Monday, July 19, 2010

ಬೈರಪ್ಪನವರ ಕವಲು; ಸ್ತ್ರೀ ವಿರೋಧಿ ವಕಾಲತ್ತು
ಎಸ್.ಎಲ್ ಬೈರಪ್ಪನವರ ಹೊಸ ಕಾದಂಬರಿ ’ಕವಲು’ವಿನ ೧೪ನೇ ಪುಟದಲ್ಲಿ ಒಂದು ಸಂಭಾಷಣೆ ಬರುತ್ತದೆ; ”ಓದಿದ ಗಂಡಸರೆಲ್ಲ ಎಂಗಸರಾಗ್ತಾರೆ. ಓದಿದ ಎಂಗಸರೆಲ್ಲಾ ಗಂಡಸರಾಗ್ತಾರೆ. ಗಂಡಸರು ಗಂಡಸರಾಗಿ ಎಂಗಸರು ಎಂಗಸರಾಗಿ ಇರಬೇಕಾದರೆ ಯಾರೂ ಓದಕೂಡದು” ಇದನ್ನು ಹೇಳುವಾತ ಒಬ್ಬ ಪೋಲಿಸ್ ಕಾನ್ಸ್ಟೇಬಲ್.
ಕಥಾನಾಯಕ ಜಯಕುಮಾರ್ ವಾರ್ಷಿಕ ೧೨೦ ಕೋಟಿ ವ್ಯವಹಾರ ನಡೆಸುವ ’ಜಯಂತಿ ಹೈಪ್ರಿಸಿಶನ್’ ಪ್ಯಾಕ್ಟರಿಯ ಮಾಲೀಕ. ಈಗ ಎರಡನೇ ಪತ್ನಿಯ ಮೇಲೆ ಕೌಟುಂಬಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಮಹಿಳಾ ಠಾಣೆಯೊಂದರಲ್ಲಿ ಬಂದಿತನಾಗಿದ್ದಾನೆ. ಅವನನ್ನು ನೋಡಿ ಕಾನ್ಸ್ಟೇಬಲ್ ಅನುಕಂಪದಿಂದ ನುಡಿಯುವ ಮಾತುಗಳಿವು. ಈ ಸಂಭಾಷಣೆಯೇ ಇಡೀ ಕಾದಂಬರಿಯ ತಿರುಳೂ ಆಗಿದೆ.

ಬೈರಪ್ಪನವರಿಗೆ ಅಧುನಿಕ ಮನೋಭಾವದ, ಸ್ವತಂತ್ರ ವ್ಯಕ್ತಿತ್ವದ ಮಹಿಳೆಯರ ಬಗ್ಗೆ ಅಪಾರ ಅಸಹನೆಯಿದೆ; ತಿರಸ್ಕಾರವಿದೆ. ಅದರ ಜೊತೆಗೆ ಶಿಥಿಲಗೊಳ್ಳುತ್ತಿರುವ ಕುಟುಂಬ ವ್ಯವಸ್ಥೆಯ ಬಗ್ಗೆ ವ್ಯಥೆಯಿದೆ. ಕೌಟುಂಬಿಕ ಮೌಲ್ಯಗಳು ಕುಸಿಯುತ್ತಿರುವುದಕ್ಕೆ ಮಹಿಳೆಯೇ ಕಾರಣ ಎಂಬುದು ಅವರ ಬಲವಾದ ನಂಬಿಕೆ. ಇದನ್ನವರು ಕಾದಂಬರಿಯುದ್ದಕ್ಕೂ ಬರುವ ಸ್ತ್ರೀ ಪಾತ್ರಗಳ ಮುಖಾಂತರ ಬಿಂಬಿಸಲೆತ್ನಿಸಿದ್ದಾರೆ. ಕಥಾನಾಯಕನ ದಿವಂಗತ ಮೊದಲ ಪತ್ನಿ ವೈಜಯಂತಿ,ಅವರ ಮನೆಗೆಲಸದ ಸಹಾಯಕಿ ದ್ಯಾವಕ್ಕ ಮತ್ತು ಆತನ ತಮ್ಮನ ಪತ್ನಿ ಪಾರ್ವತಿಯನ್ನು ಬಿಟ್ಟು ಉಳಿದ ಎಲ್ಲಾ ಮಹಿಳೆಯರನ್ನು ಉಗ್ರ ವಿಮೋಚನವಾದಿಗಳನ್ನಾಗಿ ಇಲ್ಲವೇ ಜಾರಿಣಿಯರನ್ನಾಗಿ, ವಂಚಕರನ್ನಾಗಿ, ಮನೆಮುರುಕರನ್ನಾಗಿ ಚಿತ್ರಿಸಿದ್ದಾರೆ. ಅವರ ಬಳೆಯಿಲ್ಲದ ಕೈ, ಕುಂಕುಮವಿಲ್ಲದ ಹಣೆ,ಸರವಿಲ್ಲದ ಕತ್ತು ಸೂತಕದ ಕಳೆಯೆಂದು ಕಾದಂಬರಿಯುದ್ದಕ್ಕೂ ಮತ್ತೆ ಮತ್ತೆ ಪ್ರಸ್ತಾಪವಾಗುತ್ತಲೇ ಇರುತ್ತದೆ. ಇವರು ಹೀಗಾಗಲು ಉನ್ನತ ವಿದ್ಯಾಭಾಸ ಪಡೆದುದೇ ಕಾರಣವೆಂದು ಬಿಂಬಿಸಲಾಗಿದೆ. ಈ ವಿದ್ಯಾವಂತೆಯರೆಲ್ಲಾ ಕೌಟುಂಬಿಕ ದೌರ್ಜನ್ಯ ವಿರೋಧಿ ಕಾನೂನನ್ನು ಪುರುಷರ ಶೋಷಣೆಗೆ ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂಬುದು ಬೈರಪ್ಪನವರ ವಾದ.

ವಿವಾಹ ಬಾಹಿರ ಸಂಬಂಧಗಳು ಬೈರಪ್ಪನವರ ಹಿಂದಿನ ಕಾದಂಬರಿಗಳಲ್ಲಿ ಸಾಮಾನ್ಯ. ಆದರೆ ಅಲ್ಲೆಲ್ಲ ಅದಕ್ಕೊಂದು ತಾರ್ಕಿಕ ಹಿನ್ನೆಲೆಯಿರುತ್ತಿತ್ತು. ಆದರೆ ಇಲ್ಲಿ ಅದು ಗಂಡಸರ ಹಕ್ಕು, ಮಹಿಳೆ ಮಾಡಿದರೆ ಅಪರಾಧ ಎನ್ನುವಂತೆ ಪ್ರತಿಪಾದಿಸಲಾಗಿದೆ. ಹೆಂಗಸರ ಲೈಂಗಿಕ ಸ್ವಾತಂತ್ರ್ಯವನ್ನು ಘೋರ ಅಪರಾಧವೆಂದು ಚಿತ್ರಿತವಾಗಿದೆ. ಮಾತ್ರವಲ್ಲ ಮಹಿಳಾ ವಿಮೋಚನವಾದಿಗಳನ್ನು ಸಲಿಂಗಕಾಮಿಗಳೆಂದು ಬಿಂಬಿಸಲು ಸರಾಪ ಎಂಬ ಪಾತ್ರವನ್ನು ತರಲಾಗಿದೆ. ಡಾಕ್ಟರ್ಸ್, ಲಾಯರುಗಳು, ವಿಶ್ವವಿದ್ಯಾಲಯಗಳ ಪ್ರೋಪೆಸರುಗಳು ಸೇರಿದ ಕ್ರಿಮಿನಲ್ ಗಳ ದೊಡ್ಡ ಜಾಲವೆಂದು ಮಹಿಳಾವಾದಿಗಳನ್ನು ತೋರಿಸಲಾಗಿದೆ.

ಕಾದಂಬರಿಯಲ್ಲಿ ಬೈರಪ್ಪನವರು ಎತ್ತಿಕೊಳ್ಳುವ ಇನ್ನೊಂದು ಬಹು ದೊಡ್ಡ ಜಿಜ್ನಾಸೆ ಎಂದರೆ; ಪತ್ನಿಯಾದವಳು ಪತಿಯನ್ನು ಏಕವಚನದಲ್ಲಿ ಕರೆಯುವುದು ಸರಿಯೇ ಎಂಬುದು. ಮದುವೆಗೆ ಮೊದಲು ಮಂಗಳೆ ಏಕವಚನದಲ್ಲಿ ಕರೆದರೂ ಹಾಸುಗೆಯಲ್ಲಿ ರಸಭಂಗವಾಗದ ಕಥಾನಾಯಕ ಮದುವೆಯ ನಂತರ ಏಕವಚನದಲ್ಲಿ ಕರೆದಾಗ ನಿಷ್ಖ್ರ್‍ಇಯನಾಗುತ್ತಾನೆ. ದೊರೆರಾಜು ಎಂಬ ರಾಜಕಾರಣಿ ಮತ್ತು ಇಳಾ ಮೇಡಂ ನಡುವೆಯೂ ಏಕವಚನದ ಜಿಜ್ನಾಸೆಯಿದೆ. ಇದೇ ರೀತಿಯಲ್ಲಿ ಕಾದಂಬರಿಯುದ್ದಕ್ಕೂ ’ಮೇಲ್ ಇಗೋ’ ವಿಜೃಂಬಿಸಿದೆ.

ಸಾಮಾನ್ಯವಾಗಿ ಬೈರಪ್ಪನವರ ಕಾದಂಬರಿಗಳಲ್ಲಿ ಕಂಡುಬರುವ ಅಧ್ಯಯನಶೀಲತೆ ಕಾದಂಬರಿಗೆ ಆಳವನ್ನು ತಂದುಕೊಡುತ್ತದೆ; ಶೈಲಿ ಓದುಗರನ್ನು ಸೆರೆಹಿಡಿಯುತ್ತದೆ. ಆದರೆ ಕವಲಿನಲ್ಲಿ ಇವೆರಡೂ ಇಲ್ಲ. ಮೇಲ್ಮಟ್ಟದ ಸ್ತ್ರೀ ವಿರೋಧಿ ವಕಾಲತ್ತು ಇದೆ ಅಷ್ಟೆ.

ಮಹಿಳೆ ತನ್ನ ಕರ್ತವ್ಯಗಳನ್ನು ಮರೆತು ವ್ಯಯಕ್ತಿಕ ಬದುಕಿಗೆ ಮಾತ್ರ ಗಮನ ಕೊಡುತ್ತಿದ್ದಾಳೆ ಎಂಬುದು ಕಾದಂಬರಿಕಾರರ ಗ್ರಹಿಕೆ.ಆದರೆ ಭಾರತೀಯ ಸಮಾಜದಲ್ಲಿ ಗೃಹಿಣಿ ಧರ್ಮ ಇರುವಂತೆಯೇ ಗೃಹಸ್ಥ ಧರ್ಮ ಎಂಬುದಿದೆ. ಅದನ್ನು ಸ್ವಲ್ಪ ಮಟ್ಟಿಗಾದರೂ ಪಾಲಿಸಿದರೆ ಮಾತ್ರ ಕುಟುಂಬ ವ್ಯವಸ್ಥೆ ಉಳಿದುಕೊಳ್ಳಲು ಸಾಧ್ಯ. ಸ್ವಸ್ಥ ಸಮಾಜ ರೂಪುಗೊಳ್ಳಲು ಸಾಧ್ಯ. ಆ ಹೊಣೆಗಾರಿಕೆಯನ್ನು ಇವತ್ತಿನ ದಂಪತಿಗಳು ನಿಭಾಯಿಸುತ್ತಿದ್ದಾರೆಯೇ ಎಂಬುದನ್ನು ಬೈರಪ್ಪನಂಥ ಜನಪ್ರಿಯ ಕಾದಂಬರಿಕಾರರು ಶೋಧಿಸಬೇಕಾಗಿದೆ. ಒಬ್ಬ ಗಂಡಸು ಮಗನಾಗಿ, ಗಂಡನಾಗಿ, ಅಪ್ಪನಾಗಿ, ಕುಟುಂಬದ ಯಜಮಾನನಾಗಿ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದಾನೆಯೇ? ಮಗಳಾಗಿ, ಪತ್ನಿಯಾಗಿ, ಅಮ್ಮನಾಗಿ, ಗೃಹಿಣಿಯಾಗಿ ಒಬ್ಬ ಮಹಿಳೆ ನಿರ್ವಹಿಸಿದಷ್ಟು ಹೊಣೆಗಾರಿಕೆಯನ್ನು ಒಬ್ಬ ಗಂಡಸು ನಿರ್ವಹಿಸುತ್ತಿಲ್ಲವೆಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಅದನ್ನು ಕಾದಂಬರಿಕಾರನೊಬ್ಬ ಸಮಾಜಶಾಸ್ತ್ರಜ್ನನ ರೀತಿಯಲ್ಲಿ ವಿಶ್ಲೇಷಿಸಬೇಕಾಗುತ್ತದೆ. ಅದನ್ನು ಬೈರಪ್ಪನವರು ಮಾಡುವುದಿಲ್ಲ ಯಾಕೆಂದರೆ ಅವರು ಅಧುನಿಕತೆಯನ್ನು ಒಪ್ಪಿಕೊಳ್ಳಲಾರರು. ಅವರ ಬದಲಾವಣೆಯೆನಿದ್ದರೂ ಸಂಪ್ರದಾಯಿಕ ಕೌಟುಂಬಿಕ ವ್ಯವಸ್ಥೆಯೊಳಗಡೆಯೇ ಆಗಬೇಕು. ಹಾಗಾಗಿಯೇ ಜಯಕುಮಾರನ ಬುದ್ದಿಮಾಂದ್ಯ ಮಗಳನ್ನು ಅವನ ಅಕ್ಕನ ಮಗ, ವಿದೇಶದಲ್ಲಿ ಎರಡು ಹೆಂಗಸರ ಜೊತೆ ಸಂಬಂಧವಿದ್ದು ಈಗ ಭಾರತಕ್ಕೆ ಬಂದು ನೆಲೆಸಿರುವ ನಚಿಕೇತನ ಜೊತೆ ಮದುವೆ ಮಾಡಿಸಿ ಸುಖ ದಾಂಪತ್ಯದ ಮಾದರಿಯನ್ನು ಕೊಡುತ್ತಾರೆ. ಮಂಗಳೆಯನ್ನು ಶಿಕ್ಷಿಸುವ ಭರದಲ್ಲಿ ಅವಳನ್ನು ಜೀವವಿರೋಧಿಯಾಗಿ, ಭಾವನಾರಹಿತಳಾಗಿ ಚಿತ್ರಿಸಲಾಗಿದೆ. ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದ ಇಂಗೀಷ್ ಪ್ರೋಪೆಸರ್ ಇಳಾಮೇಡಂ ಅನ್ನು ವ್ಯಕ್ತಿತ್ವ ಮಾರಿಕೊಂಡಂತೆ ಚಿತ್ರಿಸಿ ರಾಜಕಾರಣಿಯೊಬ್ಬನ ’ಕೀಪ್’ ಮಾಡಿದ್ದಾರೆ.

ಸ್ತ್ರಿ ಸಂವೇದನೆಗಳನ್ನು ಗೌರವಿಸುವ, ಆಕೆಯ ಅನನ್ಯತೆಯನ್ನು ಒಪ್ಪಿಕೊಳ್ಳುವ, ಸಮಾನತೆಗಾಗಿ ತುಡಿಯುವ ಎಲ್ಲರೂ ಉಪೇಕ್ಷಿಸಬೇಕಾದ ಕಾದಂಬರಿಯಿದು.

[ಜುಲೈ ೧೯ರಂದು ಕನ್ನಡ ಪ್ರಭದಲ್ಲಿ ಪ್ರಕಟವಾದ ಬರಹ]

0 comments: