Friday, December 18, 2015

ಸಾಹಿತ್ಯ ಸಮ್ಮೇಳನಗಳಿಗಿರುವ ಮಹತ್ವ ಮಕ್ಕಳ ಮೇಳಕ್ಕೆ ಏಕಿಲ್ಲ?.






ನಾವು ೮ ಮಂದಿ. ನಮ್ಮ ಮುಂದೆ ೨೭೦ ಮಕ್ಕಳಿದ್ದರು. ನಾವು ಅವರ ಪ್ರತಿಭೆಯನ್ನು ಒರೆಗೆ ಹಚ್ಚಿ ಇಬ್ಬರನ್ನು ಆಯ್ಕೆ ಮಾಡಬೇಕಾಗಿತ್ತು. ಬಲು ಸವಾಲಿನ ಜೊತೆಗೆ ಎಚ್ಚರಿಕೆಯ ಕೆಲಸವೂ ಆಗಿತ್ತು.
ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರದಲ್ಲಿ  ಇಂದು ನಡೆಯುತ್ತಿರುವ ರಾಜ್ಯಮಟ್ಟದ ಮಕ್ಕಳ ಸಮ್ಮೇಳನದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನೊಳಗೊಂಡ ಹದಿನಾಲ್ಕು ಪಧಾಧಿಕಾರಿಗಳನ್ನು ಆಯ್ಕೆ ಮಾಡಬೇಕಾದ ಅಂದಿನ ಸಂದರ್ಭವಾಗಿತ್ತು.

ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆಯಾದ ಸೌಮ್ಯ ಕೆ. ಮತ್ತು ಗುರು ಎ.ವಿ.
ಎರಡು ವರ್ಷಗಳ ಹಿಂದೆ ಅಮ್ರುತ ಮಹೋತ್ಸವವನ್ನು ಆಚರಿಸಿಕೊಂಡ ಬೆಂಗಳೂರಿನ ಮಕ್ಕಳ ಕೂಟ ಸಂಸ್ಥೆಯು ವಿವಿಧ ಸಂಘಟನೆಗಳ ಸಹಯೋಗದೊಂದಿಗ ಕಳೆದ ಮೂವತ್ತು ವರ್ಷಗಳಿಂದ  ರಾಜ್ಯಮಟ್ಟದ ಮಕ್ಕಳ ಸಮ್ಮೇಳನವನ್ನು ನಡೆಸುತ್ತಾ ಬಂದಿದೆ. ಮಕ್ಕಳಲ್ಲಿ ಅಕ್ಕರೆಯಿರುವ ಬಳಷ್ಟು ಮಂದಿಗೆ ಗೊತ್ತಿದೆ. ಆರ್ ಕಲ್ಯಾಣಮ್ಮ ಎಂಬ ಮಹಾನ್ ಮಹಿಳೆಯೊಬ್ಬರು ೧೯೩೮ರಲ್ಲಿ ಸ್ಥಾಪಿಸಿದ ಸಂಸ್ಥೆಯಿದು. ಬೇಬಿ ಸಿಟ್ಟಿಂಗ್, ಮಹಿಳಾ ಸಂಘ ಸೇರಿದಂತೆ ಅನೇಕ ಆದಿಗಳಿಗೆ ಮುನ್ನುಡಿ ಬರೆದ ಸಂಸ್ಥೆಯಿದು. 
ಪದಾಧಿಕಾರಿಗಳು.

ಮೊಳಕೆಯೊಡೆಯುತ್ತಿರುವ ಸಸಿಯೊಂದಕ್ಕೆ ನೀರು, ಗೊಬ್ಬರ, ಪರಿಸರ ಎಷ್ಟು ಮುಖ್ಯವೆಂಬುದು ನಮಗೆ ಗೊತ್ತಿದೆ. ಹಾಗೆಯೇ ಮಕ್ಕಳು ಕೂಡಾ ಭಿವಿಷ್ಯದ ಚಿಗುರುಗಳೇ.. ವ್ಯಕ್ತಿತ್ವ ರೂಪುಗೊಳ್ಳುವ ಕಾಲಘಟ್ಟವಿದು. ಅವರ ಭಾವ ಮತ್ತು ಬುದ್ಧಿಗಳ ಸಮನ್ವಯಕ್ಕೆ ಬೇಕಾದ ಪೂರಕ ವಾತಾವರಣವನ್ನು ಮನೆಯಲ್ಲಿ ಹೆತ್ತವರು ಶಾಲೆಯಲ್ಲಿ ಶಿಕ್ಷಕರು ಹಾಗೂ ಸಮಾಜದಲ್ಲಿ ಮಾದರಿವ್ಯಕ್ತಿಗಳೆನಿಸಿಕೊಂಡವರು ತಮ್ಮ ನಡವಳಿಕೆಗಳಿಂದ ಕಟ್ಟಿಕೊಡಬೇಕು.
ತೀರ್ಪುಗಾರರೊಂದಿಗೆ ಆಯ್ಕೆಯಾದ ವಿದ್ಯಾರ್ಥಿಗಳು. [ಖಾಲಿ ಕುರ್ಚಿ ನನ್ನದು!]
ಈ ಲೇಖನವನ್ನು ಬರೆಯುತ್ತಿರುವ ಹೊತ್ತಿನಲ್ಲಿ ಯಾವ ಶಿಕ್ಷಣ ತಜ್ನರ ಮಾತಾಗಲಿ ಇಲ್ಲವೇ ತತ್ವಜ್ನಾನಿಯ ತರ್ಕವಾಗಲಿ ನನಗೆ ನೆನಪಾಗುತ್ತಿಲ್ಲ. ಬದಲಾಗಿ ಎರಡು ವರ್ಷದ ಹಿಂದೆ ನನ್ನ ಮಗಳು ತನ್ನ ಡಿಗ್ರಿ ಮುಗಿಸಿ ಬಂದು ತಾನು ಒಂದು ವರ್ಷದ ಮಟ್ಟಿಗೆ ಎನ್ ಜಿ ಓ ಒಂದರಲ್ಲಿ ಶಿಕ್ಷಕಿಯಾಗಿ ಕಲ್ಕತ್ತದ ಕೊಳೆಗೇರಿಯೊಂದರಲ್ಲಿ ಕೆಲಸ ಮಾಡುತ್ತೇನೆ, ಪುಟ್ಟ ಮಕ್ಕಳಿಗೆ ಪಾಠ ಹೇಳಿಕೊಡುತ್ತೇನೆ. ಮತ್ತೆ ಮುಂದಿನ ವರ್ಷ ಓದು ಮುಂದುವರಿಸುತ್ತೇನೆ ಎಂದಾಗ ನಾನು ಅದರ ಬಗ್ಗೆ ವಿವರ ಕೇಳಿದೆ. ಆಗ ಅವಳು ಹೇಳಿದ್ದು ’ಅಮ್ಮಾ ಈ ಜಗತ್ತಿನಲ್ಲಿ ಎರಡು ವಿಷಯಗಳಲ್ಲಿ ಮಾತ್ರ ಹೋಪ್ ಅನ್ನೋದು ಇದೆ. ಒಂದು ಪುಟ್ಟ ಮಕ್ಕಳ ಮನಸ್ಸಿನಲ್ಲಿ ಅಂದರೆ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಒಳ್ಳೆಯ ಮೌಲ್ಯಗಳನ್ನು ಬಿತ್ತೋದು. ಇನ್ನೊಂದು ಭೂಮಿಯಲ್ಲಿ ಬೀಜವೊಂದನ್ನು ಹುಗಿದು, ಅದು ಮೊಳಕೆಯಾಗಿ ಸಸಿಯಾಗಿ ಚಿಗುರೊಡೆಯುವ ಪ್ರಕ್ರಿಯಲ್ಲಿ- ಇವೆರಡರಲ್ಲಿ ಮಾತ್ರ ನಾವು ಭರವಸೆಯಿಡಬಹುದು’ ಎಂದಳು ಅವಳು ಚಿಕ್ಕವಳೇ ಇರಬಹುದು. ಆದರೆ ಅವಳು ನನಗೆ ಕೊಟ್ಟ ಒಳನೋಟ ಚಿಕ್ಕದಾಗಿರಲಿಲ್ಲ.

ಕಳೆದ ಬಾರಿಯ ಅಧ್ಯಕ್ಷರಿಂದ ಅಧಿಕಾರ ಹಸ್ತಾಂತರ.
ಇಂತಹ ಭವಿಷ್ಯದ ಭರವಸೆಯ ಕುಡಿಗಳು ನಮ್ಮ ಮುಂದಿದ್ದರು. ಅವರೆಲ್ಲಾ  ಬೇರೆ ಬೇರೆ ಶಾಲೆಗಳಿಂದ ಬಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರಾಗಿದ್ದರು. ನಾವು ಎರಡೆರಡು ಮಂದಿಯ ನಾಲ್ಕು ತಂಡವಾಗಿ ವಿಭಜಿಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಯ ಪತಿಸ್ಪಂದನಕ್ಕನುಗುಣವಾಗಿ ಒಂದರಿಂದ ಐದು ನಿಮಿಷಗಳ ಕಾಲ ಸಂದರ್ಶನ ನಡೆಸುತ್ತಾ ಹೋದೆವು. ಹಾಗೆ ಮಾತಾಡಿಸಿದಾಗಲೆಲ್ಲ ಆ ಗ್ರಾಮೀಣ ಭಾಗದ ಜನರ ಬದುಕು,ಹೆತ್ತವರ ಆರ್ಥಿಕ ಮಟ್ಟ, ಆ ಮಕ್ಕಳ ಕನಸು, ಅವರ ಮುಗ್ಧತೆ ಎಲ್ಲವೂ ಅನಾವರಣಗೊಳ್ಳುತ್ತಾ ಹೋದವು. ಹೆಚ್ಚಿನ ಮಕ್ಕಳು ಸರಕಾರಿ ಶಾಲೆಯ ಮಕ್ಕಳಾದ ಕಾರಣ ಇವರು ಪೋಷಕರು ರೈತರು, ಅಟೊ ಓದಿಸುವವರು, ಗಾರೆ ಕೆಲಸಗಾರರು ಮತ್ತು ಕೂಲಿ ಕಾರ್ಮಿಕರ ಮಕ್ಕಳಾಗಿದ್ದರು. ಕೆಲವು ಮಕ್ಕಳಲ್ಲಿ ಮುಂದೇನು ಆಗಬೇಕೆಂದಿದ್ದಿಯಾ ಎಂದು ಕೇಳಿದಾಗ ಅವರಲ್ಲಿ ಹೆಚ್ಚಿನವರು ಹೇಳಿದ್ದು. ತಾನು ಸೈನಿಕನಾಗುತ್ತೇನೆ, ಐಎ ಎಸ್ ಆಪೀಸರ್ ಆಗುತ್ತೇನೆ. ಟೀಚರ್ ಆಗುತ್ತೇನೆ, ರೈತನಾಗುತ್ತೇನೆ ಎಂದು.  ಒಬ್ಬ ಮಾತ್ರ ತಾನು ಸಿನೇಮಾ ನಟನಾಗುತ್ತೇನೆ ಎಂದನು. ಆದರೆ ಒಬ್ಬನೇ ಒಬ್ಬ ಕೂಡಾ ತಾನು ಎಂಜಿನಿಯರ್ ಅಥವಾ ಡಾಕ್ಟರ್ ಆಗುತ್ತೇನೆ ಎಂದು ಹೇಳಲಿಲ್ಲ. ಬೆಂಗಳೂರಿನಲ್ಲಿರುವ ಮಕ್ಕಳೆಲ್ಲ ಡಾಕ್ಟರ್ ಇಂಜಿಯನರ್ ಬಿಟ್ಟರೆ ಇನ್ನೊಂದಾಗುವ ಕನಸನ್ನೇ ಕಾಣದ ಈ ಬರಗಾಲದಲ್ಲಿ ಈ ಮಕ್ಕಳು ಭವಿಷ್ಯ ಕಟ್ಟುವ ಸಮಾಜದ ಆಧಾರ ಸ್ತಂಬಗಳಾಗಿ ಕಂಡು ಬಂದರು.
ಸಮ್ಮೇಳನದ ಸಂಪೂರ್ಣ ನಿರ್ವಹಣೆ ಮಕ್ಕಳದೇ.
ಅಲ್ಲಿ ನಮ್ಮಡೆಗೆ ಬಂದ ೨೭೦ ಮಕ್ಕಳನ್ನು ಮೂರು ಹಂತದಲ್ಲಿ ಜರಡಿ ಹಿಡಿದು ಹನ್ನೆರಡು ಮಂದಿಯನ್ನು  ಆಯ್ಕೆ ಮಾಡಿದೆವು. ಮೂರು ದಿನಗಳ ಸಮ್ಮೇಳನವನ್ನು ಇವರೇ ಮುನ್ನಡೆಸಬೇಕಾಗಿರುವುದರಿಂದ ಅವರಲ್ಲೇ ನಾಯಕತ್ವಗುಣಗಳಿರುವ, ಯಾವುದೇ ವಿಷಯದ ಮೇಲೆಯೂ ಅಧಿಕಾರಯುತವಾಗಿ ಮಾತಡಬಲ್ಲ ಬುದ್ಧಿವಂತರಾದ ಇಬ್ಬರನ್ನು ಅಧ್ಯಕ್ಷ ಉಪಾಧ್ಯಕ್ಷರಾಗಿ ಆರಿಸಿದೆವು. ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರ ಶ್ರೀಕ್ಷೇತ್ರದ ಭೈರವೇಶ್ವರ ಶಾಲೆಯ ೯ನೇ ತರಗತಿಯ ಸೌಮ್ಯಕೆ  ಅಧ್ಯಕ್ಷೆಯಾಗಿ ಆಯ್ಕೆಯಾದಳು. ಈಕೆಯ ತಾಯಿ ಎನ್ ವರಲಕ್ಷ್ಮಿ ಹಿಂದಿ ಶಿಕ್ಷಕಿ ತಂದೆ ಕ್.ಎನ್ ಕ್ರುಷ್ಣಮೂರ್ತಿ. ಕೈವಾರದ ಅಂಬೇಡ್ಕರ್ ಶಾಲೆಯ ಗುರು ಎ.ವಿ ಉಪಾಧ್ಯಕ್ಷನಾಗಿಯೂ ಆಯ್ಕೆಯಾದರು. ಈತ ಬುರ್ರಾಕಥಾ ವಿದ್ವಾನ್ ಎಲ್ ,ವೆಂಕಟೇಶ್. ತಾಯಿ ರಾಮಲಕ್ಷ್ಮಮ್ಮ. ಇವರ ಜೊತೆಗೆ ೧೨ ಪದಾಧಿಕಾರಿಗಳ ಆಯ್ಕೆಯೂ ನಡೆಯಿತು. ಇಡೀ ಮೂರು ದಿನಗಳ ಸಮ್ಮೇಳನವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಈ ತಂಡದ ಮೇಲಿದೆ.
ಕರ್ನಾಟಕ ಬಾಲ ವಿಕಾಸ ಅಕಾಡಮಿ, ಕೆನರಾಬ್ಯಾಂಕ್ ಮತ್ತು ಕೈವಾರ ಆಧಿನಾರಾಯಣ ಟ್ರಸ್ಟ್ ಸಹಯೋಗದೊಂದಿಗೆ ಮಕ್ಕಳಕೂಟವು ಆಯೋಜಿಸಿರುವ ಈ ಮಕ್ಕಳ ಮೇಳದಲ್ಲಿ ವಿಚಾರ ಸಂಕಿರಣ,ಕವಿಗೋಷ್ಟಿ, ಚರ್ಚಾಗೋಷ್ಠಿ ಮತ್ತು ಸಾಂಸ್ಕ್ರುತಿಕ ಕಾರ್ಯಕ್ರಮಗಳು ಜರಗುತ್ತವೆ.
ಮೊನ್ನೆ ತಾನೇ ಅದ್ದೂರಿಯಾಗಿ ಮೂಡಬಿದಿರೆಯಲ್ಲಿ ನುಡಿ ಸಿರಿ ನಡೆಯಿತು. ಇದೇ ೧೯, ೨೦ರಂದು ಮಂಗಳೂರಿನಲ್ಲಿ ’ಜನನುಡಿ’ ನಡೆಯುತ್ತದೆ. ಮುಂಬರುವ ಜನವರಿ ೧೫,೧೬ರಂದು ಆಧಿಚುಂಚನಗಿರಿಯಲ್ಲಿ ೪ನೇಯ ರಾಜ್ಯಮಟ್ಟದ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯಲಿದೆ.  ಹಾಗೆಯೇ ಕಳೆದ ಜೂನ್ ೧೪,೧೫ರಂದು ವಿಜಯಪುರದಲ್ಲಿ  ರಾಜ್ಯಮಟ್ಟದ ಮೊದಲ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆದಿತ್ತು.
ನೆರೆದ ಜನಸ್ತೋಮ.

ಮನಸುಗಳನ್ನು ರೂಪಿಸುವ ಮಕ್ಕಳ ಸಮ್ಮೇಳನಗಳಿಗೆ ಸಾಹಿತ್ಯ ಸಮ್ಮೇಳನಗಳಿಗೆ ನೀಡುವಷ್ಟೇ ಮಹತ್ವ ಮತ್ತು ಪ್ರಚಾರ ನೀಡಿದ್ದಲ್ಲಿ ಭವಿಷ್ಯದ ಸ್ವಸ್ಥ, ಆರೋಗ್ಯವಂತ ಸಮಾಜಕ್ಕೆ ನಾವು ಇಂದೇ ಅಡಿಗಲ್ಲನ್ನು ಹಾಕಿದಂತಾಗುತ್ತದೆ. ಅದು ನಮ್ಮೆಲ್ಲರ ಕರ್ತವ್ಯವೂ ಹೌದು.



[ವಿಜಯಕರ್ನಾಟಕದ ಅಲ್ಲಿಯ ಎಡಿಷನ್ ನಲ್ಲಿ ಪ್ರಕಟವಾದ ಲೇಖನ]


   

Sunday, December 13, 2015

ಆತ್ಮಕ್ಕಂಟಿದ ದೂಳು.






ಅನುಮಾನಿಸಿದೆ; ಅವಮಾನಿಸಿದೆ.
ಪ್ರೀತಿಯೋ ಪ್ರೇಮವೋ ವಾಂಛೆಯೋ
ಗೊತ್ತಿಲ್ಲದ ಏನೋ ಒಂದು.
ಆವರಿಸಿ ಅಪ್ಪಳಿಸಿದ ರಬಸಕ್ಕೆ
ಆಕಾರವಿಲ್ಲದೆ ನರಳಿದ್ದೇನೆ.

ಆಕಾಶಕ್ಕೆ
ಸಹಸ್ರ ಸಹಸ್ರ ಬಾಹುಗಳ ಚಾಚಿ ಬೋರಿಟ್ಟು
ಅಳುತ್ತಿರುವಾಗ
ಮೋಟು ಬೀಡಿಗೆ ಬೆಂಕಿ ಹಚ್ಚಿ ಸುಖಿಸುತ್ತಿದ್ದೆ.
ನೀನು, ನನ್ನ ಆತ್ಮಕ್ಕಂತಿದ ದೂಳು.

ಪಾತಾಳಗಂಗೆಯಲ್ಲಿ ಈಜುತ್ತಿರುವವನಿಗೆ ಸುರಗಂಗೆಯ ಕನವರಿಕೆ.
ವೈತರಣಿಯಲ್ಲೂ ಜೀವ ಮೊಳಕೆಯೊಡೆದೀತೆ?
ಇದು ಕಾಲವಲ್ಲ; ಮಿಲನದ ಭೂಮಿಕೆಯಲ್ಲ.

ಆಳವಿದ್ದಲ್ಲೇ ತೆರೆಗಳೇಳುವುದು;
ನಾನೊಂದು ಶರಧಿ.
ಆಗಸದೆದೆಯಲ್ಲಿ ಬಚ್ಚಿಟ್ಟುಕೊಳ್ಳಬಲ್ಲೆ..
ನೀನು ಆಗಸವಾಗು.
ಅಣು ಅಣುವನ್ನೂ ಹೀರಿ ಜೀವಕೋಶವನ್ನೆಲ್ಲಾ ಬರಿದು ಮಾಡು.
ಆವರ್ತನದ ಕಂಪನಕ್ಕೆ
ಇಳೆ ಬಸಿರಾಗುತ್ತದೆ.
ಆತ್ಮ ಶುಭ್ರವಾಗುತ್ತದೆ.





Saturday, November 28, 2015

ನಿನ್ನದೀ..ಒಲವಾಗ್ನಿ....!


                         

  ೧


ನಾನು... ಮಹಾಶ್ವೇತೆ;
ದೇವಲೋಕದ ಗಂಧರ್ವಕನ್ಯೆ.
ಮಾನುಷ ಪ್ರೀತಿಗಾಗಿ ಹಂಬಲಿಸಿದವಳು.
ಅಚ್ಛೋದ ಸರೋವರಕ್ಕೆ ಸ್ನಾನಕ್ಕೆಂದು ಬಂದಿದ್ದೇನೆ.
ಪುಂಡರೀಕಾ...
ನಿನ್ನನ್ನಿಲ್ಲಿ ಕಂಡೆ...ಮನಸೋತೆ.
ದೇವಲೋಕ ನರಕಲೋಕವಾಯ್ತು.
ನಿನ್ನೊಲವಿಗಾಗಿ ಜನ್ಮಜನ್ಮಾಂತರಗಳಲ್ಲೂ ಕಾಯಬಲ್ಲೆ.
ಈ ಒಂದು ಜನ್ಮದ ತಪಸ್ಸೇನು ಮಹಾ...! 


 ೨


 ಸಾಗರವನ್ನು ಎಂದೂ ನೋಡದವರ ಮುಂದೆ
ಅದರ ಅಗಾಧ ಜಲರಾಶಿಯನ್ನು ವರ್ಣಿಸಬಾರದು.

ಮನೆ ಮುಂದಿನ ಗುಡ್ಡವನ್ನೇ ಹತ್ತಲು ಮನಸ್ಸಿಲ್ಲದವರಿಗೆ
ಹಿಮಾಲಯದ ಔನತ್ಯದ ಬಗ್ಗೆ ಹೇಳಬಾರದು.

ಕಣ್ಣೀರಿಗೂ ಉಪ್ಪು ನೀರಿಗೂ ವ್ಯತ್ಯಾಸ ಅರಿಯದವರ ಮುಂದೆ
ಭಾವನೆಗಳ ಕಟ್ಟೆ ಹರಿಯಗೊಡಬಾರದು.

ನಾನೊಬ್ಬಳು ಹುಚ್ಚಿ; ಇಬ್ಬನಿಯಲ್ಲಿ ಕಾಮನಬಿಲ್ಲು ಕಾಣುತ್ತೇನೆ.

 


                       














 ೩


ಬಂದೆ.. ಎಂದೆ, ಮುಟ್ಟಿದೆ.. ಎಂದೆ.
ಮೈ ಝುಮ್ಮೆನ್ನಲಿಲ್ಲ;ಜೀವ ತಲ್ಲಣಿಸಲಿಲ್ಲ.
ಕವಿಸೃಷ್ಟಿಯ ನಾಯಕನಲ್ಲಿ ಮೈಮರೆತೆ. ಜೀವ ತಾಳಲಿಲ್ಲ.
ಮೇಘ ಸಂದೇಶಗಳೆಲ್ಲಾ ಭ್ರಮಾಸೃಷ್ಟಿಗಳು; ನೆರಳಿಲ್ಲ.ಉಸಿರಿಲ್ಲ
ಅನುಭಾವದ ಸುಖಕ್ಕೆ ಪಂಚೇಂದ್ರಿಯದ ಹಂಗಿಲ್ಲವಂತೆ.
ಸುಡಲಿ ಆ ಅನುಭಾವ; ನನ್ನ ಸ್ಪರ್ಷಕ್ಕೊಮ್ಮೆ ದಕ್ಕಿಬಿಡು.
ನನ್ನ ದಾಸಾನುದಾಸ ನೀನಾಗದಿದ್ದರೆ...
ನಾನೇ ನಿನ್ನ ತೋಳಿನ ಮಗುವಾಗಿಬಿಡುವೆ..
ಮುಟ್ಟಿದರೂ ಮುಟ್ಟದಂತಿರುವುದನ್ನು ನಾವಿಬ್ಬರೂ ಕೂಡಿ ಕಲಿಯೋಣ



   ೪

ಸುಮ್ಮನೆ 
ಜೊತೆ ಹೆಜ್ಜೆಗಳು, ಗುರಿಯಿರಲಿಲ್ಲ.
ವಾದ-ವಿವಾದ ನಡೆಯುತ್ತಿದ್ದವು, ಎಂದಿನಂತೆ
ಬೀದಿಯಲ್ಲಿದ್ದವರಿಗೆ ಕಾಡು, ಕಡಲು, ಬೆಳದಿಂಗಳ ಮೋಹ.
ಎದೆಯಲ್ಲೊಂದು ಪ್ರಶ್ನೆ ಕುದಿಯುತ್ತಿತ್ತು,
ಕೇಳಿದೆ.
ಕೈಮುಗಿದು ನುಡಿದ;
’ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಡು’
ಎತ್ತರಕ್ಕೆ ಎಸೆಯಲ್ಪಟ್ಟೆ, 
ಅವನು ಕೆಳಗುಳಿದ.
ಈಗವನು ಪಂಚೇಂದ್ರಿಯಗಳಾಚೆಗಿನ ಇನಿಯ
ನೆನಪಾದೊಡನೆ ಅದೇ ಕೈಮುಗಿದ ಚಿತ್ರ.
ನನ್ನ ಚಿತ್ರಕ ಶಕ್ತಿಗೆ ನನಗೇ ಬೆರಗು;

ದೈನ್ಯಕ್ಕೆ ಪ್ರೀತಿ ಕೊಲ್ಲುವ ಶಕ್ತಿಯಿದೆ


                   














  ೫



ತುಂಬಾ ಹಿಂದೆ ಆ ಕಾಗದ ಬಂದಿತ್ತು.
ಸುಮ್ಮನೆ ಅದನ್ನೇ ತಿರುಗಿಸಿ ಮರುಗಿಸಿ ನೋಡಿದ್ದೆ.
ವಿಳಾಸವಿರಲಿಲ್ಲ.
ಬರೆದವರಾರೆಂದು ಗೊತ್ತಿತ್ತು.

ಒಳಗೇನಿರಬಹುದು?
ಎದೆಹಿಡಿದುಕೊಂಡೆ; ಹಣೆಯಲ್ಲಿ ಬೆವರೊಡೆದಿತ್ತು.
ಹಗುರಾಗಿ ತುಟಿ ತಾಗಿಸಿದೆ, ಎದೆಗೊತ್ತಿಕೊಂಡೆ.
ಸುಗಂಧವೊಂದು ತೇಲಿಬಂತು.
’....................................’
ಉಯಿಲು ಪತ್ರದೊಳಗೆ ಮೆಲ್ಲನೆ ಅದ ಹುದುಗಿಸಿ
ಸ್ಮೃತಿಸಂಪುಟದಲ್ಲಿಟ್ಟು ಕೀಲಿಕೈಯನು ಆಳ ಸಮುದ್ರಕ್ಕೆಸೆದೆ.
ಉರವಣಿಸಿ ಬರುತ್ತಿರುವ ಕಾಲತೆರೆಗಳನು ನೋಡುತ್ತಿದ್ದೇನೆ;
ಲೆಕ್ಕ ತಪ್ಪುತ್ತಿದೆ!





Friday, November 13, 2015

ಕಣ್ಣು; ಅಂತರಂಗ ಪ್ರವೇಶದ ಕೀಲಿಕೈ



ಒಬ್ಬ ವ್ಯಕ್ತಿ ನಮ್ಮೆದುರು ನಿಂತಾಗ ಮೊಟ್ಟ ಮೊದಲಿಗೆ ನಾವು ಗಮನಿಸುವುದು ಕಣ್ಣುಗಳನ್ನು. ಕಣ್ಣುಗಳು ಮನಸ್ಸಿನ ಕನ್ನಡಿ. ಅವು ಎಂದೂ ಸುಳ್ಳು ಹೇಳುವುದಿಲ್ಲ.
ನೂತನಳ ವಾತ್ಸಲ್ಯ ತುಂಬಿದ ಕಣ್ಣುಗಳು, ರಾಖಿಯ ಭಾವಪೂರ್ಣ ಕಣ್ಣು, ಮೌಸಮಿ ಚಟರ್ಜಿಯ ನಗುವ ಕಣ್ಣು, ಹೇಮಮಾಲಿನಿಯ ಪ್ರೀತಿಯ ಕಣ್ಣು, ಸಂಜೀವ ಕುಮಾರನ ಆಳವಾದ ಕಣ್ಣು, ನಾನಾಪಾಟೇಕರನ ಸುಡುವ ಕಣ್ಣು, ನಾಸೀರುದ್ದೀನ್ ಶಾನ ಚುರುಕು ಕಣ್ಣು, ರಾಜೇಶ್ ಖನ್ನಾನ ತೇಲುಗಣ್ಣು, ಧರ್ಮೇಂದ್ರನ ಅಮಲುಗಣ್ಣು ಅಮಿತಾಬ್ ನ ಆತ್ಮವಿಶ್ವಾಸದ ಕಣ್ಣು... ಇವರಿಗೆಲ್ಲಾ ಕಣ್ಣುಗಳಲ್ಲೇ ನವರಸಗಳನ್ನು ಬಿಂಬಿಸುವ ಸಾಮರ್ಥ್ಯವಿತ್ತು.
ಎಪ್ಪತ್ತರ ದಶಕದ ಚಲನಚಿತ್ರಗಳ ನಟ –ನಟಿಯರ ಭಾವಪೂರ್ಣ ಕಣ್ಣುಗಳು ನಮ್ಮಲ್ಲಿರುವ ನವೀರಾದ ಭಾವನೆಗಳನ್ನು ಬಡಿದೆಬ್ಬಿಸುತ್ತಿದ್ದವು. ಈಗಿನ ನಟ-ನಟಿಯರ ಕಣ್ಣುಗಳಲ್ಲಿ ವಿಪ್ರಲಂಭ ಸ್ರುಂಗಾರ ತಪ್ಪಿದರೆ ರೌದ್ರ, ಭಯಾನಕ ರಸಗಳೇ ಪ್ರಮುಖವಾಗಿ ವಿಜ್ರುಂಭಿಸುತ್ತವೆ. ಹೊಡೆದಾಟಕ್ಕೆ ಇಲ್ಲವೇ ನೇರವಾಗಿ ಪಲ್ಲಂಗಕ್ಕೇ ಅಹ್ವಾನ ನಿಡುವ ಕಣ್ಣುಗಳಿವು.
ಅಂದರೆ ಕಣ್ಣು ಮನಸ್ಸಿನ ಕೈಗನ್ನಡಿ ಅಲ್ಲವೇ?
ಮಾತು; ಸಂವಹನಕ್ಕೆ ಅತ್ಯುತ್ತಮ ಮಾಧ್ಯಮ. ಆದರೂ ಅದಕ್ಕೆ ಅದರದೇ ಆದ ಮಿತಿಗಳಿವೆ. ಹಲವು ಬಾರಿ ಮಾತು ವ್ಯಕ್ತಪಡಿಸಲಾಗದ ಭಾವನೆಗಳನ್ನು ಕಣ್ಣು ವ್ಯಕ್ತಪಡಿಸುತ್ತದೆ. ಪ್ರೇಮಿಗಳಿಗೆ ಇದು ಇನ್ನೂ ಚೆನ್ನಾಗಿ ಗೊತ್ತಿದೆ. ಅವರು ಮಾತಿಲ್ಲದೆ ಗಂಟೆಗಟ್ಲೆ ಮೌನವಾಗಿ ಪರಸ್ಪರ ನೋಡುತ್ತಾ ಕುಳಿತುಕೊಳ್ಳಬಲ್ಲರು. ಮೌನಸಂಭಾಷಣೆಯಿಂದಲೇ ಗುಂಪಿನಲ್ಲಿದ್ದರೂ ಏಕಾಂತ ಸ್ರುಷ್ಟಿಸಿಕೊಳ್ಳಬಲ್ಲರು.
ಮನದಲ್ಲಿ ಯಾವ ಕಲ್ಮಶವೂ ಇಲ್ಲದಾಗ ವ್ಯಕ್ತಿಯೊಬ್ಬ ನೇರವಾಗಿ ಇನ್ನೊಬ್ಬರ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಬಲ್ಲ. ನೇರ ನೋಟವನ್ನು ಎದುರಿಸಲಾಗದ ವ್ಯಕ್ತಿ ಖಂಡಿತವಾಗಿಯೂ ನಂಬಿಕೆಗೆ ಅನರ್ಹ. ಆಚಾರ್ಯ ರಜನೀಶರ ಕಣ್ಣುಗಳನ್ನು ಎಂದಾದರೂ ನೋಡಿದ್ದೀರಾ? ಅವರ ಕಣ್ಣುಗಳಲ್ಲಿ ಎಂತಹ ಅದ್ಭುತ ಶಕ್ತಿಯಿತ್ತು! ಎದುರಿಗಿರುವವರ ಅಂತಃಸ್ವತ್ವವನ್ನೆಲ್ಲಾ ಒಂದು ಕಣ್ಣೋಟದಿಂದಲೇ ಅವರ ಅಳೆಯಬಲ್ಲವರರಾಗಿದ್ದರು, ಕ್ಷಣಾರ್ಧದಲ್ಲೇ ತಮ್ಮ ವಶಕ್ಕೆ ತೆಗೆದುಕೊಳ್ಳಬಲ್ಲವರಾಗಿದ್ದರು. ಅವರ ದುಂಡನೆಯ ಕಣ್ಣುಗಳಲ್ಲಿ ಸಮ್ಮೋಹನ ಶಕ್ತಿಯಿತ್ತು.

ನಮ್ಮ ಋಷಿ ಮುನಿಗಳ ಕಣ್ಣುಗಳಲ್ಲಿ ಅತೀಂದ್ರಿಯ ಶಕ್ತಿಯಿತ್ತು ಎಂಬುದನ್ನು ನಮ್ಮ ಪುರಾಣಗಳಲ್ಲಿ ಓದಿದ್ದೇವೆ..ಅವರು ಸಿಟ್ಟಿಗೆದ್ದಾಗ ಕಣ್ಣೋಟದಿಂದಲೇ ಎದುರಿಗಿರುವ ವಸ್ತು ಇಲ್ಲವೇ ಪ್ರಾಣಿಗಳನ್ನು ಸುಟ್ಟುಬಿಡುತ್ತಿದ್ದರು. ಅವರಿಗೆ ಅಂದರೆ ಅವರ ಕಣ್ಣಿಗೆ ಅಂತಹ ಶಕ್ತಿ ಎಲ್ಲಿಂದ ಬಂದಿರಬಹುದು? ಬಹುಶಃ ಅದು ಅವರು ಅಂತರಂಗದೊಡನೆ ನಡೆಸಿದ ದೀರ್ಘಕಾಲದ ಸಂಭಾಷಣೆಯಿಂದ ದೊರಕಿರಬಹುದು. ಅವರು ಏಕಾಂತದಲ್ಲಿ ಒಳಗಣ್ಣನ್ನು ತೆರೆದು ಅಲೌಕಿಕವಾದ ಶಕ್ತಿಯನ್ನು ತುಂಬಿಕೊಂಡಿರಬಹುದು.

ಪರಶಿವನಿಗೆ ಮೂರನೆಯ ಕಣ್ಣಿದೆಯೆಂದು ನಮ್ಮ ಪುರಾಣ ಹೇಳುತ್ತದೆ. ಅದು ಸಾಂಕೇತಿಕ; ಅದೇ ಒಳಗಣ್ಣು. ಎರಡು ಹುಬ್ಬುಗಳ ಮಧ್ಯೆ ಇರುವ ಒಳಗಣ್ಣಿನೆಡೆಗೆ ಹೊರಗಣ್ಣಿನ ದ್ರುಷ್ಟಿ ನೆಟ್ಟು ಕುಂಡಲಿನಿ ಶಕ್ತಿಯನ್ನು ಜಾಗ್ರುತಗೊಳಿಸುವ ವಿಧಾನದ ಬಗ್ಗೆಯೂ ನಾವು ಕೇಳಿದ್ದೇವೆ.

ಸಂಗೀತ ನಮಗೆ ಅಲೌಕಿಕ ಆನಂದವನ್ನು ಕೊಡುತ್ತದೆ. ಅದನ್ನು ಅನುಭವಿಸಲು ನಮಗೆ ಒಳಗಣ್ಣು ಬೇಕು. ಆದರೆ  ನ್ರುತ್ಯವನ್ನು ಅನುಭವಿಸಲು ನಮಗೆ ಹೊರಗಣ್ಣು ಸಾಕು. ಇಂದಿಗೂ ರೇಡಿಯೋ ಮತ್ತು ಪುಸ್ತಕಗಳು ನನ್ನ ಅತ್ಯುತ್ತಮ ಮನರಂಜನೆಯ ಸಾಧನಗಳು. ಇವೆರಡೂ ನಮ್ಮ ಕಲ್ಪನಾ ಸಾಮರ್ಥ್ಯವನ್ನು ವಿಸ್ತರಿಸುತ್ತಾ ಹೋಗುತ್ತವೆ. ರಾತ್ರಿಯ ನೀರವತೆಯಲ್ಲಿ ರೇಡಿಯೋದಿಂದ ಹೊರ ಹೊಮ್ಮುವ ಗೀತ್ ಮಾಲಾ. ಆಪ್ ಕಿ ಪರಮಾಯಿಸಿ, ರಾಷ್ಟ್ರೀಯ ನಾಟಕಗಳು, ಶಾಸ್ತ್ರೀಯ ಸಂಗೀತ, ಭಾವಗೀತೆಗಳು ನಮ್ಮ ಹೊರಗಣ್ಣನ್ನು ಮೀರಿ ಒಳಜಗತ್ತಿನಲ್ಲಿ  ಬೆಳೆಯುತ್ತಾ ಹೋಗುತ್ತವೆ.

ವಿಷಯ ಹಳಿತಪ್ಪುತ್ತಿದೆಯೇ?
ವೈಯಕ್ತಿಕ ಮಟ್ಟದಲ್ಲಿ ಕಣ್ಣುಗಳ ಬಗ್ಗೆ ನನ್ನಲ್ಲಿ ಅನುಭವಗಳ ಮೂಟೆಯೇ ಇದೆ. ಬಹುಶಃ ನಾನಗ ಒಂಬತ್ತನೆಯ ತರಗತಿ ವಿದ್ಯಾರ್ಥಿನಿಯಿರಬಹುದು. ನಮ್ಮ ಶಾಲೆಯಲ್ಲಿ ಒಬ್ಬ ಹುಡುಗನಿದ್ದ. ನನಗಿಂತ ಒಂದು ಕ್ಲಾಸ್ ಚಿಕ್ಕವನಿದ್ದ. ಹೆಸರು ಮರೆತಿದ್ದೇನೆ. ಆದ್ರೆ ಆತ ಹೂಗಳಿರುವ ಹಸಿರು ಶರ್ಟ್ ಹಾಕಿದ್ದ.  ದಿನಾ ಅದೇ ಶರ್ಟ್ ಹಾಕುತ್ತಿದ್ದಂತೆ ನೆನಪು. ಬಿಳಿ ಮುಂಡು ಧರಿಸುತ್ತಿದ್ದ.ಬೆಳ್ಳಗೆ ತುಂಬಾ ಸುಂದರವಾಗಿದ್ದ.ನಿಮಗೆ ಗೊತ್ತಲ್ಲ, ನಾನು ಕಪ್ಪಗಿದ್ದೇನೆ! ನಾನವನನ್ನು ಕದ್ದು ಕದ್ದು ನೋಡುತ್ತಿದ್ದೆ. ಒಂದು ದಿನ ಅವನು ತನ್ನ ಗೆಳೆಯರೊಡನೆ ಶಾಲೆಯ ಅಂಗಳದಲ್ಲಿ ನಡೆದುಕೊಂಡು ಹೋಗುತ್ತಿದ್ದ. ಪಕ್ಕನೆ ಹಿಂದೆ ತಿರುಗಿದವನೇ ನನ್ನೆಡೆಗೆ ನೋಡಿ ಕಿರುನಗೆ ನಕ್ಕು ಕಣ್ಣು ಹೊಡೆದ. ನನಗೆ ಮೈಯ್ಯಲ್ಲಿ ವಿದ್ಯುತ್ ಸಂಚಾರವಾದಂತಾಯ್ತು. ಒಂದು ವಾರ ಕಾಲ ಅ ಕ್ಷಣವನ್ನು ನೆನೆದು ಮತ್ತೆ ಮತ್ತೆ ಪುಳಕಗೊಂಡಿದ್ದೇನೆ. ಅನಂತರ ಇಂತಹ ಎಷ್ಟೋ ಅನುಭವಗಳಾಗಿವೆ. ಆದರೆ ಬಾಲ್ಯದ ಆ ಒಂದು ಕ್ಷಣದ ರೋಮಾಂಚನ ನನ್ನಲ್ಲಿ ಸ್ಥಾಯಿಭಾವವಾಗಿ ಇಂದಿಗೂ ಉಳಿದುಕೊಂಡಿದೆ.

ಮುಂದೆಂದೋ ’ನೀನು ನಕ್ಕಾಗ ನಿನ್ನ ಕಣ್ಣುಗಳು ಕೂಡಾ ನಗುತ್ತವೆ’ ಎಂದ ಆ ಹುಡುಗನ ನೆನಪು ಈಗಲೂ ನನ್ನಲ್ಲಿದೆ. ಪುತ್ತೂರಿನ ಬಸ್ಟ್ಯಾಂಡಿನಲ್ಲಿ ಬಸ್ಸಿಗಾಗಿ ಕಾಯುತ್ತಿರುವಾಗ ನನ್ನ ಗೆಳೆಯನೊಬ್ಬ ನನ್ನ ಕಣ್ಣುಗಳನ್ನೇ ನೋಡುತ್ತಾ,’ನಿನ್ನ ಕಣ್ಣು ತುಂಬಾ ತೀಕ್ಷ್ಣವಾಗಿದೆ. ವಾರೆನೋಟ ಬೀರಿದರೆ ಎದುರಿಗಿದ್ದವ ಸತ್ತ’ ಎಂದಿದ್ದ. ಆ ಹುಡುಗ ಈಗ ವಿಶ್ವವಿದ್ಯಾಲಯವೊಂದರಲ್ಲಿ ಪ್ರೋಪೆಸರ್ ಆಗಿದ್ದಾನೆ. ಆತನನ್ನು ನೋಡದೆ ಎರಡು ದಶಕಗಳು ಕಳೆದಿವೆ. ಈಗ ಆತ ನನ್ನ ಕಣ್ಣುಗಳನ್ನು ನೋಡಿದರೆ ಹಿಂದಿನಂತೆ ಪ್ರತಿಕ್ರಿಯಿಸಬಹುದೇ? ಸಾಧ್ಯವಿಲ್ಲ, ಎಂಬುದು ನನಗೆ ಗೊತ್ತು.
ನಾವು ಮಾನಸಿಕವಾಗಿ ಸ್ಥಿತ್ಯಂತರಗೊಳ್ಳುತ್ತಾ ಹೋದಂತೆಲ್ಲಾ ನಮ್ಮ ಕಣ್ಣುಗಳು ಹೊರಸೂಸುವ ಭಾವನೆಗಳು ವ್ಯತ್ಯಾಸಗೊಳ್ಳುತ್ತಲೇ ಹೋಗುತ್ತದೆ.

ಮಂಗಳಗಂಗೋತ್ರಿಯಲ್ಲಿ ಓದುತ್ತಿದ್ದಾಗ ಉಷಾಳಂತಹ ಒಬ್ಬ ವಿದ್ಯಾರ್ಥಿನಿ ಕ್ಲಾಸಿನಲ್ಲಿದ್ದರೂ ಸಾಕು ಪಾಠ ಮಾಡಲು ಸ್ಪೂರ್ತಿ ಬರುತ್ತದೆ, ವಿಷಯಕ್ಕೆ ಅನುಗುಣ್ಅವಾಗಿ ಅದೇ ರಸಗಳನ್ನು ಆಕೆಯ ಕಣ್ಣುಗಳು ಹೊರಸೂಸುತ್ತವೆ ಎಂದು ಇನ್ಯಾರಲ್ಲೋ ಹೇಳಿದ ವಿಭಾಗ ಮುಖ್ಯಸ್ಥರ ಮಾತುಗಳನ್ನು ನಾನು ಸದಾ ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ.

ಕಣ್ಣಿನ ಬಗ್ಗೆ ಅಷ್ಟು ಕಾನ್ಷಿಯಸ್ ಆಗಿದ್ದ ಕಾರಣವೇ ಆಗಿರಬಹುದು, ನನಗೆ ಎಲ್ಲರ ಜೊತೆ ಮುಕ್ತವಾಗಿ ಬೆರೆಯಲು ಸಾಧ್ಯವಾಗುವುದಿಲ್ಲ. ಕೆಲವು ವ್ಯಕ್ತಿಗಳ ಕಣ್ಣಿನಲ್ಲಿ ಚಿರತೆಯ ಹಸಿವಿರುತ್ತದೆ. ಅಂಥವರು ನಮ್ಮ ಎದುರಿನಲ್ಲಿದ್ದರೆ ನಾವು ಬೆತ್ತಲೆಯಾಗಿ ನಿಂತಿದ್ದೇವೆನೋ ಎಂಬಷ್ಟು ಮುಜುಗರವಾಗುತ್ತದೆ. ಮೈ ಮನಸು ಮುದುಡಿ ಹೋಗುತ್ತದೆ ಇಲ್ಲಿಂದ ಒಮ್ಮೆ ಪಾರಾಗಿ ಹೋದರೆ ಸಾಕೆನಿಸುತ್ತದೆ. ಇನ್ನು ಕೆಲವರ ಕಂಗಳು ಶಾಂತ ಸರೋವರದ ಹಾಗಿರುತ್ತದೆ. ಅಂತವರ ಜೊತೆ ಇರುವುದೇ ದಿವ್ಯಸಾನಿಧ್ಯದ ಅನುಭವ. ಆತ್ಮೀಯ ಜೀವವೊಂದರ ಕೈಯ್ಯನ್ನು ಹಿಡಿದು ಸುಮ್ಮನೆ ಕಣ್ಮುಚ್ಚಿ ಒಂದರೆಗಳಿಗೆ ಕೂತಾಗ ಸಿಗುವ ಆನಂದವನ್ನು ಜಗತ್ತಿನ ಯಾವ ಭೌತಿಕ ಸುಖಕ್ಕೆ ಹೋಲಿಸಬಹುದು?
ಹಿಂದೆ ವಾರಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಘಟನೆಯಿದು; ಅಂಧ ವ್ಯಕ್ತಿಯೊಬ್ಬರಿಂದ ಕೆಲವು ಮಾಹಿತಿಗಳನ್ನು ನಾನು ಪಡೆಯಬೇಕಾಗಿತ್ತು. ಅವರನ್ನು ಭೇಟಿಯಾಗಿ ನನ್ನ ಲೇಖನಕ್ಕೆ ಬೇಕಾದ ವಿಷಯಗಳನ್ನು ಸಂಗ್ರಹಿಸಿದೆ. ಆದರೂ ಮನಸಿಗೆ ಪೂರ್ತಿ ಸಮಾಧಾನ ಆಗಿರಲಿಲ್ಲ. ಎದುರಿಗಿದ್ದವರ ಕಣ್ಣುಗಳನ್ನೇ ನೋಡುತ್ತಾ ಮಾತಾಡುವ ಅಭ್ಯಾಸವಿದ್ದ ನನಗೆ ಇಲ್ಲಿ ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ತಳಮಳವಿರಬಹುದು ಎಂದು ಅಂದುಕೊಳ್ಳುತ್ತಾ ಎದ್ದು ನಿಂತೆ. ಅವರು ಕೂಡಾ ಎದ್ದು ನಿಂತರು. ತಕ್ಷಣ ನಾನು ಮುಂದಕ್ಕೆ ಬಾಗಿ ಅವರ ಕೈ ಕುಲುಕಿದೆ. ನನ್ನ ಎಡಗೈಯಿಂದ ಅವರ ಬಲಗೈ ಮುಚ್ಚಿದೆ. ನನಗೆ ಪೂರ್ಣತೆಯ ಭಾವ ಮೂಡಿತು. ಮಾತಿನ ಮಿತಿ ಮತ್ತು ಸ್ಪರ್ಶದ ಮಾಂತ್ರಿಕತೆಯ ಅನುಭವ ಅಂದು ನನಗಾಯ್ತು.

ಕಣ್ಣಿನ ಬಗ್ಗೆ ಬರೆಯುತ್ತಿರುವಾಗ , ಗಾಢ ಅಂದಕಾರದಲ್ಲಿ ತಲೆಗೆ ತೀಕ್ಷ್ಣವಾದ ಟಾರ್ಚ್ ಕಟ್ಟಿ, ಹೆಗಲಿಗೆ ಬಂದೂಕು ಏರಿಸಿ, ಏಕಾಂಗಿಯಾಗಿ ದಟ್ಟ ಕಾಡುಗಳಲ್ಲಿ ಬೇಟೆಯಾಡುತ್ತಿದ್ದ ನನ್ನಣ್ಣನ ನೆನಪಾಗುತ್ತದೆ. ಕೇವಲ ಕಣ್ಣುಗಳ ಹೊಳಪನ್ನು ನೋಡಿಯೇ ಅದು ಇಂತಹ ಪ್ರಾಣಿಯೇ ಎಂದು ಆತ ಗುರುತಿಸುತ್ತಿದ್ದ. ಹಟ್ಟಿಗೆ ಬಾರದೆ ಕಾಡಲೆಲ್ಲಾ ಎಷ್ಟೋ ದನಕರುಗಳು ಸಂಚರಿಸುತ್ತಿದ್ದರೂ ಆತ ಒಂದು ದಿನವೂ ಈ ಸಾಕು ಪ್ರಾಣಿಗಳ ಮೇಲೆ ಅಪ್ಪಿತಪ್ಪಿಯೂ ಗುಂಡು ಹೊಡೆದಿರಲಿಲ್ಲ.

ಕಣ್ಣಿರಿನ ಬಗ್ಗೆ ಬರೆಯದೆ ಕಣ್ಣುಗಳ ಮೇಲಿನ ಪ್ರಬಂಧ ಮುಗಿಯುವುದಿಲ್ಲ ಅಲ್ಲವೇ? ಅತ್ಯಂತ ವೇದನೆಯಾದಾಗ  ಎದೆ ಕರಗಿ ಕಣ್ಣೀರಾಗಿ ಹರಿಯುತ್ತದೆ. ಅಳುವುದು ಹೇಡಿತನದ, ದೌರ್ಬಲ್ಯದ ಸಂಕೇತವೆಂದು ಕೆಲವರು ಹೇಳುವುದನ್ನು ಕೇಳಿದ್ದೇನೆ. ಅದು ಕೋಮಲ ಭಾವನೆಗಳ ಹುಚ್ಚು ಹೊಳೆ. ಕಣ್ಣಿರು ಹ್ರುದಯವನ್ನು ಜರಡಿ ಹಿಡಿಯುತ್ತದೆ. ಎದೆ ಕರಗಿ ಕಣ್ಣೀರಾಗಿ ಹರಿಯುತ್ತಿದ್ದರೂ ಅದನ್ನು ಬುದ್ಧಿಯ ಬಲದಿಂದ ಮೆಟ್ಟಿ ಕಠಿಣ ನಿರ್ಧಾರ ತೆಗೆದುಕೊಳ್ಳುವವರನ್ನು ನಾನು ಕಂಡಿದ್ದೇನೆ. ಇಂಥವರು ಮಾತ್ರ ಬದುಕಿನಲ್ಲಿ ಯಶಸ್ಸನ್ನು ಸಾಧಿಸಬಲ್ಲರು.

ಹೆಣ್ಣಿನ ಕಣ್ಣನ್ನು ಕಂಡು ’ಹೊಳೆಯ ಸುಳಿಗಳಿಗಿಂತ ಆಳ ಕಣ್ಣಿನ ಚೆಲುವು’ ಎಂದು ಹಾಡಿದ ಕವಿಗಳು ಅವಳ ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲಗಳನ್ನು ಗಮನಿಸಲಿಲ್ಲ ಎಂಬುದು ವಿಷಾಧದ ಸಂಗತಿ. ಮನಸು ಬಚ್ಚಿಟ್ಟುಕೊಂಡ ನೋವನ್ನು ಈ ವರ್ತುಲಗಳು ಹೊರಚೆಲ್ಲುತ್ತವೆ. ಇಷ್ಟೆಲ್ಲಾ ಗುಟ್ಟು, ವಿಸ್ಮಯ, ಅಚ್ಚರಿಗಳನ್ನು ಬಿಟ್ಟುಕೊಡುವ-ಬಚ್ಚಿಟ್ಟುಕೊಳ್ಳುವ ಕಣ್ಣುಗಳನ್ನು ಇನ್ನೊಬ್ಬರಿಗೆ ದಾನ ಮಾಡುವುದರ ಮುಖಾಂತರ ಅಂಧರ ಬಾಳಿಗೆ ಬೆಳಕು ನೀಡುವ ಮಹಾನ್ ಕಾರ್ಯವನ್ನು ಕೂಡಾ ವೈದ್ಯಲೋಕ ಮಾಡಿಕೊಟ್ಟಿದೆ.
ಇದನ್ನು ಓದುತ್ತಿರುವ ಸಹ್ರುದಯನೇ ನಿನ್ನಲ್ಲಿ ನನ್ನದೊಂದು ಮನವಿ;
ನನ್ನ ಅಂತರಂಗಕ್ಕೆ ಲಗ್ಗೆಯಿಡಬೇಕೆಂದು ನೀನು ಬಯಸಿದ್ದಲ್ಲಿ ಇದೋ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು;
ನನ್ನ ಕಣ್ಣು ನನ್ನ ಅಂತರಂಗ ಪ್ರವೇಶದ ಕೀಲಿ ಕೈ

[೨೦೦೨ರಲ್ಲಿ ’ಸೂರ್ಯ’ ಪತ್ರಿಕೆಯಲ್ಲಿ ಪ್ರಕಟವಾದ ಪ್ರಬಂಧ.]


.


Saturday, July 11, 2015

’ಸಣ್ಣ ಸಂಗತಿ’ ಹಾಗೆನ್ನಬಹುದೆ?


ನಾನೊಬ್ಬಳು ಸಹೃದಯಳು ಮಾತ್ರ; ಗುಣಗ್ರಾಹಿ.

ಇದನ್ನು ಬರೆದ ಕವಿ, ಸಾಹಿತ್ಯಲೋಕದಲ್ಲಿ ಈ ಕವಿಗಿರುವ ಸ್ಥಾನ-ಮಾನ ಮುಂತಾದ ಯಾವ ವಿವರಗಳೂ ಕೂಡಾ ನನಗೆ ಮುಖ್ಯವಲ್ಲ. ನನ್ನೆದುರಿಗಿರುವುದು ಕವನ ಮಾತ್ರ.
 ಅದ್ಭುತವಾದ ಚಿತ್ರಕ ಶಕ್ತಿಯುಳ್ಳ ಕವನವಿದು. 

ಕವನದ ಶೀರ್ಷಿಕೆಯನ್ನು ನೋಡಿ; ’ಸಣ್ಣ ಸಂಗತಿ.’ ಆದರೆ ಅದು ತನ್ನೊಳಗೆ ಹುದುಗಿಸಿಟ್ಟುಕೊಂಡಿರುವುದು, ಹೇಳಲೆತ್ನಿಸುತ್ತಿರುವುದು ಸಣ್ಣಸಂಗತಿಯೇ? 

ಈ ಪ್ರಶ್ನೆಯನ್ನು ನಮ್ಮೊಳಗೆ ಕೇಳಿಕೊಳ್ಳುತ್ತಾ ಈ ಕವನದ ಒಳಗೆ ಹೋಗುವ ಪ್ರಯತ್ನವನ್ನು ನಾವು ಮಾಡೋಣ.
ಕವನ ತೆರೆದುಕೊಳ್ಳುವುದು ಹೀಗೆ;

’ನಟ್ಟಿರುಳ ಕರಿಮುಗಿಲ ನೀರ್-ತುಂಬಿಗಳ ನಡುವೆ
ಹುಣ್ಣಿಮೆಯ ಕಣ್ಣು ತೆರೆದಿದೆ. ತಾರೆ ಬಂದಿವೆ
ಬಾನ ಬೀದಿಗೆ’

ನಟ್ಟಿರುಳು, ಕರಿಮುಗಿಲು, ನೀರ್-ತುಂಬಿ, ಹುಣ್ಣಿಮೆಯ ಕಣ್ಣು, ತಾರೆ, ಬಾನಬೀದಿ- ಅನುಮಾನವೇ ಬೇಡ ಇದು ರಾತ್ರಿ ಸಮಯದ ಪ್ರಕೃತಿ ವರ್ಣನೆ. ಬಹುಶಃ ಈಗ ತಾನೇ ಮಳೆ ಬಂದು ನಿಂತಿರಬೇಕು. ಇಲ್ಲಿ ನೀರ್- ತುಂಬಿ ಅಂದರೆ ಮಳೆ ಮೋಡ ಎಂಬ ಶಬ್ದ ಬಳಸಿದರೆ ಮುಂದಿನ ಸಾಲಿನಲ್ಲಿ” ಸೋನೆ’ ಎಂಬ ಶಬ್ದವನ್ನು ಬಳಸಿದ್ದಾರೆ.ಕವಿಯ ಶಬ್ದಗಳ ಆಯ್ಕೆಗೆ ನೀವು ಮೋಹಗೊಳ್ಳುತ್ತೀರಿ; ಪರವಶರಾಗುತ್ತೀರಿ.

 ಆಕಾಶ ಶುಭ್ರವಾಗಿದೆ.ಚಂದ್ರ ಬಂದಿದ್ದಾನೆ. ತಾರೆಗಳು ಉದಿಸಿವೆ
ಆದರೆ ತಕ್ಷಣ ಕವಿ ನಿಮ್ಮ ತನ್ಮಯತೆಯನ್ನು ಬೇರೆಡೆಗೆ ಸೆಳೆಯುತ್ತಾರೆ. ಮುಂದಿನ ಸಾಲುಗಳನ್ನು ಓದಿ;
’ಅತ್ತ ಹಿಡಿದ ಸೋನೆಯ ಶ್ರುತಿಗೆ ಗಾಳಿಯೇ ಹಾಡುತ್ತದೆ’.
ಜೋರು ಮಳೆ ನಿಂತು ಸೋನೆ ಮಳೆ ಸುರಿಯುತ್ತಿರಬೇಕು; ಕುಳಿರ್ಗಾಳಿ ನಿಮ್ಮ ಮೈ ಮನಸ್ಸನ್ನು ಬೆಚ್ಚಗಾಗಿಸುತ್ತಿರಬೇಕು. ಆ ಶ್ರುತಿಯಲ್ಲಿ ಮೈಮರೆಯಲು ಕವಿ ಅವಕಾಶವನ್ನೇ ಕೊಡದೆ ವಾಸ್ತವಕ್ಕೆ ಎಳೆದು ತರುವುದು ಹೀಗೆ ನೋಡಿ;

’ ಇತ್ತ ಈ ಮನೆಯೊಳಗೆ ಪುಟ್ಟ ಮಗುವೊಂದು ಮಂಚದ ಬಳಿಯ ತೊಟ್ಟಿಲಲಿ
ಕಣ್ಣರ್ಧಮುಚ್ಚಿ ಮಲಗಿದೆ, ಅದೂ ಬರಿಮೈಲಿ!’
ನಿದ್ದೆಗಣ್ಣಿನಲೆ ಪಕ್ಕದ ತಾಯಿ ಕೈ ನೀಡಿ
ಮತ್ತೆ ಹೊದಿಕೆಯನು ಸರಿಪಡಿಸುವಳು. ಮಗು ತಿರುಗಿ
ಹೊದಿಕೆಯನೆ ಕಿತ್ತೆಸೆದು ಮಲಗುವದು ಬರಿ ಮೈಲಿ;
ಸಣ್ಣಗಿದೆ ದೀಪ ಎಲ್ಲೋ ಒಂದು ಮೂಲೆಯಲಿ.

 ಕೋಣೆಯಲ್ಲಿ ಮಂಚದ ಮೇಲೆ ಹೆಣ್ಣೊಬ್ಬಳು ಮಲಗಿದ್ದಾಳೆ. ಮಂಚದ ಪಕ್ಕದಲ್ಲೇ ತೊಟ್ಟಿಲಿದೆ. ಅಲ್ಲಿ ಬರಿ ಮೈಯ್ಯಲ್ಲಿ ಮಲಗಿದ ಮಗುವಿದೆ. ಎಲ್ಲೋ ಮೂಲೆಯಲ್ಲಿ ಸಣ್ಣಗೆ ಉರಿಯುವ ದೀಪವೊಂದಿದೆ. ಇಷ್ಟೇ ಚಿತ್ರಣ ಸಾಕು. ಅದು ಬಾಣಂತಿ ಕೋಣೆಯೆಂಬುದನ್ನು ಹೇಳಲು. ಮಳೆ ಬಂದು ಇಳೆ ತಂಪಾದ ಪರಿಸರದಲ್ಲಿ ಜೀವಸೃಷ್ಟಿಯೊಂದು ಮೊಳಕೆಯೊಡೆದಿದೆ. ಮುಂದಿನ ಪ್ಯಾರದಲ್ಲಿ ಬರುವ ’ ನಿದ್ದೆ ಎಚ್ಚರಗಳಲ್ಲಿ ಪೊರೆವ ಕೈ ದುಡಿಯುತಿದೆ’ ಎಂಬ ಸಾಲು ಭುವಿಗೂ ಭಾನಿಗೂ ಅಥವಾ ಲೌಕಿಕಕ್ಕೂ ಅಲೌಕಿಕಕ್ಕೂ ಸೇತುವೆ ಕಟ್ಟಿದೆ. ಇದೇ  ಕವನದ ಕೇಂದ್ರ ಪ್ರಜ್ನೆ; ಅಂತರಾತ್ಮ.
 ಕವನದ ಮೇಲಿನ ಹತ್ತು ಸಾಲುಗಳು ಒಂದೇ ಸ್ಟಾಂಜ ಅಥವಾ ಪ್ಯಾರದಲ್ಲಿ ಬರುತ್ತದೆ.
ಒಟ್ಟು ಹದಿನಾಲ್ಕು ಸಾಲುಗಳ ಈ ಕವನದಲ್ಲಿ ಉಳಿದ ನಾಲ್ಕು ಸಾಲುಗಳು ಹೀಗಿವೆ.

’ಇದು ಸರಿಯೇ? ತಪ್ಪೇ?-ಉತ್ತರವಿಲ್ಲ. ದೆಸೆದೆಸೆಗೆ
ಎಲ್ಲ ಮಲಗಿಹರು ಮಾತಾಡದೆಯೆ, ನೋಡದೆಯೆ.
ನಿದ್ದೆ ಎಚ್ಚರಗಳಲಿ ಪೊರೆವ ಕೈ ದುಡಿಯುತಿದೆ;
ಅವನು ಲೆಕ್ಕಿಸದೆ ಮಗು ಹೊದಿಕೆಯನು ಒದೆಯುತಿದೆ..’

ನೀರವತೆಯಿದೆ. ಆದರೆ ಇಲ್ಲೊಂದು ಕ್ರಿಯೆ ನಡೆಯುತಿದೆ, ಅದು ಸೃಷ್ಟಿ, ಪಾಲನೆ, ಮತ್ತು ಪೊರೆಯುವ ಮೌಲ್ಯಗಳಿಗೆ ಸಂಬಂಧಿಸಿದ್ದು. ತಾಯಿ-ಮಗು ಇಬ್ಬರೂ ಎಚ್ಚರದ ಸ್ಥಿತಿಯಲ್ಲಿ ಇಲ್ಲ. ಆದರೂ ತಾಯಿಗೆ ಮಗುವಿನ ಮೈಯ್ಯಲ್ಲಿ ಹೊದಿಕೆಯಿರಲಾರದು ಅನ್ನಿಸಿ ಆಕೆ ಹೊದಿಕೆಯನ್ನು ಹೊದಿಸುತ್ತಾಳೆ. ಇನ್ನೂ ಈಗ ತಾನೇ ಬೆತ್ತಲಾಗಿ ಈ ಪ್ರಪಂಚಕ್ಕೆ ಬಂದ ಮಗು ತನ್ನ ಮೈಮೇಲಿರುವ ಈಗೀಗ ಪರಿಚಿತವಾಗುತ್ತಿರುವ ಅಪರಿಚಿತ ವಸ್ತುವಾದ ಹೊದಿಕೆಯನ್ನು ಅಪ್ರಯತ್ನಪೂರವಕವಾಗಿ ಕಿತ್ತೆಸೆಯುತ್ತಿದೆ. ತಾಯಿ ಮತ್ತೆ ಮತ್ತೆ ಹೊದಿಸುತ್ತಾಳೆ. ಮಗು ಮತ್ತೆ ಕಿತ್ತೆಸೆಯುತ್ತದೆ. ಇಬ್ಬರಲ್ಲೂ ಅಪ್ರಜ್ನಾಪೂರ್ವಕವಾಗಿ ರಾತ್ರಿಯಿಡೀ ಈ ಕ್ರಿಯೆ ನಡೆಯುತ್ತಿರುತ್ತದೆ. ಇದೆ ಮನುಷ್ಯ ಮತ್ತು ಪ್ರಕೃತಿಗಿರುವ ಸಂಬಂಧವಿರಬಹುದೇ?  ಇದು ಇಡೀ ಜೀವಸಂಕುಲವನ್ನು ಕಾಪಿಡುವ ತಾಯಿ ಪ್ರಜ್ನೆಯಿರಬಹುದೇ? ಅದನ್ನು ಸಣ್ಣ ಸಂಗತಿಯೆನ್ನಬಹುದೆ? ಅಲ್ಲ ಎಂಬುದನ್ನು ಕವಿ ಸೂಚ್ಯವಾಗಿ ಹೇಳಿದ್ದಾರೆ.

ಈ ಕೋಣೆಯಲ್ಲಿ ಏನು ನಡೆಯುತ್ತಿದೆಯೆಂಬ ಅರಿವಿಲ್ಲದೆ ಹೊರಜಗತ್ತಿನಲ್ಲಿ ಎಲ್ಲರೂ ನಿಶ್ಚಿಂತೆಯಿಂದ ಮಲಗಿದ್ದಾರೆ. ಹಾಗೆ ಹೇಳುತ್ತಿರುವಾಗ ಕವಿ ’ದೆಸೆದೆಸೆಗೆ’ ಎಂಬ ಪದ ಪ್ರಯೋಗ ಮಾಡುತ್ತಾರೆ ಆ ಮೂಲಕ ಬಾಣಂತಿ ಕೋಣೆಯ ಕ್ರಿಯೆಗೆ ಸಾರ್ವತ್ರಿಕತೆಯನ್ನು ಕೊಡುತ್ತಾ ಅದನ್ನು ಮನೆಯಿಂದಾಚೆಗೂ ವಿಸ್ತರಿಸುತ್ತಾರೆ. ’ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ’ ಎಂಬ ಇನ್ನೊಂದು ಕವಿವಾಣಿಯ ಜೊತೆ ಈ ಸಂದರ್ಭವನ್ನು ಹೋಲಿಸಬಹುದು. ಜಗತ್ತು ತನ್ನ ಧೈನಂದಿನ ಕ್ಷುದ್ರತೆಗಳಲ್ಲಿ ಮುಳುಗಿದೆ.ಆ ಉದಾಸೀನತೆಯನ್ನು ’ ’ಮಾತಾಡದೆಯೆ, ನೋಡದೆಯೇ’ ಎಂಬ ಪದಗಳಲ್ಲಿ ತಂದಿದ್ದಾರೆ.
ಈ ಕ್ರಿಯೆಗಳು ತಪ್ಪೇ? ಸರಿಯೇ? ಮನುಕುಲದ ಮೂಲ ಪ್ರತಿಮೆ [ಆರ್ಕಿಟೈಪ್] ತಾಯಿಯ ಕ್ರಿಯೆಯನ್ನು ಹೇಗೆ ವ್ಯಾಖ್ಯಾನಿಸುವುದು?!

ಮೊದಲ ಓದಿಗೆ ಈ ಕವನ ಒಂದು ಬಾಣಂತಿ ಕೋಣೆಯ ಚಿತ್ರಣವನ್ನು ಕೊಡುತ್ತದೆಯೆಂದು ಹಿಂದೆಯೇ ಹೇಳಿದ್ದೇನೆ..ತುಂಬಾ ಸರಳವಾದ ಕವನ. ಕವಿಯೇ ಹೇಳುವಂತೆ ಸಣ್ಣ ಸಂಗತಿ. ಆದರೆ ಮೊದಲ ಮೂರುವರೆ ಸಾಲುಗಳು ಮತ್ತು ಕೊನೆಯ ನಾಲ್ಕು ಸಾಲುಗಳು ಈ ಚೌಕಟ್ಟನು ಮೀರಿ ಬೆಳೆಯುತ್ತದೆ ಮತ್ತು ಉಳಿದ ಸಾಲುಗಳಲಿ ನಡೆಯುವ ಕ್ರಿಯೆಯೊಡನೆ ಅಂತರ್ ಸಂಬಂಧ ಹೊಂದುತ್ತದೆ. 

ಅದು ಇರುಳು ಮಾತ್ರವಲ್ಲ, ನಟ್ಟಿರುಳು. ಕಪ್ಪಾದ ಮೋಡ. ಕಪ್ಪದ ಮೋಡವೆಂದರೆ ಮಳೆ ಮೋಡ. ಅದು ಮಳೆಯನ್ನು ಹೊತ್ತುಕೊಂಡಿರುವ ನೀರು ಮೋಡ. ಇಂತಹ ಮೋಡದ ಮಧ್ಯೆ ಹುಣ್ಣಿಮೆಯ ಚಂದಿರ ಬಂದಿದ್ದಾನೆ..
ಆ ಬಾನಿನ ಸೌಂದರ್ಯವನ್ನು ಇಲ್ಲಿ ಮಲಗಿರುವ ಮಗುವಿನೊಡನೆ ಹೋಲಿಸಿ ನೋಡಿ;
ಹಾಗೆ ಹೋಲಿಸುವಾಗ ಎಲ್ಲೋ ಮೂಲೆಯಲ್ಲಿರುವ ಸಣ್ಣನೆಯ ದೀಪದ ಬೆಳಕಿನಲ್ಲಿ ಆ ಮಗುವನ್ನು ನೋಡುತ್ತಿರುವ ಕವಿಯನ್ನು ಕಲ್ಪಿಸಿಕೊಳ್ಳಿ. ನಟ್ಟಿರುಳ ಕರಿಮುಗಿಲ ನೀರ್-ತುಂಬಿಗಳ ನಡುವೆ ಹುಣ್ಣಿಮೆಯ ಕಣ್ಣು ತೆರೆದಿರುವುದನ್ನು ಕವಿ ಈ ಮಗುವಿನಲ್ಲಿ ಕಾಣುತ್ತಿದ್ದಾರೆ. ಬಹುಶಃ ಅದನ್ನು  ನಾವು ಹೀಗೆ ಹೇಳಬಹುದು,  ಹಾಗೆ ನಮಗೆ ಹೇಳಲು ಸಾಧ್ಯವಾಗುವುದು ನೀರ್-ತುಂಬಿ ಎಂಬ ಶಬ್ದ. ಈ ಶಬ್ದ ಹಲವು ಅರ್ಥ ಸಾಧ್ಯತೆಗಳನ್ನು ಹೊಂದಿದೆ. ಅಲ್ಲಿ ನೀರ್-ತುಂಬಿ ಅಂದರೆ ಮೋಡ. ಇಲ್ಲಿ ಮಗುವಿನ ಕಣ್ಣು. ಅದು ತುಂಬಿಯಂತ ಚಂಚಲವಾದ ಕಣ್ಣುಗಳು. ಪುಟ್ಟ ಮಕ್ಕಳ ಕಣ್ಣು ಯಾವಾಗಲೂ ನೀರು ತುಂಬಿಕೊಂಡಂತೆ, ಶುಭ್ರ ಕೊಳಗಳ ಹಾಗೆ ಕಾಣುತ್ತದೆ.ಅದು ತಾರೆಯ ಹಾಗೆ ಹೊಳೆಯುತ್ತಿರುತದೆ. ಮೋಡದಂತಹ ಕಪ್ಪಾದ ಕೂದಲ ಮರೆಯಲ್ಲಿ ಹೊಳೆಯುವ ಕಣ್ಣುಗಳು. ಅದು ಬರಿಮೈಲಿ ಮಲಗಿದೆ ನೀಲ ಆಕಾಶದ ನಡುವೆ ಹೊಳೆಯುವ ತಾರೆ ಕಂಗಳ ಚಂದ್ರನ ಹಾಗೆ.
ಮಗುವಿನ ಪಕ್ಕ ತಾಯಿಯಿದ್ದಾಳೆ. ಆಕೆ ಮಲಗಿದ್ದಾಳೆ; ನಿದ್ದೆಯೂ ಅಲ್ಲದ ಎಚ್ಚರವೂ ಅಲ್ಲದ ಸ್ಥಿತಿಯಲ್ಲಿದ್ದಾಳೆ ಬೆಳದಿಂಗಳಿನಂತೆ.   ಮಧ್ಯಂತರ ಸ್ಥಿತಿ, ಅಯೋಮಯ ಸ್ಥಿತಿ.   

ಇಷ್ಟೆಲ್ಲಾ ಅರ್ಥ ಸಾಧ್ಯತೆಗಳುಳ್ಳ ಈ ಕವನ ’ಸಣ್ಣ ಸಂಗತಿ’ಯೇ? ಅಲ್ಲಾಂತ ನಮಗೆ ಗೊತ್ತು, ನಿಮಗೂ ಗೊತ್ತು!


[ ಜನವರಿ ೨೫ರಂದು ಮಂದ್ಯದಲ್ಲಿ ಒಲವಿನ ಕವಿ ಕೆ.ಎಸ್. ನರಸಿಂಹಸ್ವಾಮಿಯವರ ನೂರನೇ ಹುಟ್ಟುಹಬ್ಬದ ಪ್ರಯುಕ್ತ ’ಅನೇಕ’ದ ಗೆಳೆಯರು ’ನೂರರ ಸಂಭ್ರಮ’ ಎಂಬ ಒಂದು ದಿನದ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಆ ಸಂದರ್ಭದಲ್ಲಿ ಒಲವಿನ ಕವಿಯ ಕವನಗಳ ಮುರುಓದಿನ ಪುಸ್ತಕವೊಂದನ್ನು ತಂದಿದ್ದರು. ಆ ಪುಸ್ತಕ ’ಹೂಬುಟ್ಟಿ’ ಗಾಗಿ ಬರೆದ ಪುಟ್ಟ ಲೇಖನವಿದು.
ಕವನ ಓದಲು ಆರಂಭಿಸುತ್ತಿರುವ ಹೊಸ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ಬರೆದಿದ್ದೇನೆ.. ಕವನದ ಚೌಕಟ್ಟನ್ನು ಮೀರುವ ಪ್ರಯತ್ನವನ್ನು ನಾನು ಮಾಡಿಲ್ಲ!]


Tuesday, May 26, 2015

ಕೆರೆಯ ಕರೆಗೆ ಕಿವಿಗೊಡುವವರಿಲ್ಲ....!

ನೈನಿತಾಲ್.
.

ವಿಸ್ತಾರವಾದ ಕೆರೆಗಳನ್ನು ನೋಡಿದಾಗ, ಅವು ನೀರುಣಿಸುವ ಕೃಷಿ ಭೂಮಿಯನ್ನು ಗಮನಿಸಿದಾಗ, ನಮ್ಮ ಹಿಂದಿನ ತಲೆಮಾರಿನ ಗ್ರಾಮೀಣ ಕೃಷಿ ತಂತ್ರಜ್ನರ ಬಗ್ಗೆ ಹೆಮ್ಮೆ ಮೂಡುತ್ತದೆ. ಶಿಕಾರಿಪುರದಲ್ಲಿರುವ ಮಾಸೂರು ಕೆರೆ, ಕುಣಿಗಲ್ ಕೆರೆ, ಸೂಳೆಕೆರೆ [ಶಾಂತಿಸಾಗರ]ಗಳು ವಿಸ್ತಾರವಾದ ಸರೋವರವನ್ನು ನೆನಪಿಸುತ್ತವೆ.

ಇತಿಹಾಸದ ವಿದ್ಯಾರ್ಥಿಗಳಿಗೆ ಇದು ಗೊತ್ತಿದೆ; ವಸಾಹತುಶಾಹಿ ವ್ಯವಸ್ಥೆ ಭಾರತದಲ್ಲಿ ತಳವೂರುವುದಕ್ಕೆ ಮೊದಲು ಇಲ್ಲಿ ಅಣೆಕಟ್ಟುಗಳ ಕಲ್ಪನೆ ಇರಲಿಲ್ಲ. ಕೆರೆಗಳೇ ಭಾರತದ ನೀರಾವರಿ ಮೂಲಗಳು. ಕೆರೆಗಳನ್ನು ಆಧರಿಸಿಯೇ ಇಲ್ಲಿ ಕೃಷಿ ಪದ್ಧತಿ ಜಾರಿಯಲ್ಲಿತ್ತು.

ಭಾರತದ ಯಾವ ಹಳ್ಳಿಗೆ ಹೋದರೂ ಅಲ್ಲಿ ಕನಿಷ್ಠ ಐದಾರು ಕೆರೆಗಳಿರುತ್ತಿದ್ದವು. ನಮ್ಮ ಕರ್ನಾಟಕದಲ್ಲಿಯೇ 38,608 ಸಣ್ಣ ನೀರಾವರಿ ಕೆರೆಗಳಿವೆ. ಕೆರೆಗಳು ಗ್ರಾಮಗಳ ಅವಿಭಾಜ್ಯ ಅಂಗ. ಇದರ ಉಸ್ತುವಾರಿಯನ್ನು ಸ್ಥಳೀಯ ಮುಖಂಡರೇ ನೋಡಿಕೊಳ್ಳುತ್ತಿದ್ದರು.

 ಭಾರತದಲ್ಲಿದ್ದ ಇಂತಹ ಅತ್ಯುತ್ತಮವಾದ ಜಲನಿರ್ವಹಣ ಪದ್ಧತಿಯನ್ನು ನೋಡಿ ಬೆಕ್ಕಸಬೆರಗಾದವರು ಇಲ್ಲಿಗೆ ಬಂದ ಇಂಗ್ಲೀಷರು. ಕೆರೆ ತುಂಬಿದ ಮೇಲೆ ತಂತಾನೆ ಹರಿದು ಹೋಗುವ ಅಥವಾ ಕೋಡಿ ಬೀಳುವ ವ್ಯವಸ್ಥೆ, ಯಾವುದೇ ಖರ್ಚು ವೆಚ್ಚಗಳಿಲ್ಲದೆ ಅದನ್ನು ಗ್ರಾಮಸ್ಥರು ನಿರ್ವಹಿಸುತ್ತಿದ್ದ ಪರಿ, ಅಂತರ್ಜಲ ಅಭಿವೃದ್ಧಿಗೆ ಕೆರೆಗಳ ಕೊಡುಗೆ...ಇದೆಲ್ಲಾ ಅವರಿಗೆ ವಿಸ್ಮಯ ಎನಿಸಿತ್ತು. ಏಕೆಂದರೆ, ಈ ರೀತಿಯಾಗಿ ದೊಡ್ಡ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಿಡುವ ತಂತ್ರಜ್ನಾನ ಅಲ್ಲಿಯವರೆಗೂ ಯುರೋಪಿನಲ್ಲಿ ಅಭಿವೃದ್ಧಿಯಾಗಿರಲಿಲ್ಲ.
ಒಂದು ಮೂಲದ ಪ್ರಕಾರ, ಮಧ್ಯಪ್ರದೇಶದ ವಿಶಾಲವಾದ ಕೆರೆಯೊಂದನ್ನು ಅಧ್ಯಯನ ನಡೆಸಿದ ಬ್ರೀಟಿಶ್ ಎಂಜಿನಿಯರೊಬ್ಬ ಡ್ಯಂ ತಂತ್ರಜ್ನಾನವನ್ನು ಅಭಿವೃದ್ಧಿಪಡಿಸಿದನಂತೆ.
ಗ್ರಾಮ ಬೊಕ್ಕಸವನ್ನು ತುಂಬಿಸುವ ಉದ್ದೇಶದಿಂದ ಬ್ರೀಟಿಶರು ಗ್ರಾಮ ಮುಖಂಡರ  ಸುಪರ್ದಿಯಲ್ಲಿದ್ದ ಕೆರೆಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಬಳಕೆದಾರರಿಗೆ ತೆರಿಗೆಯನ್ನು ವಿಧಿಸಿದರು. ಗ್ರಾಮೀಣ ಜನರ ಭಾವಕೋಶಕ್ಕೆ ಸೇರಿದ್ದ ಕೆರೆಗಳು ಅವರಿಂದ ದೂರವಾದವು. ಊರ ಉಳಿವಿಗಾಗಿ ಗರ್ಭೀಣಿ ಸ್ತ್ರೀಯರು, ಸೊಸೆಯಂದಿರನ್ನು ಬಲಿಕೊಟ್ಟು ನೀರುಣಿಸಿದ ಕಥೆ ಲಾವಣಿಗಳು ಅರ್ಥ ಕಳೆದುಕೊಂಡವು. ಕ್ರಮೇಣ ಕೆರೆಗಳು ಹಾಳಾಗತೊಡಗಿದವು. ಹಾಗೆಯೇ ಅದರಲ್ಲಿ ಹೂಳು ತುಂಬತೊಡಗಿತು.

ನಮ್ಮಲ್ಲಿರುವ ಯಥೇಚ್ಛ ಕೆರೆಗಳು ನೀರಿನ ಸಮತೋಲನವನ್ನು ಕಾಯ್ದುಕೊಳ್ಳುತ್ತಿದ್ದವು; ಅಂತರ್ಜಲ ವೃದ್ಧಿಗೆ ಕಾರಣವಾಗುತ್ತಿದ್ದವು. ಹಾಗಾಗಿಯೇ ಕೆರೆಗಳು ಜಲಪಾತ್ರೆಗಳು ಅನ್ನಿಸಿಕೊಂಡವು. ಅಂದರೆ ಬಿದ್ದ ಮಳೆ ನೀರು ಭೂಮಿಯಲ್ಲಿ ಇಂಗಿ ಅಂತರ್ಜಲ  ವೃದ್ಧಿಗೊಂಡು ಅಮ್ತ್ತೆ ಆವಿಯಾಗಿ, ಮಳೆಯಾಗಿ..ಹೀಗೆ ಜಲಚಕ್ರ ತಿರುಗುತ್ತಿತ್ತು..; ನೀರು ಮರು ಪೂರಣಗೊಳ್ಳುತ್ತಿತ್ತು. ಆದರೆ ಕೆರೆಗಳು ಹೂಳು ತುಂಬಿ ಅಥವಾ ಸೈಟುಗಳಾಗಿ ಪರಿವರ್ತನೆಗೊಂಡು ಈ ವರ್ತುಲ ಛಿಧ್ರಗೊಂಡಿತು.

ಕುಮಾರ ಬಂಗಾರಪ್ಪ ಸಣ್ಣ ನೀರಾವರಿ ಸಚಿವರಾಗಿದ್ದಾಗ ’ ಕಾಯಕ ಕೆರೆ’ ಎಂಬ ಯೋಜನೆಯಡಿಯಲ್ಲಿ ಕೆರೆಗಳ ಹೂಳು ತೆಗೆಯುವ ಕಾರ್ಯ ಆರಂಭವಾಗಿತ್ತು. ಇದಕ್ಕೆ ವಿಶ್ವಬ್ಯಾಂಕ್ ಕೂಡಾ ನೆರವು ನೀಡಿತ್ತು. ಬರಪೀಡಿತ ಪ್ರದೇಶದ ಜನರಿಗೆ ಉದ್ಯೋಗವನ್ನು ಒದಗಿಸುವುದಕ್ಕಾಗಿ ಸರಕಾರ ’ಕೂಲಿಗಾಗಿ ಕಾಳು’ ಎಂಬ ಯೋಜನೆಯನ್ನು ಜಾರಿಗೆ ತಂದಿತ್ತು. ಆ ಯೋಜನಡಿಯಲ್ಲಿ ಬರುವ ಜನರನ್ನು ಇಅದಕ್ಕಾಗಿ ಬಳಸಿಕೊಳ್ಳಬೇಕಾಗಿತ್ತು. ಆದರೆ ಹೂಳೆತ್ತುವ ಈ ಯೋಜನೆ ಗ್ರಾಮಾಂತರ ಪ್ರದೇಶದ ಸಣ್ಣಪುಟ್ಟ ರಾಜಕೀಯ ಪುಢಾರಿಗಳಿಗಳಿಗೆ ಒಳ್ಳೆ ಮೇವಿನ ತಾಣವಾಯಿತೇ ಹೊರತು ಇದರಿಂದ ಕೆರೆಯಂತೂ ಉದ್ಧಾರವಾಗಲಿಲ್ಲ.

ಮನಸು ಮಾಡಿದರೆ ಖಾಸಗಿ ಸಂಘಟನೆಗಳು ಇದನ್ನು ಅಚ್ಚುಕಟ್ಟಾಗಿ ಮಾಡಬಲ್ಲವು ಎಂಬುದಕ್ಕೆ ರಾಜಸ್ಥಾನ ಉತ್ತಮ ಉದಾಹರಣೆಯಾಗಬಲ್ಲುದು. ಅಲ್ಲಿನ ಪ್ರಮುಖ ದಿನಪತ್ರಿಕೆಯಾದ’ ರಾಜಸ್ತಾನ್ ಪತ್ರಿಕೆ’ ಒಂದು ಲಕ್ಷದ ಐವತ್ತೈದು ಸಾವಿರ ಸ್ವಯಂ ಸೇವಕರನ್ನು ಪ್ರೇರೆಪಿಸಿ 388 ಕೆರೆಗಳ ಹೂಳೆತ್ತಿಸಿ ಶುಚಿ ಮಾಡಿಸಿತು. ಚಿಕ್ಕ ಬಂಡುಗಳನ್ನು ನಿರ್ಮಿಸಿ ನೀರನ್ನು ಸದ್ಬಳಕೆ ಮಾಡಿತು.

ಬೀಮ್ ತಾಲ್[ ಉತ್ತರಾಖಂಡ್]
ಈಗ ಸಧ್ಯಕ್ಕೆ ಬೆಂಗಳೂರನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ ಇಲ್ಲಿ ಒಟ್ಟು 360 ಕೆರೆಗಳಿದ್ದುವೆಂದು ಇತಿಹಾಸ ಹೇಳುತ್ತದೆ. ಇಲ್ಲಿನ ಬೌಗೋಳಿಕ ಮೇಲ್ಮೈ ಹೇಗಿದೆಯೆಂದರೆ ಈ ಕೆರೆಗಳು ಪರಸ್ಪರ ಇಂಟರ್ ಲಿಂಕ್ ಆಗಿವೆ. ಮೇಲಿನ ಕೆರೆಗಳು ತುಂಬಿದ ಮೇಲೆ ಕೆಳಗಿನ ಕೆರೆಗಳು ತುಂಬಿಕೊಳ್ಳುತ್ತಿದ್ದವು. ಈ ನೈಸರ್ಗಿಕ ಕೆರೆಗಳಿಂದಾಗಿಯೇ ಬೆಂಗಳೂರು ಹವಾನಿಯಂತ್ರಿತ ನಗರವಾಗಿತ್ತು.

ತೀರ ಇತ್ತೀಚೆನವರೆಗೂ ಇಲ್ಲಿ 82 ಕೆರೆಗಳಿದ್ದವು. ಈಗ ಎರಡು ಡಜನಿನಷ್ಟು ಕೆರೆಗಳಿದ್ದರೆ ಅದು ಬೆಂಗಳೂರಿಗರ ಪುಣ್ಯ. ಅದರಲ್ಲಿ ಒಂಬತ್ತು ಕೆರೆಗಳಲ್ಲಿ ಮಾತ್ರ ನೀರಿದೆ. ಇವುಗಳಿಗೂ ಒತ್ತುವರಿ ವ್ಯಧಿ ತಗುಲಿಕೊಂಡಿದೆ. ಸರಕಾರವೇ ತೆರೆಮರೆಯಿಂದ ಈ ಕೆರೆಗಳನ್ನು ಖಾಸಗಿಯವರಿಗೆ ಮಾರುವ ಪ್ರಯತ್ನ ಮಾಡುತ್ತಿದೆ. ಒಂದೆರಡನ್ನು ಪಂಚತಾರಾ ಹೋಟೇಲ್ ನವರಿಗೆ ಗುತ್ತಿಗೆ ನೀಡಿದೆ.

ಕಳೆದ ವರ್ಷ ಇಂಡೋ-ನಾರ್ವೆ ಪ್ರಾಜೆಕ್ಟ್ ನಡಿಯಲ್ಲಿ ಹೆಬ್ಬಾಳ ಕೆರೆಯ ಹೂಳು ತೆಗೆಸಿ ಸ್ವಚ್ಛ ಮಾಡಲಾಗಿತ್ತು. ಹಾಗೆಯೇ ಸಾರ್ವಜನಿಕರಿಗಾಗಿ ಬೋಟಿಂಗ್- ವಿಹಾರಗಳಿಗೆ ಅಣಿಗೊಳಿಸಿ ಲಾಭ ಗಳಿಸುತ್ತಿತ್ತು. ಈಗ ಅದನ್ನು ಪಂಚತಾರ  ಹೋಟೇಲೋಂದಕ್ಕೆ ವಹಿಸಿಕೊಡಲಾಗಿದೆ. ತೀರಾ ಇತ್ತೀಚೆಗೆ ನಕ್ಕುಂಡಿ ಕೆರೆಯ 13 ಎಕ್ರೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ಪ್ರಯತ್ನ ನಡೆದಾಗ ಮೇಸ್ಟ್ರು ಒಬ್ಬರು ಮುತುವರ್ಜಿ ವಹಿಸಿ ಒತ್ತುವರಿಯನ್ನು ತಡೆಹಿಡಿದಿದ್ದರು.

ಕೆರೆಗಳು ಹಿಂದಿನಿಂದಲೂ ಸಾಮಾಜಿಕ ಸ್ವತ್ತು. ಅದನ್ನು ಖಾಸಗಿಯವರಿಗೆ ನೀಡಿ ಸೈಟುಗಳಾಗಿ ಪರಿವರ್ತಿಸಿದರೆ ನೈಸರ್ಗಿಕ ಅಸಮತೋಲನ ಉಂಟಾಗುವುದಿಲ್ಲವೇ? ಅಲಸೂರು ಕೆರೆಯ ಹೂಳು ತೆಗೆಸುವ ನೆಪದಲ್ಲಿ ಪೂರ್ಣ ನೀರನ್ನು ಖಾಲಿ ಮಾಡಿಸಿದ್ದರು. ಇದರಿಂದ ಕೆರೆಯ ಜೀವವೈವಿಧ್ಯತೆಯೇ ಗಂಡಾಂತರಕ್ಕೊಳಗಾಯ್ತು.

ವೈಶಂಪಾಯನ ಸರೋವರ[ಕುರುಕ್ಷೇತ್ರ]
ಕಾವೇರಿ ನದಿ ವಿವಾದ ಸಂದರ್ಭದಲ್ಲಿ ಇದೆಲ್ಲ ಮುಖ್ಯವೆನಿಸುತ್ತದೆ. ಅಂಕಿ ಅಂಶಗಳ ಪ್ರಕಾರ 2025 ನೇ ಇಸವಿಗೆ ಬೆಂಗಳೂರಿಗೆ 30 ಟಿಎಂಸಿ  ಕುಡಿಯುವ ನೀರಿನ ಅವಶ್ಯಕತೆ ಇರುತ್ತದೆ. ಈಗ ಬೆಂಗಳೂರಿನ ಜನತೆಯ ನೀರಿನ ಎಲ್ಲಾ ಅವಶ್ಯಕತೆಗಳನ್ನು ಕಾವೇರಿ ನದಿ ಪೂರೈಸುತ್ತಿದೆ. ವರ್ಷಗಳು ಕಳೆದಂತೆಲ್ಲಾ ನದಿ ನೀರಿನಲ್ಲೇನೂ ಹೆಚ್ಚಳ ಉಂಟಾಗುವುದಿಲ್ಲ. ಬದಲಾಗಿ ಪ್ರಕೃತಿ ಮೇಲಿನ ದೌರ್ಜನ್ಯದಿಂದಾಗಿ ಅಂತರ್ಜಲವೇ ಕುಂದಿ ಹೋಗುತ್ತದೆ. ಆದರೆ ಜನಸಂಖ್ಯೆ ಹೆಚ್ಚಾಗುತ್ತಲೇ ಇರುತ್ತದೆ. ನೀರಿನ ಬಳಕೆಯೂ ಗಣನೀಯವಾಗಿ ಏರಿಕೆಯಾಗುತ್ತದೆ. ಹೀಗಾಗಿಯೋ ಏನೋ ನೀರಿಗಾಗಿ ಜಗಳ, ವೈಮನಸ್ಸು ಮತ್ತೆ ಮತ್ತೆ ಮರುಕಳಿಸುತ್ತದೆ. ಹಾಗಾಗಿಯೇ ನೀರಿನ ಪರ್ಯಾಯ ಮೂಲಗಳನ್ನು ಹುಡುಕಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.

ಇಷ್ಟಕ್ಕೂ ಬೆಂಗಳೂರಿಗೆ ಕಾವೇರಿ ನೀರಿನ ಮೇಲೆ ಯಾವ ಹಕ್ಕಿದೆ? ನಾಗರಿಕತೆ ಹುಟ್ಟಿಕೊಳ್ಳುವುದೇ ನದಿ ದಂಡೆಗಳಲ್ಲಿ.ಅಲ್ಲಿನ ಜನರೇ ಆ ನದಿ ನೀರಿನ ಮೊದಲ ಹಕ್ಕುದಾರರು. ಬೆಂಗಳೂರು ನದಿ ಪಾತ್ರದಲ್ಲಿರುವ ನಗರ ಅಲ್ಲ. ಅಲ್ಲದೆ ಸಮುದ್ರಮಟ್ಟದಿಂದ 1,500 ಅಡಿಗಳಷ್ಟು ಎತ್ತರದಲ್ಲಿರುವ ಪ್ರದೇಶ.

ಸುಮಾರು 120 ಕಿ.ಮೀ. ದೂರದಿಂದ ಈ ನಗರಕ್ಕೆ ಕಾವೇರಿ ನೀರು ಹರಿದು ಬರಬೇಕು. ಏಷ್ಯದ ಯಾವ ನಗರಕ್ಕೂ ಇಷ್ಟು ದೂರದಿಂದ ನೀರು ಸರಬರಾಜು ಆಗುತ್ತಿರುವ ಉದಾಹರಣೆ ಇಲ್ಲ. ಇಷ್ಟು ದೂರ ಮತ್ತು ಎತ್ತರಕ್ಕೆ ನೀರು ಹರಿಸಬೇಕಾದರೆ ಅಪಾರ ವೆಚ್ಚ ತಗುಲುತ್ತದೆ. ಹಾಗಾಗಿ ನೀರಿನ ಪರ್ಯಾಯ ಮೂಲಗಳತ್ತ ಗಮನ ಹರಿಸಲು ಇದು ಸೂಕ್ತ ಸಮಯ. ನೀರಿನ ಲಭ್ಯತೆಗೆ ಅನುಗುಣವಾಗಿ ಬೆಳೆ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು. ಇದು ಇಂದಿನ ಅಗತ್ಯ ಮತ್ತ ಅನಿರ್ವಾಯವೂ ಹೌದು.
ಬೆಂಗಳೂರಿನ ಮಟ್ಟಿಗಾದರೆ ಮಳೆ ಕೊಯ್ಲನ್ನು ಕಡ್ಡಾಯಗೊಳಿಸಬಹುದು. ಯಾಕೆಂದರೆ ಇಲ್ಲಿ ವಾರ್ಷಿಕ 970ಮಿ.ಮೀ. ಮಳೆಯಾಗುತ್ತದೆ. ಇದು ಅತ್ಯಧಿಕ ಮಳೆ ಬೀಳುವ ಮಲೆನಾಡಿನ ಮಳೆಯ ಮೂರನೇ ಒಂದು ಭಾಗದಷ್ಟು ಆಗುತ್ತದೆ. ಒಂದು ಕುಟುಂಭದ ನೀರಿನ ಅವಶ್ಯಕತೆಗಳನ್ನು ಭರಿಸಲು ಇದು ಸಾಕು. ಒಂದು ವೇಳೆ ಕಡಿಮೆ ಬಿದ್ದರೆ ಕುಡಿಯಲು ಮಾತ್ರ ಕಾವೇರಿ ನೀರನ್ನು ಬಳಸಿಕೊಳ್ಳಬಹುದು. ತಮಿಳುನಾಡು ಸರಕಾರ ಕಾನೂನಿನ ಮೂಲಕ ಸಣ್ಣಪುಟ್ಟ ನಗರ, ಪಟ್ಟಣಗಳಲ್ಲಿ ಮಳೇ ಕೊಯ್ಲನ್ನು ಕಡ್ಡಾಯಗೊಳಿಸಿದೆ ಎಂಬುದನ್ನು ಇಲ್ಲಿ ಗಮನಿಸಬೇಕು.

ಹಸಿರು ಊರು ಎಂಬುದು ಕೇವಲ ಘೋಷಣೆಯ ವಾಕ್ಯವಾಗಬಾರದು. ಬೆಂಗಳೂರು ದಿನದಿಂದ ದಿನಕ್ಕೆ ಅಸ್ತಮಾ ರೋಗಿಗಳ ನಗರವಾಗುತ್ತಿದೆ. ಹಸಿರನ್ನು ಉಳಿಸಬೇಕಾದ್ರೆ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಜಾರಿಗೊಳಿಸಿದ ಕಾನೂನನ್ನು ಇಲ್ಲಿಯೂ ಕಡ್ಡಾಯವಾಗಿ ಜಾರಿಗೊಳಿಸಬೇಕಾಗುತ್ತದೆ. ಮನೆ ಕಟ್ಟುವಾಗ ಪೂರ್ಣ ಸೈಟಿನಲ್ಲಿ ಮನೆ ಕಟ್ಟಬಾರದು. ಶೇಕಡಾ ಅರುವತ್ತು ಭಾಗದಲ್ಲಿ ಮನೆ, ಉಳಿದ ನಲುವತ್ತು ಭಾಗದಲ್ಲಿ ಕೈತೋಟದ ನಿರ್ಮಾಣ ಮಾಡಬೇಕು. ಕೈತೋಟದ ಜತೆಯಲ್ಲಿಯೇ ಮಳೆ ಕೊಯ್ಲು ಕಡ್ಡಾಯವಾಗಬೇಕು.

ಒಂದು ಬಾಗಿಲು ಮುಚ್ಚಿದರೆ ನೂರು ಬಾಗಿಲುಗಳು ತೆರೆದುಕೊಳ್ಳುತ್ತವೆ. ಆ ಬಾಗಿಲುಗಳು ಎಲ್ಲೆಲ್ಲಿ ಇವೆ ಎಂಬುದನ್ನು ನಾವು ಹುಡುಕಿಕೊಳ್ಳಬೇಕು. ಜನಾನುರಾಗಿ ಚಕ್ರವರ್ತಿಯೊಬ್ಬ ತನ್ನ ಪ್ರಜೆಗಳ ಯೋಗಕ್ಷೇಮಕ್ಕಾಗಿ ಏನು ಮಾಡುತ್ತಿದ್ದ ಗೊತ್ತೆ? ಕೆರೆಕಟ್ಟೆಗಳನ್ನು ಕಟ್ಟಿಸುತ್ತಿದ್ದ. ಅರವಟ್ಟಿಗೆಗಳನ್ನು ನಿರ್ಮಿಸುತ್ತಿದ್ದ. ಸಾಲುಮರಗಳನ್ನು ನೆಡುತ್ತಿದ್ದ.
ಇಂದಿಗೂ ಮನುಷ್ಯನ ಮೂಲಭೂತ ಅವಶ್ಯಕತೆಗಳು ಅವೇ ಆಗಿವೆ. ಅಂದು ಚಕ್ರವರ್ತಿ ನೀಡುತ್ತಿದ್ದ, ಇಂದು ಪ್ರಜಾಸರ್ಕಾರ ಅವನ್ನು ಒದಗಿಸಿಕೊಡಬೇಕು. ಸರಕಾರಗಳು ದೂರದರ್ಶಿತ್ವ ಹೊಂದಿರಬೇಕು. ಆದರೆ, ನಮ್ಮ ಸರಕಾರದ ಯೋಜನೆಗಳೆಲ್ಲಾ ಕೇವಲ ಕರಡು ಪ್ರತಿಗಳಲ್ಲಿಯೇ ಉಳಿಯುತ್ತಿವೆ. ಅದು ಕಾರ್ಯಗತವಾಗುವುದೇ ಇಲ್ಲ. ಅದು ನಮ್ಮ ದುರಂತ.

[ ಇದು ’ಅಗ್ನಿ’ವಾರಪತ್ರಿಕೆಯಲ್ಲಿ 2007ರ ಮಾರ್ಚ್ 8ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.
ಅಂದರೆ ಎಂಟುವರ್ಷಗಳ ಹಿಂದಿನ ಬರಹ. ಎಲ್ಲೋ ರದ್ದಿಯಲ್ಲಿ ಸೇರಿಕೊಂಡದ್ದು ಇವತ್ತು ಅಕಸ್ಮತ್ತಾಗಿ ಸಿಕ್ಕಿತು!]