![]() |
ಚಿತ್ರ; Internaet |
ಮೊನ್ನೆ..
ಮುಂಜಾವಿನಲ್ಲಿ ಬಸ್ಸಿನಿಂದಿಳಿದು
ಪೇಟೆಯ ಕಲ್ಲುಬೆಂಚಿನಲ್ಲಿ
ಕುಳಿತಿದ್ದೆ.
ಪಕ್ಕದ ಗೂಡಂಗಡಿಯ
ಕಾಕ
ತಟ್ಟೆಯಲ್ಲಿ ತಂದ
ಬಿಸಿ ಉಪ್ಪಿಟ್ಟನ್ನು ರಸ್ತೆಬದಿಯಲ್ಲಿ ಚೆಲ್ಲಿದ
ಲೋಟ ತುಂಬಿದ ಬಿಸಿ
ಬಿಸಿ ಚಾಹವನ್ನು ಅಲ್ಲೇ ಸುರಿದ.
ತಲೆಯೆತ್ತಿ ಅವನನ್ನೇ
ದಿಟ್ಟಿಸಿದೆ.
‘ಲಾಗಾಯ್ತಿನಿಂದ
ಬಂದದ್ದು’ ಎಂದು ನಗು ಚಿಲ್ಲಿದ.
ಮೂಡಣಕ್ಕೆ ಕೈಮುಗಿದು
ಒಳಗಡೆಗೆ ಹೋದ.
ಇಬ್ಬನಿಯ ಮುಂಜಾವಿನಲ್ಲಿ
ನನ್ನಜ್ಜಿ
ನೆಟ್ಟಿಗದ್ದೆಗೆ
ಹೋಗಿ ಎಳೆಸಸಿಗಳ ಸವರಿ,
ಬಳ್ಳಿಗಳ ಚಪ್ಪರಕ್ಕೆ
ಹಬ್ಬಿಸಿ.
‘ಕಾಯಿಗಟ್ಟಿದೆ ನೆಟ್ಯಜ್ಜಿಗೆ
ಎಡೆ ಹಾಕಬೇಕು’
ಗೊಣಗುತ್ತಾ ಬಂದು
ಇನ್ನೂ ಮಲಗಿಯೇ ಇದ್ದ
ನನ್ನ ಕುಂಡೆಗೊಂದು ಒದ್ದು.
ಕೇಪಳೆ ಹೂ ಕೊಯ್ದುಕೊಂಡು
ಬಾ ಎಂದು ಅಟ್ಟಿದಳು.
ಕುಂಜ್ಞ್ ಕತ್ತಿ
ಹಿಡಿದು ಎಲ್ಲಿಗೋ ನಡೆದಳು.
ನಟ್ಯಜ್ಜಿಗೆ ರಾಗಿಗಂಜಿ
ಏಡಿ ಸಾರು ಬಡಿಸಿದಳು.
ಚಾಮುಂಡಿಯೆಂಬ ಕಲ್ಲುಗುಂಡಿಗೆ
ಹಂದಿರಕ್ತದ ಅಭಿಶೇಕ ಮಾಡಿದಳು.
ಕೆಂಪಿ ಹಸುವಿನ ಮೊದಲ
ಹಾಲನ್ನು ನದಿಗೆ ಎರೆದಳು.
ಮೀಸಲು ಮೀನನ್ನು
ಕಾಡಿಗೆಸೆದು ಬುಟ್ಟಿ ತುಂಬಿಸಿಕೊಂಡಳು.
ಇದೆಲ್ಲವನ್ನೂ ಕೊಟ್ಟ
ಭೂಮಿ ತಾಯಿಗೆ
ವರ್ಷದಲ್ಲಿ ಮೂರುದಿನ
ಕಳಶಕನ್ನಡಿಯಿಟ್ಟು
ಸೀಗೆಕೊಂಬನ್ನು ನೆಟ್ಟು
ನೆತ್ತಿಗೆ ಎಣ್ಣೆಯೆರೆದಳು.
ನನ್ನ ಬೈತಲೆಯಲ್ಲಿ
ಸಿಂಧೂರವಿಲ್ಲ.
ಹಣೆಯಲ್ಲಿ ಗಂಧಚಂದನ.
ಕೊರಳಲ್ಲಿ ತಾಳಿಯಿಲ್ಲ.
ನಾನು ನಿಮ್ಮವಳಲ್ಲ.
ನಿಮ್ಮ ದೇವರು ನನ್ನ
ದೇವರಲ್ಲ.
ಆಟಿ ಹುಣ್ಣಿಮೆಯ
ಹೆಣ್ಣು ನಾನು
ಬೀಮನ ಅಮಾವಾಸ್ಯೆಯ
ಹದಿಬದೆಯಲ್ಲ
ನಿಮ್ಮ ದೇವರುಗಳ
ಕೈಯ್ಯಲ್ಲಿ ಮಾರಕ ಆಯುಧಗಳಿವೆ
ಕತ್ತರಿಸಿದ ರುಂಡವಿದೆ.
ನಿಮ್ಮ ಹಾಗೆಯೇ ನಿಮ್ಮ
ದೇವರು.
ನಿಮ್ಮ ಭಾರತ ಮಾತೆ
ರಕ್ತದಾಹಿ.!
ನನಗೀಗ ಕಾಶ್ಮೀರಿಗಳು
ಹೆಚ್ಚು ಅರ್ಥವಾಗುತ್ತಾರೆ.
ಮುಸ್ಲೀಮರು ಹೆಚ್ಚು
ಅರ್ಥವಾಗುತ್ತಾರೆ.
ದಲಿತರು ಹೆಚ್ಚು
ಅರ್ಥವಾಗುತ್ತಾರೆ.
ಆಟಿ ಹುಣ್ಣಿಮೆಯ
ಹೆಣ್ಣು ನಾನು!
ಅಂತಃರಿಕ್ಷದಿಂದ
ಉದುರಿದವರು ನೀವು.
ತ್ರಿಶಂಕುವಿಗೆ ಸ್ವರ್ಗವಿಲ್ಲ.!
·