Saturday, October 13, 2018

ಕೊಚ್ಚಿ ಬಿಯನಾಲೆ; ಕಲೆಯ ಬಲೆ.












 ಅಮೂರ್ತತೆಯನ್ನು ಮೂರ್ತರೂಪಕ್ಕೆ ತರುವುದು ಹೇಗೆ?  ಮೂರ್ತವಾಗಿರುವುದನ್ನು ವಿವಿಧ ದ್ರುಷಿಕೋನಗಳಿಂದ ಗ್ರಹಿಸಿ ಅದಕ್ಕೆ ಮತ್ತಷ್ಟು ಹೊಳಪು ತುಂಬಿ ಇನ್ನೊಂದು ಮಾಧ್ಯಮಕ್ಕೆ ತರುವುದು ಹೇಗೆ? ಇದು ಕಲಾವಿದನ ಸವಾಲು.

 ಕಲಾಕ್ರುತಿಯನ್ನು ನೋಡುವ. ಅಸ್ವಾದಿಸುವ ಬಗೆ ಹೇಗೆ?  ಕಲಾಕ್ರುತಿಯ ಮುಂದೆ ಕೆಲವು ಜನರು ಯಾಕೆ ಮೌನವಾಗಿ ಘಂಟೆಗಟ್ಟಲೆ ನಿಂತುಕೊಳ್ಳುತ್ತಾರೆ?  ಇದು ಕಲಾವಿದೆಯಲ್ಲದ. ಕಲಾವಿಮರ್ಶಕಳೂ ಅಲ್ಲದ ನನ್ನನ್ನು  ಕಾಡುವ ಕೆಲವು ಪ್ರಶ್ನೆಗಳು.

  .ಹಾಗಿದ್ದರೂ ನಾನಿರುವ ಬೆಂಗಳೂರಿನಿಂದ 528 ಕಿ.ಮೀ ದೂರದಲ್ಲಿರುವ ಕೇರಳದ ಪೋರ್ಟ್ ಕೊಚ್ಚಿಯಲ್ಲಿ ನಡೆಯುತ್ತಿರುವ  ಕೊಚ್ಚಿ ಬಿಯಾನಾಲೆ’ [Kochi-muziris Biennale] ಕಳೆದ ತಿಂಗಳು ಹೋಗಿದ್ದೆ.. ಹಾಗೆ ಹೋಗಲು ಬಲವಾದ ಇನ್ನೊಂದು ಕಾರಣವೂ ಇತ್ತು.ಅದು ಐತಿಹಾಸಿಕ ಹಿನ್ನೆಲೆಯಿರುವ ಪೋರ್ಟ್ ಕೊಚ್ಚಿಯೆಂ ಪುಟ್ಟ ಬಂದರಿನೆಡೆಗಿರುವ ಸಹಜ ಕುತೂಹಲ. ಪೋರ್ಚಿಗೀಸರು, ಡಚ್ಚರು ಮತ್ತು ಬ್ರಿಟೀಶರು ಇಲ್ಲಿ ಕಾಲಾನುಕ್ರಮದಲ್ಲಿ  ವಸಹಾತುಗಳನ್ನು ನಿರ್ಮಿಸಿಕೊಂಡಿದ್ದರು. ಇಲ್ಲಿಂದಲೇ ಸಾಂಬಾರು ಪದಾರ್ಥಗಳು ಸೇರಿದಂತೆ ಭಾರತದ ಇನ್ನಿತರ ವಸ್ತುಗಳು ಮದ್ಯಪ್ರಾಚ್ಯ ದೇಶಗಳಿಗೆ ರವಾನೆಯಾಗುತ್ತಿತ್ತು. ಹಾಗಾಗಿ ಇಂದಿಗೂ  ಇಲ್ಲಿಯ ವಾಸ್ತುಶಿಲ್ಪಗಳಲ್ಲಿ ಆ ದೇಶಗಳ ಪ್ರಭಾವವನ್ನು ಕಾಣಬಹುದು. ಸುಂದರವಾದ ಕಡಲ ಕಿನಾರೆಯನ್ನು ಹೊಂದಿರುವ ಈ ಪುಟ್ಟ ದ್ವೀಪದಲ್ಲಿ ನಮ್ಮ ಗೋಕರ್ಣದ  ಹಾಗೆ ಸದಾ ವಿದೇಶಿಯರೇ ಅಡ್ಡಾಡುತ್ತಿರುತ್ತಾರೆ.

 

  ಬಿಯನಾಲೆ ಎಂಬುದು ಮೂಲತ್ ಇಟಾಲಿಯನ್ ಪದ. ಅದರ ಅರ್ಥಎರಡು ವರ್ಷಗಳಿಗೊಮ್ಮೆ ನಡೆಯುವ ಉತ್ಸವ, ಈ ಉತ್ಸವದ ಕನಸು ಕಂಡು ಕಾರ್ಯಗತಗೊಳಿಸಿದವರಲ್ಲಿ ಮೂವರ ಹೆಸರು ಪ್ರಮುಖವಾದುದು. ಅವರೇ ಈಗ ಕೊಚ್ಚಿ ಬಿಯನಾಲೆಯ ಪ್ರೆಸಿಡೆಂಟ್ ಆಗಿರುವ ಬೋಸ್ ಕ್ರುಷ್ಣಮಾಚಾರಿ, ಪ್ರೋಗ್ರಾಮ್ಸ್ ಡೈರೆಕ್ಟರ್ ಆಗಿರುವ ರಿಯಾಸ್ ಕೋಮ್ ಮತ್ತು ಎಜುಕೇಶನ್ ಕನ್ಸ್ ಲ್ಟೆಂಟ್ ಆಗಿರುವ ಮೀನಾ ವಾರಿ. ಇವರ ಜೊತೆ ಹತ್ತಾರು ಮಂದಿ ಕ್ಯೂರೇಟರ್ ಗಳು, ಪ್ರೋಜೆಕ್ಟ್ ಅಡೈಸರ್ ಗಳು ಬಿಯನಾಲೆಯ ಯಶಸ್ವಿಗಾಗಿ ಹಗಲಿರುಳು ದುಡಿಯುತ್ತಿರುತ್ತಾರೆ. ಈ ವರ್ಷದ ಬಿಯನಾಲೆಯ ಕ್ಯುರೇಟರ್ ಮೂಲತಃ ಕನ್ನಡಿಗರಾದ ಮುಂಬೈನಿವಾಸಿಯಾಗಿರುವ ಆರ್ಟಿಸ್ಟ್ ಸುದರ್ಶನ ಶೆಟ್ಟಿ . ಪ್ರಪಂಚಾದ್ಯಾಂತದ ಕಲಾವಿದರನ್ನೆಲ್ಲಾ ಸಂಪರ್ಕಿಸಿ ಕೊಚ್ಚಿಗೆ ಬರಮಾಡಿಕೊಳ್ಳುವುದು ಅವರ ಜವಾಬ್ದಾರಿಯಾಗಿತ್ತು. ಬಿಯನಾಲೆಯ ಹಿಂದೆ ವರ್ಷಗಳ ತಯಾರಿಯಿದೆ. ಸಾವಿರಾರು ಜನಗಳ ಪರಿಶ್ರಮವಿದೆ. ಇದೇ ಮಾದರಿಯ ಬಿಯನಾಲೆ ವೆನಿಸ್. ಬರ್ಲಿನ್. ಶಾಂಘೈಗಳಲ್ಲಿ ನಡೆಯುತ್ತಿದೆ.

 ಮುಝುರಿಸ್ ಅಂದರೆ ಕೊಚ್ಚಿಯಲ್ಲಿದ್ದ ಪುರಾತನ ಕೋಟೆ. ಇದು ಕೊಚ್ಚಿಯಲ್ಲಿ ನಡೆಯುತ್ತಿರುವುದರಿಂದ ಕೊಚ್ಚಿ ಮುಝುರೀಸ್ ಬಿಯನಾಲೆ. ಅಂದರೆ ಎರಡು ವರ್ಷಕ್ಕೊಮ್ಮೆ ನಡೆಯುವ ಸ್ಥಳೀಯತೆಯನ್ನು ಒಳಗೊಂಡ ಸಮಕಾಲೀನ ಅಂತರಾಷ್ಟ್ರೀಯ ಮಟ್ಟದ ಕಲಾ ಉತ್ಸವ. ಇಲ್ಲಿಯ ವಿಶೇಶತೆಯೇನೆಂದರೆ ಅಲ್ಲಿ ಯಾವ್ಯಾವ ಕಲಾಪ್ರಕಾರಗಳ ಪ್ರದರ್ಶ ನಡೆಯುತ್ತದೆಯೋ ಅದೆಲ್ಲದರ ರೂವಾರಿಗಳಾದ ಕಲಾವಿದರು ಸ್ವತಃ ಉತ್ಸವದಲ್ಲಿ ಭಾಗಿಯಾಗುತ್ತಾರೆ ಮಾತ್ರವಲ್ಲ. ಕಲಾಪ್ರೇಮಿಗಳ ಜೊತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯುತ್ತಾರೆ; ಸಂವಾದದಲ್ಲಿ ಬಾಗಿಯಾಗುತ್ತಾರೆ. ಕೊಚ್ಚಿ ಬಿಯನಾಲೆಯ ಸ್ಥಾಪಕರಲ್ಲಿ ಒಬ್ಬರಾದ ರಿಯಾಸ್ ಕೊಮು [Riyas Komu] ಇದನ್ನು ಜನರ ಬಿಯನಾಲೆಎಂದು ಕರೆಯುತ್ತಾರೆ,

ಕೊಚ್ಚಿ ಬಿಯನಾಲೆ ಮೊದಲ ಬಾರಿಗೆ ೨೦೧೨ರಲ್ಲಿ ಆರಂಭವಾಗಿತ್ತು. ಈಗ ನಡೆಯುತ್ತಿರುವುದು ಮೂರನೆಯ ಬಿಯನಾಲೆ. ದಿಸೆಂಬರ್ ೧೨ರಂದು ಆರಂಭವಾದ ಬಿಯನಾಲೆ ೧೦೮ ದಿನಗಳ ಕಾಲ ನಡೆದು ಮಾರ್ಚ್ ತಿಂಗಳಾಂತ್ಯಕ್ಕೆ ಸಂಪನ್ನಗೊಳ್ಳುತ್ತದೆ. ಈ ವರ್ಷ ೩೧ ದೇಶಗಳ ೯೭ ಆರ್ಟಿಸ್ಟ್ ಗಳು ಭಾಗವಹಿಸುತ್ತಿದ್ದಾರೆ. ಏಕಕಾಲದಲ್ಲಿ ಹತ್ತು ಜಾಗಗಳಲ್ಲಿ ಕಲಾಪ್ರದರ್ಶನ ನಡೆಯುತ್ತಿದೆ. ಹವ್ಯಾಸಿ ಮತ್ತು ವ್ರುತ್ತಿಪರ  ಕಲಾವಿದರ ಜೊತೆ ವಿದ್ಯಾರ್ಥಿ ಬಿಯನಾಲೆಯೂ ನಡೆಯುತ್ತಿದೆ. ರಾಷ್ಟ್ರದಾದ್ಯಂತದ ೫೫ ಕಲಾಶಾಲೆಗಳ ಕಿರಿಯ ಆರ್ಟಿಸ್ಟ್ ಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟು ಏಳು ಜಾಗಗಳಲ್ಲಿ ವಿದ್ಯಾರ್ಥಿ ಬಿಯನಾಲೆ ನಡೆಯುತ್ತಿದೆ.. ಮೊಹಮ್ಮದಾಲಿ ವೇರ್ ಹೌಸ್ ಮತ್ತು ಮಟನ್ಚೇರಿ ಟೆಂಪಲ್ ನಲ್ಲಿ ನಡೆಯುತ್ತಿರುವ ಪ್ರದರ್ಶನಗಳು ನಿಜಕ್ಕೂ ವಿದ್ಯಾರ್ಥಿಗಳಲ್ಲಿರುವ ಕಲ್ಪನಾಶಕ್ತಿ ಮತ್ತು ಪ್ರಖರ ಅಲೋಚನೆಗಳ ಕೈಗನ್ನಡಿಯಂತಿದ್ದವು.

ಈ ವರ್ಷದ ಬಿಯನಾಲೆಯ ಥೀಮ್ forming in the pupil of the eye’  ಇದರ ಯಥಾವತ್ ಅನುವಾದ ಮಾಡುವುದಾದರೆ ಕಣ್ಣಿನ ಪಾಪೆಯೊಳಗಿನ ರೂಪಎಂದಾಗುತ್ತದೆ. ಆದರೆ ಇದು ಮಹಾಭಾರತದ ಸಂಜಯನ ನೋಟದಿಂದ ಸ್ಪೂರ್ತಿಯನ್ನು ಪಡೆದಿದೆ.
.ಕಲಾಪ್ರದರ್ಶನವೆಂದರೆ ನಮಗೆ ಅದರಲ್ಲೂ ಬೆಂಗಳೂರಿಗರಿಗೆ ಸಾಮಾನ್ಯವಾಗಿ ನೆನಪಿಗೆ ಬರುವುದು ವೆಂಕಟಪ್ಪ ಆರ್ಟ್ ಗ್ಯಾಲರಿ, ಮಾಡರ್ನ್ ಆರ್ಟ್ ಗ್ಯಾಲರಿ ಮತ್ತು ಚಿತ್ರಕಲಾ ಪರಿಷತ್ತಿನಲ್ಲಿ ಪ್ರದರ್ಶನಗೊಳ್ಳುವ ವರ್ಣಚಿತ್ರಗಳು. ಪೋಟೋಗಳು ಇಲ್ಲವೇ ಶಿಲ್ಪಕಲಾಕ್ರುತಿಗಳು ನೆನಪಿಗೆ ಬರುತ್ತವೆ. ನಾನು ಪೋರ್ಟ್ ಕೊಚ್ಚಿಗೆ ಹೋಗುವಾಗ ಅದೇ ನನ್ನ ತಲೆಯಲ್ಲಿತ್ತು. ಆದರೆ ಅಲ್ಲಿ ಹೋಗಿ ನೋಡಿದಾಗ ಅದೆಲ್ಲಾ ತಲೆಕೆಳಗಾಯಿತು. ಅಲ್ಲಿನ ಕಲಾಪ್ರದರ್ಶನ ನನ್ನ ಕಲ್ಪನೆಯನ್ನು ಮೀರಿದ ವ್ಯಾಪ್ತಿಯಲ್ಲಿ ಹರಡಿಕೊಂಡಿತ್ತು,

ಅಲ್ಲೊಂದು ಕಲಾಪ್ರದರ್ಶನವಿತ್ತು. ಅದರ ವಿವರಣೆಯನ್ನು ನೀಡಿದರೆ ಕೊಚ್ಚಿ ಬಿಯನಾಲೆಯೆಂಬುದು ಉಳಿದೆಲ್ಲಾ ಕಲಾಪ್ರದರ್ಶನಗಳಿಗಿಂತ ಹೇಗೆ ಭಿನ್ನ ಎಂಬುದು ನಮಗೆ ಮನದಟ್ಟಾಗುತ್ತದೆ. ಅಲ್ಲದೆ ಇದು ಬಿಯನಾಲೆಯ ಬಹುಮುಖ್ಯ ಆಕರ್ಷಣೆಯಯೂ ಆಗಿತ್ತು. ಅದರ ಹೆಸರು ನೋವಿನ ಸಮುದ್ರ’ [ The Sea of Pain]  ರಹುಲ್ ಝರಿಟ್ [Raul Zurita] ಎಂಬ ಚಿಲಿ ದೇಶದ ಕವಿಯ ಆಲೋಚನೆಗಳು [Thoughts ] ಇಲ್ಲಿ ಮೂರ್ತ ಸ್ವರೂಪವನ್ನು ಕಂಡಿದ್ದವು. ಆ ಕವನದ ಹುಟ್ಟಿಗೆ ಒಂದು ಹಿನ್ನೆಲೆಯಿತ್ತು;
ಕಳೆದ ಸೆಪ್ಟಂಬರ್ ನಲ್ಲಿ ಟರ್ಕಿಯ ಬೋರ್ಡಮ್ ಬೀಚಿನಲ್ಲಿ ಸಿರಿಯಾದ ಪುಟ್ಟ ಕಂದ ಅಯ್ಲಾನ್ ಕುರ್ದಿಯ ಶವ ಸಿಕ್ಕಿತ್ತು. ನೀಲಿ ಚಡ್ಡಿ ಕೆಂಪು ಟೀ ಶರ್ಟ್ ಧರಿಸಿ ತಲೆಕೆಳಗಾಗಿ ಬಿದ್ದ ಆ ಎಳೆಬಾಲಕನ ಶವ ಪ್ರಪಂಚದಾದ್ಯಂತ ಸುದ್ದಿ ಮಾಡಿತ್ತು; ರೂಪಕವಾಗಿ ಬೆಳೆಯಿತು. ಆದರೆ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಅವನ ತಾಯಿ ಮತ್ತು ಸಹೋದರ ಗಾಲಿಪ್ ಕುರ್ದಿಯ ಶವ ಮಾತ್ರ ಯಾರ ಗಮನವನ್ನೂ ಸೆಳೆದಿರಲಿಲ್ಲ.  ರಹುಲ್ ಝುರಿಟ್ ನ ಮನವನ್ನು ಇದು ಕಲಕಿತು, ಅದು ಕವನವಾಗಿ ಹೊಮ್ಮಿತು. ಕೊಚ್ಚಿ ಬಿಯನಾಲೆಯಲ್ಲಿ ಅದು ಕಲಾರೂವನ್ನು ತಾಳಿತು. ಅದೇ ಸಿ ಆಪ್ ಪೈನ್’ ” ಸುಮಾರು ಎಪ್ಪತ್ತು ಅಡಿ ಉದ್ದ ಮೂವತ್ತು ಅಡಿ ಅಗಲದ ಮೂರೂ ಕಡೆ ಗೋಡೆಗಳಿಂದಾವ್ರುತವಾದ ಕೊಳವೊಂದನ್ನು ನಿರ್ಮಿಸಲಾಗಿತ್ತು.. ಕಲಾಪ್ರೇಮಿಗಳು ಅಲ್ಲಿ ಬಂದು ಚಪ್ಪಲಿ, ಶುಗಳನ್ನು ಕಳಚಿಟ್ಟು, ತೊಟ್ಟ ಬಟ್ಟೆಯನ್ನು ಮೊಳಕಾಲು ತನಕ ಮಡಚಿ ನೀರಿಗಿಳಿಯುತ್ತಿದ್ದಂತೆಯೇ. ಸಿ ಅಪ್ ಪೈನ್ ಕವನದ ಸಾಲುಗಳನ್ನೊಳಗೊಂಡ ವಿಷಾಧ ಬೆರೆತ ಆಡಿಯೋದ ಅನುರಣನ. ಎರಡೂ ಬದಿಯ ಗೋಡೆಯ ಮೇಲೆಲ್ಲಾ ಕವನದ ಸಾಲುಗಳು. ಮುಂದೆ ಮುಂದೆ ಸಾಗಿದಂತೆಲ್ಲಾ ಎದುರಿನ ಗೋಡೆಯ ಮೇಲೆ ಇಡೀ ಕವನ ಸ್ಕ್ರೋಲಿಂಗ್ ಆಗುತ್ತಿರುತ್ತದೆ.’ ” ನಾನು ಅವನ ತಂದೆಯಲ್ಲ. ಆದರೆ ಅವನು ನನ್ನ ಮಗ ಎಂದು ಅಂತ್ಯವಾಗುವ ಕವನ ,ವಿಸ್ತಾರತೆಯನ್ನು ಪಡೆದುಕೊಳ್ಳುತ್ತಾ ಮತ್ತೊಂದು ಆಯಾಮದತ್ತ ಹೊರಳಿಕೊಳ್ಳುತ್ತದೆ..ಅದನ್ನು ಓದಿ ಹಿಂದಿರುಗಿ ನೀರಿನಲ್ಲಿ ಕಾಲೆಳೆಯುತ್ತಾ ಬರುವಾಗ ನಮ್ಮಳೊಗೂ ರುದ್ರ ಮೌನ ಮೆಲ್ಲನೆ ಪಸರಿಸಿಕೊಳ್ಳುತ್ತದೆ.   ಕವನವನ್ನು ಅನುಭವಿಸುವುದು ಅಂದರೆ ಇದೇ ಏನು? ಅದು ಕಣ್ಣೀರಿನ ಕೊಳವೇ? ಅದು ಸಮುದ್ರದ ನೋವೇ? ನೋವಿನ ಸಮುದ್ರವೇ? ಅಥವಾ ಮನುಕುಲದ ನೋವೇ?   ಇದೇ ಕವಿ ಹೇಳಿದ ಮಾತೊಂದು ನೆನಪಾಗುತ್ತದೆ..’If poetry ends, the dremes is dead’

೩೧ ವಿಡಿಯೋ ಕ್ಯಾಮರಾ, ೩೧ ಪ್ರಾಜೆಕ್ಟರ್ ಗಳನ್ನು ಬಳಸಿ ಗ್ಯಾರಿ ಹಿಲ್ ನಿರ್ಮಿಸಿದ ಡ್ರೀಮ್ ಸ್ಟಾಪ್ಎಂಬ ವಿಡಿಯೋ ಆರ್ಟ್ ಮತ್ತು ಅವರದೇ ತುಂಡಾದ ಒಡೆದ ಗಾಜಿನ ಚೂರುಗಳನ್ನು ಜೋಡಿಸಿ ಮಾಡಿದ ಆಕರ್ಷಕ ಸಂಯೋಜನೆಯೂ ಬಿಯನಾಲೆಯ ಮತ್ತೊಂದು ಆಕರ್ಷಣೆ.
ಸಮಕಾಲೀನ ಕಲೆಯ ವಿಶೇಶತೆಯೇ ಅದು ಅದು ಕಲಾಕಾರನ ಭಾವನೆ, ವಿಚಾರ [thoughts] , ಕಾಳಜಿ ಮತ್ತು ಐಡಿಯಾಗಳನ್ನು ಪ್ರಸ್ತುತ ವಿದ್ಯಾಮಾನದೊಡನೆ ಸಂಯೋಜಿಸಿ ಅದಕ್ಕೊಂದು ಮೂರ್ತರೂಪವನ್ನು ಕೊಟ್ಟು ನೋಡುಗರನ್ನೂ ತನ್ನೊಡನೆ ಅಂತರ್ಗತಮಾಡಿಕೊಳ್ಳುತ್ತದ. ಅಲ್ಲೊಂದು ರೂಪಾಂತರದ ಕ್ರಿಯೆ ನಡೆಯುತ್ತಿರುತ್ತದೆ.

ಗ್ಯಾರಿ ಹಿಲ್, ಶರ್ಮಿಷ್ಟ ಮೊಹಾಂತೀ...ಮುಂತಾದವರ ವಿಡಿಯೋ ಆರ್ಟ್ ಗಳನ್ನು ನೋಡುವಾಗ ನಮ್ಮ ಯೋಚನೆಗಳನ್ನು ಹೀಗೂ ದಾಟಿಸಬಹುದಲ್ಲಾ ಎಂದು ಅಚ್ಚರಿಯಾಗುತ್ತದೆ. ಯಾವ ಪ್ರದರ್ಶನವನ್ನೇ ನೋಡಲಿ ಅಲ್ಲೊಂದು ಹೊಸತನದ ಸಂವಹನ ಸಾಧ್ಯತೆಯಿತ್ತು..

 ಬಿಯನಾಲೆಯಲ್ಲಿ ಸಂಗೀತ ಕಚೇರಿಯೂ ಸೇರಿದಂತೆ ವಿವಿಧ ಪ್ರಕಾರದ ಪ್ರದರ್ಶನ ಕಲೆಗಳಿರುತ್ತವೆ. ಪ್ರಾತ್ಯಕ್ಷಿಕೆಯಿರುತ್ತದೆ. ಸಿನೇಮಾ, ಡಾಕ್ಯುಮೆಂಟರಿ ಶೋಗಳ ಪ್ರದರ್ಶನವಿರುತ್ತದೆ. ಅಸಕ್ತರಿಗೆ ಪಿಲ್ಮ್ ಮೇಕಿಂಗ್ .ನ್ರುತ್ಯ ಸೇರಿದಂತೆ ಲಲಿತಕಲೆಗಳಿಗೆ ಸಂಬಂಧಿಸಿದಂತೆ ಎರಡ್ಮೂರು ದಿವಸಗಳ ಕಾರ್ಯಾಗಾರವಿರುತ್ತಿತ್ತು .ಈ ಕಾರ್ಯಾಗಾರಗಳ ವಿಶೇಶತೆ ಏನೆಂದರೆ ದೇಶ-ವಿದೇಶಗಳ ಕಲಾವಿದರು ಮತ್ತು ತಂತ್ರಜ್ನರ ಜೊತೆ ಬೆರೆಯುವ, ಸಂವಾದಿಸುವ ಅಪೂರ್ವ ಅವಕಾಶ ಸಿಗುತ್ತಿತ್ತು.. ನಾಟಕ .ಸ್ಟೋರಿ ಟೆಲ್ಲಿಂಗ್. ಜಾನಪದ ನ್ರುತ್ಯ. ಕವ್ವಾಲಿ, ಕರಕುಶಲ ವಸ್ತುಗಳ ಪ್ರದರ್ಶನವಿತ್ತು. ವಿದೇಶಿಯರಿಗೆ ಸ್ಥಳೀಯ ಕಲೆ, ಸಂಸ್ಕ್ರುತಿಯನ್ನು ತಿಳಿದುಕೊಳ್ಳುವ ವಿಫುಲ ಅವಕಾಶಗಳನ್ನು ಬಿಯನಾಲೆ ಆಯೋಜಿಸಿದೆ.
ಸಮಕಾಲೀನ ವಿಷ್ಯಗಳ ಬಗ್ಗೆ ಚರ್ಚೆ ಮತ್ತು ಸೆಮಿನಾರುಗಳಿರುತ್ತವೆ. ಜನವರಿ ೨೦ರಂದು ಕಮ್ಯೂನಲಿಸಂ, ಕ್ಯಾಸ್ಟ್ ಸೆಕ್ಯೂಲರಿಸಂ ನ ಚರ್ಚೆಯಲ್ಲಿ ಸಿದ್ದಾರ್ಥ ವರದರಾಜನ್, ಜಿಗ್ನೇಶ್ ಮವಾನಿ ಮತ್ತು ರಾಕೇಶ್ ಶರ್ಮ ಭಾಗವಹಿಸಿದ್ದರು. ಅಂದೇ ಡೈಲಾಗ್ ಅನ್ ಪೀಸ್; ಅಂಡರ್ಸ್ಟ್ಯಾಂಡಿಂಗ್ ವಯ್ಲೆನ್ಸ್ಸಿನೇಮಾ ಪ್ರದರ್ಶನವೂ ಇತ್ತು.. ಸೆಲ್ಪ್ ಇಮೇಜಸ್ ಆಪ್ ಕೇರಳ ಮೊಡರ್ನಿಟಿಚರ್ಚೆಯಲ್ಲಿ ಕೇರಳದ ಚಿಂತಕರು ಬರಹಗಾರರು ಭಾಗವಹಿಸಿದ್ದರು. ಸಿನೇಮಾ ನಿರ್ದೇಶಕರಾದ ರಾಕೇಶ್ ಶರ್ಮ, ಅಡೂರು ಗೋಪಾಲಕ್ರುಷ್ಣ, ಪ್ರಿಯದರ್ಶನ್, ರಾಜಕೀಯ ವಿಶ್ಲೇಶಕರಾದ್ ಮಾಧವಪ್ರಸಾದ್, ಬರಹಗಾರರದ ರಾಮಚಂದ್ರ ಗುಹಾ ಮಲ್ಟಿ ಮಿಡಿಯಾ ತಜ್ನರಾದ ಖಲೀದ್ ಸಬ್ಸಾಬಿ, ಸುದೀರ್ ಕಕ್ಕರ್ ಸೇರಿದಂತೆ ದೇಶವಿದೇಶಗಳ ಚಿತ್ರನಿರ್ದೇಶಕರು, ಸಾಹಿತಿಗಳು, ಕಲಾವಿದರು. ಸಂಗೀತಗಾರರು ವಿಡಿಯೋ ಆರ್ಟಿಸ್ಟ್ ಗಳು  ಇಲ್ಲಿ ಬಂದು ಚರ್ಚೆ-ಸಂವಾದಗಳಲ್ಲಿ ಭಗವಹಿಸಿದ್ದಾರೆ. ನಾಡಿದ್ದು ಮಾರ್ಚ್ ೨೫ರಂದು ಇತಿಹಾಸ ತಜ್ನ ಮತ್ತು ಟ್ರಾನ್ಸ್ಲೇಟರ್ ಆಗಿರುವ ದಿಲಿಪ್ ಮೆನನ್ ಏರುತ್ತಿರುವ ಭೂ ಉಷ್ಣತೆಯ ಬಗ್ಗೆ ಮಾತಾಡಲಿದ್ದಾರೆ..

ಕಳೆದ ಮಾರ್ಚ್ ೨ರಂದು ರಂದು ನಮ್ಮ  ರಾಷ್ಟ್ರಪತಿಗಳಾದ ಪ್ರಣವ ಮುಖರ್ಜಿಯವರು ಇಲ್ಲಿಗೆ ಆಗಮಿಸಿ ವಿ ನೀಡ್ ದಿ ಆರ್ಟ್ಸ್ಎಂಬ ಸೆಮಿನಾರನ್ನು ಉದ್ಘಾಟಿಸಿ ಇಂಪಾರ್ಟೆನ್ಸ್ ಅಪ್ ಸಸ್ಟೈನೇಬಲ್ ಕಲ್ಚರ್-ಬ್ಯುಲ್ಡಿಂಗ್ ’’ ಬಗ್ಗೆ ಉಪನ್ಯಾಸ ನೀಡಿ. ಕೊಚ್ಚಿ ಬಿಯನಾಲೆ ಎಂಬುದು ನಮ್ಮ ದೇಶದ ಕಲ್ಚರಲ್ ಕ್ಯಾಲೆಂಡರನ ಭಾಗವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಮೂರು ದಿನಗಳ ಕಾಲ ನಾನು ಪೋರ್ಟ್ ಕೊಚ್ಚಿಯಲೆಲ್ಲಾ ಅಡ್ಡಾಡಿದೆ.  ಅಡ್ಡಾಡಿದೆ ಎಂದರೆ ಕಾಲ್ನಡಿಗೆಯಲ್ಲಿ ಇದನ್ನೆಲ್ಲಾ ಸುತ್ತಾಡಲು ಸಾಧ್ಯವಿಲ್ಲ. ಯಾಕೆಂದರೆ,,ಇಡೀ ಪೋರ್ಟ್ ಕೊಚ್ಚಿಯೇ ಬಿಯನಾಲೆಯಾಗಿತ್ತು. ನಾಲ್ಕು ಚದರ ಕಿಮೀ ವಿಸ್ತಾರದಲ್ಲಿ ಹರಡಿಕೊಂಡಿರುವ ಕಲಾಪ್ರದರ್ಶನದಲ್ಲಿ ಹೆಚ್ಚಿನ ಕಲಾಪ್ರದರ್ಶನವಿದ್ದುದ್ದು ಆಸ್ಪಿಯನ್ ಹಾಲ್ ಮತ್ತು ಪೆಪ್ಪರ್ ಹೌಸ್ ನಲ್ಲಿ, .ಆಸ್ಪಿಯನ್ ಹಾಲ್ ನಿಂದ ಹತ್ತು ಹೆಜ್ಜೆ ಎಡಕ್ಕೆ ನಡೆದರೆ ಪೆಪ್ಪರ್ ಹೌಸ್ ಸಿಗುತ್ತಿತ್ತು. ಅಲ್ಲಿ ಕ್ಯಾಂಟೀನ್ ಕೂಡಾ ಇದೆ. ಮುಖ್ಯವಾಗಿ ವಿದೇಶಿಯರನ್ನು ಗಮನದಲ್ಲಿರಿಸಿಕೊಂಡ ಆಹಾರ ಮತ್ತು ಪಾನೀಯಗಳು ಅಲ್ಲಿ ದೊರೆಯುತ್ತಿದ್ದವು. ಆಸ್ಪಿಯನ್ ಹಾಲ್ ನಿಂದ ಬಲಕ್ಕೆ ನೇರವಾಗಿ ನಡೆದು ಸ್ವಲ್ಪ ದೂರ ನಡೆದರೆ ಗೆಬ್ರಲ್ ಯಾರ್ಡ್, ಇಲೊಂದು ಥೆಯೇಟರ್ ಇದೆ. ನಾಟಕ, ಸಂಗೀತ ಕಚೇರಿಗಳು ಸೇರಿದಂತೆ ಕೆಲವು ಪ್ರದರ್ಶನ ಕಲೆಗಳು ಇಲ್ಲಿ ನಡೆಯುತ್ತವೆ..ಅಲ್ಲಿಂದ ಬಲಕ್ಕೆ ಹೊರಳಿದರೆ ಕಾಶಿ ಆರ್ಟ್ ಗ್ಯಾಲರಿ ಸಿಗುತ್ತದೆ.  ವಿಶಾಲಾರ್ಥದಲ್ಲಿ ಹೇಳಬೇಕೆಂದರೆ ಅದೊಂದು ರೆಸ್ಟೊರೆಂಟ್. ಆದರೆ ಕಲಾಕ್ರುತಿಯಂತೆ ಭಾಸವಾಗುವ ಒಂದು ಕಲಾಪರಿಸರ ಅಲ್ಲಿದೆ. ನಿಮಗೆ ಬೇಕಾದ ಆಹಾರ -ಪಾನೀಯಗಳನ್ನು ಆರ್ಡರ್ ಮಾಡಿ ಅಲ್ಲಿಯ ಮೆಲುಸಂಗೀತಕ್ಕೆ ಮೈಮನಸುಗಳು ಹಗುರವಾಗುವ ಅನುಭವ ಪಡೆಯಬಹುದು...ಉಳಿದ ಜಾಗಗಳನ್ನು ನೋಡಲು ನೀವು ಆಟೋ, ಬಸ್ಸು ಟ್ಯಾಕ್ಸಿಗಳನ್ನು ಅವಲಂಬಿಸಲೇ ಬೇಕಾಗುತ್ತದೆ. ವಿದೇಶಿ ಪ್ರವಾಸಿಗರ ದಟ್ಟಣೆ ಹೆಚ್ಚಿರುವ ಕಾರಣದಿಂದಲೇ ಇರಬಹುದು ಇಲ್ಲಿ ಬಾಡಿಗೆ ದ್ವಿಚಕ್ರವಾಹನಗಳು ದೊರೆಯುತ್ತವೆ. ದಿನಕ್ಕೆ ಇನ್ನುರೈವತ್ತು ರೂಪಾಯಿ, ಆದರೂ ಎಲ್ಲವನ್ನೂ ನೋಡಲು ಕನಿಷ್ಟ ಎರಡು ದಿನಗಳಾದರೂ ಬೇಕು. ಊಟ ವಸತಿಯ ವಿಚಾರಕ್ಕೆ ಬಂದರೆ ಪಕ್ಕದ ಎರ್ನಾಕುಲಂಗಿಂತ ಈ ದ್ವೀಪದಲ್ಲಿ ದುಪ್ಪಟ್ಟು ದುಬಾರಿ.

ಇಡೀ ಪೊರ್ಟ್ ಕೊಚ್ಚಿಯೇ ಒಂದು ಕಲಾಗ್ಯಾಲರಿಯಾದಾಗ ಅದರೊಳಗಿರುವ ಇಂಡೋ ಡಚ್ ಮ್ಯೂಸಿಯಂನನ್ನಾಗಗಿ, ವಾಸ್ಕೋಡಗಾಮನ ಸಮಾಧಿಯಿರುವ ಹಳೆಯ ಯುರೋಪಿಯನ್ ಚರ್ಚ್  ಸೈಂಟ್ ಪ್ರಾನ್ಸಿಸ್ ಚರ್ಚನನ್ನಾಗಲಿ ನೋಡದೇ ಮರಳುವುದುಂಟೇ? ಸಂಜೆಯ ಕಡಲ ಕಿನಾರೆ ಮತ್ತು ಚೈನಿಶ್ ಪಿಶ್ಶಿಂಗ್ ನೆಟ್ ಆಕರ್ಷಣೆಯನ್ನು ಯಾವ ಪ್ರವಾಸಿಯೂ ತಪ್ಪಿಸಿಕೊಳ್ಳಲಾರ.

ಜಗತ್ತಿನ ಹಲವಾರು ಸಂಗತಿಗಳು ನಮ್ಮ ಕಣ್ಣ ಮುಂದೆ ನಡೆಯುತ್ತದೆ.ಅದರಲ್ಲಿ ಕೆಲವನ್ನು ನಮ್ಮ  ಕಣ್ಣು ನೋಡುತ್ತದೆ. ಕೆಲವನ್ನು ನಮ್ಮ ಬುದ್ದಿ ಗ್ರಹಿಸುತ್ತದೆ. ಇನ್ನು ಕೆಲವು ನಮ್ಮ ಎದೆಯಾಳಕ್ಕೆ ಇಳಿಯುತ್ತದೆ.ಹಾಗೆ ಇಳಿದದ್ದು ಬುದ್ದಿಯ ಜೊತೆ ಸಂಲಗ್ನಗೊಂಡು. ಹೊಸತೊಂದರ ಅವಿಷ್ಕಾರಕ್ಕೆ ಕಾರಣವಾಗುತ್ತದೆ. ಅದನ್ನು ಸ್ರುಷ್ಟಿಸಬಲ್ಲವನು ವಿಜ್ನಾನಿಯಾಗುತ್ತಾನೆ. ಕವಿಯಾಗುತ್ತಾನೆ, ಕಲಾವಿದನಾಗುತ್ತಾನೆ, ಇಂತವರ ಸ್ರುಷ್ಟಿಯನ್ನು ನೋಡಿ ಆನಂದಿಸಬಲ್ಲವನು, ತನ್ನೊಳಗೆ ಯಾವುದೋ ಅನೂಹ್ಯವಾದುದನ್ನು ತುಂಬಿಕೊಳ್ಳಬಲ್ಲವನು ಕಲಾರಸಿಕನಾಗುತ್ತಾನೆ, ಸಹ್ರುದಯನಾಗುತ್ತಾನೆ. ೧೦೮ ದಿನಗಳ ಕಾಲ ನಮ್ಮ ನೆರೆಯ ರಾಜ್ಯದ ಪೋರ್ಟ್ ಕೊಚ್ಚಿಯಲ್ಲಿ ನಡೆಯುತ್ತಿರುವ ಈ ವಿಶಿಷ್ಟ ಉತ್ಸವ ಅಂತಹದೊಂದು ವಾತಾವರಣವನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ನಿರ್ಮಿಸುತ್ತಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಕಲೆಯೊಂದೇ ಹ್ರುದಯ-ಹ್ರುದಯಗಳನ್ನು ಬೆಸೆಯಬಲ್ಲುದು.ದೇಶ-ದೇಶಗಳ ಗಡಿ ರೇಖೆಯನ್ನು ಅಳಿಸಬಲ್ಲುದು.








Friday, October 5, 2018

ಅಂತಃಪುರದಲ್ಲಿ ಅತ್ಯಾಚಾರ.



Image courtesy; Internet
 ವೈವಾಹಿಕ ಅತ್ಯಾಚಾರ ಅಪರಾಧವಾದರೆ ವಿವಾಹ ಸಂಬಂಧವೇ ಅಸ್ಥಿರವಾಗುತ್ತದೆ.  ಪತಿಗೆ ಕಿರುಕುಳ ನೀಡಲು ವಿವಾಹಿತ ಮಹಿಳೆಯರಿಗೆ ಸುಲಭವಾದ ಅಸ್ತ್ರ ದೊರೆತಂತಾಗುತ್ತದೆ. ಹಾಗಾಗಿ ವೈವಾಹಿಕ ಅತ್ಯಾಚಾರವನ್ನು ಅಪರಾಧವಾಗಿ ಪರಿಗಣಿಸಬಾರದು.ಎಂದು ಕೇಂದ್ರ ಸರಕಾರ ಕಳೆದ ವರ್ಷ ದೆಹಲಿ ಹೈಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಆಗ ಅದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು, ಈಗಲೂ ಆಗುತ್ತಲಿದೆ.

ವೈವಾಹಿಕ ಅತ್ಯಾಚಾರವೆಂದರೇನು? ಪತ್ನಿಯ ಸಮ್ಮತಿಯಿಲ್ಲದೆಯೂ ಅವಳ ಇಚ್ಚೆಗೆ ವಿರುದ್ಧವಾಗಿ ಬಲತ್ಕಾರದಿಂದ ಲೈಂಗಿಕ ಸಂಪರ್ಕ ನಡೆಸುವುದೇ ವೈವಾಹಿಕ ಅತ್ಯಾಚಾರ. ಅದಕ್ಕೆ ಪತ್ನಿಯ ಒಪ್ಪಿಗೆಯನ್ನು ಎಂತಕ್ಕೆ ಕೇಳುವುದು? ಗಂಡನಿಗೆ ಬಯಕೆಯಾದರೆ ಸಹಕರಿಸಬೇಕಾದುದು ಪತ್ನಿಯ ಧರ್ಮ ಎನ್ನುತ್ತದೆ ಭಾರತೀಯ ಸಂಪ್ರದಾಯ. ಅದು ಆ ಕಾಲ., ಈ ಕಾಲದಲ್ಲಿ ತನ್ನ ದೇಹದ ಮೇಲೆ ತನ್ನದೇ ಹಕ್ಕು. ತಾನು ಅವನಂತೆಯೇ ದುಡಿಯುತ್ತೇನೆ, ದಣಿಯುತ್ತೇನೆ, ನನಗೂ ಅನೇಕ ಒತ್ತಡಗಳಿರುತ್ತವೆ. ಕೆಲವು ಸಂದರ್ಭಗಳಲ್ಲಿ ತನಗದು ಬೇಡ ಅನ್ನಿಸುತ್ತದೆ. ಅದನ್ನು ನಯವಾಗಿಯೇ ಅನುನಯಿಸಿ ಹೇಳುತ್ತೇನೆ. ಅದರವನು ಅದನ್ನು ಧಿಕ್ಕರಿಸಿ ತನ್ನ ದೇಹದ ಮೇಲೆ ಅತಿಕ್ರಮಣ ಮಾಡಿದರೆ ಅದು ಅತ್ಯಾಚರವಾಗುತ್ತದೆ. ಆ ಸಂದರ್ಭದಲ್ಲಿ ತನಗೆ ಕಾನೂನಿನ ರಕ್ಷಣೆ ಬೇಕಾಗುತ್ತದೆ. ಆದರೆ ಭಾರತೀಯ ದಂಡ ಸಂಹಿತೆಯಲ್ಲಿ ಅಂತಹದೊಂದು ಕಲಂ ಇಲ್ಲವಲ್ಲ ಎಂದು ಘಾಸಿಗೊಂಡ ಮಹಿಳೆ ಪ್ರಶ್ನಿಸುತ್ತಿದ್ದಾಳೆ. ಈಗ ಇರುವ ಐಪಿಸಿ ೩೭೫ ಕಲಂ೨ರಪ್ರಕಾರ ಹೆಂಡತಿ ಜೊತೆ ಗಂಡ ನಡೆಸುವ ಬಲತ್ಕಾರದ ಲೈಂಗಿಕ ಕ್ರಿಯೆ ಅಪರಾಧವಲ್ಲ.

 ಮಹಿಳಾ ಮತ್ತು ಮಕ್ಕಳಕಲ್ಯಾಣ ಸಚಿವರಾದ ಮನೇಕಾಗಾಂಧಿಯೇ ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ ಅಪರಾಧದ ಅಡಿಯಲ್ಲಿ ತರುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬೇರೆ ದೇಶಗಳಲ್ಲಿ ವೈವಾಹಿಕ ಅತ್ಯಾಚಾರದ ಬಗೆಗಿನ ನಿಲುವುಗಳನ್ನು ಅವಲೋಕಿಸಿದರೂ ಅದೂ ಕೂಡಾ ಅಷ್ಟೇನೂ ಆಶಾಧಾಯಕವಾಗಿಲ್ಲ. ಹೆಣ್ಣು ಗಂಡಸಿನ ಖಾಸಾಗಿ ಆಸ್ತಿ, ಉಪಭೋಗದ ವಸ್ತು ಎಂಬ ಪುರುಷಮನಸ್ಥಿತಿ ಜಗತ್ತಿನ ಎಲ್ಲೆಡೆ ಇದೆ. ಆದರೂ ೧೦೬ ದೇಶಗಳಲ್ಲಿ ವೈವಾಹಿಕ ಅತ್ಯಾಚಾರವೆಂಬುದು ಶಿಕ್ಷಾರ್ಹ ಅಪರಾಧ. ಇವುಗಳಲ್ಲಿ ೩೨ ದೇಶಗಳಲ್ಲಿ ಇದು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿದೆ.

 ಸ್ವತಃ ನಾನೇ ಸಾಕ್ಷಿಯಾಗಿರುವ ಎರಡು ಘಟನೆಗಳನ್ನು ನಿಮ್ಮ ಮುಂದಿಡುತ್ತೇನೆ.

ಆಗ ನಾನು ಚಿಕ್ಕವಳೇನಾಗಿರಲಿಲ್ಲ. ಆದರೆ ಕೆಲವು ವಿಷಯಗಳಲ್ಲಿ ಲೋಕಜ್ನಾನ ಕಮ್ಮಿಯಿತ್ತು. ಹಿಂದಿನ ದಿನ ಸಂಬಂಧಿಯೊಬ್ಬರ ಮದುವೆಯಲ್ಲಿ ಪಾಲ್ಗೊಂಡಿದ್ದೆ. ರಾತ್ರಿ ಮದುಮಗನ ರೂಮಿಗೆ ಮದುಮಗಳು ಹೋಗಿದ್ದಳು. ಬೆಳಿಗ್ಗೆ ಅಡುಗೆಮನೆಯಲ್ಲಿ ದೊಡ್ಡವರ ಜೊತೆ ಕುಳಿತಿದ್ದೆ. ಮದುಮಗಳು ಅಡುಗೆ ಮನೆಗೆ ಬಂದಳು. ಅವಳ ಒಂದು ಕೆನ್ನೆ ರಕ್ತ ಹೆಪ್ಪುಗಟ್ಟಿದಂತಾಗಿ ಕಂದು ಬಣ್ಣಕ್ಕೆ ತಿರುಗಿತ್ತು. ಹಿಂದಿನ ಬೆಳ್ಳಗೆ ಕೆಂಪು ಕೆಂಪಾಗಿ ತುಂಬಾ ಸುಂದರವಾಗಿ ಕಂಡಿದ್ದರು. ಏನಾಯ್ತು ಎಂಬ ಆತಂಕದಲ್ಲಿ ನಾನು ನಿಮ್ಮ ಕೆನ್ನೆ ಯಾಕೆ ಸುಟ್ಟಬದನೆಕಾಯಿಯಂತಾಗಿದೆ? ಪಕ್ಕದಲ್ಲಿದ್ದ ಹಿರಿಯರು ನನ್ನ ತೊಡೆಗೆ ಚುವುಟಿದರು. ಅಲ್ಲಿದ್ದವರು ಕಿರುನಗೆಯಿಂದಲೇ ಪರಸ್ಪರ ಮುಖ ನೋಡಿಕೊಂಡರು. ಮದುಮಗಳು ಯಾವುದೇ ಭಾವನೆಯನ್ನು ವ್ಯಕ್ತಪಡಿಸದೆ ಅಲ್ಲಿಂದ ಬಚ್ಚಲು ಮನೆಗೆ ಹೋದಳು. ದೇಹದ ಮೇಲಿನ ಕಲೆಯೂ ಒಮ್ಮೊಮ್ಮೆ ಪ್ರೇಮದ ಗುರುತಾಗಬಹುದು

ಅದರೆ ಮದುವೆಯಾಗಿ ಹತ್ತಾರು ವರ್ಷಗಳು ಕಳೆದಮೇಲೆ ಪತ್ನಿಯಾದವಳು ಬೆಳಿಗ್ಗೆ ಕೆನ್ನೆ ಊದಿಸಿಕೊಂಡು ದಾಂಪತ್ಯದ ಕೋಣೆಯಿಂದ ಬೆಳಿಗ್ಗೆ ಹೊರಬಂದರೆ ಅಸಹಜವಾದುದು ಅಲ್ಲೇನೋ ನಡೆದಿದೆ ಎಂದು ಹತ್ತಿರದವರಿಗೆ ತಿಳಿದೇ ತಿಳಿಯುತ್ತದೆ. ಆದರೆ ಅಲ್ಲೇನೋ ನಡೆದಿದಿದೆ ಎಂದು ಹೊರಗಿನವರು ತರ್ಕಿಸಬಹುದಷ್ಟೇ. ಆದರೆ ಏನು ನಡೆದಿದೆಯೆಂಬುದನ್ನು ಅವರಿಬ್ಬರಲ್ಲಿ ಒಬ್ಬರು ಬಾಯಿಬಿಟ್ಟು ಹೇಳಿದರೆ ಮಾತ್ರ ಉಳಿದವರಿಗೆ ಗೊತ್ತಾಗುತ್ತದೆ.

Image courtesy; Internet
ನಮ್ಮ ಹತ್ತಿರದ ಬಂಧುವೊಬ್ಬರ ಮನೆಯಲ್ಲಿ ಒಂದು ರಾತ್ರಿ ಉಳಿದುಕೊಳ್ಳುವ ಸಂದರ್ಭ ಬಂದಿತ್ತು. ಆ ಮನೆಯ ಯಜಮಾನಿ ತನ್ನ ಮೊಮ್ಮಗಳೊಡನೆ ನಾನು ಮಲಗಿದ್ದ ಹಾಲಿನಲ್ಲೇ ಮಲಗಿದ್ದರು. ಆ ಮನೆಯ ಯಜಮಾನನಾಗಿದ್ದ ಆಕೆಯ ಗಂಡ ಪಕ್ಕದ ರೂಮಿನಲ್ಲಿದ್ದರು. ಮಧ್ಯರಾತ್ರಿ ಯಾರೋ ನರಳಿದಂತೆ ಶಬ್ದ ಕೇಳಿಸಿ ಎಚ್ಚರಾಗಿ ಸುತ್ತ ಕಣ್ಣಾಡಿಸಿದಾಗ ಆ ಮಹಿಳೆ ಕಾಣಿಸಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಅವರು ಪಕ್ಕದ ರೂಮಿನಿಂದ ಬಂದು ಮೊಮ್ಮಗಳ ಪಕ್ಕದಲ್ಲಿ ಮಲಗಿಕೊಂಡರು. ಕಾಲುಗಳನ್ನು ಅಗಲಿಸಿಕೊಂಡು ತೊಡೆ ಮದ್ಯಕ್ಕೆ ಲಂಗದಿಂದ ಗಾಳಿಹಾಕಿಕೊಳ್ಳುತ್ತಾ ಆಗಾಗ ಕೈಮುಚ್ಚಿಕೊಳ್ಳುತ್ತಿದ್ದರು.  ಆಗ ನನಗೂ ಮದುವೆಯಾಗಿತ್ತು. ಲೈಂಗಿಕ ಸಮಸ್ಯೆಗಳ ಬಗ್ಗೆ ಕುರಿತಾಗಿಯೇ ಆಪ್ತ ಸಲಹಾ ತರಬೇತಿಯನ್ನೂ ಪಡೆದುಕೊಂಡಿದ್ದೆ. ಹಾಗಾಗಿ ಅರುವತ್ತು ದಾಟಿದ ಆ ಮಹಿಳೆಗಾದ ಹಿಂಸೆಯನ್ನು ನಾನು ಊಹಿಸಿಕೊಳ್ಳಬಲ್ಲವಳಾಗಿದ್ದೆ..

ಕೌನ್ಸಿಲಿಂಗ್ ಎಂದಾಗ ಒಂದು ಘಟನೆ ನನಗೆ ನೆನಪಿಗೆ ಬರುತ್ತದೆ. ಅವಳು ನನ್ನೆದುರು ಕೂತಿದ್ದಳು.ಒಂದು ಮಗುವಿನ ತಾಯಿ. ತುಂಬು ಯೌವನದ ಆರೋಗ್ಯದ ಕಳೆಯಿಂದ ಮಿಂಚುತ್ತಿರುವ ಹುಡುಗಿ. ತನ್ನ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದಳು.; ಅವಳ ಗಂಡ ಸಂಭೋಗಪೂರ್ವ ಸಲ್ಲಾಪದ ಕಲೆಯನ್ನು ಕರಗತ ಮಾಡಿಕೊಂಡಾತ. ಅವಳ ಬಯಕೆಗಳನ್ನು ಕೆರಳಿಸಿ ಅವಳು ಉನ್ಮಾದಕ್ಕೆ ಜಾರುತ್ತಿದ್ದಾಳೆ ಎಂದೆನಿಸಿದಾಗ ತಾನು ತಣ್ಣಗೆ ಪಕ್ಕಕ್ಕೆ ಸರಿದು ಬಾಲ್ಕನ್ನಿಗೆ ಹೋಗಿ ಸಿಗರೇಟು ಹಚ್ಚಿಕೊಳ್ಳುತ್ತನಂತೆ. ಇದು ಒಂದೆರಡು ದಿನದ ಮಾತಲ್ಲ. ಹಲವಾರು ತಿಂಗಳುಗಳಿಂದ ನಡೇಯುತ್ತಾ ಬಂದಿದೆ. ಆ ಸಂದರ್ಭದಲ್ಲಿ ಬೆಂಕಿಯಂತಾಗುವ ತಾನೇನು ಮಾಡಬೇಕು? ಎಂದವಳು ನನ್ನನ್ನು ಪ್ರಶ್ನಿಸಿದ್ದಳು..
ಅವಳು ತುಂಬಾ ಸಂಕೀರ್ಣವಾದ ಪ್ರಶ್ನೆಯನ್ನು ಕೇಳಿದ್ದಳು. ಕೊಡಬಹುದಾಗಿದ್ದ ಉತ್ತರ ಸರಳವಾದುದಲ್ಲ. ಹತ್ತು ಹಲವು ಆಯಾಮಗಳನ್ನು ಮಥಿಸಿ ಉತ್ತರಿಸಬೇಕಾಗಿತ್ತು.

ಭಾರತೀಯ ಸಂಸ್ಕ್ರುತಿಯಲ್ಲಿ ಮದುವೆಯೆಂಬುದು ಏಳೇಳು ಜನ್ಮಗಳ ಅನುಬಂಧ. ಇದರ ಮುಖ್ಯ ಉದ್ದೇಶ ಸಂತಾನವನ್ನು ಪಡೆಯುವುದೇ ಆಗಿತ್ತು. ಹಾಗಾಗಿ ಇಲ್ಲಿ ದಂಪತಿಗಳು ಮಿಲನಗೊಳ್ಳುವುದಕ್ಕೂ ಒಂದು ಶುಭಮೂಹೂರ್ತವಿದೆ. ಮುಂದೆಯೂ ದಾಂಪತ್ಯನಿಷ್ಠೆ ಎಂಬುದು ಬಹುಮುಖ್ಯ. ಆದರಿದು ಪತ್ನಿಯಾದವಳಿಗೆ ಮಾತ್ರ. ಗಂಡನಾದವನು ಎಷ್ಟು ಮದುವೆಯನ್ನಾದರೂ ಮಾಡಿಕೊಳ್ಳಬಹುದು.ಎಷ್ಟು ಹೆಂಗಸರೊಡನೆಯಾದರೂ ಸಂಬಂಧ ಇಟ್ಟುಕೊಳ್ಳಬಹುದು ಆದರೆ ಹೆಂಡತಿ ಪತಿವ್ರತೆಯಾಗಿರಲೇಬೇಕು!

ಸಪ್ತಪದಿ ತುಳಿಯುವಾಗ ಪರಸ್ಪರ ಸಮಾನತೆಯ, ಬದ್ಧತೆಯ ಏನೇ ಮಂತ್ರಪಠಣವಾಗಿರಲಿ ವಾಸ್ತವದಲ್ಲಿ ಪತ್ನಿಯಾದವಳು ಎಂದೂ ಗಂಡನ ಸಹವರ್ತಿನಿಯಲ್ಲ. ಮಹಿಳೆ ತನ್ನ ಅಸೌಖ್ಯದ, ದಣಿದ ದಿನಗಳಲ್ಲಿ ಇಂದು ಬೇಡಎಂದು ಹೇಳಲು ಸಾಧ್ಯವೇ? ಹಾಗೆ ಹೇಳಲು ಸಾಧ್ಯವಾದರೆ ಅದು ಅನುಕೂಲಕರ ದಾಂಪತ್ಯ. ಲೈಂಗಿಕಬಯಕೆ ಗಂಡಿನಂತೆ ಹೆಣ್ಣಿಗೂ ಇರುತ್ತದೆ. ಹಸಿವು ಬಾಯಾರಿಕೆ, ನಿದ್ರೆಗಳಂತೆ ಅದು ಪ್ರಕೃತಿ ಸಹಜ ಬಯಕೆ ಆದರೆ ಅವಳು ಅದನ್ನು ಬಾಯಿಬಿಟ್ಟು ಹೇಳಿದರೆ ವಾತ್ಸಯಾನ ಅಂತಃಪುರದಲ್ಲಿ ಜೀವಂತವಾಗಿರಬಹುದು1. ಇಲ್ಲವಾದರೆ ಪುರುಷಾಂಕಾರದ ಮಿಷನರಿ ಆಸನವೇ ಅಂತಃಪುರವನ್ನಾಳುತ್ತದೆ. ಹಾಂ. ಅಂದಹಾಗೆ ಮಿಷನರಿ ಆಸನದ ಬಗ್ಗೆ ಬಗ್ಗೆ ಹೇಳುವಾಗ ಕಳೆದ ವರ್ಷ ಬಿಡುಗಡೆಯಾದ ತುಳು ಸಿನೇಮಾದ ದ್ರುಶ್ಯವೊಂದು ನೆನಪಾಗುತ್ತದೆ. ಅದರಲ್ಲಿ ರೇಪ್ ಮಾಡುವುದು ಹೇಗೆ ಎಂಬುದನ್ನೂ ಹೇಳಿಕೊಡಲಾಗುತ್ತದೆಯಂತೆ. ಮತ್ತೆ ನೆನಪಿಸಿಕೊಳ್ಳುತ್ತೇನೆ; ಭಾರತದ ಮಟ್ಟಿಗೆ ಸಿನೇಮಾ ಕೂಡಾ ಪುರುಷಾಧಿಪತ್ಯದ ಕ್ಷೇತ್ರವೇ. ಅಲ್ಲಿಯೂ ಮಹಿಳಾ ಧ್ವನಿ ಕ್ಷೀಣವಾಗಿದೆ

ಗಂಡನಾದವನು ಸೂಕ್ಷ್ಮಜ್ನನಾಗಿದ್ದು ಸಂವೇದನಾಶೀಲನಾಗಿದ್ದರೆ ಆತ ಅರ್ಥ ಮಾಡಿಕೊಳ್ಳುತ್ತಾನೆ. ಕೆಲವೊಮ್ಮೆ ಇಬ್ಬರಿಗೂ ಕೌನ್ಸಿಲಿಂಗ್ ಕೂಡಾ ಬೇಕಾಗಬಹುದು ಆದರೆ ಎಷ್ಟು ಜನ ಗಂಡಂದಿರು ಕೌನ್ಸಿಲಿಂಗ್ ಗೆ ಬರಲು ಒಪ್ಪುತ್ತಾರೆ?. ಹೆಚ್ಚೇಕೆ, ಕುಟುಂಬ ನಿಯಂತ್ರಣ ಸಾಧನಗಳನ್ನು ಅಳವಡಿಸಿಕೊಳ್ಳುವುದಕ್ಕೇ ಶೇ ೯೯ರಷ್ಟು ಗಂಡಸರು ಒಪ್ಪಿಕೊಳ್ಳುವುದಿಲ್ಲ. ಅದು ಹೆಂಗಸರ ಜವಾಬ್ದಾರಿ ಎಂಬುದೇ ಗಂಡಸರ ಧೋರಣೆ. ಇದು ಸಮೀಕ್ಷೆಗಳಿಂದಲೇ ಋಜುವಾತಾಗಿದೆ. ಇನ್ನು ಲೈಂಗಿಕ ವಿಷಯಗಳಿಗೆ ಸಂಬಂಧಿಸಿದಂತೆ ಕೌನ್ಸಿಲಿಂಗ್ ಗೆ ಬರುತ್ತಾನೆಯೇ? ದೈಹಿಕಹಿಂಸೆ ಅನುಭವಿಸುತ್ತಾ  ಒಳಗೊಳಗೆ ಬೇಯುತ್ತಿದ್ದ ಮಹಿಳೆ ಕೊನೆಗೊಮ್ಮೆ ಸಿಡಿದು ನಿಂತರೆ ಆಗ ಅವಳಿಗೆ ಕಾನೂನಿನ ನೆರವು ಬೇಕಲ್ಲವೇ?

ನನ್ನ ದೇಶದಲ್ಲಿ ರೇಪ್ ಅನ್ನುವುದು ಪುರುಷತ್ವದ ಸಂಕೇತ. ಅದು ಯುದ್ಧವೇ ಆಗಲಿ ಗುಂಪುಗಳ ನಡುವಿನ ಸಂಘರ್ಶವೇ ಆಗಲಿ ಎದುರಾಳಿಗಳನ್ನು ಹಣೆಯಲು ವಿರುದ್ಧ ಗುಂಪಿನ ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರವೆಸಗುವುದು ಕೂಡಾ ಅದರ ಭಾಗವೇ ಆಗಿದೆ.  ಇತ್ತೀಚೆಗೆ ಜಮ್ಮು ಕಾಶ್ಮೀರದ ಅಸಿಫಾ ಎಂಬ ಪುಟ್ಟ ಬಾಲೆಯ ಮೇಲೆ ಧರ್ಮಾಂದರು ನಡೆಸಿದ ಪೈಶಾಚಿಕ ಅತ್ಯಾಚಾರಕ್ಕೆ ಜನಾಂಗೀಯ ದ್ವೇಶವೇ ಕಾರಣವಾಗಿತ್ತು. ಇದೆಲ್ಲದರ ವಿರುದ್ಧ ನಾವು, ನಾಗರಿಕರು ಸಂಘಟಿರಾಗಿ ಹೋರಾಡಬಹುದು, ಆದರೆ ಬೆಡ್ರೂಮಿನಲ್ಲಾಗುವ ಅತ್ಯಾಚಾರದ ಬಗ್ಗೆ ಹೇಗೆ ಪ್ರತಿಕ್ರಿಯಿಸುವುದು? ಯಾರು ಪ್ರತಿಕ್ರಿಯಿಸಬೇಕು? ಯಾಕೆಂದರೆ ಇದು ಧರ್ಮಸೂಕ್ಷ್ಮದ ಸಂಗತಿ. ಭಾರತೀಯ ಕೌಟುಂಬಿಕ ಬದುಕಿನ ತಾಯಿಬೇರು ಮದುವೆ,ಅದರ ಮೇಲೆ ಪ್ರಹಾರ ಮಾಡಲು ಸಾಧ್ಯವೇ? ಹಾಗಾಗಿಯೇ ಕಾನೂನುಗಳು ಇಲ್ಲಿ ಸೋಲುತ್ತವೆ. ಕಾನೂನನ್ನು ರೂಪಿಸುವ ಸಂಸತ್ತಿನಲ್ಲಿ ಬಹುಸಂಖ್ಯಾತ ಪುರುಷರು ಕೂತಿದ್ದಾರಲ್ಲವೇ? ಪಕ್ಷರಾಜಕಾರಣಿಗಳು ಮಹಿಳೆಯರನ್ನು ನೋಡುವ ಪರಿ ಒಂದೇ ಆಗಿರುತ್ತದೆ. ಇಂತವರು ಮಹಿಳಾ ಪರವಾದ ಕಾನೂನು ರೂಪಿಸುತ್ತಾರೆಯೇ?

ಕಾನೂನು ಸೇರಿದಂತೆ ಜಗತ್ತಿನ ಎಲ್ಲಾ ನೀತಿನಡಾವಳಿಗಳನ್ನು ಧರ್ಮದ\ರಿಲೀಜಿಯನ್ನಿನ ದ್ರುಷ್ಟಿಕೋನದಿಂದ ನೋಡಲಾಗಿದೆ. ಕಾನೂನುಗಳನ್ನು ಪುರುಷನ ಮೂಗಿನ ನೇರಕ್ಕೆ ತಕ್ಕಂತೆ ರೂಪಿಸಲಾಗಿದೆ. ಬಹುಶಃ ಮಹಿಳೆಯರೇ ನೀತಿನಿರೂಪಕರು ಆಗಿದ್ದಲ್ಲಿ ಭಾನುವಾರದ ರಜೆಯ ಬದಲು, ತಮಗೆ ಬೇಕಾದ ದಿನಗಳಲ್ಲಿ ತಿಂಗಳಿಗೆ ಐದು ದಿನ ರಜೆ ತೆಗೆದುಕೊಳ್ಳುವ ಅವಕಾಶವನ್ನು ಮಾಡಿಕೊಳ್ಳುತ್ತಿದ್ದರು. ಜಗತ್ತನ್ನು ತಾಯಿನೋಟವೊಂದು ಕಾಪಾಡುತ್ತಿತ್ತು. ನಾಮಕಾವಸ್ಥೆಯ ಗಡಿರೇಖೆಗಳಿರುತ್ತಿದ್ದವು. ಮುಖ್ಯವಾಗಿ ಯುದ್ಧವೆಂಬುದು ನಡೆಯುತ್ತಿರಲಿಲ್ಲ.

ಪ್ರಜಾವಾಣಿಯ ಮುಕ್ತಛಂಧಕ್ಕಾಗಿ ಬರೆದ ಬರಹ. ಎಡಿಟ್ ಆಗಿ ಪ್ರಸಾರವಾಗಿತ್ತುನಾಲ್ಕು ತಿಂಗಳ ಹಿಂದೆ.  ]