Thursday, May 14, 2009

ಮಳೆಯೆಂದರೆ ಬರಿ ಮಳೆಯಲ್ಲ....

ಮೊನ್ನೆ ಬೆಂಗಳೂರಿಗೆ ಬಿರುಸಾದ ಮಳೆ ಬಂತು. ಈ ಮಳೆ ಬರುವುದಕ್ಕೆ ಮೊದಲು ಬಿಸಿಲ ಬೇಗೆ ಸಹಿಸಲಸಾಧ್ಯವಾಗಿತ್ತು. ಒಂದು ರೀತಿಯಲ್ಲಿ ಈ ದಗೆ ಮಳೆ ಬರುವ ಮುನ್ಸೂಚನೆಯೇ. ಟೇರೆಸಿನ ಮೇಲೆ ಹಾಕಿದ ಬಟ್ಟೆ ಒಣಗಿದೆಯೇ ಎಂದು ನೋಡಲು ಹೋದ ನನಗೆ ಆಕಾಶದಲ್ಲಿ ಕಪ್ಪು ಬಿಳಿ ಮೋಡಗಳು ದಟ್ಟೈಸುತ್ತಿರುವುದು ಕಾಣಿಸಿತು. ಜೊತೆಗೆ ಜೋರಾಗಿ ಗಾಳಿ ಬೀಸತೊಡಗಿತು. ಇಂದು ಮಳೆ ಬರಬಹುದು ಎಂದು ಅಂದುಕೊಳ್ಳುತ್ತಿರುವಾಗಲೇ ಒತ್ತೊತ್ತಾಗಿ ಕಪ್ಪು ಮೋಡಗಳು ಮೇಳೈಸುತ್ತಾ ಆಕಾಶವೆಲ್ಲ ಕಪ್ಪಾಗತೊಡಗಿತು. ದಪ್ಪನೆಯ ಹನಿಯೊಂದು ಕೈ ಮೇಲೆ ಬಿದ್ದೇಬಿಟ್ಟಿತು.

ನನಗೆ ಆತಂಕವಾಗತೊಡಗಿತು. ಜೋರಾಗಿ ಮಳೆ ಬಂದು ನಮ್ಮ ಮನೆಯ ಸೆಲ್ಲರ್ ನಲ್ಲಿ ನೀರು ತುಂಬಿಕೊಂಡರೆ? ಅಲ್ಲಿರುವ ಲಕ್ಷಾಂತರ ರೂಪಾಯಿ ಬೆಲೆಬಾಳುವ ಉಪಕರಣಗಳು ನೀರಿನಲ್ಲಿ ಮುಳುಗಿಬಿಟ್ಟರೆ?.... ಮಳೆ ಜೋರಾಗತೊಡಗಿತು. ಜೊತೆಗೆ ದೊಡ್ಡ ದೊಡ್ಡ ಆಲಿಕಲ್ಲುಗಳೂ ಬಿಳತೊಡಗಿತು. ನನ್ನ ಇಬ್ಬರು ಮಕ್ಕಳು ಬಾಗಿಲು ತೆರೆದು ಆಲಿಕಲ್ಲುಗಳನ್ನು ಹೆಕ್ಕಲು ಓಡಿದರು! ’ಐಸ್ ತುಂಡುಗಳು ಎಷ್ಟೊಂದು ಬಿಳ್ತಿವೆ’ ಎನ್ನುತ್ತಾ ಅವುಗಳನ್ನು ಹೆಕ್ಕುತ್ತಲೇ ಕೈಯಿಂದ ಕೈಗೆ ಬದಲಾಯಿಸುತ್ತಿದ್ದರು. ನೆಗಡಿಯಾದಿತೆಂಬ ಆತಂಕದಲ್ಲಿ ನಾನವರನ್ನು ’ಒಳಕ್ಕೆ ಬನ್ನಿ’ ಎಂದು ಗದರಿದೆ. ಅದವರ ಗಮನಕ್ಕೇ ಬರಲಿಲ್ಲ.

ತಲೆ ಬಾಗಿಲಿನಲ್ಲಿ ನಿಂತು ಹೊರಗೆ ಸುರಿಯುತ್ತಿದ್ದ ಮಳೆಯನ್ನೇ ದಿಟ್ಟಿಸತೊಡಗಿದೆ.

ಹಿಂದೆಲ್ಲಾ ಇಂತಹ ಮಳೆ ಬಂದಾಗ ಅಂಗೈ ಮುಂದೆ ಚಾಚಿ ಮಳೆನೀರನ್ನು ಬೊಗಸೆಯಲ್ಲಿ ಹಿಡಿಯುತ್ತಿದ್ದೆವು. ಮುಖಕ್ಕೆ ಎರಚಿಕೊಳ್ಳುತ್ತಿದ್ದೆವು. ಜಡಿ ಮಳೆ ಬಂದರೆ ಕಾಗದದ ದೋಣಿ ಮಾಡಿ ನೀರಲ್ಲಿ ತೇಲಿಬಿಡುತ್ತಿದ್ದೆವು.
ಮೊದಲ ಮಳೆ ಇಳೆಗೆ ಬಿದ್ದಾಗ ಮೂಗಿಗೆ ಅಡರುವ ಮಣ್ಣಿನ ಸುವಾಸನೆ ಎಷ್ಟೊಂದು ಆಪ್ಯಾಯಮಾನ. ಮೈಯೆಲ್ಲ ಪುಳಕ. ಮನಸ್ಸು ಆಹ್ಲಾದಕರ. ಆದರೆ ಮಳೆಯನ್ನು ಸಂಭ್ರಮದಿಂದ ಸ್ವಾಗತಿಸುವ ಬಾಲ್ಯದಲ್ಲಿ ನಾನೀಗ ನಿಂತಿಲ್ಲ.
ನಮಗಂದು ಮಳೆಯೆಂದರೆ ನೀರಾಗಿತ್ತು. ನೀರು ಮಕ್ಕಳಿಗೆ ಆಟದ ವಸ್ತು. ಅದನ್ನು ಹೇಗೆ ಬೇಕಾದರೂ ಉಪಯೋಗಿಸಬಹುದಿತ್ತು. ಕಾಲಲ್ಲಿ ಚೆಲ್ಲಾಟ ಆಡಬಹುದು. ಮೈಮೇಲೆ ಸುರಿದುಕೊಂಡು ತಣ್ಣನೆಯ ಅನುಭವ ಪಡೆಯಬಹುದು. ಪಾತ್ರೆಯಿಂದ ಪಾತ್ರೆಗೆ ಸುರಿಯುತ್ತಾ ಅದರ ಹರಿಯುವಿಕೆಯ ಬಗ್ಗೆ ಅಚ್ಚರಿಪಡಬಹುದು.
ಮಕ್ಕಳಿಗೆ ನೀರು ಮತ್ತು ಮಣ್ಣು ಮಹಾನ್ ಅಚ್ಚರಿಯ ಸಂಗತಿಗಳು. ಬಹುಶಃ ಅಮ್ಮನನ್ನು ಬಿಟ್ಟರೆ ಇವೆರಡೇ ಅವರ ಬಾಲ್ಯದ ಒಡನಾಡಿಗಳು. ಇವೆರಡರ ಜೊತೆ ಆಟವಾಡುತ್ತಲೇ ಅವು ತಮ್ಮ ಸೃಜನಶೀಲತೆಯನ್ನು ಕಂಡುಕೊಳ್ಳುತ್ತವೆ.

ಮಳೆಗಾಲದ ರುದ್ರರಮಣೀಯತೆ ಅನುಭವಿಸಲು ಮಲೆನಾಡಿಗೆ ಇಲ್ಲವೇ ಕರಾವಳಿಗೆ ಬರಬೇಕು. ’ನನ್ನ ಆಗಮನವಾಗುತ್ತಿದೆ’ ಎಂಬುದನ್ನು ಮಳೆರಾಯ ಸೂಚಿಸುವ ವಿಧಾನವೇ ಗಂಭೀರವಾದುದು; ತಿಂಗಳುಗಳ ಮೊದಲೇ ಬಿಸಿಲ ಧಗೆ ಆರಂಭವಾಗುತ್ತದೆ. ಜನ-ಜಾನುವಾರುಗಳೆಲ್ಲ ನೀರು ನೆರಳಿಗಾಗಿ ಚಡಪಡಿಸುತ್ತವೆ. ಇಳೆ ಸೊರಗಿ ನೀರಿಗಾಗಿ ಬಾಯ್ಬಿಟ್ಟು ಕಾತರಿಸುತ್ತದೆ. ಅಂತಹ ಸಮಯದಲ್ಲೇ ಬಿರುಸಾದ ಗಾಳಿ, ಗುಡುಗಿನ ಆರ್ಭಟ,ಸಿಡಿಲಿನ ಮಿಂಚು ಕಾಣಿಸಿಕೊಳ್ಳುತ್ತದೆ.
ಸಿಡಿಲು ಮಿಂಚಿತೆಂದರೆ ಮಳೆ ಗ್ಯಾರಂಟಿ. ಗುಡುಗು ಗುಡುಗಿ ತುಂತುರು ಮಳೆ ಬಂತೆಂದರೆ ನಮಗೆಲ್ಲ ಖುಷಿ. ನಾವು ನಮ್ಮ ಮನೆಯ ಹಿಂದಿನ ತೆಂಗಿನ ತೋಟಕ್ಕೆ ಓಡುತ್ತಿದ್ದೆವು. ಅಲ್ಲಿಯ ಏರುತಗ್ಗುಗಳಲೆಲ್ಲ ಬೆಳ್ಳನೆಯ ಹರಳು ಅಣಬೆಗಳು ಭೂಮಿಯೊಡೆದು ಅರಳಿ ನಗುತ್ತಿದ್ದವು. ಕೆಲವೊಮ್ಮೆ ಎರಡು ಬೊಗಸೆಯಷ್ಟು ದೊಡ್ಡದಾದ ಹೆಗ್ಗಣಬೆಗಳು ಅರಳಿ ನಿಂತಿರುತ್ತಿದ್ದವು.
ಹೆಡಿಗೆ ತುಂಬಾ ಅಣಬೆಗಳನ್ನು ಕಿತ್ತು ತಂದು ಅಮ್ಮನ ಕೈಗೆ ಕೊಡುತ್ತಿದ್ದೆವು.
ಅಣಬೆಗೆ ಅದರದ್ದೇ ಆದ ವಿಶಿಷ್ಟ ರುಚಿಯಿದೆ. ಅದಕ್ಕೆ ಕನಿಷ್ಟ ಮಸಾಲೆ ಹಾಕಿದರೂ ಅತ್ಯಂತ ರುಚಿಕರವಾದ ಖಾದ್ಯವಾಗಿಬಿಡುತ್ತದೆ. ವರ್ಷವಿಡೀ ನಮಗೆ ಅಣಬೆಗಳು ನೈಸರ್ಗಿಕವಾಗಿ ಸಿಗುವುದಿಲ್ಲ. ಆದರೆ ಮಳೆಗಾಲದ ಹೊರತಾಗಿಯೂ ಅಣಬೆ ದೊರೆಯುವಂತಾಗಲು ರೈತಾಪಿ ಜನರು ಉಪಾಯ ಹುಡುಕಿಕೊಂಡಿದ್ದಾರೆ. ಮನೆಯಂಗಳದ ತುದಿಯಲ್ಲಿ ಭತ್ತದ ಹುಲ್ಲಿನ ಬಣವೆಯೊಂದನ್ನು ಮಾಡಿ ಅದನ್ನು ಹಾಗೆಯೇ ಬಿಡುವುದು. ಈಹುಲ್ಲು ಒಳಗಿಂದೊಳಗೆ ಬಿಸಿಯಾಗಿ ಶಾಖ ಉತ್ಪತ್ತಿ ಮಾಡುತ್ತದೆ. ಈ ಬಣವೆ ಮೇಲೆ ಇಬ್ಬನಿ ಬಿದ್ದಾಗ ಅಣಬೆಗಳು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿಬಿಡುತ್ತವೆ. ಪ್ರತಿದಿನ ಬೆಳಿಗ್ಗೆ ಹೂ ಕೊಯ್ಯುವಂತೆ ಹೆಡಿಗೆ ತುಂಬ ಅಣಬೆಗಳನ್ನು ನಾವು ಬಿಡಿಸುತ್ತಿದ್ದೆವು.

ಮಳೆಗಾಲವೆಂದರೆ ಮಾವು, ಹಲಸು, ಗೇರು, ಅಣಬೆಗಳ ಸಮೃದ್ಧಿಯ ಕಾಲ. ಮಳೆ ನಿಂತೊಡನೆ ನಮ್ಮ ಓಟ ಮಾವಿನ ಮರದ ಕೆಳಗೆ. ಮನೆಯಲ್ಲಿ ಮಾವಿನ ಹಣ್ಣಿನ ರಾಶಿಯೇ ಇದ್ದರೂ ಗಾಳಿ ಬೀಸಿ ಬಿದ್ದ ಹಣ್ಣುಗಳನ್ನು ನೆರೆಮನೆಯ ಮಕ್ಕಳೊಡನೆ ಜಗಳ ಕಾದು ಹೆಕ್ಕಿ ತರುವುದರಲ್ಲೇ ಒಂದುರೀತಿಯ ಆನಂದ. ಅದರಲ್ಲೂ ಕಾಡುಮಾವಿನ ಹಣ್ಣುಗಳೆಂದರೆ ಪಂಚಪ್ರಾಣ. ಬಿರುಸಾದ ಗಾಳಿಗೆ ಗೆಲ್ಲು ಅಲುಗಿ ಮಾಗಿದ ಹಣ್ಣು ಪಟಪಟನೆ ಉದುರಿದಾಗ ಹೆಕ್ಕುವುದಕ್ಕೆ ಪೈಪೋಟಿ. ಕಾಡು ಮಾವಿನಹಣ್ಣುಗಳೆಲ್ಲವೂ ಸಿಹಿ ಇರುವುದಿಲ್ಲ. ಸಿಹಿ ಮಾವಿನ ಹಣ್ಣುಗಳು ನಮ್ಮ ಬಾಯಿಗೆ. ಉಳಿದವು ಅಡುಗೆ ಮನೆಗೆ. ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ ಹುಳಿಮಾವಿನ ಕಾಯಿಗಳನ್ನು ಮಿಡಿಯಲ್ಲಿಯೇ ಕೊಯ್ದು ಉಪ್ಪಿನಕಾಯಿ ಹಾಕಿ ವರ್ಷಗಟ್ಟಲೆ ಉಪಯೊಗಿಸುತ್ತಾರೆ. ಹಾಗು ಬಂಧು-ಬಾಂಧವರಿಗೆ ಹಂಚುತ್ತಾರೆ. ನಮ್ಮ ದೊಡ್ಡಮ್ಮ ಮಾವಿನ ಹಣ್ಣುಗಳ ರಸಕ್ಕೆ ಖಾರ ಹಾಕಿ ಬೇಯಿಸಿ ಬಿಸಿಲಲ್ಲಿ ಒಣಗಿಸಿ ’ಮಾಂಬಳ’ ತಯಾರಿಸುತ್ತಿದ್ದರು. ಅದು ವರ್ಷವಿಡೀ ಮಾವಿನಹಣ್ಣನ್ನು ಕಾಯ್ದಿರಿಸಿಕೊಳ್ಳುವ ಸಂಪ್ರಾದಾಯಿಕ ವಿಧಾನವಾಗಿತ್ತು. ಅದರ ರುಚಿ ಥೇಟ್ ಮಾರ್ಕೆಟ್ ನಲ್ಲಿ ಸಿಗುವ ’ನ್ಯಾಚುರಾ’ದಂತಿರುತಿತ್ತು.

ಮಳೆಗಾಲವೆಂದರೆ ಬಿತ್ತನೆಯ ಕಾಲ. ಭೂತಾಯಿ ಫಲವತಿಯಾಗಲು ಸಿದ್ಧಗೊಳ್ಳುವ ಕಾಲ. ರೈತಾಪಿವರ್ಗಕ್ಕೆ ಸಂಭ್ರಮದ ಕಾಲ. ಹಾಗಾಗಿ ನಮ್ಮ ಜನ ಮಳೆ ನಕ್ಷತ್ರಗಳನ್ನು ವಿಧವಿಧವಾಗಿ ಬಣ್ಣಿಸಿದ್ದಾರೆ. ಅರಿದ್ರಾ ಮಳೆ ಹೆಚ್ಚಾದರೆ ದಾರಿದ್ರ್ಯ ಬರುತ್ತದೆ. ಸ್ವಾತಿ ಮಳೆ ಬಂದರೆ ಭೂಮಿಯಲ್ಲಿ ಮುತ್ತು ಬೆಳೆಯುತ್ತದೆ. ಉತ್ತರೆ ಮಳೆ ಒತ್ತರೆ[ನಾಶ]ಮಾಡುತ್ತದೆ. ಪುಷ್ಯ ಮಳೆ ಹೆಣ ಎತ್ತುವುದಕ್ಕೂ ಬಿಡುವುದಿಲ್ಲ. ಇತ್ಯಾದಿ ನುಡಿಗಟ್ಟುಗಳು ಬಳಕೆಯಲ್ಲಿವೆ.

ಇಂತಹ ಮಳೆಗಾಲದಲ್ಲೇ ಶಾಲೆಗಳು ಆರಂಭಗೊಳ್ಳುತ್ತವೆ. ಮಕ್ಕಳಿಗೆ ಹೊಸ ಕೊಡೆ ಕೊಳ್ಳುವ ಸಂಭ್ರಮ. ಹಳೆ ಕೊಡೆ ಬೇಡ, ಹೊಸ ಕೊಡೆ ಬೇಕು ಎಂಬ ಹಠ. ಬಣ್ಣಗಳ ಕೊಡೆ, ಮಡಚುವ ಕೊಡೆ, ಬಟನ್ ಕೊಡೆ, ಪೋಸ್ಟ್ ಮ್ಯಾನ್ ಕೊಡೆ, ಅಜ್ಜನ ಕೊಡೆ, ಶ್ಯಾನುಭೋಗರ ಕೊಡೆ...ಎಷ್ಟೊಂದು ವೈವಿಧ್ಯತೆ!
ಕೃಷಿಕೂಲಿ ಕಾರ್ಮಿಕರಿಗೆ ತುಂತುರು ಮಳೆಗೆ ಬಾಳೆ ಎಲೆ ತಲೆಗೆ ಅಡ್ಡವಾದರೆ ಬಿರುಮಳೆಗೆ ಗೊರಬು, ಕಿಂಜೊಳು ಬೇಕು. ನೇಜಿ ನೆಡುವ ಕಾಲಕ್ಕೆ ಇವೇ ಅವರ ಮಳೆ ರಕ್ಷಾಕವಚಗಳು. ಇದನ್ನು ಹಾಕಿಕೊಂಡು ’ಹೊಳೆ ಎಷ್ಟು ತುಂಬಿದೆ ನೋಡಿಕೊಂಡು ಬರೋಣ’ ಎಂದು ಹೊರಡುವುದೇ ಒಂದು ಸಂಭ್ರಮ.

ಇದೆಲ್ಲಾ ಕರಾವಳಿ ಹಾಗು ಮಲೆನಾಡಿನಲ್ಲಿ ಹುಟ್ಟಿ ಬೆಳೆದವರ ಬಾಲ್ಯದ ಚಿತ್ರಣ. ಗದ್ದೆ-ತೋಟ, ನದಿ, ಆಕಾಶ, ದನ-ಕರು, ಅವರ ಬದುಕಿನ ಅವಿಭಾಜ್ಯ ಅಂಗಗಳಾಗಿಬಿಡುತ್ತವೆ.
ಕುಮಾರಧಾರೆಯನ್ನು ಸೇರುವ ಬಸವನಗುಡಿ ಹೊಳೆ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ನನ್ನ ಬಾಲ್ಯದಲ್ಲಿ ಅದಕ್ಕೆ ಸೇತುವೆ ಕಟ್ಟಿರಲಿಲ್ಲ. ಈ ದಡದಿಂದ ಆ ದಡಕ್ಕೆ ’ಚಿಮುಲು’ ಎನ್ನುವ ತೆಪ್ಪದ ರೀತಿಯ ಸಾದನ ಓಡಾಡುತಿತ್ತು. ಈ ಚಿಮುಲು ನನ್ನ ವಿಸ್ಮಯದ ವಸ್ತು. ಉದ್ದನೆಯ ಬಿದಿರುಗಳನ್ನು ಬಲವಾದ ಹಗ್ಗಗಳಿಂದ ಬಿಗಿದು ತೆಪ್ಪದ ರೀತಿ ಕಟ್ಟುವುದು; ದಟ್ಟ ಕಾಡಿನ ನಡುವೆಯಿಂದ ಹುಡುಕಿ ಸುಮಾರು ೬೦-೭೦ ಮೀಟರ್ ಉದ್ದದ ಬೆತ್ತ ತರುತ್ತಾರೆ. ಇದನ್ನು ಆಚೆ-ಈಚೆ ದಡಗಳಲ್ಲಿರುವ ದೊಡ್ಡದಾದ ಎರಡು ಮರಗಳಿಗೆ ಬಿಗಿದು ಕಟ್ಟುತ್ತಾರೆ. ಚಿಮುಲು ಮತ್ತು ಬೆತ್ತವನ್ನು ಜೋಡಿಸುವುದು ಎರಡು ತೂತುಗಳುಳ್ಳ ಒಂದು ಮರದ ಹಲಗೆ. ಒಂದು ತೂತು ಬೆತ್ತವನ್ನು ಬಂದಿಸಿದ್ದರೆ ಇನ್ನೊಂದು ತೂತು ಬಿದಿರಿನ ತೆಪ್ಪವನ್ನು ಹಿಡಿದಿಟ್ಟುಕೊಂಡಿರುತಿತ್ತು. ಬೆತ್ತದ ತೂತಿನ ಕಡೆಗಿನ ಹಲಗೆಯನ್ನು ಜಾರಿಸುತ್ತಾ ಹೋದ ಹಾಗೆ ಚಿಮುಲು ದಡದತ್ತ ಸಾಗುತ್ತಿತ್ತು.

ಈ ತೆಪ್ಪದ ಮೇಲೆ ಕುಳಿತೇ ನಮ್ಮೂರಿನ ಜನ ಹೊರಜಗತ್ತಿನ ಸಂಪರ್ಕ ಪಡೆಯುತ್ತಿದ್ದರು. ತುಂಬಿದ ಹೊಳೆಯಲ್ಲಿ ಈ ತೆಪ್ಪದ ಮೇಲೆ ಕುಳಿತು ಹೊಳೆ ದಾಟುವುದಕ್ಕೆ ಎಂಟೆದೆ ಬೇಕು. ಚಿಮುಲು ನಡೆಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅದಕ್ಕೆ ಪರಿಣಿತಿ ಬೇಕು. ನಮ್ಮ ಕುಟುಂಭದಲ್ಲಿ ಅಂತಹ ಒಂದಿಬ್ಬರು ಯುವಕರಿದ್ದರು. ಪೇಟೆಗೆ ಹೋದ ಜನ ಆ ದಡಕ್ಕೆ ಬಂದಾಗ ಅಲ್ಲಿ ಚಿಮುಲು ಇಲ್ಲದಿದ್ದರೆ ಜೋರಾಗಿ ಕೂಗು ಹಾಕುತ್ತಿದ್ದರು. ಆಗ ಈ ದಡದಿಂದ ಯಾರಾದರು ಚಿಮುಲು ತಗೊಂಡು ಹೋಗುತ್ತಿದ್ದರು. ಚಿಮುಲು ಅಲ್ಲೆ ಇದ್ದರೂ ಅಲ್ಲಿದ್ದವರಿಗೆ ನಡೆಸಲು ಬಾರದಿದ್ದರೂ ಈಕಡೆಯಿಂದ ಈಜಿ ಹೋಗಿ ಜನರನ್ನು ಕರೆ ತರುತ್ತಿದ್ದರು. ಇದೊಂಥರ ಸೇವೆ. ಇದಕ್ಕೆ ಸಂಭಾವನೆ ಇಲ್ಲ.

ಈಗ ಚಿಮುಲು ಇಲ್ಲ. ಈಗಿನ ಜನರಿಗೆ ಚಿಮುಲು ಎಂದರೇನು ಗೊತ್ತಿಲ್ಲ. ಸೇತುವೆ ಇದೆ. ಜನ ಸೇತುವೆ ಮೇಲೆ ನಿಂತು ಘಟ್ಟದಿಂದ ದುಮ್ಮಿಕ್ಕಿ ಬರುವ ಕೆಂಪು ನೀರನ್ನು, ಅದರ ಜೊತೆ ತೇಲಿ ಬರುವ ಮರದ ದಿಮ್ಮಿಗಳನ್ನು ಅಚ್ಚರಿಯಿಂದ ನೋಡುತ್ತಾರೆ. ಅಪರೂಪಕ್ಕೊಮ್ಮೆ ತೇಲಿ ಬರುವ ತೆಂಗಿನಕಾಯಿಗಳನ್ನು ಕತ್ತಿಯಿಂದ ಕುಟ್ಟಿ ಎತ್ತಿಕೊಳ್ಳಲು ಪ್ರಯತ್ನಿಸುತ್ತಾರೆ.

ಹೊಳೆ ಬದಿಯಲ್ಲಿ ಹುಟ್ಟಿ ಬೆಳೆದ ನನ್ನಂತವರಿಗೆ ಅಥವಾ ಮೀನು ಪ್ರಿಯರಿಗೆ ಗಾಳ ಹಾಕುವುದು ಮತ್ತು ಬಲೆ ಬೀಸಿ ಮೀನು ಹಿಡಿಯುವುದು ತುಂಬಾ ಪ್ರಿಯ ಹವ್ಯಾಸ. ಹೊಳೆಯಲ್ಲಿ ಕೆಂಪುಮಿಶ್ರಿತ ನೀರು ಬಂತೆಂದರೆ ಕೊಟ್ಟಿಗೆಯ ಮಾಡಿನಡಿಯಲ್ಲಿ ಸಿಕ್ಕಿಸಿಟ್ಟ ಗಾಳಗಳನ್ನು ನಾವು ಹೊರತೆಗೆಯುತ್ತಿದ್ದೆವು. ಮೀನಿಗೆ ಆಮಿಷ ಒಡ್ಡಲು ಪ್ರಾಣಿಯೊಂದರ ಬಲಿ ಬೇಕಲ್ಲಾ..! ಅದಕ್ಕೆ ನಮಗೆ ಸಿಗುತ್ತಿದ್ದುದು ಎರೆಹುಳು. ಎರೆಹುಳು ಹರಿದಾಡುವುದು ಕಂಡರೆ ನಂಗೊಂಥರಾ ಅಸಹ್ಯ. ನಮ್ಮ ಜಮೀನು ಫಲವತ್ತಾದ ಮಣ್ಣನ್ನು ಹೊಂದಿತ್ತು. ಒಂಚೂರು ಮಣ್ಣು ಕೆದಕಿದರೂ ರಾಶಿ ರಾಶಿ ಎರೆಹುಳು ಸಿಗುತ್ತಿದ್ದವು. ನಾನು ಇಟ್ಟಣಿಗೆಯ ಎಲೆಗಳ ನಡುವೆ ಎರೆಹುಳುವನ್ನು ಗಟ್ಟಿಯಾಗಿ ಹಿಡಿದು, ಅದರ ತಲೆ ಮತ್ತು ಬಾಲ[!]ವನ್ನು ಕಲ್ಲಿನ ಸಹಾಯದಿಂದ ಕತ್ತರಿಸಿ ಗಾಳದ ಕೊಕ್ಕೆಗೆ ಸಿಕ್ಕಿಸಿಸುತ್ತಿದೆ. ಈಗ ಎರೆಹುಳುವೆಂಬ ಆ ರೈತಮಿತ್ರನನ್ನು ನೆನೆಸಿದರೆ’ಅಯ್ಯೋ ಪಾಪ’ ಎನಿಸುತ್ತದೆ.

ಗಾಳ ಹಾಕಿ ಮೀನು ಹಿಡಿಯುವುದಕ್ಕೆ ಏಕಾಗ್ರತೆ ಬೇಕು.ಅದು ಒಂದು ರೀತಿಯ ಧ್ಯಾನಸ್ಥ ಸ್ಥಿತಿ. ಸೊಳ್ಳೆ ಕಚ್ಚಿತೆಂದು ಸ್ವಲ್ಪ ಅಲ್ಲಾಡಿದರೂ ಮೀನಿಗೆ ಸಂಶಯ ಬಂದು ಅದು ಗಾಳದಲ್ಲಿ ಸಿಕ್ಕಿಸಿದ ಎರೆಹುಳುವಿಗೆ ಬಾಯಿ ಹಾಕದಿರಬಹುದು. ಸಿಕ್ಕಿದ ಮೀನನ್ನು ಅದರ ಬಾಯಿಯ ಮೂಲಕ ಕೋಲಿಗೆ ಪೋಣಿಸಿಕೊಂಡು ಬರುವುದೇ ಖುಷಿ. ನಮ್ಮ ಅಪ್ಪ ಕೈ ಜಗ್ಗುವಷ್ಟು ಮೀನು ಹಿಡಿದುಕೊಂಡು ಬರುತ್ತಿದ್ದುದನ್ನು ನಾನು ಬಾಲ್ಯದಲ್ಲಿ ಕಂಡಿದ್ದೇನೆ.

ಬಲೆ ಹಾಕಿದರೆ ಮೀನು ಸಿಕ್ಕಿಯೇ ಸಿಕ್ಕುತ್ತದೆ. ಅದರಲ್ಲಿ ಅಂತಹ ಸ್ವಾರಸ್ಯವೇನೂ ಇರುವುದಿಲ್ಲ. ನಮ್ಮ ಮನೆಯ ಎದುರಿನ ತೋಡಿನಲ್ಲಿ ಅಗಲವಾದ ಬೈರಾಸ್ ಅಥವಾ ತೆಳ್ಳನೆಯ ಬೆಡ್ ಶೀಟ್ ನ್ನು ಬಲೆಯಂತೆ ಉಪಯೋಗಿಸಿ ನನ್ನು ಮತ್ತು ನನ್ನ ತಂಗಿ ಮೀನು ಹಿಇಯುತ್ತಿದ್ದೆವು. ಒಮ್ಮೊಮ್ಮೆ ಒಂದು ಹೊತ್ತಿನ ಸಾರಿಗಾಗುವಷ್ಟು ಮೀನು ಸಿಗುತ್ತಿತ್ತು. ಏಡಿಗಳು ಬೇಕಾದಷ್ಟು ಸಿಗುತ್ತಿದ್ದವು.ಆದರೆ ನಮಗದರಲ್ಲಿ ಆಸಕ್ತಿಯಿಲ್ಲ. ಹಿಡಿದರೂ ಅದರ ಕೋಲುಕಾಲು ಮತ್ತು ಕೊಂಬಕಾಲನ್ನು ಮಾತ್ರ ಬೆಂಕಿಯಲ್ಲಿ ಸುಟ್ಟು ಅದರೊಳಗಿನ ಮಾಂಸವನ್ನು ತಿನ್ನುತ್ತಿದ್ದೆವು.

ಭೋರ್ಗೆರೆಯುವ ಮಳೆ ಕೆಲವೊಮ್ಮೆ ಹಳ್ಳಿಗಳ ನಡುವೆ ಸಂಪರ್ಕವನ್ನು ಕಡಿದುಬಿಡುತ್ತಿತ್ತು. ಯಾವುದೋ ಕಾರಣಕ್ಕಾಗಿ ಹೊರಗೆ ಹೋದವರು ಇದ್ದಲ್ಲಿಯೇ ಇರಬೇಕಾದ ಸ್ಥಿತಿ ಒದಗುತ್ತಿತ್ತು. ನನಗೂ ಹಲವು ಬಾರಿ ಹಾಗಾಗಿದ್ದುಂಟು. ಆಗೆಲ್ಲಾ ನೆಂಟರ ಮನೆಯಲ್ಲಿ ಯಾ ಪರಿಚಯಸ್ಥರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ. ಆದರೆ ಒಂದು ರಾತ್ರಿ ಜನವಸತಿ ಇಲ್ಲದ ಪ್ರದೇಶದಲ್ಲಿ ಇರಬೇಕಾದ ಸಂದರ್ಭ ಬಂದಿತ್ತು.

ಆಗ ನಾನು ಒಂಬತ್ತನೆಯ ತರಗತಿಯಲ್ಲಿ ಓದುತ್ತಿದ್ದೆ. ಬಾಳುಗೋಡು ಎಂಬ ಹಳ್ಳಿಯಿಂದ ಕುಕ್ಕೆಸುಬ್ರಹ್ಮಣ್ಯಕ್ಕೆ ಏಳು ಮೈಲು ದೂರ. ಸುತ್ತಮುತ್ತಲೆಲ್ಲೂ ಹೈಸ್ಕೂಲ್ ಇಲ್ಲದ ಕಾರಣ ಸುಬ್ರಹ್ಮಣ್ಯಕ್ಕೆ ಹೋಗುವುದು ಅನಿವಾರ್ಯವಾಗಿತ್ತು. ಪದಕ, ಕುಡೂಮುಂಡೂರು, ಕನ್ನಡಿ ಎಂಬ ಮೂರು ಹೋಳೆಗಳನ್ನು ದಾಟಿ ಕುಮಾರಧಾರಾ ನದಿ ದಡದಲ್ಲಿರುವ ಸುಬ್ರಹ್ಮಣ್ಯ ಹೈಸ್ಕೂಲ್ ಗೆ ಹೋಗಬೇಕಾಗಿತ್ತು.

ಬೆಳಿಗ್ಗೆ ಪ್ರದೇಶ ಸಮಾಚಾರ ಆರಂಭವಾಗುವಾಗ ಮನೆಯಂಗಳಕ್ಕೆ ಇಳಿದರೆ ಸುಬ್ರಹ್ಮಣ್ಯದ ರಥಬೀದಿಗೆ ಒಂಬತ್ತು ಮುಕ್ಕಾಲಿಗೆ ತಲುಪುತ್ತಿದ್ದೆವು. ನಾವು ಐದಾರು ಜನ ಗೆಳತಿಯರಿದ್ದೆವು. ಅವರವರ ಮನೆಯಿಂದ ಹೊರಟು ಮುಖ್ಯ ಕಾಲು ಹಾದಿ ಸೇರುವಾಗ ನಮ್ಮ ಮನೆಯ ಕಾಲುಹಾದಿಗೆ ಸೊಪ್ಪನ್ನು ಮುರಿದು ಇಡುತ್ತಿದ್ದೆವು. ಅದು ನಾವು ಮುಂದೆ ಹೋಗಿದ್ದೇವೆ ಎಂಬುದರ ಗುರುತು. ಹಾಗೆ ಮುಂದೆ ಹೋದವರೆಲ್ಲಾ ಅಜ್ಜಿಗುಡ್ಡೆ ಎಂಬ ಕಾಡಿನ ಪ್ರವೇಶ ಸ್ಥಳದಲ್ಲಿ ಒಟ್ಟು ಸೇರುತ್ತಿದ್ದೇವು. ಅನಂತರ ಗುಂಪಾಗಿ ಕಾಡಿನ ಹಾದಿಯಲ್ಲಿ ಮುನ್ನಡೆಯುತ್ತಿದ್ದೇವು. ಮಳೆಗಾಲದಲ್ಲಿ ನಮಗಿದ್ದ ದೊಡ್ಡ ಭಯವೆಂದರೆ ಆನೆಗಳದ್ದು.

ಒಂದು ದಿನ ನಾನು, ಲಲಿತಾ, ವಿಶಾಲಾಕ್ಷಿ ಸ್ಕೂಲ್ ಬಿಟ್ಟು ರಥಬೀದಿಯಲ್ಲಿರುವ ಬೆನ್ನನ ಅಂಗಡಿಯಿಂದ ನಾಲ್ಕಾಣೆಯ ಖಾರಕಡ್ಡಿಯನ್ನು ಕೊಂಡು ತಿನ್ನುತ್ತಾ ದೇವರಗದ್ದೆ ದಾಟಿ, ಕನ್ನಡಿ ಹೊಳೆಗೆ ಇಳಿದೆವು. ಅಂತಹ ಹರಿವು ಇಲ್ಲದ ಕಾರಣ ನಮ್ಮ ಮಾಮೂಲು ಜಾಗದಲ್ಲಿ ಪಡದ ಗೆಲ್ಲುಗಳನ್ನು ಹಿಡಿದುಕೊಂಡು ಆಚೆ ದಡ ಸೇರಿ ಕಾಡನ್ನು ಹೊಕ್ಕೆವು. ಕೊಡೆಗಳನ್ನು ಕೈಯಿಂದ ಕೈಗೆ ಬದಲಾಯಿಸುತ್ತಾ ಮಾವಿನಕಟ್ಟೆ ಗುಡ್ಡ ಹತ್ತಿ, ಅಜ್ಜಿಗುಡ್ಡೆ ಇಳಿದು ಕುಡುಮುಂಡೂರು ಹೊಳೆಯತ್ತ ಕಾಲು ಹಾಕುತ್ತಿದ್ದಾಗಲೇ ಕೇಳಿಸುತ್ತಿದ್ದ ಭೋರ್ಗೆರೆತ ಸಮುದ್ರದ ಏರುಬ್ಬರವನ್ನು ನೆನಪಿಸುವಂತಿತ್ತು. ಹತ್ತಿರ ಬಂದು ನೋಡಿದಾಗ ಈ ದಡದಿಂದ ಕಣ್ಣೆಟುಕಲಾರದ ಆ ದಡದ ತನಕ ಕೆಂಪು ನೀರೇ ನೀರು.

ಕುಡುಮುಂಡೂರು ಹೊಳೆ ಕುಮಾರ ಪರ್ವತದಲ್ಲಿ ಹುಟ್ಟಿ, ಕುಡುಮುಂಡೂರು ಎಂಬ ಮೊದಲ ಹಳ್ಳಿಗೆ ನೀರುಣಿಸಿ ಅದೇ ಹೆಸರನ್ನು ಪಡೆದುಕೊಂಡಿದೆ. ಊರಲ್ಲಿ ಮಳೆಯೇ ಆಗಿರದಿದ್ದರೂ ಮೇಲೆ ಮಲೆಯಲ್ಲಿ ಮಳೆಯಾಗಿದ್ದರೂ ನೀರು ಕ್ಷೀಪ್ರಗತಿಯಲ್ಲಿ ಕೆಳಕ್ಕಿಳಿದು ಅನಿರೀಕ್ಷಿತ ನೆರೆ ಸೃಷ್ಟಿಸಿಬಿಡುತ್ತದೆ. ಅಂದು ಹಾಗಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ನದಿ ದಾಟುತ್ತಿದ್ದವರು ಕೆಲವೊಮ್ಮೆ ನೆರೆಯಲ್ಲಿ ಕೊಚ್ಚಿ ಹೋಗಿ ಇನ್ನೆಲ್ಲೋ ಎದ್ದು ಅಥವಾ ತಲೆ ಮೇಲಿದ್ದ ಹೊರೆಯನ್ನು ಕಳೆದುಕೊಂಡು ಮನೆ ಸೇರಿದ ಉದಾಹರಣೆಗಳು ಬೇಕಾದಷ್ಟಿವೆ. ಕೆಲವೊಮ್ಮೆ ಪ್ರಾಣ ಕಳೆದುಕೊಂಡದ್ದು ಇದೆ.

ನಾವು ಮೂವರೂ ಸ್ವಲ್ಪ ಹೊತ್ತು ದಡದಲ್ಲೇ ಕುಳಿತುಕೊಂಡೆವು. ನೀರು ಇಳಿಯುವ ಲಕ್ಷಣ ಕಾಣಲಿಲ್ಲ. ನಮಗೆ ಕತ್ತಲೆಯ ಭಯವಿರಲಿಲ್ಲ. ಭೂತಗಳ ಗೆಜ್ಜೆಯ ಸದ್ದಿನ ಬಗ್ಗೆ ಸ್ವಲ್ಪ ಕುತೂಹಲ, ಹೆದರಿಕೆ ಇದ್ದರೂ ಅವು ಒಳ್ಳೆಯವರಿಗೆ ಕೆಡುಕನ್ನು ಮಾಡಲಾರವು ಎಂಬ ನಂಬಿಕೆ ಇತ್ತು. ಜೀರುಂಡೆ, ಕ್ರಿಮಿಕೀಟಗಳ ಸದ್ದಿಗೆ ಈ ನಂಬಿಕೆ ಸಡಿಲವಾಗತೊಡಗಿತು. ಆಗ ವಿಶಾಲಾಕ್ಷಿ, ಸಮೀಪದಲ್ಲೇ ತಮ್ಮ ದರ್ಖಾಸ್ತ್ ಭೂಮಿ ಇದೆ, ಅಲ್ಲಿರುವ ಮಾಡಂಗೋಲಿಗೆ ಹೋಗೋಣ ಎಂದಳು. ನನಗೂ ಲಲಿತಳಿಗೂ ಇಂತಹದೊಂದು ಸಲಹೆ ಬೇಕಾಗಿತ್ತು. ತಕ್ಷಣ ಎದ್ದು ನಿಂತೆವು.

ಮಾಡಂಗೊಲು ಎಂದರೆ ಸಣ್ಣ ಕಾವಲು ಮನೆ.ನಾಲ್ಕು ಮರದ ಗೂಟಗಳ ಮೇಲೆ ಮಲಗಲೊಂದು ಅಟ್ಟಣಿಗೆ. ಅದರ ಪಕ್ಕದಲ್ಲಿ ಕೈಗೆ ಸಿಗುವಂತೆ ಒಂದು ಡಬ್ಬಿ ಕಟ್ಟಿರಬೇಕು. ಕಾಡುಹಂದಿ, ಹಕ್ಕಿ, ದನ, ಆನೆಗಳನ್ನು ಓಡಿಸಲು ಇದನ್ನು ಮಾಡಂಗೋಲಿನಲ್ಲಿರುವಾತ ಆಗಾಗ ಬಡಿಯುತ್ತಿರಬೇಕು. ಅಟ್ಟಣಿಗೆಯ ಮುಂದೆ ನೆಲದಲ್ಲಿ ಅಗ್ಗಿಷ್ಟಿಕೆ ಹಾಕಲು ಸ್ವಲ್ಪ ಜಾಗ. ಇದನೆಲ್ಲಾ ರಕ್ಷಿಸಲು, ಮಳೆ ತಡೆಯಲು ಅಡಿಕೆ ಸೋಗೆ ಹೊದಿಸಿದ ಎರಡು ಮಾಡು. ಇದು ಮಾಡಂಗೋಲಿನ ಸ್ಥೂಲ ಪರಿಚಯ.

ನಾವು ಮಾಡಂಗೋಲಿಗೆ ಬಂದೆವು. ಅಂದು ಅಲ್ಲಿ ಯಾರೂ ಇರಲಿಲ್ಲ. ಆದರೆ ಅಗ್ಗಿಷ್ಟಿಕೆಯಲ್ಲಿ ಬೆಂಕಿ ಇತ್ತು. ಅದಕ್ಕೆ ಇನ್ನೊಂದು ಕೊಳ್ಳಿ ಸೇರಿಸಿ ದೊಡ್ಡದು ಮಾಡಿದೆವು. ಬಹುಶಃ ಆಗಲೇ ಘಂಟೆ ಒಂಬತ್ತು ಕಳೆದಿರಬೇಕು. ನಮ್ಮ ಮೂವರಲ್ಲೂ ವಾಚು ಇರಲಿಲ್ಲ. ಹಳ್ಳಿ ಕಡೆಯಲೆಲ್ಲಾ ವಾಚ್ ಕಟ್ಟಿಕೊಳ್ಳಲು ಅರ್ಹತೆ ಬರಬೇಕಾದರೆ ಎಸ್ಸೆಸ್ಸೆಲ್ಸಿ ಮುಗಿಸಿರಬೇಕಾಗಿತ್ತು.

ಗುಡುಗು ಮಿಂಚಿನಿಂದ ಕೂಡಿದ ಗಾಳಿ ಮಳೆ ಭೋರೆಂದು ಸುರಿಯತೊಡಗಿತು. ಇಂತಹ ಮಳೆ ಬಂದಾಗ ನಮ್ಮಮ್ಮ ಒಳಗಿನಿಂದ ಕಬ್ಬಿಣದ ಕತ್ತಿಯೊಂದನ್ನು ತಂದು ಅಂಗಳಕ್ಕೆ ಬೀಸಿ ಒಗೆಯುತ್ತಿದ್ದರು. ಹಗಲಾದರೆ ತುಂಬಿ ಹರಿಯುತ್ತಿದ್ದ ನದಿಗೆ ಬಾಗಿನ ಅರ್ಪಿಸುತ್ತಿದ್ದರು.

ಎಲ್ಲಿದ್ದರೇನು ಹಸಿವು ತಡೆಯುತ್ತದೆಯೇ? ತಿನ್ನುವುದಕ್ಕೇನಾದರೂ ಸಿಗಬಹುದೇ ಎಂದು ಹುಡುಕಾಡತೊಡಗಿದೆವು. ಮಾಡಂಗೋಲಿನ ಕಂಬಕ್ಕೆ ಒಂದು ಹಾಳೆಯ ತೊಟ್ಟೆಯನ್ನು ಸಿಕ್ಕಿಸಲಾಗಿತ್ತು. ಅದರಲ್ಲಿ ಒಂದಷ್ಟು ಹಲಸಿನ ಬೀಜವಿತ್ತು. ನಿಧಿ ಸಿಕ್ಕಷ್ಟು ಖುಷಿಯಾಯಿತು. ಅದನ್ನೇ ಕೆಂಡ ಒಕ್ಕಿ ಅದರಲ್ಲಿಟ್ಟು ಬೂದಿ ಮುಚ್ಚಿ ಬೇಯುವುದನ್ನೇ ಕಾಯುತ್ತಾ ಕುಳಿತೆವು. ಒಂದೆರಡು ಬೀಜಗಳು ಪಟ್ಟನೆ ಸಿಡಿದು ಬೂದಿಯನ್ನು ನಮ್ಮ ಮೇಲೆಲ್ಲಾ ಸಿಡಿಸಿದವು. ಸಿಡಿದ ಮೇಲೂ ಹದವಾಗಿ ಬೇಯಲು ಒಂದಷ್ಟು ಸಮಯ ಬೇಕು.

ಬೆಂದ ಹಲಸಿನ ಬೇಜಗಳನ್ನು ತಿಂದರೂ ಹಸಿವು ಹೋಗಲಿಲ್ಲ. ಆಗ ನನಗೆ ತಟ್ಟನೆ ಹೊಳೆಯಿತು. ಹೇಗಿದ್ದರೂ ಚೆನ್ನಾಗಿ ಮಳೆ ಹೊಯ್ಯುತ್ತಿದೆ. ಭೂಮಿಯಲ್ಲಿ ಒರತೆಯುಕ್ಕುವ ಲಕ್ಷಣ ಇದೆ. ಖಂಡಿತಾ ಗದ್ದೆಗಳಿಗೆ ಮೀನು ಹತ್ತಬಹುದು. ಮೀನು ಕಡಿಯಲು ಹೋಗೋಣ ಎನ್ನುತ್ತಾ ಮಾಡಂಗೋಲಿನಿಂದ ಹೊರಗೆ ಕೈಚಾಚಿದೆ. ರಭಸದ ಮಳೆ ನಿಂತು ಸಣ್ಣಗೆ ಜಿನುಗುತ್ತಿತ್ತು. ಇದು ಮೀನು ಹತ್ತಲು ಪ್ರಶಸ್ತ ಸಮಯ.

ಅಟ್ಟಣಿಗೆಯ ಕೆಳಗೆ ತೆಂಗಿನ ಗರಿಗಳ ರಾಶಿ ಇತ್ತು. ನಾವು ಮೂವರು ಗರಿಗಳಿಂದ ದೊಂದಿಗಳನ್ನು ಸಿದ್ದಪಡಿಸತೊಡಗಿದೆವು. ಪುಣ್ಯಕ್ಕೆ ಮಾಡಿನಲ್ಲಿ ಕತ್ತಿಯೊಂದನ್ನು ಸಿಕ್ಕಿಸಿ ಇಡಲಾಗಿತ್ತು. ದೊಂದಿ, ಕತ್ತಿ, ಮೀನು ಹಾಕಿಕೊಳ್ಳಲೊಂದು ಪಂಚಕುಕ್ಕೆ. ಜೊತೆಗೊಂದು ಗೊರಬು; ಇವಿಷ್ಟನ್ನು ಹಿಡಿದುಕೊಂಡು ಮಾಡಂಗೋಲಿನಿಂದ ಹೊರಬಿದ್ದೆವು.

ಸಾಧಾರಣ ಗಾತ್ರದ ಮೀನುಗಳಾದ ಕೀಂಜೊಳು, ಕಲ್ಲುಮುಳ್ಳು, ನಿಡ್ಯಾಣ ಸಾಧ್ಯವಾದರೆ ಒಂದೆರಡು ಏಡಿಗಳನ್ನು ಮಾತ್ರಾ ಕಡಿಯುವುದೆಂದು ತೀರ್ಮಾನಿಸಿದ್ದೆವು. ಬಾಳೆ, ಮೂಡು ಜಾತಿಯ ಮೀನುಗಳಾದರೆ ದೊಡ್ಡ ಜಾತಿಯವು. ಅವು ಬೇಗನೆ ಪ್ರಾಣ ಬಿಡುವುದಿಲ್ಲ. ಅಲ್ಲದೆ ನಾವು ಪ್ರಾಣಿಗಳನ್ನು ’ಪಾಪ’ ಎಂದು ಕನಿಕರ ತೋರಿಸುವ ಪಂಗಡಕ್ಕೆ ಸೇರಿದವರು! ಹಾಗಾಗಿ ಅವುಗಳ ಬಗ್ಗೆ ಸ್ವಲ್ಪ ದಯೆ ಇತ್ತು.

ಗದ್ದೆ ಹುಣಿಯಲ್ಲಿ ಮೆಲ್ಲಗೆ ಸಾಗುತ್ತಾ ದೊಂದಿ ಬೆಳಕಿನಲ್ಲಿ ಮೀನುಗಳನ್ನು ಅರಸುತ್ತಾ ಹೊರಟೆವು. ಕಡಿಮೆ ನೀರಿನಲ್ಲಿ ಜುಳು ಜುಳು ಸದ್ದಾದರೆ ’ಅದೋ ಅಲ್ಲೊಂದು ಮೀನು’ ಎನ್ನುತ್ತಾ ಓಡುತ್ತಿದ್ದೆವು. ಮೀನಿನ ಮೇಲೆಯೇ ಬೆಳಕು ಬೀಳುವಂತೆ ದೊಂದಿ ಹಿಡಿಯದಿದ್ದರೆ ಲಲಿತಾಳ ಮೇಲೆ ರೇಗುತ್ತಿದ್ದೆವು. ಕಂಡ ಮೀನನ್ನು ಗುರಿಯಿಟ್ಟು ಕತ್ತಿಯಿಂದ ಕಡಿಯದಿದ್ದರೆ ಅವರು ನನ್ನ ಮೇಲೆ ರೇಗುತ್ತಿದ್ದರು. ವಿಶಾಲಾಕ್ಷಿ ಕೈಯಲ್ಲಿ ಪಂಚಿಗೆಕುಕ್ಕೆ ಮತ್ತು ಗೊರಬು. ಒಂದು ಘಂಟೆಯ ದಿಗ್ವೀಜಯದಲ್ಲಿ ಎರಡು ಡಜನಿನ್ನಷ್ಟು ಮೀನುಗಳು ನಮ್ಮ ಪಂಚಿಗೆಕುಕ್ಕೆಯನ್ನು ಸೇರಿದ್ದವು.

ಆ ಮೀನುಗಳನ್ನು ಕೆಂಡದ ಮೇಲಿಟ್ಟು ಸುಡತೊಡಗಿದೆವು. ಸುತ್ತಮುತ್ತಲೆಲ್ಲ ಸುವಾಸನೆ. ಚೆನ್ನಾಗಿ ಬೆಂದು ಕಪ್ಪು ಬಣ್ಣಕ್ಕೆ ತಿರುಗಿದೊಡನೆ ಅದನ್ನು ಕೆಂಡದಿಂದ ತೆಗೆದು ಅದರ ಮೇಲಿನ ಪೊರೆಗಳನ್ನು ನಾಜೂಕಾಗಿ ಕೆರೆಸಿದೆವು. ಮುಳ್ಳಿನಿಂದ ಮಾಂಸವನ್ನು ಬೇರ್ಪಡಿಸಿ ತಿನ್ನತೊಡಗಿದೆವು. ಕೆಲವು ಮೀನುಗಳ ಹೊಟ್ಟೆಯಲ್ಲಿ ಬೆಳ್ಳಗಿನ ದಪ್ಪನೆಯ ದ್ರವವಿತ್ತು. ಅವು ಗಂಡು ಮೀನುಗಳು. ಹೆಣ್ಣು ಮೀನುಗಳ ಹೊಟ್ಟೆಯಲ್ಲಿ ಮೊಟ್ಟೆಗಳ ಗೊಂಚಲಿತ್ತು.

ಇಲ್ಲಿ ಒಂದು ಮಾತನ್ನು ಹೇಳಬೇಕು; ಜೂನ್ ತಿಂಗಳ ಮೊದಲ ವಾರದಲ್ಲಿ ಮಳೆ ಮಾರುತಗಳು ಕೇರಳದ ಸೈಲೆಂಟ್ ವ್ಯಾಲಿಯಿಂದ ಉತ್ತರಾಭಿಮುಖವಾಗಿ ಚಲಿಸಲಾರಂಭಿಸುತ್ತವೆ. ಜೂನ್ ತಿಂಗಳಾಂತ್ಯಕ್ಕಾಗುವಾಗ ಹತ್ತಾರು ಮಳೆ ಬಿದ್ದು ಭೂಮಿ ಹದಗೊಂಡಿರುತ್ತದೆ. ನೀರಿನ ಒರತೆ ಕಾಣಿಸಿಕೊಳ್ಳುತ್ತದೆ. ಇದೇ ಸಮಯದಲ್ಲಿ ಚಿಕ್ಕಪುಟ್ಟ ಝರಿ- ತೋಡುಗಳಲ್ಲಿ ಕೆಂಪು ಮಿಶ್ರಿತ ಮಳೆ ನೀರು ಹರಿಯುತ್ತಾ ಸಮೀಪದ ಹೊಳೆ, ನದಿಗಳನ್ನು ಸೇರಿಕೊಳ್ಳುತ್ತದೆ. ಈ ನೀರನ್ನು ನೋಡಿದೊಡನೆ ಹೊಳೆ, ನದಿಗಳಲ್ಲಿ ಇರುವ ಮೀನುಗಳಿಗೆ ತವರಿನ ಹಂಬಲ ಉಂಟಾಗುತ್ತದೆ. ಎದೇ ಸಮಯದಲ್ಲಿ ಅವುಗಳ ಬಸಿರಲ್ಲಿ ಸಾವಿರಾರು ಮೊಟ್ಟೆಗಳ ಗೊಂಚಲಿರುತ್ತದೆ.

ಇಂದು ಈ ಕಾಲಘಟ್ಟದಲ್ಲಿ ನಿಂತು ಹಿಂತಿರುಗಿ ನೋಡಿದಾಗ ಎದೆಯಾಳದಲೆಲ್ಲೋ ನೋವಿನ ಎಳೆಯೊಂದು ಮೀಟಿದಂತಾಗುತ್ತದೆ. ಪಾಪಪ್ರಜ್ನೆ ಕಾಡುತ್ತದೆ. ಮಾನವ ವರ್ಗದಂತೆ ಈ ಮೀನುಗಳು ಕೂಡ ಮೊಟ್ಟೆಯಿಡಲು ತಾವು ಹುಟ್ಟಿದ ಕಿರುತೊರೆಗಳಿಗೆ, ಗದ್ದೆಬಯಲುಗಳಿಗೇ ಬರುತ್ತವೆ. ನೀರಿನ ಹರಿಯುವಿಕೆಗೆ ಅಭಿಮುಖವಾಗಿ ಏರಿಬರುವ ಇಂತಹ ಮೀನುಗಳನ್ನು ’ಉಬರು ಮೀನು’ ಎಂದು ನಮ್ಮ ತಾಯ್ನುಡಿ ತುಳುವಿನಲ್ಲಿ ಹೇಳುತ್ತಾರೆ. ಅವುಗಳ ಪಯಣಕ್ಕೆ ರಾತ್ರಿ ಸುರಕ್ಷಿತ ಕಾಲ. ಇಲ್ಲಿ ಮೊಟ್ಟೆಯಿಟ್ಟು ಮತ್ತೆ ಅವು ನದಿ ಹೊಳೆಗಳ ವಿಶಾಲ ಪರಿಧಿಯನ್ನು ಸೇರಿಕೊಳ್ಳುತ್ತವೆ. ಇಂತಹ ಹತ್ತು ಮೀನುಗಳನ್ನು ಅಂದು ನಾವು ಕಡಿದು, ಕೊಂದು, ಸುಟ್ಟು ತಿಂದಿದ್ದೆವು! ಈಗ ನಾನು ಬೆಂಗಳೂರಿನಲ್ಲಿದ್ದೇನೆ. ಊರಿಗೆ ಹೋದಾಗ ಅಪರೂಪಕೊಮ್ಮೆ ಉಬರು ಮೀನು ಕಾಣ ಸಿಗುತ್ತದೆ. ಆದರೆ ನಾನದನ್ನು ಕಡಿಯುವುದಿಲ್ಲ; ತಿನ್ನುವುದಿಲ್ಲ. ಮೀನು ಹತ್ತುವುದೂ ಕಡಿಮೆಯಾಗಿದೆಯಂತೆ. ನದಿಯಲ್ಲಿ ಮೀನಿದ್ದರೆ ತಾನೆ?

ಇಂದಿಗೂ ಮಳೆಗಾಲ ಎಂದಾಗ ನನ್ನೂರು ನೆನಪಾಗುತ್ತೆ. ಹೆಗಲ ಮೇಲೆ ನನ್ನನ್ನು ಹೊತ್ತು ಹೊಳೆ ದಾಟಿಸಿದ ಜನ ನೆನಪಾಗುತ್ತಾರೆ. ಆ ರಾತ್ರಿ ನೆನಪಾಗುತ್ತೆ. ಉಬರು ಮೀನು ನೆನಪಾಗುತ್ತೆ. ಹತ್ತಾರು ಕಿ.ಮೀ. ಕ್ರಮಿಸಿ ತನ್ನ ತವರು ನೆಲೆಯನ್ನು ಸೇರಿಕೊಳ್ಳುವ ಆ ಮೀನುಗಳು! ಅವು ನನ್ನ ಪಾಲಿನ ವಿಸ್ಮಯಗಳಲ್ಲೊಂದು.

[ಮಯೂರದಲ್ಲಿ ಪ್ರಕಟವಾದ ಲೇಖನ]

7 comments:

ಸುಶ್ರುತ ದೊಡ್ಡೇರಿ said...

ಓದಿದ್ದೆ ಮಯೂರದಲ್ಲೇ.. ಚಂದ ಬರಹ.

Pramod said...

ಮಳೆಯ ಚೆ೦ದವೇ ಬೇರೆ..

ಗೀತಾ ಗಣಪತಿ said...

ತುಂಬಾ ಆಪ್ತವಾದ ಬರಹ.

sunaath said...

ಸುರಗಿ,
ಮಲೆನಾಡಿನ ಜೀವನವನ್ನು ಓದುತ್ತ ಹೋದಂತೆ ದಂಗು ಬಡೆದೆ. ಬಾಲ್ಯದ ಈ ಸಾಹಸಗಳು ನನಗೆ ವಿಸ್ಮಯಕಾರಿಯಾಗಿ ಕಾಣುತ್ತವೆ.
ಲೇಖನವು ಮೊದಲಿನಿಂದ ಕೊನೆಯವರೆಗೂ ಆಸಕ್ತಿಯುತವಾಗಿದೆ.
ಅಭಿನಂದನೆಗಳು.

Anonymous said...

ಮತ್ತೆ ಮಳೆ ಹುಯ್ಯುತಿದೆ; ಎಲ್ಲ (ಮಾಂಬಳ, ಗೇರು, ಅಣಬೆ, ಇತ್ಯಾದಿ) ನೆನಪಾಗುತಿದೆ.... ಚಂದದ ಲೇಖನಕ್ಕಾಗಿ ಥ್ಯಾಂಕ್ಸ್.

nagraj.harapanahalli said...

ಬಾಲ್ಯ, ಮಳೆ, ಹುಟ್ಟಿ ಬೆಳೆದ ಊರ ನೆನಪು ಚೆಂದ .

nagraj.harapanahalli said...

ಬಾಲ್ಯ, ಮಳೆ, ಹುಟ್ಟಿ ಬೆಳೆದ ಊರ ನೆನಪು ಚೆಂದ .