Wednesday, February 26, 2014

ಕಣ್ಣೀರಲ್ಲಿ ಕಲ್ಮಶವನ್ನು ಕಾಣಲಾರೆ


ಇಂತಹದೊಂದು ಬರಹವನ್ನು ಬರೆಯಬೇಕೆಂದು ನನಗೆ ಅನ್ನಿಸಿದ್ದು ಎರಡು ಕಾರಣಗಳಿಗಾಗಿ- ನಮ್ಮ ಕನ್ನಡ ಚಿತ್ರರಂಗದ ಆಪ್ತರಕ್ಷಕ ಅಂಬರೀಶ್ ಅವರು ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆ ಸೇರಿದ ಸಂದರ್ಭದಲ್ಲಿ ಅವರ ಆರೋಗ್ಯದ ಬಗೆಗಿನ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವುದಕ್ಕಾಗಿ ಆಸ್ಪತ್ರೆಯ ವೈದ್ಯರು ಪತ್ರಿಕಾ ಗೋಷ್ಠಿಯನ್ನು ಏರ್ಪಡಿದ್ದರು. ಆದರೆ ಅವರ ಅರೋಗ್ಯದ ಬಗೆಗಿನ ಮಾಹಿತಿಯನ್ನು ಸ್ವತಃ ಶ್ರೀಮತಿ ಅಂಬರೀಶ್ ಅವರೇ ನೀಡಬೇಕೆಂದು ಮಾಧ್ಯಮದ ಮಂದಿ ಪಟ್ಟು ಹಿಡಿದು ಕುಳಿತರು. ಆಗ ಸುಮಲತಾ ಅಂಬರೀಶ್ ಅವರೇ ಪತ್ರಿಕಾಗೋಷ್ಠಿಗೆ ಬಂದು ಮ್ಲಾನ ವದನದಿಂದ ಎರಡೂ ಕೈ ಜೋಡಿಸಿ ಪ್ರಾರ್ಥಿಸಿಕೊಂಡ ಕ್ಷಣವಿದೆಯಲ್ಲಾ...ಅದು ನನ್ನ ಚಿತ್ತದಲ್ಲಿ ಅಚ್ಚೊತ್ತಿ ಬಿಟ್ಟಿತು..

ಅದಕ್ಕೆ ಎರಡು ದಿನಗಳ ಹಿಂದೆ ವೈಯಕ್ತಿಕವಾಗಿ ನನಗೊಂದು ಅನುಭವಾಗಿತ್ತು; ದೇವರ ಸನ್ನಿಧಿಯಲ್ಲಿ ನಿವೇದಿಸಿಕೊಂಡಂತೆ ಆಪ್ತರೊಬ್ಬರಲ್ಲಿ ಹೇಳಿಕೊಂಡಂತ ಮಾನಸಿಕ ತಳಮಳದ ಕೆಲವು ಸಂಗತಿಗಳು ಆ ಚೌಕಟ್ಟಿನಿಂದಾಚೆ ಹೊರಬಂದು ಏನೇನೋ ಕಲ್ಪನೆಗಳೊಂದಿಗೆ ಮತ್ತೆ ನನ್ನ ಕಿವಿಯನ್ನೇ ತಲುಪಿದಾಗ ನಾನು ತಲ್ಲಣಗೊಂಡಿದ್ದೆ.

ಈ ಎರಡೂ ಸಂದರ್ಭಗಳಲ್ಲಿ ಆಗಿದ್ದು ಖಾಸಗಿತನದ ಘನತೆಯ ಮೇಲಿನ ಧಾಳಿ. ಇದು ಕೊಂಬು ಕಹಳೆಯನ್ನೂದುತ್ತಾ ಬಂದ ಧಾಳಿಯಲ್ಲ.ಮಂದೆಲರು ಕೂರಲಗಿನಂತೆ ಬಂದು ತಿವಿದ ಪರಿ.ಇದು ಎಲ್ಲರಿಗೂ ಅರ್ಥವಾಗುವಂತಹದ್ದಲ್ಲ. ಇದನ್ನು ಅರಿಯಲು ಸೂಕ್ಷ್ಮಜ್ನರಾಗಿರಬೇಕು.ನಿಟ್ಟುಸಿರಿನ ಬಾರಕ್ಕೆ ನಲುಗಿದ ಅನುಭವವಿರಬೇಕು. ಕಣ್ಣೀರಲ್ಲಿ ಮಿಂಚಿದ ಕಪ್ಪು ಬಣ್ಣವನ್ನು ಎದೆಗೆ ಹಚ್ಚಿಕೊಂಡವರಾಗಿರಬೇಕು.

ಪ್ರತಿ ವ್ಯಕ್ತಿಗೂ ಒಂದು ಹೊರಜಗತ್ತಿರುತ್ತದೆ. ಹಾಗೆಯೇ ಇನ್ನೊಂದು ಒಳಜಗತ್ತಿರುತ್ತದೆ. ವೈಯಕ್ತಿಕ ಸಂಬಂಧವಿದ್ದಂತೆಯೇ ಸಾಮಾಜಿಕ ಸಂಬಂಧಗಳಿರುತ್ತವೆ. ವೈಯಕ್ತಿಕ ಸಂಬಂಧ ಎರಡು ವ್ಯಕ್ತಿಗಳ ನಡುವೆಯಲ್ಲಿರುತ್ತದೆ. ಅದು ಅಗೋಚರ ಮತ್ತು ನಿಗೂಢ. ತೀರಾ ಖಾಸಗಿ ಜಗತ್ತು ಅದು.  

ಸಾಮಾಜಿಕ ಸಂಬಂಧಗಳು ವ್ಯಕ್ತಿ ಮತ್ತು ಸಮಾಜದ ನಡುವೆ ಇರುತ್ತದೆ. ಅದು ಸಾರ್ವಜನಿಕವಾದುದು..ಅದೊಂದು ಇಮೇಜ್; ಪ್ರತಿಮೆ. ಸಮಾಜದಲ್ಲಿ ಗಣ್ಯ ವ್ಯಕ್ತಿಗಳೆಂದು; ಸೆಲೆಬ್ರಿಟಿಗಳೆಂದು ಬಿಂಬಿತವಾದವರು ಪ್ರತಿಮೆಗಳಾಗುತ್ತಾರೆ. ಅಂದರೆ ಅವರಿಗೊಂದು ಇಮೇಜ್ ಆವರಿಸಲ್ಪಡುತ್ತದೆ. ಆ ಇಮೇಜ್ ಗೂ ಅವರ ಖಾಸಗಿಗೆ ಬದುಕಿಗೂ ಸಂಬಂಧವಿರುವುದಿಲ್ಲ. ಆದರೆ ಆ ವ್ಯಕ್ತಿಗೆ ಆ ಇಮೇಜನ್ನು ಕೊಟ್ಟ ಸಮೂಹ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಅವರ ನಿರ್ವಾಜ್ಯ ಪ್ರೀತಿಯಲ್ಲಿ ಕಳಂಕ ಇಲ್ಲ. ಆದ್ರೆ ಆ ಇಮೇಜನ್ನು ಧರಿಸಿದ ವ್ಯಕ್ತಿ ಕೂಡಾ ಹುಲುಮಾನವ್ನೇ ತಾನೇ? ಹಾಗಾಗಿ ಅವನಲ್ಲಿಯೂ ರಾಗ ದ್ವೇಷಾದಿ ಗುಣಗಳು ತುಂಬಿರುತ್ತವೆ. ಅಂಥ ಗುಣಗಳು ಸಮಾಜಕ್ಕೆ ತೆರೆದುಕೊಂಡರೆ ಅದನ್ನು ಸಹಿಸಲು ಅವರ ಅಭಿಮಾನಿ ಪಡೆಗಳಿಗೆ ಕಷ್ಟವಾಗುತ್ತದೆ. ಇದು ಒಂದು ವಿಚಾರ.

ಇನ್ನೊಂದು ವಿಚಾರ ಏನೆಂದರೆ ಇಂಥ ಪ್ರತಿಮೆಗಳನ್ನು ಒಡೆಯುವ ಕೆಲಸ ನಿರಂತರ ನಡೆಯುತ್ತಿರುತ್ತದೆ. ಅದು ರಾಮನಿಗಿಂತಲೂ ಹಿಂದೆಯೇ ಆರಂಭವಾಗಿ ರಾಮಣ್ಣನನ್ನೂ ಧಾಟಿ ಮುಂದುವರಿಯುತ್ತಲೇ ಇರುತ್ತದೆ. ಈಗ ಟೀವಿ ಕ್ಯಾಮರಾಗಳು, ಟಾಬ್ಲೈಡ್ ಪೇಪರ್ ಗಳು, ಪೇಸ್ ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳು ಈ ಪ್ರತಿಮೆ ಭಂಜಕ ಗುಣಗಳನ್ನು ತುಂಬಾ ಯಶಸ್ವಿಯಾಗಿ ಮಾಡುತ್ತಾ ಬರುತ್ತಿವೆ.

ಖಾಸಗಿ ಮತ್ತು ಸಾರ್ವಜನಿಕ ಬದುಕು ಒಂದೇ ಆಗಬೇಕಿಲ್ಲ. ಹಾಗೆ ಇರಬೇಕೆಂದು ಬಹುಶಃ ಯಾರೂ ಬಯಸಲಾರರು. ಅವೆರಡನ್ನೂ ಒಂದೇ ಆಗಿ ಕಾಪಾಡಿಕೊಂಡು ಬಂದವರು ವಿರಾತಿವಿರಳ. ಗಾಂಧೀಜಿ ಒಬ್ಬರನ್ನು ಬಿಟ್ಟರೆ ಇನ್ನೊಬ್ಬರ ಹೆಸರು ನನಗೆ ಪಕ್ಕನೆ ಹೊಳೆಯುವುದಿಲ್ಲ. ವ್ಯಯಕ್ತಿಕ ಬದುಕಿನ ನಿರ್ಧಾರಗಳು ಸಾಮಜಿಕ ಬದುಕಿನ ಮೇಲೆ ಪರಿಣಾಮ ಬೀರುತ್ತವೆ. ಹಾಗೆಯೇ ಹೊರಜಗತ್ತಿನ ಜೊತೆಗಿನ ನಮ್ಮ ಸಂಬಂಧಗಳು ನಮ್ಮ ಖಾಸಗಿ ಬದುಕಿನ ಮೇಲೂ ಪರಿಣಾಮ ಬೀರುತ್ತವೆ. ಇವೆರಡರನ್ನು ಸಂತುಲನಗೊಳಿಸುವ ಜಾಣ್ಮೆ ಎಲ್ಲರಿಗೂ ಸಿದ್ಧಿಸಿರುವುದಿಲ್ಲ.

ತುಂಬಾ ಗಟ್ಟಿ ವ್ಯಕ್ತಿತ್ವವುಳ್ಳವರು ಎಂದು ಅನ್ನಿಸಿಕೊಂಡವರು ಪುಟ್ಟ ಮಗುವಿನ ಹಾಗೆ ಕಣ್ಣಿರು ಹಾಕಿದ್ದನ್ನು, ಕುಸಿದು ಕುಳಿತಿದ್ದನ್ನು ನಾನು ಕಂಡಿದ್ದೇನೆ.  ನಾವು ಹ್ರದಯಹೀನರೆಂದು ಬಹುಮಟ್ಟಿಗೆ ಭಾವಿಸುವ ಸಿನೇಮಾ, ಕಿರುತೆರೆಯ ಕಲಾವಿದರು, ರಾಜಕಾರಣಿಗಳು ನೋವು, ಹತಾಶೆಗಳಿಂದ ನರಳಿ ಕಣ್ಣೀರಟ್ಟ ಪ್ರಸಂಗಗಳನ್ನು ನನ್ನ ಆಪ್ತರ ಬಾಯಿಯಿಂದ ಕೇಳಿದ್ದೇನೆ. ಸಿಟ್ಟು, ರೋಷ-ದ್ವೇಷಗಳನ್ನು ನಾವು ಬಹಿರಂಗವಾಗಿ ವ್ಯಕ್ತಪಡಿಸಬಹುದು. ಆದರೆ ನೋವು, ಹತಾಶೆ,ಅಸಹಾಯಕತೆಗಳನ್ನು ಎಲ್ಲೆಡೆಗೆ ವ್ಯಕ್ತಪಡಿಸಲಾಗದು. ಅದಕ್ಕೆ ಅಂತಃಕರಣದ ಪರಿಸರ ಬೇಕು. ಹಾಗಾಗಿ ಕಣ್ಣೀರಲ್ಲಿ ಕಲ್ಮಶವನ್ನು ಕಾಣಲು ನನ್ನಿಂದಾಗದು.


ಲಂಕೇಶ್ ತಮ್ಮ ’ಟೀಕೆ ಟಿಪ್ಪಣಿ’ಯಲ್ಲಿ ಒಂದೆಡೆ ಬರೆಯುತ್ತಾರೆ, ’ಜೀವನದಲ್ಲಿ ಗಾಢವಾಗಿ ತೊಡಗಿದ ಪ್ರತಿಯೊಬ್ಬನೂ, ಮನುಷ್ಯ ಮೂಲಭೂತವಾಗಿ ಎಂತಹ ರಾಕ್ಷಸ ಎಂಬುದನ್ನು ತನ್ನ ಮಧ್ಯವಯಸ್ಸಿನಲ್ಲಿ ಕಂಡುಕೊಳ್ಳುತ್ತಾನೆ’ ನಾನು ಮಧ್ಯ ವಯಸ್ಸನ್ನು ಪ್ರವೇಶಿಸುತ್ತಿರುವುದರಿಂದ ನನಗೆ ಹೀಗನ್ನಿಸುತ್ತಿದೆಯೇ?.ಇದ್ದರೂ ಇರಬಹುದೆನೋ!..ಅದನ್ನು ನಾನೇ ನನ್ನೊಳಗಿಳಿದು ವಿಶ್ಲೇಷಿಕೊಳ್ಳಬೇಕು.        

3 comments:

Swarna said...

ತುಂಬಾ ಒಳ್ಳೇ ಬರಹ.

Badarinath Palavalli said...

ಸದಾ ಆಹಾರವನ್ನಷ್ಟೇ ಮಾದ್ಯಮವು ನಿರೀಕ್ಷಿಸುವುದು. ಖ್ಯಾತ ನಾಮರೋ - ಬಡ ಬೋರೇ ಗೌಡನೋ ಅದಕ್ಕೆ ಗೌಣ.
ಲಂಕೇಶರ ಉಲ್ಲೇಖ ಸರ್ವ ಕಾಲಕ್ಕೂ ಸಲ್ಲುವ ಸಾಲುಗಳು.

sunaath said...

ಕಣ್ಣೀರಿನಲ್ಲಿ ಕಲ್ಮಶವನ್ನು ಕಾಣಲಾರೆ ಎನ್ನುವುದು ತುಂಬ ಅರ್ಥವತ್ತಾದ ಶೀರ್ಷಿಕೆಯಾಗಿದೆ. ಮನುಷ್ಯ ಮಧ್ಯವಯಸ್ಸಿಗೆ ಬರುತ್ತಿದ್ದಂತೆ ರಾಕ್ಷಸನಾಗಿ ಬದಲಾಗಿ ಬಿಡುತ್ತಾನೆ. ಇದು ಜೀವನದ ಹೋರಾಟದ ಅನಿವಾರ್ಯತೆ ಇರಬಹುದು!