Monday, April 20, 2009

’ಅಕ್ಕ’ನ ನೆರಳಿನ ಮಾಯೆ.


ನಿನ್ನೆ ಅಂದ್ರೆ ಏಪ್ರಿಲ್ ೧೮ರಂದು ವಾರ್ತಾ ಇಲಾಖೆಯ ಸಹಯೋಗದಲ್ಲಿ ಮೇಪ್ಲವರ್ ಮೀಡಿಯಾ ಹೌಸ್ ನವರು ಬೆಂಗಳೂರಿನ ಬಾದಾಮಿ ಹೌಸ್ ನಲ್ಲಿ ಡಾ.ರಾಜಕುಮಾರ್ ಕುರಿತ ಡಾಕ್ಯುಮೆಂಟರಿ ಪ್ರದರ್ಶನ ಏರ್ಪಡಿಸಿದ್ದರು.

ಅದರಲ್ಲಿ ಪಾಲ್ಗೊಳ್ಳಲ್ಲೆಂದು ನಾನು ಹೋಗಿದ್ದೆ. ಆದರೆ ಸ್ವಲ್ಪ ತಡವಾಗಿತ್ತು. ಹಾಗಾಗಿ ನಿಂತುಕೊಳ್ಳಲೂ ಜಾಗ ದೊರೆಯಲಿಲ್ಲ. ಆದರೂ ಔಟ್ ಲುಕ್ ಸಹ ಸಂಪಾದಕರಾದ ಸುಗತ ಶ್ರೀನಿವಾಸರಾಜರ ಭಾಷಣವನ್ನು ಆಲಿಸಿ ಕಲಾಕ್ಷೇತ್ರಕ್ಕೆ ಬಂದುಬಿಟ್ಟೆ.

ಕಲಾಕ್ಷೇತ್ರದಲ್ಲಿ ನಿನ್ನೆ ಬಿ. ಬಸವಲಿಂಗಯ್ಯ ನಿರ್ಧೆಶನದ’ಹೂವು’ ನಾಟಕದ ಪ್ರದರ್ಶನವಿತ್ತು. ಗಿರೀಶ್ ಕಾರ್ನಾಡ್ ಈ ನಾಟಕದ ರಚನೆಕಾರರು. ಮನೆಯಿಂದ ಹೊರಡುವಾಗಲೇ ಅವಕಾಶವಾದರೆ ಅಲ್ಲಿಗೂ ಒಮ್ಮೆ ಇಣುಕಿ ನೋಡಬೇಕೆಂದುಕೊಂಡಿದ್ದೆ. ಆದರೆ ಪೂರ್ತಿ ನಾಟಕವನ್ನು ನೋಡುವ ಅವಕಾಶ ಸಿಕ್ಕಿತ್ತು.

ಹಿಂದೊಮ್ಮೆ ಈ ನಾಟಕದ ಬಗ್ಗೆ ಬಸವಿಂಗಯ್ಯನವರು ನನ್ನಲ್ಲಿ ವಿವರಿಸಿದ್ದರು. ಹಾಗಾಗಿ ಆ ನಾಟಕದ ಬಗ್ಗೆ ನನ್ನಲ್ಲಿ ಒಂದಷ್ಟು ನಿರೀಕ್ಷೆಗಳಿದ್ದವು. ನಾಟಕ ಆ ಮಟ್ಟವನ್ನು ತಲುಪಲಿಲ್ಲ. ಆದರೆ ಪ್ರೇಕ್ಷಕರನ್ನು ಒಂದೂವರೆ ಘಂಟೆಗಳ ಏಕಾಂತದಲ್ಲಿ ಹಿಡಿದಿಟ್ಟಿತ್ತು. ನಾಟಕಕ್ಕಿರುವ ಶಕ್ತಿಗಳಲ್ಲಿ ಇದೂ ಒಂದು. ಅದು ಲೋಕಾಂತದಲ್ಲಿ ಏಕಾಂತವನ್ನು ಸೃಷ್ಟಿಸುತ್ತದೆ. ಏಕಾಂತದಲ್ಲಿ ಲೋಕಾಂತವನ್ನು ಧೇನಿಸುತ್ತದೆ.

ನಾಟಕ ನೋಡುವುದು ನನ್ನ ಪ್ರಿಯ ಹವ್ಯಾಸಗಳಲ್ಲೊಂದು. ಹಲವಾರು ತಿಂಗಳುಗಳಿಂದ ಯಾವ ನಾಟಕಗಳನ್ನೂ ನೋಡಿರಲಿಲ್ಲ. ಆದಕಾರಣ ’ಹೂವು’ವಿನ ಸಂಭಾಷಣೆಯಲ್ಲಿ ನಾನು ಕಳೆದುಹೋದೆ.
ನಾಟಕದಲ್ಲಿ ನಾಲ್ಕು ಪಾತ್ರಗಳಿವೆ।ಅರ್ಚಕನೊಬ್ಬನಿಗೆ ಶಿವಲಿಂಗವೇ ಜಗತ್ತು। ಆತ ಲಿಂಗದೊಡನೆ ಮಾತಾಡಬಲ್ಲ। ಜಗಳವಾಡಬಲ್ಲ। ಸುಖದುಃಖಗಳನ್ನು ಹಂಚಿಕೊಳ್ಳಬಲ್ಲ। ಅದವನ ಆತ್ಮಸಂಗಾತಿ। ಇಂಥ ಜಿತೇಂದ್ರಿಯ ವೇಶ್ಯೆಯೊಬ್ಬಳಿಗೆ ಸೋಲುತ್ತಾನೆ।ಅವನು ಲಿಂಗಕ್ಕೆ ಮಾಡುವ ಹೂವಿನ ಅಲಂಕಾರ ಲೋಕಪ್ರಸಿದ್ಧಿ। ಅವನ ಕೌಶಲ್ಯ ಕೇಳಿದ್ದ ವೇಶ್ಯೆ।ಅದನ್ನು ನೋಡಬೇಕೆಂದು ಬಯಸುತ್ತಾಳೆ। [ವೇಶ್ಯೆಯರಿಗೆ ಗರ್ಭಗುಡಿ ಪ್ರವೇಶ ನಿಶಿದ್ಧ] ।ಅರ್ಚಕ ಮಂಗಳಾರತಿಯಾದ ನಂತರ ಲಿಂಗದ ಮೇಲಿರುವ ಹೂಗಳನ್ನು ತೆಗೆದು ಗಂಟುಕಟ್ಟಿಕೊಂಡು ವೇಶ್ಯೆಯ ಮನೆಗೆ ಬಂದು ಅವಳ ನಗ್ನ ದೇಹಕ್ಕೆ ಅಲಂಕರಿಸುತ್ತಾನೆ। ಇದವನ ದಿನಚರಿಯಾಗುತ್ತದೆ।
ಒಂದು ದಿನ ಊರ ಕೊತ್ವಾಲನ ಅನುಪಸ್ಥಿತಿಯಲ್ಲಿ ಮಂಗಳರತಿ ಮುಗಿಸಿ ಹೂಗಳನ್ನು ವೇಶ್ಯೆಗೆ ತೊಡಿಸಿ ಅವಳೊಡನೆ ರಮಿಸುತ್ತಿರುವ ಸಮಯದಲ್ಲಿ ಕೊತ್ವಾಲನ ಆಗಮನದ ಕಹಳೆ ಧ್ವನಿ ಕೇಳಿಸುತ್ತದೆ। ಆತ ಗಡಿಬಿಡಿಯಿಂದ ಅವಳ ಮೈಯಿಂದ ಹೂಗಳನ್ನು ಕಿತ್ತು ತಂದು ಪುನಃ ಲಿಂಗಕ್ಕೆ ಅಲಂಕರಿಸುತ್ತಾನೆ।ಮಂಗಳಾರತಿ ಮಾಡಿ ಕೊತ್ವಾಲನಿಗೆ ಹೂ ನೀಡುತ್ತಾನೆ। ಆತ ಹೂವನ್ನು ತೆಗೆದುಕೊಂಡು ಕಣ್ಣಿಗೊತ್ತಿಕೊಳ್ಳುವಷ್ಟರಲ್ಲಿ ಚಕಿತನಾಗಿ ’ದೇವರಿಗೆ ಕೂದಲುಗಳಿವೆಯೆಂದು ನನಗೆ ಗೊತ್ತೆ ಇರಲಿಲ್ಲ’ ಎಂದು ಬಿಡುತ್ತಾನೆ। ಸಾವರಿಸಿಕೊಂಡ ಅರ್ಚಕ’ ಇದೆಯೆಂದು ಭಾವಿಸಿದರೆ ಕೂದಲುಗಳು ಕಾಣುತ್ತವೆ’ ಅನ್ನುತ್ತಾನೆ। ಅದನ್ನು ಸಾಬೀತು ಪಡಿಸಲು ಗಡುವು ನೀಡಿ ಕೊತ್ವಾಲ ನಿರ್ಗಮಿಸಿಸುತ್ತಾನೆ। ಮುಂದಿರುವುದು ಅರ್ಚಕನ ಸತ್ವಪರೀಕ್ಷೆ.....

ನಾನು ಹೇಳಬೇಕೆಂದ ವಿಷಯ ಇದ್ಯಾವುದು ಅಲ್ಲ. ನಾಟಕದ ಪ್ರೇಕ್ಷಕರಲ್ಲಿ ಮೊದಲ ಸಾಲಿನಲ್ಲಿ ನಮ್ಮ ಐಜಿಪಿ ಅಜಯಕುಮಾರ್ ಸಿಂಗ್ ಅವರು ತಮ್ಮ ಕುಟುಂಬದೊಡನೆ ಕುಳಿತ್ತಿದ್ದರು. ಇದು ಚುನಾವಣಾ ಸಮಯ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ, ಶಾಂತಿಯುತ ಮತದಾನಕ್ಕೆ ಎಲ್ಲಾ ಏರ್ಪಾಡುಗಳನ್ನು ಮಾಡುವ ಗುರುತರ ಹೊಣೆಗಾರಿಕೆ ಅವರ ಇಲಾಖೆಯ ಮೇಲಿದೆ. ಹಾಗಿದ್ದರೂ ತಮ್ಮ ಹವ್ಯಾಸಕ್ಕಾಗಿ, ತಮ್ಮ ಕುಟುಂಬಕ್ಕಾಗಿ ಒಂದಷ್ಟು ಸಮಯವನ್ನು ಮೀಸಲಿಡಲು ಅವರಿಗೆ ಹೇಗೆ ಸಾಧ್ಯವಾಯ್ತು? ಇದು ನನ್ನ ಕುತೂಹಲ; ಜೊತೆಗೆ ಒಂಚೂರು ಮತ್ಸರ.

ಈ ಸಂದರ್ಭದಲ್ಲಿ ರವಿ ಬೆಳಗೆರೆ ನನ್ನೊಡನೆ ಹೇಳಿದ ಮಾತೊಂದು ನೆನಪಾಗುತ್ತಿದೆ; ”ನೋಡಮ್ಮಾ, ನೀವೆಲ್ಲಾ ಸಿಂಗಲ್ ಪೇರೆಂಟ್ ಗಳೇ. ಕೌಟುಂಬಿಕ ವಿಷಯಗಳಲ್ಲಿ ನಮ್ಮ ನೆರವು ನಿಮಗೆ ಸಿಗಲಾರದು.....” ನಾನು ಬಹಳಷ್ಟು ಮಹಿಳೆಯರನ್ನು ನೋಡಿದ್ದೇನೆ; ಗಮನಿಸಿಸಿದ್ದೇನೆ. ಅವರೆಲ್ಲಾ ’ಅಕ್ಕ’ನ ನೆರಳಿನ ಮೋಹಕ್ಕೊಳಗಾದವರೇ!

”ಇಂದ್ರನೀಲದ ಗಿರಿಯನೇರಿಕೊಂಡು
ಚಂದ್ರಕಾಂತದ ಶಿಲೆಯನಪ್ಪಿಕೊಂಡು
ಕೊಂಬ ಬಾರಿಸುತ್ತ, ಹರನೇ
ಎನ್ನ ಕುಂಭಕುಚದ ಮೇಲೆ ನಿಮ್ಮನೆಂದಪ್ಪಿಕೊಂಬೆನಯ್ಯ?
ಅಂಗಭಂಗ-ಮನಭಂಗವಳಿದು
ನಿಮ್ಮನೆಂದಿಂಗೊಮ್ಮೆ ನೆರೆವೇನೋ ಚೆನ್ನಮಲ್ಲಿಕಾರ್ಜುನ?!”


ಬಹಳ ವರ್ಷಗಳ ಹಿಂದೆ ಹಿಂದಿ ಚಿತ್ರ ನಟ ದಿಲಿಪ್ ಕುಮಾರ್ ಪತ್ನಿ ಸಾಯಿರಾಬಾನು ಸಂದರ್ಶನವೊಂದನ್ನು ಓದಿದ ನೆನಪು. ’ನಿಮ್ಮ ಗಂಡನ ಯಾವ ಗುಣ ನಿಮಗೆ ಹೆಮ್ಮೆ ಅನಿಸುತ್ತೆ?’ ಅಂದಾಗ ಆಕೆ,’ಆತ ಮನೆಯ ಬಗ್ಗೆ ತೋರುವ ಕಾಳಜಿ. ಮಿಕ್ಷಿ ಹಾಳಾದಾಗ ಅದನ್ನೆಲ್ಲಾ ಬಿಚ್ಚಿ ಟಿಪಿಕಲ್ ಗೃಹಸ್ಥನಂತೆ ರಿಪೇರಿ ಮಾಡುತ್ತಾ ಕುಳಿತುಕೊಳ್ಳುವುದನ್ನು ಕಂಡಾಗ ಹೆಮ್ಮೆಯೆನಿಸುತ್ತದೆ.’ ಇದು ಪತ್ನಿಯೊಬ್ಬಳ ಮೆಚ್ಚುಗೆಯ ನುಡಿ

ದೆಹಲಿಯಲ್ಲಿರುವ ಪತ್ರಕರ್ತ ದಿನೇಶ ಅಮಿನಮಟ್ಟು ರಜೆ ಹಾಕಿ ಸ್ವತಃ ನಿಂತು ಬೆಂಗಳೂರಿನ ತಮ್ಮ ಮನೆಯನ್ನು ಆಲ್ಟೇರೇಶನ್ ಮಾಡಿಸ್ತಿದ್ದಾರೆಂದು ಕೇಳಿದ್ದೇನೆ. ಸಣ್ಣ ಸಣ್ಣ ಖುಷಿಗಳೇ ಬದುಕಿನ ಸಂಭ್ರಮದ ರಸಘಳಿಗೆಗಳು.

ಅಕ್ಕಮಹಾದೇವಿಯರು ನಾವು। ನಮ್ಮೊಳಗೊಂದು ಖಾಸಗಿ ಜಗತ್ತಿದೆ. ಅಲ್ಲಿ ನನ್ನದೇ ಏಕಚಕ್ರಾದಿಪತ್ಯ. ಅಲ್ಲಿ ನಾನೇ ಅಕ್ಕಮಹಾದೇವಿ; ’ಆತನೇ’ ಚೆನ್ನಮಲ್ಲಿಕಾರ್ಜುನ! ಲೋಕದ ಹಂಗು ನಮಗೇಕೆ ಬೇಕು?

Thursday, April 16, 2009

ಚಂದನ ಟೀವಿಯಲ್ಲಿ ಉಡುಪಿ ಜಿಲ್ಲೆ

’ಕಡಲ ತಡಿಯ ತಲ್ಲಣ’ದ ಫಲಶ್ರುತಿಯಿಂದಾಗಿ ತಲ್ಲಣಗೊಂಡಿದ್ದೇನೆ. ಅದೇನೆಂದು ಮುಂದೆ ಬರೆಯುತ್ತೇನೆ.

ಈಗಿನ ವಿಷಯ ಏನಪ್ಪಾಂದ್ರೆ ನಾನು ಉಡುಪಿ ಜಿಲ್ಲೆಯ ಬಗ್ಗೆ ಅರ್ಧ ಘಂಟೆಯ ಡಾಕ್ಯುಮೆಂಟರಿ ಚಿತ್ರವೊಂದನ್ನು ಮಾಡಿದ್ದೇನೆ. ಅದು ಇಂದು ಅಂದರೆ ಏಪ್ರಿಲ್ ೧೬ರ ರಾತ್ರಿ ೭.೩೦ಕ್ಕೆ ಚಂದನ ವಾಹಿನಿಯಲ್ಲಿ ಪ್ರಸಾರಗುತ್ತಿದೆ. ಸಾಧ್ಯವಾದವರು ನೋಡಬೇಕಾಗಿ ಕೋರಿಕೊಳ್ಳುತ್ತಿದ್ದೇನೆ.