Thursday, September 2, 2010

ದ್ರೌಪದಿಗೆ ಕೃಷ್ಣನಂತೆ.......!?

ಈಗೀಗ ಒಂಟಿಯಾಗಿ ಇರುವುದೇ ಹೆಚ್ಚು ಖುಷಿಯನ್ನು ಕೊಡುತ್ತದೆ. ಯಾವಾಗಲೂ ಅಷ್ಟೇ. ಮೌನದೊಡನೆ ಸಂವಾದ ಸಾಧ್ಯವಾಗುವಷ್ಟು ಶಬ್ದಗಳ ಜೊತೆ ಆಗುವುದಿಲ್ಲ. ಚಿಕ್ಕಂದಿನಿಂದಲೂ ಮನೆ, ಶಾಲೆಗಳಲ್ಲಿ ಕಲಿತದ್ದಕ್ಕಿಂತಲೂ ತೋಟ, ಗದ್ದೆ, ಕಾಡು, ನದಿ, ಗೋಮಾಳಗಳಲ್ಲಿ ಕಲಿತದ್ದೇ ಹೆಚ್ಚು.

ಮಲೆನಾಡಿನಲ್ಲಿ ಹುಟ್ಟಿ ಬೆಳೆದ ಎಲ್ಲರೂ ಹಾಗೇ. ಬಾಲ್ಯದಲ್ಲಿ ಗೋಪಾಲಕರಾಗುತ್ತಾರೆ, ಇಲ್ಲವೆ ಗೋಪಿಕೆಯರಾಗುತ್ತಾರೆ. ಅವರ ಸುತ್ತಮುತ್ತ ದನಕರುಗಳಿರುತ್ತವೆ; ನದಿಯಿರುತ್ತವೆ; ಕಾಡಿರುತ್ತದೆ; ಬೆಟ್ಟಗುಡ್ಡವಿರುತ್ತದೆ; ಮನೆಯವರ ಜೊತೆ ಮುನಿಸಿಕೊಂಡರೆ ಸುತ್ತಮುತ್ತ ಯಶೋಧೆಯರಿರುತ್ತಾರೆ; ಆಳುಗಳಿರುತ್ತಾರೆ. ಒಟ್ಟಿನಲ್ಲಿ ಸಮೃದ್ಧ ಬಾಲ್ಯ.

ಈಗ ಬೆಂಗಳೂರಿನಲ್ಲಿರುವ ನನಗೆ ಒಂಟಿತನ ಅನಿರ್ವಾಯ. ಅದು ಆಧುನಿಕ ಬದುಕಿನ ಕೊಡುಗೆ! ಎರಡು ವರ್ಷಗಳ ಹಿಂದೆ ನಾನು ಬ್ಲಾಗ್ ಆರಂಭಿಸಿದಾಗ ಇದನ್ನೇ ಬರೆದುಕೊಂಡಿದ್ದೆ;
ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ
ಧರ್ಮಸಂಕಟಗಳಲಿ, ಜೀವಸಮರದಲಿ
ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ
ನಿರ್ಮಿತ್ರನಿರಲು ಕಲಿ-ಮಂಕುತಿಮ್ಮ.

ಡಿ.ವಿ.ಜಿಯವರ ಕಗ್ಗದ ಈ ಪದ್ಯ ನನ್ನ ಉತ್ಕಟ ಕ್ಷಣಗಳಲ್ಲಿ ನನಗೆ ಎಲ್ಲವನ್ನು ಎದುರಿಸುವ ಶಕ್ತಿಯನ್ನು ನೀಡುತ್ತದೆ. ಹಾಗಿದ್ದರೂ ಬಾಲ್ಯದಿಂದಲೂ ಗೆಳೆತನದ ಬಗ್ಗೆ ನನಗೆ ತುಂಬಾ ಉದಾತ್ತವಾದ ಭಾವನೆಯಿತ್ತು; ಆದರ್ಶ ಕಲ್ಪನೆಯಿತ್ತು, ಇಂದಿಗೂ ಅಷ್ಟು ಸುಲಭವಾಗಿ ನಾನು ಯಾರನ್ನೂ ’ಇವರು ನನ್ನ ಪ್ರೆಂಡ್’ ಎಂದು ಹೇಳಿಕೊಳ್ಳುವುದಿಲ್ಲ. ಇವರು ನನ್ನ ಪರಿಚಯದವರು, ಕ್ಲಾಸ್ ಮೇಟ್, ಕೊಲಿಗ್, ಪ್ಯಾಮಿಲಿ ಪ್ರೆಂಡ್, ರಿಲೇಟಿವ್, ಬೇಕಾದವರು ಎಂದೆಲ್ಲಾ ಹೇಳಿಕೊಳ್ಳುತ್ತೇನೆ. ಆದರೆ ’ಪ್ರೆಂಡ್’ ಎಂಬ ಪದವನ್ನು ಅತ್ಯಂತ ಜಾಗರೂಕತೆಯಿಂದ ಉಪಯೋಗಿಸುತ್ತೇನೆ. ಯಾರಾದರೂ ’ ನಿಂಗೆ ತುಂಬಾ ಬೇಕಾದವರು, ಆತ್ಮೀಯರಾದವರು ಯಾರು?’ ಎಂದು ಕೇಳಿದರೆ ತಕ್ಷಣ ಕಣ್ಮುಂದೆ ದ್ರೌಪದಿಯ ಸಖ ಕೃಷ್ಣ ಕಾಣಿಸಿಕೊಳ್ಳುತ್ತಾನೆ.

ದ್ರೌಪದಿಯ ಸಖ ಕೃಷ್ಣ ಎನ್ನಲು ಕಾರಣವಿದೆ, ಆತ ಆಕೆಯ ಬೌದ್ಧಿಕ ಸಂಗಾತಿ. ಇಡೀ ಮಹಾಭಾರತದಲ್ಲಿ ದ್ರೌಪದಿಯ ಶಕ್ತಿಯನ್ನು ಅರಿತವನು ಕೃಷ್ಣ ಮಾತ್ರ. ಅವಳ ಸಮಗ್ರ ವ್ಯಕ್ತಿತ್ವದ ಆಳ ವಿಸ್ತಾರಗಳು ಆತನಿಗೆ ಗೊತ್ತಿತ್ತು. ಎಲ್ಲರೆದುರಲ್ಲಿ ಅವರವರ ಭಾವಕ್ಕೆ ತಕ್ಕಂತೆ ಗೋಚರವಾಗುತ್ತಿದ್ದ ಕೃಷ್ಣ ಒಂದು ಮೆಟ್ಟಿಲು ಎತ್ತರದಲ್ಲಿಯೇ ಇರುತ್ತಿದ್ದ. ಆದರೆ ದ್ರೌಪದಿಯ ಎದುರಿನಲ್ಲಿ ಮಾತ್ರ ಸಮಾನ ನೆಲೆಯಲ್ಲಿ ಸ್ಪಂದಿಸುತ್ತಿದ್ದ, ಅವರ ನಡುವೆ ಹೃದಯ ಸಂವಾದವಿತ್ತು. ಮೌನದಲ್ಲೂ ಮಾತಿತ್ತು.

ದ್ರೌಪದಿ ಅಸಹಾಯಕ ಹೆಣ್ಣಲ್ಲ. ಆದರೂ ನೆರವು ಬೇಕೆಂದಾಗ ಅವಳು ಯಾಚಿಸಿದ್ದು ತನ್ನ ವೀರಾಧಿವೀರ ಗಂಡರನ್ನಲ್ಲ. ಆಪತ್ಬಾಂಧವ ಕೃಷ್ಣನನ್ನು. ಅವನಲ್ಲಿ ಆಕೆಗೆ ಅಂತಹ ನಂಬಿಕೆಯಿತ್ತು. ಗಂಡು-ಹೆಣ್ಣಿನ ನಡುವಿನ ಸಂಬಂಧಕ್ಕೆ ಹೊಸ ವ್ಯಾಖ್ಯೆಯನ್ನು ಬರೆದವರು ಅವರು.

ಪ್ರೀತಿ ದೇವನಂತಿರುವ, ಬೆಚ್ಚನೆಯ ಭಾವವನ್ನು ಮೂಡಿಸುವ ಆ ಕೃಷ್ಣ ಸದಾ ನನ್ನ ಜತೆಗಿರುತ್ತಾನೆ. ಅವನ ಕಿರುಬೆರಳನ್ನು ಹಿಡಿದು, ಸಮುದ್ರಗುಂಟ ಹೆಜ್ಜೆ ಹಾಕುತ್ತಾ ಬದುಕಿನ ಅನೇಕ ಸವಾಲುಗಳನ್ನು ನಾನು ಎದುರಿಸಿದ್ದೇನೆ.

ನಿಜ, ಪರಿಪೂರ್ಣವಾದ ಸಂಬಂಧವೊಂದಕ್ಕಾಗಿ ನಾವೆಲ್ಲರೂ ಸದಾ ಹಾತೊರೆಯುತ್ತಿರುತ್ತೇವೆ. ಆ ಹುಡುಕಾಟ ನಮ್ಮನ್ನು ಎಲ್ಲೆಲ್ಲಿಯೋ ಕೊಂಡೊಯ್ಯುತ್ತದೆ. ಅದೃಷ್ಟವಿದ್ದರೆ ಒಂಚೂರಾದರೂ ದಕ್ಕೀತು, ಇಲ್ಲವದಾರೆ ನಿರಾಶೆ, ದುಃಖ, ಹತಾಶೆ ತಪ್ಪಿದ್ದಲ್ಲ. ಯಾಕೆಂದರೆ ಪರಿಪೂರ್ಣತೆ ಎನ್ನುವುದೇ ಒಂದು ಆದರ್ಶ. ಅದು ಎಂದೂ ವಾಸ್ತವವಾಗುವುದಿಲ್ಲ. ಆದರೆ ಕೃಷ್ಣನದು ಪರಿಪೂರ್ಣವಾದ ವ್ಯಕ್ತಿತ್ವ. ಅವನ ವ್ಯಕ್ತಿತ್ವ ಎಲ್ಲವನ್ನೂ, ಎಲ್ಲರನ್ನೂ ತನ್ನೊಳಗೆ ಲೀನವಾಗಿಸಿಕೊಳ್ಳುತ್ತದೆ. ಒಬ್ಬ ಸ್ತ್ರೀ ಬಯಸುವ ಎಲ್ಲವೂ ಅವನಲ್ಲಿದೆ.

ಒಬ್ಬ ಸ್ತ್ರೀಯ ನಿಡಿದಾದ ಬದುಕಿನಲ್ಲಿ ಪುರುಷ ವಹಿಸುವ ಎಲ್ಲಾ ಪಾತ್ರಗಳನ್ನು ಒಬ್ಬನೇ ಕೃಷ್ಣ ವಿವಿಧ ರೂಪಗಳಲ್ಲಿ ವಹಿಸಿಬಿಡುತ್ತಾನೆ. ಬಾಲ್ಯದಲ್ಲಿ ಈಕೆ ಗೋಪಿಕೆಯಾದರೆ ಆತ ಮುರಳಿಲೋಲ. ಯೌವನದಲ್ಲಿ ಇವಳು ರಾಧೆಯಾದರೆ ಆತ ರಾಸಲೀಲೆಯಾಡುವ ಮಾಧವ. ಆದರ್ಶ ದಾಂಪತ್ಯದಲ್ಲಿ ಇವಳು ರುಕ್ಮಿಣಿಯಾದರೆ ಅವನು ಕೃಷ್ಣ. ತಾಯ್ತನದಲ್ಲಿ ಇವಳು ಯಶೋಧರೆಯಾದರೆ ಅವನು ಬೆಣ್ಣೆಚೋರ. ದಾಂಪತ್ಯ ಕಲಹದಲ್ಲಿ ಇವಳು ಸತ್ಯಭಾಮೆಯಾದರೆ ಅವನು ಓಲೈಸುವ ಚಿತ್ತಚೋರ. ಯಾರೂ ಇಲ್ಲವೆಂದು ಮೊರೆಯಿಟ್ಟರೆ ಅವನು ಅನಾಥರಕ್ಷಕ.

ಇಷ್ಟೆಲ್ಲಾ ಆಗಿದ್ದರೂ ಒಬ್ಬ ದ್ರೌಪದಿಗೆ ಮಾತ್ರ ಅವನು ಆತ್ಮಬಂಧು. ಯಾಕೆಂದರೆ ಮೇಲಿನ ಯಾವ ಸಂದರ್ಭದಲ್ಲೂ ಅವಳಿಗೆ ಕೃಷ್ಣ ಆದರ್ಶವಾಗಿರಲಿಲ್ಲ. ಅವಳು ಸಾಮಾನ್ಯ ಹೆಣ್ಣಾಗಿರಲಿಲ್ಲ. ಅವಳ ಹುಟ್ಟಿಗೆ ನಿರ್ಧಿಷ್ಟ ಕಾರಣವಿತ್ತು. ಹಾಗಾಗಿ ಅವಳು ಋಣಾನುಬಂಧಕ್ಕೆ ಒಳಗಾದವಳಲ್ಲ; ಯಾರಿಗೂ ಸೇರಿದವಳಲ್ಲ. ತಾನು ಯಾರಿಗೋ ಸೇರಿದವಳಾಗಿರಬೇಕೆಂದು ಪ್ರತಿಯೊಬ್ಬ ಹೆಣ್ಣೂ ಬಯಸುತ್ತಾಳೆ. ಯಾಕೆಂದರೆ ಹೆಣ್ಣಿನಲ್ಲೊಂದು ಅರ್ಪಣಾ ಭಾವವಿರುತ್ತದೆ. ದ್ರೌಪದಿಗೆ ಅರ್ಪಿಸಿಕೊಳ್ಳುವುದಕ್ಕೆ ಯಾರೂ ಇರಲಿಲ್ಲ!.

ತಂದೆ ದ್ರುಪದನಿಗೆ ದ್ರೋಣನ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ಅವಳೊಂದು ವಾಹಕವಾಗಿದ್ದಳು. ಪಾಂಡವರು ಅವಳನ್ನು ಬಯಸಿ ಪಡೆದವರಲ್ಲ. ಹಾಗಿರುವಾಗ ಅವಳು ಜೀವದುಂಬಿ ಯಾರನ್ನು ಪ್ರೀತಿಸಬೇಕು? ಮಕ್ಕಳನ್ನೇ? ಅವು ಕೂಡಾ ಅವಳ ದೇಹವನ್ನು ಹರಿದು ಹಂಚಿ ಉಂಡ ಗಂಡಸರದಲ್ಲವೇ? ಅಗ್ನಿಯಲ್ಲಿ ಹುಟ್ಟಿದವಳು; ಅಗ್ನಿಯಂತೆಯೇ ತೀಕ್ಷಣವಾಗಿ ಯೋಚಿಸುವವಳು. ಮೇಲೆ ತಣ್ಣಗಿದ್ದರೂ ಒಳಗೊಳಗೇ ಕಠೋರನಾಗಿದ್ದ ಕೃಷ್ಣ ಅವಳಿಗೆ ಹತ್ತಿರನಾದ. ಅವನನ್ನೇ ಅವಳು ಬುದ್ದಿಪೂರ್ವಕವಾಗಿ ನಂಬಿದಳು.

ಸಾಮಾನ್ಯ ಗೃಹಿಣಿಯೂ ಸೇರ್‍ಇದಂತೆ ಹೆಣ್ಣೊಬ್ಬಳ ಮನಸ್ಸಿನಲ್ಲಿ ಎಷ್ಟೊಂದು ತೀವ್ರವಾದ ಭಾವನೆಗಳು ಇರುತ್ತವೆಯೆಂದರೆ ಅದನ್ನು ಒಬ್ಬ ಕೃಷ್ಣ ಮಾತ್ರ ಅರ್ಥ ಮಾಡಿಕೊಳ್ಳಬಲ್ಲ. ಅದೂ ದ್ರೌಪದಿಗೊಲಿದ ಕೃಷ್ಣ ಮಾತ್ರ!

ಒಬ್ಬ ಹೆಣ್ಣುಮಗಳು ದ್ರೌಪದಿಯ ಮನಸ್ಥಿತಿಯನ್ನು ತಲುಪುವುದು ನಲುವತ್ತು ದಾಟಿದ ಮೇಲೆಯೇ. ಈ ಹೊತ್ತಿಗಾಗಲೇ ಪುರುಷನೊಬ್ಬ ಆಕೆಯ ಬದುಕಿನಲ್ಲಿ ಏನೇನು ಪಾತ್ರ ವಹಿಸಬಹುದೋ ಅದೆಲ್ಲವನ್ನೂ ವಹಿಸಿ ಆಗಿರುತ್ತದೆ. ತಂದೆ, ಅಣ್ಣ-ತಮ್ಮ, ಗೆಳೆಯ, ಗಂಡ, ಮಗ, ಸಹೋದ್ಯೊಗಿ, ಮೇಲಾಧಿಕಾರಿ, ನೆರೆಮನೆಯಾತ- ಇವೆಲ್ಲಾ ಮುಖಗಳ ಪರಿಚಯ ಆಕೆಗಾಗಿದೆ. ಹೆಣ್ಣೊಬ್ಬಳ ಪಾಲಿಗೆ ಈ ’ಗಂಡಸು’ ಅನ್ನುವವನು ’ಇಷ್ಟೇ’ ಎಂಬ ಅನುಭವ ಅವಳಿಗೆ ಸ್ವಲ್ಪವಾದರೂ ಆಗಿರುತ್ತದೆ. ಈ ಅನುಭವ ಗಂಡಸಿನೆಡೆಗೆ ನೋಡುವ ಆಕೆಯ ನೋಟವನ್ನು ಬದಲಿಸಿದೆ.

ಸಾಮಾನ್ಯ ಗೃಹಿಣಿಯಾದರೆ ’ಇಷ್ಟೇ’ ಎಂಬ ತೀರ್ಮಾನದೊಂದಿಗೆ ಬದುಕು ಯಥಾ ಪ್ರಕಾರ ಸಾಗುತ್ತಿರುತ್ತದೆ. ಅವಳು ಮೇಲ್ನೋಟಕ್ಕೆ ಸಂತೃಪ್ತ ಗೃಹಿಣಿಯಾಗಿಯೂ ಕಾಣಿಸಿಕೊಳ್ಳಬಹುದು. ಆದರೆ ಸ್ವಲ್ಪ ವಿಭಿನ್ನವಾಗಿ ಯೋಚಿಸುವ ಮಹಿಳೆಯರು ’ಇನ್ಯಾವುದಕ್ಕೋ’ ಹುಡುಕಾಟ ಆರಂಭಿಸಿಬಿಡುತ್ತಾರೆ. ನನ್ನ ಮಟ್ಟಿಗೆ ಸೀಮಿತಗೊಳಿಸಿ ಹೇಳುವುದಾರೆ ಅದು ಕೃಷ್ಣನಿಗಾಗಿ ದ್ರೌಪದಿ ಹುಡುಕಾಡಿದಂತೆ.

ಹಿಂದೆಯೇ ಹೇಳಿದಂತೆ ಈ ಹುಡುಕಾಟ ದಾರಿ ತಪ್ಪಿದರೆ? ಅತ್ಯಂತ ಪ್ರಕ್ಷುಬ್ದಗೊಂಡ ಮನಸ್ಥಿತಿಯಲ್ಲಿ ಅದರ ಭಾರವನ್ನು ಎಲ್ಲಿಯಾದರೂ ಇಳುಹಬೇಕೆಂದು ಅನ್ನಿಸುವುದು ಸಹಜ. ಆದರೆ ಕೈ ನೀಡಲು ಯಾರೂ ಇಲ್ಲದಿದ್ದರೆ? ಅಂಥ ಸನ್ನಿವೇಶದಲ್ಲಿ ತಲೆಯ ಮೇಲಿನ ಭಾರವನ್ನು ಹೊತ್ತು ಹಾಕಲೇಬೇಕು.

ಅಂಥದೊಂದು ಸ್ಥಿತಿಯಲ್ಲಿ ನಾನೊಮ್ಮೆ ಏನು ಮಾಡಿದೆ ಗೊತ್ತಾ? ಚಂದ್ರಶೇಖರ ಪಾಟೀಲರ ’ಲೇಖಕರ ವಿಳಾಸ ಪುಸ್ತಕ’ ನನ್ನಲ್ಲಿತ್ತು.ಅದರಲ್ಲಿ ನಾನು ತುಂಬಾ ಮೆಚ್ಚುವ ಲೇಖಕರೊಬ್ಬರ ದೂರವಾಣಿ ನಂಬರ್ ಇತ್ತು. ಸಭೆ ಸಮಾರಂಭಗಳಲ್ಲಿ ಅವರನ್ನು ನೋಡಿದ್ದೆ. ಕೆಲವೊಮ್ಮೆ ಮಾತಾಡಿಸಿಯೂ ಇದ್ದೆ. ಅವರಿಗೆ ಕರೆ ಮಾಡಿ ನನ್ನ ಸಮಸ್ಯೆ ಹೇಳಿಕೊಳ್ಳಲೆತ್ನಿಸಿದೆ. ಹೇಳ ಹೇಳುತ್ತಲೇ ಬಿಕ್ಕಳಿಸಿ ಅತ್ತುಬಿಟ್ಟೆ. ಅವರು ಸಮಾಧಾನದಿಂದಲೇ ಆಲಿಸಿದರು. ಒಂದೂ ಮಾತಾಡದಿದ್ದರೂ ಕೆಲವೊಮ್ಮೆ ’ಆಲಿಸುವ’ ಕಿವಿಗಳು ಎಷ್ಟು ಸಾಂತ್ವನ ನೀಡುತ್ತವೆ ಅಲ್ಲವೇ? ನನ್ನ ಗೆಳತಿಯೊಬ್ಬಳ ಬದುಕಿನಲ್ಲಿ ನಡೆದ ಘಟನೆಯಿದು; ಕನ್ನಡದ ಸಂವೇದನಾಶೀಲ ಬರಗಾರರೊಬ್ಬರ ಮೇಲೆ ಆಕೆಗೆ ಹುಚ್ಚು ಮೋಹ, ಅವರ ಬರವಣಿಗೆಯಿಂದ ಪ್ರಭಾವಿತಳಾಗಿ ಹಿಂದು ಮುಂದು ಯೋಚಿಸದೆ ಅವರನ್ನವಳು ಆರಾಧಿಸತೊಡಗಿದಳು. ಅದೂ ನಿರಂತರ ಆರು ವರ್ಷಗಳ ಕಾಲ.

ನಮ್ಮ ಬರಹಗಾರರನ್ನು ಹತ್ತಿರದಿಂದ ಬಲ್ಲವರಿಗೆ ಅವರ ವಿಕ್ಷಿಪ್ತ ನಡವಳಿಕೆಗಳ ಪರಿಚಯ ಇರುತ್ತದೆ, ಅವರ ಭಾವ ಜಗತ್ತೇ ಬೇರೆ. ಬಾಹ್ಯ ಜಗತ್ತೇ ಬೇರೆ. ಇದು ಅರಿವಾಗುವ ಹೊತ್ತಿಗೆ ಅವಳು ಬಹು ದೂರ ಸಾಗಿ ಬಂದಿದ್ದಳು. ಕೊನೆಗೆ ಡಿಪ್ರೆಶನ್ನಿಗೆ ಒಳಗಾದಳು. ಅದರಿಂದ ಹೊರಬರಲು ಅವಳು ಮಾನಸಿಕ ತಜ್ನರ ಮೊರೆ ಹೋಗಬೇಕಾಯಿತು.

ಕೃಷ್ಣನ ಹುಡುಕಾಟ ಹೊರಗಡೆ ಯಾಕೆ ಆಗಬೇಕು, ಗಂಡನೇ ಗೆಳೆಯನೂ ಆಗಲಾರನೇ? ಎಂದು ಕೆಲವರಿಗನ್ನಿಸಬಹುದು. ಆದರೆ ಗಂಡ ಯಾವತ್ತಿದ್ದರೂ ಗಂಡನೇ!. ಆ ಶಬ್ದದ ಅರ್ಥವೇ ’ಒಡೆಯ’. ಆತ ತನ್ನ ಒಡೆತನದ ಹಕ್ಕನ್ನು ಚಲಾಯಿಸಿಯೇ ಚಲಾಯಿಸುತ್ತಾನೆ. ಎಷ್ಟಾದರೂ ಗಂಡಸು ದೈಹಿಕವಾಗಿ ಐಕ್ಯವಾಗುವುದನ್ನು ಬಯಸುತ್ತಾನೆ. ಹೆಣ್ಣು ಮಾನಸಿಕವಾಗಿ ಐಕ್ಯವಾಗುವ ಕನಸು ಕಾಣುತ್ತಾಳೆ. ಹಾಗಾಗಿ ಕೆಲವೊಂದು ಸೂಕ್ಷ್ಮಭಾವನೆಗಳು, ಗುಟ್ಟುಗಳು, ತಲ್ಲಣಗಳನ್ನು ಹಂಚಿಕೊಳ್ಳಲು ಹೆಣ್ಣೊಬ್ಬಳು ’ಕೃಷ್ಣ’ನನ್ನು ಹಂಬಲಿಸುವುದು ತಪ್ಪೆಂದು ನನಗೆ ತೋರುವುದಿಲ್ಲ.

ಅದರೆ ನನಗೆ ಗೊತ್ತಿದೆ, ’ಕೃಷ್ಣ’ ನಮಗೆ ಎಂದೂ ಸಿಗಲಾರ. ಸಿಗಬಾರದು ಕೂಡಾ. ಹುಡುಕಾಟ ನಿರಂತರವಾಗಿರಬೇಕು. ಅವನ ಮುರಳಿಯ ದಿವ್ಯಗಾನ ಸದಾ ನಮ್ಮ ಕಿವಿಯಲ್ಲಿ ಮೊರೆಯುತ್ತಿರಬೇಕು. ಆ ಮೂಲಕ ನಮ್ಮ ದುರ್ಭರ ಕ್ಷಣಗಳನ್ನು ಗೆಲ್ಲುವ ಅಂತಃಶಕ್ತಿ ನಮ್ಮಲ್ಲೇ ಮೂಡಿಬರಬೇಕು. ಆ ಧೀಶಕ್ತಿ ಸ್ತ್ರೀಯರಲ್ಲಿ ಇದೆ ಎಂಬುದು ನನ್ನ ಬಲವಾದ ನಂಬಿಕೆ.

[೨೦೦೪ರಲ್ಲಿ ’ಹಂಗಾಮ’ ಕ್ಕಾಗಿ ಬರೆದ ಬರಹವನ್ನು ಒಂಚೂರು ಎಡಿಟ್ ಮಾಡಿದ್ದೇನೆ]

17 comments:

ತೇಜಸ್ವಿನಿ ಹೆಗಡೆ said...

"ಗಂಡಸು ದೈಹಿಕವಾಗಿ ಐಕ್ಯವಾಗುವುದನ್ನು ಬಯಸುತ್ತಾನೆ. ಹೆಣ್ಣು ಮಾನಸಿಕವಾಗಿ ಐಕ್ಯವಾಗುವ ಕನಸು ಕಾಣುತ್ತಾಳೆ" - Very True... liked it very much. Nice article.

ಸುಮ said...

ಲೇಖನ ತುಂಬ ಚೆನ್ನಾಗಿದೆ . ನನ್ನ ದೃಷ್ಟಿಯಲ್ಲಿಯೂ ಕೃಷ್ಣ ನಿಜವಾದ ಹೀರೋ . ಅವನೇ ಆದರ್ಶಪುರುಷ. ಹೆಣ್ಣಿನ ಭಾವನೆಗಳನ್ನು ಸಮರ್ಥವಾಗಿ ಅರ್ಥಮಾಡಿಕೊಳ್ಳಬಲ್ಲವ.

ವಿ.ಆರ್.ಭಟ್ said...

chennaagide!

usha said...

nimma lekhana tumba cannagide. pratiyobba hennu tanna gandanaale ellavannu kanalu prayatnisuttale. adakke pratiyagi avalu ella vishayadallu tannu avanige nirvancaneyinda arpisikolluttale. adare a nijavada apritiyanna ella gandandiru artamadikondu adarante nadedare samsara sukhada sagaravagutte. krishna nanta geleya ellarigu sikkali anta naanu asepadtini.

surama said...

ದ್ರೌಪದಿ ಅಸಹಾಯಕ ಹೆಣ್ಣಲ್ಲ. ಆದರೂ ನೆರವು ಬೇಕೆಂದಾಗ ಅವಳು ಯಾಚಿಸಿದ್ದು ತನ್ನ ವೀರಾಧಿವೀರ ಗಂಡರನ್ನಲ್ಲ. ಆಪತ್ಬಾಂಧವ ಕೃಷ್ಣನನ್ನು. ಅವನಲ್ಲಿ ಆಕೆಗೆ ಅಂತಹ ನಂಬಿಕೆಯಿತ್ತು. ಗಂಡು-ಹೆಣ್ಣಿನ ನಡುವಿನ ಸಂಬಂಧಕ್ಕೆ ಹೊಸ ವ್ಯಾಖ್ಯೆಯನ್ನು ಬರೆದವರು ಅವರು.tumba chennagide.
very nice.it is very true.

Badarinath Palavalli said...

ನಮಸ್ಕಾರ,

ನನ್ನ ನೆನಪಿದೆಯೇ ಮೇಡಂ? ನಾನು ನಿಮ್ಮ ಅಖಾಡದ ಒಬ್ಬ ಕ್ಯಾಮರಾಮೆನ್.

ಕಲ್ಪನೆ ಮತ್ತು ವಾಸ್ತವಗಳನ್ನು ಚೆನ್ನಾಗಿಯೇ ಚಿತ್ರಿಸಿದ್ದೀರಿ.

ರಾಮನಿಗಿಂತಲೂ ಕೃಷ್ಣ ಆದರ್ಶವಂತ, ಅವನು ರಾಜ್ಯವನ್ನಾದರೂ ಚೆನ್ನಾಗಿಯೇ ಆಳಿದ.

ಹೆಣ್ಣು ಅಸಹಾಯಕಳೋ ಅಥವಾ ಗಂಡೋ, ಎನ್ನುವುದು ಆ ಸನ್ನಿವೇಶಕ್ಕೆ ಮತ್ತು ಅವರ ವಾಖ್! ತಾಖತ್ತಿಗೆ ಅನ್ವಯವಾಗುವ ಸತ್ಯವಲ್ಲವೇ ಮೇಡಮ್.

ನಿಮ್ಮ ಶೈಲಿ ಮತ್ತು ಅದು ತಟ್ಟುವ ರೀತಿ ಎರಡೂ ಅನನ್ಯವಾಗಿವೆ.

ನನ್ನ ಬ್ಲಾಗಿಗೆ ಒಮ್ಮೆ ಬನ್ನಿ

ಗೌರಿ ಗಣೇಶ ಹಬ್ಬದ ಶುಭಾಶಯಗಳು

ಶಿವರಾಮ ಭಟ್ said...

ಲೇಖನದ ಶೈಲಿ ಚಿಂತನೆಗಳು ಚೆನ್ನಾಗಿದೆ. ಆದರೆ ಸಂದೇಶ ಒಪ್ಪುವುದು ಕಷ್ಟ.
ದ್ರೌಪದಿಗೆ ಕೃಷ್ಣ ಅಣ್ಣನಾಗಿ ಅಲ್ಲವೇ ಕಂಡದ್ದು? ಸಖನಾಗಿ ಅನ್ನುವುದು ನಿಮ್ಮ ಕಲ್ಪನೆ!.
ಕೃಷ್ಣ ಸಂಧಾನಕ್ಕಾಗಿ ಕೌರವನ ಬಳಿಗೆ ತೆರಳುವುದು ದ್ರೌಪದಿಗೆ ಒಪ್ಪಿಗೆಯಾಗಿರಲೇ ಇಲ್ಲ.
ಕೀಚಕನಿಂದ ಮುಕ್ತಿ ಪಡೆಯಲು ದ್ರೌಪದಿ ಸಹಾಯ ಯಾಚಿಸಿದ್ದು ಭೀಮನನ್ನು. ಸಂಧಾನ ಮುರಿದು ಸಂಗ್ರಾಮಕ್ಕೆ ಒತ್ತಾಯಿಸಿದ್ದು ಭೀಮನನ್ನು.
ಕೊನೆಗೆ ಭೀಮನ ಪಕ್ಷವಾಗಿ ನಿಂತು ಅರ್ಜುನ ಕೃಷ್ಣರೊಂದಿಗೆ ಕಾದಾಡಿದ್ದೂ ದ್ರೌಪದಿಯೇ . ಪಾಂಡವರ ಅಸಹಾಯಕತೆಯನ್ನು ಅರಿತು ದ್ರೌಪದಿ ಬೇಡಿದ್ದು ಕೃಷ್ಣನನ್ನು!. ಮದುವೆಯಾಗುವ ಮೊದಲು ಗಂಡ "ಕೃಷ್ಣ"ನಂತಹ ಸಖನಾಗಿಯೇ ಕಂಡು ನಂತರ ಕೀಚಕಂತೆ ಕಾಣುವುದು ವಿಪರ್ಯಾಸ! ಕೃಷ್ಣನನ್ನು ಹದಿನಾರು ಸಾವಿರ ಸವತಿಯರೊಂದಿಗೆ ಹಂಚಿಕೊಂಡ ರುಕ್ಮಿಣಿಯ ಮನಸ್ಸಿನೊಳಗೆ ಹೊಕ್ಕು ಹೊರಬನ್ನಿ! ಈ "ಗಂಡಸಿ"ನ ಕುಲವೇ ಇಲ್ಲದ ಪ್ರಮೀಳಾ ರಾಜ್ಯ ಪ್ರತಿಪಾದಿಸಬೇಕಾಗಿ ಬಂದೀತು! ವೀರರೂ ಶೂರರು ಆದ ಪಾಂಡವರಿದ್ದು ಆರನೇ ಗಂಡನಾದ ಕರ್ಣನನ್ನು ಬಯಸಿದ್ದು ಕೂಡ ದ್ರೌಪದಿಯೇ ಅನ್ನುವುದು ತಮಗೆ ತಿಳಿದಿದೆಯೇ?
ಹೆಂಗಸರಿಗೆ ಹೀಗೆಲ್ಲ ಏಕೆ ಅನ್ನಿಸುತ್ತದೆ? ಹೆಂಗಸರು ಇನ್ನೊಂದು ಹೆಣ್ಣಿನೊಂದಿಗೆ ಮಾನಸಿಕವಾಗಿ ಐಕ್ಯವಾಗಬಹುದಲ್ಲ? ದೈಹಿಕ ಸುಖವನ್ನು ಮಾತ್ರ ಬಯಸುವ ಗಂಡಿಂದ ಮಾನಸಿಕ ಐಕ್ಯ ಸಾಧ್ಯವೇ ಇಲ್ಲವೇ? ಹೆಣ್ಣನ್ನು ದೈಹಿಕವಾಗಿ, ಮಾನಸಿಕವಾಗಿ ಕಾಮಿಸಿ ರಮಿಸಿ ತೃಪ್ತಿಯ ಉತ್ತುಂಗಕ್ಕೆ ಕೊಂಡೊಯ್ಯುವ ಸಖ ಕೃಷ್ಣನ ಕಾವ್ಯ ಚಿತ್ರಣ ಸದಾ ಕೃಷ್ಣನಂತಹ ಗಂಡನ್ನು ಬಯಸುವ ಮಾನಸಿಕ ಭ್ರಮೆಯನ್ನು ಹುಟ್ಟು ಹಾಕಿದೆ ಅನ್ನುವುದು ನನ್ನ ವಾದ. ಒಂದು ವೈಚಾರಿಕ ಲೇಖನ ಬರೆಯಿರಿ.

ಜೀವನ ಒಂದು ಪಯಣ... said...

hi..really nice blog...I liked it very much...

minchulli said...

" ಎಷ್ಟಾದರೂ ಗಂಡಸು ದೈಹಿಕವಾಗಿ ಐಕ್ಯವಾಗುವುದನ್ನು ಬಯಸುತ್ತಾನೆ. ಹೆಣ್ಣು ಮಾನಸಿಕವಾಗಿ ಐಕ್ಯವಾಗುವ ಕನಸು ಕಾಣುತ್ತಾಳೆ."

ನಮ್ಮ ದುರ್ಭರ ಕ್ಷಣಗಳನ್ನು ಗೆಲ್ಲುವ ಅಂತಃಶಕ್ತಿ ನಮ್ಮಲ್ಲೇ ಮೂಡಿಬರಬೇಕು. ಆ ಧೀಶಕ್ತಿ ಸ್ತ್ರೀಯರಲ್ಲಿ ಇದೆ ಎಂಬುದು ನನ್ನ ಬಲವಾದ ನಂಬಿಕೆ.
beautiful ...

ಮನಸು said...

"ಗಂಡಸು ದೈಹಿಕವಾಗಿ ಐಕ್ಯವಾಗುವುದನ್ನು ಬಯಸುತ್ತಾನೆ. ಹೆಣ್ಣು ಮಾನಸಿಕವಾಗಿ ಐಕ್ಯವಾಗುವ ಕನಸು ಕಾಣುತ್ತಾಳೆ" - ಇದು ಸಕ್ಕತ್ತು ಇಷ್ಟವಾದ ಸಾಲು ಜೊತೆಗೆ ನೈಜತೆ ಕೂಡ. ಬಹಳ ಚೆನ್ನಾಗಿ ಲೇಖನ ಬರೆದಿದ್ದೀರಿ... ತುಂಬಾ ತುಂಬಾ ಇಷ್ಟವಾಯಿತು

ರಘುನಂದನ ಕೆ. ಹೆಗಡೆ said...

ಅದರೆ ನನಗೆ ಗೊತ್ತಿದೆ, ’ಕೃಷ್ಣ’ ನಮಗೆ ಎಂದೂ ಸಿಗಲಾರ. ಸಿಗಬಾರದು ಕೂಡಾ. ಹುಡುಕಾಟ ನಿರಂತರವಾಗಿರಬೇಕು.

- ನಿಜ, ಕೃಷ್ಣನ ಹುಡುಕಾಟದಲ್ಲಿ ನಮ್ಮೊಳಗೊಬ್ಬ ಮಾಧವ ಅರಳಬೇಕು, ಸಿಕ್ಕಿಯೂ ಸಿಗದಂತೆ ಕಾಡಿದವ ಕೃಷ್ಣ, ಆತ ಯಾರಿಗೂ ಪೂರ್ತಿ ಸಿಕ್ಕಲಿಲ್ಲ, ಸಿಕ್ಕಂತೆ ಸಿಕ್ಕು ನಡೆದುಬಿಟ್ಟವ, ಬೇಕಾದಷ್ಟು ಸಿಕ್ಕಿಬಿಟ್ಟಿದ್ದರೆ ಇಂದು ಆತ ಕಾಡುತ್ತಲೂ ಇರಲಿಲ್ಲ..

ಇಷ್ಟವಾಯಿತು ಬರಹ...

ನನ್ನ ಬ್ಲಾಗ್ ಅಂಗಳ - ಸಮುದ್ರ ತೀರದ (www.samudrateera.blogspot.in) ವಿಹಾರಕ್ಕೂ ಆಗಾಗ ಬರ್ತಾ ಇರಿ

ಶ್ರೀವತ್ಸ ಕಂಚೀಮನೆ. said...

ಹಿಡಿಯಷ್ಟು ಸಿಕ್ಕಿ ಬೆಟ್ಟದಷ್ಟು ಕಾಡಿ...
ಇಷ್ಟ ಕಷ್ಟಗಳಲೆಲ್ಲ ಜೊತೆಯಾಗಿ, ಗುಟ್ಟಾಗಿ ಮನದಲ್ಲೇ ಗಟ್ಟಿಯಾಗುವ ಭಾವ ಕೃಷ್ಣ...
:::
ಉಷಾ ಜಿ -
ತುಂಬಾ ಇಷ್ಟವಾಯಿತು ಭಾವ ಬರಹ...

Swarna said...

Very nice
Swarna

ushakattemane said...

ಅವಧಿಯಲ್ಲಿ ಈ ಲೇಖನವನ್ನು ಪ್ರಕಟಿಸಿದಾಗ ಅಲ್ಲಿ ಬಂದ ಪ್ರತಿbharathi bv says:
August 11, 2012 at 9:37 am
Usha .. odida nantharavoo pada padagaloo edeyalli moreyuttive .. adbhutha baraha

ushakattemane said...

D.RAVI VARMA says:
August 12, 2012 at 7:51 am
Heart touching and thought provoking…. buduinuddakku manusya tanna saavina samadiya jagadavaregu hudukuttale iruttane…. aa hudukaata.. kelavomme ati utsahavannu, innu halavomme besaravannu tandodduttade, aadaru matte hosa hudukaatadondige baduku hosa hejjeyannu haakuttade…

ushakattemane said...

ku.sa.madhusudan says:
August 14, 2012 at 12:40 pm
ುಷಾ ಎಷ್ಟು ಚಿನ್ನಾಗಿ ಬರೆದಿದ್ದಿರೆಂದರೆ ಮತ್ತೆ ಮತ್ತೆ ಓದಿ ಸುಖ ಪಟ್ಟೆ. ನಿಮ್ಮಿಂದ ಿಂತಹ ಬರಹಗಳು ಮತ್ತಷ್ಟು ಬರಲಿ..ನಿಮ್ಮ ಮಧು.

Reply

ushakattemane said...

kamalabelagur says:
August 17, 2012 at 12:08 pm
ಸಾಮಾನ್ಯ ಗೃಹಿಣಿಯೂ ಸೇರಿದಂತೆ ಹೆಣ್ಣೊಬ್ಬಳ ಮನಸ್ಸಿನಲ್ಲಿ ಎಷ್ಟೊಂದು ತೀವ್ರವಾದ ಭಾವನೆಗಳು ಇರುತ್ತವೆಯೆಂದರೆ ಅದನ್ನು ಒಬ್ಬ ಕೃಷ್ಣ ಮಾತ್ರ ಅರ್ಥ ಮಾಡಿಕೊಳ್ಳಬಲ್ಲ. ಅದೂ ದ್ರೌಪದಿಗೊಲಿದ ಕೃಷ್ಣ ಮಾತ್ರ! ತುಂಬಾ ಚಂದದ ಬರಹ.