Wednesday, February 26, 2014

ಕಣ್ಣೀರಲ್ಲಿ ಕಲ್ಮಶವನ್ನು ಕಾಣಲಾರೆ


ಇಂತಹದೊಂದು ಬರಹವನ್ನು ಬರೆಯಬೇಕೆಂದು ನನಗೆ ಅನ್ನಿಸಿದ್ದು ಎರಡು ಕಾರಣಗಳಿಗಾಗಿ- ನಮ್ಮ ಕನ್ನಡ ಚಿತ್ರರಂಗದ ಆಪ್ತರಕ್ಷಕ ಅಂಬರೀಶ್ ಅವರು ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆ ಸೇರಿದ ಸಂದರ್ಭದಲ್ಲಿ ಅವರ ಆರೋಗ್ಯದ ಬಗೆಗಿನ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವುದಕ್ಕಾಗಿ ಆಸ್ಪತ್ರೆಯ ವೈದ್ಯರು ಪತ್ರಿಕಾ ಗೋಷ್ಠಿಯನ್ನು ಏರ್ಪಡಿದ್ದರು. ಆದರೆ ಅವರ ಅರೋಗ್ಯದ ಬಗೆಗಿನ ಮಾಹಿತಿಯನ್ನು ಸ್ವತಃ ಶ್ರೀಮತಿ ಅಂಬರೀಶ್ ಅವರೇ ನೀಡಬೇಕೆಂದು ಮಾಧ್ಯಮದ ಮಂದಿ ಪಟ್ಟು ಹಿಡಿದು ಕುಳಿತರು. ಆಗ ಸುಮಲತಾ ಅಂಬರೀಶ್ ಅವರೇ ಪತ್ರಿಕಾಗೋಷ್ಠಿಗೆ ಬಂದು ಮ್ಲಾನ ವದನದಿಂದ ಎರಡೂ ಕೈ ಜೋಡಿಸಿ ಪ್ರಾರ್ಥಿಸಿಕೊಂಡ ಕ್ಷಣವಿದೆಯಲ್ಲಾ...ಅದು ನನ್ನ ಚಿತ್ತದಲ್ಲಿ ಅಚ್ಚೊತ್ತಿ ಬಿಟ್ಟಿತು..

ಅದಕ್ಕೆ ಎರಡು ದಿನಗಳ ಹಿಂದೆ ವೈಯಕ್ತಿಕವಾಗಿ ನನಗೊಂದು ಅನುಭವಾಗಿತ್ತು; ದೇವರ ಸನ್ನಿಧಿಯಲ್ಲಿ ನಿವೇದಿಸಿಕೊಂಡಂತೆ ಆಪ್ತರೊಬ್ಬರಲ್ಲಿ ಹೇಳಿಕೊಂಡಂತ ಮಾನಸಿಕ ತಳಮಳದ ಕೆಲವು ಸಂಗತಿಗಳು ಆ ಚೌಕಟ್ಟಿನಿಂದಾಚೆ ಹೊರಬಂದು ಏನೇನೋ ಕಲ್ಪನೆಗಳೊಂದಿಗೆ ಮತ್ತೆ ನನ್ನ ಕಿವಿಯನ್ನೇ ತಲುಪಿದಾಗ ನಾನು ತಲ್ಲಣಗೊಂಡಿದ್ದೆ.

ಈ ಎರಡೂ ಸಂದರ್ಭಗಳಲ್ಲಿ ಆಗಿದ್ದು ಖಾಸಗಿತನದ ಘನತೆಯ ಮೇಲಿನ ಧಾಳಿ. ಇದು ಕೊಂಬು ಕಹಳೆಯನ್ನೂದುತ್ತಾ ಬಂದ ಧಾಳಿಯಲ್ಲ.ಮಂದೆಲರು ಕೂರಲಗಿನಂತೆ ಬಂದು ತಿವಿದ ಪರಿ.ಇದು ಎಲ್ಲರಿಗೂ ಅರ್ಥವಾಗುವಂತಹದ್ದಲ್ಲ. ಇದನ್ನು ಅರಿಯಲು ಸೂಕ್ಷ್ಮಜ್ನರಾಗಿರಬೇಕು.ನಿಟ್ಟುಸಿರಿನ ಬಾರಕ್ಕೆ ನಲುಗಿದ ಅನುಭವವಿರಬೇಕು. ಕಣ್ಣೀರಲ್ಲಿ ಮಿಂಚಿದ ಕಪ್ಪು ಬಣ್ಣವನ್ನು ಎದೆಗೆ ಹಚ್ಚಿಕೊಂಡವರಾಗಿರಬೇಕು.

ಪ್ರತಿ ವ್ಯಕ್ತಿಗೂ ಒಂದು ಹೊರಜಗತ್ತಿರುತ್ತದೆ. ಹಾಗೆಯೇ ಇನ್ನೊಂದು ಒಳಜಗತ್ತಿರುತ್ತದೆ. ವೈಯಕ್ತಿಕ ಸಂಬಂಧವಿದ್ದಂತೆಯೇ ಸಾಮಾಜಿಕ ಸಂಬಂಧಗಳಿರುತ್ತವೆ. ವೈಯಕ್ತಿಕ ಸಂಬಂಧ ಎರಡು ವ್ಯಕ್ತಿಗಳ ನಡುವೆಯಲ್ಲಿರುತ್ತದೆ. ಅದು ಅಗೋಚರ ಮತ್ತು ನಿಗೂಢ. ತೀರಾ ಖಾಸಗಿ ಜಗತ್ತು ಅದು.  

ಸಾಮಾಜಿಕ ಸಂಬಂಧಗಳು ವ್ಯಕ್ತಿ ಮತ್ತು ಸಮಾಜದ ನಡುವೆ ಇರುತ್ತದೆ. ಅದು ಸಾರ್ವಜನಿಕವಾದುದು..ಅದೊಂದು ಇಮೇಜ್; ಪ್ರತಿಮೆ. ಸಮಾಜದಲ್ಲಿ ಗಣ್ಯ ವ್ಯಕ್ತಿಗಳೆಂದು; ಸೆಲೆಬ್ರಿಟಿಗಳೆಂದು ಬಿಂಬಿತವಾದವರು ಪ್ರತಿಮೆಗಳಾಗುತ್ತಾರೆ. ಅಂದರೆ ಅವರಿಗೊಂದು ಇಮೇಜ್ ಆವರಿಸಲ್ಪಡುತ್ತದೆ. ಆ ಇಮೇಜ್ ಗೂ ಅವರ ಖಾಸಗಿಗೆ ಬದುಕಿಗೂ ಸಂಬಂಧವಿರುವುದಿಲ್ಲ. ಆದರೆ ಆ ವ್ಯಕ್ತಿಗೆ ಆ ಇಮೇಜನ್ನು ಕೊಟ್ಟ ಸಮೂಹ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಅವರ ನಿರ್ವಾಜ್ಯ ಪ್ರೀತಿಯಲ್ಲಿ ಕಳಂಕ ಇಲ್ಲ. ಆದ್ರೆ ಆ ಇಮೇಜನ್ನು ಧರಿಸಿದ ವ್ಯಕ್ತಿ ಕೂಡಾ ಹುಲುಮಾನವ್ನೇ ತಾನೇ? ಹಾಗಾಗಿ ಅವನಲ್ಲಿಯೂ ರಾಗ ದ್ವೇಷಾದಿ ಗುಣಗಳು ತುಂಬಿರುತ್ತವೆ. ಅಂಥ ಗುಣಗಳು ಸಮಾಜಕ್ಕೆ ತೆರೆದುಕೊಂಡರೆ ಅದನ್ನು ಸಹಿಸಲು ಅವರ ಅಭಿಮಾನಿ ಪಡೆಗಳಿಗೆ ಕಷ್ಟವಾಗುತ್ತದೆ. ಇದು ಒಂದು ವಿಚಾರ.

ಇನ್ನೊಂದು ವಿಚಾರ ಏನೆಂದರೆ ಇಂಥ ಪ್ರತಿಮೆಗಳನ್ನು ಒಡೆಯುವ ಕೆಲಸ ನಿರಂತರ ನಡೆಯುತ್ತಿರುತ್ತದೆ. ಅದು ರಾಮನಿಗಿಂತಲೂ ಹಿಂದೆಯೇ ಆರಂಭವಾಗಿ ರಾಮಣ್ಣನನ್ನೂ ಧಾಟಿ ಮುಂದುವರಿಯುತ್ತಲೇ ಇರುತ್ತದೆ. ಈಗ ಟೀವಿ ಕ್ಯಾಮರಾಗಳು, ಟಾಬ್ಲೈಡ್ ಪೇಪರ್ ಗಳು, ಪೇಸ್ ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳು ಈ ಪ್ರತಿಮೆ ಭಂಜಕ ಗುಣಗಳನ್ನು ತುಂಬಾ ಯಶಸ್ವಿಯಾಗಿ ಮಾಡುತ್ತಾ ಬರುತ್ತಿವೆ.

ಖಾಸಗಿ ಮತ್ತು ಸಾರ್ವಜನಿಕ ಬದುಕು ಒಂದೇ ಆಗಬೇಕಿಲ್ಲ. ಹಾಗೆ ಇರಬೇಕೆಂದು ಬಹುಶಃ ಯಾರೂ ಬಯಸಲಾರರು. ಅವೆರಡನ್ನೂ ಒಂದೇ ಆಗಿ ಕಾಪಾಡಿಕೊಂಡು ಬಂದವರು ವಿರಾತಿವಿರಳ. ಗಾಂಧೀಜಿ ಒಬ್ಬರನ್ನು ಬಿಟ್ಟರೆ ಇನ್ನೊಬ್ಬರ ಹೆಸರು ನನಗೆ ಪಕ್ಕನೆ ಹೊಳೆಯುವುದಿಲ್ಲ. ವ್ಯಯಕ್ತಿಕ ಬದುಕಿನ ನಿರ್ಧಾರಗಳು ಸಾಮಜಿಕ ಬದುಕಿನ ಮೇಲೆ ಪರಿಣಾಮ ಬೀರುತ್ತವೆ. ಹಾಗೆಯೇ ಹೊರಜಗತ್ತಿನ ಜೊತೆಗಿನ ನಮ್ಮ ಸಂಬಂಧಗಳು ನಮ್ಮ ಖಾಸಗಿ ಬದುಕಿನ ಮೇಲೂ ಪರಿಣಾಮ ಬೀರುತ್ತವೆ. ಇವೆರಡರನ್ನು ಸಂತುಲನಗೊಳಿಸುವ ಜಾಣ್ಮೆ ಎಲ್ಲರಿಗೂ ಸಿದ್ಧಿಸಿರುವುದಿಲ್ಲ.

ತುಂಬಾ ಗಟ್ಟಿ ವ್ಯಕ್ತಿತ್ವವುಳ್ಳವರು ಎಂದು ಅನ್ನಿಸಿಕೊಂಡವರು ಪುಟ್ಟ ಮಗುವಿನ ಹಾಗೆ ಕಣ್ಣಿರು ಹಾಕಿದ್ದನ್ನು, ಕುಸಿದು ಕುಳಿತಿದ್ದನ್ನು ನಾನು ಕಂಡಿದ್ದೇನೆ.  ನಾವು ಹ್ರದಯಹೀನರೆಂದು ಬಹುಮಟ್ಟಿಗೆ ಭಾವಿಸುವ ಸಿನೇಮಾ, ಕಿರುತೆರೆಯ ಕಲಾವಿದರು, ರಾಜಕಾರಣಿಗಳು ನೋವು, ಹತಾಶೆಗಳಿಂದ ನರಳಿ ಕಣ್ಣೀರಟ್ಟ ಪ್ರಸಂಗಗಳನ್ನು ನನ್ನ ಆಪ್ತರ ಬಾಯಿಯಿಂದ ಕೇಳಿದ್ದೇನೆ. ಸಿಟ್ಟು, ರೋಷ-ದ್ವೇಷಗಳನ್ನು ನಾವು ಬಹಿರಂಗವಾಗಿ ವ್ಯಕ್ತಪಡಿಸಬಹುದು. ಆದರೆ ನೋವು, ಹತಾಶೆ,ಅಸಹಾಯಕತೆಗಳನ್ನು ಎಲ್ಲೆಡೆಗೆ ವ್ಯಕ್ತಪಡಿಸಲಾಗದು. ಅದಕ್ಕೆ ಅಂತಃಕರಣದ ಪರಿಸರ ಬೇಕು. ಹಾಗಾಗಿ ಕಣ್ಣೀರಲ್ಲಿ ಕಲ್ಮಶವನ್ನು ಕಾಣಲು ನನ್ನಿಂದಾಗದು.


ಲಂಕೇಶ್ ತಮ್ಮ ’ಟೀಕೆ ಟಿಪ್ಪಣಿ’ಯಲ್ಲಿ ಒಂದೆಡೆ ಬರೆಯುತ್ತಾರೆ, ’ಜೀವನದಲ್ಲಿ ಗಾಢವಾಗಿ ತೊಡಗಿದ ಪ್ರತಿಯೊಬ್ಬನೂ, ಮನುಷ್ಯ ಮೂಲಭೂತವಾಗಿ ಎಂತಹ ರಾಕ್ಷಸ ಎಂಬುದನ್ನು ತನ್ನ ಮಧ್ಯವಯಸ್ಸಿನಲ್ಲಿ ಕಂಡುಕೊಳ್ಳುತ್ತಾನೆ’ ನಾನು ಮಧ್ಯ ವಯಸ್ಸನ್ನು ಪ್ರವೇಶಿಸುತ್ತಿರುವುದರಿಂದ ನನಗೆ ಹೀಗನ್ನಿಸುತ್ತಿದೆಯೇ?.ಇದ್ದರೂ ಇರಬಹುದೆನೋ!..ಅದನ್ನು ನಾನೇ ನನ್ನೊಳಗಿಳಿದು ವಿಶ್ಲೇಷಿಕೊಳ್ಳಬೇಕು.        

Monday, February 24, 2014

ಸೆಲೆಬ್ರಿಟಿಗಳ ಖಾಸಗಿ ಮತ್ತು ಸಾರ್ವಜನಿಕ ಬದುಕು.


[ಅಕಸ್ಮತ್ತಾಗಿ ಕಣ್ಣಿಗೆ ಬಿದ್ದ ಹಳೆಯ ಬರಹ]

ಕನ್ನಡದ ಹಿರಿಯ ಸಾಹಿತಿ,  ಡಾ. ಯು.ಆರ್.ಅನಂತಮೂರ್ತಿ’ ಅಗ್ನಿ’ ವಾರಪತ್ರಿಕೆ ಕಛೇರಿ ಮುಂದೆ ಕುಟುಂಬ ಸಮೇತರಾಗಿ ಧರಣಿ ನಡೆಸಿದ ’ಪ್ರಹಸನ’ ಈಗ ಮುಗಿದೆದೆ. ಆದರೆ ಈ ಪ್ರಕ್ಲರಣ ಅನೇಕ ಪ್ರಕರಣಗಳಿಗೆ ಚಾಲನೆ ನೀಡಿದೆ. ಅವು ಹೊಸತೇನೂ ಅಲ್ಲ. ಹಲವು ದಶಕಗಳಿಂದಲೂ ಅಷ್ಟೇಕೆ ಹಲವು ಶತಮಾನಗಳಿಂದಲೂ ಈ ಪ್ರಶ್ನೆ ಸಾಹಿತ್ಯವಲಯದಲ್ಲಿ ಚರ್ಚಿತವಾಗುತ್ತಲೇ ಬಂದಿದೆ. ಅದೆಂದರೆ;ಸಾಹಿತ್ಯಕೃತಿಯಷ್ಟೇ ಅದನ್ನು ರಚಿಸಿದಾತನೂ ಮುಖ್ಯನಾಗುತ್ತನೆಯೇ/ ಕೃತಿಕಾರನನ್ನು ನಗಣ್ಯವಾಗಿಸಿ ಬರಿಯ ಕೃತಿಯನ್ನು ನೋಡಲು ಸಾಧ್ಯವಿಲ್ಲವೇ?

ಇದಕ್ಕೆ ಸ್ಪಷ್ಟವಾದ ಉತ್ತರವಿಲ್ಲ. ಆದರೆ ಯಾವ ಕಾಲಘಟ್ಟದಲ್ಲಿ ಆ ಕೃತಿ ರಚನೆಯಾಯ್ತು ಮತ್ತು ಯಾವ ಕಾಲಘಟ್ಟದಲ್ಲಿ ನಿಂತು ಆ ಕೃತಿಯನ್ನು ನಾವು ಓದುತ್ತಿದ್ದೇವೆ ಎಂಬುದರ ಮೇಲೆ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ.

ನಮ್ಮ ಆದಿ ಕವಿ ಪಂಪ ತನ್ನ ಧರ್ಮ, ರೂಪ, ಸ್ವಭಾವ, ರಸಿಕತೆಗಳ ಬಗ್ಗೆ ಸ್ವತಹ ಸಾಕಷ್ಟು ಹೇಳಿಕೊಂಡಿದ್ದಾನೆ. ಆದರೆ ಅವನು ಹಾಗ್ಯೇ ಇದ್ದ,ಹಾಗೆಯೇ ಬದುಕಿದ್ದ ಎಂಬುದಕ್ಕೆ ಪುರಾವೆಗಳಿಲ್ಲ. ಹತ್ತನೇ ಶತಮಾನದ ಆತನನ್ನು ಬಿಟ್ಟು ಹತ್ತೊಂಬತ್ತನೆಯ ಶತಮಾನದ ನವೋದಯ ಸಾಹಿತ್ಯದ ಉದಯದ ತನಕ ತಮ್ಮ ಬಗ್ಗೆ ಹೇಳಿಕೊಂಡ ಪ್ರಮುಖ ಕನ್ನಡದ ಕವಿಗಳು ನಮಗೆ ಸಿಗುವುದಿಲ್ಲ.

ಹರಿಶ್ಚಂದ್ರ ಕಾವ್ಯವನ್ನು ಬರೆದ ರಾಘವಾಂಕ ನಿಜ ಜೀವನದಲ್ಲಿ ಸತ್ಯವಂತನಾಗಿದ್ದನೆ? ಗೊತ್ತಿಲ್ಲ. ' ಸ್ತೀ ರೂಪಮೆ ರೂಪಂ ಶೃಂಗಾರಮೇ ಕಾವ್ಯಂ’ ಎಂದ ನೇಮಿಚಂದ್ರ ಸ್ತ್ರೀ ಲೋಲನಾಗಿದ್ದಿರಬಹುದೇ? ಗೊತ್ತಿಲ್ಲ. ಅಷ್ಟೊಂದು ನಾಟಕಗಳನ್ನು ಬರೆದ ಕಾಳಿದಾಸ ಬಾಳಿ ಬದುಕಿದ ಕಾಲದಲ್ಲಿ ನಾಟಕಗಳಿಗೆ ಸಾಮಾಜಿಕ ಮನ್ನಣೆಯಿತ್ತೇ? ಗೊತ್ತಿಲ್ಲ.

ನಮ್ಮ ಹಿಂದಿನ ಸಾಹಿತಿ ಕಲಾವಿದರು ಬದುಕಿ ಬಾಳಿದ ಕಾಲಘಟ್ಟದ ಸಾಮಾಜಿಕ ಪರಿಸರವನ್ನು ’ಇಅದಮಿತ್ತಂ’ ಎಂದು ಹೇಳಲು ನಮಗೆ ಸಾಧ್ಯವಿಲ್ಲ. ಆದರೆ ಇತಿಹಾಸಕಾರರು, ಸಂಸ್ಕೃತಿ ವಿಶ್ಲೇಷಕರು ಇದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಾರೆ. ಅದಕ್ಕೆ ಈ ಕೃತಿಗಳು ಸಹಾಯ ಮಾಡುತ್ತವೆ. ಅಂದರೆ ಸಾಹಿತಿಯೊಬ್ಬ ತನ್ನ ಕೃತಿಯಲ್ಲಿ ಎಲ್ಲೋ ಒಂದು ಕಡೆ ಬದುಕಿರುತ್ತಾನೆ.. ಯಾಕೆಂದರೆ ಸಾಹಿತ್ಯ ರಚನೆಯೆಂದರೆ ಸಾಹಿತಿಯೊಬ್ಬ ಏಕಕಾಲದಲ್ಲಿ ತನ್ನೊಡನೆ ಮತ್ತು ಸಮಾಜದೊಡನೆ ನಡೆಸುವ ಸಂವಾದವಾಗಿರುತ್ತದೆ. ಆದ ಕಾರಣ ಆತನನ್ನು ಸಮಾಜದಿಂದ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಸಮಕಾಲೀನ ಸಾಹಿತಿಯೊಬ್ಬನ ಬಗ್ಗೆ ಮಾತನಾಡುವ, ಅರ್ಥ ಮಾಡಿಕೊಳ್ಳುವ ಸಂದರ್ಭದಲ್ಲಿ ಈ ವಿಚಾರಗಳು ಬಹಳ ಮುಖ್ಯವಾಗುತ್ತವೆ.

ಆಧುನಿಕ ಬದುಕು ಹೆಚ್ಚು ಸಂಕೀರ್ಣಗೊಳ್ಳುತ್ತಿದೆ. ಜೊತೆಗೆ ಪಾರದರ್ಶಕವೂ ಆಗುತ್ತಿದೆ. ಸಾರ್ವಜನಿಕ ಮತ್ತು ವ್ಯಯಕ್ತಿಕ ಬದುಕಿನ ಅಂತರವೇ ಅಳಿಸಿ ಹೋಗುತ್ತಿದೆ. ಈಗ ನಾನೇ ಬೇರೆ, ನನ್ನ ಸಾಹಿತ್ಯವೇ ಬೇರೆ ಎಂದು ಯಾವ ಸಾಹಿತಿಯೂ ಹೇಳಲಾರ. ಸಾಮಾಜಿಕ ಹೊಣೆಗಾರಿಕೆ ಇರಬೇಕಾದ ಸಾಹಿತಿ ಹಾಗೆ ಹೇಳಬಾರದು ಕೂಡಾ. ತನ್ನ ಖುಷಿಗಾಗಿ ಮಾತ್ರ ಬರೆಯುತ್ತೇನೆ ಎನ್ನುವ ಬರಹಗಾರ ಅದನ್ನು ಬರೆದು ತನ್ನ ತಲೆದಿಂಬಿನಡಿಯಲ್ಲಿ ಇಡಬೇಕೇ ಹೊರತು ಪ್ರಕಟಿಸುವ ಗೋಜಿಗೆ ಹೋಗಬಾರದು. ಒಮ್ಮೆ ಪ್ರಕಟವಾದ ಮೇಲೆ ಅದು ಓದುಗರ ಸ್ವತ್ತಾಗುತ್ತದೆ. ಓದುಗರು ಅದನ್ನು ತಮಗೆ ಸರಿಕಂಡಂತೆ ಅರ್ಥೈಸಿಕೊಳ್ಳಬಹುದು. ಆದರೆ ಕೃತಿಕಾರನ ಬದುಕಿನ ರೀತಿಯ ಬಗೆಗೂ ಸಾರ್ವಜನಿಕರಿಗೆ ಹಕ್ಕೊತ್ತಾಯಗಳಿರುತ್ತವೆಯೇ?

ಸಾಹಿತಿಯೊಬ್ಬ ಸಾರ್ವಜನಿಕರಿಗೆ ಪರಿಚಯವಾಗುವುದು ತನ್ನ ಬರಹಗಳ ಮೂಲಕ. ಅದರಲ್ಲಿ ಆತ ಮಂಡಿಸುವ ವೈಚಾರಿಕ, ಭಾವನಾತ್ಮಕ ನಿಲುವುಗಳ ಮುಖಾಂತರ ಆತ ವೈಯಕ್ತಿಕವಾಗಿಯೂ ಓದುಗರಿಗೆ ಹತ್ತಿರದವನಾಗುತ್ತಾನೆ. ಪ್ರಭು ಸಮ್ಮಿತಕ್ಕಿಂತ ಕಾಂತ ಸಮ್ಮಿತ ಹೆಚ್ಚು ಪರಿಣಾಮಕಾರಿಯಲ್ಲವೇ? ಲೇಖಕ ತನ್ನ ಬರವಣಿಗೆಯ ಮುಖಾಂತರ ಸಾರ್ವಜನಿಕ ವ್ಯಕ್ತಿತ್ವವೊಂದನ್ನು ರೂಪಿಸಿಕೊಂಡಿರುತ್ತಾನೆ. ಸಾರ್ವಜನಿಕರಿಗೆ ಅದೇ ಸತ್ಯ. ಆ ವ್ಯಕ್ತಿತ್ವವೇ ಮುಖ್ಯ. ಇದಕ್ಕಿಂತ ಭಿನ್ನವಾದ ವ್ಯಕ್ತಿತ್ವವೊಂದು ತನ್ನ ನೆಚ್ಚಿನ ಸಾಹಿತಿಗಿದೆ ಎಂಬುದನ್ನು ಆತನಿಗೆ ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ.

ಇದು ಕೇವಲ ಒಬ್ಬ ಸಾಹಿತಿಯ ಬಗೆಗಿನ ಮಾತಲ್ಲ. ಸಿನಿಮಾ ನಟರು, ರಾಜಕಾರಣಿಗಳು, ಜನಪ್ರಿಯ ಕ್ರೀಡೆಗಳಲ್ಲಿ  ತ್ತೊಡ್ಗಿಗ್ಸಿಸ್ಕೊಿಕ್ವೊಂಡ್ರವರು ಸೇರಿದಂತೆ ಸಾರ್ವಜನಿಕ ಕ್ಷೇತ್ರಗಳಲ್ಲಿರುವ ಎಲ್ಲಾ ಪ್ರಮುಖರು ಎದುರಿಸುತ್ತಿರುವ ಸಮಸ್ಯೆಯಿದು.
ಒಬ್ಬ ಸೃಜನಶೀಲ ಬರಹಗಾರನ ಮ್ಟ್ಟಿಗೆ ಹೇಳುವುದಾದರೆ ಇವತ್ತಿನ ಸಂದರ್ಭದಲ್ಲಿ ಆತ ಮೂರು ಹಂತಗಳಲ್ಲಿ ಬದುಕುತ್ತಿರುತ್ತಾನೆ. ಅದು ಆತನೊಬ್ಬ ಬರಹಗಾರ, ಸಾರ್ವಜನಿಕ ವ್ಯಕ್ತಿ ಮತ್ತು ಕೌಟುಂಬಿಕ ವ್ಯಕ್ತಿ.. ಈ ಮೂರು ವ್ಯಕ್ತಿತ್ವಗಳು ಮೇಲ್ನೋಟಕ್ಕೆ ಒಂದೇ ಆಗಿ ಕಂಡು ಬಂದರೂ ಅವು ಮೂರೂ ವಿಭಿನ್ನವಾದ ಸ್ವತಂತ್ರ ವ್ಯಕ್ತಿತ್ವಗಳು.

ಬರವಣಿಗೆ ಎಂಬುದು ಏಕಾಂತದಲ್ಲಿ ನಡೆಯುವ ಸೃಷ್ಟಿ ಕಾರ್ಯ. ಪ್ರಾಪಂಚಿಕ ಅನುಭವ ಮತ್ತು ಕಲ್ಪನಎ ಅದರ ಮೂಲದ್ರವ್ಯ. ಒಬ್ಬ ವಿಜ್ನಾನಿಗೆ, ಒಬ್ಬ ತತ್ವಜ್ನಾನಿಗೆ ಇರುವಂತ ’ಕಾಣ್ಕೆ’ ಅವನಲ್ಲಿಯೂ ಇರುತ್ತದೆ. ವಾಸ್ತವ ಜಗತ್ತಿನಲ್ಲಿ ಇದ್ದೂ ಇಲ್ಲದಂತಹ ಸ್ಥಿತಿ ಅದು. ಆದ ಕಾರಣ ಅವನ ಸೃಷ್ಟಿಗೆ ಸಮಾಜವನ್ನು ಮುನ್ನಡೆಸುವ ಶಕ್ತಿ ಇರುತ್ತದೆ. ಅದಕ್ಕೇ ಕವಿಗಳನ್ನು ಅನಧಿಕೃತ ಶಾಸನಕರ್ತರೆಂದು ಶೆಲ್ಲಿ ಬಹಳ ಹಿಂದೆಯೇ ಕರೆದಿದ್ದಾನೆ. ಇದು ಒಬ್ಬ ಬರಹಗಾರನ ವ್ಯಕ್ತಿತ್ವ. ಒಬ್ಬ ಕೌಟುಂಬಿಕ ವ್ಯಕ್ತಿಯಾಗಿ ಆತ ನಿರ್ವಹಿಸುವ ಹಕ್ಕು ಮತ್ತು ಕರ್ತವ್ಯಗಳಿಗೆ ಬಹಳ ಸೀಮಿತವಾದ ವರ್ತುಲವಿದ್ದರೂ ಅದೇ ಅವನ ಕ್ರಿಯಾಶಕ್ತಿಗೆ ಪ್ರೇರಕ. ಇಲ್ಲಿ ಆತನಿಗೆ ನೆಮ್ಮದಿಯ ವಾತಾವರಣವಿದ್ದರೆ ಆತನ ವ್ಯಕ್ತಿತ್ವದ ಉಳಿದೆರಡು ಮುಖಗಳು ಪುಷ್ಟಿಯನ್ನು ಪಡೆಯುತ್ತವೆ.

ಒಬ್ಬ ಬರಹಗಾರನ ಮೂರೂ ಮುಖಗಳನ್ನು ಒಂದಾಗಿ ನೋಡುವ, ಒಂದಾಗಿಯೇ ಇರಬೇಕೆಂದು ಅಪೇಕ್ಷಿಸುವವರ ಸಂಖ್ಯೆ ದೊಡ್ಡದಿದೆ. ಒಬ್ಬ ಹೊಣೆಗಾರಿಕೆಯುಳ್ಳ ಬರಹಗಾರನಿಗೆ ಈ ಮೂರೂ ಮುಖಗಳನ್ನು ಸಂತುಲನಗೊಳಿಸುವ ಶಕ್ತಿ, ಜಾಣ್ಮೆ ಇರಬೇಕಾಗುತ್ತದೆ.

ಕನ್ನಡದ ಶ್ರೇಷ್ಟ ನಾಟಕಕಾರ ಟಿ.ಪಿ.ಕೈಲಾಸಂ ನಿಜ ಜೀವನದಲ್ಲಿ ಅತ್ಯಂತ ಕೊಳಕು ಪರಿಸರದಲ್ಲಿದ್ದರು ಎಂಬುದನ್ನು ಓದಿದ್ದೇವೆ. ಆದರೆ ಅವರ ನಾಟಕಗಳು ಸಮಾಜದ ಕೊಳಕನ್ನು ಹೊಡೆದೊಡಿಸಬೇಕು ಎಂಬ ಸಂದೇಶವನ್ನು ಸಾರುತ್ತಿರಲಿಲ್ಲವೇ? ಕನ್ನಡದ ಶ್ರೇಷ್ಟ ಬರಹಗಾರರೊಬ್ಬರು ಸಲಿಂಗಿಗಳಾಗಿದ್ದರು ಎಂಬುದನ್ನು ಕೇಳಿದ್ದೇವೆ. ಅವರ ಬರಹಗಳಲ್ಲಿ ಸಲಿಂಗಕಾಮ ಪರದ ವಾಸನೆಯಿತ್ತೇ? ಹೆಚ್ಚೇಕೆ ನಮ್ಮ ಸುತ್ತಮುತ್ತಲಿನ ಅನೇಕ ಬರಹಗಾರರು ಇಬ್ಬರು ಹೆಂಡಿರ ಗಂಡರು; ಇನ್ನು ಕೆಲವರು ಸ್ತೀಲೋಲರು,ಲಂಪಟರು. ಅವರೆಲ್ಲರನ್ನು ನಾವು ನಮ್ಮ ಬದುಕಿನ ಮಾದರಿಯನ್ನಿಟ್ಟುಕೊಳ್ಳಬೇಕೆ?
ವೈಯಕ್ತಿಕಮಟ್ಟದ ದೋಷಾರೋಪಣೆಯಾಗಿದ್ದರೂ ಅದು ಒಂದು ಮಿತಿಯನ್ನು ಮೀರದೆ ಆರೋಗ್ಯಕಾರಿಯಾಗಿದ್ದರೆ ಸಮಾಜವನ್ನು ಮುನ್ನಡೆಸುವಂತೆ ಇದ್ದರೆ ಚೆನ್ನ. ಬೇಂದ್ರೆ-ಶಂಬಾ ಜೋಶಿ, ಲಂಕೇಶ್-ಚಂಪಾ, ರಾಮಚಂದ್ರಶರ್ಮ-ಲಕ್ಷ್ಮಿನಾರಾಯಣ ಭಟ್ಟರ ನಡುವೆ ನಡೆಯುತ್ತಿದ್ದ, ನಡೆಯುತ್ತಿರುವ ಆರೋಗ್ಯಕರ ಸಂವಾದಗಳ ಹಿಂದೆ ಚಾರಿತ್ರ್ಯವಧೆಯಂತೂ ಇರುತ್ತಿರಲಿಲ್ಲ. ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ.

ಇಂದು ನಮ್ಮಂಥ ಜನಸಾಮಾನ್ಯರೂ ಸೇರಿದಂತೆ ಎಲ್ಲಾ ಸಾರ್ವಜನಿಕ ವ್ಯಕ್ತಿಗಳ ಕೌಟುಂಬಿಕ ಬದುಕಿನೊಳಗೆ ಟಿ.ವಿ. ಕ್ಯಾಮಾರಗಳು, ಟ್ಯಾಬ್ಲಾಯಿಡ್ ಪತ್ರಿಕೆಗಳು ಇಣುಕಿ ನೋಡುತ್ತಿವೆ. ಸುದ್ದಿ ಮಾಧ್ಯಮಗಳ ಸುದ್ದಿ ಬಿತ್ತರದ ಭರಾಟೆಯಲ್ಲಿ ಸಾರ್ವಜನಿಕ ವ್ಯಕ್ತಿಗಳ ಖಾಸಗಿ ಬದುಕನ್ನು ಬೀದಿಗೆ ತಂದು ನಿಲ್ಲಿಸಿವೆ. ಅವರು ಸಹಜವಾಗಿ ಆಡಿದ ಯಾವುದೋ ಒಂದು ಮಾತು, ಒಂದು ಹಾಸ್ಯದ ತುಣುಕು, ಆರೋಗ್ಯಕಾರಿಯಾದ ಟೀಕೆ ಇನ್ಯಾವುದೋ ಚೊಕಟ್ಟಿನೊಳಗೆ ಸೇರಿಕೊಂಡು ವಿಭಿನ್ನ ಅರ್ಥ ಪಡೆಯುತ್ತಿದೆ. ಇದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ, ಯಾವುದೋ ಒಂದು ಸುರಕ್ಷಿತ ಗಮ್ಯವನ್ನು ತಲುಪುವುದಕ್ಕಾಗಿ ಇಂಗೆಂಡಿನ ರಾಜಕುಮಾರಿ ಡಯಾನ ಅಂದು ಓಡಿದ ಹಾಗೆ ನಾವೂ ಓಡುತ್ತಿದ್ದೇವೆ.

[ ನನ್ನ ಕಂಪ್ಯೂಟರನ್ನು ಜಾಲಾಡುತ್ತಿರುವಾಗ ಹಿಂದೆಂದೋ ಬರೆದ ಈ ಬರಹವೊಂದು ಕಣ್ಣಿಗೆ ಬಿತ್ತು..ಇದು ಎಲ್ಲಿಯಾದರೂ ಪ್ರಕಟವಾಗಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಈಗ ಪ್ರಸ್ತುತವಾಗಬಹುದೆಂದು ಪೋಸ್ಟ್ ಮಾಡುತ್ತಿದ್ದೇನೆ.]