
ನಮ್ಮ ದೃಶ್ಯ ಮಾದ್ಯಮಗಳು ಚಾಂದ್ರಮಾನ ಯುಗಾದಿಗೆ ಕೊಡುವ ಸಂಬ್ರಮದ ಪ್ರಚಾರವನ್ನು ನೋಡುವಾಗ ನನಗೆ ಪ್ರತಿಭಾ ನಂದಕುಮಾರ್ ಬರೆದ ಮಾತೊಂದು ನೆನಪಿಗೆ ಬರುತ್ತದೆ, ಅವರು ಒಂದೆಡೆ ಹೇಳುತ್ತಾರೆ; ಈ ಪಂಜಾಬಿಗಳು ಇಡೀ ದೇಶಕ್ಕೇ ಸೆಲ್ವಾರ್ ಕಮೀಜ್ ತೋಡಿಸಿಬಿಟ್ಟರು. ಹಾಗೆಯೇ ಯುಗಾದಿ ಆಚರಣೆಯಲ್ಲಿಯೂ ಮಾಧ್ಯಮಗಳು ಏಕತಾನತೆಯನ್ನು ತಂದುಬಿಟ್ಟವು. ಅಂದರೆ ಚಾಂದ್ರಮಾನ ಯುಗಾದಿಯನ್ನೆ ಸಮಸ್ತ ಕನ್ನಡಿಗರ ಯುಗಾದಿ ಹಬ್ಬವೆಂದು ಮಾಧ್ಯಮಗಳು ಪ್ರತಿವರ್ಷ ಹೇಳುತ್ತಲೇ ಬಂದವು.
ಆದರೆ ಇದಕ್ಕಿಂತ ಭಿನ್ನವಾದ ಇನ್ನೊಂದು ಯುಗಾದಿ ಆಚರಣೆಯೂ ನಮ್ಮ ದೇಶದ ಕೆಲವು ಭಾಗಳಲ್ಲಿವೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಕೂಡಾ ಭಿನ್ನವಾದ ಯುಗಾದಿಯಿದೆ. ಅದನ್ನು ವಿಷು ಹಬ್ಬವೆಂದು ಕರೆಯಲಾಗುತ್ತದೆ.
ಸೂರ್ಯನ ಚಲನೆಯನ್ನು ಆಧಾರಿಸಿದ್ದು ಸೌರಮಾನ ಯುಗಾದಿ. ಚಂದ್ರನ ಚಲನೆಯನ್ನು ಆಧಾರಿಸಿದ್ದು ಚಂದ್ರಮಾನ ಯುಗಾದಿ. ಅಂದರೆ ಇದು ಖಗೋಳ ವಿಜ್ನಾನಕ್ಕೆ, ಗಣಿತಶಾಸ್ತ್ರವನ್ನು ಆಧರಿಸಿದ ಹಬ್ಬ.
ಸೌರಮಾನ ಯುಗಾದಿ ಆಚರಿಸುವುದು ಮೇಷ ಮಾಸದ ಮೊದಲದಿನ. ಅಂದು ಸೂರ್ಯ ಮೇಷರಾಶಿಯನ್ನು ಪ್ರವೇಶಿಸುತ್ತಾನೆ. ಚಾಂದ್ರಮಾನ ಯುಗಾದಿ ಬರುವುದು ಚೈತ್ರಮಾಸದ ಮೊದಲ ದಿನ. ಚೈತ್ರ ವೈಶಾಖ ವಸಂತಋತು ಅಂತ ನಾವು ಬಾಲ್ಯದಲ್ಲಿ ಕಲಿತದ್ದು ನೆನಪಗಿರಬೇಕಲ್ಲಾ...ಬೇಸಗೆಯ ರಜೆ, ಮಾವು, ಹಲಸು,ಗೇರು, ಅಜ್ಜನ ಮನೆ...ನೆನಪುಗಳ ಮೆರವಣಿಗೆ ಸಾಗಿ ಬಂದಿರಲೇಬೇಕು.
ನಾನು ತುಳುನಾಡಿನವಳು. ನಮ್ಮದು ಸೌರಮಾನ ಯುಗಾದಿ ಆಚರಣೆ. ಅಂದರೆ ನಮಗೆ ನಾಳೆ ಹೊಸ ವರ್ಷ . ಅದನ್ನು ನಾವು ’ವಿಷು ಹಬ್ಬ’ ಎಂದು ಆಚರಿಸುತ್ತೇವೆ. ಪ್ರತಿ ವರ್ಷ ಏಪ್ರಿಲ್ ೧೪ ರಂದು ಇದು ಸಂಭವಿಸುತ್ತದೆ.
ತುಳುನಾಡು ಮಾತ್ರ ಅಲ್ಲ, ತಮಿಳು ನಾಡು, ಕೇರಳ, ಪಂಜಾಬ್, ಬಂಗಾಳ, ಅಸ್ಸಾಂ ರಾಜ್ಯಗಳಲ್ಲೂ ಇಂದಿನ ದಿನವನ್ನು ಹೊಸ ವರ್ಷವೆಂದು ಆಚರಿಸಲಾಗುತ್ತದೆ.
ತುಳುವರಿಗೆ-ಬಿಸುಪರ್ಬ, ಮಲೆಯಾಳಿಗಳಿಗೆ-ವಿಷು, ತಮಿಳರಿಗೆ-ಪುತ್ತಾಂಡ್, ಪಂಜಾಬಿಗಳಿಗೆ-ಬೈಸಾಕಿ, ಅಸ್ಸಾಮಿಗಳಿಗೆ-ಬಿಹು. ಒಟ್ಟಿನಲ್ಲಿ ಇದು ರೈತಾಪಿ ವರ್ಗದ ಹಬ್ಬ.
ನಾವು ಸಮೃದ್ಧವಾಗಿ ಬದುಕಲು ಬೇಕಾದ್ದನ್ನೆಲ್ಲವನ್ನು ಕೊಟ್ಟ ಭೂತಾಯಿಗೆ ಕೃತಜ್ನತೆಗಳನ್ನು ಅರ್ಪಿಸುವ ದಿನವೇ ’ಬಿಸು ಪರ್ಬ’. ಈಹಬ್ಬದಲ್ಲಿ ’ಬಿಸುಕಣಿ’ಗೆ ತುಂಬಾ ಮಹತ್ವ. ಬಿಸುಕಣಿ ಅಂದರೆ ಹೊಸವರ್ಷದ ಸ್ವಾಗತಕ್ಕೆ ಇಡುವ ಕಳಶ. ಬಿಸುವಿನ ಹಿಂದಿನ ದಿನ ರಾತ್ರಿಯೇ ದೇವರ ಮುಂದೆ ಕಣಿಯನ್ನು ಇಡಲಾಗುತ್ತದೆ.
[ಕಣಿಹೇಳುವುದು, ಅಂದರೆ ಭವಿಷ್ಯ ಹೇಳುವುದು ಎಂಬ ಪದ ನಮ್ಮ ಆಡುಮಾತಿನಲ್ಲಿ ಚಾಲ್ತಿಯಲ್ಲಿದೆ. ಅದಕ್ಕೂ ಇದಕ್ಕೂ ಸಂಬಂಧವಿದೆಯೇನೋ ನನಗೆ ಗೊತ್ತಿಲ್ಲ,]
ದೇವರ ಮುಂದೆ ದೊಡ್ಡ ಹರಿವಾಣದಲ್ಲಿಒಂದು ಸೇರು ಅಕ್ಕಿಯನ್ನು ಹಾಕಿ ಅದರ ಮಧ್ಯೆ ಸುಲಿಯದ ತೆಂಗಿನಕಾಯಿಯನ್ನು ಇಡುತ್ತಾರೆ. ಅದರ ಸುತ್ತ ಆ ವರ್ಷ ತಮ್ಮ ಜಮೀನಿನಲ್ಲಿ ಬೆಳೆದ ಹೊಸ ಫಲ ವಸ್ತುಗಳನ್ನು ಜೋಡಿಸಬೇಕು. ಮುಖ್ಯವಾಗಿ ಮುಳ್ಳುಸೌತೆ, ಮಾವು, ಗೇರು, ಹಲಸು, ಸಿಹಿಕುಂಬಳಕಾಯಿ, ಒಡ್ಡುಸೌತೆ[ಮಂಗಳೂರು ಸೌತೆ], ಬೆಂಡೆ, ತೊಂಡೆ, ಅಲಸಂಡೆ ಮುಂತಾದವುಗಳನ್ನಿಟ್ಟು ನಡುವೆ ಒಂದು ಕನ್ನಡಿಯನ್ನಿಡಬೇಕು. ಕೆಲವೆಡೆ ಇವುಗಳ ಜೊತೆ ಬಂಗಾರದ ಆಭರಣಗಳು ಹಾಗು ಹೊಸಬಟ್ಟೆಗಳನ್ನೂ ಕಣಿಯ ಮುಂದಿಡುತ್ತಾರೆ.
ಬಿಸು ಹಬ್ಬದಲ್ಲಿ ಕಣಿಯ ದರ್ಶನ ಪಡೆಯುವುದು ಬಹಳ ಮುಖ್ಯವಾದುದು. ಮರುದಿನ ಬೆಳಿಗ್ಗೆ ಎಚ್ಚರವಾದೊಡನೆ ಕಣ್ಣು ತೆರೆಯದೆ ಹಾಗೆಯೇ ಕಣ್ಣ್ಮುಚ್ಚಿಕೊಂಡೇ ದೇವರ ಮುಂದೆ ಬಂದು ವಿಷುಕಣಿಯ ದರ್ಶನ ಪಡೆಯಬೇಕು. ಅನಂತರವೇ ಎಣ್ಣೆ ಅಭ್ಯಂಜನ ಮಾಡಿ ಹೊಸಬಟ್ಟೆ ತೊಟ್ಟು ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಅಲ್ಲಿಟ್ಟಿರುವ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಬೇಕು. ಮಧ್ಯಾಹ್ನ ಹಬ್ಬದೂಟ ಉಂಡು ಸಂಜೆ ಸಮೀಪದ ದೇವಸ್ಥಾನ ಅಥವಾ ಭೂತಸ್ಥಾನಕ್ಕೆ ಹೋಗಿ ದೇವರ ಅಥವಾ ದೈವದ ದರ್ಶನ ಪಡೆಯಬೇಕು.
ನನಗೆ ಈಗಲೂ ನೆನಪಿದೆ; ನಾನು ಬೆಂಗಳೂರಿಗೆ ಉದ್ಯೋಗಕ್ಕಾಗಿ ಬಂದಾಗ ದುಡಿಯುವ ಮಹಿಳೆಯರ ಹಾಸೇಲ್ ನಲ್ಲಿದ್ದೆ. ನನ್ನ ರೂಂಮೇಟ್ ಒಬ್ಬಳು ಮಲೆಯಾಳಿಯಾಗಿದ್ದಳು. ಅವಳ ಅಪೇಕ್ಷೆಯಂತೆ ಪ್ರತಿವರ್ಷ ವಿಷು ಹಬ್ಬದಂದು ಬೆಳಿಗ್ಗೆ ಅವಳು ಕಣ್ತೆರೆಯುವ ಮೊದಲೇ ಅವಳ ಚಾಚಿದ ಕೈಗಳಿಗೆ ಒಂದು ರೂಪಾಯಿಯ ಪಾವಲಿಯನ್ನಿಡುತ್ತಿದ್ದೆ. ಅದನ್ನವಳು ಭಕ್ತಿಯಿಂದ ಕಣ್ಣಿಗೊತ್ತಿಕೊಳ್ಳುತ್ತಿದ್ದಳು. ವಿಷು ಹಬ್ಬದಂದು ಸಂತೋಷವಾಗಿದ್ದರೆ ವರ್ಷವಿಡೀ ಸಂತೋಷವಾಗಿರುತ್ತಾರೆ ಎಂಬುದು ನಂಬಿಕೆ.
ವಿಷು ಹಬ್ಬದ ವಿಶೇಷ ಅಡುಗೆ ಏನಿರುತ್ತದೆ ಎಂಬುದರ ಬಗ್ಗೆ ನನಗೆ ಸ್ಪಷ್ಟವಾಗಿ ನೆನಪಿಲ್ಲ. ಆದರೆ ಒಬ್ಬಟ್ಟು ಇರುವುದಿಲ್ಲ ಅಂತ ಗೊತ್ತಿದೆ. ಹೆಸರು ಬೇಳೆ ಪಾಯಸ, ಎಳೆ ಗೋಡಂಬಿ ಹಾಕಿ ಮಾಡಿದ ತೊಂಡೆಕಾಯಿ ಪಲ್ಯ. ಮತ್ತು ಎಲ್ಲಾ ತರಕಾರಿ ಹಾಕಿ ಮಾಡಿದ ಅವಿಲು ಅಂದರೆ ಹುಳಿ ಇವಿಷ್ಟು ಇದ್ದೇ ಇರುತ್ತದೆ. ಜೊತೆಗೆ ಹಪ್ಪಳ. ಮೊಸರು, ಉಪ್ಪಿನಕಾಯಿ ಇದ್ದೇ ಇರುತ್ತದೆ.
ನಮ್ಮ ಮನೆಯಲ್ಲಿ ಮಾತ್ರ ಹಲಸಿನಹಣ್ಣಿನಿಂದ ’ಮುಳ್ಕ’ ಎಂಬ ಕರಿದ ತಿಂಡಿಯನ್ನು ಕಡ್ಡಾಯವಾಗಿ ಮಾಡಲೇಬೇಕಾಗುತ್ತದೆ. ಯಾಕೆಂದರೆ ನಮ್ಮ ಕುಟುಂಬದ ದೇವರಗದ್ದೆ ನಮ್ಮ ಪಾಲಿಗೆ ಬಂದಿತ್ತು. ಅದಕ್ಕೆ ಪರಂಪರೆಯಿಂದಲೂ ವಿಷು ಹಬ್ಬದಂದು ಪೂಜೆ ಮಾಡುವ ಪದ್ದತಿ ಇತ್ತು. ಕಂಬಳ ನಡೆಯುವ ಆ ಗದ್ದೆಯನ್ನು ನಾವು ದೊಡ್ಡಗದ್ದೆ ಎಂದು ಕರೆಯುತ್ತೇವೆ. ನೆನೆಸಿದ ಬೆಳ್ತಿಗೆ ಅಕ್ಕಿಯನ್ನು ಹಲಸಿನಹಣ್ಣಿನೊಂದಿಗೆ ರುಬ್ಬಿ ಅದಕ್ಕೆ ಎಳ್ಳನ್ನು ಸೇರಿಸಿ ಪಕೋಡದಂತೆ ಕರೆದರೆ ಅದೇ ಮುಳ್ಕ. ನಮ್ಮ ಮನೆಯಲ್ಲಿ ಕೆಲವು ವರ್ಷ ಏಪ್ರೀಲ್ ತಿಂಗಳಲ್ಲಿ ಹಲಸು ಹಣ್ಣಾಗುತ್ತಿರಲಿಲ್ಲ. ಅದು ಯಾರಿಗಾದರೂ ಗೊತ್ತಾದರೆ, ಅವರಲ್ಲಿ ಹಲಸಿನ ಹಣ್ಣಿದ್ದರೆ ನಮ್ಮ ಮನೆಗೆ ತಂದು ಕೊಡುತ್ತಿದ್ದರು.
ಪ್ರಸಕ್ತ ವರ್ಷದಿಂದ ನಮ್ಮ ಮನೆಯಲ್ಲಿ ಮುಳ್ಕ ಮಾಡಲಾರರು ಯಾಕೆಂದರೆ ಈಗ ಕಂಬಳ ನಡೆಯುವ ಆ ದೇವರ ಗದ್ದೆ ಕೊಕ್ಕೊ ತೋಟವಾಗಿ ಬದಲಾಗಿದೆ. ಕೃಷಿಕರ ಬದುಕು ಬದಲಾಗಿದೆ. ಹಾಗಾಗಿ ಆಚರಣೆಗಳೂ ಬದಲಾಗಿವೆ. ನಮ್ಮ ಹಳ್ಳಿಗಳು ಬದಲಾಗಿವೆ. ನಮ್ಮ ನಗರದ ಬದುಕು ಕೂಡ.
ನಾನು ಮನೆಯಲ್ಲಿ ಹಬ್ಬದಡುಗೆ ಮಾಡುವುದಿಲ್ಲ.ಅದಕ್ಕೆ ಹಲವಾರು ಕಾರಣಗಳಿವೆ. ಮಕ್ಕಳಿಗೆ ಸಿಹಿ ಇಷ್ಟವಾಗುವುದಿಲ್ಲ. ಗಂಡ ಡಯಾಬಿಟಿಕ್ ಅಲ್ಲವಾದರೂ ಆ ಭ್ರಮೆಯಲ್ಲಿ ಸಿಹಿ ತಿನ್ನುವುದಿಲ್ಲ. ಸಿಹಿ ಇಲ್ಲದಿದ್ದರೆ ಅದೆಂಥ ಹಬ್ಬ ಅಲ್ಲವೇ? ಅದಲ್ಲದೆ ಆತ ಸುದ್ದಿ ಚಾನಲ್ಲೊಂದರಲ್ಲಿ ಕೆಲಸ ಮಾಡುತ್ತಾನೆ. ಹಾಗಾಗಿ ಇಪ್ಪತ್ತನಾಲ್ಕು ಘಂಟೆಯೂ ಜರ್ನಲಿಸ್ಟೇ. ಹಾಗಾಗಿ ನಾನು ಮಾಡಿದ್ದನ್ನು ನಾನೊಬ್ಬಳೇ ಭೂತದಂತೆ ತಿನ್ನಬೇಕು. ಆದರೂ ’ಹಳ್ಳಿ ಮನೆ’ಯಿಂದ ಹಬ್ಬದೂಟ ತರಿಸುತ್ತೇನೆ. ಆಯ್ಕೆ ಮಾಡಿಕೊಂಡು ಇಷ್ಟವಾದದ್ದನ್ನು ತಿನ್ನುತ್ತೇವೆ ಉಳಿದದ್ದು ತಿಪ್ಪೆ ಸೇರುತ್ತದೆ.
ನಿಮಗ್ಯಾರಿಗಾದರೂ ’ವಿಷು ಕಣಿ’ ನೋಡಬೇಕೆನಿಸಿದರೆ ಅಕ್ಕ ಪಕ್ಕ ಎಲ್ಲಿಯಾದರೂ ತೆಂಗಿನ ಮರ ಇದ್ದರೆ ಅದನ್ನೇ ಕಣ್ಣು ತೆರೆದಾಗ ನೋಡಿಬಿಡಿ. ಯಾಕೆಂದರೆ ಅದು ಬೇಡಿದ್ದನ್ನು ಕೊಡುವ ಕಲ್ಪವೃಕ್ಷ ಎಂಬ ನಂಬಿಕೆ ಹಿಂದಿನಿಂದಲೂ ಬಂದಿದೆ.
ಹಬ್ಬದಡುಗೆ ಮಾಡದಿದ್ದರೂ ಬಾಗಿಲಿಗೆ ಮಾವಿನ ತೋರಣ ಕಟ್ಟುವುದನ್ನು ಮರೆಯುವುದಿಲ್ಲ. ಯಾಕೆಂದರೆ ಅದು ಚೈತ್ರದ ಚಿಗುರು; ವಸಂತ ಋತುವಿಗೆ ಮುನ್ನುಡಿ.
ಎಲ್ಲರಿಗೂ ವಿಷು ಹಬ್ಬದ ಶುಭಾಶಯಗಳು. ವಸಂತ ಋತು ನಿಮ್ಮೆಲ್ಲರ ಬಾಳಿನಲ್ಲಿಯೂ ಸದಾ ಕಾಲ ನಳನಳಿಸುತ್ತಿರಲಿ.