
ಮಂಗಳೂರಿನಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಪಬ್ ಮೇಲೆ ದಾಳಿ ನಡೆಸಿ ಮಹಿಳೆಯರನ್ನು ಅಟ್ಟಾಡಿಸಿಕೊಂಡು ಹೊಡೆದ ಸುದ್ದಿ ರಾಷ್ಟ್ರ್ಆದ್ಯಂತ ಪ್ರಚಾರ ಪಡೆಯಲು ಕಾರಣವಾದ ಅಂಶಗಳೇನು?
ಮೆಲ್ನೋಟಕ್ಕೆ ಇದು ಮಹಿಳಾಪರವಾದ ಮಾದ್ಯಮಗಳ ನಿಲುವು ಅನ್ನಿಸುತ್ತದೆ, ನಿಜ. ಆದರೆ ಇಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಕೆಲಸ ಮಾಡಬೇಕಾದ, ಫೋರ್ತ್ ಎಸ್ಟೇಟ್ ಎಂದು ಕರೆಸಿಕೊಳ್ಳುವ ಪತ್ರಿಕಾ ಮಾದ್ಯಮವೂ ಖಾಕಿ, ಕಾವಿ ಮತ್ತು ಖಾದಿಗಳ ಜೋತೆ ಸೇರಿಕೊಂಡಿದೆಯೇ?
ಹೌದು ಎನ್ನಲು ಕಾರಣಗಳಿವೆ.
ಪಬ್ ಮೇಲೆ ದಾಳಿ ನಡೆದದ್ದು, ಜನವರಿ ೨೪ರ ಶನಿವಾರದ ಇಳಿ ಮದ್ಯಾಹ್ನದಲ್ಲಿ. ದಾಳಿಯ ವಿಚಾರವನ್ನು ಸೇನೆಯ ಕಾರ್ಯಕರ್ತರು ಒಂದು ಘಂಟೆಯ ಮುಂಚಿತವಾಗಿಯೇ ಮಾದ್ಯಮದವರಿಗೆ ತಿಳಿಸಿದ್ದರು. ಯಾಕೆಂದರೆ ಅವರಿಗೆ ಪ್ರಚಾರ ಬೇಕಾಗಿತ್ತು.
ಆರೇಳು ಕ್ಯಾಮರಮ್ಯಾನ್ ಗಳು, ಎರಡ್ಮೂರು ಪೊಟೋಗ್ರಾಫರುಗಳು, ಮೂರು ಜನ ಮುದ್ರಣ ಮಾದ್ಯಮದ ವರದಿಗಾರರು ದಾಳಿಯ ಸಮಯದಲ್ಲಿ ಅಲ್ಲಿ ಹಾಜರಿದ್ದರು. ದೃಶ್ಯ ಮಾದ್ಯಮದಲ್ಲಿ ಸುದ್ದಿ ಹೈಲೈಟ್ ಆಗುವುದು ಸೇನೆಗೆ ಬೇಕಾಗಿತ್ತು. ಆದರೆ ಅದು ಉಲ್ಟಾ ಹೊಡೆಯಿತು.ಸೇನೆಗೆ ಉರುಳಾಯಿತು.
ನೀವು ಗಮನಿಸಿರಬಹುದು; ಶನಿವಾರದಂದು ಪಬ್ ಮೇಲೆ ನಡೆದ ದಾಳಿ ಮರುದಿನ ’ಹಿಂದು’ವನ್ನು ಹೊರತುಪಡಿಸಿ ಇನ್ಯಾವ ಪ್ರಮುಖ ಪತ್ರಿಕೆಯಲ್ಲೂ ವರಧಿಯಾಗಲಿಲ್ಲ. ಸುದ್ದಿವಾಹಿನಿಗಳೂ ಅನಗತ್ಯ ಲಂಬಿಸಲಿಲ್ಲ. ಆದರೆ ಭಾನುವಾರ ಈ ಸುದ್ದಿ ವೇಗವನ್ನು ಪಡೆದುಕೊಂಡಿತು. ಅದಕ್ಕೆ ಕಾರಣವಾದದ್ದು ’ಟೈಮ್ಸ್ ನೌ’ ಎಂಬ ಸುದ್ದಿ ವಾಹಿನಿ. ಅದು ಹಾಗೆ ಮಾಡಲು ಕಾರಣವಿತ್ತು.
ಸುಮಾರು ಎರಡ್ಮೂರು ತಿಂಗಳುಗಳ ಹಿಂದೆ ಮಂಗಳೂರಿನಲ್ಲಿ ಟೈಮ್ಸ್ ಗ್ರೂಪಿನವರು ಪ್ಯಾಂಟಲೂಮ್ ನವರ ಸಹಭಾಗಿತ್ವದಲ್ಲಿ ಸೌಂದರ್ಯ ಸ್ಪರ್ಧೆಯೊಂದನ್ನು ಏರ್ಪಡಿಸಿದ್ದರು. ಅದು ’ಮಿಸ್ ಸೌತ್ ಇಂಡಿಯಾ’ ಸ್ಪರ್ಧೆಯ ಪೂರ್ವಭಾವಿ ಸ್ಪರ್ದೆಯಾಗಿತ್ತು. ಆಗ ಅದನ್ನು ಶ್ರೀರಾಮ ಸೇನೆ ವಿರೋಧಿಸಿ ದಾಂಧಲೆ ನಡೆಸಿತ್ತು. ಸ್ಪರ್ದೆ ನಡೆಯಲಿಲ್ಲ.
ಆ ಸೇಡನ್ನು ಟೈಮ್ಸ್ ಗ್ರೂಪ್ ನವರು ಈಗ ತೀರಿಸಿಕೊಂಡರು. ಸೇನೆಯ ಕಾರ್ಯಕರ್ತರು ಹುಡುಗಿಯರನ್ನು ಅಟ್ಟಾಡಿಸಿಕೊಂಡು ಹೊಡೆಯುವ ವಿಶುವಲ್ಸ್ ಗಳನ್ನು ಪದೇ ಪದೇ ಪ್ರಸಾರ ಮಾಡಿ ದೇಶದ ಗಮನ ಸೆಳೆದರು. ಇದರ ಜೋತೆ ಎನ್ ಡಿ ಟೀವಿ ಸೇರಿಕೊಂಡಿತು. ಸುದ್ದಿಯ ಹಸಿವಿನಿಂದ ಬಳಲುತ್ತಿರುವ ಇತರ ಸುದ್ದಿವಾಹಿನಿಗಳಿಗೂ ರುಚಿಕಟ್ಟಾದ ಊಟ ಸಿಕ್ಕಿತು.
ಇನ್ನು ಸುದ್ದಿಯ ಮೂಲಕ್ಕೆ ಬರುವುದಾದರೆ, ಪಬ್ ಮೇಲಿನ ಧಾಳಿ ಭಜರಂಗಿಗಳ ಅರ್ಥಾತ್ ಶ್ರೀರಾಮ ಸೇನೆಯ ಮಂಗಾಟಗಳಲ್ಲಿ ಇದೂ ಒಂದು. ಮಂಗಾಟ ಎಂದು ಯಾಕೆ ಕರೆದೆನೆಂದರೆ, ಭಜರಂಗಿ ಅಂದ್ರೆ ಅರ್ಥ ಏನು? ಹನುಮಂತ; ಕಪಿ. ಶ್ರೀರಾಮ ಸೇನೆ ಯಾವುದು? ಕಪಿ ಸೈನ್ಯ. ಅಂದ್ರೆ ಮಂಗಗಳು. ಕಪಿಗಳು ಮಾಡೋದು ಕಪಿಚೇಷ್ಟೆ ತಾನೆ?
ಆದರೇನು ಮಾಡೋದು, ಕಪಿಚೇಷ್ಟೆಯನ್ನು ನಾಗರಿಕ ಸಮಾಜ ಸಹಿಸಿಕೊಳ್ಳುವುದು ಸ್ವಲ್ಪ ಕಷ್ಟ. ಅವರ ಕಪಿಚೇಷ್ಟೆಯ ಬಗ್ಗೆ ಈ ಹಿಂದೆ ’ಬಳೆಗಾರ ಚೆನ್ನಯ್ಯನಂಥ ಬ್ಯಾರಿಗಳು’ ಲೇಖನದಲ್ಲಿ ಪ್ರಸ್ತಾಪಿಸಿದ್ದೆ. ಹಾಗಾಗಿ ಮತ್ತೆ ಬರೆಯಲು ಹೋಗುವುದಿಲ್ಲ.
ಶ್ರೀರಾಮಸೇನೆ ಪಬ್ ಮೇಲಿನ ದಾಳಿಗೆ ಕೊಟ್ಟುಕೊಳ್ಳುವ ಸಮರ್ಥನೆ ಏನೆಂದರೆ, ಪಬ್ ಸಂಸ್ಕೃತಿ ನಮ್ಮದಲ್ಲ; ಅಲ್ಲಿ ಅಶ್ಲೀಲ ನೃತ್ಯ ನಡೆಯುತ್ತಿತ್ತು; ಹುಡುಗಿಯರು ಮದ್ಯ ಸೇವಿಸುತ್ತಿದ್ದರು; ಅರೆಬೆತ್ತಲೆಯಾಗಿದ್ದರು.
ವರದಿಗಾರರು ಸುದ್ದಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು; ತಿರುಚಿ ಬರೆಯಬಹುದು; ಬೈಟ್ ಗಳನ್ನು ಕಾಂಟೆಕ್ಸ್ಟ್ ನಾಚೆ ತುರುಕಿ ತಮಗೆ ಬೇಕಾದಂತೆ ಅರ್ಥ ಹೊರಡಿಸಬಲ್ಲರು. ಆದರೆ ಕ್ಯಾಮರ ಎಂದೂ ಸುಳ್ಳು ಹೇಳಲಾರದು. ಆ ಹುಡುಗಿಯರೆಲ್ಲಾ ಮೈ ತುಂಬಾ ಬಟ್ಟೆ ಹಾಕಿಕೊಂಡಿದ್ದರು. ಅವರನ್ನು ಗಂಡಸರು ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದರು. ಇದು ಕಣ್ಣಿಗೆ ಕಂಡ ಸತ್ಯ.
ಈ ಕಪಿ ಸೈನಕ್ಕೆ ನನ್ನ ಕೆಲವು ಪ್ರಶ್ನೆಗಳಿವೆ. ಸಮಾಜಕ್ಕೆ ನೀತಿಪಾಠವನ್ನು ಬೋಧಿಸುವ ಕೆಲಸವನ್ನು ಇವರಿಗೆ ಯಾರು ವಹಿಸಿದ್ದಾರೆ? ಅದಕ್ಕೆ ಗೌರವಧನವನ್ನು ಯಾರು ಕೊಡುತ್ತಾರೆ?. ಭಾರತಿಯ ಸಂಸ್ಕೃತಿಯೆಂದರೆ ಹಿಂದು ಸಂಸ್ಕೃತಿ ಮಾತ್ರವೇ? ಅದನ್ನು ರಕ್ಷಿಸುವ ಹೊಣೆಗಾರಿಕೆ ಮಹಿಳೆಯದೇ?
ಇನ್ನೊಂದು ವಿಷಯವನ್ನು ಅವರ ಗಮನಕ್ಕೆ ತರಬೇಕಾಗಿದೆ; ಪಬ್ ಗಳಿಗೆ ಹೋಗುವ ಮಹಿಳೆಯರು ಅವಿದ್ಯಾವಂತರಲ್ಲ. ಅವರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಸ್ಪಷ್ಟ ಅರಿವಿದೆ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶಗಳಿರುವ ಭಾರತ ದೇಶವೆಂಬ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಾವು ಬದುಕುತ್ತಿದ್ದೇವೆಂದು ನಾನು ಭಾವಿಸಿಕೊಂಡಿದ್ದೇನೆ.
ಕಪಿ ಸೈನದ ’ನೈತಿಕ ಪೋಲಿಸ್’ ಪಡೆಯ ಉಪಟಳಕ್ಕೆ ಕರಾವಳಿ ನಲುಗಿ ಹೋಗಿದೆ. ತುಳು ನಾಡಿಗೆ ಎಂತಹ ಭವ್ಯ ಪರಂಪರೆಯಿತ್ತು!. ಮುಸ್ಲಿಂ ಜನಾಂಗದಲ್ಲಿ ಹುಟ್ಟಿದ ಬೊಬ್ಬರ್ಯ, ಅಲಿ ಎಂಬವರು ದೈವವಾಗಿ ಇಂದಿಗೂ ಹಿಂದುಗಳಿಂದ ಆರಾಧನೆಗೊಳ್ಳುತ್ತಾರೆ. ಹಾಗೆಯೇ ಕೆಳವರ್ಗದಲ್ಲಿ ಹುಟ್ಟಿದ ಕಲ್ಕುಡ್ಕ-ಕಲ್ಲುರ್ಟಿ, ಕಾಂತಬಾರೆ-ಬೂದಬಾರೆ ಮುಂತಾದ ದೈವಗಳು ಮೆಲ್ವರ್ಗದಿಂದಲೂ ಆರಾಧನೆಗೊಳ್ಳುತ್ತಿದ್ದಾರೆ. ಪ್ರಾಣಿಗಳನ್ನೂ ದೈವವೆಂದು ಆರಾಧಿಸುವ ನಾಡಿದು.
ಶಿಷ್ಟ ಪರಂಪರೆಯಲ್ಲಿ ದ್ರೌಪದಿಯನ್ನು ಸ್ವಾಭಿಮಾನಿ ಹೆಣ್ಣಾಗಿ ಚಿತ್ರಿಸಲಾಗಿದೆ. ಆದರೆ ತುಳು ಜಾನಪದದಲ್ಲಿ ಅವಳನ್ನು ಮೀರಿಸುವ ಹೆಣ್ಣೊಬ್ಬಳಿದ್ದಾಳೆ. ಅವಳೇ ಸಿರಿ. ಬಹುಶಃ ಗಂಡನ ನೈತಿಕತೆಯನ್ನು ಪ್ರಶ್ನಿಸಿ, ತಾನಾಗಿಯೇ ವಿಛ್ಚೇಧನ ನೀಡಿದ ಮೊದಲ ಹೆಣ್ಣು ಈಕೆ. ಇಂಥ ಮಣ್ಣಿನಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಮೊನ್ನೆ ಪುರುಷ ದೌರ್ಜನ್ಯಕ್ಕೆ ತುತ್ತಾಗಿ ಅಸಹಾಯಕರಾಗಿ ಕೆಳಗೆ ಬೀಳುತ್ತಿರುವುದನ್ನು ಕಂಡಾಗ ರೋಷ ಉಕ್ಕದಿರಲು ಸಾಧ್ಯವೇ?
ಒಂದು ದೇಶದ- ರಾಜ್ಯದ- ಆಂತರಿಕ ಸುಭದ್ರತೆ ಗೃಹ ಇಲಾಖೆಗೆ ಸಂಬಂದಿಸಿದ್ದು. ಗೃಹಸಚಿವರು ಸಮರ್ಥರಾಗಿದ್ದರೆ ಗೃಹ ಇಲಾಖೆಯೂ ಸದೃಢವಾಗಿರುತ್ತದೆ. ನಮ್ಮ ಗೃಹ ಸಚಿವರು ಎಂಥವರೆಂಬುದು ಅವರು ಅಧಿಕಾರ ವಹಿಸಿಕೊಂಡ ತಕ್ಷಣ ನಡೆದ ಹಾವೇರಿ ಗೋಲಿಬಾರ್ಇನಲ್ಲಿ ಗೊತ್ತಾಗಿದೆ. ಪದ್ಮಪ್ರಿಯ ಪ್ರಕರಣದಲ್ಲಿ ಅದು ದೃಢಪಟ್ಟಿದೆ. ಚರ್ಚ್ ಮೇಲಿನ ದಾಳಿಯಲ್ಲಿ ಜಗಜ್ಜಾಹೀರಾಗಿದೆ.
ಹೀಗಾದಾಗ ಪೋಲಿಸರು ವಿಜೃಂಬಿಸುತ್ತಾರೆ; ಮುಖ್ಯಮಂತ್ರಿಗಳ ಮಾತನ್ನೂ ಧಿಕ್ಕರಿಸುತ್ತಾರೆ. ಮಾದ್ಯಮದವರಿಗೂ ತಾಕೀತು ಮಾಡುತ್ತಾರೆ ರೈತರು, ಮಹಿಳೆಯರು, ಅಸಹಾಯಕರ ಮೇಲೆ ಲಾಠಿ ಬೀಸುತ್ತಾರೆ.
ಕನ್ನಡದಲ್ಲೊಂದು ಗಾದೆ ಮಾತಿದೆ, ’ಕಂತೆಗೆ ತಕ್ಕ ಬೊಂತೆ’-ಕರ್ನಾಟಕ ಸರಕಾರ ಸಂಪೂರ್ಣ ಕೇಸರೀಕರಣಗೊಂಡಿದೆ. ಸಿಡುಕ ಮುಖ್ಯಮಂತ್ರಿಗಳಿಗೆ ಗಂಜಿಯಲ್ಲಿ ಬಿದ್ದ ನೊಣದಂತಿರುವ ಗೃಹಮಂತ್ರಿ. ದಾಳಿಯನ್ನು ಸಮರ್ಥಿಸಿಕೊಳ್ಳುವ ಚೆಡ್ಡಿ ಉಸ್ತುವಾರಿ ಸಚಿವರು... ಇವರಿಗೆಲ್ಲಾ ಆಧಾರಸ್ತಂಭವಾಗಿ ತಳ ಮಟ್ಟದಿಂದ ಕೆಲಸ ಮಾಡುವ ಕಪಿಸೈನ್ಯ....ಪ್ರಭುಗಳು ಹೊಡೆದಂತೆ ಮಾಡುತ್ತಾರೆ. ಸೈನ್ಯ ಅತ್ತಂತೆ ನಟಿಸುತ್ತದೆ. ನಾವು ನಾಗರಿಕ ಸಮಾಜದಲ್ಲಿದ್ದೇವೆಯೇ?
ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರು. ಆದರೂ ಅದು ಒಂದೇ ದಿಕ್ಕಿನತ್ತ ಹರಿಯುವುದಿಲ್ಲ. ಹಾಗಾಗುವುದು ಯಾವ ರಾಜಕೀಯ ಪಕ್ಷಗಳಿಗೂ ಬೇಕಾಗಿಲ್ಲ. ಅದು ಏಕಮುಖವಾಗಿ ಹರಿದಿದ್ದರೆ ಚುನಾವಣೆಯಲ್ಲಿ ಮನುವಾದಿಗಳನ್ನು ಮಣಿಸಬಹುದಾಗಿತ್ತು. ಅದಾಗುವುದಿಲ್ಲವಲ್ಲಾ....
ಹಾಗಾಗಿ ನಮ್ಮನ್ನು ದೇವರೇ ಕಾಪಾಡಬೇಕು!