Sunday, October 17, 2010

ಎದೆಯು ನರಳಿ ಮೊರೆಯುತಿದೆ

ಇಂದು ಕೊನೆಯ ಎರಡು ಮಕ್ಕಳನ್ನು ಕೊಟ್ಟುಬಿಟ್ಟೆ. ಯೋಗ್ಯ ಮನೆಗಳನ್ನು ಮಕ್ಕಳು ಸೇರಿದರೆಂಬ ಸಮಾಧಾನ ಇದೆಯಾದರೂ ಅದಕ್ಕೂ ಮೀರಿದ ಬಿಕ್ಕಳಿಕೆಯಿಂದಾಗಿ ಇದನ್ನು ಕೀ ಮಾಡಲು ಸಾಧ್ಯವಾಗದೆ ಕಣ್ಣೀರು ಹರಿಯುತ್ತಿದೆ. ದುಪ್ಪಟ ಒದ್ದೆಯಾಗುತ್ತದೆ. ಮೂಗು ಉರಿಯುತ್ತಿದೆ. ಈ ಮೂರೂವರೆ ತಿಂಗಳಲ್ಲಿ ಅವು ನನಗೆ ಕೊಟ್ಟ ಭಾವನಾತ್ಮಕ ಆಸರೆಯನ್ನು ಇದುವರೆಗೆ ಯಾರೂ ಕೊಟ್ಟ ನೆನಪು ನನಗಿಲ್ಲ. ನನ್ನ ಮೂರುವರೆ ತಿಂಗಳ ಪ್ರತಿಕ್ಷಣವೂ ಅವುಗಳಿಗಾಗಿಯೇ ಮೀಸಲಾಗಿತ್ತು. ಅವುಗಳಿಗೂ ನಾನೇ ಸರ್ವಸ್ವವಾಗಿದ್ದೆ.

ಬೆಳಿಗ್ಗೆ ನಾನು ಏಳುವುದನ್ನೇ ಅವು ಕಾಯುತ್ತಾ ಕುಳಿತ್ತಿರುತ್ತಿದ್ದವು. ನಿಗದಿತ ಸಮಯವಾದರೂ ನಾನು ಏಳದೆ ಇದ್ದಾಗ ಅವು ಕುಂಯಿಗುಡುತ್ತಾ ತಮ್ಮ ಪುಟ್ಟ ಪುಟ್ಟ ಕಾಲುಗಳಿಂದ ಮೃದುವಾಗಿ ಪರಚುತ್ತಿದ್ದವು. ಎದ್ದ ಮೇಲೆ ಅವು ಸದಾ ನನ್ನ ಹಿಂಬಾಲಕರು. ಯಾಕೆಂದರೆ ಅವು ಪಗ್ ಜಾತಿಗೆ ಸೇರಿದವು. ಹಚ್ ಪೋನ್, ನಂತರ ವೋಡಪೋನ್ ಎಂದು ಹೆಸರು ಬದಲಾಯಿಸಿಕೊಂಡ ಪೋನಿನ ಬ್ರಾಡ್ ಅಂಬಾಸಿಡರ್ ಇವು!.ರಾತ್ರಿ ಕುತ್ತಿಗೆಯನ್ನು ಪರಚಿ, ಕಿವಿಯನ್ನು ಕಚ್ಚಿ ಕಚಗುಳಿಯಿಟ್ಟು ಅಲ್ಲಿಯೇ ತಲೆಯಿಟ್ಟು ಮಲಗಿಬಿಡುತ್ತಿದ್ದವು

ಮೂರುವರೆ ತಿಂಗಳ ಕಾಲ ಅಕ್ಷರಶಃ ದ್ವೀಪವಾಸಿಯಾಂತಾಗಿಸಿ, ನನ್ನೆಲ್ಲಾ ಹವ್ಯಾಸ, ಚಟುವಟಿಗಳನ್ನು ನಿಯಂತ್ರಿಸಿ, ನನ್ನ ನಿದ್ದೆಯನ್ನು ಅಪಹರಿಸಿ, ಮೈ ಮನಗಳನ್ನು ಬಳಲಿಸಿದರೂ ಅವು ಪ್ರೀತಿಯ ಮುದ್ದೆಯಂತಿದ್ದವು.

ಈಗ ಅವು ನನ್ನ ಮಡಿಲಲ್ಲಿ ಇಲ್ಲ.

ಅವುಗಳ ಅಮ್ಮ ಊಟ ಮಾಡದೆ ಮುದುಡಿ ಮಲಗಿದೆ. ನನ್ನ ಗಂಟಲಲ್ಲಿಯೂ ಅನ್ನ ಇಳಿಯುತ್ತಿಲ್ಲ. ಉರಿಯುತ್ತಿರುವ ಕಣ್ಣಿಗೆ ಒಂಚೂರು ವಿಶ್ರಾಂತಿ ಬೇಕಾಗಿದೆ. ಈಗ ನಾನೂ ಮಲಗಿ, ಮುಂದೊಂದು ದಿನ ಆ ಪುಟ್ಟ ಕಂದಮ್ಮಗಳ ವಿವರವಾಗಿ ಬರೆಯುತ್ತೇನೆ.

4 comments:

Chamaraj Savadi said...

ನಿಜ ಉಷಾ ಮೇಡಂ,

ಪ್ರಾಣಿಪ್ರೀತಿಯನ್ನು ಸುಲಭವಾಗಿ ಮರೆಯಲಾಗದು. ಅವು ಮೂಕ ಪ್ರಾಣಿಗಳು. ಪ್ರೀತಿ ಕೂಡ ಮೂಕ ತಾನೆ?

ಹೀಗಾಗಿ, ಸಹಿಸಿಕೊಳ್ಳುವುದು ಕಷ್ಟ. ಬಾಲ್ಯದಲ್ಲಿ ನಾವೊಂದು ಹಸು ಸಾಕಿದ್ದೆವು. ಅದರ ಕರುವನ್ನು ಒಂದೆರಡು ವರ್ಷಗಳ ನಂತರ ಆರ್ಥಿಕ ಅಡಚಣೆಯಿಂದಾಗಿ ಅಪ್ಪ ಮಾರಿದಾಗ ಹೀಗೇ ಕಣ್ಣೀರಿಟ್ಟಿದ್ದೆ. ಚಂದ್ರು ಹೆಸರಿನ ಅದು ಈಗಲೂ ಕನಸಲ್ಲಿ ಬರುತ್ತದೆ. ನನ್ನನ್ನು ಕಳಿಸಿಕೊಡಬೇಡಿ ಎಂಬಂತೆ ಒರಲುತ್ತದೆ.

ಅಗಲಿಕೆಯೇ ಹಾಗೆ. ಅದು ಅಗಲುವುದೇ ಇಲ್ಲ.

ಜೀವನ ಒಂದು ಪಯಣ... said...

Yeah..it is true...that attachment remains forever even though u wish to remove from our mind

suragi/ushakattemane said...

ನಿಮ್ಮ ಕಾಮೆಂಟ್ ಓದುತ್ತಿರುವಾಗಲೇ ಕಣ್ಣು ತುಂಬಿ ಬರುತ್ತಿದೆ ಸವಡಿಯವರೇ.ನನಗೂ ಅವುಗಳನ್ನು ಮರೆಯುವುದು ಕಶ್ತ.ಆದರೆ ನಾವು ಆ ಮರಿಗಳನ್ನು ಮಾರಾಟ ಮಾಡಿಲ್ಲ. ನಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡಿದ್ದೇವೆ. ಹಾಗಾಗಿ ಅದರ ಯೋಗಕ್ಷೇಮವನ್ನು ಆಗಾಗ ವಿಚಾರಿಸುವ ಸ್ವಾತಂತ್ರ್ಯವನ್ನು ಉಳಿಸಿಕೊಂಡಿದ್ದೇವೆ.ಕಾಲಕ್ಕೆ ಎಲ್ಲವನ್ನೂ ಮರೆಸುವ ಶಕ್ತಿಯಿದೆ.ಹಾಗಂತ ನಾವು ನಂಬಿಕೊಂಡಿದ್ದೇವೆ ಅಲ್ವಾ ಸವಡಿಯವರೇ?

shaantha sagara said...

nijavaagiyu prani preethyannu baniisalu saadhyavilla adare neevu adannu kottubittaddu nanage thumba novaaguttide