Sunday, June 9, 2013

ನಿವೇದನೆ

ನಿನ್ನೆ ಸುಚಿತ್ರ ಏರ್ಪಡಿಸಿದ ಬ್ಲಾಗ್ ಕುರಿತಾದ ಮಾಧ್ಯಮ ಚಿಂತನೆಯಲ್ಲಿ ಭಾಗವಹಿಸಿದ್ದೆ. ಬ್ಲಾಗ್ ಲೋಕ ಮಂಕಾಗುತ್ತಿದೆಯೇ ಎಂಬುದರ ಕುರಿತು ಚಿಂತನೆಗಳು ನಡೆದವು. 
ನಾನು ನನ್ನ ಬ್ಲಾಗ್ ಅನ್ನು ಅಪ್ಡೇಟ್ ಮಾಡದೆ ತಿಂಗಳುಗಳೇ ಕಳೆದವು. ಒಂಥರಾ ಪಾಪ ಪ್ರಜ್ನೆ ಕಾಡುತ್ತಿದೆ. ಮುಂದೆ ಬ್ಲಾಗ್ ಬರೆಯಬೇಕೆಂದಿರುವೆ. ಈಗ ಸಧ್ಯಕ್ಕೆ ಪೇಸ್ ಬುಕ್ ನಲ್ಲಿ ಆಗಾಗ ಗೀಚಿದ ಹನಿಗವನಗಳೆಂಬ ಮಾದರಿಗಳಿವು.





 ಕನವರಿಕೆ.?!




ನನ್ನ ಗೆಳೆಯನಿಗೊಂದು ಕವನ ಬೇಕಂತೆ.
ಇಲ್ಲವೆನಲಾರೆ; ಬಾಲ್ಯದಲಿ ಕಳೆದುಕೊಂಡ ಹುಡುಗನವನು.
ಚಿಟ್ಟೆ ಬಣ್ಣದ ಹುಡಿ ಅವನ ಅಂಗಿಗಂಟಿಸಿದ ನೆನಪಿದೆ.
ಅವನು ಕವನ ಕೇಳಿದ್ದು ನನಗಚ್ಚರಿ;
ಅವನು ಕೇಳಬಹುದಿತ್ತು; ಕೊಡು ನನ್ನ ಕೆನ್ನೆಗೊಂದು ಮುತ್ತು.
ಇಲ್ಲಾ..ಚಂದಮಾಮನ ಅಂಗಳದೊಲ್ಲೊಂದು ಸೈಟ್.
ಇಷ್ಟಕ್ಕೂ ಕವನ ನಿನಗ್ಯಾಕೆ ಬೇಕಿತ್ತು? ಉಪ್ಪು ಹಾಕಿ ನೆಕ್ಕಲೇ?
’ನೀ ಕವನ ನೆಯ್ದರೆ ಅದೇ ನನ್ನ ಹಣೆಯ ಬೊಟ್ಟು’
ಹುಬ್ಬು ಹಾರಿಸಿದಾಗ ಅವನೆನ್ನ ಮುಕ್ಕಣ್ಣ!
ಕವನದಲ್ಲಿ ಹೂ- ಹಣ್ಣು ಚಂದ್ರ- ಚಂದನ, ಬಾಹು ಬಂಧನ ಎಲ್ಲಾ ಬೇಕಂತೆ.
ಇಲ್ಲಿ ನನಗೇನೂ ಕಾಣುತ್ತಿಲ್ಲ;
ದರ್ಪಧೂಳು, ನಿಮಿರಿದ ಬಾಳ್, ರಕ್ತಚಂದನ.
ಹಾರುಗಂಬಳಿಯಲ್ಲಿ ಬಣ್ಣದೊಕುಳಿಯಿಟ್ಟಿದ್ದೇನೆ.
ಎಲ್ಲಿಯಾದರೂ, ಯಾರ ಮೇಲಾದರೂ ಎರಚಿಬಿಡು.
ಒಂದು ಹನಿ ಬಂದೆನ್ನ ರೆಪ್ಪೆಯನ್ನು ಮುದ್ದಿಸಲಿ.
ಕಣ್ಣು ಮುಚ್ಚಿದಾಗಲೂ ಇಂದ್ರಛಾಪದ ಕನಸು,,,!

...............................................................................................................





ಅಭಿಸಾರಿಕೆ

ಕಿರುಚಿದರೆ ಜೀರುಂಡೆ,
ಮೋಹಕ್ಕೆ ಬಿದ್ದರೆ ಚಕ್ರವಾಕ,
ಧೇನಿಸುತ್ತಾ ನಿಂತರೆ ಚಾತಕ,
ನಿನಗೆ ಪುನುಗು;
ಸ್ಪರ್ಷಕ್ಕೆ ಸಿಲುಕಿದರೆ ನಾ ಗಂಗೆ ಹುಳು
ಯಾರು ಏನೇ ಅಂದುಕೊಂಡರೂ ನಾ ಮಿಂಚುಹುಳ..
ಹಾಗೆಂದುಕೊಂಡು ಅಂಗಳದಲ್ಲಿ ನಿಂತರೆ...
ಭೂಮಿ ತೂಕದ ಹಕ್ಕಿ ನನ್ನ ನೋಡಿ ಅಣಕಿಸಿತು;
’ಬಾ ನನ್ನ ತೂಗಿ ನೋಡು..!’
ಪೆಚ್ಚಾಗಿ ಮೇಲೆ ನೋಡಿದರೆ..ಸಂಪಿಗೆ ಮರದಲ್ಲಿ ಹಾರ್ನ್ ಬಿಲ್..
ಬಣ್ಣಕ್ಕೆ ಸೋತೆ..
ನಿನ್ನ ನೆನಪಾಯ್ತು.
ನಾನೀಗ ಅಭಿಸಾರಿಕೆ..!!

..................................................................................................................





ಎದೆಪದಕ


ಯಾಕೋ ನಿನ್ನಲ್ಲಿ ತುಂಬಾ ಒಳ್ಳೆತನವಿದೆ’
ನೀನಂದು ನುಡಿದಾಗ ಬೆಚ್ಚಿ ಬಿದ್ದೆ.
ಒಳ್ಳೆತನ ದೋಷವೆ? ಹೇಗೆ?
ಮುಕುಟಮಣಿ ಪಾದಮೂಲಕ್ಕೆ ಜಾರಿದರೆ,
ಅದು ಎದೆಪದಕ ಸತ್ಯ!
ಗುರುತ್ವಾಕರ್ಷಣೆ..ಬೀಳುವುದು ಸಹಜ.
ಬೊಗಸೆಯೊಡ್ಡಿದ್ದರೆ...ಅದು ನಿನ್ನ ಬೆರಳಿನುಂಗರವಾಗಬಹುದಿತ್ತು!
ನಾನು ಭಾಗ್ಯಶಾಲಿ..ಅದು ಎದೆಪದಕವಾಯ್ತು.
..............................................................................................................................


ಶರಣಾಗತಿ.





ಕೊರತೆಗಳ ಸಮೇತವಾಗಿ ನಿನ್ನನ್ನು ಒಪ್ಪಿಕೊಳ್ಳಲು ನನ್ನೊಳಗಿನ ಪ್ರೀತಿ ಹಾತೊರೆಯುತ್ತಿದೆ...
ಜಿಜ್ನಾಸೆಯ ತಕ್ಕಡಿಯಲ್ಲಿ ನಿರಾಕರಣೆಯ ಭಾರ ಹೆಚ್ಚಾಗುತ್ತಿದೆ.
ಆಯ್ಕೆಯನ್ನು ನಿನಗೇ ಬಿಟ್ಟಿದ್ದೇನೆ..
ನನ್ನನ್ನು ಬದುಕಿಸು ಗೆಳೆಯಾ...!

3 comments:

Srikanth Manjunath said...

ಸಮುದ್ರದಲ್ಲಿನ ಅಲೆಗಳು ಪ್ರತಿಯೊಂದು ಭಿನ್ನ.. ಕೆಲವು ಮರಳ ಕಣಗಳನ್ನು ಹೊತ್ತು ತಂದರೆ.. ಕೆಲವು ಚಿಪ್ಪು ರತ್ನಗಳನ್ನು ದಂಡೆಗೆ ತರುತ್ತದೆ. ನಿಮ್ಮ ಕವನಗಳ ಸಾಲುಗಳು ಅರ್ಥಗರ್ಭಿತ ಹಾಗೆಯೇ ಮನದ ಕಡಲಿನ ಅಲೆಗಳನ್ನು ಬಡಿದೆಬ್ಬಿಸುತ್ತದೆ. ಸೊಗಸಾಗಿದೆ

(ಮೌನಕಣಿವೆಯಲ್ಲಿ ಲೇಖನವೆಂಬ ಝರಿ ಹರಿಯದೆ ಬಹಳ ದಿನಗಳಾಯ್ತು. ಒಮ್ಮೆ ತೆಗೆದುಬಿಡಿ ಭಾವ ಅಣೆಕಟ್ಟಿನ ದ್ವಾರವನ್ನು ಪ್ರವಹಿಸುತ್ತಾ ಸೇರಲಿ ಕಥಾ ಸಾಗರವೆಂಬ ಭಾವನೆಗಳ ಶರಧಿಯನ್ನು)

ಮನಸು said...

ತುಂಬಾ ಚೆನ್ನಾಗಿವೆ ಕವನದ ಸಾಲುಗಳು... ಹೀಗೆ ಹೊಸ ಹೊಸ ವಿಷಯಧಾರೆಗಳು ಬರುತ್ತಲಿರಲಿ

Badarinath Palavalli said...

ಮೊನ್ನೆ ಸುಚಿತ್ರಾಗೆ ಬರಲಾಗಲಿಲ್ಲ. ಆದರೆ ತಮ್ಮ ಮಾತು ನನಗೆ ತುಂಬಾ ಖೇದ ತರಿಸಿತು. ನಿಜವಾಗಲೂ ಬ್ಲಾಗ್ ಲೋಕ ಮಂಕಾಗುತ್ತಿದೆ. ಇನ್ನಾದರೂ ಮತ್ತೆ ವಸಂತವು ಮರುಕಳಿಸಲಿ ಎಂಬುದೇ ನಮ್ಮೆಲ್ಲರ ಆಶಯ.

ಕನವರಿಕೆ:
ವಾಸ್ತವ ಮತ್ತು ಕಲ್ಪನಗಳನ್ನು ಬೆಸೆದು ಹೆಣೆದ ಅತ್ಯುತ್ತಮ ಕವನವಿದು.

ಅಭಿಸಾರಿಕೆ:
ನಿಜವಾಗಲು ಇದು ಸಾದೃಶ್ಯ ಕವನ.

ಎದೆ ಪದಕ:
ಒಳ್ಳೆಯತನಕ್ಕೆ ಎಂದಾದರೂ ಸಿಕ್ಕುವ ಸನ್ಮಾನವಿದು.

ಶರಣಾಗತಿ:
ತಿದ್ದಿಕೊಳ್ಳುವ ಅವಕಾಶವನ್ನೂ ಕೊಟ್ಟು, ಸ್ವೀಕರಿಸುವ ಮನೋಭಾವ ಇಲ್ಲಿ ವ್ಯಕ್ತವಾಗಿದೆ.