Friday, February 20, 2009

ಕಲಾವಿದರತ್ತ ತಿರುಗಿದ ಬಿಜೆಪಿ ವಕ್ರ ದೃಷ್ಟಿ

ರೈತರ ಮೇಲೆ ಗೋಲಿಬಾರ್ ನಡೆಸಿದ್ದಾಯ್ತು.
ಮಹಿಳೆಯರನ್ನು ಅನುಮಾನಿಸಿ, ಅವಮಾನಿಸಿದ್ದಾಯ್ತು.
ಇದೀಗ ಬಿ.ಜೆ.ಪಿಯ ಕಣ್ಣು ಕಲಾವಿದರ ಮೇಲೆ ಬಿದ್ದಿದೆ.

ನಿನ್ನೆ ಅಂದರೆ ಫೆ.೧೬ರಂದು ಬೆಂಗಳೂರಿನಲ್ಲಿ’ ಆಧುನಿಕ ಕಲೆಗಳ ರಾಷ್ಟ್ರೀಯ ಗ್ಯಾಲರಿ’[ಎನ್ ಜಿ ಎಂ ಎ] ಉದ್ಘಾಟನೆಯಾಯಿತು.
ಮೂರು ದಶಕಗಳ ಹೋರಾಟದ ಫಲವಾಗಿ ರಾಜ್ಯಕ್ಕೆ ಈ ಶಾಖೆ ದೊರಕಿತ್ತು. ಸಹಜವಾಗಿ ಕಲಾವಿದರಿಗೆ ಇದರಿಂದ ಸಂತೋಷವಾಗಿತ್ತು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಹ್ವಾನಿತ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕಮವನ್ನು ಕೇಂದ್ರ ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ಉದ್ಘಾಟಿದರು. ರಾಜ್ಯ ಸರಕಾರದ ಪ್ರತಿನಿಧಿಯಾಗಿ ವೈದ್ಯ ಶಿಕ್ಷಣ ಸಚಿವ ರಾಮಚಂದ್ರ ಭಾಗವಹಿಸಿದ್ದರು.

ಬಹಳಷ್ಟು ಸರಕಾರಿ ಕಾರ್ಯಕ್ರಮಗಳಂತೆ ಇದೂ ಕೂಡ ಕೆಲವು ಅವ್ಯವಸ್ಥೆಗಳ ನಡುವೆ ಸಾಂಗವಾಗಿ ಮುಗಿದು ಹೋಗುತ್ತಿತ್ತು. ಆದರೆ ಹಾಗಾಗಲಿಲ್ಲ. ಅದಕ್ಕೆ ಕಾರಣವಾದದ್ದು ರಾಮಚಂದ್ರ ಗೌಡರ ಭಾಷಣ.
ಪೇಪರುಗಳಲ್ಲಿ ವರದಿಯಾದಂತೆ ಅವರ ಭಾಷಣದ ವೈಖರಿ ಇದು;

”ಮಾಡರ್ನ್ ಆರ್ಟ್ ಹೆಸರಿನಲ್ಲಿ ಸ್ವಯಂ ಘೋಶಿತ ಹುಸಿ ಕಲಾವಿದರು ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ವಿರೂಪಗೊಳಿಸುತ್ತಿದ್ದಾರೆ. ಚಿತ್ರಕಲೆ ಹೆಸರಿನಲ್ಲಿ ಸಂಸ್ಕೃತಿ ಮೇಲೆ ನಡೆಯುತ್ತಿರುವ ಈ ರೀತಿಯ ಹಲ್ಲೆಯನ್ನು ಸಹಿಸಲು ಸಾಧ್ಯವಿಲ್ಲ”.
ಪ್ರೇಕ್ಷಕರಿಂದ ಇದಕ್ಕೆ ಪ್ರತಿಕ್ರಿಯೆ ಬರಲಿಲ್ಲ. ಪ್ರತಿಭಟನೆ ವ್ಯಕ್ತವಾದದ್ದು, ಈ ಕಾರ್ಯಕ್ರಮವನ್ನು ಮೌನಪ್ರತಿಭಟನೆಯ ಮೂಲಕವೇ ವಿರೋಧಿಸಲೆಂದೇ ಬಂದು ಸಭಾಂಗಣದ ಒಂದು ಬದಿಯಲ್ಲಿ ನಿಂತ ಕಲಾವಿದರಿಂದ.
ನಮ್ಮ ನಾಡಿನ ಪ್ರಮುಖ ಮಾಡರ್ನ್ ಆರ್ಟಿಸ್ಟ್ ಗಳಲ್ಲಿ ಒಬ್ಬರಾದ ಎಂಎಸ್ ಮೂರ್ತಿ ಇವರೆಲ್ಲರಿಗೆ ಧ್ವನಿಯಾದರು. ಅವರು ಗೌಡರಿಗೆ ಹೇಳಿದರು” ಆಧುನಿಕ ಕಲೆಯ ಬಗ್ಗೆ ನಿಮಗೆ ಏನೂ ಗೊತ್ತಿಲ್ಲ. ಬಾಯಿಗೆ ಬಂದಂತೆ ಮಾತಾಡಬೇಡಿ”
”ಅನ್ನಿಸಿದ್ದನ್ನು ಹೇಳುವ ಆಧಿಕಾರ ನನಗಿದೆ. ನೀವ್ಯಾರು ಕೇಳಕ್ಕೆ? ಥ್ರೋ ಹಿಮ್ ಔಟ್” ಸಚಿವರು ಆಜ್ನೆ ಕೊಟ್ಟೇಬಿಟ್ಟರು. ಪೋಲಿಸರು ಅದನ್ನು ಪರಿಪಾಲಿಸಿದರು. ಮೂರ್ತಿಯವರನ್ನು ಪೋಲಿಸರು ಹೊರಗೆ ಕರೆದುಕೊಂಡು ಹೋಗುತ್ತಿರುವುದು ದೃಶ್ಯಮಾದ್ಯಮದಾಲ್ಲೂ ಪ್ರಸಾರವಾಯ್ತು.

ವೇದಿಕೆಯಲ್ಲಿದ್ದ ಅಂಬಿಕಾಸೋನಿ, ಕಲಾವಿದರಿಗೆ ಅವಮಾನ ಮಾಡಬೇಡಿ ಅವರನ್ನು ಹೊರಹಾಕಬೇಡಿ. ಇದು ಕೇಂದ್ರ ಸರಕಾರದ ಕಾರ್ಯಕ್ರಮ. ತಾನು ಕೇಂದ್ರ ಸರಕಾರವನ್ನು ಪ್ರತಿನಿಧಿಸುತ್ತಿದ್ದೇನೆ. ವೈದ್ಯ ಶಿಕ್ಷಣ ಸಚಿವರು ರಾಜ್ಯ ಸರಕಾರವನ್ನು ಪ್ರತಿನಿಧಿಸುತ್ತಿದ್ದಾರೆ, ಎಂದುಬಿಟ್ಟರು. ಅವರ ಮಾತುಗಳು ಗಾಳಿಯಲ್ಲಿ ತೂರಿಹೋದುವು.

ಪೋಲಿಸರು ಸಚಿವರ ಆಜ್ನೆ ಪಾಲಿಸುವುದರಲ್ಲಿ ನಿರತರಾದರು. ಕಲಾವಿದರಿಗೆ ಅವಮಾನ ಆಗೇ ಹೋಯ್ತು.

ಕಲಾವಿದರ ಪ್ರತಿಭಟನೆಗೆ ಕಾರಣವೇನಿತ್ತು?

ತಮಿಳುನಾಡಿನ ಪಾಲಾಗುತ್ತಿದ್ದ ’ಮಾಡರ್ನ್ ಆರ್ಟ್ ಗ್ಯಾಲರಿ’ಯನ್ನು ಬಹು ಪ್ರಯಾಸದಿಂದ ಕರ್ನಾಟಕ್ಕಕ್ಕೆ ತರಲಾಗಿತ್ತು. ಕಲಾವಿದರಿಗದು ಹೆಮ್ಮೆಯ ವಿಷಯ. ನಮ್ಮ ರಾಜ್ಯ ಸರಕಾರ ಗ್ಯಾಲರಿಗಾಗಿ ಪ್ರತಿ ವರ್ಷ ಸುಮಾರು ೩೦ ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತದೆ.
ನಮ್ಮ ದುಡ್ಡು, ನಮ್ಮ ನೆಲ ಅಂದ ಮೇಲೆ ಕನ್ನಡಿಗರಿಗೂ ಅದರಲ್ಲಿ ಸೂಕ್ತ ಪ್ರಾತಿನಿದ್ಯ ಸಿಗಬೇಕೆಂದು ಬಯಸುವುದು ನ್ಯಾಯ ತಾನೆ? ಅದು ಸಿಕ್ಕಿಲ್ಲವೆಂದು ಎಮ್ ಎಸ್ ಮೂರ್ತಿ ಪ್ರತಿಭಟನೆ ಮಾಡಿದ್ದಾರೆ.
ಗ್ಯಾಲರಿಯಲ್ಲಿ ಸುಮಾರು ೫೦೦ ಕಲಾವಿದರ ಚಿತ್ರಗಳಿವೆ.ಅದರಲ್ಲಿ ಕರ್ನಾಟಕದ ಕಲಾವಿದರು ಬೆರಳೆಣಿಕೆಯಷ್ಟು ಮಾತ್ರ. ಅದಲ್ಲದೆ ಮುರ್ತಿಯವರೂ ಸೇರಿದಂತೆ ಕರ್ನಾಟಕದ ಅನೇಕ ಕಲಾವಿದರಿಗೆ ಸಮಾರಂಭಕ್ಕೆ ಅಹ್ವಾನ ನೀಡಲಿಲ್ಲವೆಂಬ ಸಕಾರಣವಾದ ಸಿಟ್ಟು.

ರಾಜಕೀಯ ವೇದಿಕೆಗಳಲ್ಲಿ ಹೇಗೆ ಮಾತಾಡಿದರೂ ನಡೆಯುತ್ತದೆ. ಆದರೆ ಸಾಹಿತ್ಯ, ಸಂಗೀತ, ಚಿತ್ರಕಲೆ ಮುಂತಾದ ಲಲಿತ ಕಲೆಗಳ ಬಗ್ಗೆ ಮಾತಾಡುವಾಗ ಎಚ್ಚರವಾಗಿರಬೇಕಾಗುತ್ತದೆ. ಪ್ರೇಕ್ಷಕರಲ್ಲಿ ಪ್ರಾಜ್ನರೂ, ಸೂಕ್ಷಮತಿಗಳೂ ಇರುತ್ತಾರೆ. ಒಂದೋ ಇಂಥ ಸಮಾರಂಭಗಳಿಗೆ ಪೂರ್ವ ಸಿದ್ದತೆಯೊಂದಿಗೆ ಬರಬೇಕು. ಇಲ್ಲವಾದರೆ ತನ್ನ ಮಿತಿಯನ್ನು ಅರಿತುಕೊಂಡು ಶುಭ ಹಾರೈಸಿ, ಸರಕಾರದ ಸಹಕಾರವನ್ನು ಪ್ರಕಟಿಸಿ ,ಬಾಯಿ ಮುಚ್ಚಿ ಕಿವಿ ತೆರೆದು ಕುಳಿತುಕೊಳ್ಳಬೇಕು.

5 comments:

sunaath said...

ಇದು ತುಂಬಾ ಅವಮಾನದ ವಿಷಯ. ಸಚಿವರು ಹದ್ದು ಮೀರಿ ವರ್ತಿಸಿದ್ದಾರೆ. ಪ್ರೇಕ್ಷಕರು ಹಾಗೂ ಕಲಾವಿದರು ಸಭಾತ್ಯಾಗ ಮಾಡಿದ್ದರೆ, ಸಚಿವರಿಗೆ ಬುದ್ಧಿ ಬರುತ್ತಿತ್ತೇನೊ?

marike said...

ರಾಜಕಾರಣಿಗಳಿ೦ದ ಜವಾಬ್ದಾರಿಯನ್ನಾಗಲೀ, ಬಧ್ಧತೆಯಾಗಲೀ ಬಹುಶಃ ಯಾರೂ ನಿರೀಕ್ಷಿಲುವುದಿಲ್ಲ. ಅದಕ್ಕೆ ತಕ್ಕ೦ತೆ ಮಾನ್ಯ ಮ೦ತ್ರಿಗಳು ನಡೆದುಕೊ೦ಡಿದ್ದಾರೆ, ಕೇ೦ದ್ರಸರಕಾರದ ಧೋರಣೆ, ಅದು ಕೇವಲ ಆಡಳಿತಾತ್ಮಕ ಧೋರಣೆ, ಪ್ರತಿಭಟಿಸಲು ಮೌನವಾಗಿದ್ದ ಕಲಾವಿದರು
ರಾಜ್ಯಸಚಿವರ ಧೋರಣೆ ಪ್ರತಿಭಟಿಸಲು ಮಾತಿಗೆ ಶರಣಾದದ್ದು, ಅದೂ ’ಆಧುನಿಕ ಕಲೆಯ ಬಗ್ಗೆ ನಿಮಗೇನೂ ತಿಳಿದಿಲ್ಲ’ ಎ೦ಬ ಧಾಟಿಯಲ್ಲಿ ಮಾತಾಡಿದುದೂ ಪರಿಸ್ಥಿತಿ ಅಷ್ಟು ಹದಗೆಡುವ೦ತೆ ಮಾಡಿತು. ಇದನ್ನೇ ಸ್ವಲ್ಪ ನಾಜೂಕಾಗಿ ಮಾಡಬಹುದಿತ್ತೇನೋ? ಪರಿಣಾಮವಾಗಿ ಕೇ೦ದ್ರದ ವಿರುಧ್ಧದ ಪ್ರತಿಭಟನೆ ಕಾವು ಕಳೆದುಕೊ೦ಡಿತು, ನಷ್ಟ ಕಲಾವಿದರಿಗೆ, ಮತ್ತು ರಾಜ್ಯದ ಜನತೆಗೆ. ರಾಜಕಾರಣಿಗಳ೦ತೆ, ಕಲಾವಿದರಿ೦ದಲೂ ಅವರ ಕ್ಷೇತ್ರ ಹೊರತಾಗಿ ಜನತೆ ಯಾವುದೇ ಬಧ್ಧತೆ ನಿರೀಕ್ಷಿಸಬಾರದೇ ? ನೋವಾಗುತ್ತದೆ. ಜಿ೦ಕೆ ಸುಬ್ಬಣ್ಣ, ಪುತ್ತೂರು.

shivu said...

kattuvudu matra samskrutik vektigalu....

keduvudeniddaru ......

rajakaranigalu......shivu.v.hugar

m.s.murthy bangalore said...

jinke subbanna avara pratikriyege reply- modern art- kuritante namma samaajadalli arivu moodisabekaddu namma kalavidara javaabdari,adu nanna arivinante kaleda 30 varshagalinda samarpakavagi agilla. inthaha sandarbhadalli.sachivara maathu janaralli tappu grahikege karanavagabahudu.haagagi alliye nanna abhiprayada reply moolaka avara apprabuddha matu kinchith tadedanthayitu. maduvege bandavaru,vadhu/vara rannu ashervadhisi naalku olleya maatanadi hoogabeke horatu avara charityrada bagge ellara munde matadi avamaana maduvudu athithi gala lakshanavalla.m.s.murthy BHOOMI-

Anonymous said...

ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

ಶುಭವಾಗಲಿ,
- ಶಮ, ನಂದಿಬೆಟ್ಟ