Friday, February 20, 2009

ಕಲಾವಿದರತ್ತ ತಿರುಗಿದ ಬಿಜೆಪಿ ವಕ್ರ ದೃಷ್ಟಿ





ರೈತರ ಮೇಲೆ ಗೋಲಿಬಾರ್ ನಡೆಸಿದ್ದಾಯ್ತು.
ಮಹಿಳೆಯರನ್ನು ಅನುಮಾನಿಸಿ, ಅವಮಾನಿಸಿದ್ದಾಯ್ತು.
ಇದೀಗ ಬಿ.ಜೆ.ಪಿಯ ಕಣ್ಣು ಕಲಾವಿದರ ಮೇಲೆ ಬಿದ್ದಿದೆ.

ನಿನ್ನೆ ಅಂದರೆ ಫೆ.೧೬ರಂದು ಬೆಂಗಳೂರಿನಲ್ಲಿ’ ಆಧುನಿಕ ಕಲೆಗಳ ರಾಷ್ಟ್ರೀಯ ಗ್ಯಾಲರಿ’[ಎನ್ ಜಿ ಎಂ ಎ] ಉದ್ಘಾಟನೆಯಾಯಿತು.
ಮೂರು ದಶಕಗಳ ಹೋರಾಟದ ಫಲವಾಗಿ ರಾಜ್ಯಕ್ಕೆ ಈ ಶಾಖೆ ದೊರಕಿತ್ತು. ಸಹಜವಾಗಿ ಕಲಾವಿದರಿಗೆ ಇದರಿಂದ ಸಂತೋಷವಾಗಿತ್ತು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಹ್ವಾನಿತ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕಮವನ್ನು ಕೇಂದ್ರ ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ಉದ್ಘಾಟಿದರು. ರಾಜ್ಯ ಸರಕಾರದ ಪ್ರತಿನಿಧಿಯಾಗಿ ವೈದ್ಯ ಶಿಕ್ಷಣ ಸಚಿವ ರಾಮಚಂದ್ರ ಭಾಗವಹಿಸಿದ್ದರು.

ಬಹಳಷ್ಟು ಸರಕಾರಿ ಕಾರ್ಯಕ್ರಮಗಳಂತೆ ಇದೂ ಕೂಡ ಕೆಲವು ಅವ್ಯವಸ್ಥೆಗಳ ನಡುವೆ ಸಾಂಗವಾಗಿ ಮುಗಿದು ಹೋಗುತ್ತಿತ್ತು. ಆದರೆ ಹಾಗಾಗಲಿಲ್ಲ. ಅದಕ್ಕೆ ಕಾರಣವಾದದ್ದು ರಾಮಚಂದ್ರ ಗೌಡರ ಭಾಷಣ.
ಪೇಪರುಗಳಲ್ಲಿ ವರದಿಯಾದಂತೆ ಅವರ ಭಾಷಣದ ವೈಖರಿ ಇದು;

”ಮಾಡರ್ನ್ ಆರ್ಟ್ ಹೆಸರಿನಲ್ಲಿ ಸ್ವಯಂ ಘೋಶಿತ ಹುಸಿ ಕಲಾವಿದರು ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ವಿರೂಪಗೊಳಿಸುತ್ತಿದ್ದಾರೆ. ಚಿತ್ರಕಲೆ ಹೆಸರಿನಲ್ಲಿ ಸಂಸ್ಕೃತಿ ಮೇಲೆ ನಡೆಯುತ್ತಿರುವ ಈ ರೀತಿಯ ಹಲ್ಲೆಯನ್ನು ಸಹಿಸಲು ಸಾಧ್ಯವಿಲ್ಲ”.
ಪ್ರೇಕ್ಷಕರಿಂದ ಇದಕ್ಕೆ ಪ್ರತಿಕ್ರಿಯೆ ಬರಲಿಲ್ಲ. ಪ್ರತಿಭಟನೆ ವ್ಯಕ್ತವಾದದ್ದು, ಈ ಕಾರ್ಯಕ್ರಮವನ್ನು ಮೌನಪ್ರತಿಭಟನೆಯ ಮೂಲಕವೇ ವಿರೋಧಿಸಲೆಂದೇ ಬಂದು ಸಭಾಂಗಣದ ಒಂದು ಬದಿಯಲ್ಲಿ ನಿಂತ ಕಲಾವಿದರಿಂದ.
ನಮ್ಮ ನಾಡಿನ ಪ್ರಮುಖ ಮಾಡರ್ನ್ ಆರ್ಟಿಸ್ಟ್ ಗಳಲ್ಲಿ ಒಬ್ಬರಾದ ಎಂಎಸ್ ಮೂರ್ತಿ ಇವರೆಲ್ಲರಿಗೆ ಧ್ವನಿಯಾದರು. ಅವರು ಗೌಡರಿಗೆ ಹೇಳಿದರು” ಆಧುನಿಕ ಕಲೆಯ ಬಗ್ಗೆ ನಿಮಗೆ ಏನೂ ಗೊತ್ತಿಲ್ಲ. ಬಾಯಿಗೆ ಬಂದಂತೆ ಮಾತಾಡಬೇಡಿ”
”ಅನ್ನಿಸಿದ್ದನ್ನು ಹೇಳುವ ಆಧಿಕಾರ ನನಗಿದೆ. ನೀವ್ಯಾರು ಕೇಳಕ್ಕೆ? ಥ್ರೋ ಹಿಮ್ ಔಟ್” ಸಚಿವರು ಆಜ್ನೆ ಕೊಟ್ಟೇಬಿಟ್ಟರು. ಪೋಲಿಸರು ಅದನ್ನು ಪರಿಪಾಲಿಸಿದರು. ಮೂರ್ತಿಯವರನ್ನು ಪೋಲಿಸರು ಹೊರಗೆ ಕರೆದುಕೊಂಡು ಹೋಗುತ್ತಿರುವುದು ದೃಶ್ಯಮಾದ್ಯಮದಾಲ್ಲೂ ಪ್ರಸಾರವಾಯ್ತು.

ವೇದಿಕೆಯಲ್ಲಿದ್ದ ಅಂಬಿಕಾಸೋನಿ, ಕಲಾವಿದರಿಗೆ ಅವಮಾನ ಮಾಡಬೇಡಿ ಅವರನ್ನು ಹೊರಹಾಕಬೇಡಿ. ಇದು ಕೇಂದ್ರ ಸರಕಾರದ ಕಾರ್ಯಕ್ರಮ. ತಾನು ಕೇಂದ್ರ ಸರಕಾರವನ್ನು ಪ್ರತಿನಿಧಿಸುತ್ತಿದ್ದೇನೆ. ವೈದ್ಯ ಶಿಕ್ಷಣ ಸಚಿವರು ರಾಜ್ಯ ಸರಕಾರವನ್ನು ಪ್ರತಿನಿಧಿಸುತ್ತಿದ್ದಾರೆ, ಎಂದುಬಿಟ್ಟರು. ಅವರ ಮಾತುಗಳು ಗಾಳಿಯಲ್ಲಿ ತೂರಿಹೋದುವು.

ಪೋಲಿಸರು ಸಚಿವರ ಆಜ್ನೆ ಪಾಲಿಸುವುದರಲ್ಲಿ ನಿರತರಾದರು. ಕಲಾವಿದರಿಗೆ ಅವಮಾನ ಆಗೇ ಹೋಯ್ತು.

ಕಲಾವಿದರ ಪ್ರತಿಭಟನೆಗೆ ಕಾರಣವೇನಿತ್ತು?

ತಮಿಳುನಾಡಿನ ಪಾಲಾಗುತ್ತಿದ್ದ ’ಮಾಡರ್ನ್ ಆರ್ಟ್ ಗ್ಯಾಲರಿ’ಯನ್ನು ಬಹು ಪ್ರಯಾಸದಿಂದ ಕರ್ನಾಟಕ್ಕಕ್ಕೆ ತರಲಾಗಿತ್ತು. ಕಲಾವಿದರಿಗದು ಹೆಮ್ಮೆಯ ವಿಷಯ. ನಮ್ಮ ರಾಜ್ಯ ಸರಕಾರ ಗ್ಯಾಲರಿಗಾಗಿ ಪ್ರತಿ ವರ್ಷ ಸುಮಾರು ೩೦ ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತದೆ.
ನಮ್ಮ ದುಡ್ಡು, ನಮ್ಮ ನೆಲ ಅಂದ ಮೇಲೆ ಕನ್ನಡಿಗರಿಗೂ ಅದರಲ್ಲಿ ಸೂಕ್ತ ಪ್ರಾತಿನಿದ್ಯ ಸಿಗಬೇಕೆಂದು ಬಯಸುವುದು ನ್ಯಾಯ ತಾನೆ? ಅದು ಸಿಕ್ಕಿಲ್ಲವೆಂದು ಎಮ್ ಎಸ್ ಮೂರ್ತಿ ಪ್ರತಿಭಟನೆ ಮಾಡಿದ್ದಾರೆ.
ಗ್ಯಾಲರಿಯಲ್ಲಿ ಸುಮಾರು ೫೦೦ ಕಲಾವಿದರ ಚಿತ್ರಗಳಿವೆ.ಅದರಲ್ಲಿ ಕರ್ನಾಟಕದ ಕಲಾವಿದರು ಬೆರಳೆಣಿಕೆಯಷ್ಟು ಮಾತ್ರ. ಅದಲ್ಲದೆ ಮುರ್ತಿಯವರೂ ಸೇರಿದಂತೆ ಕರ್ನಾಟಕದ ಅನೇಕ ಕಲಾವಿದರಿಗೆ ಸಮಾರಂಭಕ್ಕೆ ಅಹ್ವಾನ ನೀಡಲಿಲ್ಲವೆಂಬ ಸಕಾರಣವಾದ ಸಿಟ್ಟು.

ರಾಜಕೀಯ ವೇದಿಕೆಗಳಲ್ಲಿ ಹೇಗೆ ಮಾತಾಡಿದರೂ ನಡೆಯುತ್ತದೆ. ಆದರೆ ಸಾಹಿತ್ಯ, ಸಂಗೀತ, ಚಿತ್ರಕಲೆ ಮುಂತಾದ ಲಲಿತ ಕಲೆಗಳ ಬಗ್ಗೆ ಮಾತಾಡುವಾಗ ಎಚ್ಚರವಾಗಿರಬೇಕಾಗುತ್ತದೆ. ಪ್ರೇಕ್ಷಕರಲ್ಲಿ ಪ್ರಾಜ್ನರೂ, ಸೂಕ್ಷಮತಿಗಳೂ ಇರುತ್ತಾರೆ. ಒಂದೋ ಇಂಥ ಸಮಾರಂಭಗಳಿಗೆ ಪೂರ್ವ ಸಿದ್ದತೆಯೊಂದಿಗೆ ಬರಬೇಕು. ಇಲ್ಲವಾದರೆ ತನ್ನ ಮಿತಿಯನ್ನು ಅರಿತುಕೊಂಡು ಶುಭ ಹಾರೈಸಿ, ಸರಕಾರದ ಸಹಕಾರವನ್ನು ಪ್ರಕಟಿಸಿ ,ಬಾಯಿ ಮುಚ್ಚಿ ಕಿವಿ ತೆರೆದು ಕುಳಿತುಕೊಳ್ಳಬೇಕು.

Friday, February 13, 2009

ರೇಣುಕಾ ಚೌದರಿ ಎಂಬ ಅಗ್ನಿಪುತ್ರಿ




ಮಂಗಳೂರಿನ ಅಮ್ನೇಶಿಯ ಪಬ್ ದಾಳಿಯ ಪ್ರಕರಣದ ನಂತರ ನಡೆಯುತ್ತಿರವ ತೆರೆಮರೆಯ ರಾಜಕೀಯ ದೊಂಬಾರಟಗಳು, ಮಂಜೇಶ್ವರ ಶಾಸಕರ ಪುತ್ರಿಯ ಅಪಹರಣ, ಪ್ರೇಮಿಗಳ ವಿರುದ್ಧ ಮುತಾಲಿಕನ ಹಾರಾಟ, ಚೆಡ್ಡಿ ಸೀರೆಗಳ ಪೈಪೋಟಿ ಇವುಗಳ ಮಧ್ಯೆ ಟೀವಿ ನೋಡುವುದಕ್ಕಾಗಲಿ, ಪೇಪರ್ ಓದುವುದಕ್ಕಾಗಲಿ ಮನಸ್ಸಾಗುವುದಿಲ್ಲ. ಪುಕ್ಕಟೆ ಮನರಂಜನೆ ಎಲ್ಲಾ ಕಾಲದಲ್ಲಿಯೂ ರಂಜಿಸುವುದಿಲ್ಲ.

ಆದರೆ ’ಕರಾವಳಿ ಆಲೆ’ಯ ಸಂಪಾದಕ ಬಿ.ವಿ.ಸೀತಾರಂ ಅವರನ್ನು ಬಂದಿಸಿದ ಪರಿ ಮತ್ತು ನಡೆಸಿಕೊಂಡ ರೀತಿಯ ಬಗ್ಗೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿ ಸರಕಾರಕ್ಕೆ ಹತ್ತುಸಾವಿರ ರೂಪಾಯಿಗಳ ದಂಡ ವಿಧಿಸಿದ್ದನ್ನು ಗಮನಿಸಿದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಗೌರವ ಮೂಡುತ್ತೆ. ಮತ್ತೆಆಶಾವಾದ ಮೊಳಕೆಯೊಡೆಯುತ್ತದೆ.

ಆದರೆ ನಿನ್ನೆ ಮಂಗಳೂರು ಮಹಾನಗರಪಾಲಿಕೆ ರೇಣುಕಾ ಚೌದರಿಗೆ ನೋಟಿಸ್ ಜಾರಿ ಮಾಡಿದೆ. ’ಮಂಗಳೂರು ತಾಲೀಬರಣಗೊಳ್ಳುತ್ತಿದೆ’ ಎಂದು ಹೇಳಿದ ರೇಣುಕಳದು ಬೇಜವಾಬ್ದಾರಿ ಹೇಳಿಕೆ, ಅದಕ್ಕಾಗಿ ಅವರು ಮಂಗಳೂರಿನ ಜನತೆಯ ಕ್ಷಮೆ ಯಾಚಿಸಬೇಕು. ಇದು ಪಾಲಿಕೆಯ ಒತ್ತಾಯ. ಒಂದು ವೇಳೆ ಸಚಿವೆ ಕ್ಷಮೆ ಯಾಚಿಸದಿದ್ದರೆ ಅವರ ಮೇಲೆ ಕ್ರಿಮಿನಲ್ ಮೊಕ್ಕದ್ದಮೆ ಹೂಡುವುದಾಗಿ ಮೇಯರ್ ಗಣೇಶ್ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ. ಸಚಿವೆಗೆ ಉತ್ತರಿಸಲು ಮೂರುದಿನಗಳ ಗಡುವನ್ನವರು ನೀಡಿದ್ದಾರೆ.


ಸಚಿವರಿಗೇ ನೋಟಿಸ್ ನೀಡಲು ಮೆಯರೊಬ್ಬರಿಗೆ ಕಾನೂನಿನಲ್ಲಿ ಅವಕಾಶವಿದೆಯೋ ಇಲ್ಲವೋ ಎಂಬುದು ಕಾನೂನು ತಜ್ನರು ಚರ್ಚಿಸಬೇಕಾದ ವಿಷಯ. ಇಲ್ಲಿ ಗಮನಿಸಬೇಕಾದ ವಿಚಾರ ಅಂದರೆ ಮಂಗಳೂರು ಮಹಾನಗರಪಾಲಿಕೆ ಬಿ.ಜೆ.ಪಿ ಆಡಳಿತದಲ್ಲಿದೆ. ಹಾಗಾಗಿ ಮೇಯರ್ ಗಣೇಶ ಹೊಸಬೆಟ್ಟು ಈ ಧಾರ್ಷ್ಟ್ಯ ತೋರಿಸಿದ್ದಾರೆ. ರಾಜ್ಯದಲ್ಲೂ, ಪಾಲಿಕೆಯಲ್ಲೂ ಮೊದಲಬಾರಿ ಅಧಿಕಾರ ಗದ್ದುಗೆ ಏರಿದ ಅನನುಭವಿಗಳ ಪಡೆ!

ತಪ್ಪು ಮಾಡಿದವರು ಯಾರಿಗೇ ಸಂಬಂಧಪಟ್ಟಿರಲಿ, ಅವರ ಹಿನ್ನೆಲೆ ಏನೇ ಇರಲಿ ಅವರು ’ಹಾಗೆ’ ಮಾಡುವುದಕ್ಕೆ ಕಾರಣವಾದ ಪರಿಸರ,ಅದು ನಿರ್ಮಾಣವಾದ ಬಗೆ , ಅದನ್ನು ಪೋಷಿಸುವವರ ಪಡೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅದು ಸಂಘ ಪರಿವಾರದವರ ಬುಡಕ್ಕೇ ಬರುತ್ತದೆ. ತನ್ನ ಘೋರಿಯನ್ನು ತಾನೇ ತೋಡಿಕೊಳ್ಳಲು ಹೊರಟಿದೆ ಬಿ.ಜೆ. ಪಿ ಸರಕಾರ.


ರೇಣುಕಾ ಚೌದರಿ. ಈ ಮಹಿಳೆಯ ಹೆಸರು ನನ್ನ ನೆನಪಿನ ಕೋಶದಲ್ಲಿ ದಾಖಲಾದದ್ದು ಹಲವಾರು ವರ್ಷಗಳ ಹಿಂದೆ. ಬಹುಶಃ ಅದು ನನ್ನ ಕಾಲೇಜು ದಿನಗಳು. ಪರಿಸರ ಮತ್ತು ಕಥೆ ಕಾದಂಬರಿಗಳ ಮೂಲಕ ಪುರುಷ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುತ್ತಿದ್ದ ಕಾಲ. ಆಗ ಆಂದ್ರಪ್ರದೇಶದ ರೇಣುಕಾ ಚೌದರಿಯೆಂಬ ಮಹಿಳೆ”ನಮಗೆ ಗಂಡಸರ ಅಗತ್ಯ ಇಲ್ಲ..... ದೇಶದಾದ್ಯಂತ ವೀರ್ಯ ಬ್ಯಾಂಕ್ ಗಳನ್ನು ಸ್ಥಾಪಿಸಬೇಕು”. ಎಂಬ ಹೇಳಿಕೆ ನೀಡಿಬಿಟ್ಟರು. ಆ ಸಂದರ್ಭ ನೆನಪಿಲ್ಲ. ಆದರೆ ಈ ಹೇಳಿಕೆ ಅಂದು ನೀಡಿದವರು ಈಗಿನ ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳಕಲ್ಯಾಣ ಖಾತೆಯ ರಾಜ್ಯ ಸಚಿವರಾದ ರೇಣುಕಾಚೌದರಿ.

ಎರಡು ದಶಕಗಳ ಹಿಂದಿನ ಆ ಮಾತಿನ ಪ್ರಖರತೆ ಇಂದಿಗೂ ಮಸುಕಾಗಲಿಲ್ಲ .ಮೊನ್ನೆ ಮೊನ್ನೆ ಮಂಗಳೂರಿನ ಪಬ್ ದಾಳಿಗೆ ಸಂಬಂಧಪಟ್ಟಂತೆ ಅವರು ತೆಗೆದುಕೊಂಡ ತೀರ್ಮಾನಗಳು ಮತ್ತೊಮ್ಮೆ ಅದನ್ನು ದೃಢಪಡಿಸಿದವು. ’ನನ್ನ ವರಧಿಯ ಬಗ್ಗೆ ಅಸಮಧಾನ ತೋರಲು ಈಕೆ ಯಾರು?’ ಎಂದು ಪ್ರಶ್ನಿಸಿದ ರಾಷ್ಟ್ರೀಯ ಆಯೋಗದ ಸದಸ್ಯೆ ನಿರ್ಮಲಾ ವೆಂಕಟೇಶರಿಗೆ ಶೋಕಾಶ್ ನೋಟಿಸ್ ಜಾರಿ ಮಾಡಿದರು. ಮಾತ್ರವಲ್ಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಕಿರಣ್ ಚಡ್ಡಾರನ್ನು ಮಂಗಳೂರಿಗೆ ಕಳುಹಿಸಿ ಪ್ರತ್ಯೇಕ ವರಧಿ ತರಿಸಿಕೊಂಡರು. ’ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಪಬ್ ಪರ ಚಳುವಳಿ ನಡೆಸಬೇಕಾದೀತು’ ಎಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಮೊನ್ನೆ ಕನ್ನಡದ ಹಿರಿಯ ಪತ್ರಕರ್ತರೊಬ್ಬರೊಡನೆ ಮಾತಾಡುತ್ತಿದ್ದೆ. ಅವರು ಹೇಳಿದರು; ರೇಣುಕಾ ಸಕ್ರೀಯ ರಾಜಕಾರಣಕ್ಕೆ ಬರುವ ಮೊದಲು ಆತ್ಮರಕ್ಷಣೆಗಾಗಿ ತಮ್ಮ ಬಳಿ ಸದಾ ಪಿಸ್ತೂಲ್ ಇಟ್ಟುಕೊಂಡಿರುತ್ತಿದ್ದರಂತೆ. ಅವರ ಈ ದಾಢಸಿತನವನ್ನು ಮೆಚ್ಚಿಯೇ ತೆಲುಗು ದೇಶಂನ ಸಂಸ್ಥಾಪಕ ಎನ್ ಟಿ ರಾಮರಾವ್ ತಮ್ಮ ಪಕ್ಷಕ್ಕೆ ಅವರನ್ನು ಬರಮಾಡಿಕೊಂಡರಂತೆ
ರೇಣುಕಾ ೧೯೫೪ರ ಅಗಸ್ಟ್೧೩ರಂದು ಅಂದ್ರಪ್ರದೇಶದ ವಿಶಾಖಪಟ್ಟಣದಲ್ಲಿ ಹುಟ್ಟಿದರು. ತಮ್ಮ ೩೦ನೇ ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿದರು. ಈಗ ಅವರಿಗೆ ೫೪ ವರ್ಷ. ಅಂದರೆ ಅವರಿಗೆ ೨೪ ವರ್ಷಗಳ ಸಕ್ರಿಯ ರಾಜಕೀಯ ಅನುಭವವಿದೆ. ಅನುಭವ ಎಂತವರನ್ನೂ ಮೆತ್ತಗಾಗಿಸುತ್ತದೆ. ಆದರೆ ರೇಣುಕಾಳ ವಿಚಾರದಲ್ಲಿ ಅದು ಇನ್ನಷ್ಟು ಪ್ರಖರಗೊಂಡಿದೆ.

ಒಂದೆರಡು ವರ್ಷಗಳ ಹಿಂದೆ ಆಕೆ ಕೊಟ್ಟ ಹೇಳಿಕೆಯನ್ನೇ ನೋಡಿ, ’ಮಹಿಳೆಯರೇ ನಿಮ್ಮ ಗಂಡಂದಿರನ್ನು ನಂಬಬೇಡಿ, ಸದಾ ನಿಮ್ಮ ಬಳಿ ಕಾಂಡಮ್ ಗಳನ್ನು ಇಟ್ಟುಕೊಂಡಿರಿ’ ಈಕೆಯನ್ನು ವಿರೋಧಿಸಲು ಪುರುಷ ಪ್ರಧಾನ ಸಮಾಜಕ್ಕೆ ಇಷ್ಟು ಸಾಕಲ್ಲವೇ?

ಆಕೆ ಕರ್ನಾಟಕಕ್ಕೆ ಇನ್ನೂ ಹತ್ತಿರದವರು. ಅವರು ಸ್ನಾತಕೋತ್ತರ ಪದವಿಯನ್ನು ಪಡೆದದ್ದು ಬೆಂಗಳೂರು ವಿಶ್ವವಿದ್ಯಾಲಯದಿಂದ. ೧೯೮೪ರಲ್ಲಿ ತೆಲುಗುದೇಶಂ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದರೂ ೧೯೯೮ರಲ್ಲಿ ಪಕ್ಷ ತೊರೆದು ಕಾಂಗ್ರೇಸ್ ಸೇರಿದರು. ಎರಡು ಸಲ ರಾಜ್ಯಸಭಾ ಸದಸ್ಯರಾಗಿದ್ದರು. ಕುಪ್ಪಂ ಲೋಕಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಆಯ್ಕೆಯಾಗುತ್ತಿದ್ದಾರೆ. ದೇವೇಗೌಡರ ಕ್ಯಾಬಿನೇಟ್ ನಲ್ಲಿ[೧೯೯೭-೯೮] ಸಚಿವೆಯೂ ಆಗಿದ್ದರು.

ಹೌದು ಆಕೆ ಪ್ರಖರ ಸ್ತ್ರೀವಾದಿ. ಮಹಿಳಾಪರವಾದ ನಿಲುವುಗಳನ್ನು ತೆಗೆದುಕೊಳ್ಳುವಾಗ ಆಕೆ ಕೇವಲ ಕಾಂಗ್ರ್‍ಏಸ್ ಪಕ್ಷದ ವಕ್ತಾರಳಾಗುವುದಿಲ್ಲ ಸಮಸ್ತ ಮಹಿಳಾ ಧ್ವನಿಯಾಗುತ್ತಾಳೆ. ’ನಮ್ಮವಳು’ ಅನ್ನಿಸಿಕೊಂಡುಬಿಡುತ್ತಾಳೆ. ಅದು ಅವಳ ಹೆಚ್ಚುಗಾರಿಕೆ. ಮಹಿಳೆಯರ ಹಕ್ಕುಗಳಿಗೆ ಚ್ಯುತಿ ಬಂದಾಗಲೆಲ್ಲ ಅವಳು ಸಿಡಿದೇಳುತ್ತಾಳೆ. ಹಾಗಾಗಿ ಆಕೆ ಉಳಿದ ರಾಜಕಾರಣಿಗಳಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುತ್ತಾಳೆ. ಜಯಲಲಿತ, ಉಮಾಭಾರತಿ, ಮಾಯಾವತಿ ರೂಪಿಸುವ ರಾಜಕೀಯ ತಂತ್ರಗಾರಿಕೆಗಳು ಈಕೆಯಲ್ಲಿಲ್ಲ. ರೇಣುಕಾಳದ್ದು ಏನಿದ್ದರೂ ನೇರಾನೇರ. ಇಲ್ಲವಾದರೆ ಮುತಾಲಿಕನಂತ ಧರ್ಮಾಂಧ ಬ್ರಹ್ಮಚಾರಿಗೆ ಪ್ರೇಮಿಗಳ ದಿನಾಚರಣೆಯಂದು ಗಿಪ್ಟ್ ಕಳುಹಿಸುತ್ತೇನೆಂದು ಹೇಳಲು ಸಾಧ್ಯವಾಗುತ್ತಿತ್ತೆ? ಅದು ರೇಣುಕಾಗೆ ಮಾತ್ರ ಸಾಧ್ಯ.

ನಾಳೆ ಪ್ರೇಮಿಗಳ ದಿನಾಚರಣೆ.

ಈ ಕ್ಷಣಕ್ಕೆ ನನಗೆ ರೇಣುಕಾಚೌಧರಿ ಇಷ್ಟವಾಗುತ್ತಾಳೆ. ಮೊದಲಬಾರಿಗೆ ವಿಶ್ವಸಮುದಾಯಕ್ಕೆ ಭರವಸೆಯ ಭಾವನೆಯನ್ನು ಮೂಡಿಸುತ್ತಿರುವ ಅಮೇರಿಕದ ದೊಡ್ಡಣ್ಣ ಬರಕಾ ಒಬಮಾ ಇಷ್ಟವಾಗುತ್ತಾನೆ. ಹಾಗಾಗಿ ಅವರಿಬ್ಬರನ್ನೂ ನಾನು ಪ್ರೀತಿಸುತ್ತೇನೆ.

ನನ್ನ ಗೆಳೆಯ ಪೋನ್ ಮಾಡಿ ’ನಾಳೆ ಲಾಂಗ್ ಡ್ರೈವ್ ಹೋಗೋಣ್ವಾ’ ಎಂದು ಕೇಳಿದ್ದ. ಮುನಿಯಂತಿದ್ದ ಆತ ಇಷ್ಟು ಕೇಳಿದ್ದೇ ಹೆಚ್ಚೆಂದು ಒಪ್ಪಿಕೊಂಡಿದ್ದೆ. ಆದರೆ ಈಗ ಭಯವಾಗುತ್ತಿದೆ, ಎಲ್ಲಿಯಾದರೂ ನಮ್ಮನ್ನು ಹಿಡಿದು ಶ್ರೀರಾಮ ಸೇನೆಯವರು ಮದುವೆ ಮಾಡಿಬಿಟ್ಟರೆ...?’ಇಂತಹದೊಂದು ಸಂಬಂಧ ನಿಮ್ಮ ನಡುವಿನಲ್ಲಿದೆಯಾ?’ ಎಂದು ನನ್ನ ಗಂಡ, ಆತನ ಪತ್ನಿ ಪ್ರಶ್ನಿಸಿದರೆ....? ನಮ್ಮ ನಡುವಿನ ಅನುಬಂಧ ಏನೆಂದು ನಮಗೇ ತಿಳಿಯದಿರುವಾಗ ಅನ್ಯರಿಗೆ ಏನೆಂದು ವಿವರಿಸುವುದು?
ಹಾಗಾಗಿ ಇದ್ಯಾವ ರಗಳೆಯೂ ಬೇಡ ಎಂದುಕೊಂಡು ಕಾಳಿದಾಸನ ಮೇಘದೂತದ ಬೇಂದ್ರೆ ಅನುವಾದವನ್ನು ಓದಲೆಂದು ಕೈಗೆತ್ತಿಕೊಂಡಿದ್ದೇನೆ.
ಪ್ರೀತಿ, ಪ್ರೇಮದ ವಿಷಯಕ್ಕೆ ಬಂದಾಗ ಎಲ್ಲರೂ ಭಾವುಕರೇ; ಎಳೆಯರೇ. ಅದೊಂದು ಪ್ರಯೋಗಶಾಲೆ.

Monday, February 2, 2009

ಮಾಧ್ಯಮಗಳಿಗೆ ಧನ್ಯವಾದಗಳು...!




ಶ್ರೀರಾಮ ಸೇನೆ ರಾಜ್ಯ ಸಹ ಸಹಸಂಚಾಲಕ ಪ್ರಸಾದ್ ಅತ್ತಾವರ ಎರಡೂ ಕೈ ಜೋಡಿಸಿ ಮಾದ್ಯಮದವರಿಗೆ ಕೃತಜ್ನತೆ ಅರ್ಪಿಸಿದ್ದಾನೆ.
ಮಾದ್ಯಮಗಳ ಮುಂದೆ ಆತ ಹೇಳಿದ್ದು ಹೀಗೆ ”ಶ್ರೀರಾಮ ಸೇನೆ ಬರಿ ಕರ್ನಾಟಕದಲ್ಲಿತ್ತು. ಈಗ ಅದು ರಾಷ್ಟ್ರಮಟ್ಟಕ್ಕೆ ಬೆಳೆಯಿತು. ಪ್ರಚಾರ ಕೊಟ್ಟ ನಿಮಗೆಲ್ಲಾ ದನ್ಯವಾದಗಳು”

ಸಂಜೆ ಶ್ರೀರಾಮ ಸೈನದ ಸ್ಥಾಪಕ ಪ್ರಮೋದ್ ಮುತಾಲಿಕ ಕೂಡ ಇದನ್ನೇ ಪುನರುಚ್ಚರಿಸಿದರು. ಜಾಮೀನಿನ ಮೇಲೆ ಬಿಡುಗಡೆಗೊಂಡ ಅವರ ಮುಖದಲ್ಲಿ ವಿಜಯದ ನಗೆಯಿತ್ತು.

ಅವರ ಉದ್ದೇಶ ನೆರವೇರಿತ್ತು. ಅದರಲ್ಲಿ ಪಾಲುದಾರರಾದವರನ್ನು ಅವರು ಮರೆಯಲಿಲ್ಲ...!

ಪಬ್ ದಾಳಿಗೆ ಸಂಬಂಧಿಸಿದಂತೆ ಬಂದಿಸಲಾದ ೨೮ ಮಂದಿಗೆ ಶನಿವಾರ ಜಾಮೀನು ಸಿಕ್ಕಿದೆ. ಜೈಲ್ ನಿಂದ ವೀರ ಯೋದರ ತೆರದಲ್ಲಿ ಪೋಸ್ ಕೊಡುತ್ತಲೇ ಹೊರಬಂದ ಅವರು ಮರುದಿನ ಅಂದರೆ ಭಾನುವಾರ ಮಾದ್ಯಮದವರಿಗೆ ಕೃತಜ್ನತೆ ಸಲ್ಲಿಸಿದರು. ಆದರೆ ಮಾದ್ಯಮದವರು ಕನಿಷ್ಠ ಒಂದು ಸಾಲು ಕೂಡ ಛಾಪಿಸದೆ ಕೃತಘ್ನರಾದ್ರು.

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕೂಡ ಮಾರಾಟದ ಸರಕಾಗಿ ಕಾಣುತ್ತಿರುವ ಮಾದ್ಯಮದವರಿಗೆ ಅಬಿನಂಧನೆಗಳು. ನಿಮ್ಮ ಟಿಆರ್ ಪಿ ಹೆಚ್ಚಲಿ. ಪ್ರಸಾರ ಸಂಖ್ಯೆ ಮುಮ್ಮಡಿಗೊಳ್ಳಲಿ. ಪದ್ಮಪ್ರಿಯ ಮೇಲಿನಿಂದಲೇ ನಿಮ್ಮನ್ನೆಲ್ಲಾ ಹರಸಬಹುದು. ಅರುಷಿ ಪುಟ್ಟಿ ಟಾಟಾ ಮಾಡಬಹುದು.

ಶ್ರೀರಾಮ ಸೇನೆಯವರು ಪೆಬ್ರವರಿ ೧೪ರ ಪೇಮಿಗಳ ದಿನಾಚರಣೆಯನ್ನು ವಿರೋದಿಸುತ್ತಾರಂತೆ. ಅಂದು ಕೂಡ ಮಾದ್ಯಮದವರಿಗೆ ಫುಲ್ ಮೀಲ್ ಸಿಗಬಹುದು. ಸಂಸ್ಕೃತಿ ಉಳಿಸುವ ಈ ಕೈಂಕರ್ಯದಲ್ಲಿ ಜೊತೆಯಾಗುವ ಭಾಗ್ಯವೂ ದೊರಕೀತು..!

ಜೈ ಕನ್ನಡಾಂಬೆ

ಜೈ ಭಾರತ ಮಾತೆ.