Thursday, December 29, 2011

ಪ್ರೀತಿಸಿದರೆ…ರಾಕ್ಷಸರಂತೆ ಪ್ರೀತಿಸಬೇಕು!!



ಆಧ್ಯಾತ್ಮ ಸಾಧನೆಗೆ ಸಂಬಂಧಪಟ್ಟಂತೆ ಭಾರತೀಯರು ಏರಿದ ಎತ್ತರಕ್ಕೆ ಎತ್ತರಕ್ಕೆ ಸರಿಸಾಟಿಯಿಲ್ಲ. ಅವರ ಸಾಧನೆಯ ಫಲಶ್ರುತಿಯಲ್ಲಿ ಸದಾ ಆನಂದದ ಪ್ರೇಮರಸ. ಆದರೆ ಗಂಡು-ಹೆಣ್ಣಿನ ಪ್ರೇಮಕ್ಕೆ ಸಂಬಂಧಪಟ್ಟಂತೆ ಭಾರತೀಯರ ದೃಷ್ಟಿಕೋನ ವಿಶಾಲವಾಗಿಲ್ಲ.. ನಮಗೆ ಪ್ರೇಮದ ಉತ್ಕಟತೆಯನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲವೇನೋ ಎಂಬ ಗುಮಾನಿ ಬಹಳ ಹಿಂದಿನಿಂದಲೂ ನನಗಿದೆ. ಇಲ್ಲಿ ಪ್ರೇಮವೆಂಬುದು ದಾಸ್ಯದ ಹೊದಿಕೆಯಡಿ ಅಡಗಿ ಕುಳಿತಿದೆ.

ಪ್ರೇಮದ ಉತ್ಕಟತೆ ಎಂದರೆ ಎರಡು ದೇಹಗಳು, ಎರಡು ಮನಸುಗಳು ಒಂದಾಗಿ ಕರಗಿ ಹೋಗುವುದು; ಐಕ್ಯವಾಗುವುದು; ತನ್ನತನವನ್ನು ಕಳೆದುಕೊಳ್ಳುವುದು; ಶೂನ್ಯ ಸ್ಥಿತಿಯನ್ನು ತಲುಪುವುದು. ಅಂದರೆ ವರ್ತಮಾನವನ್ನು ಸಂಪೂರ್ಣವಾಗಿ ಮರೆಯುವುದು.

ಇಂತಹ ಮರೆಯುವಿಕೆ ನಮ್ಮ ಪುರಾಣ, ಇತಿಹಾಸಗಳಲ್ಲಿ ಎಲ್ಲಿಯಾದರೂ ದಾಖಲಾಗಿದೆಯೇ? ಹಾಗೆ, ಪ್ರೇಮದ ದಾಖಲಾತಿಯೆಂದು ನಮಗೆ ಅಲ್ಲಿ ಇಲ್ಲಿ ಸಿಗುವ ಒಂದೆರಡು ಉದಾಹರಣೆಗಳು ಪ್ರೇಮದ ಗಾಢವಾದ ಅನುಭವವನ್ನು ನೀಡಬಲ್ಲಷ್ಟು ಶಕ್ತವಾದುದೇ?

ದುಶ್ಯಂತ-ಶಕುಂತಲೆಯರದ್ದು ಪ್ರೇಮ ವಿವಾಹ. ಅವರದ್ದು ಮೊದಲ ನೋಟದ ಪ್ರೇಮ ಎಂದೆಲ್ಲಾ ಬಣ್ಣಿಸುವುದುಂಟು. ಆದರೆ ಅದು ನಿಜವೇ? ನಿಜವಿದ್ದಿದ್ದರೆ ಶಕುಂತಲೆಯ ದೈಹಿಕ ಸಂಪರ್ಕ ಮಾಡಿ ಅವಳನ್ನು ದುಶ್ಯಂತ ಮರೆತುಬಿಡುತ್ತಿರಲಿಲ್ಲ. ಕಾಮ ವಿಜೃಂಭಿಸಿದ ಕ್ಷಣಗಳಲ್ಲಿ ಅವರಿಬ್ಬರು ಒಂದಾಗಿದ್ದರು. ಅನಂತರ ಪುರುಷ ಸಹಜ ಗುಣದಂತೆ ಆತ ಅವಳನ್ನು ಮರೆತುಬಿಟ್ಟಿದ್ದ.

ನಳ-ದಮಯಂತಿಯನ್ನು ಅನುರೂಪ ಜೋಡಿಯೆಂದು ಹೇಳುವುದುಂಟು. ಆದರೆ ದಮಯಂತಿಗೆ ನಳ ಮಾಡಿದ್ದೇನು? ತನ್ನ ಕಷ್ಟ ಸುಖಗಳಲ್ಲಿ ನೆರಳಿನಂತೆ ಹಿಂಬಾಲಿಸಿದ್ದ ಸತಿಯನ್ನು ದಟ್ಟಡವಿಯಲ್ಲಿ ಒಂಟಿಯಾಗಿ ಬಿಟ್ಟು ಓಡಿಹೋಗಿಬಿಟ್ಟ. ಸಾಲದೆಂಬಂತೆ, ಹೋಗುವಾಗ ಅವಳುಟ್ಟ ಸೀರೆಯಲ್ಲಿ ಅರ್ಧ ಭಾಗವನ್ನೇ ಹರಿದುಕೊಂಡು ಹೋದದ್ದು ಬೇರೆ!!. ಇಂಥವನನ್ನು ದಮಯಂತಿ ಮತ್ತೆ ಹುಡುಕಿ ಯಾಕೆ ಮರು ಮದುವೆಯಾದಳೋ!

ಯಾಕೋ. ಪ್ರೇಮದ ಉತ್ಕಟತೆಯ ಬಗ್ಗೆ ಮಾತಾಡುವಾಗಲೆಲ್ಲಾ ನನಗೆ ನಮ್ಮ ಪುರಾಣಗಳ ಸಾತ್ವಿಕ ಹಿರೋಗಳು, ಆದರ್ಶಪುರುಷರು ಕಣ್ಣ ಮುಂದೆ ಬರುವುದೇ ಇಲ್ಲ. ನಮ್ಮ ಪುರಾಣಗಳ ಕಥಾ ನಾಯಕರಿಗೆ, ಪ್ರೇಮ ಎಂಬುದು ತುಂಬಾ ಕೋಮಲವಾದುದು, ಅದು ಭಾವಕೋಶಕ್ಕೆ ಸಂಬಂಧಪಟ್ಟದ್ದು ಎಂಬ ಅರಿವೇ ಇದ್ದಂತಿರಲಿಲ್ಲ.

ಹೆಣ್ಣೆಂಬುದು ಪಣಕ್ಕಿಟ್ಟ ವಸ್ತು. ಯಾರು ಬೇಕಾದರೂ ಅದಕ್ಕೆ ಆಸೆ ಪಡಬಹುದು, ಅದನ್ನು ಗೆದ್ದು ತರುವುದೇ ನ್ಯಾಯೋಚಿತವಾದುದು ಎಂಬುದು ಪ್ರಚಲಿತದಲ್ಲಿದ್ದಂತಿತ್ತು. ನಮ್ಮ ಗಂಡಸರಿಗೆ ಪ್ರೇಮ ಮತ್ತು ಯುದ್ಧದಲ್ಲಿ ಅಂತಹ ವ್ಯತ್ಯಾಸವೇನೂ ಇದ್ದಂತಿರಲಿಲ್ಲ. ಇಲ್ಲಿ ಗೆಲುವೇ ಮುಖ್ಯ. ಅದನ್ನು ಪಡೆಯುವ ದಾರಿ ಮುಖ್ಯವಾಗಿರಲಿಲ್ಲ.

ಅದರೆ ಪ್ರೇಮದಲ್ಲಿ ಸೋಲೇ ಗೆಲುವು. ಅದನ್ನು ಚೆನ್ನಾಗಿ ಅರಿತುಕೊಂಡವರು ನಮ್ಮ ಪುರಾಣಗಳಲ್ಲಿ ರಾಕ್ಷಸರೆಂದು ಬಿಂಬಿತರಾದ ರಾವಣ, ಭಸ್ಮಾಸುರ, ಕೀಚಕ, ಶರ್ಮಿಸ್ಠೆ, ಶೂರ್ಪನಖಿ,ಹಿಡಿಂಬೆ…ಮುಂತಾದವರು. ಪ್ರೇಮಕ್ಕಾಗಿ ಪ್ರಾಣವನ್ನೇ ಕಳೆದುಕೊಂಡ ಇಂತವರ ಮುಂದೆ ರಾಮ, ದುಷ್ಯಂತರದ್ದು ಪೇಲವ ವ್ಯಕ್ತಿತ್ವವೇ.

ರಾಕ್ಷಸರೆಲ್ಲಾ ಹಾಗೆಯೇ. ಅವರು ಅತ್ಯಂತ ಮೋಹಿತರು. ಅವರು ಮೆಚ್ಚಿದವರನ್ನು ಜೀವದುಂಬಿ ಪ್ರೀತಿಸಬಲ್ಲರು. ಹಾಗೆಯೇ ಪೋಷಿಸಬಲ್ಲರು ಕೂಡಾ. ಅವರಿಗೆ ನಗರ ಸಂಸ್ಕೃತಿಯ ನಯ -ನಾಜೂಕು, ಕಪಟ-ಮೋಸಗಳು ತಿಳಿಯುತ್ತಿರಲಿಲ್ಲ. ರಾಕ್ಷಸರ ಪ್ರೇಮದ ತೀವ್ರತೆಯನ್ನು, ಆ ಉತ್ಕಟತೆಯನ್ನು ನೆನೆಸಿಕೊಂಡಾಗಲೆಲ್ಲಾ ನನಗೆ ಅಕ್ಕ ಮಹಾದೇವಿಯ ’ಅಪ್ಪಿದರೆ ಅಸ್ತಿಗಳು ನುಗ್ಗಿ ನುರಿಯಾಗಬೇಕು…ಮಚ್ಚು ಅಚ್ಚುಗವಾಗಿ ಗರಿದೊರದಂತಿರಬೇಕು’ ಎಂಬ ವಚನವೇ ನೆನಪಿಗೆ ಬರುತ್ತದೆ.. ಆ ಕ್ಷಣದ ಬದುಕನ್ನು ಅನುಭವಿಸುವಲ್ಲಿ ರಾಕ್ಷಸರೇ ಮುಂದು.

ಪುರಾಣಗಳಲ್ಲಿ ಚಿತ್ರಿತರಾದ ರಾಕ್ಷಸರೆಲ್ಲಾ ಈ ನೆಲದ ಮೂಲನಿವಾಸಿಗಳಾಗಿರಬಹುದು ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಇದ್ದರೂ ಇರಬಹುದು. ಕಾಡಿನಲ್ಲಿ ವಾಸಿಸುತ್ತಿದ್ದ ಅವರ ಮೇಲೆ ನಗರ ಸಂಸ್ಕೃತಿಯ ಜನತೆ ಆಗಾಗ ದಾಳಿ ನಡೆಸುತ್ತಿದ್ದಿರಬಹುದು. ಅದಕ್ಕಾಗಿ ರಾಕ್ಷಸರು ಕೂಡಾ ಪ್ರತಿ ದಾಳಿ ಕೈಗೊಂಡಿರಬಹುದು. ಆದರೆ ಅಕ್ಷರ ಒಡೆತನ ಹೊಂದಿದ ಪುರಾಣಗಳ ಸೃಷ್ಟಿಕರ್ತರು, ತಮ್ಮ ಕೃತಿಗಳಲ್ಲಿ ಅವರನ್ನು ರಾಕ್ಷಸರೆಂದು ಅಮಾನುಷವಾಗಿ ಚಿತ್ರಿಸಿರಬಹುದು.

ನಮ್ಮ ಪುರಾಣ ಪ್ರಪಂಚದಲ್ಲಿ ರಾವಣನಿಗಿಂತ ಮಿಗಿಲಾದ ಪ್ರತಿ ನಾಯಕರಿಲ್ಲ. ಯಾರನ್ನಾದರೂ ಅತ್ಯಂತ ಹೀನಾಯವಾಗಿ, ನಿಕೃಷ್ಟವಾಗಿ ಕಾಣಬೇಕೆಂದರೆ ’ ಅವನೊಬ್ಬ ರಾವಣ’ ಎಂದುಬಿಡುತ್ತೇವೆ. ಆದರೆ, ನೀವೇ ಹೇಳಿ; ಅಂತಹ ದುಷ್ಟಕಾರ್ಯವನ್ನು ಅವನೇನು ಮಾಡಿದ್ದಾನೆ?

ಶ್ರೀರಾಮನ ಮಡದಿಯಾದ ಸೀತೆಯನ್ನು ಅಪಹರಿಸಿದ್ದು ರಾವಣನ ಮೇಲಿರುವ ಬಹುದೊಡ್ಡ ಆರೋಪ. ಸೀತೆಯನ್ನು ದೈಹಿಕವಾಗಿ ಹೊಂದಲೇ ಬೇಕೆಂಬ ಅಭೀಪ್ಸೆಯಿಂದ ಅಪಹರಿಸಿದ್ದರೆ ಅವಳನ್ನು ಬಲತ್ಕಾರ ಮಾಡಬಹುದಿತ್ತಲ್ಲವೇ? ಯಾಕೆಂದರೆ ಅವನಿಗೆ ಆ ಇತಿಹಾಸ ಇದೆ. ಹಿಂದೆ ಕುಶಧ್ವಜನ ಪುತ್ರಿಯಾದ ವೇದವತಿಯನ್ನು ಹಾಗೂ ದೇವಲೋಕದ ನರ್ತಕಿ ರಂಭೆಯನ್ನು ಆತ ಬಲತ್ಕಾರದಿಂದ ಭೋಗಿಸಿದ್ದ. ಆತ ಮಹಾ ಪರಾಕ್ರಮಿಯಾಗಿದ್ದ; ದಶಕಂಠನಾಗಿದ್ದ,ಅಂದರೆ ಸಾಮಾನ್ಯ ಮನುಷ್ಯನಿಗಿಂತ ಬುದ್ಧಿವಂತನಾಗಿದ್ದ.-ಎಂಟೆದೆಯ ಬಂಟನಂತೆ. ತೀವ್ರ ವ್ಯಾಮೋಹಿಯಾಗಿದ್ದ.

ರಾವಣನಲ್ಲಿ ಸಾತ್ವಿಕ, ರಜೋ ಮತ್ತು ತಮೋ ಗುಣಗಳು ಮೇಳೈಸಿದ್ದವು. ಅದಕ್ಕೆ ಕಾರಣವೂ ಇತ್ತು. ಆತನ ತಂದೆ ವಿಶ್ವವಸು-ಆತನ ಇನ್ನೊಂದು ಹೆಸರು ಪುಲಸ್ತ್ಯ-ಬ್ರಹ್ಮನ ಮಾನಸ ಪುತ್ರ. ತಾಯಿ ಕೈಕಸಿ. ಆಕೆ ಸುಮಾಲಿ ಎಂಬ ರಾಕ್ಷಸನ ಮಗಳು. ಇನ್ನು ರಾವಣನ ಪಟ್ಟದರಸಿ ಮಂಡೋದರಿ ರಾಕ್ಷಸರ ಶಿಲ್ಪಿಯಾದ ಮಯನ ಮಗಳು. ಆಕೆಯ ತಾಯಿ ಹೇಮೆ ಎಂಬ ಅಪ್ಸರೆ. ಇಂತಹ ಹೈಬ್ರೀಡ್ ತಳಿಯ, ವಿಭಿನ್ನ ಹಿನ್ನೆಲೆಯ ರಾವಣ ಸಹಜವಾಗಿಯೇ ಧೀರೋದಾತ್ತ ನಾಯಕನಾಗಿದ್ದ.

ರಾವಣನಿಗೆ ಸೀತೆಯಲ್ಲಿ ನಿಜವಾದ ಪ್ರೀತಿ ಹುಟ್ಟಿರಬೇಕು. ಹಾಗಾಗಿ ಅವಳನ್ನು ಅಪಹರಿಸಿ ತಂದು ಅತ್ಯಂತ ಸುಂದರ ಉದ್ಯಾನವನವಾದ ಆಶೋಕ ವನದಲ್ಲಿರಿಸಿದ. ಅವಳಿಗೆ ಇಷ್ಟವಾಗುವ ರೀತಿಯಲ್ಲಿ ತಾನು ಬದಲಾಗಲು ಯತ್ನಿಸಿದ. ತನ್ನ ನಡೆ-ನುಡಿ, ವೇಷ-ಭೂಷಣಗಳನ್ನು ಬದಲಾಯಿಸಿಕೊಂಡ. ಈ ರೀತಿಯಲ್ಲಿ ಬದಲಾದ ರಾವಣನಿಗೆ’ ಶೃಂಗಾರ ರಾವಣ’ ವೆಂಬ ಪ್ರತ್ಯೇಕ ಅಭಿದಾನವೇ ಯಕ್ಷಗಾನ ಪ್ರಸಂಗಗಳಲ್ಲಿದೆ. ಈ ಶೃಂಗಾರ ರಾವಣ ಅಪ್ಪಟ ಪ್ರೇಮಿ. ಪ್ರೇಮಿಸುತ್ತಲೇ ಕೊನೆಗೆ ಅವಳಿಗಾಗಿ ಪ್ರಾಣವನ್ನು ಕೂಡಾ ತೆರುತ್ತಾನೆ.

ಈ ರಾಕ್ಷಸರು ಛದ್ಮವೇಷಧಾರಿಗಳು. ಮೋಹಕ್ಕೆ ಒಳಗಾದಾಗ, ಪ್ರೀತಿಗೆ ಬಿದ್ದಾಗ ತಾವು ಮೆಚ್ಚಿದವರ ಕಣ್ಮನಗಳಿಗೆ ಹಿತವಾಗುವಂತೆ ಬೇಕಾದಂಥಹ ರೂಪವನ್ನು ಹೊಂದುತ್ತಿದ್ದರು. ಶೂರ್ಪನಖಿಯ ಉದಾಹರಣೆಯೇ ಸಾಕಲ್ಲ? ಅವಳದ್ದು ಪ್ರಥಮ ನೋಟದ ಪ್ರೇಮ. ಶ್ರೀರಾಮನ ರೂಪಕ್ಕೆ ಮನಸೋತಳು. ಮದುವೆಯಾಗೆಂದು ಪೀಡಿಸಿದಳು. ಪ್ರೇಮದ ಕೋಮಲ ಭಾವನೆಗಳನ್ನು ಅರ್ಥ ಮಾಡಿಕೊಳ್ಳದ ಶ್ರೀರಾಮ ಅವಳೋಡನೆ ಕ್ರೂರವಾಗಿ ವರ್ತಿಸಿದ. ಅವಳ ಕಿವಿ ಮೂಗುಗಳನ್ನು ಕತ್ತರಿಸಿ ವಿರೂಪಗೊಳಿಸಿದ. ಹೆಣ್ತನದ ದ್ಯೋತಕವಾದ ಸ್ತನಗಳನ್ನು ಕತ್ತರಿಸಿ ಸ್ತ್ರೀತ್ವಕ್ಕೆ ಅವಮಾನ ಮಾಡಿದ ಸ್ಯಾಡಿಸ್ಟ್ ಅವನು. ಅವಮಾನಿತಳಾಗಿ, ಅಂಗಭಂಗಿತಳಾದ ಆಕೆ ತನ್ನಣ್ಣ ರಾವಣನಲ್ಲಿಗೆ ಬಂದು ರಾಮನ ಬಗ್ಗೆ ಚಾಡಿ ಹೇಳಿದಳು. ಒಬ್ಬ ಗಂಡಸನ್ನು ಕೆಣಕಬೇಕಾದರೆ, ಅವಮಾನಿಸಬೇಕಾದರೆ ಅವನ ಬಳಗಕ್ಕೆ ಸೇರಿದ ಸ್ತ್ರೀಯನ್ನು ಅಪಹರಿಸುವುದು, ಅತ್ಯಾಚಾರ ಮಾಡುವುದು, ಬೆತ್ತಲೆ ಮೆರವಣಿಗೆ ಮಾಡುವುದು ಈ ಮಣ್ಣಿನಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ರೀತಿಯಲ್ಲವೇ? ರಾವಣನೂ ಅದನ್ನೇ ಮಾಡಿದ್ದಾನೆ.

ಒಬ್ಬ ಶಿವ ಮತ್ತು ಒಬ್ಬ ಕೃಷ್ಣನ ಹೊರತಾಗಿ ಪುರಾಣದ ಯಾವ ನಾಯಕ ತಾನೆ ಸ್ತ್ರೀಯನ್ನು ಸಮಾನ ಗೌರವದಿಂದ ಕಂಡಿದ್ದಾರೆ? ರಾಮನಂತೂ ಅಲ್ಲ. ಅವನು ವಿಶ್ವಾಮಿತ್ರ ಹೇಳಿದನೆಂದು ಸ್ವಯಂವರದಲ್ಲಿ ಶೌರ್ಯ ಪ್ರದರ್ಶನ ಮಾಡಿ ಸೀತೆಯನ್ನು ಗೆದ್ದು ತಂದ. ಜೀವನದುದ್ದಕ್ಕೂ ಆ ಸುಕೋಮಲೆಯನ್ನು ಕಷ್ಟ ಕೋಟಲೆಗಳಿಗೆ ಈಡು ಮಾಡಿದ. ಕೊನೆಗೆ ಆಕೆ ಆತ್ಮಹತ್ಯೆಗೆ ಶರಣಾಗುವಷ್ಟು ಅವಮಾನಿಸಿದ. ಪಾಂಡವರು ಕೂಡಾ ಆಕಸ್ಮಿಕವಾಗಿ ದ್ರೌಪದಿಯನ್ನು ಸ್ವಯಂವರದಲ್ಲಿ ಗೆದ್ದು ತಂದವರು. ಮಾಹಾವಿಷ್ಣುವಿಗೆ ಲಕ್ಷ್ಮಿ ಸಮುದ್ರ ಮಥನದಲ್ಲಿ ಅನಾಯಸವಾಗಿ ದೊರೆತವಳು.

ಸೀತೆ, ದ್ರೌಪದಿ,ಅಹಲ್ಯೆ, ದಮಯಂತಿ ಮಂಡೋದರಿ ಸೇರಿದಂತೆ ನಮ್ಮ ಪುರಾಣದ ಯಾವ ಮಹಿಳೆಯ ಬದುಕೂ ಪ್ರೇಮಮಯ ಆಗಿರಲಿಲ್ಲ.ವಿಷಾಧದ ಎಳೆಯೊಂದು ಸದಾ ಅವರ ಬದುಕಿನಲ್ಲಿತ್ತು. ಅಂಬೆಯಂತೂ ಪುರುಷ ಸಮಾಜದಲ್ಲಿ ಪುಟ್ ಬಾಲಿನಂತೆ ಅಲ್ಲಿಂದಿಲ್ಲಿಗೆ ಒದೆಯಲ್ಪಟ್ಟವಳು. ಪ್ರತಿಭಟನೆಯ ಕುಂಡದಂತಿದ್ದರೂ ನಿಷ್ಕಾರಣವಾಗಿ ಉರಿದು ಹೋದವಳು.

ನಮ್ಮ ಪುರಾಣಗಳಲ್ಲಿ ,ಪ್ರೇಮ-ಪ್ರೀತಿಗಳನ್ನು ಹುಡುಕೋಣವೆಂದು ಹೊರಟರೆ ನಮಗೆ ಸಿಗುವುದು ಒಂದೋ, ಅನೈತಿಕ ಸಂಬಂಧಗಳು. ಇಲ್ಲವೇ, ಪುರುಷಸಿಂಹನ ಘರ್ಜನೆಗಳು. ಸ್ತೀಯರ ಕೋಮಲ ಭಾವನೆಗಳು ಎಲ್ಲೂ ದಾಖಲಾಗುವುದೇ ಇಲ್ಲ. ಹೆಣ್ಣು ಗಂಡಿಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಾಳೆ; ಒಪ್ಪಿಸಿಕೊಳ್ಳುತ್ತಾಳೆ, ಗಂಡು ಅವಳನ್ನು ಸ್ವೀಕರಿಸುತ್ತಾನೆ. ಅರ್ಪಣೆಯ ಹಂತದಲ್ಲಿ ಆಕೆ ಆತನ ಪಾದ ಮೂಲದಲ್ಲಿ ಕುಸಿಯುತ್ತಾಳೆ. ಗಂಡು ಉದಾರತೆಯಿಂದ ಆಕೆಯನ್ನು ಮೇಲೆತ್ತುತ್ತಾನೆ. ಈ ಚಿತ್ರಣವೇ ಭಾರತೀಯರ ಚಿತ್ತ ಭಿತ್ತಿಯಲ್ಲಿ ಮೂಲ ಪ್ರತಿಮೆಯಾಗಿ ಉಳಿದುಕೊಂಡು ಬಂದಿದೆ. ಎಲ್ಲೋ ಒಂದು ಕಡೆ ಭೀಮ-ಹಿಡಿಂಬೆಯಂತ ಅಪರೂಪದ ಪ್ರೇಮ ಪ್ರಕರಣ ಇದಕ್ಕೆ ಅಪವಾದವಾಗಿ ಕಾಣುತ್ತದೆ. ಪಂಚಪಾಂಡವರಲ್ಲಿ ಮೊದಲು ಮದುವೆಯಾದವನು ಈ ಭೀಮ. ತನ್ನ ಅಣ್ಣ ಕಿಮ್ಮೀರನನ್ನು ಭೀಮ ಕೊಂದರೂ ಅವನ ಶೌರ್ಯಕ್ಕೆ ಒಲಿದು ಬಂದವಳು ಹಿಡಿಂಬೆ.

ಇನ್ನು ಕೃಷ್ಣನನ್ನು ಈ ಲೋಕದ ಯಾವ ಗಂಡಸಿಗೂ ಹೋಲಿಸುವಂತಿಲ್ಲ.ಅವನೊಬ್ಬ ಪರಿಪೂರ್ಣ ಮನುಷ್ಯ. ’ನಾನು ನಿನಗೆ ಒಲಿದಿದ್ದೇನೆ’ ಎಂದು ಬಯಸಿ ಬಂದ ರುಕ್ಮಿಣಿಯನ್ನು ಹೃದಯದರಸಿಯನ್ನಾಗಿ ಮಾಡಿಕೊಂಡರೂ ಸಮಾನತೆಯ ತುಡಿತವಿದ್ದ ಅಹಂಕಾರಿ ಸತ್ಯಭಾಮೆಯನ್ನು ಪ್ರೇಮದರಸಿಯಾಗಿ ಕಂಡ. ಸತ್ಯಭಾಮೆಯ ಸಹಚರ್ಯದಲ್ಲಿಯೇ ನರಕಾಸುರನನ್ನು ಕೊಂದು ಅವನು ಸೆರೆಯಲ್ಲಿಟ್ಟಿದ್ದ ಹದಿನಾರು ಸಾವಿರ ಸ್ತ್ರೀಯರನ್ನು ಬಂಧವಿಮುಕ್ತಗೊಳಿಸಿ, ಅವರೆಲ್ಲರನ್ನೂ ತಾನೇ ಮದುವೆಯಾಗಿ ಅವರೆಲ್ಲರನ್ನೂ ಪ್ರೀತಿ ಜಲದಲ್ಲಿ ಮುಳುಗಿಸಿದ್ದ ಎನ್ನುತ್ತದೆ ಪುರಾಣ!

ರುಕ್ಮಿಣಿ-ಸತ್ಯಭಾಮೆಯರ ನಡುವೆ ಕಣ್ಣುಮುಚ್ಚಾಲೆಯಾಡುವ ಕೃಷ್ಣ ಎಳೆಯ ದಂಪತಿಗಳಿಗೆ ಮಾದರಿಯಾದರೆ ಶಿವ ಮತ್ತು ಪಾರ್ವತಿ ಪ್ರಬುದ್ಧ ದಂಪತಿಗಳಿಗೆ ಮಾದರಿಯಾಗಿ ಕಾಣುತ್ತಾರೆ. ಅವರಲ್ಲಿ ಪರಸ್ಪರ ಗೌರವ ಇದೆ; ಪ್ರೇಮ ಇದೆ. ಅದ್ಯಾವನೋ ಋಷಿ ಸ್ತ್ರೀಯರಿಗೆ ಪೂಜೆ ಸಲ್ಲಿಸುವುದಿಲ್ಲ ಎಂದಾಗ ಪಾರ್ವತಿಗೆ ತನ್ನ ಎಡಪಾರ್ಶ್ವವನ್ನೇ ಬಿಟ್ಟುಕೊಟ್ಟು ಅರ್ಧನಾರೀಶ್ವರನಾದವನು ಶಿವ.

ರಾವಣ,ಭಸ್ಮಾಸುರರಂತಹ ರಾಕ್ಷಸರನ್ನು ಹೊರತು ಪಡಿಸಿದರೆ ತೀವ್ರ ಮೋಹಿತರಾಗಿ ಬದುಕಿದವರೆಂದರೆ ಕೃಷ್ಣ ಮತ್ತು ಶಿವ ಮಾತ್ರ. ಇವರನ್ನು ಬಿಟ್ಟರೆ ನಮ್ಮ ಪುರಾಣಗಳಲ್ಲಿ ಪ್ರೇಮವೇ ಇಲ್ಲ. ಇರುವುದೆಲ್ಲಾ ಕಾಮ ಮತ್ತು ಅಹಂ ಮಾತ್ರ.

ಮೋಹವಿಲ್ಲದ ಬದುಕೊಂದು ಬದುಕೇ? ಅದರಲ್ಲೂ ಗಂಡು ಹೆಣ್ಣಿನ ಪ್ರೇಮದ ವಿಷಯಕ್ಕೆ ಬಂದಾಗ ಒಂದು ಮಿತಿಯ ಒಳಗೆ ಪೊಸೆಸಿವ್ ನೆಸ್ ಇರಲೇಬೇಕು. ನನ್ನನ್ನೇ ಉದಾಹರಣೆಯಾಗಿ ತೆಗೆದುಕೊಂಡರೂ ನನಗೆ ನನ್ನ ಗಂಡ, ನನ್ನ ಗೆಳೆಯ ನನಗೆ ಸಂಪೂರ್ಣ ಬೇಕು. ಅವರನ್ನು ಶೇಖಡವಾರು ಲೆಕ್ಕದಲ್ಲಿ ಹಂಚಿಕೊಳ್ಳುವುದು ನನಗಂತೂ ಸಾಧ್ಯವಿಲ್ಲ. ತುಂಬಾ ಸಂಕುಚಿತವಾಗಿ ಯೋಚಿಸುತ್ತಿದ್ದೇನೆಂದು ಬೇರೆಯವರಿಗನಿಸಬಹುದು. ಆದರೆ ಗಮನಿಸಿ ನೋಡಿ; ನಮ್ಮ ಖಾಸಗಿ ಪ್ರಪಂಚ ತುಂಬಾ ಚಿಕ್ಕದಾಗುತ್ತಿದೆ. ನಮ್ಮನ್ನು ನಾವೇ ನಂಬದಿರುವಂಥ ಸ್ಥಿತಿಗೆ ತಲುಪಿದ್ದೇವೆ. ಹಾಗಿರುವಾಗ ನಮ್ಮವರೆಂದು ನಾವು ಒಪ್ಪಿಕೊಂಡ ಒಂದೆರಡು ಮಂದಿಯಾದರೂ ನಮ್ಮವರಾಗಿಯೇ ಉಳಿಯಬೇಕೆಂದು ಬಯಸುವುದರಲ್ಲಿ ತಪ್ಪೇನಿದೆ?

[ ’ಓ ಮನಸೇ’ ಯಲ್ಲಿ ಪ್ರಕಟವಾದ ಲೇಖನ

Saturday, December 10, 2011

ಸ್ಲಟ್ ವಾಕ್; ಸಾಂಸ್ಕೃತಿಕ ಧಾಳಿ



ಸ್ಲಟ್ ವಾಕ್ [slutwalk]- ಈ ಪದವೇ ನಮಗೆ ಅಂದರೆ ಭಾರತಿಯರಿಗೆ ಅಪರಿಚಿತವಾದುದು. ಯಾಕೆಂದರೆ ಈ ಪದ ನಮಗೆ ಪರಿಚಯವಾದುದೇ ಇತ್ತೀಚಗೆ. ಇದಕ್ಕೊಂದು ಹಿನ್ನೆಲೆಯಿದೆ;

ಇದೇ ವರ್ಷ ಜನವರಿ ೨೪ರಂದು ಕೆನಡಾದ ರಾಜಧಾನಿ ಟೊರಾಂಟೊದ yark ಯೂನಿವರ್ಸಿಟಿಯಯಲ್ಲಿ ಜರುಗಿದ ‘safety form’ ಎಂಬ ಸಭೆಯಲ್ಲಿ ವಿದ್ಯಾರ್ಥಿಗಳ್ನುದ್ದೇಶಿಸಿ ಮಾತಾಡಿದ michail sanguinetti ಎಂಬ ಪೋಲಿಸ್ ಅಧಿಕಾರಿಯೊಬ್ಬರು ಭಾಷಣದ ಮಧ್ಯೆ, ’women should avoid dressing like sluts in order not to be victimized’ ಎಂದು ಹೇಳಿದರು. ಅದು ಅಲ್ಲಿದ್ದ ಮಹಿಳೆಯರನ್ನು ಕೆರಳಿಸಿತು.”

’ಸ್ಲಟ್’ ಎಂಬ ಪದಕ್ಕೆ ಕನ್ನಡದಲ್ಲಿ ಸಂವಾದಿ ಪದವನ್ನು ಹುಡುಕುವುದಾದರೆ ಅದು ’ಸೂಳೆ’ ಯೇ ಸೂಕ್ತ ಪದ.”ಮಹಿಳೆಯರು ಅಶ್ಲೀಲವಾಗಿ ಡ್ರೆಸ್ ಮಾಡಿಕೊಳ್ಳುವುದನ್ನು ಬಿಟ್ಟರೆ ಲೈಂಗಿಕ ದೌರ್ಜನ್ಯದಿಂದ ಪಾರಾಗಬಹುದು’ ಎಂಬುದು ಆ ಪೋಲಿಸ್ ಅಧಿಕಾರಿಯ ಮಾತಿನ ಭಾವಾರ್ಥ. ಆತ ಆ ಪರಿಸರದಲ್ಲಿ ಹಾಗೆ ಮಾತಾಡಿದ್ದು ಸರಿಯಾಗಿಯೇ ಇತ್ತು. ಕ್ಯಾಂಪಸ್ ಸುರಕ್ಷತೆಯ ಬಗ್ಗೆ ಆತ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳುವುದು ಆತನ ಕರ್ತವ್ಯವಾಗಿತ್ತು.

ಆದರೆ ವಿದ್ಯಾರ್ಥಿಗಳು ವಿರುದ್ಧ ಸಿಡಿದೆದ್ದರು. ಅನೇಕ ಮಹಿಳಾ ಸಂಘಟನೆಗಳು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತರು.ಏಪ್ರೀಲ್ ೩ ರಂದು ಇವರೆಲ್ಲಾ ಸೇರಿ ಟೊರೆಂಟೊದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆ ಮೆರವಣಿಗೆಯಲ್ಲಿ ಅವರೆಲ್ಲಾ”ಸ್ಲಟ್’ ತರಹ ಡ್ರಸ್ ಮಾಡಿಕೊಂಡಿದ್ದರು. ’ನಾವು ಧರಿಸುವ ಬಟ್ಟೆ ಬದಲಾಗಬೇಕಿಲ್ಲ, ನಿಮ್ಮ ಚಿಂತನೆಯನ್ನು ಬದಲಾಯಿಸಿಕೊಳ್ಳಿ’ ಎಂಬುದು ಮೆರವಣಿಗೆಯ ಆಶಯವಾಗಿತ್ತು.

ಅಂದರೆ ಮಹಿಳೆಯರು ತೊಡುವ ಬಟ್ಟೆ-ಬರೆ ಪುರುಷರ ಲೈಂಗಿಕ ಕಾಮನೆಗಳನ್ನು ಕೆರಳಿಸುತ್ತದೆಯೇ? ಕೆನಡಾದಂಥ ಪಾಶ್ಚಾತ್ಯ ರಾಷ್ಟ್ರವೊಂದರ ಸಾಮಾಜಿಕ ಪರಿಸರದಲ್ಲಿ ಹುಟ್ಟಿದ ಪ್ರತಿಭಟನೆಯೊಂದು ಭಾರತದಂಥ ದೇಶದಲ್ಲಿ ಪ್ರಸ್ತುತವಾಗುತ್ತದೆಯೇ? ಇದು ಈಗಿರುವ ಪ್ರಶ್ನೆ. ಇಲ್ಲಿ ಒಂದು ಸ್ಪಷ್ಟಿಕರಣವುಂಟು; ಇದು ಕೇವಲ ಪ್ರತಿಭಟನೆ ಮಾತ್ರ, ಇದನ್ನು ಕೆಲವರು ಚಳುವಳಿ ಎಂದು ತಪ್ಪಾಗಿ ಕರೆದದ್ದುಂಟು. ಪ್ರತಿಭಟನೆಗೂ ಚಳುವಳಿಗೂ ವ್ಯತ್ಯಾಸವಿದೆ.

ದೂರದ ಟೊರಾಂಟದ ಅನ್ಯ ಪರಿಸರದಲ್ಲಿ ಹುಟ್ಟಿದ ಸ್ಲಟ್ ವಾಕ್ ದೆಹಲಿ, ಭೋಪಾಲ್, ಮುಂಬೈಗಳನ್ನು ಹಾದು ಈಗ ಬೆಂಗಳೂರಿಗೂ ಕಾಲಿಟ್ಟಿದೆ. ದೆಹಲಿಯಲ್ಲಿ ಅದು ’ಬೇಶರ್ಮಿ ಮೋರ್ಚಾ’ ಆಗಿತ್ತು. ಕನ್ನಡದಲ್ಲಿ ’ನಾಚಿಗೆಗೆಟ್ಟ ಮೆರವಣಿಗೆ’ ಎನ್ನಬಹುದೇನೋ ! ಮೊನ್ನೆ ಡಿ.೪ರಂದು ಹೆಜ್ಜೆ ಗೆಜ್ಜೆ ಎಂಬ ಎನ್.ಜಿ.ಓ ಈ ಮೆರವಣಿಗೆಯನ್ನು ಏರ್ಪಡಿಸಿತ್ತು. ಆದರೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆಯು ಇದಕ್ಕೆ ಅನುಮತಿಯನ್ನು ನಿರಾಕರಿತ್ತು. ಆದರೆ ಇದರ ಆಯೋಜಕರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಮುಂದೆ ಸ್ಲಟ್ ವಾಕ್ ಬಗ್ಗೆ ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಜನವರಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

”ಬಿಚ್ಚಿಟ್ಟದ್ದಕ್ಕಿಂತ ಮುಚ್ಚಿಟ್ಟದ್ದೇ ಚೆನ್ನ’ ಎಂಬ ಭಾರತೀಯ ಪರಿಸರದಲ್ಲಿ ರೂಪಿತಗೊಂಡದ್ದು ನಮ್ಮ ಮನಸು. ಹಾಗೆಯೇ ಬಿಚ್ಚಿಟ್ಟದ್ದನ್ನು ಕೂಡಾ ಪೂಜನೀಯವಾಗಿ ಕಂಡಿದೆ ಭಾರತೀಯ ಸಂಸ್ಕೃತಿ. ಇಲ್ಲಿ ಅಕ್ಕ ಮಾಹಾದೇವಿಯ ಬೆತ್ತಲೆ ಅಶ್ಲೀಲವಲ್ಲ. ದಿಗಂಬರ ಜೈನ ಯತಿಗಳ ನಗ್ನತೆ ನಮ್ಮ ಕಾಮನೆಗಳನ್ನು ಕೆರಳಿಸುದಿಲ್ಲ; ನಾಗಾ ಸಾಧುಗಳ ನಗ್ನತೆ ಅಸಹ್ಯ ಹುಟ್ಟಿಸುವುದಿಲ್ಲ. ಗೋಮಟೀಶ್ವರನ ಭವ್ಯತೆಯೆದುರು ಮನಸ್ಸು ಬಾಗುತ್ತದೆ. ಇಲ್ಲಿಯ ನಗ್ನತೆಗೆ ಅಧ್ಯಾತ್ಮದ ಆಯಾಮವಿದೆ. ಅದು ದೈವಿಕತೆಯ ಎತ್ತರಕ್ಕೆ ಏರುತ್ತದೆ. ದೈವಿಕವಾದುದು ಆತ್ಮ ನಿಷ್ಟವಾಗಿರುತ್ತದೆ. ಲೌಕಿಕವಾದುದು ದೇಹನಿಷ್ಟವಾಗಿರುತ್ತದೆ. ನಾವು ಲೌಕಿಕರು. ನಮಗೆ ದೇಹದ ಮೇಲೆ ಮೋಹವಿದೆ. ಆಕರ್ಷಣೆಯಿದೆ. ಇಲ್ಲಿ ಕೆಲವನ್ನು ನಾವು ಮುಚ್ಚಬೇಕಾಗುತ್ತದೆ. ಮುಚ್ಚದಿದ್ದರೆ ಅದು ಆಕರ್ಶಣೆಗೆ ಒಳಗಾಗುತ್ತದೆ.ಮನೋರಂಜನೆಯಾಗಿ ಕಾಡುತ್ತದೆ. ಆಗ ಅವಾಂತರಗಳಾಗುತ್ತವೆ.

ಶೀಲ- ಅಶ್ಲೀಲತೆ ಎಂಬುದು ನೋಡುವ ನೋಟದಲ್ಲಿದೆ. ಗ್ರಹಿಸುವ ಮನಸ್ಸಿನಲ್ಲಿದೆ.ವ್ಯವಹರಿಸುವ ನಡವಳಿಕೆಯಲ್ಲಿದೆ. ಟೊರೊಂಟಾದಲ್ಲಿ ಪ್ರತಿಭಟನೆ ನಡೆದಾಗ ಅಲ್ಲಿ ಎಲ್ಲರೂ ಕನಿಷ್ಠ ಉಡುಗೆ ತೊಟ್ಟು ಬಂದಿದ್ದರು. ಅಲ್ಲಿ ಅದು ಕಾಮನ್ ಡ್ರಸ್. ಆದರೆ ಭಾರತದಲ್ಲಿ ಪ್ರತಿಭಟನೆಗಳು ನಡೆದಾಗ ಇಲ್ಲಿನ ಮಹಿಳ್ಯರು ಜೀನ್ಸ್-ಕುರ್ತಾ, ಟೀಶರ್ಟ್ ಗಳಲ್ಲಿ ಭಾಗವಹಿಸಿದ್ದರು ಇಲ್ಲಿಗೆ ಇದು ಸಹ್ಯ. ಮಹಿಳೆ ಧರಿಸುವ ಬಟ್ಟೆ ಬರೆಗಳೇ ಆಕೆಯ ಮೇಲಿನ ಅತ್ಯಾಚಾರಕ್ಕೆ ಕಾರಣವಾಗುವುದಾದರೆ ವೃದ್ದೆಯ ಮೇಲೆ, ಮಕ್ಕಳ ಮೇಲೆ, ಮುಸ್ಲಿಂ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಗಳಿಗೆ ಯಾವ ಸಮರ್ಥನೆಯನ್ನು ಕೊಡುತ್ತಿರಿ? ಅದೊಂದು ಮಾನಸಿಕ ಸ್ಥಿತಿ. ಅದು ಗಂಡಸಿನ ಮನಸ್ಥಿತಿ ಅದಕ್ಕೆ ಟೊರಂಟೊದ ಗಂಡಸು ಅಥವಾ ಭಾರತೀಯ ಗಂಡಸು ಎಂಬ ಬೇಧವಿಲ್ಲ. ಅದು ಸಂಸ್ಕೃತಿ ಹೀನ ಮನಸ್ಸು ಅಷ್ಟೇ..

ಸ್ಲಟ್ ವಾಕ್ ಅನ್ನು ನಮ್ಮ ಸಂಸ್ಕೃತಿಯ ಮೇಲಾಗುತ್ತಿರುವ ಐರೋಪ್ಯದ ಸಾಂಸ್ಕೃತಿಕ ಧಾಳಿ ಎನ್ನಬಹುದು. ಮುಕ್ತ ಮಾರುಕಟ್ಟೆಯ ಪ್ರವೇಶದಿಂದಾಗಿ ಈಗ ಎಲ್ಲವೂ ಮಾರುಕಟ್ಟೆಯ ಸರಕುಗಳೇ ಆಗಿವೆ. ಸಾಂಸ್ಕೃತಿಕ ಅನನ್ಯತೆಯೆಂಬುದು ಕೂಡಾ ಕಲಬೆರಕೆಯಾಗತೊಡಗಿದೆ.

ಸ್ಲಟ್ ವಾಕ್ ಎಂಬ ಎರವಲು ಚಿಂತನೆಯ ಪ್ರೋತ್ಸಾಹಕರಿಗೆ ಕೇವಲ ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಗಳಲ್ಲಿ ಓಡಾಡುವ ಮಹಿಳೆಯಷ್ಟೇ ಕಾಣುತ್ತಾರೆಯೇ? ನಗರ-ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿರುವ ಮಹಿಳೆಯರು ಕಣ್ಣಿಗೆ ಬೀಳುವುದಿಲ್ಲವೇ? ಅವರ ಕಷ್ಟ-ಕಾರ್ಪಣ್ಯಗಳು ಅವರ ಕಿವಿಯನ್ನು ತಲುಪುವುದಿಲ್ಲವೇ? ಅವರಿಗೆ ಪ್ರತಿಭಟನೆಯೆಂಬುದು ಕೂಡಾ ಒಂದು ಹವ್ಯಾಸವೇ? ಅವರಿಗೆ ನಿಜವಾಗಿಯೂ ಸ್ತ್ರೀಪರ ಕಾಳಜಿಗಳಿದ್ದರೆ ನಮ್ಮ ಸಮಾಜದಲ್ಲಿ ಸ್ಥೀ ಸಮಸ್ಯೆಗಳಿಗೇನು ಬರವೆ? ಸ್ತ್ರೀ ಬ್ರೂಣ ಹತ್ಯೆ,ವರದಕ್ಶಿಣೆ ಸಾವು, ಮರ್ಯಾದಾ ಹತ್ಯೆ, ಕೌಟುಂಬಿಕ ದೌರ್ಜನ್ಯ…ಹೆಣ್ಣಿನ ಬಾಳೇ ಸಂಕಷ್ಟಗಳ ಸರಮಾಲೆ.

ಇದನ್ನೆಲ್ಲಾ ಬಿಟ್ಟು ಕೆಲಸವಿಲ್ಲದ ಬಡಗಿ ಅದೇನೋ ಕೆತ್ತಿದನಂತೆ ಎಂಬ ಗಾದೆಯಂತೆ ಆಗಿದೆ”ಸ್ಲಟ್ ವಾಕ್’ ಎಂಬ ಪರದೇಶಿ ಸರಕಿಗೆ ಇಲ್ಲಿ ಮಾರುಕಟ್ಟೆ ಹುಡುಕುವ ಪ್ರಯತ್ನ!

[ ವಿಜಯ್ಅ ನೆಕ್ಸ್ಟ್ ಪೇಪರಿನಲ್ಲಿ ಪ್ರಕಟವಾದ ಲೇಖನ ]

Monday, December 5, 2011

ಮಡೆ ಮಡೆಸ್ನಾನ- ’ಗ್ರಹಿಕೆ’ ಮತ್ತು ’ಸಂವಹನ”ದ ಸಮಸ್ಯೆ

ಇಂದು ಸುಬ್ರಹ್ಮಣ್ಯದ ರಥ ಬೀದಿಯಲ್ಲಿ ನಡೆದ ಪ್ರತಿಭಟನಾ ಸಭೆ.

”ಮಡೆ ಮಡೆಸ್ನಾನ’ವೆಂಬ ಆಚರಣೆಯ ಮುಖಾಂತರ ಈಗ ಮಾಧ್ಯಮಗಳಲ್ಲಿ ಕುಖ್ಯಾತಿ ಪಡೆಯುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ನನ್ನೂರು.ಚಿಕ್ಕಂದಿನಿಂದಲೂ ಆ ಆಚರಣೆಯನ್ನು ನೋಡುತ್ತಾ ಬೆಳೆದು ಬಂದವಳು ನಾನು. ಹಾಗೆಯೇ ಈ ಆಚರಣೆಯನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿರುವ ಅಲ್ಲಿಯ ಮೂಲನಿವಾಸಿಗಳು ಹಾಗೂ ಗಿರಿಜನರಾದ ಮಲೆಕುಡಿಯ ಜನಾಂಗದವರನ್ನು ಹತ್ತಿರದಿಂದ ಬಲ್ಲವಳು. ಇದಲ್ಲದೆ ಇಂಥ ನಿಗೂಢ ಆಚರಣೆಗಳ ಬಗ್ಗೆ ಕನ್ನಡದ ಚಾನಲ್ಲೊಂದರಲ್ಲಿ ಟೀವಿ ಸಿರಿಯಲ್ಲನ್ನು ನಿರ್ಮಿಸಿದ ಕಾರಣದಿಂದಾಗಿ ಕರ್ನಾಟಕದಾದ್ಯಂತ ಸುತ್ತಾಡಿದವಳು ನಾನು. ಆ ಹಿನ್ನೆಲೆಯಲ್ಲಿ ಇದನ್ನು ಬರೆಯುತ್ತಿದ್ದೇನೆ.

ಋಣಾತ್ಮಕವಾದ ಕ್ರಿಯೆಯನ್ನು ಮಾಡುವುದರ ಮುಖಾಂತರ ಧನಾತ್ಮಕವಾದ ಶಕ್ತಿಯನ್ನು ಪಡೆಯುವ ಒಂದು ಪರಂಪರೆ ಭಾರತದಲ್ಲಿದೆ. ಅದಕ್ಕೆ ಉದಾಹರಣೆಯಾಗಿ ಅಘೋರಿಗಳ ಆಚರಣೆಗಳನ್ನು ಉಲ್ಲೇಖಿಸಬಹುದು. ಹಾಗೆಯೇ ದೇವರ ಸಾನಿದ್ಯವನ್ನು ಹೊಂದಲು, ಮೋಕ್ಷವನ್ನು ಪಡೆಯಲು ತನ್ನ ದೇಹವನ್ನು ದಂಡಿಸಿಕೊಳ್ಳುವುದೂ ಒಂದು ವಿಧಾನ. ಋಷಿಮುನಿಗಳು ಅದನ್ನು ಮಾಡುತ್ತಿದ್ದರು. ಅದೆಲ್ಲಾ ಸಾಧಕರ ಮಾತಾಯಿತು. ಸಾಮಾನ್ಯ ಸಂಸಾರಿಯೂ ತನ್ನ ತಿಳುವಳಿಕೆಯ ಮಿತಿಯಲ್ಲಿ ದೇವರನ್ನು ಒಲಿಸಿಕೊಳ್ಳುವುದಕ್ಕಾಗಿ, ಅವನ ಕೃಪಾಕಟಾಕ್ಷವನ್ನು ಪಡೆದುಕೊಳ್ಳುವುದಕ್ಕಾಗಿ ಸಮೂಹದೊಂದಿಗೆ ಕೆಲವು ಆಚರಣೆಗಳನ್ನು ಹುಟ್ಟು ಹಾಕಿಕೊಂಡಿದ್ದಾನೆ. ಅದವನ ನಂಬಿಕೆಯ ಜಗತ್ತು; ನೆಮ್ಮದಿಯ ಹುಡುಕಾಟ.

ನಾನು ಮಡೆಸ್ನಾದ ಪರವಾಗಿ ಮಾತಾಡುತ್ತಿಲ್ಲ. ಆದರೆ ’ನಾನು’ ಎಂಬುದರಲ್ಲೇ ತನ್ನ ಅಸ್ತಿತ್ವವನ್ನು ಕಂಡುಕೊಂಡಿರುವ ಮನುಷ್ಯ ತನ್ನ ದೇಹದ ಮೇಲಿನ ಮೋಹವನ್ನು ಕಳೆದುಕೊಂಡು ತಾನು ’ಏನೂ ಅಲ್ಲ’ವಾಗಿ ಅನ್ಯರು ಉಂಡು ಬಿಟ್ಟೆದ್ದ ಉಚ್ಛಿಷ್ಟದ ಮೇಲೆ ಉರುಳಾಡುವುದಕ್ಕೆ ಸರ್ವ ಸಮರ್ಪಣಾ ಭಾವ ಬೇಕು.

ಒಂದು ನಂಬಿಕೆ ಒಬ್ಬ ಮನುಷ್ಯನಿಗೆ ಮಾನಸಿಕ ನೆಮ್ಮದಿಯನ್ನು ತಂದು ಕೊಡುವುದಾದರೆ, ಅದರಿಂದ ಬೇರೆಯವರಿಗೆ ತೊಂದರೆಯಿಲ್ಲವಾದರೆ ’ಅದನ್ನು ಮಾಡಬೇಡ’ ಎಂದು ತಡೆಯಲು ನಾವ್ಯಾರು? ’ಅದು ನಿನ್ನ ಆತ್ಮ ಗೌರವಕ್ಕೆ ಕುಂದು’ ಎಂದು ನಾವು ಹೇಳಬಹುದಷ್ಟೆ. ಆದರೆ ಅವನಿಗೆ ಬೇಕಾದ ಮಾನಸಿಕ ನೆಮ್ಮದಿಯನ್ನು ನಾವು ತುಂಬಿಕೊಡಲಾರೆವು. ನಾನು ಕಂಡಂತೆ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಜನರು ಭಯ ಭಕ್ತಿಯಿಂದ ಆಚರಿಸುತ್ತಿರುವ ಹಲವು ಆಚರಣೆಗಳು ’ಮಾನಸಿಕ ಚಿಕಿತ್ಸಾ ಕೇಂದ್ರ’ಗಳಂತೆ ಕೆಲಸ ಮಾಡುವುದನ್ನು ನಾನು ಕಂಡಿದ್ದೇನೆ. ವೈದಿಕ ಸಂಸ್ಕೃತಿಕ ತೀರಾ ಭಿನ್ನವಾದ ಜಾನಪದೀಯ ಆಚರಣೆಗಳಿವು.

ಆಚರಣೆ, ಜಾತ್ರೆ, ಉರೂಸ್, ನೇಮ, ಭೂತಕೋಲ, ನಾಗಮಂಡಲ- ಇಂತಹ ಸಾರ್ವಜನಿಕ ಸಮಾರಂಭಗಳು ಒಂದು ಊರನ್ನು ಜಾತಿ ಭೇದವಿಲ್ಲದೆ ಭಾವನಾತ್ಮಕವಾಗಿ ಬೆಸೆಯುವುದಾದರೆ ಅಲ್ಲಿ ಸೇರುವ ಮನಸುಗಳ ಬಗ್ಗೆ ನನಗೆ ಗೌರವವಿದೆ. ಆ ಅಚರಣೆಗಳಿಗೆ ವೈಜ್ನಾನಿಕ ಹಿನ್ನೆಲೆಯಿಲ್ಲದಿರಬಹುದು. ಆದರೆ ನಂಬಿಕೆಯ ಬದ್ರಕೋಟೆಯಿರುತ್ತದೆ. ಸಾಮಾನ್ಯವಾಗಿ ಈ ನಂಬಿಕೆಗಳು ಬಿತ್ತಿದ ಬೆಳೆ, ಜನ, ಜಾನುವಾರುಗಳ ಸಂರಕ್ಷಣೆ ಮತ್ತು ಧೈನಂದಿನ ಕಷ್ಟಕೋಟಲೆಗಳಿಂದ ತನ್ನನ್ನು”ರಕ್ಷೀಸಪ್ಪಾ’ ಎಂದು ಕಾಣದ ಶಕ್ತಿಯಲ್ಲಿ ಮೊರೆಯಿಡುವುದೇ ಆಗಿರುತ್ತದೆ.

ಮೊಸರಲ್ಲೂ ಕಲ್ಲನ್ನು ಹುಡುಕುವ ಸ್ವಭಾವದವರು ಜನರ ನಂಬಿಕೆಯ ಜಗತ್ತನ್ನು ಒಡೆಯುವ ಪ್ರಯತ್ನ ಮಾಡುತ್ತಲೇ ಹೋಗುತ್ತಾರೆ. ಆದಕ್ಕೆ ಪರ್ಯಾಯವಾಗಿ ಇನ್ನೊಂದನ್ನು ಕಟ್ಟಿಕೊಡಲು ಇವರಿಂದ ಸಾಧ್ಯವಾಗುತ್ತಿಲ್ಲ. ಅಂದಮೇಲೆ ಆ ’ಭಂಜಕ ಪ್ರವೃತ್ತಿ’ ಸರಿ ಎನ್ನುವುದಾದರೂ ಹೇಗೆ?

ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ಆಚರಣೆಯೊಂದನ್ನು ಅಷ್ಟು ಸುಲಭವಾಗಿ ನಿಷೇಧಿಸಲು ಸಾಧ್ಯವಾಗದು. ಅದು ಟೀವಿ ಕ್ಯಾಮಾರಗಳೆದುರು, ವಿಧಾನಸೌಧದ ರಾಜಬೀದಿಯಲ್ಲಿ, ದುಡ್ಡುಕೊಟ್ಟು ತಂದ ಬಾಳೆ ಎಲೆಯನ್ನು, ವಂಧಿವಾಗದರ ಕಯ್ಯಲ್ಲಿ ಹರಡಿಸಿಕೊಂಡು ಅದರ ಮೇಲೆ”ಕೇರೆ ಪೊರಳ್ದಂತೆ ಪೊರಳ್ದು’ ಯೋಗ ನಿದ್ರೆಯ ಭಂಗಿಯನ್ನು ಅಭಿನಯಿಸಿದಷ್ಟು ಸುಲಭವಲ್ಲ.

ಕಳೆದ ವರ್ಷವೇ ಮಡೆಮಡೆಸ್ನಾನ ರಾಜ್ಯಾದ್ಯಾಂತ ಸುದ್ದಿ ಮಾಡಿತ್ತು ನಾಡಿನ ಹೆಸರಾಂತ ಬರಹಗಾರರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದರು. ಎಂದಿನಂತೆ ಒಂದಷ್ಟು ಜನ ವಿಚಾರವಾದಿಗಳು ಅವರನ್ನು ಜಾತೀಯ ಕನ್ನಡಕದಿಂದ ನೋಡಿ ಅವರ ಬಾಯ್ಮುಚಿಸಿದ್ದರು. ಅದೇ ವಿಚಾರವಾದಿಗಳಿಗೆ ಆ ಆಚರಣೆಯನ್ನು ನಿಲ್ಲಿಸಲೇಬೇಕೆಂಬ ಇರಾದೆಯಿದ್ದಿದ್ದರೆ ಕುಕ್ಕೆಗೆ ಹೋಗಿ ಮಲೆಕುಡಿಯರು ಸೇರಿದಂತೆ ಅಲ್ಲಿ ಕ್ಷೇತ್ರ ಕಾರ್ಯ ನಡೆಸಿ, ಅಧ್ಯಯನ ವರದಿಯನ್ನು ಸಿದ್ಧಪಡಿಸಿ ಅದನ್ನು ಸರಕಾರಕ್ಕೆ, ಮಾಧ್ಯಮಗಳಿಗೆ ಒಪ್ಪಿಸಿ ಆ ಕುರಿತು ಜನ ಜಾಗೃತಿ ಸಭೆಗಳನ್ನು ಹಮ್ಮಿಕೊಳ್ಳಬೇಕಾಗಿತ್ತು. ಬದಲಾವಣೆಯೆಂಬುದು ಒಂದು ನಿಧಾನಗತಿಯ ಪ್ರಕ್ರಿಯೆ. ಅದು ಸರಕಾರದ ನಿಷೇಧದಿಂದಾಗಲಿ ನೇರ ಪ್ರತಿಭಟನೆಯಿಂದಾಗಲಿ ಸಾಧ್ಯವಾಗಲಾರದು. ಅದಕ್ಕೆ ಮನಃ ಪರಿವರ್ತನೆ ಆಗಬೇಕು.

ಎಂಜಲೆಲೆಯ ಮೇಲೆ ಹೊರಳಾಡುವುದು ಆ ಆಚರಣೆಯ ಹೊರಗಿನಿಂದ ನಿಂತು ನೋಡುವವರಿಗೆ ಅಸಹ್ಯವಾಗಿ ಕಾಣಬಹುದು ಆದರೆ ಅದರಲ್ಲಿ ಭಾಗವಹಿಸುವವರಿಗೆ ಅಲ್ಲ.

ಮೊನ್ನೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಟಿಯಂದು ಮೈಸೂರಿನ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಗಳ ಅಧ್ಯಕ್ಷರಾದ ಶಿವರಾಮ್ ಮೇಲೆ ಹಲ್ಲೆ ನಡೆಯಿತು. ಅವರು ಬಂದಿದ್ದು ಯಾಕೆ? ಸತ್ಯಶೋಧನೆಗಾಗಿ. ಸತ್ಯ ಶೋಧನೆಗಾಗಿ ಬರುವವರು ಬಿರುದು ಬಾವಲಿಗಳ ಸಮೇತ ದಾಂ ದೂಂ ಎಂದು ಬರಬಾರದು. ಹಾಗೆ ಬರಲು ಇದೇನೂ ಪವಾಡ ಬಯಲು ಮಾಡುವ ಕಾರ್ಯಕ್ರಮ ಅಲ್ಲ. ನಮ್ಮ ಕನ್ನಡ ಪಂಡಿತರು ಹೇಳುತ್ತಿದ್ದ ಮಲೆಯಾಳಿ ಗಾದೆಯೊಂದು ನೆನಪಾಗುತ್ತದೆ, ಅವರು ಹೇಳುತ್ತಿದ್ದರು; ’ಕೇರೆ ತಿನ್ನುವ ಊರಿಗೆ ಹೋದಾಗ ಮಧ್ಯಕ್ಕೆ ಕೈ ಹಾಕು’ ಅಂಥ. ಕೇರೆ ಅಂದರೆ ಕೇರೆ ಹಾವು. ಅಂದರೆ ಅಲ್ಲಿ ಸೇರಿರುವ ಬಹುಸಂಖ್ಯಾತರ ಮಧ್ಯೆ ನೀನೊಬ್ಬ ಬಿನ್ನವಾಗಿ ಕಾಣಿಸಿಕೊಂಡರೆ ಅಲ್ಲಿ ಸೇರಿದವರು ನಿಮ್ಮನ್ನು ಅನುಮಾನದಿಂದ ಕಾಣುತ್ತಾರೆ. ನಿಮಗೆ ಬೇಕಾದ್ದು ಸಿಗುವುದಿಲ್ಲ. ನಾವು ಇಂಥ ಆಚರಣೆಗಳ ಚಿತ್ರಿಕರಣಕ್ಕೆ ಹೋದಾಗ ಭಕ್ತರಲ್ಲಿ ಒಬ್ಬಳಾಗಿ ಮಿಳಿತಗೊಂಡಿದ್ದೇನೆ. ಅವುಗಳನ್ನು ಎಂದೂ ಅವಹೇಳನ ಮಾಡುವುದಾಗಲಿ ಅಥವಾ ಪ್ರಶ್ನಿಸುವುದಾಗಲಿ ಮಾಡಿಲ್ಲ. ತುಳುನಾಡಿನಲ್ಲಿ ಭೂತ ಸ್ಥಾನಗಳಿಗೆ ಮಹಿಳೆಯರ ಪ್ರವೇಶವಿಲ್ಲ. ಅಲ್ಲಿ ಚಿತ್ರಿಕರಣ ಮಾಡುವಾಗ ನಾನು ನಮ್ಮ ಕ್ಯಾಮಾರಮ್ಯಾನ್ ಗೆ ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ ಹೊರತು ನಮಗೂ ಅಲ್ಲಿ ಪ್ರವೇಶ ನೀಡಿ ಎನ್ನಲಿಲ್ಲ. ಪಣೋಲಿಯಂತ ಕಲ್ಲುರ್ಟಿ ಭೂತ ಸ್ತಾನದಲ್ಲಿ ನನ್ನ ಕಣ್ಣಳತೆಯಲ್ಲೇ ಸಾವಿರಾರು ಕೋಳಿಗಳನ್ನು ಕತ್ತು ಹಿಸುಕಿ ಕೊಂದು, ಅದನ್ನು ಪದಾರ್ಥ ಮಾಡಿ,ದೈವಕ್ಕೆ ಎಡೆ ಇಟ್ಟು, ಅದನ್ನೇ ಪ್ರಸಾದವೆಂದು ಕೊಟ್ಟಾಗ ಅದನ್ನು ತಿರಸ್ಕರಿಸಿ ಬರಲು ನನಗಾಗಲಿಲ್ಲ

ಕೆಲವು ಸೂಕ್ಷ್ಮ ವಿಷಯಗಳಿಗೆ ನಾವು ಸೂಕ್ಷ್ಮವಾಗಿಯೇ ಸ್ಪಂದಿಸಬೇಕಾಗುತ್ತದೆ. ನನಗೆ ತಿಳಿದ ಮಟ್ಟಿಗೆ ಇಲ್ಲಿರುವುದು ’ಗ್ರಹಿಕೆ’ ಮತ್ತು ’ಸಂವಹನ’ ದ ಸಮಸ್ಯೆ. ಹೇಳಿಕೆಗಳು ಗ್ರಹಿಕೆಗಳಾಗುವುದಿಲ್ಲ.

ಈಗ ಮಾಡಬಹುದಾದದ್ದು ಇಷ್ಟೇ; ಮುಂದಿನ ವರ್ಷ ದೇವಸ್ಥಾನ ಒಳಪ್ರಾಂಗಣದಲ್ಲಿ ಬ್ರಾಹ್ಮಣರಿಗಾಗಿಯೇ ನಡೆಸುವ ವಿಶೇಷ ಭೋಜನವನ್ನು ನಿಲ್ಲಿಸಲು ಪ್ರಯತ್ನಿಸಬೇಕು. ಅವರು ಊಟ ಮಾಡಿದ ಎಂಜಲೆಲೆಯ ಮೇಲೆ ತಾನೇ ಭಕ್ತರು ಉರುಳುವುದು? ಬ್ರಾಹ್ಮಣರು ಅಲ್ಲಿ ಊಟ ಮಾಡದ ಮೇಲೆ ಭಕ್ತರು ಇನ್ನೆಲ್ಲಿ ಉರುಳುತ್ತಾರೆ?. ಹೇಗಿದ್ದರೂ ಅಲ್ಲಿಗೆ ಬರುವ ಲಕ್ಷಾಂತರ ಭಕ್ತರಿಗಾಗಿಯೇ ಸುಸಜ್ಜಿತವಾದ ವಿಶಾಲ ಭೋಜನ ಶಾಲೆ ಇರುವಾಗ ವಿಷೇಶ ಪಂಕ್ತಿಯ ಅವಶ್ಯಕತೆ ಇಲ್ಲ. ಒಂದು ವೇಳೆ ಭಕ್ತರು ಈಗಾಗಲೇ ಹರಕೆ ಹೇಳಿಕೊಂಡಿದ್ದರೆ, ಅವರಿಗೆ ಉರುಳಲೇಬೇಕೆಂದರೆ, ಅವರಿಗೆ ಪಾಪಪ್ರಜ್ನೆ ಕಾಡಿದರೆ ಒಳಪ್ರಾಂಗಣದಲ್ಲಿ ನೆಲದ ಮೇಲೆಯೇ ಉರುಳಿದರಾಯ್ತು. ಕಾಲಕ್ರಮೇಣ ಭಕ್ತರಲ್ಲಿ ತಿಳುವಳಿಕೆ ಮೂಡಿ ಅದು ನಿಂತು ಹೋಗಬಹುದು. ಇಲ್ಲವೇ ರೂಪಾಂತರ ಹೊಂದಬಹುದು.ಶಿರಸಿಯ ಮಾರಿಕಾಂಬ ದೇವಸ್ಥಾನದಲ್ಲಿ ಕೋಣ ಕಡಿಯುವುದರ ಬದಲು ಸಿರಿಂಜ್ ನಲ್ಲಿ ಸ್ವಲ್ಪ ರಕ್ತ ತೆಗೆದು ದೇವಿಗೆ ಅಭಿಶೇಕ ಮಾಡುವುದಿಲ್ಲವೇ?

ಆದರೆ ಜನರನ್ನು ಸರಿ ದಾರಿಯಲ್ಲಿ ಮುನ್ನಡೆಸಬೇಕಾದ ಸರಕಾರವೇ ಇಂಥ ಹೀನ ಆಚರಣೆಗಳನ್ನು ಸಮರ್ಥಿಸಿಕೊಳ್ಳುವ ಪ್ರಯತ್ನಕ್ಕೆ ಇಳಿಯಬಾರದು. ಡಾ. ವಿ.ಎಸ್. ಆಚಾರ್ಯ ಪ್ರಕಾರ ಮಡೆಸ್ನಾನದಿಂದ ಚರ್ಮ ರೋಗ ವಾಸಿಯಾಗುತ್ತದೆ. ಜನಾರ್ಧನ ಪೂಜಾರಿಯವರ ಹೇಳಿಕೆ ಇನ್ನೂ ಮಜವಾಗಿದೆ. ಅವರ ಪ್ರಕಾರ ಎಂಜಲೆಲೆಯ ಮೇಲೆ ಉರುಳಿದರೆ ಏಡ್ಸ್ ಬರುತ್ತದೆಯಂತೆ!.ಅವರ ಈ ಹೇಳಿಕೆ ಇಂಟರ್ನೆಟ್ ನಲ್ಲಿ ಜೋಕ್ ಆಗಿ ಹರಿದಾಡುತ್ತಿದೆ.

ಇಲ್ಲಿ ಸರಕಾರ ಇನ್ನೊಂದು ಕೆಲಸ ಮಾಡಬಹುದು; ಧಾರ್ಮಿಕ ಧತ್ತಿ ಇಲಾಖೆಗೆ ಸೇರಿದ ಎಲ್ಲಾ ದೇವಸ್ಥಾನಗಳಿಗೆ ಹರಿಜನ ಮತ್ತು ಹಿಂದುಳಿದ ವರ್ಗಗಳ ಪೂಜಾರಿಗಳನ್ನೇ ನೇಮಿಸುವುದರ ಬಗ್ಗೆಯೂ ಚಿಂತನೆ ನಡೆಸಬಹುದು. ಇದರ ಜೊತೆಗೆ ದೇವಾಲಯದ ಆಡಳಿತ ಮಂಡಳಿಗಳಿಗೆ ಸರಕಾರವೇ ನಿಗಮ ಮಂಡಳಿಗಳ ಮಾದರಿಯಲ್ಲಿ ಸದಸ್ಯರ ನಾಮನಿರ್ದೇಶನ ಮಾಡಬಹುದು.

ಇದಕ್ಕೆ ಭಕ್ತರಿಂದ ವಿರೋಧ ವ್ಯಕ್ತವಾಗಬಹುದು. ಅವರ ಮನವೊಲಿಕೆಯ ಪ್ರಯತ್ನ ಈಗಿನಿಂದಲೇ ನಡೆಯಬೇಕು. ವಿಚಾರವಾದಿಗಳು ಟೀವಿ, ಪತ್ರಿಕೆಗಳಲ್ಲಿ ಹೇಳಿಕೆ ಕೊಟ್ಟು, ಪ್ರೀಡಂ ಪಾರ್ಕ್ ನಲ್ಲಿ ಧರಣಿ ಕೂರುವುದಕ್ಕಷ್ಟೇ ತಮ್ಮ ಹೋರಾಟವನ್ನು ಸೀಮಿತಗೊಳಿಸಬಾರದು. ಎಲ್ಲಾ ದಲಿತ ಪರ ಹೋರಾಟಗಾರರು, ಎಡಪಂಥೀಯ ಚಿಂತಕರು ಹೀನ ಆಚರಣೆಗಳಲ್ಲಿ ತೊಡಗಿಕಿಕೊಂಡಿರುವ, ಮೌಡ್ಯದಲ್ಲಿ ಬಿದ್ದಿರುವ ತಮ್ಮ ಬಂಧುಗಳಲ್ಲಿ ಅರಿವನ್ನು ಬಿತ್ತುವ, ಅವರನ್ನು ಎಜ್ಯುಕೇಟ್ ಮಾಡುವ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು. ಪರಿಸ್ಥಿತಿ ಎಷ್ಟೊಂದು ಸೂಕ್ಷ್ಮವಾಗಿದೆಯೆಂದರೆ ಮೇಲ್ಜಾತಿಯವರೇನಾದರೂ ಈ ಕ್ರಿಯೆಯಲ್ಲಿ ತೊಡಗಿಕೊಂಡರೆ ಅವರು ಯಾವ ಪಕ್ಷಕ್ಕೆ ಸೇರಿದವರು? ಅವರಿಗೆ ಇದರಿಂದೇನು ಲಾಭ? ಇದು ಕೂಡಾ ಕೆಳಜಾತಿಯವರನ್ನು ಬ್ರೈನ್ ವಾಶ್ ಮಾಡುವ ತಂತ್ರವಿರಬಹುದೇ ಎಂಬ ಗುಮಾನಿಯಿಂದಲೇ ನೋಡುವ ಸನ್ನಿವೇಶ ಈಗ ಎಲ್ಲೆಲ್ಲಿಯೂ ಕಾಣುತ್ತಿದೆ. ಹಾಗಾಗಿ ಸೂಕ್ಷ್ಮ ಸಂವೇದಿ ಮನಸ್ಸಿನವರು ತಮ್ಮ ಅಭಿಪ್ರಾಯವನ್ನು ಹೇಳುವುದಕ್ಕೇ ಹೆದರುವ ಪರಿಸ್ಥಿತಿ ಈಗ ಉಂಟಾಗಿದೆ. ಪರ- ವಿರೋಧದಾಚೆ ಒಂದು ಸಮನ್ವಯದ ದೂರಗಾಮಿ ವಿಚಾರಧಾರೆಯೂ ಇರುತ್ತದೆ ಎಂಬುದನ್ನೇ ಕೆಲವರು ಮರೆತಂತಿದೆ.

ಇಂದು ಬೆಂಗಳೂರಿನಲ್ಲಿ ನಿಡುಮಾಮಿಡಿಸ್ವಾಮೀಜಿ , ಜಿ.ಕೆ ಗೋವಿಂದರಾವ್, ಏ.ಕೆ ಸುಬ್ಬಯ್ಯ, ನಿವೃತ್ತ ನ್ಯಾಯಾದೀಶ ಎಂಎಫ಼್ ಸಾಲ್ದಾನ, ಬಿ.ಟಿ. ಲಲಿತಾನಾಯಕ್, ಬಂಜಗೆರೆ ಜಯಪ್ರಕಾಶ್, ಕೋಡಿಹೊಸಹಳ್ಳಿ ರಾಮಣ್ಣ, ಜಾಣಗೆರೆ ವೆಂಕಟರಾಮಯ್ಯ, ಡಾ.ಹಿ.ಶಿ.ರಾಮಚಂದ್ರಗೌಡ, , ಹಿಂದುಳಿದ ವರ್ಗಗಳ ಜಾಗೃತ ವೇದಿಕೆಗಳ ಅಧ್ಯಕ್ಷ ಶಿವರಾಮ್ ಸೇರಿದಂತೆ ಅನೇಕ ಪ್ರಗತಪರರು ಭಾಗವಹಿಸಿದ್ದರು. ಅನೇಕ ವಿಚಾರವಾದಿಗಳು ಮಡೆಸ್ನಾನದ ವಿರುದ್ದ ಪ್ರೆಡಂ ಪಾರ್ಕಿನಲ್ಲಿ ಧರಣಿ ನಡೆಸಿದರು.ಹಾಗೆಯೇ ಸುಬ್ರಹ್ಮಣ್ಯದಲ್ಲಿಯೂಈ ವಿವಾದದಿಂದ ನೊಂದ ಅಲ್ಲಿಯ ನಾಗರಿಕರು ಮತ್ತು ಭಕ್ತರು ಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸಬೇಕೆಂದು ಇಂದು ಸುಬ್ರಹ್ಮಣ್ಯ ಬಂದ್ ಆಚರಿಸಿದರು. ರಥಬೀದಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸುಮಾರು ಐದು ಸಾವಿರ ಜನ ಭಾಗವಹಿಸಿದ್ದರು.

ಇದು ಮುಂದೆ ಯಾವ್ಯಾವ ರೀತಿಯ ಸಂಘರ್ಷಗಳಿಗೆ ಕಾರಣವಾಗಬಹುದೋ ಈಗಲೇ ಹೇಳಲಾಗದು.

Saturday, November 5, 2011

ಹಳೆ ಕಾದಂಬರಿಯ ಹೊಸಪ್ರಶ್ನೆ-’ಸಂಸ್ಕಾರ’ ಯಾರು ಮಾಡಬೇಕು?



[ಏ.ಕೆ ರಾಮಾನುಜರ ”೩೦೦ ರಾಮಾಯಣಸ್’ ವಾದ- ವಿವಾದಗಳ ತೆಕ್ಕೆಯಲ್ಲಿ ನರಳುತ್ತಿದೆ. ನಾಲೈದು ವರ್ಷಗಳ ಹಿಂದೆ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಅನಂತಮೂರ್ತಿಯವರ ’ಸಂಸ್ಕಾರ’ ಕಾದಂಬರಿ ಪಠ್ಯವಾಗಿದ್ದ ಸಂದರ್ಭದಲ್ಲಿ ಎದ್ದ ತಕರಾರುಗಳ ಸಂದರ್ಭದಲ್ಲಿ ನಾನು ಬರೆದ ಲೇಖನವೊಂದು ಕನ್ನಡ ಪ್ರಭದಲ್ಲ್ ಪ್ರಕಟವಾಗಿತ್ತು. ಈಗ ಅದು ಪ್ರಸ್ತುತವಾಗಬಹುದೆಂದು ಭಾವಿಸಿ ಪೋಸ್ಟ್ ಮಾಡುತ್ತಿದ್ದೇನೆ ]
ಇತ್ತೀಚೆಗೆ ಲೇಖಕರು ತಮ್ಮ ಕೃತಿಗಳನ್ನು ಅಳೆದು ತೂಗಿ ಬರೆಯಬೇಕಾದ ಸ್ಥಿತಿ ಉಂಟಾಗಿದೆ. ಸಾಹಿತ್ಯ ಕೃತಿಗಳು ಸಾಹಿತ್ಯೇತರ ಕಾರಣಗಳಿಂದಾಗಿ ಸುದ್ದಿ ಮಾಡುತ್ತಿವೆ. ಮಂಗಳೂರು ವಿಶ್ವವಿದ್ಯಾನಿಲಯದ ಹಿಂದಿ ಅಧ್ಯಾಪಕರ ಸಂಘಕ್ಕೆ ”ಸಂಸ್ಕಾರ” ಕಾದಂಬರಿಯಲ್ಲಿ ಆಶ್ಲೀಲತೆ ಕಾಣಿಸಿದೆ. ಹಾಗಾಗಿ ಅದನ್ನು ಪಾಠ ಮಾಡಲು ಸಾಧ್ಯವಿಲ್ಲ ಎಂಬುದು ಅವರ ವಾದ.
ಇಲ್ಲಿ ನಾವು ಗಮನಿಸಬೇಕಾದ್ದು ’ಸಂಸ್ಕಾರ’ ನಾನ್ ಡಿಟೈಲ್ಡ್ ಪಠ್ಯವಾಗಿ ಆಯ್ಕೆಯಾದ ಹಿಂದಿ ಪಟ್ಯಪುಸ್ತಕ. ಇದನ್ನು ಸವಿಸ್ತಾರವಾಗಿ ಅಂದರೆ ಪ್ರತಿ ಪ್ಯಾರ, ವಾಕ್ಯ, ಶಬ್ದಗಳನ್ನು ವಿವರಿಸಿ ಹೇಳುವ ಅಗತ್ಯ ಇಲ್ಲ. ಉತ್ತಮ ಅಧ್ಯಾಪಕನಾದವನು ನಾನ್ ಡಿಟೈಲ್ಡ್ ಪುಸ್ತಕವನ್ನುತರಗತಿಯಲ್ಲಿ ತೆರೆದು ಪಾಠ ಮಾಡುವುದಿಲ್ಲ; ಮುಚ್ಚಿ ಮಾಡುತ್ತಾನೆ. ಕಾದಂಬರಿಯ ವಸ್ತು, ಆಶಯ, ರೂಪ, ಬಂಧ, ಕಾದಂಬರಿ ರಚನೆಗೊಂಡ ಕಾಲಘಟ್ಟ, ಅದರ ಸಾಂಸ್ಕೃತಿಕ ಹಿನ್ನೆಲೆ, ಲೇಖಕನ ಆಗಿನ ಸಾಮಾಜಿಕ ಸ್ಥಾನ ಮಾನ ಮುಂತಾದವುಗಳನ್ನು ತನ್ನ ವ್ಯಾಖ್ಯಾನದೊಂದಿಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸುತ್ತಾನೆ. ಆ ಮೂಲಕ ಆ ಲೇಖಕನ ಇನ್ನಿತರ ಕೃತಿಗಳತ್ತ ವಿದ್ಯಾರ್ಥಿಗಳು ಗಮನ ಹರಿಸುವಂತೆ ಮಾಡುತ್ತಾನೆ.
ಇನ್ನು ’ಸಂಸ್ಕಾರ’ ಪಠ್ಯವಾಗಿರುವುದು ಬಿ.ಎಸ್ಸಿ ವಿದ್ಯಾರ್ಥಿಗಳಿಗೆ. ಅವರೆಲ್ಲಾ ೧೮-೨೦ರ ವಯೋಮಾನದವರು. ಮತದಾನ ಮತ್ತು ವಿವಾಹದ ವಯಸ್ಸು ಕೂಡಾ ಹದಿನೆಂಟು. ಅಂದರೆ ಅವರೆಲ್ಲಾ ಪ್ರಬುದ್ಧರು. ಮೇಲಾಗಿ ವಿಜ್ನಾನದ ವಿದ್ಯಾರ್ಥಿಗಳು. ಇವರೆದುರು ಪಾಠ ಮಾಡಲು ಮುಜುಗರವಾಗುತ್ತದೆಯೆನ್ನುವ ಅಧ್ಯಾಪಕರಲ್ಲೇ ಏನೋ ದೋಷವಿದ್ದಂತಿದೆ. ಅವರ ನಡವಳಿಕೆಗಳು ನೇರವಾಗಿದೆಯೆನ್ನಿಸುವುದಿಲ್ಲ. ಪಠ್ಯದ ಅವಶ್ಯವನ್ನು ಗುರುತಿಸುವಲ್ಲಿ ಅಧ್ಯಾಪಕರು ಸೋತಿದ್ದಾರೆ. ಇದು ಅವರ ಅಧ್ಯಯನಶೀಲತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಕಾಲಕ್ಕೆ ತಕ್ಕಂತೆ ಅಪ್ ಡೇಟ್ ಆಗದಿದ್ದರೆ ಇಂತಹ ಮನಸ್ಥಿತಿ ರೂಪುಗೊಳ್ಳುವುದು ಸಾಧ್ಯ. ಇಲ್ಲಿ ಇನ್ನೊಂದು ವಿಚಾರವನ್ನು ಗಮನಿಸಬೇಕು. ಈಗ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಬೇಕೆ? ಬೇಡವೇ ಎಂಬ ಬಗ್ಗೆ ಪರ- ವಿರೋಧ ಚರ್ಚೆಗಳು ಬಹು ಬಿರುಸಾಗಿ ನಡೆಯುತ್ತಿದೆ. ಇದು ಅಧ್ಯಾಪಕರ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ! ಬರದಿದ್ದರೆ ಅದರತ್ತಲೂ ಸ್ವಲ್ಪ ಗಮನ ಹರಿಸುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದು!
ಶೀಲ-ಅಶ್ಲೀಲ ಎನ್ನುವುದು ನಮ್ಮ ಗ್ರಹಿಕೆಯಲ್ಲಿರುತ್ತದೆ; ನಮ್ಮ ನಡವಳಿಕೆಯಲ್ಲಿರುತ್ತದೆ; ವಿಷಯ ಮಂಡನೆಯಲ್ಲಿರುತ್ತದೆ. ಇದೇ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಾನು ಕನ್ನಡ ಎಂ.ಎ ಓದುತ್ತಿದ್ದ ಸಂದರ್ಭದಲ್ಲಿ ಕಾರಂತರ ”ಮೈ ಮನಗಳ ಸುಳಿಯಲ್ಲಿ” ಮತ್ತು ರತ್ನಾಕರವರ್ಣಿಯ ’ಭರತೇಶ ವೈಭವ” ನಮಗೆ ನಾನ್ ಡೀಟೈಲ್ಡ್ ಪಠ್ಯವಾಗಿತ್ತು. ಮೈಮನಗಳ ಸುಳಿಯಲ್ಲಿ ಕಾದಂಬರಿಯನ್ನು ಈಗ ಕುವೆಂಪು ವಿ.ವಿಯಲ್ಲಿ ಅಧ್ಯಾಪಕರಾಗಿರುವ ಡಾ. ಕೇಶವ ಶರ್ಮ ಪಾಠ ಮಾಡುತ್ತಿದ್ದರು. ಪಾಠ ಮಾಡುವ ಸಂದರ್ಭದಲ್ಲೊಮ್ಮೆ ವಿದ್ಯಾರ್ಥಿಗಳು ಕೇಳಿದ ಯಾವುದೋ ಸಂದೇಹಕ್ಕೆ ಆಗ ತುಂಬಾ ಜನಪ್ರಿಯವಾಗಿದ್ದ ಸೆಕ್ಸ್ ಪತ್ರಿಕೆ ’ರತಿ ವಿಜ್ನಾನ’ ವನ್ನು ಕೂಡಾ ಕೋಟ್ ಮಾಡಿದ್ದಂತೆ ನನಗೆ ನೆನಪು.
ಹಾಗೆಯೇ ಭರತೇಶ ವೈಭವವನ್ನು ದಿ. ಚಂದ್ರಶೇಖರ ಐತಾಳ್ ಮನ ಮುಟ್ಟುವಂತೆ ವಿವರಿಸುತ್ತಿದ್ದರು. ಇದರಲ್ಲಿ ’ಸ್ತ್ರೀ ರತ್ನ ಸಂಭೋಗ’ ಎಂಬ ಅಧ್ಯಾಯವೊಂದಿದೆ. ಚಕ್ರವರ್ತಿ ಭರತೇಶ ಮತ್ತು ಆತನ ಪಟ್ಟದ ರಾಣಿ ಕುಸುಮಾಜಿಯ ರತಿರಾತ್ರಿ ವರ್ಣನೆಯನ್ನು ಸುಮಾರು ಹನ್ನೆರಡು ಪುಟಗಳಲ್ಲಿ ರತ್ನಾಕರವರ್ಣಿ ವಿವರಿಸಿದ್ದಾನೆ. ಇದನ್ನು ಓದುತ್ತಿದ್ದರೆ ’ಕಾಮಶಾಸ್ತ್ರ’ ಬರೆದ ವಾತ್ಸಾಯನ ಕೂಡಾ ರತ್ನಾಕರವರ್ಣಿಯ ಮುಂದೆ ಎಳಸು ಎನಿಸುತ್ತದೆ.
ಇವೆರಡು ಪಠ್ಯಗಳನ್ನು ಆ ಅಧ್ಯಾಪಕರು ನಮಗೆ ಮನದಟ್ಟಾಗುವಂತೆ, ಎಷ್ಟು ಬೇಕೋ ಅಷ್ಟನ್ನು ಯಾವುದೇ ಮುಜುಗರವಿಲ್ಲದೆ ಪ್ರಬುದ್ಧತೆಯಿಂದ ವಿವರಿಸಿದ್ದಾರೆ. ಇಲ್ಲಿ ಪಠ್ಯದ ಒಟ್ಟು ಗ್ರಹಿಕೆ ಮತ್ತು ವಿಷಯ ಮಂಡನೆ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇಲ್ಲಿ ಇನ್ನೊಂದು ವಿಚಾರವನ್ನು ಗಮನಿಸಬೇಕು; ನಮ್ಮ ಮಾತೃ ಭಾಷೆ ನಮ್ಮ ಭಾವಕೋಶದಲ್ಲಿ ಸೇರಿಕೊಂಡ ಭಾಷೆ. ಹಾಗಾಗಿ ಅದರಲ್ಲಿ ಯಾರಾದರೂ ಬಯ್ದರೆ ನಮಗೆ ನೋವಾಗುತ್ತದೆ. ಆದರೆ ಅದೇ ಬಯ್ಗಳು ಅನ್ಯ ಭಾಷೆಯಿಂದ ಬಂದರೆ ಆ ಮಟ್ಟಿನ ನೋವಾಗುವುದಿಲ್ಲ. ಹಾಗಾಗಿ ಸಂಸ್ಕೃತದಲ್ಲಿ ಬರುವ ಶೃಂಗಾರ ವರ್ಣನೆಗಳು ಮುಜುಗರವೆನಿಸುವುದಿಲ್ಲ. ಶಂಕರಾಚಾರ್ಯರು ತಮ್ಮ ’ಸೌಂದರ್ಯ ಲಹರಿ’ಯಲ್ಲಿ ದೇವಿಯ ಅಂಗಾಂಗಗಳನ್ನು ವರ್ಣಿಸಿದರೆ, ಬೆಳಗಾಗೆದ್ದು ವೆಂಕಟೇಶ್ವರ ಸುಪ್ರಭಾತದ ”ಕಮಲ ಕುಚ ಚೂಚತೇ” ಆಲಿಸಿದರೆ ಮುಜುಗರವಾಗುವುದಿಲ್ಲ.ಈ ಹಿನ್ನೆಲೆಯಲ್ಲಿ ಕನ್ನಡದ ’ಸಂಸ್ಕಾರ’ದಲ್ಲಿ ”ಚಂದ್ರಿಯ ಮೊಲೆಗಳನ್ನು ಮೆತ್ತಗೆ ಅಮುಕಬೇಕೆನಿಸುತ್ತದೆ” ಎನ್ನುವ ವಾಕ್ಯ ಉಂಟು ಮಾಡುವ ಮುಜುಗರಕ್ಕೂ ”ಚಂದ್ರಿ ಕೇ ಸ್ತನ್ಕೋ ಧೀರೆ ಧೀರೆ ದಬನೇಕಾ ಮನ್ ಹೋತಾ ಹೈ” ನೀಡುವ ಭಾವಕ್ಕೂ ವ್ಯತ್ಯಾಸವಿದೆಯಲ್ಲವೇ? ಆದರೂ ಕೆಲವು ಹಿಂದಿ ಅಧ್ಯಾಪಕರೇಕೆ ಕೊಂಕು ತೆಗೆಯುತ್ತಿದ್ದಾರೆ? ಶೃಂಗಾರ ವರ್ಣನೆ ಅಶ್ಲೀಲವೆಂದಾರೆ ಸಂಸ್ಕೃತ ಸಾಹಿತ್ಯವನ್ನೆಲ್ಲಾ ನಾವು ಸಾರಾಸಗಟಾಗಿ ತಿರಸ್ಕರಿಸಬೇಕಾಗುತ್ತದೆ.
ಅನಂತಮೂರ್ತಿಯವರು ೧೯೬೫ರಲ್ಲಿ ತಮ್ಮ ೩೬ನೇ ವಯಸ್ಸಿನಲ್ಲಿ ಬರೆದ ಅವರ ಮೊದಲ ಕಾದಂಬರಿ ’ಸಂಸ್ಕಾರ’ ೧೯೭೬ರಲ್ಲಿ ಅದನ್ನು ಕವಿ ಎ.ಕೆ ರಾಮಾನುಜನ್ ಇಂಗ್ಲೀಷ್ ಗೆ ಅನ್ವಾದಿಸಿದರು. ನೋಬೆಲ್ ಪ್ರಶಸ್ತಿ ವಿಜೇತ ನೈಪಾಲ್ ಸೇರಿದಂತೆ ಅನೇಕ ಪ್ರಸಿದ್ಧರು ಅದನ್ನು ಜಗತ್ತಿನ ಬೇರೆ ಬೇರೆ ಭಾಷೆಗಳಿಗೆ ಅನುವಾದ ಮಾಡಿದ್ದಾರೆ. ಕನ್ನಡದಲ್ಲಿ ಚಲಚಿತ್ರವಾಗಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ’ಸಂಸ್ಕಾರ’ ದ ಪ್ರಮುಖ ಪಾತ್ರಗಳಾದ ಪ್ರಾಣೇಶಾಚಾರ್ಯ ಮತ್ತು ನಾರಣಪ್ಪನ ಪಾತ್ರಗಳಲ್ಲಿ ಕ್ರಮವಾಗಿ ಗಿರೀಶ್ ಕಾರ್ನಾಡ್ ಮತ್ತು ಲಂಕೇಶ್ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಜಗತ್ತಿನ ಅನೇಕ ಸಾಹಿತ್ಯಾಸಕ್ತರಿಗೆ ಇಂದಿಗೂ ಕುತೂಹಲ ಹುಟ್ಟಿಸುವ ಕೃತಿ ’ಸಂಸ್ಕಾರ’
ಇಂತಹ ಕೃತಿಯನ್ನು ಅದು ರೂಪುವೊಡೆದ ನೆಲದಲ್ಲಿ, ನಮ್ಮದೇ ಭಾಷೆಯಲ್ಲಿ, ನಮ್ಮ ವಿದ್ಯಾರ್ಥಿಗಳಿಗೆ ಬೋದಿಸಲು ಸಾಧ್ಯವಿಲ್ಲವೆಂದರೆ…?
ಟೀವಿ ಚಾನಲ್ಲೊಂದರಲ್ಲಿ ಅಧ್ಯಾಪಕರೊಬ್ಬರು”ಸಂಸ್ಕಾರ ಓದುವುದರಿಂದ ನಮ್ಮ ಮಕ್ಕಳಲ್ಲಿ ಕಾಮಸಂಬಂಧಿ ಆಲೋಚನೆಗಳೇ ತುಂಬುತ್ತದೆ’ ಎಂದಿದ್ದಾರೆ. ಅದು ನಿಸರ್ಗ ಸಹಜ ಭಾವನೆ. ಒಂದು ವೇಳೆ ಶೃಂಗಾರ ವರ್ಣನೆ ಕೇಳಿದಾಗ ಅವರಲ್ಲಿ ಮಧುರಭಾನೆಗಳು ಮೂಡದಿದ್ದರೆ ಅವರು ’ನಾರ್ಮಲ್’ ಆಗಿಲ್ಲ ಎಂದಾಗುತ್ತದೆ. ೧೮-೨೦ರ ವಯೋಮಾನದಲ್ಲಿ ತಮ್ಮ ಮನಸು ಹೇಗಿತ್ತೆಂಬುದನ್ನು ಅಧ್ಯಾಪಕರೇ ಸ್ವವಿಮರ್ಶೆ ಮಾಡಿಕೊಳ್ಳಲಿ. ಜೊತೆಗೆ ನಮ್ಮ ಅಕ್ಷರ ಮತ್ತು ಮುದ್ರಣ ಮಾಧ್ಯಮ, ಸಿನೇಮಾ, ಇಂಟರ್ನೆಟ್ ಗಳಲ್ಲಿ ಲೈಂಗಿಕತೆ ಢಾಳಾಗಿ ವಿಜೃಂಭಿಸುತ್ತಿಲ್ಲವೇ? ನಮ್ಮ ಮಕ್ಕಳು ಕುತೂಹಲಕ್ಕಾದರೂ ಅವುಗಳೆಡೆಗೆ ನೋಡುತ್ತಿಲ್ಲವೆಂದು ನಾವೇಕೆ ಭಾವಿಸಬೇಕು?
ಈ ಕಾಲಘಟ್ಟದಲ್ಲಿ ಯಾರೂ ಕೂಡಾ, ಯಾವುದೂ ಕೂಡ ಹೊರ ನೋಟಕ್ಕೆ ಕಂಡಷ್ಟು ಮುಗ್ಧವಾಗಿಲ್ಲ.

Wednesday, October 19, 2011

ಕಟಕಟೆಯಲ್ಲಿ ಯಡ್ಡಿ- ನೋಡಿದ್ದು, ಕಾಡಿದ್ದು


ನಿನ್ನೆ ಇಡೀ ದಿವಸ ನಮ್ಮ ರಾಜ್ಯ ರಾಜಧಾನಿಯಲ್ಲಿ ರಾಜಕೀಯ ದೊಂಬರಾಟ ನಡೆಯಿತು. ಆ ದೊಂಬರಾಟ ನಿನ್ನೆ ಆರಂಭವಾಗಿದ್ದೇನಲ್ಲ. ಎಂದೋ ಆರಂಭವಾಗಿದ್ದು ನಿನ್ನೆ ಉತ್ತುಂಗಕ್ಕೇರಿತ್ತು. ಇಂದೂ ದೊಂಬರಾಟ ಮುಂದುವರಿದಿದೆ….

ನಿನ್ನೆಯ ಪ್ರಹಸನದಲ್ಲಿ ಮೂರು ಘಟನೆಗಳು ನನ್ನ ಗಮನ ಸೆಳೆದವು. ಒಂದು ತುಮಕೂರಿನ ಸಿದ್ಧಗಂಗಾ ಮಠದ ಸ್ವಾಮಿಗಳು ಯಡಿಯೂರಪ್ಪನವರ ಆರೋಗ್ಯ ವಿಚಾರಿಸಲು ಜಯದೇವ ಹೃದ್ರೋಗ ಆಸ್ಪತ್ರೆಗೆ ಭೇಟಿ ನೀಡಿದ್ದು. ಎರಡು, ಹಿರಿಯ ರಾಜಕಾರಣಿ,ಸಮಾಜವಾದಿ ಚಿಂತಕ ಕೆ.ಎಚ್.ರಂಗನಾಥ್ ವಿಧಿವಶರಾದದ್ದು. ಇನ್ನೊಂದು, ನ್ಯಾಯಾಲಯದ ಆಣತಿಯನ್ನೇ ಅಣಕಿಸುವಂತೆ ಜಯದೇವದಿಂದ ವಿಕ್ಟೋರಿಯಾ ಆಸ್ಪತ್ರೆಗೆ ಪೇಷೆಂಟ್ ಯಡಿಯೂರಪ್ಪನವರು ಜಾರಿಕೊಂಡದ್ದು ಮತ್ತು ಅದನ್ನು ಲೈವ್ ಕಾಮೆಂಟ್ರಿಯಂತೆ ದೃಶ್ಯ ಮಾಧ್ಯಮದವರು ಬಿತ್ತರಿಸಿದ್ದು.

ಕೆ.ಎಚ್.ರಂಗನಾಥ ತೀರಿಕೊಂಡರು ಎಂದಾಗ ಅವರ ಬಗ್ಗೆ ಹಿಂದೆ ಹಿರಿಯ ಪತ್ರಕರ್ತರೊಬ್ಬರು ಹೇಳಿದ ಘಟನೆಯೊಂದು ನೆನಪಾಯಿತು..ಅದು ಅವರು ವಿಧಾನ ಸಬಾ ಅಧ್ಯಕ್ಷರಾಗಿದ್ದ ಸಮಯ. ಅವರ ಛೇಂಬರಿನಲ್ಲಿ ಇವರು ಮಾತಾಡುತ್ತಾ ಕುಳಿತ್ತಿದ್ದರಂತೆ. ಬಿಳ್ಕೊಡಲೆಂದು ಎದ್ದು ನಿಂತಾಗ ಏನೋ ತಗುಲಿ ಅವರ ಚಪ್ಪಲಿ ಕಿತ್ತು ಹೋಯಿತಂತೆ. ಹೊರಗೆಲ್ಲೋ ಹೋಗಬೇಕಾದ ಕಾರ್ಯಕ್ರಮವಿದ್ದುದರಿಂದ ಅನಿವಾರ್ಯವಾಗಿ ತಮ್ಮ ಪಿ.ಎ ಯನ್ನು ಕರೆದು ತಮಗೊಂದು ಚಪ್ಪಲಿ ತರುವಂತೆ ಹೇಳಿ ಆ ಪತ್ರಕರ್ತರನ್ನು ಇನ್ನೂ ಸ್ವಲ್ಪ ಹೊತ್ತು ತಮ್ಮಲ್ಲೇ ಉಳಿಸಿಕೊಂಡರಂತೆ. ಪಿ.ಎ ಸುಮಾರು ಎಂಟುನೂರು ರೂಪಾಯಿ ಬೆಲೆಬಾಳುವ ಚಪ್ಪಲಿಯನ್ನು ತಂದು ಅವರ ಮುಂದಿಟ್ಟಾಗ ಅವರು, ಇಂತಹ ದುಬಾರಿ ಬೆಲೆಯ ಚಪ್ಪಲಿಯನ್ಯಾಕೆ ತಂದೆಯೆಂದು ಅವನಿಗೆ ಸಿಕ್ಕಾಪಟ್ಟೆ ಬೈದರಂತೆ.ಬೈದದ್ದು ಮಾತ್ರವಲ್ಲಾ ಶಿವಾಜಿನಗರಕ್ಕೆ ಕಳುಹಿಸಿ ೭೦ ರೂಪಾಯಿಯ ಚಪ್ಪಲಿಯನ್ನು ತರಿಸಿಕೊಂಡರಂತೆ. ಅಂತಹ ಸರಳ ಜೀವಿಯನ್ನು ನಾಳೆ ಆಕ್ರಮ ಸಂಪತ್ತು ಗಳಿಕೆಯ ಹಿನ್ನೆಲೆಯಲ್ಲಿ ನ್ಯಾಯಾಲಯದ ವಿಚಾರಣೆಯನ್ನೆದುರಿಸಲು ಕರ್ನಾಟಕಕ್ಕೆ ಆಗಮಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಳ ಸಂಗ್ರಹದಲ್ಲಿದ್ದ ೭೫೦ ಜೊತೆ ಚಪ್ಪಲಿಯನ್ನೊಮ್ಮೆ ಹೋಲಿಸಿ ನೋಡಿಕೊಳ್ಳಿ!

ಸಮಾಜವಾದಿ ಚಿಂತನೆಯ ಹಿನ್ನೆಲೆಯಿದ್ದ, ದಲಿತರ ಗಟ್ಟಿ ಧ್ವನಿಯ, ನಿಷ್ಠುರವಾದಿ ಕೆ.ಎಚ್. ಕೊನೆಯ ತನಕ ತೀರಾ ಸರಳವಾಗಿಯೇ ಬದುಕಿದರು. ಬೆಂಗಳೂರಿನ ನವರಂಗ್ ಪಕ್ಕದ ಪ್ರಕಾಶ್ ನಗರದಲ್ಲಿ ಪುಟ್ಟ ಮನೆಯೊಂದರಲ್ಲಿ ಬಾಳಿ ಬದುಕಿದ ಈ ಹಿರಿಯ ರಾಜಕಾರಣಿಯ ಅಂತಿಮ ದರ್ಶನಕ್ಕೆ ಯಾವ ಸ್ವಾಮೀಜಿಯೂ ಬರಲಿಲ್ಲ. ಆದರೆ ಅದೇ ಸಮಯಕ್ಕೆ ಜಯದೇವ ಆಸ್ಪತೆಯಲ್ಲಿ ಪವಡಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ನೋಡಲು ತುಮಕೂರಿನ ಸಿದ್ಧಗಂಗಾ ಮಠಾದೀಶ ಶಿವಕುಮಾರ ಸ್ವಾಮೀಜಿ ಆಗಮಿಸಿದ್ದರು!

ಇದೇ ಸಂದರ್ಭದಲ್ಲಿ ಪತ್ರಕರ್ತರೊಭ್ಭರು ಹೇಳಿದ ಮಾತೊಂದು ನೆನಪಾಗುತ್ತಿದೆ; ’ಬೀದರಿನಲ್ಲಿ ಲಿಂಗ ಸ್ವಲ್ಪ ಅಲ್ಲಾಡಿದರೂ ಸಾಕು ಚಾಮರಾಜ ನಗರದಲ್ಲಿನ ಪಾಣಿಪೇಠ ಅದಕ್ಕೆ ಪ್ರತಿಕ್ರಿಯಿಸುತ್ತೆ’ ಇದನ್ನು ವಿವರಿಸಿ ಹೇಳಬೇಕಿಲ್ಲ ಅನ್ನುತ್ತೆ. ಹೇಳಲೇ ಬೇಕಾದರೆ ಮೂರು ವರ್ಷದ ಹಿಂದೆ ಮೈಸೂರು ದಸರಾ ಉದ್ಘಾಟನೆಗೆ ಆಗ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರು ಸಿದ್ದಗಂಗಾ ಶ್ರೀಗಳನ್ನು ಕೇಳಿಕೊಂಡಿದ್ದರು. ಅವರು ಕೂಡಾ ಒಪ್ಪಿಕೊಂಡಿದ್ದರು. ಆದರೆ ಯಡಿಯೂರಪ್ಪನವರಿಗೆ ಮಾತು ಕೊಟ್ಟಂತೆ ಕುಮಾರ ಸ್ವಾಮಿ ಅಧಿಕಾರ ಹಸ್ತಾಂತರಿಸಲಿಲ್ಲ. ಸಿಟ್ಟುಗೊಂಡ ಸ್ವಾಮಿಗಳು ಉದ್ಗಾಟನೆಗೆ ಬರಲಿಲ್ಲ!

ಈಗಲೂ ಹೇಗಾದರೂ ಮಾಡಿ ಯಡಿಯೂರಪ್ಪನವರನ್ನು ಜೈಲಿನಿಂದ ಹೊರತರಲು ಲಿಂಗಾಯಿತ ಸಮುದಾಯ, ಮಠಮಾನ್ಯರು,ಪತ್ರಕರ್ತರಾದಿಯಾಗಿ ಎಲ್ಲರೂ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.

ಇನ್ನು ನಿನ್ನೆ ದೃಶ್ಯ ಮಾಧ್ಯಮದವರ ವರದಿಗಾರಿಕೆ ಹೇಗಿತ್ತೆಂದರೆ ಅವರೆಲ್ಲಾ ಕ್ರಿಕೆಟ್ ಕಾಮೆಂಟ್ರಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆನೋ ಎಂದು ಭಾಸವಾಗುತ್ತಿತ್ತು. ಆದರೆ ತಮ್ಮ ವೃತ್ತಿ ಭಾಂದವರಲ್ಲೇ ಹಲವರ ಹೆಸರುಗಳು ಲೋಕಾಯುಕ್ತ ಯು.ವಿ.ಸಿಂಗ್ ವರದಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ನಾಳೆ ಅವರನೇನಾದರೂ ವಿಚಾರಣೆಗೆ ಒಳಪಡಿಸಿದರೆ ಇದೇ ಉತ್ಸಾಹದಿಂದ ಇವರು ವರದಿ ಮಾಡಬಲ್ಲರೇ?

ಬ್ರಷ್ಟಾಚಾರ. ಸ್ವಜನ ಪಕ್ಷಪಾತವೆಂಬುದು ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ.

ನಿನ್ನೆಯವರೆಗೆ ಯಡ್ಡಿಯ ವಿರುದ್ಧ ದಾಖಲೆಗಳ ಮೇಲೆ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದ ಕುಮಾರಸ್ವಾಮಿ ನಿನ್ನೆ ಮದ್ಯರಾತ್ರಿ ಕಳ್ಳರಂತೆ ಯಡ್ಡಿಯನ್ನು ಬೇಟಿ ಮಾಡಿದ್ದಾರೆ. ಅಲ್ಲಿ ಅವರು ಯಾವ ತಂತ್ರ ಹಣೆದರೋ ಗೊತ್ತಿಲ್ಲ. ರಾಜಕೀಯದಲ್ಲಿ ಯಾರೂ ವಿರೋಧಿಗಳಲ್ಲ!

ಇಂದಿನ ಕಥೆ ಕೇಳಿ, ಅದು ಇನ್ನೂ ಸ್ವಾರಸ್ಯಕರವಾಗಿದೆ. ಕುಮಾರ ಸ್ವಾಮಿಯ ಮೇಲೆ ಐ.ಪಿ.ಸಿ ೪೯೪ರ ಅಡಿಯಲ್ಲಿ ದಿಪತ್ನಿತ್ವದ ಆರೋಪದಡಿಯಲ್ಲಿ ಕೇಸ್ ದಾಖಲಾಗಿದೆ. ನಗರದ ಲಾಯರ್ ಒಬ್ಬರು, ಮೊದಲನೇ ಹೆಂಡತಿಯಿರುವಾಗಲೇ ಇನ್ನೊಂದು ಮದುವೆಯಾಗಿರುವ ಅಪರಾಧಕ್ಕಾಗಿ ಕುಮಾರಸ್ವಾಮಿಯವರ ಸಂಸತ್ ಸ್ಥಾನವನ್ನು ಅನರ್ಹಗೊಳಿಸಬೇಕೆಂದು ಕೇಸ್ ದಾಖಲಿಸಿದ್ದಾರೆ.

ನಮ್ಮ ಗೃಹ ಸಚಿವ ಸಾಮ್ರಟ್ ಅಶೋಕ್ ಮೇಲೆ ಡಿನೋಟಿಫಿಕೇಶನ್ ಕೇಸ್ ದಾಖಲಾಗಿದೆ.

ಅಂತೂ ಬಿ.ಜೆ.ಪಿಯ ನಾಯಕರೆಲ್ಲಾ ನ್ಯಾಯಾಂಗದ ಮುಂದೆ ಕೈಕಟ್ಟಿ ನಿಲ್ಲುವ ಪ್ರಸಂಗ ಬಂದೊದಗುತ್ತಿದೆ.

ಅಂತೂ ನ್ಯಾಯಾಂಗ ಹಿಂದೆಂದೂ ಇಲ್ಲದಷ್ಟು ಕ್ರಿಯಾಶೀಲವಾಗಿದೆ. ಜನತೆ ಕಾರ್ಯಾಂಗ, ಶಾಸಕಾಂಗ,ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾದ ಪತ್ರಿಕಾರಂಗದ ಮೇಲೆ ಭರವಸೆಯನ್ನು ಕಳೆದುಕೊಂಡಿದ್ದರು. ಸಿನಿಕರಾಗಿದ್ದರು. ಆದರೆ ಈಗ ಅವರಲ್ಲಿ ಮತ್ತೆ ಭರವಸೆ ಮೂಡುತ್ತಿದೆ. ಅದು ಸಮೂಹ ಪ್ರಜ್ನೆಯಾಗಿ ಹೊರಹೊಮ್ಮಬೇಕು. ಅದು ಮುಂಬರುವ ಚುನಾವಣೆಯಲ್ಲಿ ಮತಗಳಾಗಿ ಹೊರಹೊಮ್ಮಬೇಕು ಹಾಗಾಗಲು ಸಾಧ್ಯವೇ? ನಮ್ಮ ಜಾತಿ ವ್ಯವಸ್ಥೆಯನ್ನು ನೋಡಿದರೆ ಆ ಬಗ್ಗೆ ಸಂಶಯಗಳಿವೆ.

ಪ್ರಗತಿಪರ ಚಳುವಳಿಗಳಿಲ್ಲ; ಹೋರಾಟಗಳಿಲ್ಲ, ಚಿಂತಕರಿಲ್ಲ, ಆದರ್ಶ ವ್ಯಕ್ತಿತ್ವಗಳಿಲ್ಲ ಒಟ್ಟಿನಲ್ಲಿ ಹೇಳಬೇಕೆಂದರೆ ಮುಂದೆ ಗುರಿಯಿಲ್ಲ, ಹಿಂದೆ ಗುರುವಿಲ್ಲ. ಅಡಿಗರು ಹೇಳಿದಂತೆ, ’ಹೆಳವನ ಹೆಗಲ ಮೇಲೆ ಕುರುಡ ಕುಳಿತ್ತಿದ್ದಾನೆ. ದಾರಿ ಸಾಗುವುದೆಂತೋ ನೋಡಬೇಕು’

Monday, October 10, 2011

ಪ್ರೀತಿಯೆಂಬ ಮಾಯಾಮೃಗ


ಅವರು ಕನ್ನಡದ ಖ್ಯಾತ ಪತ್ರ್ಕರ್ತರು.ಅವರಿಗೊಬ್ಬ ಮಗನಿದ್ದ. ಆತನಿಗೆ ಆಗ ಖ್ಯಾತಿಯಲ್ಲಿದ್ದ ಚಿತ್ರನಟಿ ಮೀನಾಕ್ಷಿ ಶೇಷಾದ್ರಿಯೆಂದರೆ ಹುಚ್ಚು ಮೋಹ. ಆತ ಎಲ್ಲರೆದುರು ’ಮೀನಾಕ್ಷಿ ನನ್ನನ್ನು ಪ್ರೀತಿಸುತ್ತಿದ್ದಾಳೆ’ ಎಂದು ಹೇಳಿಕೊಳ್ಳುತ್ತಿದ್ದ. ಈಗ ತಾನೇ ಅವಳಿಗೆ ಪೋನ್ ಮಾಡಿದೆ, ಅವಳು ತನ್ನನ್ನು ಬಾಂಬೆಗೆ ಬರಹೇಳಿದ್ದಾಳೆ. ಅಂತೆಲ್ಲಾ ತನ್ನ ಸೇಹಿತರೆದುರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ.

ಸ್ವಲ್ಪಮಟ್ಟಿಗೆ ಆತ ಅವನು ಮಾನಸಿಕ ಅಸ್ವಸ್ಥ. ಹಾಗಾಗಿ ಬೇರೆಯವರಿಗೆ ಆತ ಲೇವಡಿಯ ವಸ್ತುವಾಗಿದ್ದ. ಆತನ ಭ್ರಮಾ ಲೋಕದಲ್ಲಿ ಆತ ಮತ್ತು ಮೀನಾಕ್ಷಿ ಶೇಷಾದ್ರಿ ಪರಸ್ಪರ ಪ್ರೇಮಿಸುತ್ತಿದ್ದರು. ಆದರದು ನಿಜವಾಗುವ ಸಾಧ್ಯತೆಯೇ ಇರಲಿಲ್ಲ. ಇದನ್ನು ಆತನಿಗೆ ತಿಳಿಸಿ ಹೇಳಿದರೂ ನಂಬುವ ಸ್ಥಿತಿಯಲ್ಲಿ ಆತನಿರಲಿಲ್ಲ. ಅದು ಅವನೇ ಸೃಷ್ಟಿಸಿಕೊಂಡಿರುವ ಜಗತ್ತು.

ನನ್ನ ಗೆಳತಿಯೊಬ್ಬಳು ಒಂದು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಳು. ಅದೇ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ತರುಣನೊಬ್ಬ ಆಕೆಯಲ್ಲಿ ಅನುರಕ್ತನಾದ. ಆದರೆ ಅದನ್ನಾತ ಅವಳಲ್ಲಿ ಹೇಳಿಕೊಳ್ಳಲಿಲ್ಲ. ಆಕೆ ಇನ್ನ್ಯಾರನ್ನೋ ಇಷ್ಟಪಟ್ಟಳು; ಪ್ರೀತಿಸಿದಳು. ಅವರಿಬ್ಬರೂ ಜೊತೆಯಲ್ಲಿ ಓಡಾಡಲು ಶುರುಮಾಡಿದರು. ಇವನಿಗೆ ಅದನ್ನು ಸಹಿಸಲಾಗಲಿಲ್ಲ. ಆತ ಕೆಲಸ ಬಿಟ್ಟು ಇನ್ನೆಲ್ಲಿಗೋ ಹೊರಟು ಹೋದ. ಇಲ್ಲಿ ಆ ಹುಡುಗಿ ಮದುವೆಯಾದಳು. ಮಕ್ಕಳನ್ನು ಪಡೆದಳು. ಅನ್ಯೋನ್ಯ ದಾಂಪತ್ಯ ನಡೆಸುತ್ತಿದ್ದಳು.

ಒಂದು ದಿನ ಆ ಹುಡುಗನ ಬಗ್ಗೆ ಇವಳಿಗೆ ವಿವರಗಳು ದೊರಕಿದವು. ಮಧ್ಯವಯಸ್ಸನ್ನು ದಾಟುತ್ತಿರುವ ಆತ ಇನ್ನೂ ವಿವಾಹವಾಗದೇ ಕೇವಲ ಇವಳ ಆರಾಧನೆಯಲ್ಲೇ ಬದುಕು ನಡೆಸುತ್ತಿದ್ದಾನೆ ಎನ್ನುವುದು ತಿಳಿಯಿತು. ತನ್ನಿಂದಾಗಿ ಒಬ್ಬ ಒಳ್ಳೆಯ ಮನಸಿನ, ಪ್ರತಿಭಾವಂತ ಹುಡುಗನ ಬದುಕು ಹೀಗಾಯ್ತಲ್ಲಾ ಎಂದು ಆಕೆ ಈಗ ಕೊರಗುತ್ತಿದ್ದಾಳೆ ಆಕೆ ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ.

ಇದಕ್ಕೆಲ್ಲಾ ಯಾರು ಹೊಣೆ?

ಏಕಮುಖವಾದ ಪ್ರೀತಿಯೇ ಹಾಗೆ. ಅದು ಒಬ್ಬರ ಮನಸ್ಸಿನಲ್ಲಿ ಹುಟ್ಟಿ, ಅಲ್ಲಿಯೇ ಬೆಳೆದು ಹೆಮ್ಮರವಾಗುತ್ತದೆ. ಅವರದೇ ಭಾವನೆಯ ಜಗತ್ತಿನಲ್ಲಿ ಅವರೇ ಚಕ್ರವರ್ತಿಗಳು.

ಭೂಮಿಯ ಒಡಲಲ್ಲಿ ನೀರಿನ ಸೆಲೆ ಹೇಗೆ ಅತ್ಯಂತ ಸಹಜವಾಗಿ ಇದೆಯೋ ಹಾಗೆಯೇ ಪ್ರತಿಯೊಬ್ಬ ಮನುಷ್ಯನ ಹೃದಯಾಂತರಾಳದಲ್ಲೂ ಪ್ರೀತಿಯ ಒರತೆ ಇದ್ದೇ ಇರುತ್ತದೆ. ಅನುಕೂಲ ಪರಿಸ್ಥಿತಿಯಲ್ಲಿ ಅದು ಉಕ್ಕಿ ಹರಿಯಲಾರಂಭಿಸುತ್ತದೆ. ಹದಿಹರೆಯದ ದಿನಗಳಲ್ಲಿ ಈ ಒರತೆ ಒಸರಲು ಆರಂಭಗೊಳ್ಳುತ್ತದೆ. ಯಾರೋ ತನ್ನನ್ನು ಗಮನಿಸುತ್ತಿದ್ದಾರೆ, ಇನ್ಯಾರಿಗೋ ತಾನು ಇಷ್ಟವಾಗುತ್ತಿದ್ದೇನೆ, ಹಾಗಾಗಿ ತಾನು ಇನ್ನಷ್ಟು ಆಕರ್ಷಕವಾಗಿ ಕಾಣಬೇಕು, ತನ್ನ ನಡೆ-ನುಡಿ-ಅಭಿರುಚಿಗಳಲ್ಲಿ ಬದಲಾವಣೆಯಾಗಬೇಕು-ಎಂದೆಲ್ಲಾ ಹುಡುಗ, ಹುಡುಗಿಯರು ಭಾವಿಸಿಕೊಳ್ಳುತ್ತಾರೆ. ಕನ್ನಡಿಯ ಮುಂದೆ ದಿನದರ್ಧ ಭಾಗವನ್ನು ಕಳೆಯುವ ಕಾಲ ಇದು.

ಸಾಹಿತ್ಯದ ಪರಿಭಾಷೆಯಲ್ಲಿ ನಾರ್ಸಿಸಂ ಅಥವಾ ಆತ್ಮರತಿ ಎಂದು ಕರೆಯಿಸಿಕೊಳ್ಳುವ ಸ್ವಮೋಹಿತ ಸ್ಥಿತಿ ಇದು. ಅಂದರೆ ತನ್ನನ್ನೇ ತಾನು ಅತಿಯಾಗಿ ಪ್ರೀತಿಸಿಕೊಳ್ಳುವ ಅವಧಿ. ನಮ್ಮ ಹೆಚ್ಚಿನ ಹುಡುಗ-ಹುಡುಗಿಯರು ಏಕಮುಖವಾದ ಪ್ರೀತಿಗೆ ಬೀಳುವುದೇ ಈ ಕಾಲದಲ್ಲಿ.

ಹುಡುಗನೆದುರು ಹುಡುಗಿ ಸಮೀಪದಲ್ಲಿ ಸುಳಿದರೂ ಸಾಕು, ಅವನ ಮೈ-ಮನಸು ಆಳಿಬಿಡುತ್ತದೆ. ಕಾರಣವಿಲ್ಲದೆ ಮನಸ್ಸು ಒಮ್ಮೊಮ್ಮೆ ಖುಷಿಯಿಂದ ನಲಿದಾಡುತ್ತಿದ್ದರೆ, ಇನ್ನೊಮ್ಮೆ ಯಾವುದೋ ಸಂಕಟದಿಂದ ವಿಲವಿಲನೆ ಒದ್ದಾಡುತ್ತಿರುತ್ತದೆ. ಯಾರೋ ಒಬ್ಬರು ಪ್ರೀತಿಯಿಂದ ಮಾತಾಡಿಸಿದರೆ, ಒಂಚೂರು ನಕ್ಕು ಬಿಟ್ಟರೆ ಅವರಿಗೆ ತನ್ನಲ್ಲಿ ಆಸಕ್ತಿಯಿದೆ, ಅದು ಪ್ರೀತಿಯೇ ಇರಬೇಕು ಎಂದು ಹುಡುಗ-ಹುಡುಗಿಯರು ಭ್ರಮಿಸಿಬಿಡುತ್ತಾರೆ. ಪ್ರಪೋಸ್ ಮಾಡಿದರೆ ಹೇಗೆ ಎಂದು ಆ ಬಗ್ಗೆ ತಾಲೀಮ್ ನಡೆಸುತ್ತಾರೆ. ಕೆಲವು ಭೂಪರು ಪ್ರಪೋಸ್ ಮಾಡಿಯೂ ಬಿಡುತ್ತಾರೆ. ’ಭೂಪರು’ ಅಂತ ಹುಡುಗರ ಬಗ್ಗೆಯೇ ಯಾಕೆ ಹೇಳುತ್ತಿದ್ದೇನೆ ಎಂದರೆ, ಅವರಲ್ಲೊಂದು ಭಂಡ ಧೈರ್ಯ ಇರುತ್ತದೆ. ಆದರೆ ಹುಡುಗಿಯರಲ್ಲಿ ಇಂಥ ದಿಟ್ಟತನ ಇರುವುದಿಲ್ಲ. ಅವರದು ಹಿಂಜರಿಕೆಯ ಸ್ವಭಾವ. ಪ್ರೀತಿ, ಪ್ರೇಮದ ವಿಷಯದಲ್ಲಿ, ಅದೂ ಹದಿಹರೆಯದ ಸಂದರ್ಭದಲ್ಲಿ ಅವರು ತಾವಾಗಿಯೇ ಮುಂದುವರಿಯುವುದು ಕಡಿಮೆ.

ಹುಡುಗನೊಬ್ಬ ಪ್ರಪೋಸ್ ಮಾಡಿದಾಗ ಹುಡುಗಿ ಒಪ್ಪಿಕೊಂಡರೆ ಸರಿ. ಹೋಟೇಲ್,ಸಿನೇಮಾ, ಪಾರ್ಕ್, ಪಿಕ್ ನಿಕ್ ಎಂದು ಹುಡುಗನ ಒಂದಷ್ಟು ದುಡ್ಡು ಖರ್ಚೂ ಆಗುತ್ತೆ; ಒಂದಷ್ಟು ಪೆಟ್ರೋಲ್ ಉರಿಯುತ್ತೆ. ಕಾಲೇಜು ಹಂತ ಮುಗಿದು ಗಂಭೀರ ಓದು ಅಥವಾ ಬದುಕಿಗೆ ತಿರುಗಿಕೊಂಡಾಗ ಈ ಪ್ರೀತಿಯು ಸವಕಲಾಗಿರುತ್ತೆ. ಇಂಥ ಹದಿಹರೆಯದ ಪ್ರೀಮ ಪ್ರಕರಣಗಳು ಬಾಳುವುದುದು ಕಡಿಮೆ.

ಒಂದು ವೇಳೆ ಹುಡುಗನೊಬ್ಬ ಪ್ರಪೋಸ್ ಮಾಡಿದಾಗ ಹುಡುಗಿ ಒಪ್ಪಿಕೊಳ್ಳದಿದ್ದರೆ, ಕೆಲವು ಸಂದರ್ಭಗಳಲ್ಲಿ ಅದು ಅತಿರೇಕಕ್ಕೆ ತಿರುಗಿದ್ದು ಇದೆ. ಮಂಗಳೂರಿನ ಶ್ರೀಮಂತ ಕುಟುಂಬದ ಹುಡುಗನೊಬ್ಬ ತನ್ನ ಸಹಪಾಠಿಯೊಬ್ಬಳೆಡೆಗೆ ಆಕರ್ಷಿತನಾದ. ಆಕೆ ಮುಗ್ಧ ಸ್ವಭಾವದ, ಚೆಲುವೆಯಾದ ಬಡಹುಡುಗಿ. ಆತ.ಸಿನೇಮಾ ಮಂದಿರದ ಮಾಲೀಕನೊಬ್ಬನ ಮಗ. ಯಾವ ಕೊರತೆಯೂ ಇಲ್ಲದ ಹುಡುಗ. ಇವಳು ಖಂಡಿತಾ ಒಪ್ಪಿಕೊಳ್ಳುತ್ತಾಳೆ ಎಂದು ಪ್ರಪೋಸ್ ಮಾಡಿದ. ಅವಳು ನಿರಾಕರಿಸಿದಳು. ಇವನಿಗೆ ಅದನ್ನು ತಡೆದುಕೊಳ್ಳಲಾಗಲಿಲ್ಲ. ಅವನ ’ಅಹಂ’ಗೆ ಬಿದ್ದ ಹೊಡೆತ ಅದು. ಅಂಗಲಾಚಿದ, ಬೇಡಿದ ಹುಡುಗಿ ಮನಸ್ಸು ಬದಲಾಯಿಸಲಿಲ್ಲ. ಹುಡುಗ ಮಾದಕ ವ್ಯಸನಗಳಿಗೆ ಬಿದ್ದ, ದುಶ್ಚಟಗಳಿಗೆ ದಾಸನಾದ. ಎಂಜಿನಿಯರಿಂಗ್ ಓದನ್ನು ಅರ್ಧದಲ್ಲಿ ಕೈಬಿಟ್ಟ. ಇಂದು ಆತ ಯಾವುದೋ ಚಿಕ್ಕ ಕಂಪೆನಿಯೊಂದರಲ್ಲಿ ಕೇವಲ ಮೂರು ಸಾವಿರ ರೂಪಾಯಿಗಳಿಗೆ ಕೆಲಸ ಮಾಡುತ್ತಿದ್ದಾನೆ. ಒಂದು ಏಕಮುಖವಾದ ಪ್ರೀತಿ ಅವನನ್ನು ಪ್ರಪಾತಕ್ಕೆ ತಳ್ಳಿಬಿಟ್ಟಿತ್ತು.

ಏಕಮುಖವಾದ ಪ್ರೀತಿ ಒಮೊಮ್ಮೆ ಏನೇನೋ ತಿರುವುಗಳನ್ನು ಪಡೆದುಬಿಡುತ್ತದೆ. ಸಾಮಾನ್ಯ ಮನುಷ್ಯನೂ ಅಬ್ ನಾರ್ಮಲ್ ಆಗಿ ವರ್ತಿಸಿಬಿಡುತ್ತಾನೆ. ಇದಕ್ಕೆ ಕಾರಣಗಳೇನಿರಬಹುದು? ಹಾಗೆ ನೋಡಿದರೆ ಅಕ್ಕ ಮಹಾದೇವಿ, ಮೀರಾಬಾಯಿಯವರದೂ ಏಕಮುಖವಾದ ಪ್ರೀತಿ ತಾನೇ? ಅವರ ಪ್ರೇಮದ ಆರಾಧನೆಯಲ್ಲಿ ಪ್ರತಿಸ್ಪಂದನ ಇರಲಿಲ್ಲ. ಆದರೂ ಅವರು ಪ್ರೀತಿಸುತ್ತಲೇ ಹೋದರು.

ಏಕಮುಖ ಪ್ರೀತಿಯ ಲಕ್ಷಣವೇ ಅದು. ಅಲ್ಲಿರುವುದು ಕೇವಲ ಅರ್ಪಣಾಭಾವ. ಪ್ರೀತಿಸುವ ವ್ಯಕ್ತಿ ಪ್ರೀತಿಸಲ್ಪಡುವ ವ್ಯಕ್ತಿಯಿಂದ ಏನನ್ನೂ ಅಪೇಕ್ಷಿಸುವುದಿಲ್ಲ. ಸರ್ವಸಮರ್ಪಣಾ ಭಾವ ಅದು. ಕರ್ಪೂರದ ಹಾಗೆ ಕರಗಿ ಹೋಗುವ ಆರಾಧನೆ. ಇದನ್ನು ನಾನು ಹದಿಹರೆಯದ ಕಾಮ ಮಿಶ್ರಿತವಾದ ಪ್ರೇಮಕ್ಕೆ ಸಂಬಂಧಿಸಿದಂತೆ ಹೇಳುತ್ತಿಲ್ಲ. ಪ್ರಭುದ್ದ ಮನಸ್ಸೊಂದು ವಿನಾ ಕಾರಣವಾಗಿ ಪ್ರೀತಿಯ ಅನುಭೂತಿಗೆ ಒಳಗಾಗುವ ಸನ್ನಿವೇಶವನ್ನು ಹೇಳುತ್ತಿದ್ದೇನೆ. ಇದು ಕೇವಲ ಮಾನಸಿಕವಾದ ಪ್ರೀತಿ ಎಂದು ಹೇಳುತ್ತಿಲ್ಲ. ಪ್ರೀತಿಯ ಅತ್ಯುನ್ನತ ಸ್ಥಿತಿಯಲ್ಲಿ ದೇಹ ಮತ್ತು ಮನಸ್ಸು ಎಂಬುದು ಬೇರೆ ಬೇರೆಯಾಗಿರುವುದಿಲ್ಲ. ಅವೆರಡೂ ಅವಿನಾಭಾವವಾದುದು.

ಕರ್ಪೂರದ ಹಾಗೆ ಕರಗಿ ಹೋಗುವ, ದೇಹ ಮತ್ತು ಆತ್ಮದ ಹಾಗೆ ಒಂದಾಗಿ ಬೆಸೆಯುವ ತುಡಿತದ ಈ ಪ್ರೇಮಿಯ ಮನಸ್ಸನ್ನು ಪ್ರೇಮಿಸಲ್ಪಡುವ ವ್ಯಕ್ತಿ ಅರಿಯದೆ ಹೋದರೆ, ಅಥವಾ ಅದನ್ನು ಅರಿಯಗೊಡುವ ಪ್ರಯತ್ನವನ್ನು ಈ ಪ್ರೇಮಿ ಮಾಡದೆ ಹೋದರೆ ಅದು ಒಂದು ಆರಾಧನೆಯಾಗಿಯೇ ಉಳಿದುಬಿಡುತ್ತದೆ; ಲೇಖನದ ಆರಂಭದಲ್ಲಿ ನಾನು ಹೇಳಿದ ನನ್ನ ಗುಪ್ತ ಪ್ರೇಮಿಯ ಹಾಗೆ. ಬಹುಶಃ ಆತ ತನ್ನ ಪ್ರೇಮವನ್ನು ತನ್ನಲ್ಲೇ ಬಚ್ಚಿಟ್ಟುಕೊಂಡ ಕಾರಣದಿಂದಾಗಿ ಆತ ಅಮರ ಪ್ರೇಮಿಯಾಗಿ ನಮ್ಮೆದುರು ಬಿಂಬಿತವಾಗಿದ್ದಾನೆ.

ಒಂದು ವೇಳೆ ಆತ ಬಾಯಿಬಿಟ್ಟು ಹೇಳಿದ್ದರೆ ಮಂಗಳೂರಿನ ಪ್ರೇಮಿಯ ಹಾಗೆ ತಿರಸ್ಕೃತನಾಗುವ ಸಂದರ್ಭವವೂ ಇದ್ದಿರಬಹುದು.

ಏಕಮುಖ ಪ್ರೀತಿಯ ತೊಡಕೇ ಅದು. ಮನುಷ್ಯನಿಗೆ ಯಾವಾಗಲೂ ಸುಲಭವಾಗಿ ಸಿಕ್ಕುವುದರ ಬಗ್ಗೆ ಒಂದು ರೀತಿಯ ಅಸಡ್ಡೆ ಇರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಅದನ್ನು ಆತ ತಿರಸ್ಕರಿಸಿ ಬಿಡುತ್ತಾನೆ. ಸಿಗಲಾರದಕ್ಕೆ ಬೆನ್ನು ಹತ್ತುತ್ತಾನೆ. ಅರ್ಪಿಸಿಕೊಳ್ಳಲು ಬಂದವರು ತಿರಸ್ಕೃತಗೊಂಡು ಜರ್ಜರಿತರಾಗುತ್ತಾರೆ.

ಏಕಮುಖವಾದ ಪ್ರೀತಿ ಒಮ್ಮೊಮ್ಮೆ ಮನುಷ್ಯನನ್ನು ರಾಕ್ಷಸತ್ವಕ್ಕೂ ಇಳಿಸಿಬಿಡುತ್ತದೆ. ಪ್ರೇಮಪ್ರಕರಣಗಳಿಗೆ ಸಂಬಂಧಿಸಿದ ಬೆದರಿಕೆ, ಹಲ್ಲೆ, ಕೊಲೆಗಳೆಲ್ಲಾ ಸಾಮಾನ್ಯವಾಗಿ ಏಕಮುಖ ಪ್ರೀತಿಯ ಪರಿಣಾಮಗಳೇ. ಒಬ್ಬರ ನಿರಾಕರಣೆ ಇನ್ನೊಬ್ಬರ ’ಅಹಂ’ ಅನ್ನು ಕೆರಳಿಸಿಬಿಡುತ್ತೆ. ತನಗೆ ಸಿಕ್ಕಲಾರದವಳು ಇನ್ನಾರಿಗೂ ದಕ್ಕಬಾರದು ಎಂಬ ಪೈಶಾಚಿಕ ಆಲೋಚನೆಯೇ ಇಲ್ಲಿ ಕ್ರಿಮಿನಲ್ ಚಟುವಟಿಕೆಗಳಿಗೆ ಪ್ರೇರಣೆ ನೀಡುತ್ತದೆ. ಹುಡುಗಿಯರ ಮುಖಕ್ಕೆ ಆಸಿಡ್ ಎರಚಿದ ಪ್ರಕರಣಗಳಲ್ಲಂತೂ ಇಂತಹ ಸ್ಯಾಡಿಸ್ಟ್ ಮನಸ್ಸೇ ಮೃಗದಂತೆ ವರ್ತಿಸಿರುತ್ತದೆ.

ಒಂದು ಏಕಮುಖವಾದ ಪ್ರೀತಿ ಬಹಿರಂಗಗೊಂಡರೆ ಏನೇನೋ ಆಗಬಹುದು. ಸಂಬಂಧಪಟ್ಟ ಹೆಣ್ಣು-ಗಂಡುಗಳಲ್ಲಿ, ಹಿಂದೆಯೇ ಹೇಳಿದಂತೆ ಕೆಲವರು ಜೀವನ ಪ್ರೀತಿಯನ್ನು ಕಳೆದುಕೊಂಡು ದುಶ್ಚಟಗಳ ದಾಸನಾಗಬಹುದು. ಇಲ್ಲವೇ ಜೀವವಿರೋಧಿಯಾಗಿ ಸಮಾಜ ಕಂಟಕನಾಗಬಹುದು. ಇದೆಲ್ಲಾ ಋಣಾತ್ಮಕ ಅಂಶಗಳಾದವು. ಹಾಗಾದರೆ ಏಕಮುಖವಾದ ಪ್ರೀತಿಯೊಂದು ಪಾಸಿಟೀವ್ ಆಗಿ ಕೆಲಸ ಮಾಡಲಾರದೇ? ಯಾಕಿಲ್ಲ? ನಮ್ಮ ಸಾಹಿತಿ-ಕಲಾವಿದರ ಶ್ರೇಷ್ಟ ಸಾಧನೆಗಳತ್ತ ನೋಡಿ; ಬಹಳಷ್ಟು ಸಂದರ್ಭಗಳಲ್ಲಿ ಅವರೆಲ್ಲರ ಸಾಧನೆಯ ಹಿಂದೆಯೂ ಒಂದು ವಿಫಲ ಪ್ರೇಮ ಕಥೆಯಿರುತ್ತದೆ.

ಏಕಮುಖವಾದ ಪ್ರೀತಿ ಎನ್ನುವುದು ಕೇವಲ ಹದಿಹರೆಯದವರನ್ನು ಮಾತ್ರ ಆವರಿಸಿಕೊಳ್ಳುವ ಭಾವನೆಯೇ? ಖಂಡಿತಾ ಅಲ್ಲ. ಅದು ಎಲ್ಲಾ ವಯೋಮಾನದವರ ಮನಸ್ಸಿನಲ್ಲಿಯೂ ಹುಟ್ಟಿಕೊಳ್ಳುವ ಸಾಮಾನ್ಯ ಭಾವನೆ. ಅದಕ್ಕೆ ವಿವಾಹಿತರೂ ಕೂಡಾ ಹೊರತಲ್ಲ. ಯಾಕೆಂದರೆ ಪ್ರೀತಿ ಎನ್ನುವ ಅನೂಹ್ಯ ಭಾವನೆ ನಮ್ಮ ಉಸಿರಾಟದಷ್ಟೇ ಸಹಜವಾದುದು. ದೇಹಕ್ಕೆ ವಯಸ್ಸಾಯಿತು ಅಂದಮಾತ್ರಕ್ಕೆ ಉಸಿರಾಟದಲ್ಲಿ ವ್ಯತ್ಯಾಸವಾಗುತ್ತದೆಯೇ?

ವ್ಯಯಕ್ತಿಕ ಮತ್ತು ಸಾಮಾಜಿಕ ಉದ್ದೇಶಗಳಿಗಾಗಿ ವ್ಯಕ್ತಿಯೊಬ್ಬ ಮದುವೆಯಾಗುತ್ತಾನೆ. ಮದುವೆಗೊಂದು ಚೌಕಟ್ಟಿದೆ. ಬಂಧ ಇದೆ-ಬಂಧನಗಳಿವೆ. ರೀತಿ ನೀತಿಯಿದೆ. ಆದರೆ ಮನಸ್ಸಿಗೆ ಯಾವುದೇ ಚೌಕಟ್ಟುಗಳಿಲ್ಲ. ಅದು ಹೇಗೆ ಬೇಕಾದರೂ ವಿಹರಿಸಬಹುದು. ಹಾಗಾಗಿ ಮದುವೆಯಾದ ವ್ಯಕ್ತಿ ಕೂಡಾ ಯಾರದೋ ಸೆಳೆತಕ್ಕೆ ಒಳಗಾಗಬಹುದು. ಮಾನಸಿಕವಾಗಿ ಅವರನ್ನು ಅವಲಂಬಿಸಿಬಿಡಬಹುದು.ಈ ಅವಲಂಬನೆ ಅವರ ದೈನಂದಿನ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸಬಹುದು. ಆದರೆ, ಅದನ್ನು ಬಹಿರಂಗಗೊಳಿಸಿದರೆ ತಾನು ಸಾಮಾಜಿಕವಾಗಿ ಬಹಿಷ್ಕೃತಗೊಳ್ಳುವ, ಕುಟುಂಬದ ಅನಾದರಣೆಗೆ ಒಳಗಾಗುವ ಸಂಭವವಿರುವುದರಿಂದ ಆತ ಅದನ್ನು ತನ್ನಲ್ಲಿಯೇ ಅದುಮಿಟ್ಟುಕೊಳ್ಳಬಹುದು. ಒಮ್ಮೊಮ್ಮೆ ಅದು ಅಬ್ಸೆಷನ್ ಆಗಿಯೂ ಕಾಡಬಹುದು.

ಕನ್ನಡದ ಕಿರುತೆರೆಯ ಹಿರಿಯ ನಟರೊಬ್ಬರು ತಮ್ಮ ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ಹುಡುಗಿಯೊಬ್ಬಳಲ್ಲಿ ಏಕಮುಖ ಪ್ರೀತಿಯೆನ್ನಬಹುದಾದ ಮಾನಸಿಕ ಅವಲಂಬನೆ ಹೊಂದಿರುವುದನ್ನು ನನ್ನಲ್ಲಿ ಹೇಳಿಕೊಂಡಿದ್ದರು. ಇದೆಲ್ಲಾ ಮಾನವ ಸಹಜ ಭಾವನೆಗಳು. ಅದನ್ನು ನೈತಿಕತೆಯ ಪ್ರಶ್ನೆ ಮುಂದು ಮಾಡಿ ಸಂಬಂಧಪಟ್ಟವರನ್ನು ಅವಮಾನಿಸಬಾರದು..ಕೀಳಾಗಿ ಕಾಣಬಾರದು.

ಸಾಮಾಜಿಕವಾಗಿ ಉನ್ನತ ಸ್ಥಾನದಲ್ಲಿರುವವರ ಮನಸ್ಸಿನಲ್ಲಿ ಇಂತಹದೊಂದು ಭಾವನೆ ಮೊಳಕೆಯೊಡೆದಾಗ ಅವರು ಕಿಳರಿಮೆಯಿಂದ ನರಳುವುದನ್ನು ನಾನು ನೋಡಿದ್ದೇನೆ. ತಮ್ಮ ಪತ್ನಿಗೆ ಮೋಸ ಮಾಡುತ್ತಿದ್ದೇನೇನೋ ಎಂಬ ಭಾವನೆ ಅವರ ಕರ್ತೃತ್ವ ಶಕ್ತಿಯನ್ನೇ ಕಸಿದುಕೊಂಡುಬಿಟ್ಟರೆ…? ಹಾಗಾಗುವ ಸಂದರ್ಭವನ್ನು ವಿವಾಹಿತರು ಸೃಷ್ಟಿಸಿಕೊಳ್ಳಬಾರದು. ಏಕಮುಖವಾದ ಪ್ರೀತಿಯನ್ನು ಹೊಂದಿರುವ ಎಳೆಯರಿಗಿಂತ-ಯುವಕರಿಗಿಂತ ಇವರಿಗೆ ಹೆಚ್ಚಿನ ಸ್ವಾತಂತ್ರ್ಯವಿರುತ್ತದೆ. ವಿವಾಹಪೂರ್ವದಲ್ಲಿ ಒಂದು ಹುಡುಗ-ಹುಡುಗಿ ಸಲುಗೆಯಿಂದ ಮಾತಾಡುತ್ತಿದ್ದರೆ, ಪದೇ ಪದೇ ಭೇಟಿಯಾಗುತ್ತಿದ್ದರೆ ಸಮಾಜ ಅವರನ್ನು ವಕ್ರ ದೃಷ್ಟಿಯಿಂದ ನೋಡುತ್ತದೆ. ಅವರಲ್ಲಿ ಪರಸ್ಪರ ಯಾವುದೇ ನಿರ್ದಿಷ್ಟ ಭಾವನೆಗಳಿರದಿದ್ದರೂ ಒಮ್ಮೊಮ್ಮೆ ಪ್ರೇಮಿಗಳೆಂದೇ ಆರೋಪಿಸಿಬಿಡುತ್ತದೆ. ಆಗ ಅವರು ಅನಿವಾರ್ಯವಾಗಿ ಪ್ರೇಮಿಗಳಾಗಬೇಕಾಗುತ್ತದೆ. ಅಮೇಲೆ ಮದುವೆಯೂ ಆಗಬೇಕಾಗುತ್ತದೆ.

ವಿವಾಹಿತರಾದರೆ ಇನ್ನೊಬ್ಬ ಮಹಿಳೆ\ಪುರುಷನ ಜೊತೆ ಒಡನಾಟ ಇಟ್ಟುಕೊಂಡರೂ ಸಮಾಜ ಅವರತ್ತ ವಿಶೇಷ ಲಕ್ಷ್ಯ ಕೊಡುವುದಿಲ್ಲ. ಸಮಾನ ಚಿಂತನೆಯ ಸೇಹಿತರಿರಬಹುದು ಎಂದು ಅಂದುಕೊಳ್ಳುತ್ತದೆ. ಹಾಗಾಗಿ ಇಂತವರಲ್ಲಿ ಏಕಮುಖವಾದ ಪ್ರೀತಿಯೊಂದು ಮೊಳಕೆಯೊಡೆದರೆ ಅದನ್ನು ಪ್ರೀತಿಸಲ್ಪಡುವ ವ್ಯಕ್ತಿಯಲ್ಲಿ ಹೇಳಿಕೊಳ್ಳಬಹುದು; ಆದರೆ ಹೇಳಿಕೊಳ್ಳುವ ಮೊದಲು ಆ ವ್ಯಕ್ತಿಯ ಗುಣ ಸ್ವಭಾವಗಳ ಬಗ್ಗೆ ಚೆನ್ನಾಗಿ ಅರಿತುಕೊಂಡಿರಬೇಕು. ಈಕೆಯ\ಈತನ ಭಾವನೆಗಳನ್ನು ಲೇವಡಿ ಮಾಡುವ, ಉಪೇಕ್ಷೆ ಮಾಡುವ, ಹಗುರವಾಗಿ ಕಾಣುವ ವ್ಯಕ್ತಿಗಳೊಡನೆ ಅಂತರಂಗವನ್ನು ಬಿಚ್ಚಿಡಬಾರದು. ಹೇಗೆ ಹೇಳುವುದು, ನೀವು ಭಾಗ್ಯಶಾಲಿಗಳಾಗಿದ್ದರೆ, ನಿಮ್ಮ ಮನದ ಇಂಗಿತವನ್ನು ಎದುರಿನ ವ್ಯಕ್ತಿ ಅರಿತುಕೊಂಡು ಸಹಕರಿಸಲೂಬಹುದು! ನಿಮ್ಮ ಯಾಂತ್ರಿಕವಾದ ಬದುಕಿನಲ್ಲಿ ಅವರು ಹೊಸ ಚೈತನ್ಯ ತುಂಬಬಹುದು. ಹಿಂದೆ ಯಾವ್ಯವುದೋ ಕಾರಣಗಳಿಗಾಗಿ ಮದುವೆಯಾದ ನೀವು ಈಗ ನವಪ್ರೀಮಿಯಂತೆ ಮತ್ತೆ ಪ್ರೇಮದ ನವಿರು ಭಾವನೆಗಳನ್ನು ಅನುಭವಿಸಬಹುದು.

ಪ್ರೇಮವೇ ಯಾಕಾಗಬೇಕು? ಗಂಡು-ಹೆಣ್ಣು ತಾವು ಜತೆಯಾಗಿರಬೇಕು ಎಂದು ಬಯಸುವುದಕ್ಕೆ ಹತ್ತಾರು ಕಾರಣಗಳಿರಬಹುದು. ’ಡ್ರೈವರ್ ಜೊತೆ ಓಡಿ ಹೋದಳು’ ’ಪಕ್ಕದ ಮನೆಯವನ ಜೊತೆ ಸಂಬಂಧ ಇಟ್ಟುಕೊಂಡಳು’ ’ಕೆಲಸದವಳನ್ನು ಹಾಸಿಗೆಗೆ ಕರೆದುಕೊಂಡ’…ಎಂದೆಲ್ಲಾ ಹೇಳುತ್ತೇವಲ್ಲಾ, ಇವೆಲ್ಲಾ ಹೇಳಿದಷ್ಟು ಸರಳವಾದ ವಿಷಯಗಳಲ್ಲ. ಈ ಕ್ರಿಯೆಗಳ ಹಿಂದೆ ಸೆಕ್ಸ್ ಒಂದೇ ಕೆಲಸ ಮಾಡಿರುವುದಿಲ್ಲ. ಆದಕ್ಕೆ ನಾನಾ ಆಯಾಮಗಳಿರುತ್ತವೆ.

ಯಾರಿಗ್ಗೊತ್ತು, ಒಂದು ಏಕಮುಖವಾದ ಪ್ರೀತಿ ಒಳ್ಳೆಯ ಗೆಳೆತನವಾಗಿ ಮುಂದುವರಿಯಬಹುದು. ಯಾಕೆಂದರೆ ಅನೇಕ ಸಂದರ್ಭಗಳಲ್ಲಿ ಗಂಡು-ಹೆಣ್ಣಿಗೆ ಮುಕ್ತವಾಗಿ ಮಾತಾಡಲು ಅವಕಾಶಗಳೇ ಇರುವುದಿಲ್ಲ. ಹಾಗಾಗಿ ಆರಾಧನೆ ಕೇವಲ ಆರಾಧನೆಯಾಗಿಯೇ ಉಳಿದುಬಿಡುತ್ತದೆ. ಒಮ್ಮೆ ಮನಸ್ಸನ್ನು ಮುಕ್ತವಾಗಿ ಹರಿಯಬಿಟ್ಟರೆ ಎಲ್ಲವೂ ಮುಗಿಯಿತು.ಆಮೇಲೆ ಏನೂ ಇರುವುದಿಲ್ಲ. ಎಲ್ಲವೂ ಶಾಂತ; ಒತ್ತಡಮುಕ್ತ ಮನಸ್ಸು. ಆದರೆ ಯಾರೆದುರಿಗೆ ಹರಿಯಬಿಡುತ್ತಿದ್ದೇನೆ ಎಂಬ ಎಚ್ಚರವಿರಬೇಕು ಎರಡು ಪ್ರಬುದ್ಧ ಮನಸ್ಸುಗಳು; ಅವು ವಿವಾಹಿತರಿರಲಿ, ಅವಿವಾಹಿತರಿರಲಿ ಪರಸ್ಪರ ನಂಬಿಕೊಂಡು ಒಪ್ಪಿ ನಡೆಸುವ ಯಾವುದೇ ಚಟುವಟಿಕೆಗಳು ಅನೀತಿಯೆನಿಸುವುದಿಲ್ಲ. ಅದವರ ಅಂತರಂಗದ ವಿಷಯ.

ಪ್ರೀತಿ ಎನ್ನುವುದು ಒಂದು ಅನುಭೂತಿ. ಅದು ದೈವಿಕವಾದುದು. ಪಂಚೇಂದ್ರಿಯಗಳ ಅನುಭವವನ್ನು ಮೀರಿದ್ದು. ಅದು ಮನುಷ್ಯನ ಮಟ್ಟಕ್ಕೆ ಇಳಿದರೆ ಮನುಷ್ಯ-ಮನುಷ್ಯರ ನಡುವೆ ಇರಬೇಕಾದ ಗೌರವ, ನಂಬಿಕೆ, ಕರುಣೆ, ದಯೆಗಳಾಗುತ್ತದೆ. ಗಂಡು ಹೆಣ್ಣಿನ ಸಂಬಂಧಕ್ಕೆ ಬಂದರೆ ಅದು ಎರಡು ಮನಸ್ಸು ಮತ್ತು ಎರಡು ದೇಹ ಐಕ್ಯಗೊಳ್ಳುವ ವಿಸ್ಮಯ. ಅದು ಏಕತೆಯನ್ನು ಕೊಡುವ ಸಂತೋಷ. ದೈವತ್ವಕ್ಕೆ ಏರಬಹುದಾದ ಇಂತಹ ಒಂದು ಪ್ರೇಮ ಸುಲಭದಲ್ಲಿ ಘಟಿಸುವಂತಹದ್ದಲ್ಲ. ಅದು ಕಳೆದುಕೊಳ್ಳುವ ಭಯ, ಆತಂಕ, ತುಡಿತ, ತಲ್ಲಣಗಳನ್ನು ಅನುಭವಿಸುತ್ತಾ ಕಾಲದ ನಿಕಷದಲ್ಲಿ ಮಿಂದೆದ್ದು ಬರಬೇಕು.

[ ೨೦೦೫ರಲ್ಲಿ ’ಓ ಮನಸೇ’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ]

Wednesday, September 7, 2011

”ದಿ ಪ್ಯಾಕ್’- ಕಾಡಿನೊಳಗೊಂದು ಸಜ್ಜನಿಕೆ




ದೊಂದು ಪುಟ್ಟ ಹೆಣ್ಣು ಜೀವ. ಅವಳ ಕಣ್ಣೆದುರೇ ಹುಲಿಯೊಂದು ಅವಳ ಹೆತ್ತಮ್ಮನನ್ನು ಕೊಲ್ಲುತ್ತದೆ. ಒಡಹುಟ್ಟಿದ ಎರಡು ಸಹೋದರರೊಡನೆ ಆಕೆ ಅನಾಥೆಯಾಗುತ್ತಾಳೆ. ತನ್ನ ಬಳಗವನ್ನು ತೊರೆದು ಕಾಡಿನಲ್ಲಿ ಏಕಾಂಗಿಯಾಗಿ ಅಲೆದಾಡುತ್ತಾಳೆ. ತನ್ನದೇ ಸ್ವಂತ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಾಳೆ. ಬದುಕಿನ ಹೋರಾಟದ ಹಾದಿಯಲ್ಲಿ ಆಕೆಗೊಬ್ಬ ಪ್ರಿಯಕರ ದೊರೆಯುತ್ತಾನೆ. ತನ್ನದೇ ಬಳಗ ಕಟ್ಟಿಕೊಳ್ಳುತ್ತಾಳೆ. ಅವರಿಗೆಲ್ಲಾ ಆಹಾರ ಹೊಂಚಲು ಸಂಚುಗಳನ್ನು ರೂಪಿಸುತ್ತಾಳೆ. ಅದನ್ನು ಸಮರ್ಥ, ಬಲಾಢ್ಯ ತಂಡವಾಗಿ ಕಟ್ಟಲು ಎದುರಾಳಿ ತಂಡಗಳ ಜೊತೆ ದಿಟ್ಟತನದಿಂದ ಹೋರಾಡುತ್ತಾಳೆ. ಕಾಡ್ಗಿಚ್ಚಿನಿಂದ ತನ್ನ ತಂಡವನ್ನು ರಕ್ಷಿಸಿಕೊಳ್ಳುತ್ತಾಳೆ. ಸವಾಲುಗಳನ್ನು ಎದುರಿಸುತ್ತಲೇ ಬದುಕು ಕಟ್ಟಿಕೊಂಡ ಆಕೆಗೆ ತನ್ನ ಮಗಳೇ ಸವತಿಯಾಗುತ್ತಾಳೆ.ಆದರೂ ನೋವು ನುಂಗಿಕೊಳ್ಳುತ್ತಾಳೆ. ತಾಯಿ-ಮಗಳಿಬ್ಬರೂ ಒಮ್ಮೆಲೇ ಗರ್ಭಿಣಿಯರಾಗಿ ತಮ್ಮ ತಂಡದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾರೆ.

ಆ ಮಹಾತಾಯಿಯ ಹೆಸರು ಕೆನ್ನಾಯಿ. ಹೌದು, ಇವಳು ’ದಿ ಪ್ಯಾಕ್’’ ಸಾಕ್ಷ್ಯ ಚಿತ್ರದ ನಾಯಕಿ; ಒಂದು ಕಾಡು ನಾಯಿ. ಈಕೆ ಯಾವ ಆಧುನಿಕ ಮಹಿಳೆಗೂ ಕಡಿಮೆಯಿಲ್ಲ. ಅವಳು ಎದುರಿಸುವ ಎಲ್ಲಾ ಸವಾಲುಗಳನ್ನು ಈಕೆಯೂ ಎದುರಿಸುತ್ತಾಳೆ.

”ದಿ ಪ್ಯಾಕ್’ ; ಕೃಪಾಕರ-ಸೇನಾನಿ ಎಂಬ ವನ್ಯ ಜೀವಿ ಪೋಟೋಗ್ರಾಪ್ ರ ಜೋಡಿ ನಿರ್ಮಿಸಿದ ಸಾಕ್ಷ್ಯ ಚಿತ್ರ. ಪ್ಯಾಕ್ ಎಂದರೆ ಬಳಗ; ತಂಡ. ಇದು ಕೆನ್ನಾಯಿಗಳ ಬಳಗ. ಕೆನ್ನಾಯಿ ಇದು ಕನ್ನಡದ ಶಬ್ದ. ಕೆಂಪು ನಾಯಿ- ಕೆನ್ನಾಯಿ. ದಿ ಪ್ಯಾಕ್ ಡಾಕ್ಯುಮೆಂಟರಿ ಮೂಲಕ ಈ ಶಬ್ದ ಇದೀಗ ಜಗತ್ತಿಗೆ ಪರಿಚಯಯವಾಗಿದೆ. ಅದಕ್ಕಾಗಿ ಕನ್ನಡಿಗರೆಲ್ಲರೂ ಕೃಪಾಕರ-ಸೇನಾನಿ ಜೋಡಿಗೆ ಕೃತಜ್ನರು.

ಕೆನ್ನಾಯಿ- ಈ ಶಬ್ದ ನನಗೆ ಅಪರಿಚಿತವಲ್ಲ. ಕುಕ್ಕೇ ಸುಬ್ರಹ್ಮಣ್ಯ ಸಮೀಪದ ಬಾಳುಗೋಡು ನನ್ನೂರು. ಅದು ಪಶ್ಚಿಮ ಘಟ್ಟದಂಚಿನ ಊರು. ಆ ಊರಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೇ ಮಗು ಏನಾದರು ಹಠ ಹಿಡಿದರೆ ಸೌಮ್ಯ ಗದರಿಕೆಯ ಧ್ವನಿಯಲ್ಲಿ ’ಗುಮ್ಮ ಬರುತ್ತದೆ ನೋಡು’ ಎಂದು ಹೆದರಿಸುತ್ತಿದ್ದರು. ಮಗು ಗಪ್ ಚುಪ್. ಇನ್ನೂ ಹಠ ಮಾಡಿದರೆ ’ಕಾಡಿನಿಂದ ಕೆನ್ನ ನಾಯಿ ಬಂದು ಕಚ್ಚಿಕೊಂಡು ಹೋಗುತ್ತದೆ’ ಎಂದು ಹೆದರಿಸುತ್ತಿದ್ದರು. ಆದರೆ ಕೆನ್ನಾಯಿಯನ್ನು ಯಾರಾದರೂ ನೋಡಿ ವರ್ಣಿಸಿದ್ದು ನನಗೆ ನೆನಪಿಲ್ಲ. ಆದರೆ ನಮ್ಮ ನದಿಯಂಚಿನ ಕಾಡಿನಲ್ಲಿ ಆಗಾಗ ಕಡವೆಯ ತಲೆಗಳು ಬಿದ್ದಿರುತ್ತಿದ್ದವು. ಅವುಗಳನ್ನು ತೋರಿಸಿ ಇದು ಕೆನ್ನಾಯಿಗಳೇ ತಿಂದಿದ್ದು ಎಂದು ನಮ್ಮೂರಿನ ಜನ ವರ್ಣಿಸುತ್ತಿದ್ದರು. ಕೆಲವೊಮ್ಮೆ ತಾಯಿಯೊಡನೆ ಕಾಡಿಗೆ ಹೋದ ಕರುಗಳು ಪುನಃ ಹಟ್ಟಿಗೆ ಹಿಂದಿರುಗದಿದ್ದರೆ ಕೆನ್ನಾಯಿ ಹಿಡಿದಿರಬೇಕೆಂದು ಮಾತಾಡಿಕೊಳ್ಳುತ್ತಿದ್ದರು.

ಬಾಯಿ ಮಾತುಗಳಲ್ಲಿ ಮಾತ್ರ ಕೆನ್ನಾಯಿಗಳ ಬಗ್ಗೆ, ಅವುಗಳ ಕ್ರೂರತ್ವದ ಬಗ್ಗೆ ತಿಳಿದುಕೊಂಡಿದ್ದ ನನಗೆ ಅದರ ಬದುಕಿನ ವಿವರಗಳೊನ್ನೊಳಗೊಂಡಿದ್ದ ’ದ್ ಪ್ಯಾಕ್’ ಎಂಬ ಸಾಕ್ಷ್ಯ ಚಿತ್ರವೊಂದು ತಯಾರಾಗುತ್ತಿದೆಯೆಂಬ ಸುದ್ದಿ ಬಹಳ ಹಿಂದೆಯೇ ಪತ್ರಿಕೆಗಳ ಮುಖಾಂತರ ಗೊತ್ತಾಗಿತ್ತು. ನಮ್ಮ ಪರಿಸರ ಪ್ರೇಮಿ ಪೂರ್ಣಚಂದ್ರ ತೇಜಸ್ವಿಯವರಂತೆ ಕಾಡಿನಲ್ಲೇ ವಾಸಿಸುತ್ತಾ, ಕೃಪಾಕರ ಸೇನಾನಿಯರೆಂಬ ಛಾಯಗ್ರಾಹಕರಿಬ್ಬರು ಅದರಲ್ಲೇ ಮುಳುಗಿ ಹೋಗಿದ್ದಾರೆಂದು ತಿಳಿದ್ದಾಗ ಕುತೂಹಲ ಮೂಡಿತ್ತು. ಕಳೆದ ವರ್ಷ ಅದಕ್ಕೆ ಪ್ರತಿಷ್ಠಿತ ಗ್ರೀನ್ ಆಸ್ಕರ್ ಪ್ರಶಸ್ತಿ ಬಂದಾಗ ಅದನ್ನೊಮ್ಮೆ ನೋಡಬೇಕಲ್ಲಾ ಅನ್ನಿಸಿತ್ತು. ಆದರೆ ಅದಕ್ಕೆ ಅಪರೂಪದ ಪುರಸ್ಕಾರ ದೊರೆತಾಗಲೂ ಮಾಧ್ಯಮಗಳು ವಿಶೇಷ ಪ್ರಚಾರವೆನನ್ನೂ ಕೊಡಲಿಲ್ಲ. ಹಾಗೂ ಮೈಸೂರು ಬಿಟ್ಟರೆ ರಾಜ್ಯ ರಾಜಧಾನಿಯಲ್ಲಿ ಅದರ ಪ್ರದರ್ಶನಕ್ಕೆ ಯಾರೂ ಏರ್ಪಾಟು ಮಾಡಲಿಲ್ಲ. ಆದರೆ ಕಳೆದ ಭಾನುವಾರ ಸಂವಾದ ಡಾಟ್ ಕಾಂ ಗೆಳೆಯರು ಬೆಂಗಳೂರಿನ ಯವನಿಕಾದಲ್ಲಿ ಅದರ ಪ್ರದರ್ಶನದ ಏರ್ಪಾಟು ಮಾಡಿದ್ದರು. ಸ್ವತಃ ಕೃಪಾಕರ- ಸೇನಾನಿ ಜೋಡಿ ಮತ್ತು ಕೆಲವು ತಂತ್ರಜ್ನರು ಈ ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರೇಕ್ಷಕರ ಜೊತೆ ಸಂವಾದ ನಡೆಸಿದರು.

’ದಿ ಪ್ಯಾಕ್’ ಸಾಕ್ಷ್ಯ ಚಿತ್ರವನ್ನು ಹೇಗೆ ನೋಡಬೇಕು ಎಂಬುದರ ಬಗ್ಗೆ ಸೇನಾನಿ ಹೇಗೆ ಹೇಳುತ್ತಾರೆ; ’ಈ ಚಿತ್ರವನ್ನು ಒಂದೋ ನೀವು ಮೇಲಿನಿಂದ ನೋಡಬೇಕು ಇಲ್ಲವೇ ಕೆಳಗಿನಿಂದ ನೋಡಬೇಕು’ ನಿಜ, ಈ ಚಿತ್ರವನ್ನು ನೇರವಾಗಿ ನೋಡಲು ಸಾಧ್ಯವಾಗಲಾರದು. ಇದರಲ್ಲಿ ಕೃಪಾಕರ- ಸೇನಾನಿ ಜೋಡಿಯ ಹದಿನೆಂಟು ವರುಷಗಳ ತಪಸ್ಸಿನ ಸಾರವಿದೆ. ಎಂದೋ ಅವರ ಕಣ್ಣೆದುರಿನಲ್ಲಿ ಮಸುಕಾಗಿ ಮಿಂಚಿ ಮರೆಯಾದ ಕಾಡುನಾಯಿಗಳ ಚಿತ್ರಣವೊಂದರ ನೆನಪು ಅವರನ್ನು ಎಡೆಬಿಡದೆ ಕಾಡಿ”ದಿ ಪ್ಯಾಕ್’ ಆಗಿ ರೂಪು ಪಡೆದಿದೆ. ಅವರಿಗದು ಜೀವಂತ ಅನುಭವ. ಅದೇ ಅವರ ಬದುಕು. ನೋಡುವ ನಮಗೆ ಅದೊಂದು ಪಕ್ಷಿನೋಟ. ಕ್ಯಾಮಾರ ಭಾಷೆಯಲ್ಲಿ areal shot ಅಷ್ಟೇ. ದಕ್ಕಿದ್ದಷೇ ಭಾಗ್ಯ.

ಅವರೇ ಹೇಳುವಂತೆ ಸೀಳುನಾಯಿಗಳ ಬಗ್ಗೆ myth ಇದೆ. ಅಂದರೆ ಕಲ್ಪಿತ ಕತೆಗಳಿವೆ. ಅವು ನಿಜವಲ್ಲ, ಆದರೆ ನಿಜದ ಎಳೆಯೊಂದು ಅದರಲ್ಲಿರಬಹುದು. ನಮ್ಮೂರಿನ ಸುತ್ತಮುತ್ತ ಕೆನ್ನಾಯಿ ಅಥವಾ ಸೀಳುನಾಯಿಗಳೆಂದು ಕರೆಯುವ ಈ ಕಾಡುನಾಯಿಗಳನ್ನು ಇಂಗ್ಲೀಷಿನಲ್ಲಿ dhole ಎಂದು ಕರೆಯುತ್ತಾರೆ. ಧೊಳ್ ಎಂಬ ಶಬ್ದದ ವ್ಯುತ್ಪತ್ತಿ ತೋಳ ಆಗಿರಬಹುದೇ? ಯಾಕೆಂದರೆ ಅವುಗಳನ್ನು ತೋಳ ಅಂತಲೂ ನಮ್ಮೂರಿನಲ್ಲಿ ಕರೆಯುತ್ತಾರೆ. ಅಂತರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಕೆನ್ನಾಯಿಗಳನ್ನು ಅವಸಾನದ ಅಂಚಿನಲ್ಲಿರುವ ಪ್ರಾಣಿ ಪ್ರಬೇದ ಎಂದು ಗುರುತಿಸಿದೆ. ಭಾರತದಲ್ಲಿ ಪಶ್ಚಿಮ ಘಟ್ಟ ಪ್ರದೇಶದ ನಿತ್ಯ ಹರಿದ್ವರ್ಣದ ದಟ್ಟ ಕಾಡುಗಳಲ್ಲಿ ಇವು ಗುಂಪಾಗಿ ವಾಸಿಸುತ್ತವೆ. ಇವು ಹಿಡಿದ ಬೇಟೆಯನ್ನು-ಅಂದರೆ ಆಹಾರವನ್ನೂ-ಕಿತ್ತುಕೊಳ್ಳಲು ಸದಾ ಹೊಂಚು ಹಾಕುವ ಮನುಷ್ಯನನ್ನು ಇವುಗಳು ಎಂದೂ ನಂಬುದಿಲ್ಲ ಎಂದು ಅವುಗಳ ವರ್ತನೆಯನ್ನು ಹದಿನೆಂಟು ವರ್ಷಗಳಿಂದ ಸೂಕ್ಷವಾಗಿ ಅಧ್ಯಯನ ನಡೆಸಿದ ಈ ಜೋಡಿ ಹೇಳುತ್ತಾರೆ. ಅವರ ಬದುಕಿನ ಬಹು ಭಾಗವನ್ನು ಕಾಡಿನಲ್ಲಿ ಕಳೆದು ತಯಾರಿಸಿದ ’ದಿ ಪ್ಯಾಕ್’ ಗೀನ್ ಅಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಾಗ ಅವರು ಪ್ರಶಸ್ತಿ ಸಿಕ್ಕಷ್ಟೆ ಸಂತೋಷಗೊಂಡರಂತೆ. ಅದಕ್ಕೆ ಕಾರಣವೂ ಇತ್ತು.

೨೦೧೦ರ ತನಕ ಗ್ರೀನ್ ಆಸ್ಕರ್ ಪ್ರಶಸ್ತಿ ಯುರೋಪ್ ಮತ್ತು ಅಮೇರಿಕಾ ದೇಶಗಳ ಕ್ರೀಟವನ್ನು ಅಲಂಕರಿಸುತ್ತಿದ್ದವು. ಆದರೆ ೨೦೧೦ರಲ್ಲಿ ಏಷ್ಯಾ ಖಂಡದಿಂದ ಪ್ರಥಮ ಬಾರಿಗೆ ಸಾಕ್ಷ್ಯ ಚಿತ್ರವೊಂದು ವೈಲ್ಡ್ ಸ್ಕ್ರೀನ್ ಚಿತ್ರೋತ್ಸವದ ಮುಕ್ತ ವಿಭಾಗಕ್ಕೆ ಪ್ರವೇಶ ಪಡೆಯಿತು, ಅದುವೇ ಕೃಪಾಕರ ಸೇನಾನಿಯವರ ’ದಿ ಪ್ಯಾಕ್’’ ಚಿತ್ರ. ಅವರು ಸಂತೋಷ ಪಡಲು ಇನ್ನೂ ಒಂದು ಕಾರಣವಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಚಿತ್ರ ನಿರ್ಮಾಪಕರ ಹತ್ತಿರ ಅತ್ಯಾಧುನಿಕ ಕ್ಯಾಮಾರ ಮತ್ತು ನುರಿತ ತಂತ್ರಜ್ನರ ದೊಡ್ಡ ಪಡೆಯೇ ಇರುತ್ತಿತ್ತು. ಆದರೆ ಈ ಜೋಡಿಯ ಬಳಿ ಅದ್ಯಾವುದೂ ಇರಲಿಲ್ಲ. ಆದರೆ ಕಠಿಣ ಪರಿಶ್ರಮ, ತಾಳ್ಮೆ, ಸೂಕ್ಷ್ಮ ಸಂವೇದನೆ ಮತ್ತು ಅವರೇ ಹೇಳಿಕೊಳ್ಳುವಂತೆ ಕಾಡಿನ ಸಜ್ಜನಿಕೆಯ ನಡಳಿಕೆ ಅವರಲ್ಲಿತ್ತು.

ಆ ವರ್ಷ ೪೪೬ ಚಿತ್ರಗಳು ಸ್ಪರ್ಧೆಗೆ ಬಂದಿದ್ದವು.ಆದರಲ್ಲಿ ಅಂತಿಮ ಸುತ್ತಿನಲ್ಲಿ ಉಳಿದುಕೊಂಡದ್ದು ೬೧. ’ದಿ ಪ್ಯಾಕ್’’ ಅರ್ದ ಘಂಟೆಯ ಐದು ಕಂತುಗಳನ್ನು ಒಳಗೊಂಡಿತ್ತು. ಅದರ ಕೊನೆಯ ಕಂತು ಪ್ರಾಣಿವರ್ತನಾ ವಿಬಾಗದ ಗ್ರೀನ್ ಆಸ್ಕರ್ ಪ್ರಶಸ್ತಿಗೆ ಬಾಜನವಾಯಿತು.

ಕೃಪಾಕರ- ಸೇನಾನಿ ವನ್ಯ ಜೀವಿ ಛಾಯಾಗ್ರಹಕರೆಂದು ನಮಗೆ ಗೊತ್ತಿದೆ. ಹೇಗೆಂದರೆ, ಅವರು ತೆಗೆದ ಅಪರೂಪದ ಚಿತ್ರಗಳನ್ನು ಪತ್ರಿಕೆಗಳು ಆಗಾಗ ಪ್ರಕಟಿಸುತ್ತಿರುತ್ತವೆ. ಆದರೆ ಅವರಲ್ಲಿ ಕೃಪಾಕರ ಯಾರು? ಸೇನಾನಿ ಯಾರು ಎಂಬುದರ ಬಗ್ಗೆ ಹಲವರಿಗೆ ಗೊಂದಲಗಳಿವೆ. ಅದು ಮೊನ್ನೆ ನಡೆದ ಸಂವಾದದಲ್ಲೂ ವ್ಯಕ್ತವಾಯಿತು. ಪ್ರೇಕ್ಷಕರು ಅವರ ಕಾರ್ಯ ವೈಖರಿಯ ಬಗ್ಗೆ ಕುತೂಹಲದಿಂದ ಕೇಳಿದ ಪ್ರಶ್ನೆಗಳಿಗೆ ಅವರು ತಾಳ್ಮೆಯಿಂದ ಸರಳ ಕನ್ನಡದಲ್ಲಿಯೇ ಉತ್ತರಿಸುತ್ತಿದ್ದರು. ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿಯೇ ಕನ್ನಡದಲ್ಲಿ ಕಿರು ಚಿತ್ರಗಳನ್ನು ನಿರ್ಮಿಸುವ ಯೋಚನೆಯನ್ನು ಹಂಚಿಕೊಂಡರು. ಕನ್ನಡ ಎಂಬ ಪದವನ್ನು ಯಾಕೆ ಒಪಯೋಗಿಸಿದೆ ಎಂದರೆ ಅವರಿಗೆ ಕನ್ನಡದ ಬಗ್ಗೆ ಅಸಡ್ಡೆಯಿದೆ ಎಂಬ ವದಂತಿಗಳಿವೆ. ಕೃಪಾಕರ, ಕನ್ನಡಿಗರ ವೈಚಾರಿಕ ಪ್ರಜ್ನೆಯನ್ನು ವಿಸ್ತರಿಸಿದ ವಡ್ಡರಸೆ ರಘುರಾಮ ಶೆಟ್ಟರ’ಮುಂಗಾರು’ ಪೇಪರಿನಲ್ಲೂ ಸ್ವಲ್ಪ ಕಾಲ ಕೆಲಸ ಮಾಡಿದ್ದವರು. ಸೇನಾನಿ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಓದಿದವರು. ಸೂಕ್ಷ್ಮ ಮತ್ತು ಆರೋಗ್ಯಕರ ಮನಸ್ಸಿನ ಈ ಜೋಡಿ ಕಾಡನ್ನು ಬಿಟ್ಟು ನಮ್ಮ ನಾಡಿಗೂ ಆಗಾಗ ಭೇಟಿ ನೀಡುತ್ತಾ ಕಾಡಿನ ಸಜ್ಜನಿಕೆಯನ್ನು ನಮಗೂ ತಿಳಿಸುತ್ತಿರಲಿ ಎಂಬುದು ನಮ್ಮ ಕೋರಿಕೆ.

Saturday, August 27, 2011

ಮಾಧ್ಯಮ ಲೋಕ; ಒಡೆದ ಕನ್ನಡಿ





ಪ್ರತಿ ಮಂಗಳವಾರ ಬೆಳಿಗ್ಗೆ ಎಂಟು ಗಂಟೆಗೆ ನಾನು ಎಫ಼್ ಎಮ್ ರೈನ್ ಬೋ ದಲ್ಲಿ’ ಕರ್ತ-ಪತ್ರಕರ್ತ’ ಕಾರ್ಯಕ್ರಮವನ್ನು ಕೇಳುತ್ತೇನೆ. ಪತ್ರಿಕೋದ್ಯಮದಲ್ಲಿ ಅಪಾರ ಅನುಭವವನ್ನು ಪಡೆದಿಕೊಂಡಿರುವ ಖ್ಯಾತ ಪತ್ರಕರ್ತರನ್ನು ಸ್ಟುಡಿಯೋಕ್ಕೆ ಅಹ್ವಾನಿಸಿಅವರ ಸಾಧನೆಯನ್ನು ಶೋತೃಗಳಿಗೆ ಪರಿಚಯಿಸುವ ಸಂದರ್ಶನವನ್ನಾಧರಿಸಿದ ನೇರ ಪ್ರಸಾರದ ಕಾರ್ಯಕ್ರಮವಿದು. ಎಸ್ ಎಸ್ ಉಮೇಶ್ ನಡೆಸುವ ಈ ಕಾರ್ಯಕ್ರಮ ಈಗಾಗಲೇ ನೂರು ಎಪಿಸೋಡ್ ದಾಟಿದೆ. ಇಂದು ಅದರ ಅತಿಥಿಯಾಗಿದ್ದವರು ಹಿಂದು ಪತ್ರಿಕೆಯ ಬೆಂಗಳೂರಿನ ಸ್ಥಾನಿಕ ಸಂಪಾದಕರಾಗಿದ್ದ ಅರಕರೆ ಜಯರಾಮ್ .

ಅರಕರೆ ಜಯರಾಮ್ ಎಂದರೆ ಸದಾ ಸೂಟ್ ದಾರಿಯಾಗಿರುವ, ಗಂಭೀರ ವ್ಯಕ್ತಿತ್ವದ, ಗುಂಡು ಮುಖದ ವ್ಯಕ್ತಿಯೊಬ್ಬರು ನಮ್ಮ ಕಣ್ಣ ಮುಂದೆ ನಿಲ್ಲುತ್ತಾರೆ. ಪ್ರೆಸ್ ಕ್ಲಬ್ ನಲ್ಲಿ ಅಗೊಮ್ಮೆ-ಈಗೊಮ್ಮೆ ದೂರದಿಂದ ಅವರನ್ನು ನೋಡಿದ್ದೆ. ಅವರಿಗೆ ಅಸ್ಖಲಿತವಾಗಿ ಕನ್ನಡ ಮಾತಾಡಲು ಬರುತ್ತದೆಯೆಂದು ನನಗೆ ಗೊತ್ತೇ ಇರಲಿಲ್ಲ.

ಜಯರಾಮ್ ಅವರು ಸಮಕಾಲಿನ ಪತ್ರಿಕೊಧ್ಯಮದ ಬಗ್ಗೆ ಮಾತಾಡುತಾ, ಬೆಂಗಳೂರಲ್ಲಿ ಐವತ್ತಕ್ಕಿಂತಲೂ ಜಾಸ್ತಿ ಕಾಲೇಜುಗಳಲ್ಲಿ ಪತ್ರಿಕೋಧ್ಯಮವನ್ನು ಕಲಿಸುತ್ತಾರೆ.ಆದರೆ ಗುಣಮಟ್ಟದ ಉಪನ್ಯಾಸಕರಿಲ್ಲ, ಆಲ್ಲದೆ ಪತ್ರಕರ್ತನೊಬ್ಬ ಕ್ಲಾಸ್ ರೂಮ್ ನಲ್ಲಿ ರೂಪುಗೊಳ್ಳುವುದಿಲ್ಲ, ಎಂದು ಹೇಳುತ್ತಾ ಹಿಂದಿನ ತಲೆಮಾರಿನ ಪತ್ರಕರ್ತರಲ್ಲಿದ್ದ ಬದ್ಧತೆ ಮತ್ತು ವೃತ್ತಿಪರತೆಯ ಬಗ್ಗೆ ಅಧಿಕಾರಯುತವಾಗಿ ಮಾತಾಡತೊಡಗಿದರು.

ಟೀವಿ ಜರ್ನಲಿಸ್ಟ್ ಗಳ ಬಗ್ಗೆ ಮಾತಾಡುತ್ತಾ ಅವರೊಂದು ಮಾತು ಹೇಳಿದರು; ಟೀವಿ ಜರ್ನಲಿಸ್ಟ್ ಗಳು ಎಮಿನೆಂಟ್ ಅಲ್ಲ, ಅವರೆಲ್ಲಾ ಪ್ರಾಮಿನೆಂಟ್ ಗಳು, ಅಂತ. ನಿಜ, ಹಿಂದೆ ಪತ್ರಿಕೋಧ್ಯಮವೆಂಬುದು ಸೇವಾಕ್ಷೇತ್ರವಾಗಿತ್ತು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಪತ್ರಿಕಾರಂಗವು ಕೂಡಾ ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವೆಂದು ಪರಿಗಣಿತವಾಗಿತ್ತು. ಸಮಾಜ ಸೇವೆಗೆ ಸಮೂಹ ಮಾಧ್ಯಮಗಳು ಪೂರಕವಾಗಿ ಕೆಲಸ ಮಾಡುತ್ತಿದ್ದವು. ಹಾಗಾಗಿ ಆದರ್ಶಗಳನ್ನಿಟ್ಟುಕೊಂಡ, ತತ್ವಬದ್ಧರಾದ ಯುವಕರು ನಾನಾ ಕ್ಷೇತ್ರಗಳಿಂದ ಪತ್ರಿಕಾರಂಗಕ್ಕೆ ಬರುತ್ತಿದ್ದರು.

ಆದರೆ ಇಂದು ಹಾಗಿಲ್ಲ. ಪತ್ರಿಕಾ ರಂಗ ಇವತ್ತು ಉದ್ಯಮ ಆಗಿದೆ. ಸಿನೇಮಾ, ಕ್ರೀಕೆಟ್ ನಂತೆ ಅದೊಂದು ಗ್ಲಾಮರ್ ಜಗತ್ತು. ಅಲ್ಲಿ ಹಣ ಮತ್ತು ಖ್ಯಾತಿ ಎರಡೂ ಇದೆ. ಹಾಗಾಗಿ ಅಲ್ಲಿ ಹಣ ಹಾಕಿ ದುಡ್ಡು ದುಡಿಯುವುದನ್ನು ಕರಗತ ಮಾಡಿಕೊಳ್ಳಲು ಹವಣಿಸುವವರ ದೊಡ್ಡ ವರ್ಗವೇ ಇದೆ. ರಿಯಲ್ ಎಸ್ಟೇಟ್ ಕುಳಗಳು ಸಿನೇಮಾರಂಗಕ್ಕೆ ಧಾಂಗುಡಿಯಿಟ್ಟ ಮೇಲೆ ಕನ್ನಡ ಸಿನೇಮಾ ಪ್ರಪಂಚ ಬದಲಾದ ಪರಿಯನ್ನೇ ಗಮನಿಸಿ. ಸುರೇಶ ಕಲ್ಮಾಡಿ ಒಬ್ಬ ಸಾಕಲ್ಲಾ; ಕ್ರೀಡಾ ಜಗತ್ತಿನಲ್ಲಿ ಹಣದ ಮೆರೆದಾಟದ ವೈಖರಿಯನ್ನು ತಿಳಿದುಕೊಳ್ಳಲು.

ಮಾಧ್ಯಮ ರಂಗಕ್ಕೆ ಬನ್ನಿ, ನೀರಾ ರಾಡಿಯಾ ಪ್ರಕರಣದಲ್ಲಿ ಶಾಮೀಲಾದರೆನ್ನಲಾದ ಬರ್ಕಾದತ್ತ, ವೀರಸಾಂಘ್ವಿ, ಪ್ರಭು ಚಾವ್ಲ ಮುಂತಾದವರೆಲ್ಲಾ ಈಗಲೂ ಸ್ವಲ್ಪವೂ ಪಾಪ ಪ್ರಜ್ನೆಯಿಲ್ಲದೆ ನ್ಯಾಯಾಧೀಶರ ಧಿಮಾಕಿನಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ.
ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿರುವ ರಾಜಕಾರಣಿ ಬಿ.ಎಲ್. ಶಂಕರ್ ತಮ್ಮ ಮಾತುಗಳಲ್ಲಿ ಮತ್ತೆ ಮತ್ತೆ ಒತ್ತಿ ಹೇಳುತ್ತಾರೆ, ಕನ್ನಿಮೋಳಿ, ಎ. ರಾಜ ಮುಂತಾದವರೆಲ್ಲಾ ಆರೋಪ ಹೊತ್ತು ಜೈಲಿಗೆ ತಳ್ಳಲ್ಪಡುತ್ತಾರೆ. ಮಾಧ್ಯಮದವರಿಗೇಕೆ ವಿನಾಯಿತಿ? ನಿಜ, ತಪ್ಪು ಯಾರು ಮಾಡಿದರೂ ತಪ್ಪೇ. ನಮಗೆಲ್ಲರಿಗೂ ಇರುವುದು ಒಂದೇ ಸಂವಿಧಾನ ತಾನೇ?

ಈಗ ಕರ್ನಾಟಕವನ್ನೇ ನೋಡಿ. ಲೋಕಾಯುಕ್ತ ವರದಿ ಬಂದಿದೆ. ಯು.ವಿ.ಸಿಂಗ್ ವರಧಿಯಲ್ಲಿ ಸ್ಪಷ್ಟ ವಾಗಿ ಉಲ್ಲೇಖಿತವಾಗಿದೆ; ಕನ್ನಡದ ಕೆಲವೊಂದು ಪತ್ರಕರ್ತರು ಗಣಿಕಪ್ಪವನ್ನು ಪಡೆದಿದ್ದಾರೆಂದು.
ಗಣಿಗಾರಿಕೆಯಲ್ಲಿ ದಂತಕಥೆಯಾಗುತ್ತಿರುವ ರೆಡ್ಡಿ ಸಹೋದರರ ಗ್ಯಾಂಗ್ ವಿಷಯ ಬಿಟ್ಟುಬಿಡಿ. ಅವರು ವ್ಯಾಪಾರಿಗಳು. ’ವ್ಯಾಪಾರಂ ದ್ರೋಹ ಚಿಂತನಂ’ ಎಂಬ ಮಾತೇ ಇದೆಯಲ್ಲಾ. ದುಡ್ಡು ಬಾಚಿಕೊಳ್ಳುವುದೇ ವ್ಯಾಪಾರದ ಉದ್ದೇಶ. ಆದ್ರೆ ಪತ್ರಕರ್ತರ ಮುಖವಾಡಗಳನ್ನು ತೊಟ್ಟುಕೊಂಡು ಸಮಾಜಕ್ಕೆ ನೀತಿ ಪಾಠ ಹೇಳುವುದನ್ನು ಹಾಬಿಯನ್ನಾಗಿ ಇಟ್ಟುಕೊಂಡವರನ್ನು ಏನಂತ ಕರೆಯುವುದು?

ಕಳೆದವಾರ ಡೆಕ್ಕನ್ ಹೆರಾಲ್ಡ್ ಬಯಲು ಮಾಡಿದ ಗಣಿ ಕಪ್ಪ ಪಡೆದವರ ಹೆಸರುಗಳು ಒಂದು ಸಂಕೇತ ಮಾತ್ರ. ಮಧುಶ್ರೀಯಂಥ ನೂರಾರು ಕಂಪೆನಿಗಳಿವೆ ನೂರಾರು ’ಖಾರದ ಪುಡಿ ಮಹೇಶ’ರಿದ್ದಾರೆ. ಸಂಜಯ್ ಸರ್ ಗಳಿದ್ದಾರೆ, ಮೂರ್ತಿಗಳಿದ್ದಾರೆ. ಹಾಗೆಯೇ ನೂರಾರು ವಿ.ಭಟ್, ಆರ್.ಬಿಗಳಿದ್ದಾರೆ.

ಪತ್ರಿಕೋದ್ಯಮವೆಂಬ ಗ್ಲಾಮರ್ ಲೋಕದಲ್ಲಿ ಮುಖವಾಡ ತೊಟ್ಟಿರುವ ಕೆಲವು ಪತ್ರಕರ್ತರ ಸ್ವವೈಭವೀಕರಣ, ಐಷಾರಾಮಿ ಬದುಕು ಹೇಗಿದೆಯೆಂದರೆ ನಿಜವಾದ ಪತ್ರಕರ್ತರೆಂದರೆ ಹೀಗೆಯೇ ಇರಬೇಕೆಂಬ ಭ್ರಮೆಯನ್ನು ಸಾರ್ವಜನಿಕರಲ್ಲಿ ಉಂಟುಮಾಡುವಂತೆ ಅವರ ನಡವಳಿಕೆಯಿರುತ್ತದೆ. ಅವರಲ್ಲಿ ಗಣಿ ಮಾಲೀಕರಿದ್ದಾರೆ; ರಿಯಲ್ ಎಸ್ಟೇಟ್ ಎಜೆಂಟರಿದ್ದಾರೆ; ಬ್ಲಾಕ್ ಮೇಲ್ ಮಾಡುವವರಿದ್ದಾರೆ; ಹಿಡನ್ ಅಜೆಂಡಗಳನ್ನಿಟ್ಟುಕೊಂಡಿರುವ ರಾಜಕೀಯ ಪಕ್ಷ ಪ್ರಾಯೋಜಿತರಿದ್ದಾರೆ. ರಾಜಕೀಯ ದಲ್ಲಾಳಿಗಳಿದ್ದಾರೆ. ಕಾರ್ಪೋರೇಟ್ ಕಂಪೆನಿಗಳ ಪಿ.ಅರ್.ಓ ಗಳಿದ್ದಾರೆ. ಜಾತೀಯ ವಕ್ತಾರರಿದ್ದಾರೆ. ಇವರ ಮೆರೆದಾಟದಲ್ಲಿ ಬಹುಸಂಖ್ಯಾತರಾಗಿರುವ ಪತ್ರಕರ್ತರ ಪ್ರಾಮಾಣಿಕತೆ, ಸಮಾಜಿಕ ಕಾಳಜಿ ಮಸುಕಾಗಿ ಕಾಣುತ್ತದೆ. ರಾಜಕಾರಣಿಗಳೆಲ್ಲಾ ಭ್ರಷ್ಟರು, ಸ್ವಾರ್ಥಿಗಳು ಎಂದು ಸಾರಸಗಟಾಗಿ ಅನುಮಾನದಿಂದ ನೋಡಿದಂತೆ ಪತ್ರಕರ್ತರೆಲ್ಲಾ ಎಂಜಲು ಕಾಸಿಗೆ ಕೈಯೊಡ್ಡುವವರು ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.

ಸಂಶಯವಂತೂ ಇದ್ದೇ ಇದೆ; ಗಣಿ ಲಾಬಿ ಮತ್ತು ಕಾರ್ಪೋರೇಟ್ ಜಗತ್ತು ಪತ್ರಿಕೋಧ್ಯಮವನ್ನು ನಿಯಂತ್ರಿಸುತ್ತದೆಯೆಂದು. ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾಧ್ಯಮದ ಆದ್ಯತೆಗಳು ಬದಲಾಗಿರುವುದು ಸಾರ್ವಜನಿಕರ ಕಣ್ಣಿಗೂ ನಿಚ್ಚಳವಾಗಿ ಗೋಚರಿಸುತ್ತಿದೆ. ಇಲ್ಲವಾದರೆ ಕರ್ನಾಟಕದ ಮಟ್ಟಿಗೆ ಮೂರು ಪ್ರಮುಖ ವಿಷಯಗಳಾದ ಅಕ್ರಮ ಗಣಿಗಾರಿಕೆ, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಇನ್ನೂ ಸಿಗದ ಪುನರ್ವಸತಿ, ರೈತರ ಕೃಷಿ ಭೂಮಿ ಸ್ವಾಧೀನ ಇವುಗಳಿಗೆ ಮಾಧ್ಯಮ ಲೋಕ ಸಶಕ್ತ ಧ್ವನಿಯಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಅವೆಲ್ಲಾ ವರಧಿಗಾರಿಕೆಯ ಮಟ್ಟದಲ್ಲಿ ಉಳಿದುಬಿಟ್ಟವು.

ಅಣ್ಣಾ ಹಜಾರೆಯವ ಬ್ರಷ್ಟಾಚಾರ ವಿರೋಧಿ ಹೋರಾಟದಲ್ಲೂ ಅಷ್ಟೇ. ಸುದ್ದಿಯನ್ನು ರೋಚಕವಾಗಿ, ರಂಜನೀಯವಾಗಿ, ಎಮೋಷನಲಾಗಿ ಕೊಡುತ್ತಿದೆ. ಕಾರ್ಪೋರೇಟ್ ಜಗತ್ತು ಪ್ರಜಾಪ್ರಭುತ್ವವನ್ನು ನಿಶ್ಯಕ್ತಗೊಳಿಸುತ್ತಿದೆಯೇನೋ ಎಂಬ ಸಂಶಯವೂ ಅವರನ್ನು ಕಾಡುವುದಿಲ್ಲ. ಆಡಳಿತ ಮಂಡಳಿಯಲ್ಲಿ ಬದ್ಧತೆಯಿಲ್ಲ. ಬದ್ಧತೆ ಕಾಣುತ್ತಿಲ್ಲ. ಬದ್ಧತೆಯಿರುತ್ತಿದ್ದರೆ ಬ್ರಷ್ಟಾಚಾರದ ಆಪಾದನೆ ಹೊತ್ತಿರುವ ಪತ್ರಕರ್ತರ ಮೇಲೆ ಮ್ಯಾನೇಜ್ ಮೆಂಟಿನವರು ಕ್ರಮ ಕೈಗೊಳ್ಳುತ್ತಿದ್ದರು. ದೃಶ್ಯ ಮಾಧ್ಯಮದ ಚರ್ಚೆಗಳಲ್ಲಿ ಭಾಗವಹಿಸುವವರಿಗೆಲ್ಲಾ ಗೊತ್ತಿದೆ, ತಾವು ಪರಸ್ಪರ ಕಳ್ಳರೆಂದು.

ಅಕ್ರಮ ಗಣಿಗಾರಿಕೆಯಿಂದ ದುಡ್ಡು ಸಂಪಾದನೆ ಮಾಡಿದವರು, ದುಡ್ಡು ಕೊಟ್ಟು ಎಂಪಿ ಸೀಟ್ ಖರೀದಿ ಮಾಡಿದವರು, ಸರಕಾರದ ಕೃಪಾಶ್ರಯದಿಂದ ಭೂಮಿ ಡಿನೋಟಿಪಿಕೇಶೆನ್ ಮಾಡಿಸಿಕೊಂಡವರು, ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಪತ್ರಿಕೆ ನಡೆಸುತ್ತಿರುವವರು- ಇವರೆಲ್ಲಾ ಮಾಧ್ಯಮವನ್ನು ಅಸ್ತ್ರ-ಶಸ್ತ್ರಗಳಂತೆ ಬಳಸುತ್ತಿದ್ದಾರೆ. ಇಂತವರಿಂದ ಸಾಮಾಜಿಕ ಹೊಣೆಗಾರಿಕೆಯನ್ನು ನಿರೀಕ್ಷಿಸಲು ಸಾಧ್ಯವೇ? ಇವರಿಗೆಲ್ಲಾ ಪತ್ರಕರ್ತರು ಬೇಕಾಗಿಲ್ಲ, ದಲ್ಲಾಳಿಗಳು ಬೇಕಾಗಿದ್ದಾರೆ. ಹಾಗಾಗಿ ಈ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯ ಗಂಧ ಗಾಳಿ ಇಲ್ಲದವರು ಕೂಡಾ ಪತ್ರಕರ್ತರಾಗುತ್ತಿದ್ದಾರೆ.

ದಲ್ಲಾಳಿಗಳು ಯಾವಾಗಲೂ ಅರ್ಥಿಕರಾಗಿ ಬಲಾಢ್ಯರಾಗುತ್ತಲೇ ಹೋಗುತ್ತಾರೆ. ಇಲ್ಲವಾದರೆ ಪತ್ರಕರ್ತನೊಬ್ಬ ನೂರಾರು ಕೋಟಿಯ ಒಡೆಯನಾಗಲು ಸಾಧ್ಯವೇ ಇಲ್ಲ. ದುಡ್ಡು ಎಲ್ಲಾ ದೌರ್ಭಲ್ಯಗಳನ್ನು, ಅವಲಕ್ಷಣಗಳನ್ನು ಮುಚ್ಚಿ ಹಾಕುತ್ತದೆ.
ಆದರೆ ಇದರಿಂದೆಲ್ಲಾ ಆಘಾತಕ್ಕೊಳಗಾಗುವವರು ಜನಸಾಮಾನ್ಯರು, ಅವರ ಮುಗ್ದ ಮನಸು. ಅವರ ನಂಬಿಕೆಯ ಜಗತ್ತು. ಅವರ ಬದುಕಿನ ಮಾದರಿಗಳು ಛಿದ್ರಗೊಳ್ಳುತ್ತಿದೆ. ಛಿದ್ರಗೊಂಡ ಕನ್ನಡಿಯಲ್ಲಿ ಪೂರ್ಣ ಬಿಂಬವನ್ನು ಕಾಣಲು ಸಾಧ್ಯವಿಲ್ಲ.


Thursday, August 18, 2011

ಒಳಗೂ ಹೊರಗೂ ವ್ಯಾಪಿಸಿರುವ ’gloomy Sunday’ _ ಆತ್ಮಹತ್ಯೆಯ ಹಾಡು…..


ಕೆಲವು ದಿನಗಳ ಹಿಂದೆ ನನ್ನ ಗೆಳತಿಯೊಬ್ಬಳು ಲ್ಯಾಪ್ ಟಾಪ್ ನಲ್ಲಿ ಹಾಡೊಂದನ್ನು ಕೇಳುತ್ತಾ… ಈ ಹಾಡನ್ನು ನೀನು ಕೂಡಾ ಆಲಿಸು. ನಿನ್ನ ಮನಸ್ಸಿಗೇನಾದರೂ ಡಿಸ್ಟರ್ಬ್ ಅನ್ನಿಸ್ತ ಇದ್ರೆ ನನಗೆ ಹೇಳು’ ಅಂದ್ಲು.
ಅವಳು ಸೈಕಾಲಾಜಿ ವಿದ್ಯಾರ್ಥಿ. ಎನೋ ನನ ಮೇಲೆ ಪ್ರಯೋಗ ಮಾಡ್ತಿರಬೇಕು ಎಂದುಕೊಂಡು ಆಯ್ತು ಎಂದು ಹಾಡು ಆಲಿಸತೊಡಗಿದೆ. ’ಗಮನವಿಟ್ಟು ಕೇಳಬೇಕು’ ಎಂದು ಮತ್ತೆ ಎಚ್ಚರಿಸಿದಳು.

ಅದರ ಸಾಹಿತ್ಯ ಸರಿಯಾಗಿ ಅರ್ಥವಾಗದ ಕಾರಣಕ್ಕೋ ಎನೋ ನನಗೆ ಏನೂ ಅನ್ನಿಸಲಿಲ್ಲ. ಅಮೇಲೆ ಅವಳು ’ಗ್ಲೂಮಿ ಸಂಡೆ’ ಎಂಬ ಆ ಹಾಡಿನ ಅರ್ಥ, ಅದರ ಹಿನ್ನೆಲೆ, ಅದರ ಪರಿಣಾಮ ಎಲ್ಲದರ ಬಗ್ಗೆಯೂ ಪುಟ್ಟ ವಿವರಣೆ ನೀಡಿ ಮತ್ತೊಮ್ಮೆ ಆ ಹಾಡನ್ನು ಪ್ಲೇ ಮಾಡಿದಳು. ಆಸಕ್ತಿಯಿಂದ ಅದರಲ್ಲಿ ನಾನು ಲೀನಳಾದೆ. ಹಾಡು ಮುಗಿದ ಮೇಲೆ ಅವಳು ನನ್ನತ್ತ ನೋಡಿದಳು. ಈಗ ನನಗೆ ಮೈಯೆಲ್ಲಾ ಭಾರವಾದ ಹಾಗೆ ಅನಿಸತೊಡಗಿತು.ಸಣ್ಣಗೆ ತಲೆ ನೋಯಲಾರಂಬಿಸಿತು.
ಅಮೇಲೆ ನಾನದನ್ನು ಮರೆತುಬಿಟ್ಟೆ.

ಆದರೆ ಮೊನ್ನೆ ಭಾನುವಾರ ಕನ್ನಡದ ಸುದ್ದಿವಾಹಿನಿಯೊಂದು ’ಗ್ಲೂಮಿ ಸಂಡೆ’ಯ ಬಗ್ಗೆ ಅರ್ಧ ಘಂಟೆಯ ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಿತು. ನಾನದನ್ನು ನೋಡಿದೆ. ಹಾಡನ್ನು ವೈಭವಿಕರಿಸಲಾಗಿದೆ ಅನ್ನಿಸಿತ್ತು. ಅದರ ಬಗ್ಗೆ ಇನ್ನೂ ಹೆಚ್ಚಿನದನ್ನು ತಿಳಿದುಕೊಳ್ಳಬೇಕೆನಿಸಿತು. ನೆಟ್ ನಲ್ಲಿ ಸರ್ಚ್ ಮಾಡಿದೆ. ಒಂದಷ್ಟು ವಿಚಾರಗಳು ತಿಳಿಯಿತು.

’ಗ್ಲೂಮಿ ಸಂಡೆ’ ಎಂಬ ಹಾಡಿಗೆ ಸೂಸೈಡ್ ಸಾಂಗ್ ಎಂಬ ಅನ್ವರ್ಥ ನಾಮವಿದೆ. ಇದಕ್ಕೆ ಈ ಅಡ್ಡ ಹೆಸರು ಬರಲು ಕಾರಣ ಅದು ಪ್ರಪಂಚದಾದ್ಯಂತ ಹಲವಾರು ಜನರ ಆತ್ಮಹತ್ಯೆಗೆ ಕಾರಣವಾಗಿದ್ದು. ಒಂದು ಹಾಡು ನೂರಾರು ಜನರ ಸಾವಿಗೆ ಕಾರಣವಾಗುತ್ತದೆ ಎಂಬುದೇ ತುಂಬಾ ಕುತೂಹಲದ ಸಂಗತಿ. ಹಾಗಾದರೆ ಆ ಹಾಡಿನಲ್ಲೇನಿದೆ? ಅದನ್ನು ಬರೆದಾತನಾರು?
ಗ್ಲೂಮಿ ಸಂಡೆಯನ್ನು ಬರೆದಾತನ ಹೆಸರು ರೆಜೊ ಸೆರೆಸ್.ಆತ ಹಂಗೇರಿಯನ್ ದೇಶದ ಫಿಯೋನಿಸ್ಟ್.

ಒಂದು ಭಾನುವಾರ. ಆತ ಕಿಟಿಕಿಯ ಬಳಿ ಕುಳಿತು ಹೊರನೋಡುತ್ತಿದ್ದ. ಮ್ಲಾನವಾದ ವಾತಾವರಣ. ಅವನೊಳಗಿನ ಒಂಟಿತನವನ್ನು ಅದು ಇನ್ನಷ್ಟು ಉದ್ದೀಪಿಸುತ್ತಿತ್ತು ಖಿನ್ನತೆಯನ್ನು ಹೆಚ್ಚಿಸುತಿತ್ತು.
ಅವನೊಬ್ಬ ಮ್ಯೂಸಿಕ್ ಕಂಪೋಸರ್, ಗೀತ ರಚನೆಗಾರ. ಆದರೆ ಅವನ ಪ್ರತಿಭೆಯನ್ನು ಯಾರೂ ಗುರುತಿಸಿರಲಿಲ್ಲ. ನಿರ್ದಿಷ್ಟ ವರಮಾನವಿಲ್ಲ. ಇದೇ ಕಾರಣಗಳಿಂದ ಅವನ ಪ್ರೇಯಸಿ ಅವನಿಂದ ದೂರವಾಗಿದ್ದಳು. ಅವನು ಏಕಾಂಗಿಯಾಗಿದ್ದ. ಅವನಿಗೆ ಆ ಭಾನುವಾರ ನಿರ್ಜೀವವಾಗಿ ಭಾಸವಾಗುತ್ತಿತ್ತು.ಅವನಲ್ಲಿ ಹೆಪ್ಪುಗಟ್ಟಿದ ಭಾವನೆಗಳು ಶಬ್ದದ ರೂಪದಲ್ಲಿ ಹೊರ ಬರಲು ಒದ್ದಾಡುತ್ತಿದ್ದವು.

ರೆಜೋ ಸೆರೆಸ್ ಎದುರಿನಲ್ಲಿ ಅವನ ಪ್ರೀತಿಯ ಪಿಯೋನೋ ಇತ್ತು. ಅವನ ಬೆರಳುಗಳು ಅದರ ಮೇಲೆ ಹರಿದಾಡತೊಡಗಿದವು. ದೂರಾದ ಗೆಳತಿ ನೆನಾಪಾಗಿ ದಹಿಸತೊಡಗಿದಳು. ಹೃದಯ ಬದುಕಿಗೆ ಚರಮ ಗೀತೆ ಬರೆಯುತ್ತಿತ್ತು. ಅವನ ಎದುರುಗಡೆ ಹಳೆಯ ಪೋಸ್ಟ್ ಕಾರ್ಡೊಂದು ಬಿದ್ದಿತ್ತು. ಮೂಲೆಯಲ್ಲಿದ್ದ ಪೆನ್ಸಿಲನ್ನು ಕೈಗೆತ್ತಿಕೊಂಡ. ವಿಷಾಧದ ನದಿ ಹರಿಯತೊಡಗಿತು;

ಮ್ಲಾನವಾದ ಭಾನುವಾರ.
ನಿದ್ದೆಯಿಲ್ಲದ ನನ ಕ್ಷಣಗಳು.
ಹರಿದಾಡುವ ನೆರಳುಗಳೊಡನೆ ನನ್ನ ಬದುಕು.
ಶ್ವೇತ ವರ್ಣದ ಪುಷ್ಫಗಳು ಇನ್ನೆಂದೂ ನಿನ್ನನ್ನು ಪ್ರಚೋದಿಸಲಾರವು.
ದುಃಖ ತುಂಬಿದ ನಾವೆ ನಿನ್ನನ್ನು ಗಾಡಾಂಧಕಾರಕ್ಕೆ ಹೊತ್ತೊಯ್ಯಲಿದೆ.
ನೀನು ಮರಳುವುದರ ಬಗ್ಗೆ ದೇವತೆಗಳು ಕೂಡಾ ಎಂದೂ ಯೋಚಿಸಲಾರರು.
ನಾನು ನಿನ್ನನ್ನು ಸೇರುವೆಯೆಂದರೆ ದೇವತೆಗಳೂ ಮುನಿಯಬಹುದು!

ಮ್ಲಂಕು ಕವಿದ ಭಾನುವಾರ
ದುಃಖ ಮಡುಗಟ್ಟಿದ ಭಾನುವಾರ
ಇಲ್ಲಿ ಯಾರೂ ಇಲ್ಲ; ನೆರಳುಗಳೊಡನೆ ಬದುಕುತ್ತಿದ್ದೇನೆ
ಬದುಕು ಸಾಕು, ಎಲ್ಲದಕ್ಕೂ ಅಂತ್ಯ ಹಾಡಲು ನಿರ್ಧರಿಸಿ ಆಗಿದೆ.
ನನಗೆ ಗೊತ್ತಿದೆ; ಇಲ್ಲಿ ಕೆಲವೇ ಕ್ಷಣಗಳಲ್ಲಿ ಕ್ಯಾಂಡಲುಗಳು ಬೆಳಗುತ್ತವೆ, ಪ್ರಾರ್ಥನೆ ಮೊಳಗುತ್ತದೆ.
ನನಗಾಗಿ ಯಾರೂ ಅಳಬಾರದು;
ಸಾವನ್ನು ನಾನು ಪ್ರೀತಿಸಿದ್ದೇನೆ. ಅದು ನನ್ನ ಕನಸು.
ಕನಸಿನಲ್ಲಿಯೂ ನಾನು ನಿನ್ನನ್ನೇ ಹಂಬಲಿಸುತ್ತಿದ್ದೇನೆ.

ಮ್ಲಬ್ಬಾದ ಭಾನುವಾರ
ಕನಸು ಕಾಣುತ್ತಿದ್ದೇನೆ, ಕೇವಲ ಕನಸು. ಎಲ್ಲೆಲ್ಲೂ ಕನಸು
ಅದು ನಿನ್ನದೇ ಕನಸು.
ನನ್ನ ಪ್ರೇಮವೇ, ನಾನು ಎಚ್ಚರಗೊಂಡಾಗಲೂ ನನ್ನ ಮನದಾಳದಲ್ಲಿ ನೀನು ಸುಪ್ತವಾಗಿ ಮಲಗಿದ್ದಿಯೇ
ನನ್ನ ಕನಸು ನಿನ್ನನ್ನೆಂದೂ ಬಾಧಿಸದು
ನನ ಹೃದಯಕ್ಕೆ ಗೊತ್ತಿದೆ; ನಿನ್ನೆಡೆಗಿನ ನನ್ನ ತೀರಲಾರದ ಹಂಬಲ
ಓ ಮ್ಲಾನವಾದ ಭಾನುವಾರವೇ

ರೆಜೋ ಸೆರೆಸ್ ಕೇವಲ ಅರ್ಧ ಘಂಟೆಯಲ್ಲಿ ಅದನ್ನು ಬರೆದು ಮುಗಿಸಿದ. ಅದನ್ನು ಪ್ರಕಟನೆಗಾಗಿ ಪೇಪರ್ ಅಪೀಸೊಂದಕ್ಕೆ ಕಳುಹಿಸಿದ. ಮಾಮೂಲಿನಂತೆ ಅದು ತಿರಸ್ಕೃತಗೊಂಡಿತು. ಆತ ಅದನ್ನು ಇನ್ನೊಂದು ಪೇಪರ್ ಆಪೀಸಿಗೆ ಕಳುಹಿಸಿದ. ಅದು ಅಲ್ಲಿ ಪ್ರಕಟವಾಯಿತು. ಮಾತ್ರವಲ್ಲ ಅದು ಜನಪ್ರಿಯಗೊಂಡಿತು. ಬರ್ಲಿನ್ ನಲ್ಲಿ ಒಬ್ಬಾತ ಅದನ್ನು ತನ್ನ ಬಾಂಡ್ ಗಾಗಿ ಬಾರಿಸಿದ. ಮತ್ತೆ ಮಾತ್ತೆ ಅದನ್ನೇ ಹಲವು ಕಾರ್ಯಕ್ರಮಗಳಲ್ಲಿ ನುಡಿಸಿದ. ನಂತರ ಒಂದು ದಿನ ತನ್ನ ರಿವಾಲ್ವರಿನಿಂದ ಗುಂಡು ಹೊಡೆದುಕೊಂಡು ಸತ್ತ. ನಂತರ ಹಲವಾರು ಜನ ಈ ಹಾಡನ್ನು ಕೇಳಿದ ನಂತರ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡರು. ಸತ್ತವರ ಡೆತ್ ನೋಟಿನಲ್ಲಿ ಗ್ಲೂಮಿ ಸಂಡೆಯ ಪ್ರಸ್ತಾಪವಿರುತ್ತಿತ್ತು.

ಗ್ಲೂಮಿ ಸಂಡೆ ಪ್ರಪಂಚಾದ್ಯಂತ ಸೂಸೈಡ್ ಸಾಂಗ್ ಎಂದು ಪ್ರಚಾರವಾಗತೊಡಗಿತು. ಪ್ರಥಮ ಬಾರಿಗೆ ಬಿಬಿಸಿ ಆಕಾಶವಾಣಿ ಈ ಹಾಡನ್ನು ನಿಷೇಧಿಸಿತು. ಅನಂತರದಲ್ಲಿ ಹಲವಾರು ದೇಶಗಳು ಇದನ್ನು ಬ್ಯಾನ್ ಮಾಡಿದವು. ರೆಜೋ ಸೆರೆಸ್ ನ ದೇಶವಾದ ಹಂಗೇರಿಯಾ ಕೂಡಾ ಗ್ಲೂಮಿ ಸಂಡೆಯನ್ನು ಬ್ಯಾನ್ ಮಾಡಿತು.
ಯಾಕೆ ಹೀಗಾಯ್ತು? ನಿಜವಾಗಿಯೂ ಆ ಹಾಡಿನಲ್ಲಿ ಸಾವಿನ ಸಂದೇಶ ಇದೆಯಾ? ಪೋಣಿಸಲ್ಪಟ್ಟ ಶಬ್ದಗಳಿಗೆ, ಸಂಗೀತಕ್ಕೆ ಸಾವನ್ನು ತರುವ ಶಕ್ತಿ ಇದೆಯಾ? ನಾವು ಆ ಕಾಲಘಟ್ಟಕ್ಕೆ ಹೋಗಿ ನೋಡೋಣ.

ಗ್ಲೂಮಿ ಸಂಡೆ ರಚನೆಯಾದದ್ದು ೧೯೩೩ರಲ್ಲಿ. ಅದು ವಿಶ್ವಮಾಹಾಯುದ್ದದ ಕಾಲ. ಜನತೆ ಬಡತನ, ರೋಗ ರುಜಿನಗಳಿಂದ ನರಳುತ್ತಿದ್ದರು. ಹಿಟ್ಲರ್ ಅಬ್ಬರಕ್ಕೆ ಪ್ರಪಂಚವೇ ನಡುಗಿ ಹೋಗುತ್ತಿತ್ತು.ಜನ ಮಾನಸಿಕವಾಗಿ ಜರ್ಝರಿತರಾಗಿದ್ದರು. ಅದರಲ್ಲಿಯೂ ಹಂಗೇರಿಯಾ ಸೂಸೈಡ್ ರೇಟಿಂಗ್ ನಲ್ಲಿ ಪ್ರಪಂಚದಲ್ಲೇ ಮೊದಲ ಸ್ಥಾನದಲ್ಲಿತ್ತು. ಇಂತಹ ಪರಿಸ್ಥಿತಿಯಲ್ಲಿ ದುರ್ಭಲ, ಭಾವುಕ ಮನಸ್ಸುಗಳಿಗೆ ಸಾಯಲು ನೆಪವೊಂದು ಬೇಕಾಗಿತ್ತು. ಗ್ಲೂಮಿ ಸಂಡೆ ಸಿಕ್ಕಿತ್ತು.

ಮನುಷ್ಯ ಮೂಲತ; ಒಂಟಿಯೇ. ಅವನ ಬದುಕು ವಿಷಾಧದಿಂದ ಕೂಡಿರುತ್ತದೆ. ಅವನ ಸೇಹಿತರು, ಬಂಧುಗಳು. ಪ್ರೀತಿಪಾತ್ರ್ರರು ಅದನ್ನು ಸಹನೀಯವಾಗುವಂತೆ ಮಾಡುತ್ತಾರೆ. ಆದರೆ ಅಂತವರ್ಯಾರು ಅವನ ಬದುಕಿನಲ್ಲಿ ಇಲ್ಲದೇ ಹೋದರೆ? ಇದ್ದವರು ಅರ್ಧದಲ್ಲಿ ಎದ್ದು ಹೋದರೆ? ಬದುಕಿಗೆ ವಿದಾಯ ಹೇಳಬೇಕೆಂದು ಅನ್ನಿಸುವುದು ಸಹಜ. ಗ್ಲೂಮಿ ಸಂಡೆಯನ್ನು ಬರೆದವನಿಗೂ’ ಅದನ್ನು ಓದಿ ಮನಸ್ಸು ಕ್ಷೋಭೆಗೊಳಗಾದವರಿಗೂ ಹಾಗೆ ಅನ್ನಿಸಿರಬೇಕು. ಈ ಕವನದ ಇನ್ನೊಂದು ದುರಂತವೆಂದರೆ ಯಾರ ನೆನಪಿನಲ್ಲಿ ಆ ಕವನ ಹುಟ್ಟಿತೋ ಆಕೆ ಅದನ್ನು ಓದಿ ಒಡನೆಯೇ ಆತ್ಮಹತ್ಯೆ ಮಾಡಿಕೊಂಡದ್ದು.

ಇಷ್ಟೆಲ್ಲಾ ಬರೆಯಲು ನೆಪವಾಗಿದ್ದು ಗ್ಲೂಮಿ ಸಂಡೆಯಿಂದಲೇ. ಆದರೆ ಅದು ರೆಜೋ ಸೆರೆಸ್ ನ ಗ್ಲೂಮಿ ಸಂಡೆಯಿಂದಲ್ಲ. ಕಳೆದ ಸಂಡೆಯಿಂದ ಆರಂಭವಾಗಿರುವ ಬೆಂಗಳೂರಿನ ಗ್ಲೂಮಿ ವೆದರಿನಿಂದ. ಒಂದೇ ಸಮನೆ ಮಳೆ ಸುರಿಯುತ್ತಿದೆ. ಮನಸ್ಸು ಏಕಾಂತಕ್ಕೆ ಸರಿಯುತ್ತಿದೆ. ಎದ್ದು ರೇಡಿಯೋ ಹಾಕಿದರೆ ನನ್ನೂರಿನ, ನನ ಮೆಚ್ಚಿನ ಕವಿ ಸುಬ್ರಾಯ ಚೊಕ್ಕಾಡಿಯವರ’ ಮುನಿಸು ತರವೆನೇ ಮುಗುದೇ ನಗಲೂ ಬಾರದೇ…’ಎಂಬ ಹಾಡು ಪ್ರಸಾರ ಆಗುತ್ತಿತ್ತು. ಅ ಹಾಡಿನ ಬಗ್ಗೆ ನನಗೆ ಹುಚ್ಚು ಮೋಹ. ’ಆ ಹಾಡನ್ನು ನಿಮಗಾಗಿಯೇ ಬರೆದದ್ದು” ಎಂದು ಚೊಕ್ಕಾಡಿಯವರು ನನಗೆ ತಮಾಶೆ ಮಾಡುತ್ತಿರುತ್ತಾರೆ. ಅ ಹಾಡಿನ ಕ್ಯಾಸೇಟ್ ಅನ್ನು ನಾನು ತುಂಬಾ ಜನರಿಗೆ ಗಿಪ್ಟ್ ಕೊಟ್ಟಿದ್ದೇನೆ. ಹಾಗೆ ನಾನು ಮೆಚ್ಚಿಕೊಂಡಿದ್ದ ಹುಡುಗನಿಗೂ ಕೊಟ್ಟಿದ್ದೆ. ಆತ ಎಷ್ಟು ಇನ್ಸೆನ್ಸಿಟೀವ್ ಆಗಿದ್ದ ಅಂದರೆ ಅದರ ಹಿಂದಿನ ಭಾವ ಆತನಿಗೆ ಅರ್ಥವಾಗಲೇ ಇಲ್ಲ.ಸೆರಸ್ ಗೆ ಆದ ಅನುಭವವೇ ಸೂಕ್ಷ್ಮ ಮನಸ್ಸಿನವರಿಗೂ ಆಗುತ್ತಿದೆ. ಆದರೆ ಯಾರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಅದು ಮನಸ್ಸಿನೊಳಗೆ ನಡೆಯುವ ಕೆಮಿಸ್ಟ್ರಿ. ಅದರಿಂದ ಹೊರಬರಲು ನೂರಾರು ದಾರಿಗಳಿವೆ.

ಗ್ಲೂಮಿ ವೆದರ್ ಇದ್ದಾಗಲೂ ಅಣ್ಣಾ ಹಜಾರೆಯ ಪರವಾಗಿ ಜನ ಬೀದಿಗಿಳಿಯುತ್ತಿದ್ದಾರೆ. ಅದು ಬ್ರಷ್ಟಾಚಾರದಿಂದ ರೋಸಿ ಹೋಗಿರುವ ಜನ ಸಾಮಾನ್ಯರ ಆಕ್ರೋಶ. ಯುವ ಜನತೆ ಬಂಡೆಳುತ್ತಿದ್ದಾರೆ.. ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿಲ್ಲ. ಆದರೆ ಕಾರ್ಪೋರೇಟ್ ಜಗತ್ತು ಚಳುವಳಿಯನ್ನು ತಮ್ಮ ಸುಪರ್ಧಿಗೆ ತೆಗೆದುಕೊಳ್ಳಲು ಹವಣಿಸುತ್ತಿದೆ. ಬ್ರಷ್ಟ ರಾಜಾಕಾರಣಿಗಳು ಕೂಡಾ ತಾವು ಪರಿಶುದ್ಧರೆಂದು ತೋರಿಸಿಕೊಳ್ಳಲು ಚಳುವಳಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಗ್ಲೂಮಿ ವೆದರ್ ಒಳಗೂ- ಹೊರಗೂ ವ್ಯಾಪಿಸಿಕೊಳ್ಳುತ್ತಿದೆ.
[ಒರಿಜಿನಲ್ 'ಗ್ಲೂಮಿ ಸಂಡೇ' ಕೊಟ್ಟಿದ್ರೆ ಚೆನ್ನಾಗಿತ್ತು ಎಂದು ಕೆಲವರು ಕೇಳಿದ್ದಾರೆ ಅವರಿಗಾಗಿ ಇಲ್ಲಿದೆ ರೆಜೊ ಸೆರೆಸ್ ಬರೆದ ಮೂಲ ಹಂಗೇರಿಯನ್ ಹಾಡಿನ ಇಂಗ್ಲೀಷ್ ಅನುವಾದ];
sunday is gloomy
The hours are slumberless
dearest the shadows
I live with are numberless

Little white flowers
will never awaken you,
not where the dark coach
of sorrow has taken you

Angels have no thought
of ever returning you
would they be angry
if I thought of joining you?

Gloomy Sunday

Gloomy Sunday
with shadows I spend it all
my heart and I
have decided to end it all

Soon there'll be prayers
and candles are lit, I know
let them not weep
let them know, that I'm glad to go

Death is no dream
for in death I'm caressing you
with the last breath of my soul
I'll be blessing you

Gloomy Sunday

Dreaming, I was only dreaming
I wake and I find you asleep
on deep in my heart, dear

Darling, I hope
that my dream hasn't haunted you
my heart is telling you
how much I wanted you

Gloomy Sunday

It's absolutely gloomy sunday

*rezso seress