Saturday, March 3, 2012

ವಿಸರ್ಜನೆಯ ಸುಖಕ್ಕೆ ಅಡ್ಡಿಯಾದರೆ ಹೊಡೆತ ಗ್ಯಾರಂಟಿ..!



ಮನುಷ್ಯನಿಗೆ ಅತ್ಯಂತ ಸುಖದ ಕ್ಷಣ ಯಾವುದು? ಬಲ್ಲವರು ಹೇಳುತ್ತಾರೆ, ಅದು ವಿಸರ್ಜನೆಯ ಸುಖ. ಅದಕ್ಕವರು ಉದಾಹರಣೆಯಾಗಿ ಕೊಡುವುದು ಮಲಬದ್ಧತೆಯನ್ನು. ಮಲಬದ್ದತೆಯ ಸಮಸ್ಯೆಯನ್ನು ಅನುಭವಿಸುತ್ತಿರುವವರಿಗೆ ಗೊತ್ತಿದೆ ಅದರ ಕಷ್ಟ. ಬೆಳಿಗ್ಗೆ ಎದ್ದೊಡನೆ ಸಲೀಸಾಗಿ ವಿಸರ್ಜನೆಯ ಕ್ರಿಯೆಗಳೆಲ್ಲಾ ನಡೆದರೆ ಆ ದಿನವೆಲ್ಲಾ ಲವಲವಿಕೆಯಿಂದ ಕೂಡಿರುತ್ತದೆ. ಒಂದು ವೇಳೆ ಎಡವಟ್ಟಾಯ್ತೋ ಒಂಥಾರ ಅಸಹನೆ..ಚಡಪಡಿಕೆ..ಆಲಸ್ಯ.
ಮೂತ್ರ ವಿಸರ್ಜನೆ ಕೂಡಾ ಹಾಗೆಯೇ. ಅದನ್ನು ಬಹಳ ಹೊತ್ತು ತಡೆ ಹಿಡಿದುಕೊಂಡರೆ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಯಾವುದರ ಮೇಲೂ ಏಕಾಗ್ರತೆ ಸಾಧ್ಯವಾಗುವುದಿಲ್ಲ. ಜೋರಾಗಿ ನಗುವ ಹಾಗಿಲ್ಲ. ನಕ್ಕರೆ ನಿಯಂತ್ರಣ ತಪ್ಪಿ ಮೂತ್ರ ಹರಿದು ಬಿಡಬಹುದೆಂಬ ಭಯ!
ಇಷ್ಟೆಲ್ಲಾ ಪೀಠೀಕೆ ಹಾಕಲು ಕಾರಣವಿದೆ. ಮೊನ್ನೆ ಶುಕ್ರವಾರ ಹುಬ್ಬಳಿಯ ಕಾಳಮ್ಮ ಅಗಸಿ ಪ್ರದೇಶದಲ್ಲಿ ಒಂದು ಘಟನೆ ನಡೆಯಿತು. ಇಲ್ಲಿಯ ಕಾಳಮ್ಮ ದೇವಸ್ಥಾನದ ಕಾಂಪೌಂಡ್ ಬಳಿ ರಾಜಸ್ಥಾನ ಮೂಲದ ಮನೋಜ್ ಎಂಬಾತ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಅದನ್ನು ನೋಡಿದ ಮಹಾನಗರಪಾಲಿಕೆ ಸದಸ್ಯ ನಿಂಗಪ್ಪ ಬಡಿಗೇರ್,”ಇದು ಪವಿತ್ರ ಜಾಗ ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು’ ಎಂದು ಬುದ್ಧಿವಾದ ಹೇಳಲೆತ್ನಿಸಿದರು. ತನ್ನ ವಿಸರ್ಜನೆಯ ಸುಖಕ್ಕೆ ಅಡ್ಡಿಯಾದ ಇವನ್ಯಾವ ದೊಣ್ಣೆನಾಯಕ ಎಂದು ಅಂದುಕೊಂಡ ಮನೋಜ್, ಬಡಿಗೇರ್ ವಿರುದ್ಧ ತಿರುಗಿ ಬಿದ್ದ. ಮಾತಿಗೆ ಮಾತು ಬೆಳೆಯಿತು. ಸುತ್ತ ಜನ ಸೇರಿದರು. ವಿಸರ್ಜನೆ ಸುಖದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. [ ಅಲ್ಲವೇ ಮತ್ತೆ, ಸ್ವಲ್ಪ ನಮ್ಮ ಬೆಂಗಳೂರಿನ ಮಾರ್ಕೇಟ್ ಏರಿಯಾದಲ್ಲೊಮ್ಮೇ ಸುತ್ತು ಹಾಕಿ ಬನ್ನಿ.] ಎಲ್ಲರೂ ಸೇರಿ ಬಡಿಗೇರ್ ಅವರಿಗೆ ಬಡಿದರು. ಅವರ ತಲೆ, ಕುತ್ತಿಗೆ ಮತ್ತು ಸೊಂಟಕ್ಕೆ ಏಟುಗಳು ಬಿದ್ದವು. ಕೊನೆಗೆ ಅವರನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರ್ಗೆ ಸೇರಿಸ್ಬೇಕಾಯ್ತು.
ಇದು ಸುಳ್ಳಲ್ಲಾ ಮಾರಾಯ್ರೇ.. ಬೇಕಾದ್ರೆ ಪೆಬ್ರವರಿ ೨೫ ರ ’ವಿಜಯ ಕರ್ನಾಟಕ’ ನೋಡಿ, ಅಲ್ಲಿ ೧೦ನೇ ಪುಟದಲ್ಲಿ ’ಪಾಲಿಕೆ ಸದಸ್ಯನಿಗೆ ಬಡಿದ ಮೂತ್ರವಾದಿಗಳು’ ಎಂಬ ಶೀರ್ಷಿಕೆಯಡಿ ಈ ಸುದ್ದಿ ಪ್ರಕಟವಾಗಿದೆ.
ಮನೋಜ್ ಅಂತವರ ಕಷ್ಟ, ಪಾಪ ಬಡಿಗೇರ್ ಅವರಿಗೆ ಹೇಗೆ ಗೊತ್ತಾಗಬೇಕು.?
’ನೀವು ಈ ವಿಚಾರದಲ್ಲಿ ಕಟ್ಟಿನಿಟ್ಟಾಗಿ ನಡೆದುಕೊಂಡರೆ ನನ್ನಂತಹ ಮುದುಕ ಅದರಲ್ಲೂ ಡಯಾಬಿಟಿಕ್ ಪೇಷಂಟ್ ಏನು ಮಾಡಬೇಕು? ನಮ್ಮನ್ನು ಸ್ವಲ್ಪ ಗಮನದಲ್ಲಿಟ್ಟುಕೊಳ್ಳಿ’ ಎಂದು ದಿ. ಎಚ್. ನರಸಿಂಹಯ್ಯನವರು ವಾಚಕರವಾಣಿಗೆ ಪತ್ರ ಬರೆದಿರುವುದು ನನಗೆ ನೆನಪಿದೆ!
ಈ ಮೂತ್ರ ವಿಸರ್ಜನೆಯ ಪುರಾಣ ಕೇಳುತ್ತಿರುವಾಗ ನಿಮ್ಮ ಚಿತ್ತಭಿತ್ತಿಯಲ್ಲಿ ವಿಧಾನ ಸೌಧದಲ್ಲಿ ಮೂವರು ಸಚಿವರು ಸೆಕ್ಸ್ ವಿಡಿಯೊ ವೀಕ್ಷಿಸುತ್ತಿದ್ದ ದೃಶ್ಯಗಳು ನೆನಪಿಗೆ ಬಂದರೆ ನಾನು ಜವಾಬ್ದಾರಳಲ್ಲ! ಮನೋಜ್ ಗೆ ದೇವಸ್ಥಾನದ ಕಾಂಪೌಂಡ್ ಮೋಟು ಗೋಡೆಯಂತೆ ಕಂಡರೆ ಸಚಿವರಿಗೆ ವಿಧಾನ ಸೌಧ ಇನ್ನೇನೋ ಆಗಿ ಕಾಣಿಸಿರಬಹುದು. ’ಅವರವರ ಭಾವಕ್ಕೆ ಅವರವರ ಭಕುತಿಗೆ’
ನೀವು ರೈಲಿನಲ್ಲಿ ಪಯಣಿಸುವವರಾಗಿದ್ದರೆ ಈ ದೃಶ್ಯವನ್ನು ನೋಡಿಯೇ ಇರುತ್ತೀರಿ. ಬೆಳಿಗ್ಗೆ ಹಳಿಗಳುದ್ದಕ್ಕೂ ಜನರು ಕುಳಿತಿರುತ್ತಾರೆ. ಅವರ ಹಿಂಬದಿಯ ಉಚಿತ ದರ್ಶನ ನಿಮಗಾಗುತ್ತಿರುತ್ತದೆ. ಅವರಿಗೆ ಈ ರೀತಿ ಸಾರ್ವಜನಿಕವಾಗಿ ಬಹಿರ್ದೆಶೆಗೆ ಕುಳಿತುಕೊಳ್ಳಲು ನಾಚಿಕೆ, ಮುಜುಗರಗಳಾಗುವುದಿಲ್ಲವೇ? ಹೀಗೆಂದು ನಾನು ಯಾರಲ್ಲಿಯೋ ಕೇಳಿದ್ದೆ. ಅದಕ್ಕವರು ಉತ್ತರಿಸಿದ್ದರು, ’ಅವರಿಗದು ಅನಿವಾರ್ಯ.ಪ್ರಕೃತಿ ಕರೆ. ಅದನ್ನವರು ಇಳಿಸಿಕೊಳ್ಳಲೇ ಬೇಕು,ನಮಗದನ್ನು ನೋಡಿದರೆ ನಾಚಿಕೆ, ಮುಜುಗರ. ಹಾಗಾಗಿ ನಾವೇ ಮುಖ ತಿರುಗಿಸಿಕೊಳ್ಳುತ್ತೇವೆ’ ಎಂದಿದ್ದರು. ಎಷ್ಟು ಸತ್ಯ ಅಲ್ಲವೇ?
ಮೂತ್ರ ವಿಸರ್ಜನೆ ಎಂದೊಡನೆ ನನಗೆ ನೆನಪಾಗುವುದು ಕನ್ನಡದ ಉಟ್ಟು ಹೋರಾಟಗಾರ ವಾಟಾಳ್ ನಾಗರಾಜ್. ಅವರು ೨೦೦೮ರ ನವಂಬರ್ ತಿಂಗಳಿನಲ್ಲಿ ಒಂದು ಪತ್ರಿಕಾ ಗೋಷ್ಠಿ ಕರೆದಿದ್ದರು. ನವೆಂಬರ್ ತಿಂಗಳಿಗೂ ವಾಟಾಳ್ ನಾಗರಾಜ್ ಗೂ ಇರುವ ನಂಟನ್ನು ನೀವೆಲ್ಲಾ ಬಲ್ಲವರೇ ಆಗಿದ್ದೀರಿ!. ಅಂದು ಅವರೊಂದು ಚಳುವಳಿಯ ಘೋಷಣೆಯನ್ನು ಮಾಡಿದ್ದರು. ಆ ಚಳುವಳಿಯ ಹೆಸರು ’ಉಚ್ಚೆ ಹೊಯ್ಯುವ ಚಳುವಳಿ’ ಆ ಚಳುವಳಿಯ ಘೋಷಣೆ ಮಾಡಲು ಕಾರಣ; ಸರಕಾರವು ರಾಜ್ಯದಲ್ಲಿ ಹೆಚ್ಚೆಚ್ಚು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕೆಂದು. ಒಂದು ವೇಳೆ ಸರಕಾರವು ನಿಗದಿತ ಅವಧಿಯೊಳಗೆ ಶೌಚಾಲಯಗಳನ್ನು ನಿರ್ಮಿಸದಿದ್ದರೆ ತಾವು ಮತ್ತು ತಮ್ಮ ತಂಡ ರಾಜಭವನದೆದುರು ’ಉಚ್ಚೆ ಹೊಯ್ಯುವ ಚಳುವಳಿ’ಯನ್ನು ಕಾರ್ಯರೂಪಕ್ಕೆ ತರುವುದಾಗಿ ಘೋಷಿಸಿದ್ದರು ಮಾತ್ರವಲ್ಲ ಮುಂದೆ ಅದನ್ನು ಮುಖ್ಯಮಂತ್ರಿ, ಸಚಿವರು, ಶಾಸಕರು, ಲೋಕಸಭಾ ಸದಸ್ಯರು ಮತ್ತು ಐಎ ಎಸ್ ಅಧಿಕಾರಿಗಳ ಮನೆಗಳಿಗೆ ವಿಸ್ತರಿಸುವುದಾಗಿ ಹೇಳಿದ್ದರು. ಅವರಿಗೆ ಈ ಪತ್ರಕರ್ತರ ಬಗ್ಗೆ ಸಂಶಯ. ಹಾಗಾಗಿಯೇ ಅವರಿಗೆ ತಾಕೀತು ಮಾಡಿದ್ದರು,’ನೀವೆಲ್ಲಾ ಮೂತ್ರ ವಿಸರ್ಜನೆ ಎಂದು ಬರೆಯಬಾರದು. ಉಚ್ಚೆ ಹೊಯ್ಯುವ ಚಳುವಳಿ ಎಂದೇ ಬರೆಯತಕ್ಕದ್ದು’
ಆಗಲೂ ಸಚಿವ ಸಂಪುಟದಲ್ಲಿದ್ದದ್ದು ಒಬ್ಬರೇ ಮಹಿಳೆ, ಶೋಭಾ ಕರಂದ್ಲಾಜೆ. ಅವರ ಮನೆಯೆದುರು ವಾಟಾಳ್ ನಾಗರಾಜ್ ಉಚ್ಚೆ ಹೊಯ್ಯುವ ದೃಶ್ಯವನ್ನು ನಾನು ಮನಸ್ಸಿನಲ್ಲಿಯೇ ಕಲ್ಪಿಸಿಕೊಂಡು ಬಿದ್ದು ಬಿದ್ದು ನಕ್ಕಿದ್ದೆ.
ಆಮೇಲೆ ಅವರ ಈ ಚಳುವಳಿ ಎಲ್ಲಿ ಹಳ್ಳ ಹಿಡಿಯಿತೋ ಗೊತ್ತಿಲ್ಲ!
ವಿಸರ್ಜನೆಯ ಸುಖವನ್ನು ಅನುಭವಿಸುವವರು ಗಂಡಸರು ಮಾತ್ರ. ಯಾಕೆಂದರೆ ಅವರಿಗೆ ಎಲ್ಲೆಲ್ಲೂ ಮೋಟು ಗೋಡೆಗಳೇ ಕಾಣಿಸುತ್ತವೆ. ವಿಸರ್ಜನೆಯ ಕಷ್ಟವನ್ನು ಅನುಭವಿಸುವವರು ಮಹಿಳೆಯರು. ಅವರು ಪ್ರಕೃತಿಯ ಕರೆಗಳನ್ನು ಕೂಡಾ ನಿಯಂತ್ರಣದಲ್ಲಿಟ್ಟುಕೊಂಡು ಬದುಕಬೇಕಾದ ಹೀನಾಯ ಸ್ಥಿತಿ ನಮ್ಮ ಗ್ರಾಮೀಣ ಪ್ರದೇಶದಲ್ಲಿದೆ. ಬೆಳಕು ಹರಿಯುವ ಮುನ್ನವೇ, ಗಂಡಸರೆಲ್ಲಾ ಇನ್ನೂ ಮಲಗಿರುವಾಗಲೇ ಊರ ಹೊರಗೆ ಹೋಗಿ ತಮ್ಮ ಪ್ರಾರ್ತವಿಧಿಗಳನ್ನು ಪೂರೈಸಿಕೊಂಡು ಬರಬೇಕಾದ ಸ್ಥಿತಿ ಇನ್ನೂ ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿದೆ. ತಮ್ಮ ’ಆ ದಿನಗಳಲ್ಲಿ’ ಆ ಮಹಿಳೆಯರು ತಮ್ಮ ಮೈ ಮನಸ್ಸುಗಳನ್ನು ಹೇಗೆ ಮುದುಡಿಸಿಕೊಂಡು ಬದುಕುತ್ತಿರಬಹುದು ಎಂಬುದನ್ನು ನೆನೆಸಿಕೊಂಡರೆ ಅಯ್ಯೋ ಎನಿಸುತ್ತದೆ. ಅದಕ್ಕೇ ಇರಬೇಕು, ಸ್ಥಳಿಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ಮಹಿಳೆಯರು ತಮಗೆ ಅಧಿಕಾರ ಸಿಕ್ಕ ಒಡನೆಯೇ ಶೌಚಾಲಯ ಮತ್ತು ಕುಡಿಯುವ ನೀರು ಪೂರೈಕೆಗೆ ಪ್ರಥಮ ಆದ್ಯತೆಯನ್ನು ನೀಡಿದ್ದು.
ಅವರೆಲ್ಲರ ಮಾತು ಬಿಡಿ.ನಾನು ಕೂಡಾ ಈ ವಿಸರ್ಜನೆಯ ಕಷ್ಟವನ್ನು ಅನುಭವಿಸಿದವಳೇ. ಎಲ್ಲಿ ಅಂತಿರಾ? ನನ್ನ ವಯ್ಯಕ್ತಿಕ ಕೆಲಸದ ಮೇಲೆ ತಿಂಗಳಲ್ಲಿ ಮುರ್ನಾಲ್ಕು ಬಾರಿ ಬಸ್ಸಿನಲ್ಲಿ ರಾತ್ರಿ ಪ್ರಯಾಣ ಮಾಡುತ್ತೇನೆ. ಆಗೆಲ್ಲಾ ಪ್ರಯಾಣ ಸುರಕ್ಷಿತವಾಗಿರಲಿ ಎಂದುಕೊಂಡು ರಾಜಹಂಸ ಇಲ್ಲವೇ ಐರಾವತದಲ್ಲಿ ಪಯಣಿಸುತ್ತೇನೆ. ಮಧ್ಯರಾತ್ರಿಯಲ್ಲಿ ಡ್ರೈವರು ಯಾವುದೋ ಡಬ್ಬಾ ಹೋಟೇಲ್ ಎದುರುಗಡೆ ಬಸ್ ನಿಲ್ಲಿಸಿ, ’ಕಾಫಿ ತಿಂಡಿಗೆ ಹತ್ನಿಮಿಷ ಟೈಮಿದೆ’ ಎಂದು ಇಳಿದು ಬಿಡುತ್ತಾನೆ. ಯಾಕೆಂದರೆ ಅವನಿಗೆ ಮತ್ತು ಕಂಡಕ್ಟರ್ ಗೆ ಅಲ್ಲಿ ಪುಕ್ಕಟೆಯಾಗಿ ಎಲ್ಲವೂ ಸಿಗುತ್ತದೆ. ನಮ್ಮಂತವರು ಅಲ್ಲೆಲ್ಲಿ ಮರೆಯಿದೆ ಎಂದುಕೊಂಡು ಗಿಡ, ಮರ, ಪೊದೆಗಳನ್ನು ಹುಡುಕುತ್ತೇವೆ. ಇಂತಹದೇ ಒಂದು ಸಂದರ್ಭದಲ್ಲಿ ನಮ್ಮ ಹಿರಿಯ ನಟಿ ಪಂಡರಿಬಾಯಿಯವರು ರಸ್ತೆ ದಾಟುವಾಗ ಆದ ಅಪಘಾತದಲ್ಲಿ ತಮ್ಮ ಒಂದು ಕೈ ಕಳೆದುಕೊಂಡಿದ್ದರು.
ಕಳೆದ ವಾರ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದನ್ನು ಪಿಟಿಐ ವರಧಿ ಮಾಡಿತ್ತು. ಅಲ್ಲಿನ ಜೇತುದಾನ ಗ್ರಾಮಕ್ಕೆ ಬುಡಕಟ್ಟು ಜನಾಂಗಕ್ಕೆ ಸೇರಿದ ಅನಿತಾ ಎಂಬ ಮಹಿಳೆ ಮದುವೆಯಾಗಿ ಬಂದಿದ್ದಳು. ಆದರೆ ಗಂಡನ ಮನೆಯಲ್ಲಿ ಶೌಚಾಲಯ ಇಲ್ಲ ಎಂಬ ಕಾರಣಕ್ಕೆ ಅವಳು ಎರಡನೇ ದಿವಸಕ್ಕೇ ತವರು ಮನೆಗೆ ಹಿಂದಿರುಗಿದ್ದಳು. ಈ ಘಟನೆಯಿಂದ ಪ್ರಭಾವಿತವಾದ ಸುಲಭ್ ಇಂಟರ್ ನ್ಯಾಷನಲ್ ಸಂಸ್ಥೆ ಶೌಚಾಲಯ ನಿರ್ಮಾಣಕ್ಕೆ ಜೇತು ಗ್ರಾಮವನ್ನು ದತ್ತು ತೆಗೆದುಕೊಂಡಿತ್ತಲ್ಲದೆ, ಇತರ ಮಹಿಳೆಯರನ್ನು ಪ್ರೇರಿಸಬಲ್ಲ ಆಕೆಯ ದೃಢ ನಿರ್ಧಾರವನ್ನು ಪ್ರಶಂಸಿಸಿ ಆಕೆಗೆ ಐದು ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಿತ್ತು. ಸರಕಾರವೂ ಅವಳ ಧೈರ್ಯಕ್ಕೆ ಮೆಚ್ಚಿಗೆ ಸೂಚಿಸಿತು. ಹಳ್ಳಿಗಳಲ್ಲಿ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು ಅನಿತಾಳನ್ನು ಪ್ರಚಾರ ರಾಯಭಾರಿಯಾಗಿ ಬೆತುಲ್ ಜಿಲ್ಲಾಧಿಕಾರಿ ನೇಮಿಸಿದರು. ಇದು ಒಂದು ಘಟನೆಗೆ ಸರಕಾರ ಸಮಾಜಮುಖಿ ನಿರ್ಧಾರ ತೆಗೆದುಕೊಂಡ ರೀತಿ.
. ನಮ್ಮ ಸರಕಾರವೂ ಸಾರ್ವಜನಿಕ ಸ್ಥಳಗಳ ನೈರ್ಮಲ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ರೂಪಿಸಲು ಸಾಧ್ಯವಿಲ್ಲವೇ? ಮುಖ್ಯವಾಗಿ ಜನರ ಮನಸ್ಥಿತಿ ಬದಲಾಗಬೇಕು. ಇಲ್ಲವಾದರೆ ನಮ್ಮ ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಸದಸ್ಯ ನಿಂಗಪ್ಪ ಬಡಿಗೇರನಂತೆ ಮೈಕೈಗೆ ಚಚ್ಚಿಸಿಕೊಂಡು ಆಸ್ಪತ್ರೆ ಸೇರುವ ಸಂದರ್ಭ ಬರಬಹುದು.!
[ ವಿಜಯ ಕರ್ನಾಟಕದ ’ಅನುರಣನ’ ಅಂಕಣದಲ್ಲಿ ಪ್ರಕಟವಾದ ಬರಹ ]

1 comments:

Badarinath Palavalli said...

ನಾಗರೀಕ ಸಮಾಜ ಮೂಲ ಸೌಕರ್ಯಗಳಿಂದ ವಂಚಿತವಾಗಿ. ಸರಿಯಾದ ನಾಗರೀಕ ಪ್ರಜ್ಞೆಯ ಬೋಧನೆ ಕಲಿಕೆ ಆಗದಿದ್ದಗಲೂ ಇಂತಹ ಬಯಲು ಪಾಯಖಾನೆ ಪರ್ವ ಸಂಭವಿಸುತ್ತಲೆ ಇರುತ್ತದೆ.

ನನ್ನ ಬ್ಲಾಗಿಗೂ ಸ್ವಾಗತ.