Friday, July 31, 2009

ನಿಮ್ಮೊಳಗಿನ ’ಬಿಂಬ’ ಯಾರದು?

ಕಳೆದ ವಾರ ನಾನು ಬೆಂಗಳೂರಿನಲ್ಲಿ ಬೆನಕ ತಂಡದ ’ಗೋಕುಲ ನಿರ್ಗಮನ’ ನೋಡಿದೆ. ಪು.ತಿ.ನರ ಈ ಗೀತ ನಾಟಕದ ಹಿಂದಿನ ಭಾವವನ್ನು ಮನಸ್ಸು ಹಿಡಿಯಲೆತ್ನಿಸುತ್ತಿತ್ತು.

ನನ್ನಂತವರ ಮನಸ್ಸಿನಲ್ಲಿ ಯಾವಾಗಲೂ ಕೃಷ್ಣ-ರಾಧೆಯರು ಆದರ್ಶ ಪ್ರೇಮಿಗಳಾಗಿಯೇ ಮೂಡಿಬರುತ್ತಾರೆ. ಅವರ ವಿರಹ ಮತ್ತು ಮಿಲನದ ಹಂಬಲ ಮನುಕುಲದ ಹೆಣ್ಣು ಗಂಡಿನ ಸಂಬಂಧದ ನಿರಂತತೆಗೆ ಸಾಕ್ಷಿಯೆನಿಸುತ್ತದೆ.

ಸಂಸಾರದ ತಿರುಗಣೆಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಗೋಪಿಕೆಯರಿಗೆ ಕೃಷ್ಣನ ಕೊಳಲಗಾನ ಬಿಡುಗಡೆಯ ಬೆಳಕಾಗಿತ್ತು. ಅದು ಅವರು ಕಂಡುಕೊಂಡ ಸುಖದ ಒಳಹಾದಿ. ಆ ಹಾದಿ ಒಂದು ದಿನ ಶಾಶ್ವತವಾಗಿ ಮುಚ್ಚಿ ಹೋಗುತ್ತದೆ. ಆಗ ಅವರು ಅನುಭವಿಸಿದ ನೋವು, ಸಂಕಟ, ಆಕ್ರಂದನ ಪ್ರೇಕ್ಷಕರ ಎದೆಯೊಳಕ್ಕೂ ಇಳಿಯುತ್ತಿತ್ತು.

ಯಾಕೋ ಗೊತ್ತಿಲ್ಲ; ಕೃಷ್ಣ ಎಂದೊಡನೆ ನಾನು ಅಂತರ್ಮುಖಿಯಾಗುತ್ತೇನೆ. ಇಂದ್ರಿಯಗಮ್ಯವಾದುದಕ್ಕಿಂತ ಹೆಚ್ಚಿನದೇನನ್ನೋ ಈ ಹೆಸರಿನಲ್ಲಿ ಕಾಣಲೆತ್ನಿಸುತ್ತೇನೆ.

ಬಿಡುಗಡೆಯ ಹಂಬಲ ಮತ್ತು ಅನನ್ಯತೆಯ ತುಡಿತ ಪ್ರತಿ ಮನಷ್ಯನಲ್ಲೂ ಇರುತ್ತದೆ. ಬಹಳ ಕಾಲದಿಂದ ನನಗೂ ಸ್ವಲ್ಪ ಕಾಲ ಒಂಟಿಯಾಗಿ ಇರಬೇಕೆನಿಸುತ್ತಿತ್ತು. ಅಲ್ಲಿ ಟೀವಿ ಇರಬಾರದು. ಮೊಬೈಲ್ ಪೋನ್ ರಿಂಗಣಿಸಬಾರದು. ಅತಿ ಪರಿಚಿತ ಮುಖಗಳಿರಬಾರದು. ಬಾಲ್ಯಕ್ಕೆ ಮರಳಿದ ಹಾಗಿರಬೇಕು. ಹಾಗಾಗಿಯೋ ಏನೋ ನಾನು ಹೆಗ್ಗೋಡಿನಲ್ಲಿರುವ ನೀನಾಸಂನ ಸಂಸ್ಕೃತಿ ಶಿಬಿರಕ್ಕೆ ಬಂದುಬಿಟ್ಟೆ.

ನಮ್ಮ ಸುಪ್ತ ಮನಸ್ಸಿನಲ್ಲಿ ಪಡಿಮೂಡಿದ ಘಟನೆಗಳು, ಭಾವಕೋಶದಲ್ಲಿ ಸೇರಿಹೋದ ವ್ಯಕ್ತಿಗಳು, ಮಧುರ ನೆನಪುಗಳು ಕನಸಿಗೆ ಬಂದು ಕಾಡಬಹುದು; ಅಥವಾ ವರ್ತಮಾನದಲ್ಲಿ ಎದುರಿನಲ್ಲಿ ಘಟಿಸಿದಂತೆ, ಪ್ರತ್ಯಕ್ಷವಾದಂತೆ ಭಾಸವಾಗಬಹುದು. ಹೆಗ್ಗೋಡಿನಲ್ಲಿಯೂ ಹಾಗೆ ಆಯ್ತು. ಇಲ್ಲಿನ ಸಂಘಟಕರೊಬ್ಬರನ್ನು ಕಂಡಾಗ ನನಗೆ ನನ್ನ ಬಾಲ್ಯದ ಒಡನಾಡಿ ಶರಧಿಯನ್ನೇ ಕಂಡಂತಾಯ್ತು.

ಬೇಕಾದರೆ ಸ್ವಲ್ಪ ಹಿಂದಕ್ಕೆ ಹೋಗಿ ನೋಡಿ; ನಿಮಗೆ ಆತ್ಮೀಯರಾದವರ, ನಿಮ್ಮ ಮೇಲೆ ಪ್ರಭಾವ ಬೀರಿದವರ ಮುಖಗಳನ್ನು ಕಣ್ಣಮುಂದೆ ತಂದುಕೊಳ್ಳಿ. ಅವುಗಳಲ್ಲೊಂದು ಸಾಮ್ಯತೆ ಕಂಡುಬರುತ್ತದೆ. ಕೆಲವರ ಸಾನಿಧ್ಯದಲ್ಲಿ ನೀವು ತುಂಬಾ ಕಂಫರ್ಟಬಲ್ ಆಗಿ ಇರಬಲ್ಲಿರಿ. ಈ ಸುರಕ್ಷತೆಯ ಭಾವನೆ ಸುಮ್ಮನೆ ಬರುವುದಿಲ್ಲ. ನಿಮ್ಮ ಮನಸ್ಸು ಇಂದ್ರಿಯಾತೀತವಾದ ಯವುದೋ ಒಂದನ್ನು ಇಲ್ಲಿ ಅನುಭವಿಸುತ್ತಿರುತ್ತದೆ. ಆಧುನಿಕ ಪರಿಭಾಷೆಯಲ್ಲಿ ಇದನ್ನು ವೇವ್ ಲೆಂಗ್ತ್ ಅಂತ ಬೇಕಾದರೆ ಕರೆಯಬಹುದು.

ನೀನಾಸಂಗೆ ಬಂದೆ ಎಂದು ಹೇಳಿದೆನಲ್ಲಾ... ಅಲ್ಲಿ ತಂಗಿದ ಮೊದಲ ರಾತ್ರಿಯೇ ನನಗೆ ಕನಸಿನಲ್ಲಿ ಶರಧಿ ಕಾಣಿಸಿಕೊಂಡ. ಸುಮಾರು ಇಪ್ಪತ್ತು ವರ್ಷಗಳ ದೀರ್ಘ ಅವಧಿಯ ನಂತರ ಮೊತ್ತ ಮೊದಲ ಬಾರಿಗೆ ನನ್ನ ಕನಸಿನಲ್ಲಿ ಶರಧಿ ಬರುವುದೆಂದರೆ ಅದರ ಅರ್ಥ ಏನಿದ್ದೀತು? ನನ್ನ ಜಾಗೃತ ಮನಸ್ಸಿನ ಅರಿವಿಗೆ ಬಾರದಂತೆ ಸುಪ್ತ ಮನಸ್ಸಿನಲ್ಲಿ ಆತ ಮನೆ ಮಾಡಿಕೊಂಡಿದ್ದನೇ? ನನಗೇ ಅಚ್ಚರಿಯೆನಿಸತೊಡಗಿತು.

ಶರಧಿ ಕಾಣಿಸಿಕೊಂಡಿದ್ದಾದರೂ ಹೇಗೆ? ಆತ ಒಂದು ಕುರ್ಚಿಯ ಮೇಲೆ ಕುಳಿತಿದ್ದಾನೆ. ಎದುರುಗಡೆ ಸ್ಟ್ಯಾಂಡ್ ಮೇಲೆ ಒಂದು ಕ್ಯಾನ್ವಾಸಿದೆ. ಕುಂಚದಿಂದ ಅದರ ಮೇಲೆ ಎನೋ ಮೂಡಿಸುತ್ತಿದ್ದಾನೆ. ಸ್ವಲ್ಪ ಹಿಂದೆ ನಿಂತಿದ್ದ ನಾನು ಅವನನ್ನು ಹಾದು ಹೋಗುವಾಗ ಬಲಗೈಯಿಂದ ಅವನ ತಲೆಗೂದಲನ್ನು ಕೆದರಿ ಮುಂದಡಿಯಿಟ್ಟೆ. ತಟ್ಟನೆ ಅವನು ನನ್ನ ಕೈ ಹಿಡಿದೆಳೆದ. ನಾನು ಅಚ್ಚರಿಯಿಂದ ಅವನತ್ತ ನೋಡಿದೆ. ಅಷ್ಟೇ, ಎಚ್ಚರಾಯಿತು.

ನಿಜದ ಬದುಕಿನಲ್ಲಿ ಒಮ್ಮೆಯೂ ನನ್ನ ಬೆರಳನ್ನು ಕೂಡ ಸೋಕಿರದ ಆತ ನನ್ನ ಕೈ ಹಿಡಿದೆಳೆಯುವುದೆಂದರೆ.....! ಅಥವಾ ನಾನವನ ಕೂದಲನ್ನು ಕೆದರುವುದೆಂದರೆ..... ಬಹುಶಃ ನನ್ನ ಮನಸ್ಸಿನಾಳದ ಬಯಕೆ ಈ ರೀತಿ ಕನಸಿನಲ್ಲಿ ಹೊರಹೊಮ್ಮಿರಬಹುದೇ?

ನಿಜ. ನನಗೆ ತುಂಬಾ ಇಷ್ಟವಾದವರನ್ನ ನಾನು ತುಂಬಾ ಕೀಟಲೆ ಮಾಡುತ್ತೇನೆ. ಸುಮ್ಮ ಸುಮ್ಮನೆ ರೇಗಿಸಿ ಖುಷಿ ಪಡುತ್ತೇನೆ. ಒಮ್ಮೊಮ್ಮೆ ಅದು ಕ್ರೌರ್ಯ ಅನ್ನಿಸಿ ಸಂಕಟಪಡುತ್ತೇನೆ. ಆದರೆ ಅವರು ನನ್ನವರು. ಹಾಗಾಗಿ ಅಂತರಾಳದಿಂದ ಕ್ಷಮೆ ಬೇಡುತ್ತೇನೆ. ಅವರು ಕೂಡ ಮನ್ನಿಸಿಬಿಡುತ್ತಾರೆ.

ಇಂಥವರು ಬೆರಳೆಣಿಕೆಯ ಸಂಖ್ಯೆಯಲ್ಲಿ ವ್ಯಕ್ತಿಯೊಬ್ಬರ ಬದುಕಿನಲ್ಲಿರುತ್ತಾರೆ. ಅಂಥವರಲ್ಲಿ ಸಹಜವಾಗಿ ಪರಸ್ಪರ ಸಲಿಗೆಯಿರುತ್ತದೆ. ಭುಜ ಮುಟ್ಟಿ, ಕೂದಲು ಕೆದರಿ,ಕೈ ಬೆರಳುಗಳಲ್ಲಿ ಆಟವಾಡುತ್ತಾ ಮಾತಾಡಬಹುದು.

ಶರಧಿ ನನ್ನ ಕಣ್ಣೆದುರಿನಲ್ಲಿ ಚಿಕ್ಕಂದಿನಿಂದಲೂ ಇದ್ದರೂ ಆತ ಮನಸ್ಸಿಗೆ ಬಿದ್ದದ್ದು ಏಳನೇ ತರಗತಿಯಲ್ಲಿದ್ದಾಗ. ಅದು ನಾನು ಹದಿಹರೆಯಕ್ಕೆ ಕಾಲಿಡುತ್ತಿರುವ ಸಮಯ. ಆಗ ಆತನ ವಯಸ್ಸು ನನಗಿಂತ ಎರಡು ಪಟ್ಟಿಗಿಂತಲೂ ಜಾಸ್ತಿ. ಆಗಲೇ ಆತ ನೌಕರಿ ಹಿಡಿದು ಹತ್ತಾರು ವರ್ಷ ಕಳೆದಿತ್ತು. ಆತ ನನ್ನ ಕನಸುಗಳಿಗೆ ಮಾದರಿಯಾಗಿದ್ದ.

ನಾನು ಚಿಕ್ಕವಳಿದ್ದೆ. ಹಾಗಾಗಿ ಆತ ನನ್ನ ಮನಸ್ಸಿನ ಆಳಕ್ಕಿಳಿದ. ಆದರೆ ಅವನ ಅಂತರಂಗಕ್ಕೆ ನಾನು ಇಳಿಯಲೇ ಇಲ್ಲ. ಅವನ ಬಾಹ್ಯರೂಪವಷ್ಟೇ ನನ್ನ ಆರಾಧನೆಗೆ ಒಳಗಾಯಿತು. ಆ ಬಿಂಬ ಇಂದಿನ ತನಕ ನನ್ನನ್ನು ಹಿಂಬಾಲಿಸುತ್ತಲೇ ಬಂದಿದೆ.

ಯಾವುದೋ ಬಿಡುಗಡೆಯ ಭಾವಕ್ಕಾಗಿ ಅಥವಾ ಇನ್ನಾವುದನ್ನೋ ತುಂಬಿಕೊಳ್ಳುವ ಹಪಹಪಿಕೆಯಲ್ಲಿ ನಾನು ನಿನಾಸಂಗೆ ಬಂದಿದ್ದೆ. ಹೂ, ಕಾಡು, ಗಾಳಿ, ಸ್ವಚ್ಛನೀರು, ದೇಸಿಪರಿಸರ, ಸುತ್ತಲಿನ ಜನರ ಆದರಾತಿಥ್ಯ ಇವೆಲ್ಲವೂ ನನ್ನನ್ನು ಬಾಲ್ಯಕ್ಕೆ ಹಿಂದುರಿಗಿಸಿತು. ಅಲ್ಲಿ ಶರಧಿ ಇದ್ದ.

ಪ್ರತಿಯೊಬ್ಬರ ಮನಸ್ಸಿನಾಳದಲ್ಲಿಯೂ ಇಂತಹದೊಂದು ಬಿಂಬ ಇರುತ್ತದೆ. ಅದು ಸ್ಥಾಯಿಭಾವ. ಬದುಕಿನುದ್ದಕ್ಕೂ ಈ ಬಿಂಬದ ಮೇಲೆ ಬೇರೆ ಬೇರೆ ಬಿಂಬಗಳು ಸೂಪರ್ ಇಂಪೋಸ್ ಆಗುತ್ತಲೇ ಇರುತ್ತದೆ. ಹೆಚ್ಚೆಚ್ಚು ಬಿಂಬಗಳು ಆ ಮೂಲ ಬಿಂಬದ ಮೇಲೆ ಬಿದ್ದಂತೆಲ್ಲಾ ಅಲ್ಲೊಂದು ಕೊಲಾಜ್ ಸೃಷ್ಟಿಯಾಗುತ್ತದೆ. ಹಾಗಾಗಿ ಮೂಲಬಿಂಬ ಜಾಗೃತ ಮನಸ್ಸಿನಿಂದ ವಿಸ್ಮೃತಿಗೆ ಜಾರಿದಂತೆ ಭಾಸವಾದರೂ ಸುಪ್ತ ಮನಸ್ಸಿನಲ್ಲಿ ಅದೇ ಡಾಮಿನೇಟಿಂಗ್ ಆಗಿರುತ್ತದೆ.

ನಾನು ಮೆಚ್ಚಿ ಮದುವೆಯಾದ ಹುಡುಗನ ಚಹರೆ ಕೂಡ ಶರಧಿಯದೇ. ನನಗೊಬ್ಬ ಗೆಳೆಯನಿದ್ದಾನೆ. ಅವನು ಕೂಡ ಸ್ವಲ್ಪ ಮಟ್ಟಿಗೆ ಶರಧಿಯನ್ನೇ ಹೋಲುತ್ತಾನೆ. ಇಂದಿಗೂ ಶರಧಿಯನ್ನು ಹೋಲುವ ಯಾವನೇ ವ್ಯಕ್ತಿ ಕಾರಣವಿಲ್ಲದೆ ನನಗೆ ಇಷ್ಟವಾಗುತ್ತಾನೆ. ಅವನಲ್ಲಿ ನಾನು ಇಷ್ಟಪಡದಿರುವ ಕೆಲವು ಗುಣಗಳಿದ್ದಾಗ್ಯೂ ಅವನ ಬಾಹ್ಯರೂಪ ನನ್ನನ್ನು ಆಕರ್ಷಿಸುತ್ತದೆ.

ನನಗನ್ನಿಸುತ್ತೆ; ನಮ್ಮ ಹದಿಹರೆಯದ ಹುಡುಗ-ಹುಡುಗಿಯರು ಕೆಲವೊಮ್ಮೆ ಬಲವಾದ ಆಕರ್ಷಣೆಗಳೇನೂ ಇರದೆ ಪರಸ್ಪರ ಪ್ರೇಮದಲ್ಲಿ ಬೀಳುತ್ತಾರೆ. ಅದು ತಮ್ಮನ್ನೇ ಪ್ರೇಮಿಸಿಕೊಳ್ಳುವ ಕಾಲಘಟ್ಟ. ಹಾಗಾಗಿ ಪ್ರೇಮಿಯ ಗುಣ ಅಷ್ಟಾಗಿ ಮುಖ್ಯವಾಗುವುದಿಲ್ಲ. ಪ್ರೇಮಿಸಬೇಕೆಂಬ ಉತ್ಕಟ ಭಾವವೇ ಕ್ರಿಯಾಶೀಲವಾಗಿಬಿಡುತ್ತದೆ. ದೋಷಗಳು ಕೂಡಾ ಗುಣಗಳಾಗಿ ಕಾಣಿಸುತ್ತವೆ. ತಪ್ಪುಗಳನ್ನು ಒಪ್ಪಿಕೊಳ್ಳುತ್ತಲೇ ಆ ಎಳೆಯ ಮನಸ್ಸಿನಲ್ಲಿ ಪ್ರೇಮಿಯ ಬಿಂಬ ಅಚ್ಚೊತ್ತಿಬಿಡುತ್ತದೆ. ಮನಸ್ಸು ಪಕ್ವಗೊಂಡಂತೆಲ್ಲಾ ಪ್ರೇಮಿಯ ಗುಣಕ್ಕಿಂತಲೂ ದೋಷವೇ ದೊಡ್ಡದಾಗಿ ಕಾಣತೊಡಗಿದರೆ ಸಂಬಂಧ ಮುರಿದು ಬೀಳುತ್ತದೆ. ಆದರೆ ಬಿಂಬ ಮರೆಯಾಗುವುದಿಲ್ಲ.

ಮುಂದೆ ಈ ಬಿಂಬದ ಮೇಲೆ ಗಂಡನ ಬಿಂಬ ಸೂಪರ್ ಇಂಫೋಸ್ ಆಗುತ್ತದೆ. ಮತ್ತೆ ಇನ್ಯಾರ್ದೋ ಬಿಂಬ ಬೀಳುತ್ತದೆ. ಕೊಲಾಜ್ ಸೃಷ್ಟಿಯಾಗುತ್ತದೆ. ಅಂತಿಮವಾಗಿ ಬಿಂಬಗಳ ಹೋಲಿಕೆ ಪ್ರಾರಂಭವಾಗುತ್ತದೆ. ಹೊಯ್ದಾಟ ಆರಂಭವಾಗುತ್ತದೆ. ಮಾನಸಿಕ ನೆಮ್ಮದಿ ಹಾಳಗುತ್ತದೆ. ಇದು ಈಗಿನ ಬಹುತೇಕ ಭಗ್ನ ಪ್ರೇಮಿಗಳ ಸಾಮಾನ್ಯ ಸಮಸ್ಯೆ.

ಮನಶಾಸ್ತ್ರಜ್ನರ ಪ್ರಕಾರ ಹುಡುಗಿಯೊಬ್ಬಳ ಮನಸ್ಸಿನಲ್ಲಿ ಬೀಳುವ ಮೊದಲ ಬಿಂಬ ಅಪ್ಪನದು. ಹುಡುಗನಾದರೆ ಅಮ್ಮನದು. ಇದ್ದರೂ ಇರಬಹುದೇನೋ. ನನಗೆ ಹಾಗಾಗಲಿಲ್ಲ.ಯಾಕೆಂದರೆ ನನ್ನ ಮನಸ್ಸಿಗೆ ಬಿದ್ದ ಮೊದಲ ಬಿಂಬ ಅಣ್ಣನದು. ನನ್ನ ಅಣ್ಣ, ನನ್ನ ಶರಧಿ, ನನ್ನ ಗಂಡ, ನನ್ನ ಗೆಳೆಯ ಈ ನಾಲ್ವರಲ್ಲಿ ತುಂಬಾ ಸಾಮ್ಯತೆಯಿದೆ. ಇವು ನಾಲ್ಕು ನನ್ನ ಭಾವಲೋಕದ ಕಂಫರ್ಟ್ ವಲಯಗಳು.

ಪ್ರತಿಯೊಬ್ಬರಿಗೂ ಇಂತಹುದೊಂದು ಕಂಫರ್ಟ್ ವಲಯ ಬೇಕು. ಅದು ನಾವು ಬೆಂಗಾಡಿನಲ್ಲಿದ್ದರೂ ನಮ್ಮನ್ನು ಕಾಪಾಡುತ್ತದೆ. ಜೀವನ ಪ್ರೀತಿಯನ್ನು ಹುಟ್ಟಿಸುತ್ತದೆ. ಗೋಪಿಕೆಯರಿಗೆ ಕೃಷ್ಣನ ಕೊಳಲು ಇದ್ದ ಹಾಗೆ. ನನಗೆ ನನ್ನ ಶರಧಿ ಇದ್ದ ಹಾಗೆ. ನಿಮಗೆ ಯಾರಿದ್ದಾರೆ? ನಿಮ್ಮೊಳಗೆ ಇಳಿದು ನೋಡಿ!

[ ’ಓ ಮನಸೇ’ ನಿಯತಕಾಲಿಕದಲ್ಲಿ ಪ್ರಕಟವಾಗಿದ್ದ ಲೇಖನ ]

1 comments:

sunaath said...

ಮನ:ಶಾಸ್ತ್ರವನ್ನು ತಿಳಿಸುವ ನಿಮ್ಮ ಲೇಖನಕ್ಕಾಗಿ ನಿಮಗೆ ಧನ್ಯವಾದಗಳು.