Sunday, May 20, 2018

ಹಿಂದು, ಜೈನ, ಬೌದ್ಧ ಧರ್ಮಿಯರ ಶ್ರದ್ಧಾಕೇಂದ್ರ-ಕೈಲಾಸ ಪರ್ವತ.




ಕೈಲಾಸ ಪರ್ವತವೆಂದರೆ, ಅದು ಶಿವನ ಆವಾಸ ಸ್ಥಾನ. ಬದುಕಿನಲ್ಲಿ ಒಮ್ಮೆಯಾದರೂ ಅಲ್ಲಿಗೆ ಹೋಗಬೇಕೆಂದು ಪ್ರತಿಯೊಬ್ಬ ಭಾರತೀಯನೂ ಆಸೆಪಡುತ್ತಾನೆ. ಪ್ರತಿಯೊಬ್ಬ ಭಾರತೀಯನೂ ಎಂದು ಯಾಕೆ ಒತ್ತಿಹೇಳಿದೆನೆಂದರೆ ಅದು ಕೇವಲ ಹಿಂದುಗಳಿಗೆ ಮಾತ್ರ ಪೂಜನೀಯ ಜಾಗವಲ್ಲ. ಅದು ಬೌದ್ಧ ಮತ್ತು ಜೈನರಿಗೂ ಕೂಡಾ ಅದು ಪವಿತ್ರ ಸ್ಥಳವೇ ಆಗಿದೆ. ಇದರ ಎತ್ತರ ೨೧೭೭೮ ಅಡಿ . ಸದಾ ಹಿಮದಿಂದ ಆವೃತವಾದ ಶಿಖರವಿದು

ಕೈಲಾಸ ಪರ್ವತದ ಪಕ್ಕದಲ್ಲಿಯೇ ಇದೆ. ಮಾನಸ ಸರೋವರ. 
ಮಾನಸ ಸರೋವರ, ಹಾಗೆಂದಕೂಡಲೇ  ತಕ್ಷಣಕ್ಕೆ ನೆನಪಿಗೆ ಬರುವುದು ಕೈಲಾಸ ಪರ್ವತವೇ. ಅದೊಂದು ಜೋಡಿ ಶಬ್ದದಂತೆ. . ಬ್ರಹ್ಮನ ಮನಸ್ಸಿನಿಂದ ಹುಟ್ಟಿದ ಕಾರಣದಿಂದಾಗಿ ಇದಕ್ಕೆ ಮಾನಸ ಸರೋವರವೆಂಬ ಹೆಸರು ಬಂದಿದೆ. ಇದು ಅತ್ಯಂತ ಎತ್ತರದಲ್ಲಿರುವ ತಿಳಿ ನೀರಿನ ಸರೋವರ. ಇದರಲ್ಲಿ ಸ್ನಾನ ಮಾಡಿದರೆ ಸರ್ವಪಾಪಗಳು ಪರಿಹಾರವಾಗಿ ಮೋಕ್ಷ ದೊರಕುತ್ತದೆಯೆಂದು ಆಸ್ತಿಕರು ನಂಬುತ್ತಾರೆ. ಇದರ ವಿಸ್ತಿರ್ಣ ೪೧೦ ಕಿ.ಮೀ ಮತ್ತು ೩೦೦ ಅಡಿ ಆಳ ಹೊಂದಿದೆ.

ಮಾನಸ ಸರೋವರ ಹಿಂದೆ ಅದು ಭಾರತದ ಭೂಭಾಗವೇ ಆಗಿದ್ದರೂ ಈಗ ಅದು ಚೀನಾದ ಸ್ವಾಧೀನದಲ್ಲಿರುವ ಟಿಬೇಟ್ ನಲ್ಲಿದೆ. ಆದ ಕಾರಣ ಅಲ್ಲಿಗೆ ಹೋಗಲು ಚೀನಾ ಸರಕಾರ ವೀಸಾ ಕೊಡಲೇಬೇಕು.  ಇಂತಿಷ್ಟೇ ಸಂಖ್ಯೆಯಲ್ಲಿ  ಯಾತ್ರಿಗಳು ಬರಬಹುದು ಎಂದು ಅದು ನಿಗದಿ ಮಾಡುತ್ತದೆ. ಮಾನಸ ಸರೋವರಕ್ಕೆ ಹೋಗಲು ಇದುವರೆಗೆ ಎರಡೇ ದಾರಿಗಳಿದ್ದವು ಅದು ಉತ್ತರಾಖಂಡ ರಾಜ್ಯದ ಲಿಪುಲೇಖ್ ಪಾಸ್ ಮುಖಾಂತರ ಹಾದು ಹೋಗುವ ಕಠಿಣವಾದ ಹಾದಿ. ಇದಕ್ಕೆ ಸರಿಸುಮಾರು ಮುನ್ನೂರು ಕಿ. ಮೀ ನಡೆಯಬೇಕಾಗುತ್ತದೆ. ಇದು ಗೌರ್ನ್ಮೆಂಟ್ ರೂಟ್, ನೇಪಾಳದ ಕಟ್ಮಂಡು ಮುಖಾಂತರ ಹೋಗುವ ಖಾಸಗಿ ರೂಟ್ ಇನ್ನೊಂದು. ಇದಕ್ಕೆ ಜೀಪು, ಬಸ್ಸು ಹೆಲಿಕಾಪ್ಟರ್ ಮುಂತಾದ ಸೌಲಭ್ಯಗಳನ್ನು ಆಯೋಜಕರು ಒದಗಿಸುವ ಕಾರಣಗಳಿಂದ ಯಾತ್ರೆ ಕಠಿಣವೆನಿಸುವುದಿಲ್ಲ

ಸರಕಾರಿ ರೂಟ್ನಲ್ಲಿ ಅಬ್ಬರಿಸುವ ಮಹಾಕಾಳಿ ನದಿ ಹರಿಯುತ್ತಿರುವುದರಿಂದ ಅಲ್ಲಿ ಭೂಕುಸಿತವಾಗುವುದು ಸಾಮಾನ್ಯ. ಹಾಗಾಗಿ ಈ ದಾರಿಯಲ್ಲಿ ಸರಕಾರದ ಸುಪರ್ದಿಯಲ್ಲೇ ಯಾತ್ರೆ ಕೈಗೊಳ್ಳಬೇಕಾಗುತ್ತದೆ. ಇದೇ ಹಾದಿಯಲ್ಲಿ ಮಲ್ಪಾದ ಹತ್ತಿರ ೧೯೯೭ರಲ್ಲಿ ಪ್ರಖ್ಯಾತ ಓಡಿಸ್ಸಿ ನ್ರುತ್ಯಗಾತಿಯೂ, ರೂಪದರ್ಶಿಯೂ ಆದ ಪ್ರೋತಿಮಾಬೇಡಿ ಭೂಕುಸಿತದಲ್ಲಿ ಸಾವನ್ನಪ್ಪಿದ್ದು. ಕಳೆದ ವರ್ಷ ಇಲ್ಲಿ ಸತತ ಭೂಕುಸಿತವುಂಟಾಗಿ ಮಾನಸ ಯಾತ್ರೆಯ ನಾಲ್ಕು  ಬ್ಯಾಚ್ ರದ್ದಾಗಿತ್ತು. ರದ್ದಾದ ಬ್ಯಾಚಿನಲ್ಲಿ ನಾನೂ ಒಬ್ಬಳಾಗಿದ್ದೆ. ಹಾಗಾದಾಗ ನಾವು ಕಟ್ಟಿದ್ದ ದುಡ್ಡು ವಾಪಾಸು ಸಿಕ್ಕಿದರೂ ಅದಕ್ಕಾಗಿ ನಡೆಸಿದ ತಯಾರಿ ಮತ್ತು ವಿಮಾನ ಟಿಕೇಟ್ ಗಳ ಕಾರಣದಿಂದಾಗಿ ಸುಮಾರು ನಷ್ಟವುಂಟಾಗುತ್ತದೆ.

ನರೇಂದ್ರ ಮೋದಿ ಸರಕಾರದ ಮಾತುಕತೆಯ ಫಲವಾಗಿ ಈ ವರ್ಷದಿಂದ ಮೂರನೆಯ ಹಾದಿಯೊಂದು ತೆರೆದುಕೊಂಡಿದೆ. ಇದು ಸಿಕ್ಕಿಂ- ಚೀನಾ ಗಡಿಭಾಗವಾದ ನಾತೂಲ ಪಾಸ್ ಮೂಲಕವಾಗಿ ಹೋಗುವ ರಸ್ತೆ ಮಾರ್ಗ. ಇದು ಅತ್ಯಂತ ಸುಲಭವಾದ ರಸ್ತೆ ಹಾದಿ ಮತ್ತು ಯಾತ್ರೆಯ ಸಮಯದ ಅವಧಿ ಕೂಡಾ ಕಡಿಮೆ.
ಕೈಲಾಸ ಮಾನಸಯಾತ್ರೆಯ ಸಂಕಲ್ಪ ಮಾಡಿಕೊಂಡರೂ ಅದು ನೆರವೇರುತ್ತದೆಯೆಂಬ ಯಾವ ಭರವಸೆಯೂ ಇರುವುದಿಲ್ಲ. ಯಾಕೆಂದರೆ ಅದಕ್ಕೆ ಬಹುದೊಡ್ಡ ಅಡ್ಡಿಯಾಗುವುದು ಪ್ರಕೃತಿಯೇ. ಹಿಮಪಾತ, ಭೂಕುಸಿತ ಮುಂತಾದ ಹವಮಾನ ವೈಪರಿತ್ಯಗಳಿಂದ ಹಲವಾರು ಭಾರಿ ಯಾತ್ರೆ ಅರ್ಧಕ್ಕೆ ನಿಂತಿರುವುದೂ ಇದೆ.

ಇಷ್ಟೇಲ್ಲಾ ಕಷ್ಟಪಟ್ಟು ಯಾತ್ರೆಯನ್ನು ಕೈಗೊಂಡ ಮೇಲೆ ಅಲ್ಲಿ ನೋಡುವುದಾದರೂ ಏನನ್ನು? ಮಾನಸಸರೋವರ ಮತ್ತು ಕೈಲಾಸ ಪರ್ವತ ಎಲ್ಲರಿಗೂ ಗೊತ್ತಿರುವಂತಹದೇ. ಅಲ್ಲಿರುವುದು ಇಷ್ಟು ಮಾತ್ರವೇ, ಇನ್ನೇನು ಇಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ.

ನನಗೊಬ್ಬ ಚಾರಣದ ಗೆಳತಿಯಿದ್ದಾಳೆ. ಆಕೆಯ ಹೆಸರು ಗಾಯತ್ರಿ. ನಮ್ಮದೊಂದು ಪುಟ್ಟ ಐದು ಜನರ ತಂಡವಿದೆ. ಪ್ರತಿವರ್ಷ ಹಿಮಾಲಯದಲ್ಲಿ ಚಿಕ್ಕಪುಟ್ಟ ಚಾರಣ್ಗಳನ್ನು ಕೈಗೊಳ್ಳುತ್ತೇವೆ.ಗಾಯತ್ರಿ ಆರು ಭಾರಿ ಕೈಲಾಸ ಮಾನಸ ಸರೋವರ ಯಾತ್ರೆ ಮಾಡಿದ್ದಾಳೆ. ’ ಅಷ್ಟು ಬಾರಿ ನೋಡುವಂತದ್ದು ಅಲ್ಲೇನಿದೆ?’ ಅಂತ ಅವಳನ್ನು ಪ್ರಶ್ನಿಸಿದರೆ ಆಕೆ ಅಲ್ಲಿರುವ ಸ್ಥಳಗಳ ಪಟ್ಟಿಯನ್ನೇ ಕೊಡುತ್ತಾಳೆ.

ರಾಕ್ಷತಾಳ್, ಅಷ್ಟಪಾದ, ನಂದಿಪರಿಕ್ರಮ, ಸಪ್ತಋಷಿ ಗುಹೆ, ಯಮಧ್ವಾರ..ಹೀಗೆ ಪಟ್ಟಿ ಮುಂದುವರಿಯುತ್ತದೆ.
ರಾಕ್ಷಸ ತಾಳ್ [ರಾಕ್ಷಸ ಸರೋವರ.] ಇದು ಮಾನಸ ಸರೋವರಕ್ಕಿಂತಲೂ ದೊಡ್ಡದು. ಇದರ ಹೆಸರಿಗೊಂದು ಹಿನ್ನೆಯಿದೆ. ರಾವಣ ತನ್ನ ತಾಯಿಯ ಬಯಕೆಯಂತೆ ಆತ್ಮಲಿಂಗವನ್ನು ಪಡೆಯುವುದಕ್ಕಾಗಿ ಶಿವನನ್ನು ಕುರಿತು ಘೋರ ತಪಸ್ಸನ್ನು ಮಾಡುತ್ತಾನೆ. ಆದರೆ ಶಿವ ಪ್ರತ್ಯಕ್ಷನಾಗುವುದಿಲ್ಲ. ಆಗ ಹತ್ತು ತಲೆಯ ರಾವಣ ತನ್ನ ಒಂದೊಂದೇ ತಲೆಯನ್ನು ಕಡಿದು ಹೋಮಕುಂಡಕ್ಕೆ ಅರ್ಪಿಸುತ್ತಾನೆ. ಹತ್ತನೆಯ ತಲೆಗೆ ಕತ್ತಿಯಿಕ್ಕುವಾಗ ಶಿವ ಪ್ರತ್ಯಕ್ಷನಾಗಿ ಆತ್ಮಲಿಂಗವನ್ನು ಕೊಡುತ್ತಾನೆ.. ರಾವಣ ಅಮೇಲೆ ಈ ಸರೋವರದಲ್ಲಿ ಸ್ನಾನ ಮಾಡಿದಾಗ ಆತ ಕಳೆದುಕೊಂಡ ತಲೆ ಪುನಃ ಚಿಗುರಿತಂತೆ. ಈ ಸರೋವರ ಮಾನಸ ಸರೋವರಕ್ಕಿಂತಲೂ ವಿಸ್ತೀರ್ಣ್ದಲ್ಲಿ ದೊಡ್ಡದು. ನೀರು ಶುಬ್ರವಾಗಿದ್ದರೂ ರಾಕ್ಷಸ ಗುಣ ಬರಬಹುದೆಂಬ ಭಯದಿಂದ ಭಕ್ತರು ಇಲ್ಲಿ ಸ್ನಾನ ಮಾಡುವುದಿಲ್ಲ.  

ಬೌದ್ದರಿಗೂ ಕೈಲಾಸ ಮಾನಸ ಸರೋವರ ಪವಿತ್ರವೆಂದು ಹಿಂದೆ ಪ್ರಸ್ತಾಪಿಸಿದ್ದೆ. ಹೌದು, ಇದೇ ರಾಕ್ಷಸ ಸರೋವರದಲ್ಲಿ ಎರಡ್ಮೂರು ಚಿಕ್ಕಪುಟ್ಟ ದ್ವೀಪಗಳಿವೆ. ಇದರಲ್ಲಿ ಬೌದ್ಧಬಿಕ್ಕುಗಳು, ಲಾಮಗಳು ವಾಸಿಸುತ್ತಾರೆ. ಚಳಿಗಾಲದ ಸಮಯದಲ್ಲಿ ಈ ಸರೋವರ ಹೆಪ್ಪುಗಟ್ಟುತ್ತದೆ. ಆಗ ಇವರು ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆದು ಬಂದು ಇಡೀ ವರ್ಷಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ತಂದು ಸಂಗ್ರಹಿಸಿಟ್ಟುಕೊಂಡು ತಮ್ಮ ಆಧ್ಯಾತ್ಮಿಕ ಸಾಧನೆಯನ್ನು ಮುಂದುವರಿಸುತ್ತಾರೆ.

ನಮ್ಮ ಹಾಗೆಯೇ ಬೌದ್ಧರು ಕೂಡಾ ಕೈಲಾಸ ಪರ್ವತವನ್ನು ಬುದ್ಧನ ಆವಾಸ ಸ್ಥಾನವೆಂದು ನಂಬುತ್ತಾರೆ. ಅವರ ಭಾವ ದ್ರುಷ್ಟಿಗೆ ಕೈಲಾಸ ಪರ್ವತವು ಸಮಾಧಿ ಸ್ಥಿತಿಯಲ್ಲಿ ಕುಳಿತ ಬುದ್ಧನಂತೆ ಗೋಚರವಾಗುತ್ತದೆ. ಅವರೂ ಕೂಡಾ ಹಿಂದುಗಳಂತೆಯೇ ಕೈಲಾಸ ಪರ್ವತಕ್ಕೆ ಪರಿಕ್ರಮವನ್ನು ಮಾಡುತ್ತಾರೆ. ಇನ್ನೀತರ ಪವಿತ್ರ ಬೌದ್ಧಮಂದಿರಗಳಲ್ಲಿ ಮಾಡುವ ಹಾಗೆ ಹೆಜ್ಜೆ ನಮಸ್ಕಾರ ಮತ್ತು ಮಂಡಿಯೂರಿ ನಮಸ್ಕಾರ ಮಾಡುವ ಬೌದ್ಧ ಸನ್ಯಾಸಿಗಳನ್ನು ಪರಿಕ್ರಮದ ಹಾದಿಯಲ್ಲಿ ಕಾಣಬಹುದು. ಇಲ್ಲಿಯೂ ಬೌದ್ದರೇ ಭಾಗವಹಿಸುವ ಬಹುದೊಡ್ಡ ಕುಂಭಮೇಳವೊಂದು ಯಮಧ್ವಾರದ ಬಳಿ ಹನ್ನೆರಡು ವರ್ಷಕ್ಕೊಮ್ಮೆ ನಡೆಯುತ್ತದೆ. . ಇದನ್ನು ’ಹಾರ್ಸ್ ಇಯರ್’ ಎಂದು ಕರೆಯುತ್ತಾರೆ. ಯಮಧ್ವಾರದಿಂದ ನಿಂತು ನೋಡಿದರೆ ಎರಡು ಬೆಟ್ಟಗಳು ಕಾಣುತ್ತವೆ. ಅವುಗಳ ಹೆಸರು ಅವಲೋಕಿತೇಶ್ವರ ಬೆಟ್ಟ ಮತ್ತು ಮಂಜುಶ್ರೀ ಬೆಟ್ಟ.

ಜೈನರಿಗೂ ಇದು ಪವಿತ್ರ ಜಾಗ. ಜೈನ ತೀರ್ಥಂಕರಲ್ಲಿ ಮೊದಲನೆಯವನಾದ ವೃಷಭದೇವನು ಕೈಲಾಸ ಪರ್ವತದ ಪಕ್ಕದಲ್ಲಿರುವ ಬೆಟ್ಟವನ್ನು ಕೇವಲ ಎಂಟು ಹೆಜ್ಜೆಗಳಲ್ಲಿ ಹತ್ತಿ ಕೈಲಾಸ ಪರ್ವತವನ್ನು ತಲುಪಿ ಅಲ್ಲಿ ನಿರ್ವಾಣ ಹೊಂದಿದ ಎಂಬ ನಂಬಿಕೆಯಿದೆ. ಹಾಗಾಗಿ ಆ ಬೆಟ್ಟಕ್ಕೆ  ಅಷ್ಟಪಾದ ಎಂಬ ಹೆಸರು ಬಂದಿದೆ. ಆ ಬೆಟ್ಟದ ಬುಡದಲ್ಲಿ ವೃಷಭದೇವನ ಸಮಾಧಿಯಿರುವ ಗೊಂಪವಿದೆ.

ಕೈಲಾಸ ಮಾನಸ ಸರೋವರದ ಯಾತ್ರೆಯನ್ನು ತಾನು ಮುಗಿಸಿ ಬಂದೆ ಅಂತ ಯಾರದರೂ ಹೇಳಿದರೆ ಅದರ ಬಗ್ಗೆ ಸ್ವಲ್ಪ ಗೊತ್ತಿದ್ದವರು ತಕ್ಷಣ ಒಂದು ಪ್ರಶ್ನೆ ಕೇಳುವುದಿದೆ. ’ಇನ್ನರ್ ಪರಿಕ್ರಮ ಮಾಡಿದ್ರಾ ಅಥ್ವಾ ಔಟರ್ ಮಾತ್ರವಾ?’ ಅಂತ. ಹಾಗೆಂದರೇನು?   ಕೈಲಾಸ ಪರ್ವತದ ಹೊರ ಆವರಣದಲ್ಲಿ ಪರ್ವತಕ್ಕೆ ಸುತ್ತು ಬರುವುದಕ್ಕೆ ಔಟರ್ ಪರಿಕ್ರಮ ಎನ್ನುತ್ತಾರೆ. ಇದನ್ನು ಕಾಲುನಡಿಗೆಯಲ್ಲಿ ಮಾಡಿದರೆ ಮೂರು ದಿವಸ ಬೇಕಾಗುತ್ತದೆ. ವಾಹನದಲ್ಲಾದರೆ ಕೆಲವು ಘಂಟೆಗಳು ಸಾಕು. ಒಳಗಿನಿಂದ ಸುತ್ತು ಬರುವುದಕ್ಕೆ ಇನ್ನರ್ ಪರಿಕ್ರಮ ಎನ್ನುತ್ತಾರೆ. ಮೈಕೊರೆಯುವ ಚಳಿಯಲ್ಲಿ ಇದನ್ನು ಮಾಡುವುದು ತುಂಬಾ ಕಷ್ಟಕರ. ಆ ಕಾರಣದಿಂದಲೇ ಇರಬಹುದು. ಈಗ ಐದಾರು ವರ್ಷಗಳಿಂದ ಇನ್ನರ್ ಪರಿಕ್ರಮಕ್ಕೆ ಚೀನಾ ಸರಕಾರವು ಒಪ್ಪಿಗೆಯನ್ನು ನೀಡುತ್ತಿಲ್ಲ.

ಸಪ್ತಸಿಂಧುಗಳಲ್ಲಿ ಉಲ್ಲೇಖವಾಗಿರುವ ಗಂಗಾನದಿಯೂ ಸೇರಿದಂತೆ, ಸಿಂಧು, ಸಟ್ಲೇಜ್ ಮುಂತಾದ ನದಿಗಳ ಉಗಮ ಸ್ಥಾನ ಕೂಡ ಇದೇ ಇದೇ ಮಾನಸ ಸರೋವರ. ಪ್ರತಿದಿನ ಬೆಳಿಗ್ಗೆ ಬ್ರಾಹ್ಮಿ ಮೂಹೂರ್ತದಲ್ಲಿ ದೇವತೆಗಳು ಬೆಳಕಿನ ರೂಪದಲ್ಲಿ, ನಕ್ಷತ್ರಗಳಾಗಿ ಬಂದು ಇಲ್ಲಿ ಸ್ನಾನ ಮಾಡುತ್ತಾರೆಂಬು ಆಸ್ತಿಕರು ನಂಬುತ್ತಾರೆ. ತಾವದನ್ನು ನೋಡಿದುದಾಗಿಯೂ ಕೆಲವರು ಹೇಳುತ್ತಾರೆ.

 ಆಸ್ತಿಕರು ಗುಡಿಯೊಳಗಿನ ದೇವರನ್ನು ನಂಬುತ್ತಾರೆ.  ಹಾಗೆಯೇ ಪ್ರಕೃತಿಯಲ್ಲೂ ದೇವರನ್ನು ಕಾಣುತ್ತಾರೆ. ನನ್ನಂತವರು ಕ್ಷಣ ಕ್ಷಣಕ್ಕೂ ಬದಲಾಗುವ ಪ್ರಕೃತಿಯನ್ನು, ಸೃಷ್ಟಿಯ ಅದ್ಭುತವನ್ನು ನೋಡಿ ಬೆರಗಾಗಿ ನಿಲ್ಲುತ್ತೇವೆ. ಹಾಗಾಗಿಯೇ ಅಸ್ತಿಕಳಾದ ಗಾಯತ್ರಿ ಮತ್ತು  ಪೂಜೆ, ಪುನಸ್ಕಾರಗಳಲ್ಲಿ ಆಸಕ್ತಿಯಿಲ್ಲದ ನಾನು ಒಟ್ಟಾಗಿ ಪ್ರವಾಸ ಹೋಗಲು ಸಾಧ್ಯವಾಗುತ್ತದೆ. ಅವಳು ಗರ್ಬಗುಡಿಯೊಳಗೆ ಹೊಕ್ಕರೆ ನಾನು ಗಿರಿ- ಶಿಖರ, ಹಕ್ಕಿ ಪಕ್ಕಿಗಳ ಕಡೆಗೆ ಕ್ಯಾಮಾರ ಫೋಕಸ್ ಮಾಡುತ್ತೇನೆ.

[ಇವತ್ತಿನ -೫.೨೦.೨೦೧೮- ಸಂಯುಕ್ತ ಕರ್ನಾಟಕ ಪೇಪರಿನ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ]