Friday, May 27, 2016

ಸಂಕಲ್ಪಶಕ್ತಿಯ ಜೊತೆಗೆ ಮಾತು.



ಶೋಭಾ ಎಂಬ ಅಲೆಮಾರಿಯನ್ನು ನಾನು ಬೇಟಿಯಾಗಿದ್ದು ನಲ್ಲಮಲ್ಲ ಕಾಡಿನ ಚಾರಣದ ಸಂದರ್ಭದಲ್ಲಿ. ಪಯಣ ಮುಗಿದ ಮೇಲೆ ಸಹಪ್ರಯಾಣಿಕರನ್ನು ಮರೆಯುವುದು ಸಹಜವೆಂಬಂತೆ  ನಾನವರನ್ನು ಮರೆತುಬಿಟ್ಟೆ. ಆದರೆ ಚಾರಣದ ಸಂದರ್ಭದಲ್ಲಿ  ಹಿಮಾಲಯವೆಂದರೆ ನನಗೆ ತೀರದ ಮೋಹವಿದೆ ಎಂದು ಅವರಲ್ಲಿ ಹೇಳಿದ್ದೆ. ಅದನ್ನವರು ಮರೆತಿರಲಿಲ್ಲ.
ಪ್ರತಿವರ್ಷದಂತೆ ಮರುವರ್ಷ ಅವರು ಹಿಮಾಲಯಕ್ಕೆ ಹೋಗುವ ತಯಾರಿಯಲ್ಲಿರುವಾಗ ನನ್ನ ಮಾತನ್ನು ನೆನಪು ಮಾಡಿಕೊಂಡು ತಮ್ಮೊಡನೆ ಬರುವಿರಾ ಎಂದು ಅಹ್ವಾನಿಸಿದರು. ಮತ್ತೆ ಯೋಚಿಸೋದೇನಿದೆ? ಕೈಯ್ಯಲ್ಲಿ ಟ್ರಾಲಿ ಬ್ಯಾಗ್ , ಬ್ಯಾಕ್ ಪ್ಯಾಕ್ ಹಾಕಿಕೊಂಡು ಹೊರಟೇಬಿಟ್ಟೆ.
ಈಗವರು ನಾಲ್ಕು ವರ್ಷಗಳಿಂದ ನನ್ನ ಹಿಮಾಲಯ ಚಾರಣದ ಸಂಗಾತಿ.
ಶೋಭಾಗೆ ಈಗ ೬೩ ವರ್ಷ. ಹರೆಯದ ಹುಡುಗರಂತೆ ಹಿಮಾಲಯದ ಕಡಿದಾದ ಬೆಟ್ಟಗಳಲ್ಲಿ ಚಾರಣ ಮಾಡುತ್ತಿರುವ ಅವರು ನನಗೊಂದು ವಿಸ್ಮಯ, ಅಚ್ಚರಿ. ಆ ಬೆರಗಿನಿಂದಲೇ ಅವರನ್ನು ಮಾತಿಗೆಳೆದೆ

ಪ್ರಶ್ನೆ; ಎಷ್ಟು ವರ್ಷಗಳಿಂದ ನೀವು ಹಿಮಾಲಯಕ್ಕೆ ಹೋಗುತ್ತಿದ್ದೀರಿ?

ಶೋಭಾ; ಹದಿನಾಲ್ಕು ವರ್ಷಗಳಿಂದ. ೨೦೦೨ರಲ್ಲಿ ಮೊತ್ತ ಮೊದಲ ಬಾರಿಗೆ ಶಿವನ ಆಲಯ ಹಿಮಾಲಯಕ್ಕೆ ಅಡಿಯಿಟ್ಟೆ. ಅಲ್ಲಿಂದ ಇಲ್ಲಿತನಕ ಒಂದು ವರ್ಷವೂ ಮಿಸ್ ಮಾಡಿಲ್ಲ. ೨೦೧೩ರಲ್ಲಿ ಹಿಮಾಲಯದಲ್ಲಿ ಸುನಾಮಿ ಆದಾಗಲೂ ಅದರಿಂದಾದ ಅವಘಡಗಳನ್ನು ನೋಡಲೆಂದೇ ನಾವಲ್ಲಿಗೆ ಹೋಗಿದ್ದೆವು. ಕಳೆದ ತಿಂಗಳು ಈಶಾನ್ಯದ ಏಳು ರಾಜ್ಯಗಳು ಮತ್ತು ಭೂತಾನ್ ಪ್ರವಾಸ ಮುಗಿಸಿ ಬಂದಿದ್ದೇವೆ.

ಪ್ರಶ್ನೆ; ನಿಮಗೆ ಈ ಮೊದಲೇ ಪ್ರವಾಸ ಮತ್ತು ಚಾರಣದ ಅನುಭವ ಇತ್ತೇ? ಅಂದರೆ ಬಾಲ್ಯದಿಂದಲೇ?

ಶೋಭಾ; ಇಲ್ಲ. ಆದರೆ ನಮ್ಮ ತಂದೆ ಸರಕಾರಿ ಉದ್ಯೋಗದಲ್ಲಿದ್ದರು. ಹಾಗಾಗಿ ಊರೂರು ಸುತ್ತುವುದು ಅಭ್ಯಾಸವಾಗಿತ್ತು. ಹಾಗಾಗಿ ನನ್ನೂರು ಇಂತಹದೇ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವ ಊರು ನನಗಿಲ್ಲ. ಮದುವೆಯಾದ ಮೇಲೆ ಬೆಂಗಳೂರೇ ಪರ್ಮನೆಂಟ್ ಊರಾಯ್ತು. ಯಾಕೆಂದರೆ ನನ್ನ ಪತಿ ಬೆಂಗಳೂರಿನ BHEL ನಲ್ಲಿ ಉದ್ಯೋದಲ್ಲಿದ್ದರು. ಹಾಗಾಗಿ ಕಛೇರಿ ಮತ್ತು ಮನೆ ಇವೆರಡೇ ನನ್ನ ಕಾರ್ಯಕ್ಷೇತ್ರವಾಯ್ತು. ಪ್ರವಾಸದ ಬಗ್ಗೆ ಕನಸು ಕೂಡಾ ಕಂಡಿರಲಿಲ್ಲ.

ಪ್ರಶ್ನೆ;  ಯಾವಾಗ ನಿಮ್ಮನ್ನು ಹಿಮಾಲಯ ಸೆಳೆಯಿತು?

ಶೋಭಾ; ನಾನು BSNL ನಲ್ಲಿ ಕೆಲಸ ಮಾಡುತ್ತಿದ್ದೆ.  ೨೦೦೨ರ ಜುಲೈ ನಲ್ಲಿ ಅನಿರೀಕ್ಷಿತವಾಗಿ ಪತಿಯನ್ನು ಕಳೆದುಕೊಂಡೆ. ಅದೇ ವರ್ಷ ನನ್ನ ಪರಿಚಯಸ್ಥರೊಬ್ಬರು ಅಮರನಾಥ ಯಾತ್ರೆಯನ್ನು ಕಂಡಕ್ಟ್ ಮಾಡಿದ್ದರು. ನಾನೂ ಹೊರಟುಬಿಟ್ಟೆ. ಆಮೇಲೆ ಸತತ ನಾಲ್ಕೈದು ವರ್ಷ ಯಾತ್ರೆ ಕೈಗೊಂಡೆ. ಆಮೇಲೆ ಟ್ರಾವಲ್ಸ್ ಜೊತೆ ಹೋಗೋದನ್ನು ಬಿಟ್ಟುಬಿಟ್ಟೆ. ಹಿಮಾಲಯದ ವಿವಿಧ ಗರಿಸ್ರುಂಗಗಳನ್ನು ಸುತ್ತುವ ಸಣ್ಣ ಟೀಮ್ ಅನ್ನು ನಾವೇ ಕಟ್ಟಿಕೊಂಡೆವು. ಈಗಾ ನಾವು ನಾವೇ ಗೋಗಲ್ ನಲ್ಲಿ ಹುಡುಕಿಕೊಂಡು ಪ್ರವಾಸ ಹೊರಟುಬಿಡುತ್ತೇವೆ.

ಪ್ರಶ್ನೆ; ನೀವು ಹತ್ತಿಳಿದ ಜಾಗಗಳಲ್ಲಿ ಕೆಲವನ್ನು ಹೆಸರಿಸಬಹುದೇ?

ಶೋಭಾ; ಜಮ್ಮು ಕಾಶ್ಮೀರದಿಂದ ಆರಂಭವಾಗಿ ಅರುಣಾಚಲಪ್ರದೇಶ-ಸಿಕ್ಕಿಂ ತನಕ ಸುಮಾರು ಎರಡೂವರೆ ಸಾವಿರ ಕಿ.ಮೀ ಉದ್ದದ ಹಿಮಾಲಯ ನಮ್ಮದು. ಅದರ ಉದ್ದಕ್ಕೂ ನಾವು ಓಡಾಡಿದ್ದೇವೆ. ಈ ಬಾಗದಲ್ಲಿ ಬರುವ ಪಂಚಕೇದಾರಗಳು, ಪಂಚಕೈಲಾಸಗಳು, ಪಂಚ ಬದರಿಗಳು ಗಂಗೋತ್ರಿ, ಯಮುನೋತ್ರಿ, ಮಾನಸ ಸರೋವರ, ಸತೋಪಂಥ್, ಆದಿ ಕೈಲಾಸ, ನೇಪಾಳ.. ಹೀಗೆ ಪಟ್ಟಿ ದೊಡ್ಡದಿದೆ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ಚಾರಣಿಗರ ಸ್ವರ್ಗ. ಇಲ್ಲಿ ನಿಮ್ಮ ಮೈಯ್ಯಲ್ಲಿ ಕಸುವು ಇದ್ದಷ್ಟು ಕಾಲ ಸುತ್ತಾಡಲು ಜಾಗಗಳಿವೆ.

ಪ್ರಶ್ನೆ; ನಿಮ್ಮ ಕುಟುಂಬ?

ಶೋಭಾ; ನನಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ಇಬ್ಬರೂ ಸಾಪ್ಟ್ವೇರ್ ಇಂಜಿನಿಯರ್ಸ್. ಅವರಿಗೂ ಪ್ರವಾಸದ ಹುಚ್ಚಿದೆ. ಹಾಗಾಗಿ ವಿದೇಶಿ ಪ್ರವಾಸಗಳಲ್ಲಿ ಮಗಳು ನನ್ನ ಜತೆಗೂಡುತ್ತಾಳೆ. ನನ್ನ ಗಂಡನ ಊರು ಉತ್ತರಕನ್ನಡ ಜಿಲ್ಲೆಯ ಕುಮುಟಾ ಆಗಿದ್ದರೂ ಅಲ್ಲಿಗೆ ಹೋಗಿ ಬಂದು ಹೆಚ್ಚು ಬಳಕೆಯಿಲ್ಲ.

ಪ್ರಶ್ನೆ; ಇಷ್ಟೆಲ್ಲಾ ಪ್ರವಾಸ ಹೋಗುತ್ತೀರಲ್ಲಾ...ಅದು ನಿಮಗೇನು ಕೊಡುತ್ತೆ?

ಶೋಭಾ; ಇದಕ್ಕೆ ಉತ್ತರಕೊಡುವುದು ಕಷ್ಟ. ನಮ್ಮ ಅನುಭವದ ವಿಸ್ತಾರತೆಗಾಗಿಕೋಶ ಓದು ದೇಶ ಸುತ್ತು’ ಅನ್ನು ಗಾದೆಯಿದೆಯೇ ಇದೆಯಲ್ಲಾ.  ಆಯಾಯ ಊರಿನ ಜತೆ ತಳುಕು ಹಾಕಿಕೊಂಡಿರುವ ಇತಿಹಾಸ, ಪುರಾಣಗಳು, ಅಲ್ಲಿಯ ಜನರ ಆಚಾರ-ವಿಚಾರ, ಸಂಸ್ಕ್ರುತಿ, ಇವುಗಳನ್ನೆಲ್ಲಾ ತಿಳಿದುಕೊಂಡಾಗ ನಮ್ಮ ಸಂಸ್ಕ್ರುತಿಯ ಬಗ್ಗೆ ಹೆಮ್ಮೆ ಅನ್ನಿಸುತ್ತೆ. ಪೇಪರುಗಳಲ್ಲಿ, ಟೀವಿಯಲ್ಲಿ ಆ ಊರಿನ, ರಾಜ್ಯದ ಬಗ್ಗೆ ಸುದ್ದಿ ಬಂದಾಗಲೆಲ್ಲಾ ಅಲ್ಲೆಲ್ಲಾ ನವು ಓಡಾಡಿದ್ದೇವೆ. ಅವರೆಲ್ಲ್ಲಾ ನಮ್ಮವರು ಎಂಬ ಏಕತಾ ಭಾವಮೂಡುತ್ತೆ.

ಪ್ರಶ್ನೆ; ಈ ವಯಸ್ಸಲ್ಲೂ ಇಷ್ಟೇಲ್ಲಾ ಓಡಾಡುತ್ತಿರಲ್ಲಾ ನಿಮಗೆ ದಣಿವಾಗುವುದೆಲ್ಲವೇ? ನಿಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಂಡಿದ್ದೀರಿ.

ಶೋಭಾ; ವಯಸ್ಸಾಗುವುದು ದೇಹಕ್ಕೆ; ಮನಸ್ಸಿಗಲ್ಲಾ. ನಾನು ಈ ಪರ್ವತವನ್ನು ಹತ್ತಬಲ್ಲೆ ಅಂತ ಸಂಕಲ್ಪ ಮಾಡಿದರೆ ನೀವು ಹತ್ತಿಯೇ ಹತ್ತುತ್ತೀರಿ,,ನಿಮ್ಮ ಮನಸ್ಸು ನಿಮ್ಮ ದೇಹವನ್ನು ಹೊತ್ತುಯ್ಯುತ್ತದೆ, ಅಲ್ಲದೆ ಯೋಗ, ಧ್ಯಾನ, ಮುಂಜಾವಿನ ನಡಿಗೆ ನೀವು ಸದಾ ಫಿಟ್ ಆಗಿರಲು ಸಹಾಯ ಮಾಡುತ್ತದೆ.

ಪ್ರಶ್ನೆ;ಮುಂದಿನ ನಿಮ್ಮ ಪ್ರವಾಸ ಎಲ್ಲಿಗೆ?

ಶೋಭಾ; ೨೦೧೩ರ ಹಿಮಾಲಯದ ಸುನಾಮಿಗೆ ಕೇದಾರನಾಥ ಪರಿಸರ ನಿರ್ನಾಮವಾಯ್ತಲ್ಲಾ..ಮಂದಾಕಿನಿಯ ಪ್ರವಾಹಕ್ಕೆ ಕಾರಣವಾದ ಕಾಂತಿ ಸರೋವರಕ್ಕೆ. ಅದನ್ನು ಗಾಂಧಿ ಸರೋವರ ಎಂದೂ ಕರೆಯಲಾಗುತ್ತದೆ. ಇದು ಕೇದಾರನಾಥದಿಂದ ಇನ್ನೂ ಮುಂದಕ್ಕೆ ಎಂಟು ಕಿ.ಮೀ ದೂರದಲ್ಲಿದೆ. ಅಲ್ಲಿಗೆ ಹೋಗಬೇಕೆಂಬ ಮಹಾದಾಸೆಯಿದೆ. ಆದರೆ ತುಂಬಾ ಕಠಿಣವಾದ ಚಾರಣ. ಅದಕ್ಕಾಗಿ ನಾವು ಮೈಮನಸುಗಳನ್ನು ಸಿದ್ಧಗೊಳಿಸಿಕೊಳ್ಳಬೇಕಾಗಿದೆ
[ಕನೆಕ್ಟ್ ಇಂಡಿಯಾದ ’ಅಥಿತಿ’ ಅಂಕಣಕ್ಕಾಗಿ ನಡೆಸಿದ ಸಂದರ್ಶನವಿದು.
ಅದರ ಲಿಂಕ್ ಇಲ್ಲಿದೆ.
http://connectkannada.com/2016/05/21/%E0%B2%B8%E0%B2%82%E0%B2%95%E0%B2%B2%E0%B3%8D%E0%B2%AA-%E0%B2%B6%E0%B2%95%E0%B3%8D%E0%B2%A4%E0%B2%BF%E0%B2%AF-%E0%B2%9C%E0%B3%8A%E0%B2%A4%E0%B3%86%E0%B2%97%E0%B3%86-%E0%B2%AE%E0%B2%BE%E0%B2%A4/ ]

.

Sunday, May 22, 2016

ಹಕ್ಕಿಜೋಡಿಗಳ ನಡುವೆ ಒಂಟಿ ಹಕ್ಕಿ.


ಹಿಮಮಣಿಗಳಂದದಲಿ......
ಮುನಿಸಿಕೊಂಡಿರಬಹುದೇ?



 ಇಳಿಸಂಜೆ. ಬಾಗಿಲ ಚೌಕಟ್ಟಿಗೊರಗಿ ಪಾರಿಜಾತ ಮರವನ್ನು ದಿಟ್ಟಿಸುತ್ತಿದ್ದೆ. ಸೂರ್ಯ ಮರೆಯಾಗಿ ಘಳಿಗೆ ಕಳೆದಿತ್ತು. ಪಾರಿಜಾತ ಮೊಗ್ಗು ಬಹು ಮೆಲ್ಲನೆ ಹವಳದ ದಂಟಿನೊಳಗಿನಿಂದ ತನ್ನ ಮುಖವನ್ನು ಹೊರಚಾಚುತ್ತಿತ್ತು. ಅದರ ಸುವಾಸನೆಗೆ ಹಾಗೆಯೇ ಕಣ್ಮುಚ್ಚಿದ್ದೆ. ನನ್ನ ಏಕಾಗ್ರತೆಯನ್ನು ಭಂಗ ಮಾಡಿದ್ದು, ಮರದ ಮೇಲಿನ ಪುಟ್ಟ ಜೋಡಿ ಹಕ್ಕಿಗಳು. ಅವು ಕಿಚ..ಪಿಚ ಎನ್ನುತ್ತಾ ಗೆಲ್ಲಿನಿಂದ ಗೆಲ್ಲಿಗೆ ಹಾರುತ್ತಿದ್ದವು. ಬಲು ಮುದ್ದಾದ ಅವುಗಳನ್ನು ಕ್ಯಾಮರಾದಲ್ಲಿ ಸೆರೆಯಾಗಿಸೋಣವೆಂದುಕೊಂಡು ಒಳಗೆ ಓಡಿ ಹೋಗಿ ಕ್ಯಾಮರಾ ತಂದು ಪೋಕಸ್ ಮಾಡತೊಡಗಿದೆ. ಅವು ಎಟ್ಟಿ ರಟ್ಟಿದಂತೆ [ಅರ್ಥವಾಗಲಿಲಿಲ್ವಾ..ಸಿಗಡಿ ಮೀನು ಚಲಿಸಿದಂತೆ] ರಟ್ಟುತ್ತಿದ್ದವೇ ಹೊರತು ಕ್ಯಾಮರಾ ಕಣ್ಣಿಗೆ ಬೀಳಲೇ ಇಲ್ಲ.

ವಿಷಣ್ಣ ಮನಸ್ಸಿನಿಂದ ಒಳಬಂದೆ. ಆದರೆ ಅವುಗಳ ಕಿಚಿಗುಟ್ಟುವಿಕೆಗೆ ಮನಸೋತಿತ್ತು. ಹಾಗಾಗಿ ಆಗಾಗ ಬಂದು ಅವುಗಳೇನು ಮಾಡುತ್ತಿವೆ ಎಂದು ನೋಡುತ್ತಲಿದ್ದೆ. ಕತ್ತಲಾವರಿಸುತ್ತಿತ್ತು. ಜೋಡಿ ಹಕ್ಕಿಯಲ್ಲಿ ಒಂದು ಹಕ್ಕಿ ನಮ್ಮ ಮನೆಯ ಕಿಟಿಕಿಯೆಡೆಗೆ ಬಾಗಿದ ಗೆಲ್ಲೊಂದರಲ್ಲಿ ಹಾರಿ ಕುಳಿತಿತು. ಮರದಲ್ಲಿ ಎಲ್ಲಿಯೋ ಕಿಚಪಚ ಮಾಡುತ್ತಿದ್ದ ಇನ್ನೊಂದು ಹಕ್ಕಿಯೂ ಸ್ವಲ್ಪ ಹೊತ್ತಿನಲ್ಲಿ ಅದರ ಪಕ್ಕದಲ್ಲಿ ಬಂದು ಕೂತಿತು. ಪಿಳಿ ಪಿಳಿ ಕಣ್ಣು ಬಿಡುತ್ತಾ ಕುಳಿತ ಈ ಜೋಡಿ ನನ್ನ ಕ್ಯಾಮರಾದಲ್ಲಿ ಸೆರೆಯಾಗುವುದು ಖಂಡಿತಾ ಅನ್ನುತ್ತಾ ಮತ್ತೆ ಕ್ಯಾಮರಾ ಕೈಗೆತ್ತಿಕೊಂಡೆ. ಅವು ನನ್ನ ಗಮನಿಸಿರಬೇಕು., ಮತ್ತೆ ಹಾರಿ ಹೋಗಿ ಮರದಲ್ಲಿ ಮರೆಯಾದವು.

ಜನುಮದ ಜೋಡಿ.
ಸುತ್ತಮುತ್ತ ಸಂಪೂರ್ಣ ಕತ್ತಲಾವರಿಸಿತು. ನಾನೀ ಹಕ್ಕಿಗಳನ್ನು ಮರೆತುಬಿಟ್ಟೆ. ಆದರೆ ಮಲಗುವ ಟೈಮ್ ನಲ್ಲಿ ಬಂದು ಪಾರಿಜಾತ ಗೆಲ್ಲಿನತ್ತ ನೋಡಿದೆ.ನಮ್ಮ ಮನೆಯ ಮುಂಬಾಗಿಲಿನ ಬೆಳಕಿನಲ್ಲಿ ಆ ಪುಟ್ಟ ಹಕ್ಕಿಗಳು ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿರುವುದು ಕಂಡಿತು. ಕ್ಯಾಮರಾ ತಂದು ಕ್ಲಿಕ್ ಮಾಡಿದೆ. ಪ್ಲಾಶ್ ಬೆಳಕು ಕಣ್ಣು ಕೋರೈಸಿತು. ಆ ಕ್ಷಣಕ್ಕೆ ತಪ್ಪು ಮಾಡಿದೆ ಅನ್ನಿಸಿತು. ಆದರೆ ಹಕ್ಕಿಗಳು ಮಿಸುಕಾಡಿರಲಿಲ್ಲ.
 ಈ ಅಪರಾಧಿಭಾವದಿಂದಲೇ ಪೇಸ್ಬುಕ್ ಗೆ ಬಂದೆ. ಈ ಘಟನೆಯನ್ನು ನನ್ನ ಸ್ಟೇಟಸ್ಸಾಗಿಸಿ, ನಾಳೆ ಈ ಹಕ್ಕಿಗಳು ಮತ್ತೆ ಬರಬಹುದೇ? ಎಂಬ ಪ್ರಶ್ನೆಯನ್ನು ನನ್ನ ಪ್ರೆಂಡ್ಸ್ ಮುಂದಿಟ್ಟೆ. ಅವರೆಲ್ಲಾ ಬರುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಆದ್ರೆ ಅವು ಮರುದಿನ ಬಂದು ನನ್ನನ್ನು ಅಪರಾಧಿಭಾವದಿಂದ ಮುಕ್ತ ಗೊಳಿಸಿದವು.

ಪೇಸ್ಬುಕ್ ಕಾರಣದಿಂದಾಗಿ ಆ ದಿನದ ನೆನಪು ನನಗಿದೆ. ಅದು ಕಳೆದ ವರ್ಷ ಸೆಪ್ಟಂಬರ ೨೯.
ಅಂದಿನಿಂದ ಈ ಹಕ್ಕಿಜೋಡಿಗಳು ನನ್ನ ಸಂಜೆಯ ಸಂಗಾತಿಗಳು. ಅವು ಮಳೆಯಲ್ಲಿ ನೆಂದಾಗ ಅವುಗಳಿಗಾಗಿ ಸೂರೊಂದು ಇಲ್ಲವೆಂದು ವ್ಯಥೆಪಡುತ್ತೇನೆ. ಸೂರು ಅಂದಾಗ ನೆನಪಾಯ್ತು ನೋಡಿ. ಒಂದು ರಾತ್ರಿ ಜೋರಾಗಿ ಮಳೆ ಬರುತ್ತಿತ್ತು. ಆಗ ನಾನು ಗಮನಿಸಿದೆ; ಆ ಜೋಡಿ ಒಂದು ದೊಡ್ಡ ಪಾರಿಜಾತದ ಎಲೆಯ ಅಡಿಯಲ್ಲಿ ಮುದುಡಿ ಕುಳಿತಿವೆ. ತಲೆಯನು ದೇಹದೊಳಗೆ ಹುದುಗಿಸಿಕೊಂಡ ಕಾರಣ ಒಂದು ಬಣ್ಣದ ಹತ್ತಿಯ ಉಂಡೆಯಂತೆ ಕಾಣಿಸುತ್ತಿವೆ. ಅವುಗಳ ಮೇಲೆ ಕುಳಿರುವ ನೀರ ಹನಿಗಳು ಲೈಟ್ ಬೆಳಕಿನಲ್ಲಿ ವಜ್ರದಂತೆ ಹೊಳೆಯುತ್ತಿವೆ. ಆಮೇಲಿನ ರಾತ್ರಿಗಳಲ್ಲಿ ನಾನು ಗಮನಿಸಿದಂತೆ ಅವು ತಪ್ಪದೆ ಅದೇ ಎಲೆಯ ಕೆಳಗೆ ರಾತ್ರಿ ಕಳೆಯುತ್ತಿದ್ದವು. 

ಬರುವೆಯೋ... ಬಾರೆಯೋ..!

ಹೀಗಿರುವಾಗ ಶರತ್ಕಾಲ ಬಂತು. ಹಸಿರೆಲೆಗಳು ಹಳದಿಯಾಗಿ ಎಲೆಯುದುರುವ ಕಾಲ. ಆ ಹಕ್ಕಿಗಳಿಗೆ ಮಾಡಿನಂತೆ ರಕ್ಷಾಕವಚವಾಗಿದ್ದ ಆ ಎಲೆಯೂ ಹಳದಿ ಬಣ್ಣಕ್ಕೆ ತಿರುಗತೊಡಗಿತು. ಹಕ್ಕಿಗಳು ಮುಂದೇನು ಮಾಡುತ್ತವೆ ಎಂಬ ಕುತೂಹಲ ನನಗೆ. ಒಂದು ದಿನ ನೋಡುತ್ತೇನೆ; ಆ ಹಕ್ಕಿಗಳು ಆ ಎಲೆಮಾಡನ್ನು ಬಿಟ್ಟು ಅದೇ ಗೆಲ್ಲಿನ ಇನ್ನೊಂದು ಎಲೆಯ ಮಾಡಿನಡಿಯಲ್ಲಿ ಕೂತಿವೆ. ನಂಗೆ ಸಮಾಧಾನವಾಯ್ತು, ಅವು ಇನ್ನೂ ನಮ್ಮ ಕಿಟಕಿಗೆ ಹತ್ತಿರವಾದವು. ಅವು ಜಾಗ ಬದಲಿಸಿದ ಮೂರ್ನಾಲ್ಕು ದಿನಗಳಲ್ಲೇ ಆ ಹಣ್ಣೆಲೆ ತೊಟ್ಟು ಕಳಚಿಕೊಂಡು ಬಿದ್ದು ಹೋಯ್ತು!

ಸವಿಗನಸೊಂದು ಕಾಡುತ್ತಿದೆ...


  
ನಾನು ಮನೆಯಲ್ಲಿದ್ದಾಗಲೆಲ್ಲಾ ಅವುಗಳ ಕಲರವಕ್ಕೆ ಕಿವಿ ತೆರೆದೇ ಇಟ್ಟಿರುತ್ತೇನೆ. ರಾತ್ರಿ ಇವುಗಳನ್ನು ನೋಡಿಯೇ ನಾನು ನಿದ್ರೆಗೆ ಜಾರುವುದು. ಬೆಳಿಗ್ಗೆ ಕರೆಕ್ಟಾಗಿ ಐದು ಘಂಟೆಗೆ ಚಿಲಿಪಿಲಿಗುಟ್ಟುತ್ತಾ ಎದ್ದು ಬಿಡುತ್ತವೆ, ನನ್ನನ್ನೂ ಎಬ್ಬಿಸುತ್ತವೆ. ಎದ್ದೊಡನೆ ಮುಂಬಾಗಿಲು ತೆರೆದು ಅವುಗಳು ಹಾರಿ ಹೋಗಿರುವುದುದನ್ನು ಖಾತ್ರಿ ಮಾಡಿಕೊಂಡು ಹಿಂಬಾಗಿಲು ತೆರೆದು ಅಲ್ಲಿರುವ ದೊಡ್ಡ ಮುತ್ತುಗದ ಮರದಲ್ಲಿ ಗೂಡು ಕಟ್ಟಿ ಸಂಸಾರ ಮಾಡಿಕೊಂಡಿರುವ ಹದ್ದುಗಳತ್ತ ನೋಟ ಹರಿಸುತ್ತೇನೆ.

ಅದೊಂದು ಒಲವಿನ ಸಂಸಾರ. ಸುಮಾರು ಆರು ತಿಂಗಳ ಕಾಲ ಆ ಜೋಡಿ ಒಂದೊಂದೇ ಕಡ್ಡಿಗಳನ್ನು ಕಚ್ಚಿ ತಂದು ಗೂಡು ಕಟ್ಟಿಕೊಳ್ಳುವುತ್ತಿರುವುದನ್ನು ನಾನು ನೋಡಿದ್ದೇನೆ. ಅವು ಮೊಟ್ಟೆಯಿಟ್ಟು ಮರಿ ಮಾಡುವುದನ್ನು ಕಾಯುತ್ತಿದ್ದ ನನಗೆ ಅವುಗಳ ಲಕ್ಷಣಗಳೇ ಕಾಣಿಸುತ್ತಿರಲಿಲ್ಲ. ಬದಲಾಗಿ ಅವುಗಳ ಭರ್ಜರಿ ಬಾಡೂಟದ ದರ್ಶನವಾಗುತ್ತಿತ್ತು.. ಹೀಗಿರುವಾಗ ಒಂದು ದಿನ ಅಕಸ್ಮತ್ತಾಗಿ ಗೂಡಿನಲ್ಲಿ ಮೂರು ಮರಿಗಳನ್ನು ಕಂಡೆ. ಅವೇನೂ ಇತರ ಹಕ್ಕಿಗಳಂತೆ ನನ್ನ ಕಣ್ಣಿಗೆ ಸುಂದರವಾಗಿಯೇನೂ ಕಂಡಿಲ್ಲ.ಮೈಮೇಲೆ ಅಲ್ಲಲ್ಲಿ ಬೆಳ್ಳಗಿನ ಕೂದಲುಗಳಿದ್ದ ಪ್ರೇತದ ಮರಿಗಳಂತೆ ಕಾಣಿಸಿದವು.

ನೀನೆನಗೆ ನಾನಿನಗೆ ಜೇನಾಗುವಾ...

ನೀವು ಹದ್ದುಗಳ ಬಗ್ಗೆ ಏನೇನೋ ಕೇಳಿರಬಹುದು. ಆದರೆ ಅವುಗಳು ತಮ್ಮ ಮರಿಗಳನ್ನು ಸಂರಕ್ಷಿಸುವ ವಿಧಾನವನ್ನು ಕಂಡಿದ್ದರೆ ಖಂಡಿತವಾಗಿಯೂ ಆಶ್ಚರ್ಯಚಕಿತರಾಗಿರಬಹುದು.  ತಾಯಿ ತಂದೆ ಇಬ್ಬರೂ ತಮ್ಮ ಮರಿಗಳಿಗೆ ಕೆಂಪಾದ ತಾಜಾ ಮಾಂಸದ ತುಣುಕನ್ನು ಸರದಿ ಮೇಲೆ ತಿನ್ನಿಸುತ್ತಿರುವುದನ್ನು ನಾನು ಬೆರಗಿನಿಂದ ನೋಡಿದ್ದೇನೆ ಎಂಥ ಪ್ರೀತಿಮಳೆಯದು! ಮಳೆ ಅಂದಾಗ ನೆನಪಾಯ್ತು ನೋಡಿ; ಒಂದು ದಿನ ಬೆಂಗಳೂರಿನಲ್ಲಿ ಧಾರಕಾರ ಮಳೆ ಸುರಿಯಿತು. ಆ ತಾಯಿ ತನ್ನ ಮರಿಗಳನ್ನು ರೆಕ್ಕೆಯಡಿ ಹುದುಗಿಸಿಕೊಂಡು ಸಂಜೆಯಿಂದ ಬೆಳಗಿನ ತನಕ ಅಲ್ಲಾಡದೆ ತೊಯ್ಯಿಸಿಕೊಳ್ಳುತ್ತಾ ಕುಳಿತಿದ್ದಾಳೆಂದರೆ ಅದೆಂಥ ಮಮತೆ ಇದ್ದೀತು. ನಾವು ಮನುಷ್ಯರು ತಾಯಿಯನ್ನು ದೈವತ್ವಕ್ಕೇರಿಸಿ ಹೊಗಳುತ್ತೇವೆ. ಆದರೆ ಎಲ್ಲಾ ತಾಯಾಂದಿರು ತಮ್ಮ ಸಂತಾನವನ್ನು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರಕ್ಷಿಸುತ್ತವೆ. ಆ ಮರಿಗಳು ಒಂದು ಕೊಂಬೆಯಿಂದ ಇನ್ನೊಂದು ಕೊಂಬೆಗೆ ಮೆಲ್ಲನೆ ನಡೆಯುತ್ತಾ, ಮಾರುದ್ದದ ರೆಕ್ಕೆಗಳನ್ನು ಬಡಿಯುತ್ತಾ ಹಾರುವುದನ್ನು ಕಲಿಯುತ್ತದ್ದು, ಬಿರು ಬೇಸಿಗೆಯಲ್ಲಿ ಮರದ ಟೊಂಗೆಗಳಲ್ಲಿ ಸರ್ಕಸ್ ಮಾಡುತ್ತಾ ಹಾರಾಟದ ತಾಲೀಮ್ ಅನ್ನು ನಡೆಸುತ್ತಿದ್ದುದು...ಎಲ್ಲವೂ ನನಗೆ ಸೋಜಿಗ. ಈ ರಣಬಿಸಿಲಿನಲ್ಲಿ ಅವುಗಳಿಗೆ ನೀರಡಿಕೆಯಾಗುತ್ತಿರಲಿಲ್ಲವೇ? ಇಲ್ಲಾಂತ ಕಾಣುತ್ತೆ, ಅವುಗಳ ದೇಹ ಪ್ರಕ್ರುತಿಯೇ ಹಾಗಿದ್ದಿರಬಹುದು!

ಅಮ್ಮಾ...ಅಮ್ಮಾ...
ಮೊನ್ನೆ ಜಡಿಮಳೆ ಬಂದಾಗ ಮರದತ್ತ ನೋಡಿದೆ. ಹಿಂದಿನ ವಾರ ಬಂದ ಮಳೆಗೆ ಒಣಗಿದ ಚಿಗುರಿಕೊಂಡಿದ್ದ ಮರ ಈಗ ಹಸಿರು ಹೊದ್ದು ನಿಂತಿತ್ತು. ಆದರೆ ಮರಿಗಳು ಕಾಣಿಸಲಿಲ್ಲ. ಈಗಲೂ ಕಾಣಿಸುತ್ತಿಲ್ಲ. ದಿನಾ ಸರತಿಯ ಮೇಲೆ ಮರಿಗಳನ್ನು ನೋಡಿಕೊಳ್ಳುತ್ತಿದ್ದ ಹದ್ದುಗಳು ಮಕ್ಕಳು ದೊಡ್ಡವರಾಗುತ್ತಿದ್ದಂತೆ ಗೂಡಲ್ಲಿರುವ ಸಮಯವನ್ನು ಕಡಿತಗೊಳಿಸುತ್ತಿದ್ದವು. ಈಗ ಅವುಗಳೂ ಕಾಣಿಸುತ್ತಿಲ್ಲ. ಮತ್ತೆ ಮರಿಯಿಡುವ ವೇಳೆಗೆ ಬರಬಹುದು.

ನಾನು ಮಾರ್ಚ್ ತಿಂಗಳಲ್ಲಿ ಈಶಾನ್ಯ ರಾಜ್ಯಗಳಿಗೆ ಪ್ರವಾಸ ಹೋಗಿದ್ದೆ. ಅಗೆಲ್ಲಾ ಪಾರಿಜಾತದ ಜೋಡಿ ಹಕ್ಕಿಗಳು ತಪ್ಪದೆ ಬರುತ್ತಿದ್ದು ಮರದಲ್ಲಿ ಇರುಳನ್ನು ಕಳೆಯುತ್ತಿದ್ದುವಂತೆ. ಅವುಗಳಿಗೆ ನಾನು ಕಾಣೆಯಾಗಿದ್ದುದರ ಬಗ್ಗೆ ದಿಗಿಲಾಗಿರಬೇಕು. ಯಾಕೆ ಇದನ್ನು ಹೇಳುತ್ತಿದ್ದೇನೆಂದರೆ ನಾನು ಬೆಂಗಳೂರಿಗೆ ಬಂದ ದಿನ ಸಂಜೆ ನನ್ನನ್ನು ಪಿಳಿ ಪಿಳಿ ನೋಡುತ್ತಿದ್ದವು. ಮತ್ತೆ ಒಂದೆರಡು ದಿನಗಳಲ್ಲಿ ಕಾಣೆಯಾದವು. ನಾನು ಸಂಜೆ ತಲೆಬಾಗಿಲಲ್ಲಿ ನಿಂತು ಪಾರಿಜಾತದ ಮರದಲ್ಲಿ ಅವುಗಳಿಗಾಗಿ ಹುಡುಕಾಡುತ್ತಿದ್ದೆ. ಕಾಣಿಸಲೇ ಇಲ್ಲ.

ಮಲಗು ಮಲಗು ಚಾರು ಲತೆಯೇ...ನಿನಗೂ ನೆರಳಿದೆ!
ಎರಡ್ಮೂರು ದಿನ ಕಳೆದಿರಬಹುದು, ಒಂದು ದಿನ ಬೆಳಿಗ್ಗೆ ಪಾರಿಜಾತ ಮರದಿಂದ ಕಿಚಪಿಚ ಸದ್ದು ಕೇಳಿಸಿತು. ನೋಡಿದರೆ ಅದೇ ಹಕ್ಕಿಗಳು ಗೆಲ್ಲಿನಿಂದ ಗೆಲ್ಲಿಗೆ ನೆಗೆಯುತ್ತಿವೆ [ಅದೇ ಹಕ್ಕಿಗಳಾ ಅಥವಾ ಆ ಜಾತೀಯ ಬೇರೆ ಹಕ್ಕಿಗಳಾ? ಗೊತ್ತಿಲ್ಲ]. ಕಳೆದುಕೊಂಡ ನಿಧಿ ಸಿಕ್ಕಷ್ಟೇ ಖುಷಿಯಾಯ್ತು. ಆದ್ರೆ ಆ ಖುಷಿ ಸಂಜೆ ಮರುಕಳಿಸಲಿಲ್ಲ. ಅವು ತಮ್ಮ ಮಾಮೂಲಿನ ಜಾಗದಲ್ಲಿರಲಿಲ್ಲ.ಅದು ಖಾಲಿಯಿತ್ತು. ಮರದಲೆಲ್ಲಾ ಕಣ್ಣಾಡಿಸಿದೆ ಕಾಣಲಿಲ್ಲ. ಈಗ ಎರಡ್ಮೂರು ದಿನದಿಂದ ಅಲ್ಲಿ ಒಂಟಿ ಹಕ್ಕಿಯೊಂದು ಕುಳಿತುಕೊಳ್ಳುತ್ತಲಿದೆ. ಅದರ ಜೊತೆ ಎಲ್ಲಿ ಹೋಗಿದೆಯೋ ಏನೋ! ಹಕ್ಕಿಗಳಲ್ಲಿ ತನ್ನ ಸಂಗಾತಿ ಜೀವಂತವಿರುವಾಗಲೇ ಇನ್ನೊಂದು ಹಕ್ಕಿಯನ್ನು ಹುಡುಕಿಕೊಳ್ಳುವುದಿಲ್ಲ ಎಂದು ಓದಿದ್ದೇನೆ. ಅಂದರೆ ಅದು ಸತ್ತು ಹೋಗಿರಬಹುದೇ? ಗೊತ್ತಿಲ್ಲ.

ನೀನೆಲ್ಲಿ ನಡೆದೆ ದೂರಾ....
ಯಾಕೋ ಏನೋ, ಒಮ್ಮೆ ಜತೆಯಾಗಿದ್ದು ಆಮೇಲೆ ಒಂಟಿಯಾದ ಯಾವ ಜೀವಿಯನ್ನು ಕಂಡರೂ ನನಗೆ ನೋವಾಗುತ್ತದೆ, ಮತ್ತು ಅದು ನಾನೇ ಆಗಿಬಿಡುತ್ತೇನೆ.

http://kannada.connectkannada.com/. ಅಂರ್ಜಾಲ ತಾಣದಲ್ಲಿ ನನ್ನ ಕಾಲಂ’ಚಲಿತ ಚಿತ್ತ’ ಆರಂಭವಾಗಿದೆ. ಅದಕ್ಕಾಗಿ ಬರೆದ ಮೊದಲ ಬರಹ]


Thursday, May 12, 2016

ಮತ್ಸ್ಯಗಂಧಿಯ ಪ್ರಲಾಪ.

ಅದೊಂದು ಹೆಂಗಸು. ಅದರ ಪರಿಚಯ ನನಗಿರಲಿಲ್ಲ. ಆದರೆ ಅಲ್ಲಿ ಇಲ್ಲಿ ನೋಡಿ ಗೊತ್ತಿತ್ತು. ಹಾಗಾಗಿ ಎದುರು ಸಿಕ್ಕಾಗ ಒಂದು ನಗುವಿನ ವಿನಿಮಯ ಆಗುತ್ತಿತ್ತು.
ಒಂದು ದಿನ ಅದು ಅದ್ಯಾವುದೋ ಕಾರ್ಯಕ್ರಮಕ್ಕೆ ಪರಊರಿಗೆ ಹೋಗಿ ಬಂತು.
ಅಲ್ಲಿ ಅದೇನಾಯ್ತೋ ಗೊತ್ತಿಲ್ಲ. ಅದರ ವರಸೆಯೇ ಬದಲಾಯ್ತು. ಮೈ ಮೇಲೆ ಭೂತ ಮೆಟ್ಟಿಕೊಂಡವಳವಂತೆ ವಿಚಿತ್ರವಾಗಿ ವರ್ತಿಸಲು ಆರಂಭಿಸಿತು. ಕಂಡ ಕಂಡವರ ಮೇಲೆಲ್ಲ ಹರಿ ಹಾಯಲು ಆರಂಭಿಸಿತು.
ಅದೊಂದು ಊರು. ಅಲ್ಲೊಂದು ಜಾತ್ರೆ ನಡೆಯುತ್ತಿತ್ತು. ಈ ಯಮ್ಮ ಅಲ್ಲಿಗೆ ಎಂಟ್ರಿ ಕೊಟ್ಟಿತು. ಅಲ್ಲಿದ್ದವರನ್ನೆಲ್ಲಾ ತಾನಾಗಿಯೇ ಮಾತಾಡಿಸಲಾರಂಭಿಸಿತು. ಜನ ತಮಗೆ ತಿಳಿದಂತೆ ಅವಳು ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡುತ್ತಿದ್ದರು.. ಮಾತು ಮುಂದುವರಿಸಿದಂತೆಲ್ಲಾ ಆಕೆ ಒಂದು ಜಾತಿಯ ಬಗ್ಗೆ ವಿಶೇಷ ಮುತುವರ್ಜಿಯಿಂದ ಉತ್ಸಾಹದಿಂದ ಮಾತನಾಡುತ್ತಿದ್ದುದು ಅಲ್ಲಿದ್ದವರ ಗಮನಕ್ಕೆ ಬಂತು.. ಪ್ರೇಕ್ಷಕರಲ್ಲಿ ಒಬ್ಬಾಕೆ.’ನೀವು ಯಾವ ಪೈಕಿ ಜನ ? ಎಂದು ಪ್ರಶ್ನಿಸಿದಳು.
ಈಕೆ ನಿಗೂಢವಾಗಿ ನಕ್ಕಳು. ಕೇಳಿದವಳೂ ಅದನ್ನು ತಿಳಿದುಕೊಳ್ಳುವ ಉತ್ಸಾಹ ತೊರಲಿಲ್ಲ. ಕೊನೆಕೊನೆಗೆ ಅವಳಿಗೆ ಜಾತೀಯ ಭೂತ ಮೆಟ್ಟಿಕೊಂಡಿದೆ. ಶ್ರೇಷ್ಠತೆಯ ವ್ಯಸನ ಅಂಟಿಕೊಂಡಿದೆ ಅಂತ ಎಲ್ಲರಿಗೂ ಗೊತ್ತಾಗಿ ಹೋಯ್ತು. ಜನ ತಂತಮ್ಮ ಕೆಲಸ-ಬೊಗಸೆಯಲ್ಲಿ ಮೈ ಮರೆತರು
ಕೆಲದಿನಗಳು ಕಳೆದವು .
ಆ ಗಯ್ಯಾಳಿ ಹೆಂಗಸು ಒಂದು ಮರದಡಿಯಲ್ಲಿ ಕೂತಿದ್ದಳು. ಒಂದಷ್ಟು ಜನ ಅವಳ ಸುತ್ತ ನೆರೆದಿದ್ದರು. ವೇದಿಕೆಯಲ್ಲಿ ಒಬ್ಬಾತ ಗಂಟಲು ಹರಿದುಕೊಳ್ಳುವಂತೆ ಕಿರುಚಿ ಮಾತಾಡುತ್ತಿದ್ದ. ಅವರೆಲ್ಲಾ ಆತ ಹೇಳುವುದನ್ನು ಗಲ್ಲಕ್ಕೆ ಕೈಯಿಟ್ಟು ಕೇಳುತ್ತಿದ್ದರು. ಆತ ಮಾತಿನ ಮಧ್ಯೆ ದೂರದಲ್ಲಿದ್ದ ಅ ಅಲೆಮಾರಿ ಹೆಂಗಸಿನತ್ತ ನೋಡಿದ. ಗಲ್ಲಕ್ಕೆ ಕೈಯ್ಯಿಟ್ಟು ಅವನ ಮಾತುಗಳನ್ನು ಕೇಳುತ್ತಿದ್ದ ಆ ಅಲಿಮಾರಿಯ ಪಕ್ಕ ಒಂದು ಬುಟ್ಟಿಯಿತ್ತು. ಪ್ಲಾಸ್ಟಿಕ್ ಹಾಳೆಯಿಂದ ಅದನ್ನು ಮುಚ್ಚಲಾಗಿತ್ತು, ಅಲೆಮಾರಿ ಹೆಂಗಸನ್ನು ನೋಡಿದ ಗಯ್ಯಾಳಿ ಹೆಂಗಸು ತನ್ನ ಸುತ್ತಮುತ್ತ ಕುಳಿತಿದ್ದ ಪಟಾಲಂಗೆ ಏನೋ ಹೇಳಿದಳು. ಅವರೆಲ್ಲಾ ಅಲೆಮಾರಿ ಹೆಂಗಸನ್ನು ನೋಡಿ ಅಟ್ಟಹಾಸದಿಂದ ನಗಲು ಆರಂಭಿಸಿದರು. ದೂರದಲ್ಲಿದ್ದ ಅವಳಿಗೆ ಇವರೆಲ್ಲಾ ಜೋರಾಗಿ ನಗುತ್ತಿದ್ದಾರೆಂದು ಗೊತ್ತಾಯಿತು. ಆದರೆ ಯಾಕೆ ನಗುತ್ತಿದ್ದರೆಂದು ಅರ್ಥವಾಗಲಿಲ್ಲ.
ಅಲೆಮಾರಿ ಹೆಂಗಸಿಗೆ ಮುಂದಕ್ಕೆ ಹೋಗಲು ಅದೊಂದೇ ದಾರಿಯಿದ್ದುದ್ದು. ಅಲ್ಲಿ ಆ ಪಟಲಾಂ ದಾರಿಗಡ್ಡವಾಗಿ ಕೂತಿತ್ತು. ಹಾಗಾಗಿ ತಲೆಯ ಮೇಲೆ ಸೆರಗು ಹೊದ್ದು ಅದರ ಮೇಲೆ ಬುಟ್ಟಿಯಿಟ್ಟು ಅವರು ಕೂತಿದ್ದ ಮರದಡಿಯ ಕಾಲು ದಾರಿಯತ್ತ ಹೆಜ್ಜೆ ಹಾಕತೊಡಗಿದಳು. ಅಲ್ಲಿದ್ದ ಕೆಲವರು ’ಎಲ್ಲಿಗೆ ಹೊರಟ್ಟಿದ್ದಿಯಾ? ತಲೆಯ ಮೇಲೇನಿದೆ?ಯಾವ ಜಾತಿ ನಿಂದು’ ಎಂದು ಒಬ್ಬಾರದಮೇಲೆ ಒಬ್ಬರು ಪ್ರಶ್ನೆಗಳ ಸುರಿಮಳೆಗೆಯ್ದರು.
ಅವಳು ಅವರನ್ನೆಲ್ಲಾ ಒಮ್ಮೆ ನೋಡಿದಳು. ಯಾವ ಪ್ರಶ್ನೆಗೆ ಮೊದಲು ಉತ್ತರಿಸಬೇಕೇಂದು ಗೊಂದಲಕ್ಕೆ ಬಿದ್ದು ತಲೆಯ ಮೇಲಿನ ಬುಟ್ಟಿ ಸರಿ ಮಾಡಿಕೊಂಡಳು. ಆಗ ಈ ಗಯ್ಯಾಳಿ ಹೆಂಗಸು ತಾನು ನಿಮ್ಮೆಲ್ಲರಿಗಿಂತ ಭಿನ್ನ ಎಂಬಂತೆ ತನ್ನ ಗುಂಪಿನವರತ್ತ ಕುತ್ಸಿತ ನಗುವೊಂದನ್ನು ಬೀರಿ ಸೊಂಟದ ಮೇಲೆ ಕೈಯ್ಯಿಟ್ಟು ’ ಆ ಬುಟ್ಟಿಯಲ್ಲೇನಿದೆ? ತೋರಿಸು’ ಎಂದು ಅಪ್ಪಣೆ ಕೊಟ್ಟಳು.
‘ಅದರಲ್ಲಿ ನನ್ನ ಬದುಕಿದೆ’
’ಓಹೋ..ನಿನ್ನ ಬದುಕು ಬುಟ್ಟಿಯಲ್ಲಿ ಮದುರಿಕೊಂಡು ಮಲಗಿದೆಯಾ?’ ಎನ್ನುತ್ತಾ ಆಕೆ ಗುಂಪಿನೆಡೆಗೆ ’ಹೆಂಗಿದೆ ನನ್ನ ಬಾಣ?’ ಎಂಬಂತೆ ನೋಡಿದಳು. ಅವರು ಅವಳನ್ನು ಉತ್ತೇಜಿಸುವಂತೆ’ ಕುನ್ನಿ’ಎಂದು ಬೆರಳಲೇಡಿಸುತ್ತಾ ಕಿಸಕ್ಕನೆ ನಕ್ಕರು. ಅವಳು ಮತ್ತಷ್ಟು ಎತ್ತರಕ್ಕೇರಿ ಇವಳ ಬುಟ್ಟಿಗೆ ಕೈ ಹಾಕಿದಳು. ಈ ಜಗ್ಗಾಟದಲ್ಲಿ ಅವಳ ಬುಟ್ಟಿಯಲ್ಲಿದ್ದ ಮೀನೆಲ್ಲ ಇವಳ ತಲೆ ಮೇಲೆ ಚೆಲ್ಲಿ ಮೈಯ್ಯನ್ನು ಸವರಿಕೊಂಡು 
ನೆಲ ಸೇರಿ ಹೊರಳಾಡತೊಡಗಿದವು.
ದೂರದಲ್ಲಿ ಎಲ್ಲಿಯೋ ಇದ್ದ ನಾಯಿಗಳು ಬೊಗಳುತ್ತಾ ಇವರಿದ್ದೆಡೆಗೆ ಓಡಿ ಬರುತ್ತಿರುವುದು ಕಣ್ಣು ಕಿವಿಗಳಿಗೆ ನಾಟಿ ಇವಳು ಗಟ್ಟಿಯಾಗಿ ಕಣ್ಮುಚ್ಚಿಕೊಂಡಳು..
ಈಗ ಗಯ್ಯಾಳಿ ಕಂಡ ಕಂಡವರೆಲ್ಲಾ ಹೇಳಿಕೊಂಡು ತಿರುಗುತ್ತಿದ್ದಾಳೆ; ’ಅವಳು ನನ್ನ ತಲೆ ಮೇಲೆ ಮೀನಿನ ಬುಟ್ಟಿ ಎತ್ತಿ ಹಾಕಿದಳು.ಈಗ ಮೈಮೇಲೆಲ್ಲಾ ಮೀನುಗಳು ಓಡಾಡುತ್ತಿವೆ. ಗುಳು ಗುಳು ಎಂದು ಸದ್ದು ಮಾಡುತ್ತಿವೆ. ಬೇಕಾದ್ರೆ ನೀವೇ ಆಲಿಸಿ ನೋಡಿ’ ಅಂತ ತಲೆಯನ್ನು ಓರೆ ಮಾಡಿ ಕಿವಿಗೆ ಅಂಗೈಯನ್ನು ಅರ್ಧ ಮರೆ ಮಾಡಿ ಆಲಿಸುತ್ತಾಳೆ. ನೀವು ಕೂಡಾ ಆಲಿಸಿ ಅಂತ ಅಕ್ಕಪಕ್ಕದವರನ್ನು ಕರೆಯುತ್ತಾಳೆ. 
ಜನ ಹೌದೌದು ಅಂತ ತಲೆಯಾಡಿಸುತ್ತಾ ಅವಳ ಮೈಯ ಮೀನಗಂಧವನ್ನು ಅಸ್ವಾಧಿಸುತ್ತಾರೆ.!