Showing posts with label ಅನುರಣನ. Show all posts
Showing posts with label ಅನುರಣನ. Show all posts

Monday, June 4, 2012

”ಲ್ಯಾಂಡ್ ಬ್ಯಾಂಕ್” ಯೋಜನೆ; ರೈತರ ಬದುಕಿಗೇ ಚಪ್ಪಡಿ ಕಲ್ಲು


 

ನಾಳಿದ್ದು ಬೆಂಗಳೂರಿನಲ್ಲಿ ’ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ’ ನಡೆಯಲಿದೆ.  ನಮ್ಮ ಕರ್ನಾಟಕ ಸರಕಾರವು ದುಡ್ಡಿರುವ ದೊಡ್ಡಪ್ಪರ ಮುಂದೆ ನಿಂತು ’ ನಮ್ಮಲ್ಲಿ ಯಥೇಚ್ಛವಾಗಿ    ಭೂಮಿ, ನೀರು, ವಿದ್ಯುತ್ತು ಇದೆ. ಅದನ್ನೆಲ್ಲಾ ನಿಮಗೆ ನಾವು ಉದಾರವಾಗಿ ನೀಡುತ್ತೇವೆ. ಇದನ್ನೆಲ್ಲಾ ಬಳಸಿಕೊಂಡು ನೀವಿಲ್ಲಿ ನಿಮಗಿಷ್ಟ ಬಂದ ಕೈಗಾರಿಕೆಗಳನ್ನು ಸ್ಥಾಪಿಸಿ. ನಿಮ್ಮ ದುಡ್ಡಿನ ಚೀಲವನ್ನು ತುಂಬಿಸಿಕೊಳ್ಳಿ’ ಎಂದು ಡಂಗುರ ಸಾರುವ ಪ್ರದರ್ಶನ ಸಮಾವೇಶವಿದು.

 ”ನಮ್ಮಲ್ಲಿ ಭೂಮಿಯಿದೆ. ನೀರನ್ನು ಹೇಗಾದರೂ ಹೊಂದಿಸಿಕೊಳ್ಳುತ್ತೇವೆ. ನಮಗೆ ವಿದ್ಯುತ್ತು ನೀಡಿ. ನಾವು ನಿಮಗೆ ಆಹಾರ ಭದ್ರತೆಯನ್ನು ನೀಡುತ್ತೇವೆ’ ಇದು ನಮ್ಮ ರೈತರು ನಮ್ಮ ಸರಕಾರವನ್ನು ಅಂಗಲಾಚುತ್ತಿರುವ ಪರಿ.

ಮಾನವನ ಮೂಲಭೂತ ಅವಶ್ಯಕತೆಗಳೇನು? ನೀರು, ಆಹಾರ,ವಸತಿ. ಇದು ವರ್ತಮಾನದ ಅವಶ್ಯಕತೆ. ಪ್ರತಿಯೊಂದು ಜೀವಿಗೂ ನೀರು, ಆಹಾರ ಬೇಕೇ ಬೇಕು. ಇದನ್ನು ಈ ನಾಡಿನಲ್ಲಿ ದುಡ್ಡು ಹಾಕಿ ದುಡ್ಡನ್ನು ಬೆಳೆಯಬೇಕೆಂದು ಆಶಿಸುವ ಬಂಡವಾಳಗಾರನಿಂದ ನಿರೀಕ್ಷಿಸಲು ಸಾಧ್ಯವೇ? ಮಾತೆತ್ತಿದರೆ ನಮ್ಮ ಸರಕಾರ ಅಬಿವೃದ್ದಿಯ ಜಪ ಮಾಡುತ್ತಿದೆ. ಆದರೆ ನಮಗೆಂಥಾ ಅಭಿವೃದ್ದಿ ಬೇಕು? ಇದು ಈಗ ನಾವು ಕೇಳಿಕೊಳ್ಳಬೇಕಾದ ಅತಿ ಮುಖ್ಯ ಪ್ರಶ್ನೆ. ಪರಿಸರಕ್ಕೆ ಧಕ್ಕೆಯನ್ನುಂಟುಮಾಡಿ ಕೈಗೆತ್ತಿಕೊಳ್ಳುವ ಯೋಜನೆಗಳು ಖಂಡಿತವಾಗಿಯೂ ನಮ್ಮ ಮುಂದಿನ ಪೀಳಿಗೆಯನ್ನು ಸಂಕಷ್ಟಕ್ಕೆ ದೂಡುತ್ತವೆ.

ರೈತನೊಬ್ಬನಿಗೆ ಭೂಮಿಯೆಂದರೆ ಕೇವಲ ಮಣ್ಣಲ್ಲ. ಅದವನ ಜೀವಧಾತು. ಒಂದು ಉದಾಹರಣೆಯನ್ನು ನೀಡುತ್ತೇನೆ. ನನ್ನಜ್ಜ ತೀರಿಕೊಂಡ ನಂತರ ನಮ್ಮ ಅಜ್ಜಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನಮಗೆ ಬಂತು. ಯಾಕೆಂದರೆ ಅವರಿಗೆ ಗಂಡು ಸಂತತಿಯಿರಲಿಲ್ಲ. ಹತ್ತಿರದ ಬಂಧುಗಳಿರಲಿಲ್ಲ. ಇದ್ದ ಒಂದಿಬ್ಬರು ಅಜ್ಜಿ ಅವರಿಗೆ ಆಸ್ತಿ ನೀಡಲಿಲ್ಲ ಎಂಬ ಕಾರಣದಿಂದ ಅವರತ್ತ ತಿರುಗಿಯೂ ನೋಡಲಿಲ್ಲ. ತುಂಬಾ ಸ್ವಾಭಿಮಾನಿಯಾದ ನಮ್ಮಜ್ಜಿ ಅಳಿಯನ ಮನೆಯಲ್ಲಿ ಬಂದಿರಲಾರರು ಎಂಬುದು ನಮಗೆ ಗೊತ್ತಿತ್ತು. ನಾವು, ಮೊಮ್ಮಕ್ಕಳು ಅಲ್ಲಿ ಶಾಲೆಗೆ ಹೋಗಲು ಇದ್ದುಕೊಂಡು ಒಂದಷ್ಟು ವರ್ಷ ಕಳೆದೆವು. ನಮ್ಮ ಮನೆ ಹತ್ತಿರವೇ ಆಸ್ತಿಯೊಂದು ಮಾರಾಟಕ್ಕೆ ಬಂದಿತು. ನಾವು ನಮ್ಮಜ್ಜಿಯನ್ನು ಹತ್ತಿರದಲ್ಲಿಟ್ಟುಕೊಂಡು ಚೆನ್ನಾಗಿ ನೋಡಿಕೊಳ್ಳಬಹುದೆಂದು ಅಲ್ಲಿಯ ಆಸ್ತಿಯನ್ನು ಮಾರಿ, ಈ ಜಮೀನನ್ನು ಖರೀದಿಸಿ ಅಲ್ಲೊಂದು ಪುಟ್ಟ ಮನೆ ಕಟ್ಟಿ ಅಜ್ಜಿಯನ್ನು ಇಲ್ಲಿಗೆ ಕರೆ ತಂದೆವು. ಆದರೆ ಅಜ್ಜಿ ಮಂಕಾಗಿ ಒಂದು ತಿಂಗಳಾಗುವಷ್ಟರಲ್ಲಿ ತೀರಿಕೊಂಡರು…ಆ ಗಿಲ್ಟ್ ನಮ್ಮನ್ನಿಂದಿಗೂ ಕಾಡುತ್ತಿದೆ.
ಬೇರುಗಳನ್ನು ಬಿಟ್ಟು ಬದುಕುವುದು ಕಷ್ಟ! ಈಗ ಸರಕಾರ ಬೇರುಗಳನ್ನು ಕೀಳುವ ಕೆಲಸ ಮಾಡುತ್ತಿದೆ.
 ಎಂದೋ ಬರಬಹುದಾದ ಕೈಗಾರಿಕೆಗಳಿಗಾಗಿ ಬಂಡವಾಳಶಾಹಿಗಳಿಗೆ ಭೂಮಿ ಒದಗಿಸುವ ದೃಷ್ಟಿಯಿಂದ ಸ್ಥಾಪಿಸಲಾಗಿರುವ ಯೋಜನೆಯೇ  ’ಲ್ಯಾಂಡ್ ಬ್ಯಾಂಕ್’ ಯೋಜನೆ. ಈ ಯೋಜನೆಯಡಿ ಸರಕಾರವು ರೈತರಿಂದ ಈಗಾಗಲೇ ಲಕ್ಷಾಂತರ ಎಕ್ರೆ ಭೂಮಿಯನ್ನು ವಶಪಡಿಸಿಕೊಂಡಿದೆ. ಆದರೆ ಅಲ್ಲಿ ಉದ್ದೇಶಿತ ಯೋಜನೆಗಳು ಅನುಷ್ಠಾನಗೊಳ್ಳದೆ. ಅವೆಲ್ಲಾ ಭೂಗಳ್ಳರ. ದಳ್ಳಾಳ್ಳಿಗರ, ರಿಯಲ್ ಎಸ್ಟೇಟ್ ಏಜೆಂಟರ ಪಾಲಾಗುತ್ತಿದೆ. ಈ ಅವ್ಯವಹಾರ ನ್ಯಾಯಾಲಯದ ಕೆಂಗೆಣ್ಣಿಗೂ ಗುರಿಯಾಗಿದೆ.  
ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ತನ್ನ ಕೃಷಿ ಜಮೀನು ಕಳೆದುಕೊಂಡ ಮುನಿಯಮ್ಮ ಎಂಬ ರೈತ ಮಹಿಳೆಯೊಬ್ಬರು ಪರಿಹಾರವನ್ನು ಕೋರಿ ಹಾಕಿಕೊಂಡ  ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಡಿ.ವಿ ಶೈಲೇಂದ್ರ ಕುಮಾರ್ ಕಳೆದ ಜೂನ್ ನಲ್ಲಿ ಸರಕಾರವನ್ನು ಪ್ರಶ್ನಿಸಿದ್ದು ಹೀಗೆ; ಸಾಧು ಸಂತರು, ಮಠಾದೀಶರು, ಅಧಿಕಾರಿಗಳು ಮತ್ತು ರಾಜಕಾರಣಿಗಳೊಡನೆ ಕರ್ನಾಟಕ ಕೈಗಾರೀಕಾ ಪ್ರದೇಶ ಅಬಿವೃದ್ಧಿ ನಿಗಮ [KIADB ] ಸಾರ್ವಜನಿಕರ ಹಣ ನುಂಗಿ ಹಾಕುವ ಕೆಲಸ ಮಾಡುತ್ತಿದೆ. ಕೆಐಎಡಿಬಿ ರಿಯಲ್ ಎಸ್ಟೇಟ್ ಆಗಿ ಪರಿವರ್ತನೆ ಹೊಂದಿದೆ. ಅದು ಕೈಗಾರಿಕಾ ಅಬಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಭೂಮಿಯನ್ನು ವಶಪಡಿಸಿಕೊಂಡು ತನ್ನಲ್ಲಿ ಇರಿಸಿಕೊಳ್ಳುತ್ತಿದೆ. ನಂತರ ಅದನ್ನು ಕೇಳಿದವರಿಗೆಲ್ಲಾ ಬೇಕಾಬಿಟ್ಟಿ ಹಂಚುತ್ತದೆ. ಹೀಗೆ ವಶಪಡಿಸಿಕೊಂಡ ಭೂಮಿಯಲ್ಲಿ ಅಭಿವೃದ್ಧಿಪಡಿಸಿದ ನಾಲ್ಕು ಕೈಗಾರಿಕಾ ಪ್ರದೇಶಗಳನ್ನಾದರೂ ಹೆಸರಿಸಿ? ಎಂದು ಪ್ರಶ್ನಿಸಿದ್ದಲ್ಲದೆ, ಅಭಿವೃದ್ಧಿಮಾಡಲಾಗಿದೆ ಎನ್ನುವ ಕೈಗಾರಿಕಾ ಪ್ರದೇಶದಲ್ಲಿ ಕೇವಲ ಕಲ್ಯಾಣ ಮಂಟಪಗಳೇ ತುಂಬಿದೆ ಎಂದು ಹೈಕೋರ್ಟ್ ಛೀಮಾರಿ ಹಾಕಿದೆ.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ೫.೨೫ ಲಕ್ಷ ಕೋಟಿ ರೂ. ಹೂಡಿಕೆಯ ೯೧೩ ಒಪ್ಪಂದಗಳಿಗೆ ಸಹಿ ಮಾಡಿದೆ. ಸರಕಾರವೇ ಕೊಡುತ್ತಿರುವ ಮಾಹಿತಿಗಳ ಪ್ರಕಾರ ಈಗ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು ೧೮. ಅವುಗಳಿಗೆ ಬೇಕಾಗುವ ಜಮೀನು ೪೮೦೫ ಎಕ್ರೆ ಮಾತ್ರ. ಆದರೆ ಸರಕಾರವು ಭೂ ಬ್ಯಾಂಕ್ ಹೆಸರಿನಲ್ಲಿ ಕೈಗಾರಿಕೆಗಳಿಗೆ ೧.೧೯ ಲಕ್ಷ ಎಕ್ರೆ ಮತ್ತು ವಿವಿಧ ಯೋಜನೆಗಳ ಹೆಸರಿನಲ್ಲಿ ೯ ಲಕ್ಷ ಎಕ್ರೆ ಭೂಮಿಯನ್ನು ರೈತರಿಂದ ವಶಪಡಿಸಿಕೊಳ್ಳುತ್ತಿದೆ. ಈಗಾಗಲೇ ಬಳ್ಳಾರಿಯಲ್ಲಿ ಮಿತ್ತಲ್ ಮತ್ತು ರೆಡ್ಡಿಗಳ ಬ್ರಹ್ಮಿಣಿ ಕಂಪೆನಿಗಳಿಗೆ ತಲಾ ಮೂರುಸಾವಿರ ಎಕ್ರೆ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ. ಆ ಎರಡೂ ಯೋಜನೆಗಳು ಹಳ್ಳ ಹಿಡಿಯುವ ಹಂತದಲ್ಲಿದೆ. ಅಂದರೆ ಹೈಕೋರ್ಟ್ ಅನುಮಾನಪಟ್ಟಂತೆ ರಿಯಲ್ ಎಸ್ಟೇಟ್ ದಂಧೆ ಗರಿಗೆದರುತ್ತಿದೆಯಲ್ಲವೇ? ಅಲ್ಲೇ ಪಕ್ಕದಲ್ಲಿರುವ ಚಾಗನೂರು ಸಿರಿವಾರದ ರೈತರಿಂದ ಬಳ್ಳಾರಿ ವಿಮಾನ ನಿಲ್ದಾಣಕ್ಕಾಗಿ ವಶಪಡಿಸಿಕೊಂಡ ನೀರಾವರಿ ಜಮೀನಿನ ಕಥೆಯೂ ಇದೇ ಅಲ್ಲವೇ?

ನಾನೊಬ್ಬಳು ಗೃಹಿಣಿ. ನನ್ನ ಪತಿಯೊಬ್ಬ ಪತ್ರಕರ್ತ. ಆತನ ವೃತ್ತಿ ಬದುಕು ಎಷ್ಟು ಅಭದ್ರತೆಯಿಂದ ಕೂಡಿದೆಯೆಂದರೆ ಅತ ಆಗಾಗ ಕೆಲಸ ಬದಲಿಸುತ್ತಾನೆ.. ಹೀಗಾದರೆ ನಮಗೆ ಬೀದಿಯೇ ಗತಿ ಎಂದುಕೊಂಡ ನಾನು ನಾಲ್ಕು ವರ್ಷಗಳ ಹಿಂದೆ ಕೃಷಿ ಭೂಮಿಯೊಂದನ್ನು ಖರೀದಿಸಿದೆ. ಇಂದು ಅದು ನನ್ನ ಬದುಕು; ಕನಸು; ಭವಿಷ್ಯ. ಅದಿಲ್ಲದೆ ನನಗೆ ಅಸ್ತಿತ್ವವೇ ಇಲ್ಲ ಅನ್ನುವಷ್ಟರಮಟ್ಟಿಗೆ ಅದು ನನ್ನನ್ನು ಆವರಿಸಿಕೊಂಡಿದೆ. ನನಗೇ ಹೀಗೆ ಅನ್ನಿಸಬೇಕಾದರೆ ತಲೆಮಾರುಗಳಿಂದ ಬಳುವಳಿಯಾಗಿ ಬಂದಿರುವ ರೈತರಿಗೆ ಆ ಭೂಮಿ ಮೇಲಿನ ಮೋಹ ಎಷ್ಟಿರಬೇಡ? ಇಂತಹ ಭೂಮಿಯನ್ನು ರೈತ ದುಡ್ಡಿಗಾಗಿ ಮಾರಬೇಕಾದ ಅನಿವಾರ್ಯತೆ ಬಂದಿರಬೇಕಾದರೆ ಆತನ ಬದುಕು ಎಂತಹ ಹೀನಾಯ ಸ್ಥಿತಿಗಿಳಿದಿರಬಹುದು?

ರೈತರಿಗೆ ಭೂಮಿಯೆಂದರೆ ಕೇವಲ ಮಣ್ಣಲ್ಲ. ಅದವರ ಜೀವದ್ರವ್ಯ. ಅವರು ಮಳೆರಾಯನ ಕೈ ಹಿಡಿದಿರಬಹುದು. ಆತ ಆಗಾಗ ಕೈ ಕೊಡುತ್ತಿದ್ದಾನೆಂದು ಅವರು ಆತನಿಗೆ ಸೋಡಾಚೀಟಿ ಕೊಡುವುದಿಲ್ಲ. ಬದಲಾಗಿ ಆಗಾಗ ಮನೆಗೆ ಬೀಗ ಹಾಕಿ ಗುಳೆ ಹೋಗುತ್ತಾರೆ. ಅನುಕೂಲವಿದ್ದಲ್ಲಿ ಮೈಮುರಿದು ದುಡಿದು ಮತ್ತೆ ಇಲ್ಲಿಗೇ ಬರುತ್ತಾರೆ. ಭೂಮಿಯೆಂಬುದು ಅವರ ಪಾಲಿಗೆ ಮೂಲಧನ. ಅದರಲ್ಲಿ ತೆಗೆಯುವ ಬೆಳೆ ಬಡ್ಡಿಯಿದ್ದಂತೆ. ಈಗ ಸರಕಾರವೇ ಮೂಲಧನವನ್ನು ಕಸಿದುಕೊಂಡರೆ ಅವರೆಲ್ಲಿ ಹೋಗಬೇಕು?

ಕೈಗಾರಿಕೆಗಳಿಗೆ ಕೊಡುವ ನೀರು, ವಿದ್ಯುತ್ ಇತ್ಯಾದಿ ಮೂಲ ಸೌಕರ್ಯಗಳನ್ನು ರೈತರಿಗೇ ನೀಡಿ ಅವರನ್ನು ಸ್ವಾಭಿಮಾನಿಗಳನ್ನಾಗಿ ರೂಪಿಸುವ ಯೋಜನೆಗಳನ್ನು ಸರಕಾರ ಹಾಕಿಕೊಳ್ಳಬೇಕು. ಬದಲಾಗಿ ಅವರಿಗೆ ಯಥೇಚ್ಛ ಸಬ್ಸಿಡಿಗಳನ್ನು ನೀಡಿ  ಅವರನ್ನು ದಾಸ್ಯಕ್ಕೆ ದೂಡಬಾರದು; ಸೋಮಾರಿಗಳನ್ನಾಗಿ ಮಾಡಬಾರದು. ದುರ್ಭಲ ಮಗುವನ್ನು ಪ್ರತ್ಯೇಕವಾಗಿ ವಿಶೇಷ ಕಾಳಜಿ, ಅಕ್ಕರೆಗಳಿಂದ ನೋಡಿಕೊಳ್ಳಬೇಕು;ಸ್ವತಂತ್ರವಾಗಿ ಬದುಕಲು ಅನುವು ಮಾಡಿಕೊಡಬೇಕು. ಉಪೇಕ್ಷಿಸಬಾರದು.
ನಮ್ಮ ರಾಜ್ಯ ಕೈಗಾರಿಕೆಯಲ್ಲಿ ಅಬಿವೃದ್ಧಿ ಹೊಂದಬೇಕು ನಿಜ. ಅದಕ್ಕಾಗಿ ನಮ್ಮ ರಾಜ್ಯದ ಉತ್ಸಾಹಿ ಉದ್ದಿಮೆದಾರರಿಗೇ ಪ್ರೋತ್ಸಾಹ ನೀಡಬೇಕು. ಅವರನ್ನು.ಕೃಷಿಯಾದಾರೀತ ಉದ್ದಿಮೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿದರೆ ನಮ್ಮ ರೈತರ ಬದುಕನ್ನು ಎತ್ತರಿಸಬಹುದು. ಹಾಗೆ ಮಾಡಿದರೆ ಆ ಕ್ಷೇತ್ರಕ್ಕೊಂದು ಘನತೆ ಒದಗಿ ಬರಬಹುದು. ಇಲ್ಲವಾದರೆ ಅವನ ಕೃಶ ಶರೀರದಂತೆಯೇ ಅವನ ಬದುಕು ಕೂಡಾ ಬಹುದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಉಳಿದು ಬಿಡಬಹುದು!

[ ವಿಜಯ ಕರ್ನಾಟಕದಲ್ಲಿ ಪ್ರಕಟವಾಗುತ್ತಿದ್ದ ನನ್ನ ಕಾಲಂ ’ಅನುರಣನ’ ಕ್ಕಾಗಿ ಬರೆದ ಅಪ್ರಕಟಿತ ಬರಹ ]



Tuesday, May 22, 2012

’ಯಾರಿಗೂ ಬೇಡದ ಪ್ರಾಮಾಣಿಕತೆ ನಿಂಗ್ಯಾಕೋ ಬೇಕಿತ್ತು ಮಹಾಂತೀ..?’



ಇದು ನಿನ್ನೆ ಸಾವನಪ್ಪಿರುವ ಕೆ.ಎ.ಎಸ್ ಅಧಿಕಾರಿ ಮಹಾಂತೇಶ್ ಅವರ ಆಕ್ಕ ತಮ್ಮನ ಶವದ ಮೇಲೆ ಬಿದ್ದು ರೋಧಿಸುತ್ತಾ ಕೇಳಿದ ಪ್ರಶ್ನೆ.
ಇದೇ ಪ್ರಶ್ನೆಯನ್ನು ಮೊನ್ನೆ ಮೊನ್ನೆ ದುಷ್ಕರ್ಮಿಗಳ ಧಾಳಿಗೆ ತುತ್ತಾಗಿ ಸಾವಿಗೀಡಾಗಿದ್ದ ದಾಂಡೇಲಿಯ ಎಸಿಎಫ಼್ ಮದನನಾಯಕ್ ಅವರ ಕುಟುಂಬದವರೂ ಕೇಳುತ್ತಿರಬಹುದಲ್ಲವೇ?

ಮುದ್ರಣ ಮಾಧ್ಯಮವು ಮಹಂತೇಶ್ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅದರ ಕುರಿತಾದ ವಿಸ್ತೃತ ವರಧಿಯನ್ನು  ಪ್ರಕಟಿಸಿದವು. ಅದು ಒಂದು ಸಮೂಹ ಮಾಧ್ಯಮಕ್ಕಿರುವ ಸಾಮಾಜಿಕ ಜವಾಭ್ದಾರಿ. ಅವು ನಿನ್ನೆ ಇನ್ನೊಂದು ಸುದ್ದಿಯನ್ನೂ ಪ್ರಕಟಿಸಿದವು. ಅದು ನಮ್ಮ ನಡುವಿನ ಪ್ರಮುಖ ಸಾಹಿತಿಯಾದ ಕುಂ. ವೀರಭದ್ರಪ್ಪ ಹೇಳಿದ ಮಾತುಗಳು-’ಸಮಾಜದಲ್ಲಿ ನಾಚಿಕೆ ಹಾಗೂ ಸಂಕೋಚ ಇಂದು ಸ್ಥಾನ ಪಲ್ಲಟವಾಗಿದೆ. ಕೇವಲ ರಾಜಕಾರಣಿಗಳಲ್ಲಿ ಮಾತ್ರವಲ್ಲ. ಎಲ್ಲಾ ವರ್ಗದ ಜನರಲ್ಲಿಯೂ ಇದು ಎದ್ದು ಕಾಣುತ್ತದೆ.’

 ಮೇಲೆ ಆ ಅಕ್ಕ ನೊಂದು ನುಡಿದ ಮಾತುಗಳು ಮತ್ತು ಸಮಾಜದ ಸಾಕ್ಷಿಪ್ರಜ್ನೆಯಂತಿರುವ ಸಾಹಿತಿಯೊಬ್ಬರು ಹತಾಶೆಯಿಂದ ಹೇಳಿದ ಮಾತುಗಳ ಆವರಣಗಳು ಬೇರೆ ಬೇರೆಯಾಗಿರಬಹುದು. ಆದರೆ ಇವೆರಡೂ ಒಂದಕ್ಕೊಂದು ಅಂತರ್ ಸಂಬಂಧ ಹೊಂದಿವೆ. ಸಮಾಜದಲ್ಲಿ ಹಿಂಸೆಯ ವೈಭವೀಕರಣ ಹೆಚ್ಚಾಗುತ್ತಲಿದೆ. ಹಿಂಸೆಯೂ ಒಂದು ಮೌಲ್ಯವೇನೋ ಎಂದು ಭ್ರಮೆ ಹುಟ್ಟುವಷ್ಟರಮಟ್ಟಿಗೆ ಅದರ ಗುಣಗಾನ ನಡೆಯುತ್ತಿದೆ. ಅದರ ಪರಿಣಾಮ ಎಷ್ಟು ಘೋರವಾಗಿದೆಯೆಂದರೆ ಸಮಾಜ ತನ್ನ ಸೂಕ್ಷತೆಯನ್ನೇ ಕಳೆದುಕೊಳ್ಳುತ್ತಲಿದೆ. ನಾವೀಗ ಒಂದು ಕೊಲೆಯನ್ನೋ, ಆತ್ಮಹತ್ಯೆಯನ್ನೋ ಲೈವ್ ಆಗಿ ಯಾವುದೇ ಭಾವನೆಗಳಿಲ್ಲದೆ ನೋಡಬಲ್ಲೆವು; ಸಾಮೂಹಿಕವಾಗಿ ಎಂಜಾಯ್ ಮಾಡಬಲ್ಲೆವು. ಹಿಂದಾದರೆ ಅದಕ್ಕಾಗಿ ನಾವು ಪ್ರಾಣಿಗಳನ್ನು ಬಳಸಿಕೊಳ್ಳುತ್ತಿದ್ದೆವು ಈಗ ಮನುಷ್ಯರನ್ನು ಬಳಸಿಕೊಳ್ಳುತ್ತಿದ್ದೇವೆ. ಯಾಕೆ ಹೀಗಾದೆವು? ಮನುಷ್ಯನ ಮನಸ್ಸಿನಾಳದಲ್ಲಿರುವ ಮೃಗತ್ವ ಸೂಕ್ತ ಸಮಯಕ್ಕಾಗಿ ಹೊಂಚು ಹಾಕಿ ಕಾಯುತ್ತಿದೆಯೇ? ನಮ್ಮಲ್ಲೇ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಯಿದು.

ಮಹಂತೇಶ್ ಹತ್ಯೆ ಪ್ರಕರಣ ಅಥವಾ ದಾಂಡೇಲಿಯ ವನ್ಯಜೀವಿ ವಿಭಾಗದ ಸಹಾಯಕ ಸಂರಕ್ಷಣಾಧಿಕಾರಿ ಮಾಧವ ನಾಯಕ್ ಅವರ ಮೇಲಾದ ಹತ್ಯೆ ಮತ್ತು ಅನಂತರದ ಸಾವಿನ ಘಟನೆಗಳನ್ನೇ ತೆಗೆದುಕೊಳ್ಳಿ. ಅದಕ್ಕೆ ಸಂಬಂಧಪಟ್ಟವರು ಪ್ರತಿಕ್ರಿಯಿಸಿದ, ಪ್ರತಿಕ್ರಿಯಿಸುತ್ತಿರುವ ನಿಧಾನಗತಿಯನ್ನು ನೋಡಿದರೆ ’ನ್ಯಾಯದ ನಿಧಾನವೇ ನ್ಯಾಯದ ನಿರಾಕರಣೆ’ ಎಂಬ ನಾಣ್ನುಡಿಯ ನೆನಪು ಬರುತ್ತದೆಯಲ್ಲವೇ? ಗ್ರಾಮ ಸ್ವರಾಜ್ಯದ ಕನಸು ಕಂಡ ಅಹಿಂಹೆಯ ಹರಿಕಾರ ಗಾಂದೀಜಿ ಹುಟ್ಟಿದ ನಾಡಿನಲ್ಲಿ ಒಬ್ಬ ಒಬ್ಬ ಪ್ರಾಮಾಣಿಕ  ಕೆ.ಎ.ಎಸ್ ಅಧಿಕಾರಿ ಬೀದಿಯಲ್ಲಿ ಹೆಣವಾಗಿ ಬಿದ್ದರೆ ಯಾರಿಗೂ ಏನೂ ಅನ್ನಿಸುವುದಿಲ್ಲವೇ?
 ಅಧಿಕಾರ ಶಕ್ತಿಕೇಂದ್ರವಾದ ವಿಧಾನಸೌಧದಿಂದ ಕೂಗಳತೆಯ ದೂರದಲ್ಲಿ,  ತುಂಬಾ ಸರಳ ಹಾಗೂ ಪ್ರಮಾಣಿಕ ಅಧಿಕಾರಿಯೆಂದು ಹೆಸರು ಪಡೆದಿದ್ದ ಮಹಂತೇಶ್ ಮೇಲೆ ಕರ್ತವ್ಯದಲ್ಲಿದ್ದಾಗಲೇ ಮಾರಣಾಂತಿಕವಾಗಿ ಹಲ್ಲೆಯಾಗಿತ್ತು.
 ಸಹಕಾರ ಸಂಘಗಳ ಇಲಾಖೆ ಉಪನಿರ್ದೇಶಕ ರಾಗಿದ್ದ ಅವರ ಮೇಲಿನ ಹಲ್ಲೆಯಲ್ಲಿ ಭೂಮಾಪಿಯದ ಕೈವಾಡ ಇದೆಯೆಂದು ಶಂಕಿಸಲಾಗಿತ್ತು. ಸಹಕಾರಿಸಂಘಗಳ ಅಡಿಟಿಂಗ್ ಜವಾಬ್ದಾರಿ ಹೊತ್ತವರು ಮಹಾಂತೇಶ್. ಬೆಂಗಳೂರಿನಲ್ಲಿ೨೮೨ ಗೃಹನಿರ್ಮಾಣ ಸಂಘಗಳಿವೆ. ಇಲ್ಲಿ ಮೂರುಲಕ್ಷ ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಅದನ್ನು ಇತ್ತೀಚೆಗಷ್ಟೇ ಅವರ ಇಲಾಖೆ ಬಯಲಿಗೆಳೆದಿತ್ತು. ಇಂತಹ ಗುರುತರವಾದ ಜವಾಬ್ದಾರಿಯನ್ನು ಹೊತ್ತ ಅಧಿಕಾರಿಯನ್ನು  ಮಾನವೀಯ ನೆಲೆಯಲ್ಲಾದರೂ ಭೇಟಿಮಾಡುವ ಸೌಜನ್ಯವನ್ನು ಈ ನಾಡಿನ ಯಾವ ರಾಜಕಾರಣಿಯೂ ಮಾಡಲಿಲ್ಲ. ಕೊನೆಯ  ಪಕ್ಷ ಪ್ರಮಾಣಿಕ ಅಧಿಕಾರಿಗಳಲ್ಲಿ ದೈರ್ಯ ತುಂಬುವ ಹೇಳಿಕೆಯನ್ನೂ ನೀಡಲಿಲ್ಲ. ಅದೇ ಬ್ರಷ್ಟಾಚಾರದ ಆರೋಪ ಹೊತ್ತ ರಾಜಕಾರಣಿಯನ್ನು ನೋಡಲು ಜೈಲಿಗೇ ಹಿಂಡುಗಟ್ಟಿಕೊಂಡು ಹೋಗುವ ರಾಜಕಾರಣಿಗಳಿದ್ದಾರೆ; ಮಠಾದೀಶರಿದ್ದಾರೆ. ಬ್ರಷ್ಟಾಚಾರ ಸರ್ವವ್ಯಾಪಿಯಾಗಿದೆ.
ನಮ್ಮ ರಾಜ್ಯದ ಗೃಹಮಂತ್ರಿಯವರೇ ಭೂಹಗರಣದಲ್ಲಿ ಸಿಕ್ಕಿಬಿದ್ದಿದ್ದರೆ ಅರಣ್ಯ ಸಚಿವರು ವಂಚನೆಯ ಆರೋಪಕ್ಕೆ ಒಳಗಾಗಿದ್ದವರು. ಇಂತವರಿಂದ ಎಂತಹ ಪ್ರಾಮಾಣಿಕತೆಯನ್ನು ನಿರೀಕ್ಷಿಸಲಾದೀತು? ಸಮಾಜದ ಕೆನೆಪದರದಲ್ಲಿರುವ ವ್ಯಕ್ತಿಗಳೇ ಬ್ರಷ್ಟರಾದರೆ ಅವರ ಕೈಕೆಳಗಿನ ಅಧಿಕಾರಿಗಳು ಅಸಹಾಯಕರಾಗುತ್ತಾರೆ.

ನಾವು ಸತತವಾಗಿ ಏನನ್ನು ಕೇಳುತ್ತೆವೆಯೋ, ನೋಡುತ್ತೆವೆಯೋ ಅದು ನಮ್ಮ ಆಲೋಚನಾಕ್ರಮದ ಮೇಲೆ ಪರೆಣಾಮ ಬೀರುತ್ತದೆ. ಒಂದು ಸಮಾಜವನ್ನು ಅದೋಗತಿಗೆ ತಳ್ಳಲು ಅದರ ಸಾಂಸ್ಕೃತಿಕ ಅನನ್ಯತೆಯನ್ನು ನಾಶಪಡಿಸಿದರೆ ಸಾಕು. ಆ ಕೆಲಸವನ್ನು ರಾಜಕಾರಣ ಮಾಡುತ್ತಲೇ ಬಂದಿದೆ ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳಲ್ಲಿ ಒಂದಾದ ಮಾಧ್ಯಮ ಅದಕ್ಕೆ ಸಾತ್ ನೀಡುತ್ತಲಿದೆ. ಹಾಗಾಗಿ ಜನರು ಹತಾಶರಾಗುತ್ತಿದ್ದಾರೆ.  ಅವರಲ್ಲಿ ಪ್ರತಿಭಟನೆಯ ಧ್ವನಿ ಹುಟ್ಟುತ್ತಿಲ್ಲ. ರಾಷ್ಟ್ರಪಿತ ಗಾಂಧಿಯಂತೆ ಬಿಂಬಸಲ್ಪಟ್ಟ ಅಣ್ಣಾ ಹಜಾರೆಯವರ ಜನಾಂದೋನವೇ ಮಸುಕಾಗಿರುವುದೇ ಇದಕ್ಕೆ ಸಾಕ್ಷಿ. ಇಡೀ ವ್ಯವಸ್ಥೆಯೇ ಜಡ್ಡುಗಟ್ಟಿ ಹೋಗಿದೆ.

ಮಹಂತೇಶರ ಅಕ್ಕ ವೈಯಕ್ತಿಕ ಮಟ್ಟದಲ್ಲಿ ಕೇಳಿದ ಪ್ರಶ್ನೆಯನ್ನು ಒಂದು ಸಾವಿರ ವರ್ಷಗಳ ಹಿಂದೆ ಪಂಪ ಸಮೂಹದ ನೆಲೆಯಿಂದ ಕೇಳಿದ್ದ ಮತ್ತು ಅದಕ್ಕೆ ಉತ್ತರವನ್ನೂ ನೀಡಿದ್ದ
’ಒತ್ತಿ ತರುಂಬಿ ನಿಂದ ರಿಪುಭೂಜ ಸಮಾಜದ ಬೇರ್ಗಳಂ ನಭಕೆತ್ತದೆ
ಬಂಧು ತನ್ನ ಮರೆವೊಕ್ಕಡೆ ಕಾಯ್ವದೆ, ಚಾಗದ ಒಳ್ಪಿನ ಅಚ್ಚೊತ್ತದೆ,
ಮಾಣ್ದು ಬಾಳವ ಪುಳುವಾನಸನ್, ಅಜಾಂಡಮೆಂಬೊಂದು ಅತ್ತಿಯ
ಪಣ್ಣೊಳಿರ್ಪ ಪುಳುವಲ್ಲದೆ ಮಾನಸನೇ ಮುರಾಂತಕಾ?’

ಅಂತಹ ಹುಳ ಸಮಾನವಾದ ಬದುಕು ನಮಗೆ ಬೇಕೆ? ಬೇಡ ಎಂದು ಧಿಕ್ಕರಿಸಿ ನಿಂತ ಮಹಂತೇಶ್, ಮದನನಾಯಕರಂಥ ಅಧಿಕಾರಿಗಳನ್ನು ಉಳಿಸಿಕೊಳ್ಳಲು ನಾವೇನು ಮಾಡಬೇಕು? ಇದು ನಾಡಿನ ಪ್ರಜ್ನಾವಂತರು ತಮ್ಮೊಳಗೆ ಕೇಳಿಕೊಳ್ಳಬೇಕಾದ ಪ್ರಶ್ನೆ.


[ ವಿಜಯಕರ್ನಾಟಕದ ’ಅನುರಣನ’ ಅಂಕಣದಲ್ಲಿ ಪ್ರಕಟವಾದ ಬರಹ ]

Thursday, May 17, 2012

ಬರಗಾಲದಲ್ಲಿ ನೆನಪಾದ ಸೂಳೆಕೆರೆಗಳು ಮತ್ತು ಬಿದಿರಕ್ಕಿ






ಕಳೆದ ವಾರ ನಾನು ನನ್ನ ತವರೂರಿಗೆ ಹೋಗಿದ್ದೆ. ಕುಕ್ಕೆಸುಬ್ರಹ್ಮಣ್ಯ ಸಮೀಪದ ಬಾಳುಗೋಡು ಎಂಬ ಹಳ್ಳಿಯದು.ನಿತ್ಯಹರಿದ್ವರ್ಣದ ಪಶ್ಚಿಮ ಘಟ್ಟಶ್ರೇಣಿಯ ಸೆರಗಿನೂರು. ನನ್ನ ಮನೆಗೆ ಹೋಗುವ ರಸ್ತೆಯ ಎರಡೂ ಬದಿಗಳಲ್ಲಿ ದಟ್ಟವಾದ ಬಿದಿರುಹಿಂಡಿಲುಗಳಿವೆ. ಪ್ರತಿ ಬಾರಿ ಊರಿಗೆ ಹೋದಾಗಲೂ ಅವು ರಸ್ತೆಗೆ ಬಾಗಿ ನನಗೆ ಸ್ವಾಗತ ಕೋರುವುದು ಸಾಮಾನ್ಯ ಸಂಗತಿ. ಆದರೆ ಈ ಬಾರಿಯ ಸ್ವಾಗತ ಸಾಮಾನ್ಯವಾಗಿರಲಿಲ್ಲ. ಅವು ತೆನೆ ತುಂಬಿ ಭತ್ತದ ಬಾರಕ್ಕೆ ಬಳುಕುತ್ತಿದ್ದವು.
ನನ್ನ ಮನಸ್ಸು ಸುಮಾರು ನಲ್ವತ್ತು ವರ್ಷಗಳ ಹಿಂದಕ್ಕೆ ಓಡಿತು.

ಅಂದು ಮಂಗಳವಾರ.ಇನ್ನೂ ಬೆಳಕು ಹರಿದಿರಲಿಲ್ಲ. ನನ್ನಮ್ಮ ನನ್ನನ್ನು ಕಂಕುಳಲ್ಲಿ ಎತ್ತಿಕೊಂಡಳು. ಇನ್ನೊಂದು ಕಯ್ಯಲ್ಲೆ ಒಂದು ದೊಡ್ಡ ಕುಕ್ಕೆ, ಕುಕ್ಕೆಯೊಳಗೊಂದು ಕತ್ತಿ. ತಲೆಯ ಮೇಲೆ ತುಳು ಭಾಷೆಯಲ್ಲಿ  ’ತಡ್ಪೆ’ ಎಂದು ಕರೆಯುವ ತುಳುವೇತರರು ಮೊರ ಎನ್ನುವ ಅಗಲವಾದ ಗೆರಸೆ. ಅದರ ಮೇಲೊಂದು ಪೊರಕೆ. ಬಿರಬಿರನೆ ಹೆಜ್ಜೆ ಹಾಕುತ್ತಾ ಕುಡುಮುಂಡೂರು ಹೊಳೆಯನ್ನು ದಾಟಿ, ಅದರ ಪಕ್ಕದ ಅಡ್ಕದಲ್ಲಿದ್ದ ಬಿದಿರು ಮೆಳೆಯತ್ತ ಸಾಗಿದವಳೇ ನನ್ನನ್ನು ಒಂದೆಡೆ ಕುಳ್ಳಿರಿಸಿದಳು. ಬೆಳ್ಳುಳ್ಳಿ ಮತ್ತು ಈರುಳ್ಳಿ ನಾಯಿಗಳು ನನಗೆ ಕಾವಲಾಗಿ ಅಕ್ಕ-ಪಕ್ಕ ಕುಳಿತವು. ಒಂದು ವಿಶಾಲವಾದ ಬಿದಿರು ಹಿಂಡಲನ್ನು ಆಯ್ಕೆ ಮಾಡಿದವಳೇ ಅಮ್ಮ ಅದರಡಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದ ಬಿದಿರಕ್ಕಿಯನ್ನು ಗುಡಿಸಿ ಗುಡ್ಡೆ ಮಾಡತೊಡಗಿದಳು. ಮಂಗಳವಾರವನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣವಿತ್ತು. ಅಂದು ಬಿದಿರಕ್ಕಿಯನ್ನು ಯಾರೂ ಸಂಗ್ರಹಿಸುವುದಿಲ್ಲ.. ಕಾಡನ್ನು ರಕ್ಷಿಸುವ ಚಾಮುಂಡಿ ತಾಯಿಗೆ ಆ ದಿನದ ಅಕ್ಕಿ ಮೀಸಲು. ಬಹುಶಃ ನನ್ನಮ್ಮ ದೇವರಿಗೆ ತಪ್ಪು ಕಾಣಿಕೆಯನ್ನು ತೆಗೆದಿಟ್ಟು ಬಿದಿರಕ್ಕಿ ಆರಿಸಲು ಬಂದಿರಬೇಕು. ಇಲ್ಲಿ ಬಿದಿರಕ್ಕಿ ಅಂದರೂ ವಾಸ್ತವದಲ್ಲಿ ಅದು ಭತ್ತವೇ. ಅದನ್ನು ಗುಡ್ಡದಿಂದ ತಂದು ಕಲ್ಲು ಮಣ್ಣನ್ನು ಬೇರ್ಪಡಿಸಿ, ಕುಟ್ಟಿ ಹೊಟ್ಟು ತೆಗೆದು ಅಕ್ಕಿ ಮಾಡಲು ದೀರ್ಘ ಪರಿಶ್ರಮ ಬೇಕು.

ಬರವನ್ನು ಎದುರಿಸಲು ಪ್ರಕೃತಿಮಾತೆ ತನ್ನ ಮಕ್ಕಳಿಗೆ ಹಲವಾರು ಒಳದಾರಿಗಳನ್ನು ಹೇಳಿಕೊಟ್ಟಿದ್ದಾಳೆ. ತನ್ನೊಡಲೊಳಗೇ ಹಲವಾರು ಗೆಡ್ಡೆಗೆಣಸುಗಳನ್ನು ಹುದುಗಿಟ್ಟುಕೊಂಡಿರುತ್ತಾಳೆ. ’ನೊರೆ’ ಎಂದು ಕರೆಯಲ್ಪಡುವ ಬಳ್ಳಿಯ  ಹಿಟ್ಟು ತುಂಬಿದ ಉದ್ದವಾದ ಬೇರಿನ ಗೆಡ್ಡೆಗಳನ್ನು ಕಾಡಿನಿಂದ ಅಗೆದು ತಂದು ಬೇಯಿಸಿ ಬಾಯಿ ಚಪ್ಪರಿಸುತ್ತಾ ತಿಂದ ನೆನಪು ನನಗಿದೆ. ಹಾಗೆಯೇ ಬೈನೆ ಮರದ ಹಿಟ್ಟು ಕೂಡಾ ಬರಗಾಲದಲ್ಲಿ ಹಸಿದ ಹೊಟ್ಟೆಗೆ ಹಿಟ್ಟಾಗುತ್ತಿತ್ತು. ಇದು ನಮ್ಮೂರಿನ ಕಥೆಯಾದರೆ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಗೋಟಿ ಹಾಗು ಕತ್ತಾಳೆಗಡ್ಡೆಯನ್ನು ಬೇಯಿಸಿಕೊಂಡು ತಿನ್ನುತ್ತಿದ್ದರೆಂದು ಕೇಳಿದ್ದೇನೆ.

ಇದನ್ನೆಲ್ಲಾ ಯೋಚಿಸುತ್ತಾ ಮನೆಗೆ ಬಂದರೆ ಸಂಬಂಧದಲ್ಲಿ ನನಗೆ ಅತ್ತೆಯಾಗಬೇಕಾಗಿದ್ದ, ಅಂದಿನ ಬರಗಾಲದ ದಿನಗಳಲ್ಲಿ ನಮ್ಮ ಗೇಣಿ ಒಕ್ಕಲಾಗಿದ್ದ ಅಜ್ಜಿ ನಮ್ಮ ಮನೆಯಲ್ಲಿ ಕೂತಿದ್ದರು. ನನ್ನನ್ನು ಕಂಡು, ’ಹೇಗೂ ಉಷಾ ಬಂದಿದ್ದಾಳೆ. ಅವಳಿಗೆ ಇದನ್ನು ರೊಟ್ಟಿಮಾಡಿ ಕೊಡು’ ಎಂದು ಕುಕ್ಕೆಯಲ್ಲಿದ್ದ ನುಚ್ಚಿನಂತ ಅಕ್ಕಿಯನ್ನು ಅಮ್ಮನ ಕೈಯ್ಯಲ್ಲಿಟ್ಟು ಹೋದರು.  ಅದು ಬಿದಿರಕ್ಕಿ.  ಈ ಬಾರಿ ಒಂದು ಕೇಜಿ ಅಕ್ಕಿಗೆ ನೂರೈವತ್ತು ರೂಪಾಯಿಯಂತೆ. ದುಡ್ಡು ಕೊಡಲು ಹೋದರೆ ಎಷ್ಟೇ ಒತ್ತಾಯಿಸಿದರೂ ಅತ್ತೆ ತಗೊಳ್ಳಲೇ ಇಲ್ಲ ಎಂದು ಅಮ್ಮ ನನ್ನಲ್ಲಿ ಅವಲತ್ತುಕೊಂಡರು. ಈ ವಯಸ್ಸಿನಲ್ಲೂ ಅವರು ಸುಮಾರು ಐವತ್ತು ಕೇಜಿಯಷ್ಟು ಅಕ್ಕಿಯನ್ನು ಸಂಗ್ರಹಿಸಿದ್ದಾರೆ ಎಂಬುದನ್ನು ಕೇಳಿ ನಾನು ಆಶ್ಚರ್ಯ ಪಟ್ಟೆ

ಬಿದಿರು ಹೂ ಹೋದ ವರ್ಷ ಬರಗಾಲ ಬರುತ್ತದೆಯೆಂಬುದು ವಾಡಿಕೆ. ಪ್ರಕೃತಿ ಯಾವಾಗಲೂ ತಾಯಿಯೇ. ಆಕೆ ತನ್ನ ಮಕ್ಕಳನ್ನು ಪೊರೆಯಲು ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಾಳೆ. ಒಂದು ಬಿದಿರ ಹಿಂಡಲಿನಲ್ಲಿ ಕನಿಷ್ಟ ೨೫ ಕೇಜಿ ಭತ್ತ ದೊರೆಯುತ್ತದೆ.  ಬಿದಿರು ಹೂ ಬಿಡುವುದು ಅರುವತ್ತು ವರ್ಷಕ್ಕೊಮ್ಮೆ, ಅದೂ ಸಾವಿರಾರು ಎಕರೆ ವಿಸ್ತಾರದಲ್ಲಿ. ಹಾಗೆ ಹೂ ಬಿಟ್ಟು, ಬೀಜವಾಗಿ ತನ್ನ ಸಂತತಿ ಬೆಳೆಯಲು ಅನುವು ಮಾಡಿಕೊಟ್ಟು ತಾನು ಸತ್ತು ಹೋಗುತ್ತದೆ. ಸಾಮೂಹಿಕ ನಾಶದ ಕಾರಣದಿಂದಾಗಿ ಅದನ್ನು”ಕಟ್ಟೆ ರೋಗ’ ಎಂದೂ ಕರೆಯುತ್ತಾರೆ. ಸ್ಥಳೀಯವಾಗಿ ಅದನ್ನು ’ರಾಜನ್ ಹೋಗುವುದು’ ಎಂದೂ ಕರೆಯುತ್ತಾರೆ. ಹಾಗೆಂದರೆ ಏನು ಎಂಬುದು ನನಗೂ ತಿಳಿದಿಲ್ಲ. ಬಹುಶಃ ’ರಾಜನ್ ದೈವ’ಗಳಿಗೂ ಇದಕ್ಕೂ ಸಂಬಂಧವಿದ್ದರೂ ಇರಬಹುದು; ಯಾಕೆಂದರೆ ಇದು ತುಳುನಾಡು.

ಬರಗಾಲ ಅಂದರೆ ಏನು? ಮಳೆ ಆಗದಿರುವುದು. ಮಳೆ ಆಗದಿದ್ದರೆ ಭೂಮಿ ಬರಡಾಗುತ್ತದೆ. ಬೆಳೆ ಬೆಳೆಯಲಾಗುವುದಿಲ್ಲ. ಪರಿಣಾಮವಾಗಿ ಜನರ ಹೊಟ್ಟೆಗೆ ಹಿಟ್ಟಿಲ್ಲ. ಜನ-ಜಾನುವಾರು ಸೇರಿದಂತೆ ಪ್ರಾಣಿಸಂಕುಲಕ್ಕೆ ಕುಡಿಯಲು ನೀರಿಲ್ಲ. ಚಿಕ್ಕಂದಿನಲ್ಲಿ ನಾವು ಹಾಡಿದ್ದೇವೆ ’ಹುಯ್ಯೋ ಹುಯ್ಯೋ ಮಳೆರಾಯ, ಬಾಳೆಯ ತೋಟಕ್ಕೆ ನೀರಿಲ್ಲ’ ಆದರೆ ನಮ್ಮ ಮಕ್ಕಳು ’rain rain go away’ಎಂದು ಹಾಡುತ್ತಿರುವುದು ವಿಪರ್ಯಾಸ ಅಲ್ಲವೇ? ಬರಗಾಲದ ಭೀಕರತೆಯನ್ನು ಹೇಳುವ ಒಂದು ಜನಪದ ಹಾಡು ಯವಾಗಲೂ ನನಗೆ ನೆನಪಿಗೆ ಬರುತ್ತದೆ. ಅದು ’ಬಣ್ಣಾದ ಗುಬ್ಯಾರು ಮಳೆರಾಯ..ಮಕ್ಕಳಾ ಮಾರ್ಯಾರು ಮಳೆರಾಯ…ರೊಕ್ಕವಾ ಹಿಡಕೊಂಡು ಭತ್ತಂತ ತಿರುಗ್ಯಾರು ಮಳೆರಾಯ..’ ಮಕ್ಕಳನ್ನೇ ಮಾರಿ ಕಯ್ಯಲ್ಲಿ ದುಡ್ಡು ಹಿಡ್ಕೊಂಡು ಅನ್ನಕ್ಕಾಗಿ ಅಲೆದಾಡುವ ಧಾರುಣ ಸ್ಥಿತಿ ಬರಗಾಲದ ಭೀಕರತೆಯ ಸಮರ್ಥ ಚಿತ್ರಣವನ್ನು ಕಟ್ಟಿಕೊಡುತ್ತದೆ.

ಪ್ರಕೃತಿ ವಿಕೋಪಗಳು ಸಂಭವಿಸುವುದು ಅತ್ಯಂತ ಸಹಜ. ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಅದನ್ನು ಸಮರ್ಥವಾಗಿ ಎದುರಿಸಲು ಬುದ್ಧಿವಂತನಾದ ಮಾನವ ಹಲವಾರು ದಾರಿಗಳನ್ನು ಕಂಡುಕೊಂಡಿದ್ದಾನೆ. ಹಿಂದೆ ಜನಾನುರಾಗಿ ನಾಯಕನೊಬ್ಬ ಹೇಗೆ ರೂಪುಗೊಳ್ಳುತ್ತಿದ್ದ ಎಂದರೆ ಆತ, ಕೆರೆಗಳನ್ನು ಕಟ್ಟಿಸುತ್ತಿದ್ದ, ಬಾವಿಯನ್ನು ತೋಡಿಸುತ್ತಿದ್ದ, ಅರವಟ್ಟಿಗೆ [ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ] ಗಳನ್ನು ನಿರ್ಮಿಸುತ್ತಿದ್ದ. ಅನ್ನ ಛತ್ರಗಳನ್ನು ಕಟ್ಟಿಸುತ್ತಿದ್ದ, ಸಾಲುಮರಗಳನ್ನು ನೆಡಿಸುತ್ತಿದ್ದ.

ಇದನ್ನು ಒಬ್ಬ ಸೂಳೆಯೂ ಮಾಡುತ್ತಿದ್ದಳು. ನಮ್ಮ ನಾಡಿನುದ್ದಕ್ಕೂ ಹರಡಿಕೊಂಡಿರುವ ಅಸಂಖ್ಯಾತ ಬೃಹತ್ ’ಸೂಳೆ ಕೆರೆ’ಗಳನ್ನು ನೆನಪಿಸಿಕೊಳ್ಳಿ. ಸಮಾಜದಿಂದ ಗಳಿಸಿದ ಹಣವನ್ನು ಪಶ್ಚಾತ್ತಾಪದ ರೀತಿಯಲ್ಲಿ ಮತ್ತೆ ಅದನ್ನು ಜನೋಪಯೋಗಿ ಕೆಲಸಕ್ಕೆ ಆಕೆ ವಿನಿಯೋಗಿಸುತ್ತಿದ್ದಳು. ಜೀವ ಜಲಕ್ಕಿರುವ ಮಹತ್ವ ಆಕೆಗೂ ಗೊತ್ತಿತ್ತು. ಆ ತಾಯಂದಿರು ಕಟ್ಟಿಸಿದ ವಿಶಾಲ ಕೆರೆಗಳಲ್ಲಿ ಇವತ್ತಿಗೂ ಅಪಾರ ಜಲರಾಸಿಯಿದೆ. ಆಕೆಯ ಜೊತೆ ನಮ್ಮ ರಾಜಕಾರಣಿಗಳನ್ನು, ಮಠಾದೀಶರನ್ನು, ದಿಡೀರ್ ಶ್ರೀಮಂತರಾಗುವುದಕ್ಕೆ ಹೊರಟ ಪ್ರಕೃತಿಭಂಜಕರನ್ನು ಒಮ್ಮೆ ಹೋಲಿಸಿ ನೋಡಿ…
ಈಗ ಕೆರೆಗಳೆಲ್ಲಾ ಸೈಟ್ ಗಳಾಗುತ್ತಿವೆ. ಕಾಡುಗಳೆಲ್ಲಾ ರೆಸಾರ್ಟ್ ಗಳಾಗುತ್ತಿವೆ. ನೀರಿನ ಆಗರಗಳಾಗಿರುವ ಬೆಟ್ಟ ಗುಡ್ಡಗಳು ದುಡ್ಡಿನ ಖಜಾನೆಗಳಂತೆ ಗೋಚರಿಸುತ್ತವೆ.

 ಬರಗಾಲ ಬಂತೆಂದರೆ ಕಂಟ್ರಾಕ್ಟ್ ದಾರರು, ದಲ್ಲಾಳಿಗಳು ಹಬ್ಬವನ್ನಾಚರಿಸುತ್ತಾರೆ. ನಲ್ವತ್ತು ವರ್ಷಗಳ ಹಿಂದೆ ಸಂಭವಿಸಿದ ಬರಗಾಲದಲ್ಲಿ ಅಮೇರಿಕಾದಂತಹ ಕೊಬ್ಬಿದ ರಾಷ್ಟ್ರ ಸಮುದ್ರಕ್ಕೆಸೆಯುವ ಹುಳು ಹಿಡಿದ ರವೆಯನ್ನು ಜೊತೆಗೆ ಪಾಮ್ ಆಯಿಲ್ ನ ಬಿಕ್ಷೆಯನ್ನು ಹಾಕಿ, ಪಾರ್ಥೆನಿಯಮ್ ಅನ್ನು ಉಚಿತವಾಗಿ ನೀಡಿತ್ತು! ಆಗಲೇ ಆರಂಭವಾಗಿದ್ದು ಶಾಲಾ ಮಕ್ಕಳಿಗೆ ಮಧ್ಯಾಹ್ನ ಊಟವನ್ನು ನೀಡುವ ಕೇರ್‍ ಪ್ರೋಜೆಕ್ಟ್ ಯೋಜನೆ. ಇದನ್ನು  ಸಮಾಜವಾದಿಗಳು ತೀವ್ರವಾಗಿ ಪ್ರತಿಭಟಿಸಿದ್ದರು. ಆಗ ಹರಡಿದ ಪಾರ್ಥೆನಿಯಮ್ ಅನ್ನು ನಿಯಂತ್ರಿಸಲು ಮೆಕ್ಸಿಕೋದಿಂದ ’ಮೆಕ್ಸಿಕನ್ ಭೀ’ ಯನ್ನು ಆಮದು ಮಾಡಿಕೊಳ್ಳಲಾಗಿತ್ತು!.

ಅಂದು ಕುಡಿಯಲು ನೀರಿತ್ತು; ತಿನ್ನಲು ಆಹಾರವಿರಲಿಲ್ಲ. ಇಂದು ಸರಕಾರದ ಹಲವಾರು ಯೋಜನೆಗಳಿಂದ ಬಡ ಜನರ ಹೊಟ್ಟೆ ಅನಾಯಸವಾಗಿ ತುಂಬುತ್ತಿದೆ. ಹಾಗಾಗಿ ಅವರೀಗ ಹಸಿವೆಯಿಂದ ಸಾಯಲಾರರು. ’ಉದ್ಯೋಗ ಖಾತ್ರಿ’ಯೆಂಬ ದೂರದರ್ಶಿತ್ವವಿಲ್ಲದ ಯೋಜನೆಯಿಂದಾಗಿ ಸುಲಭದಲ್ಲಿ ಒಂದಷ್ಟು ದುಡ್ಡು ಅವರ ಕೈಸೇರುತ್ತಿದೆ. ಹೇಗೂ ಬಿಪಿಎಲ್ ಕಾರ್ಡ್ ನಲ್ಲಿ ಅತೀ ಕಡಿಮೆ ದರದಲ್ಲಿ ಪಡಿತರ ದೊರೆಯುತ್ತದೆ. ಇದರ ನೇರ ಪರಿಣಾಮ ಕೃಷಿಕ್ಷೇತ್ರದ ಮೇಲಾಗಿದೆ. ಅಲ್ಲೀಗ ಕೃಷಿಕಾರ್ಮಿಕರ ಕೊರತೆಯುಂಟಾಗಿ ಕೃಷಿಭೂಮಿಯೆಲ್ಲ ಪ್ಲಾಂಟೇಷನ್ ಬೆಳೆ ಬೆಳೆಯುವ ಜಾಗಗಳಾಗಿ ಪರಿವರ್ತನೆಯಾಗುತ್ತಿದೆ.
ಮುಂದಿನ ದಿನಗಳಲ್ಲಿ ಜನರು  ಸತ್ತರೆ ನೀರಿಲ್ಲದೆ ಸಾಯಬೇಕಷ್ಟೇ.ಮನುಷ್ಯ ಪ್ರಕೃತಿಯ ಮೇಲೆ ಹೀಗೆಯೇ ದೌರ್ಜನ್ಯ ನಡೆಸುತ್ತಾ ಹೋದರೆ ಆ ದಿನಗಳೂ ದೂರವಿಲ್ಲವೆನಿಸುತ್ತಿದೆ

[ ಮೇ ೮ರ ವಿಜಯಕರ್ನಾಟಕದ ನನ್ನ ಅಂಕಣ ’ಅನುರಣನ’ದಲ್ಲಿ ಪ್ರಕಟವಾದ ಬರಹ.]

Saturday, April 28, 2012

ಕನ್ನಡಕ್ಕೆ ಡಬ್ಬಿಂಗ್ ಯಾಕೆ ಬೇಡ?




ಕನ್ನಡದ ಡಬ್ಬಿಂಗ್ ವಿರೋಧಿ ಭೂತ ಮತ್ತೊಮ್ಮೆ ಕಾಣಿಸಿಕೊಂಡಿದೆ.
ಇದಕ್ಕೆ ಕಾರಣವಾಗಿದ್ದು. ಮೇ ೬ರಂದು ಪ್ರಸಾರವಾಗಲಿರುವ ಅಮಿರ್ ಖಾನ್ ನ ಮಹತ್ವಾಕಾಂಕ್ಷೆಯ ರಿಯಾಲಿಟಿ ಶೋ ’ಸತ್ಯ ಮೇವ ಜಯತೇ’. ಅಮಿರ್ ಹೇಳುವ ಪ್ರಕಾರ ಅದು ಕನ್ನಡವೂ ಸೇರಿದಂತೆ ದಕ್ಷಿಣಭಾರತದ ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಿಗೆ ಡಬ್ ಆಗಿ ಪ್ರಸಾರವಾಗಲಿದೆ. ಹಿಂದೆ ರಾಮಾಯಣ, ಮಹಾಭಾರತಗಳು ಪ್ರಸಾರವಾಗುತ್ತಿದ್ದ ಭಾನುವಾರದ ಹನ್ನೊಂದು ಘಂಟೆಯ ಜನಪ್ರಿಯ ಸ್ಲಾಟ್ ನಲ್ಲಿ ಇದು ಪ್ರಸಾರ ಕಾಣಲಿದೆ. ಮೊತ್ತ ಮೊದಲಬಾರಿಗೆ ಖಾಸಗಿ ಮತ್ತು ದೂರದರ್ಶನ ಚಾನಲ್ ಗಳಲ್ಲಿ ಏಕ ಕಾಲದಲ್ಲಿ ಪ್ರಸಾರವಾಗಲಿರುವ ಈ ಶೋ ಇತಿಹಾಸ ನಿರ್ಮಿಸಲಿದೆ ಮತ್ತು ಭಾರತವನ್ನು ಭಾವನಾತ್ಮಕವಾಗಿ ಬೆಸೆಯಲಿದೆ ಎಂಬುದು ಅಮೀರ್ ಖಾನ್ ಹೇಳಿಕೆ. ಆತ ಈ ಶೋದ ಪ್ರಚಾರಕ್ಕಾಗಿ ಖರ್ಚು ಮಾಡದ ಹಣ ೬.೨೫ ಕೋಟಿ ರೂಪಾಯಿಗಳು. ಸಲ್ಮಾನ್ ಖಾನ್, ಶಾರೂಕ್ ಖಾನ್ ನಂತ ತಾರೆಯರ ಸಿನೇಮಾಗಳ ಪ್ರಚಾರಕ್ಕೆ ಖರ್ಚು ಮಾಡುವುದು ೨.೫ ಕೋಟಿ ರೂಪಾಯಿಗಳು ಅಂದರೆ ಅಮಿರ್ ತನ್ನ ಶೋದ ಮೇಲೆ ಇಟ್ಟಿರುವ ಭರವಸೆ ನಮಗೆ ಅರ್ಥವಾಗುತ್ತದೆ.
   
ಅಮಿರ್ ನ ಶೋವನ್ನು ಕನ್ನಡ ಟೆಲಿವಿಷನ್ ಸಂಘಟನೆಗಳು ವಿರೋಧಿಸಿವೆ ಮತ್ತು ಕನ್ನಡಕ್ಕೆ ಡಬ್ ಆಗದಂತೆ ನೋಡಿಕೊಂಡಿವೆ. ನಾವೀಗ ಅದನ್ನು ಹಿಂದಿಯಲ್ಲೋ ಅಥವಾ ನೆರೆ ರಾಜ್ಯದ ಭಾಷೆಗಳಾದ ತೆಲುಗು, ತಮಿಳು ಅಥವಾ ಮಲೆಯಾಳ ಭಾಷೆಗಳಲ್ಲಿ ನೋಡಬೇಕಾಗಿದೆ.
ಕನ್ನಡ ಟೆಲಿವಿಷನ್ ಸಂಘಟನೆಗಳು ಯಾಕೆ ಈ ತೀರ್ಮಾನಕ್ಕೆ ಬಂದಿವೆ? ಅದಕ್ಕೆ ಅವು ಕೊಡುವ ಪ್ರಮುಖ ಕಾರಣಗಳು ಎರಡು. ಒಂದು; ಕನ್ನಡ ಚಿತ್ರರಂಗವನ್ನೇ ನಂಬಿಕೊಂಡಿರುವ ಸುಮಾರು ಐದು ಸಾವಿರ ಕಲಾವಿದರು ಮತ್ತು ತಂತ್ರಜ್ನರು ತಮ್ಮ ಕೆಲಸವನ್ನು ಕಳೆದುಕೊಳ್ಳುತ್ತಾರೆ. ಆ ಮೂಲಕ ಅವರ ಕುಟುಂಬ ಬೀದಿಗೆ ಬರುತ್ತದೆ.
ಇನ್ನೊಂದು ಕಾರಣ,  ಕನ್ನಡ ಭಾಷೆ ಮತ್ತು ಸಂಸ್ಕೃತಿ ನಾಶವಾಗುತ್ತಿದೆಯೆಂಬ ಆತಂಕ.
ಟೆಲಿವಿಷನ್ ಸಂಘಟನೆಗಳು ಮಾತ್ರವಲ್ಲ  ಬಹುತೇಕ ಇಡೀ ಕನ್ನಡ ಚಿತ್ರರಂಗ ಡಬ್ಬಿಂಗ್ ವಿರೋಧಿಯಾಗಿದೆ. ಕನ್ನಡದ ಹಲವು ಸಿನೇಮಾ ಪತ್ರಕರ್ತರೂ ಅವರ ಪರವಾಗಿ ನಿಂತಂತಿದೆ. ಇಲ್ಲಿ ಒಂದು ವಿಷಯ ಗಮನಿಸಬೇಕು.ಕನ್ನಡ ಚಿತ್ರರಂಗ ಮತ್ತು ಟೀವಿ ಚಾನಲ್ ಗಳ ಸಂಬಂಧ ಅವಿನಾಭವವಾದುದು. ಅವರು ಎಂದೂ ಪರಸ್ಪರ ವಿರೋಧಿಗಳಲ್ಲ. ಅವರ ಸಿನೇಮಾಕ್ಕೆ ಇವರು ಪ್ರಚಾರ ಕೊಡಬೇಕು ಅವರ ಸಿನೇಮಾಗಳು, ಹಾಡುಗಳು, ಕ್ಲಿಪ್ಪಿಂಗ್ಸ್ ಗಳು ಇಲ್ಲದಿದ್ದರೆ ಇವರ ಟಿಅರ್ ಪಿ ಗ್ರಾಫ್ ಏರುವುದಿಲ್ಲ. ಇಲ್ಲಿ ಇಂಗು ತಿಂದ ಮಂಗನಂತಾಗಿರುವುದು, ಕನ್ನಡ ಭಾಷೆ ಮಾತ್ರ ಬಲ್ಲ ಪ್ರೇಕ್ಷಕರು
 ಡಬ್ಬಿಂಗ್ ವಿರೋಧಿಗಳು ಕೊಡುವ ಕಾರಣಗಳು ಕಾರಣಗಳೇ ಅಲ್ಲ. ಅದರಲ್ಲಿ ವಾಣಿಜ್ಯ ಉದ್ದೇಶಗಳಿವೆ. ಚಿತ್ರರಂಗವೊಂದು ಉದ್ಯಮ. ಗ್ರಾಹಕನಿಗೆ ಬೇಕಾದುದು ಎಲ್ಲವೂ ಅಲ್ಲಿ ದೊರೆಯಬೇಕು.ಕೆಲವನ್ನು ಮಾತ್ರ ಕೊಡುತ್ತೆಯೆಂಬುದು ಸರಿಯಲ್ಲ, ಎಂಬುದು ಡಬ್ಬಿಂಗ್ ಪರವಾಗಿರುವವರ ವಾದ.

 ಸಿನೇಮಾ ಒಂದು ಕಲಾ ಪ್ರಕಾರ; ಸೃಜನಶೀಲ ಕ್ಷೇತ್ರ. ಕಲೆಗೆ ಮಾನವನ  ಬದುಕನ್ನು ಮುನ್ನಡೆಸುವ,  ಬದಲಾಯಿಸುವ ಮತ್ತು ಎತ್ತರಿಸುವ ಶಕ್ತಿಯಿದೆ. ಅದು ಕೊಡುವ ಅನುಭವ ಶಬ್ದಾತೀತವಾದುದು. ಭಾಷಾತೀತವಾದುದು. ಅಲ್ಲಿ  ಅದೊಂದು ಜ್ನಾನಶಾಖೆ. ಹಾಗಾಗಿ ಅದು ಮನೋರಂಜನೆಯ ಜೊತೆ ಜೊತೆಗೆ ಜ್ನಾನವನ್ನು ಹಂಚುತ್ತದೆ.  ಉಳಿದ ಕಲೆಗಳಲ್ಲಿ ಇರದ ವಿಶೇಷವಾದ ಒಂದು ಗುಣ ಸಿನೇಮಾದಲ್ಲಿದೆ. ಅದು ಅಕ್ಷರ ಹೀನರನ್ನೂ ಸುಸಂಸ್ಕೃತರನ್ನಾಗಿ ಮಾಡುತ್ತದೆ

 ಕನ್ನಡ ಭಾಷೆಗೆ ಒಂದು ಸಾವಿರ ವರ್ಷಗಳ ಲಿಖಿತ ಇತಿಹಾಸವಿದೆ. ಅದಕ್ಕೂ ಮೀರಿದ ಜಾನಪದ ಪರಂಪರೆಯಿದೆ. ಯಾವ ಅನ್ಯ ಸಂಸ್ಕೃತಿಯೂ ಕನ್ನಡ ಸಂಸ್ಕೃತಿಯನ್ನು ನಾಶ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ. ಅದಕ್ಕೆ ಎಲ್ಲವನ್ನೂ ತನ್ನದಾಗಿಸಿಕೊಳ್ಳುವ, ಜೀರ್ಣಿಸಿಕೊಳ್ಳುವ ಅಗಾಧ ಶಕ್ತಿಯಿದೆ. ಒಂದು ಕಾಲಕ್ಕೆ ಸಂಸ್ಕೃತ ಪಂಡಿತರ ಅಂದರೆ ಅಕ್ಷರವಂತರ ಭಾಷೆಯಾಗಿತ್ತು. ಪ್ರಭುತ್ವದ ರಕ್ಷಣೆಯಲ್ಲಿತ್ತು . ಇಂತಹ ಸುರಕ್ಷಿತ ವಲಯದಲ್ಲಿ ಹುಟ್ಟಿದ ರಾಮಾಯಣ ಮಹಾಭಾರತಗಳನ್ನು ನಮ್ಮ ಅಕ್ಷರವಂಚಿತ ಜನಸಾಮಾನ್ಯರು ತಮ್ಮದಾಗಿಸಿಕೊಂಡ ಪರಿಯನ್ನು ನೋಡಿದರೆ ಅವರ ಜ್ನಾನಕ್ಕೆ ಅಚ್ಚರಿಪಡಲೇ ಬೇಕು. ಪತಿ ಊರಲ್ಲೂ ರಾಮಾಯಣವನ್ನು ನೆನಪಿಸುವ ಮತ್ತು ಪಾಂಡವರು ನಡೆದಾಡಿದ ಕುರುಹುಗಳನ್ನು ಜನರ ಬಾಯಲ್ಲಿ ಕೇಳಬಹುದು. ಅವರ ಗ್ರಹಿಕೆ ಮತ್ತು ಪುನರ್ ಸೃಷ್ಟಿ ಅನನ್ಯವಾದುದು.  ಇಂತಹ  ಸಂಸ್ಕೃತಿಯನ್ನು ಕಡೆಗಣಿಸಿ  ಕತ್ತಿ, ಲಾಂಗ್, ಮಚ್ಚು-ಮಚ್ಛಾಗಳಿಂದ ಕೂಡಿದ ಡಾಗರ್ ಸಂಸ್ಕೃತಿಯನ್ನೇ ಕನ್ನಡದ ಸಂಸ್ಕೃತಿ ಎಂಬಂತೆ ಬಿಂಬಿಸಿ ’ಇದನ್ನು ಮಾತ್ರ ನೋಡಿ’ ಎಂದು ತಾಕೀತು ಮಾಡಿದರೆ..? ತಾವು ಬಾವಿಯಲ್ಲಿನ ಕಪ್ಪೆಗಳಂತಿರುವುದಲ್ಲದೆ ಪ್ರೇಕ್ಷಕರನ್ನು ಕೂಡಾ ಹಾಗೆಯೇ ಇರಿ ಎಂದು ಹೇಳಿದರೆ..?

ಭಾಷೆ ಬೆಳೆಯುವುದೇ ಕೊಡು-ಕೊಳ್ಳುವಿಕೆಯಿಂದ.’ಇವಳ ತೊಡುಗೆ ಅವಳಿಗಿಟ್ಟು ನೋಡಬಯಸಿದೆ’ ಎಂದು ಪ್ರಯೋಗಕ್ಕೆ ಒಡ್ಡಿಕೊಂಡು ಇಂಗ್ಲೀಷನ್ನು ಅಪ್ಪಿಕೊಂಡ ಕಾರಣದಿಂದಲೇ ಕನ್ನಡ ಭಾಷೆ ಇಂದು ಸಮೃದ್ಧವಾಗಿ ಬೆಳೆದು ನಿಂತಿದೆ. ಅವರೆಲ್ಲಾ ಅನ್ಯಭಾಷೆಯ ಮೂಲದ್ರವ್ಯವನ್ನು ತೆಗೆದುಕೊಂಡು ಕನ್ನಡೀಕರಿಸುತ್ತಿದ್ದರು. ಯೋಗ್ಯರಾದವರ ಕೈಯ್ಯಲ್ಲಿ ಸಿಕ್ಕಿದರೆ ಕನ್ನಡಭಾಷೆಗೆ ಮೂಲವನ್ನು ಮೀರುವ ಧ್ವನಿಶಕ್ತಿಯಿದೆ. ’lead kindly light’ ಇಂಗ್ಲೀಷ್ ಹಾಡು ಬಿ.ಎಮ್.ಶ್ರೀ ಕೈಯ್ಯಲ್ಲಿ ’ಕರುಣಾಳು ಬಾ ಬೆಳಕೇ…’ಎಂಬ ಅನುಭಾವದ ಹಾಡಿನಂತೆ. ಬರ್ನ್ ಕವಿಯ ’my love is like a red red rose’ ಹಾಡು ’ನನ್ನ ಪ್ರೇಮದ ಹುಡುಗಿ ತಾವರೆಯ ಹೊಸ ಕೆಂಪು’ ಆಗಿ ಕನ್ನಡ ಹಾಡಾಗಿ ಉಳಿದುಬಿಡುತ್ತದೆ. ಕನ್ನಡ ಸಾಹಿತ್ಯ ಪ್ರಪಂಚ ಅನುವಾದ ಸಾಹಿತ್ಯಕ್ಕೆ ತೆರೆದುಕೊಳ್ಳದಿರುತ್ತಿದ್ದರೆ ನಮಗೆ ಪಾಶ್ಚಾತ್ಯ ಮತ್ತು ಪೌರಾತ್ಯ ಜಗತ್ತಿನ ಸಾಹಿತ್ಯ ಮತ್ತು  ಚಿಂತನೆಯ ಪರಿಚಯವೇ ಆಗುತ್ತಿರಲಿಲ್ಲ.

 ಜಾಗತೀಕರಣಕ್ಕೆ ತೆರೆದುಕೊಂಡವರು ನಾವು. ಸ್ಪರ್ಧೆ ಅನಿವಾರ್ಯ. ಗ್ರಾಹಕ ಸಂಸ್ಕೃತಿಯಲ್ಲಿ ಗುಣಮಟ್ಟದ ಉತ್ಪಾದನೆಯೇ ಅಂತಿಮ. ಅದು ನಮಗೆ  ನಮ್ಮದೇ ಭಾಷೆಯಲ್ಲಿ  ದೊರೆಯಬೇಕು. .ಇಲ್ಲವಾದರೆ ಯಾವ ಭಾಷೆಯಲ್ಲಿ ನಮಗದು ಸಿಗುತ್ತದೋ ಆ ಭಾಷೆಯನ್ನು ನಾವು ಕಲಿಯುತ್ತೇವೆ. ಆಗ ನಿಜವಾಗಿಯೂ ನಮ್ಮ ಭಾಷೆ ಸೊರಗುತ್ತದೆ. ನಾನು ತಮಿಳು ಮತ್ತು ಮಲೆಯಾಳಂ ಭಾಷೆ ಕಲಿತದ್ದು ಹಾಗೆಯೇ. ಬೆಂಗಾಲಿ ಮತ್ತು ಅಸ್ಸಾಂ ಭಾಷೆಯ ಚಿತ್ರಗಳು ನನಗೆ ಕಾಲೇಜು ದಿನಗಳಲ್ಲಿ ನೋಡಲು ಸಿಗುತ್ತಿದ್ದರೆ ಆ ಭಾಷೆಯನ್ನೂ ಕಲಿಯುತ್ತಿದ್ದೆನೇನೋ..! ಆಗ ನನಗೆ ಆಯ್ಕೆಗಳು ಕಮ್ಮಿ ಇತ್ತು..!! ಹಾಗಾಗಿ ನಾನು ಕನ್ನಡವನ್ನೂ ಕಲಿತೆ…!!! ಈಗಿನ ಪೀಳಿಗೆಯವರು ಹೆಚ್ಚೆಚ್ಚು ಭಾಷೆಯನ್ನು ಕಲಿತ್ತಿದ್ದರೆ, ಕಲಿಯುತ್ತಿದ್ದರೆ ಅದಕ್ಕೆ ಕನ್ನಡ ಚಿತ್ರರಂಗದ ಜಿಗುಟುತನವೂ ಒಂದು ಕಾರಣ. ಅವರಿಗೆ ಕನ್ನಡ ಹೊರಜಗತ್ತಿಗೂ ಬೇಡ, ಒಳಜಗತ್ತಿಗೂ ಬೇಡ..!

 ’ಇನ್ ಸೆಪ್ಷನ್’”ಅವಟಾರ್’ ನಂತಹ ಸಿನೇಮಾಗಳು ಅದರ ಎಲ್ಲಾ ತಾಂತ್ರಿಕ ವೈಭವದೊಡನೆ ನನಗೆ ಬೇಕಾಗಿದ್ದರೆ ಹಳ್ಳಿಯಲ್ಲಿರುವ ನನ್ನ ಅಮ್ಮನಿಗೆ ನ್ಯಾಷನಲ್ ಜಿಯಾಗ್ರಪಿಯಲ್ಲಿ ಪ್ರಸಾರವಾಗುವ ಕಡಲಾಳದ ವಿಸ್ಮಯಗಳು ಬೇಕು. ನನ್ನ ಅಪ್ಪನಿಗೆ ಡಿಸ್ಕವರಿಯ ಪ್ರಾಣಿಪ್ರಪಂಚ, ಅಣ್ಣನಿಗೆ ಹಿಸ್ಟರಿ ಚಾನಲ್, ಕೆಲಸದವಳಿಗೆ ರಾಮಾಯಣ- ಮಹಾಭಾರತ ..ಮಗನಿಗೆ ಕಾರ್ಟೂನ್ ಚಾನಲ್ ಗಳು ಬೇಕು. ಕನ್ನಡ ಚಿತ್ರರಂಗದ ಸೀಮಿತ ಮಾರುಕಟ್ಟೆ ಮತ್ತು ಅದರ ಅರ್ಥಿಕ ಸಾಮರ್ಥ್ಯದ ಅರಿವು ನಮಗಿದೆ. ಹಾಗಾಗಿ ನಮಗೆ ವಿಶ್ವದ ಆಯ್ದ ಸಿನೇಮಾಗಳ, ಡಾಕ್ಯುಮೆಂಟರಿಗಳ ಡಬ್ಬಿಂಗ್ ವರ್ಷನ್ ಬೇಕು.   ಕಾರಣವೇ ಅಲ್ಲದ ಕಾರಣಗಳನ್ನು ಮುಂದಿಟ್ಟುಕೊಂಡು  ನಮ್ಮ ಜ್ನಾನ ವಿಸ್ತಾರದ ಬಾಗಿಲುಗಳನ್ನು ಮುಚ್ಚುತ್ತಾ, ಸ್ಪರ್ಧೆಯಿಂದ ಹಿಂದೆ ಸರಿಯುವುದೆಂದರೆ ಅದು ಆರು ಕೋಟಿ ಕನ್ನಡಿಗರಿಗೆ ಎಸಗುತ್ತಿರುವ ಅನ್ಯಾಯ.  ಈ ಬಗ್ಗೆ ಚಿಂತನೆ ನಡೆಯಬೇಕು. 

[ ವಿಜಯಕರ್ನಾಟಕದ ’ಅನುರಣನ’ ಕಾಲಂ ನಲ್ಲಿ ಪ್ರಕಟವಾದ ಲೇಖನದ ಪರಿಷ್ಕೃತ ಬರಹ ]

Monday, April 9, 2012

ವಧಾಸ್ಥಾನದಲ್ಲಿ ವೈಯಕ್ತಿಕ ಸಂಬಂಧಗಳು



”ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧ ಸಮಾಜವನ್ನು ಸೃಷ್ಟಿಸುತ್ತದೆ; ಸಮಾಜ ನನ್ನನ್ನು ಮತ್ತು ನಿಮ್ಮನ್ನು ಬಿಟ್ಟು ಬೇರೆಯಾಗಿಲ್ಲ; ಇಬ್ಬರು ವ್ಯಕ್ತಿಗಳು ತಾವು ಪರಸ್ಪರ ಸೇರಿಕೊಂಡಿದ್ದೇವೆಂಬುದನ್ನು ಅರಿತರೆ,ಅದೇ ಸಂಬಂಧ. ಸಂಬಂಧವೆಂದರೆ ಭಯವಿಲ್ಲದ ಸಹಭಾಗಿತ್ವ ಅಥವಾ ಭಾವೈಕತೆ, ಪರಸ್ಪರ ಅರ್ಥ ಮಾಡಿಕೊಳ್ಳಲು, ನೇರವಾಗಿ ಸಂಪರ್ಕಿಸಲು ಮುಕ್ತ ವಾತಾವರಣ. ಆದರೆ ನಾವು ಸಂಬಂಧವನ್ನು ಸುಖಸಾದನವನ್ನಾಗಿ ಬಳಸಿಕೊಳ್ಳುತ್ತೇವೆ. ”. ಇದು ಪ್ರಸಿದ್ಧ ದಾರ್ಶನಿಕ ಜೆ. ಕೃಷ್ಣಮೂರ್ತಿಯವರು ಸಂಬಂಧಕ್ಕೆ ನೀಡುವ ವ್ಯಾಖ್ಯಾನ.
ಇಲ್ಲಿ ಅವರು ’ಸಂಬಂಧಗಳ ಬಳಸಿಕೊಳ್ಳುವಿಕೆ’ ಎಂಬ ಶಬ್ದವನ್ನು ಉಪಯೋಗಿಸಿದ್ದಾರೆ. ಅದರ ಬಗ್ಗೆ ನನಗೆ ಕುತೂಹಲವಿದೆ. ಸಂಬಂಧಗಳನ್ನು ಬಳಸಿಕೊಳ್ಳುವುದು ಎಂದರೆ ಏನು? ಅದರಿಂದ ಪ್ರಯೋಜನವನ್ನು ಪಡೆದುಕೊಳ್ಳುವುದೇ? ವ್ಯವಾಹರಿಕವಾದ ದೃಷ್ಟಿಕೋನದಿಂದ ನೋಡುವುದೇ?. ಅದು ನನಗೆ ಸುಖವನ್ನು ಕೊಡುವುದಿಲ್ಲ ಎಂದು ಅನ್ನಿಸಿದರೆ ಅಥವಾ ಅದು ಹಳೆಯದಾಯಿತು, ಆಕರ್ಷಣೆಯನ್ನು ಕಳೆದುಕೊಂಡಿತು ಎಂದರೆ ಅದನ್ನು ತ್ಯಜಿಸಿಬಿಡುವುದೇ?. ಸಂಬಂಧಗಳು ಅಂದರೆ ಅಷ್ಟೆನಾ…?
ನಾವು ಸಂಬಂಧಗಳನ್ನು ವ್ಯವಹಾರಿಕ ಸಂಬಂಧಗಳು. ಭಾವನಾತ್ಮಕ ಸಂಬಂಧಗಳು, ರಕ್ತ ಸಂಬಂಧಗಳು ಮಾನವೀಯ ಸಂಬಂಧಗಳು ಎಂದೆಲ್ಲಾ ವಿಂಗಡಿಸುತ್ತೇವೆ. ಈ ಎಲ್ಲಾ ಸಂಬಂಧಗಳಲ್ಲೂ ಬಳಸುವಿಕೆ ಎಂಬುದು ಅಲ್ಪ ಪ್ರಮಾಣದಲ್ಲಿ ಇದ್ದೇ ಇರುತ್ತದೆ. ಏಕೆಂದರೆ ಇಲ್ಲಿ ಪರಸ್ಪರ ಅವಲಂಬನೆ, ನಂಬಿಕೆ. ವಿಶ್ವಾಸ ಪ್ರೀತಿ ಮತ್ತು ಪ್ರಾಮಾಣಿಕತೆಯಿರುತ್ತದೆ. ಒಳ್ಳೆಯ ಬದುಕಿನ ಹಂಬಲವಿರುತ್ತದೆ. ಆ ಮೂಲಕ ಸ್ವಸ್ಥ ಸಮಾಜ ರೂಪುಗೊಳ್ಳುತ್ತದೆ. ಆದರೆ ಇಂದು ಮಾಧ್ಯಮಗಳಲ್ಲಿ ಪರಸ್ಪರ ಹೊಡೆದಾಡುತ್ತಿರುವ, ಕೆಸರೆರೆಚಿಕೊಳ್ಳುತ್ತಿರುವ ಸಂಬಂಧಗಳನ್ನು ನೋಡುತ್ತಿರುವಾಗ ಇಲ್ಲಿ ’ಬಳಸಿಕೊಳ್ಳುವಿಕೆ’ಯೇ ಪ್ರಮುಖ ಅಸ್ತ್ರವಾಗಿ ಬಳಕೆಯಾಗುತ್ತಿದೆ ಎಂದು ಅನ್ನಿಸುವುದಿಲ್ಲವೇ?
ಮೊನ್ನೆ ಭಾನುವಾರ ಕನ್ನಡದ ಸುದ್ದಿವಾಹಿನಿಗಳಲ್ಲಿ ಸೆಲೆಬ್ರಿಟಿಗಳಿಗೆ ಸಂಬಂಧಪಟ್ಟಂತೆ ಎರಡು ಕೆಸರೆರಚಾಟ ನಡೆಯಿತು. ಒಂದು ಭಾವನಾತ್ಮಕ ಸಂಬಂಧಕ್ಕೆ ಸಂಬಂಧಪಟ್ಟದಾದರೆ ಇನ್ನೊಂದು ವ್ಯವಾಹರಿಕ ಸಂಬಂಧಕ್ಕೆ ಸಂಬಂಧಿಸಿದ್ದು. ಆದರೆ ಇವೆರಡರಲ್ಲಿ ನಲುಗಿದ್ದು ಮಾನವೀಯ ಸಂಬಂಧಗಳು. ಇಲ್ಲಿನ ಚರ್ಚೆಯ ಪರಿ, ಚರ್ಚೆಗೆ ವಿನಿಯೋಗಿಸಿದ ಕಾಲಾವಧಿಯನ್ನು ಗಮನಿಸಿದರೆ ಸಂಬಂಧಗಳ ಬಳಸಿಕೊಳ್ಳುವಿಕೆಯ ವಿವಿಧ ರೂಪಗಳು ಅನಾವರಣಗೊಂಡವು.
ಚರ್ಚೆ ನಡೆಯಲಿ, ಬೇಡ ಎನ್ನುವುದಿಲ್ಲ. ಅದಕ್ಕೊಂದು ಘನತೆ, ಗಾಂಭೀರ್ಯ, ತಾರ್ಕಿಕತೆ ಬೇಡವೇ? ನ್ಯಾಯಾಧೀಶರ ಗತ್ತಿನಲ್ಲಿ ಕುಳಿತುಕೊಳ್ಳವವರು ನ್ಯಾಯದಾನ ನೀಡುವಷ್ಟು ಪ್ರಾಮಾಣಿಕರಾಗಿರಬೇಕಲ್ಲವೇ? ನೀತಿ ಪಾಠ ಹೇಳುವವರು ಸ್ವತಃ ನೀತಿವಂತರಾಗಿರಬೇಕಲ್ಲವೇ?
ಪ್ರತಿಯೊಬ್ಬರ ಬದುಕಿನಲ್ಲೂ ಹತ್ತಾರು ಧಾರಾವಾಹಿಗಳಿಗಾಗುವಷ್ಟು ಸರಕಿರುತ್ತದೆ. ಹಾಗೆಂದುಕೊಂಡು ಅವುಗಳನ್ನೆಲ್ಲಾ ಮಾರಾಟಕ್ಕಿಡಲು ಸಾಧ್ಯವೇ?
ನಮ್ಮ ಬದುಕು ಕೇವಲ ”ನನ್ನದು’ ಮಾತ್ರ ಆಗಿರುವುದಿಲ್ಲ. ಅದು ’ನಮ್ಮವರ’ ಜೊತೆ ಹಣೆಯಲ್ಪಟ್ಟಿರುತ್ತೆ. ನಾವು ಎಲ್ಲವನ್ನೂ ತೆರೆದಿಡುತ್ತಾ ಹೋದರೆ ಅವರ ಬದುಕು ಅಲ್ಲಾಡಿಬಿಡುತ್ತದೆ. ಆ ಅರಿವು ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ಬದುಕನ್ನು ತೆರೆದಿಡುವವರ ಅರಿವಿನಲ್ಲಿರಬೇಕು. ತಾವಾಗಿಯೇ ತಮ್ಮ ಬದುಕನ್ನು ಬೀದಿಗೆ ಹರಡಿ ನಿಲ್ಲುವುದರಲ್ಲಿ ಬೇರೆ ಬೇರೆ ಉದ್ದೇಶಗಳು ಅಡಗಿರಬಹುದು. ಆದರೆ ಕೆಲವೊಮ್ಮೆ ಬೇರೆಯವರು ನಮ್ಮ ಬದುಕನ್ನು ಎಳೆದು ತಂದು ವಧಾಸ್ಥಾನದಲ್ಲಿ ನಿಲ್ಲಿಸುತ್ತಾರಲ್ಲಾ, ಅದಕ್ಕೇನು ಮಾಡುವುದು?
ಪ್ರತಿಯೊಬ್ಬ ಮನುಷ್ಯನಿಗೂ ಒಂದು ವ್ಯಯಕ್ತಿಕ ಬದುಕು ಇನ್ನೊಂದು ಸಾರ್ವಜನಿಕ ಬದುಕಿರುತ್ತದೆ. ಸಾರ್ವಜನಿಕ ಬದುಕಿನಲ್ಲಿರುವ ಸೆಲೆಬ್ರಿಟಿಗಳ ಬದುಕಿನ ಬಗ್ಗೆ ಜನಸಾಮಾನ್ಯರಿಗೆ ಯಾವಾಗಲೂ ಕುತೂಹಲವಿರುತ್ತದೆ. ಅದು ಗಂಡು ಹೆಣ್ಣಿನ ಸಂಬಂಧಕ್ಕೆ ಸಂಬಂಧಪಟ್ಟಿದ್ದಾದರೆ ಅದಕ್ಕೊಂದು ಸಾಮಾಜಿಕ ಚೌಕಟ್ಟು ಇದ್ದೇ ಇರುತ್ತದೆ. ಕೆಲವು ಸಂಬಂಧಗಳು ಸಮಾಜದ ದೃಷ್ಟಿಯಲ್ಲಿ ಅನೈತಿಕ ಎನಿಸಬಹುದು. ಆದರೆ ವ್ಯಯಕ್ತಿಕವಾಗಿ ಸಹ್ಯ ಅನಿಸಬಹುದು. ಆದರೆ ಚೌಕಟ್ಟುಗಳನ್ನು ಮೀರುವ ಕನಸು ಎಲ್ಲರಲ್ಲೂ ಇದ್ದೇ ಇರುತ್ತದೆ.
ಅಂತಹದೊಂದು ಸಂಬಂಧ ಆತನಿಗೆ/ಅವಳಿಗೆ ವಾಸ್ತವದಲ್ಲಿ ದೊರಕಿದ್ದರೆ, ಅದನ್ನವರು ಜತನದಿಂದ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಅದನ್ನು ಛಿದ್ರಗೊಳಿಸುವ ಪ್ರಯತ್ನವನ್ನು ನಾವ್ಯಾಕೆ ಮಾಡಬೇಕು? ಒಂದು ವೇಳೆ ಅದು ಕಾನೂನು ವಿರೋಧಿಯಾಗಿದ್ದರೆ ಅದರಿಂದ ಬಾಧೆಗೊಳಗಾದವರು ಕಾನೂನಿನ ಚೌಕಟ್ಟಿನೊಳಗಡೆಯೇ ಪ್ರಶ್ನಿಸಲಿ. ಅವರೇ ಅದನ್ನು ನಿರ್ಲಕ್ಷಿಸಿದ್ದರೆ..ಉಪೇಕ್ಷಿಸಿದ್ದರೆ… ಬೇರೆಯವರು ಯಾಕೆ ಮೂಗು ತೂರಿಸಬೇಕು? ಒಂದು ವೇಳೆ ಅವರು ತಮ್ಮ ವೈಯಕ್ತಿಕ ಸಂಕಷ್ಟಗಳಿಂದ, ಗೋಜಲುಗಳಿಂದ ಹೊರಬರಲು ಅನ್ಯರ ಮೊರೆ ಹೋದಲ್ಲಿ ಅವರಿಗೆ ಪ್ರಾಮಾಣಿಕ ರೀತಿಯಲ್ಲಿ ಸಹಾಯ ಮಾಡಬೇಕೆ ಹೊರತು ಅದನ್ನು ಮತ್ತಷ್ಟು ಕಗ್ಗಂಟು ಮಾಡಬಾರದು.
ಜನ್ನನ ಯಶೋಧರ ಚರಿತೆಯ ಅಮೃತಮತಿಯನ್ನು ಬೀದಿಯಲ್ಲಿ ತಂದು ನಿಲ್ಲಿಸಿದ್ದು ಯಾಕೆ ಎಂಬುದು ಇಂದಿಗೂ ನನ್ನನ್ನು ಕಾಡುವ ಪ್ರಶ್ನೆ. ಅಮೃತಮತಿಯ ಗಂಡ ಯಶೋಧರ, ’ಗಂಡ’ನಾಗಿ ವರ್ತಿಸಿದ್ದನೇ? ಅದು ಅವಳಿಗೆ ತಾನೇ ಗೊತ್ತು? ನಮ್ಮ ತರ್ಕಗಳೇನಿದ್ದರೂ ಹೊರನೋಟದ್ದು. ಬೇರೆಯದೇ ಆದ ಒಳಜಗತ್ತೊಂದು ಇರುತ್ತದೆಯಲ್ಲವೇ? ಅದರ ಆಳಕ್ಕೆ ಇನ್ನೊಬ್ಬರು ಎಷ್ಟು ಇಳಿಯಲು ಸಾಧ್ಯ?
ಇಂದಿನ ಕಾಲಘಟ್ಟದಲ್ಲಿ ನಿಂತು ಯೋಚಿಸಿದರೆ ನನಗನಿಸಿದ್ದು ಇಷ್ಟು; ನಾನು ಒಬ್ಬ ಹುಡುಗನನ್ನು ಪ್ರೀತಿಸಿದ್ದರೆ, ಪ್ರೀತಿಸುತ್ತಿದ್ದರೆ ಅದು ನನಗೆ ಮತ್ತು ಅವನಿಗೆ ಸಂಬಂಧಿಸಿದ ವಿಚಾರ.. ಅದರಲ್ಲಿ ಇನ್ನೊಬ್ಬರ ’ಇಣುಕುವಿಕೆ’ಯನ್ನು ನಾನು ಸಹಿಸುವುದಿಲ್ಲ. ನಮ್ಮ ಮುನಿಸು, ನಮ್ಮ ಹಠ, ನಮ್ಮ ಸಾಂತ್ವನ, ನಮ್ಮ ಪಾಪ ನಿವೇದನೆ ಎಲ್ಲವೂ ನಮ್ಮ ಖಾಸಗಿ ಪ್ರಪಂಚಕ್ಕೆ ಸಂಬಂಧಿಸಿದ್ದು.
ಗಂಡು-ಹೆಣ್ಣಿನ ಸಂಬಂಧವೊಂದನ್ನು, ಅದು ವಿವಾಹಿತರಿರಲಿ ಅವಿವಾಹಿತರಿರಲಿ ಅದನ್ನು ಮತ್ತೆ ಮತ್ತೆ ಕೆದಕುವುದು, ಚುಚ್ಚುವುದು, ಅಲ್ಲಾಡಿಸುವುದು ಆ ವ್ಯಕ್ತಿಗಳ ಮಾನಸಿಕ ಆರೋಗ್ಯ ಮತ್ತು ಒಟ್ಟು ಸಮಾಜದ ಆರೋಗ್ಯದ ದೃಷ್ಟಿಯಿಂದಲೂ ಕ್ಷೇಮವಲ್ಲ. ನೈತಿಕತೆಗಿಂತ ಮಾನವೀಯತೆ, ಮನುಷ್ಯ ಸಂಬಂಧಗಳೇ ಮುಖ್ಯವಾಗಬೇಕು.
[ ವಿಜಯ ಕರ್ನಾಟಕದ ’ಅನುರಣನ’ ಅಂಕಣದಲ್ಲಿ ಪ್ರಕಟವಾದ ಬರಹ ]

Tuesday, March 27, 2012

ಪ್ರಭುತ್ವಕ್ಕೆ ಮಾತೃತ್ವದ ಸ್ಪರ್ಶವಿರಬೇಕು



ಅಂತೂ ಮಮತಾ ದೀದಿ ತಮ್ಮ ಹಠ ಸಾಧಿಸಿಯೇ ಬಿಟ್ಟರು.
ಮಮತಾ ಬ್ಯಾನರ್ಜಿಯದು ಸರ್ವಾಧಿಕಾರದ ಧೋರಣೆಯೇ?
ಹೌದು ಎನ್ನಲೇ ಬೇಕಾಗುತ್ತದೆ. ಆಕೆ ಹಾಗಿರಲಿಲ್ಲ. ಸರಳ ವ್ಯಕ್ತಿತ್ವದ, ಜನಪರ ಕಾಳಜಿಯ, ಎಲ್ಲರ ಬಾಯಿಯಿಂದ ’ದೀದಿ’ ಎಂದು ಕರೆಯಿಸಿಕೊಳ್ಳುತ್ತಿದ್ದ ಆಕೆ ತನ್ನ”ಪೊರೆಯುವ’ ಗುಣದಿಂದಾಗಿ. ರಾಜಕೀಯೇತರ ಕಾರಣಗಳಿಂದಲೂ ರಾಜಕೀಯದಲ್ಲಿ ಆಸಕ್ತಿ ಇರದವರ ಬಾಯಿಯಿಂದಲೂ ”ತಮ್ಮವಳು’ ಎಂದು ಅನ್ನಿಸಿಕೊಂಡಿದ್ದರು. ಆದರೆ….
ರೈಲ್ವೆ ಸಚಿವರಾಗಿದ್ದ ದಿನೇಶ್ ತ್ರಿವೇದಿ ಮಾಡಿದ್ದಾದರೂ ಏನು? ದೇಶದ ಹಿತದೃಷ್ಟಿಯಿಂದ, ನಷ್ಟದತ್ತ ಚಲಿಸುತ್ತಿರುವ ರೈಲ್ವೆ ಇಲಾಖೆಯನ್ನು ಲಾಭದತ್ತ ಮುನ್ನಡೆಸಲು ಕಿ.ಮೀ.ಗೆ ಹತ್ತು ಪೈಸೆ ದರವನ್ನು ಹೆಚ್ಚಿಸಿದ್ದು. ಇದನ್ನು ಜನಸಾಮಾನ್ಯರು ವಿರೋಧಿಸಲಿಲ್ಲ. ಆದರೆ ದೀದಿ ಕೆರಳಿ ಬಿಟ್ಟರು. ದಿನೇಶ್ ಗೆ ’ರಾಜೀನಾಮೆ ಬಿಸಾಕಯ್ಯ’ ಎಂದು ತಾಕೀತು ಮಾಡಿದರು. ಜನಸಾಮಾನ್ಯರಲ್ಲಿ ಇದ್ದ ದೂರದೃಷ್ಟಿ, ಉದಾರತೆ ಒಬ್ಬ ರಾಜಕಾರಣಿಯಲ್ಲಿ ಇರದಾಯಿತೇ? ಅಷ್ಟು ಸಂಕುಚಿತ ಮನಸ್ಸೇ ಆಕೆಯದೇ?
ಇಷ್ಟಕ್ಕೂ ದಿನೇಶ್ ತ್ರಿವೇದಿ ಯಾರು? ತಮ್ಮದೇ ಪಕ್ಷವಾದ ’ತೃಣಮೂಲ ಕಾಂಗ್ರೇಸ್’ ನ ಪ್ರತಿನಿಧಿಸುತ್ತಿರುವ ಸಚಿವರು. ಅಂತವರನ್ನು ನಿರ್ಧಾಕ್ಷಿಣ್ಯವಾಗಿ, ಯಾವುದೇ ಮುಲಾಜಿಲ್ಲದೆ ಕಿತ್ತೊಗೆಯಬೇಕೆಂದು ಆಕೆ ಬಯಸಿದಾಗ ನನಗೆ ನೆನಪಾಗಿದ್ದು ಅಡಿಗರ”ಭೂಮಿಗೀತ’ದ ಈ ಸಾಲುಗಳು.
’’ತಾಯಿಗೂ ಮಿಗಿಲಾಗಿ ಎದೆಗವಚಿಕೊಂಡಳೋ;
ತಿರುತಿರುಗಿ ತನ್ನ ಬಸಿರಲ್ಲಿಟ್ಟು ನವೆದಳೋ;
ಹಕ್ಕಿ ಕೊರಳನು ಹಿಚುಕಿ ಲಾಲಿ ಹಾಡಿದಳು;
ಸಸಿಕೊರಳ ಕೊಯ್ದು ತಿಂಡಿಯನು ತಿನಿಸಿದಳು.”
ಪೊರೆಯುವ ತಾಯಿಯೇ ಹಿಂಸಿಸುವ ಕ್ರೂರಿಯೂ ಆದಲ್ಲಿ ಮಕ್ಕಳ ಪಾಡೇನು?
ಮಮತಾ ಬ್ಯಾನರ್ಜಿಯೆಂಬ ಒಬ್ಬ ಮಹಿಳಾ ರಾಜಕಾರಣಿಯ ಬಗ್ಗೆ ಸಂಬಂಧಿಸಿದಂತೆ ಈ ಮಾತನ್ನು ನಾನು ಹೇಳುತ್ತಿಲ್ಲ. ರಾಜಕೀಯ ರಂಗದಲ್ಲಿ ಮುಂಚೂಣಿಯಲ್ಲಿರುವ ಕೆಲವು ಮುಖ್ಯ ಮಹಿಳೆಯರು ಹೃದಯಹೀನರಂತೆ ವರ್ತಿಸುತ್ತಿರುವುದೇಕೆ?
ಮಮತಾ ಬ್ಯಾನರ್ಜಿ, ಮಾಯಾವತಿ, ಜಯಲಲಿತಾ, ಉಮಾಭರತಿ, ನಮ್ಮ ರಾಜ್ಯಕ್ಕೆ ಬಂದರೆ ಶೋಭಾ ಕರಂದ್ಲಾಜೆ- ಇವರೆಲ್ಲಾ ನನಗೆ ಮಹಿಳೆಯರಂತೆ ಕಾಣಿಸುವುದೇ ಇಲ್ಲಾ. ಯಾಕೆಂದರೆ ಇವರಲ್ಲಿ ಮಹಿಳಾ ಸಂವೇದನೆಯೇ ಇಲ್ಲಾ. ಇವರೆಲ್ಲಾ ಪುರುಷ ಮನಸ್ಥಿತಿಯ ಮಹಿಳಾ ರಾಜಕಾರಣಿಗಳು. ಹಾಗಾಗಿ ಇವರನ್ನು ಮಹಿಳಾ ರಾಜಕಾರಣಿಗಳೆಂದು ಪ್ರತ್ಯೇಕಿಸುವ ಅಗತ್ಯವೇ ಇಲ್ಲ. ಇವರು ರಾಜಕಾರಣಿಗಳು ಅಷ್ಟೇ.
ಮೇಲೆ ಪ್ರಸ್ತಾಪಿಸಿದ ಮಹಿಳೆಯರಲ್ಲಿ ಇರುವ ಒಂದು ಸಾಮ್ಯತೆಯನ್ನು ಗಮನಿಸಿದ್ದೀರಾ? ಅವರೆಲ್ಲಾ ಮದುವೆಯಾಗದವರು; ಕುಮಾರಿಯರು. ತಾಯ್ತನದ ಅನುಭವವಿಲ್ಲದವರು. ನಮ್ಮೆಲ್ಲರ ಗಮನಕ್ಕೆ ಬಂದಂತೆ ಮಮತಾ ಬ್ಯಾನರ್ಜಿಯನ್ನು ಹೊರತುಪಡಿಸಿ ಉಳಿದವರೆಲ್ಲಾ ಪುರುಷ ಸಂಪರ್ಕದಲ್ಲಿರುವವರು. ಆ ಸಂಪರ್ಕದ ಗೋಜಲುಗಳೇ ಅವರೆಲ್ಲರನ್ನು ಕಠಿಣ ಹೃದಯಿಗಳನ್ನಾಗಿ ಮಾಡಿರಬಹುದೇ? ಮಮತಾ ಬ್ಯಾನರ್ಜಿಯ ಮನದಲ್ಲಿ ಪ್ರೇಮದ ನವಿರು ಭಾವಗಳನ್ನು ಮೂಡಿಸಲು ಯಾವೊಬ್ಬ ಪುರುಷನಿಗೂ ಯಾಕೆ ಸಾಧ್ಯವಾಗಿಲ್ಲ? ಅಥವಾ ಅವರೂ ಕೂಡಾ ಪ್ರೇಮ ವಂಚಿತರಾಗಿ ಈ ಪರಿಯ ಕಾಠಿಣ್ಯಕ್ಕೆ ಪಕ್ಕಾಗಿರಬಹುದೇ?
ಒಟ್ಟಿನಲ್ಲಿ ಇವರೆಲ್ಲಾ ಸಂಸಾರವನ್ನು ಕಟ್ಟಿಕೊಂಡವರಲ್ಲಾ, ಮುನ್ನಡೆಸಿದವರಲ್ಲಾ. ಹಾಗಾಗಿಯೇ ಇವರಲ್ಲಿ ಮಾತೃತ್ವದ ಭಾವನೆಗಳು ಜಾಗೃತಗೊಳ್ಳಲಿಲ್ಲವೇ? ಬೇಕಾದರೆ ಇವರ ಭಾಷಣಗಳನ್ನು ಒಮ್ಮೆ ಕೇಳಿ ನೋಡಿ; ಏರುಧ್ವನಿಯಲ್ಲಿ ಕಿರುಚುವ, ಪ್ರತಿಸ್ಪರ್ಧಿಗಳನ್ನು ಮಾತುಗಳಲ್ಲೇ ರೊಚ್ಚಿಗೆಬ್ಬಿಸುವ ವೈಖರಿಯನ್ನು ನೋಡಿದರೆ ಇವರನ್ನು ಸ್ತ್ರೀಯರೆಂದು ಪರಿಗಣಿಸಲು ಸಾಧ್ಯವೇ?. ಜಯಲಲಿತಾ ಏರು ಧ್ವನಿಯಲ್ಲಿ ಕಿರುಚದಿದ್ದರೂ ಅವರ ಮಾತುಗಳು ಕತ್ತಿಯ ಅಲುಗಿನಂತೆ ಇರಿಯುವುದಿಲ್ಲವೇ? ಮಮತಾ ಬ್ಯಾನರ್ಜಿ ಸ್ವಕೇಂದ್ರಿತ ವ್ಯಕ್ತಿತ್ವ ಹೊಂದಿರುವುದು ಅವರ ಬಹುದೊಡ್ಡ ನೂನ್ಯತೆಯಾಗಿದ್ದರೆ ಉಳಿದವರೆಲ್ಲಾ ಭ್ರಷ್ಟಾಚಾರದ ಮೂಟೆಗಳೇ.
ಮೇಲಿನ ಮಹಿಳಾಮಣಿಗಳ ಮನೋಭಾವಕ್ಕೆ ಹೊಂದಿಕೊಳ್ಳುವ ಇನ್ನೊಬ್ಬ ಪ್ರಭಾವಿ ಮಹಿಳಾ ರಾಜಕಾರಣಿಯಿದ್ದಾರೆ. ಅವರೇ ಸುಷ್ಮಾ ಸ್ವರಾಜ್. ಅವರು ಸಂಸಾರವನ್ನು ಕಟ್ಟಿಕೊಂಡವರು. ಆದರೂ ಅವರು ಪುರುಷರಂತೆ ಯೋಚಿಸುವುದು ಮಾತ್ರವಲ್ಲ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಪುರುಷ ಪರವಾಗಿ ಷಡ್ಯಂತರಗಳನ್ನೂ ಮಾಡಬಲ್ಲ ಶಕ್ತಳೀಕೆ.
ಇವರೆಲ್ಲರ ಮಧ್ಯೆ ಮಾತೃಹೃದಯದ ಇಬ್ಬರು ಮಹಿಳೆಯರು ನನ್ನ ಕಣ್ಣಿಗೆ ಗೋಚರಿಸುತ್ತಾರೆ. ಅವರು ಕಾಂಗ್ರೇಸಿನ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ದೆಹಲಿಯ ಮುಖ್ಯಮಂತ್ರಿ ಶೀಲದೀಕ್ಷಿತ್. ಒಬ್ಬ ತಾಯಿಯಲ್ಲಿರಬೇಕಾದ ಸಹನೆಯ ಗುಣ ಇವರಲ್ಲಿದೆ. ಶೀಲ ದೀಕ್ಷಿತ್ ಸತತ ಮೂರನೆಯ ಬಾರಿ ದಿಲ್ಲಿಯ ಮುಖ್ಯಮಂತ್ರಿ ಗಾದಿಯನ್ನೇರಿದವರು. ಕಾಂಗ್ರೇಸಿನಲ್ಲಿ ಸೋನಿಯಾಗೆ ಪರ್ಯಾಯ ನಾಯಕರಿಲ್ಲ. ಇವರಿಬ್ಬರೂ ಸಂಸಾರವನ್ನು ಕಟ್ಟಿಕೊಂಡವರು ಎಂಬುದಿಲ್ಲಿ ಮುಖ್ಯವಾದುದು.
ಪ್ರಕೃತಿ ನಮ್ಮನ್ನು ಹೆಣ್ಣಾಗಿ ಸೃಷ್ಟಿಸಿದೆ. ಅದರ ಬಗ್ಗೆ ನಮಗೆ ಅಭಿಮಾನ ಗೌರವಗಳಿರಬೇಕು. ಪುರುಷ ಪ್ರಧಾನ ಸಮಾಜ ನಮ್ಮ ಮೇಲೆ ಹೇರಿರುವ ಕಟ್ಟುಪಾಡುಗಳನ್ನು ವಿರೋಧಿಸೋಣ. ಅದನ್ನು ಮೀರುವ ಪ್ರಯತ್ನ ಮಾಡೋಣ. ಆದರೆ ಪುರುಷರಂತೆ ಆಗಲು ಹೊರಟರೆ ಅವರಲ್ಲಿ ಮತ್ತು ನಮ್ಮಲ್ಲಿ ಏನು ವ್ಯತ್ಯಾಸ ಉಳಿಯುತ್ತದೆ?
ಅಧಿಕಾರಕ್ಕಾಗಿ ಹಪಹಪಿಸುತ್ತಿರುವ ಯಡಿಯೂರಪ್ಪನವರ ಬೆನ್ನಿಗೆ ನಿಂತಿರುವ ಶೋಭಾ ಕರಂದ್ಲಾಜೆ ಕಳೆದ ವಾರ ತಾನೇ ’ನಾವೆಲ್ಲಾ ಸಂಗೊಳ್ಳಿ ರಾಯಣ್ಣ’ರಾಗಬೇಕು ಎಂದು ಗುಡುಗಿದ್ದರು. ಈಕೆಯಲ್ಲಿ ಮತ್ತು ಯಡಿಯೂರಪ್ಪನವರಲ್ಲಿ ಹೊರನೋಟದ ವ್ಯತ್ಯಾಸ ಬಿಟ್ಟರೆ ಇನ್ಯಾವ ವ್ಯತ್ಯಾಸವೂ ನನಗೆ ಕಾಣುತ್ತಿಲ್ಲ.
ಮೊನ್ನೆ ಮೊನ್ನೆ ನಮ್ಮ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಂದು ಅವರು ದೃಷ್ಟಿಹೀನರಾದ ಮಕ್ಕಳಿಗೆ ಚಾಕುವಿನಲ್ಲಿ ಕೇಕ್ ತಿನ್ನಿಸಿದ ರೀತಿಯನ್ನು ದೃಶ್ಯ ಮಾಧ್ಯಮದಲ್ಲಿ ನೋಡಿ ಒಂದು ಕ್ಷಣ ನಡುಗಿ ಹೋದೆ. ಹೆಣ್ಣಿನ ಅಂತಃಕರಣವಿಲ್ಲದ, ಮಾತೃತ್ವದ ಸ್ಪರ್ಶವಿಲ್ಲದ ಯಾವ ಅಧಿಕಾರವೂ ಎಂದಿದ್ದರೂ ಅಪಾಯಕಾರಿಯೇ.!

[ ವಿಜಯಕರ್ನಾಟಕದ ’ಅನುರಣನ’ ಕಾಲಂನಲ್ಲಿ ಪ್ರಕಟವಾದ ಲೇಖನ ]

Monday, March 12, 2012

ಪ್ರಕೃತಿ ಸಂಸ್ಕೃತಿಗಳ ನಡುವಿನ ವಿಕೃತಿ



ಪ್ರಕೃತಿಯಿಂದ ಸಂಸ್ಕೃತಿಯೆಡೆಗಿನ ಮಾನವನ ಪಯಣಕ್ಕೆ ಸುದೀರ್ಘವಾದ ಇತಿಹಾಸವಿದೆ. ಅದು ನಾಗರೀಕತೆಯ ಇತಿಹಾಸ. ಪ್ರಕೃತಿ ಎಂದರೆ ”ಇರುವುದು’.ಅದು ನೈಜವಾದುದು,ಸಹಜ ಸ್ಥಿತಿಯಲ್ಲಿರುವುದು. ಸಂಸ್ಕೃತಿ ಎಂದರೆ ’ಆಗುವುದು’ ಅದು ಬುದ್ಧಿವಿಕಾಸಕ್ಕೆ ಸಂಬಂಧಿಸಿದ್ದು. ಅದು ಮಾನಸಿಕ ಪಕ್ವತೆ. ಪ್ರಕೃತಿಯಲ್ಲಿದ್ದಾಗ ಮನುಷ್ಯನಿಗೆ ಮಾನದ ಕಲ್ಪನೆ ಇರಲಿಲ್ಲ. ಹಾಗಾಗಿ ಅವನಿಗೆ ಮುಚ್ಚಿಕೊಳ್ಳುವುದರ ಅವಶ್ಯಕತೆ ಕಾಣಲಿಲ್ಲ. ಆದರೆ ಸಂಸ್ಕೃತಿಯನ್ನು ರೂಢಿಸಿಕೊಳ್ಳುತ್ತಾ ಹೋದ ಮಾನವ ತನ್ನ ದೇಹದ ಕೆಲವು ಅಂಗಗಳನ್ನು ಮುಚ್ಚಿಕೊಳ್ಳುತ್ತಾ ಹೋದ. ಅದು ಮತ್ತೆ ಪ್ರದೇಶ ಮತ್ತು ಕಾಲಕ್ಕನುಗುಣವಾಗಿ ಬದಲಾಗುತ್ತಾ ಹೋಗಿದೆ. ಹಾಗಾಗಿಯೇ ಅವರು ರೂಪಿಸಿಕೊಂಡ ಸಂಸ್ಕೃತಿ ಕೂಡಾ ಭಿನ್ನಭಿನ್ನವಾಗಿಯೇ ಇರುವುದನ್ನು ನಾವಿಂದಿಗೂ ಕಾಣಬಹುದು.
ಕೆಲವು ಧರ್ಮ ಸಂಸ್ಕೃತಿಗಳಲ್ಲಿ ಮುಚ್ಚಿಕೊಳ್ಳುವುದೇ ಶ್ರೇಷ್ಟತೆಯೆನಿಸಿದರೆ ಇನ್ನು ಕೆಲವು ಸಂಸ್ಕೃತಿಯಲ್ಲಿ ಬಿಚ್ಚಿಕೊಳ್ಳುವುದು ಅಂದರೆ ನಿರ್ವಾಣವೂ ಪೂಜನೀಯ.ಹಾಗೆಯೇ ಬಿಚ್ಚಿದ್ದನ್ನು ಕಲೆಯ ಹೊದಿಕೆಯಡಿ ತೋರಿಸಿದರೆ ಅದು ಸೌಂದರ್ಯೋಪಾಸನೆ.
ಇಷ್ಟಕ್ಕೂ ಸಂಸ್ಕೃತಿ ಅಂದ್ರೆ ಏನು? ಸಂಸ್ಕೃತಿ ಅಂದ್ರೆ ನಾವು ಬದುಕುವ ವಿಧಾನ; ನಮ್ಮ ನಡೆ-ನುಡಿ, ಆಚಾರ-ವಿಚಾರ,ನಂಬಿಕೆ-ಮೌಲ್ಯಗಳು ಇವೆಲ್ಲವುಗಳ ಒಟ್ಟು ಮೊತ್ತವೇ ಸಂಸ್ಕೃತಿ ಆಗಿರುತ್ತದೆ. ಆದಿಮಾನವನನ್ನು ಕೃಷಿಯ ಕೈಂಕರ್ಯಕ್ಕೆ ಹಚ್ಚಿ ಅವನನ್ನು ಕುಟುಂಬಕ್ಕೆ ಬಂದಿಸಿ ಅವನಿಗೆ ನಾಗರೀಕತೆಯನ್ನು ಕಲಿಸಿ ಸಮಾಜದ ಮೌಲ್ಯ ವಿನ್ಯಾಸ ಮಾಡಿದಾಕೆ ಮಹಿಳೆ. ಅಂಥ ಮಹಿಳೆ ಎಂದೂ ಕೂಡಾ ತನ್ನ ಅಂಗಾಂಗಗಳನ್ನು ಪ್ರದರ್ಶನಕ್ಕಿಟ್ಟವಳಲ್ಲ. ಬಲಾತ್ಕಾರದಿಂದ ಆಕೆಯನ್ನು ಬೆತ್ತಲೆಗೊಳಿಸಿದವನು ಪುರುಷ. ಅದಕ್ಕೆ ಮೊದಲ ಉದಾಹರಣೆ ನಮಗೆ ಸಿಗುವುದು ಮಹಾಭಾರತದಲ್ಲಿ.
ಅದು ಹಸ್ತಿನಾಪುರದ ರಾಜಸಭೆ.. ದ್ರೌಪದಿಯನ್ನು ದುಶ್ಯಾಸನ ಬೆತ್ತಲೆಗೊಳಿಸಲು ಪ್ರಯತ್ನಿಸುತ್ತಿದ್ದಾನೆ. ದುರ್ಯೋಧನ ಆಕೆಯತ್ತ ನೋಡಿ ತನ್ನ ತೊಡೆಯನ್ನು ತೋರಿಸಿ’ ಬಾ ಇಲ್ಲಿ ಕುಳಿತುಕೋ’ ಎಂದು ಕುಹಕವಾಡುತ್ತಾನೆ. [ಆತ ತೋರಿಸಿದ್ದು ತೊಡೆಯನ್ನಲ್ಲ ಇನ್ನೇನನ್ನೋ.. ಎಂಬ ವಾದವೂ ಇದೆ.] ಭೀಷ್ಮ, ದ್ರೋಣ, ಕೃಫ, ಶಕುನಿ, ವಿಧುರ ಮುಂತಾದವರೆಲ್ಲಾ ಷಂಡರಂತೆ ತಲೆ ತಗ್ಗಿಸಿಕೊಳ್ಳುತ್ತಾರೆ. ಕುರುಡ ಧೃತರಾಷ್ಟ್ರ ’ಇಲ್ಲೇನಾಗುತ್ತಿದೆ, ಇಲ್ಲೇನಾಗುತ್ತಿದೆ’ ಎನ್ನುತ್ತಾ ತಡಬಡಾಯಿಸುತ್ತಾನೆ. ದೃತರಾಷ್ಟ್ರನ ಪ್ರಶ್ನೆಗೆ ಉತ್ತರಿಸುವವರು ಯಾರು?
ಈಗಲೂ ಅಷ್ಟೇ. ಅಂದಿನ ರಾಜಸಭೆಯ ಹಾಗೆ ಪೋಲಿಸರು, ವಕೀಲರು ಮತ್ತು ಮಾಧ್ಯಮಗಳು ಒಟ್ಟಾಗಿ ಕನ್ನಡದ ಸಂಸ್ಕೃತಿಯ ಮಾನಬಂಗ ಮಾಡುತ್ತಿದ್ದಾರೆ. ರಾಜಕಾರಣಿಗಳು ತೊಡೆ ತಟ್ಟಿ ನಗುತ್ತಿದ್ದಾರೆ. ಮುಖ್ಯಮಂತ್ರಿಗಳು ದೃತರಾಷ್ಟ್ರನ ರೀತಿಯಲ್ಲಿ ಕಕ್ಕಾಬಿಕ್ಕಿಯಾಗಿದ್ದಾರೆ.
ಇದನ್ನು ಸಂಸ್ಕೃತಿಯೊಡನೆ ವಿಕೃತಿಯ ಮುಖಾಮುಖಿ ಎನ್ನಬಹುದು. ಇಲ್ಲಿ ವಿಕೃತಿ ಸಮೂಹದೊಂದಿಗೆ ಬಂದಿದೆ ಅದರ ಪರಾಕಾಷ್ಠೆಯನ್ನು ಯೂಟ್ಯುಬ್ ನ ವಿಡಿಯೋ ತುಣುಕೊಂದರಲ್ಲಿ ಕಂಡೆ. ಅದರಲ್ಲಿ ದೃಶ್ಯ ಮಾಧ್ಯಮದ ಪೋಟೋಗ್ರಾಪರ್ ಒಬ್ಬ ಒಂದು ಕೈಯ್ಯಲ್ಲಿ ಚಾನಲ್ ಲೋಗೋ ಹಿಡಿದುಕೊಂಡು ಇನ್ನೊಂದು ಕೈಯ್ಯಲ್ಲಿ ಪ್ಯಾಂಟಿನ ಜಿಪ್ ಎಳೆದು ತನ್ನ ಗುಪ್ತಾಂಗವನ್ನು ತೋರಿಸಲೆತ್ನಿಸುತ್ತಾ ಎದುರಿಗಿದ್ದವರನ್ನು ರೊಚ್ಚಿಗೆಬ್ಬಿಸುವ ರೀತಿಯಲ್ಲಿ ಏನನ್ನೋ ಹೇಳುತ್ತಿದ್ದಾನೆ. ಆತನ ಹಿಂದೆ ಕ್ಯಾಮಾರಮ್ಯಾನ್ ಗಳ ದಂಡೇ ಇದೆ. ಅದನ್ನು ಯೂ ಟ್ಯೂಬ್ ಗೆ ಯಾರು ಅಪ್ಲೋಡ್ ಮಾಡಿದ್ದಾರೆ ಎಂಬುದು ಮುಖ್ಯವಲ್ಲ. ಅಲ್ಲಿ ವ್ಯಕ್ತವಾಗುತ್ತಿರುವ ಭಾವ ಯಾವುದು ಎಂಬುದು ಮುಖ್ಯ.
ಯಾವಾಗಲೂ ಅಷ್ಟೆ. ಸಂಸ್ಕೃತಿ ಮತ್ತು ವಿಕೃತಿ ಮುಖಾಮುಖಿಯಾದಾಗ ಸಂಸ್ಕೃತಿಯೇ ಮುಖ ತಿರುಗಿಸಿಕೊಳ್ಳುತ್ತದೆ. ಇಲ್ಲಿ ಆತ ಯಾರ ಎದುರಿಗೆ ನಿಂತು ಹಾಗೆ ವರ್ತಿಸಿದನೋ ಅವರನ್ನು ನಾನು ಸಂಸ್ಕೃತಿಯ ನೆಲೆಯಲ್ಲಿಟ್ಟು ತೂಗುತ್ತಿಲ್ಲ. ಸಂಸ್ಕೃತಿಯ ನೆಲೆಯಲ್ಲಿರುವವರು ನಾವು ಜನಸಾಮಾನ್ಯರು; ಮತದಾರರು. ಇದಕ್ಕೊಂದು ಉದಾಹರಣೆಯನ್ನು ಕೊಡುತ್ತೇನೆ. . ನಮ್ಮ ಊರಿನಲ್ಲಿ ಗದ್ದೆಗೆ ನೀರುಣಿಸಲು ಪಕ್ಕದ ಹೊಳೆಯೊಂದಕ್ಕೆ ಊರವರೆಲ್ಲಾ ಸೇರಿ ಕಟ್ಟ ಅಂದ್ರೆ ಚೆಕ್ ಡ್ಯಾಂ ನಿರ್ಮಿಸಿಕೊಂಡಿದ್ದರು. ನೀರು ಹರಿದು ಬರುವ ಕಾಲುವೆಯ ಬದಿಯ ಮೊದಲ ಗದ್ದೆ ಒಬ್ಬ ಶ್ರೀಮಂತನದಾಗಿತ್ತು. ಆತ ಸರದಿಯನ್ನೂ ಮೀರಿ ತನ್ನ ಗದ್ದೆಗೆ ನೀರುಣಿಸಿಕೊಳ್ಳುತ್ತಿದ್ದುದರಿಂದ ಕಾಲುವೆಯ ಕೊನೆಯಲ್ಲಿರುವ ಮೋನಪ್ಪನ ಗದ್ದೆಗೆ ಸರಿಯಾಗಿ ನೀರೇ ಬರುತ್ತಿರಲಿಲ್ಲ. ಆತ ತನ್ನ ಗದ್ದೆಗೆ ನೀರು ಸಾಕಾಗುತ್ತಿಲ್ಲ ಎಂದು ಹೇಳಿದರೂ ಶ್ರೀಮಂತ ಕ್ಯಾರೇ ಅನ್ನುತ್ತಿರಲಿಲ್ಲ.. ಒಂದು ದಿನ ಬೆಳಿಗ್ಗೆ ಆತ ಆ ಶ್ರೀಮಂತ ಬರುವುದನ್ನೇ ಕಾದು ಕುಳಿತ. ದೂರದಲ್ಲಿ ಶ್ರೀಮಂತ ಬರುವುದನ್ನು ಕಂಡ ಈತ ತನ್ನ ಕೌಪೀನವನ್ನು ಬಿಚ್ಚಿ ಚೆಕ್ ಡ್ಯಾಂನ ಕಿಂಡಿಯಲ್ಲಿ ನಿಂತ. ಅಲ್ಲಿ ಮೋನಪ್ಪನನ್ನು ಆ ಸ್ಥಿತಿಯಲ್ಲಿ ಕಂಡ ಆ ಶ್ರೀಮಂತ ಮತ್ತೆಂದೂ ನೀರು ಬಿಡಲು ಬರಲೇ ಇಲ್ಲ. ಇದನ್ನು ನಾನು ಚಿಕ್ಕಂದಿನಲ್ಲಿ ಮೋನಪ್ಪನ ಬಾಯಿಂದಲೇ ಕೇಳಿದ್ದೇನೆ.
ಅಂದು ಆ ಅನಕ್ಷರಸ್ತ ಮೋನಪ್ಪ ಮಾಡಿದ್ದಕ್ಕೂ ಇಂದು ಈ ಮಾಧ್ಯಮದ ವ್ಯಕ್ತಿ ತನ್ನಂಗವನ್ನು ತೋರಿಸಿದ್ದಕ್ಕೂ ನನಗೆ ಯಾವ ವ್ಯತ್ಯಾಸವೂ ಕಾಣುತ್ತಿಲ್ಲ. ಪರಿಣಾಮ ಒಂದೇ. ಸಂಸ್ಕೃತಿಯೆದುರಿಗೆ ವಿಕೃತಿಯ ವಿಜೃಂಬಣೆ. ಇಲ್ಲಿ ಒಂದು ಮಾತನ್ನು ಹೇಳಬೇಕು. ಸಂಸ್ಕೃತಿಯನ್ನು ವಿರೋಧಿಸುವವನಿಗೆ ಸೈದ್ಧಾಂತಿಕ ತಳಹದಿ ಇದ್ದರೆ ಅದು ಬಂಡಾಯ ಎನಿಸಿಕೊಳ್ಳುತ್ತದೆ. ಅದನ್ನು ಸಮಾಜ ಕ್ರಮೇಣ ಮಾನ್ಯ ಮಾಡುತ್ತದೆ. ಆದರೆ ಹುಂಬತನದಿಂದ ಮಾಡಿದ್ದರೆ ಅದನ್ನು ಸಮಾಜ ತಕ್ಷಣ ತಿರಸ್ಕರಿಸುತ್ತದೆ. ಮೋನಪ್ಪನದು ಬಂಡಾಯ. ಆ ಮಾಧ್ಯಮದ ವ್ಯಕ್ತಿಯದು ಹುಂಬತನ.
ಶಬ್ದವೊಂದು ನಮ್ಮ ಕಿವಿಗೆ ಬಿದ್ದೊಡನೆ ಅದಕ್ಕೆ ಸಂಬಂಧಿಸಿದ ಚಿತ್ರಗಳು ಚಿತ್ತಭಿತ್ತಿಯಲ್ಲಿ ಹಾದು ಹೋಗುವುದು ಸಾಮಾನ್ಯ. ಇಲ್ಲಿಯವರೆಗೂ ಬಿಚ್ಚುವುದು ಎಂದರೆ ಕೆಲವು ಬಿಚ್ಚಮ್ಮ ಸೆಲೆಬ್ರಿಟಿಗಳ ಚಿತ್ರ ನನ್ನ ಕಣ್ಮುಂದೆ ಬರುತ್ತಿತ್ತು. ಈಗ ನನ್ನ ಕಣ್ಮುಂದೆ ಚಾನಲ್ಲೊಂದರ ಲೋಗೋ ಹಿಡಿದು ಪ್ಯಾಂಟ್ ಜಿಪ್ ಬಿಚ್ಚುತ್ತಿರುವ ಆ ಕ್ಯಾಮಾರ ಮ್ಯಾನ್ ಕಣ್ಮುಂದೆ ಬರುತ್ತಾನೆ. ಇದು ಸಂಸ್ಕೃತಿಯೋ ವಿಕೃತಿಯೋ ಅರ್ಥವಾಗದ ಗೊಂದಲದಲ್ಲಿ ನಾನಿದ್ದೇನೆ.
[ ವಿಜಯಕರ್ನಾಟಕದ ನನ್ನ ಕಾಲಂ ’ಅನುರಣನ’ದಲ್ಲಿ ಪ್ರಕಟವಾದ ಲೇಖನ ]

Saturday, March 3, 2012

ವಿಸರ್ಜನೆಯ ಸುಖಕ್ಕೆ ಅಡ್ಡಿಯಾದರೆ ಹೊಡೆತ ಗ್ಯಾರಂಟಿ..!



ಮನುಷ್ಯನಿಗೆ ಅತ್ಯಂತ ಸುಖದ ಕ್ಷಣ ಯಾವುದು? ಬಲ್ಲವರು ಹೇಳುತ್ತಾರೆ, ಅದು ವಿಸರ್ಜನೆಯ ಸುಖ. ಅದಕ್ಕವರು ಉದಾಹರಣೆಯಾಗಿ ಕೊಡುವುದು ಮಲಬದ್ಧತೆಯನ್ನು. ಮಲಬದ್ದತೆಯ ಸಮಸ್ಯೆಯನ್ನು ಅನುಭವಿಸುತ್ತಿರುವವರಿಗೆ ಗೊತ್ತಿದೆ ಅದರ ಕಷ್ಟ. ಬೆಳಿಗ್ಗೆ ಎದ್ದೊಡನೆ ಸಲೀಸಾಗಿ ವಿಸರ್ಜನೆಯ ಕ್ರಿಯೆಗಳೆಲ್ಲಾ ನಡೆದರೆ ಆ ದಿನವೆಲ್ಲಾ ಲವಲವಿಕೆಯಿಂದ ಕೂಡಿರುತ್ತದೆ. ಒಂದು ವೇಳೆ ಎಡವಟ್ಟಾಯ್ತೋ ಒಂಥಾರ ಅಸಹನೆ..ಚಡಪಡಿಕೆ..ಆಲಸ್ಯ.
ಮೂತ್ರ ವಿಸರ್ಜನೆ ಕೂಡಾ ಹಾಗೆಯೇ. ಅದನ್ನು ಬಹಳ ಹೊತ್ತು ತಡೆ ಹಿಡಿದುಕೊಂಡರೆ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಯಾವುದರ ಮೇಲೂ ಏಕಾಗ್ರತೆ ಸಾಧ್ಯವಾಗುವುದಿಲ್ಲ. ಜೋರಾಗಿ ನಗುವ ಹಾಗಿಲ್ಲ. ನಕ್ಕರೆ ನಿಯಂತ್ರಣ ತಪ್ಪಿ ಮೂತ್ರ ಹರಿದು ಬಿಡಬಹುದೆಂಬ ಭಯ!
ಇಷ್ಟೆಲ್ಲಾ ಪೀಠೀಕೆ ಹಾಕಲು ಕಾರಣವಿದೆ. ಮೊನ್ನೆ ಶುಕ್ರವಾರ ಹುಬ್ಬಳಿಯ ಕಾಳಮ್ಮ ಅಗಸಿ ಪ್ರದೇಶದಲ್ಲಿ ಒಂದು ಘಟನೆ ನಡೆಯಿತು. ಇಲ್ಲಿಯ ಕಾಳಮ್ಮ ದೇವಸ್ಥಾನದ ಕಾಂಪೌಂಡ್ ಬಳಿ ರಾಜಸ್ಥಾನ ಮೂಲದ ಮನೋಜ್ ಎಂಬಾತ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಅದನ್ನು ನೋಡಿದ ಮಹಾನಗರಪಾಲಿಕೆ ಸದಸ್ಯ ನಿಂಗಪ್ಪ ಬಡಿಗೇರ್,”ಇದು ಪವಿತ್ರ ಜಾಗ ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು’ ಎಂದು ಬುದ್ಧಿವಾದ ಹೇಳಲೆತ್ನಿಸಿದರು. ತನ್ನ ವಿಸರ್ಜನೆಯ ಸುಖಕ್ಕೆ ಅಡ್ಡಿಯಾದ ಇವನ್ಯಾವ ದೊಣ್ಣೆನಾಯಕ ಎಂದು ಅಂದುಕೊಂಡ ಮನೋಜ್, ಬಡಿಗೇರ್ ವಿರುದ್ಧ ತಿರುಗಿ ಬಿದ್ದ. ಮಾತಿಗೆ ಮಾತು ಬೆಳೆಯಿತು. ಸುತ್ತ ಜನ ಸೇರಿದರು. ವಿಸರ್ಜನೆ ಸುಖದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. [ ಅಲ್ಲವೇ ಮತ್ತೆ, ಸ್ವಲ್ಪ ನಮ್ಮ ಬೆಂಗಳೂರಿನ ಮಾರ್ಕೇಟ್ ಏರಿಯಾದಲ್ಲೊಮ್ಮೇ ಸುತ್ತು ಹಾಕಿ ಬನ್ನಿ.] ಎಲ್ಲರೂ ಸೇರಿ ಬಡಿಗೇರ್ ಅವರಿಗೆ ಬಡಿದರು. ಅವರ ತಲೆ, ಕುತ್ತಿಗೆ ಮತ್ತು ಸೊಂಟಕ್ಕೆ ಏಟುಗಳು ಬಿದ್ದವು. ಕೊನೆಗೆ ಅವರನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರ್ಗೆ ಸೇರಿಸ್ಬೇಕಾಯ್ತು.
ಇದು ಸುಳ್ಳಲ್ಲಾ ಮಾರಾಯ್ರೇ.. ಬೇಕಾದ್ರೆ ಪೆಬ್ರವರಿ ೨೫ ರ ’ವಿಜಯ ಕರ್ನಾಟಕ’ ನೋಡಿ, ಅಲ್ಲಿ ೧೦ನೇ ಪುಟದಲ್ಲಿ ’ಪಾಲಿಕೆ ಸದಸ್ಯನಿಗೆ ಬಡಿದ ಮೂತ್ರವಾದಿಗಳು’ ಎಂಬ ಶೀರ್ಷಿಕೆಯಡಿ ಈ ಸುದ್ದಿ ಪ್ರಕಟವಾಗಿದೆ.
ಮನೋಜ್ ಅಂತವರ ಕಷ್ಟ, ಪಾಪ ಬಡಿಗೇರ್ ಅವರಿಗೆ ಹೇಗೆ ಗೊತ್ತಾಗಬೇಕು.?
’ನೀವು ಈ ವಿಚಾರದಲ್ಲಿ ಕಟ್ಟಿನಿಟ್ಟಾಗಿ ನಡೆದುಕೊಂಡರೆ ನನ್ನಂತಹ ಮುದುಕ ಅದರಲ್ಲೂ ಡಯಾಬಿಟಿಕ್ ಪೇಷಂಟ್ ಏನು ಮಾಡಬೇಕು? ನಮ್ಮನ್ನು ಸ್ವಲ್ಪ ಗಮನದಲ್ಲಿಟ್ಟುಕೊಳ್ಳಿ’ ಎಂದು ದಿ. ಎಚ್. ನರಸಿಂಹಯ್ಯನವರು ವಾಚಕರವಾಣಿಗೆ ಪತ್ರ ಬರೆದಿರುವುದು ನನಗೆ ನೆನಪಿದೆ!
ಈ ಮೂತ್ರ ವಿಸರ್ಜನೆಯ ಪುರಾಣ ಕೇಳುತ್ತಿರುವಾಗ ನಿಮ್ಮ ಚಿತ್ತಭಿತ್ತಿಯಲ್ಲಿ ವಿಧಾನ ಸೌಧದಲ್ಲಿ ಮೂವರು ಸಚಿವರು ಸೆಕ್ಸ್ ವಿಡಿಯೊ ವೀಕ್ಷಿಸುತ್ತಿದ್ದ ದೃಶ್ಯಗಳು ನೆನಪಿಗೆ ಬಂದರೆ ನಾನು ಜವಾಬ್ದಾರಳಲ್ಲ! ಮನೋಜ್ ಗೆ ದೇವಸ್ಥಾನದ ಕಾಂಪೌಂಡ್ ಮೋಟು ಗೋಡೆಯಂತೆ ಕಂಡರೆ ಸಚಿವರಿಗೆ ವಿಧಾನ ಸೌಧ ಇನ್ನೇನೋ ಆಗಿ ಕಾಣಿಸಿರಬಹುದು. ’ಅವರವರ ಭಾವಕ್ಕೆ ಅವರವರ ಭಕುತಿಗೆ’
ನೀವು ರೈಲಿನಲ್ಲಿ ಪಯಣಿಸುವವರಾಗಿದ್ದರೆ ಈ ದೃಶ್ಯವನ್ನು ನೋಡಿಯೇ ಇರುತ್ತೀರಿ. ಬೆಳಿಗ್ಗೆ ಹಳಿಗಳುದ್ದಕ್ಕೂ ಜನರು ಕುಳಿತಿರುತ್ತಾರೆ. ಅವರ ಹಿಂಬದಿಯ ಉಚಿತ ದರ್ಶನ ನಿಮಗಾಗುತ್ತಿರುತ್ತದೆ. ಅವರಿಗೆ ಈ ರೀತಿ ಸಾರ್ವಜನಿಕವಾಗಿ ಬಹಿರ್ದೆಶೆಗೆ ಕುಳಿತುಕೊಳ್ಳಲು ನಾಚಿಕೆ, ಮುಜುಗರಗಳಾಗುವುದಿಲ್ಲವೇ? ಹೀಗೆಂದು ನಾನು ಯಾರಲ್ಲಿಯೋ ಕೇಳಿದ್ದೆ. ಅದಕ್ಕವರು ಉತ್ತರಿಸಿದ್ದರು, ’ಅವರಿಗದು ಅನಿವಾರ್ಯ.ಪ್ರಕೃತಿ ಕರೆ. ಅದನ್ನವರು ಇಳಿಸಿಕೊಳ್ಳಲೇ ಬೇಕು,ನಮಗದನ್ನು ನೋಡಿದರೆ ನಾಚಿಕೆ, ಮುಜುಗರ. ಹಾಗಾಗಿ ನಾವೇ ಮುಖ ತಿರುಗಿಸಿಕೊಳ್ಳುತ್ತೇವೆ’ ಎಂದಿದ್ದರು. ಎಷ್ಟು ಸತ್ಯ ಅಲ್ಲವೇ?
ಮೂತ್ರ ವಿಸರ್ಜನೆ ಎಂದೊಡನೆ ನನಗೆ ನೆನಪಾಗುವುದು ಕನ್ನಡದ ಉಟ್ಟು ಹೋರಾಟಗಾರ ವಾಟಾಳ್ ನಾಗರಾಜ್. ಅವರು ೨೦೦೮ರ ನವಂಬರ್ ತಿಂಗಳಿನಲ್ಲಿ ಒಂದು ಪತ್ರಿಕಾ ಗೋಷ್ಠಿ ಕರೆದಿದ್ದರು. ನವೆಂಬರ್ ತಿಂಗಳಿಗೂ ವಾಟಾಳ್ ನಾಗರಾಜ್ ಗೂ ಇರುವ ನಂಟನ್ನು ನೀವೆಲ್ಲಾ ಬಲ್ಲವರೇ ಆಗಿದ್ದೀರಿ!. ಅಂದು ಅವರೊಂದು ಚಳುವಳಿಯ ಘೋಷಣೆಯನ್ನು ಮಾಡಿದ್ದರು. ಆ ಚಳುವಳಿಯ ಹೆಸರು ’ಉಚ್ಚೆ ಹೊಯ್ಯುವ ಚಳುವಳಿ’ ಆ ಚಳುವಳಿಯ ಘೋಷಣೆ ಮಾಡಲು ಕಾರಣ; ಸರಕಾರವು ರಾಜ್ಯದಲ್ಲಿ ಹೆಚ್ಚೆಚ್ಚು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕೆಂದು. ಒಂದು ವೇಳೆ ಸರಕಾರವು ನಿಗದಿತ ಅವಧಿಯೊಳಗೆ ಶೌಚಾಲಯಗಳನ್ನು ನಿರ್ಮಿಸದಿದ್ದರೆ ತಾವು ಮತ್ತು ತಮ್ಮ ತಂಡ ರಾಜಭವನದೆದುರು ’ಉಚ್ಚೆ ಹೊಯ್ಯುವ ಚಳುವಳಿ’ಯನ್ನು ಕಾರ್ಯರೂಪಕ್ಕೆ ತರುವುದಾಗಿ ಘೋಷಿಸಿದ್ದರು ಮಾತ್ರವಲ್ಲ ಮುಂದೆ ಅದನ್ನು ಮುಖ್ಯಮಂತ್ರಿ, ಸಚಿವರು, ಶಾಸಕರು, ಲೋಕಸಭಾ ಸದಸ್ಯರು ಮತ್ತು ಐಎ ಎಸ್ ಅಧಿಕಾರಿಗಳ ಮನೆಗಳಿಗೆ ವಿಸ್ತರಿಸುವುದಾಗಿ ಹೇಳಿದ್ದರು. ಅವರಿಗೆ ಈ ಪತ್ರಕರ್ತರ ಬಗ್ಗೆ ಸಂಶಯ. ಹಾಗಾಗಿಯೇ ಅವರಿಗೆ ತಾಕೀತು ಮಾಡಿದ್ದರು,’ನೀವೆಲ್ಲಾ ಮೂತ್ರ ವಿಸರ್ಜನೆ ಎಂದು ಬರೆಯಬಾರದು. ಉಚ್ಚೆ ಹೊಯ್ಯುವ ಚಳುವಳಿ ಎಂದೇ ಬರೆಯತಕ್ಕದ್ದು’
ಆಗಲೂ ಸಚಿವ ಸಂಪುಟದಲ್ಲಿದ್ದದ್ದು ಒಬ್ಬರೇ ಮಹಿಳೆ, ಶೋಭಾ ಕರಂದ್ಲಾಜೆ. ಅವರ ಮನೆಯೆದುರು ವಾಟಾಳ್ ನಾಗರಾಜ್ ಉಚ್ಚೆ ಹೊಯ್ಯುವ ದೃಶ್ಯವನ್ನು ನಾನು ಮನಸ್ಸಿನಲ್ಲಿಯೇ ಕಲ್ಪಿಸಿಕೊಂಡು ಬಿದ್ದು ಬಿದ್ದು ನಕ್ಕಿದ್ದೆ.
ಆಮೇಲೆ ಅವರ ಈ ಚಳುವಳಿ ಎಲ್ಲಿ ಹಳ್ಳ ಹಿಡಿಯಿತೋ ಗೊತ್ತಿಲ್ಲ!
ವಿಸರ್ಜನೆಯ ಸುಖವನ್ನು ಅನುಭವಿಸುವವರು ಗಂಡಸರು ಮಾತ್ರ. ಯಾಕೆಂದರೆ ಅವರಿಗೆ ಎಲ್ಲೆಲ್ಲೂ ಮೋಟು ಗೋಡೆಗಳೇ ಕಾಣಿಸುತ್ತವೆ. ವಿಸರ್ಜನೆಯ ಕಷ್ಟವನ್ನು ಅನುಭವಿಸುವವರು ಮಹಿಳೆಯರು. ಅವರು ಪ್ರಕೃತಿಯ ಕರೆಗಳನ್ನು ಕೂಡಾ ನಿಯಂತ್ರಣದಲ್ಲಿಟ್ಟುಕೊಂಡು ಬದುಕಬೇಕಾದ ಹೀನಾಯ ಸ್ಥಿತಿ ನಮ್ಮ ಗ್ರಾಮೀಣ ಪ್ರದೇಶದಲ್ಲಿದೆ. ಬೆಳಕು ಹರಿಯುವ ಮುನ್ನವೇ, ಗಂಡಸರೆಲ್ಲಾ ಇನ್ನೂ ಮಲಗಿರುವಾಗಲೇ ಊರ ಹೊರಗೆ ಹೋಗಿ ತಮ್ಮ ಪ್ರಾರ್ತವಿಧಿಗಳನ್ನು ಪೂರೈಸಿಕೊಂಡು ಬರಬೇಕಾದ ಸ್ಥಿತಿ ಇನ್ನೂ ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿದೆ. ತಮ್ಮ ’ಆ ದಿನಗಳಲ್ಲಿ’ ಆ ಮಹಿಳೆಯರು ತಮ್ಮ ಮೈ ಮನಸ್ಸುಗಳನ್ನು ಹೇಗೆ ಮುದುಡಿಸಿಕೊಂಡು ಬದುಕುತ್ತಿರಬಹುದು ಎಂಬುದನ್ನು ನೆನೆಸಿಕೊಂಡರೆ ಅಯ್ಯೋ ಎನಿಸುತ್ತದೆ. ಅದಕ್ಕೇ ಇರಬೇಕು, ಸ್ಥಳಿಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ಮಹಿಳೆಯರು ತಮಗೆ ಅಧಿಕಾರ ಸಿಕ್ಕ ಒಡನೆಯೇ ಶೌಚಾಲಯ ಮತ್ತು ಕುಡಿಯುವ ನೀರು ಪೂರೈಕೆಗೆ ಪ್ರಥಮ ಆದ್ಯತೆಯನ್ನು ನೀಡಿದ್ದು.
ಅವರೆಲ್ಲರ ಮಾತು ಬಿಡಿ.ನಾನು ಕೂಡಾ ಈ ವಿಸರ್ಜನೆಯ ಕಷ್ಟವನ್ನು ಅನುಭವಿಸಿದವಳೇ. ಎಲ್ಲಿ ಅಂತಿರಾ? ನನ್ನ ವಯ್ಯಕ್ತಿಕ ಕೆಲಸದ ಮೇಲೆ ತಿಂಗಳಲ್ಲಿ ಮುರ್ನಾಲ್ಕು ಬಾರಿ ಬಸ್ಸಿನಲ್ಲಿ ರಾತ್ರಿ ಪ್ರಯಾಣ ಮಾಡುತ್ತೇನೆ. ಆಗೆಲ್ಲಾ ಪ್ರಯಾಣ ಸುರಕ್ಷಿತವಾಗಿರಲಿ ಎಂದುಕೊಂಡು ರಾಜಹಂಸ ಇಲ್ಲವೇ ಐರಾವತದಲ್ಲಿ ಪಯಣಿಸುತ್ತೇನೆ. ಮಧ್ಯರಾತ್ರಿಯಲ್ಲಿ ಡ್ರೈವರು ಯಾವುದೋ ಡಬ್ಬಾ ಹೋಟೇಲ್ ಎದುರುಗಡೆ ಬಸ್ ನಿಲ್ಲಿಸಿ, ’ಕಾಫಿ ತಿಂಡಿಗೆ ಹತ್ನಿಮಿಷ ಟೈಮಿದೆ’ ಎಂದು ಇಳಿದು ಬಿಡುತ್ತಾನೆ. ಯಾಕೆಂದರೆ ಅವನಿಗೆ ಮತ್ತು ಕಂಡಕ್ಟರ್ ಗೆ ಅಲ್ಲಿ ಪುಕ್ಕಟೆಯಾಗಿ ಎಲ್ಲವೂ ಸಿಗುತ್ತದೆ. ನಮ್ಮಂತವರು ಅಲ್ಲೆಲ್ಲಿ ಮರೆಯಿದೆ ಎಂದುಕೊಂಡು ಗಿಡ, ಮರ, ಪೊದೆಗಳನ್ನು ಹುಡುಕುತ್ತೇವೆ. ಇಂತಹದೇ ಒಂದು ಸಂದರ್ಭದಲ್ಲಿ ನಮ್ಮ ಹಿರಿಯ ನಟಿ ಪಂಡರಿಬಾಯಿಯವರು ರಸ್ತೆ ದಾಟುವಾಗ ಆದ ಅಪಘಾತದಲ್ಲಿ ತಮ್ಮ ಒಂದು ಕೈ ಕಳೆದುಕೊಂಡಿದ್ದರು.
ಕಳೆದ ವಾರ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದನ್ನು ಪಿಟಿಐ ವರಧಿ ಮಾಡಿತ್ತು. ಅಲ್ಲಿನ ಜೇತುದಾನ ಗ್ರಾಮಕ್ಕೆ ಬುಡಕಟ್ಟು ಜನಾಂಗಕ್ಕೆ ಸೇರಿದ ಅನಿತಾ ಎಂಬ ಮಹಿಳೆ ಮದುವೆಯಾಗಿ ಬಂದಿದ್ದಳು. ಆದರೆ ಗಂಡನ ಮನೆಯಲ್ಲಿ ಶೌಚಾಲಯ ಇಲ್ಲ ಎಂಬ ಕಾರಣಕ್ಕೆ ಅವಳು ಎರಡನೇ ದಿವಸಕ್ಕೇ ತವರು ಮನೆಗೆ ಹಿಂದಿರುಗಿದ್ದಳು. ಈ ಘಟನೆಯಿಂದ ಪ್ರಭಾವಿತವಾದ ಸುಲಭ್ ಇಂಟರ್ ನ್ಯಾಷನಲ್ ಸಂಸ್ಥೆ ಶೌಚಾಲಯ ನಿರ್ಮಾಣಕ್ಕೆ ಜೇತು ಗ್ರಾಮವನ್ನು ದತ್ತು ತೆಗೆದುಕೊಂಡಿತ್ತಲ್ಲದೆ, ಇತರ ಮಹಿಳೆಯರನ್ನು ಪ್ರೇರಿಸಬಲ್ಲ ಆಕೆಯ ದೃಢ ನಿರ್ಧಾರವನ್ನು ಪ್ರಶಂಸಿಸಿ ಆಕೆಗೆ ಐದು ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಿತ್ತು. ಸರಕಾರವೂ ಅವಳ ಧೈರ್ಯಕ್ಕೆ ಮೆಚ್ಚಿಗೆ ಸೂಚಿಸಿತು. ಹಳ್ಳಿಗಳಲ್ಲಿ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು ಅನಿತಾಳನ್ನು ಪ್ರಚಾರ ರಾಯಭಾರಿಯಾಗಿ ಬೆತುಲ್ ಜಿಲ್ಲಾಧಿಕಾರಿ ನೇಮಿಸಿದರು. ಇದು ಒಂದು ಘಟನೆಗೆ ಸರಕಾರ ಸಮಾಜಮುಖಿ ನಿರ್ಧಾರ ತೆಗೆದುಕೊಂಡ ರೀತಿ.
. ನಮ್ಮ ಸರಕಾರವೂ ಸಾರ್ವಜನಿಕ ಸ್ಥಳಗಳ ನೈರ್ಮಲ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ರೂಪಿಸಲು ಸಾಧ್ಯವಿಲ್ಲವೇ? ಮುಖ್ಯವಾಗಿ ಜನರ ಮನಸ್ಥಿತಿ ಬದಲಾಗಬೇಕು. ಇಲ್ಲವಾದರೆ ನಮ್ಮ ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಸದಸ್ಯ ನಿಂಗಪ್ಪ ಬಡಿಗೇರನಂತೆ ಮೈಕೈಗೆ ಚಚ್ಚಿಸಿಕೊಂಡು ಆಸ್ಪತ್ರೆ ಸೇರುವ ಸಂದರ್ಭ ಬರಬಹುದು.!
[ ವಿಜಯ ಕರ್ನಾಟಕದ ’ಅನುರಣನ’ ಅಂಕಣದಲ್ಲಿ ಪ್ರಕಟವಾದ ಬರಹ ]