.
’ ನಾಟಕ ಬೆಂಗಳೂರು’ ಏರ್ಪಡಿಸಿದ ನಾಟಕೋತ್ಸವದಲ್ಲಿ ’
ಮೋಹನಸ್ವಾಮಿ’ ನಾಟಕ ಪ್ರದರ್ಶನಗೊಂಡಿತು. ಕನ್ನಡದ ಜನಪ್ರಿಯ ಬರಹಗಾರರಾಗಿರುವ ವಸುಧೇಂದ್ರ ಅವರ
’ಮೋಹನಸ್ವಾಮಿ’ ಕಾದಂಬರಿಯನ್ನು ರಂಗಪಠ್ಯವಾಗಿಸಿದವರು ಬಸವರಾಜ ಸೂಳೇರಿಪಾಳ್ಯ. ’ವಯಸ್ಕರಿಗಾಗಿ’
ಎಂಬ ಟ್ಯಾಗ್ ಲೈನ್ ಹೊತ್ತ ಈ ನಾಟಕವನ್ನು ರೂಪಾಂತರ ತಂಡಕ್ಕಾಗಿ ನಿರ್ದೇಶಿಸಿದವರು ಕೆ.ಎಸ್.ಡಿ.ಎಲ್ ಚಂದ್ರು.
ಮೊದಲಿಗೆ ಹೇಳಿಬಿಡುತ್ತೇನೆ. ಇದು ನಾಟಕದ ವಿಮರ್ಶೆಯಲ್ಲ.
ಇದು ನನ್ನ ಅನ್ನಿಸಿಕೆ ಮಾತ್ರ ..ವೈಯಕ್ತಿಕವಾಗಿ ನನ್ನಲ್ಲಿ ಬಹುನಿರೀಕ್ಷೆಯನ್ನು ಹುಟ್ಟಿಸಿದ
ನಾಟಕ ಇದಾಗಿತ್ತು. ನಾಟ್ಕ ಮುಗಿದೊಡನೆ ನನ್ನ ಅಭಿಪ್ರಾಯವನ್ನು ಬರೆಯಬೇಕೆಂದುಕೊಂಡಿದ್ದೆ. ಆದರೆ
ಹೊರಊರಿಗೆ ಹೋಗಬೇಕಾದ ಅನಿವಾರ್ಯತೆ ಬಂದಕಾರಣ ಬರೆಯಲಾಗಲಿಲ್ಲ. ಬಂದೊಡನೆ ಪೇಪರ್ ಗಳನ್ನೆಲ್ಲಾ
ಮಗುಚಿ ನೋಡಿದೆ. ಯಾರೂ ಇದರ ಬಗ್ಗೆ ಬರೆದಿರುವುದು ಕಣ್ಣಿಗೆ ಬೀಳದ ಕಾರಣ ನನಗನ್ನಿಸಿದ್ದನ್ನು
ನಿಮ್ಮೊಡನೆ ಹಂಚಿಕೊಳ್ಳೋಣವೆಂದುಕೊಂಡು ಕಂಪ್ಯೂಟರ್ ಮುಂದೆ ಕೂತಿದ್ದೇನೆ. ಯಾಕೆಂದರೆ
ನಿರ್ಲಕ್ಷಿಬಿಡಬಹುದಾದ ಕಾದಂಬರಿ ’ಮೋಹನಸ್ವಾಮಿ’ ಅಲ್ಲ.
ಸಾಹಿತ್ಯಾಸಕ್ತರಿಗೆ ಗೊತ್ತಿದೆ. ಮೋಹನಸ್ವಾಮಿ ಹೋಮೋಸೆಕ್ಛುವಲ್
ಬಗ್ಗೆ ಕನ್ನಡದಲ್ಲಿ ಬಂದ ಮೊತ್ತ ಮೊದಲ ಕಾದಂಬರಿ. ಇದು ಪ್ರಕಟನೆಯಾಗಿ ಓದುಗರಿಂದ ಅಪಾರ
ಮೆಚ್ಚುಗೆಯನ್ನು ಪಡೆದುಕೊಂಡಿತು.ಅನಂತರದಲ್ಲಿ ಇದರ ಲೇಖಕ ವಸುಧೆಂದ್ರ, ತಾನೊಬ್ಬ ಗೇ ಎಂಬುದನ್ನು
ಸಮಾಜದ ಎದುರು ನಿರ್ಭಯವಾಗಿ ಘೋಷಿಸಿಕೊಂಡರು.ಹಾಗಾಗಿ
ಆ ಕಾದಂಬರಿಗೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟವಾದ ಶಾಶ್ವತ ಸ್ಥಾನವೊಂದು ದೊರಕಿದೆ.
ಅಂತಹ ಕಾದಂಬರಿಯೊಂದನ್ನು ನಾಟಕಕ್ಕೆ ಅಳವಡಿಸಲು ಮುಂದಾದ ಚಂದ್ರು ಅವರು ಅಭಿನಂಧನೆಗೆ ಅರ್ಹರು. ಕಾದಂಬರಿಯೆಂಬ ಜನಪ್ರಿಯ ಮಾಧ್ಯಮದಿಂದ ನಾಟಕವೆಂಬ ಇನ್ನೊಂದು ಮಾಧ್ಯಮಕ್ಕೆ ಅಳವಡಿಸಿಕೊಂಡಾಗ ಮಾಡಿಕೊಂಡ
ಬದಲಾವಣೆಗಳೇನು? ಅಲ್ಲಿನ ಪ್ರೇಕ್ಷಕರು ಅದನ್ನು ಹೇಗೆ ಸ್ವೀಕರಿಸಿದರು ಎಂಬುದು ನನ್ನಂಥ ನಾಟಕಾಸ್ತರ ಕುತೂಹಲಕರ ಸಂಗತಿಯಾಗಿತ್ತು.
ಒಬ್ಬ ಓದುಗ ತನಗೆ ತಾನೇ ಸ್ವಯಂಭೂ. ಬರಹವೊಂದನ್ನು
ಓದುತ್ತಾ..ಓದುತ್ತಾ ತನಗೆ ತಾನೇ ಕಲ್ಪನಾಲೋಕದಲ್ಲಿ ವಿಹರಿಸಬಲ್ಲ. ಕಾಲದೇಶಗಳನ್ನು ಮೀರಿ
ತನಗೆನುಬೇಕೋ ಅದನ್ನು ಪಡೆದುಕೊಳ್ಳಬಲ್ಲ. ಆದರೆ ನಾಟ್ಕ ಹಾಗಲ್ಲ. ಅದು ದ್ರುಶ್ಯಕಲೆ. ಅಲ್ಲಿ
ಜೀವಂತ ಪ್ರೇಕ್ಷಕರಿರುತ್ತಾರೆ. ಹಾಗಾಗಿ ರಂಗಮಂದಿರದಿಂದ ಪ್ರೇಕ್ಷಾಗಂಣಕ್ಕೆ ಹರಿದು ಬರಬೇಕಾದ
ಅಂಶಗಳು ಯಾವುದು? ಔಚಿತ್ಯಪ್ರಜ್ನೆ ಮೀರದಂತೆ ಯಾವುದನ್ನು ಹೇಗೆ ಕೊಡಬೇಕು ಎಂಬುದನ್ನು ನಾಟ್ಕ
ಕಟ್ಟುವವರು ನಿಶ್ಚಯಿಸುವುದು ಅತೀ ಮುಖ್ಯ. ’ಓದುವಿಕೆ’ ಮತ್ತು ’ನೋಡುವಿಕೆ’ ಎರಡೂ ಭಿನ್ನ
ಆಯಾಮಗಳೇ.

ನಿಮಗೆ ನೆನಪಿರಬಹುದು ೧೯೯೬ರಲ್ಲಿ ಹಿಂದಿಯಲ್ಲಿ ದೀಪಾ
ಮೆಹ್ತಾ ’ ಫೈರ್’ ಎನ್ನುವ ಸಿನೇಮಾ ಮಾಡಿದ್ದರು ಅದು ಇಬ್ಬರು ಮಹಿಳೆಯರ ನಡುವಿನ ಲೈಂಗಿಕ
ಚಟುವಟಿಕೆಯ ವಸ್ತುವನ್ನು ಒಳಗೊಂಡಿತ್ತು. ಶಬನಾ ಅಜ್ಮಿ ಮತ್ತು ನಂದಿತಾದಾಸ್ ಮುಖ್ಯಭೂಮಿಕೆಯಲ್ಲಿದ್ದರು.
ಇದು ಭಾರತೀಯ ಸಿನಿಮಾ ರಂಗದಲ್ಲಿ ಹೋಮೋಸೆಕ್ಚುವಲ್ ಬಗ್ಗೆ ಬಂದ ಮೊತ್ತ ಮೊದಲ ಸಿನೇಮಾವಾಗಿತ್ತು. ಆಗ
ಸಂಪ್ರದಾಯಸ್ಥರು ಈ ಸಿನೇಮಾದ ವಿರುದ್ಧ ದೇಶದ ಹಲವಾರು ಕಡೆ ಪ್ರತಿಭಟನೆಗಳನ್ನು ನಡೆಸಿದ್ದರು.
ಪೈರ್, ಲೆಸ್ಬಿಯನ್ ಗಳ ಬಗ್ಗೆ ಬಂದ ಸಿನೇಮಾವಾದರೆ ,
ಹನ್ಸಾಲ್ ಮೆಹತಾ ಅನ್ನುವವರು ೨೦೧೬ರಲ್ಲಿ ಅಲಿಗಡ್ [ Aligrah] ಎಂಬ ಸಿನೇಮಾ ಮಾಡಿದ್ದರು. ಅದು ಗೇ ಯಾಗಿ ಬದುಕಿದ
ವ್ಯಕ್ತಿಯೊಬ್ಬನ ಜೀವನಚರಿತ್ರೆಯನ್ನಾಧರಿಸಿದ್ದ ಸಿನೇಮಾವಾಗಿತ್ತು. ಅಲಿಗಡ್
ವಿಶ್ವವಿದ್ಯಾಲಯದಲ್ಲಿ ಲಿಂಗ್ವೆಸ್ಟಿಕ್ ಪ್ರೋಪೆಸರ್ ಆಗಿದ್ದ ಶ್ರೀನಿವಾಸ್ ರಾಮಚಂದ್ರ ಎಂಬವರು
ಪುರುಷನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ನಿರತರಾಗಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು
ಎಂಬ ಕಾರಣದಿಂದಾಗಿ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿ ವಿಚಾರಣೆಗೊಳಪಡಿಸಲಾಗಿತ್ತು. ಅನಂತರ
ಅವರನ್ನು ಪುನರ್ ನೇಮಕಗೊಳಿಸಿದರೂ ಕೊನೆಯಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ಮನೋಜ್ ಬಾಜ್ಪೈ ಪ್ರೋಪೆಸರ್ ಪಾತ್ರದಲ್ಲಿಯೂ ರಾಜಕುಮಾರ್ ರಾವ್ ಪತ್ರಕರ್ತನ ಪಾತ್ರದಲ್ಲಿಯೂ ನಟಿಸಿದ್ದರು. ಒಬ್ಬ ಜರ್ನಲಿಸ್ಟ್ ದೃಷ್ಟಿಕೋನದಿಂದ ಆ ಸಿನೇಮಾವನ್ನು
ನಿರೂಪಣೆ ಮಾಡಲಾಗಿತ್ತು. ಅದೊಂದು ಟೆಕ್ನಿಕ್ ,ಅದು ನಿರ್ದೇಶಕನ ಸ್ವಾತಂತ್ರ್ಯ. ಅಂತಹದೊಂದು
ತಂತ್ರದ ಮೂಲಕವೇ ಮೋಹನಸ್ವಾಮಿಯ ಎದೆಯ ತಳಮಳ, ಒಳಗಿನ ವಿಪ್ಲವ ಪ್ರೇಕ್ಷರೆದೆಗೆ
ಹರಿದು ಬರಲು ಸಾಧ್ಯತೆಯಿತ್ತು..
ಗಂಭೀರವಾದ ವಸ್ತುವೊಂದನ್ನು ದೃಶ್ಯಮಾಧ್ಯಮಕ್ಕೆ ತಂದಾಗ
ಅದನ್ನು ಅಷ್ಟೇ ಗಂಭೀರವಾಗಿ ತೆರೆಯ ಮೇಲೆ ಅಥ್ವಾ ರಂಗದ ಮೇಲೆ ಅನಾವರಣಗೊಳಿಸುವುದು ಅಷ್ಟೇ ಮುಖ್ಯ.
ಈ ದೃಷ್ಟಿಯಿಂದ ನೋಡಿದಾಗ ’ಮೋಹನಸ್ವಾಮಿ’ ಎಂಬ ನಾಟಕ ಒಂದು ಪ್ರಯತ್ನದ ಮಟ್ಟಕ್ಕಷ್ಟೇ
ಸೀಮಿತವಾಯ್ತು.

ಚಪ್ಪಾಳೆ ಹೊಡೆಸಿಕೊಳ್ಳುವ, ರಂಜನೆಯ ನಾಟಕವೇ ಮೋಹನಸ್ವಾಮಿ? ಅದು ಪ್ರೇಕ್ಷಕರ ಎದೆಗಿಳಿದು ಅತ್ಮವಲೋಕನಕ್ಕೆ ಎಡೆಮಾಡಿಕೊಡಬೇಕಾಗಿತ್ತಲ್ಲವೇ?
ದೃಶ್ಯಕಲೆಗಳಲ್ಲಿ ಮೌನ ಮಾತಾಡುತ್ತದೆ. ಸಂಗೀತ ಅದಕ್ಕೆ
ಪೂರಕವಾಗಿರುತ್ತದೆ. ಆದರೆ ಇಲ್ಲಿ ’ಟೊಂಯ್ ಟೊಂಯ್’ ಅನ್ನುವ ಸಂಗೀತ ನಾಟಕವನ್ನು ವಾಚ್ಯದೆಡೆಗೆ
ತಳ್ಳುತ್ತಿತ್ತು. ಬಿಗಿ ಬಂಧದಲ್ಲಿ ಒಂದೂವರೆ ಘಂಟೆಯಲ್ಲಿ ಕಟ್ಟಿಕೊಡಬಹುದಾದ ನಾಟ್ಕವನ್ನು
ಎರಡೂವರೆ ಘಂಟೆಗೆ ಲಂಬಿಸಿ ಮೇಲ್ಪದರಿನಲ್ಲಿ ರಂಜಿಸುವಂತೆ ಮಾಡಲಾಗಿತ್ತು.
ಚಂದ್ರು ನನ್ನ ರಂಗ ಗೆಳೆಯರು, ಒಳ್ಳೆಯ ನಿರ್ದೇಶಕರು.
ಅವರ ಹಲವಾರು ನಾಟ್ಕಗಳನ್ನು ನೋಡಿದ್ದೇನೆ. ಈ ಬಾರಿ ಯಾಕೆ ಹೀಗಾಯ್ತೋ ಗೊತ್ತಿಲ್ಲ. ಬಹುಶಃ ಮುಂದಿನ
ಪ್ರಯೋಗದಲ್ಲಿ ಇಲ್ಲಾದ ನ್ಯೂನತೆಗಳನ್ನು ತುಂಬಬಲ್ಲರು ಅಂತ ವಿಶ್ವಾಸವಿದೆ. ಅದಕ್ಕೆ ತಾನೇ
ನಾಟಕವನ್ನು ”ಪ್ರಯೋಗ’ ಎಂದು ಕರೆಯುವುದು. ಪ್ರತಿ ಪ್ರದರ್ಶನವೂ ಒಂದು ಹೊಸ ಪ್ರಯೋಗವೇ. ಮುಂದಿನ
ಬಾರಿ ಮೋಹನಸ್ವಾಮಿ ಪ್ರದರ್ಶನಗೊಂಡಾಗ ಇನ್ನೊಮ್ಮೆ ಅದನ್ನು ತಪ್ಪದೆ ನೋಡುವ ಆಸೆಯಿದೆ ನನಗೆ..