Saturday, April 28, 2012

ಕನ್ನಡಕ್ಕೆ ಡಬ್ಬಿಂಗ್ ಯಾಕೆ ಬೇಡ?




ಕನ್ನಡದ ಡಬ್ಬಿಂಗ್ ವಿರೋಧಿ ಭೂತ ಮತ್ತೊಮ್ಮೆ ಕಾಣಿಸಿಕೊಂಡಿದೆ.
ಇದಕ್ಕೆ ಕಾರಣವಾಗಿದ್ದು. ಮೇ ೬ರಂದು ಪ್ರಸಾರವಾಗಲಿರುವ ಅಮಿರ್ ಖಾನ್ ನ ಮಹತ್ವಾಕಾಂಕ್ಷೆಯ ರಿಯಾಲಿಟಿ ಶೋ ’ಸತ್ಯ ಮೇವ ಜಯತೇ’. ಅಮಿರ್ ಹೇಳುವ ಪ್ರಕಾರ ಅದು ಕನ್ನಡವೂ ಸೇರಿದಂತೆ ದಕ್ಷಿಣಭಾರತದ ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಿಗೆ ಡಬ್ ಆಗಿ ಪ್ರಸಾರವಾಗಲಿದೆ. ಹಿಂದೆ ರಾಮಾಯಣ, ಮಹಾಭಾರತಗಳು ಪ್ರಸಾರವಾಗುತ್ತಿದ್ದ ಭಾನುವಾರದ ಹನ್ನೊಂದು ಘಂಟೆಯ ಜನಪ್ರಿಯ ಸ್ಲಾಟ್ ನಲ್ಲಿ ಇದು ಪ್ರಸಾರ ಕಾಣಲಿದೆ. ಮೊತ್ತ ಮೊದಲಬಾರಿಗೆ ಖಾಸಗಿ ಮತ್ತು ದೂರದರ್ಶನ ಚಾನಲ್ ಗಳಲ್ಲಿ ಏಕ ಕಾಲದಲ್ಲಿ ಪ್ರಸಾರವಾಗಲಿರುವ ಈ ಶೋ ಇತಿಹಾಸ ನಿರ್ಮಿಸಲಿದೆ ಮತ್ತು ಭಾರತವನ್ನು ಭಾವನಾತ್ಮಕವಾಗಿ ಬೆಸೆಯಲಿದೆ ಎಂಬುದು ಅಮೀರ್ ಖಾನ್ ಹೇಳಿಕೆ. ಆತ ಈ ಶೋದ ಪ್ರಚಾರಕ್ಕಾಗಿ ಖರ್ಚು ಮಾಡದ ಹಣ ೬.೨೫ ಕೋಟಿ ರೂಪಾಯಿಗಳು. ಸಲ್ಮಾನ್ ಖಾನ್, ಶಾರೂಕ್ ಖಾನ್ ನಂತ ತಾರೆಯರ ಸಿನೇಮಾಗಳ ಪ್ರಚಾರಕ್ಕೆ ಖರ್ಚು ಮಾಡುವುದು ೨.೫ ಕೋಟಿ ರೂಪಾಯಿಗಳು ಅಂದರೆ ಅಮಿರ್ ತನ್ನ ಶೋದ ಮೇಲೆ ಇಟ್ಟಿರುವ ಭರವಸೆ ನಮಗೆ ಅರ್ಥವಾಗುತ್ತದೆ.
   
ಅಮಿರ್ ನ ಶೋವನ್ನು ಕನ್ನಡ ಟೆಲಿವಿಷನ್ ಸಂಘಟನೆಗಳು ವಿರೋಧಿಸಿವೆ ಮತ್ತು ಕನ್ನಡಕ್ಕೆ ಡಬ್ ಆಗದಂತೆ ನೋಡಿಕೊಂಡಿವೆ. ನಾವೀಗ ಅದನ್ನು ಹಿಂದಿಯಲ್ಲೋ ಅಥವಾ ನೆರೆ ರಾಜ್ಯದ ಭಾಷೆಗಳಾದ ತೆಲುಗು, ತಮಿಳು ಅಥವಾ ಮಲೆಯಾಳ ಭಾಷೆಗಳಲ್ಲಿ ನೋಡಬೇಕಾಗಿದೆ.
ಕನ್ನಡ ಟೆಲಿವಿಷನ್ ಸಂಘಟನೆಗಳು ಯಾಕೆ ಈ ತೀರ್ಮಾನಕ್ಕೆ ಬಂದಿವೆ? ಅದಕ್ಕೆ ಅವು ಕೊಡುವ ಪ್ರಮುಖ ಕಾರಣಗಳು ಎರಡು. ಒಂದು; ಕನ್ನಡ ಚಿತ್ರರಂಗವನ್ನೇ ನಂಬಿಕೊಂಡಿರುವ ಸುಮಾರು ಐದು ಸಾವಿರ ಕಲಾವಿದರು ಮತ್ತು ತಂತ್ರಜ್ನರು ತಮ್ಮ ಕೆಲಸವನ್ನು ಕಳೆದುಕೊಳ್ಳುತ್ತಾರೆ. ಆ ಮೂಲಕ ಅವರ ಕುಟುಂಬ ಬೀದಿಗೆ ಬರುತ್ತದೆ.
ಇನ್ನೊಂದು ಕಾರಣ,  ಕನ್ನಡ ಭಾಷೆ ಮತ್ತು ಸಂಸ್ಕೃತಿ ನಾಶವಾಗುತ್ತಿದೆಯೆಂಬ ಆತಂಕ.
ಟೆಲಿವಿಷನ್ ಸಂಘಟನೆಗಳು ಮಾತ್ರವಲ್ಲ  ಬಹುತೇಕ ಇಡೀ ಕನ್ನಡ ಚಿತ್ರರಂಗ ಡಬ್ಬಿಂಗ್ ವಿರೋಧಿಯಾಗಿದೆ. ಕನ್ನಡದ ಹಲವು ಸಿನೇಮಾ ಪತ್ರಕರ್ತರೂ ಅವರ ಪರವಾಗಿ ನಿಂತಂತಿದೆ. ಇಲ್ಲಿ ಒಂದು ವಿಷಯ ಗಮನಿಸಬೇಕು.ಕನ್ನಡ ಚಿತ್ರರಂಗ ಮತ್ತು ಟೀವಿ ಚಾನಲ್ ಗಳ ಸಂಬಂಧ ಅವಿನಾಭವವಾದುದು. ಅವರು ಎಂದೂ ಪರಸ್ಪರ ವಿರೋಧಿಗಳಲ್ಲ. ಅವರ ಸಿನೇಮಾಕ್ಕೆ ಇವರು ಪ್ರಚಾರ ಕೊಡಬೇಕು ಅವರ ಸಿನೇಮಾಗಳು, ಹಾಡುಗಳು, ಕ್ಲಿಪ್ಪಿಂಗ್ಸ್ ಗಳು ಇಲ್ಲದಿದ್ದರೆ ಇವರ ಟಿಅರ್ ಪಿ ಗ್ರಾಫ್ ಏರುವುದಿಲ್ಲ. ಇಲ್ಲಿ ಇಂಗು ತಿಂದ ಮಂಗನಂತಾಗಿರುವುದು, ಕನ್ನಡ ಭಾಷೆ ಮಾತ್ರ ಬಲ್ಲ ಪ್ರೇಕ್ಷಕರು
 ಡಬ್ಬಿಂಗ್ ವಿರೋಧಿಗಳು ಕೊಡುವ ಕಾರಣಗಳು ಕಾರಣಗಳೇ ಅಲ್ಲ. ಅದರಲ್ಲಿ ವಾಣಿಜ್ಯ ಉದ್ದೇಶಗಳಿವೆ. ಚಿತ್ರರಂಗವೊಂದು ಉದ್ಯಮ. ಗ್ರಾಹಕನಿಗೆ ಬೇಕಾದುದು ಎಲ್ಲವೂ ಅಲ್ಲಿ ದೊರೆಯಬೇಕು.ಕೆಲವನ್ನು ಮಾತ್ರ ಕೊಡುತ್ತೆಯೆಂಬುದು ಸರಿಯಲ್ಲ, ಎಂಬುದು ಡಬ್ಬಿಂಗ್ ಪರವಾಗಿರುವವರ ವಾದ.

 ಸಿನೇಮಾ ಒಂದು ಕಲಾ ಪ್ರಕಾರ; ಸೃಜನಶೀಲ ಕ್ಷೇತ್ರ. ಕಲೆಗೆ ಮಾನವನ  ಬದುಕನ್ನು ಮುನ್ನಡೆಸುವ,  ಬದಲಾಯಿಸುವ ಮತ್ತು ಎತ್ತರಿಸುವ ಶಕ್ತಿಯಿದೆ. ಅದು ಕೊಡುವ ಅನುಭವ ಶಬ್ದಾತೀತವಾದುದು. ಭಾಷಾತೀತವಾದುದು. ಅಲ್ಲಿ  ಅದೊಂದು ಜ್ನಾನಶಾಖೆ. ಹಾಗಾಗಿ ಅದು ಮನೋರಂಜನೆಯ ಜೊತೆ ಜೊತೆಗೆ ಜ್ನಾನವನ್ನು ಹಂಚುತ್ತದೆ.  ಉಳಿದ ಕಲೆಗಳಲ್ಲಿ ಇರದ ವಿಶೇಷವಾದ ಒಂದು ಗುಣ ಸಿನೇಮಾದಲ್ಲಿದೆ. ಅದು ಅಕ್ಷರ ಹೀನರನ್ನೂ ಸುಸಂಸ್ಕೃತರನ್ನಾಗಿ ಮಾಡುತ್ತದೆ

 ಕನ್ನಡ ಭಾಷೆಗೆ ಒಂದು ಸಾವಿರ ವರ್ಷಗಳ ಲಿಖಿತ ಇತಿಹಾಸವಿದೆ. ಅದಕ್ಕೂ ಮೀರಿದ ಜಾನಪದ ಪರಂಪರೆಯಿದೆ. ಯಾವ ಅನ್ಯ ಸಂಸ್ಕೃತಿಯೂ ಕನ್ನಡ ಸಂಸ್ಕೃತಿಯನ್ನು ನಾಶ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ. ಅದಕ್ಕೆ ಎಲ್ಲವನ್ನೂ ತನ್ನದಾಗಿಸಿಕೊಳ್ಳುವ, ಜೀರ್ಣಿಸಿಕೊಳ್ಳುವ ಅಗಾಧ ಶಕ್ತಿಯಿದೆ. ಒಂದು ಕಾಲಕ್ಕೆ ಸಂಸ್ಕೃತ ಪಂಡಿತರ ಅಂದರೆ ಅಕ್ಷರವಂತರ ಭಾಷೆಯಾಗಿತ್ತು. ಪ್ರಭುತ್ವದ ರಕ್ಷಣೆಯಲ್ಲಿತ್ತು . ಇಂತಹ ಸುರಕ್ಷಿತ ವಲಯದಲ್ಲಿ ಹುಟ್ಟಿದ ರಾಮಾಯಣ ಮಹಾಭಾರತಗಳನ್ನು ನಮ್ಮ ಅಕ್ಷರವಂಚಿತ ಜನಸಾಮಾನ್ಯರು ತಮ್ಮದಾಗಿಸಿಕೊಂಡ ಪರಿಯನ್ನು ನೋಡಿದರೆ ಅವರ ಜ್ನಾನಕ್ಕೆ ಅಚ್ಚರಿಪಡಲೇ ಬೇಕು. ಪತಿ ಊರಲ್ಲೂ ರಾಮಾಯಣವನ್ನು ನೆನಪಿಸುವ ಮತ್ತು ಪಾಂಡವರು ನಡೆದಾಡಿದ ಕುರುಹುಗಳನ್ನು ಜನರ ಬಾಯಲ್ಲಿ ಕೇಳಬಹುದು. ಅವರ ಗ್ರಹಿಕೆ ಮತ್ತು ಪುನರ್ ಸೃಷ್ಟಿ ಅನನ್ಯವಾದುದು.  ಇಂತಹ  ಸಂಸ್ಕೃತಿಯನ್ನು ಕಡೆಗಣಿಸಿ  ಕತ್ತಿ, ಲಾಂಗ್, ಮಚ್ಚು-ಮಚ್ಛಾಗಳಿಂದ ಕೂಡಿದ ಡಾಗರ್ ಸಂಸ್ಕೃತಿಯನ್ನೇ ಕನ್ನಡದ ಸಂಸ್ಕೃತಿ ಎಂಬಂತೆ ಬಿಂಬಿಸಿ ’ಇದನ್ನು ಮಾತ್ರ ನೋಡಿ’ ಎಂದು ತಾಕೀತು ಮಾಡಿದರೆ..? ತಾವು ಬಾವಿಯಲ್ಲಿನ ಕಪ್ಪೆಗಳಂತಿರುವುದಲ್ಲದೆ ಪ್ರೇಕ್ಷಕರನ್ನು ಕೂಡಾ ಹಾಗೆಯೇ ಇರಿ ಎಂದು ಹೇಳಿದರೆ..?

ಭಾಷೆ ಬೆಳೆಯುವುದೇ ಕೊಡು-ಕೊಳ್ಳುವಿಕೆಯಿಂದ.’ಇವಳ ತೊಡುಗೆ ಅವಳಿಗಿಟ್ಟು ನೋಡಬಯಸಿದೆ’ ಎಂದು ಪ್ರಯೋಗಕ್ಕೆ ಒಡ್ಡಿಕೊಂಡು ಇಂಗ್ಲೀಷನ್ನು ಅಪ್ಪಿಕೊಂಡ ಕಾರಣದಿಂದಲೇ ಕನ್ನಡ ಭಾಷೆ ಇಂದು ಸಮೃದ್ಧವಾಗಿ ಬೆಳೆದು ನಿಂತಿದೆ. ಅವರೆಲ್ಲಾ ಅನ್ಯಭಾಷೆಯ ಮೂಲದ್ರವ್ಯವನ್ನು ತೆಗೆದುಕೊಂಡು ಕನ್ನಡೀಕರಿಸುತ್ತಿದ್ದರು. ಯೋಗ್ಯರಾದವರ ಕೈಯ್ಯಲ್ಲಿ ಸಿಕ್ಕಿದರೆ ಕನ್ನಡಭಾಷೆಗೆ ಮೂಲವನ್ನು ಮೀರುವ ಧ್ವನಿಶಕ್ತಿಯಿದೆ. ’lead kindly light’ ಇಂಗ್ಲೀಷ್ ಹಾಡು ಬಿ.ಎಮ್.ಶ್ರೀ ಕೈಯ್ಯಲ್ಲಿ ’ಕರುಣಾಳು ಬಾ ಬೆಳಕೇ…’ಎಂಬ ಅನುಭಾವದ ಹಾಡಿನಂತೆ. ಬರ್ನ್ ಕವಿಯ ’my love is like a red red rose’ ಹಾಡು ’ನನ್ನ ಪ್ರೇಮದ ಹುಡುಗಿ ತಾವರೆಯ ಹೊಸ ಕೆಂಪು’ ಆಗಿ ಕನ್ನಡ ಹಾಡಾಗಿ ಉಳಿದುಬಿಡುತ್ತದೆ. ಕನ್ನಡ ಸಾಹಿತ್ಯ ಪ್ರಪಂಚ ಅನುವಾದ ಸಾಹಿತ್ಯಕ್ಕೆ ತೆರೆದುಕೊಳ್ಳದಿರುತ್ತಿದ್ದರೆ ನಮಗೆ ಪಾಶ್ಚಾತ್ಯ ಮತ್ತು ಪೌರಾತ್ಯ ಜಗತ್ತಿನ ಸಾಹಿತ್ಯ ಮತ್ತು  ಚಿಂತನೆಯ ಪರಿಚಯವೇ ಆಗುತ್ತಿರಲಿಲ್ಲ.

 ಜಾಗತೀಕರಣಕ್ಕೆ ತೆರೆದುಕೊಂಡವರು ನಾವು. ಸ್ಪರ್ಧೆ ಅನಿವಾರ್ಯ. ಗ್ರಾಹಕ ಸಂಸ್ಕೃತಿಯಲ್ಲಿ ಗುಣಮಟ್ಟದ ಉತ್ಪಾದನೆಯೇ ಅಂತಿಮ. ಅದು ನಮಗೆ  ನಮ್ಮದೇ ಭಾಷೆಯಲ್ಲಿ  ದೊರೆಯಬೇಕು. .ಇಲ್ಲವಾದರೆ ಯಾವ ಭಾಷೆಯಲ್ಲಿ ನಮಗದು ಸಿಗುತ್ತದೋ ಆ ಭಾಷೆಯನ್ನು ನಾವು ಕಲಿಯುತ್ತೇವೆ. ಆಗ ನಿಜವಾಗಿಯೂ ನಮ್ಮ ಭಾಷೆ ಸೊರಗುತ್ತದೆ. ನಾನು ತಮಿಳು ಮತ್ತು ಮಲೆಯಾಳಂ ಭಾಷೆ ಕಲಿತದ್ದು ಹಾಗೆಯೇ. ಬೆಂಗಾಲಿ ಮತ್ತು ಅಸ್ಸಾಂ ಭಾಷೆಯ ಚಿತ್ರಗಳು ನನಗೆ ಕಾಲೇಜು ದಿನಗಳಲ್ಲಿ ನೋಡಲು ಸಿಗುತ್ತಿದ್ದರೆ ಆ ಭಾಷೆಯನ್ನೂ ಕಲಿಯುತ್ತಿದ್ದೆನೇನೋ..! ಆಗ ನನಗೆ ಆಯ್ಕೆಗಳು ಕಮ್ಮಿ ಇತ್ತು..!! ಹಾಗಾಗಿ ನಾನು ಕನ್ನಡವನ್ನೂ ಕಲಿತೆ…!!! ಈಗಿನ ಪೀಳಿಗೆಯವರು ಹೆಚ್ಚೆಚ್ಚು ಭಾಷೆಯನ್ನು ಕಲಿತ್ತಿದ್ದರೆ, ಕಲಿಯುತ್ತಿದ್ದರೆ ಅದಕ್ಕೆ ಕನ್ನಡ ಚಿತ್ರರಂಗದ ಜಿಗುಟುತನವೂ ಒಂದು ಕಾರಣ. ಅವರಿಗೆ ಕನ್ನಡ ಹೊರಜಗತ್ತಿಗೂ ಬೇಡ, ಒಳಜಗತ್ತಿಗೂ ಬೇಡ..!

 ’ಇನ್ ಸೆಪ್ಷನ್’”ಅವಟಾರ್’ ನಂತಹ ಸಿನೇಮಾಗಳು ಅದರ ಎಲ್ಲಾ ತಾಂತ್ರಿಕ ವೈಭವದೊಡನೆ ನನಗೆ ಬೇಕಾಗಿದ್ದರೆ ಹಳ್ಳಿಯಲ್ಲಿರುವ ನನ್ನ ಅಮ್ಮನಿಗೆ ನ್ಯಾಷನಲ್ ಜಿಯಾಗ್ರಪಿಯಲ್ಲಿ ಪ್ರಸಾರವಾಗುವ ಕಡಲಾಳದ ವಿಸ್ಮಯಗಳು ಬೇಕು. ನನ್ನ ಅಪ್ಪನಿಗೆ ಡಿಸ್ಕವರಿಯ ಪ್ರಾಣಿಪ್ರಪಂಚ, ಅಣ್ಣನಿಗೆ ಹಿಸ್ಟರಿ ಚಾನಲ್, ಕೆಲಸದವಳಿಗೆ ರಾಮಾಯಣ- ಮಹಾಭಾರತ ..ಮಗನಿಗೆ ಕಾರ್ಟೂನ್ ಚಾನಲ್ ಗಳು ಬೇಕು. ಕನ್ನಡ ಚಿತ್ರರಂಗದ ಸೀಮಿತ ಮಾರುಕಟ್ಟೆ ಮತ್ತು ಅದರ ಅರ್ಥಿಕ ಸಾಮರ್ಥ್ಯದ ಅರಿವು ನಮಗಿದೆ. ಹಾಗಾಗಿ ನಮಗೆ ವಿಶ್ವದ ಆಯ್ದ ಸಿನೇಮಾಗಳ, ಡಾಕ್ಯುಮೆಂಟರಿಗಳ ಡಬ್ಬಿಂಗ್ ವರ್ಷನ್ ಬೇಕು.   ಕಾರಣವೇ ಅಲ್ಲದ ಕಾರಣಗಳನ್ನು ಮುಂದಿಟ್ಟುಕೊಂಡು  ನಮ್ಮ ಜ್ನಾನ ವಿಸ್ತಾರದ ಬಾಗಿಲುಗಳನ್ನು ಮುಚ್ಚುತ್ತಾ, ಸ್ಪರ್ಧೆಯಿಂದ ಹಿಂದೆ ಸರಿಯುವುದೆಂದರೆ ಅದು ಆರು ಕೋಟಿ ಕನ್ನಡಿಗರಿಗೆ ಎಸಗುತ್ತಿರುವ ಅನ್ಯಾಯ.  ಈ ಬಗ್ಗೆ ಚಿಂತನೆ ನಡೆಯಬೇಕು. 

[ ವಿಜಯಕರ್ನಾಟಕದ ’ಅನುರಣನ’ ಕಾಲಂ ನಲ್ಲಿ ಪ್ರಕಟವಾದ ಲೇಖನದ ಪರಿಷ್ಕೃತ ಬರಹ ]

Monday, April 9, 2012

ವಧಾಸ್ಥಾನದಲ್ಲಿ ವೈಯಕ್ತಿಕ ಸಂಬಂಧಗಳು



”ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧ ಸಮಾಜವನ್ನು ಸೃಷ್ಟಿಸುತ್ತದೆ; ಸಮಾಜ ನನ್ನನ್ನು ಮತ್ತು ನಿಮ್ಮನ್ನು ಬಿಟ್ಟು ಬೇರೆಯಾಗಿಲ್ಲ; ಇಬ್ಬರು ವ್ಯಕ್ತಿಗಳು ತಾವು ಪರಸ್ಪರ ಸೇರಿಕೊಂಡಿದ್ದೇವೆಂಬುದನ್ನು ಅರಿತರೆ,ಅದೇ ಸಂಬಂಧ. ಸಂಬಂಧವೆಂದರೆ ಭಯವಿಲ್ಲದ ಸಹಭಾಗಿತ್ವ ಅಥವಾ ಭಾವೈಕತೆ, ಪರಸ್ಪರ ಅರ್ಥ ಮಾಡಿಕೊಳ್ಳಲು, ನೇರವಾಗಿ ಸಂಪರ್ಕಿಸಲು ಮುಕ್ತ ವಾತಾವರಣ. ಆದರೆ ನಾವು ಸಂಬಂಧವನ್ನು ಸುಖಸಾದನವನ್ನಾಗಿ ಬಳಸಿಕೊಳ್ಳುತ್ತೇವೆ. ”. ಇದು ಪ್ರಸಿದ್ಧ ದಾರ್ಶನಿಕ ಜೆ. ಕೃಷ್ಣಮೂರ್ತಿಯವರು ಸಂಬಂಧಕ್ಕೆ ನೀಡುವ ವ್ಯಾಖ್ಯಾನ.
ಇಲ್ಲಿ ಅವರು ’ಸಂಬಂಧಗಳ ಬಳಸಿಕೊಳ್ಳುವಿಕೆ’ ಎಂಬ ಶಬ್ದವನ್ನು ಉಪಯೋಗಿಸಿದ್ದಾರೆ. ಅದರ ಬಗ್ಗೆ ನನಗೆ ಕುತೂಹಲವಿದೆ. ಸಂಬಂಧಗಳನ್ನು ಬಳಸಿಕೊಳ್ಳುವುದು ಎಂದರೆ ಏನು? ಅದರಿಂದ ಪ್ರಯೋಜನವನ್ನು ಪಡೆದುಕೊಳ್ಳುವುದೇ? ವ್ಯವಾಹರಿಕವಾದ ದೃಷ್ಟಿಕೋನದಿಂದ ನೋಡುವುದೇ?. ಅದು ನನಗೆ ಸುಖವನ್ನು ಕೊಡುವುದಿಲ್ಲ ಎಂದು ಅನ್ನಿಸಿದರೆ ಅಥವಾ ಅದು ಹಳೆಯದಾಯಿತು, ಆಕರ್ಷಣೆಯನ್ನು ಕಳೆದುಕೊಂಡಿತು ಎಂದರೆ ಅದನ್ನು ತ್ಯಜಿಸಿಬಿಡುವುದೇ?. ಸಂಬಂಧಗಳು ಅಂದರೆ ಅಷ್ಟೆನಾ…?
ನಾವು ಸಂಬಂಧಗಳನ್ನು ವ್ಯವಹಾರಿಕ ಸಂಬಂಧಗಳು. ಭಾವನಾತ್ಮಕ ಸಂಬಂಧಗಳು, ರಕ್ತ ಸಂಬಂಧಗಳು ಮಾನವೀಯ ಸಂಬಂಧಗಳು ಎಂದೆಲ್ಲಾ ವಿಂಗಡಿಸುತ್ತೇವೆ. ಈ ಎಲ್ಲಾ ಸಂಬಂಧಗಳಲ್ಲೂ ಬಳಸುವಿಕೆ ಎಂಬುದು ಅಲ್ಪ ಪ್ರಮಾಣದಲ್ಲಿ ಇದ್ದೇ ಇರುತ್ತದೆ. ಏಕೆಂದರೆ ಇಲ್ಲಿ ಪರಸ್ಪರ ಅವಲಂಬನೆ, ನಂಬಿಕೆ. ವಿಶ್ವಾಸ ಪ್ರೀತಿ ಮತ್ತು ಪ್ರಾಮಾಣಿಕತೆಯಿರುತ್ತದೆ. ಒಳ್ಳೆಯ ಬದುಕಿನ ಹಂಬಲವಿರುತ್ತದೆ. ಆ ಮೂಲಕ ಸ್ವಸ್ಥ ಸಮಾಜ ರೂಪುಗೊಳ್ಳುತ್ತದೆ. ಆದರೆ ಇಂದು ಮಾಧ್ಯಮಗಳಲ್ಲಿ ಪರಸ್ಪರ ಹೊಡೆದಾಡುತ್ತಿರುವ, ಕೆಸರೆರೆಚಿಕೊಳ್ಳುತ್ತಿರುವ ಸಂಬಂಧಗಳನ್ನು ನೋಡುತ್ತಿರುವಾಗ ಇಲ್ಲಿ ’ಬಳಸಿಕೊಳ್ಳುವಿಕೆ’ಯೇ ಪ್ರಮುಖ ಅಸ್ತ್ರವಾಗಿ ಬಳಕೆಯಾಗುತ್ತಿದೆ ಎಂದು ಅನ್ನಿಸುವುದಿಲ್ಲವೇ?
ಮೊನ್ನೆ ಭಾನುವಾರ ಕನ್ನಡದ ಸುದ್ದಿವಾಹಿನಿಗಳಲ್ಲಿ ಸೆಲೆಬ್ರಿಟಿಗಳಿಗೆ ಸಂಬಂಧಪಟ್ಟಂತೆ ಎರಡು ಕೆಸರೆರಚಾಟ ನಡೆಯಿತು. ಒಂದು ಭಾವನಾತ್ಮಕ ಸಂಬಂಧಕ್ಕೆ ಸಂಬಂಧಪಟ್ಟದಾದರೆ ಇನ್ನೊಂದು ವ್ಯವಾಹರಿಕ ಸಂಬಂಧಕ್ಕೆ ಸಂಬಂಧಿಸಿದ್ದು. ಆದರೆ ಇವೆರಡರಲ್ಲಿ ನಲುಗಿದ್ದು ಮಾನವೀಯ ಸಂಬಂಧಗಳು. ಇಲ್ಲಿನ ಚರ್ಚೆಯ ಪರಿ, ಚರ್ಚೆಗೆ ವಿನಿಯೋಗಿಸಿದ ಕಾಲಾವಧಿಯನ್ನು ಗಮನಿಸಿದರೆ ಸಂಬಂಧಗಳ ಬಳಸಿಕೊಳ್ಳುವಿಕೆಯ ವಿವಿಧ ರೂಪಗಳು ಅನಾವರಣಗೊಂಡವು.
ಚರ್ಚೆ ನಡೆಯಲಿ, ಬೇಡ ಎನ್ನುವುದಿಲ್ಲ. ಅದಕ್ಕೊಂದು ಘನತೆ, ಗಾಂಭೀರ್ಯ, ತಾರ್ಕಿಕತೆ ಬೇಡವೇ? ನ್ಯಾಯಾಧೀಶರ ಗತ್ತಿನಲ್ಲಿ ಕುಳಿತುಕೊಳ್ಳವವರು ನ್ಯಾಯದಾನ ನೀಡುವಷ್ಟು ಪ್ರಾಮಾಣಿಕರಾಗಿರಬೇಕಲ್ಲವೇ? ನೀತಿ ಪಾಠ ಹೇಳುವವರು ಸ್ವತಃ ನೀತಿವಂತರಾಗಿರಬೇಕಲ್ಲವೇ?
ಪ್ರತಿಯೊಬ್ಬರ ಬದುಕಿನಲ್ಲೂ ಹತ್ತಾರು ಧಾರಾವಾಹಿಗಳಿಗಾಗುವಷ್ಟು ಸರಕಿರುತ್ತದೆ. ಹಾಗೆಂದುಕೊಂಡು ಅವುಗಳನ್ನೆಲ್ಲಾ ಮಾರಾಟಕ್ಕಿಡಲು ಸಾಧ್ಯವೇ?
ನಮ್ಮ ಬದುಕು ಕೇವಲ ”ನನ್ನದು’ ಮಾತ್ರ ಆಗಿರುವುದಿಲ್ಲ. ಅದು ’ನಮ್ಮವರ’ ಜೊತೆ ಹಣೆಯಲ್ಪಟ್ಟಿರುತ್ತೆ. ನಾವು ಎಲ್ಲವನ್ನೂ ತೆರೆದಿಡುತ್ತಾ ಹೋದರೆ ಅವರ ಬದುಕು ಅಲ್ಲಾಡಿಬಿಡುತ್ತದೆ. ಆ ಅರಿವು ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ಬದುಕನ್ನು ತೆರೆದಿಡುವವರ ಅರಿವಿನಲ್ಲಿರಬೇಕು. ತಾವಾಗಿಯೇ ತಮ್ಮ ಬದುಕನ್ನು ಬೀದಿಗೆ ಹರಡಿ ನಿಲ್ಲುವುದರಲ್ಲಿ ಬೇರೆ ಬೇರೆ ಉದ್ದೇಶಗಳು ಅಡಗಿರಬಹುದು. ಆದರೆ ಕೆಲವೊಮ್ಮೆ ಬೇರೆಯವರು ನಮ್ಮ ಬದುಕನ್ನು ಎಳೆದು ತಂದು ವಧಾಸ್ಥಾನದಲ್ಲಿ ನಿಲ್ಲಿಸುತ್ತಾರಲ್ಲಾ, ಅದಕ್ಕೇನು ಮಾಡುವುದು?
ಪ್ರತಿಯೊಬ್ಬ ಮನುಷ್ಯನಿಗೂ ಒಂದು ವ್ಯಯಕ್ತಿಕ ಬದುಕು ಇನ್ನೊಂದು ಸಾರ್ವಜನಿಕ ಬದುಕಿರುತ್ತದೆ. ಸಾರ್ವಜನಿಕ ಬದುಕಿನಲ್ಲಿರುವ ಸೆಲೆಬ್ರಿಟಿಗಳ ಬದುಕಿನ ಬಗ್ಗೆ ಜನಸಾಮಾನ್ಯರಿಗೆ ಯಾವಾಗಲೂ ಕುತೂಹಲವಿರುತ್ತದೆ. ಅದು ಗಂಡು ಹೆಣ್ಣಿನ ಸಂಬಂಧಕ್ಕೆ ಸಂಬಂಧಪಟ್ಟಿದ್ದಾದರೆ ಅದಕ್ಕೊಂದು ಸಾಮಾಜಿಕ ಚೌಕಟ್ಟು ಇದ್ದೇ ಇರುತ್ತದೆ. ಕೆಲವು ಸಂಬಂಧಗಳು ಸಮಾಜದ ದೃಷ್ಟಿಯಲ್ಲಿ ಅನೈತಿಕ ಎನಿಸಬಹುದು. ಆದರೆ ವ್ಯಯಕ್ತಿಕವಾಗಿ ಸಹ್ಯ ಅನಿಸಬಹುದು. ಆದರೆ ಚೌಕಟ್ಟುಗಳನ್ನು ಮೀರುವ ಕನಸು ಎಲ್ಲರಲ್ಲೂ ಇದ್ದೇ ಇರುತ್ತದೆ.
ಅಂತಹದೊಂದು ಸಂಬಂಧ ಆತನಿಗೆ/ಅವಳಿಗೆ ವಾಸ್ತವದಲ್ಲಿ ದೊರಕಿದ್ದರೆ, ಅದನ್ನವರು ಜತನದಿಂದ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಅದನ್ನು ಛಿದ್ರಗೊಳಿಸುವ ಪ್ರಯತ್ನವನ್ನು ನಾವ್ಯಾಕೆ ಮಾಡಬೇಕು? ಒಂದು ವೇಳೆ ಅದು ಕಾನೂನು ವಿರೋಧಿಯಾಗಿದ್ದರೆ ಅದರಿಂದ ಬಾಧೆಗೊಳಗಾದವರು ಕಾನೂನಿನ ಚೌಕಟ್ಟಿನೊಳಗಡೆಯೇ ಪ್ರಶ್ನಿಸಲಿ. ಅವರೇ ಅದನ್ನು ನಿರ್ಲಕ್ಷಿಸಿದ್ದರೆ..ಉಪೇಕ್ಷಿಸಿದ್ದರೆ… ಬೇರೆಯವರು ಯಾಕೆ ಮೂಗು ತೂರಿಸಬೇಕು? ಒಂದು ವೇಳೆ ಅವರು ತಮ್ಮ ವೈಯಕ್ತಿಕ ಸಂಕಷ್ಟಗಳಿಂದ, ಗೋಜಲುಗಳಿಂದ ಹೊರಬರಲು ಅನ್ಯರ ಮೊರೆ ಹೋದಲ್ಲಿ ಅವರಿಗೆ ಪ್ರಾಮಾಣಿಕ ರೀತಿಯಲ್ಲಿ ಸಹಾಯ ಮಾಡಬೇಕೆ ಹೊರತು ಅದನ್ನು ಮತ್ತಷ್ಟು ಕಗ್ಗಂಟು ಮಾಡಬಾರದು.
ಜನ್ನನ ಯಶೋಧರ ಚರಿತೆಯ ಅಮೃತಮತಿಯನ್ನು ಬೀದಿಯಲ್ಲಿ ತಂದು ನಿಲ್ಲಿಸಿದ್ದು ಯಾಕೆ ಎಂಬುದು ಇಂದಿಗೂ ನನ್ನನ್ನು ಕಾಡುವ ಪ್ರಶ್ನೆ. ಅಮೃತಮತಿಯ ಗಂಡ ಯಶೋಧರ, ’ಗಂಡ’ನಾಗಿ ವರ್ತಿಸಿದ್ದನೇ? ಅದು ಅವಳಿಗೆ ತಾನೇ ಗೊತ್ತು? ನಮ್ಮ ತರ್ಕಗಳೇನಿದ್ದರೂ ಹೊರನೋಟದ್ದು. ಬೇರೆಯದೇ ಆದ ಒಳಜಗತ್ತೊಂದು ಇರುತ್ತದೆಯಲ್ಲವೇ? ಅದರ ಆಳಕ್ಕೆ ಇನ್ನೊಬ್ಬರು ಎಷ್ಟು ಇಳಿಯಲು ಸಾಧ್ಯ?
ಇಂದಿನ ಕಾಲಘಟ್ಟದಲ್ಲಿ ನಿಂತು ಯೋಚಿಸಿದರೆ ನನಗನಿಸಿದ್ದು ಇಷ್ಟು; ನಾನು ಒಬ್ಬ ಹುಡುಗನನ್ನು ಪ್ರೀತಿಸಿದ್ದರೆ, ಪ್ರೀತಿಸುತ್ತಿದ್ದರೆ ಅದು ನನಗೆ ಮತ್ತು ಅವನಿಗೆ ಸಂಬಂಧಿಸಿದ ವಿಚಾರ.. ಅದರಲ್ಲಿ ಇನ್ನೊಬ್ಬರ ’ಇಣುಕುವಿಕೆ’ಯನ್ನು ನಾನು ಸಹಿಸುವುದಿಲ್ಲ. ನಮ್ಮ ಮುನಿಸು, ನಮ್ಮ ಹಠ, ನಮ್ಮ ಸಾಂತ್ವನ, ನಮ್ಮ ಪಾಪ ನಿವೇದನೆ ಎಲ್ಲವೂ ನಮ್ಮ ಖಾಸಗಿ ಪ್ರಪಂಚಕ್ಕೆ ಸಂಬಂಧಿಸಿದ್ದು.
ಗಂಡು-ಹೆಣ್ಣಿನ ಸಂಬಂಧವೊಂದನ್ನು, ಅದು ವಿವಾಹಿತರಿರಲಿ ಅವಿವಾಹಿತರಿರಲಿ ಅದನ್ನು ಮತ್ತೆ ಮತ್ತೆ ಕೆದಕುವುದು, ಚುಚ್ಚುವುದು, ಅಲ್ಲಾಡಿಸುವುದು ಆ ವ್ಯಕ್ತಿಗಳ ಮಾನಸಿಕ ಆರೋಗ್ಯ ಮತ್ತು ಒಟ್ಟು ಸಮಾಜದ ಆರೋಗ್ಯದ ದೃಷ್ಟಿಯಿಂದಲೂ ಕ್ಷೇಮವಲ್ಲ. ನೈತಿಕತೆಗಿಂತ ಮಾನವೀಯತೆ, ಮನುಷ್ಯ ಸಂಬಂಧಗಳೇ ಮುಖ್ಯವಾಗಬೇಕು.
[ ವಿಜಯ ಕರ್ನಾಟಕದ ’ಅನುರಣನ’ ಅಂಕಣದಲ್ಲಿ ಪ್ರಕಟವಾದ ಬರಹ ]

Saturday, April 7, 2012

’ಶಿಶಿರ ವಸಂತ’ ದಲ್ಲಿ ವಸಂತನೇ ನಾಪತ್ತೆ…!




ಶಿಶಿರ ವಸಂತ’ ನಾಟಕವನ್ನು ನೋಡಲು ರವೀಂದ್ರ ಕಲಾಕ್ಷೇತ್ರಕ್ಕೆ ಹೊರಟಾಗ ನನ್ನಲ್ಲಿ ನಿರೀಕ್ಷೆಗಳ ಜೊತೆಗೆ ಪುಟ್ಟದೊಂದು ಕುತೂಹಲವೂ ಇತ್ತು. ಮೊದಲನೆಯದಾಗಿ ಅದು ಶೇಕ್ಷ್ ಪಿಯರ್ ನ ನಾಟಕ. ಎರಡನೆಯದಾಗಿ ಅದನ್ನು ಅನುವಾದಿಸಿ ನಿರ್ದೇಶಿಸಿದವರು ಅಕ್ಷರ ಕೆ.ವಿ ಮತ್ತು ಅಭಿನಯಿಸುತ್ತಿರುವವರು ಕನ್ನಡದ ಮೊದಲ ರೆಪರ್ಟರಿಯೆನಿಸಿಕೊಂಡಿರುವ ನೀನಾಸಂ ತಂಡ. ಕುತೂಹಲ ಯಾಕೆಂದರೆ ನಾಲ್ಕು ಶತಮಾನಗಳ ಹಿಂದೆ ರಚನೆಗೊಂಡಿರುವ ನಾಟಕವೊಂದು ವರ್ತಮಾನಕ್ಕೆ ಹೇಗೆ ಸ್ಪಂದಿಸುತ್ತದೆಯೆಂಬುದು…
ನಾಟಕದ ವಸ್ತು ಸಾಮಾನ್ಯವಾದುದು. ಎಲ್ಲರಿಗೂ ಅರ್ಥವಾಗುವಂಥದು. ಇಬ್ಬರು ಗೆಳೆಯರಿರುತ್ತಾರೆ. ಅವರು ಅಕ್ಕಪಕ್ಕ ರಾಜ್ಯದ ರಾಜರೂ ಹೌದು. ಲಿಯಾಂಟೆಸ್ ನ ಮನೆಗೆ ಪಾಲಿಕ್ಸೆನಸ್ ಬರುತ್ತಾನೆ; ದೀರ್ಘ ಕಾಲ ಉಳಿಯುತ್ತಾನೆ. ಆತನನ್ನು ಇನ್ನಷ್ಟು ಕಾಲ ಉಳಿಸಿಕೊಳ್ಳುವ ಆಸೆ ಇವನಿಗೆ, ಆದರೆ ಅವನಿಗೆ ತಾಯ್ನಾಡಿಗೆ ಮರಳುವ ಹಂಬಲ, ಇವನ ಮಾತು ಕೇಳದ ಪಾಲಿಕ್ಸೆನಸ್, ಲಿಯಾಂಟೆಸ್ ನ ಪತ್ನಿ ಹರ್ಮಿಯೋನ್ ಳ ಅನುನಯದ ಮಾತುಗಳಿಗೆ ಒಪ್ಪಿ ಇನ್ನಷ್ಟು ಕಾಲ ಇಲ್ಲೇ ಉಳಿಯಲು ಮನಸ್ಸು ಮಾಡುತ್ತಾನೆ. ಇದು ಲಿಯಾಂಟೆಸ್ ನ ಮನಶ್ಯಾಂತಿಯನ್ನು ಕದಡಿಬಿಡುತ್ತದೆ. ಅವನ ಮತ್ತು ಈಕೆಯ ನಡುವೆ ಅನೈತಿಕ ಸಂಬಂಧ ಇರಬಹುದೆಂದು ಶಂಕಿಸುತ್ತಾನೆ. ಆ ಶಂಕೆಯ ಕಾರಣದಿಂದಾಗಿ ಲಿಯಾಂಟೆಸ್ ನ ಬದುಕಿನ ವಸಂತದಲ್ಲಿ ಶಿಶಿರ [ಶಿಶಿರ;ಆರು ಋತುಗಳಲ್ಲಿ ಕೊನೆಯದು. ಮರಗಳೆಲ್ಲಾ ಎಲೆಗಳನುದುರಿಸಿಕೊಂಡು ಬೋಳಾಗಿ ನಿಲ್ಲುವ ಕಾಲ. ಇದು ಮುಪ್ಪನ್ನು, ಮುದುಡುವಿಕೆಯನ್ನು ಸಂಕೇತಿಸುತ್ತದೆ.]ಆವರಿಸಿಕೊಳ್ಳುತ್ತದೆ. ಆ ಶಂಕೆಯೇ ಮುಂದೆ ನಡೆಯುವ ಹಲವು ಅವಘಡಗಳಿಗೆ ಕಾರಣವಾಗುತ್ತದೆ.
ಪತ್ನಿಯ ಶೀಲದ ಮೇಲಿನ ಶಂಕೆ ಕಾಲ, ದೇಶಾತೀತವಾದುದು. ಅದು ಶ್ರೀರಾಮಚಂದ್ರನಿಂದ ಹಿಡಿದು ಪಕ್ಕದ ಮನೆಯ ರಾಮಪ್ಪನ ತನಕ ಇಂದಿಗೂ ಮುಂದುವರಿದಿದೆ. ಮುಂದೆಯೂ ಮುಂದುವರಿಯುತ್ತದೆ. ಇಂಥ ಸಾರ್ವಕಾಲಿಕ ಸತ್ಯದ ಕಥಾಹಂದರವನ್ನು ಹೊಂದಿರುವ ಶೇಕ್ಷ್ ಪಿಯರ್ ನ ’ದಿ ವಿಂಟರ್ಸ್ ಟೇಲ್’ ನಾಟಕವನ್ನು ವಿಮರ್ಶಕರು, ಆತನ ದುರ್ಬಲ ನಾಟಕಗಳಲ್ಲೊಂದು ಎಂದು ಗುರುತಿಸಿದ್ದಾರೆ. ಇಂತಹ ನಾಟಕವೊಂದನ್ನು ಕೆ.ವಿ.ಅಕ್ಷರ ಅನುವಾದಿಸಿದ್ದಲ್ಲದೆ ಅದನ್ನು ಪ್ರಯೋಗಕ್ಕೊಳಪಡಿಸುವ ಸಾಹಸಕ್ಕೂ ಕೈ ಹಾಕಿದ್ದಾರೆ. ಅದರಲ್ಲಿ ಅವರು ಯಶಸ್ವಿಯಾದರೇ?
ನೀನಾಸಂ ನಾಟಕಗಳೆಂದರೆ ’ಹೀಗೆಯೇ ಇರುತ್ತವೆ’ ಎಂಬ ಸಾಮಾನ್ಯ ಕಲ್ಪನೆಗಳನ್ನೆಲ್ಲಾ ಒಡೆದ ನಾಟಕವಿದು. ಅವರ ನಾಟಕಗಳಲ್ಲಿ ವಸ್ತುವನ್ನು ಮೀರಿ ಟೆಕ್ನಿಕ್ ವಿಜೃಂಭಿಸುತ್ತದೆ. ರಂಗಪರಿಕರಗಳ ಭಾರಕ್ಕೆ ನಾಟಕ ನಲುಗಿದಂತೆ ಭಾಸವಾಗುತ್ತದೆ. ನಾಟಕವನ್ನು ಶಿಸ್ತುಬದ್ಧಗೊಳಿಸುತ್ತಾ ಹೋದಂತೆಲ್ಲಾ ಸೃಜನಶೀಲತೆ ಮರೆಯಾಗುತ್ತದೆಯೆನೋ ಎಂಬ ಶಂಕೆಗೆ ನೀನಾಸಂ ನಾಟಕಗಳು ಕಾರಣವಾಗುತ್ತಿದ್ದವು. ಆದರೆ ಶಿಶಿರ ವಸಂತ ಈ ನಂಬಿಕೆಗಳಿಗೆಲ್ಲಾ ಹೊರತಾಗಿತ್ತು.
’ಶಿಶಿರ ವಸಂತ’ದಲ್ಲಿ ಸಮಕಾಲೀನ ವಸ್ತುವಿತ್ತು. ಹಿತಮಿತವಾದ ರಂಗಪರಿಕರಗಳಿದ್ದವು. ಒಳ್ಳೆಯ ಸಂಗೀತವಿತ್ತು.ಆದರೂ ಒಳ್ಳೆಯ ಪ್ರಯೋಗವಾಗವೆಂದು ಹೇಳಲಾಗುವುದಿಲ್ಲ. ಅದಕ್ಕೆ ಕಾರಣ ಸಡಿಲ ನಿರ್ದೇಶನ. ಮೊದಲನೆಯದಾಗಿ ಪಾತ್ರಗಳ ಆಯ್ಕೆಯೇ ಸರಿಯಾಗಿರಲಿಲ್ಲ. ನಾಟಕದ ಕೇಂದ್ರ ಪಾತ್ರವಾದ ಲಿಯಾಂಟೆಸ್ ನದು ದುರಂತ ಪಾತ್ರ. ಆತ ಮಾನಸಿಕ ಅಸ್ವಸ್ಥನಂತೆ ನಟಿಸಬೇಕಾಗಿತ್ತು. ಆದರೆ ಆತನಲ್ಲಿ ಎನರ್ಜಿಯೇ ಇರಲಿಲ್ಲ. ಕುಡುಕನಂತೆ ವರ್ತಿಸುತ್ತಿದ್ದ. ಪೌಲಿನಾ, ಪಾಲಿಕ್ಸ್ ನಸ್,, ಹರ್ಮಿಯೋನ್, ಮುದಿಕುರುಬ ಮುಂತಾದ ಕೆಲವು ಪಾತ್ರಗಳನ್ನು ಹೊರತುಪಡಿಸಿದರೆ ಬಹುತೇಕ ನಟರಲ್ಲಿ ರಂಗ ಹುಮ್ಮಸು ಇರಲಿಲ್ಲ. ರಂಗಚಲನೆಯಿರಲಿಲ್ಲ. ಡೈಲಾಗ್ ಡೆಲಿವರಿ ಮಾತ್ರವೇ ನಾಟಕವಾಗುವುದಿಲ್ಲ. ರಂಗಕ್ರಿಯೆಗಳು ನಡೆಯಬೇಕು. ಅಪೋಲೋ ವಾಣಿಯನ್ನು ಪ್ರೇಕ್ಷಕರ ಮದ್ಯದಿಂದ ಹೊತ್ತು ತಂದು ಬ್ರೆಕ್ಟ್ ನ ಪೋರ್ತ್ ವಾಲ್ ನ ಟೆಕ್ನಿಕ್ ಅನ್ನು ಬಳಸಿಕೊಂಡರೂ ಅದು ನಾಟಕವನ್ನು ಮೇಲೆತ್ತುವಲ್ಲಿ ಸಹಾಯಕವಾಗಲಿಲ್ಲ. ವಸ್ತ್ರ ವಿನ್ಯಾಸದಲ್ಲಿ ಹೊಸತನವಿರಲಿಲ್ಲ.
ನಾಟಕದ ವಸ್ತುವಿನ ಬಗ್ಗೆ ಕಾಲಪ್ರಕೃತಿ ಮತ್ತು ಕಾಲಪುರುಷನ ವಿವರಣೆಯ ನಂತರ ಇಬ್ಬರು ಗೆಳೆಯರ ನಡುವಿನ ಆಪ್ತತೆಯನ್ನು ಬಿಂಬಿಸುವುದರೊಂದಿಗೆ ಆರಂಭವಾದ ನಾಟಕ ಭರವಸೆಯನ್ನು ಹುಟ್ಟಿಸಿತಾದರೂ ಅನಂತರದಲ್ಲಿ ನಿಧಾನ ಗತಿಯಲ್ಲಿ ಸಾಗಿ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುವಂತೆ ಮಾಡಿತು. ಎರಡೂವರೆ ಘಂಟೆಗೂ ಮೀರಿ ಲಂಬಿಸಲ್ಪಟ್ಟ ನಾಟಕದಲ್ಲಿ ಬಿಡಿಬಿಡಿಯಾಗಿ ಕೆಲವು ದೃಶ್ಯಗಳಲ್ಲಿ ಕಲಾವಿದರು ಚೆನ್ನಾಗಿ ಅಭಿನಯಿಸಿದರೂ ನಾಟಕ ಒಟ್ಟು ಶಿಲ್ಪವಾಗಿ ಮೂಡಿ ಬರಲಿಲ್ಲ. ಬಹುಶ’ ಕೃತಿಯಲ್ಲಿಯೇ ಆ ಮಿತಿಗಳಿದ್ದರೆ ಅದನ್ನು ರಂಗಪ್ರಯೋಗದಲ್ಲಿ ತುಂಬಿಕೊಳ್ಳವ ಸ್ವಾತಂತ್ರ್ಯ ನಿರ್ದೇಶಕನಿಗೆ ಇರುತ್ತದೆಯಲ್ಲವೇ?
ನಾಟಕವೊಂದು ಪ್ರೇಕ್ಷಕನಿಗೆ ಏನನ್ನು ದಾಟಿಸಬೇಕು? ಇದನ್ನು ನಿರ್ದೇಶಕ ಯೋಚಿಸುತ್ತಾನೆ. ಪ್ರೇಕ್ಷಕ ನಾಟಕದಿಂದ ಏನನ್ನು ಗ್ರಹಿಸಿದ್ದಾನೆ ಮತ್ತು ಏನನ್ನು ಬಯಸುತ್ತಾನೆ? ಅದು ಅವನ ನಡವಳಿಕೆಯಿಂದ ಗೊತ್ತಾಗುತ್ತದೆ.. ಬೆಂಗಳೂರಿನಂತಹ ಒತ್ತಡದ, ಜನನಿಬಿಡ ನಗರದಲ್ಲಿ ನಾಟಕ ನೋಡಲು ಅರ್ಧ ದಿನವನ್ನು ವ್ಯಯಿಸಬೇಕಾಗುತ್ತದೆ. ಹಾಗಾಗಿಯೇ ಆತ ತಾನು ನಾಟಕಕ್ಕಾಗಿ ಮೀಸಲಿಟ್ಟ ಸಮಯ ಮತ್ತು ಖರ್ಚು ಮಾಡಿದ ದುಡ್ಡು ವರ್ಥ್ ಅನ್ನಿಸುತ್ತದೆಯೇ ಎಂದು ಪ್ರಶ್ನಿಸಿಕೊಳ್ಳುತ್ತಾನೆ. ಆ ದೃಷ್ಟಿಯಿಂದ ನೋಡಿದರೆ ಚಿಕ್ಕದೊಂದು ಅಸಹನೆ ಆತನ ಮನದಲ್ಲಿ ಮೂಡಿದ್ದರೆ ಅಚ್ಚರಿಯೇನಿಲ್ಲ.
[ಇವತ್ತಿನ ವಿಜಯ ಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಬರಹ ]