Wednesday, September 29, 2010

’ರಿಯಾಲಿಟಿ ಶೋ’ಗಳ ವೈನೋದಿಕ ಹಿಂಸೆ




ಇಪ್ಪತ್ತು ವರ್ಷಗಳ ಹಿಂದಿನ ಸಮಾಚಾರ; ’ಮನ್ವಂತರ’ ಎಂಬ ರಾಜಕೀಯ ವಾರಪತ್ರಿಕೆಯ ಮುಖಾಂತರ ನಾನು ಪತ್ರಿಕಾರಂಗಕ್ಕೆ ಅಡಿಯಿಟ್ಟೆ. ಆ ಪತ್ರಿಕೆಯ ಸಹ ಪ್ರಕಟಣಾ ಮಾಸಪತ್ರಿಕೆಯೊಂದಿತ್ತು. ಅದರ ಹೆಸರು ’ಸುರತಿ’. ಮಾರುಕಟ್ಟೆಯಲ್ಲಿ ಅದಕ್ಕೆ ಪೈಪೋಟಿ ನೀಡುತ್ತಿರುವ ಇನ್ನೊಂದು ಮಾಸಪತ್ರಿಕೆಯಿತ್ತು. ಅದರ ಹೆಸರು ’ರತಿವಿಜ್ನಾನ’. ಸರ್ಕ್ಯೂಲೇಶನಿನಲ್ಲೂ ಪರಸ್ಪರ ಪೈಪೋಟಿ ನೀಡುತ್ತಿದ್ದ ಆ ಪತ್ರಿಕೆಗಳ ಒಟ್ಟು ಪ್ರಸರಣ ಸಂಖ್ಯೆ ಐದು ಲಕ್ಷ ದಾಟಿ ಹೋಗುತ್ತಿತ್ತು.

ಪ್ರಸರಣದ ದೃಷ್ಟಿಯಿಂದ ನೋಡಿದರೆ ಅವೆರಡು ಪತ್ರಿಕೆಗಳು ಜನಪ್ರಿಯವಾದ ಮಾಸಪತ್ರಿಕೆಗಳು. ಆದರೆ ಅವು ಮನುಷ್ಯನ ಬೇಸಿಕ್ ಇನ್ಸ್ಟಿಂಗ್ಟ್ ಆದ ಲೈಂಗಿಕ ಕುತೂಹಲವನ್ನು, ತಣಿಸುವ, ಕೆರಳಿಸುವ ಪುಸ್ತಕಗಳು ಅಷ್ಟೆ. ’ಸೆಗಣಿಯಲ್ಲಿ ಸಾವಿರ, ಮಧ್ಯಾಹ್ನಕ್ಕೆ ಲಯ’ ಎಂಬಂತೆ ಅದರಿಂದಾಚೆಗೆ ಅವುಗಳಿಗೆ ಪ್ರತ್ಯೇಕ ಐಡೆಂಟಿಟಿ ಇರಲಿಲ್ಲ.

ಅದು ಮುದ್ರಣ ಮಾಧ್ಯಮದ ಸಾರ್ವಭೌಮತ್ವದ ಕಾಲಘಟ್ಟ. ಈಗ ಏನಿದ್ದರೂ ದೃಶ್ಯ ಮಾಧ್ಯಮದ ಯುಗ. ಸರ್ಕ್ಯೂಲೇಷನ್ ಎಂಬುದು ಹಿಂದಕ್ಕೆ ಸರಿದು ಟಿ.ಆರ್.ಪಿ ಎಂಬ ಭೂತ ಟಿ.ವಿಯನ್ನು ಆಳುತ್ತಿರುವ ಕಾಲ. ಇಲ್ಲೂ ಅದೇ ಟೆಕ್ನಿಕ್; ಮನುಷ್ಯನ ಮೂಲಭೂತ ಕಾಮನೆಗಳನ್ನು ತಣಿಸುವುದು. ಮನುಷ್ಯ ಮೂಲತಃ ಕ್ರೂರಿ. ಆತ ಹಿಂಸ್ರಾ ಪಶು. ಆತನಲ್ಲಿರುವ ಆಕ್ರಮಣಶೀಲತೆ ಸೂಕ್ತ ಸಂದರ್ಭಕ್ಕಾಗಿ ಹೊಂಚು ಹಾಕುತ್ತಿರುತ್ತದೆ.

ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಟಿ.ವಿ ಧಾರಾವಾಹಿಗಳನ್ನೇ ನೋಡಿ; ಟಿ,ಅರ್.ಪಿ ಗ್ರಾಪ್ ಉರ್ಧ್ವಮುಖಿಯಾಗಿ ಸಾಗಿದ್ದು, ಸಾಗುತ್ತಿರುವುದು; ಸಚ್ ಕಾ ಸಾಮ್ನ್, ಇಮೋಷನಲ್ ಅತ್ಯಾಚಾರ್, ಕನ್ನಡದ ಹಳ್ಳಿಹೈದ ಪ್ಯಾಟೆಗೆ ಬಂದ...ಮುಂತಾದ ಭಾವಕೋಶವನ್ನು ಕಲುಷಿತಗೊಳಿಸುವ ದಾರಾವಾಹಿಗಳಿಗೆ ಮಾತ್ರ. ಇದರ ಜೊತೆಗೆ ಕೃತ್ರಿಮತೆಯನ್ನೇ ಢಾಳಾಗಿ ತೋರಿಸುವ ಸ್ವಯಂವರದ ಧಾರಾವಾಹಿಗಳು, ಖಾಸಗಿ ಬದುಕನ್ನು ನಾಟಕಿಯವಾಗಿ ರಂಗದ ಮೇಲೆ ತಂದು ಸಾರ್ವಜನಿಕರ ಬಾಯಿಗೆ ಎಲೆಯಡಿಕೆಯಾಗಿಸುವ ಕಥೆಯಲ್ಲ ಜೀವನಗಳು; ಬದುಕು ಜಟಕಾ ಬಂಡಿಗಳು. ಸಾವಿನಾಚೆಗೆ ಏನಿದೆ ಎಂಬ ಮನುಷ್ಯನ ಅನಾದಿ ಕಾಲದ ಜಿಜ್ನಾಸೆಯನ್ನು, ಸಹಜ ಕುತೂಹಲವನ್ನು ಮಾರುಕಟ್ಟೆಯ ಮೌಲ್ಯಗಳಿಗೆ ಬಾಗಿಸುತ್ತಿರುವ ಜನ್ಮಾಂತರಗಳು, ಹೀಗೇ ಉಂಟುಗಳು..!

ಟಿ.ಅರ್.ಪಿ ಗ್ರಾಪ್ ಮೇಲೆರಿದಂತೆಲ್ಲಾ ಚಾನಲ್ ಗಳಿಗೆ ಅಡ್ ರೆವಿನ್ಯು ಜಾಸ್ತಿಯಾಗುತ್ತದೆ. ಟಿ.ಅರ್.ಪಿ ಅಂದರೆ ಟಾರ್ಗೆಟ್ ರೇಟಿಂಗ್ ಪಾಯಿಂಟ್. ಇದು ಜನಪ್ರಿಯ ಟಿ.ವಿ ಪ್ರೋಗ್ರಾಮ್ ಗಳ ಪಟ್ಟಿಯನ್ನು ಕೊಡುತ್ತದೆ. ಕನ್ನಡದಲ್ಲಿ ಪ್ರತಿ ಬುದವಾರದಂದು ಈ ಪಟ್ಟಿ ಬಿಡುಗಡೆಯಾಗುತ್ತದೆ. ಹಾಗಾಗಿ ವಾರಕೊಮ್ಮೆ ಟಿ.ವಿ ನಿರ್ಮಾಪಕರ ಎದೆಬಡಿತ ಏರುಪೇರಾಗುತ್ತದೆ!. ಯಾಕೆಂದರೆ ರೇಟಿಂಗ್ ಇಲ್ಲ ಎಂಬ ಕಾರಣದಿಂದಾಗೆ ಹಲವು ಸದಭಿರುಚಿಯ ಕಾರ್ಯಕ್ರಮಗಳು ವೈಂಡ್ ಅಫ್ ಆದ ಉದಾಹರಣೆ ಟಿ.ವಿ ಇತಿಹಾಸಕ್ಕಿದೆ.

ಟಿ.ಅರ್.ಪಿಯನ್ನು ಯಾರು ನಿರ್ಧರಿಸುತ್ತಾರೆ? ವಿಕ್ಷಕರು. ಆದರೆ ಎಲ್ಲಾ ವಿಕ್ಷಕರಲ್ಲ. ಆಯ್ದ ವೀಕ್ಷಕರು. ಅದರ ನಿರ್ವಹಣೆಯನ್ನು ಏಜನ್ಸಿಯೊಂದು ಮಾಡುತ್ತದೆ. ಅವರು ಆಯ್ದ ಕೆಲವರ ಮನೆಗಳಲ್ಲಿ ’ಪೀಪಲ್ಸ್ ಮೀಟರ್’ ಎಂಬ ಉಪಕರಣವೊಂದನ್ನು ಅಳವಡಿಸುತ್ತಾರೆ. ಆ ಮನೆಯವರು ಯಾವ ಚಾನಲ್, ಯಾವ ಪ್ರೋಗ್ರಾಮನ್ನು ಎಷ್ಟೊತ್ತು ನೋಡುತ್ತಾರೆ ಎಂಬುದರ ಮೇಲೆ ಕಾರ್ಯಕ್ರಮಗಳ ಜನಪ್ರಿಯತೆಯನ್ನು ಏಜನ್ಸಿ ಸಂಯೋಜಿಸುತ್ತದೆ. ಅದೇ ಟಿ.ಅರ್.ಪಿ. ಆದರೆ ಅದರ ನಿಖರತೆಯ ಬಗ್ಗೆಯೇ ಈಗೀಗ ಸಂಶಯ ವ್ಯಕ್ತವಾಗುತ್ತಿದೆ.

ಕರ್ನಾಟಕದಲ್ಲಿ ಬೆಂಗಳೂರನ್ನು ಹೊರತುಪಡಿಸಿ ಒಟ್ಟು ೮ ಟಿ.ಅರ್.ಪಿ ಸೆಂಟರ್ ಗಳಿವೆ.ಅದನ್ನು ಟಿ.ವಿ ಭಾಷೆಯಲ್ಲಿ ಅರ್.ಒ.ಕೆ ಎಂದು ಕರೆಯುತ್ತಾರೆ. ಅಂದರೆ ರೆಸ್ಟ್ ಅಫ್ ಕರ್ನಾಟಕ. ಅವು ಮೈಸೂರು, ಮಂಗಳೂರು, ದಾವಣಗೆರೆ, ಹುಬ್ಬಳಿ, ಗದಗ, ಬೆಳಗಾವಿ, ಗುಲ್ಬರ್ಗಾ ಮತ್ತು ರಾಯಚೂರು. ಜಾಹಿರಾತುದಾರರು ಈ ಸೆಂಟರ್ ಗಳಿಗಿಂತಲೂ ಬೆಂಗಳೂರಿಗೇ ಹೆಚ್ಚು ಗಮನ ಕೊಡುತ್ತಾರೆ. ಯಾಕೆಂದರೆ ಬೆಂಗಳೂರಲ್ಲಿ ಹೆಚ್ಚು ದುಡ್ಡು ಓಡಾಡುತ್ತದೆ. ಇಲ್ಲಿಯ ಜನರ ಖರೀದಿ ಶಕ್ತಿ ಜಾಸ್ತಿ ಎಂಬುದು ಅವರ ತರ್ಕ. ಹಾಗಾಗಿ ಈ ನಗರವೊಂದರಲ್ಲೇ ಸುಮಾರು ೧೮೦ ಮನೆಗಳಲ್ಲಿ ಟಿ.ಅರ್.ಪಿ ಮಾಪನವಾದ ’ಪೀಪಲ್ಸ್ ಮೀಟರ್’ ಗಳನ್ನು ಅಳವಡಿಸಲಾಗಿದೆ.

ಇದರರ್ಥ ಇಷ್ಟೆ; ಟಿ.ವಿ ಮಾಧ್ಯಮದವರ ಲೆಕ್ಕಾಚಾರದಲ್ಲಿ ಗ್ರಾಮಾಂತರ ಪ್ರದೇಶದ, ಬಹುಸಂಖ್ಯಾತ ಜನರು ಟಿ.ವಿ ವೀಕ್ಷಕರೇ ಅಲ್ಲ. ಅಡ್ ರೆವಿನ್ಯೂ ತರುವ ಟಿ.ಅರ್.ಪಿ ಸೆಂಟರ್ ನ ಜನರಿಗಾಗಿ ಅವರು ಕಾರ್ಯಕ್ರಮವನ್ನು ತಯಾರಿಸಬೇಕು. ಅಂದರೆ ಆಧುನಿಕ ಮನೋಭಾವದ, ಉಳ್ಳವರ ಮನೋರಂಜನೆಗಾಗಿ ಕಾರ್ಯಕ್ರಮ ಹಣೆಯಬೇಕು. ನಿಜಕ್ಕೂ ಅದೊಂದು ಸವಾಲು. ಸಾಹಸ, ಹಾಸ್ಯ ಮತ್ತು ಭಾವುಕತೆಯ ಹದವಾದ ಮಿಶ್ರಣದ ಕಾರ್ಯಕ್ರಮಗಳು ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತದೆ. ಆದರ ತಯಾರಿಕೆಗೆ ಶ್ರಮ ಮತ್ತು ಪ್ರತಿಭೆ ಬೇಕು. ಮುಖ್ಯವಾಗಿ ಹೃದಯವಂತಿಕೆ ಬೇಕು. ಅದಿಲ್ಲವಾದರೆ ಏನಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ಪ್ರಸಾರವಾಗುತ್ತಿರುವ ’ಹಳ್ಳಿಹೈದ ಪ್ಯಾಟೆಗೆ ಬಂದ’ ರಿಯಾಲಿಟಿ ಶೋ ಉತ್ತಮ ಉದಾಹರಣೆ.

ಇಲ್ಲಿ ಎಲ್ಲವೂ ಇದೆ. ಆದರೆ ಹೃದಯವಂತಿಕೆ ಇಲ್ಲ. ಹಳ್ಳಿಯ ಎಳೆಂಟು ಹುಡುಗರನ್ನು ಪೇಟೆಗೆ ತಂದು ಹಾಕಿದ್ದಾರೆ. ಅವರಿಗೆ ನಾಗರಿಕೆ ನಡವಳಿಕೆಗಳನ್ನು[!] ಕಲಿಸಲು ಒಬ್ಬೊಬ್ಬ ಹುಡುಗಿಯರನ್ನು ನೇಮಿಸಲಾಗಿದೆ. ಅವರ ವೇಷ ಭೂಷಣಗಳನ್ನು ನೋಡಿಯೇ ಪಾಪ ಆಹುಡುಗರು ದಂಗಾಗಿರಬೇಕು! ಅಮೇಲೆ ಶುರು ನೋಡಿ, ಅವರಿಗೆ ನಾಗರಿಕ ನಡತೆಯನ್ನು ಕಲಿಸುವ ಪಾಠಗಳು; ಮಾಲ್ ಗಳಲ್ಲಿ ಬಿಕ್ಷೆ ಬೇಡುವುದು, ಬ್ರಿಗೇಡ್ ರೋಡ್ ನಲ್ಲಿ ಹುಡುಗಿಯರ ಮೊಬೈಲ್ ನಂಬರ್ ಗಳನ್ನು ಕಲೆಕ್ಟ್ ಮಾಡುವುದು, ಇಂಗ್ಲೀಷ್ ಕಲಿಯುವುದು, ಯಾರ್ಯರನ್ನೊ ಕಾಡಿ ಬೇಡಿ ಮೆಜೆಸ್ಟಿಕ್ ತಲುಪುವುದು, ಹುಡುಗಿಯರನ್ನು ಹೊತ್ತುಕೊಂಡು ಕೆಸರಿನಲ್ಲಿ ಓಡುವುದು. ಇದೆಲ್ಲಕಿಂತಲೂ ಬೀಬತ್ಸಕರವಾದ ಇನ್ನೊಂದು ಟಾಸ್ಕ್ ಇತ್ತು, ಅತೀ ಹೆಚ್ಚು ಯಾರು ತಿನ್ನುತ್ತಾರೆ, ಕುಡಿಯುತ್ತಾರೆ ಅಂತ. ಅದರಲ್ಲಿ ಸ್ಪರ್ಧಿಗಳಿಗೆ ಗೊತ್ತಿಲ್ಲದಂತೆ ಭೇದಿ ಮಾತ್ರೆ ಹಾಕಿರ್ತಾರೆ. ಆದರೆ ಟಾಯ್ಲೆಟ್ಗೆ ಹೋದ್ರೆ ಸ್ಪರ್ಧೆಯಿಂದ ಹೊರ ಹೋಗಬೇಕಾಗುತ್ತಾದೆ. ದೇಹ ಭಾದೆಯನ್ನು ತಡೆದುಕೊಂಡು ಅವರು ಒದ್ದಾಡುವುದು ನೋಡುವಾಗ ಇದು ಅಮಾನವೀಯ ಅನ್ನಿಸಿಬಿಡುತ್ತಾದೆ. ಇನ್ನು ಆ ಹಳ್ಳಿ ಹುಡುಗರ ಜೋತೆ ಪೇಟೆ ಹುಡುಗಿಯರನ್ನು ರೆಸ್ಲಿಂಗ್ [ಕುಸ್ತಿ] ಆಡಿಸುವುದು ಖಂಡಿತವಾಗಿಯೂ ಆರೋಗ್ಯಕರ ಟಾಸ್ಕ್ ಅನ್ನಿಸುವುದಿಲ್ಲ. ಯಾವ ಮನಸ್ಥಿತಿಯಿಂದ ಅವರು ಪ್ಯಾಟೆಗೆ ಬಂದರೋ ಅದೇ ಮನಸ್ಥಿತಿಯೊಂದಿಗೆ ಅವರು ಹಳ್ಳಿಗೆ ಮರಳಲು ಸಾಧ್ಯವೇ? ಅವರ ಮುಗ್ಧತೆಯನ್ನು ನಾಶ ಮಾಡಿದ ಶಾಪ ಯಾರನ್ನು ತಟ್ಟುತ್ತದೆ?

ಇದೇ ಚಾನಲಿನ ’ಪ್ಯಾಟೆ ಹುಡ್ಗೀರ ಹಳ್ಳಿ ಲೈಪ್’ ಇದಕ್ಕೆ ಹೋಲಿಸಿದರೆ ಚೆನ್ನಾಗಿತ್ತು, ಯಾಕೆಂದರೆ ಹಳ್ಳಿಯಲ್ಲಿ ಮುಕ್ತವಾದ ವಾತಾವರಣವಿರುತ್ತದೆ. ಅವರಲ್ಲಿ ಇನ್ನೂ ಅಂತಃಕರಣ ಉಳಿದಿರುತ್ತದೆ. ಹೊರಗಿನಿಂದ ಬಂದವರನ್ನು ಕೂಡ ಅವರು ಕ್ರಮೇಣ ತಮ್ಮವರೆಂದು ಒಪ್ಪಿಕೊಂಡುಬಿಡುತ್ತಾರೆ. ನಗರದ ಜನತೆಯದು ಕವರ್ಡ್ ಮನಸ್ಥಿತಿ, ಅವರು ಯಾರನ್ನು ನಂಬಲಾರರು. ಹಳ್ಳಿ ಹುಡುಗರಿಗೆ ಮೊಬೈಲ್ ನಂಬರ್ ಕಲೆಕ್ಟ್ ಮಾಡುವುದು, ಲಿಪ್ಟ್ ಪಡೆಯುವುದು ಹಾಗಾಗಿಯೇ ತುಂಬಾ ಕಷ್ಟವಾಗಿದ್ದು. ನಾಗರಿಕ ಜನರ ಕೈಯಲ್ಲಿ ಸಿಕ್ಕು ಅವರು ಪಡುವ ಪರಿಪಾಟಲು ಕಂಡಾಗ ೨೦ ವರ್ಷಗಳ ಹಿಂದೆ ಹಳ್ಳಿಯಿಂದ ನೇರವಾಗಿ ಬೆಂಗಳೂರೆಂಬ ಮಾಯಾಂಗನೆಯ ತೆಕ್ಕೆಗೆ ಬಂದು ಬಿದ್ದ ನನ್ನದೇ ಅನುಭವ ಮರುಕಳಿಸಿದಂತಾಯಿತು. ರಾಜೇಶನೆಂಬ ಹಳ್ಳಿ ಹುಡುಗನಲ್ಲಿ ನನ್ನನ್ನು ನಾನು ಕಂಡುಕೊಂಡೆ.

ಇನ್ನು, ನಿರೂಪಕ ಅಕುಲ್ ಬಾಲಾಜಿಯ ಇಂಗೀಷ್ ಶೈಲಿಯ ಕನ್ನಡ ಉಚ್ಛಾರಣೆ ಮತ್ತು ಅವರು ಹುಡುಗಿಯರನ್ನು ಬಹುವಚನದಲ್ಲೂ ಹುಡುಗರನ್ನು ಏಕವಚನದಲ್ಲೂ ಸಂಬೋಧಿಸುವುದು. ಹುಡಿಗಿಯರಿಗೆ ಗಂಭೀರವಾಗಿ ಬಯ್ಯುವುದು,ಹುಡುಗರಿಗೆ ಅದನ್ನೇ ಗೇಲಿ ಮಾಡುತ್ತಾ ಎಚ್ಚರಿಸುವುದು ಅವರು ನಗರ ಪಕ್ಷಪಾತಿ ಎಂಬುದನ್ನು ತೋರಿಸುತ್ತದೆ. ಇನ್ನು ಸ್ಕ್ರಿಪ್ಟ್ ಮತ್ತು ವಾಯ್ಸ್ ಒವರ್ ವೈನೋದಿಕ ಹಿಂಸೆಗೆ ಅತ್ಯುತ್ತಮ ಉದಾಹರಣೆ. ಅವಕಾಶ ಸಿಕ್ಕಾಗಲೆಲ್ಲಾ ಇಡೀ ಗ್ರಾಮೀಣ ಜನತೆಯನ್ನು, ಅವರ ನಂಬಿಕೆಗಳನ್ನು ಮತ್ತು ಅವರ ಕಪ್ಪು ವರ್ಣವನ್ನು ಲೇವಡಿ ಮಾಡಲಾಗಿದೆ. ಇದಲ್ಲದೆ ಆ ಹುಡುಗರ ಬಾಯಲ್ಲಿ ಪ್ರೀತಿ, ಪ್ರೇಮ, ಮುತ್ತು ಎಂಬ ಮಾತುಗಳನ್ನೆಲ್ಲಾ ಆಡಿಸಿ ಕಾಮನೆಗಳನ್ನು ಕೆರಳಿಸುವ ಪ್ರಯತ್ನವೂ ನಡೆಯುತ್ತಿದೆ.

ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ನನ್ನ ಗೆಳತಿಯೊಬ್ಬಳು ಹೇಳುತ್ತಿದ್ದಳು; ಅಲ್ಲಿ ’ಡಿವೈಡ್ ಅಂಡ್ ರೂಲ್’ ಅಂದರೆ ಒಡೆದು ಆಳುವ ನೀತಿಯನ್ನು ಅನುಸರಿಸಲಾಗುತ್ತದೆಯೆಂದು. ಸ್ಪರ್ಧಿಗಳಲ್ಲೇ ಪೈಪೋಟಿಯನ್ನು ಹುಟ್ಟು ಹಾಕಿ ಪರಸ್ಪರ ಅಪನಂಬಿಕೆಯನ್ನು ಸೃಷ್ಟಿಸುವುದು. ಪ್ರತಿಯೊಬ್ಬರಿಗೂ ಗೆಲ್ಲುವ ತವಕ. ಹಳ್ಳಿಹೈದ....ದಲ್ಲಿ ಪ್ಯಾಟೆ ಸುಂದರಿಯರಿಗೆ ಮಾತ್ರ ಗೆಲ್ಲುವ ತವಕ .ಹೈದರಿಗೆ ಇಲ್ಲಿಂದ ತಪ್ಪಿಸಿಕೊಂಡು ಊರಿಗೆ ಓಡುವ ತುಡಿತ. ಬಹುಶಃ ಕಾರ್ಯಕ್ರಮದ ನಿಬಂಧನೆಗಳು ಮತ್ತು ಆಕರ್ಷಣೆಗಳು ಅವರನ್ನು ’ಇಲ್ಲಿರಲಾರೆ ಅಲ್ಲಿಗೆ ಪೋಗಲಾರೆ’ ಎಂದು ಕಟ್ಟಿ ಹಾಕಿರಬಹುದು.

ಹಳ್ಳಿ ಜನರ ಬಡತನ, ಅಸಹಾಯಕತೆ ಮತ್ತು ಮುಗ್ಧತೆ ಟಿ.ವಿಯಲ್ಲಿ ಮಾರಾಟದ ಸರಕಾಗುತ್ತಿದೆ. ಅದ್ದೂರಿಯ ಬಂಗಲೆಗಳಲ್ಲಿ ಕುಳಿತು, ಕುರುಕುಲು ತಿಂಡಿ ತಿನ್ನುತ್ತಾ ನಗರಗಳ ಸುಶಿಕ್ಷಿತ ಜನರು ಇದನ್ನು ಎಂಜಾಯ್ ಮಡುತ್ತಾರೆ! ಹಾಗೆಂದು ಅವರನ್ನು ಹೃದಯಹೀನರೆಂದು, ಗ್ರಾಮೀಣ ಜನರನ್ನು ಉಪೇಕ್ಷೆಸುವರೆಂದು ಅನ್ನುವ ಹಾಗಿಲ್ಲ. ಯಾಕೆಂದರೆ ಕಳೆದ ಬಾರಿ ಉತ್ತರ ಕರ್ನಾಟಕದ ಜನತೆ ನೆರೆ ಹಾವಳಿಯಿಂದ ಬದುಕು ಕಳೆದುಕೊಂಡಾಗ ಮುಖ್ಯಮಂತ್ರಿಗಳ ಜೋಳಿಗೆಗೆ ಕೋಟ್ಯಾಂತರ ರೂಪಾಯಿಗಳನ್ನು ಹಾಕಿದವರು ಇದೇ ಪೇಟೆ ಜನರು.

ಇದೇ ನಗರದ ಸೆಲೆಬ್ರಿಟಿಗಳನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದ್ದ ಹಳ್ಳಿ ಜನರೆದುರು ಅವರ ಖಾಸಗಿ ಬದುಕನ್ನು ತೆರೆದಿಟ್ಟು ಮಾದರಿಗಳನ್ನು ಒಡೆಯುವ ಪ್ರಯತ್ನವೂ ಕಿರು ತೆರೆಯಲ್ಲಿ ನಿರಂತರ ನಡೆಯುತ್ತಿದೆ. ಸಾಮಾಜಿಕ ಹೊಣೆಗಾರಿಕೆಯೆಂಬುದು ದೃಶ್ಯ ಮಾಧ್ಯಮದ ನಿಘಂಟಿನಲ್ಲಿಲ್ಲದ ಪದ. ಇದೇ ಚಾನಲ್ ನವರು ಹಿಂದೆ ಸ್ವಯಂವರ ರಿಯಾಲಿಟಿ ಶೋ ಒಂದು ಮಾಡಿದ್ದರು. ಅದರಲ್ಲಿ ಭಾಗವಹಿಸಲು ವಧುಗಳು ಮುಂದೆ ಬರದಾದಾಗ ಕಿರುತೆರೆ ನಟಿಯರನ್ನೇ ಬಾಡಿಗೆ ವಧುಗಳಾಗಿ ತಂದು ವಿವಾಹಕಾಂಕ್ಷಿಗಳನ್ನು ಬೆಚ್ಚಿ ಬೀಳಿಸಿದ ಇತಿಹಾಸವೂ ಇದಕ್ಕಿದೆ.

ನಾನು ಇದನ್ನು ಬರೆಯುವ ಹೊತ್ತಿಗಾಗಲೇ ಪುತ್ತೂರಿನ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಮಾಧವ ಭಾವಿಕಟ್ಟೆಯವರು ’ ಹಳ್ಳಿ ಹೈದ ಪ್ಯಾಟೆಗೆ ಬಂದ’ ಕಾರ್ಯಕ್ರಮದ ಬಗ್ಗೆ ತೀವ್ರ ಅಸಮಾಧಾನಗೊಂಡು ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆಗಳನ್ನು ಮಾಡಿಕೊಳ್ಳೊತ್ತಿದ್ದಾರೆ. ಹಳ್ಳಿ ಜನರನ್ನು ಸ್ನಾನ ಮಾಡದವರು, ತಲೆ ಬಾಚಿಕೊಳ್ಳದವರು, ಕಾಡುಜನರಂತೆ ಬದುಕುತ್ತಾರೆ ಎಂಬಂತೆ ಚಿತ್ರಿಸಲಾಗಿದೆ; ಗ್ರಾಮೀಣ ಜನರನ್ನು ಅವಮಾನಿಸಲಾಗಿದೆ ಎಂಬುದು ಅವರ ಆರೋಪ. ನಾನು ಮಾತಾಡಿಸಿದ ಬಹುತೇಕ ಜನರ ಅಭಿಪ್ರಾಯವೂ ಇದೇ ಆಗಿದೆ.


’ಹಳ್ಳಿ ಹೈದ ಪ್ಯಾಟೆಗೆ ಬಂದ’ ಎಂಬ ರಿಯಾಲಿಟಿ ಶೋದ ಕೆಲವು ಎಪಿಸೋಡುಗಳನ್ನು ನೋಡಿದೆ. ಅದು ನನಗೆ ಇಷ್ಟನ್ನೆಲಾ ಬರೆಯಲು ಪ್ರಚೋದಿಸಿತು. ಅದಕ್ಕಾಗಿ ಆ ಶೋ ದ ಕ್ರಿಯೇಟಿವ್ ಹೆಡ್ ಗೆ ನನ್ನ ಕೃತಜ್ನತೆಗಳು!

[ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ ]

Thursday, September 2, 2010

ದ್ರೌಪದಿಗೆ ಕೃಷ್ಣನಂತೆ.......!?





ಈಗೀಗ ಒಂಟಿಯಾಗಿ ಇರುವುದೇ ಹೆಚ್ಚು ಖುಷಿಯನ್ನು ಕೊಡುತ್ತದೆ. ಯಾವಾಗಲೂ ಅಷ್ಟೇ. ಮೌನದೊಡನೆ ಸಂವಾದ ಸಾಧ್ಯವಾಗುವಷ್ಟು ಶಬ್ದಗಳ ಜೊತೆ ಆಗುವುದಿಲ್ಲ. ಚಿಕ್ಕಂದಿನಿಂದಲೂ ಮನೆ, ಶಾಲೆಗಳಲ್ಲಿ ಕಲಿತದ್ದಕ್ಕಿಂತಲೂ ತೋಟ, ಗದ್ದೆ, ಕಾಡು, ನದಿ, ಗೋಮಾಳಗಳಲ್ಲಿ ಕಲಿತದ್ದೇ ಹೆಚ್ಚು.

ಮಲೆನಾಡಿನಲ್ಲಿ ಹುಟ್ಟಿ ಬೆಳೆದ ಎಲ್ಲರೂ ಹಾಗೇ. ಬಾಲ್ಯದಲ್ಲಿ ಗೋಪಾಲಕರಾಗುತ್ತಾರೆ, ಇಲ್ಲವೆ ಗೋಪಿಕೆಯರಾಗುತ್ತಾರೆ. ಅವರ ಸುತ್ತಮುತ್ತ ದನಕರುಗಳಿರುತ್ತವೆ; ನದಿಯಿರುತ್ತವೆ; ಕಾಡಿರುತ್ತದೆ; ಬೆಟ್ಟಗುಡ್ಡವಿರುತ್ತದೆ; ಮನೆಯವರ ಜೊತೆ ಮುನಿಸಿಕೊಂಡರೆ ಸುತ್ತಮುತ್ತ ಯಶೋಧೆಯರಿರುತ್ತಾರೆ; ಆಳುಗಳಿರುತ್ತಾರೆ. ಒಟ್ಟಿನಲ್ಲಿ ಸಮೃದ್ಧ ಬಾಲ್ಯ.

ಈಗ ಬೆಂಗಳೂರಿನಲ್ಲಿರುವ ನನಗೆ ಒಂಟಿತನ ಅನಿರ್ವಾಯ. ಅದು ಆಧುನಿಕ ಬದುಕಿನ ಕೊಡುಗೆ! ಎರಡು ವರ್ಷಗಳ ಹಿಂದೆ ನಾನು ಬ್ಲಾಗ್ ಆರಂಭಿಸಿದಾಗ ಇದನ್ನೇ ಬರೆದುಕೊಂಡಿದ್ದೆ;
ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ
ಧರ್ಮಸಂಕಟಗಳಲಿ, ಜೀವಸಮರದಲಿ
ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ
ನಿರ್ಮಿತ್ರನಿರಲು ಕಲಿ-ಮಂಕುತಿಮ್ಮ.

ಡಿ.ವಿ.ಜಿಯವರ ಕಗ್ಗದ ಈ ಪದ್ಯ ನನ್ನ ಉತ್ಕಟ ಕ್ಷಣಗಳಲ್ಲಿ ನನಗೆ ಎಲ್ಲವನ್ನು ಎದುರಿಸುವ ಶಕ್ತಿಯನ್ನು ನೀಡುತ್ತದೆ. ಹಾಗಿದ್ದರೂ ಬಾಲ್ಯದಿಂದಲೂ ಗೆಳೆತನದ ಬಗ್ಗೆ ನನಗೆ ತುಂಬಾ ಉದಾತ್ತವಾದ ಭಾವನೆಯಿತ್ತು; ಆದರ್ಶ ಕಲ್ಪನೆಯಿತ್ತು, ಇಂದಿಗೂ ಅಷ್ಟು ಸುಲಭವಾಗಿ ನಾನು ಯಾರನ್ನೂ ’ಇವರು ನನ್ನ ಪ್ರೆಂಡ್’ ಎಂದು ಹೇಳಿಕೊಳ್ಳುವುದಿಲ್ಲ. ಇವರು ನನ್ನ ಪರಿಚಯದವರು, ಕ್ಲಾಸ್ ಮೇಟ್, ಕೊಲಿಗ್, ಪ್ಯಾಮಿಲಿ ಪ್ರೆಂಡ್, ರಿಲೇಟಿವ್, ಬೇಕಾದವರು ಎಂದೆಲ್ಲಾ ಹೇಳಿಕೊಳ್ಳುತ್ತೇನೆ. ಆದರೆ ’ಪ್ರೆಂಡ್’ ಎಂಬ ಪದವನ್ನು ಅತ್ಯಂತ ಜಾಗರೂಕತೆಯಿಂದ ಉಪಯೋಗಿಸುತ್ತೇನೆ. ಯಾರಾದರೂ ’ ನಿಂಗೆ ತುಂಬಾ ಬೇಕಾದವರು, ಆತ್ಮೀಯರಾದವರು ಯಾರು?’ ಎಂದು ಕೇಳಿದರೆ ತಕ್ಷಣ ಕಣ್ಮುಂದೆ ದ್ರೌಪದಿಯ ಸಖ ಕೃಷ್ಣ ಕಾಣಿಸಿಕೊಳ್ಳುತ್ತಾನೆ.

ದ್ರೌಪದಿಯ ಸಖ ಕೃಷ್ಣ ಎನ್ನಲು ಕಾರಣವಿದೆ, ಆತ ಆಕೆಯ ಬೌದ್ಧಿಕ ಸಂಗಾತಿ. ಇಡೀ ಮಹಾಭಾರತದಲ್ಲಿ ದ್ರೌಪದಿಯ ಶಕ್ತಿಯನ್ನು ಅರಿತವನು ಕೃಷ್ಣ ಮಾತ್ರ. ಅವಳ ಸಮಗ್ರ ವ್ಯಕ್ತಿತ್ವದ ಆಳ ವಿಸ್ತಾರಗಳು ಆತನಿಗೆ ಗೊತ್ತಿತ್ತು. ಎಲ್ಲರೆದುರಲ್ಲಿ ಅವರವರ ಭಾವಕ್ಕೆ ತಕ್ಕಂತೆ ಗೋಚರವಾಗುತ್ತಿದ್ದ ಕೃಷ್ಣ ಒಂದು ಮೆಟ್ಟಿಲು ಎತ್ತರದಲ್ಲಿಯೇ ಇರುತ್ತಿದ್ದ. ಆದರೆ ದ್ರೌಪದಿಯ ಎದುರಿನಲ್ಲಿ ಮಾತ್ರ ಸಮಾನ ನೆಲೆಯಲ್ಲಿ ಸ್ಪಂದಿಸುತ್ತಿದ್ದ, ಅವರ ನಡುವೆ ಹೃದಯ ಸಂವಾದವಿತ್ತು. ಮೌನದಲ್ಲೂ ಮಾತಿತ್ತು.

ದ್ರೌಪದಿ ಅಸಹಾಯಕ ಹೆಣ್ಣಲ್ಲ. ಆದರೂ ನೆರವು ಬೇಕೆಂದಾಗ ಅವಳು ಯಾಚಿಸಿದ್ದು ತನ್ನ ವೀರಾಧಿವೀರ ಗಂಡರನ್ನಲ್ಲ. ಆಪತ್ಬಾಂಧವ ಕೃಷ್ಣನನ್ನು. ಅವನಲ್ಲಿ ಆಕೆಗೆ ಅಂತಹ ನಂಬಿಕೆಯಿತ್ತು. ಗಂಡು-ಹೆಣ್ಣಿನ ನಡುವಿನ ಸಂಬಂಧಕ್ಕೆ ಹೊಸ ವ್ಯಾಖ್ಯೆಯನ್ನು ಬರೆದವರು ಅವರು.

ಪ್ರೀತಿ ದೇವನಂತಿರುವ, ಬೆಚ್ಚನೆಯ ಭಾವವನ್ನು ಮೂಡಿಸುವ ಆ ಕೃಷ್ಣ ಸದಾ ನನ್ನ ಜತೆಗಿರುತ್ತಾನೆ. ಅವನ ಕಿರುಬೆರಳನ್ನು ಹಿಡಿದು, ಸಮುದ್ರಗುಂಟ ಹೆಜ್ಜೆ ಹಾಕುತ್ತಾ ಬದುಕಿನ ಅನೇಕ ಸವಾಲುಗಳನ್ನು ನಾನು ಎದುರಿಸಿದ್ದೇನೆ.

ನಿಜ, ಪರಿಪೂರ್ಣವಾದ ಸಂಬಂಧವೊಂದಕ್ಕಾಗಿ ನಾವೆಲ್ಲರೂ ಸದಾ ಹಾತೊರೆಯುತ್ತಿರುತ್ತೇವೆ. ಆ ಹುಡುಕಾಟ ನಮ್ಮನ್ನು ಎಲ್ಲೆಲ್ಲಿಯೋ ಕೊಂಡೊಯ್ಯುತ್ತದೆ. ಅದೃಷ್ಟವಿದ್ದರೆ ಒಂಚೂರಾದರೂ ದಕ್ಕೀತು, ಇಲ್ಲವದಾರೆ ನಿರಾಶೆ, ದುಃಖ, ಹತಾಶೆ ತಪ್ಪಿದ್ದಲ್ಲ. ಯಾಕೆಂದರೆ ಪರಿಪೂರ್ಣತೆ ಎನ್ನುವುದೇ ಒಂದು ಆದರ್ಶ. ಅದು ಎಂದೂ ವಾಸ್ತವವಾಗುವುದಿಲ್ಲ. ಆದರೆ ಕೃಷ್ಣನದು ಪರಿಪೂರ್ಣವಾದ ವ್ಯಕ್ತಿತ್ವ. ಅವನ ವ್ಯಕ್ತಿತ್ವ ಎಲ್ಲವನ್ನೂ, ಎಲ್ಲರನ್ನೂ ತನ್ನೊಳಗೆ ಲೀನವಾಗಿಸಿಕೊಳ್ಳುತ್ತದೆ. ಒಬ್ಬ ಸ್ತ್ರೀ ಬಯಸುವ ಎಲ್ಲವೂ ಅವನಲ್ಲಿದೆ.

ಒಬ್ಬ ಸ್ತ್ರೀಯ ನಿಡಿದಾದ ಬದುಕಿನಲ್ಲಿ ಪುರುಷ ವಹಿಸುವ ಎಲ್ಲಾ ಪಾತ್ರಗಳನ್ನು ಒಬ್ಬನೇ ಕೃಷ್ಣ ವಿವಿಧ ರೂಪಗಳಲ್ಲಿ ವಹಿಸಿಬಿಡುತ್ತಾನೆ. ಬಾಲ್ಯದಲ್ಲಿ ಈಕೆ ಗೋಪಿಕೆಯಾದರೆ ಆತ ಮುರಳಿಲೋಲ. ಯೌವನದಲ್ಲಿ ಇವಳು ರಾಧೆಯಾದರೆ ಆತ ರಾಸಲೀಲೆಯಾಡುವ ಮಾಧವ. ಆದರ್ಶ ದಾಂಪತ್ಯದಲ್ಲಿ ಇವಳು ರುಕ್ಮಿಣಿಯಾದರೆ ಅವನು ಕೃಷ್ಣ. ತಾಯ್ತನದಲ್ಲಿ ಇವಳು ಯಶೋಧರೆಯಾದರೆ ಅವನು ಬೆಣ್ಣೆಚೋರ. ದಾಂಪತ್ಯ ಕಲಹದಲ್ಲಿ ಇವಳು ಸತ್ಯಭಾಮೆಯಾದರೆ ಅವನು ಓಲೈಸುವ ಚಿತ್ತಚೋರ. ಯಾರೂ ಇಲ್ಲವೆಂದು ಮೊರೆಯಿಟ್ಟರೆ ಅವನು ಅನಾಥರಕ್ಷಕ.

ಇಷ್ಟೆಲ್ಲಾ ಆಗಿದ್ದರೂ ಒಬ್ಬ ದ್ರೌಪದಿಗೆ ಮಾತ್ರ ಅವನು ಆತ್ಮಬಂಧು. ಯಾಕೆಂದರೆ ಮೇಲಿನ ಯಾವ ಸಂದರ್ಭದಲ್ಲೂ ಅವಳಿಗೆ ಕೃಷ್ಣ ಆದರ್ಶವಾಗಿರಲಿಲ್ಲ. ಅವಳು ಸಾಮಾನ್ಯ ಹೆಣ್ಣಾಗಿರಲಿಲ್ಲ. ಅವಳ ಹುಟ್ಟಿಗೆ ನಿರ್ಧಿಷ್ಟ ಕಾರಣವಿತ್ತು. ಹಾಗಾಗಿ ಅವಳು ಋಣಾನುಬಂಧಕ್ಕೆ ಒಳಗಾದವಳಲ್ಲ; ಯಾರಿಗೂ ಸೇರಿದವಳಲ್ಲ. ತಾನು ಯಾರಿಗೋ ಸೇರಿದವಳಾಗಿರಬೇಕೆಂದು ಪ್ರತಿಯೊಬ್ಬ ಹೆಣ್ಣೂ ಬಯಸುತ್ತಾಳೆ. ಯಾಕೆಂದರೆ ಹೆಣ್ಣಿನಲ್ಲೊಂದು ಅರ್ಪಣಾ ಭಾವವಿರುತ್ತದೆ. ದ್ರೌಪದಿಗೆ ಅರ್ಪಿಸಿಕೊಳ್ಳುವುದಕ್ಕೆ ಯಾರೂ ಇರಲಿಲ್ಲ!.

ತಂದೆ ದ್ರುಪದನಿಗೆ ದ್ರೋಣನ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ಅವಳೊಂದು ವಾಹಕವಾಗಿದ್ದಳು. ಪಾಂಡವರು ಅವಳನ್ನು ಬಯಸಿ ಪಡೆದವರಲ್ಲ. ಹಾಗಿರುವಾಗ ಅವಳು ಜೀವದುಂಬಿ ಯಾರನ್ನು ಪ್ರೀತಿಸಬೇಕು? ಮಕ್ಕಳನ್ನೇ? ಅವು ಕೂಡಾ ಅವಳ ದೇಹವನ್ನು ಹರಿದು ಹಂಚಿ ಉಂಡ ಗಂಡಸರದಲ್ಲವೇ? ಅಗ್ನಿಯಲ್ಲಿ ಹುಟ್ಟಿದವಳು; ಅಗ್ನಿಯಂತೆಯೇ ತೀಕ್ಷಣವಾಗಿ ಯೋಚಿಸುವವಳು. ಮೇಲೆ ತಣ್ಣಗಿದ್ದರೂ ಒಳಗೊಳಗೇ ಕಠೋರನಾಗಿದ್ದ ಕೃಷ್ಣ ಅವಳಿಗೆ ಹತ್ತಿರನಾದ. ಅವನನ್ನೇ ಅವಳು ಬುದ್ದಿಪೂರ್ವಕವಾಗಿ ನಂಬಿದಳು.

ಸಾಮಾನ್ಯ ಗೃಹಿಣಿಯೂ ಸೇರ್‍ಇದಂತೆ ಹೆಣ್ಣೊಬ್ಬಳ ಮನಸ್ಸಿನಲ್ಲಿ ಎಷ್ಟೊಂದು ತೀವ್ರವಾದ ಭಾವನೆಗಳು ಇರುತ್ತವೆಯೆಂದರೆ ಅದನ್ನು ಒಬ್ಬ ಕೃಷ್ಣ ಮಾತ್ರ ಅರ್ಥ ಮಾಡಿಕೊಳ್ಳಬಲ್ಲ. ಅದೂ ದ್ರೌಪದಿಗೊಲಿದ ಕೃಷ್ಣ ಮಾತ್ರ!

ಒಬ್ಬ ಹೆಣ್ಣುಮಗಳು ದ್ರೌಪದಿಯ ಮನಸ್ಥಿತಿಯನ್ನು ತಲುಪುವುದು ನಲುವತ್ತು ದಾಟಿದ ಮೇಲೆಯೇ. ಈ ಹೊತ್ತಿಗಾಗಲೇ ಪುರುಷನೊಬ್ಬ ಆಕೆಯ ಬದುಕಿನಲ್ಲಿ ಏನೇನು ಪಾತ್ರ ವಹಿಸಬಹುದೋ ಅದೆಲ್ಲವನ್ನೂ ವಹಿಸಿ ಆಗಿರುತ್ತದೆ. ತಂದೆ, ಅಣ್ಣ-ತಮ್ಮ, ಗೆಳೆಯ, ಗಂಡ, ಮಗ, ಸಹೋದ್ಯೊಗಿ, ಮೇಲಾಧಿಕಾರಿ, ನೆರೆಮನೆಯಾತ- ಇವೆಲ್ಲಾ ಮುಖಗಳ ಪರಿಚಯ ಆಕೆಗಾಗಿದೆ. ಹೆಣ್ಣೊಬ್ಬಳ ಪಾಲಿಗೆ ಈ ’ಗಂಡಸು’ ಅನ್ನುವವನು ’ಇಷ್ಟೇ’ ಎಂಬ ಅನುಭವ ಅವಳಿಗೆ ಸ್ವಲ್ಪವಾದರೂ ಆಗಿರುತ್ತದೆ. ಈ ಅನುಭವ ಗಂಡಸಿನೆಡೆಗೆ ನೋಡುವ ಆಕೆಯ ನೋಟವನ್ನು ಬದಲಿಸಿದೆ.

ಸಾಮಾನ್ಯ ಗೃಹಿಣಿಯಾದರೆ ’ಇಷ್ಟೇ’ ಎಂಬ ತೀರ್ಮಾನದೊಂದಿಗೆ ಬದುಕು ಯಥಾ ಪ್ರಕಾರ ಸಾಗುತ್ತಿರುತ್ತದೆ. ಅವಳು ಮೇಲ್ನೋಟಕ್ಕೆ ಸಂತೃಪ್ತ ಗೃಹಿಣಿಯಾಗಿಯೂ ಕಾಣಿಸಿಕೊಳ್ಳಬಹುದು. ಆದರೆ ಸ್ವಲ್ಪ ವಿಭಿನ್ನವಾಗಿ ಯೋಚಿಸುವ ಮಹಿಳೆಯರು ’ಇನ್ಯಾವುದಕ್ಕೋ’ ಹುಡುಕಾಟ ಆರಂಭಿಸಿಬಿಡುತ್ತಾರೆ. ನನ್ನ ಮಟ್ಟಿಗೆ ಸೀಮಿತಗೊಳಿಸಿ ಹೇಳುವುದಾರೆ ಅದು ಕೃಷ್ಣನಿಗಾಗಿ ದ್ರೌಪದಿ ಹುಡುಕಾಡಿದಂತೆ.

ಹಿಂದೆಯೇ ಹೇಳಿದಂತೆ ಈ ಹುಡುಕಾಟ ದಾರಿ ತಪ್ಪಿದರೆ? ಅತ್ಯಂತ ಪ್ರಕ್ಷುಬ್ದಗೊಂಡ ಮನಸ್ಥಿತಿಯಲ್ಲಿ ಅದರ ಭಾರವನ್ನು ಎಲ್ಲಿಯಾದರೂ ಇಳುಹಬೇಕೆಂದು ಅನ್ನಿಸುವುದು ಸಹಜ. ಆದರೆ ಕೈ ನೀಡಲು ಯಾರೂ ಇಲ್ಲದಿದ್ದರೆ? ಅಂಥ ಸನ್ನಿವೇಶದಲ್ಲಿ ತಲೆಯ ಮೇಲಿನ ಭಾರವನ್ನು ಹೊತ್ತು ಹಾಕಲೇಬೇಕು.

ಅಂಥದೊಂದು ಸ್ಥಿತಿಯಲ್ಲಿ ನಾನೊಮ್ಮೆ ಏನು ಮಾಡಿದೆ ಗೊತ್ತಾ? ಚಂದ್ರಶೇಖರ ಪಾಟೀಲರ ’ಲೇಖಕರ ವಿಳಾಸ ಪುಸ್ತಕ’ ನನ್ನಲ್ಲಿತ್ತು.ಅದರಲ್ಲಿ ನಾನು ತುಂಬಾ ಮೆಚ್ಚುವ ಲೇಖಕರೊಬ್ಬರ ದೂರವಾಣಿ ನಂಬರ್ ಇತ್ತು. ಸಭೆ ಸಮಾರಂಭಗಳಲ್ಲಿ ಅವರನ್ನು ನೋಡಿದ್ದೆ. ಕೆಲವೊಮ್ಮೆ ಮಾತಾಡಿಸಿಯೂ ಇದ್ದೆ. ಅವರಿಗೆ ಕರೆ ಮಾಡಿ ನನ್ನ ಸಮಸ್ಯೆ ಹೇಳಿಕೊಳ್ಳಲೆತ್ನಿಸಿದೆ. ಹೇಳ ಹೇಳುತ್ತಲೇ ಬಿಕ್ಕಳಿಸಿ ಅತ್ತುಬಿಟ್ಟೆ. ಅವರು ಸಮಾಧಾನದಿಂದಲೇ ಆಲಿಸಿದರು. ಒಂದೂ ಮಾತಾಡದಿದ್ದರೂ ಕೆಲವೊಮ್ಮೆ ’ಆಲಿಸುವ’ ಕಿವಿಗಳು ಎಷ್ಟು ಸಾಂತ್ವನ ನೀಡುತ್ತವೆ ಅಲ್ಲವೇ? ನನ್ನ ಗೆಳತಿಯೊಬ್ಬಳ ಬದುಕಿನಲ್ಲಿ ನಡೆದ ಘಟನೆಯಿದು; ಕನ್ನಡದ ಸಂವೇದನಾಶೀಲ ಬರಗಾರರೊಬ್ಬರ ಮೇಲೆ ಆಕೆಗೆ ಹುಚ್ಚು ಮೋಹ, ಅವರ ಬರವಣಿಗೆಯಿಂದ ಪ್ರಭಾವಿತಳಾಗಿ ಹಿಂದು ಮುಂದು ಯೋಚಿಸದೆ ಅವರನ್ನವಳು ಆರಾಧಿಸತೊಡಗಿದಳು. ಅದೂ ನಿರಂತರ ಆರು ವರ್ಷಗಳ ಕಾಲ.

ನಮ್ಮ ಬರಹಗಾರರನ್ನು ಹತ್ತಿರದಿಂದ ಬಲ್ಲವರಿಗೆ ಅವರ ವಿಕ್ಷಿಪ್ತ ನಡವಳಿಕೆಗಳ ಪರಿಚಯ ಇರುತ್ತದೆ, ಅವರ ಭಾವ ಜಗತ್ತೇ ಬೇರೆ. ಬಾಹ್ಯ ಜಗತ್ತೇ ಬೇರೆ. ಇದು ಅರಿವಾಗುವ ಹೊತ್ತಿಗೆ ಅವಳು ಬಹು ದೂರ ಸಾಗಿ ಬಂದಿದ್ದಳು. ಕೊನೆಗೆ ಡಿಪ್ರೆಶನ್ನಿಗೆ ಒಳಗಾದಳು. ಅದರಿಂದ ಹೊರಬರಲು ಅವಳು ಮಾನಸಿಕ ತಜ್ನರ ಮೊರೆ ಹೋಗಬೇಕಾಯಿತು.

ಕೃಷ್ಣನ ಹುಡುಕಾಟ ಹೊರಗಡೆ ಯಾಕೆ ಆಗಬೇಕು, ಗಂಡನೇ ಗೆಳೆಯನೂ ಆಗಲಾರನೇ? ಎಂದು ಕೆಲವರಿಗನ್ನಿಸಬಹುದು. ಆದರೆ ಗಂಡ ಯಾವತ್ತಿದ್ದರೂ ಗಂಡನೇ!. ಆ ಶಬ್ದದ ಅರ್ಥವೇ ’ಒಡೆಯ’. ಆತ ತನ್ನ ಒಡೆತನದ ಹಕ್ಕನ್ನು ಚಲಾಯಿಸಿಯೇ ಚಲಾಯಿಸುತ್ತಾನೆ. ಎಷ್ಟಾದರೂ ಗಂಡಸು ದೈಹಿಕವಾಗಿ ಐಕ್ಯವಾಗುವುದನ್ನು ಬಯಸುತ್ತಾನೆ. ಹೆಣ್ಣು ಮಾನಸಿಕವಾಗಿ ಐಕ್ಯವಾಗುವ ಕನಸು ಕಾಣುತ್ತಾಳೆ. ಹಾಗಾಗಿ ಕೆಲವೊಂದು ಸೂಕ್ಷ್ಮಭಾವನೆಗಳು, ಗುಟ್ಟುಗಳು, ತಲ್ಲಣಗಳನ್ನು ಹಂಚಿಕೊಳ್ಳಲು ಹೆಣ್ಣೊಬ್ಬಳು ’ಕೃಷ್ಣ’ನನ್ನು ಹಂಬಲಿಸುವುದು ತಪ್ಪೆಂದು ನನಗೆ ತೋರುವುದಿಲ್ಲ.

ಅದರೆ ನನಗೆ ಗೊತ್ತಿದೆ, ’ಕೃಷ್ಣ’ ನಮಗೆ ಎಂದೂ ಸಿಗಲಾರ. ಸಿಗಬಾರದು ಕೂಡಾ. ಹುಡುಕಾಟ ನಿರಂತರವಾಗಿರಬೇಕು. ಅವನ ಮುರಳಿಯ ದಿವ್ಯಗಾನ ಸದಾ ನಮ್ಮ ಕಿವಿಯಲ್ಲಿ ಮೊರೆಯುತ್ತಿರಬೇಕು. ಆ ಮೂಲಕ ನಮ್ಮ ದುರ್ಭರ ಕ್ಷಣಗಳನ್ನು ಗೆಲ್ಲುವ ಅಂತಃಶಕ್ತಿ ನಮ್ಮಲ್ಲೇ ಮೂಡಿಬರಬೇಕು. ಆ ಧೀಶಕ್ತಿ ಸ್ತ್ರೀಯರಲ್ಲಿ ಇದೆ ಎಂಬುದು ನನ್ನ ಬಲವಾದ ನಂಬಿಕೆ.

[೨೦೦೪ರಲ್ಲಿ ’ಹಂಗಾಮ’ ಕ್ಕಾಗಿ ಬರೆದ ಬರಹವನ್ನು ಒಂಚೂರು ಎಡಿಟ್ ಮಾಡಿದ್ದೇನೆ]