ಕನ್ನಡದ
ಡಬ್ಬಿಂಗ್ ವಿರೋಧಿ ಭೂತ ಮತ್ತೊಮ್ಮೆ ಕಾಣಿಸಿಕೊಂಡಿದೆ.
ಇದಕ್ಕೆ
ಕಾರಣವಾಗಿದ್ದು. ಮೇ ೬ರಂದು ಪ್ರಸಾರವಾಗಲಿರುವ ಅಮಿರ್ ಖಾನ್ ನ ಮಹತ್ವಾಕಾಂಕ್ಷೆಯ ರಿಯಾಲಿಟಿ ಶೋ
’ಸತ್ಯ ಮೇವ ಜಯತೇ’. ಅಮಿರ್ ಹೇಳುವ ಪ್ರಕಾರ ಅದು ಕನ್ನಡವೂ ಸೇರಿದಂತೆ ದಕ್ಷಿಣಭಾರತದ ತೆಲುಗು,
ತಮಿಳು ಮತ್ತು ಮಲೆಯಾಳಂ ಭಾಷೆಗಳಿಗೆ ಡಬ್ ಆಗಿ ಪ್ರಸಾರವಾಗಲಿದೆ. ಹಿಂದೆ ರಾಮಾಯಣ, ಮಹಾಭಾರತಗಳು
ಪ್ರಸಾರವಾಗುತ್ತಿದ್ದ ಭಾನುವಾರದ ಹನ್ನೊಂದು ಘಂಟೆಯ ಜನಪ್ರಿಯ ಸ್ಲಾಟ್ ನಲ್ಲಿ ಇದು ಪ್ರಸಾರ
ಕಾಣಲಿದೆ. ಮೊತ್ತ ಮೊದಲಬಾರಿಗೆ ಖಾಸಗಿ ಮತ್ತು ದೂರದರ್ಶನ ಚಾನಲ್ ಗಳಲ್ಲಿ ಏಕ ಕಾಲದಲ್ಲಿ
ಪ್ರಸಾರವಾಗಲಿರುವ ಈ ಶೋ ಇತಿಹಾಸ ನಿರ್ಮಿಸಲಿದೆ ಮತ್ತು ಭಾರತವನ್ನು ಭಾವನಾತ್ಮಕವಾಗಿ ಬೆಸೆಯಲಿದೆ
ಎಂಬುದು ಅಮೀರ್ ಖಾನ್ ಹೇಳಿಕೆ. ಆತ ಈ ಶೋದ ಪ್ರಚಾರಕ್ಕಾಗಿ ಖರ್ಚು ಮಾಡದ ಹಣ ೬.೨೫ ಕೋಟಿ
ರೂಪಾಯಿಗಳು. ಸಲ್ಮಾನ್ ಖಾನ್, ಶಾರೂಕ್ ಖಾನ್ ನಂತ ತಾರೆಯರ ಸಿನೇಮಾಗಳ ಪ್ರಚಾರಕ್ಕೆ ಖರ್ಚು
ಮಾಡುವುದು ೨.೫ ಕೋಟಿ ರೂಪಾಯಿಗಳು ಅಂದರೆ ಅಮಿರ್ ತನ್ನ ಶೋದ ಮೇಲೆ ಇಟ್ಟಿರುವ ಭರವಸೆ ನಮಗೆ ಅರ್ಥವಾಗುತ್ತದೆ.
ಅಮಿರ್
ನ ಶೋವನ್ನು ಕನ್ನಡ ಟೆಲಿವಿಷನ್ ಸಂಘಟನೆಗಳು ವಿರೋಧಿಸಿವೆ ಮತ್ತು ಕನ್ನಡಕ್ಕೆ ಡಬ್ ಆಗದಂತೆ
ನೋಡಿಕೊಂಡಿವೆ. ನಾವೀಗ ಅದನ್ನು ಹಿಂದಿಯಲ್ಲೋ ಅಥವಾ ನೆರೆ ರಾಜ್ಯದ ಭಾಷೆಗಳಾದ ತೆಲುಗು, ತಮಿಳು
ಅಥವಾ ಮಲೆಯಾಳ ಭಾಷೆಗಳಲ್ಲಿ ನೋಡಬೇಕಾಗಿದೆ.
ಕನ್ನಡ
ಟೆಲಿವಿಷನ್ ಸಂಘಟನೆಗಳು ಯಾಕೆ ಈ ತೀರ್ಮಾನಕ್ಕೆ ಬಂದಿವೆ? ಅದಕ್ಕೆ ಅವು ಕೊಡುವ ಪ್ರಮುಖ ಕಾರಣಗಳು
ಎರಡು. ಒಂದು; ಕನ್ನಡ ಚಿತ್ರರಂಗವನ್ನೇ ನಂಬಿಕೊಂಡಿರುವ ಸುಮಾರು ಐದು ಸಾವಿರ ಕಲಾವಿದರು ಮತ್ತು
ತಂತ್ರಜ್ನರು ತಮ್ಮ ಕೆಲಸವನ್ನು ಕಳೆದುಕೊಳ್ಳುತ್ತಾರೆ. ಆ ಮೂಲಕ ಅವರ ಕುಟುಂಬ ಬೀದಿಗೆ ಬರುತ್ತದೆ.
ಇನ್ನೊಂದು
ಕಾರಣ, ಕನ್ನಡ ಭಾಷೆ ಮತ್ತು ಸಂಸ್ಕೃತಿ
ನಾಶವಾಗುತ್ತಿದೆಯೆಂಬ ಆತಂಕ.
ಟೆಲಿವಿಷನ್
ಸಂಘಟನೆಗಳು ಮಾತ್ರವಲ್ಲ ಬಹುತೇಕ ಇಡೀ ಕನ್ನಡ
ಚಿತ್ರರಂಗ ಡಬ್ಬಿಂಗ್ ವಿರೋಧಿಯಾಗಿದೆ. ಕನ್ನಡದ ಹಲವು ಸಿನೇಮಾ ಪತ್ರಕರ್ತರೂ ಅವರ ಪರವಾಗಿ
ನಿಂತಂತಿದೆ. ಇಲ್ಲಿ ಒಂದು ವಿಷಯ ಗಮನಿಸಬೇಕು.ಕನ್ನಡ ಚಿತ್ರರಂಗ ಮತ್ತು ಟೀವಿ ಚಾನಲ್ ಗಳ ಸಂಬಂಧ
ಅವಿನಾಭವವಾದುದು. ಅವರು ಎಂದೂ ಪರಸ್ಪರ ವಿರೋಧಿಗಳಲ್ಲ. ಅವರ ಸಿನೇಮಾಕ್ಕೆ ಇವರು ಪ್ರಚಾರ ಕೊಡಬೇಕು
ಅವರ ಸಿನೇಮಾಗಳು, ಹಾಡುಗಳು, ಕ್ಲಿಪ್ಪಿಂಗ್ಸ್ ಗಳು ಇಲ್ಲದಿದ್ದರೆ ಇವರ ಟಿಅರ್ ಪಿ ಗ್ರಾಫ್
ಏರುವುದಿಲ್ಲ. ಇಲ್ಲಿ ಇಂಗು ತಿಂದ ಮಂಗನಂತಾಗಿರುವುದು, ಕನ್ನಡ ಭಾಷೆ ಮಾತ್ರ ಬಲ್ಲ ಪ್ರೇಕ್ಷಕರು
ಡಬ್ಬಿಂಗ್ ವಿರೋಧಿಗಳು ಕೊಡುವ ಕಾರಣಗಳು ಕಾರಣಗಳೇ ಅಲ್ಲ.
ಅದರಲ್ಲಿ ವಾಣಿಜ್ಯ ಉದ್ದೇಶಗಳಿವೆ. ಚಿತ್ರರಂಗವೊಂದು ಉದ್ಯಮ. ಗ್ರಾಹಕನಿಗೆ ಬೇಕಾದುದು ಎಲ್ಲವೂ
ಅಲ್ಲಿ ದೊರೆಯಬೇಕು.ಕೆಲವನ್ನು ಮಾತ್ರ ಕೊಡುತ್ತೆಯೆಂಬುದು ಸರಿಯಲ್ಲ, ಎಂಬುದು ಡಬ್ಬಿಂಗ್
ಪರವಾಗಿರುವವರ ವಾದ.
ಸಿನೇಮಾ ಒಂದು ಕಲಾ ಪ್ರಕಾರ; ಸೃಜನಶೀಲ ಕ್ಷೇತ್ರ. ಕಲೆಗೆ
ಮಾನವನ ಬದುಕನ್ನು ಮುನ್ನಡೆಸುವ, ಬದಲಾಯಿಸುವ ಮತ್ತು ಎತ್ತರಿಸುವ ಶಕ್ತಿಯಿದೆ. ಅದು ಕೊಡುವ
ಅನುಭವ ಶಬ್ದಾತೀತವಾದುದು. ಭಾಷಾತೀತವಾದುದು. ಅಲ್ಲಿ ಅದೊಂದು ಜ್ನಾನಶಾಖೆ. ಹಾಗಾಗಿ ಅದು ಮನೋರಂಜನೆಯ ಜೊತೆ
ಜೊತೆಗೆ ಜ್ನಾನವನ್ನು ಹಂಚುತ್ತದೆ. ಉಳಿದ ಕಲೆಗಳಲ್ಲಿ
ಇರದ ವಿಶೇಷವಾದ ಒಂದು ಗುಣ ಸಿನೇಮಾದಲ್ಲಿದೆ. ಅದು ಅಕ್ಷರ ಹೀನರನ್ನೂ ಸುಸಂಸ್ಕೃತರನ್ನಾಗಿ
ಮಾಡುತ್ತದೆ
ಕನ್ನಡ ಭಾಷೆಗೆ ಒಂದು ಸಾವಿರ ವರ್ಷಗಳ ಲಿಖಿತ
ಇತಿಹಾಸವಿದೆ. ಅದಕ್ಕೂ ಮೀರಿದ ಜಾನಪದ ಪರಂಪರೆಯಿದೆ. ಯಾವ ಅನ್ಯ ಸಂಸ್ಕೃತಿಯೂ ಕನ್ನಡ ಸಂಸ್ಕೃತಿಯನ್ನು
ನಾಶ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ. ಅದಕ್ಕೆ ಎಲ್ಲವನ್ನೂ ತನ್ನದಾಗಿಸಿಕೊಳ್ಳುವ,
ಜೀರ್ಣಿಸಿಕೊಳ್ಳುವ ಅಗಾಧ ಶಕ್ತಿಯಿದೆ. ಒಂದು ಕಾಲಕ್ಕೆ ಸಂಸ್ಕೃತ ಪಂಡಿತರ ಅಂದರೆ ಅಕ್ಷರವಂತರ
ಭಾಷೆಯಾಗಿತ್ತು. ಪ್ರಭುತ್ವದ ರಕ್ಷಣೆಯಲ್ಲಿತ್ತು . ಇಂತಹ ಸುರಕ್ಷಿತ ವಲಯದಲ್ಲಿ ಹುಟ್ಟಿದ ರಾಮಾಯಣ
ಮಹಾಭಾರತಗಳನ್ನು ನಮ್ಮ ಅಕ್ಷರವಂಚಿತ ಜನಸಾಮಾನ್ಯರು ತಮ್ಮದಾಗಿಸಿಕೊಂಡ ಪರಿಯನ್ನು ನೋಡಿದರೆ ಅವರ
ಜ್ನಾನಕ್ಕೆ ಅಚ್ಚರಿಪಡಲೇ ಬೇಕು. ಪತಿ ಊರಲ್ಲೂ ರಾಮಾಯಣವನ್ನು ನೆನಪಿಸುವ ಮತ್ತು ಪಾಂಡವರು
ನಡೆದಾಡಿದ ಕುರುಹುಗಳನ್ನು ಜನರ ಬಾಯಲ್ಲಿ ಕೇಳಬಹುದು. ಅವರ ಗ್ರಹಿಕೆ ಮತ್ತು ಪುನರ್ ಸೃಷ್ಟಿ ಅನನ್ಯವಾದುದು.
ಇಂತಹ ಸಂಸ್ಕೃತಿಯನ್ನು ಕಡೆಗಣಿಸಿ ಕತ್ತಿ, ಲಾಂಗ್, ಮಚ್ಚು-ಮಚ್ಛಾಗಳಿಂದ ಕೂಡಿದ ಡಾಗರ್
ಸಂಸ್ಕೃತಿಯನ್ನೇ ಕನ್ನಡದ ಸಂಸ್ಕೃತಿ ಎಂಬಂತೆ ಬಿಂಬಿಸಿ ’ಇದನ್ನು ಮಾತ್ರ ನೋಡಿ’ ಎಂದು ತಾಕೀತು
ಮಾಡಿದರೆ..? ತಾವು ಬಾವಿಯಲ್ಲಿನ ಕಪ್ಪೆಗಳಂತಿರುವುದಲ್ಲದೆ ಪ್ರೇಕ್ಷಕರನ್ನು ಕೂಡಾ ಹಾಗೆಯೇ ಇರಿ
ಎಂದು ಹೇಳಿದರೆ..?
ಭಾಷೆ
ಬೆಳೆಯುವುದೇ ಕೊಡು-ಕೊಳ್ಳುವಿಕೆಯಿಂದ.’ಇವಳ ತೊಡುಗೆ ಅವಳಿಗಿಟ್ಟು ನೋಡಬಯಸಿದೆ’ ಎಂದು
ಪ್ರಯೋಗಕ್ಕೆ ಒಡ್ಡಿಕೊಂಡು ಇಂಗ್ಲೀಷನ್ನು ಅಪ್ಪಿಕೊಂಡ ಕಾರಣದಿಂದಲೇ ಕನ್ನಡ ಭಾಷೆ ಇಂದು
ಸಮೃದ್ಧವಾಗಿ ಬೆಳೆದು ನಿಂತಿದೆ. ಅವರೆಲ್ಲಾ ಅನ್ಯಭಾಷೆಯ ಮೂಲದ್ರವ್ಯವನ್ನು ತೆಗೆದುಕೊಂಡು
ಕನ್ನಡೀಕರಿಸುತ್ತಿದ್ದರು. ಯೋಗ್ಯರಾದವರ ಕೈಯ್ಯಲ್ಲಿ ಸಿಕ್ಕಿದರೆ ಕನ್ನಡಭಾಷೆಗೆ ಮೂಲವನ್ನು ಮೀರುವ
ಧ್ವನಿಶಕ್ತಿಯಿದೆ. ’lead kindly light’ ಇಂಗ್ಲೀಷ್ ಹಾಡು ಬಿ.ಎಮ್.ಶ್ರೀ ಕೈಯ್ಯಲ್ಲಿ
’ಕರುಣಾಳು ಬಾ ಬೆಳಕೇ…’ಎಂಬ ಅನುಭಾವದ ಹಾಡಿನಂತೆ. ಬರ್ನ್ ಕವಿಯ ’my love is like a red red
rose’ ಹಾಡು ’ನನ್ನ ಪ್ರೇಮದ ಹುಡುಗಿ ತಾವರೆಯ ಹೊಸ ಕೆಂಪು’ ಆಗಿ ಕನ್ನಡ ಹಾಡಾಗಿ
ಉಳಿದುಬಿಡುತ್ತದೆ. ಕನ್ನಡ ಸಾಹಿತ್ಯ ಪ್ರಪಂಚ ಅನುವಾದ ಸಾಹಿತ್ಯಕ್ಕೆ ತೆರೆದುಕೊಳ್ಳದಿರುತ್ತಿದ್ದರೆ
ನಮಗೆ ಪಾಶ್ಚಾತ್ಯ ಮತ್ತು ಪೌರಾತ್ಯ ಜಗತ್ತಿನ ಸಾಹಿತ್ಯ ಮತ್ತು ಚಿಂತನೆಯ ಪರಿಚಯವೇ ಆಗುತ್ತಿರಲಿಲ್ಲ.
ಜಾಗತೀಕರಣಕ್ಕೆ ತೆರೆದುಕೊಂಡವರು ನಾವು. ಸ್ಪರ್ಧೆ ಅನಿವಾರ್ಯ.
ಗ್ರಾಹಕ ಸಂಸ್ಕೃತಿಯಲ್ಲಿ ಗುಣಮಟ್ಟದ ಉತ್ಪಾದನೆಯೇ ಅಂತಿಮ. ಅದು ನಮಗೆ ನಮ್ಮದೇ ಭಾಷೆಯಲ್ಲಿ ದೊರೆಯಬೇಕು. .ಇಲ್ಲವಾದರೆ ಯಾವ ಭಾಷೆಯಲ್ಲಿ ನಮಗದು
ಸಿಗುತ್ತದೋ ಆ ಭಾಷೆಯನ್ನು ನಾವು ಕಲಿಯುತ್ತೇವೆ. ಆಗ ನಿಜವಾಗಿಯೂ ನಮ್ಮ ಭಾಷೆ ಸೊರಗುತ್ತದೆ. ನಾನು
ತಮಿಳು ಮತ್ತು ಮಲೆಯಾಳಂ ಭಾಷೆ ಕಲಿತದ್ದು ಹಾಗೆಯೇ. ಬೆಂಗಾಲಿ ಮತ್ತು ಅಸ್ಸಾಂ ಭಾಷೆಯ ಚಿತ್ರಗಳು
ನನಗೆ ಕಾಲೇಜು ದಿನಗಳಲ್ಲಿ ನೋಡಲು ಸಿಗುತ್ತಿದ್ದರೆ ಆ ಭಾಷೆಯನ್ನೂ ಕಲಿಯುತ್ತಿದ್ದೆನೇನೋ..! ಆಗ
ನನಗೆ ಆಯ್ಕೆಗಳು ಕಮ್ಮಿ ಇತ್ತು..!! ಹಾಗಾಗಿ ನಾನು ಕನ್ನಡವನ್ನೂ ಕಲಿತೆ…!!! ಈಗಿನ ಪೀಳಿಗೆಯವರು
ಹೆಚ್ಚೆಚ್ಚು ಭಾಷೆಯನ್ನು ಕಲಿತ್ತಿದ್ದರೆ, ಕಲಿಯುತ್ತಿದ್ದರೆ ಅದಕ್ಕೆ ಕನ್ನಡ ಚಿತ್ರರಂಗದ
ಜಿಗುಟುತನವೂ ಒಂದು ಕಾರಣ. ಅವರಿಗೆ ಕನ್ನಡ ಹೊರಜಗತ್ತಿಗೂ ಬೇಡ, ಒಳಜಗತ್ತಿಗೂ ಬೇಡ..!

[ ವಿಜಯಕರ್ನಾಟಕದ ’ಅನುರಣನ’ ಕಾಲಂ ನಲ್ಲಿ ಪ್ರಕಟವಾದ ಲೇಖನದ ಪರಿಷ್ಕೃತ ಬರಹ ]