Wednesday, August 27, 2008

ಬದುಕಬೇಕು....ಬದುಕಲೇಬೇಕು

ಬಹಳ ಹಿಂದೆ, ತಮ್ಮ ಅತ್ಯಂತ ಸಂಕಟದ ಘಳಿಗೆಯಲ್ಲಿ ಕೆ ರಾಮಯ್ಯ ಒಂದು ಮಾತು ಹೇಳಿದ್ದರು "ಅತ್ಮಹತ್ಯೆ’ಗೆ ನಾನು ಕೊಟ್ಟುಕೊಳ್ಳುವ ಕಾರಣಗಳು ’ಕಾರಣ’ಗಳೇ ಅಲ್ಲವೇನೋ ಎಂಬ ಗುಮಾನಿ ನನ್ನನ್ನು ಬದುಕುವಂತೆ ಮಾಡಿದೆ"ನನ್ನ ಅತ್ಯಂತ ದುಃಖದ, ಯಾತನೆಯ ಕ್ಷಣಗಳಲ್ಲಿ ಇದು ನನ್ನನ್ನು ಆತ್ಮವಿಮರ್ಶೆಗೆ ದೂಡುತ್ತದೆ. ನನ್ನನ್ನು ಮತ್ತೆ ಜೀವನ್ಮುಖಿಯಾಗುವಂತೆ ಪ್ರೇರ್‍ಎಪಿಸುತ್ತದೆ. ಮುಖ್ಯವಾಗಿ ನಾನು ಭೂತಕಾಲದೊಳಗೆ ಜಾರಿಬಿಡುತ್ತೇನೆ. ಗದ್ದೆ, ತೋಟ, ನದಿ, ಕಾಡುಗಳಲ್ಲಿ ಅಲೆದಾಡಿ ಅರಬ್ಬಿ ಸಮುದ್ರದ ನದಿಗುಂಟ ಹೆಜ್ಜೆ ಹಾಕುತ್ತೇನೆ. ಸೋಮೇಶ್ವರದ ರುದ್ರಪಾದೆಯ ಮೇಲೆ ಗಲ್ಲಕ್ಕೆ ಕೈಯೂರಿ ಕುಳಿತು ಅನಂತ ನೀಲಿ ಕಡಲನ್ನು ದಿಟ್ಟಿಸುತ್ತೇನೆ. ಬಂಡೆಗೆ ಅಪ್ಪಳಿಸುವ ದಡೂತಿ ತೆರೆಗಳು ತುಂತುರು ಹನಿಗಳಾಗಿ ಮುಖಕ್ಕೆ ಮುತ್ತಿಕ್ಕುತ್ತವೆ. ಹಾಗೆಯೇ ಕಣ್ಮುಚ್ಚಿ ಕಡಲ ಭೊರ್ಗೆರೆತಕ್ಕೆ ಕಿವಿಯಾಗುತ್ತೇನೆ. ಅದರ ಪಂಥಾಹ್ವಾನ ನನ್ನೊಳಗಿನ ಹೋರಾಟದ ಕೆಚ್ಚನ್ನು ಕೆರಳಿಸುತ್ತದೆ. ಕಣ್ತೆರೆದರೆ ನಿಜವಾಗಿಯೂ ನನ್ನಲೆನೋ ತುಂಬಿಕೊಂಡಂತೆ ಭಾಸವಾಗುತ್ತದೆ. ದೈನಂದಿನ ಕೆಲಸ ಕಾರ್ಯಗಳಲ್ಲಿ ಹುರುಪು ಕಾಣಿಸಿಕೊಳ್ಳುತ್ತದೆ. ನಿಜಕ್ಕೂ ಬದುಕೆಷ್ಟು ಸರಳ ಮತ್ತು ಸುಂದರ! ಆದರೂ ಆಳದಲ್ಲೊಂದು ಶೂನ್ಯ ಇದ್ದೇ ಇದೆ. ಬಹಳ ಭಾರಿ ನನಗೆ ಅನ್ನಿಸುವುದಿದೆ; ಎಲ್ಲರಿಗೂ ಅವರದೇ ಆದ ಗೆಳೆಯರ ಬಳಗವಿದೆ. ಆತ್ಮೀಯ ವರ್ತುಲವಿದೆ. ನನಗೇಕೆ ಆ ಭಾಗ್ಯವಿಲ್ಲ?ನಾನು ಅಂತರ್ಜಾತೀಯ ಮದುವೆ ಮಾಡಿಕೊಂಡಿದ್ದೇನೆ. ಗಂಡನ ಮನೆಯವರಿದ್ದಾರೆ ಕಷ್ಟಸುಖಕ್ಕೆ; ಆದರೆ ಆಪ್ತರಲ್ಲ. ನನ್ನ ತವರಿದೆ; ಆದರೆ ಮನ ಬಿಚ್ಚಿ ಎಲ್ಲವನ್ನೂ ಹೇಳಿಕೊಳ್ಳಲಾರೆ. ಯಾಕೆಂದರೆ ಇದು ನಾನು ಆಯ್ಕೆ ಮಾಡಿಕೊಂಡ ಬದುಕು. ಇದರ ಸೋಲು ಗೆಲುವುಗಳೆರಡೂ ನನ್ನದೇ. ಹಾಗಾಗಿ ಗೆಳೆತನಕ್ಕಾಗಿ ನಾನು ಹಪಹಪಿಸುತ್ತೇನೆ. ಈ ಹಪಹಪಿಕೆ ಎಲ್ಲರಲ್ಲೂ ಇರುತ್ತದೆ. ಆದರೂ ಯಾರಿಗೂ ಯಾರೂ ಸಿಗುವುದಿಲ್ಲ. ಯಾಕೆ ಹೀಗೆ? ಯಾವ ತರಂಗಾಂತರದಲ್ಲಿ ಟ್ಯೂನ್ ಮಾಡಿದರೆ ನಮಗೆ ಬೇಕಾದ ಗೆಳೆಯರು ಸಿಗಬಹುದು?. ಗೊತ್ತಿಲ್ಲ. ಹಾಗಾಗಿ ಸದ್ಯಕ್ಕೆ ತರಂಗಾಂತರಗಳು ಬ್ಲಾಗ್ ಗಳಲ್ಲಿ ಹರಿದಾಡುತ್ತಿವೆ. ಮೊದಲೆಲ್ಲ ನನ್ನ ಗೆಳೆಯರು, ಅವನ ಗೆಳೆಯರು ಎಂದು ಒಂದಷ್ಟು ಬಳಗ ನಮ್ಮ ಸುತ್ತಲಿತ್ತು. ಆದರೆ ಅವರು ಯಾರೂ ’ನಮ್ಮ’ ಗೆಳೆಯರಾಗಲಿಲ್ಲ. ತಪ್ಪು ನಮ್ಮಲ್ಲಿಯೇ ಇತ್ತು. ನಮ್ಮ ನಮ್ಮ ಪರಿಧಿಯೊಳಗೆ ಇದ್ದುಕೊಂಡೇ ವ್ಯವಹರಿಸಿದೆವು. ಇಲ್ಲೊಂದು ಸೂಕ್ಷವನ್ನು ಗಮನಿಸಬೇಕು; ಗಂಡನ ಗೆಳೆಯರು ಎಂದಿಗೂ ಪತ್ನಿಗೆ ಹತ್ತಿರದವರಾಗುವುದಿಲ್ಲ. ಒಂದುವೇಳೆ ಹತ್ತಿರದವರಾದರೆ ಗಂಡನ ’ಅಹಂ’ಗೆ ಪೆಟ್ಟು ಬೀಳುತ್ತದೆ. ಅವನಲ್ಲಿ ಸಂಶಯ, ಅಸಹನೆ ಹುಟ್ಟಿಕೊಳ್ಳುತ್ತದೆ. ದಾಂಪತ್ಯ ಬಿರುಕಿಗೆ ಇದುವೇ ಬೀಜವಾಗುತ್ತದೆ. ಇನ್ನು ಪತ್ನಿಯ ಗೆಳತಿಯರು ಅವನ ಭೌದ್ಧಿಕತೆಗೆ ಎಂದಿದ್ದರೂ ಕಡಿಮೆಯೇ ಎಂಬ ಭಾವನೆ ಗಂಡಂದಿರಲ್ಲಿದೆ. ಒಂಟಿಯಾಗಿಯೇ ಬದುಕುವುದು ನನಗೀಗ ರೂಢಿಯಾಗಿದೆ. ಅದು ನನ್ನ ಶಕ್ತಿ ಎಂಬುದು ನನಗೀಗ ಅರಿವಾಗಿದೆ. ಆ ಶಕ್ತಿ ಹೊರಚಿಮ್ಮುವುದಕ್ಕೂ ಒಂದು ಪ್ರೇರಣೆಯಿದೆ. ಅದನ್ನು ಇನ್ನೊಮ್ಮೆ ಹೇಳುತ್ತೇನೆ. ಸಂಪೂರ್ಣ ನೆಲ ಕಚ್ಚಿ ಹೋದೆ, ಉಸಿರಾಡುವುದೂ ಕಷ್ಟವಾಗುತ್ತಿದೆ ’ಸತ್ತುಹೋಗೋಣ’ ಎನಿಸಿದಾಗ ಕೆ. ರಾಮಯ್ಯರ ಮಾತುಗಳು ನೆನಪಾಗುತ್ತವೆ. ಮೈ ಕೊಡವಿ ಹೊಸ ಸವಾಲುಗಳನ್ನು ಎದುರಿಸಲು ಮನಸ್ಸು ಸಜ್ಜಾಗುತ್ತದೆ. ಒಂದು ದಾರಿ ಮುಚ್ಚಿದಾಗ ಹತ್ತು ದಾರಿಗಳು ತೆರೆದುಕೊಳ್ಳುತ್ತವೆ. ಒಂದನ್ನು ಆಯ್ಕೆ ಮಾಡಿಕೊಂಡು ನುಗ್ಗಿಬಿಡಬೇಕು; ದುಮ್ಮಿಕ್ಕಿ ಬಿಡಬೇಕು. ಸೋಲಾದರೂ ನಮ್ಮದೇ. ಗೆಲುವಾದರೂ ನಮ್ಮದೇ. ಸೋಲಿಗೆ ಬೇರೆಯವರತ್ತ ಬೊಟ್ಟು ತೋರಿಸಬಾರದು. ಅದು ನಮ್ಮ ಪ್ರಯತ್ನದಲ್ಲಿನ ವೈಪಲ್ಯ ಎಂದು ಭಾವಿಸಬೇಕು. ಗೆಲುವನ್ನು ಹೆಮ್ಮೆಯಿಂದ ಸ್ವೀಕರಿಸಬೇಕು. ಅದು ನಮ್ಮ ಸಾಧನೆ. ಒಮ್ಮೆ ಗೆಲುವಿನ ರುಚಿ ಅನುಭವಿಸಿ. ಅದು ನಿಮ್ಮ ಹಿಂದಿನ ಹತ್ತಾರು ಸೋಲುಗಳನ್ನು ಮರೆಸಿಬಿಡುತ್ತದೆ. ಆತ್ಮವಿಸ್ವಾಸವನ್ನು ಹೆಚ್ಚಿಸುತ್ತದೆ. ರಿಸ್ಕ್ ಗಳನ್ನು ತೆಗೆದುಕೊಳ್ಳುವಂತೆ ಹುರಿದುಂಬಿಸುತ್ತದೆ. ಅಪಾಯವನ್ನು ಎದುರಿಸುವುದರಲ್ಲೇ ಜೀವಚೈತನ್ಯ ಆಡಗಿದೆ. ಅದು ನಿಸರ್ಗಕ್ಕೂ ಪ್ರಿಯ. ಬರಹಕ್ಕೆ ಉಪದೇಶದ ಛಾಯೆ ಬಂದುಬಿಟ್ಟಿತೇ?. ಇಲ್ಲ ಗೆಳೆಯಾ, ಇದು ನನ್ನ ಅನುಭವ. ನನಗೆ ಅನ್ನಿಸಿದ್ದು ನಿಮಗೂ ಅನ್ನಿಸಬಹುದಲ್ಲವೇ? ಅನ್ನಿಸಬೇಕು; ಅದು ಸುರಗಿಗೆ ಇಷ್ಟ.

1 comments:

ದಿನೇಶ್ ಕುಮಾರ್ ಎಸ್.ಸಿ. said...

ವಿಷಾದ ಸ್ಥಾಯಿಭಾವವಲ್ಲ, ಆಗಲೂ ಬಾರದು. ದುಃಖ, ಯಾತನೆಗಳನ್ನು ಮೆಟ್ಟಿ ಮುಂದಡಿಯಿಡುವ ನಿಮ್ಮ ಜೀವನ್ಮುಖಿ ಚಿಂತನೆಗಳು ಆಪ್ತವಾಗಿವೆ. ಎಲ್ಲ ಸವಾಲುಗಳನ್ನು ಎದುರಿಸುವ ಜೀವಚೈತನ್ಯವನ್ನು ಮೊಗೆಮೊಗೆದು ತೆಗೆಯುವುದೇ ಅರ್ಥಪೂರ್ಣವಾಗಿ ಬದುಕುವ ರೀತಿ ಅನಿಸುತ್ತದೆ. ನಿಮ್ಮ ಜೀವನ್ಮುಖತೆ, ಆಶಾವಾದ ಇನ್ನಷ್ಟು ನೊಂದ ಮನಸ್ಸುಗಳಿಗೆ ಚೈತನ್ಯ ಮೂಡಿಸಲಿ.