Sunday, March 14, 2010

ಸಹಸ್ರಾರು ಮಹಿಳೆಯರ ಸ್ಫೂರ್ತಿ ತುಳುನಾಡ ’ಸಿರಿ’


ಸ್ವಾಭಿಮಾನಕ್ಕೆ, ಛಲಕ್ಕೆ, ದಿಟ್ಟತನಕ್ಕೆ, ಪ್ರತಿಭಟನೆಗೆ ಒಳಗೊಳಗಿನ ಗಟ್ಟಿತನಕ್ಕೆ ಮಹಿಳೆಯರು ಯಾರನ್ನು ಮಾದರಿಗಳನ್ನಾಗಿ ತೆಗೆದುಕೊಳ್ಳಬಹುದು? ಇತಿಹಾಸ ಮತ್ತು ವರ್ತಮಾನದಲ್ಲಿ ಅವರವರ ಭಾವಕ್ಕೆ ತಕ್ಕಂತೆ ಅನೇಕ ಹೆಸರುಗಳು ಕಣ್ಮುಂದೆ ಸುಳಿದಾಡಬಹುದು. ಆದರೆ ಪುರಾಣಕ್ಕೆ ಹೊರಳಿದರೆ ನೆನಪಾಗುವ ಹೆಸರು ಎರಡೇ; ಅಂಬೆ ಮತ್ತು ದ್ರೌಪಧಿ.

ಆದರೆ ದ್ರೌಪಧಿಯನ್ನೂ ಮೀರಿಸುವ ಹೆಣ್ಣೊಬ್ಬಳು ತುಳುನಾಡಿನಲ್ಲಿದ್ದಳು. ಅವಳೇ ಸಿರಿ. ತುಳು ಮಹಾಕಾವ್ಯ ’ಸಿರಿ ಪಾಡ್ದನ’ದ ಕೇಂದ್ರ ಪಾತ್ರ ಅದು. ಲೋಕರೂಢಿಗೆ ವಿರುದ್ಧವಾಗಿ ಬದುಕಿದವಳು. ಚೌಕಟ್ಟುಗಳನ್ನು ಮೀರಲೆತ್ನಿಸಿದವಳು. ಪ್ರತಿಭಟನೆಯ ಅಗ್ನಿಕುಂಡದಂತಿದ್ದವಳು ಸಿರಿ.

’ಸಿರಿ’ ೪ ತಲೆಮಾರುಗಳ ಕಥೆಯನ್ನು ಹೇಳುತ್ತದೆ. ಅಂದರೆ ಸಿರಿ, ಅವಳ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿಮಕ್ಕಳ ಕಥೆ. ಸಿರಿ ಪಾಡ್ದನ ೧೫,೬೮೩ ಸಾಲುಗಳ ದೀರ್ಘ ಕಾವ್ಯ. ಹೋಮರನ ’ಇಲಿಯೆಡ್’ ನಲ್ಲಿ ಇದಕ್ಕಿಂತ ಕೇವಲ ೫ ಸಾಲು ಹೆಚ್ಚಿದೆಯಷ್ಟೆ. ಆದರೆ ಇದು ಮುಖ್ಯವಾಗಿ ಸಿರಿಯ ಕಥೆ.

ಸಿರಿ, ಕೇವಲ ತುಳು ಜಾನಪದದಲ್ಲಿ ಚಿತ್ರಿತವಾದ ಕಾಲ್ಪನಿಕ ಮಹಿಳೆಯಲ್ಲ. ಆಕೆ ಇಂದಿಗೂ ತುಳು ಜನಮಾನಸದಲ್ಲಿ ನೆಲೆನಿಂತಿದ್ದಾಳೆ. ತುಳುನಾಡು ಅಂದರೆ ಇಂದಿನ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳು. ಅಂದರೆ ಅವಿಭಜಿತ ದ.ಕ ಜಿಲ್ಲೆ. ಮತ್ತು ಕೇರಳದ ಕಾಸರಗೋಡು ಜಿಲ್ಲೆ. ತುಳುನಾಡಿನ ಲಕ್ಷಾಂತರ ಮಹಿಳೆಯರು ಸಿರಿಯಲ್ಲಿ ತಮ್ಮನ್ನು ಸಮೀಕರಿಸಿಕೊಂಡು ವರ್ಷದಲ್ಲಿ ಒಂದು ಭಾರಿಯಾದರೂ ಸಿರಿಯಾಗಿ ಪರಕಾಯ ಪ್ರವೇಶ ಪಡೆಯುತ್ತಾರೆ. ಅದಕ್ಕೆ ಅವಕಾಶ ಸಿಗುವುದು ’ಸಿರಿಜಾತ್ರೆ’ಯಲ್ಲಿ. ಪ್ರತಿ ವರ್ಷ ನಂದಳಿಕೆ, ಕವತ್ತಾರು, ನಿಡ್ಗಲ್[ ಬೆಳ್ತಂಗಡಿ]ಗಳಲ್ಲಿ ಹುಣ್ಣಿಮೆಯಂದು ವೈಭವದ ಸಿರಿ ಜಾತ್ರೆ ನಡೆಯುತ್ತದೆ. ಮಾರ್ಚ್ ನಲ್ಲಿ ನಂದಳಿಕೆಯಲ್ಲಿ, ನಂತರ ಕ್ರಮವಾಗಿ ಏಪ್ರಿಲ್,ಮೇ ತಿಂಗಳಿನ ಹುಣ್ಣಿಮೆಗಳಲ್ಲಿ ಕವತ್ತಾರು ಮತ್ತು ನಿಡ್ಗಲ್ ನಲ್ಲಿ ಸಿರಿಜಾತ್ರೆ ನಡೆಯುತ್ತದೆ. ಅದು ಸಂಪೂರ್ಣವಾಗಿ ಮಹಿಳಾ ಜಾತ್ರೆಯೇ. ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಈ ಜಾತ್ರೆ ನಡೆಯುತ್ತದೆ. ಮುಂಬಯಿ, ಕೊಲ್ಲಿ ರಾಷ್ಟ್ರ ಸೇರಿದಂತೆ ವಿದೇಶಗಳಲ್ಲಿರುವ ತುಳುವರು ಮುಖ್ಯವಾಗಿ ಬಂಟ್ಸ್ ಸಮುದಾಯದವರು ಭಯ ಭಕ್ತಿಗಳಿಂದ ಸಿರಿ ಜಾತ್ರೆಯಲ್ಲಿ ಭಾಗವಹಿಸುತ್ತಾರೆ.

ವೈಜ್ನಾನಿಕ ದೃಷ್ಟಿಯಿಂದ ನೋಡಿದರೆ ಈ ಸಿರಿ ಜಾತ್ರೆ ಮಾನಸಿಕ ಚಿಕಿತ್ಸಾ ಕೇಂದ್ರದಂತೆ ಕೆಲಸ ಮಾಡುತ್ತದೆ. ಹತ್ತಾರು ಸಾವಿರ ಮಹಿಳೆಯರ ಮೈಮೇಲೆ ಏಕಕಾಲದಲ್ಲಿ ಸಿರಿ ಅವಾಹನೆಗೊಳ್ಳುತ್ತಾಳೆ. ಸಂಸಾರದ ಜಂಜಡಗಳಿಂದ ನೊಂದು ಬೆಂದು ಹೋದ ಅಸಂಖ್ಯ ಮಹಿಳೆಯರು ಆ ರಾತ್ರಿಯ ಮಟ್ಟಿಗೆ ’ಸಿರಿ’ಯಾಗಿ ಪರಿವರ್ತನೆಗೊಳ್ಳುತ್ತಾರೆ. ಅಲ್ಲೊಂದು ’ಮಧ್ಯಂತರ ಜಗತ್ತು’ ಸೃಷ್ಠಿಯಾಗುತ್ತದೆ. ಅಲ್ಲಿ ದುಃಖಿತ ಮಹಿಳೆಯರು ತಮ್ಮ ಬದುಕನ್ನು ರೀಚಾರ್ಜ್ ಮಾಡಿಕೊಳ್ಳುತ್ತಾರೆ. ವರ್ತಮಾನದಲ್ಲಿ, ಇಂದಿಗೂ ಕೂಡಾ ಸಿರಿಯನ್ನು ಸಾವಿರಾರು ಮಹಿಳೆಯರು ’ಈಕೆ ನಮ್ಮವಳು’ ಎಂದು ಒಪ್ಪಿಕೊಳ್ಳಬೇಕಾದರೆ ಆಕೆಯಲ್ಲೇನೋ ವಿಶೇಷ ಇದ್ದಿರಬೇಕಲ್ಲವೇ? ಏನಾಗಿರಬಹುದು ಅದು? ಅದಕ್ಕಾಗಿ ನಾವವಳ ಜೇವನಗಾಥೆಯನ್ನು ತಿಳಿದುಕೊಳ್ಳಬೇಕು.

ಬಹಳ ಹಿಂದೆ ತುಳುನಾಡಿನಲ್ಲಿ ’ಬೆರ್ಮ ಆಳ್ವ’ನೆಂಬ ಶ್ರೀಮಂತನಿದ್ದನು. ಅವನಿಗೆ ಮಕ್ಕಳಿರಲಿಲ್ಲ. ಆ ಚಿಂತೆ ಅವನನ್ನು ಕಾಡುತ್ತಿತ್ತು. ಅವನ ಚಿಂತೆಯ ಕಾರಣವನ್ನು ತಿಳಿದ ಆದಿ ಅಲ್ಲಡೆ ಕುಲಬ್ರಹ್ಮ ದೇವರು ’ನನ್ನ ಮೂಲ ಸ್ಥಾನ ಹಾಳು ಬಿದ್ದಿದೆ ಅದನ್ನು ಜೀರ್ಣೋದ್ದಾರ ಮಾಡಿಸು’ಎಂದು ಅಪ್ಪಣೆ ಕೊಡಿಸುತ್ತಾನೆ. ಹಾಗೆ ಬೆರ್ಮಾಳನು ದೈವ ಸ್ಥಾನ ಕಟ್ಟಿಸಿ,ನಿತ್ಯ ಪೂಜೆಗೆ ಏರ್ಪಾಟು ಮಾಡಿಸುತ್ತಾನೆ. ಸಂತೃಪ್ತನಾದ ದೇವರು ಬ್ರಾಹ್ಮಣ ವೇಷದಿಂದ ಬಂದು ಸಿಂಗಾರದ ಹಾಳೆಯ ಮೇಲೆ ಗಂಧದ ಉಂಡೆಯನ್ನಿಟ್ಟು ಪ್ರಸಾಧ ಕೊಡುತ್ತಾನೆ. ಅದನ್ನು ಕೈಯಲ್ಲಿ ಹಿಡಿದು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತಿರುವಾಗ ಅದೊರೊಳಗಿನಿಂದ ಮಗು ಅಳುವುದು ಕೇಳುತ್ತದೆ. ಹೆಣ್ಣು ಮಗು. ಅದನ್ನು ತನ್ನ ಸತ್ಯನಾಪುರದ ಅರಮನೆಗೆ ತಂದು ಬೆರ್ಮಾಅಳ್ವ ಅಕ್ಕರೆಯಿಂದ ಸಾಕುತ್ತಾನೆ. ಆಕೆ ಪ್ರಾಯಪ್ರಬುದ್ಧಳಾದಾಗ ಬಸರೂರಿನ-ಕುಂದಾಪುರ ಸಮೀಪದ- ಕಾಂತುಪೂಂಜನಿಗೆ ಮದುವೆ ಮಾಡಿಕೊಡುತ್ತಾನೆ. ಆಕೆಯ ಹುಟ್ಟು ಹೇಗೆ ನಿಗೂಢವಾಗಿತ್ತೋ ಆಕೆಯ ಮದುವೆ ಕೂಡಾ ಲೋಕಾರೂಢಿಗೆ ವಿರುದ್ಧವಾಗಿತ್ತು. ತನ್ನನ್ನು ಮದುವೆಯಾಗುತ್ತೇನೆಂದು ಅಸೆಪಟ್ಟ ಕಾಂತು ಪೂಂಜನಿಗೆ ಅವಳು ಷರತ್ತನ್ನು ವಿಧಿಸುತ್ತಾಳೆ.ತನ್ನ ತಂದೆಗೆ ಯಾರೂ ಆಶ್ರಯಧಾತರಿಲ್ಲ, ಹಾಗಾಗಿ ತಾನು ಸತ್ಯನಾಪುರದ ಅರಮನೆಯಲ್ಲೇ ಇರುತ್ತೇನೆ, ಇದಕ್ಕೆ ಒಪ್ಪಿದರೆ ಮದುವೆಯಾಗುವುದಾಗಿ ಹೇಳುತ್ತಾಳೆ. ಷರತ್ತು ವಿಧಿಸಿ ಮದುವೆಯಾದ ದಿಟ್ಟ ಹೆಣ್ಣುಮಗಳು ಈಕೆ.

ಸಿರಿ ಗರ್ಭವತಿಯಾಗುತ್ತಾಳೆ. ಸೀಮಂತ ತನ್ನ ಮನೆಯಲ್ಲೇ ಆಗಬೇಕೆಂದು ಕಾಂತುಪೂಂಜ ಅವಳನ್ನು ಬಸ್ರೂರಿಗೆ ಕರೆದುಕೊಂಡು ಬರುತ್ತಾನೆ. ಸೀಮಂತದ ತಯಾರಿ ನಡೆಯುತ್ತದೆ. ಕಾಂತುಪೂಂಜ ಸೀಮಂತಕ್ಕೆ ಸೀರೆ ತರುವಾಗ ದಾರಿಯಲ್ಲಿ ಸೂಳೆ ಮನೆಗೆ ಭೇಟಿ ಕೊಡುತ್ತಾನೆ. ಆಕೆ ಆ ಸೀರೆಯನ್ನು ಉಟ್ಟು ನೋಡುತ್ತಾಳೆ. ಮಾರನೆಯ ದಿನ ಸೀಮಂತದಲ್ಲಿ ಸೀರೆ ಭಾಗಿನ ಕೊಡುವಾಗ ಸಿರಿ, ’ಸೂಳೆ ಉಟ್ಟ ಸೀರೆ ನಾನು ತಗೊಳ್ಳೊದಿಲ್ಲ’ ಎಂದು ಅದನ್ನು ತುಂಬಿದ ಸಭೆಯಲ್ಲಿ ತಿರಸ್ಕರಿಸುತ್ತಾಳೆ. ಕಾಂತು ಪೂಜಾರಿಗೆ ಅವಮಾನವಾಗುತ್ತದೆ.

ಸಿರಿ ಸತ್ಯನಾಪುರದ ಅರಮನೆಗೆ ಹಿಂದಿರುಗಿ ಬರುತ್ತಾಳೆ. ಆಲ್ಲಿ ಗಂಡುಮಗುವಿಗೆ ಜನ್ಮ ಕೊಡುತ್ತಾಳೆ. ಈ ಸುದ್ದಿ ತಿಳಿದರೂ ಮಗುವನ್ನು ನೋಡಲು ಕಾಂತುಪೂಂಜ ಬರುವುದಿಲ್ಲ. ಮಗು ಹುಟ್ಟಿದ ಜಾತಕದ ಪ್ರಕಾರ ”ಅಜ್ಜ ಮಗುವನ್ನು ನೋಡಿದರೆ ಆತನಿಗೆ ಮರಣ ಸಂಭವಿಸುತ್ತದೆ” ಎಂದು ಜ್ಯೋತಿಷಿಗಳು ಭವಿಷ್ಯ ನುಡಿಯುತ್ತಾರೆ. ಒಂದು ದಿನ ಮನೆಯಲ್ಲಿ ಯಾರೂ ಇರುವುದಿಲ್ಲ. ಮಗು ಜೋರಾಗಿ ಅಳುತ್ತಿರುತ್ತದೆ. ಅಜ್ಜ ಬೆರ್ಮಾ ಆಳ್ವ ಅದನ್ನು ಎತ್ತಿಕೊಳ್ಳುತ್ತಾನೆ. ಪರಿಣಾಮವಾಗಿ ಖಾಯಿಲೆ ಬೀಳುತ್ತಾನೆ; ಸತ್ತು ಹೋಗುತ್ತಾನೆ. ಕಾಂತು ಪೂಂಜನಿಗೆ ಸುದ್ದಿ ಮುಟ್ಟಿಸುತ್ತಾರೆ. ಆದರೆ ಕಾಂತುಪೂಂಜ ಬರುವುದಿಲ್ಲ. ಸಿರಿಯೇ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ಪೂರೈಸುತ್ತಾಳೆ. ಸತ್ಯನಾಪುರದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದ ಶಂಕರಾಳ್ವನು ಅವಳ ವಿರುದ್ಧ ತಿರುಗಿಬೀಳುತ್ತಾನೆ. ತನಗೆ ಅರಮನೆಯಲ್ಲಿ ಪಾಲು ಬೇಕೆಂದು ತಗಾದೆ ತೆಗೆಯುತ್ತಾನೆ. ಅವನಿಗೆ ಕಾಂತು ಪೂಂಜ ಕುಮ್ಮಕ್ಕು ಕೊಡುತ್ತಾನೆ. ಊರ ಹತ್ತು ಸಮಸ್ತರಿಗೆ ಶಂಕರಾಳ್ವ ದೂರು ಕೊಡುತ್ತಾನೆ. ಅವರನ್ನು ದುಡ್ಡಿನಿಂದ ಕೊಂಡುಕೊಳ್ಳುತ್ತಾನೆ.

ನೋಡಿ, ಒಬ್ಬ ಹೆಣ್ಣು ಮಗಳನ್ನು ಎಲ್ಲಾ ರೀತಿಯಿಂದಲೂ ಹಣೆಯುವ ಪ್ರಯತ್ನ ನಡೆಯುತ್ತದೆ. ಅವಳು ತನ್ನ ಸಹಾಯಕ್ಕೆ ಬರುವಂತೆ ಮತ್ತೊಮ್ಮೆ ಗಂಡನಿಗೆ ಹೇಳಿಕಳುಹಿಸುತ್ತಾಳೆ. ಅವನು ಮನೆಯಲ್ಲಿದ್ದುಕೊಂಡೇ, ಇಲ್ಲವೆಂದು ಹೇಳಿಕಳುಹಿಸುತ್ತಾನೆ. ಆಕೆ ತಡಮಾಡುವುದಿಲ್ಲ. ಪಂಚಾಯ್ತಿ ನಡೆಯುವ ಸ್ಥಳಕ್ಕೆ ಬಂದು ’ನಿಮ್ಮ ಹತ್ತು ಸಮಸ್ತರ ಕೂಟ ಹಾಳಾಗಲಿ, ಸತ್ಯನಾಪುರ ಅರಮನೆ ಉರಿದು ಹೋಗಲಿ’ ಎಂದು ಶಾಪಕೊಟ್ಟು, ತನ್ನ ಆಪ್ತ ಸೇವಕಿ ದಾರು ಮತ್ತು ಮಗುವಿನೊಂದಿಗೆ ಬಸ್ರೂರಿನ ಗಂಡನ ಮನೆಗೆ ಬಂದು ತನಗೆ ವಿಛ್ಚೇಧನ ಬೇಕು ಎಂದು ಕೇಳುತ್ತಾಳೆ. ಆತ ’ಹೊತ್ತು ಮುಳುಗುವುದರೊಳಗಾಗಿ ಮಾಬುಕಳ ಹೊಳೆ ದಾಟಿದರೆ ನಿನಗೆ ಅದೇ ವಿಛ್ಚೇಧನ, ಸಾದ್ಯವಾಗದಿದ್ದರೆ ಎಳೆದು ತರುತ್ತೇನೆ’ ಎಂದು ಬೆದರಿಸುತ್ತಾನೆ. ತುಂಬ ದೂರದ ಹಾದಿಯನ್ನು ಆಕೆ ಕಷ್ಟಪಟ್ಟು ಕ್ರಮಿಸುತ್ತಾಳೆ. ಮುಂದೆ ಆಕೆಗೆ ಬಿಳಿ ದೇಸಿಂಗರಾಯ ಮತ್ತು ಕರಿ ಕಾಮುರಾಯ ಎಂಬ ಅಣ್ಣತಮ್ಮಂದಿರು ಸಿಗುತ್ತಾರೆ. ಅವರು ಆಕೆಯನ್ನು ಸ್ವಂತ ತಂಗಿಯಂತೆ ನೋಡಿಕೊಳ್ಳುತ್ತಾರೆ. ಆದರೆ ಮಗು ಕುಮಾರ ಅಕಾಲ ಮೃತ್ಯುವಪ್ಪುತ್ತಾನೆ. ಮುಂದೆ ಈಕೆಯ ಸೌಂದರ್ಯವನ್ನು ಕೊಡ್ಸರಾಳನೆಂಬವನು ಕಂಡು ಮರುಳಾಗಿ ಮದುವೆ ಮಾಡಿಕೊಳ್ಳುವ ಬಯಕೆ ವ್ಯಕ್ತ ಪಡಿಸಿದನು. ಅಣ್ಣಂದಿರು ಅವಳಿಗೆ ಮದುವೆ ಮಾಡಿಸಿದರು. ಆಕೆ ಹೆಣ್ಣು ಮಗುವನ್ನು ಹೆತ್ತು, ಅದನ್ನು ಕೊಡ್ಸರಾಳ್ವನ ಮೊದಲ ಹೆಂಡತಿಯ ಕೈಯಲ್ಲಿಟ್ಟು ಸತ್ತು ಹೋಗುತ್ತಾಳೆ. ಆ ಮಗುವಿನ ಹೆಸರು ಸೊನ್ನೆ. ಸೊನ್ನೆಯ ಮಕ್ಕಳೇ ಅಬ್ಬಗ-ದಾರಗೆಯೆಂಬ ಅವಳಿಜವಳಿ ಹೆಣ್ಣುಮಕ್ಕಳು. ಇಂದಿಗೂ ಬಂಟ್ಸ್ ಸಮುದಾಯದವರು ಇವರಿಬ್ಬರನ್ನು ತಮ್ಮ ಕುಲದೈವಗಳೆಂದು ಪೂಜಿಸುತ್ತಾರೆ.

ಹುಟ್ಟಿನಲ್ಲಿ ನಿಗೂಢತೆಯನ್ನು ಉಳಿಸಿಕೊಂಡ, ಷರತ್ತು ಹಾಕಿ ಮದುವೆಯಾದ, ಕಡೆತನಕ ತನ್ನ ತಂದೆಯ ಹಿತಕಾಯ್ದು ಒಬ್ಬಳೇ ಆತನ ಅಂತ್ಯ ಸಂಸ್ಕಾರ ಮಾಡಿದ, ಆಸ್ತಿ ಹಕ್ಕಿಗಾಗಿ ಪುರುಷರೊಂದಿಗೆ ಹೋರಾಡಿ ಸಿಗದಾದಾಗ ಸತ್ಯನಾಪುರದ ಅರಮನೆ ನಾಶವಾಗಲಿ ಎಂದು ಶಾಪ ಕೊಟ್ಟ, ಗಂಡನ ನೈತಿಕತೆಯನ್ನು ಪ್ರಶ್ನಿಸಿದ, ತಾನಾಗಿ ಗಂಡನಿಗೆ ವಿಛ್ಚೇಧನ ನೀಡಿದ, ಮತ್ತೆ ಮರುಮದುವೆಯಾಗಿ ಮಗು ಪಡೆದ ಸಿರಿ ಅಸಮಾನ್ಯ ಹೆಣ್ಣಾಗಿ ತೋರುತ್ತಾಳೆ. ಇಂದು ನಮಗಿದು ಸಹಜವಾಗಿ ತೋರಬಹುದು. ಆದರೆ ಅಂದಿನ ಪುರುಷಪ್ರಧಾನ ಸಮಾಜ ವ್ಯವಸ್ಥೆಯಲ್ಲಿ ಇದು ಅಸಾಮಾನ್ಯವೇ ಸರಿ. ಅದಕ್ಕಾಗಿಯೇ ನಾನವಳನ್ನು ದ್ರೌಪಧಿಗೆ ಹೋಲಿಸಿದ್ದು. ದ್ರೌಪದಿಗೆ ಪರಾಕ್ರಮಿಗಳಾದ ೫ ಮಂದಿ ಗಂಡಂದಿರು ಸದಾ ಅವಳ ಬೆಂಗಾವಲಿಗಿದ್ದರು. ಎಲ್ಲಕ್ಕಿಂತಲೂ ಮಿಗಿಲಾಗಿ ಅವಳನ್ನು ಸದಾ ತಲೆಕಾಯ್ವ ಶ್ರೀಕೃಷ್ಣನಿದ್ದ. ಆದರೆ ಸಿರಿಗೆ ಯಾರೂ ಇರಲಿಲ್ಲ. ಆದರೂ ಆಕೆ ಅನ್ಯಾಯದ ವಿರುದ್ಧ ಸಿಡಿದು ನಿಂತಳು. ತನ್ನ ಹಕ್ಕುಗಳಿಗಾಗಿ ಏಕಾಂಗಿಯಾಗಿ ಹೋರಾಡಿದಳು. ತನ್ನ ಧೀಶಕ್ತಿಯ ಬಗ್ಗೆ ಆಕೆಗೆ ಅಪಾರ ನಂಬಿಕೆಯಿತ್ತು. ಆ ನಂಬಿಕೆಯಿಂದಲೇ ಆಕೆ ಬದುಕಿದಳು. ಬದುಕಿ ಸಾಧಿಸಿದಳು. ಹಾಗಾಗಿಯೇ ಆಕೆ ಆಧುನಿಕ ಮಹಿಳೆಗೆ ಮಾದರಿ, ಸ್ತ್ರೀವಾದಿಗಳಿಗೆ ಸ್ಫೂರ್ತಿ.

[ ಮಾರ್ಚ್ ೧೪ರ ಕನ್ನಡ ಪ್ರಭ ಪತ್ರಿಕೆಯ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ ]

3 comments:

sunaath said...

ಸುರಗಿ,
ಸಿರಿಯ ಕತೆಯನ್ನು ಓದಿ ಬೆರಗಾದೆ. ಇದ್ದರೆ ಹೀಗಿರಬೇಕು ಛಲವಾದಿ. ಸಿರಿಯ ಜಾತ್ರೆಯಲ್ಲಿ ಹತ್ತಾರು ಸಾವಿರ ಹೆಣ್ಣು ಮಕ್ಕಳು ಅವಳನ್ನು ಆವಾಹಿಸಿಕೊಳ್ಳುತ್ತಾರೆ ಎನ್ನುವದು ಅತಿ ದೊಡ್ಡ ವಿಸ್ಮಯದ ಸಂಗತಿ. ಇದೊಂದು ಮನೋಶಾಸ್ತ್ರದ ಜಾತ್ರೆ ಅನ್ನಬಹುದೇನೋ. ಇಂತಹ ಕತೆಯನ್ನು ಹಾಗು ಸಂಗತಿಯನ್ನು ತಿಳಿಸಿದ ನಿಮಗೆ ಅನೇಕ ವಂದನೆಗಳು.

V.R.BHAT said...

chennaagide, tilidukolluva haagide !

V.R.BHAT said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ