ದ ಕ್ಷೇತ್ರವಾಗಿರುವ ತಿರುಪತಿಯೇ ಅವನ ಸಮಾಧಿ ಸ್ಥಳವಾಗಿತ್ತು.ಕೇರಳದ ಭಕ್ತರು ಅಲ್ಲಿಗೆ ಬೆಲೆಬಾಳುವ ಕಾಣಿಕೆಗಳನ್ನು ಅರ್ಪಿಸಿ ಅದು ಶ್ರೀಮಂತವಾಯ್ತು. ಎಂದು ಹೇಳಿದರು ಇದು ನಿಜವಿರಬಹುದೇ?.
ಇದರ ನೆರವಿಲ್ಲದೆ ಪಾವನ ನರಸಿಂಹನನ್ನು ಕಾಣುವುದು ಕಷ್ಟ..
.ಬಹುಶಃ ನನ್ನ ಮುಂದಿನ ಪ್ರವಾಸ ಕೇರಳದ ಮೌನಕಣಿವೆಯೆಡೆಗೆ..!


3 comments:

Srikanth Manjunath said...

ಮನದಾಳಕ್ಕೆ ಇಳಿಯುತ್ತಿದ್ದ ನಿಮ್ಮ ಲೇಖನಗಳು ಇಂದು ಗಾಳಿಗೆ ಮೈಯೊಡ್ಡಿ ದಣಿದ ದೇಹಕ್ಕೆ ತುಡಿಯುವ ಮನಸಿಗೆ ಆಹ್ಲಾದಕರ ತಂದಿದೆ ಉಷಾ ಮೇಡಂ...ಸೊಗಸಾಗಿದೆ.ಪ್ರತಿಯೊಂದು ಚಿತ್ರವೂ, ಅದಕ್ಕೆ ತಕ್ಕ ವಿವರಗಳು, ಪುರಾಣಗಳನ್ನು ಕೆದಕಿ ತೆಗೆದು ಹಂಚಿದ ರೀತಿ..ಎಲ್ಲವು ಸೊಗಸು...ಪುರಾಣಗಳನ್ನು ನಂಬಬಹುದು ಇಲ್ಲವೇ ಬಿಡಬಹುದು..ಆದ್ರೆ ಪ್ರಕೃತಿ ಮಾತೆಯ ವಿಹಂಗಮ ನೋಟ..ಸುಮಧುರವೆನಿಸುತ್ತದೆ..ಒಳ್ಳೆಯ ಲೇಖನ ಹಂಚಿಕೊಂಡದ್ದಕ್ಕೆ ಧನ್ಯವಾದಗಳು...

makara said...

ಉಷಾರವರೆ,
ನಲ್ಲಮಲ ಕಣಿವೆಯನ್ನು ಹಾಗು ಅದರಲ್ಲಿರುವ ದೈವ ಕ್ಷೇತ್ರಗಳನ್ನು ಬಹಳ ಚೆನ್ನಾಗಿ ವರ್ಣಿಸಿದ್ದೀರ. ಹತ್ತ ಹದಿನೈದು ವರ್ಷಗಳ ಹಿಂದ ನಾನು ನಂದ್ಯಾಲದಲ್ಲಿ ಕೆಲಸ ಮಾಡುತ್ತಿದ್ದಾಗ ಅಹೋಬಿಲ ಮತ್ತು ಮಹಾನಂದಿ ಕ್ಷೇತ್ರಗಳಿಗೆ ಹಲವಾರು ಬಾರಿ ಭೇಟಿಯಿತ್ತಿದ್ದೆ. ಅದೇಕೋ ಶ್ರೀಶೈಲ ಕ್ಷೇತ್ರಕ್ಕೆ ಇದುವರೆಗೂ ಭೇಟಿಕೊಡಲಾಗಿಲ್ಲ. ಆ ಕೊರತೆಯನ್ನು ನಿಮ್ಮ ಸಚಿತ್ರ ಲೇಖನ ಬಹುತೇಕ ನೀಗಿಸಿತೆಂದೇ ಹೇಳಬೇಕು. ಒಳ್ಳೆಯ ಲೇಖನಕ್ಕಾಗಿ ಧನ್ಯವಾದಗಳು.
ಪುರಾಣದ ಕಥೆಗಳಿಗೆಲ್ಲಾ ಚಾರಿತ್ರಿಕ ಹಿನ್ನಲೆಯಿರುವುದಿಲ್ಲ. ಅವೇನಿದ್ದರೂ ಸ್ಥಳ ಮಹಾತ್ಮ್ಯೆಯನ್ನು ಹೆಚ್ಚಿಸಲು ಮತ್ತು ಅಲ್ಲಿರುವ ಮುಖ್ಯ ವಿಷಯಗಳನ್ನು ಅದು ಆಧ್ಯಾತ್ಮಿಕವಾಗಿರಬಹುದು ಅಥವಾ ಭೌಗೋಳಿಕವಾರಿಬಹುದು ಅವುಗಳನ್ನು ನೆನಪಿಟ್ಟುಕೊಳ್ಳಲು ಹೆಣೆದಿರುವ ಕಥೆಗಳಷ್ಟೇ. ಆದರೆ ಅವುಗಳ ಆಧ್ಯಾತ್ಮದ ಅಂತರಾರ್ಥಗಳನ್ನು ಖಂಡಿತವಾಗಿಯೂ ಕಡೆಗಣಿಸುವಂತಿಲ್ಲ. ಅಹೋ ಬಿಲಂ ಎಂದು ಹೆಸರು ಬರಲಿಕ್ಕೆ ಅಹೋ ಬಲಂ ಎನ್ನುವುದು ಸೂಕ್ತವಾದ ಕಾರಣವಲ್ಲ ಎನಿಸುತ್ತದೆ, ಏಕೆಂದರೆ ಮೇಲಿನ ಅಹೋಬಿಲಂನಲ್ಲಿ ದೊಡ್ಡದಾದ ಒಂದು ರಂಧ್ರವಿದೆ ಅದು ಬಹಳ ಆಳವಾಗಿಯೂ ಇದೆ; ಇದನ್ನು ನೀವು ಮೇಲಿನ ಗರ್ಭಗುಡಿಯ ಪ್ರಾಕಾರದಲ್ಲಿಯೇ ನೋಡಬಹುದು. ಅದನ್ನು ನೋಡಿ ಅಹೋ ಬಿಲಂ ಎಂದು ಉದ್ಗರಿಸಿದ್ದರಿಂದ ಅಹೋಬಿಲಂ ಎನ್ನುವ ವಿವರಣೆಯು ಹೆಚ್ಚು ಸೂಕ್ತವೆನಿಸುತ್ತದೆ.
ನಲ್ಲ ಎಂದರೆ ಕಪ್ಪು ಎನ್ನುವುದು ನಿಜವಾದರೂ ಮಲ ಎನ್ನುವುದು ದ್ರಾವಿಡ ಶಬ್ದವಾಗಿದ್ದು ಅದು ಮಲೆ ಎಂದರೆ ಗುಡ್ಡವನ್ನು ಸೂಚಿಸುತ್ತದೆ. ಶಬರೀಮಲ, ತಿರುಮಲ ಇವುಗಳನ್ನು ಅದಕ್ಕೆ ಉದಾಹರಣೆಯಾಗಿ ಕೊಡಬಹುದು.

ರಾಘವೇಂದ್ರ ಜೋಶಿ said...

ನಿಮ್ಮ ಪ್ರವಾಸ ಕಥನ ಇಷ್ಟವಾಯ್ತು.ಅನೇಕ ರೀತಿಯಲ್ಲಿ ಇದು informative ಆಗಿದೆ.ಪುರಾಣಕಾಲದ ಸಂಕೇತಗಳನ್ನು ನೀವು ಕಲಿಯುಗದಲ್ಲಿ ತಡಕಾಡುತ್ತಿರುವದನ್ನು ನೋಡಿ ಖುಷಿ ಅನಿಸಿತು.ಎಷ್ಟೇ ಆದರೂ,ಅವೆಲ್ಲ ಯಾವಾಗಲೋ ನಡೆದಿರಬಹುದು ಅಂತ ಅಂದುಕೊಂಡರೂ ಕೂಡ ಇಲ್ಲೇ ಎಲ್ಲೋ ಘಟಿಸಿರಬೇಕಲ್ಲವೆ ಎಂಬ ನಿಮ್ಮ ಗುಮಾನಿ ಆಸಕ್ತಿಕರವಾಗಿದೆ.ಹಾಗೆಯೇ ಮಧ್ಯಂತರ ಕಾಲದ ಅಕ್ಕ,"ಚನ್ನಮಲ್ಲಿಕಾರ್ಜುನನಿಗೆ ಸೋತಳು.." ಎಂಬ ಚರ್ವಿತಚರ್ವಣವನ್ನು ಎಷ್ಟು ನಿರಾಸಕ್ತಿಯಿಂದ,ಸಿನಿಕತೆಯಿಂದ ನೋಡುತ್ತೇವೆ ಅಂದರೆ,ಆಕೆ ಎಲ್ಲಿಲ್ಲಿ,ಹೇಗೇಗೆ ಅವನಿಗಾಗಿ ತಿರುಗಾಡಿದಳು ಅನ್ನುವದು ನಮ್ಮ ಕಲ್ಪನೆಗೆ ಮೀರಿರುವ ವಸ್ತುವಾಗಿದೆ.ಪ್ರೀತಿಯಲ್ಲಿ ಹುಚ್ಚುತನ ಇರದಿದ್ದರೆ ಅದು ಪ್ರೀತಿಯೇ ಅಲ್ಲ-ಎಂಬುದು ಎಷ್ಟು ವೇದಾಂತವೋ ಅಷ್ಟೇ ನಿಜವೂ ಇರಬಹುದೇನೋ.. :-)
-Rj