Sunday, May 20, 2018

ಹಿಂದು, ಜೈನ, ಬೌದ್ಧ ಧರ್ಮಿಯರ ಶ್ರದ್ಧಾಕೇಂದ್ರ-ಕೈಲಾಸ ಪರ್ವತ.
ಕೈಲಾಸ ಪರ್ವತವೆಂದರೆ, ಅದು ಶಿವನ ಆವಾಸ ಸ್ಥಾನ. ಬದುಕಿನಲ್ಲಿ ಒಮ್ಮೆಯಾದರೂ ಅಲ್ಲಿಗೆ ಹೋಗಬೇಕೆಂದು ಪ್ರತಿಯೊಬ್ಬ ಭಾರತೀಯನೂ ಆಸೆಪಡುತ್ತಾನೆ. ಪ್ರತಿಯೊಬ್ಬ ಭಾರತೀಯನೂ ಎಂದು ಯಾಕೆ ಒತ್ತಿಹೇಳಿದೆನೆಂದರೆ ಅದು ಕೇವಲ ಹಿಂದುಗಳಿಗೆ ಮಾತ್ರ ಪೂಜನೀಯ ಜಾಗವಲ್ಲ. ಅದು ಬೌದ್ಧ ಮತ್ತು ಜೈನರಿಗೂ ಕೂಡಾ ಅದು ಪವಿತ್ರ ಸ್ಥಳವೇ ಆಗಿದೆ. ಇದರ ಎತ್ತರ ೨೧೭೭೮ ಅಡಿ . ಸದಾ ಹಿಮದಿಂದ ಆವೃತವಾದ ಶಿಖರವಿದು

ಕೈಲಾಸ ಪರ್ವತದ ಪಕ್ಕದಲ್ಲಿಯೇ ಇದೆ. ಮಾನಸ ಸರೋವರ. 
ಮಾನಸ ಸರೋವರ, ಹಾಗೆಂದಕೂಡಲೇ  ತಕ್ಷಣಕ್ಕೆ ನೆನಪಿಗೆ ಬರುವುದು ಕೈಲಾಸ ಪರ್ವತವೇ. ಅದೊಂದು ಜೋಡಿ ಶಬ್ದದಂತೆ. . ಬ್ರಹ್ಮನ ಮನಸ್ಸಿನಿಂದ ಹುಟ್ಟಿದ ಕಾರಣದಿಂದಾಗಿ ಇದಕ್ಕೆ ಮಾನಸ ಸರೋವರವೆಂಬ ಹೆಸರು ಬಂದಿದೆ. ಇದು ಅತ್ಯಂತ ಎತ್ತರದಲ್ಲಿರುವ ತಿಳಿ ನೀರಿನ ಸರೋವರ. ಇದರಲ್ಲಿ ಸ್ನಾನ ಮಾಡಿದರೆ ಸರ್ವಪಾಪಗಳು ಪರಿಹಾರವಾಗಿ ಮೋಕ್ಷ ದೊರಕುತ್ತದೆಯೆಂದು ಆಸ್ತಿಕರು ನಂಬುತ್ತಾರೆ. ಇದರ ವಿಸ್ತಿರ್ಣ ೪೧೦ ಕಿ.ಮೀ ಮತ್ತು ೩೦೦ ಅಡಿ ಆಳ ಹೊಂದಿದೆ.

ಮಾನಸ ಸರೋವರ ಹಿಂದೆ ಅದು ಭಾರತದ ಭೂಭಾಗವೇ ಆಗಿದ್ದರೂ ಈಗ ಅದು ಚೀನಾದ ಸ್ವಾಧೀನದಲ್ಲಿರುವ ಟಿಬೇಟ್ ನಲ್ಲಿದೆ. ಆದ ಕಾರಣ ಅಲ್ಲಿಗೆ ಹೋಗಲು ಚೀನಾ ಸರಕಾರ ವೀಸಾ ಕೊಡಲೇಬೇಕು.  ಇಂತಿಷ್ಟೇ ಸಂಖ್ಯೆಯಲ್ಲಿ  ಯಾತ್ರಿಗಳು ಬರಬಹುದು ಎಂದು ಅದು ನಿಗದಿ ಮಾಡುತ್ತದೆ. ಮಾನಸ ಸರೋವರಕ್ಕೆ ಹೋಗಲು ಇದುವರೆಗೆ ಎರಡೇ ದಾರಿಗಳಿದ್ದವು ಅದು ಉತ್ತರಾಖಂಡ ರಾಜ್ಯದ ಲಿಪುಲೇಖ್ ಪಾಸ್ ಮುಖಾಂತರ ಹಾದು ಹೋಗುವ ಕಠಿಣವಾದ ಹಾದಿ. ಇದಕ್ಕೆ ಸರಿಸುಮಾರು ಮುನ್ನೂರು ಕಿ. ಮೀ ನಡೆಯಬೇಕಾಗುತ್ತದೆ. ಇದು ಗೌರ್ನ್ಮೆಂಟ್ ರೂಟ್, ನೇಪಾಳದ ಕಟ್ಮಂಡು ಮುಖಾಂತರ ಹೋಗುವ ಖಾಸಗಿ ರೂಟ್ ಇನ್ನೊಂದು. ಇದಕ್ಕೆ ಜೀಪು, ಬಸ್ಸು ಹೆಲಿಕಾಪ್ಟರ್ ಮುಂತಾದ ಸೌಲಭ್ಯಗಳನ್ನು ಆಯೋಜಕರು ಒದಗಿಸುವ ಕಾರಣಗಳಿಂದ ಯಾತ್ರೆ ಕಠಿಣವೆನಿಸುವುದಿಲ್ಲ

ಸರಕಾರಿ ರೂಟ್ನಲ್ಲಿ ಅಬ್ಬರಿಸುವ ಮಹಾಕಾಳಿ ನದಿ ಹರಿಯುತ್ತಿರುವುದರಿಂದ ಅಲ್ಲಿ ಭೂಕುಸಿತವಾಗುವುದು ಸಾಮಾನ್ಯ. ಹಾಗಾಗಿ ಈ ದಾರಿಯಲ್ಲಿ ಸರಕಾರದ ಸುಪರ್ದಿಯಲ್ಲೇ ಯಾತ್ರೆ ಕೈಗೊಳ್ಳಬೇಕಾಗುತ್ತದೆ. ಇದೇ ಹಾದಿಯಲ್ಲಿ ಮಲ್ಪಾದ ಹತ್ತಿರ ೧೯೯೭ರಲ್ಲಿ ಪ್ರಖ್ಯಾತ ಓಡಿಸ್ಸಿ ನ್ರುತ್ಯಗಾತಿಯೂ, ರೂಪದರ್ಶಿಯೂ ಆದ ಪ್ರೋತಿಮಾಬೇಡಿ ಭೂಕುಸಿತದಲ್ಲಿ ಸಾವನ್ನಪ್ಪಿದ್ದು. ಕಳೆದ ವರ್ಷ ಇಲ್ಲಿ ಸತತ ಭೂಕುಸಿತವುಂಟಾಗಿ ಮಾನಸ ಯಾತ್ರೆಯ ನಾಲ್ಕು  ಬ್ಯಾಚ್ ರದ್ದಾಗಿತ್ತು. ರದ್ದಾದ ಬ್ಯಾಚಿನಲ್ಲಿ ನಾನೂ ಒಬ್ಬಳಾಗಿದ್ದೆ. ಹಾಗಾದಾಗ ನಾವು ಕಟ್ಟಿದ್ದ ದುಡ್ಡು ವಾಪಾಸು ಸಿಕ್ಕಿದರೂ ಅದಕ್ಕಾಗಿ ನಡೆಸಿದ ತಯಾರಿ ಮತ್ತು ವಿಮಾನ ಟಿಕೇಟ್ ಗಳ ಕಾರಣದಿಂದಾಗಿ ಸುಮಾರು ನಷ್ಟವುಂಟಾಗುತ್ತದೆ.

ನರೇಂದ್ರ ಮೋದಿ ಸರಕಾರದ ಮಾತುಕತೆಯ ಫಲವಾಗಿ ಈ ವರ್ಷದಿಂದ ಮೂರನೆಯ ಹಾದಿಯೊಂದು ತೆರೆದುಕೊಂಡಿದೆ. ಇದು ಸಿಕ್ಕಿಂ- ಚೀನಾ ಗಡಿಭಾಗವಾದ ನಾತೂಲ ಪಾಸ್ ಮೂಲಕವಾಗಿ ಹೋಗುವ ರಸ್ತೆ ಮಾರ್ಗ. ಇದು ಅತ್ಯಂತ ಸುಲಭವಾದ ರಸ್ತೆ ಹಾದಿ ಮತ್ತು ಯಾತ್ರೆಯ ಸಮಯದ ಅವಧಿ ಕೂಡಾ ಕಡಿಮೆ.
ಕೈಲಾಸ ಮಾನಸಯಾತ್ರೆಯ ಸಂಕಲ್ಪ ಮಾಡಿಕೊಂಡರೂ ಅದು ನೆರವೇರುತ್ತದೆಯೆಂಬ ಯಾವ ಭರವಸೆಯೂ ಇರುವುದಿಲ್ಲ. ಯಾಕೆಂದರೆ ಅದಕ್ಕೆ ಬಹುದೊಡ್ಡ ಅಡ್ಡಿಯಾಗುವುದು ಪ್ರಕೃತಿಯೇ. ಹಿಮಪಾತ, ಭೂಕುಸಿತ ಮುಂತಾದ ಹವಮಾನ ವೈಪರಿತ್ಯಗಳಿಂದ ಹಲವಾರು ಭಾರಿ ಯಾತ್ರೆ ಅರ್ಧಕ್ಕೆ ನಿಂತಿರುವುದೂ ಇದೆ.

ಇಷ್ಟೇಲ್ಲಾ ಕಷ್ಟಪಟ್ಟು ಯಾತ್ರೆಯನ್ನು ಕೈಗೊಂಡ ಮೇಲೆ ಅಲ್ಲಿ ನೋಡುವುದಾದರೂ ಏನನ್ನು? ಮಾನಸಸರೋವರ ಮತ್ತು ಕೈಲಾಸ ಪರ್ವತ ಎಲ್ಲರಿಗೂ ಗೊತ್ತಿರುವಂತಹದೇ. ಅಲ್ಲಿರುವುದು ಇಷ್ಟು ಮಾತ್ರವೇ, ಇನ್ನೇನು ಇಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ.

ನನಗೊಬ್ಬ ಚಾರಣದ ಗೆಳತಿಯಿದ್ದಾಳೆ. ಆಕೆಯ ಹೆಸರು ಗಾಯತ್ರಿ. ನಮ್ಮದೊಂದು ಪುಟ್ಟ ಐದು ಜನರ ತಂಡವಿದೆ. ಪ್ರತಿವರ್ಷ ಹಿಮಾಲಯದಲ್ಲಿ ಚಿಕ್ಕಪುಟ್ಟ ಚಾರಣ್ಗಳನ್ನು ಕೈಗೊಳ್ಳುತ್ತೇವೆ.ಗಾಯತ್ರಿ ಆರು ಭಾರಿ ಕೈಲಾಸ ಮಾನಸ ಸರೋವರ ಯಾತ್ರೆ ಮಾಡಿದ್ದಾಳೆ. ’ ಅಷ್ಟು ಬಾರಿ ನೋಡುವಂತದ್ದು ಅಲ್ಲೇನಿದೆ?’ ಅಂತ ಅವಳನ್ನು ಪ್ರಶ್ನಿಸಿದರೆ ಆಕೆ ಅಲ್ಲಿರುವ ಸ್ಥಳಗಳ ಪಟ್ಟಿಯನ್ನೇ ಕೊಡುತ್ತಾಳೆ.

ರಾಕ್ಷತಾಳ್, ಅಷ್ಟಪಾದ, ನಂದಿಪರಿಕ್ರಮ, ಸಪ್ತಋಷಿ ಗುಹೆ, ಯಮಧ್ವಾರ..ಹೀಗೆ ಪಟ್ಟಿ ಮುಂದುವರಿಯುತ್ತದೆ.
ರಾಕ್ಷಸ ತಾಳ್ [ರಾಕ್ಷಸ ಸರೋವರ.] ಇದು ಮಾನಸ ಸರೋವರಕ್ಕಿಂತಲೂ ದೊಡ್ಡದು. ಇದರ ಹೆಸರಿಗೊಂದು ಹಿನ್ನೆಯಿದೆ. ರಾವಣ ತನ್ನ ತಾಯಿಯ ಬಯಕೆಯಂತೆ ಆತ್ಮಲಿಂಗವನ್ನು ಪಡೆಯುವುದಕ್ಕಾಗಿ ಶಿವನನ್ನು ಕುರಿತು ಘೋರ ತಪಸ್ಸನ್ನು ಮಾಡುತ್ತಾನೆ. ಆದರೆ ಶಿವ ಪ್ರತ್ಯಕ್ಷನಾಗುವುದಿಲ್ಲ. ಆಗ ಹತ್ತು ತಲೆಯ ರಾವಣ ತನ್ನ ಒಂದೊಂದೇ ತಲೆಯನ್ನು ಕಡಿದು ಹೋಮಕುಂಡಕ್ಕೆ ಅರ್ಪಿಸುತ್ತಾನೆ. ಹತ್ತನೆಯ ತಲೆಗೆ ಕತ್ತಿಯಿಕ್ಕುವಾಗ ಶಿವ ಪ್ರತ್ಯಕ್ಷನಾಗಿ ಆತ್ಮಲಿಂಗವನ್ನು ಕೊಡುತ್ತಾನೆ.. ರಾವಣ ಅಮೇಲೆ ಈ ಸರೋವರದಲ್ಲಿ ಸ್ನಾನ ಮಾಡಿದಾಗ ಆತ ಕಳೆದುಕೊಂಡ ತಲೆ ಪುನಃ ಚಿಗುರಿತಂತೆ. ಈ ಸರೋವರ ಮಾನಸ ಸರೋವರಕ್ಕಿಂತಲೂ ವಿಸ್ತೀರ್ಣ್ದಲ್ಲಿ ದೊಡ್ಡದು. ನೀರು ಶುಬ್ರವಾಗಿದ್ದರೂ ರಾಕ್ಷಸ ಗುಣ ಬರಬಹುದೆಂಬ ಭಯದಿಂದ ಭಕ್ತರು ಇಲ್ಲಿ ಸ್ನಾನ ಮಾಡುವುದಿಲ್ಲ.  

ಬೌದ್ದರಿಗೂ ಕೈಲಾಸ ಮಾನಸ ಸರೋವರ ಪವಿತ್ರವೆಂದು ಹಿಂದೆ ಪ್ರಸ್ತಾಪಿಸಿದ್ದೆ. ಹೌದು, ಇದೇ ರಾಕ್ಷಸ ಸರೋವರದಲ್ಲಿ ಎರಡ್ಮೂರು ಚಿಕ್ಕಪುಟ್ಟ ದ್ವೀಪಗಳಿವೆ. ಇದರಲ್ಲಿ ಬೌದ್ಧಬಿಕ್ಕುಗಳು, ಲಾಮಗಳು ವಾಸಿಸುತ್ತಾರೆ. ಚಳಿಗಾಲದ ಸಮಯದಲ್ಲಿ ಈ ಸರೋವರ ಹೆಪ್ಪುಗಟ್ಟುತ್ತದೆ. ಆಗ ಇವರು ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆದು ಬಂದು ಇಡೀ ವರ್ಷಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ತಂದು ಸಂಗ್ರಹಿಸಿಟ್ಟುಕೊಂಡು ತಮ್ಮ ಆಧ್ಯಾತ್ಮಿಕ ಸಾಧನೆಯನ್ನು ಮುಂದುವರಿಸುತ್ತಾರೆ.

ನಮ್ಮ ಹಾಗೆಯೇ ಬೌದ್ಧರು ಕೂಡಾ ಕೈಲಾಸ ಪರ್ವತವನ್ನು ಬುದ್ಧನ ಆವಾಸ ಸ್ಥಾನವೆಂದು ನಂಬುತ್ತಾರೆ. ಅವರ ಭಾವ ದ್ರುಷ್ಟಿಗೆ ಕೈಲಾಸ ಪರ್ವತವು ಸಮಾಧಿ ಸ್ಥಿತಿಯಲ್ಲಿ ಕುಳಿತ ಬುದ್ಧನಂತೆ ಗೋಚರವಾಗುತ್ತದೆ. ಅವರೂ ಕೂಡಾ ಹಿಂದುಗಳಂತೆಯೇ ಕೈಲಾಸ ಪರ್ವತಕ್ಕೆ ಪರಿಕ್ರಮವನ್ನು ಮಾಡುತ್ತಾರೆ. ಇನ್ನೀತರ ಪವಿತ್ರ ಬೌದ್ಧಮಂದಿರಗಳಲ್ಲಿ ಮಾಡುವ ಹಾಗೆ ಹೆಜ್ಜೆ ನಮಸ್ಕಾರ ಮತ್ತು ಮಂಡಿಯೂರಿ ನಮಸ್ಕಾರ ಮಾಡುವ ಬೌದ್ಧ ಸನ್ಯಾಸಿಗಳನ್ನು ಪರಿಕ್ರಮದ ಹಾದಿಯಲ್ಲಿ ಕಾಣಬಹುದು. ಇಲ್ಲಿಯೂ ಬೌದ್ದರೇ ಭಾಗವಹಿಸುವ ಬಹುದೊಡ್ಡ ಕುಂಭಮೇಳವೊಂದು ಯಮಧ್ವಾರದ ಬಳಿ ಹನ್ನೆರಡು ವರ್ಷಕ್ಕೊಮ್ಮೆ ನಡೆಯುತ್ತದೆ. . ಇದನ್ನು ’ಹಾರ್ಸ್ ಇಯರ್’ ಎಂದು ಕರೆಯುತ್ತಾರೆ. ಯಮಧ್ವಾರದಿಂದ ನಿಂತು ನೋಡಿದರೆ ಎರಡು ಬೆಟ್ಟಗಳು ಕಾಣುತ್ತವೆ. ಅವುಗಳ ಹೆಸರು ಅವಲೋಕಿತೇಶ್ವರ ಬೆಟ್ಟ ಮತ್ತು ಮಂಜುಶ್ರೀ ಬೆಟ್ಟ.

ಜೈನರಿಗೂ ಇದು ಪವಿತ್ರ ಜಾಗ. ಜೈನ ತೀರ್ಥಂಕರಲ್ಲಿ ಮೊದಲನೆಯವನಾದ ವೃಷಭದೇವನು ಕೈಲಾಸ ಪರ್ವತದ ಪಕ್ಕದಲ್ಲಿರುವ ಬೆಟ್ಟವನ್ನು ಕೇವಲ ಎಂಟು ಹೆಜ್ಜೆಗಳಲ್ಲಿ ಹತ್ತಿ ಕೈಲಾಸ ಪರ್ವತವನ್ನು ತಲುಪಿ ಅಲ್ಲಿ ನಿರ್ವಾಣ ಹೊಂದಿದ ಎಂಬ ನಂಬಿಕೆಯಿದೆ. ಹಾಗಾಗಿ ಆ ಬೆಟ್ಟಕ್ಕೆ  ಅಷ್ಟಪಾದ ಎಂಬ ಹೆಸರು ಬಂದಿದೆ. ಆ ಬೆಟ್ಟದ ಬುಡದಲ್ಲಿ ವೃಷಭದೇವನ ಸಮಾಧಿಯಿರುವ ಗೊಂಪವಿದೆ.

ಕೈಲಾಸ ಮಾನಸ ಸರೋವರದ ಯಾತ್ರೆಯನ್ನು ತಾನು ಮುಗಿಸಿ ಬಂದೆ ಅಂತ ಯಾರದರೂ ಹೇಳಿದರೆ ಅದರ ಬಗ್ಗೆ ಸ್ವಲ್ಪ ಗೊತ್ತಿದ್ದವರು ತಕ್ಷಣ ಒಂದು ಪ್ರಶ್ನೆ ಕೇಳುವುದಿದೆ. ’ಇನ್ನರ್ ಪರಿಕ್ರಮ ಮಾಡಿದ್ರಾ ಅಥ್ವಾ ಔಟರ್ ಮಾತ್ರವಾ?’ ಅಂತ. ಹಾಗೆಂದರೇನು?   ಕೈಲಾಸ ಪರ್ವತದ ಹೊರ ಆವರಣದಲ್ಲಿ ಪರ್ವತಕ್ಕೆ ಸುತ್ತು ಬರುವುದಕ್ಕೆ ಔಟರ್ ಪರಿಕ್ರಮ ಎನ್ನುತ್ತಾರೆ. ಇದನ್ನು ಕಾಲುನಡಿಗೆಯಲ್ಲಿ ಮಾಡಿದರೆ ಮೂರು ದಿವಸ ಬೇಕಾಗುತ್ತದೆ. ವಾಹನದಲ್ಲಾದರೆ ಕೆಲವು ಘಂಟೆಗಳು ಸಾಕು. ಒಳಗಿನಿಂದ ಸುತ್ತು ಬರುವುದಕ್ಕೆ ಇನ್ನರ್ ಪರಿಕ್ರಮ ಎನ್ನುತ್ತಾರೆ. ಮೈಕೊರೆಯುವ ಚಳಿಯಲ್ಲಿ ಇದನ್ನು ಮಾಡುವುದು ತುಂಬಾ ಕಷ್ಟಕರ. ಆ ಕಾರಣದಿಂದಲೇ ಇರಬಹುದು. ಈಗ ಐದಾರು ವರ್ಷಗಳಿಂದ ಇನ್ನರ್ ಪರಿಕ್ರಮಕ್ಕೆ ಚೀನಾ ಸರಕಾರವು ಒಪ್ಪಿಗೆಯನ್ನು ನೀಡುತ್ತಿಲ್ಲ.

ಸಪ್ತಸಿಂಧುಗಳಲ್ಲಿ ಉಲ್ಲೇಖವಾಗಿರುವ ಗಂಗಾನದಿಯೂ ಸೇರಿದಂತೆ, ಸಿಂಧು, ಸಟ್ಲೇಜ್ ಮುಂತಾದ ನದಿಗಳ ಉಗಮ ಸ್ಥಾನ ಕೂಡ ಇದೇ ಇದೇ ಮಾನಸ ಸರೋವರ. ಪ್ರತಿದಿನ ಬೆಳಿಗ್ಗೆ ಬ್ರಾಹ್ಮಿ ಮೂಹೂರ್ತದಲ್ಲಿ ದೇವತೆಗಳು ಬೆಳಕಿನ ರೂಪದಲ್ಲಿ, ನಕ್ಷತ್ರಗಳಾಗಿ ಬಂದು ಇಲ್ಲಿ ಸ್ನಾನ ಮಾಡುತ್ತಾರೆಂಬು ಆಸ್ತಿಕರು ನಂಬುತ್ತಾರೆ. ತಾವದನ್ನು ನೋಡಿದುದಾಗಿಯೂ ಕೆಲವರು ಹೇಳುತ್ತಾರೆ.

 ಆಸ್ತಿಕರು ಗುಡಿಯೊಳಗಿನ ದೇವರನ್ನು ನಂಬುತ್ತಾರೆ.  ಹಾಗೆಯೇ ಪ್ರಕೃತಿಯಲ್ಲೂ ದೇವರನ್ನು ಕಾಣುತ್ತಾರೆ. ನನ್ನಂತವರು ಕ್ಷಣ ಕ್ಷಣಕ್ಕೂ ಬದಲಾಗುವ ಪ್ರಕೃತಿಯನ್ನು, ಸೃಷ್ಟಿಯ ಅದ್ಭುತವನ್ನು ನೋಡಿ ಬೆರಗಾಗಿ ನಿಲ್ಲುತ್ತೇವೆ. ಹಾಗಾಗಿಯೇ ಅಸ್ತಿಕಳಾದ ಗಾಯತ್ರಿ ಮತ್ತು  ಪೂಜೆ, ಪುನಸ್ಕಾರಗಳಲ್ಲಿ ಆಸಕ್ತಿಯಿಲ್ಲದ ನಾನು ಒಟ್ಟಾಗಿ ಪ್ರವಾಸ ಹೋಗಲು ಸಾಧ್ಯವಾಗುತ್ತದೆ. ಅವಳು ಗರ್ಬಗುಡಿಯೊಳಗೆ ಹೊಕ್ಕರೆ ನಾನು ಗಿರಿ- ಶಿಖರ, ಹಕ್ಕಿ ಪಕ್ಕಿಗಳ ಕಡೆಗೆ ಕ್ಯಾಮಾರ ಫೋಕಸ್ ಮಾಡುತ್ತೇನೆ.

[ಇವತ್ತಿನ -೫.೨೦.೨೦೧೮- ಸಂಯುಕ್ತ ಕರ್ನಾಟಕ ಪೇಪರಿನ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ]


Saturday, March 10, 2018

ಶ್ರೀಲಂಕಾದಲ್ಲಿ ಸಂಘರ್ಷ ಮತ್ತು ಸಹಿಷ್ಣುತೆ.ಶ್ರೀಲಂಕಾದಲ್ಲಿ ಬೌದ್ಧರಿಗೂ ಮುಸ್ಲಿಂರಿಗೂ ಸಂಘರ್ಷ ಉಂಟಾಗಿ ಅಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾಗಿದೆ. ೧೯೭೧ರಲ್ಲಿ ಶ್ರೀಲಂಕಾ ತಮಿಳರು ಮತ್ತು ಸೇನೆಯ ನಡುವೆ ಸಂಘರ್ಷವೇರ್ಪಟ್ಟ ಸಮಯದಲ್ಲಿ ದಶಕಗಳ ಕಾಲ ತುರ್ತುಪರಿಸ್ಥಿ ಹೇರಲಾಗಿತ್ತು. ಈಗ ಮತ್ತೆ ಹತ್ತು ದಿನಗಳ ತುರ್ತುಪರಿಸ್ಥಿತಿ ಬಂದಿದೆ. ಇಂಟರ್ನೆಟ್ ಸ್ಥಗಿತಗೊಳಿಸಿ ಎಲ್ಲಾ ರೀತಿಯ ಸೋಷಿಯಲ್ ಮೀಡಿಯಾಗಳನ್ನು ಬ್ಯಾನ್ ಮಾಡಿದೆ.

ತುರ್ತುಪರಿಸ್ಥಿಗೆ ಕಾರಣವಾಗಿದ್ದು ಒಂದು ಸಾಧಾರಣ ಘಟನೆ. ಪೆಭ್ರವರಿ ೨೨ರಂದು ಕ್ಯಾಂಡಿಯಲ್ಲಿ ಕುಮಾರಸಂಘಿಯೆಂಬ ಟ್ರಕ್ ಡ್ರೈವರ್ ಗಾಡಿ ಓಡಿಸುತ್ತಿದ್ದ. ಹಿಂದಿನಿಂದ ಒಂದು ಅಟೊ ಬರುತ್ತಿತ್ತು. ಈತ ಅವನಿಗೆ ದಾರಿಬಿಡಲಿಲ್ಲ. ಇಬ್ಬರಿಗೂ ಜಗಳ ಹತ್ತಿಕೊಂಡಿತು. ಅದು ಮುಸ್ಲಿಂ ಪ್ರಾಬಲ್ಯದ ಪ್ರದೇಶ. ಹತ್ತಾರು ಮುಸ್ಲಿಮರು ಸೇರಿಕೊಂಡು ಕುಮಾರಸಂಘಿಯನ್ನು ಥಳಿಸಿದರು. ಆತ ಸತ್ತು ಹೋದ. ಆತನ ಶವದ ಮೆರವಣಿಗೆಯ ಸಮಯದಲ್ಲಿ ಬೌದ್ಧರು ಸಿಕ್ಕ ಸಿಕ್ಕ ಮುಸ್ಲಿಮರ ಮೇಲೆ ಏರಿ ಹೋದರು. ಅವರ ಮನೆ ಅಂಗಡಿಗಳನ್ನು ಸುಟ್ಟು ಹಾಕಿದರು. ಮಸೀದಿಗಳಿಗೆ ಹಾನಿ ಉಂಟು ಮಾಡಿದರು. ಪರಿಸ್ಥಿತಿ ಬಿಗಾಡಾಯಿಸಿತು. ಸೇನೆ ಮತ್ತು ಪೋಲಿಸರು ಮಧ್ಯೆ ಪ್ರವೇಶಿಸಿದರು.  ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ತುರ್ತುಪರಿಸ್ಥಿತಿ ಘೋಷಣೆ ಮಾಡಿದರು.

ಕಳೆದ ವಾರ ನಾನು ಅಲ್ಲಿದ್ದೆ. ತಮ್ಮ ಧರ್ಮದ ವಿಷಯವಾಗಿ ಅಲ್ಲಿನ ಜನರು ಎಷ್ಟು ಸೂಕ್ಷ್ಮಮತಿಗಳು ಎಂಬುದಕ್ಕೆ  ಒಂದು ಪ್ರತ್ಯಕ್ಷ ಘಟನೆಯನ್ನು ಹೇಳುತ್ತೇನೆ.

ನಮ್ಮ ಪ್ರವಾಸಿ ತಂಡ ಭಾರತಕ್ಕೆ ಮರಳಲು ಕೊಲೊಂಬೋದ ಭಂಡಾರೆನಾಯಿಕೆ ಇಂಟರ್ ನ್ಯಾಷನಲ್ ವಿಮಾನ ನಿಲ್ಡಾಣದ ಚಿಕ್ ಇನ್ ಕೌಂಟರ್ ನಲ್ಲಿ ನಿಂತಿದ್ದೆವು.  ಸರತಿ ಸಾಲಿನಲ್ಲಿ ನಮ್ಮ ಸಹ ಪ್ರವಾಸಿಗರಾದ ನಮ್ಮ ಕನ್ನಡದ ಹಿರಿಯ ನಟ ಅಶೋಕ್ ರವರ ಅಣ್ಣ ಮತ್ತು ಅತ್ತಿಗೆ ಕೂಡಾ ಇದ್ದರು. ನಮ್ಮ ಪಕ್ಕದ ಸಾಲಿನಲ್ಲಿದ್ದ ಮೂರ್ನಾಕು ಜನ ಬೌದ್ಧಬಿಕ್ಕುಗಳು ಪರಸ್ಪರ ಗುಸುಗುಸು ಮಾತಾಡುತ್ತಾ ಆಗಾಗ ಅಶೋಕರ ಅತ್ತಿಗೆಯನ್ನು ನೋಡುತ್ತಿರುವುದನ್ನು ಗಮನಿಸಿದೆ, ನಾವೆಲ್ಲ ಬುದ್ಧ ಹುಟ್ಟಿದ ನಾಡಿನವರು. ಹಾಗಾಗಿ ಅಭಿಮಾನದಿಂದ ನಮ್ಮನ್ನವರು ನೋಡುತ್ತಿರಬಹುದೆಂದು ಒಳಗಿಂದೊಳಗೆ ಹೆಮ್ಮೆಯಿಂದ ಬೀಗುತ್ತಲಿದ್ದೆ.. ಆದರೆ ಇದ್ದಕ್ಕಿದ್ದಂತೆ ಮೂರ್ನಾಲ್ಕು ಜನ ಸೆಕ್ಯೂರಿಟಿ ಗಾರ್ಡಗಳು ಆಕೆಯಿದ್ದೆಡೆಗೆ ಬಂದುನಮ್ಮ ಜೊತೆ ಬನ್ನಿ ಎಂದು ಕರೆದಾಗ ಅವರ ಜೊತೆ ನಾವು ಕೂಡಾ ತಬ್ಬಿಬ್ಬುಗೊಂಡೆವು. ಗಂಡ ಹೆಂಡತಿಯರಿಬ್ಬರೂ ಚಕಿತಗೊಳ್ಳುತ್ತಲೇ ಅವರನ್ನು ಹಿಂಬಾಲಿಸಿದರು. ನಾವೆಲ್ಲಾ ಯಾಕಾಗಿರಬಹುದು? ಎಂದು ಕಾತರದಿಂದ ಅವರು ಹಿಂದಿರುಗಿ ಬರುವುದನ್ನೇ ಕಾಯುತ್ತಿದ್ದೆವು. ಆಕೆ ಹಿಂದಿರುಗಿ ಬರುತ್ತಲೇ ತನ್ನ ಲಗ್ಗೇಜ್ ಬ್ಯಾಗನ್ನು ತಡಕಾಡುತ್ತಾ ಅದರಿಂದ ಒಂದು ಚೂಡಿದಾರ್ ಟಾಪ್ ಎತ್ತಿಕೊಂಡು ಲೇಡಿಸ್ ರೆಸ್ಟ್ ರೂಮ್ ನತ್ತ ಹೋದರು. ನಾವು ಪ್ರಶ್ನಾರ್ಥಕ ಚಿಹ್ನೆಯಿಂದ ಆಕೆಯ ಗಂಡನೆಡೆ ನೋಡಿದಾಗ ಅವರು ಹೇಳಿದರು; ತಮ್ಮ ಪತ್ನಿ ಬುದ್ಧನ ಚಿತ್ರಗಳಿದ್ದ ಟಾಪ್ ಹಾಕಿಕೊಂಡಿದ್ದು ಅಲ್ಲಿಯ ಬಹುಸಂಖ್ಯಾತ ಬೌದ್ಧರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟುಮಾಡುವಂತಿತ್ತಂತೆ. ಹಾಗಾಗಿ ಬದಲಾಯಿಸಲು ಹೇಳಿದರಂತೆ. ನಿಜ ಬೌದ್ಧರಿಗೆ ಬುದ್ಧ ದೇವರಿದ್ದಂತೆ. ಅತನ ಚಿತ್ರಗಳಿರುವ ಮೇಲುಡುಗೆಯನ್ನು ವಿದೇಶಿಯ ಹೆಣ್ಣುಮಗಳೊಬ್ಬಳು ತೊಟ್ಟಾಗ ಅವರು ಅಕ್ಷೇಪಿಸುವುದು ಸಹಜವಾಗಿತ್ತು.

 ದೇವರ ವಿಷಯದಲ್ಲಿ ನಾವು ಭಾರತೀಯರು ಉದಾರಿಗಳು, ನಮ್ಮಲ್ಲಿ ಮೂವತ್ತಮೂರು ಕೋಟಿ ದೇವತೆಗಳಿದ್ದಾರೆ, ಅವರನ್ನು ನಾವು ಬೇಕಾದಂತೆ ಬಳಸಿಕೊಳ್ಳುತ್ತೇವೆ. ಅವರ ಟ್ಯಾಟು ಹಾಕಿಸಿಕೊಳ್ಳುತ್ತೇವೆ, ನಾವು ಉಡುವ ವಸ್ತ್ರಗಳಲ್ಲಿ ದೇವರ ಚಿತ್ರಗಳಿದ್ದರೆ ನಮಗದು ಅಕ್ಷೇಪಾರ್ಹವಲ್ಲ, ಗಣೇಶ, ಶಿವ,  ಶ್ರೀಕೃಷ್ಣರಂತೂ ಸರ್ವಾಂತರ್ಯಾಮಿಗಳು. ಅದರೆ ವಿದೇಶಿಗರು ಇವರನ್ನು ಬೇಕಾಬಿಟ್ಟಿಯಾಗಿ ಬಳ್ಅಸಿಕೊಂಡಾಗ ನಮ್ಮಿಂದಲೂ ಪ್ರತಿಭಟನೆ ವ್ಯಕ್ತವಾದುದುಂಟು. ಬುದ್ಧ ನಮ್ಮ ನಾಡಿನಲ್ಲೇ ಹುಟ್ಟಿದರೂ ಆತ ನಮ್ಮವನಾಗಿಯೇ ಉಳಿದಿಲ್ಲ. ಆ ಕಾರಣದಿಂದಲೇ ಇರಬಹುದು, ಅವನ ಚಿತ್ರವನ್ನೂ ನಾವು ಸಹ ಬೇಕಾಬಿಟ್ಟೆಯಾಗಿ ಉಪಯೋಗಿಸುತ್ತಿದ್ದೀವೆನೋ ಎಂಬ ಶಂಕೆ ಶ್ರೀಲಂಕಾದ ಏರ್ಪೋರ್ಟ್ ಘಟನೆಯಿಂದ ನನ್ನಲ್ಲಿ ಮೂಡಿದೆ.

 ನಮ್ಮ ಬೆಂಗಳೂರಿನಲ್ಲಿ ನಡೆಯುವ ಬಹುತೇಕ ಕರಕುಶಲವಸ್ತು ಪ್ರದರ್ಶನಗಳಲ್ಲಿ ಬುದ್ಧನ ಚಿತ್ರಗಳಿರುವ ಸೀರೆ, ಕುಪ್ಪಸ, ಶರ್ಟ್, ಕಿವಿಯೋಲೆ ಪೆಂಡೆಂಟ್ ಎಲ್ಲವೂ ದೊರೆಯುತ್ತದೆ. ಚಿತ್ರಕಲಾ ಪ್ರದರ್ಶನಲ್ಲಾದ ಕರಕುಶಲ ಮೇಳದಲ್ಲಿ ಖರೀದಿಸಿದ ಒಂದು ಚೂಡಿದಾರ್ ಟಾಪ್ ನನ್ನಲ್ಲೂ  ಇದೆ. ಬುದ್ಧನ ಮೇಲಿನ ಪ್ರೀತಿ, ಆರಾಧನೆಗಳಿಂದ ಖರೀದಿಸಿದ್ದೆ. ಬಹುಶಃ ಇನ್ನದನ್ನು ನಾನು ಧರಿಸಲಾರೆ!

ಭಾರತಕ್ಕೆ ನೇತು ಬಿದ್ದಿರುವ ನೀರಿನ ಬಿಂದುವಿನಂತಿರುವ ಪುಟ್ಟ ದ್ವೀಪ ರಾಷ್ಟ್ರ. ಶೀಲಂಕಾ. ೧೯೮೮ರ ಜನಗಣತಿಯಂತೆ ಇಲ್ಲಿಯ ಒಟ್ಟು ಜನಸಂಖ್ಯೆಯಲ್ಲಿ  ಶೇ. ೯೩ರಷ್ಟು ಜನರು ಸಿಂಹಳೀಯ ಬುದ್ದಿಸ್ಟ್ ಆಗಿದ್ದರು. ೨೦೧೧ರ  ಜನಗಣತಿಗೆ ಬರುವಾಗ ಆ ಸಂಖ್ಯೆ ಶೇ ೭೦.೧೯ಕ್ಕೆ ಇಳಿದಿತ್ತು. ಉಳಿದವರಲ್ಲಿ ೧೨.೬ ಹಿಂದುಗಳು. ೯.೭ ಮುಸ್ಲೀಮರು ಮತ್ತು ೭.೪ ರಷ್ಟು ಕ್ರಿಶ್ಚಿಯನ್ನರು ಇದ್ದಾರೆ. ಏರುತ್ತಿರುವ ಮುಸ್ಲಿಮ್ ಜನಸಂಖ್ಯೆಯ ಬಗ್ಗೆ ಬೌದ್ಧರಲ್ಲಿ ಈಗ ಅಸಮಧಾನ ಮೂಡುತ್ತಿದೆ. ಹಾಗಾಗಿ ಅಲ್ಲಲ್ಲಿ ಚಿಕ್ಕಪುಟ್ಟ ಸಂಘರ್ಷಗಳು ಈ ಹಿಂದೆಯೂ ನಡೆಯುತ್ತಿದ್ದವು. ಅಂಪಾರವೆಂಬ ಪ್ರದೇಶದಲ್ಲಿ ಮುಸ್ಲಿಮರು ತಿಂಡಿ ತಿನಿಸುಗಳ ಮಳಿಗೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸುತ್ತಿದ್ದಾರೆ. ಅವರು ಸಿಂಹಳಿ ಬೌದ್ಧರಿಗೆ ಆಹಾರದಲ್ಲಿ ನಿರ್ವೀರ್ಯರಾಗುವಂತ ಔಷಧಿಗಳನ್ನು ಬೆರೆಸಿ ಅವರ ಜನಸಂಖೆಯನ್ನು ನಿಯಂತ್ರಿಸಿ ತಮ್ಮ ಸಂಖ್ಯಬಲವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಅವರು ಕುಟುಂಬಯೋಜನೆಯನ್ನು ಪಾಲಿಸುತ್ತಿಲ್ಲ ಎಂಬುದು ಸಿಂಹಳೀಯರ ಆರೋಪ. ಬರ್ಮಾದಿಂದ ಓಡಿ ಬಂದ ರೋಹಿಂಗಾ ಮುಸ್ಲಿಮರು ಶ್ರೀಲಂಕಕ್ಕೆ ನುಗ್ಗುತ್ತಿದ್ದಾರೆ, ಮುಸ್ಲಿಮರ ಸಂಘಟನೆಗಳಿಗೆ ಸೌದಿ ಅರೇಬಿಯಿಂದ ಹಣ ಬರುತ್ತಿದೆ ಎಂಬ ಆರೋಪದೊಂದಿಗೆ ಅಲ್ಲಿ ಮುಸ್ಲಿಮ್ ದ್ವೇಷ ಒಳಗಿನ ಕಿಚ್ಚಾಗಿ ಉರಿಯುತ್ತಿದೆ. ಈಗ ಅಲ್ಲಿ ಬುರ್ಕಾಗಳೂ, ದಾಡಿಗಳು ಕಾಣಿಸಿಕೊಳ್ಳಲು ಶುರುವಾಗಿದೆ.

ಈಗಿನ ಶ್ರೀಲಂಕಾಕ್ಕೆ ಬೌದ್ಧಧರ್ಮ ಹೇಗೆ ಬಂದಿಳಿಯಿತು ಎಂದು ಇತಿಹಾಸದತ್ತ ಕಣ್ಣು ಹೊರಳಿಸಿದಾಗ ಸಿಗುವುದೇ ಮೌರ್ಯ ಸಾಮ್ರಟ ಅಶೋಕನ ಚರಿತ್ರೆ. ಅದು ಕ್ರಿ.ಫು ಮೂರನೇ ಶತಮಾನ, ಕಳಿಂಗ ಯುದ್ಧದ ಭೀಕರತೆಯಿಂದ ಕನಲಿ ಹೋದ ಅಶೋಕ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧದರ್ಮವನ್ನು ಅಂಗೀಕರಿಸುತ್ತಾನೆ. ಧರ್ಮಪ್ರಚಾರಕ್ಕಾಗಿ ತನ್ನ ಮಕ್ಕಳಾದ ಸಂಘಮಿತ್ರೆ ಮತ್ತು ಮಹೇಂದ್ರರನ್ನು ಸಿಂಹಳಕ್ಕೆ ಕಳುಹಿಸುತ್ತಾನೆ. ಅಶೋಕನ ಸಮಕಾಲೀನನಾದ ದೊರೆ ದೇವನಾಂಪ್ರಿಯ ಟಿಸ್ಸಾ ಅವರಿಗೆ ಆಶ್ರಯನ್ನು ನೀಡಿದ. ಅವರು  ಧರ್ಮಪ್ರಚಾರವನ್ನು ಮಾಡುತ್ತಾ ಅಲ್ಲಿಯೇ ಕೊನೆಯುಸಿರೆಳೆಯುತ್ತಾರೆ.  ಆ ಅಣ್ಣತಂಗಿಯರಿಬ್ಬರೂ ಅಲ್ಲಿಗೆ ಬರುವ ಮೊದಲು ಶ್ರೀಲಂಕಾ ಹೇಗಿತ್ತು?

ವಿದೇಶಿ ಪ್ರವಾಸಿಗರು ಕಂಡಂತೆ ಅಲ್ಲಿ ಪ್ರಕೃತಿಯ ಆರಾಧನೆಯಿತ್ತು.  ನಿಗೂಢ ಶಕ್ತಿಗಳಲ್ಲಿ ನಂಬುಗೆಯಿತ್ತು, ಆತ್ಮ ಪುನರ್ಜನ್ಮಗಳಲ್ಲಿ ನಂಬಿಕೆಯಿತ್ತು. ಸತ್ತವರನ್ನು ಪೂಜಿಸುತ್ತಿದ್ದರು. ಮುಖ್ಯವಾಗಿ ಯಕ್ಷ-ಯಕ್ಷಿಣಿಯರ ಆರಾಧನೆಯಿತ್ತು. ಈಗ ಕ್ಯಾಂಡಿಯಲ್ಲಿ ಪ್ರತಿದಿನವೂ ವಿದೇಶಿ ಪ್ರವಾಸಿಗರನ್ನು ದೃಷಿಯಲ್ಲಿಟ್ಟುಕೊಂಡು ಕಲ್ಚರಲ್ ಶೋ ನಡೆಯುತ್ತಿದೆ. ಅಲ್ಲಿ ಕಲಾವಿದರು ಬಳಸುವ ಮುಖವಾಡಗಳು, ವಾದ್ಯಪರಿಕರಗಳು, ವಸ್ತ್ರವಿನ್ಯಾಸ, ಬಳಸುವ ಬಣ್ಣಗಳು- ಇವೆಲ್ಲವುಗಳಲ್ಲ್ ಬೌದ್ಧಪೂರ್ವದ ಸಿಂಹಳೀಯ ಸಂಸ್ಸ್ಕೃತಿಯನ್ನು ಕಾಣ್ಬಹುದು.  ಆ ಕಾಲಕ್ಕೆ ಮೂಲನಿವಾಸಿಗಳ ಜೊತೆ ಸಾಕಷ್ಟು ಸಂಖ್ಯೆಯಲ್ಲಿ ಜೈನರೂ ಇದ್ದರು. ಆದರೆ ಈಗ ಅವರು ನಾಮಾವಶೇಷವಾಗಿದ್ದಾರೆ.

ರಾಮಾಯಣದ ಹೆಜ್ಜೆ ಗುರುತುಗಳನ್ನು ಹುಡುಕುತ್ತಾ ಒಂದು ಕಾಲದಲ್ಲಿ ರಾವಣನ ಸ್ವರ್ಣಲಂಕೆಯೆಂದು ಕರೆಯಿಸಿಕೊಂಡಿದ್ದ ಶ್ರೀಲಂಕಾಗೆ ಹೋದವಳು ನಾನು. ಆದರೆ ಹೋದೆಡೆಯಲೆಲ್ಲಾ ನಮಗೆ ಕಂಡಿದ್ದು ರಾಮಾಯಣದ ಘಟನೆಗಳು ನಡೆಯಿತ್ತೆನ್ನಲಾದ ಜಾಗಗಳಲ್ಲಿ ನಿರ್ನಾಮಗೊಂಡಿರುವ ದೇವಾಲಯದ ಅವಶೇಷಗಳು, ಮತ್ತು ಅವುಗಳ ಅಸ್ತಿಭಾರದಲ್ಲಿಯೇ ಅರಳಿರುವ ಬೌದ್ಧಚೈತ್ಯಾಲಯಗಳು, ಶ್ರೀರಾಮಚಂದ್ರನು ವಿಭಿಷಣನಿಗೆ ಪಟ್ಟಾಭೀಷೇಕ ಮಾಡಿದನೆಂಬ ನಂಬಲಾದ ಕೆಲಿನಿಯಾ ಟೆಂಪಲ್ ಗೆ ಹೋದರೆ ಅಲ್ಲೇನಿದೆ? ಅದೀಗ ಬೌದ್ಧರ ಬಹುಮುಖ್ಯ ಆರಾಧನಕೇಂದ್ರ. ಪ್ರಾಚೀನ ಮಂದಿರವಿರಬಹುದೆಂದು ತೋರುವ ಎತ್ತರದ ಗೋಡೆಗಳ ಮೇಲೆಲ್ಲಾ ಸಸ್ಯಜನ್ಯ ಬಣ್ಣಗಳಿಂದ ಮಾಡಿದ ಚಿತ್ತಾರಗಳು. ವಿಶಾಲವಾದ ಪ್ರವೇಶಧ್ವಾರವನ್ನು ಪ್ರವೇಶಿಸಿ ನೀಲತಾವರೆಗಳಿಂದ ಅಲಂಕೃತನಾದ ಬುದ್ಧನಿಗೆ ಪ್ರದಕ್ಷಿಣೆ ಹಾಕಿ ಬರುತ್ತಿರುವಾಗ ಎಡ ಬದಿಯ ಗೋಡೆಯಲ್ಲಿ ಕೆತ್ತಿದ ಕೊಳಲನ್ನುದೂತ್ತಿರುವ ಗೋಪಾಲ ಕೃಷ್ಣ .. ವಿಭಿಷಣನನ್ನು ಹುಡುಕಲೇ ಬೇಕೆಂದು ಕಣ್ಣು ಕಿರಿದುಗೊಳಿಸಿ ಆ ಬಿರು ಬಿಸಿಲಿನಲ್ಲಿ ಬರಿಗಾಲಿನಲ್ಲಿ ದೇವಸ್ಥಾನ ಪೌಳಿಯುದ್ದಕ್ಕೂ ಸುತ್ತ್ತು ಹಾಕುತ್ತಿರುವಾಗ ಗರ್ಭಗುಡಿಯಲ್ಲಿರುವ ಬುದ್ಧನ ಹಿಂಬದಿಗೆ ಸರಿಯಾಗಿ ಬರುವಂತೆ ಪಟ್ಟಾಭಿಷೇಕದ  ಚಿತ್ರವನ್ನು ಕೆತ್ತಿದ್ದನ್ನು ಕಂಡೆ. ನಮ್ಮ ಮುಂದಿನ ಪ್ರವಾಸದುದ್ದಕ್ಕೂ ನಮಗೆ ಇಂತಹದೇ ಅನುಭವಗಳಾದವು. ಸೀತೆಯ ಅಗ್ನಿ ಪ್ರವೇಶ ನಡೆಯಿತ್ತೆನ್ನಲಾದ  ಲಿಟ್ಲ್ ಇಂಗ್ಲೆಂಡ್ ಎಂದು ಕರೆಯುವ ನೌರಾ ಎಲಿಯಾದ ದುವೊಂಪುಲಾ, ರಾವಣನ ಅರಮನೆ ಇತ್ತೆನ್ನಲಾದ ಸಿಗೇರಿಯಾ, ಕಟಿಗ್ರಾಮದ ಸುಪ್ರಸಿದ್ಧ ಸುಬ್ರಹ್ಮಮಣ್ಯ ಸ್ವಾಮಿ ದೇವಾಲಯ, ಎಲ್ಲಾ ಎಂಬಲ್ಲಿರುವ ರಾವಣನ ಪುರಾತನ ಗುಹೆ, ರಾವಣ ತನ್ನ ಒಂದು ತಲೆಯನ್ನು ಶಿವನಿಗರ್ಪಿಸಿದ ಎಂದು ನಂಬಿರುವ ಟ್ರಿಂಕಮಲೆಯ ತ್ರಿಕೋನೇಶ್ವರ ದೇವಾಲಯ. ಕ್ಯಾಂಡಿಯಲ್ಲಿರುವ ಬುದ್ಧ ಹಲ್ಲನ್ನು ಇಟ್ಟಿರುವ ಬುದ್ಧ ಟೂತ್ ರಿಕ್ ಟೆಂಪಲ್, ಅಶೋಕನ ಮಕ್ಕಳಾದ ಸಂಘಮಿತ್ರೆ ಮತ್ತು ಮಹೇಂದ್ರ ಚಿನ್ನದ ಪಾತ್ರೆಯಲ್ಲಿ ತಂದ ಬುದ್ಧನಿಗೆ ಜ್ನಾನೋದಯವಾದ ಬೋಧಗಯಾದ ಬೋಧಿವೃಕ್ಷದ ರೆಂಬೆಯನ್ನು ಊರಿದ ಮತ್ತೆ ಅಲ್ಲಿಯೇ ಮಾಹಾನಿರ್ವಾಣವಾದ ಅನುರಾಧಪುರ ಸೇರಿದಂತೆ ಎಲ್ಲಿಯೂ ನಮಗೆ ರಾಮಾಯಣದ ಪುರಾತನ ಕುರುಹಗಳು ದೊರೆಯುವುದಿಲ್ಲ. ಅದೆಲ್ಲವೂ ಬೌದ್ಧ ಮಂದಿರಗಳಾಗಿವೆ, ಹುಡುಕಿದರೆ ಹಿಂದೂ ಧರ್ಮದ ಕೆಲವು ಕುರುಹುಗಳನ್ನಷ್ಟೇ ಅಲ್ಲಿ ಕಾಣಬಹುದು.

ನಿಜ, ಒಬ್ಬ ದೊರೆ ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡಿದಾಗ ಅಲ್ಲಿಯ ಕಟ್ಟಡಗಳನ್ನು ನಾಶಪಡಿಸಿ, ಅಲ್ಲಿಯ ಸಂಸ್ಕೃತಿಯನ್ನು ಹತ್ತಿಕ್ಕಿ ತನ್ನದೇ  ಛಾಪನ್ನು ಒತ್ತುವುದು, ಅಲ್ಲಿಯ ಜನರನ್ನು ಮತಾಂತರಗೊಳಿಸುವುದನ್ನು ನಾವು ಇತಿಹಾಸದುದ್ದಕ್ಕೂ ಓದುತ್ತಾ ಬಂದಿದ್ದೇವೆ. ಅದು ಒಪ್ಪಿತ ಸತ್ಯ. ಇದು ಧರ್ಮಗಳಿಗೂ ಅನ್ವಯವಾಗುತ್ತದೆ. ಅದರೆ ಬೌದ್ಧರು ಶಾಂತಿಪ್ರಿಯರು, ಕರುಣಾಳುಗಳು, ಅಧ್ಯಾತ್ಮದೆಡೆ ದೃಷ್ಟಿ ನೆಟ್ಟವರು ಎಂಬುದನ್ನು ನಾವು ಚರಿತ್ರೆಯಲ್ಲಿ ಓದಿದ್ದೇವೆ. ಕತ್ತಿಯ ಮೊನೆಯಲ್ಲಿ ಸಾಮ್ರಜ್ಯಗಳನ್ನು ಗೆದ್ದವರಲ್ಲ ಅವರು. ಪ್ರೀತಿಯಿಂದಲೇ ತಮ್ಮ ಧರ್ಮವನ್ನು ಜಗತ್ತಿನೆಲ್ಲೆಡೆ ಪಸರಿಸಿದವರು ಅವರು ಆದರೆ ಮಯ್ನಮಾರು ನಡೆಯುತ್ತಿರುವ ರೋಹಿಂಗ್ಯಾ ಮುಸ್ಲಿಮರ ಮಾರಣ ಹೋಮ ನೋಡಿದರೆ ಹಾಗೆನ್ನಿಸುವುದಿಲ್ಲ. ಶ್ರಿಲಂಕಾವೂ ಆ ಸಾಲಿಗೆ ಸೇರುತ್ತದೆಯಾ?

 ಶಾಂತಿ ಮತ್ತು ಸಹಬಾಳ್ವೆಯನ್ನು ಭೋದಿಸಬೇಕಾಗಿದ್ದ, ಬೋದಿಸಿದ್ದನ್ನು ಆಚರಣೆಯಲ್ಲಿ ತರಬೇಕಾಗಿರುವ ಧರ್ಮಗಳು ಉಗ್ರತ್ವದ ರಕ್ತಸಿಕ್ತ [ಮಿಲಿಟೆಂಟ್] ಹಾದಿಯನ್ನು ತುಳಿಯುತ್ತಿದೆಯಾ? ಸಿರಿಯದಲ್ಲಾಗುತ್ತಿರುವ ಹಸುಕಂದಮ್ಮಗಳ, ನಾಗರಿಕರ ಪೈಶಾಚಿಕ ಹತ್ಯೆಗಳನ್ನು ನೋಡುತ್ತಿದ್ದರೆ, ಹೌದು ಎಂದು ಉತ್ತರಿಸಲೇಬೇಕಾಗಿದೆ. ಇದಕ್ಕೆ ಪರಿಹಾರವೇನು? ಗೊತ್ತಿಲ್ಲ, ಬೆಳೆಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತಂದು, ಸಂಪತ್ತನ್ನು ಕೂಡಿಡುವ ಲಾಲಸೆಯನ್ನು ಬಿಟ್ಟು ಪ್ರೀತಿ ಹಂಚಿಕೊಂಡು ಬಾಳಿದರೆ ಪರಿಸ್ಥಿತಿ ಸುಧಾರಿಸಬಹುದೇನೋ! ಅದೂ ಸರಿಯಾಗಿ ಗೊತ್ತಾಗುತ್ತಿಲ್ಲ.

[ ೧೧.೩.2018ರ ಉದಯವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಬರಹ]Friday, February 16, 2018

ಆ ನಗುವಿನಲ್ಲಿತ್ತು ಪ್ರಶ್ನಿಸುವ ಸೊಕ್ಕು !
ಮಹಾಭಾರತದಲ್ಲಿ ಒಂದು ಪ್ರಸಂಗ ಬರುತ್ತದೆ;
ಪಾಂಡವರು ಖಾಂಡವವನವನ್ನು ದಹಿಸಿ ಇಂದ್ರಪ್ರಸ್ಥವೆಂಬ ಸುಂದರನಗರವನ್ನು ಕಟ್ಟುತ್ತಾರೆ. ದಾನವಶಿಲ್ಪಿಯಾದ ಮಯ ವರಿಗಾಗಿ ವಿಶಿಷ್ಟವಾದ ಭವ್ಯ ಅರಮನೆಯೊಂದನ್ನು ಕಟ್ಟಿಕೊಡುತ್ತಾನೆ. ಅದನ್ನು ನೋಡುವ ಕುತೂಹಲದಿಂದ ಕೌರವ ಪರಿವಾರ ಹಸ್ತಿನಾಪುರದಿಂದ  ಇಂದ್ರಪ್ರಸ್ಥಕ್ಕೆ ಬರುತ್ತಾರೆ. ಅರಮನೆಯ ಸೌಂದರ್ಯವನ್ನು ವೀಕ್ಷಿಸುತ್ತಾ ಬಂದ ದುರ್ಯೋಧನ ಒಂದೆಡೆ ನೀರಿನ ಕೊಳವಿದೆಯೆಂದು ಭಾವಿಸಿ ತನ್ನ ಪಂಚೆಯನ್ನು ಮೇಲೆತ್ತಿಕೊಳ್ಳುತ್ತಾನೆ. ಅದನ್ನು  ನೋಡಿದ ದ್ರೌಪಧಿ ಕಿಸಕ್ಕನೆ ನಕ್ಕುಬಿಡುತ್ತಾಳೆ. ಈ ನಗುವೇ ಕುರುಕ್ಷೇತ್ರ ಮಹಾಸಂಗ್ರಾಮಕ್ಕೆ ಬೀಜವಾಯ್ತು ಎಂಬು ಪುರಾಣ ಪ್ರತಿತಿ.
ಮೊನ್ನೆ, ಪೆಭ್ರವರಿ ೭ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದರು. ಆ ಸಂದರ್ಭದಲ್ಲಿ ಅವರು, ಭಾರತಿಯರ ವಿಶಿಷ್ಟ ಗುರುತಿನ ಚೀಟಿ ಆಧಾರ್ ಎಂಬುದು ೧೯೯೮ರಲ್ಲಿ ಗೃಹಮಂತ್ರಿಯಾಗಿದ್ದ   ಲಾಲ್ ಕೃಷ್ಣ ಅಡ್ವಾಣಿಯವರ ಕನಸಾಗಿತ್ತು. ಅವರು ಇಪ್ಪತ್ತು ವರ್ಷದ ಹಿಂದೆ ಹೇಳಿದ ಆಧಾರ್ ಇವತ್ತು ಇಲ್ಲಿದೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಾಗ ಕಾಂಗ್ರೇಸ್ ನ ವಕ್ತಾರಳಾಗಿರುವ ರೇಣುಕಾ ಚೌದರಿ ಸದನಕ್ಕೆ ಸದನವೇ ಪ್ರತಿಧ್ವನಿಸುವಂತೆ ಗಟ್ಟಿಯಾಗಿ ಅಲೆಯಲೆಯಾಗಿ ನಕ್ಕರು.

ಸಭಾಧ್ಯಕ್ಷರಾಗಿದ್ದ ಉಪಪ್ರಧಾನಿ ವೆಂಕಯ್ಯನಾಯ್ಡುರವರು ತಕ್ಷಣ ’ ’ನಿಮಗೆ ಆರೋಗ್ಯದ ಸಮಸ್ಯೆಯಿದ್ದರೆ ವೈದ್ಯರನ್ನು ಕಾಣಿ’ ಎಂದು ಸಿಡುಕಿದರು. ಆಗ ಮೋದಿಯವರು ’ರೇಣುಕಾಜಿಯವರನ್ನು ತಡೆಯಬೇಡಿ ಸಭಾಧ್ಯಕ್ಷರೆ. ಬಹಳ ದಿನಗಳ ನಂತರ ರಾಮಾಯಣ ಧಾರಾವಾಹಿಯಲ್ಲಿ ಕೇಳಿದಂತ ನಗುವನ್ನು ಮತ್ತೆ ಕೇಳಿ ಆನಂದವಾಗುತ್ತಿದೆ’ ಎಂದರು. ಮೋದಿಯವರು ಕೊಟ್ಟ ವ್ಯಂಗ್ಯಲೇಪನದ ಹಗುರ ಮಾತುಗಳು ಈಗ ವ್ಯಾಪಕ ಚರ್ಚೆಯಾಗುತ್ತಿದೆ. ಕೆಲವರು ವಾದಿಸುವಂತೆ ಮೋದಿಯವರದ್ದು ತಮಾಶೆಯ ಪ್ರತಿಕ್ರಿಯೆಯೆಂದೇ ಅಂದುಕೊಳ್ಳೋಣ. ಆದ್ರೆ ಮೇಜುಗುದ್ದಿ ಉಡಾಪೆಯಿಂದ ನಕ್ಕ ಸಂಸತ್ ಸದಸ್ಯರ ನಡವಳಿಕೆಯ ಬಗ್ಗೆ ಯಾಕೆ ಯಾರೂ ಮಾತಾಡುತ್ತಿಲ್ಲ? ಬಹುತೇಕ ಇಡೀ ಸದನ ಹಾಸ್ಯಗೋಷ್ಠಿಯಂತಿತ್ತು.  ಹೆಣ್ಣಿನ ಘನತೆಯ ಬದುಕಿನ ಬಗ್ಗೆ ಮಾತಾಡುವ ಪಕ್ಷ ಅವಳ ಮನೋಸ್ಥೆರ್ಯವನ್ನು ಕುಗ್ಗಿಸುವ ರೀತಿಯಲ್ಲಿ ಅಂದು ವರ್ತಿಸಿತ್ತು. ಇದರ ಬಗ್ಗೆ ಆಕ್ಷೇಪ ಯಾಕಿಲ್ಲ?

ರೇಣುಕಾ ಚೌದರಿ ಹಾಗೆ ಗಹಗಹಿಸಿ ನಕ್ಕಿದ್ದು ಸದನದ ಗೌರವಕ್ಕೆ ತಕ್ಕುದಾಗಿರಲಿಲ್ಲ, ನಿಜ.  ಅದನ್ನೇ ಸಭಾಧ್ಯಕ್ಷರು ಸೌಮ್ಯ ರೀತಿಯಲ್ಲಿ ಅಕ್ಷೇಪಿಸಬಹುದಿತ್ತು. ಅವರ ಮಾತಿನ ಧಾಟಿ ಚೌದರಿಯವರ ಮಾನಸಿಕ ಆರೋಗ್ಯವನ್ನೇ ಪ್ರಶ್ನಿಸುವಂತಿತ್ತು. ಅವರ ಪ್ರತಿಕ್ರಿಯೆ ಸಭಾಧ್ಯಕ್ಷರ ಸ್ಥಾನಘನತೆಗೆ ಹೊಂದುವಂತದ್ದಾಗಿರಲಿಲ್ಲ. ಎಲ್ಲರನ್ನೂ ಸಮತೂಗಿಸಿಕೊಂಡು ಹೋಗಬೇಕಾದ ಸ್ಥಾನದಲ್ಲಿದ್ದ ವ್ಯಕ್ತಿ ಆಡುವ ಮಾತಾಗಿರಲಿಲ್ಲ ಅದು?  ಅದರ ಬಗ್ಗೆ ಚರ್ಚೆಯಾಗಬೇಕಿತ್ತು, ಅದಾಗಲಿಲ್ಲ.
 ಅಂದು ಸಂಸತ್ ಅವಮಾನಿಸಿದ್ದು ಸುದೀರ್ಘ ಮೂವತ್ತನಾಲ್ಕು ವರ್ಷ ರಾಜಕೀಯ ಅನುಭವವುಳ್ಳ ಪ್ರತಿಪಕ್ಷದ ಒಬ್ಬ ಮಹಿಳಾರಾಜಕಾರಣಿಯನ್ನು, ಇಂತಹ ಅನುಭವಿಯ ಸ್ಪೋಟಗೊಂಡ ನಗುವಿಗೆ ಕಾರಣವೇನಿರಬಹುದು ಎಂದು ತಿಳಿದುಕೊಳ್ಳುವ ವ್ಯವಧಾನ ಅಲ್ಲಿರುವ ಒಬ್ಬರ ಮನಸಿಗೂ ಬರಲಿಲ್ಲ ಯಾಕೆ?

ರೇಣುಕಾ ಚೌದರಿ.

ಮಹಿಳೆಯ ಹೆಸರು ನನ್ನ ನೆನಪಿನ ಕೋಶದಲ್ಲಿ ದಾಖಲಾದದ್ದು ಹಲವಾರು ವರ್ಷಗಳ ಹಿಂದೆ. ಬಹುಶಃ ಅದು ನನ್ನ ಕಾಲೇಜು ದಿನಗಳು. ಪರಿಸರ ಮತ್ತು ಕಥೆ ಕಾದಂಬರಿಗಳ ಮೂಲಕ ಪುರುಷ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುತ್ತಿದ್ದ ಕಾಲ. ಆಗ ಆಂದ್ರಪ್ರದೇಶದ ರೇಣುಕಾ ಚೌದರಿಯೆಂಬ ಮಹಿಳೆ ನಮಗೆ ಗಂಡಸರ ಅಗತ್ಯ ಇಲ್ಲ..... ದೇಶದಾದ್ಯಂತ ವೀರ್ಯ ಬ್ಯಾಂಕ್ ಗಳನ್ನು ಸ್ಥಾಪಿಸಬೇಕು”. ಎಂಬ ಹೇಳಿಕೆ ನೀಡಿಬಿಟ್ಟರು. ಸಂದರ್ಭ ನೆನಪಿಲ್ಲ.

೨೦೦೯ರಲ್ಲಿ ಮಂಗಳೂರಿನ ಪಬ್ ದಾಳಿಗೆ ಸಂಬಂಧಪಟ್ಟಂತೆ ಅವರು ’ಮಂಗಳೂರು ತಾಲಿಬಾನ್ ಗೊಳ್ಳುತ್ತಿದೆ. ಎಂಬ ಹೇಳಿಕೆ ನೀಡಿದಾಗ ಮಂಗಳೂರು ಮೇಯರ್ ಆಕೆಗೆ ಶೋಕಾಸ್ ನೋಟೀಸ್ ಜಾರಿ ಮಾಡಿದ್ದರು. ಆಗ ಅವರು ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಖಾತೆಯ ರಾಜ್ಯಸಚಿವರಾಗಿದ್ದರು.ಪಬ್ ಧಾಳಿಗೆ ಸಂಬಂಧಪತ್ತಂತೆ ರಾಷ್ಟ್ರೀಯ ಮಹಿಳಾ ಆಯೋಗದ ವರದಿ ತಮಗೆ ತೃಪ್ತಿ ತಂದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದಾಗನನ್ನ ವರದಿಯ ಬಗ್ಗೆ ಅಸಮಧಾನ ತೋರಲು ಈಕೆ ಯಾರು?’ ಎಂದು ಪ್ರಶ್ನಿಸಿದ ರಾಷ್ಟ್ರೀಯ ಆಯೋಗದ ಸದಸ್ಯೆ ನಿರ್ಮಲಾ ವೆಂಕಟೇಶರಿಗೆ ಶೋಕಾಶ್ ನೋಟಿಸ್ ಜಾರಿ ಮಾಡಿದರು. ಮಾತ್ರವಲ್ಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಕಿರಣ್ ಚಡ್ಡಾರನ್ನು ಮಂಗಳೂರಿಗೆ ಕಳುಹಿಸಿ ಪ್ರತ್ಯೇಕ ವರದಿ ತರಿಸಿಕೊಂಡರು. ’ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಪಬ್ ಪರ ಚಳುವಳಿ ನಡೆಸಬೇಕಾದೀತುಎಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.

 ಕನ್ನಡದ ಹಿರಿಯ ಪತ್ರಕರ್ತರೊಬ್ಬರೊಬ್ಬರು ರೇಣುಕಾ ಬಗ್ಗೆ ಒಂದಷ್ಟು ಮಾಹಿತಿ ನೀಡಿದ್ದರು.; ರೇಣುಕಾ ಸಕ್ರೀಯ ರಾಜಕಾರಣಕ್ಕೆ ಬರುವ ಮೊದಲು ಆತ್ಮರಕ್ಷಣೆಗಾಗಿ ತಮ್ಮ ಬಳಿ ಸದಾ ಪಿಸ್ತೂಲ್ ಇಟ್ಟುಕೊಂಡಿರುತ್ತಿದ್ದರಂತೆ. ಅವರ ದಾಢಸಿತನವನ್ನು ಮೆಚ್ಚಿಯೇ ತೆಲುಗು ದೇಶಂನ ಸಂಸ್ಥಾಪಕ ಎನ್ ಟಿ ರಾಮರಾವ್ ತಮ್ಮ ಪಕ್ಷಕ್ಕೆ ಅವರನ್ನು ಬರಮಾಡಿಕೊಂಡರಂತೆ.

ರೇಣುಕಾ ೧೯೫೪ರ ಅಗಸ್ಟ್೧೩ರಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಹುಟ್ಟಿದರು. ತಮ್ಮ ೩೦ನೇ ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿದರು. ಈಗ ಅವರಿಗೆ ೬೪ ವರ್ಷ. ಅಂದರೆ ಅವರಿಗೆ ೩೪ ವರ್ಷಗಳ ಸಕ್ರಿಯ ರಾಜಕೀಯ ಅನುಭವವಿದೆ. ಅನುಭವ ಎಂತವರನ್ನೂ ಮೆತ್ತಗಾಗಿಸುತ್ತದೆ. ಆದರೆ ರೇಣುಕಾಳ ವಿಚಾರದಲ್ಲಿ ಅದು ಇನ್ನಷ್ಟು ಪ್ರಖರಗೊಂಡಿದೆ.

ಕೆಲವು ವರ್ಷಗಳ ಹಿಂದೆ ಆಕೆ ಕೊಟ್ಟ ಹೇಳಿಕೆಯನ್ನೇ ನೋಡಿ, ’ಮಹಿಳೆಯರೇ ನಿಮ್ಮ ಗಂಡಂದಿರನ್ನು ನಂಬಬೇಡಿ, ಸದಾ ನಿಮ್ಮ ಬಳಿ ಕಾಂಡಮ್ ಗಳನ್ನು ಇಟ್ಟುಕೊಂಡಿರಿಈಕೆಯನ್ನು ವಿರೋಧಿಸಲು ಪುರುಷ ಪ್ರಧಾನ ಸಮಾಜಕ್ಕೆ ಇಷ್ಟು ಸಾಕಲ್ಲವೇ?

ಆಕೆ ಕರ್ನಾಟಕಕ್ಕೆ ಇನ್ನೂ ಹತ್ತಿರದವರು. ಅವರು ಇಂಡಸ್ಟ್ರಿಯಲ್ ಸೈಕಾಲಾಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದದ್ದು ಬೆಂಗಳೂರು ವಿಶ್ವವಿದ್ಯಾಲಯದಿಂದ. ೧೯೮೪ರಲ್ಲಿ ತೆಲುಗುದೇಶಂ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದರೂ ೧೯೯೮ರಲ್ಲಿ ಪಕ್ಷ ತೊರೆದು ಕಾಂಗ್ರೇಸ್ ಸೇರಿದರು. ಮೂರು ಸಲ ರಾಜ್ಯಸಭಾ ಸದಸ್ಯರಾಗಿದ್ದರು. ಕುಪ್ಪಂ ಲೋಕಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ದೇವೇಗೌಡರ ಕ್ಯಾಬಿನೇಟ್ ನಲ್ಲಿ[೧೯೯೭-೯೮] ಸಚಿವೆಯೂ ಆಗಿದ್ದರು. ಪ್ರಸ್ತುತ ಅವರು ಕಾಂಗ್ರೆಸ್ ಪಕ್ಷದ ವಕ್ತಾರರಾಗಿದ್ದಾರೆ.

ಹೌದು ಆಕೆ ಪ್ರಖರ ಸ್ತ್ರೀವಾದಿ. ಮಹಿಳಾಪರವಾದ ನಿಲುವುಗಳನ್ನು ತೆಗೆದುಕೊಳ್ಳುವಾಗ ಆಕೆ ಕೇವಲ ಕಾಂಗ್ರ್ಏಸ್ ಪಕ್ಷದ ವಕ್ತಾರಳಾಗುವುದಿಲ್ಲ ಸಮಸ್ತ ಮಹಿಳಾ ಧ್ವನಿಯಾಗುತ್ತಾಳೆ. ’ನಮ್ಮವಳುಅನ್ನಿಸಿಕೊಂಡುಬಿಡುತ್ತಾಳೆ. ಅದು ಅವಳ ಹೆಚ್ಚುಗಾರಿಕೆ. ಮಹಿಳೆಯರ ಹಕ್ಕುಗಳಿಗೆ ಚ್ಯುತಿ ಬಂದಾಗಲೆಲ್ಲ ಅವಳು ಸಿಡಿದೇಳುತ್ತಾಳೆ. ಹಾಗಾಗಿ ಆಕೆ ಉಳಿದ ರಾಜಕಾರಣಿಗಳಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುತ್ತಾಳೆ. ಜಯಲಲಿತ, ಉಮಾಭಾರತಿ, ಮಾಯಾವತಿ, ಶೋಭಾ ಕರಂದ್ಲಾಜೆ ರೂಪಿಸಿದ\ ರೂಪಿಸುವ ರಾಜಕೀಯ ತಂತ್ರಗಾರಿಕೆಗಳು ಈಕೆಯಲ್ಲಿಲ್ಲ. ರೇಣುಕಾಳದ್ದು ಏನಿದ್ದರೂ ನೇರಾನೇರ. ಇಲ್ಲವಾದರೆ ಮುತಾಲಿಕನಂತ ಧರ್ಮಾಂಧ ಬ್ರಹ್ಮಚಾರಿಗೆ ಪ್ರೇಮಿಗಳ ದಿನಾಚರಣೆಯಂದು ಗಿಪ್ಟ್ ಕಳುಹಿಸುತ್ತೇನೆಂದು ಹೇಳಲು ಸಾಧ್ಯವಾಗುತ್ತಿತ್ತೆ? ಅದು ರೇಣುಕಾಗೆ ಮಾತ್ರ ಸಾಧ್ಯ.
;
ಮೂರು ದಶಕಗಳ ಆಕೆಯ ರಾಜಕೀಯ ಅನುಭವದ ಹಿನ್ನೆಲೆಯಲ್ಲಿ ನೋಡುವುದಾದರೆ ಮೊನ್ನೆಯ ನಗುವಿನಲ್ಲಿತ್ತು ಪುರುಷಮದವನ್ನು ಪ್ರಶ್ನಿಸುವ ಸೊಕ್ಕು. ಆ ಸೊಕ್ಕನ್ನು ಕೆಲವರಿಗೆ, ಅಲ್ಲ ಹಲವರಿಗೆ ಅರಗಿಸಿಕೊಳ್ಳುವುದು ಕಷ್ಟ.

ರಾಮಾಯಣದ ಪ್ರಸ್ತಾಪ ಮಾಡಿದ ಮೋದಿಯವರನ್ನೂ ಸೇರಿಸಿ ಆ ನಗು ಶೂರ್ಪನಖಿಯದೆಂದು ಯಾರೂ ವಾಚ್ಯವಾಗಿ ಹೇಳಿಲ್ಲ. ಆದರೆ ಅದು ಆಕೆಯನ್ನೇ ಉದ್ದೇಶಿಸಿದ್ದು ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೆ ಅದು ಬಹಿರಂಗವಾಗಿ ಪ್ರಕಟವಾಗಿದ್ದು. ಕೇಂದ್ರ ಗೃಹಸಚಿವಾಲಯದ ರಾಜ್ಯ ಸಚಿವ ಕಿರಣ್ ರಿಜಿಜು ತಮ್ಮ ಪೇಸ್ಬುಕ್ ಪೇಜಿನಲ್ಲಿ ರೇಣುಕಾರನ್ನು ಶೂರ್ಪನಖಿಗೆ ಹೋಲಿಸಿ, ಅದರ ಜೊತೆಗೆ ಶೂರ್ಪನಖಿಯ ವಿಡಿಯೋ ಕ್ಲಿಪ್ಪಿಂಗ್ ಹಾಕಿದಾಗ. ರೇಣುಕಾ ಬಿಡುತ್ತಾರೆಯೇ? ಇದೀಗ  ಕಿರಣ್ ಗೆ ನೋಟೀಸ್ ಜಾರಿ ಮಾಡಿದ್ದು ಮಾತ್ರವಲ್ಲ, ರಾಜ್ಯಸಭೆಯಲ್ಲಿ ಹಕ್ಕುಚ್ಯುತಿ ನಿಲುವಳಿ ಮಂಡಿಸಿದ್ದಾರೆ.

ರೇಣುಕಾಳ ನಗು ಬುಗ್ಗೆ ಒಡೆದ ಕಾರಣ ಯಾವುದೋ ನಮಗೆ ಗೊತ್ತಿಲ್ಲ. ಆಮೇಲೆ ತಾನು ಯಾಕೆ ನಕ್ಕೆ ಎಂದು ಅವರು ಸಮಜಾಯಿಸಿ ಕೊಟ್ಟಿರಬಹುದು. ಆದ್ರೆ ಅದನ್ನು ನೋಡಿದಾಗ ನನ್ನಂತವರಿಗೆ ಹೊಳೆದದ್ದು. ಭಾರತಿಯರಿಗೆ ವಿಶಿಷ್ಟ ಗುರುತಿನ ಚೀಟಿಯನ್ನು ಕೊಡುವ ಯೋಜನೆಯನ್ನು ಮಾಡಿದ್ದು ಕಾಂಗ್ರೇಸ್ ನೇತೃತ್ವದ UPA ಸರಕಾರ. ಕಾಂಗ್ರೇಸ್ ಸರಕಾರ ತರಲೆತ್ನಿಸಿದ್ದ ಆ ಯೋಜನೆಯನ್ನು ಸ್ವತಃ ಮೋದಿಯವರೇ ವಿರೋದಿಸಿದ್ದರು. ನೆರೆಯ ಶತ್ರು ರಾಷ್ಟ್ರ ಇದರ ದುರುಪಯೋಗಪಡಿಸಿಕೊಳ್ಳಬಹುದೆಂಬ ಶಂಕೆ ವ್ಯಕ್ತಪಡಿಸಿದ್ದರು. ಆಗ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು.ಈಗ ಅದನ್ನು ತಮ್ಮ ಸಾಧನೆಯೆಂದು ಬಿಜೆಪಿ ಬಣ್ಣಿಸಿಕೊಂಡರೆ ಮೂರು ದಶಕಗಳ ರಾಜಕೀಯ ಅನುಭವವಿರುವ ರೇಣುಕಾ ಚೌದರಿಗೆ ನಗು ಉಕ್ಕಿಬಾರದೆ ಇನ್ನೇನಾದೀತು!

 ಇದಲ್ಲದೆ. ಕೇವಲ ಐನೂರು ರೂಪಾಯಿ ಕೊಟ್ಟರೆ ಯಾವ ವ್ಯಕ್ತಿಯ ಆಧಾರ ಮಾಹಿತಿಯನ್ನು ಕೂಡಾ ಪಡೆದುಕೊಳ್ಳಬಹುದು ಎಂಬುದನ್ನ್ನು ತಮ್ಮ ತನಿಖಾವರದಿಯ ಮೂಲಕ ಪ್ರಕಟಿಸಿದ ’ದಿ ಟ್ರಿಬ್ಯೂನ್’ ಪತ್ರಿಕೆಯ ವರದಿಗಾರ್ತಿ ರಚನ ಕೈರಾ ಮೇಲೆ ಎಪ್ ಐ ಆರ್ ದಾಖಲಿಸಿದ್ದು ನೆನಪಾಗಿರಲೂಬಹುದು, ಆಧಾರಕಾರ್ಡ್ ಹೊಂದಿಲ್ಲದ ಅದೆಷ್ಟೊ ಜನರಿಗೆ ವೈದಕೀಯ ಸೇವೆ. ಪಡಿತರ, ಪೆನ್ಷನ್, ಬ್ಯಾಂಕ್ ಅಕೌಂಟ್ ಸೇರಿದಂತೆ ಮೂಲಭೂತ ಸೌಲಭ್ಯಗಳು ದೊರಕದೆ ಪಾಡು ಪಡುತ್ತಿರುವುದನ್ನು ನೆನೆದು ನಗು ಬಂದಿರಬಹುದು. ರೇಣುಕಾ ಜೋರಾಗಿ ನಕ್ಕಿದ್ದಾರೆ, ನಮ್ಮಂತವರು ಮನಸ್ಸಿನಲ್ಲಿಯೇ ನಕ್ಕಿದ್ದೇವೆ. ಆ ಸದನದಲ್ಲಿದ್ದ ಉಮಾಭಾರತಿ ಬಾಯಿಗೆ ಕೈಯಿಟ್ಟು ನಗುತ್ತಿದ್ದರು. ನಿರ್ಮಲ ಸೀತರಾಮನ್ ಭಾವನೆಗಳಿಲ್ಲದೆ ಕಲ್ಲಿನಂತೆ ಕೂತಿದ್ದರು. ಭಾರತೀಯ ಜನತಾ ಪಾರ್ಟಿ ತಮ್ಮ ಮಹಿಳಾ ಸದಸ್ಯರಿಗೆ ಭಾವನೆಗಳನ್ನು ಅದುಮಿಟ್ಟುಕೊಂಡು ಬದುಕಿ ಎಂದು ಹೇಳುತ್ತಿದೆಯೇ? ಶೋಭಾ ಕರಂದ್ಲಾಜೆಯನ್ನು ನೋಡಿದರೆ ಹಾಗೆನಿಸುವುದಿಲ್ಲವಲ್ಲಾ!

ಗಂಡುದೃಷ್ಟಿಯಲ್ಲಿ ನೋಡಿದರೆ ರಾವಣನ ತಂಗಿ ಶೂರ್ಪನಖಿ ಎಂಬ ರಾಮಾಯಣದ ಪಾತ್ರವೊಂದು ಏನನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ತೀರಾ ಇತ್ತೀಚೆಗಿನ ಉದಾಹರಣೆಯನ್ನು ಕೊಡುವುದಾದರೆ ’ಪದ್ಮಾವತಿ’ ಸಿನೇಮಾದ ಬಿಡುಗಡೆ ಕುರಿತಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದಲ್ಲಿ ಪದ್ಮಾವತಿ ಬಿಡುಗಡೆಗೆ ಯಾವುದೇ ಅಡ್ಡಿ ಇಲ್ಲ ಎಂದು ಹೇಳಿದಾಗ ಅದೇ ರಾಜ್ಯದ  ಬಿಜೆಪಿ ಮುಖಂಡರಾದ ಸೂರಜ್ ಪಾಲ್ ಮುಖ್ಯಮಂತ್ರಿಯನ್ನೇ ಬೆದರಿಸುವ ಧಾಟಿಯಲ್ಲಿ ಹೇಳುತ್ತಾರೆ; ’ಶೂರ್ಪಮಖಿ ರೀತಿಯ ಕೆಟ್ಟ ಉದ್ದೇಶಗಳನ್ನು ಇಟ್ಟುಕೊಂಡ ಕೆಲವು ಮಹಿಳೆಯರಿದ್ದಾರೆ. ಲಕ್ಷ್ಮಣ ಶೂರ್ಪನಖಿಯ ಮೂಗು ಕತ್ತರಿಸಿ ಆಕೆಗೆ ಬುದ್ದಿ ಕಲಿಸಿದ್ದ. ಮಮತಾ ಬ್ಯಾನರ್ಜಿಯವರು ಇದನ್ನು ಮರೆಯಬಾರದು’

’ಬುದ್ದಿ ಕಲಿಸುವುದು ಅಂದರೇನು?


 ನನ್ನ ಬಾಲ್ಯದಲ್ಲಿ ನಮ್ಮಜ್ಜಿ ಹೇಳುತ್ತಿದ್ದರು; ನೆಲ ಅದುರುವಂತೆ ಹೆಣ್ಮಕ್ಕಳು ನಡೆಯಬಾರದು, ಅವರ ನಗು ಹಿತ್ತಲಿಗೆ ಕೇಳಿಸಬಾರದು. ಗಂಡಸರ ಎದುರು ಕಾಲು ಮೇಲೆ ಕಾಲು ಹಾಕಿ ಕೂತುಕೊಳ್ಳಬಾರದು,ಅವರೆದುರು ತಲೆಯೆತ್ತಿ ನಿಲ್ಲಬಾರದು. ಅವರಿಗೆ ಎದುರುತ್ತರ ಕೊಡಬಾರದು

ಆದರೆ ಅದನ್ನೆಲಾ ನಾವು ದಿಕ್ಕರಿಸಿ ನಿಂತವರೇ. ಈಗ ನಮ್ಮಜ್ಜಿಯ ಸ್ಥಾನದಲ್ಲಿ ಈ ಬಿಜೆಪಿಯ ಮುಖಂಡರು ನಿಂತಿದ್ದಾರೆ!
ಯಾಕೆ ಗಂಡಸರು ಹೆಣ್ಣಿನ ನಗೆಯನ್ನು. ಆಕೆಯ ಸ್ವಾಭಿಮಾನದ ನಿಲುವನ್ನು, ಆಕೆಯ ಜೀವನಪ್ರೀತಿಯನ್ನು ತಮ್ಮ ಅಪಮಾನ, ತಮ್ಮ ಸೋಲು ಎಂದು ಭಾವಿಸುತ್ತಾರೆ. ಅದು ಆಕೆಯ ಬೌದ್ಧಿಕ ಆಸ್ಮಿತೆಯೂ ಯಾಕಾಗಿರಬಾರದು?
ಯಾರಾದರೂ ಜೋರಾಗಿ ನಕ್ಕಾಗ, ಆ ನಗುವನ್ನು ಶೂರ್ಪನಖಿಯ ನಗೆಗೆ ಹೋಲಿಸಿದಾಗ ನನ್ನಲ್ಲಿ ಕೆಲವು ಪ್ರಶ್ನೆಗಳು ಮೂಡುವುದುಂಟು;

ಶೂರ್ಪನಖಿ ಯಾವಾಗ ಹಾಗೆ ನಕ್ಕಳು? ಯಾಕೆ ನಕ್ಕಳು? . ರಾಮಾಯಣವನ್ನು ಓದಿದದವರಿಗೆ ಗೊತ್ತಿದೆ; ಆಕೆ ರಾಮನನ್ನು ನೋಡಿ ಮೋಹಗೊಂಡವಳು. ಹಾಗಾಗಿ ಆಕೆ ಅವನನ್ನು ನೋಡಿ ಲಜ್ಜೆಯಿಂದ ಮುಗುಳ್ನಕ್ಕಿರಬಹುದು. ಕುತಂತ್ರಿ ರಾಮನಿಂದಾಗಿ ಲಕ್ಷ್ಮಣ ಆಕೆಯ ಮೊಲೆ,ಮೂಗುಗಳನ್ನು ಕೊಯ್ದು ವಿರೂಪಗೊಳಿಸುತ್ತಿರುವಾಗ ನೋವಿನಿಂದ ಆರ್ತನಾದ ಮಾಡಿರಬಹುದು. ಆದರೆ ಅಟ್ಟಹಾಸದ ನಗು? ಅಂಥ ನಗು ರಾಮಾಯಣದಲ್ಲಿ ಇದ್ದಂತಿಲ್ಲ. ಅಂದರೆ ಕಾಲಾಂತರದಲ್ಲಿ ಆಕೆಯ ಹೆಸರಿಗೆ ಆ ನಗುವನ್ನು ಆರೋಪಿಸಲಾಯ್ತು; ಹೇರಲಾಯ್ತು. ಯಾರು ಹೇರಿದರು? ಹೆಣ್ಣಿನ ಅಸ್ಮಿತೆಯನ್ನು ಸಹಿಸಲಾಗದ  ’ಪುರುಷ ಅಹಂ’ ಹುಟ್ಟು ಹಾಕಿದ್ದೇ ’ಶೂರ್ಪನಖಿ ನಗು’

ಹಿಡಿಬೆಯೂ ತನ್ನನ್ನು ಮದುವೆಯಾಗು ಎಂದು ಭೀಮನನ್ನು ಕೇಳಿದ್ದಳು; ಆತ ತನ್ನ ಆಪ್ತರ ಒಪ್ಪಿಗೆಯನ್ನು ಪಡೆದು ಅವಳನ್ನು ಮದುವೆಯಾಗಿದ್ದ. ಲೋಕ ಆ ದಾಂಪತ್ಯವನ್ನು ಒಪ್ಪಿಕೊಂಡಿತ್ತು. ಮಾತ್ರವಲ್ಲ .ಗಾಢಪ್ರೀತಿಯನ್ನು ’ಹಿಡಿಂಬೆ ಪ್ರೀತಿ’ ಎಂದೂ ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತದೆ.
ಇಲ್ಲಿ, ಹಿಡಿಂಬೆಯ ಪ್ರೀತಿ ಶ್ರೇಷ್ಟವಾದದ್ದು, ಶೂರ್ಪನಖಿಯ ಪ್ರೀತಿ ಕನಿಷ್ಟಮಟ್ಟದ್ದು ಎಂದು ಹೇಳಲು ಸಾಧ್ಯವೇ? ಪ್ರೀತಿ, ಪ್ರೀತಿ ಮಾತ್ರ. ಆದರೂ ಲೋಕದೃಷ್ಟಿಯಲ್ಲಿ ಶೂರ್ಪನಖಿಯ ಪ್ರೇಮ ಕೀಳು. ಹಿಡಿಂಬೆಯ ಪ್ರೀತಿ ಶ್ರೇಷ್ಟ!. ಒಂದು ರೀತಿಯಲ್ಲಿ ಈ ಎರಡು ಪಾತ್ರಗಳು ಎರಡು ಮಾಹಾಕಾವ್ಯಗಳ ನಡುವಿನ ಕಾಲದ ಅಂತರವನ್ನು ಕೂಡಾ ಹೇಳುತ್ತದೆ. ಎರಡು ಕಾಲಘಟ್ಟಗಳಲ್ಲಿ, ಎರಡು ಕವಿಗಳು ಕೆತ್ತಿದ, ಎರಡು ಸ್ತ್ರೀ ಪಾತ್ರಗಳು ಆ ಕಾಲದ ಸಮಾಜಿಕ ಮೌಲ್ಯಗಳನ್ನು ಕೂಡಾ ಹೇಳುತ್ತದೆ.

ಇಂದು ಈ ಕಾಲಘಟ್ಟದಲ್ಲಿ ನಿಂತು ಆ ಕಾಲದ ಹೆಣ್ಣುಗಳನ್ನು ಇಲ್ಲಿನ ಸ್ತ್ರೀಯರಿಗೆ ಹೋಲಿಸುವುದು ಎಷ್ಟು ಸರಿ?
ಈ ಲೇಖನವನ್ನು ಬರೆದು. ಈ ಹಿಂದೆಯೇ ನಿಗದಿಪಡಿಸಿದಂತೆ ಶೂರ್ಪನಖಿಯ ತವರುಭೂಮಿಯಾದ ಶ್ರೀಲಂಕಾಕ್ಕೆ ಹೋಗುತ್ತಿದ್ದೇನೆ. ಅಲ್ಲಿ ಎಲ್ಲಿಯಾದರೂ ಪುರಾಣ ಪ್ರತಿಮೆಯಾದ ದಿಟ್ಟ, ಸ್ವತಂತ್ರ ವ್ಯಕ್ತಿತ್ವದ ಸ್ವಾಭಿಮಾನಿ ಶೂರ್ಪನಖಿ ಮುಖಾಮುಖಿಯಾಗುತ್ತಾಳೋ ಅಂತ ಹುಡುಕಾಡುತ್ತೇನೆ. ಅವಳೇನಾದರೂ ಸಿಕ್ಕಿದರೆ ಅವಳನ್ನೇ ಕೇಳುತ್ತೇನೆ ’ಶೂರ್ಪನಖಿ ನಗು ಎಂದರೇನು?’